ವಸಂತಣ್ಣನ ಹಬ್ಬ ಕಳಿಸೋ ತಯಾರಿ |
ಮಲೆನಾಡಿಗರಿಗೆಲ್ಲಾ ದೀಪಾವಳಿ ಅಂದ್ರೆ ಭಾರೀ ಖುಷಿ. ದೊಡ್ಡಬ್ಬ ಅಂತ್ಲೇ ಕರೆಯೋ ಇದರ ಆಚರಣೆ ಶುರುವಾಗೋದು ಭೂರಿನೀರು ತುಂಬೋ ರಾತ್ರಿಯಿಂದ. ರಾತ್ರಿಯೇ ಮನೆಯ ಹಂಡೆ,ಬಾವಿ,ಒಲೆಗಳಿಗೆಲ್ಲಾ ರಂಗೋಲಿ ಬರೆದು, ಅಳ್ಳಂಡೆಕಾಯಿಯದೋ ಮತ್ಯಾವುದೋ ಕಾಯಿಯದೋ ಎಲೆ,ಬಳ್ಳಿ ತಂದು ಕಟ್ಟಿ ಪೂಜಿಸೋದ್ರಿಂದ ಹಬ್ಬದ ಖುಷಿ ಕಳೆಗಟ್ಟಲಾರಂಭಿಸುತ್ತೆ. ಮಾರನೇ ದಿನ ಬೆಳಗ್ಗೆಯೇ ಮನೆಯ ಎಳೆಯರಿಗೆಲ್ಲಾ ಎಬ್ಬಿಸಿ ಎಣ್ಣೆ ಹಚ್ಚಿ ಕೂರಿಸೋದು ಅಂದ್ರೆ ಅಮ್ಮಂದಿರಿಗೆಲ್ಲಾ ಯುದ್ದಕ್ಕೆ ಹೊರಟ ಭಾವ. ಏ ಎಣ್ಣೆ, ಜಿಡ್ಡು, ರಾಡಿ ಅಂತ ನೂರೆಂಟು ವಸವಂತ ಮಾಡೋ ಕಿಲಾಡಿ ಮಕ್ಕಳನ್ನು ಒಂದ್ಕಡೆ ಕೂರಿಸಿ ಅವರ ತಲೆಗೆ ಎಣ್ಣೆ ತಟ್ಟಿ, ಮುಖ, ಕೈ ಕಾಲಿಗೆಲ್ಲಾ ಎಣ್ಣೆ ಬಳಿಯೋ ಹೊತ್ತಿಗೆ ಅವರ ಅಮ್ಮಂದಿರಿಗೆ ಉಸ್ಸಪ್ಪಾ ಅನಿಸದಿರಲ್ಲ. ಶರ್ಟು ಬಿಚ್ಚಿ ಕೂರಿಸಿದ ಹುಡುಗ್ರೆಲ್ಲಾ ಚಳಿ ಚಳಿ ಅಂತಾರೆ ಅಂತ ಅವರನ್ನ ಬಿಸಿಲಲ್ಲಿ ಕೂರಿಸೇ ಎಣ್ಣೆ ಹಚ್ಚೋದು. ಏ ವರ್ಷಕ್ಕೊಂದು ಸಲ ಎಣ್ಣೆ ಹಚ್ಚಿಸ್ಕೊಳ್ಬೇಕು ಕಣೋ. ಸೂರ್ಯನ ಬಿಸಿಲಲ್ಲಿ ಇದ್ರೆ ವಿಟಮಿನ್ ಡಿ ಸಿಗುತ್ತೆ ಅಂತ ಓದಿಲ್ವಾ ನೀನು ಅಂತ ಪುಸಲಾಯಿಸೋ ಈಗಿನ ಅಮ್ಮಂದಿರು ಮಕ್ಕಳಷ್ಟೇ ಅಪಡೇಟ್ ಆಗಿದ್ದಾರೆ ! ಆಚರಣೆ ಅಂತ್ಲೋ, ಇಷ್ಟಪಟ್ಟೋ ಎಣ್ಣೆ ಬಳಿಸಿಕೊಂಡದ್ದಾಯ್ತು. ಆ ಜಿಡ್ಡಿನ್ನು ತೊಳೆಯೋದೇಗಪ್ಪಾ ಅನ್ನೋದು ಮಕ್ಕಳ ತಲೆನೋವು. ಅದಕ್ಕೇಂತ್ಲೇ ಒಲೇಲೆ ಬಿಸಿನೀರು, ಸೀಗೇಪುಡಿ ಕಾಯ್ತಾ ಇರುತ್ತಲ್ಲ. ಎಣ್ಣೆ ಹಚ್ಚಿಸಿಕೊಂಡು ಬಿಸಿಲಲ್ಲಿ ಕೂತರೂ ಬಚ್ಚಲ ಬಿಸಿನೀರು, ಸೀಗೆಕಾಯಿಯ ಸ್ಪರ್ಷ ಅನ್ನೋದು ಅದೆಷ್ಟು ಖುಷಿ ಕೊಡುತ್ತೆ ಅಂತೀರಿ.. ಏ ಅರ್ಧ ಘಂಟೆ ಆಯ್ತಲ್ಲೋ ಸ್ನಾನಕ್ಕಿಳಿದು, ಹಂಡೆಯ ನೀರೆಲ್ಲಾ ಖಾಲಿ ಮಾಡಿದ್ಯಾ ಎಂತ ಕತೆ ಅಂತ ಅಮ್ಮ ಗದರೋವರೆಗೂ ಹೊರಲೋಕದ ಪ್ರಜ್ಞೆಯೇ ಇಲ್ಲದಂತಾ ಭಾವ ಅಲ್ಲಿ !
ಸುರುಸುರು ಬತ್ತಿಯೊಂದಿಗೆ ಶಿಶಿರಣ್ಣ |
ಭೂರಿನೀರು ತುಂಬೋ ರಾತ್ರಿಯ ಅಲಂಕಾರ |
ಅದಾದ ಮೇಲೆ ನರಕಚತುರ್ದಶಿ. ಉಪರಿ ಬಂತು ಅಂತ ಕೆಲವು ಸಲ ಅವತ್ತೇ ಅಮವಾಸ್ಯೆಯ ತಿಥಿಯೂ ಬಂದುಕೊಂಡಿರುತ್ತೆ! ಮಲೆನಾಡ ಕೆಲವು ಸೀಮೆಗಳಲ್ಲಿ ಅಮವಾಸ್ಯೆಯಂದು ಗೋಪೂಜೆ,ಲಕ್ಷ್ಮೀಪೂಜೆ, ಆಯುಧಪೂಜೆಗಳಾದ್ರೆ ಕೆಲವು ಕಡೆ ಅದು ಬಲಿಪಾಡ್ಯಮಿಗೆ. ಬಲಿಪಾಡ್ಯಮಿ ಅನ್ನೋದು ವರ್ಷಕ್ಕೊಂದು ಸಲ ಬಲೀಂದ್ರ ರಾಜನು ಭೂಮಿಗಿಳಿದು ಬರುವ ದಿನ ಅಂತ ಬಲೀಂದ್ರಪೂಜೆಯನ್ನೂ ನಡೆಸುತ್ತಾರೆ. ಅಂದ ಹಾಗೆ ಈ ಎಲ್ಲಾ ಪೂಜೆಗಳನ್ನ ನವರಾತ್ರಿಯಲ್ಲಿ ಮಾಡ್ತಾರಲ್ವಾ ಅನ್ನುವವರ ಸಂದೇಹ ಪರಿಹಾರಕ್ಕೆ ಈ ಮಾಹಿತಿ. ಈ ಎಲ್ಲಾ ಪೂಜೆಗಳನ್ನ ಪೇಟೆಯಲ್ಲಿರುವಂತೆ ನವರಾತ್ರಿಗೆ ಮಾಡೋಲ್ಲವಿಲ್ಲಿ. ಅವೆಲ್ಲಾ ಆಗೋದು ದೀಪಾವಳಿಗೆ. ನವರಾತ್ರೆಯ ಎಂಟನೇದಿನದಿಂದ ಪುಸ್ತಕಗಳನ್ನಿಟ್ಟು ಶಾರದಾಪೂಜೆ ಅಂತ ಮಾಡೋದು ಬಿಟ್ಟರೆ, ಆ ಒಂಭತ್ತು, ಹತ್ತನೇದಿನದ ಪೂಜೆಗಳೆಲ್ಲಾ ಇಲ್ಲಿ ಆಗೋದು ದೀಪಾವಳಿಗೆ. ಅದಕ್ಕೇ ದೀಪಾವಳಿಯೆನ್ನೋದು ದೊಡ್ಡಬ್ಬ.ದೀಪಾವಳಿಯಲ್ಲಿ ಗೋವುಗಳನ್ನು/ಹೋರಿಗಳನ್ನು ಬೆದರಿಸೋದು, ಅವತ್ತಿನ ರಾತ್ರಿ ಪಂಜಿನಿಂದ ಹಬ್ಬ ಕಳಿಸೋದು ಹೀಗೆ ಹತ್ತು ಹಲವು ಆಚರಣೆಗಳ ಖುಷಿಯ ಬಗ್ಗೆ ಬರೆಯುತ್ತಾ ಹೋದ್ರೆ ಒಂದೊಂದೂ ಒಂದೊಂದು ಸಂಚಿಕೆಯಾದಾವು.
ಅವುಗಳೆಲ್ಲವನ್ನೂ ಸದ್ಯಕ್ಕಲ್ಲೇ ಬಿಟ್ಟು ಅಂಟಿಗೆಪಿಂಟಿಗೆ ರಾತ್ರಿಯ ಕಥೆಗೆ ಬರೋಣ. ನೀಚಡಿ ಅಂದ್ರೆ ಎಲ್ಲಪ್ಪ ಅನ್ನೋರಿಗೆ ಅದು ಸಾಗರದಿಂದ ಶಿವಮೊಗ್ಗ ರಸ್ತೆಯಲ್ಲಿ ೨೨ ಕಿ.ಮೀ ದೂರದಲ್ಲಿದೆ ಅಂತನ್ನಬಹುದು. ಶಿವಮೊಗ್ಗ ರಸ್ತೆಯಲ್ಲಿ ಸಿಗೋ ಕಾಸ್ಪಾಡಿಯಿಂದ ತ್ಯಾಗರ್ತಿ ರಸ್ತೆಯಲ್ಲಿ ೭ ಕಿ.ಮೀ ಹೋದರೆ ಸಿಗೋದೆ ಚಿಕ್ಕಬಿಲಗುಂಜಿ. ಅಲ್ಲಿಂದ ಒಂದು ಕಿಮೀ ಮೇಲೆ ಹೋದರೆ ಸಿಗೋದು ನೀಚಡಿ.ಚಿಕ್ಕಬಿಲಗುಂಜಿಯ ವಸಂತಣ್ಣನ ಮನೆಯ ಹಿಂದಿನ ಹಲಸಿನ ಮರಕ್ಕೆ ನಮಸ್ಕಾರ ಮಾಡೇ ಅಂಟಿಗೆ ಪಿಂಟಿಗೆಯ ಯಾತ್ರೆ ಶುರುವಾಗೋದ್ರಿಂದ ಸರಿಯಾದ ಸಮಯಕ್ಕೆ, ಸರಿಯಾದ ಮನೆಗೆ ಹೋಗಿದ್ದು ನನ್ನ ಅದೃಷ್ಟವೇ ಸರಿ ಎಂದನಿಸಿದ್ದು ಸುಳ್ಳಲ್ಲ.
ಹಲಸಿನ ಮರದ ಬುಡದಿಂದ ಜ್ಯೋತಿಯನ್ನು ತೆಗೆದುಕೊಳ್ಳುತ್ತಿರೋ ಚಿಕ್ಕಬಿಲಗುಂಜಿಯ ಹಬ್ಬಾಡೋ ತಂಡ |
ಅಂಟಿಗೆ-ಪಿಂಟಿಗೆ ಅಥವಾ ಹಬ್ಬಾಡೋ ಆಚರಣೆ ಎಲ್ಲೆಡೆ ನಶಿಸುತ್ತಾ ಬಂದಿದ್ರೂ ಇಲ್ಲಿ ಉಳಿದುಕೊಂಡಿರೋಕೆ ಮುಖ್ಯ ಕಾರಣ ಆ ಊರವರು ನಡೆಸಿಕೊಂಡು ಬಂದಿರೋ ಕಟ್ಟುಪಾಡುಗಳು ಅನಿಸುತ್ತೆ. ಅಲ್ಲಿ ಸುಮಾರು ನಲವತ್ತು ಮನೆಗಳಿವೆಯಂತೆ. ಎಲ್ಲಾ ಮನೆಗಳಿಂದಲೂ ಹಬ್ಬಾಡೋಕೆ ಕನಿಷ್ಟ ಒಬ್ಬರಾದರೂ ಬರಲೇಬೇಕಂತೆ. ಬರಲಿಲ್ಲ ಅಂದ್ರೆ ಒಂದು ಸಾವಿರ ರೂ ದಂಡ ! ದಂಡ ಅನ್ನೋದಕ್ಕಿಂತಲೂ ಹೆಚ್ಚಾಗಿ ನಮ್ಮೂರ ಆಚರಣೆ ಅನ್ನೋ ಕಾರಣಕ್ಕೆ ಊರವರೆಲ್ಲಾ ಒಟ್ಟು ಸೇರಿ ನಡೆಸಿಕೊಂಡು ಬಂದಿರೋ ಆಚರಣೆಯನ್ನ ನೋಡೋಕೆ ಖುಷಿಯಾಗುತ್ತೆ. ಊರ ಒಂದು ಹಲಸಿನ ಮರದ ಬುಡದಲ್ಲಿ ನಂದಾದೀಪದಂತೆ ಒಂದು ದೀಪ ಹಚ್ಚಿ ಅದನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿರುತ್ತಾರೆ ಹಬ್ಬದ ಹಿಂದಿನ ದಿನ. ಹಬ್ಬದ ದಿನ ರಾತ್ರಿ ಅದೇ ಮರದ ಬುಡಕ್ಕೆ ಮತ್ತೆ ಬಂದು ಅಲ್ಲಿಂದ ತಮ್ಮ ದೀವಟಿಗೆಗಳಿಗೆ ಬೆಂಕಿ ಹಚ್ಚಿಕೊಂಡು ಹಬ್ಬದ ಹಾಡುಗಳ ಹಾಡುತ್ತಾ ಊರ ದೇವಸ್ಥಾನಕ್ಕೆ ಹೋಗುತ್ತಾರೆ.
ಊರದೇಗುಲದಲ್ಲಿ ಶ್ರೀಕೃಷ್ಣಪಾರಿಜಾತದ ಮೊದಲ ಹಾಡು |
ಆಚರಣೆಯಲ್ಲಿ ಹಿರಿಯರಷ್ಟೇ ಜೋಶ್ನಿಂದ ಕಿರಿಯರೂ ಬರ್ತಿದ್ದಾರೆ ಅನ್ನೋದ್ನ ನೋಡೋಕೆ ಸಖತ್ ಖುಷಿಯಾಗುತ್ತೆ ! |
ಚಿಕ್ಕಬಿಲಗುಂಜಿ ಹಬ್ಬಾಡೋ ತಂಡ |
ಊರಗಮದೊಡೆಯಗೆ ನನ್ನ ಪೂಜೋ ಅಂತ ಶುರುವಾಗೋ ಬಲೀಂದ್ರನ ಪೂಜೆಯ ಹಾಡಿನ ನಂತರ ಮೊದಲ ಮನೆಯುದುರು ಶುರುವಾಗೋ ಹಾಡೋ ಹೀಗೆ ಸಾಗುತ್ತೆ..(ನಾ ಕೇಳಿ ಬರೆದದ್ರಲ್ಲಿರಬಹುದಾದ ದೋಷಗಳ ಕ್ಷಮಿಸಿರೆಂಬ ಕೋರಿಕೆಯೊಂದಿಗೆ)
ಬಾಗಿಲು ಬಾಗಿಲು ಚೆಂದ, ಈ ಮನೆ ಬಾಗಿಲು ಚೆಂದ
ಬಾಗಿಲ ಮೇಲೇನೋ ಬರೆದೈತೋ ..ಶಿವ ಶಿವ
ಬಾಗಿಲ ಮೇಲೇನೋ ಬರೆದೈತೋ ಗಿಳಿರಾಮ
ಓದೇಳೋ ನಿಮ್ಮ ಹಿರಿಯರಿಗೋ ..ಶಿವ ಶಿವ
ಓದೇಳೋ ನಿಮ್ಮ ಹಿರಿಯರಿಗೇನಾದಾರೆ
ಕಾಮಾನ ದೀಪೇ ನಡೆ ಮುಂದೆ ..ಶಿವ ಶಿವ
ಕಾಮಾನ ದೀಪೇ ನಡೆ ಮುಂದೆ ಜಗುಲಿಗೆ
ಜ್ಯೋತಿಗೊಂದೆಣ್ಯ ಎರೆಬನ್ಯೋ.. ಶಿವ ಶಿವ.
ಎಣ್ಣೆ ಎರೆದಾರೆ ಪುಣ್ಯವು ನಿಮಗಾದವೊ
ಆನಂದನುಗಾಲ ಸುಖಬಾಳೋ ..ಶಿವ ಶಿವ
ಕರಿಸೀರೆಯನುಟ್ಟು ಸೆರಗ ಮುತ್ತಕಟ್ಟಿ
ಚಿಕ್ಕ ಮಾಳಿಗೆಲಿ ಸುಳಿಬಾರೋ ..ಶಿವ ಶಿವ
ಚಿಕ್ಕ ಮಾಳಿಗೆಲಿ ಸುಳಿವರೊ ಕಾಯೋ ನಿಮ್ಮ
ಕಪ್ಪಿನ ಬೆಳಕಲಿ ಮಗಳೆದ್ದೋ ..ಶಿವ ಶಿವ
ಕಪ್ಪಿನ ಬೆಳಕೆಲೆ ಮಗಳೆದ್ದು ಜೋಗುಳ ಪಾಡಿ..
ಜ್ಯೋತಿಗೊಂದೆಣ್ಣಿಯ ಎರಿಬಾರೋ ..ಶಿವ ಶಿವ
ಎಣ್ಣೆಯ ಎರೆದಾರೆ ಪುಣ್ಯವು ನಿಮಗಾದವೊ
ಆನಂದನುಗಾಲ ಸುಖಬಾಳೋ ..ಶಿವ ಶಿವ
ಕರಿಸೀರೆಯನುಟ್ಟು ಸೆರಗ ಮುತ್ತಕಟ್ಟಿ
ಮುಮ್ಮಾಳಿಗೆಯೊಳಗೆ ಸುಳಿಬಾರೋ ..ಶಿವ ಶಿವ
ಮುಮ್ಮಾಳಿಗೆಯೊಳಗೆ ಸುಳಿವರೊ ಕಾಯೋ ನಿಮ್ಮ
ಓಲೆಬೆಳಕೇಲಿ ಮಗಳೆದ್ದೋ ..ಶಿವ ಶಿವ
ಓಲೆಬೆಳಕೇಲೆ ಮಗಳೆದ್ದು ಜೋಗುಳ ಪಾಡಿ..
ಜ್ಯೋತಿಗೊಂದೆಣ್ಣೆ ಎರಿಬಾರೋ ..ಶಿವ ಶಿವ
ಎಣ್ಣೆಯ ಎರೆದಾರೆ ಪುಣ್ಯವು ನಿಮಗಾದವೊ
ಆನಂದನುಕಾಲ ಸುಖಬಾಳೋ ..ಶಿವ ಶಿವ
ಇಲ್ಲಿಗ್ಹರಹರ ಇಲ್ಲಿಗೆ ಶಿವ ಶಿವ
ಇಲ್ಲಿಗೀ ಸಂಜೆ ಪದಮುಂದೋ ಶಿವ ಶಿವ
ಹೀಗೆ ಮುನ್ನಡೆಯೋ ಹಾಡನ್ನ ನಾ ಬರಿತಾ ಹೋದ್ರೆ ಅದರ ಮಜಾ ಸಿಕ್ಕಲಿಕ್ಕಿಲ್ಲ. ಲಿಂಕಲ್ಲಿದೆ ಕೇಳ್ನೋಡಿ. ಆನಂದಿಸಿ..
ಇದೇ ರೀತಿಯ ತುಂಬಾ ಹಾಡುಗಳಿವೆ. ಎಲ್ಲಾ ಬರೆಯುತ್ತಾ ಹೋದ್ರೆ ಬೆಳಗಾದೀತು !
ಚಿಕ್ಕಬಿಲಗುಂಜಿಯ ಹಾಡುಗಳನ್ನ ಕೇಳಿದ ನಂತರ ನೀಚಡಿಗೆ ಹೋದೆವು. ಅಲ್ಲಿ ಹತ್ತುವರ್ಷಗಳ ಹಿಂದೆ ಬಿಟ್ಟುಹೋದ ಪದ್ದತಿಯನ್ನು ಮತ್ತೆ ಶುರುಮಾಡೋಕೆ ಅಲ್ಲಿನ ಗ್ರಾಮಸ್ಥರು ಟೊಂಕ ಕಟ್ಟಿ ನಿಂತಿದ್ರು.ಮೊದಲ ದಿನವೇ ಆಭಾಸವಾಗಬಾರದು ಅಂತ ದಿನಾ ಅಲ್ಲಿನ ದೇವಸ್ಥಾನದಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ದ ಹುಡುಗರ, ದೊಡ್ಡವರ ಜೊತೆಗೆ ನಾವೂ ಸೇರಿಕೊಂಡೆವು ! ಅಂತೂ ರಾತ್ರಿ ಹತ್ತೂಮುಕ್ಕಾಲಿಗೆ ಒಂದು ಹಂತದ ಭರವಸೆ ಬಂದ ನಂತರ ಊರಿಗೆ ಹಬ್ಬಾಡೋಕೆ ಹೊರಟು ನಿಂತಿತು ತಂಡ. ಅವರ ಜೊತೆಗೆ ನಾವೂ. ನಾ ಮೊದಲು ಹೊರಟಿದ್ದು ಆದಷ್ಟೂ ಹಾಡುಗಳ ರೆಕಾರ್ಡ್ ಮಾಡ್ಬೇಕು ಅಂತ. ಆದರೆ ಕೆಲಮನೆಗಳ ನಂತರ ನಾನೂ ನನಗರಿಯದಂತೆ ಅವರೊಳಗೊಂದು ದನಿಯಾಗಿದ್ದೆ !! ಹಬ್ಬಾಡೋದು ಅಂದ್ರೆ ಏನೇನಿರುತ್ತೆ ಅನ್ನೋರ ಕುತೂಹಲ ತಣಿಸೋಕೊಂದಿಷ್ಟು ಮಾಹಿತಿಗಳು. ಮನೆಯ ಬಾಗಿಲು ಹಾಕಿದ್ರೆ ಅದ್ರ ಬಾಗಿಲು ತೆಗಿಸೋಕೆ ಬೇರೆ ಹಾಡು, ಮನೆಯಲ್ಲೇನಾದ್ರೂ ಬಸಿರಿಯರೋ, ಬಾಣಂತಿಯರೋ ಇದ್ರೆ ಅವರನ್ನು ಹರಸೋ ಹಾಡುಗಳು, ಶ್ರೀ ಕೃಷ್ಣ ಪಾರಿಜಾತದ ಹಾಡು, ಊರ ಗೌಡನ ಮಗನ ಬಗೆಗಿನ ಹಾಡು, ರೈಲ ಹಾಡು, ಗಣಪತಿಯ ಹಾಡು ಹೀಗೆ ಹತ್ತು ಹಲವು ಹಾಡುಗಳಿವೆ. ಅದರಲ್ಲಿ ಕೆಲವೊಂದು ಪೌರಾಣಿಕವಾದರೆ ಕೆಲವೊಂದು ಸಾಮಾಜಿಕ.
ಹೊರಡಲಣಿಯಾದ ನೀಚಡಿಯ ದೇವಸ್ಥಾನದಲ್ಲಿನ ಜ್ಯೋತಿ |
ನೀಚಡಿ ದೇವಸ್ಥಾನದಿಂದ ಹೊರಡುತ್ತಿರುವ ಜ್ಯೋತಿ |
ಹಬ್ಬದ ಹಾಡು ಹೇಳುತ್ತಿರುವ ನೀಚಡಿಯ ತಂಡ |
ಮನೆಯಿಂದ ಮನೆಗೆ ಸಾಗಿದೆ ಹಬ್ಬಾಡುವ ತಂಡದ ಪಯಣ |
ಹಬ್ಬಾಡುವವರ ದೀಪಕ್ಕೆ ಎಣ್ಣೆಯೆರೆದು, ಆ ದೀಪದಿಂದ ತಮ್ಮ ಮನೆಯ ದೀಪವನ್ನು ಹಚ್ಚಿಕೊಳ್ಳುತ್ತಿರುವ ಮನೆಯೊಡತಿ |
ಮುಂದುವರೆದಿರುವ ಹಾಡು.. |
ಮಧ್ಯರಾತ್ರಿ ಎರಡಕ್ಕೆ ಟೀ,ಅವಲಕ್ಕಿ,ಹೋಳಿಗೆಯ ಸೌಭಾಗ್ಯ.. ಯಾರಿಗುಂಟು ಯಾರಿಗಿಲ್ಲ ! |
ಕೆಲವೆಡೆ ಹಬ್ಬದ ದಿನ ನಡೆದರೆ, ಕೆಲವೆಡೆ ಹಬ್ಬ ಆಗಿ ಎರಡು ಮೂರು ದಿನಗಳವರೆಗೂ ನಡೆಯುತ್ತಲೇ ಇರುತ್ತಂತೆ ! ದೊಡ್ಡ ದೊಡ್ಡ ಊರುಗಳಾದ್ರೆ ಎಲ್ಲಾ ಮನೆಗಳನ್ನೂ ಒಂದು ರಾತ್ರೆಯಲ್ಲಿ ಮುಗಿಸೋಕಾಗ್ಬೇಕಲ್ಲ ! ಚಿಕ್ಕಬಿಲಗುಂಜಿಯಲ್ಲಿದ್ದಂತೆ ಕಲವೆಡೆ ಎರಡು ಮೂರು ತಂಡಗಳನ್ನಾಗಿ ವಿಭಾಗಿಸಿಕೊಳ್ತಾರಂತೆ. ಒಂದು ಗುಂಪು ಊರ ದೇವಸ್ಥಾನದಿಂದ ಒಂದು ದಿಕ್ಕಿನಲ್ಲಿ ಹೊರಟರೆ ಮತ್ತೊಂದು ಮತ್ತೊಂದು ದಿಕ್ಕಿನಲ್ಲಿ ಹೊರಡುತ್ತೆ. ಹೊರಟ ದೀಪಗಳು ಮತ್ತೆ ಮುಖಾಮುಖಿಯಾಗುವಂತಿಲ್ಲ ಅನ್ನೋದು ಪದ್ದತಿ.ಹಾಗಾಗಿ ಯಾವುದಾದ್ರೂ ಮನೇಲಿ ಒಂದು ಗುಂಪು ಇದೆ. ಅದೇ ಹಾದಿಯಲ್ಲಿ ಮತ್ತೊಂದು ಗುಂಪು ಬರ್ತಿದೆ ಅಂತಾದ್ರೆ ಮತ್ತೊಂದು ಗುಂಪು ಮನೆಯಿಂದ ಹೊರಡೋವರೆಗೂ ಮೊದಲ ಗುಂಪು ಹೊಕ್ಕ ಮನೆಯಿಂದ ಹೊರಬರೋಲ್ಲ. ರಾತ್ರೆ ಹೊರಟ ಗುಂಪು ಬೆಳಗಾಗೋವರೆಗೂ ಹಾಡುತ್ತಲೇ ಇರುತ್ತೆ. ಬೆಳಕಾದ ತಕ್ಷಣ ಮನೆಸೇರಿ ಮಲಗಿದರೆಂದರೆ ಆ ರಾತ್ರಿ ಬಿಟ್ಟ ಮನೆಯಿಂದ ಮುಂದುವರಿಕೆ ಹಬ್ಬಾಡೋದು.. ಊರಿನೆಲ್ಲಾ ಮನೆಗಳ ಮುಗಿಸೋ ತನಕ.. ಕೆಲವೆಡೆ ಈ ತರಹ ಕೋಲಾಟದ ತಂಡಗಳೂ ಇವೆಯಂತೆ. ಇವರ ಬಾಯಿಮಾತಲ್ಲೇ ರೂಡಿಯಾಗಿರೋ ಹಾಡುಗಳನ್ನ ಸಂಗ್ರಹಿಸೋ ಪ್ರಯತ್ನ ಅಲ್ಲಲ್ಲಿ ನಡೆದಿದೆಯಾದರೂ ದಾಖಲಾಗಿದ್ದಕ್ಕಿಂತ ದಾಖಲಾಗದ್ದೇ ಹೆಚ್ಚು ಅನಿಸುತ್ತೆ ! ನಗರೀಕರಣದ ಭರಾಟೆಯಲ್ಲೂ ಇಂತಹ ಆಚರಣೆಗಳು ಇನ್ನೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದೆಯಲ್ಲಾ ಎಂದು ಖುಷಿಯಾಗುತ್ತೆ.
ಒಂದೊಳ್ಳೇ ಆಚರಣೆಗೆ ಕರೆದ ವಸಂತಣ್ಣ,ಮಹಾಲಕ್ಷ್ಮಮ್ಮ,ಶಿಶಿರಣ್ಣ ಬೆಳಬೆಳಗ್ಗೆಯೇ ಮನೆಗೆ ಹೊರಡಬೇಕೆಂದ ನನ್ನ ಗಡಿಬಿಡಿಯ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ.. |
No comments:
Post a Comment