ಕೆಲಸಕ್ಕೆ,ನೆಲಸಕ್ಕೆ ಎಲ್ಲಕ್ಕೂ ಬೇಡೋದೆ ?
ಯಾಚನೆಯೆ ಅಂಟಿಹುದೆ ಜನ್ಮದಿಂದ !
ಮುರುಟಿ ಸಾಯದ ದೇಹ
ಅಂಗಲಾಚುವ ಪರಿಗೆ
ಸ್ವಾಭಿಮಾನವ ಕೊಲ್ಲೊ ಹಂಗು ನುಡಿಗೆ |೧|
ಕಣ್ಣೀರುಗರೆಯದೇ ತೊಟ್ಟು ಹಾಲುಕ್ಕದು
ಕಂಡ ತಿಂಡಿಯ ಆಸೆ, ತಂದೆ ಕೇಳು
ಒಳ್ಳೆ ವಸ್ತ್ರವ ಕಂಡೆ, ಅದಕೆ ಅಣ್ಣನ ಕಣ್ಣು!
ಬೇಡದೆಯೆ ಸಿಗದೆನಗೆ ಹಳೆಯ ಚೆಂಡೂ ! |೨|
ಹನಿನೀರಿಗಾಗಿಯೂ
ದೊರೆಯ ಮೊರೆ ಅನಿವಾರ್ಯ
ಅನ್ನ, ಪ್ರಾಣವ ನೀಡು ಅನ್ನಪೂರ್ಣೆ
ಹಂಗಿಲ್ಲದಿದ್ದರೂ ಮೈಮುಚ್ಚ ಬೇಕಲ್ಲ
ಅದಕೆ ಮತ್ತದೆ ದೇವಿ ಬೇಡು ಮತ್ತೆ |೩|
ಬೇಡಿದುದು ಮುಗಿದಿಲ್ಲ
ಹಿಂಜುತಿದೆ ಸಾಲ ಋಣ
ಹಿಪ್ಪೆಯಾಗುವ ಮನವು ಬೇಡೆ ಮತ್ತೆ
ಹೀಗಳಿಕೆ ಜೀವನವೆ ಬೇಕೆ ಮತ್ತೆ ? |೪|
ನೊರೆ ಹಾಲ ಕೊಡೊ ಹಸುವು
ಕರೆ ಎಂದು ಬೇಡುವುದು !
ಮಳೆ ನೀರ ಮೇಲೆತ್ತೆ ಬಿಸಿಲೆ ಬೇಕು!
ನ್ಯಗ್ರೋಧ ಪಸರಿಸಲು
ಬೇಕೊಂದು ಮರಿ ಹಕ್ಕಿ
ನೀರ ಕಾಣಲು ಬಟ್ಟೆ, ಕೊಳೆಯೆ ಬೇಕು! |೫|
ಬೇಡಿದರು ಹನಿ ರಕ್ತ
ಸ್ವಾತಂತ್ರ ಕೊಡಲೆಂದು
ಮನೆ ಮರೆತು ಹೋರಾಡಿದಂತ ತ್ಯಾಗಿ
ಶ್ರೀಹರಿಯೆ ಬೇಡಿರಲು
ಮೂರು ಹೆಜ್ಜೆಯ ಭೂಮಿ
ಬೇಡುವಿಕೆ ಕೀಳಲ್ಲ ಅರಿಯೊ ಸಾಕು
ಜೀವಕ್ಕೆ ಬೇಡು ನೀ, ಕ್ಷಣಿಕ ವಿಷಯಕ್ಕಲ್ಲ
ಕೊರಗಿಲ್ಲದೇ ಬದುಕ ನಲಿಯಬೇಕು |೬|
ಚೆನ್ನಾಗಿದೆ ವಸ್ತುವಿಷಯದ ಭಾವ ವಿಧಾನ. ವಂದನೆಗಳು.
ReplyDeleteಧನ್ಯವಾದಗಳು ಮೂರ್ನಾಡರೇ :-)
Deleteಚೆನ್ನಾಗಿದೆ ಪ್ರಶಸ್ತಿ.. :-)ಶಬ್ದಗಳು ಹೊಸತಾಗಿದೆ !
ReplyDeleteಧನ್ಯವಾದಗಳು ಕಿಣ್ಣಣ್ಣ :-)
Deleteಬಿನ್ನಹಕೆ ಬಾಯಿಲ್ಲಯ್ಯ ಅಂತಾರಲ್ಲ ದಾಸರು .ನೀವು ಬೇರೇನೆ ಎಳ್ತೀರಿ.
ReplyDeleteಮೊದಲನೆಯದಾಗಿ ಪ್ರಶಾಂತವನಕ್ಕೆ ಸ್ವಾಗತ ದಯಾಜಿ :-)
Deleteದಾಸ ವಾಣಿ ಅಂದ್ರೆ ಸತ್ಯನೇ ಇರಬೇಕು. ನೀವು ಹೇಳುವುದು ಸರಿ.
ಆದರೆ, ಕೆಲವು ಜೀವನಾನುಭವಗಳು ಅಂತ ಆಗುತ್ತಲ್ಲ ದಯಾಜಿ, ಅವೇ ನಮ್ಮನ್ನು ಸ್ವಲ್ಪ ಭಿನ್ನವಾಗಿ ಯೋಚಿಸುವಂತೆ ಮಾಡುತ್ತದೆ. ಓದುವಾಗ ದುಡ್ಡಿಲ್ಲದೇ ಸೀನಿಯರ್ ನಿಂದ ಹಳೆಯ ಪುಸ್ತಕಕ್ಕಾಗಿ ಬೇಡೋದು. . ಆಮೇಲೆ ಕೆಲಸ ಇದೆಯಾ ಎಂದು ಕಂಡವರನ್ನೆಲ್ಲಾ ಬೇಡುವುದು.. ಸಿಕ್ಕಿದ ಮೇಲೆ ಹೊಸ ಅವಕಾಶಕ್ಕಾಗಿ ಇನ್ಯಾರನ್ನೋ ಬೇಡುವುದು.. ಹೀಗೆ ಮನಸ್ಸು, ದೇಹವನ್ನೆಲ್ಲಾ ಹಿಂಡಿಕೊಂಡು ಬೇಡುವುದೇ ಒಂದಲ್ಲಾ ಇನ್ನೊಂದು ತರದಲ್ಲಿ ನಿತ್ಯಕಾಯಕವಾಗಿಬಿಡುವ ಸಂಭವವಿದೆಯಲ್ಲಾ.. ಅದರಷ್ಟು ಹಿಂಸೆ ಬೇರೊಂದಿಲ್ಲ ಅಲ್ಲವೇ .. ಹಾಗಂತ ಸಮಾಜಜೀವಿಯಾದ ನಾವು ಯಾರನ್ನೂ ಬೇಡದೆ ಒಬ್ಬನೇ ಇದ್ದುಬಿಡುವೆ ಎಂಬುದೂ ಸಾಧ್ಯವಿಲ್ಲ..ಬೇಡುವುದು, ಬೇಡದೇ ಇರುವುದರ ನಡುವಿನ ಹೊಂದಾಣಿಕೆಯೆ ಜೀವನವೇ ? ...
ಬ್ಲಾಗ್ ಭೇಟಿಗೆ ವಂದನೆಗಳು