View from Japrasi Durga during Bidartala trekking |
ಈ ಭಾನುವಾರ ವಿಸ್ಮಯ ಪ್ರತಿಷ್ಠಾನದಿಂದ ಬಿದರ್ತಳಕ್ಕೆ ಟ್ರೆಕ್ಕಿಂಗ್ ಹೋಗ್ತಾ ಇದಾರೆ . ಬರ್ತೀಯ ?ಅಂತ ನಮ್ಮ ಗಿರಿ ಭಾಯ್ ಮೆಸೇಜ್ ಹಾಕಿದ್ರು ಹಿಂಗೇ ಒಂದಿನ. ಮೂಡಿಗೆರೆಗೆ ಹತ್ರವಿರೋ ಕೊಟ್ಟಿಗೆಹಾರದಲ್ಲಿ ವಿಸ್ಮಯ ಪ್ರತಿಷ್ಠಾನ ಅಂತಿದೆ. ಅವ್ರು ಹೀಗೇ ಚಾರಣಗಳನ್ನು ಆಯೋಜಿಸ್ತಾರೆ. ಪೂರ್ಣಚಂದ್ರ ತೇಜಸ್ವಿಯವರ ಒಡನಾಡಿಗಳು, ಅವರ ಪುಸ್ತಕ ಪ್ರೇಮಿಗಳು ಸುಮಾರು ಜನ ಬರ್ತಾರೆ ಇದಕ್ಕೆ. ಚೆನ್ನಾಗಿರತ್ತೆ ಅಂತ ಹಿಂದೊಮ್ಮೆ ಗಿರಿ ಭಾಯೇ ಸಣ್ಣದಾಗೊಂದು intro ಕೊಟ್ಟಿದ್ದ ನೆನಪು. ಹಿಂದಿನ ಸಲ ಏನೋ ಮಾಡಿ ತಪ್ಪಿಸ್ಕೊಂಡಿದ್ದೋನು ಈ ಸಲ ಹೊರಡ್ಲೇಬೇಕು ಅನ್ನೋ ಇರಾದೆಯಿಂದ ಬಾಪು ದಿನೇಶ್ರವರಿಗೆ ಫೋನ್ ತಿರುಗಿಸಿದೆ. ಹಿಂದಿನ ಸಲದಂತೆ ಈ ಸಲವೂ ಲೈನ್ ಸಿಗ್ಬಾರ್ದೇ ? ಬಿಡತ್ಲಗೆ, ಅದೃಷ್ಟವಿಲ್ಲ ಅಂತಂದ್ಕೊಳ್ಳೋ ಹೊತ್ತಿಗೆ ಅವ್ರೇ ಫೋನಾಯಿಸಿದ್ರು. ಚಾರ್ಮಾಡಿಯ ಮಡಿಲಲ್ಲಿ ಚಾರಣಕ್ಕೆ ಹೊರಟ ಐವತ್ತು ಚಿರ್ಲೆ ಜನರ ಲಿಸ್ಟಿಗೆ ಮತ್ತೊಂದು ಹೆಸ್ರು ಸೇರ್ಕೊಂಡ್ತು :-)
ಬಿದರ್ತಳ ಎಲ್ಲಿ ಮತ್ತು ಹೋಗೋದು ಹೇಗೆ ಅಂದ್ರಾ ?
ಅದೇ ವಿಷ್ಯಕ್ಕೆ ಬರ್ತಾ ಇದೀನಿ. ಬಿದರ್ತಳ ಅನ್ನೋದು ಚಾರ್ಮಾಡಿ ಘಾಟಿಯ ಬುಡದಲ್ಲಿರೋ ಏಳೆಂಟು ಕುಟುಂಬಗಳಿರೋ ಒಂದು ಹಳ್ಳಿ. ಚಾರ್ಮಾಡಿ ಘಾಟಿಯ ಬುಡದಲ್ಲಿರೋ ಆಲೇಖಾನ್ ಅನ್ನೋ ಸ್ಥಳದಿಂದ ಇಲ್ಲಿಗೆ ಟ್ರೆಕ್ಕಿಂಗ್ ಶುರುವಾಗುತ್ತೆ. ಒಂದಿಷ್ಟು ದೂರ ಜೀಪ್ ಹೋಗುತ್ತೆ. ಅಲ್ಲಿಂದ ಟ್ರೆಕ್ಕಿಂಗು. ಅಂದಾಗೆ ನಮ್ಮ ಟ್ರೆಕ್ಕಿಂಗ್ ಶುರುವಾಗೋದು ಕೊಟ್ಟಿಗೆಹಾರದಿಂದ ಭಾನುವಾರ ಬೆಳಗ್ಗೆ ಎಂಟಕ್ಕೆ ಅಂತ ಹೇಳಿದ್ರು ವಿಸ್ಮಯ ಪ್ರತಿಷ್ಟಾನದವ್ರು. ಮೂಡಿಗೆರೆಯಿಂದ ಧರ್ಮಸ್ಥಳಕ್ಕೆ ಹೋಗೋ ರಸ್ತೆಯಲ್ಲಿ, ಹೊರನಾಡು, ಶಿವಮೊಗ್ಗದ ಕಡೆಯಿಂದ ಬರೋ ರಸ್ತೆ ಸೇರಿಕೊಳ್ಳೋ ಸ್ಥಳವೇ ಕೊಟ್ಟಿಗೆಹಾರ. ಪೂಚಂತೆಯವ್ರ ಜುಗಾರಿ ಕ್ರಾಸ್ ಕಾದಂಬರಿ ಈ ಸ್ಥಳಕ್ಕೆ ಸಂಬಂಧಪಟ್ಟಿದ್ದೇ ಎಂದು ಹಿರಿಯರೊಬ್ರು ಹೇಳುತ್ತಿದ್ದ ನೆನಪು. ಇರ್ಲಿ, ಕೊಟ್ಟಿಗೆಹಾರದಲ್ಲೇ ವಿಸ್ಮಯ ಪ್ರತಿಷ್ಟಾನದ ಆಫೀಸೂ ಇರೋದು. ನೀವು ರಾತ್ರೆಯೇ ಇಲ್ಲಿ ಬಂದು ಉಳ್ಕೋಬೋದು. ಇಲ್ಲಾ ಬೆಳಗ್ಗೆ ಮುಂಚೆ ಬಂದ್ರೆ ಸ್ವಲ್ಪ ವಿಶ್ರಾಂತಿ ತಗೊಂಡು ಟ್ರೆಕ್ಕಿಂಗಿಗೆ ರೆಡಿಯಾಗ್ಬೋದು ಅಂತ ತಿಳಿಸಿದ್ರು ಆಯೋಜಕರು. ಸರಿ ಅಂತ ಭಾನುವಾರ ರಾತ್ರೆ ಹೊರನಾಡಿನ ಬಸ್ಸು ಹತ್ತಿದ ನಾನು, ಗಿರಿ, ಅಮೃತ ಅವ್ರು ಮತ್ತವರ ತಂಗಿ ಗಾಯತ್ರಿ ಕೊಟ್ಟಿಗೆಹಾರ ತಲುಪೋ ಹೊತ್ತಿಗೆ ಬೆಳಗ್ಗೆ ನಾಲ್ಕಾಗಿತ್ತು. ವಿಸ್ಮಯ ಪ್ರತಿಷ್ಟಾನದ ಆಫೀಸಲ್ಲಿ ಸವಿನಿದ್ರೆಯಲ್ಲಿದ್ದ ಗೆಳೆಯ ದೀಪಕ್ನನ್ನ ಎಬ್ಬಿಸಿ ನಮಗಾಗೇ ಕಾಯುತ್ತಿದ್ದ ಸ್ಲೀಪಿಂಗ್ ಬ್ಯಾಗ್ ಹೊಕ್ಕೆವು ಅನ್ನೋ ಅಲ್ಲಿಗೆ ಒಂದು ಉಪಕತೆಯ ಮುಕ್ತಾಯ.
ಸೂರ್ಯೋದಯ:
ಏ, ಇಲ್ಲಿನ ಫೋಟೋ ತೆಗಿಬೇಕು ಅಂತ ಬೆಳಬೆಳಗ್ಗೆನೇ ಆ ಕತ್ಲಲ್ಲೂ ಹೇಳಿದ ನಂಗೆ, ಸ್ವಲ್ಪ ತಡ್ಯಪ್ಪ, ಇಲ್ಲಿಯ ಸೂರ್ಯೋದಯದ್ದು ತೆಗಿ. ಇಲ್ಲಿನ ಸೂರ್ಯೋದಯ ಸೂಪರ್ರಾಗಿರುತ್ತೆ ಕಣೋ ಎಂದಿದ್ರು ಗಿರೀಶ್. ನಿದ್ರೆ ಮಾಡ್ಬಿಟ್ರೆ ಅವ್ರು ಹೇಳಿದ ಸೂಪರ್ ಸೂರ್ಯೋದಯ ಮಿಸ್ಸಾಗಿ ಬಿಡತ್ತೆ ಅನ್ನೋ ಗಾಬ್ರಿಗೋ ಹೊಸ ಪರಿಸರವಾಗಿದ್ದಕ್ಕೋ ಏನೋ ನಿದ್ರೇನೆ ಬರ್ಲಿಲ್ಲ. ಕಿಟಕಿಯಿಂದ ಚೂರ್ಚೂರೇ ಬೆಳಕು ಬರತೊಡಗಿದಂಗೆ ಸೂರ್ಯೋದಯ ಆಯ್ತಾ ಅಂತ ಸ್ಲೀಪಿಂಗ್ ಬ್ಯಾಗ್ ಸಮೇತ ಎದ್ದು ನೋಡೋಕೆ ಪ್ರಯತ್ನ ಮಾಡ್ದೆ ! ಇನ್ನೂ ಆಗಿಲ್ಲ ಅಂತ ಮತ್ತೆ ಮಲಗೋಕೆ ಪ್ರಯತ್ನ ಮಾಡಿದ್ರೂ ನಿದ್ರೆ ಬರ್ಲಿಲ್ಲ. ಹಿಂಗೇ ಮೂರ್ನಾಲ್ಕು ಪ್ರಯತ್ನ ಮಾಡೋ ಹೊತ್ತಿಗೆ ದೀಪಕ್ ಹೊರಹೊರಟ್ರಲ್ಲ ಅಂತ ಮತ್ತೆ ಕಿಟಕಿಯಲ್ಲಿ ಹಣುಕಿದ್ರೆ ಸೂರ್ಯನೂ ಬೆಟ್ಟಗಳ ಮರೆಯಿಂದ ತಲೆ ಹಾಕ್ತಾ ಇದ್ದಾನೆ ! ತಗೋ ಅಂತ ಕ್ಯಾಮರಾ ತೆಗ್ದು, ಅದ್ರಲ್ಲಿ ಸರಿ ಬರ್ದೇ ಇದ್ರೆ ಇರ್ಲಿ ಅಂತ ಮೊಬೈಲ್ನೂ ಜೀಬಿಗೆ ಸಿಕ್ಕಿಸ್ಕೊಂಡು ಹೊರಗೋಡಿದ್ದೇ.
See the face formed from the branches of tree during Sunrise at Kottigehara |
ಬೆಟ್ಟಗಳ ಮರೆಯಿಂದ ಮೂಡ್ತಿರೋ ಭಾಸ್ಕರ, ಮರಗಳ ಮರೆಯಲ್ಲಿ ಹಲವು ಆಕಾರಗಳ ಮೂಡಿಸ್ತಿದ್ದ ರವಿ.. ಹೀಗೆ ಹಲವು ಫೋಟೋಗಳಿಗೆ ಮದುವೆ ಮನೆಯಲ್ಲಿ ಮದುಮಕ್ಕಳು ಪೋಸ್ ಕೊಟ್ಟಂಗೆ ಕೊಡ್ತಾ ಇದ್ದನಾ ಸೂರ್ಯ. ಅದೊಂದಿಷ್ಟು ತೆಗ್ಯೋ ಹೊತ್ತಿಗೆ, ರೆಡಿಯಾಗ್ಬೇಕಲ್ಲ ಅಂತ ನೆನ್ಪಾಯ್ತು. ವಾಪಾಸ್ ಒಳಬಂದು ಪ್ರಾತಃಕರ್ಮಗಳನ್ನು ಮುಗಿಸಿ ಹೊರಡೋ ಸಮಯಕ್ಕಾಗಿ ಕಾಯತೊಡಗಿದ್ವಿ.
ತಿಂಡಿ:
ಏಳೂವರೆಯಾಗ್ತಾ ಬಂತು. ತಿಂಡಿ ಯಾವಾಗ ಬರ್ಬೋದು ಅಂತ ನೋಡ್ತಿದ್ದೋರಿಗೆ ಆಶ್ಚರ್ಯ. ಬರಲ್ಲ ಅಂದಿದ್ದ ಭಾಗ್ಯಮ್ಮ ಮತ್ತವಳ ಗೆಳತಿ ವಿದ್ರುಮ ಹಾಜರ್ ಆಗ್ಬಿಡ್ಬೇಕೇ ! ಒಳ್ಳೇ ಸರ್ಪ್ರೈಸ್ ಅಂದ್ಕೊಂಡು ಮತ್ತೊಂದಿಷ್ಟು ಫೋಟೋ ಸೆಷನ್ನು ಮಾಡೋ ಹೊತ್ತಿಗೆ ಇನ್ನೊಂದಿಷ್ಟು ಜನರ ಆಗಮನವಾಯ್ತು.
@Kottigehara office |
Hinge sumne ;-) |
ಟ್ರೆಕ್ಕಿಂಗಲ್ಲಿ ನಡೆದ ಮಾತುಕತೆಗಳ ಬಗ್ಗೆ ಬರೀತಾ ಹೋದ್ರೆ ಅದೇ ಒಂದು ದೊಡ್ಡ ಕತೆಯಾದೀತು. ಹಾಗಾಗಿ ಅದ್ರ ಬಗ್ಗೆ ಬರೀದೇ ಚಾರಣದ ಸಮಯದಲ್ಲಿ ನಮಗೆ ಸಿಕ್ಕ ಕೆಲವು ಹೊಸ(ನನ್ನ ಅಥವಾ ಓದುತ್ತಿರೋ ಕೆಲವರ ಪಾಲಿಗಾದ್ರೂ ಹೊಸದು ಅಂದ್ಕೊಳ್ತಾ) ಸಸ್ಯಗಳ ಬಗ್ಗೆ ಬರೀತೀನಿ ಈ ಬಾರಿ.
1)ಮರಗಜ:
Maragaja |
ಹಸಿರು ಬಣ್ಣದ ಮರಗಳಿಗೆ ಹಂಬಿಕೊಂಡೋ, ಜೋತೋ ಬೆಳೆಯೋ ಈ ಸಸ್ಯವನ್ನು ನೀವು ಜೋಗ, ಕಾರ್ಗಲ್ ಕಡೆ ಅಥವಾ ಮಲೆನಾಡಿನ ಇತರ ಕಾಡುಗಳಲ್ಲಿ, ತಡಿಯಂಡಮಾಲಲ್ಲಿ.. ಹೀಗೆ ಹಲವೆಡೆ ನೋಡಿರುತ್ತೀರ. ಕುಷನ್ನಿಗೆ, ಅಲಂಕಾರದ ಸಾಮಗ್ರಿಗಳ ತಯಾರಿಕೆಗೆ ಬಳಸೋ ಇದಕ್ಕೆ ಕೇಜಿಗೆ ೬೦ ಅಂತ ನಮ್ಮ ಜೊತೆಗೆ ಬಂದಿದ್ದ ಗೈಡ್ ಚಂದ್ರಣ್ಣ ಹೇಳ್ತಾ ಇದ್ರು. ಅಂದಂಗೆ ನಮ್ಮ ಜೊತೆಗೆ ಬಂದಿದ್ದ ಮತ್ತೊಬ್ಬ ಗೈಡಿನ ಹೆಸ್ರು ಅರ್ಜುನ.
ಹಾಗೇ ಮುಂದೆ ಸಾಗಿ ಮಳೆಗಾಲದಲ್ಲಿ ದೊಡ್ಡ ಫಾಲ್ಸಾಗಿರಬಹುದಾದ ಈಗ ಒಂದಿಷ್ಟು ನೀರು ತಣ್ಣಗೆ ಹರಿಯುತ್ತಿದ್ದ ಕೊಳ್ಳವನ್ನು ದಾಟಿದ್ವಿ.
2)ಹೆಸರು ಗೊತ್ತಿಲ್ಲದ ಹಳದಿ ಹೂವು:
ಈ ಹೂವನ್ನು ಮಲೆನಾಡಿನ ಸುಮಾರು ಬೆಟ್ಟಗಳಲ್ಲಿ ಕಂಡಿದ್ದೇನೆ.ಆದ್ರೂ ಇದ್ರ ಹೆಸ್ರೇನು ಅಂತ ಇನ್ನೂ ಗೊತ್ತಿಲ್ಲ ! ನಿಮಗೇನಾದ್ರೂ ನೆನಪಿದ್ರೆ ಹೇಳಬಹುದು
ಈ ಕಾಡಲ್ಲಿ ಬೇರೆಲ್ಲ ಕಡೆ ಇರುವಂತೆ ಕಾಡ್ಗಿಚ್ಚು ತುಂಬಾ ಕಾಮನ್ನಾ ಅನಿಸ್ತು ! ಸುಟ್ಟು ಕರಕಲಾದ ಬೆಟ್ಟದ ಕೆಲ ಕಡೆಗಳಲ್ಲೆಲ್ಲಾ ಮತ್ತೆ ಜೀವದಂಕುರವಾಗ್ತಿದ್ದದ್ದನ್ನು ನೋಡೋ ಖುಷಿಯಿತ್ತಾದ್ರೂ ಈಗ್ಲೇ ಇಷ್ಟು ಚೆನ್ನಾಗಿ ಕಾಣ್ತಿರೋ ಬೆಟ್ಟ ಹಸಿರಿಂದ ನಳ ನಳಿಸ್ತಿದ್ದಾಗ ಹೆಂಗಿರಬಹುದಿತ್ತು ಅನ್ನಿಸ್ತು.
ಸುಟ್ಟ ಮರ ಮತ್ತೆ ಚಿಗುರುತ್ತಿರೋದು |
4)ಮುಳ್ಳು ಹಂದಿಯ ಮುಳ್ಳು:ಏನೋ ನೋಡ್ತಿರುವಾಗ್ಲೇ ದೀಪಕ್ ಕೈಯಲ್ಲಿ ಏನೋ ಹಿಡ್ಕಂಡಿರೋದು ಕಾಣಿಸ್ತು. ಏನು ಅಂತ ಹತ್ರ ಹೋಗಿ ನೋಡಿದ್ರೆ ಅದು ಮುಳ್ಳಂದಿ ಮುಳ್ಳು ಅಂತ ಗೊತ್ತಾಯ್ತು. ಅದ್ರ ತುದಿ ಮೈಗೆ ತಾಗಿಸ್ಕೋಬೇಡ, ವಿಪರೀತ ನಂಜು ಅದು ಅಂತ ಅಲ್ಲಿದ್ದ ಸುಮಾರು ಜನ ಅಂದ್ರು. ಮುಳ್ಳೇ ಹಿಂಗಿರುವಾಗ ಆ ಹಂದಿಯೇನಾದ್ರೂ ಎದ್ರಿಗೆ ಬಂದ್ರೆ ಹೆಂಗಪ್ಪಾ ಅನಿಸ್ತು !
ಯಾರಪ್ಪಾ ಇದು ನಮ್ಮ ಫೋಟೋನೇ ತೆಗ್ಯದು ;) |
ನೋಡಲು ಸಣ್ಣ ಗೋಟಡಕೆಯ ತರ ಕಾಣೋ ಇದಕ್ಕೆ ಗಬ್ಬಲಿ ಕಾಯಿ ಅಂತಾರಂತೆ. ಇದನ್ನ ಬೆಕ್ಕುಗಳು ತಿನ್ನೋದು ಬಿಟ್ರೆ ಬೇರೇನು ಉಪಯೋಗವಿಲ್ಲ ಅಂದ್ರು ಅರ್ಜುನಣ್ಣ(ನಮ್ಮ ಗೈಡು)
Gabbali kaayi |
ಹಂಗೇ ಒಂದು ಬೆಟ್ಟ ಹತ್ತಿಳಿಯುವ ಹೊತ್ತಿಗೆ ಒಂದು ಬಯಲು ಬಂತು. ಆ ಬೆಟ್ಟಕ್ಕೆ ಜಾಪ್ರಾಸಿ ದುರ್ಗ ಅಂತಾರೆ. ಅಲ್ಲಿಂದ ಸುತ್ತಲಿನ ಎಲ್ಲಾ ಬೆಟ್ಟಗಳು, ಎದುರಿಗಿದ್ದ ಚಾರ್ಮಾಡಿ ಕಣಿವೆಗಳು ಕಾಣ್ತಿದ್ವು. ಅದೋ ಎಡಕ್ಕೆ ನೋಡಿ. ಅಲ್ಲಿ ಕಾಣ್ತಿರೋದು ಮಲಯ ಮಾರುತ ಅಂತ , ಅಲ್ಲಿ ಕಾಣ್ತಿರೋ ಶಾಲೆ ಮನೆ ಮೊರಾರ್ಜಿ ದೇಸಾಯಿ ಶಾಲೆ ಅಂತ ಪರಿಚಯಿಸಿದ್ರು ಅಲ್ಲಿಗೆ ಮುಂಚೆಯೇ ಬಂದೋರು.
೬)ಸತ್ತೋರ ಒನಕೆ ಮಂಡಲು ಹೂವು:
ನಸುಗುಲಾಬಿ(ಪಿಂಕ್) ಬಣ್ಣದ ಈ ಹೂವಿನ ಹೆಸ್ರು ಕೇಳಿ ನಂಗೂ ಆಶ್ಚರ್ಯವಾಯ್ತು. ಇಂಥಾ ಹೆಸ್ರೂ ಇರತ್ತಾ ಅಂತ !
ಸತ್ತೋರ ಒನಕೆ ಮಂಡಲು ಹೂವು: |
೭)ಈಚಲು ಹಣ್ಣು:
ಈಚಲು ಮರದಿಂದ ಕಳ್ಳಬಟ್ಟಿ ತಯಾರಿಸೋದು ಕೇಳಿರ್ತೀರ. ಆದ್ರೆ ಈಚಲಿನ ಹಳದಿ ಕಾಯಿ ಮತ್ತು ಸಿಹಿಯಾಗಿರೋ ಕಪ್ಪು ಹಣ್ಣು ಕಂಡಿದ್ದೀರಾ ? ನೋಡದಿರೋರ ಪಾಲಿಗೊಂದು ಚಿತ್ರ :-)
ಈಚಲು ಕಾಯಿ |
ಗಾಢ ಗುಲಾಬಿ ಬಣ್ಣದ ಈ ಹೂವನ್ನು ಸುಮಾರಷ್ಟು ಜನ ನೋಡಿರಬಹುದು. ಇದನ್ನು ಆಯುರ್ವೇದೀಯ ಔಷಧಿಗಳಿಗೆ ಬಳಸುತ್ತಾರಂತೆ.
Karnakundala |
೯)ಗೌಲು ಮರ:
ನೋಡಲು ನಮ್ಮ ಕಡೆಯ ಮತ್ತಿ ಮರದಂತೆ ಕಾಣೋ ಇದು ಹತ್ತಿರ ಹೋಗಿ ನೋಡಿದ್ರೆ ಮತ್ತಿಯಲ್ಲ. ಇದು ಔದುಂಬರ ಮರ ಅಂತ್ಲೂ, ತೇಗ ಅಂತ್ಲೂ , ಉಪನಯನದ ವಟುಗಳ ಕೈಗೆ ದಂಡವಾಗಿ ಕೊಡೋ ಮರವಂತ್ಲೂ .. ತಲೆಗೊಂದು ಗೆಸ್ಸುಗಳು ಸಾಗ್ತಿದ್ದಾಗ ನಮ್ಮ ಗೈಡು ಬಂದು ಮುಗುಳ್ನಗ್ತಾ ಇದು ಗೌಲು ಮರ, ಮಕ್ಕಳಾಗದ ಮಹಿಳೆಯರಿಗೆ ಔಷಧಿಗೆ ಬಳಸ್ತಾರೆ ಇದ್ರ ಚಕ್ಕೆಯನ್ನ ಅಂತ ಕೆತ್ತಿ ತೋರಿಸಿದಾಗ ಎಲ್ಲಾ ಗಪ್ ಚುಪ್ :-)
೧೦)ಹೆಸರರಿಯದ ನೀಲಿ ಹೂ:ಹಂಗೇ ಮುಂದುವರಿಯುತ್ತಿದ್ದಾಗ ಹೆಸರರಿಯದ ಈ ನೀಲಿ ಹೂವು ಮತ್ತೆ ಹಲವು ಜಾತಿಯ ಮಲ್ಲಿಗೆಗಳು ಸಿಕ್ಕಿದ್ವು.ಸಿಕ್ಕ ನಾಲ್ಕು ಜಾತಿಯ ಮಲ್ಲಿಗೆಗಳ ಬಗ್ಗೆ ಮತ್ತೆ ಮೂರು ಪ್ರಬೇಧದ ಚಿಟ್ಟೆಗಳ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
ಜೊತೆಗೆ ಹಲವು ಬಣ್ಣದ ಎಲೆಗಳು ಬೇರೆ.. ಕೆಂಪೆಲೆ, ಕಂದೆಲೆ, ಪಿಂಕೆಲೆ.. ಹೀಗೆ ಹಲವು
ಬಣ್ಣ ಬಣ್ಣದ ಎಲೆಗಳು.. ಎಲೆಗಳೇ ಹೂಗಳಂತೆ.. ಹಸಿರಲ್ಲೂ ಎಷ್ಟು ಪರಿಯಪ್ಪಾ ಅನಿಸಿದ್ದು
ಸುಳ್ಳಲ್ಲ.
ಮುಂದಿನ ಭಾಗದಲ್ಲಿ:ಇನ್ನಷ್ಟು ಹೊಸ ಹೂಗಳು,ಇನ್ನೊಂದಿಷ್ಟು ಹಸಿರು ಮತ್ತೊಂದಿಷ್ಟು ಕತೆ :-)
ಬೇರೆ ರೀತಿಯಲ್ಲಿ ಬರೆಯಬೇಕು ಅಂದು different ಆಗೇ ಬರೆದಿದ್ದೀಯ .. Nice
ReplyDeleteಮೊದಲ ಭಾಗ ಬಹಳ ಚೆನ್ನಾಗಿ ಮೂಡಿಬಂದಿದೆ, ಚಿತ್ರಗಳ ಸಮೇತ.
ReplyDelete