Wednesday, June 13, 2012

ಮಿಂಚ ಸ್ನೇಹ

ಹೊಸ ನೀರು ಬಂದಾಗ ಹಳೇ ನೀರು ಕೊಚ್ಕೊಂಡು ಹೋಗೋ ತರ ಹೊಸ ಗೆಳೆಯರು ಬಂದಾಗ ಹಳಬ್ರು ಮರ್ತೋಗೋದು ತುಂಬಾ ಕಾಮನ್ನು ಅನ್ನೋ ಹಾಗೆ ಆಗ್ತಾ ಇದೆಯಲ್ಲಾ ಈಗ. ಹೈಟೆಕ್ ಜಮಾನಾದಲ್ಲಿ ತುಂಡಾಗೋ ಹೈ ಸ್ಪೀಡ್ ಸಂಬಂಧಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಬೆಸುಗೆಗಳು ಕಾಲದೊಂದಿಗೆ ಸವೆಯದೇ ಹಾಗೇ ಉಳ್ಕಂಡು ತಾವೆಷ್ಟು ಗಟ್ಟಿ ಅನ್ನೋದ್ನ ಸಾರ್ತಾ ಇರುತ್ತೆ. ಅದೇ ತರ ಕೆಲ ನೆನಪುಗಳೂ ಸಹ. ಎಷ್ಟೋ ಸಲ ಬಸ್ಸಲ್ಲಿ, ರೈಲಲ್ಲಿ ಹೋಗಿರ್ತೀವಿ.ಈ ತರ ಒಂದೂವರೆ ಘಂಟೆ ಇಂದ , ಒಂದು ದಿನದ ಪ್ರಯಾಣದಲ್ಲಿ ಜೊತೆಯಾಗೋ ಜನರು ನಿರೀಕ್ಷಿಸದ ಸಮಯದಲ್ಲಿ ಮೂಡೋ ಮಿಂಚಂತೆ ಮಿಂಚಿ ನಮಗೇ ಅರಿವಿಲ್ಲದಂತೆ ಆ ಪ್ರಯಾಣದ ಅವಧಿಗೆ ನಮ್ಮ ಸ್ನೇಹಿತರಾಗಿ ಹಾಗೇ ಮರೆಯಾಗಿ ಬಿಡ್ತಾರೆ.ಆದರೆ ಅವರಲ್ಲಿ ಎಷ್ಟೋ ಜನರ ಮಾತುಗಳು, ನೆನಪುಗಳು ಅವರ ಹೆಸರು ಮರ್ತೋದ್ರೂ ನೆನ್ಪಲ್ಲಿ ಉಳ್ದು ಬಿಡುತ್ತೆ.ಅಂಥದೇ ಕೆಲ ನೆನಪುಗಳ ಸುತ್ತ ಈ ಬರಹ

ನಮ್ಮೂರು ಸಾಗರದಿಂದ ಶಿವಮೊಗ್ಗಕ್ಕೆ ಒಂದೂವರೆ ಘಂಟೆ ದೂರ .ಈಗಿನ ಬೆಂಗಳೂರಿನ ಟ್ರಾಫಿಕ್ಕಿಗೆ ಹೋಲಿಸಿದ್ರೆ ಅದು ತೀರಾ ಹೆಚ್ಚು ಹೊತ್ತಾಗ್ದೇ ಇದ್ರೂ ಆಗ ನಮಗದು ಸ್ವಲ್ಪ ಜಾಸ್ತೀನೆ ಹೊತ್ತು.ಆಗ ಹೈಸ್ಕೂಲು ದಿನಗಳು. ಬಸ್ಸಲ್ಲಿ ಮೈಮರೆತು ನಿದ್ರೆ ಮಾಡಿದ್ರೆ ಪಕ್ಕಕ್ಕಿರೋರು ದುಡ್ಡು, ಬ್ಯಾಗು ಕದ್ಕೊಂಡು ಹೋಗ್ತಾರೆ ಅಂತ ಲೆಕ್ಕ ಇಲ್ಲದ, ರೆಕ್ಕೆ ಪುಕ್ಕ ಇಲ್ಲದ ಗಾಳಿ ಸುದ್ದಿ ಕಿವಿಗೆ ಬಿದ್ದಿದ್ರ ಪರಿಣಾಮನೋ ಏನೋ ನಾವೆಂತೂ ಬಸ್ಸಲ್ಲಿ ಒಬ್ನೇ ಹೋಗ್ತಾ ಪಕ್ಕಕ್ಕೆ ಬಂದು ಕೂರೋ ಅವ್ರುನ್ನ ಮೊದಲು ಗಮನಿಸ್ತಿದ್ದೆ. ಸ್ವಲ್ಪ ದೊಡ್ಡೋರು ಅಂದ್ರೆ ನೀವೆಲ್ಲಿಗೆ ಹೋಗೋವ್ರು ಅಣ್ಣಾ, ಶಿವಮೊಗ್ಗಕ್ಕಾ ಅಂತನೋ ಏನೋ ಮಾತಿಗೆಳ್ಯೋದು.ಕೆಲೋ ಸಲ ಅವ್ರೇ ನೀವೆಲ್ಲಿಗೆ ಹೋಗೋರು ಅಂತ ಮಾತಿಗೆ ಶುರು ಮಾಡೋರು. ತೀರಾ ಬಿಗುಮಾನ ಇಲ್ದೇ ಮಾತಾಡೋರಾದ್ರೆ ಇಬ್ರಿಗೂ ಒಳ್ಳೇ ಟೈಂ ಪಾಸ್

ಒಮ್ಮೆ ಹೀಗೇ ಹೋಗ್ತಿರ್ಬೇಕಾದ್ರೆ ಸಾಗರದ ಎಲ್.ಬಿ ಕಾಲೇಜಲ್ಲಿ ಬಿ.ಎ ಓದ್ತಿದ್ದವ್ರೊಬ್ರು ಸಿಕ್ಕಿದ್ರು. ಅವತ್ತು ಹಿಂಗೇ ಮಾತಾಡ್ತಾ ಅವ್ರು ರೋಮಿಯೋ ಜೂಲಿಯಟ್ ಬಗ್ಗೆ, ಲೈಲಾ ಮಜ್ನು ಬಗ್ಗೆ, ಅವ್ರು ಓದಿದ ಶೇಕ್ಸಪಿಯರಿನ ಟ್ರಾಜಿಡಿ ಮತ್ತು ಕಾಮಿಡಿ ನಾಟಕಗಳ ಬಗ್ಗೆ ಮಾತಾಡಿದ್ರು. ಶೇಕ್ಸಪಿಯರಂದ್ರೆ ಬರೀ ಟ್ರಾಜಿಡಿ ಅಂತ ತಿಳಿದಿದ್ದ ನನಗೆ ಅವರ ಇತರ ಕೃತಿಗಳ ಬಗ್ಗೆ ತಿಳಿದಿದ್ದು ಅವಾಗ್ಲೇ. ಮೆಕಬೆತ್,ಕಿಂಗ್ ಲಿಯರ್, ಒಥೆಲೋ,ಹ್ಯಾಮ್ಲೆಟ್ ಕತೆಗಳ್ನ ಅಂದು ಅವರ ಬಾಯಿಂದ ಕೇಳಿದ್ದು ಇನ್ನೂ ನೆನ್ಪಿದೆ !! ಆಗೆಲ್ಲಾ ಈಗಿನ ತರ ಮೊಬೈಲುಗಳಿರ್ಲಿಲ್ಲ. ಆದರು ಸಂಪರ್ಕದಲ್ಲಿರೋಣ ಅಂತ ಹೇಳಿದ್ರು. ಹೂಂ ಸರಿ ಅಂದಿದ್ದೆ. ಆಮೇಲೆ ಅವ್ರು ಎಲ್ಲೂ ಸಿಗ್ಲಿಲ್ಲ. ಒಮ್ಮೆ ಸಾಗರದಲ್ಲೇ ಎದ್ರಿಗೆ ಸಿಕ್ಕಿದ್ರೂ ಮಾತಾಡ್ಸದೇ ಮುಂದೆ ಹೋದ್ರೂ. ನಂಗೂ ಧೈರ್ಯ ಸಾಕಾಗಿರ್ಲಿಲ್ಲ ಅನ್ಸುತ್ತೆ ಅವ್ರನ್ನ ತಡ್ದು ಮಾತಾಡ್ಸೋಕೆ ಆಗ. ಎಷ್ಟಂದ್ರೂ ಮಿಂಚ ಸ್ನೇಹ ಅಲ್ವೇ ? ಒಮ್ಮೆ ಮೂಡಿ ಮರ್ಯೋದನ್ನ ಎಷ್ಟೂಂತ ನೆನ್ಯೋದು ? ! :-( :-(

ಮತ್ತೊಮ್ಮೆ ನಾನು, ನನ್ನಣ್ಣ ದಿಲ್ಲಿಗೆ ಹೋಗ್ತಾ ಇದ್ವಿ .ಬೆಂಗಳೂರಿಂದ ರೈಲಲ್ಲಿ ೩೩ ಘಂಟೆ ಪ್ರಯಾಣ ದಿಲ್ಲಿಗೆ.ನಾವು ಕಾಲೇಜು ಹುಡುಗ್ರಾದ್ರೂ ಇಷ್ಟೆಲ್ಲಾ ದೂರ ಪ್ರಯಾಣ ಮಾಡಿ ಇಬ್ರಿಗೂ ಗೊತ್ತಿಲ್ಲ !!.ಹಿಂಗೇ ಪ್ರಯಾಣ ಮಾಡ್ತಿದ್ದಾಗ ನಮ್ಮ ಪಕ್ಕಕ್ಕಿದ್ದೋರನ್ನ ಮಾತಾಡ್ಸಿದ್ರೆ ಅವ್ರು ದೆಲ್ಲಿಗೆ ಹೋಗೋರು ಅಂತ ಗೊತ್ತಾಯ್ತು. ಅವ್ರು ದಿಲ್ಲಿಯ ದಂಪತಿಗಳು.ಅನಿಲ್ ಶರ್ಮ ದಂಪತಿಗಳು ಅಂತ ಆಮೇಲೆ ಗೊತ್ತಾಯ್ತು. ಹಿಂಗೇ ಕೆಲ ಘಂಟೇಲೆ ಅದೂ ಇದೂ ಮಾತಾಡ್ತಾ ಸ್ವಲ್ಪ ಪರಿಚಯ ಆಯ್ತು. ಬೆಂಗಳೂರಿನ ತಂಪಿನ ಬಗ್ಗೆ, ದೆಲ್ಲಿಯ ಸೆಕೆಯ ಬಗ್ಗೆ, ಅಲ್ಲಿ ಸುತ್ತಾಡೋ ಜಾಗಗಳ ಬಗ್ಗೆ, ಬೆಂಗಳೂರಲ್ಲಿರೋ ಅವರ ಮಗನ ಕೆಲಸದ ಬಗ್ಗೆ, ದೆಲ್ಲಿಯ ತಮ್ಮ ಕೆಲಸದ ಬಗ್ಗೆ ಎಲ್ಲಾ ಚೆನ್ನಾಗೇ ಮಾತಾಡಿದ್ರು. ಹುಟ್ಟಿದಾಗಿನಿಂದ ತನ್ನ ಹುಟ್ಟೂರು ಬಿಹಾರ ಮತ್ತು ಗಂಡನ ಊರು ದೆಲ್ಲಿ ಬಿಟ್ರೆ ಬೇರ್ಯಾವುದೂ ನೋಡದೇ ಇದ್ದ ಆ ಅಮ್ಮ, ಹೆತ್ತ ಮಗನಿಗೋಸ್ಕರವೇ ಬೆಂಗಳೂರವರೆಗೆ ಬಂದಿದ್ದರು. ಅವರಿಬ್ಬರ ಕಣ್ಣಿಗೆ ನಾನು ಅವರ ಚಿಕ್ಕ ಮಗನಂತೆಯೇ ಕಾಣುತ್ತಿದ್ದೆನಂತೆ !!

ರೈಲಲ್ಲಿ ಬೇರೆ ಅವ್ರು ಕೊಟ್ಟ ತಿಂಡಿ ತಿನ್ಬಾದ್ರು, ಅದ್ರಲ್ಲಿ ಮತ್ತು ಬರೋ ಔಷಧಿ ಹಾಕಿ ನಮ್ಮನ್ನ ದರೋಡೆ ಮಾಡ್ತಾರೆ ಅಂತೆಲ್ಲಾ ಎಚ್ಚರಿಕೆ ರೈಲವ್ರೇ ಕೊಡ್ತಾರೆ. ಆದ್ರೆ ಈ ದಂಪತಿ ಅವತ್ತು ಸಂಜೆ ನಮಗೆ ಅವ್ರು ಮಾಡಿದ್ದ ಚೂಡಾ(ಅವಲಕ್ಕಿ) ಕೊಡಕ್ಕೆ ಬಂದ್ರು !! ಏನ್ಮಾಡೋದು? ಎಷ್ಟು ಬೇಡಾ ಅಂದ್ರೂ ಕೇಳ್ತಾ ಇಲ್ಲ ಅವರು. ತುಂಬಾ ಒತ್ತಾಯ. ಕೊನೆಗೆ ಅವರು ಚೆನ್ನಾಗಿ ಕಲಸಿ ಅದ್ರಲ್ಲೇ ಸ್ವಲ್ಪ ಭಾಗ ತೆಗ್ದು ನಮ್ಮಿಬ್ರಿಗೆ(ನಾನು ಅಣ್ಣ) ಕೊಟ್ರೂ ತಿನ್ಲಿಲ್ಲ. ಅವ್ರು ತಿಂದು ಅವ್ರಿಗೆ ಏನೂ ಆಗದೇ ಇದ್ದ ಮೇಲೆ ನಮ್ಗೆ ಸ್ವಲ್ಪ ಧೈರ್ಯ ಬಂತು!! ನಾವೂ ಮುಂದಿನ ಸ್ಟೇಷನ್ ಅಲ್ಲಿ ತಗೊಂಡ ವೇಫರ್ಸನ್ನ ಅವ್ರಿಗೆ ನೀಡಿದ್ವಿ. ಅವ್ರೂ ಪ್ರತೀ ಸಲ ಚೂಡಾ ತಿನ್ನೋವಾಗ ನಮ್ಗೆ ಕೊಡೋರು.ಅದೂ ಇದೂ ಹರಟೋದೂ ನಡೀತಾ ಇತ್ತು. ಒಮ್ಮೆ ಅವ್ರು ಯಾವ್ದೋ ಕೀ ಚೈನ್ ತಗೊಂಡ್ರು, ನಾವೂ ತಗೊಂಡ್ವಿ. ನಾನು ದೋ ಕೆ ಪೈಸೆ(ಎರಡರ ದುಡ್ಡು) ಅಂತ ದುಡ್ಡು ಕೊಟ್ಟು ಬಿಟ್ಟೆ. ಅಲ್ಲಿವರ್ಗೂ ಶಾಂತ ಗೌರಿಯಂತಿದ್ದ ಆ ಅಮ್ಮ ಇದ್ದಕ್ಕಿದ್ದಂಗೆ ಸಿಟ್ಟಾದ್ರು. ಆಪಕೇ ಪೈಸಾ ಆಪ್ ಹೀ ರಕಲೋ, ಹಮೇ ಮತ್ ದೋ(ನಿಮ್ಮ ದುಡ್ಡು ನೀವೇ ಇಟ್ಕೊಳಿ, ನಮ್ಗೆ ಕೊಡ್ಬೇಡಿ)  ಅಂತ ಒಂದು ಚೈನಿನ ದುಡ್ಡು ನನ್ನ ಜೇಬಿಗೆ ತುರುಕಕ್ಕೆ ಬಂದ್ರು.. ಕೊನೆಗೆ ನಾನು ನನ್ನಣ್ಣ ತಗಂಡಿದ್ದು ಮತ್ತು ನಾ ತಗಂಡಿದ್ರ ದುಡ್ಡು ಕೊಟ್ಟಿದ್ದಷ್ಟೇ ಅಂತ ಸಮಾಧಾನ ಮಾಡೋದ್ರಲ್ಲಿ ಸಾಕಾಯ್ತು. ಇಂತ ಒಳ್ಳೆ ದಂಪತಿ ಸಿಕ್ಕಿದ್ರಿಂದ ನಮ್ಗೆ ದೆಲ್ಲಿ ಬಂದಿದ್ದೇ ಗೊತ್ತಾಗ್ಲಿಲ್ಲ. ಅಷ್ಟು ಟೈಂ ಪಾಸ್ ಆಗಿತ್ತು. ಬೇರೆ ರಾಜ್ಯವೊಂದರ ಸಂಸ್ಕೃತಿ ಬಗ್ಗೆ ಸುಮಾರು ಅರಿವಾಗಿತ್ತು.  ದೆಲ್ಲಿಗೆ ಹೋದಾಗ ಅವ್ರಿಗೆ ಸಿಗೋಕೆ ಆಗ್ಲಿಲ್ಲ .ಆದ್ರೆ ಅವ್ರ ಮೊಬೈಲ್ ನಂಬರ್ ಈಗ್ಲೂ ಇದೆ:-)

ಮತ್ತೊಂದ್ಸಲ ಬೆಂಗಳೂರಿಂದ ಶಿವಮೊಗ್ಗಕ್ಕೆ ರೈಲಲ್ಲಿ ಬರೋವಾಗ ಸ್ವಲ್ಪ ವಯಸ್ಸಾದವ್ರು ಇಬ್ರು ಎದ್ರಿಗೆ ಕೂತಿದ್ರು. ನಾ ಮಾತಾಡ್ಸೋಕೆ ಮೊದ್ಲೇ ಅವ್ರೇ ಶುರು!! ಏನಪಾ, ಯಾವ್ಕಡೆ, ಏನು ಮಾಡ್ತಾ ಇದೀಯ ಅಂತ. ಅವ್ರಿಗೂ ಟೈಂ ಪಾಸ್ ಆಗ್ಬೇಕಾಗಿತ್ತಲ್ಲ :-) ಕೊನೆಗೆ ಇಬ್ರೂ ತಮ್ಮೂರಿನ ರಿಯಲ್ ಎಸ್ಟೇಟ್ ಬಿಸಿನೆಸ್ ಬಗ್ಗೆ, ಬಡ್ಡಿ ಸಾಲದ ಬಗ್ಗೆ ಮಾತಾಡೋಕೆ ಶುರು ಮಾಡೋರು. ಈ ರಾಜಕೀಯ ಪಕ್ಷಗಳ ಬಗ್ಗೆ ನೀವು ಏನು ಹೇಳ್ತೀರ ಅಂತ ಮಧ್ಯ ಮಧ್ಯ ನನ್ನೂ ಕೇಳೋರು. ನಾನು ಪ್ರತೀ ಸಲ ಓಟು ಹಾಕ್ತೀನಿ ಸಾರ್. ಆ ಸಮಯದಲ್ಲಿ ಇರೋರಲ್ಲಿ ಯೋಗ್ಯ ಅಭ್ಯರ್ಥಿ ಯಾರೋ ಅವ್ರಿಗೆ ಓಟು ಹಾಕ್ತೀನಿ. ಇಂತದ್ದೇ ಪಕ್ಷ ಅಂತೇನೂ ಇಲ್ಲ ಅಂತ ಹೇಳೋದೇ ಸೇಫು ಅನ್ಸಿತ್ತು ಅವಾಗ.. ಸುಮಾರು ಸಲ ರೈಲಲ್ಲಿ , ಬಸ್ಸಲ್ಲಿ ರಾಜಕೀಯದವ್ರನ್ನ ದೇಶದಲ್ಲಿ ಸರಿಯಾಗಿರದೇ ಇರೋದ್ರ ಬಗ್ಗೇನೇ ದೂರೋರ್ವನ್ನ ಕಂಡು, ಅವ್ರ ಮಾತು ಕೇಳಿ ಕೇಳಿ ಬೇಜಾರಾಗಿ ಇವರ ರಿಯಲ್ ಎಸ್ಟೇಟ್ ಮಾತುಕತೇನೆ ಸ್ವಲ್ಪ ವಾಸಿ ಅನ್ಸಿದ್ರಲ್ಲಿ ಆಶ್ಚರ್ಯ ಇಲ್ವೇನೋ !!

ಮತ್ತೊಂದ್ಸಲ ಬರ್ತಾ ಆಜಾದ್ ಅಂತ ಸಿಕ್ಕಿದ್ರು. ಅವ್ರು ಮಾತಾಡಿದ್ದು ಫುಲ್ಲು ವೇದಾಂತದ ಬಗ್ಗೆ. ದೇವರು ಕೊಟ್ಟ ಈ ಜೀವನದಲ್ಲಿ ನಾವು ಎಷ್ಟು ಬೇರೆ ಅವ್ರಿಗೆ ಸಹಾಯ ಮಾಡ್ತೀವಿ ಅನ್ನೋದನ್ನೇ ದೇವ್ರು ನೋಡ್ತಾ ಇರ್ತಾನೆ ಅನ್ನೋದು ಅವ್ರ ಮಾತು. ಇರೋ ಅಷ್ಟು ದಿನ ಬೇರೆ ಅವ್ರಿಗೆ ನೋವು ಕೊಡ್ದೇ ಸಂತೋಷವಾಗಿ ಬಾಳೋದೇ ಜೀವನದ ಸತ್ವ ಅನ್ನೋ ಧಾಟೀಲಿ ನಮ್ಮ ಮಾತು ಸಾಗ್ತಿತ್ತು. ಈ ಬಾರಿ ಕೆ.ಎ.ಎಸ್ ಬರ್ದಿದ್ರಂತೆ ಅವ್ರು. ಬರ್ದು ಪಾಸಾಗೋದು ಕಷ್ಟ ಆದ್ರೆ ಆಯ್ಕೆ ಆದ್ರೆ ಮನೇಲಿರೋದನ್ನ ಉದ್ರಿ ಇಟ್ಟಾದ್ರೂ ನನ್ನ ಕಳಿಸ್ತಾರೆ ಅಲ್ಲಿಗೆ ಅಂದ್ರು. ಅವರ ನಿಷ್ಠೆಗೆ ಭೇಷ್ ಅನ್ಸಿತ್ತು. ಸೂಫಿ ಸಾಹಿತ್ಯದ ಬಗ್ಗೆ, ಗಝಲ್ ಗಳ ಬಗ್ಗೆ, ಸಂವಿಧಾನ ಸುಧಾರಣೆಗಳ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಹುಟ್ಟಿದಬ್ಬಕ್ಕೆ ಕ್ಯಾಂಡಲ್ ಆರ್ಸೋದು ಸರೀನಾ ತಪ್ಪೋ, ಅವತ್ತು ಹೆವೀ ಪಾರ್ಟಿ ಮಾಡೋ ಬದ್ಲು  ಅನಾಥರಿಗೆ ನಮ್ಮ ಹಳೇ ಬಟ್ಟೆ ಕೊಟ್ಟು ಅವತ್ತಿನ ದಿನದ ನೆನಪು ಚೆನ್ನಾಗಿಡ್ಬೋದಲ್ಲಾ ಅನ್ನೋ ನನ್ನ ಐಡಿಯಾದ ಬಗ್ಗೆ.. ಹೀಗೆ ಬೆಂಗಳೂರಿಂದ ಶಿವಮೊಗ್ಗಕ್ಕೆ ಬರೋವರ್ಗೂ ಮಾತಾಡಿದ್ವಿ. ಎಲ್ಲೋ ಅಪರೂಪಕ್ಕೊಮ್ಮೆ ಸಿಗೋ ಇಂತ ಜನರು ಮಿಂಚಂತೆ ಮತ್ತೆ ಮರೆಯಾದ್ರೂ ಅವ್ರ ನೆನ್ಪು ಈ ತರ ಮತ್ತೆ ಮತ್ತೆ ಹಸಿರಾಗ್ತಾನೆ ಇರುತ್ತೆ

ಮತ್ತೊಂದ್ಸಲ ಶಿವಮೊಗ್ಗಕ್ಕೆ ಬರ್ತಿರೋವಾಗ ಒಬ್ಬ ಸಣ್ಣ ಹುಡ್ಗ ಮತ್ತು ಅವನ ಕುಟುಂಬ ನನ್ನ ಎದ್ರಿಗೆ ಕೂತಿತ್ತು. ಹಿಂಗೇ ಎಲ್ಲಿಗೆ ಹೋಗ್ತಾ ಇದೀರ ಅಂತ ಮಾತಾಡ್ತಾ ಇರ್ಬೇಕಿದ್ರೆ ಅವ್ನಿಗೆ ನಾನು ಅವ್ನ "ಪುನಿ" ಅಣ್ಣನ ಹಾಗೆ ಕಾಣಕ್ಕೆ ಶುರು ಆದೆ. ತಗಳಪ್ಪ, ಅಲ್ಲಿಂದ ಶುರು . ಪುನಿ ಅಣ್ಣ, ಆ ಆಟ ಆಡೋಣ ಬಾ, ಈ ಆಟ ಆಡೋಣ ಬಾ, ನಮ್ಮನೆಗೆ ಬಾ ಅಂತ ತುಂಬಾನೆ ಹಚ್ಕೊಂಡು ಬಿಟ್ಟಿದ್ದ. ಮಧ್ಯ ಮಧ್ಯೆ WWF ಮಾಡ್ತೀನಿ ನಿನ್ನ ಜೊತೆ ಅಂತ ಶುರು ಮಾಡ್ತಿದ್ದ. ಆಗೆಲ್ಲಾ ಈ ಟೀವಿಯಿಂದ ಮಕ್ಳು ಎಷ್ಟು ಹಾಳಾಗ್ತಿದಾರೆ ಅಂತ ಟೀವಿಗೆ ಶಾಪ ಹಾಕಿದ್ದೊಂದೇ ನನ್ನ ಕೆಲ್ಸ.ಪಾಪ, ಸಣ್ಣ ಹುಡ್ಗ, ಅವ್ನಿಗೇನು ಗೊತ್ತಾಗುತ್ತೆ !! ಅವ್ನು ಇಳೀತಾ ನಮ್ಮನೇಗೆ ಬಾ ಅಂತ ನನ್ನ ಬ್ಯಾಗು ತಗೊಂಡು ಹೋಗಕ್ಕೆ ಶುರು !! ಕೊನೆಗೆ ಅವ್ನ ಅಮ್ಮ ಬೈದು , ನೀವೇನು ಬೇಜಾರು ಮಾಡ್ಕೋಬೇಡಿ ಅಂತ ನಂಗೂ ಸಮಾಧಾನ ಮಾಡಕ್ಕೆ (!!) ಬಂದ್ರು.. ಇಲ್ಲಮ್ಮಾ, ನಂಗೇನೂ ಬೇಜಾರಿಲ್ಲ, ಸಣ್ಣ ಮಕ್ಕಳಲ್ವಾ ಆಟ ಆಡ್ತಾವೆ. ಹೋಗಿ ಬನ್ನಿ , ಪರ್ವಾಗಿಲ್ಲ ಅಂತ ನನ್ನ ಬ್ಯಾಗು ಇಸ್ಕೊಂಡಿದ್ದೆ !!

ಹಿಂಗೇ ಸುಮಾರಷ್ಟು ನೆನ್ಪಾಗ್ತಾ ಹೋಗತ್ತೆ .. ಆದ್ರೆ ಕಾಲ ಬದ್ಲಾಗ್ತಾ ಹೋದಂಗೇ ಜನಾನು ಬದ್ಗಾಗ್ತಾ ಹೋಗ್ತಿದಾರಲ್ವಾ ಅನುಸುತ್ತೆ ಕೆಲೋ ಸಲ. ಕೆಲೋ ಸಲ ಶಿವಮೊಗ್ಗದಿಂದ ಹೊರಟು, ಬೆಂಗಳೂರವರೆಗೆ ಬಸ್ಸಲ್ಲಿ ಬಂದ್ರೂ ಪಕ್ಕದೋರು ಬೆಂಗಳೂರಿಗೆ ಹೋಗ್ತಿದಾರೆ ಅನ್ನೋದು ಬಿಟ್ಟು ಬೇರೇನೂ ಮಾತಾಡಿರಲ್ಲ!!ಪಕ್ಕದೋರಿಗೆ ಅಥವಾ ನಮಗೆ ಅವರ ಮೇಲೆ ಅನುಮಾನವ, ಅವಿಶ್ವಾಸವಾ.. ಅಂತಲ್ಲ. ಆದರೂ , ಯಾಕೆ ಬೇಕು, ನಮ್ಮ ಪಾಡಿಗೆ ನಾವಿರೋಣ ಅನ್ನೋ ಭಾವನೇನೆ ಅದೇಗೋ ಅರಿದೇ ಮೇಲುಗೈ ಸಾಧಿಸಿರುತ್ತೆ. ಆದ್ರೂ ಕೆಲೋ ಸಲ  ಸಹಪ್ರಯಾಣಿಕರು ಮಿಂಚಂತೆ ಅದ್ಯಾವ್ದೋ ಗಳಿಗೇಲಿ ಸ್ನೇಹಿತರಾಗಿ ಸುಮಧುರ ನೆನ್ಪುಗಳ್ನ ಉಳಿಸಿ ಬಿಡ್ತಾರೆ. 
   
ಇಂತದ್ದು ನಿಮ್ಮ ಜೊತೆಗೂ ನಡ್ಡಿರಬಹುದು. ಅಥವಾ ನಾನು ಪ್ರಸ್ತಾಪಿಸಿದವ್ರಲ್ಲಿ ಒಬ್ರಾದ್ರೂ ಈಗ ಈ ಲೇಖನ ಓದ್ತಾನೂ ಇರ್ಬೋದು!! ಹಾಗೇನಾದ್ರೂ ಇದ್ರೆ ಅದು ನನ್ನ ಮಹಾಪುಣ್ಯವೇ ಸೈ. ನಿಮ್ಮೆಲ್ಲಾ ಮಧುರ ನೆನಪುಗಳಿಗೆ ಮತ್ತೊಮ್ಮೆ ಸಲಾಂ.

4 comments:

  1. we would like to chat with unknown online who is miles away, not with next person.We have many friends on Facebook,but we don't know who stays next door in apartments.

    ReplyDelete
    Replies
    1. ya true dayaji.. Unknowns become known and known get lost in the meanwhile

      Delete
  2. ದಿಡೀರ್ ಸ್ನೇಹಗಳು ನಮಗೆ ಯಾವುದೋ ಹೊಸ ಸ್ಪೂರ್ತಿಯನ್ನು ತುಂಬುತ್ತವೆ. ಅವರ ಬಳಿ ನಾವು ಮನ ಬಿಚ್ಚಿ ಮಾತನಾಡುತ್ತೇವೆ. ಮತ್ತು ಮನಸ್ಸು ಹಗುರ ಮಾಡಿಕೊಳ್ಳುತ್ತೇವೆ. ಇದೊಂಡು ರೀತಿ ಏನು ಬಯಸದ ಗಳಿಗೆ.

    ಒಳ್ಳೆಯ ಬರಹ ಗೆಳೆಯ, ನನ್ನ ಬ್ಲಾಗಿಗೂ ಬನ್ನಿರಿ.

    ReplyDelete
    Replies
    1. ಹೌದು ಬದ್ರಿಗಳೇ.. ಇರುವುದೆಲ್ಲವ ಬಿಟ್ಟು ಇರದುದರ ನೆನೆವುದೆ ಜೀವನ.. ಎಂದು ಅಡಿಗರು ಹೇಳಿದ್ದು ಈ ತರವೂ ಅನ್ವಯಿಸುತ್ತಿದೆಯೇ ? ..

      ಪ್ರತಿಕ್ರಿಯೆಗೆ ಧನ್ಯವಾದಗಳು :-)

      Delete