Saturday, May 16, 2015

ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ-ಒಂದು ವರದಿ

ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ-ಒಂದು ವರದಿ
ದಿನಾಂಕ:ಮೇ ೧೬,೨೦೧೫, ಸ್ಥಳ: ಟೆಕ್ಸಾಸ್ ಇಸ್ಟ್ರುಮೆಂಟ್ಸ್ ಸಂಸ್ಥೆ, ಸಿ.ವಿ.ರಾಮನ್ ನಗರ, ಬೆಂಗಳೂರು.


From left: Ashwath Sampaje, Me, Dr.Pavanaja, Dr.RaviKumar, Dr Sudheendra Halddoderi, Lecturer from Vijapur, T.G.Srinidhi, Belur Sudarshan

ಶನಿವಾರ ಮುಂಜಾನೆ ಹೆಚ್.ಎ.ಎಲ್> ಬಿ.ಇ.ಎಂ.ಎಲ್> ಜಿ.ಎಂ.ಪಾಳ್ಯ> ಬೆಗಮೆ ಟೆಕ್ ಪಾರ್ಕಿನ ಹಿಂದಿನ ಗೇಟು> ಅದರಲ್ಲೊಳಗಿನ ಕೆರೆ ಅಂತ ದಾಟಿ ಬಂದವ್ರಿಗೆ ಟೆಕ್ಸಾಸ್ ಇನ್ಸ್ಟುಮೆಂಟ್ಸಿನಲ್ಲಿನ ಕನ್ನಡ ಬರಹಗಾರರ ಸಮ್ಮೇಳನದ ಸ್ವಾಗತ ಕಾದಿತ್ತು. ಎಂಟರಿಂದ ಒಂಭತ್ತರವರೆಗಿನ ನೋಂದಣಿ ಮತ್ತು ಉಪಾಹಾರದ ಸಮಯದಲ್ಲಿ ಉಡುಪಿ, ವಿಜಾಪುರ, ಹೆಚ್.ಡಿ ಕೋಟೆಯಲ್ಲಿ "ಗಣಿತದ ಕಟ್ಟೆ" ಅಂತ ಕಮ್ಯುನಿಟಿ ರೇಡಿಯೋದಲ್ಲಿನ ಕಾರ್ಯಕ್ರಮ ನಡೆಸಿಕೊಡುತ್ತಿರುವ ತಂಡದವರು,  ಬೆಂಗಳೂರಿನ ಹಲವೆಡೆಗಳ ಬರಹಗಾರದು ಇಲ್ಲಿ ನೆರೆದಿದ್ದರು.ಪರಸ್ಪರ ಪರಿಚಯದ ಮಾತುಕತೆ. ತಿಂಡಿಯ ನಂತರ ಸಭಾಂಗಣದಲ್ಲಿ ಸೇರಿದ ಎಲ್ಲರೂ ಉಳಿದವರಿಗೆ ತಮ್ಮ ಪರಿಚಯ ಮಾಡಿಕೊಡುವ ಮೂಲಕ ಕಾರ್ಯಕ್ರಮ ೯:೨೦ ಕ್ಕೆ ಪ್ರಾರಂಭವಾಯಿತು. ಮೊದಲಿಗೆ ಕಾರ್ಯಕ್ರಮದ ಹಲವು ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಟಿ.ಜಿ ಶ್ರೀನಿಧಿ ಅವರು ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ,ಸಿ.ಎಫ್, ಟಿ.ಆರ್.ಐ ಮೈಸೂರಿನ ಹಿರಿಯ ವಿಜ್ಞಾನಿಗಳಾದ ಶ್ರೀ ಕೊಳ್ಳೇಗಾಲ ಶರ್ಮ ಅಥವಾ ಎ.ಎಸ್.ಕೆ.ವಿ.ಎಸ್ ಶರ್ಮ ಅವರನ್ನು ಪರಿಚಯಿಸಿದರು.ಮುಖ್ಯ ಭಾಷಣಕಾರರ ಭಾಷಣದ ವಿಷಯ "ವಿಜ್ಞಾನ ಸಂವಹನ:ಏನು ? ಏಕೆ ?ಹೇಗೆ?"

ವೈಜ್ಞಾನಿಕ ಅರಿವನ್ನು ಮೂಡಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯಗಳಲ್ಲೊಂದು ಎಂಬ ಸಂವಿಧಾನದ ಉಲ್ಲೇಖದೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಶರ್ಮರವರು ಕನ್ನಡದಲ್ಲೇ ಯಾಕೆ ಬರೆಯಬೇಕು ಎಂಬುದರ ಬಗ್ಗೆ ಹಲವು ಅಂಕಿ ಅಂಶಗಳನ್ನು ತೆರೆದಿಟ್ಟರು.ಉದಾಹರಣೆಗೆ: ಸುಮಾರು ೮ ಲಕ್ಷ ವಿದ್ಯಾರ್ಥಿಗಳು ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದರು . ಅವರಲ್ಲಿ ಸುಮಾರು ಎರಡೂವರೆ ಲಕ್ಷ ಜನಕ್ಕಷ್ಟೇ ಮುಂದೆ ವಿಜ್ಞಾನ ವಿಷಯದಲ್ಲಿ ಪಿಯುಸಿಗೆ ಸೇರಲು, ಇಂಗ್ಲೀಷಿನಲ್ಲಿ ಮುಂದಿನ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತೆ. ಉಳಿದ ಆರು ಲಕ್ಷ ಜನರ ಕತೆ ? ಪ್ರತೀವರ್ಷ ಸೃಷ್ಟಿಯಾಗುತ್ತಿರುವ ಆರು ಲಕ್ಷಕನ್ನಡ ಓದುಗರು ಮತ್ತು ಎಸ್ಸೆಸ್ಸೆಲ್ಸಿಯವರೆಗೂ ಬಾರದಂತಹ ಓದುಗರನ್ನ ತಲುಪಲು ಕನ್ನಡದಲ್ಲೇ ಬರೆಯಬೇಕೆಂದು ಪ್ರಸ್ತಾಪಿಸಿದರು.  ನಂತರ ಜನಪ್ರಿಯ ವಿಜ್ಞಾನದ ಬಗ್ಗೆ ಬರೆಯುವಾಗ ಮುಖ್ಯವಾಗುವ ಅಂಶಗಳಾದ ಆಸಕ್ತಿ, ಆಕರ, ಮಾಧ್ಯಮದ ಅರಿವು ಮತ್ತು ಪರಿಕರ ಎಂಬ ಅಂಶಗಳ ಬಗ್ಗೆ ತಿಳಿಸಿದರು. ಸಂಶೋಧನಾ ಪತ್ರಿಕೆಗಳು, ಇ ಪತ್ರಿಕೆಗಳು, peer reviewed journals, ಮುಕ್ತ ಆಕರಗಳು, ಇ ಪ್ರಿಂಟ್ ಭಂಡಾರಗಳು, ಆನ್ ಲೈನ್ ಗ್ರಂಥಾಲಯ, ವರ್ಚುಯಲ್ ಪತ್ರಿಕೆಗಳ  ಬಗ್ಗೆ ತಿಳಿಸಿದರು. ಸೈನ್ಸ್ ಡೈರೆಕ್ಟ್, ವೈಲಿ, ಸ್ಪ್ರಿಂಗರ್, ಎಸಿಎಸ್, ಎಐಇಇಇ ಮುಂತಾದ ಡೈರೆಕ್ಟ್ರಿಗಳು, ಯುರೇಕ ಅಲರ್ಟ್, ಆಲ್ಪ ಗೆಲಿಲಿಯೋನಂತಹ ಪತ್ರಿಕಾ ಪ್ರಕಟಣೆಗಳ ಮಾಹಿತಿ ನೀಡೋ ಸೇವೆಗಳು, ಗುಬ್ಬಿ ಲ್ಯಾಬ್ಸಿನಂತಹ ತಾಣಗಳ ಬಗೆಗಿನ ಮಾಹಿತಿ  ನೆರೆದ ಬರಹಗಾರರಿಗೆ ಮಾಹಿತಿಯ ಹಲವು ಆಕರಗಳೆಡೆಗೆ ದಿಕ್ಸೂಚಿಯಾಗಲು ಅಣಿಯಾಗಿತ್ತು.ಸೈನ್ಸ್ ಡೈರಿಯಂತಹ ವೆಬ್ ತಾಣಗಳು ಕನ್ನಡಕ್ಕೆ ಬೇಕೆಂದು ಪ್ರತಿಪಾದಿಸಿದ ಶ್ರೀಯುತರು ಅಭಿವೃದ್ಧಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸೈಡೆವ್ ನೆಟ್ ನಲ್ಲಿ ಕನ್ನಡ ಅನುವಾದಕರಿಗಿರುವ ಅಗತ್ಯವನ್ನು ತಿಳಿಸಿದರು.

ಬರಹಗಾರರು ಮಾಧ್ಯಮವೆಂದರೆ ಸಾಮಾನ್ಯವಾಗಿ ಮುದ್ರಣ ಮಾಧ್ಯಮವೊಂದೇ ಎಂದುಕೊಳ್ಳುತ್ತಾರೆ. ಆದರೆ ಅದರ ಹೊರತಾಗಿ, ಶ್ರವಣ, ದೃಶ್ಯ ಮಾಧ್ಯಮಗಳ ಬಳಸಬಹುದಾದ ಹೊಸ ಸಾಧ್ಯತೆಗಳತ್ತ ಶರ್ಮರವರು ನಂತರದ ಭಾಷಣದಲ್ಲಿ ದಾರಿ ತೋರಿದರು.ಉದಾಹರಣೆಗೆ ಶ್ರವಣ ಮಾಧ್ಯಮದಲ್ಲಿ ಸ್ಪಷ್ಟತೆ, ನಿಖರತೆ ಮತ್ತು ಯಾರಿಗೆ ತಲುಪುತ್ತದೆ ಎಂಬ ವ್ಯಾಪ್ತಿಯ ಅರಿವು ಇರಬೇಕು. ರೇಡಿಯೋ, ಪಾಡ್ ಕಾಸ್ಟಿಂಗ್, ತಮ್ಮ ಹೆಚ್ಚಿನ  ಸಮಯವನ್ನು ಪ್ರಯಾಣದಲ್ಲಿ ಕಳೆಯುವ ಯುವ ಪೀಳಿಗೆಗಾಗಿ ರೆಕಾರ್ಡ್ ಮಾಡಲಾದ ಎಂ.ಪಿ.ತ್ರೀಯ ಮೂಲಕ ವಿಜ್ಞಾನವನ್ನು ತಲುಪಿಸುವ ಸಾಧ್ಯತೆ, ಕಮ್ಯುನಿಟಿ ರೇಡಿಯೋಗಳ ಬಗೆಗಿನ ಮಾಹಿತಿ ಅವರ ಪ್ರಸ್ತುತಿಯಲ್ಲಿ ಮೂಡಿಬಂತು. ದೃಶ್ಯ ಮಾಧ್ಯಮ ಅಂದರೆ ಕನ್ನಡ ವೀಡಿಯೋಗಳು, ಯೂಟ್ಯೂಬ್, ಕನ್ನಡದಲ್ಲಿನ ವಿಜ್ಞಾನ ಸಂಬಂಧಿ ಚಿತ್ರಗಳು, ಛಾಯಾಚಿತ್ರಗಳು, ಅನಿಮೇಷನ್, ಟೆಲಿವಿಷನ್ ಡಬ್ಬಿಂಗಿನಂತಹ ಕ್ಷೇತ್ರಗಳಲ್ಲಿ,  ಖಾನ್ ಅಕಾಡೆಮಿ ಡಬ್ಬಿಂಗ್ ಎಂಬಲ್ಲಿ ಕನ್ನಡದ ಅನುವಾದಕ್ಕೆ ಇರುವ ಅಗತ್ಯದ ಬಗ್ಗೆಯೂ ತಿಳಿಸಲಾಯಿತು.ವಿಜ್ಞಾನದ ಬಗೆಗಿನ ಮಾಹಿತಿ ಸಿದ್ದಪಡಿಸಲು, ಹಂಚಲು ಇಂದಿರೋ ಅನುಕೂಲಗಳಾದ ಗಣಕ, ಅಂತರ್ಜಾಲ, ಡಿಜಿಟಲ್ ಕ್ಯಾಮೆರಾಗಳು, ಎಂ.ಪಿ.ತ್ರೀ ಪ್ಲೇಯರ್ಗಳು, ಇ-ರೀಡರ್, ಇ.ಪುಸ್ತಕಗಳು, ಸ್ಮಾರ್ಟ್ ಫೋನುಗಳು, ಸಾಮಾಜಿಕ ಜಾಲತಾಣಗಳು, ವಾಟ್ಸಾಪಿನಂತಹ ಆಪ್ಗಳು, SMS ನಂತಹ ಹಲವು ಪರಿಕರಗಳ ಬಗ್ಗೆ ತಿಳಿಸಿ ಮನಸ್ಸಿದ್ದಲ್ಲಿ ಮಾರ್ಗವೆಂಬುದನ್ನು ತಿಳಿಸಿದರು.

ನಂತರದ ಭಾಷಣ "ಪತ್ರಿಕೆಗಳಿಗೆ ವಿಜ್ಞಾನ ಲೇಖನಗಳು" ಎಂಬ ವಿಷಯದ ಬಗ್ಗೆ, ಟಿ.ಜಿ ಶ್ರೀನಿಧಿ ಅವರಿಂದ. ಹೊಸ ಆವಿಷ್ಕಾರಗಳಿಂದ, ಈಗಷ್ಟೇ ಘಟಿಸಿದ ಸಂಗತಿಯವರೆಗೆ, ವರ್ಲ್ಡ್ ಫೋಟೋ ಡೇ, ಮೊದಲ ವಿಶ್ವ ಮಹಾಯುದ್ದದ ನೂರು ವರ್ಷದ ಸಂದರ್ಭ, ಹೀಗೆ  ಪ್ರಮುಖ ಘಟನೆಯೊಂದರ ವಾರ್ಷಿಕೋತ್ಸವದಿಂದ , ಯಾವುದೋ ದಿನಾಂಕದವರೆಗೆ ಹೇಗೆ ಮತ್ತು ಯಾವ್ಯಾವ ವಿಷಯಗಳನ್ನು ಗುರುತಿಸಬಹುದು ಎಂಬುದನ್ನು ತಿಳಿಸಿದ ಶ್ರೀನಿಧಿ ಅವರು ಈ ನಿಟ್ಟಿನಲ್ಲಿ ಬರೆಯಲು ಶುರು ಮಾಡುವವರು ಬಾವಿಯೊಳಗಿನ ಕಪ್ಪೆಯಂತೆ ಒಂದೇ ಕೇತ್ರಕ್ಕೆ ಅಂಟಿಕೊಳ್ಳದಿದ್ದರೂ ಪ್ರಾರಂಭದಲ್ಲಿ ತಮ್ಮದೊಂದು ಆದ್ಯತೆಯ ಕ್ಷೇತ್ರ(area of expertise) ಅಂತ ಗುರುತಿಸಿಕೊಂಡು ಅದರಲ್ಲಿ ಅಭಿವೃದ್ಧಿ ಹೊಂದಬಹುದೆಂದು ಅಭಿಪ್ರಾಯಪಟ್ಟರು. ಎಲ್ಲೋ ಓದಿದ ಮಾಹಿತಿಯನ್ನು ಕಲೆಹಾಕಲು ಅನುವಾಗೋ cam scanner App ಬಗ್ಗೆ ತಿಳಿಸುತ್ತಾ ಅಧ್ಯಯನಶೀಲತೆಯ ಅಗತ್ಯವನ್ನು ತಿಳಿಸಿದ ಅವರು ಬರಹಗಾರ ಕೇಳಿಕೊಳ್ಳಬಹುದಾದ ಪ್ರಶ್ನೆಗಳ ಬಗ್ಗೆಯೂ ಬೆಳಕು ಚೆಲ್ಲಿದರು.

ಕನ್ನಡದಲ್ಲಿ ಪಾರಿಭಾಷಿಕ ಪದಗಳ ಬಳಕೆ ಅಂದರೆ ಪ್ರೋಗ್ರಾಮಿಂಗ್ ಅಂತ ಬಳಸಬೇಕಾ ಅಥವಾ ಅದನ್ನು ಕನ್ನಡೀಕರಿಸಿ ಅನುಸ್ಥಾಪನೆ ಎಂದು ಬಳಸಬೇಕಾ ಎಂದು ನಡೆಯುತ್ತಿರುವ ಬಲುದಿನಗಳ ಚರ್ಚೆಯ ಬಗ್ಗೆಯೂ ತಿಳಿಸಿದ ಅವರು ಜನ ಸಾಮಾನ್ಯರ ಬಳಕೆಯ ಭಾಗವೇ ಆಗಿರೋ ಪದಗಳನ್ನು ಕನ್ನಡದಲ್ಲಾದರೂ ಬಳಸಿ, ಆದ್ರೆ ಆ ಪದಗಳ ಪ್ರಮಾಣ ಮಿತಿಮೀರದಿರಲಷ್ಟೇ ಎಂದು ಅಭಿಪ್ರಾಯ ಪಟ್ಟರು.ವಿಜ್ಞಾನಕ್ಕೆ ಸಂಬಂಧಿಸಿದ ಲೇಖನವನ್ನು ಒಂದು ದ್ರಾವಣಕ್ಕೆ ಹೋಲಿಸಿ ಸಾಮಾನ್ಯ ಓದುಗನಿಗೆ ಅರ್ಥವಾಗುವಂತೆ ಬರೆಯುವಾಗ ಅದನ್ನು ದುರ್ಬಲ ದ್ರಾವಣವಾಗಿಸೋ ಕೆಲಸದಲ್ಲಿ ಎಷ್ಟು ದುರ್ಬಲಗೊಳಿಸಬೇಕು ಎಂಬ ಅಂಶದ ಬಗೆಗಿನ ಎಚ್ಚರಿಕೆಯಿರಬೇಕಾದ ಅಗತ್ಯವನ್ನೂ ತಿಳಿಸಿದರು.ಲೇಖನದ ಶೈಲಿ-ಸ್ವರೂಪ, ಪತ್ರಿಕೆಗಳ ಒಡನಾಟ, ಓದುಗರ ಸಂಪರ್ಕ ಬರಹಗಾರನಿಗೆ ಹೇಗೆ ಮುಖ್ಯ ಎಂಬಲ್ಲಿನ ಹಲವು ಅಂಶಗಳನ್ನು ಪರಿಚಯಿಸಿದ ಶ್ರೀಯುತ ಶ್ರೀನಿಧಿಯವರ ಭಾಷಣದ ನಂತರ ಮುಂದಿನ ಭಾಷಣಕಾರರಾದ ಡಾ|| ಯು.ಬಿ ಪವನಜ ಅವರನ್ನು ಪರಿಚಯಿಸಿ ಮುಂದಿನ ಭಾಷಣವಾದ "ವಿಶ್ವಕೋಶಗಳಿಗೆ ಬರವಣಿಗೆ" ಎಂಬ ವಿಷಯಕ್ಕೆ ಅನುವು ಮಾಡಿಕೊಟ್ಟರು.

ಸೆಂಟರ್ ಫಾರ್ ಇಂಟರ್ನೆಟ್ ಸೊಸೈಟಿ, ಬೆಂಗಳೂರಿನ ಅಧ್ಯಕ್ಷರಾದ , ವಿಕಿಪೀಡಿಯದ ಅತೀ ಸಕ್ರಿಯ ಸಂಪಾದಕರಲ್ಲೊಬ್ಬರಾದ ಶ್ರೀ ಪವನಜ ಅವರು ವಿಶ್ವಕೋಶಗಳಿಗೆ, ವಿಕಿಪೀಡಿಯಾಕ್ಕೆ ಬರೆಯುವಾಗ ಇರಬೇಕಾದ ಮಾಹಿತಿಯ ನಿಖರತೆಯ ಅಗತ್ಯತೆಯ ಬಗ್ಗೆ ಮಾತನಾಡುತ್ತಾ ಮಾಹಿತಿ ಸಂಗ್ರಹದ ಆಕರಗಳ ಬಗ್ಗೆ ಪ್ರಸ್ತಾಪಿಸಿದರು.ಪಾರಿಭಾಷಿಕ ಪದಗಳನ್ನು ಬಳಸುವಾಗ ಇರಬೇಕಾದ ಏಕರೂಪತೆ, ಮಾನಕ, ಶಿಷ್ಟತೆಗಳ ಬಗ್ಗೆಯೂ ತಿಳಿಸಿಕೊಟ್ಟರು. ಉದಾ:ಲೇಖನದ ಉದ್ದಗಲಕ್ಕೂ ಒಂದೋ ಇಂಗ್ಲಿಷಿನ ಪದ ಅಥವಾ ಅದರ ಕನ್ನಡೀಕರಿಸಿದ ಪದ ಅಂತ ಒಂದೇ ರೀತಿ ಬರೆಯುವುದು, ಎಲ್ಲೆಡೆ ಇಂಚು ಅಥವಾ ಮಿ.ಮಿ ಎಂಬ ಒಂದೇ ಮಾಪನವನ್ನು ಬಳಸುವುದು(ಒಂದೆಡೆ ಇಂಚಿನಲ್ಲಿ ಮತ್ತೊಂದೆಡೆ ಮಿ.ಮೀನಲ್ಲಿ ಬಳಸದೇ ಇರುವುದು) ಮುಂತಾದ ಅಗತ್ಯತೆಗಳ ಬಗ್ಗೆ ತಿಳಿಸಿದರು.ವಿಕಿಪೀಡಿಯಾಕ್ಕೆ ಬರೆಯಬೇಕಾದ ಅನುಸರಿಸಬೇಕಾದ ಸಾಮಾನ್ಯ ನಿಯಮಗಳಾದ ಬರಹದ ರಂಜನೀಯವಲ್ಲದ ಭಾಷೆ, ಕಥಾರೂಪ,ಉಪಮೆ, ಕಾವ್ಯಮಯವಲ್ಲದ ಭಾಷೆ, ಹೊಗಳಿಕೆ, ತೆಗಳಿಕೆ ವಿಶೇಷಣಗಳಿಲ್ಲದಿರುವಿಕೆ, ವ್ಯವಸ್ಥಿತ ಮಾಹಿತಿ ನಿರೂಪಣೆ, ಕಾವ್ಯಮಯ ಶೀರ್ಷಿಕೆಯಿಲ್ಲದಿರುವಿಕೆ ಮುಂತಾದ ಅಂಶಗಳ ಬಗ್ಗೆ ತಿಳಿಸಿದರು.ವಿಕಿಪೀಡಿಯಾ, ಕನ್ನಡ ವಿಕಿಪೀಡಿಯಾದ ಪ್ರಸಕ್ತ ಸ್ವರೂಪ, ಅದರ ಎಡಿಟಿಂಗ್ ಬಗ್ಗೆ ತಿಳಿಸಿದ ಅವರು ಕನ್ನಡ ವಿಕಿಪೀಡಿಯಾದಲ್ಲಿ ಸದ್ಯ ನಡೆಯುತ್ತಿರುವ ಯೋಜನೆಗಳ ಬಗ್ಗೆ, ಮುಂದೊಮ್ಮೆ ವಿಕಿಪೀಡಿಯಾ ವರ್ಕ್ ಶಾಪ್ ಎಂದು ಆಯೋಜಿಸೋ ಯೋಜನೆಗಳ ಬಗ್ಗೆಯೂ ತಿಳಿಸಿದರು.

ಮೊದಲೆರಡು ವಿಷಯಗಳಂತೆಯೂ ಇದಕ್ಕೂ ಹತ್ತು ನಿಮಿಷದ ಪ್ರಶ್ನಾವಳಿಯ ಅವಧಿ ಮತ್ತು ಚಹಾ ವಿರಾಮದ ನಂತರ ೧೧:೩೨ ಕ್ಕೆ ನಾಲ್ಕನೇ ವಿಷಯದ ಪ್ರಾರಂಭವಾಯ್ತು. "ವಿಜ್ಞಾನದ ಪತ್ರಿಕಾವರಧಿಗಳು" ಎಂಬ ವಿಷಯದ ಬಗ್ಗೆ ಮಾತನಾಡಿದ ಶ್ರೀ ಬೇಳೂರು ಸುದರ್ಶನ್ ಅವರು ವಿಜ್ಞಾನ ಅಂದ್ರೆ ಏನೇನು ಆಗ್ಬೋದು ಎಂದು ಹೇಳುತ್ತಾ ವಿಜ್ಞಾನ ಎಂದರೆ ಬದುಕು ಎಂದು ಅಭಿಪ್ರಾಯಪಟ್ಟರು. ತಲೆಕೆಳಗಾದ ಪಿರಮಿಡ್ ಎಂಬ ಪತ್ರಿಕೋದ್ಯಮದ ಶೈಲಿಯನ್ನು ಇಲ್ಲಿ ಅಳವಡಿಸಿಕೊಳ್ಳುತ್ತಾ ರೋಟಿ, ಕಪಡಾ, ಮಕಾನ್, ವಾಹನ್ ಮತ್ತು ತಂತ್ರಜ್ಞಾನ್ ಎಂಬ ಪಂಚ ಸೂತ್ರಗಳಲ್ಲಿ ವಿಜ್ಞಾನದ ಏನೊಂದನ್ನೂ ತಂದು ಅದರ ಬಗ್ಗೆ ಬರೆಯಬಹುದಾದ ಸಾಧ್ಯತೆಗಳ ಬಗ್ಗೆ ಮಾತನಾಡಿದ ಶ್ರೀಯುತರು A field guide for technical writers ಎಂಬ ಪುಸ್ತಕ, ವಿಜ್ಞಾನ ವರದಿಗಾರಿಕೆಯಲ್ಲಿನ ಎರಡು ಕವಲುಗಳ ಬಗ್ಗೆ ಪ್ರಸ್ತಾಪಿಸಿದರು. ಮೊದಲನೆಯ ಕವಲಾದ data journalism ಅಂದ್ರೆ ಸಿಕ್ಕಿದ ಅಂಕಿ ಅಂಶಗಳಲ್ಲಿ ಯಾವುದು ಸೂಕ್ತ, ಅದನ್ನು ಹೇಗೆ ಬಳಸುವುದು ಎಂಬುದು.ಇದಕ್ಕೆ ಸಂಬಂಧಿಸಿದ ಕಾನ್ವಾಸ್.ನೆಟ್ನಲ್ಲಿನ ಎರಡು ತಿಂಗಳ ಮುಕ್ತ ಅಂತರ್ಜಾಲ ಕೋರ್ಸಿನ ಬಗ್ಗೆಯೂ ಪ್ರಸ್ತಾಪಿಸಿದ ಶ್ರೀಯುತರು ನಂತರ ಎರಡನೆಯ ಕವಲಾದ visualization ಅಥವಾ infographics ಮತ್ತು ಪಾಕೇಜಿಂಗ್ ಬಗ್ಗೆ ತಿಳಿಸಿದರು. ಬರೆಯಲು ಅನುಕೂಲ ಮಾಡಿಕೊಡೋ ಇನ್ನಷ್ಟು ತಂತ್ರಾಂಶಗಳ ಪರಿಚಯಿಸಿದ ಸುದರ್ಶನರು ಲೆಬರೇ ಇಂದ ಇರೋ ಮುಕ್ತ ತಂತ್ರಾಂಶವಾದ spreadsheet, ಓಪನ್ ರಿಫೈನ್, ಗೂಗಲ್ spreadsheet, ಗೂಗಲ್ ಕೀಪ್, ಗೂಗಲ್ ನ್ಯೂಸ್ ಅಲರ್ಟ್, ಕಣಜ.ಇನ್ ಮುಂತಾದ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ನಂತರದ ವಿಷಯ "ಸಂವಹನಕ್ಕೆ ಸಿದ್ದತೆ:ಸಾಹಿತ್ಯ ಕೃತಿಗಳ ಓದು, ಭಾಷಾಜ್ಞಾನ ಮತ್ತು ಅಧ್ಯಯನ" ಶ್ರೀಯುತ ಡಾ| ಸಿ.ಪಿ ರವಿಕುಮಾರ್ ಅವರಿಂದ. ವಿಜ್ಞಾನ ಬರಹಗಾರನಾದವನು ಜನರಿಗೂ , ವಿಜ್ಞಾನಿಗಳಿಗೂ ನಡುವಣ ಸೇತುವೆ ಎಂದು ಅಭಿಪ್ರಾಯಪಟ್ಟ ಶ್ರೀಯುತರು ಲೇಖನಕ್ಕೆ ಬೇಕಾದ ಪೂರ್ವಸಿದ್ದತೆ, ಹಸ್ತಪ್ರತಿಯನ್ನು ಕೆಲ ಕಾಲ ಬಿಟ್ಟು ಮತ್ತೊಮ್ಮೆ ಪರಾಮರ್ಶಿಸಬೇಕಾದ ಅಗತ್ಯ, ಕನ್ನಡ ಅಂತರ್ಜಾಲ ಪದಕೋಶಗಳ ಬಳಕೆಗಳ ಬಗ್ಗೆ ತಿಳಿಸಿದರು. ಕನ್ನಡವಿಜ್ಞಾನ ಬರವಣಿಗೆಯಲ್ಲಿ ಪ್ರಯತ್ನವನ್ನೇ ಮಾಡದಿರುವಷ್ಟು ಕಮ್ಮಿ ಸಾಹಿತ್ಯವಿರುವ ಕ್ಷೇತ್ರಗಳಾದ ವಿಜ್ಞಾನಕ್ಕೆ ಸಂಬಂಧಪಟ್ಟ ಕಥೆ, ಕವಿತೆಗಳನ್ಯಾಕೆ ಪ್ರಯತ್ನಿಸಬಾರದೆಂಬ ನೆರೆದ ಕೇಳುಗರಲ್ಲಿ ಆಸಕ್ತಿಯನ್ನು ಕೆರಳಿಸಿದರು. ಆಗ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೀಟಗಳ ಬಗ್ಗೆ ಪರಿಚಯಿಸೋ ಅಂಕಣವನ್ನು ಬರೆವ, ಭೂರಮೆ ಬ್ಲಾಗಿನ ಶ್ರೀಮತಿ ಸುಮಾ ರವಿಕಿರಣ್ ಅವರು ತಾವು ವಿಜ್ಞಾನದ ಬಗೆಗಿನ ಕವಿತೆಗಳನ್ನು ಬರೆದಿರುವ, ತಮ್ಮ ಪತಿ ಸೋಲಾರ್ ಕವಿತೆಗಳು ಅಂತ ಬರೆದಿರುವ ವಿಷಯ ಪ್ರಸ್ತಾಪಿಸಿದರು. ಶ್ರೀಯುತ ಬೇಳೂರು ಸುದರ್ಶನ್ ಅವರು ತಮ್ಮ ವಿಜ್ಞಾನಕ್ಕೆ ಸಂಬಂಧಪಟ್ಟ ಗೀತೆಗಳ ಕ್ಯಾಸೆಟ್ "ಜೈವಿಕ ಇಂಧನ ಹಾಡುಗಳು" ಕೂಡ ಬಂದಿರೋ ವಿಚಾರ ತಿಳಿಸಿದಾಗ ಹೀಗೂ ಎಂಟೆ ಒಂಬ ಭಾವ ನೆರೆದ ಅನೇಕರಲ್ಲಿ.ಪ್ರತೀ ವರ್ಷ ಸೆಪ್ಟೆಂಬರ್ ೧೫,೧೬,೧೭ ರಂದು "ಸ್ವದೇಶೀ ವಿಜ್ಞಾನ ಸಮೇಳನ" ಅಂತ ನಡೆಯುತ್ತೆ ಎಂಬ  ಹೊಸ ವಿಷಯ ತಿಳಿದುಬಂದ ಸಂದರ್ಭದಲ್ಲಿ ಈ ವರ್ಷದ ಸಮ್ಮೇಳನ ರಾಯಚೂರಿನಲ್ಲಿ ನಡೆಯುತ್ತಿದೆ ಅಂತಲೂ ತಿಳಿಯಿತು.

ಪ್ರಶ್ನೋತ್ತರದ ನಂತರ ಪುಸ್ತಕಗಳಿಗಾಗಿ ಬರೆಯುವುದು ಹೇಗೆ, ಪುಸ್ತಕಗಳ ಪ್ರಕಾಶನ ಮಾಡೋದು ಹೇಗೆ ಎಂಬ ವಿಷಯದ ಚರ್ಚೆ ಹಲವು ಪ್ರಶ್ನೋತ್ತರಗಳೊಂದಿಗೆ, ಭಾಗವಹಿಸಿದವರ ಹಲವು ಅನುಭವಗಳೊಂದಿಗೆ ಹೊಸತಾಗಿ ಪುಸ್ತಕ ಹೊರತರೋ ಆಸೆಯಲ್ಲಿರುವವರಿಗೆ ಒಂದಿಷ್ಟು ಅಂಶಗಳತ್ತ ಬೆಳಕು ಚೆಲ್ಲಿತು. ಪೋತಿ.ಕಾಂ, ನ್ಯೂಸ್ ಹಂಟ್ ನಲ್ಲಿ ಅಂತರ್ಜಾಲದಲ್ಲಿ ಮಾರಾಟ, custom publishing ,ಫ್ರೀ ಬುಕ್ ಕಲ್ಚರ್.ಕಾಂ ನಂತಹ ಹೊಸ ವಿಷಯಗಳ ಪ್ರಸ್ತಾಪವಾದವು. ನಂತರ ಊಟದ ಜೊತೆಗೆ ಸಮ್ಮೇಳನಕ್ಕೆ ಆಗಮಿಸಿದ ಹಲವು ಕ್ಷೇತ್ರಗಳ ಬರಹಗಾರರೊಂದಿಗೆ ಮಾತನಾಡೋ ಅವಕಾಶ. ನಂತರ ಭಾಗವಹಿಸುವವರು ಬರೆದು ತಂದ ಇನ್ನೂರು ಪದಗಳ ಲೇಖನದ ಜೊತೆಗೆ ಬೆಳಗಿನಿಂದ ಕಲಿತ ಅಂಶಗಳ ಅಳವಡಿಸಿಕೊಂಡು ನೂರರಿಂದ ಇನ್ನೂರು ಪದಗಳ ಅವಧಿಯ ಇನ್ನೊಂದು ಲೇಖನವನ್ನು ಬರೆಯಲು ತಿಳಿಸಲಾಯಿತು. ಮೂವತ್ತು ನಿಮಿಷದ ಅವಧಿಯ ನಂತರ ನಾವು ಬರೆದ ಲೇಖನಗಳ ಓದು ಮತ್ತು ಮುಂದಿನ ಬೆಳವಣಿಗೆಗೆ ಸಹಾಯಕವಾಗುವಂತಹ ವಿಮರ್ಶೆಯನ್ನು ನಡೆಸಲಾಯಿತು. ಈ ನಡುವೆ ವಿಜಯ ಕರ್ನಾಟಕದಲ್ಲಿ ಅಂಕಣಕಾರರಾದ ಅವಿನಾಶ್ ಅವರ ಮತ್ತು ವಿಜಾಪುರದ ನಾರಾಯಣ  ಬಾಬಾನಗರ್ ಬಾಬಾನಗರ್ ಅವರ ಅನುಭವಗಳನ್ನೂ ಕೇಳಲಾಯಿತು.

ತದನಂತರದ ಚಹಾವಿರಾಮದ ಸಂವಹನಕ್ಕೆ ಸಿದ್ದತೆ ಎಂಬ ವಿಷಯದಲ್ಲಿ zotero ಎಂಬ ಫೈರ್ಫಾಕ್ಸಿನ ಪ್ಲಗ್ಗಿನ್, evernote, flipboard, endnote, pocket ಮುಂತಾದ ತಂತ್ರಾಂಶಗಳ ಬಳಕೆಯ ಸಾಧ್ಯತೆಗಳನ್ನು ಪರಿಚಯಿಸಲಾಯಿತು.ನಂತರ ಅಂಕಣಕಾರ, ವಿಜ್ಞಾನಿಗಳಾದ ಶ್ರೀ ಸುಧೀಂದ್ರ ಹಾಲ್ದೊಡ್ಡೇರಿಯವರು ಲೇಖನಕ್ಕೆ ಬೇಕಾದ ಅಧ್ಯಯನ, ಮಾಹಿತಿ ಸಂಗ್ರಹಣೆ, ಬರೆದ ಲೇಖನಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ನಮ್ಮ ಓದುಗರು ಯಾರು ಎಂಬ ಅರಿವಿನ ಮೇಲೆ ನಮ್ಮ ಶೈಲಿಯನ್ನು ಮಾರ್ಪಡಿಸಿಕೊಳ್ಳುವುದು ಮುಂತಾದ ವಿಷಯಗಳ ಮೇಲೆ ಮಾತಾಡಿದರು.ಶ್ರವಣ, ಮುದ್ರಣ ಮಾಧ್ಯಮಗಳಲ್ಲಿರುವ ಸಿದ್ದತಾ ಸಮಯದ ಬಗ್ಗೆ, ದೃಶ್ಯ ಮಾಧ್ಯಮದಲ್ಲಿರುವ ತುರ್ತಿನ ಬಗ್ಗೆ ತಿಳಿಸಿದ ಅವರು ತಮ್ಮ ಜೀವನದಲ್ಲಾದ ಸ್ವಾರಸ್ಯಕರ ಪ್ರಸಂಗಗಳನ್ನೂ ಉಲ್ಲೇಖಿಸಿದರು. ಒಂದಿಷ್ಟು ಫೋಟೋಗಳು ಮತ್ತೊಂದಿಷ್ಟು ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ವಿನಿಮಯದೊಂದಿಗೆ ಮತ್ತೆ ಸಿಗೋಣ ಎಂಬ ಬೀಳ್ಕೊಡಿಗೆ.ಬರುವಾಗ ಯಾರೂ ಗೊತ್ತಿಲ್ಲ ಎಂಬ ಭಾವದೊಂದಿಗೆ ಬಂದವರಿಗೆ ಹೋಗುವಾಗ ಮೇಲೆ ಹೇಳಿದ ಹೆಸರುಗಳಲ್ಲದೇ ವಿಕಾಸ್ ಹೆಗಡೆ, ಸವಿತಾ ಅವರು, ನಿರಂಜನ ಪ್ರಭು, ಶ್ರೀನಿವಾಸ್, ಅಶ್ವಥ್ ಸಂಪಾಜೆ, ಶ್ರೀಕಾಂತ್ ಭಟ್, ಗಣಿತದ ಕಟ್ಟೆ ತಂಡ, ರಾಮಯ್ಯ ಕಾಲೇಜಿನ ಹಲವು ಪ್ರೊಫೆಸರ್ಗಳು.. ಹೀಗೆ ಹತ್ತು ಹಲವು ಜನರ ಭೇಟಿಯಾದ ಖುಷಿ.ತಮ್ಮ ಬರಹಕ್ಕೆ ಹೊಸ ಹೊಳವನ್ನು ಕೊಡುವ ಉತ್ಸಾಹ.ಪರಸ್ಪರ ಸಂಪರ್ಕದಲ್ಲಿರೋಣ, ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಕೈಲಾದ ಕಿರುಗಾಣಿಕೆಯನ್ನು ಕೊಡೋ ನಿಟ್ಟಿನಲ್ಲಿ ಹೆಜ್ಜೆ ಹಾಕುವಂತಹ ಹಂಬಲವನ್ನು ಮೂಡಿಸಿದ ಕಾರ್ಯಕ್ರಮದ ಎಲ್ಲಾ ಆಯೋಜಕರಿಗೂ, ಸ್ಥಳಾವಕಾಶ ಕಲ್ಪಿಸಿಕೊಟ್ಟ ಟೆಕ್ಸಾಸ್ ಇನ್ಸಸ್ಟ್ರುಮೆಂಟ್ಸ್ ಸಂಸ್ಥೆಗೆ ಮತ್ತು ಸಹಪ್ರಾಯೋಜಕತ್ವ ವಹಿಸಿದ ಎ.ಐ.ಇ.ಇ.ಇ ಗೆ ಒಂದು ಥ್ಯಾಂಕ್ಸ್ ಹೇಳಲೇಬೇಕಲ್ಲವೇ ?

ಮತ್ತೊಮ್ಮೆ ಇಂತದ್ದೇ ಕಾರ್ಯಕ್ರಮದಲ್ಲಿ ಸಿಗೋಣವೆಂಬ ವಿಶ್ವಾಸದಲ್ಲಿ ನಿಮ್ಮೊಲವಿನ
-ಪ್ರಶಸ್ತಿ
Blogger Mrs Savitha S.R @the left
ನಾನು ಮತ್ತು ಅಂಕಣಕಾರ ಅವಿನಾಶ್ ಎಡಭಾಗದಲ್ಲಿ. ಫೋಟೋ ತೆಗೆದವರು "ವಿಕಾಸವಾದ" ಬ್ಲಾಗಿನ ವಿಕಾಸಣ್ಣ :-)
ಸೂಚನೆ: ಕಾರ್ಯಕ್ರಮದ ಗ್ರೂಪ್ ಫೋಟೋ ಮತ್ತು ಇನ್ನಿತರ ಚಿತ್ರಗಳು ಆಯೋಜಕರಿಂದ ಸಿಕ್ಕ ನಂತರ

Wednesday, May 13, 2015

ಕಾಣದ ಕಣ್ಣಿಗೊಂದು

ಬೆಳಗ್ಗೆ ಹೊಂಬಿಸಿಲಿನೊಂದಿಗೆ ಮಗುವ ನಗುವಿನಂತೆ ಸೌಮ್ಯವಾಗಿದ್ದ ವರುಣದೇವ ಸಂಜೆಯಾಗುತ್ತಿದ್ದಂತೆ ಕಾಳಿಯಂತೆ ಆರ್ಭಟಿಸತೊಡಗಿದ್ದ. ಒಂದಾನೊಂದು ಕಾಲದ ಕೆರೆಗಳನ್ನೇ ಆಪೋಷನ ತೆಗೆದುಕೊಂಡು ಎದ್ದು ನಿಂತ ಅಪಾರ್ಟುಮೆಂಟುಗಳನ್ನೆಲ್ಲಾ ಮತ್ತೆ ಕೆರೆಗಳನ್ನಾಗಿಸಿಯೇ ಬಿಡೋ ಸಂಕಲ್ಪದಲ್ಲಿದ್ದಾನಾ ಇವನಿಂದು ಎಂಬ ಭಯ ರಸ್ತೆಗಳಲ್ಲಿ ಹರಿಯುತ್ತಿದ್ದ ಮೊಣಕಾಲುದ್ದದ ನೀರ ನೋಡಿ ಕಾಡುತ್ತಿತ್ತು. ಹಿಂದಿನ ದಿನವಷ್ಟೇ ಹೊಸದಾಗಿ ಮಾಡಿದ ಟಾರ್ ರೋಡನ್ನೆಲ್ಲಾ ಅಗೆದು, ಮುಚ್ಚದೇ ಹಾಗೇ ಬಿಟ್ಟ ಗ್ಯಾಸ್ ಕೇಬಲ್ಲಿನವರಿಗೆ ಬಸ್ಸಿನ ಚಕ್ರ ಹೂತು ಕುಂತ ಡ್ರೈವರ್ರು ಶಾಪ ಹಾಕುತ್ತಿದ್ದ. ಹೊಂಡಗಳ ತಪ್ಪಿಸಿ ಸರಿ ರಸ್ತೆಯಲ್ಲಿ ನಡೆಸಲೋಸುಗ ನಿಧಾನವಾದ ಟ್ರಾಫಿಕ್ಕಿನ ಮಧ್ಯೆ ಹೀಗೆ ಸಿಕ್ಕಿಬಿದ್ದ ವಾಹನಗಳೂ ಸೇರಿ ಯದ್ವಾ ತದ್ವಾ ಜ್ಯಾಮಾಗಿತ್ತು. ಅರ್ಧ ಘಂಟೆಯಾದ್ರೂ ನೂರು ಮೀಟರ್ ದೂರ ಹೋಗದ ಬಸ್ಸಿನ ಮೇಲೆ ಸಿಟ್ಟುಗೊಂಡು ನಡೆದಾದ್ರೂ ಹೋಗೋಣವೆಂದ್ರೆ ಹೊರಗಡೆ ಬಡಿಯುತ್ತಿದ್ದ ಗುಡುಗು ಸಿಡಿಲುಗಳಿಗಿಂತಲೂ ನಿಂತ ನೀರಿನದೇ ಹೆದರಿಕೆ. ರಸ್ತೆ ಮೇಲೆ ಅಗೆದ ಗುಂಡಿಗಳ ಎಲ್ಲಿ ಮುಚ್ಚಿದ್ದಾರೆ, ಎಲ್ಲಿ ಮುಚ್ಚಿಲ್ಲ ಎಂಬುದು ಮೊಣಕಾಲುದ್ದ ನಿಂತ ಕೆಂಪು ನೀರಿನಡಿ ಕಾಣದೇ ಯಾವುದಾದರೂ ಗುಂಡಿಗೆ ಕಾಲಿಟ್ಟರೆ ಗತಿಯೇನು ಎಂಬ ಭಯ. ಪುಟ್ಪಾತಿನ ಮೇಲೂ ಅಲ್ಲಲ್ಲಿ ಚಪ್ಪಡಿಗಳಿಲ್ಲದೆ ಕಾಲಿಕ್ಕಿದವರು ಸೀದಾ ಕೆಳಗಿದ್ದ ಡ್ರೈನೇಜಿಗೆ ಹೋಗಿ ನೀರ ರಭಸಕ್ಕೆ ಉಸಿರುಗಟ್ಟಿ ಸಾಯುವ ಸಂಭವವಿದ್ದರೂ ಎತ್ತರವಿದ್ದ ಫುಟ್ಪಾತಿನ ಮೇಲೆ ಹರಿವ ನೀರು ಕಮ್ಮಿಯಿದ್ದರಿಂದ ಮನೆ ಸೇರಲು ಅದೊಂದೇ ಸಾಧ್ಯತೆಯೆನಿಸುತ್ತಿತ್ತು. ಸರಿ, ಬಸ್ಸಿಳಿದು ಫುಟ್ಪಾತಿನ ಕಡೆ ನಡೆಯೋಣವೆಂದ್ರೆ ಬಸ್ಸು ಪುಟ್ಪಾತುಗಳ ನಡುವೆಲ್ಲಾ ನೆಲ ಕಾಣದಷ್ಟು ಕೆಂಪು ನೀರು. ರಸ್ತೆಯೆಂದುಕೊಂಡು ಹೊಂಡಕ್ಕೆ ಕಾಲಿಟ್ಟರೆ ನಾ ಪಾತಾಳಕ್ಕೆ ಹೋಗದಿದ್ದರೂ ಸೊಂಟದಷ್ಟು ನೀರಿನಲ್ಲಿ ಸ್ನಾನವಾಗುವುದಂತೂ ಖಚಿತ. ಏನು ಮಾಡುವುದೆಂಬ ಗೊಂದಲದಲ್ಲಿದ್ದಾಗಲೇ ಕಂಡಳವಳು. 

ಹೊಸದಾಗಿ ತಗೊಂಡ ಕ್ಯಾಮೆರಾ ಮೊಬೈಲಿನ ಮಾಯೆಯೋ, ತನ್ನೊಳಗೇ ಸುಪ್ತವಾಗಿದ್ದ ನೋಡುಗನ ಕಣ್ಣಿಗೊಂದು ಪರಿಕರ ಸಿಕ್ಕ ಖುಷಿಗೋ ಈತನಿಗೆ ಕಂಡದ್ದೆಲ್ಲಾ ಅದ್ಭುತವೆನಿಸುತ್ತಿತ್ತು. ಕೆಂಪು, ಕೇಸರಿ ಚದುರಂಗಿಗಳ ಮೇಲೆ ಇನ್ನೂ ಕುಳಿತ ನಿಂತ ಮಳೆಯ ಬಿಂದುಗಳು, ತಿಳಿಗುಲಾಬಿ ಬಣ್ಣದ ಪೇಪರ್ ಹೂವುಗಳ ಮುಮ್ಮೇಳದಲ್ಲಿ ಪಿಂಕಾಗೇ ಕಾಣುತ್ತಿರುವ ಆಗಸ , ನಿಂತ ಮಳೆನೀರಿನಲ್ಲಿನ ಕಾಣುತ್ತಿರುವ ಕಾಮನಬಿಲ್ಲಿನ ಪ್ರತಿಫಲನ.. ಹೀಗೆ ಇಂದು ಕಣ್ಣು ಹಾಯಿಸಿದಲ್ಲೆಲ್ಲಾ ದೃಶ್ಯಕಾವ್ಯ ಎಂದು ಮನದಲ್ಲೇ ಉದ್ಘರಿಸುತ್ತಿದ್ದ. ಕ್ಯಾಮೆರಾ ಮೊಬೈಲ್ ತಗೊಂಡ ಮೇಲೆ ಬೀಳೋ ಮಳೆಹನಿಯಿಂದ ಹಿಡಿದು ಸುಡುವ ಬಿಸಿಲ ಪರಿಯ ತನಕ  ಕಂಡದ್ದೆಲ್ಲಾ ಚೆಂದವೆನಿಸುತ್ತಿದ್ಯೋ ಅಥವಾ ನಾ ಮುಂಚೆಯಿಂದಾ ಹಿಂಗೇ ಇದ್ದನಾ ಎಂಬೊಂದು ಆಲೋಚನೆ ಬಂತೊಮ್ಮೆ ಮಳೆ ನಿಲ್ಲುತ್ತಿದ್ದಂತೇ ಗೂಡಿಗೆ ಮರಳುತ್ತಿದ್ದ ಹಕ್ಕಿಗಳ ಆಕಾರ ಕಂಡಾಗ.  ಅದಕ್ಕೊಂದು ಉತ್ತರ ಸಿಕ್ಕದೇ ಹಾಗೇ ನಿಂತ ಮಳೆ ನೀರಿನ ಮೇಲೆ ಚೆಲ್ಲಿದ ಪೆಟ್ರೋಲ ಹನಿಗಳು ಮೂಡಿಸಿದ ಚಿತ್ತಾರಗಳ ಆಕಾರಗಳ ಗಮನಿಸುತ್ತಾ ಮನೆಗೆ ನಡೆದು ಬರುತ್ತಿದ್ದನಿಗೆ ಮುಂದಿದ್ದ ನೀರಿನಲ್ಲಿ ಮೂಡುತ್ತಿದ್ದ ಪ್ರತಿಬಿಂಬಗಳೊಂದಿಗೆ ಬಿಂಬಕ್ಕೆ ಕಾರಣವಾದ ಆಕೃತಿಗಳನ್ನೂ ಸೆರೆಹಿಡಿದರೆ ಹೇಗೆಂಬ ಕಲ್ಪನೆ ಮೂಡಿತು. ಬರುತ್ತಿದ್ದ ಕಾರಿನೊಂದಿಗೆ ಅದರ ಬಿಂಬವನ್ನೂ ತೆಗೆವ ಪ್ರಯತ್ನದಲ್ಲಿದ್ದಾಗಲೇ ಕಂಡಳವಳು. 
ಶಾಂತ ನೀರಿನ ಮೇಲೆ ಕಾಲಿಟ್ಟು ಆಚೆ ದಾಟೋ ಅವಳ ಪ್ರಯತ್ನದಲ್ಲಿ ನೀರು ಕಲಕಿ ನನ್ನ ಪ್ರಯತ್ನ ಹಾಳಾಗಿ ಹೋಗಿತ್ತು. ನನ್ನ ತಪಸ್ಸ ಕೆಡಿಸಬಂದ ಈ ಮೇನಕೆಯ ಚಿತ್ರವನ್ನಾದರೂ ತೆಗೆಯುವ ಎಂಬ ಪ್ರಯತ್ನದಲ್ಲಿದ್ದಾಗ ಆಕೆಯೇ ಇತ್ತ ತಿರುಗಬೇಕೇ ? ಗೊತ್ತಿಲ್ಲದಂತೆ ಚಿತ್ರ ತೆಗೆಯಬೇಕೆಂದಿದ್ದ ಹುಡುಗಿಯೇ ನಮ್ಮತ್ತ ತಿರುಗಿ ದಿಟ್ಟಿಸುತ್ತಿರುವಾಗ ಇನ್ನೂ ಆಕೆಯ ಚಿತ್ರ ತೆಗೆಯಲು ಹೇಗೆ ಸಾಧ್ಯ ? ! ಆದರೂ ತೆಗೆವ ಪ್ರಯತ್ನದಲ್ಲಿದ್ದಾಗ ಹಿಂದಿನಿಂದ ಇನ್ನೊಂದು ಕಾರು ನಮ್ಮಿಬ್ಬರ ಮಧ್ಯೆ ಹಾದು ಹೋಗಿತ್ತು. ಅವಳು ತನ್ನ ಚಿತ್ರ ತೆಗೆವ ಪ್ರಯತ್ನ ಮಾಡುತ್ತಿದ್ದಾನೆಂದು ನನ್ನ ದುರುಗುಟ್ಟುತ್ತಿದ್ದಳೇ, ಕೋಪಗೊಂಡಿದ್ದಳೇ, ಖುಷಿಪಟ್ಟಳೇ, ಅಥವಾ ನನ್ನ ನೋಡಿಯೇ ಇರಲಿಲ್ಲವೇ ಎಂಬುದ ಇದ್ದ ದೂರದಿಂದ ಹೇಳಲು ಸಾಧ್ಯವಿರಲಿಲ್ಲ.  ದೂರ ಮತ್ತು ಸುಳಿದ ಯೋಚನಾಲಹರಿಗಳ ಮಧ್ಯೆ ಅವಳ ಮುಖವೇ ಸರಿಯಾಗಿ ಕಂಡಿರಲಿಲ್ಲ. ಆಲೋಚನೆಗಳಿಂದ ವಾಸ್ತವಕ್ಕೆ ಬರುವಾಗ ಆವಳೇ ಅಲ್ಲಿರಲಿಲ್ಲ. ಹೋಗಲಿ  ,ತೆಗೆದ ಚಿತ್ರವನ್ನಾದರೂ ಜೂಮ್ ಮಾಡಿ ನೋಡೋಣವೆಂದರೆ ಅದರಲ್ಲಿ ಬಂದಿದ್ದು ಅವಳಿಗೆ ಅಡ್ಡವಾಗಿ ವೇಗವಾಗಿ ಸಾಗಿಹೋದ ಕಾರ ಭೂತವಷ್ಟೆ !

ಅಂದು ಪ್ರತಿಫಲನದಲ್ಲಿ ಕಂಡು ಮರೆಯಾದವಳು ಇಂದು ಮತ್ತೊಮ್ಮೆ ಮಳೆಯಲ್ಲೇ ಕಂಡಳೇ ? ಹೌದು. ಅವಳಂತೇ ಇದ್ದಾಳೆ. ಇಂದಾದರೂ ಹತ್ತಿರ ಹೋಗಿ ಅಂದು ಫೋಟೋ ತೆಗೆಯ ಹೊರಟಿದ್ದು ನಿಮ್ಮದಲ್ಲ,ಹೇಳದೇ ಕೇಳದೇ ನಿಮ್ಮ ಫೋಟೋ ತೆಗೆಯಹೊರಟೆ ಅಂತೇನಾದ್ರೂ ಸಿಟ್ಟಾದ್ರೆ ಕ್ಷಮಿಸಿ ಅಂತೇನಾದ್ರೋ ಹೇಳಬೇಕಂತ ಇವನ ಮನ ತುಡಿಯುತ್ತಿತ್ತು. ಆದ್ರೆ ಆಕೆ ಫುಟಪಾತಿನಲ್ಲಿ , ಈತ ನೀರ ಮಧ್ಯದ ಟ್ರಾಫಿಕ್ಕಿನಲ್ಲಿ ಸಿಕ್ಕ ಬಸ್ಸಿನಲ್ಲಿ. ಇವರ ಮಧ್ಯದ ಎಂಟತ್ತು ಹೆಜ್ಜೆಗಳ ಹಾದಿ ಮಳೆಯ ಕಾರಣ ವಿಪರೀತ ದೂರವೆನಿಸುತ್ತಿತ್ತು. ಮಧ್ಯೆ ನಿಂತ ನೀರು ಸಪ್ತ ಸಾಗರವಷ್ಟು ವಿಶಾಲವೆಂಬೋ ಭಾವದಿ ಕಾಡುತ್ತಿತ್ತು ! ಅಂತೂ ಧೈರ್ಯ ಮಾಡಿ ಇಳಿದವನ ಕಾಲಿಗೆ ಹರಿಯುತ್ತಿದ್ದ ನೀರಲ್ಲೇನೋ ತಾಗಿದಂತಾಯ್ತು. ಏನಪ್ಪಾ ಅಂತ ದಿಟ್ಟಿಸಿದ್ರೆ ಹರಿವ ನೀರಲ್ಲೊಂದು ಮುರಿದ ಕೊಂಬೆ. ದೇಗುಲಗಳ ಎದುರಿಗೆ ಬೇಡುತ್ತಿದ್ದ ಭಿಕ್ಷುಕರಿಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದ ನನಗೆ ಹೊಡೆಯಲು ಅವರ ಕೈಗಳೇ ಈ ಕೊಂಬೆಯಾಗಿ ಬಂದಿದ್ಯೋ ? ಈ ಕೊಂಬೆಯೀಗ ನನ್ನ ಕಾಲ ಕಟ್ಟಿ ಯಾವುದೋ ಗುಂಡಿಯೊಳಗೆ ತಳ್ಳಿ ಉಸಿರುಗಟ್ಟಿಸಿ ಕೊಂದುಬಿಡುತ್ತದೇನೋ ಎನಿಸಿತೊಮ್ಮೆ. ಛೇ ! ತನ್ನ ಕಲ್ಪನೆಗೆ ತಾನೇ ಬೆಚ್ಚಿಬಿದ್ದ ಇವ ಯಾವುದೋ ಬಸ್ಸಿನ ಹಾರ್ನಿನೊಂದಿಗೆ ಮತ್ತೆ ತನ್ನ ವಾಸ್ತವಕ್ಕೆ ಬರುವಷ್ಟರಲ್ಲಿ ಕೊಂಬೆ ತನ್ನ ಪಾಡಿಗೆ ಕಾಣದಂತೆ ಎಲ್ಲೋ ಹರಿದುಹೋಗಿತ್ತು ಮುಂದೆ.  ಗಾಡಿಗಳು ಮುಂದೆ ಹೋಗೋಲ್ಲವೆಂದು ಗೊತ್ತಿದ್ರೂ ಹಾರ್ನು ಮಾಡೋದ್ಯಾಕೆ ಜನ ಅಂತ ಕರ್ಕಶ ಧ್ವನಿಗೆ ಬೈದುಕೊಳ್ಳುತ್ತಿದ್ದಾಗಲೇ ಅಗತ್ಯವಿಲ್ಲದಿದ್ದರೂ, ಸಂಬಳ ಸಾಲದೆಂದಿದ್ರೂ ಸಾಲ ಮಾಡಾದ್ರೂ ಕಾರು ಕೊಳ್ಳೋ ಬಯಕೆಯಾಗೆ ನಿನಗೆ , ಅದೂ ಹೀಗೇ ಅಲ್ಲವೇ ಎಂಬ ಮಾತೊಂದು ಅವನಂತರಾಳದಲ್ಲಿ ಧ್ವನಿಸಿದಂತಾಯ್ತು. ತನ್ನೊಳಗೆ ಇಂದು ಹರಿದಾಡುತ್ತಿದ್ದ ವಿಚಾರಧಾರೆಗೆ ತಾನೇ ಅಚ್ಚರಿಪಡುತ್ತಾ ಇದ್ದಿರಬಹುದಾದ ಹೊಂಡವ ತಪ್ಪಿಸುತ್ತಾ ಪುಟ್ಪಾತ ತಲುಪುವಷ್ಟರಲ್ಲೇ ಆಕೆ ಮುಂದೆ ಸಾಗಿಯಾಗಿತ್ತು. ಫುಟ್ ಪಾತಿನಲ್ಲಿನ ಹೊಂಡಗಳು ಇಂತಲ್ಲೇ ಇದೆಯೆಂಬ ಲೆಕ್ಕಾಚಾರ ಗೊತ್ತಿರುವಂತೆ ನೀರ ಮಧ್ಯೆಯಲ್ಲಿ ದಾಪುಗಾಲು ಹಾಕುತ್ತಿದ್ದ, ನೀರಿಲ್ಲದ ಜಾಗದಿಂದ ಮತ್ತೊಂದು ನೀರಿಲ್ಲದ ಜಾಗಕ್ಕೆ ಲಾಂಗ್ ಜಂಪ್ ಮಾಡುತ್ತಾ ಮುಂದೆ ಸಾಗುತ್ತಿದ್ದ ಅವಳ ಆಕೃತಿ ಬೀಳುತ್ತಿದ್ದ ಆಲೀಕಲ್ಲಿನ ಮಳೆಯ ಆರ್ಭಟಕ್ಕೆ ಕೆಲ ಕ್ಷಣಗಳಲ್ಲೇ ಮರೆಯಾಯಿತು. ಇಂದಲ್ಲಾ ನಾಳೆ ಮತ್ತೊಮ್ಮೆ ಸಿಕ್ಕಾಳೆಂಬ ಭರವಸೆಯಲ್ಲಿ ಇವನೂ ಮುಂದೆ ಹೆಜ್ಜೆ ಹಾಕಿದ. 

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

Tuesday, May 5, 2015

ಬುಡ್ಡಿದೀಪ:

Buddi Deepa
ಎಲ್ಲ ಕೊನೆಯಾಯ್ತೆಂಬ ಬೇಸರದ ಕತ್ತಲಲಿ
ಕರಗಿ ಹೋಯಿತೆ ನಮ್ಮ ಕನಸ ರೂಪ ?
ತಲುಪದಿದ್ದರೂ ಇಲ್ಲಿ ಸೂರ್ಯ ಚಂದ್ರನ ಬೆಳಕು
ದೊರಕೀತೆ ಮಬ್ಬೆಳಕ ಬುಡ್ಡಿ ದೀಪ ?

ಸೋಲ ಧೂಳಿನ ಪರದೆ ಹೊದ್ದು ಮಲಗಿದ ದೀಪ
ಎಣ್ಣೆ ಕಂಡೆಷ್ಟಾಯ್ತೊ ತಿಂಗಳಿಲ್ಲಿ?
ನಿರ್ಲಕ್ಷ್ಯದಾ ಒದೆತ ನಗ್ಗಿಸಿದ ಅಂಗಗಳು
ಅಡಗಿಹವು ಜೇಡನಾ ಬಲೆಗಳಲ್ಲಿ

ಎದ್ದೇಳೊ ದೀಪವೇ , ಬೇಸರವು ಕತ್ತಲೆಯು
ಜಾಢ್ಯ ಹೊದ್ದಿದೆ ಜಗವು ನೀನಿಲ್ಲದೆ
ಬೆಳಕಿಲ್ಲದಾ ಬಾಳು ನೂರು ಗೋಳಿನ ಹೋಳು
ಮೌಢ್ಯ ತೊರೆ,ಬೆಳಕ ತೆರೆ ಬಾ ಜ್ಯೋತಿಯೇ

ಸೋಲ ತಿಮಿರವ ತೊಡೆಯೆ ಛಲದ ಜ್ವಾಲೆಯು ಬರಲಿ
ಶ್ರಮದಿ ತನ್ನನೆ ಸುಡುವ ಎಣ್ಣೆಯೊಡನೆ
ಬದುಕ ಬಿಸಿ ಲೆಕ್ಕಿಸದೆ ಬೆಳಕ ಗುರಿ ಸಾಧಿಸುವ
ದೀಪಲೋಹದ ಪರಿಯ ಧೃಢತೆಯೊಡನೆ
ಎದರಾಗೋ ಅಪಜಯದಿ ಧೈರ್ಯವಡಗುವ ನೋಟ
ಜೀವ ತೆಗೆಯದೆ ಇರಲಿ ಗೋರಿಯಾಗಿ
ಸೋಲ ಧೂಳೆಮ್ಮನ್ನು ಕಾಡೋ ಸ್ಥಿತಿಯಾ ಪಾಟ
ಕಾಪಿಡಲಿ ನಾಳೆಗಳ ದಾರಿಯಾಗಿ