ಕಾಲೇಜ್ ಗ್ರೌಂಡಲ್ಲಿ ಎಂದಿನಂತೆ ಇಳಾ ಮಂಗಳೂರು ಮಂಜ ಮತ್ತು ಸರಿತಾ ಮಾತಾಡ್ತಾ ಕೂತಿದ್ದಾಗ ಏನ್ ಚಿಲ್ರೆ ಸಮಸ್ಯೆ ಗುರೂ, ಥೂ ಅಂತ ಗುಂಡಣ್ಣ ಮತ್ತು ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ ಎಂಟ್ರಿ ಕೊಟ್ರು.. ತಿಪ್ಪ ಅವ್ರು ಬೆಳಬೆಳಗ್ಗೆ ಯಾರ್ಗೋ ಬಯ್ತಾ ಇರೋ ಹಾಗೆ ಉಂಟಲ್ಲಾ ಮಾರ್ರೆ ಅಂದ ಮಂಜ. ಹೂಂ ಕಣೋ ಮಂಜ. ಈ ಬಸ್ಸೋರು ಒಂದ್ರೂಪಾಯಿ, ಎರಡ್ರೂಪಾಯಿ ಚಿಲ್ರೆ ಇದ್ರೆ ಕೊಡಂಗೇ ಇಲ್ಲ. ಟಿಕೇಟ್ ಹಿಂದ್ಗಡೆ ಬರ್ದೇನೋ ಕೊಡ್ತಾರೆ. ಆದ್ರೆ ಇಳಿಯೋ ಹೊತ್ಗೆ ರಷ್ಷಾಗಿದ್ದಾಗ್ಲೇ ಕಂಡೆಕ್ಟರ್ ಚಿಲ್ರೆ ಕೊಡೋದ್ ಬಿಟ್ಟು ಇನ್ನೆಲ್ಲೋ ರಷ್ಷೊಳಗೆ ಹೋಗ್ಬಿಟ್ತಾನೆ. ಇಳಿಯೋ ಗಡಿಬಿಡೀಲಿ ದಿನಾ ಚಿಲ್ರೆ ಖೋತ. ಥೋ ಅಂದ. ಹೂಂ. ಇನ್ನು ಡ್ರೈವರೇ ಕಂಡೆಕ್ಟರೂ ಆಗಿರೋ ಪುಷ್ಪಕ್ ಬಸ್ಸುಗಳಲ್ಲೂ ಅದೇ ಕತೆ. ಸ್ಟಾಪ್ ಬಂದಾಗ ಮುಂದೇ ಬಂದು ಇಳೀಬೇಕಿದ್ರೂ ಒಂದ್ರೂಪಾಯಿ , ಎರಡ್ರುಪಾಯಿ ಚಿಲ್ರೆ ಇಸ್ಕೊಂಡು ಇಳ್ಯೋಕೆ ಒಂಥರಾ ಆಗುತ್ತೆ. ಚಿಲ್ರೆ ಕೊಡ್ರಿ ಅಂದಾಗ ಎಷ್ಟು ಅಂತಾನೆ, ಇಷ್ಟೊಳ್ಳೆ ಬಟ್ಟೆ ಹಾಕಿ ದೊಡ್ಡೋನ ತರ ಕಾಣ್ತೀಯ, ಒಂದ್ರೂಪಾಯಿ ಚಿಲ್ರೆ ಕೇಳೋಕೆ ನಾಚ್ಕೆ ಆಗೋಲ್ವ ಅನ್ನೋ ತರ ನೋಡ್ತಾನೆ. ದಿನಾ ಒಂದೊಂದ್ರೂಪಾಯಿ ಕೊಚ್ಕೊಂಡೋಗ್ತಿದೆ ಅನ್ಸಿದ್ರೂ ಒಂದ್ರೂಪಾಯ್ ಚಿಲ್ರೆ ಅಂತ ಹೆಂಗೆ ಹೇಳೋದು ಅಂತ ಒಂತರಾ ಮುಖ ಮಾಡಿದ ಗುಂಡ. ಹೂಂ ಅರ್ಥ ಆಗುತ್ತೆ ಮಿಸ್ಟರ್ ರೌಂಡ್. ಹಿಂದ್ಗಡೆ ಎಲ್ಲಾ ಹುಡ್ಗೀರ್ ನಿಂತಿರ್ಬೇಕಾದ್ರೆ ಡ್ರೈವರ್ ಹತ್ರ ಒಂದ್ರುಪಾಯಿ ಚಿಲ್ರೆ ಕೇಳೋಕೆ ನಾಚ್ಕೆ ಆಗೆ ಆಗುತ್ತೆ ಬಿಡಿ ಅಂದ್ಲು ಇಳಾ. ಎಲ್ಲಾ ಗೊಳ್ ಅಂದ್ರು ಒಂದ್ಸಲ.
ಬರೀ ಬಸ್ಸಲ್ಲಿ ಅಲ್ಲ. ಅಂಗ್ಡೀಲೂ ಚಿಲ್ರೆ ಕೊಡಲ್ಲ. ಒಂದು,ಎರಡು ರೂಪಾಯಿಗೆಲ್ಲಾ ಚಾಕಲೇಟ್ ಕೊಡೂದ್ ಹಳೇ ಕತೆ. ಈಗ ಐದ್ರೂಪಾಯಿ ಚಿಲ್ರೆ ಇಲ್ಲ,ಚಾಕ್ಲೇಟ್ ಕೊಡ್ಲಾ ಅಂತ್ರು ಕಾಣಿ ಅಂದ್ಲು ಸರಿ ಅಲಿಯಾಸ್ ಸರಿತಾ. ಸರಿ ಹೇಳೋದ್ ಸರೀ.. ಅಂತ ಎಲ್ಲಾ ರಾಗ ಎಳೆದ್ರು. ಮತ್ತೊಮ್ಮೆ ಗೊಳ್. ನಗುವಿನ ಅಲೆ ಸ್ವಲ್ಪ ತಣ್ಣಗಾದ ಇಳಾ ಮಾತು ಮುಂದುವರಿಸಿದ್ಲು. ಈ ಸಮಸ್ಯೆಗೆ ಏನೂ ಪರಿಹಾರನೇ ಇಲ್ವಾ , ಏನ್ಮಾಡ್ಬೋದು ಮಿಸ್ಟರ್ ರೌಂಡ್ ಅಂತ ಗುಂಡನ್ನ ಮಾತಿಗೆ ಎಳೆದ್ಲು. ಮೊದಲೇ ಶೇಪ್ ಔಟಾದಂತಾಗಿ ತಣ್ಣಗೆ ಕೂತಿದ್ದ ಗುಂಡನ ಮುಖ ಈಗ ಮತ್ತೆ ಅರಳಿದಂತಾಗಿ ಮಾತಿಗೆ ಶುರುವಿಟ್ಟ.. ಇಲ್ಲ ಅಂತೇನಿಲ್ಲ. ಹುಬ್ಳಿ, ಧಾರವಾಡ ಕಡೆ ಅಂಗಡಿಯವರು ಚಿಲ್ರೆ ಬದ್ಲು ಟೋಕನ್ ವ್ಯವಸ್ಥೆ ಮಾಡಿದಾರೆ ಅಂತ ಓದಿದ ನೆನ್ಪು ಅಂದ . ಓ. ಏನದು ಅಂದ್ರು ಎಲ್ಲ. ಅಂಗಡಿಯವ್ರ ಸಂಘದವ್ರು ತಮ್ಮದೇ ಒಂದಿಷ್ಟು ಪ್ಲಾಸ್ಟಿಕ್ ಟೋಕನ್ಗಳ್ನ ಮಾಡ್ಕೊಂಡಿದಾರೆ. ಒಂದ್ರೂಪಾಯಿ, ಎರಡ್ರೂಪಾಯಿ, ಐದ್ರೂಪಾಯಿ ಹೀಗೆ. ಚಿಲ್ರೆ ಬದ್ಲು ಅದನ್ನೇ ಕೊಡೋದು ಅವ್ರು. ಆ ಸುತ್ತಮುತ್ತಲ ಏರಿಯಾಗಳ ಅಂಗಡಿಗಳವ್ರಿಗೆಲ್ಲಾ ಆ ಟೋಕನ್ಗಳ ಪರಿಚಯ ಇರತ್ತೆ. ಹಂಗಾಗಿ ಮುಂದಿನ ಸಲ ಸಾಮಾನು ತಗೋವಾಗ ಈ ಟೋಕನ್ಗಳು ಬದಲಾಗುತ್ವೆ ಅಂದ. ಓ, ಸೂಪರಲಾ, ಪ್ರತೀ ಸಲ ಚಿಲ್ರೆ ಇಲ್ದಿದ್ದಾಗ್ಲೂ ಚಾಕ್ಲೇಟ್ ತಗೋಳೋದು ತಪ್ಪತ್ತಲ್ಲ ಮಾರ್ರೆ ಅಂದ ಮಂಜ. ಹೂಂ ಅಂದ್ರು ಎಲ್ಲಾ.ಆದ್ರೆ ಈ ಐಡಿಯಾ ಸರಿಗಿಲ್ಲ ಕಣ್ಲಾ, ನಮ್ಕಡೆನೂ ಅಂಗಡಿಯವ ಚಿಲ್ರೆ ಇಲ್ದಿದ್ದಾಗ ಎರಡು ರೂಪಾಯಿ ಮುಂದಿನ ಸಲ ನೀವೆ ಕೊಡಿ ಅಂತನೋ ಅಥವಾ ಮೂರು ರೂಪಾಯಿ ಮುಂದಿನ ಸಲ ಸಾಮಾನು ತಗೋವಾಗ ಇಸ್ಕೋಳಿ ಅಂತಲೋ ಚುಕ್ತಾ ಮಾಡ್ತಾನೆ. ಇವೆಲ್ಲಾ ಅದೇ ಏರಿಯಾದಲ್ಲಿರೋರಿಗೆ ಓಕೆ. ಆದ್ರೆ ಬೇರೆ ಏರಿಯಾದೋರ ಗತಿ ಏನು. ಇಲ್ಲಿ ಯಾರ ಮನೆಗೋ ಬಂದಾಗ ಈ ಟೋಕನ್ ತಗೊಂಡ ತಪ್ಪಿಗೆ ಪ್ರತೀ ಸಲ ಅಲ್ಲಿಗೆ ಬರ್ಬೇಕಾ ? ಏನ್ ಸೂಪರ್ ಐಡಿಯಾನಪ್ಪ ಇದು ಅಂತ ಕೊಕ್ಕೆ ತೆಗ್ದ ತರ್ಲೆ ತಿಪ್ಪ. ಯಾರಿಗೂ ಏನು ಹೇಳ್ಬೇಕು ಅಂತ ಗೊತ್ತಾಗ್ದೆ ತೆಪ್ಪಗಾದ್ರು.
ನಮ್ಮ ಸರ್ಕಾರದವ್ರೇ ಯಾಕೆ ಚಿಲ್ರೆ ನಾಣ್ಯಗಳ್ನ ಹೆಚ್ಚೆಚ್ಚು ಟಂಕಿಸಿ ಈ ಚಿಲ್ರೆ ಕೊರತೆ ನೀಗಿಸಬಾರ್ದು ? ಅಂದ್ಲು ಇಳಾ. ಸರ್ಕಾರದವ್ರು ಮಾಡುತ್ರು. ಬಸವಣ್ಣ, ಅಂಬೆಡ್ಕರ್, ಶಿವಾಜಿ ಹೀಗೆ ಸರ್ಕಾರ ಪದೇ ಪದೇ ಟಂಕಿಸೋ ರೂಪಾಯಿ ನಾಣ್ಯಗಳು ಎಲ್ ಹೋತ್ತು ಕಂಡಿದ್ರಾ ಯಾರಾರು ಅಂದ್ಲು ಸರಿತಾ ? ಅಚಾನಕ್ಕಾಗಿ ಮೂಡಿದ ಈ ಪ್ರಶ್ನೆಗೆ ಯಾರಿಗೂ ಉತ್ರ ಹೊಳೀಲಿಲ್ಲ. ಹೇಳೋಕೆ ಅವ್ಳಿಗೂ ಉತ್ರ ಗೊತ್ತಿರ್ಲಿಲ್ಲ. ಸಿಕ್ತೂ ಅಂತನೇ ಇಟ್ಕಳಿ. ಹತ್ತು ಹದಿನೈದು ರೂಪಾಯಿಗೆ ಚಿಲ್ರೆನಾ ಯಾವಾಗ್ಲೂ ಹೊತ್ಕೊಂಡ್ ತಿರ್ಗೂದೂ ಅಸಾಧ್ಯ ಬಿಡಿ, ಮಾರ್ರೆ ಅಂದ ಮಂಜ. ಹೌದೌದು ಅನ್ನೋ ತರ ತಲೆ ಹಾಕಿದ್ರು ಎಲ್ಲರೂ. ಕಾಯಿನ್ನಿನ ಬದ್ಲು ಒಂದ್ರೂಪಾಯಿ, ಎರಡ್ರೂಪಾಯಿ, ಐದ್ರೂಪಾಯಿ ನೋಟುಗಳ್ನ ಹೆಚ್ಚೆಚ್ಚು ಮುದ್ರಿಸಬಹುದು. ಆದ್ರೆ ಪೇಪರಿಗೆ ಮರಗಳ ನಾಶ, ಕಾಯಿನ್ ಬಾಳಿಕೆ ಬಂದಷ್ಟು ದಿನ ಬರದೇ, ಬೇಗ ಹರ್ದೋಗೋ ನೋಟುಗಳು.. ಇವೆಲ್ಲಾ ಯೋಚ್ನೆ ಮಾಡಿದ್ರೆ ಇದೂ ಒಳ್ಳೆಯ ಯೋಚ್ನೆ ಅಲ್ಲ ಅನಿಸುತ್ತೆ ಅಂದ ಗುಂಡ. ಹೌದೆನ್ನುವಂತೆ ತಲೆ ಆಡಿಸಿದ್ರೂ ಅದಕ್ಕೆ ಪರ್ಯಾಯ ಐಡಿಯಾ ಏನು ಕೊಡೋದು ಅಂತ ಹೊಳಿದೇ ಎಲ್ಲಾ ಸ್ವಲ್ಪ ಮೌನವಾಗಿ ಕೂತ್ರು.
ಮೌನ ಮುರಿಯೋ ತರ ಸರಿತಾ ಮತ್ತೆ ಮಾತಿಗಿಳಿದ್ಳು. ನನ್ನತ್ರ ಒಂದು ಮಸ್ತ್ ಐಡಿಯಾ ಇತ್ತು ಕೇಣಿ ಅಂದ್ಲು. ಎಲ್ಲಾ ಹೇಳು ಅನ್ನೋ ಹಾಗೆ ಅವ್ಳ ಮುಖನೇ ನೋಡಿದ್ರು. ಅಂಗ್ದೀಲಿ, ಬಸ್ಸಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ಸ್ವೈಪಿಂಗ್ ಮೆಷಿನ್ ಇಟ್ರೆ ಹೆಂಗಿರುತ್ತು ಅಂದ್ಲು. ನೂರಾ ಐವತ್ತಮೂರು, ಮುನ್ನೂರ ತೊಂಭತ್ತ ಏಳು.. ಹೀಗೆ ಎಷ್ಟು ರೂಪಾಯಿಯಾದ್ರೂ ಅದರಲ್ಲಿ ಸ್ವೈಪ್ ಮಾಡೂಕಾತ್ತು. ಈಗೆಂತೂ ಹೆಚ್ಚಿನ ಬ್ಯಾಂಕುಗಳಲ್ಲಿ ಕ್ರೆಡಿಟ್ ಕಾರ್ಡು ಸ್ವೈಪ್ ಮಾಡೋದ್ರ ಮೇಲಿದ್ದ ಚಾರ್ಜು ತೆಗ್ದಿರೋದ್ರಿಂದ ದುಡ್ಕೊಡೋಕೂ ಇದ್ಕೂ ಏನೂ ವ್ಯತ್ಯಾಸ ಕಾಂಬೂದಿಲ್ಲ.ಬಸ್ ಕಂಡಕ್ಟ್ರಿಗೂ ಇದೇ ತರದ್ ಒಂದು ಮೆಷೀನ್ ಕೊಡೂದು. ಈಗಿರೋ ಟಿಕೆಟ್ ಮೆಷೀನ್ ತರ. ಟಿಕೆಟ್ಗೆ ದುಡ್ಡು ಎಷ್ಟಾತ್ತೋ ಅಷ್ಟಕ್ಕೆ ಸ್ವಾಪ್ ಮಾಡೂಕಾತ್ತು. ಬಸ್ ಕಂಡಕ್ಟರ್ ಚಿಲ್ರೆ ಚಿಲ್ರೆ ಅಂತ ಮಾರಿ ಕೆಂಪ್ ಮಾಡೂದೂ ತಪ್ಪುತ್ತು. ಹೆಂಗೆ ಅಂದ್ಳು. ಎಲ್ಲರ ಕಣ್ಣುಗಳು ಒಮ್ಮೆ ಮಿಂಚಿದ್ವು. ಸರಿ ಹೇಳಿದ್ ಮೇಲೆ ಸರಿನೇ ಅಂದ್ಲು ಇಳಾ. ಹೌದು ಸರಿ, ಸರಿ.. ಅಂತ ಎಲ್ಲಾ ರಾಗ ಎಳೆದು ನಕ್ರು.
ಐಡಿಯಾ ಏನೋ ಸರಿ. ಆದ್ರೆ ಅದೆಲ್ಲಾ ಆಗಿ ಹೋಗೋದಾ ? ಸ್ವೈಪ್ ಮೆಷೀನು ಅಂದ್ರೆ ಅದ್ಕೆ ನೆಟ್ವಕ್ರೂ, ಇಂಟರ್ನೆಟ್ಟು.. ಮಣ್ಣು ಮಸಿ ಬೇಡ್ವಾ ? ನಮ್ಮಲ್ಲಿ ಕರೆಂಟೇ ನೆಟ್ಟಗಿರುಲ್ಲ. ಅಂತದ್ರಲ್ಲಿ ನೆಟ್ವರ್ಕು, ಮತ್ತೆ ಇದು ಬೇರೆ.. ಹೆಂಗೆ ವರ್ಕೌಟ್ ಆಗುತ್ತೋ ಅಂತ ಕೊಂಕು ತೆಗೆದ ತಿಪ್ಪ. ತಿಪ್ಪನ ಬದ್ಲು ಬೇರೆ ಯಾರಾದ್ರೂ ಈ ಮಾತು ಹೆಳಿದ್ರೆ ಸರಿತಾಗೆ ಸಿಟ್ಟೆಲ್ಲಾ ನೆತ್ತಿಗೇರಿ ಎರಡು ತಪರಾಕಿ ತಟ್ಟೇ ಬಿಡುತಿದ್ಲೋ ಏನೋ. ಆದ್ರೆ ತಿಪ್ಪನ ಸ್ವಭಾವ ಗೊತ್ತಿದ್ರಿಂದ ಸುಮ್ಮನಾದ್ಲು. ಆದ್ರೂ ಎಲ್ರಿಗೂ ತಿಪ್ಪನ ಮೇಲೆ ಸಿಟ್ಟು ಬಂದಿತ್ತು. ಕೆಲಸ ಆಗ್ಬೇಕು ಅಂದ್ರೆ ಏನಾರೂ ಒಂದು ರೀತಿಗಳಿದ್ದೇ ಇರುತ್ತೆ ಕಣ್ರೀ ತಿಪ್ಪ ಅವ್ರೆ. ಹಿಂದಿನ ಸಲ ಬೆಂಗಳೂರಿಂದ ಬೀರೂರು ತನಕ ನಿಮ್ಮ ಗರ್ಲ್ ಫ್ರೆಂಡ್ ಜೊತೆ ಮಾತಾಡ್ತಾ ಹೋಗಿದ್ರಿ ಅಂತ ಹೇಳ್ತಾ ಇದ್ರಿ ತಾನೆ ? ಫ್ರೆಂಡಿಗೆ ಮಾತಾಡೋಕೆ ನೆಟ್ವರ್ಕು ಇರತ್ತೆ ಅಂದ್ರೆ ಕಂಡಕ್ಟರಿಗೆ ಕಾರ್ಡು ಸ್ವೈಪ್ ಮಾಡೋಕೆ ನೆಟ್ವರ್ಕು ಸಿಗೋಲ್ವಾ ಆ ರೂಟಲ್ಲಿ ಅಂದ್ಲು..ತಿಪ್ಪಂಗೇ ಅನಿರೀಕ್ಷಿತ ಟಾಂಗ್ ಬಿದ್ದಿದ್ದು ನೋಡಿ ಉಳಿದವ್ರಿಗೆಲ್ಲಾ ಆಶ್ಚರ್ಯ ಆಯ್ತು. ತಿಪ್ಪನ ಮುಖ ಇಂಗು ತಿಂದ ಮಂಗನ ಹಂಗಾಯ್ತು.
ಹೌದು. ಮಧ್ಯ ಮಧ್ಯ ನೆಟ್ವರ್ಕು ಇಲ್ದೇ ಹೋದ್ರೂ ನೆಟ್ವರ್ಕು ಸಿಕ್ಕೋ ಕಡೆ ಎಂತೂ ಬಸ್ಸಲ್ಲಿ ಇದನ್ನ ಬಳಸ್ಬೋದು. ಸಿಟಿ ಒಳಗೆ ಓಡಾಡೋ ಐದ್ರೂಪಾಯಿ, ಹರ್ತೂಪಾಯಿ ಚಾರ್ಜಿನ ಬಸ್ಸುಗಳಲ್ಲಿ ಈಗಿರೋ ಕಾರ್ಡ್ ಸ್ವೈಪ್ ತರ ಮಾಡೋದು ಅಷ್ಟು ಪ್ರಾಕ್ಟಿಕಲ್ ಅನಿಸದೇ ಇದ್ರೂ ದೂರ ಪ್ರಯಾಣದ ಬಸ್ಸುಗಳಲ್ಲಿ ಆರಾಮಾಗಿ ಮಾಡ್ಬೋದು ಅಂದ ಗುಂಡ. ಹೂಂ ಹೌದು ಮಾರ್ರೆ, ಈಗ ನಾವು ಚಿಮಣೆಣ್ಣೆ ದೀಪದ ಕಾಲ್ದಲ್ಲೋ ಕಲ್ಲು ಗೀರಿ ಚೆಂಕಿ ಹಚ್ಚೋ ಆದಿವಾಸಿಗಳ ಕಾಲ್ದಲ್ಲೋ ಇಲ್ಲ. ಕರೆಂಟಿಲ್ದಿದ್ರೆ ಬೇಟರಿ ಅಂದ ಮಂಜ. ಬಾಟ ಗೊತ್ತು, ಬೇಟ,ಬೇಟಿ, ಬೇಟೆ ಗೊತ್ತು. ಇದ್ಯಾವ್ದುರಿ ಕರೆಂಟಿಲ್ಲದಿದ್ದಾಗಿನ ಬೇಟೆ ರೀ ಅಂದ್ಲು ಇಳಾ ? ಅದ್ದು ಬೇಟೆ ರೀ ಅಲ್ಲ ಇಳಾ ಅವ್ರೆ ಬ್ಯಾಟರಿ, ಬ್ಯಾಟ್ರಿ, ರೀಚಾರ್ಚಬಲ್ ಬ್ಯಾಟ್ರಿ ಅಂದ ಗುಂಡ ಮಂಜನ ಸಪೋರ್ಟಿಗೆ ಬರುತ್ತ. ಸರಿಯಪ್ಪ ಪೇಟೇಲೇನೋ ಕರೆಂಟು, ನೆಟ್ಟು, ಬ್ಯಾಟ್ರಿ. ಅಲ್ಲಿ ಸಾವಿರಗಟ್ಲೆ ವ್ಯವಹಾರನೂ ಆಗತ್ತೆ ಅಂತಿಟ್ಕೊಳ್ಳೋಣ. ಹಂಗಾಗಿ ಅವ್ರಿಗೆ ಈ ಸ್ವ್ಯಾಪು ಲಾಭನೂ ತರ್ಬೋದು. ಆದ್ರೆ ಹಳ್ಳಿ ಕಡೆ, ಕರೆಂಟು.. ನೆಟ್ಟು ಅಂತ ಮತ್ತೆ ಕೇಳ್ಲೋ ಬೇಡ್ವೋ ಅನ್ನೋ ತರ ರಾಗ ತೆಗೆದ ತಿಪ್ಪ. ಹಳ್ಳಿ ಕಡೆ ನಮ್ಮ ಕಡ ಸಿಸ್ಟಮ್ಮು ಇದ್ದೇ ಇತ್ತಲ್ಲ ತಿಪ್ಪಣ್ಣ ಅಂದ್ಲು ಸರಿ. ಹಳ್ಳಿ ಕಡೆ ಕಡವೆ ಅನ್ನೋ ಪ್ರಾಣಿ ಇರುತ್ತೆ. ಅದ್ನ ಬೇಟೆ ಆಡ್ತಾರೆ ಅಂತ ಕೇಳಿದ್ದ್ರೆ. ಈ ಬೇಟೆಗೂ, ಚಿಲ್ರೆ ಸಮಸ್ಯೆಗೂ ಏನು ಸಂಬಂಧ ಅಂದ್ಲು ಏನೂ ಅರ್ಥವಾಗದ ಇಳಾ. ಮುಗುಳ್ನಕ್ಕ ಮಂಜನೇ ಉತ್ತರಿಸಿದ. ಕಡ ಅಂದ್ರೆ ಸಾಲ ಅಂತ ಇಳಾ ಅವ್ರೆ. ಎರಡ್ರೂಪಾಯಿ ಮುಂದಿನ ಸಲ ಕೊಡಿ, ಮೂರು ರೂಪಾಯಿ ಮುಂದಿನ್ಸಲ ಇಸ್ಕೋಳಿ.. ಅದೇ ಆವಾಗ ತಿಪ್ಪೂ ಭಾಯಿ ಹೇಳ್ತಾ ಇದ್ರಲ್ಲ ಅದು ಅಂದ ಧ್ವನಿಗೂಡಿಸಿದ ಗುಂಡ. ಮಕ್ಳಾ ಕೊನೆಗೂ ನನ್ನ ಬುಡಕ್ಕೆ ಬಂದು ಬಿಟ್ರಿ. ನಡೀರಿ ನಡೀರಿ ಕ್ಲಾಸಿಗೆ ಟೈಮಾಗ್ತಾ ಬಂತು. ಒಂದಿನನಾದ್ರೂ ಸರಿಯಾದ ಟೈಮಿಗೆ ಕ್ಲಾಸಿಗೆ ಹೋಗಣ ಅಂದ.. ಎಲ್ಲಾ ಮತ್ತೆ ನಗ್ತಾ ಮೇಲೆದ್ದು ಕ್ಲಾಸಿನ ಕಡೆ ಹೆಜ್ಜೆ ಹಾಕಿದ್ರು.
ಕಡ - ಕಡವೆ ಮತ್ತು ಚಿಲ್ರೇ ಸಮಸ್ಯೇ ವಾರೇವ್ಹಾ... ಎನ್ ಬರಹ ಸಿವಾ ಇದು... :-D
ReplyDelete:-) ಧನ್ಯವಾದಗಳು :-)
Deleteದೇಶದಾದ್ಯಂತ ಇರೋ ಒಂದು ಸಮಸ್ಯೆಗಳನ್ನು
ReplyDeleteಬಿಚ್ಚಿ ಒಗೆದ್ರಿ ನೋಡ್ರಪಾ....
ಭಾಳ ಗಹನ ವಿಚಾರ ಐತಿ...
ನೀವನ್ನೂ ವಿಚಾರ ಖರೀ ಐತ್ರಿ...
ಆದ್ರ ಏನ್ ಮಾಡೋಣಾಂತೀರಿ...
ನಾವ ಚಿಲ್ರೆ ಮಂದಿ ಆದ್ರ ಸರಿ ಹೊಕ್ಕತೇನ್ರಪಾ....
ಚಂದ ಬರ್ದೀರಿ ಹಾಂ ಮತ್ತ...
ಧನ್ಯವಾದ್ರಿ :-)
DeleteNimma E Baraha sakhattagide......Naanu kooda kelavomme chilre badalige chokolet keeliddumtu
ReplyDeleteಧನ್ಯವಾದಗಳು :-)
ReplyDelete