Wednesday, May 29, 2013

ಲೇಪಾಕ್ಷಿ ನಂದಿಯೆಡೆಗೆ ನಾವು..




ಈ ರವಿವಾರ ಲೇಪಾಕ್ಷಿ ನಂದಿ ನೋಡೋಕೆ ಹೋಗೋಣ ಅಂತ ಪ್ಲಾನ್ ಮಾಡಿದ್ವಿ. ಕ್ಯಾನ್ಸಲ್ ಆಗೋ ಹಂತಕ್ಕೆ ಬಂದ್ರೂ ಕೊನೆಗೂ ಹೊರಟು ನಿಂತ ಗೆಳೆಯರು ಹಿಂದೂಪುರ ತಲುಪಿ, ಅಲ್ಲಿಂದ ಲೇಪಾಕ್ಷಿ ತಲುಪೋ ಹೊತ್ತಿಗೆ ಘಂಟೆ ಹನ್ನೊಂದೂ ಮುಕ್ಕಾಲು..ಎಂಟೂವರೆಗೆ ಹೊರಟ್ರೂ ಅಷ್ಟೊತ್ತಾಗಿದ್ದು ಆಂದ್ರದ ಬಸ್ ಮಹಿಮೆ ಅಂತ ಬೇರೆ ಹೇಳ್ಬೇಕಿಲ್ಲ ಜ್ಯೂಸ್ ಬಾಟಲ್ ನಂತೆ ರಸ್ತೆ ಪಕ್ಕ ಮಾರಾಟಕ್ಕಿಟ್ಟಿದ್ದ ಪೆಟ್ರೋಲ್ ಬಾಟ್ಲಿಗಳನ್ನ ಕಂಡ ನಮಗೆ ವಿಸ್ಮಯದ ನಗರಿ ಲೇಪಾಕ್ಷಿ ಸ್ವಾಗತ ಕೋರ್ತಾ ಇತ್ತು ..


ಲೇಪಾಕ್ಷಿಯ ಬಗ್ಗೆ ಕೆಲವು ವಿಷಯ ಓದಿದ್ದ ನಾವು ಪ್ರತೀ ಮೂಲೆಯನ್ನೂ ಬಿಡದೇ ನೋಡಬೇಕು ಅನ್ನೋ ತರ ನಿಧಾನವಾಗಿ ಒಳಗೆ ನಡೆದ್ವಿ. ಮೊದಲು ಸಿಕ್ಕಿದ್ದು ನಾಟ್ಯ ಮಂಟಪ. ಅಲ್ಲಿ ಕಂಬಗಳು ಎಲ್ಲಾ ದೇವಸ್ಥಾನಗಳಲ್ಲಿ ಇತೋ ತರ ಇರ್ಲಿಲ್ಲ. ಏನೋ ಇದು.. ಕಂಬಗಳ್ನ ಎದ್ವಾ ತದ್ವಾ ತಂದಿಟ್ಟಿದಾರೆ ಅಂದ ಗೆಳೆಯ.. ಸಿಕ್ಕಾಪಟ್ಟೆ ಕಂಬಗಳ್ನ ನೋಡಿ ಮೊದ್ಲು ಹಾಗೇ ಅನ್ಸಿದ್ರೂ ಆಮೇಲೆ ಅದ್ರ ಅರ್ಥ ಗೊತ್ತಾಯ್ತು !
Natya Mantapa

ನಾಟ್ಯ ಮಂಟಪದ ಮೇಲ್ಗಡೆ ಶತದಳ ಪುಷ್ಪ. ಸುತ್ತು ಸುತ್ತುಗಳಾಗಿ ಒಳಗೆ ತೆರೆದುಕೊಳ್ಳೋ ಛಾವಣಿಯ ಹೂವ ರಚನೆಯಲ್ಲಿ ನೂರು ಎಸಳುಗಳಿವೆಯಂತೆ. ಅದರ ರಂಭೆಯ ನೃತ್ಯ ಮತ್ತು ಅದಕ್ಕೆ ವಾದ್ಯಗಳ ಸಾಥ್ ನೀಡುತ್ತಿರೋ ಹನ್ನೊಂದು ದೇವತೆಗಳು. ಪ್ರತೀ ಕಂಬವೂ ಒಬ್ಬೊಬ್ಬ ದೇವನಿಗೆ. ಎಡಮೂಲೆಯಲ್ಲಿ ನರ್ತಿಸುತ್ತಿರುವ ರಂಭೆ, ಪಕ್ಕ ದತ್ತಾತ್ರೇಯ, ಅವನ ಪಕ್ಕ ಸೂರ್ಯ, ನಂತರ ತುಂಬುರ, ಈಶ್ವರ,  ರಂಭೆಯ ಮತ್ತೊಂದು ಪಕ್ಕದಲ್ಲಿ ಚಂದ್ರ, ಹೀಗೆ ದೇವತೆಗಳಿದ್ದಾರೆ ಒಂದೊಂದು ಕಂಬದಲ್ಲೂ. ರಂಭೆಯ ಎದುರಿಗೆ ತೆರೆಗೆ ಮರೆಯಾದಂತೆ ನಿಂತಿರೋದು ಭೃಂಗಿ ಮುನಿ, ಭೃಂಗಿ ಮುನಿಗೆ ಮೂರು ಕಾಲುಗಳು!.
Bhrungi muni--3legged saint

ಆತ ರಂಭೆಯ ಗುರುವಂತೆ. ಗುರು ನರ್ತಿಸೋದನ್ನ ನೋಡಿ ರಂಭೆ ನರ್ತಿಸೋದಂತೆ. ಇಪ್ಪತ್ನಾಲ್ಕು ತಾಲು ನರ್ತಿಸುತ್ತಲೇ ಇರುವ ಭೃಂಗಿ ಮುನಿಗೆ ಒಂದು ಕಾಲು ದಣಿದರೆ ಮತ್ತೊಂದು ಕಾಲು ಎಂದು ನಟರಾಜ ಶಿವನಿಂದ ಮೂರು ಕಾಲುಗಳ ವರವಂತೆ. ಯಾವುದೂ ಸುಮ್ಮನೇ ಅಲ್ಲ ಶಿವ ಅಂದುಕೊಂಡು ಒಳ ನಡೆದೆವು :-)

ಒಳಗೆ ವೀರಭದ್ರೇಶ್ವರ, ಪಾಪನಾಥೇಶ್ವರ, ದುರ್ಗೆ, ವಿಷ್ಣುವಿನ ಗುಡಿಗಳಿವೆ. ಮುಖ್ಯ ದೇವರು ವೀರ ಭದ್ರೇಶ್ವರ. ದೇವರಿಗೆ ಹಾಗೇ ಅಡ್ಡ ಬಿದ್ದೆವು. ಮಂಗಳಾರತಿಯ ನಂತರ ಹಾಗೇ ತಲೆ ಎತ್ತಿ ನೋಡಿದರೆ ಮೇಲಿನ ಚಾವಣಿಯ ತುಂಬೆಲ್ಲಾ ಚಿತ್ರಗಳು! ಏನೋ ಕತೆ ಅನ್ನಿಸಿದರೂ ಚಿತ್ರದ ಪೂರ್ಣ ಕಲ್ಪನೆ ಸಿಗಬೇಕಾದರೆ ದೇಗುಲದ ಮಧ್ಯ ಭಾಗಕ್ಕೆ ಬಂದು ಮತ್ತೆ ತಲೆಯೆತ್ತಿ ನೋಡಬೇಕಾಯಿತು. ಕತ್ತಿ ಹಿಡಿದಿರೋ ಬೃಹತ್ತಾದ ವೀರಭದ್ರ, ಸುತ್ತಲಿರೋ ದೇವಾನು ದೇವತೆಗಳನ್ನು ಚಿತ್ರಿಸಿರೋ ಪರಿ ನೋಡಬೇಕಾದರೆ ಅಲ್ಲಿಗೇ ಹೋಗಬೇಕು. ಹಾಗೆಯೇ ಗರ್ಭಗೃಹದ ಸುತ್ತ ಪ್ರದಕ್ಷಿಣೆ ಹಾಕೋಣ ಅಂತ ಹೋದ  ನಮಗೆ ಮತ್ತೆ ಅಚ್ಚರಿ. ಪ್ರದಕ್ಷಿಣಾ ಪಥದಲ್ಲೂ ಮಧ್ಯೆ ಕಂಬಗಳು!
Pradakshina patha..
Pradakshina pathadallina kambada rachane


ಪ್ರದಕ್ಷಿಣಾ ಪಥದಲ್ಲೂ ಚಾವಣಿಯಲ್ಲಿ ಚಿತ್ರಗಳು. ದೇಗುಲಗಳಲ್ಲಿ ಕೆತ್ತನೆಗಳಿರುವುದನ್ನು ಕೇಳಿದ್ದೆ. ಆದ್ರೆ ಚಿತ್ರಗಳಿರೋದನ್ನು, ಅದೂ ಎಲ್ಲೆಡೆ.. ಇದೇ ಮೊದಲ ಸಲ ನೋಡಿದ್ದೆ.. ಅಜಂತಾ, ಎಲ್ಲೋರಗಳ ಗುಹೆಗಳಲ್ಲಿ ಚಿತ್ರಗಳಿವೆಯೆಂದು ಕೇಳಿದ್ದೆ. ಆದ್ರೆ ವಿಜಯನಗರ ಕಾಲದ ದೇಗುಲವೊಂದರಲ್ಲಿ ಚಿತ್ರಗಳಿರೋದನ್ನ ನೋಡಿದ್ದು ಇದೇ ಮೊದಲು.



ಪ್ರದಕ್ಷಿಣಾ ಪಥದಲ್ಲಿ ಸಾಗಿದಾಗ ಮತ್ತೊಂದು ಓಣಿ ಸಿಕ್ಕಿತು. ಅದರಲ್ಲಿ ಸಾಗಿದರೆ ಗುಹೆಯಂತ ಕೋಣೆಯೊಂದರಲ್ಲಿ ಕೊನೆಯಾಗುತ್ತದೆ. ಆ ಕೋಣೆಯಲ್ಲೂ ಕೆತ್ತನೆಗಳು.. ಬಂಡೆಯೊಂದರ ಕೆಳಗೆ ದೇಗುಲ ಕಟ್ಟಿದ ಪರಿ ಆ ಕೋಣೆಯಲ್ಲಿ ಚೆನ್ನಾಗಿ ಅರಿವಾಗುತ್ತದೆ. ಒಂದು ಮೂಲೆಯಲ್ಲಿ ಚಾಚಿರುವ ಬಂಡೆ, ಇನ್ನೊಂದು ಕಡೆ ಕಟ್ಟಿರೋ ಇಟ್ಟಿಗೆಗಳು, ಮತ್ತೆ ಛಾವಣಿಯಲ್ಲಿ ಯಥಾಪ್ರಕಾರ ಚಿತ್ತಾರ.. ಮೂಲೆ ಮೂಲೆಯನ್ನೂ ಬಿಡದೆ ಕಲೆಯನ್ನು ಸಾರಿದ ಅಂದಿನವರ ಕಲಾ ಪ್ರೇಮ ನೋಡಿ ಖುಷಿಯಾಗುತ್ತದೆ.

ಇಲ್ಲಿಯ ದುರ್ಗೆಯಲ್ಲಿಯೂ ವಿಶೇಷವಿದೆ.  ನಾವು ಯಾವುದೇ ದೇಗುಲಕ್ಕೆ ಹೋದರೂ ಮೊದಲು ದೇವರ ಮುಖವನ್ನು ನೊಡುತ್ತೀವಲ್ಲವೇ ? ಇಲ್ಲಿ ಹಾಗಲ್ಲ. ನಾವು ವೀರಭದ್ರನ ಗುಡಿಗೆ ಕಾಲಿಡುತ್ತಿರುವಾಗ ಬಲಭಾಗದಲ್ಲಿ ನಮ್ಮ ದಿಕ್ಕಿಗೆ ಅಡ್ಡವಾಗಿ ದುರ್ಗಿಯಿದ್ದಾಳೆ. ದುರ್ಗಿಯ ಎದುರಿಗಿರೋ ಕನ್ನಡಿಯಿಂದ ದುರ್ಗಿಗೆ ಮೊದಲು ನಮಸ್ಕರಿಸಬೇಕು ! ಆಮೇಲೆ ಆ ಕಡೆ ಹೋದಾಗ ಅಭಿಮುಖವಾಗಿರೋ ದುರ್ಗಿಯ ದರ್ಶನ ಪಡೆಯಬಹುದು. ಇದರ ಬಗ್ಗೆಯೂ ಒಂದು ಕಥೆಯಿದೆ. ಸಾಮಾನ್ಯವಾಗಿ ದುರ್ಗಿಯನ್ನು ವಾಯುವ್ಯಕ್ಕೆ ಪ್ರತಿಷ್ಟಾಪಿಸುತ್ತಾರಂತೆ. ಆದರೆ ಈ ದೇಗುಲ ಕಟ್ಟಿಸುವಾಗ ಶಿಲ್ಪಿಯೊಬ್ಬನ ಮೇಲೆ ಆವಾಹಿತಳಾದ ದುರ್ಗಿ ನಾನು ಈ ಕಂಬದಲ್ಲೇ ನೆಲೆಸುತ್ತೇನೆ. ನನ್ನನ್ನು ಇಲ್ಲೇ ಪೂಜಿಸಿ ಎಂದು ಕೂತಳಂತೆ. ಅಂದಿನಿಂದ ಆ ಕಂಬಕ್ಕೆ ಮುಖವಾಡವನ್ನು ನಿರ್ಮಿಸಿ ದುರ್ಗಾಮಾತೆಯನ್ನು ಪೂಜಿಸಲಾಗುತ್ತಿದೆಯಂತೆ.

ದೇವರ ದರ್ಶನ ಪಡೆದು, ಮೇಲ್ಛಾವಣಿಯಲ್ಲಿದ್ದ ರಾಮಾಯಣ, ಮಹಾಭಾರತದ ಚಿತ್ರಗಳನ್ನು ನೋಡಿ ಮತ್ತೆ ನಾಟ್ಯ ಮಂಟಪಕ್ಕೆ ಬಂದೆವು. ಆಗ ಅಲ್ಲೂ ತಲೆಯೆತ್ತಿ ನೋಡಿದಾಗ ಛಾವಣಿಯಲ್ಲಿದ್ದ ಚಿತ್ರಗಳು ಕಂಡವು.

ಶತದಳ ಪುಷ್ಪವನ್ನಷ್ಟೇ ನೋಡಿದ್ದ ನಾವು ಅದರ ಪಕ್ಕದ ಸಾಲಿನಲ್ಲಿದ್ದ ಕಂಬಗಳನ್ನು, ಅದರ ಮೇಲ್ಗಣ ಛಾವಣಿಯ ಚಿತ್ರಗಳನ್ನು ಗಮನಿಸಿರಲಿಲ್ಲ !  ಭೃಂಗಿಯ ಪಕ್ಕದಲ್ಲಿರೋ ಶಿವ ನೊಡಿದ್ದ ನಾವು ಅದರ ಮತ್ತೊಂದು ಮೂಲೆಯಲ್ಲಿದ್ದ ಅನ್ನಪೂರ್ಣೇಶ್ವರಿಯನ್ನು ಗಮನಿಸಿರಲಿಲ್ಲ ! ಕಂಬದ ಮೂಲೆ ಮೂಲೆಯನ್ನೂ ಬಿಡದೇ ಕೆತ್ತಿರೋ , ಛಾವಣಿಯ ಮೂಲೆಯನ್ನೂ ಬಿಡದೇ ಚಿತ್ರಿಸಿರೋ ಆ ಶಿಲ್ಪಿಗಳ ಸೃಜನಶೀಲತೆಗೊಂದು ಸಲಾಂ. 


ದಕ್ಷಯಜ್ನದಲ್ಲಿ ಪ್ರಾಣ ತ್ಯಜಿಸಿದ ಗೌರಿ ದೇವಿ ಪಾರ್ವತಿಯಾಗಿ ಜನಿಸುತ್ತಾಳೆ. ಪಾರ್ವತಿ ಅರ್ಥಾತ್ ಮಾತೆ ಅನ್ನಪೂರ್ಣೆಯನ್ನು ಪರೀಕ್ಷಿಸುವ ಸಲುವಾಗಿ  ಭಿಕ್ಷುಕನ ವೇಷದಲ್ಲಿ ಶಿವ ಬರುತ್ತಾನೆ. ಬಡಿಸುತ್ತಿರುವಾಗ ಆಕೆಯನ್ನು ಪರೀಕ್ಷಿಸಲೋಸುಗ ಸೀರೆಯ ಸೆರಗು ಜಾರುವಂತೆ ಮಾಡುತ್ತಾನೆ. ಬಡಿಸುವುದರಲ್ಲಿ ತಲ್ಲೀನಳಾದ ಪಾರ್ವತಿಗೆ ಇದ್ಯಾವುದರ ಪರಿವೆಯೇ ಇರುವುದಿಲ್ಲ. ಪ್ರಸನ್ನನಾದ ಶಿವ ತನ್ನ ನಿಜರೂಪ ತೋರುತ್ತಾನಂತೆ.. ಇವೆಲ್ಲಾ ದೃಶ್ಯಾವಳಿಯನ್ನು ಅದೊಂದೇ ಕಂಬದಲ್ಲಿ ಕೆತ್ತಿದ್ದಾರೆ.  ಇಂತದ್ದದೆಷ್ಟೋ ಕತೆಗಳು ಲೇಪಾಕ್ಷಿಯ ಕಂಬಗಳಲ್ಲಿ ಅಡಗಿ ಕೂತಿದೆಯೋ ಗೊತ್ತಿಲ್ಲ ! ನೀಟಾಗಿ ನೋಡದಿದ್ದರೆ ಒಂದೂ ದಕ್ಕೋದು ಡೌಟ್ ! :-)

ನಾಟ್ಯಮಂಟಪವನ್ನೊಳಗೊಂಡ ಕಂಬಗಳ ಆ ಮಂಟಪದ ವಿಶೇಷತೆ ಕಂಬಗಳೇ ! :-) ಎಪ್ಪತ್ತು ಕಂಬಗಳಿರೋ ಆ ಮಂಟಪದಲ್ಲಿ ನೆಲದ ಮೇಲಿರೋದು ಅರವತ್ತೊಂಬತ್ತೇ ಕಂಬ. ಇನ್ನೊಂದು ಕಂಬ ತೇಲುಗಂಬ(hanging piller) !. ನೆಲಕ್ಕೆ ಒಂಚೂರೂ ತಾಗದೇ ನಿಂತಿರೋ ಆ ಕಂಬ ಕೆಳಗಿರೋ ಜಾಗ ಬಗ್ಗಿ ನೋಡಿದರೆ ಕಾಣುತ್ತದೆ. ಅದರ ಕೆಳಗೆ ಟವೆಲ್ ಹಾಕಿ, ತೆಗೆದು  ನೋಡೂ ಆಯಿತು !
Hanging piller at Lepakshi

ಒಂದು ಬೇಸರದ ಸಂಗತಿ ಅಂದರೆ ಆ ಕಂಬವನ್ನೂ ಕಿಡಿಗೇಡಿಗಳು ಬಿಟ್ಟಿಲ್ಲ. ಒಂದು ಮೂಲೆಯಲ್ಲಿ ವಾಲಿ ಹೋಗಿರೋ ಆ ಕಂಬಕ್ಕೆ ಒಂದು ಕಡೆ ಪೇಪರ್ ತುರುಕಿ ಬಿಟ್ಟಿದ್ದಾರೆ :-( ನೆಲದ ಮೇಲೆ ಒಂದು ಸೂಜಿಯಷ್ಟೂ ತಾಗದೇ ನಿಂತ ಕಂಬವೆಂಬ ವಿಸ್ಮಯಕ್ಕೆ ಸಾಕ್ಷಿಯಾಗಬಹುದಾದ ಕಂಬದ ಹಿರಿಮೆಯನ್ನು ಹಾಳು ಮಾಡಿಟ್ಟಿದ್ದಾರೆ. ಕಂಬ ವಾಲಿದ್ದಕ್ಕೆ ಕಾರಣರಾದ ಬ್ರಿಟಿಷರ ಕುಕೃತ್ಯದ ಬಗ್ಗೆ ಕೇಳಿಯೂ ಸಿಕ್ಕಾಪಟ್ಟೆ ಸಿಟ್ಟು, ಬೇಜಾರುಗಳಾಯ್ತು :-( ವಿಜಯನಗರದ ಕಾಲದ ಈ ತೇಲುಗಂಬದ ವೈಶಿಷ್ಟ್ಯತೆ ಕೇಳಿದ ಬ್ರಿಟಿಷರು ೧೯೦೨ ರಲ್ಲಿ ಇಲ್ಲಿಗೆ ಬಂದರಂತೆ. ಕಂಬ ನೋಡಿ ಪರಮ ಆಶ್ಚರ್ಯಕ್ಕೊಳಗಾದ ಬ್ರಿಟಿಷ್ ಶಿಲ್ಪಿಗಳಿಗೆ ಮನದ ಮೂಲೆಯಲ್ಲೊಂದು ಸಂಶಯ! ತಮ್ಮನ್ನು ಬಿಟ್ಟರೆ ಬೇರಾರೂ ಇಲ್ಲ, ಪ್ರಪಂಚದಲ್ಲಿ ತಮಗೆ ತಿಳಿದದ್ದು ಮಾತ್ರ ವಿದ್ಯೆಯೆಂಬ ಭ್ರಮೆ ಬೇರೆ ಇತ್ತಲ್ಲಾ..! ಕಬ್ಬಿಣದ ರಾಡುಗಳಿಂದ ಆ ಕಂಬವನ್ನು ಒಂದು ಮೂಲೆಗೆ ತಳ್ಳಿದರಂತೆ. ಆ ಕಂಬ ಸರಿಸುತ್ತಿದ್ದಂತೆಯೇ ದೇಗುಲದ ಎಲ್ಲಾ ಕಂಬಗಳೂ ಜರುಗಲಾರಂಭಿಸಿದವಂತೆ ! ಆಗ ಇದೇ ದೇಗುಲದ ಮೂಲಗಂಭ. ಇದಕ್ಕೇನಾದರೂ ಆದರೆ ದೇಗುಲ ಉರುಳುತ್ತದೆ ಎಂದರಿತು ತಮ್ಮ ಮೂರ್ಖಪ್ರಯತ್ನವನ್ನು ಅಲ್ಲಿಗೇ ನಿಲ್ಲಿಸಿದರಂತೆ. ನಮ್ಮ ದೇಶವೇ ಗ್ರೇಟ್ ಅನ್ನೋ ಯಾವ ಅಭಿಮಾನಮಾನದಿಂದಲೂ ಈ ಕಪೋಲಕಲ್ಪಿತ ಕತೆಯನ್ನು ಹೇಳುತ್ತಿಲ್ಲ. ಲೇಪಾಕ್ಷಿಗೆ ತೆರಳಿ ಅಲ್ಲಿನ ತೇಲುಗಂಬವನ್ನೂ , ಅದರ ಪಕ್ಕದಲ್ಲಿರುವ ಕಂಬಗಳ ಮೇಲ್ಬದಿಯ ಜೋಡಣೆ(joint) ಅನ್ನೂ ನೋಡಿದರೆ ತಮಗೇ ಅರಿವಾಗುತ್ತದೆ. ಆ ಕಂಬಗಳು ತಮ್ಮ ಸ್ಥಾನದಿಂದ ಹೊರಳಿರೋದ್ದು ಸ್ಪಷ್ಟವಾಗಿ ಅರಿವಾಗುತ್ತದೆ :-( ಇನ್ನೂ ಈ ಮಾತುಗಳಲ್ಲಿ ನಂಬಿಕೆಯಿರದವರು ಇತಿಹಾಸದ ಪುಟಗಳನ್ನು ತಡಕಬಹುದು . ಸ್ಥಳೀಯರಲ್ಲಿ ಮನೆಮಾತಾಗಿರೋ ಈ ವಿಷಯ ಬ್ರಿಟಿಷ್ ಬಾಲಂಗೋಚಿ ಇತಿಹಾಸಜ್ನರ ಸುಳ್ಳುಗಳಲ್ಲೇ ತುಂಬಿ ಹೋಗಿರೋ ಪುಸ್ತಕಗಳಲ್ಲಿ ದಾಖಲಾಗಿರೋದು ಅನುಮಾನವೇ :-(

70 kambagal naduve :-)


ತೇಲುಗಂಬದ ಮೇಲಿರೋ ಛಾವಣಿಯಲ್ಲಿರೋ ದೇವಿ ಪಾರ್ವತಿ , ಮತ್ತವಳ ಅಲಂಕಾರಕ್ಕೆ ಬಂದಿರೋ ಆರು ಸಖಿಯರು, ವಿರೂಪಣ್ಣ ಮತ್ತವನ ಶಿಲ್ಪಿಗಳು..ಮುಂತಾದ ಚಿತ್ರಗಳು ಚೆನ್ನಾಗಿವೆ. ಮತ್ತೊಂದು ಮೂಲೆಯಲ್ಲಿನ( ಭ್ರೃಂಗಿ ಮುನಿಯ ಪಕ್ಕದ ಮೇಲ್ಛಾವಣಿ) ಚಿತ್ರಗಳೂ ಚೆನ್ನಾಗಿವೆ. ಅಲ್ಲೇ ಕೆಳಗೆ ಹಳಗನ್ನಡದ ಲಿಪಿಗಳು ಮತ್ತವುಗಳ ಸಂರಕ್ಷಣೆಗಾಗಿ ಮಾಡಿರೋ ಕಬ್ಬಿಣದ ಕಂಬಗಳು ಇತಿಹಾಸವನ್ನು ಉಳಿಸಲೋಸುಗ ನಮ್ಮ ಜನರಲ್ಲಿ ಈಗಲಾದರೂ ಮೂಡಿರೋ ಪ್ರಜ್ನೆಯ ಬಗ್ಗೆ ಸಮಾಧಾನ ಮೂಡಿಸಿತು..

Nagalingeshwara

ತೇಲುಗಂಬದ ಪಕ್ಕ ಕೆಳಗಿಳಿದು  ಅಲ್ಲಿಂದ ಹಾಗೇ ಮುಂದೆ ಬಂದಾಗ ದೇಗುಲದ ಪಕ್ಕಾ ಹಿಂಭಾಗದಲ್ಲಿ ನಾಗಲಿಂಗೇಶ್ವರವನ್ನು ನೋಡಬಹುದು. ಶಿವಲಿಂಗದ ಮೇಲೆ ಹೆಡೆಯೆತ್ತಿರೋ ನಾಗನ ಬೃಹತ್ತಾದ ಕೆತ್ತನೆ ಮನೋಹರವಾಗಿದೆ. ತಮ್ಮ ತಾಯಿ ಊಟ ತರುವುದರೊಳಗೆ ಈ ನಾಗಲಿಂಗೇಶ್ವರನನ್ನು ಇಲ್ಲಿನ ಶಿಲ್ಪಿಗಳು ಏಕಶಿಲೆಯೊಳಗೆ ಕೆತ್ತಿ ಮುಗಿಸಿದರು ಎಂದೊಂದು ದಂತಕತೆಯಿದೆ.
 
Eka Kavata Ganapati




ಅದರ ಪಕ್ಕದಲ್ಲೇ ಏಕಕವಾಟ ಗಣಪತಿ. ಪಕ್ಕದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಆನೆ, ನಂದಿಯನ್ನು ನೋಡಬಹುದು. ಅದರ ಮತ್ತೊಂದು ಬದಿಗೆ ಚಂದ್ರಶಾಲೆ. ಆಗ ದೇಗುಲಕ್ಕೆ ಬಂದ ಪರಿವಾರಗಳು ಉಳಿದುಕೊಳ್ಳಲೆಂದೇ ಕಟ್ಟಿದ್ದೆನ್ನಲಾದ ಆ ಸಾಲು ಪಡಸಾಲೆಯ ಕಂಬಗಳಲ್ಲೂ ಅನೇಕ ಕೆತ್ತನೆಗಳನ್ನು ನೋಡಬಹುದು.

Open Air Kalyana mantapa



ಏಕಕವಾಟ ಗಣಪತಿಯ ಎಡಭಾಗದಲ್ಲಿರೋದು ತೆರೆದ ಕಲ್ಯಾಣಮಂಟಪ. ಎಲ್ಲೋ ಇರಬೇಕಾದ ಕಂಬಗಳನ್ನು ತಂದು ಇಲ್ಲಿ ಜೋಡಿಸಿದಂತೆ ಮೊದಲಿಗೆ ಅನ್ನಿಸಿದರೂ ಆ ಕಂಬಗಳ ಮೂಲೆ ಮೂಲೆಗಳಲ್ಲಿರೋ ಕೆತ್ತನೆಗಳು ಅಚ್ಚರಿ ಮೂಡಿಸುತ್ತವೆ. ಈ ಕಲ್ಯಾಣಮಂಟಪಕ್ಕೆ ಸೂರಿಲ್ಲದೇ ಅರ್ಧಕ್ಕೇ ನಿಂತುಹೋಗಿದ್ದಕ್ಕೂ ಒಂದು ಐತಿಹಾಸಿಕ ಹಿನ್ನೆಯೆಯಿದೆ. ವಿಜಯನಗರದ ಅರಸ ಅಚ್ಯುತರಾಯ. ಅವನ ಖಜಾಂಚಿ ವಿರೂಪಣ್ಣ. ಆತ ದೇವ ಪ್ರೇರಣೆಯಿಂದ ಕೂರ್ಮ ಪರ್ವತವೆಂಬ ಈ ಬೆಟ್ಟದ ಮೇಲೆ ದೇಗುಲ ನಿರ್ಮಾಣ ಪ್ರಾರಂಭಿಸುತ್ತೇನೆ. ಅಚ್ಯುತರಾಯನಿಗೆ ಗಂಡು ಮಕ್ಕಳಿಲ್ಲದ ಕಾರಣ ಆತನ ನಂತರ ಆತನ ಅಳಿಯ ರಾಮರಾಯ ಅಧಿಕಾರಕ್ಕೆ ಬರುತ್ತಾನೆ. ವಿರೂಪಣ್ಣನನ್ನು ಕಂಡರಾಗದ ಜನರು ವಿರೂಪಣ್ಣ ಖಜಾನೆಯಲ್ಲಿರೋ ದುಡ್ಡಿನಿಂದ ಯಾವುದೋ ಬೆಟ್ಟದ ಮೇಲೆ ದೇಗುಲ ನಿರ್ಮಿಸುತ್ತಿದ್ದಾನೆ, ಖಜಾನೆಯನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾನೆ ಎಂದು ಕಿವಿಯೂದುತ್ತಾರೆ. ಮೊದಲೇ ಹಿತ್ತಾಳೆ ಕಿವಿಯಾದ ರಾಜ ವಿರೂಪಣ್ಣನನ್ನು ಕರೆಸಿ ಆತನ ಎರಡೂ ಕಣ್ಣುಗಳನ್ನು ಕೀಳಲು ಆದೇಶಿಸುತ್ತಾನೆ. ರಾಜಸಭೆಗೆ ಹೋಗಿ ಕಣ್ಣು ಕೀಳಿಸಿಕೊಂಡು ಅಪಹಾಸ್ಯಕ್ಕೆ ಗುರಿಯಾಗುವುದಕ್ಕಿಂತ ತನ್ನ ಕಣ್ಣುಗಳನ್ನು ತಾನು ಕಟ್ಟಿಸಿದ ದೇಗುಲದಲ್ಲೇ ಕಳೆದುಕೊಳ್ಳುವುದು ಮೇಲೆಂದು ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಂಡ ವಿರೂಪಣ್ಣ ಕಲ್ಯಾಣ ಮಂಟಪದ ಪಕ್ಕದಲ್ಲಿರೋ ಗೋಡೆಗೆ ಎಸೆಯುತ್ತಾನೆ. ಅಲ್ಲಿರೋ ಎರಡು ಕಣ್ಣಿನ ಗುರುತುಗಳು, ಅದರಿಂದ ಒಸರಿದ ರಕ್ತ ವಿರೂಪಣ್ಣನ ಕಣ್ಣುಗಳೇ ಎಂಬುದು ಇಲ್ಲಿನ ದಂತಕತೆ.. ಐನೂರು ವರ್ಷಗಳಾಗಿ ಗಾಳಿ ಮಳೆಗೆ ಸಿಕ್ಕರೂ ಈ ಕಲೆಗಳು ಅಳಿಸದಿರುವುದು ಅಂದಿನ ನೋವಿನ ಕತೆಯನ್ನು ಇಲ್ಲಿ ಬಂದವರಿಗೆಲ್ಲಾ ಹೇಳುತ್ತಿರುವಂತಿದೆ.

Eyes of Virupanna


ಅಲ್ಲಿನ ಕುಂಕುಮ ಇಡುತ್ತಿರೋ ಸುಂದರಿ ಆಗ ಕುಂಕುಮ ಇಟುಕೊಳ್ಳುತ್ತಿದ್ದ ಭಿನ್ನ ಪರಿಯನ್ನು ಪರಿಚಯಿಸುತ್ತಾಳೆ. ಇಲ್ಲಿನ ಪರಶಿವ, ಇತ್ಯಾದಿ ಕೆತ್ತನೆಗಳು ನೋಡಲೋಗ್ಯವಾಗಿದೆ. ಹಾಗೇ ಕೆಳಗಿಳಿಯುತ್ತಿದ್ದಂತೆ ಕಂಡಿದ್ದು ಆಂಜನೇಯ ಮತ್ತವನಿಗೆ ಕಟ್ಟಿದ ಬೃಹದಾಕಾರದ ಮಂಟಪ. ಪಕ್ಕದಲ್ಲೇ ಗಮನಿಸದಿದ್ದರೆ ಮಿಸ್ಸಾಗೋ ದುರ್ಗಾಪಾದ ಮತ್ತು ಬಟ್ಟಲಿನಂತಹ ರಚನೆಗಳು. ಸ್ವಲ್ಪ ಮುಂದೆ ಬಂದರೆ ಮತ್ತದೇ ಬಟ್ಟಲಿನಂತಹ ರಚನೆಗಳು ಕಂಡವು. ಆದರೆ ಮೇಲೆ ಮೀನಿನ ಕೆತ್ತನೆ ಕಂಡಿತು . ಆಂಜನೇಯನ ಪಕ್ಕ ಇರೋ ಬಟ್ಟಲು ವೆಜ್ ಮೀಲ್ಸ್ ಮತ್ತು ಇದು ಫಿಶ್ ಮೀಲ್ಸ್ ಅಂದ ಗೆಳೆಯ :-)
Durga Paada

ಆ ಸುಡು ಬಿಸಿಲಲ್ಲೂ, ದೇವಸ್ಥಾನದ ಪರಿಸರದಲ್ಲೂ ಆತನ ಹಾಸ್ಯ ಪ್ರಜ್ನೆ ಎಲ್ಲರಲ್ಲೂ ನಗು ಮೂಡಿಸಿತು. ಆ ನಗುವಿನೊಂದಿಗೇ ನಮ್ಮ ಲೇಪಾಕ್ಷಿ ವೀರಭದ್ರೇಶ್ವರ ದೇಗುಲ  ಪ್ರದಕ್ಷಿಣೆ ಮುಗಿಯಿತು.
Madhavana full meals


ಕೂರ್ಮಪರ್ವತವಿಳಿದ ನಾವು ನಂತರ ಅಲ್ಲೇ ಹತ್ತು ನಿಮಿಷ ದೂರವಿರೋ ನಂದಿಯ ದರ್ಶನ ಪಡೆದೆವು. ಭಾರತದ ದೊಡ್ಡ ನಂದಿ, ಚಾಮುಂಡಿ ಬೆಟ್ಟದ ನಂದಿಗಿಂತ ದೊಡ್ಡ ನಂದಿಯೆಂದು ಖ್ಯಾತಿ ಪಡೆದ ನಂದಿಯನ್ನು ಕಂಡೆವು.  ಹದಿನೈದು ಅಡಿಯಿರುವ ಈ ನಂದಿಯನ್ನು ನೋಡಿದಾಗ ಹಾಗೇನೂ ಅನ್ನಿಸಲಿಲ್ಲ.


ಮಧ್ಯಾಹ್ನದ ಆಂಧ್ರದ ಸುಡುಬಿಸಿಲಿನ ಪ್ರಭಾವವೂ ಇದ್ದಿರಬಹುದು.. ಅಂತೂ ಲೇಪಾಕ್ಷಿಯ ಸುಂದರ ನೆನಪುಗಳಿಗಾಗಿ ವಂದಿಸಿ ಸ್ವಸ್ಥಾನಕ್ಕೆ ಮರಳಲು ಹಿಂದೂಪುರದೆಡೆಗೆ ಹೊರಟೆವು..ದೇಗುಲದ ಬಗ್ಗೆ ನಾವಂದು ಕೇಳಿದ ಕತೆಗಳಿಗಿಂತ, ನೊಡಿದ್ದಕ್ಕಿಂತ ನೋಡದ, ಕೇಳದ ಸಂಗತಿಗಳು ಎಷ್ಟೋ ಇರಬಹುದು.. ಬಿಡುವಾದಾಗೊಮ್ಮೆ ಹೋಗಿ ಬನ್ನಿ.. ಹೋದವರಿದ್ದರೆ, ನಾನು ಬರೆಯೋದರಲ್ಲಿ ಬಿಟ್ಟ ಅಂಶಗಳೇನಾದ್ರೂ ಇದ್ದರೆ ಸೇರಿಸಿ.. ಅಂದ ಹಾಗೆ ಇಲ್ಲಿ ಸುಮಾರು ಮಂಗಗಳಿವೆ. ಮೂರ್ತಿಗಳನ್ನು ಹಾಳು ಮಾಡಿದ, ಕಂಬ ವಾಲಿಸಿದ ಮಂಗಗಳಲ್ಲ.. ಬಾಳೆ ಹಣ್ಣು , ಕಾಯಿಗಳನ್ನಷ್ಟೇ ಎದುರು ನೋಡೋ ಬಾಲವಿರೋ ವಾನರರು. ಹಾಗಾಗಿ ಸೌಂದರ್ಯ ವೀಕ್ಷಣೆಯಲ್ಲಿ ನಿಮ್ಮ ಬ್ಯಾಗುಗಳನ್ನೆಲ್ಲೋ ಇಟ್ಟು ಮರೆಯಬೇಡಿ :-)
Natya mantapadalli Subramanya hegde avru :-)

12 comments:

  1. ನೀವು ನೋಡಿದ್ದಲ್ದೇ ನಮಗೂ ಲೇಪಾಕ್ಷಿ ನಂದಿಯನ್ನ ತೋರಿಸಿದ್ರಿ :)
    ಚೆನ್ನಾಗಿದೆ ...
    ಒಂದೊಂದು ಕಲ್ಲೂ ಒಂದೊಂದು ಕಥೆಯ ರುವಾರಿ ಅನ್ಸುತ್ತೆ ಈ ಫೋಟೋಸ್ ನೋಡಿದ್ರೆ ...
    ಪ್ರದಕ್ಷಿಣ ಪಥ ತುಂಬಾ ಇಷ್ಟವಾಯ್ತು ....
    ಅಂತೂ ವೀಕ್ ಎಂಡ್ ನಾ ಸಾರ್ಥಕ ಮಾಡ್ಕೊಂಡ್ರಿ ಅಲ್ವಾ

    ReplyDelete
    Replies
    1. ಧನ್ಯವಾದಗಳು ಭಾಗ್ಯ :-) ಹಾಂ, ಸುಮ್ಮನೇ ಕಳೆದುಹೋಗ್ಬೋದಿದ್ದ ಒಂದು ವೀಕೆಂಡ್ ಸಾರ್ಥಕ ಆತು :-)

      Delete
  2. Nice 1...ಲೇಪಾಕ್ಷಿಯಲ್ಲಿ ಹೇಳಿದರೂ ಮುಗಿಯದಷ್ಟು ಕಥೆಗಳಿವೆ. ಇನ್ನಷ್ಟು ಮತ್ತಷ್ಟು....ನನ್ನ ಫೇವರೇಟ್ ಜಾಗಗಳಲ್ಲೋ0ದು

    ReplyDelete
    Replies
    1. ಹಾಂ ಹೌದು ಅನುಸ್ತು ಭಟ್ರೆ :-) ನೀವು ಸಿಕ್ಕಿದ್ರೆ ಇನ್ನೊಂದಿಷ್ಟು ಕಥೆಗಳು ಸಿಕ್ತಿತ್ತೇನೋ ಅವತ್ತು.. ನಿಮ್ಮದು ಅದೇ ಊರು ಅಂತ ಗೊತ್ತಿಲ್ದೇ ಜಸ್ಟ್ ಮಿಸ್ಸು :-(

      Delete
  3. 18 ವರ್ಷಗಳ ಹಿಂದೆ ಹೋಗಿದ್ದೆ ಲೇಪಾಕ್ಷಿಗೆ. ಮತ್ತೆ ಹೋಗಬೇಕು. ಚೆನ್ನಾಗಿ ಬರೆದಿದ್ದೀಯ. ಥ್ಯಾಂಕ್ಯೂ..

    ReplyDelete
    Replies
    1. ಓಹ್.. ಹದಿನೆಂಟು ವರ್ಷ !! ನಾನು ಅಪ್ಪ, ಅಮ್ಮನ ಕೈ ಹಿಡಿದೆ ಹೊರಗೆ ಕಾಲಿಡ್ತನೂ ಇರ್ಲಿಲ್ಲ ಅನ್ಸತ್ತೆ ಅವಾಗ !! ನಿಮ್ಮ ಕಾಮೆಂಟ್ ನೋಡಿ ಖುಷಿ ಆಯ್ತು :-)
      ಥ್ಯಾಂಕ್ಯೂ..

      Delete
  4. ಹುರ್ರೇ, ನಮ್ಮ ಕಡೇ ಹೋಗಿ ಬಂದದ್ದಕ್ಕೆ ಖುಷಿಯಾಯ್ತು.

    ಲೇಪಾಕ್ಷಿಯಿಂದ 3 ಕಿಮಿ ನಗರಗೆರೆ ನಮ್ಮ ತಾಯಿಯ ಹುಟ್ಟೂರು, ಅಲ್ಲಿಂದ 4 ಕಿಮಿ ನನ್ನ ಹಳ್ಳಿ ವಾಟದಹೊಸಹಳ್ಳಿ.

    ಈ ಸಚಿತ್ರ ಲೇಖನ ನನಗೆ ಸಂಗ್ರಹ ಯೋಗ್ಯ. ಹಲವಾರು ಬಾರಿ ಅಲ್ಲಿಗೆ ಭೇಟಿ ನೀಡಿದ್ದರೂ ಇಷ್ಟು ಸವಿವಾರವಾಗಿ ಗಮನಿಸಲು ಆಗಿರಲಿಲ್ಲ, ಧನ್ಯವಾದಗಳು.

    ReplyDelete
    Replies
    1. ಅದು ನಿಮ್ಮೂರು ಅಂತನೂ ಗೊತ್ತಿರಲಿಲ್ಲ ಬದ್ರಿಗಳೇ.. ನಾವು ಆ ಕಡೆ ಹೋಗೋ ವಿಚಾರ ನಿಮ್ಗೂ ಗೊತ್ತಿರಲಿಕ್ಕಿಲ್ಲ ಬಿಡಿ :-)
      ಅಂತೂ ಹೋಗಿ ಬಂದ ಮೇಲೆ ನಿಮ್ಮೀ ಕಮೆಂಟು ನೋಡಿ ಖುಷಿಯಾಗ್ತಿದೆ :-)

      Delete
  5. ಒಂದು ಪ್ರವಾಸಿ ಕಥನ ಹೀಗೆ ಇರಬೇಕು ಎನ್ನುವ ವ್ಯಾಕರಣವನ್ನು ತಿಳಿಸುವ ಬರವಣಿಗೆ ಇಷ್ಟವಾಯಿತು. ಪ್ರತಿಯೊಂದು ವಿಷಯವನ್ನು ವಿವರಿಸುವ ಪರಿ ಸೊಗಸಾಗಿದೆ. ಎಲ್ಲವನ್ನು ಹೇಳಬೇಕು ಎನ್ನುವ ನಿಮ್ಮ ಆಸಕ್ತಿ ಇಷ್ಟವಾಗುತ್ತದೆ. ಸುಂದರ ಬರವಣಿಗೆ.

    ReplyDelete
    Replies
    1. ತುಂಬಾ ಧನ್ಯವಾದಗಳು ಶ್ರೀಕಾಂತ್ ಜೀ :-) ವ್ಯಾಕರಣವನ್ನು ತಿಳಿಸುವ ಬರವಣಿಗೆ.. ಅನ್ನೋದು ಸ್ವಲ್ಪ ದೊಡ್ಡ ಮಾತೇ ಆಯಿತೇನೋ ಅನಿಸಿತು.. ಆ ರೀತಿಯಲ್ಲಿ ಬರೆಯುವಂತಾಗಲಿ ಎಂದು ತಮ್ಮ ಆಶೀರ್ವಾದ ಎಂದು ಭಾವಿಸುತ್ತೇನೆ. ಧನ್ಯವಾದಗಳು :-)

      Delete
  6. Out of 7 big Nandi's in India as identified By Archeological dept. of India,this is the first one... and remaining 4 are in Karnataka and 2 are in TN.
    And a good article it is. I appreciate your step by step explanation along with the pictures.

    ReplyDelete
    Replies
    1. Thanks a lot Girish for the information :-) Thank you also for the likes :-)

      Delete