ಫಿಲ್ಮಿಗೆ ಹೋಗಿ ಕೂತಿದ್ವಿ. ನಿನ್ನೊಳೆಗೆ ಮಾಯೆಯೋ, ಮಾಯೆಯೊಳಗೆ ನೀನೋ ಅಂತ ಶುರುವಾಯ್ತು..ಹೆಸರು ತೋರಿಸುವವ ಹೊತ್ತಿಗೆ ಹೂವೊಳಗೆ ಸುಗಂಧವೋ, ಸುಗಂಧದೊಳಗೆ ಹೂವೋ, ಜಿಘ್ರಾಣಿಸುವುದರೊಳಗೆ ಇವೆರಡೋ.. ಅಂತ ಮುಂದುವರಿಯೋ ವಚನ. ಅದು ಕನಕದಾಸರ ವಚನ ಅಂತ ಆಮೇಲೆ ತೋರಿಸುವವರಿಗೂ ಕೆಲವರಿಗೆ ಪಕ್ಕಾ ಕನ್ಫ್ಯೂಷನ್ನು. ಸರಿ, ನಿರ್ದೇಶಕ ಪವನ, ನಿರ್ಮಾಪಕರು .. ? ಏನಿದು, ಹತ್ತಾರು ಹೆಸರುಗಳು, ಸಹ ನಿರ್ಮಾಪಕರು, ನೂರಾರು ಹೆಸರುಗಳು.. ಯಪ್ಪಾ.. ಒಟ್ಟು ನೂರಾ ಏಳು ಜನ ನಿರ್ಮಾಪಕರು ಸೇರಿ ನಿರ್ಮಿಸಿದ ಚಿತ್ರ.ಅಂದರೆ ಜನರ ಚಿತ್ರ..ನಾನು ಯಾವ ಚಿತ್ರದ ಬಗ್ಗೆ ಹೇಳ್ತಾ ಇದ್ದೀನಿ ಗೊತ್ತಾಗಿರ್ಬೇಕಲ್ವಾ ? ಹೂಂ. ಅದೇ ರೀ. ಲೂಸಿಯಾ.
ಚಿತ್ರವೊಂದನ್ನು ಹೊಗಳಬೇಕಂತ ಹೇಳೋ ಮಾತುಗಳಲ್ಲ. ಆದ್ರೂ ಚಿತ್ರವನ್ನು ನೋಡಿ ಹೊರಬಂದು ಅರ್ಧ ಘಂಟೆ ಆದ್ರೂ ಅದರ ಗುಂಗು ಇಳಿದಿಲ್ಲ ಅಂದ್ರೆ ಏನೋ ಇದೆ ಅಂತನೇ ಅರ್ಥ. ಎದುರು ಬಂದ ಮಹಿಳೆಯ ವ್ಯಾನಿಟಿ ಬ್ಯಾಗು ಕೈಗೆ ಹೊಡೆದ ಮೇಲೆ ಅಲ್ಲೊಬ್ಳು ಮಹಿಳೆ ಬಂದಳು ಅಂತ ಗೊತ್ತಾಗೋದು, ರಸ್ತೆ ದಾಟುವಾಗ ಯಾವುದೋ ತಲೆಯಲ್ಲಿದ್ದು ಕಾರೊಂದರ ಹಾರ್ನಿನಿಂದ ಎಚ್ಚರ ಆಗೋದು ಎಲ್ಲಾ ಆಗ್ತಿದೆ ಅಂದ್ರೆ ಒಂದೋ ಚಿತ್ರ ಸಖತ್ ಚೆನ್ನಾಗಿದೆ ಅಂತ ಅರ್ಥ ಅತ್ವಾ ತೀರಾ ಖರಾಬಾಗಿದ್ದು ಯಾಕಾದ್ರೂ ಇದಕ್ಕೆ ಬಂದನೋ ಎಂದು ಆತ್ಮದೂಷಣೆಯಲ್ಲಿ ತೊಡಗಬೇಕಾಗಿದೆ ಅಂತ ಅರ್ಥ. ಹೊಸಬರದ್ದೇ ಚಿತ್ರಗಳಾದ ಸಿಂಪಲ್ಲಾಗೊಂದು ಲವ್ ಸ್ಟೋರಿಯಂತ ಹಿಟ್ ಚಿತ್ರಗಳು ಬಂದರೂ ಜನರೇ ಚಿತ್ರ ಮಾಡೋ ಪರಿಕಲ್ಪನೆ ಕನ್ನಡದ ಮಟ್ಟಿಗೆ ಸ್ವಲ್ಪ ಹೊಸದೇ ಅನ್ನಿಸುತ್ತೆ. ಬೊಂಬೆಗಳ ಲವ್ ಅಂತ ನಲ್ವತ್ತು ಜನ ಕೈಹಾಕಿ ಚಿತ್ರ ನಿರ್ಮಿಸಿದ್ದೂ ಅದು ಸ್ವಲ್ಪ ಮಟ್ಟಿಗೆ ಸುದ್ದಿಯಾಗಿದ್ದೂ ಆಯ್ತು. ಆದ್ರೆ ಅದಕ್ಕೆ ಹೋಲಿಸಿದರೆ ಇದು ಪಕ್ಕಾ ವಿಭಿನ್ನ ಚಿತ್ರ. ಬರಿ ಅದೇ ಮಚ್ಚು, ಲಾಂಗು, ಕಣ್ಣೀರು ಕತೆಗಳಿಂದ ಬೇಸತ್ತಿದ್ದ ಕನ್ನಡ ಪ್ರೇಕ್ಷಕನಿಗೆ ಏನು ಬೇಕು ಎಂದರಿತ ಪ್ರೇಕ್ಷಕನೇ ಮೇಲೆದ್ದು ನಿರ್ದೇಶನಕ್ಕೆ ಇಳಿದಂತೆ ಅನಿಸುತ್ತಿದೆ ಇತ್ತೀಚಿನ ಚಿತ್ರಗಳನ್ನು ನೋಡಿದಾಗ. ಮಠ, ಎದ್ದೇಳು ಮಂಜುನಾಥದಂತ ಪಕ್ಕಾ ವಿಡಂಬನೆಯ ಚಿತ್ರಗಳೂ, ಮನಸಾರೆ, ಆರಕ್ಷಕದಂತಹ ಸ್ವಲ್ಪ ವಿಚಿತ್ರ ರೀತಿಯ ಚಿತ್ರಗಳೂ, ಪರಮಾತ್ಮನಂತ ಚಿತ್ರಗಳೂ ಬಂದು ಹೋದವು. ಈ ಹೊಸ ಸಾಲಿನ ನಿರ್ದೇಶಕರ ಸಾಲಿಗೆ ಹೊಸ ಸೇರ್ಪಡೆ ಪವನ್. ಪವನ್ ಅನ್ನೋದಕ್ಕಿಂತ ಮನಸಾರೆಯಲ್ಲಿ ಬರೋ ಕ್ಯಾನ್ಸರ್ ಪೇಷಂಟ್ ಹುಡುಗ ಅಂದ್ರೆ ಕೆಲವರಿಗೆ ಪಕ್ಕನೆ ಫ್ಲಾಷಾಗುತ್ತೆ. ಸಿನಿಮಾವೊಂದು ಹೇಗಿರಬೇಕು, ಹೇಗಿರಬೇಕೆಂಬ ಎಲ್ಲಾ ಪೂರ್ವಾಗ್ರಹಗಳನ್ನು ಬದಿಗೊತ್ತಿ ಸಿನಿಮಾವೊಂದನ್ನು ಮಾಡಿದರೆ ಹೇಗಿರಬಹುದು ? ಹೇಗಾದ್ರೂ ಇರಬಹುದು ? ಆದ್ರೆ ಸಿಕ್ಕಿರೋ ಆ ಸ್ವಾತಂತ್ರ್ಯವೇ ಸಿನಿಮಾವನ್ನು ಅದ್ವಾನವೆಬ್ಬಿಸೋ ಅಪಾಯವೂ ಇರುತ್ತೆ. ಹಾಗೇನೂ ಆಗದೇ ಗಟ್ಟಿಯಾದ ನಿರೂಪಣೆ ಇರೋದ್ರಿಂದನೇ ಬುಡದಿಂದ ಕೊನೆವರೆಗೂ ಕುತೂಹಲ ಕೆರಳಿಸುತ್ತಾ ಸಾಗುತ್ತೆ ಲೂಸಿಯಾ.
ಕ್ಲೈಮಾಕ್ಸನ್ನು ನಿರೀಕ್ಷಿಸದ ರೀತಿಯಲ್ಲಿ ಮಾಡಬೇಕೆನ್ನೋ ತುಡಿತದಲ್ಲಿ ಸಿನಿಮಾವನ್ನೇ ದುರಂತಾಂತ್ಯವನ್ನಾಗಿಸೋದು , ಇಲ್ಲಾ ಇನ್ನೂ ಅರ್ಧ ಘಂಟೆ ಸಿನಿಮಾ ಇದೆ ಅನ್ನೋ ನಿರೀಕ್ಷೆಯಲ್ಲಿ ಇದ್ದಕ್ಕಿದ್ದಂಗೆ ಕೊನೆ.. ಇಂತ ಅವಾಂತರಗಳನ್ನು ಮಾಡಿ ಅದನ್ನೇ ಕ್ರಿಯೇಟಿಯಿಟಿ ಅಂತ ಕರೆದಿದ್ದೂ ಇದೆ.ಆದರೆ ಆ ತರದ ಅವಾಂತರಗಳ ಆವೇಶಕ್ಕೊಳಗಾಗದೆಯೂ ನಿರೀಕ್ಷಿಸದ ರೀತಿಯಲ್ಲೇ ಕೊನೆಗೊಳ್ಳೋ ಒಂದು ಹೊಸ ತರದ ಸಿನಿಮಾ ಲೂಸಿಯೂ. ಒಂದು ಚಿತ್ರವೊಂದನ್ನು ಹೊಗಳಬೇಕಾದ್ರೆ ಬೇರೆಯದನ್ನು ತೆಗಳಬೇಕಂತ ಇಲ್ಲ. ಇದೇ ಸರ್ವಶ್ರೇಷ್ಟ ಅಂತನೂ ಇಲ್ಲ. ನನಗೆ ಸೂಪರ್ ಅನಿಸಿದ್ದು ಕೆಲವರಿಗೆ ಅಟ್ಟರ್ ಫ್ಲಾಪು ಅನಿಸಬಹುದು. ಹಾಗಾಗಿ ತೀರಾ ಪೀಠಿಕೆ ಹಾಕದೇ ಚಿತ್ರ ನೋಡಿ ಹೊರಬಂದ ಮಾತುಗಳು.. ಸೀದಾ ನಿಮ್ಮೆದುರು.ತಮಿಳು, ತೆಲುಗು, ಹಿಂದಿ ಹೀಗೆ ಪರಭಾಷಾ ಚಿತ್ರಗಳನ್ನು ಮನೆಯಲ್ಲೇ ನೋಡಿದ್ರೂ ಕನ್ನಡ ಸಿನಿಮಾಗಳನ್ನು ಥಿಯೇಟ್ರುಗಳನ್ನ ಹುಡುಕಿಕೊಂಡು ಹೋಗಿ ನೋಡೋದು ನಮ್ಮ ಗೆಳೆಯರ ಪರಿಪಾಟ. ಮನೆ ಹತ್ರವೇ ಮೂರು ಥಿಯೇಟ್ರುಗಳಿದ್ರೂ ಎಲ್ಲೂ ಕನ್ನಡ ಚಿತ್ರಗಳಿಲ್ಲದ ದುರಂತ ಪರಿಸ್ಥಿತಿಯಲ್ಲಿ ಥಿಯೇಟ್ರೊಂದನ್ನು ಹುಡುಕಿಕೊಂಡು ಹೋದ ಶ್ರಮವೂ ಸಾರ್ಥಕವಾದ ಅನುಭವ ಕೊಟ್ಟಿದ್ದಕ್ಕೆ ಚಿತ್ರವೊಂದರ ಬಗ್ಗೆ ಕೆಲ ಮಾತುಗಳು..
ದಯಾ ಮರಣ, ಲೂಸಿಡ್ ಡ್ರೀಮಿಂಗ್ .. ಹೀಗೆ ಹಲವು ಕಾನ್ಸೆಪ್ಟುಗಳಿವೆ. ಹೀರೋಗೊಂದು ಮಚ್ಚು ಕೊಟ್ಟು, ಫೈಟನ್ನೂ ಮಾಡಿಸಿ ಬರಿ ಇವೆರಡೇ ಇದ್ದರೆ ಫಿಲ್ಮೊಂದು ಆಗಲ್ಲ. ಇವು ಫಿಲ್ಮಿನ ಭಾಗವಷ್ಟೇ ಎಂದು ಪರೋಕ್ಷವಾಗಿ ಟಾಂಟ್ ಕೊಟ್ಟ ಹಾಗೂ ಇದೆ. ಕನ್ನಡ ಫಿಲ್ಮಿನ ರಿಲೀಸ್ ಪತ್ರಿಕಾ ಗೋಷ್ಟಿಯಲ್ಲಿ ನಿರ್ದೇಶಕ ತಮಿಳಲ್ಲೂ, ನಿರ್ಮಾಪಕ ತೆಲುಗಲ್ಲೂ, ನಾಯಕಿ ಇಂಗ್ಲೀಷಲ್ಲೂ ಮಾತಾಡ್ತಾಳೆ!! ಕನ್ನಡದಲ್ಲಿ ಮಾತಾಡೋದು ಹೀರೋ ಒಬ್ನೇ.. ! ಕರ್ನಾಟಕದಲ್ಲೇ ಕನ್ನಡ ಮೂವಿಗಳಿಗೆ ಜನರಿಲ್ಲದೇ ತೆಲುಗು, ತಮಿಳುಗಳಿಗೆ ಹೌಸ್ ಫುಲ್ಲಾಗೋ ವಿಪರ್ಯಾಸ .. ಹೀಗೆ ಅನೇಕ ದೃಶ್ಯಗಳು ಕನ್ನಡ ಚಿತ್ರರಂಗದ ದುಸ್ಥಿತಿಯ ಬಗ್ಗೆ ಪಕ್ಕಾ ವಿಡಂಬನೆಯಂತೆ ಕಾಣುತ್ತೆ. ಚಿತ್ರದಲ್ಲಿ ವಿಲನ್ನು ಯುವನಟ. ಮಾಡೆಲ್ಲು. ಅವನ್ನ ಕಂಡ್ರೆ ಹೀರೋಗೆ ಯಾಕೋ ಒಂತರಾ. ಕುರ್ಚಿ ತರಸ್ತಾನೆ. ತನಗೆ ಕೊಡ್ತಾನೇನೋ ಅಂದ್ಕೊಳೋ ಹೊತ್ತಲ್ಲಿ ಅದರ ಮೇಲೆ ಕಾಲಿಡುತ್ತಾನೆ ಹೀರೋ.. ಎಂತಾ ದರ್ಪ.. ಇಂತದ್ದೇ ಹಲವಾರು ದೃಶ್ಯಗಳು ನಿಜಜೀವನದ ಯಾವ್ಯಾವೋ ಪಾತ್ರಗಳಿಗೆ ಅಣಕಿಸುವಂತೆ ಕಾಣುತ್ತದೆ. ಆದ್ರೆ ಎಲ್ಲಾ ಆಗೋ ಬಯಕೆಯಲ್ಲಿ, ಕಾನ್ಸೆಪ್ಟಿನ ಬಗ್ಗೆ ಸಿನಿಮಾ ಮಾಡೋ ತುಡಿತದಲ್ಲಿ ಸಿನಿಮಾವೇ ಒಂದು ಸಾಕ್ಷ್ಯಚಿತ್ರ,(Documentary) ಆಗುವ ಅಪಾಯವೂ ಇದೆ. ಅಂತದ್ದೇನೂ ಆಗಿಲ್ಲ ಅನಿಸುತ್ತೆ ಈ ಚಿತ್ರವನ್ನು ನೋಡುವಾಗ.
ನಿಕ್ಕಿ ಒಬ್ಬ ಥಿಯೇಟರಲ್ಲಿ ಬ್ಯಾಟ್ರಿ ಬಿಡೋ ಹುಡುಗ, ಇನ್ನೊಬ್ಬ ಹೀರೋ. ಮತ್ತೊಬ್ಬಳು ಶ್ವೇತ. ಸಪೋರ್ಟಿಗೊಬ್ಬ ಶಂಕ್ರಣ್ಣ. ಅಲ್ಲಲ್ಲಿ ಬರೋ ಫಾರಿನರ್ಸು, ಮಾಡೆಲ್ಲು, ಪೋಲೀಸು, ಡಿಟೆಕ್ಟಿವು. ಹೀಗೆ ಹಲವು ಪಾತ್ರ. ಹೀರೋನೆ ಎಲ್ಲಾ ಅಲ್ಲ ಆಗದ ಇದರಲ್ಲಿ ಯಾವುದೇ ಒಂದು ಪಾತ್ರವನ್ನು ತೆಗೆದು ಬದಿಗಿಟ್ಟರೂ ಉಳಿದ ಪಾತ್ರಗಳು ಅಪೂರ್ಣ ಎನಿಸುವಷ್ಟು ಹೊಂದಿಕೊಂಡಿವೆ ಪಾತ್ರಗಳು ಒಂದರೊಳಗೊಂದು. ಒಂದಕ್ಕೊಂದು ಪೂರಕ, ಪ್ರೇರಕ. ಪೂರ್ಣಚಂದ್ರ ತೇಜಸ್ವಿ ಅಂದ್ರೆ ಸಾಹಿತ್ಯದ ನೆನಪಾಗೋ ಜನರಿಗೆ ಈ ಚಿತ್ರದ ಮೂಲಕ ಒಬ್ಬ ಅದೇ ಹೆಸರಿನ ಸಂಗೀತ ನಿರ್ದೇಶಕನ ಪರಿಚಯವೂ ಆಗಿದೆ. ಬ್ಯಾಟ್ರಿಗೂ ಹೀರೋಗೂ ಏನು ಸಂಬಂಧ, ಪಾಪಾ ಜೋನ್ ಪಿಜಾಗೂ ರಾಗಿ ಮುದ್ದೆಗೂ ಯಾವ ತರದ ಲವ್ವು, ತಿನ್ಬೇಡ ಕಮ್ಮಿ ನೀ ತಿನ್ಬೇಡ ಕಮ್ಮಿ, ನೀ ತಿನ್ಬೇಡ ಕಮ್ಮಿ ನೆಲಗಳ್ಳೆಯ ಅಂತ ಫಾರಿನರ್ರುಗಳು ಯಾಕೆ ಬರ್ತಾರೆ ಅಂತ ಚಿತ್ರದ ಟ್ರೈಲರ್ಗಳನ್ನ ನೋಡಿದವರಿಗೆಲ್ಲಾ ಕುತೂಹಲ ಹುಟ್ಟಿರಬಹುದು. ಅದಕ್ಕೆ ಇನ್ನೊಂದು ಕುತೂಹಲದ ಅಂಶ ಸೇರಿಸಿಬಿಡ್ತೇನೆ. ಇಲ್ಲಿ ಬರೋ ಪಾತ್ರಗಳದ್ದೆಲ್ಲಾ ದ್ವಿಪಾತ್ರ ! ಒಂದು ಕನಸು ಮತ್ತೊಂದು ವಾಸ್ತವ. ಆದರೆ ಕನಸು ವಾಸ್ತವಗಳ ನಡುವಿನ ವ್ಯತ್ಯಾಸವೇ ತಿಳಿಯದಂತ ಪರಿಸ್ಥಿತಿ. ಕೊನೆಗೆ ನೋಡುಗ ಪ್ರಭುವಿಗೆ ಫಿಲ್ಮಿನ ನಿಜವಾದ ಕತೆ ಏನೆಂಬುದನ್ನು ಅರ್ಥಮಾಡಿಸಲು ಉದಾಹರಣೆ ಕೊಟ್ಟು ಪ್ರಯತ್ನಿಸಿದ್ದು ಇದ್ರೂ ಅದರಲ್ಲಿ ಕನಸ್ಯಾವುದು , ವಾಸ್ತವ ಯಾವುದು ಎಂದು ನಾನೇ ಈಗ ಹೇಳಿದ್ರೆ ಸಿನಿಮಾ ಥಿಯೇಟ್ರಿಗೆ ಹೋಗೋ ನಿಮ್ಮ ಉತ್ಸಾಹ ತಣಿದುಹೋಗಬಹುದು. ಪವನ್ನರ ಪ್ರಾಮಾಣಿಕ ಪ್ರಯತ್ನಕ್ಕೆ ಮೋಸ ಮಾಡಿದಂತೆಯೂ ಆಗಬಹುದು. ಅಂದ ಹಾಗೆ ಸಿನಿಮಾ ಮುಗೀತು ಅಂತ ಮುಗಿದ ಮೇಲೂ ಗೊತ್ತಾಗದ ಸುಮಾರು ಜನ ಕೂತುಕೊಂಡಿದ್ರು. ಶುಭಂ ಅಂತ ತೋರಿಸಿದ್ರೂ ಏಳದ ಅವರಿಗೆ ಥಿಯೇಟ್ರಿನ ಬ್ಯಾಟ್ರಿ ಹುಡ್ಗ ಬಾಗಿಲು ತೆಗೆದು ಮುಖದ ಮೇಲೆ ಬೆಳಕು ಬಿದ್ದಾಗ್ಲೇ ಗೊತ್ತಾಗಿದ್ದು.
ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ.
ಲೂಸಿಯ ಚಿತ್ರದ ಯಶಸ್ಸಿನ ಬಗ್ಗೆ ಇತ್ತಿಚೆಗೆ ಪತ್ರಿಕೆಯಲ್ಲಿ ಓದಿದ್ದೆ. ಕಳೆದ ತಿಂಗಳು ಮಂಗಳೂರಿನ ಸಿಟಿ ಸೆಂಟರ್ ನಲ್ಲಿ ಜನ ಕ್ಯೂನಲ್ಲಿ ನಿಂತಿದ್ದಾಗ ಯಾಕೆ ಇವರೆಲ್ಲ ಸೇರಿದ್ದಾರೆ ಎಂದುಕೊಳ್ಳುತ್ತಿರುವಾಗಲೇ ಹತ್ತಿರದಲ್ಲಿ ಲೂಸಿಯಾ ಎಂಬ ಹೆಸರಿನ ಬ್ಯಾನರ್ ಹಾಕಿದ್ದರು. ಅಷ್ಟಕ್ಕೂ ಅದೊಂದು ಸಿನೆಮಾದ ಹೆಸರೇ...? ಎಂದು ಕೊಂಡಿದ್ದೆ. ಈಗ ನಿಮ್ಮ ಬರವಣಿಗೆ ಸಿನೆಮಾ ನೋಡಿದಷ್ಟೇ ಖುಶಿಯಾಯಿತು. ಪುನಃ ನನಗೊಮ್ಮೆ ಆ ವಿಭಿನ್ನ ಸಿನೆಮಾ ನೋಡ್ ಬೇಕು.
ReplyDeleteಹಾಗೆಯೇ ನನ್ನ ಬ್ಲಾಗ್ ಗೂ ಒಮ್ಮೆ ಕಣ್ಣು ಹಾಯಿಸಿ ಒಂದು ವಿಭಿನ್ನ ಕತೆ ಓದಿ.
ಧನ್ಯವಾದಗಳು.
ReplyDeleteನಿಮ್ಮ ಒಂದು ಕವನವೊಂದನ್ನು ಈಗ ಓದಿಕೊಂಡು ಬಂದೆ.. ಲೇಖನದ ಕಡೆ ಬರುವೆ ಮತ್ತೊಮ್ಮೆ :-)