ನಮ್ಮೂರು
ಮಲೆನಾಡ ಒಂದು ಹಳ್ಳಿ. ಅಲ್ಲೆಲ್ಲಾ
ಹಳ್ಳಿಯೆಂದರೆ ಒಂದೈದಾರು ಮನೆಗಳಿದ್ದರೆ ಹೆಚ್ಚು. ರಸ್ತೆ ಪಕ್ಕದ
ಬಸ್ಟಾಂಡಿಗೆ ಹೊಂದಿಕೊಂಡಂತೆ ಇರೋ ಅಂಗಡಿಯವರದ್ದು ರಸ್ತೆ
ಪಕ್ಕದ ಮನೆಯಾದರೆ ಉಳಿದವರದ್ದು ತಮ್ಮ ಗದ್ದೆಯ ಮೇಲ್ತಟ್ಟೋ
ಎಲ್ಲೋ ಕಾಡು ಒಳಗಡೆ ಹೊಕ್ಕಂತೆಯೋ
ಉಳಿದವರ ಮನೆ. ಅಂಗಡಿ ಭಟ್ಟರೋ,
ಅಂಗಡಿ ಮಂಜಣ್ಣನೋ , ಹಾಲು ತಿಮ್ಮನೋ ಹೀಗೆ
ಅವರವರ ವೃತ್ತಿಯ ಮೇಲೆ ಹೆಸರುಗಳಿದ್ದರೂ
, ಅವರಿವರ ಜೊತೆ ಬೆರೆಯಬೇಕೋ ಬೇಡವೋ
ಎಂಬ ದೊಡ್ಡವರ ಹಲವು ಗುಸುಗುಸುಗಳಿದ್ದರೂ
ಶಾಲೆಗೆ ಹೋಗೋ ಮಕ್ಕಳಿಗೆ ಆ
ತಲೆಬಿಸಿಗಳಿರಲಿಲ್ಲ. ಹೆಗ್ಡೇರ ಮಗ ನೀನು,
ಇವ್ರ ಜೊತೆ ಶಾಲೆಗೆ ಹೋಗಬೇಡ,
ಅವ್ರ ಜೊತೆ ಆಟಕ್ಕೆ ಹೋಗಬೇಡ
ಅಂತ ಭಟ್ಟರ ಮನೆಯವರು ನಿರ್ಭಂದ
ಹಾಕಿದ್ದಾಗಲಿ, ಟೀವಿ ವೀಡಿಯೋ ಗೇಮ್
ಇರೋ ನೀನು ಆ ಬಡವರ
ಮಕ್ಕಳ ಜೊತೆ ಯಾಕೆ ಧೂಳಲ್ಲಿ
ಆಡೋಕೆ ಹೋಗ್ತೀಯ, ಮನೇಲೆ ಇರು ಅಂತ
ಸಾಹುಕಾರರ ಮನೆಯವರು ತಮ್ಮ ಮಕ್ಕಳಿಗೆ
ಹೇಳಿದಂತೆಯೂ ಕಂಡಿರಲಿಲ್ಲ. ಮಕ್ಕಳೆಂದರೆ ಮಕ್ಕಳು ಅಷ್ಟೆ. ಅವರ
ಆಟ ಪಾಟಗಳಲ್ಲಿ ತಲೆ ಹಾಕೋ ಮನಸ್ಥಿತಿ
ಮನೆಯವರಿಗಿರಲಿಲ್ಲ. ಸಂಜೆ ದೀಪ ಹಚ್ಚೋ
ಹೊತ್ತಿಗೆ ಮನೇಲಿರಬೇಕು ಅನ್ನೋ ನಿರ್ಬಂಧ ಒಂದು
ಬಿಟ್ಟರೆ ಸ್ವತಂತ್ರ ಪಕ್ಷಿಗಳು ನಾವು. ಸಂಜೆ ನಾಲ್ಕೂವರೆಗೆ
ಶಾಲೆ ಬಿಟ್ಟರೆ ಓಡೋಡಿ ಮನೆ
ಮುಟ್ಟುತ್ತಿದ್ದೆವು. ಆಗ ನಾಲ್ಕೂವರೆಗೆ ಚಂದನ
ಟೀವಿಯಲ್ಲಿ ಬರುತ್ತಿದ್ದ "ಮಾರಿಕಣಿವೆ ರಹಸ್ಯ" ಮುಗಿಯೋದರೊಳಗೆ ಸ್ವಲ್ಪವಾದ್ರೂ ನೋಡಬೇಕು ಅನ್ನೋ ಆಸೆ
ಒಂದು ಕಡೆ. ಬೇಗ ಬಟ್ಟೆ
ಬದಲಾಯಿಸಿ ಆಟಕ್ಕೆ ಹೋಗ್ಬೇಕು ಅನ್ನೋ
ಆಸೆ ಮತ್ತೊಂದ್ಕಡೆ. ಐದು
ಐದೂ ಕಾಲಾಗುತ್ತಿದ್ದಂತೆ ಮನೆ ಹೊರಗಡೆ ಎಲ್ಲೋ
ಸೀಟಿಯ ಸದ್ದು. ಸೀಟಿ ಕೇಳ್ತಾ
ಇದೆ ಅಂದ್ರೆ ಆಟಕ್ಕೆ ಗೆಳೆಯರು
ಕರೀತಿದಾರೆ ಅಂತ.. ಅದು ನಮ್ಮ
ಸಿಗ್ನಲ್ಲು. ಬಂದೆ ಬಂದೆ ಅಂತ
ಕೂಗಿ ಬಾಲು ತಗೊಂಡು ಓಡೋದು
ಮನೆಯೆದುರಿಗಿದ್ದ ಬಯಲಿಗೆ. ನಾನು ಮನೆಯ
ಹಿಂದೇನಾದರೂ ಹೋಗಿ ಸೀಟಿ ಕೇಳದಿದ್ದರೆ
ಬಂದ ಬಂದ ಅಂತ ನಮ್ಮ
ಅಪ್ಪನೋ, ಅಮ್ಮನೋ ಎರಡನೇ ಸೀಟಿಯ
ಹೊತ್ತಿಗೆ ನನ್ನ ಪರವಾಗಿ ಕೂಗುವಷ್ಟು
ಕಾಮನ್ನಾಗಿ ಬಿಟ್ಟಿತ್ತು ನಮ್ಮ ಸಿಗ್ನಲ್ಲು! ಐದೂವರೆಯಾದರೂ
ಯಾವುದೇ ಸೀಟಿಯಿಲ್ಲ ಅಂದರೆ ನಾನೇ ಬೇರೆಯವರ
ಮನೆಗೆ ಹುಡುಕಿಕೊಂಡು ಹೋಗಿ ಅವರನ್ನು ಕರೆಯೋದು..
ಆರು ಆರು ಕಾಲು ಹೊತ್ತಿಗೆ
ಕತ್ತಲಾಗಿ ದಿನಾ ಮುಕ್ಕಾಲು ಘಂಟೆಯಷ್ಟು
ಆಟ ಸಿಕ್ಕಿದ್ರೂ ಅದ್ರಲ್ಲೇ ಏನೋ ಒಂದು ಮಜ.
ನಾನು ಬಾಲು ತಂದರೆ ಮತ್ತೊಬ್ಬ
ಬ್ಯಾಟು ತಂದಿರುತ್ತಿದ್ದ. ಅಲ್ಲೇ ಇದ್ದ ಲಂಡನ್
ಮಟ್ಟಿ(ಕಾಂಗ್ರೆಸ್ ಮಟ್ಟಿ, ಲಂಟಾನ ಅಂತಲೂ
ಅದಕ್ಕೆ ಹೆಸರುಂಟು. ಸುಮ್ಮನೇ ಚುನಾವಣೆ ಸಮಯದಲ್ಲಿ
ವಿಷಯಪಲ್ಲಟ ಬೇಡವೆಂದು ಲಂಡನ್ನೆಂಬ ಹೆಸರು ಬಳಸಿದ್ದೇನೆ.. ಹೆ
ಹೆ)ಯ ಕಡ್ಡಿಗಳನ್ನು ಮುರಿದು
ಅದನ್ನೆ ವಿಕೆಟ್ ಅಂತಲೋ ಅಥವಾ
ಹಿಂದಿನ ದಿನ ಕಡಿದು ಅಲ್ಲೇ
ಲಂಡನ್ ಮಟ್ಟಿಯ ಸಂದಿಯಲ್ಲಿ ಅಡಗಿಸಿಟ್ಟ ಮತ್ತಿ ಮರದ ಗೆಲ್ಲುಗಳ
ವಿಕೆಟ್ಟುಗಳನ್ನ ಹುಗಿದರೆ ನಮ್ಮ ವಿಕೆಟ್ಟು
ರೆಡಿ. ಒಂದ್ಕಡೆ ಮೂರು. ಮತ್ತೊಂದ್ಕಡೆ
ಒಂದೇ ವಿಕೆಟ್ಟು. ಕೆಲವೊಮ್ಮೆ ಮೂರೇ ವಿಕೆಟ್ಟಿದ್ದಾಗ ಮತ್ತೊಂದು
ಕಡೆ ನಮ್ಮ ಚಪ್ಪಲಿಯೇ ವಿಕೆಟ್ಟು
! ಈಗಿನ ಕ್ರಿಕೆಟ್ಟಿನಂತೆ ಎರಡೂ ಕಡೆಯಿಂದ ಬೌಲಿಂಗ್
ಮಾಡ್ಬೇಕೆಂಬ ನಿಯಮವೇನಿರಲಿಲ್ಲವಲ್ಲ ನಮಗೆ ! ಮತ್ತೆ ನಮ್ಮ
ಪಿಚ್ಚೆಂದರೆ ಚಪ್ಪಟೆಯಾಗಿ ಇರಬೇಕೆಂದೇನಿರಲಿಲ್ಲ. ನಮ್ಮೂರ ಪಿಚ್ಚು ಇದ್ದಿದ್ದೇ
ಏರು ತಗ್ಗಾಗಿ. ಮಧ್ಯ ಮಧ್ಯ ಚಪ್ಪಟೆಯಿದ್ದರೂ
ಅಲ್ಲಲ್ಲಿ ಲಂಟಾನದ ಮಟ್ಟಿಗಳಿದ್ದರಿಂದ ಬೌಲಿಂಗಿಗೆ
ಆ ಜಾಗಗಳೆಲ್ಲಾ ಅಯೋಗ್ಯವೆನಿಸಿ
ಏರಿದ್ದ ಜಾಗವೇ ಪಿಚ್ಚಾಗಿತ್ತು. ಏರಿದ್ದ
ಜಾಗದಲ್ಲಿ ಬ್ಯಾಟ್ಸುಮನ್ನು, ಕೀಪರ್ ನಿಂತರೆ ಇಳಿಜಾರಿನ
ಕಡೆಯಿಂದ ಬೌಲಿಂಗು. ಕ್ರಿಕೆಟ್ಟೆಂದರೆ ಎರಡು ಟೀಮುಗಳಲ್ಲೂ ಹನ್ನೊಂದನ್ನೊಂದು
ಜನ, ಬೆಂಚಲ್ಲಿ ಮತ್ತೊಂದಿಷ್ಟು ಅಂತೆಲ್ಲಾ ಕಲ್ಪನೆಗಳು ಬೇಡ ಮತ್ತೆ ! ಮೊದಲೇ
ಹೇಳಿದಂತೆ ನಮ್ಮೂರಲ್ಲಿ ಇದ್ದಿದ್ದೇ ಐದಾರು ಮನೆ. ಅದರಲ್ಲಿ
ಶಾಲೆಗೆ ಹೋಗುವವರಿದ್ದುದು ಐದು ಜನ ಅಷ್ಟೆ.
ಆಮೇಲೆ ಹೊಸ ಮನೆಗಳಾಗಿ ಮತ್ತಿಬ್ಬರು
ಹುಡುಗರು ಸೇರಿದ ಮೇಲೆ ಏಳು
ಜನ. ಆದ್ರೆ
ದಿನಾ ಏಳು ಜನರೂ ಸೇರುತ್ತಿದ್ದೆವೆಂದಲ್ಲ.
ಕೆಲ ದಿನ ಪಕ್ಕದ ಹಳ್ಳಿಯ
ಹುಡುಗ್ರು, ನಮ್ಮೂರಿಗೆ ಬಂದ ನೆಂಟ್ರ ಮಕ್ಕಳು,
ಸ್ವಲ್ಪ ದೊಡ್ಡ ಅಣ್ಣಂದ್ರು( ಆಗ
ಅಂಕಲ್ ಅನ್ನೋ ಪದವೇ ನಮಗೆ
ಗೊತ್ತಿರಲಿಲ್ಲ ಅಂದ್ರೆ ಆಶ್ಚರ್ಯ ಪಡಬೇಡಿ.
ದೊಡ್ಡೋರೆಲ್ಲಾ ಅಣ್ಣಂದ್ರೇ ಅವಾಗ)ಬಂದಿದ್ದೂ ಉಂಟು.
ಒಟ್ಟು ಎಲ್ಲಾ ಸೇರಾದ ಮೇಲೆ
ಎಷ್ಟು ಜನ ಅಂತ ನೋಡೋದು.
ಸಮ ಸಂಖ್ಯೆ ಆದ್ರೆ ಎರಡು
ಟೀಮಿಗೂ ಸಮನಾದ ವಿಭಜನೆ. ಆದ್ರೆ
ಹೆಚ್ಚಿನ ಸಲಗಳಲ್ಲಿ ಐದು, ಮೂರು, ಏಳು
ಹೀಗೇ ಆಗ್ತಿತ್ತು. ಅವಾಗ ಒಬ್ಬ ಹಾಲುಂಡಿ
ಅತ್ವಾ ಆಲ್ ರೌಂಡರ್ ಅಂತ.
ಆಲ್ ರೌಂಡರ್ ಅಂದ್ರೆ ಈಗಿನ
ಯುವರಾಜು,ಸರ್ ಜಡೇಜನ ತರ
ಬ್ಯಾಟಿಂಗ್, ಬೌಲಿಂಗ್ ಎಲ್ಲಾ ಮಾಡೋ
ಸವ್ಯಸಾಚಿ ಅಂತ ಅಲ್ಲ. ಎರಡೂ
ಟೀಮುಗಳಲ್ಲಿ ಆಡೋ ಭಾಗ್ಯಶಾಲಿ ಅಂತ. ಆದ್ರೆ
ಸಾಧಾರಣವಾಗಿ ಅವನಿಗೆ ಕೊನೆಯ ಬ್ಯಾಟಿಂಗ್.
ಕೆಲವೊಮ್ಮೆ ಹಾಲುಂಡಿಗೆ ಬೌಲಿಂಗ್ ಇಲ್ಲ. ಬ್ಯಾಟಿಂಗು,
ಫೀಲ್ಡಿಂಗ್ ಮಾತ್ರ ಅಂತ ನಿಯಮ
ಮಾಡ್ಕೊಂಡ್ರೂ ಕೆಲ ಸಲ ಆತರ
ಏನೂ ಇಟ್ಕೋತಿರಲಿಲ್ಲ.ಬ್ಯಾಟ್ಸಮನ್ನಿನ ಹಿಂದುಗಡೆ ರನ್ನಿಲ್ಲ, ಆ ಬೇಲಿ ದಾಟಿ
ಹೊರಗೆ ಹೊಡೆದರೆ ಔಟು(ಬಾಲು
ಕಳೆಯೋ ಭಯ).. ಹೀಗೆ ಅನುಕೂಲಸಿಂಧು
ಹಲವು ರೂಲ್ಸುಗಳೂ ಇದ್ದವು. ಈ ಹಾಲುಂಡಿಯದೇ
ಕೆಲೋ ಸಲ ಮಜ.ಅವ
ಒಂದು ಟೀಮಿಗೆ ಬೌಲಿಂಗ್ ಮಾಡಿ
ಅದ್ರ ಬ್ಯಾಟ್ಸುಮನ್ನುಗಳೆಲ್ಲಾ ಔಟಾದ ಮೇಲೆ ಅದೇ
ಟೀಮಿನ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದುದೂ
ಇದೆ. ಒಂದು ತಂಡದ ಉಳಿದ
ಬ್ಯಾಟ್ಸುಮನ್ನುಗಳೆಲ್ಲಾ ಬೇಗ ಔಟಾಗಿ ಹಾಲುಂಡಿಯೇ
ಇಪ್ಪತ್ತು ರನ್ನು ಹೊಡೆದ ಸ್ಥಿತಿ,
ಮತ್ತೊಂದು ತಂಡದಲ್ಲೂ ಬ್ಯಾಟ್ಸುಮನ್ನುಗಳೆಲ್ಲಾ ಬೇಗ ಔಟಾಗಿ ಹಾಲುಂಡಿಯೇ
ಆ ಇಪ್ಪತ್ತು ರನ್ನುಗಳ
ಬೃಹತ್ ಮೊತ್ತ ಬೆನ್ನತ್ತಿ ತನ್ನ
ತಂಡವನ್ನು ಗೆಲ್ಲಿಸಿದ ದಿನಗಳೂ ಇರುತ್ತಿದ್ದವು ! ಇನ್ನೂ
ಮಜವಾದ ಪ್ರಸಂಗಗಳೂ ಇದೆ. ಹಾಲುಂಡಿಗೆ ಬೌಲಿಂಗ್
ಸಿಕ್ಕು ಆತನ ಓವರಿನ ಎರಡನೇ
ಬಾಲಿನಲ್ಲೋ, ಮೂರನೇ ಬಾಲಲ್ಲೋ ಎದುರಾಳಿಯ
ತಂಡದ ಬ್ಯಾಟ್ಸುಮೆನ್ ಔಟಾಗಿ ಬಿಡುತ್ತಿದ್ದ. ಅವರ
ತಂಡದ ಎಲ್ಲರೂ ಔಟಾದ್ರೇ ಹಾಲುಂಡಿಯೇ
ಬ್ಯಾಟಿಂಗೆಗೆ ಬರಬೇಕಲ್ಲ. (ಇದ್ದಿದ್ದೇ ಎರಡೋ ಮೂರು ಜನ
ಟೀಮಿನಲ್ಲಿ. ಹಾಗಾಗಿ ಅವರೇ ಕೊನೆಯ
ಬ್ಯಾಟ್ಸುಮನ್ನುಗಳು) . ಹಾಗಾಗಿ ಆತ ಬೌಲಿಂಗನ್ನು
ಬೇರೆಯವರಿಗೆ ಕೊಟ್ಟು ತಾನು ಔಟ್
ಮಾಡಿದ ತಂಡದ ಪರವಾಗಿಯೇ ಬ್ಯಾಟಿಂಗೆಗೆ
ಬರುತ್ತಿದ್ದ.. ಅಂತೂ ಕತ್ತಲಾಗಿ ಬಾಲು
ಕಾಣದವರೆಗೂ ಅಥವಾ ಬಾಲು ಒಡೆದು
ಹೋಗೋವರೆಗೂ ಅಥವಾ ಯಾರದಾದ್ರೂ ಮನೇಲಿ
ಅವರನ್ನ ಕರೆದು ಬರೀ ಎರಡೇ
ಜನ ಉಳಿಯೋವರೆಗೂ ಹೀಗೆ ಆಡುತ್ತಿದ್ವಿ. ಶನಿವಾರ
ಭಾನುವಾರಗಳೆಂತೂ ಕೇಳೋದೆ ಬೇಡ. ಬೆಳಗ್ಗೆ,
ಸಂಜೆ ಇದೇ ಕೆಲಸ ನಮಗೆ.
ನಮ್ಮೂರಲ್ಲಿ ಯಾರೂ ಇಲ್ಲ ಅಂದ್ರೆ
ಸೈಕಲ್ಲಿ ಹತ್ತಿ ಪಕ್ಕದೂರಿಗೆ ಹೋಗೋದು,
ಅತ್ವಾ ಅವರು ನಮ್ಮಲ್ಲಿಗೆ ಬರೋದೂ
ಇತ್ತು. ಕ್ರಿಕೆಟ್ಟಿನಿಂದ ಬೇರೆ ಗ್ರಾಮಾಂತರ ಕ್ರೀಡೆಗಳು
ಸಾಯ್ತಾ ಇದೆ ಅಂತ ಜನ
ಬೊಬ್ಬೆ ಹಾಕ್ತಾ ಇರೋ ಸಮಯದಲ್ಲಿ
ನೀನು ಇಷ್ಟುದ್ದ ಅದ್ರ ಬಗ್ಗೆ ಹೊಗಳಿ
ಬರೀತಾ ಇದ್ಯಲ್ಲಪ್ಪಾ ಅಂದ್ರಾ ? ಸ್ವಾಮಿ, ಇದು ಫಾರಿನ್ನರ್ರುಗಳು
ಇಲ್ಲಿನ ಕ್ರೀಡೆಗಳನ್ನೆಲ್ಲಾ ಕೊಲ್ಲಬೇಕೆಂದೇ(?)
ತಂದ ಕ್ರಿಕೆಟ್ಟಿನ ಬಗ್ಗೆ ಅಲ್ಲ. ನಮಗೆ
ನಮ್ಮ ಬಾಲ್ಯದಲ್ಲಿ ಖುಷಿ ಕೊಟ್ಟ ಒಂದು
ಆಟದ ಬಗ್ಗೆ ಅಷ್ಟೆ. ಚಪ್ಪಲಿ,
ಗೋಡೆಗಳೇ ವಿಕೆಟ್ಟುಗಳಾಗಿ, ಹಾಲುಂಡಿ, ಕೆಲವೊಮ್ಮೆ ವಿಕೆಟ್ ಕೀಪರೂ ಇಲ್ಲದೇ
ಆಡೋ ಆಟಕ್ಕೆ ಕ್ರಿಕೆಟ್ಟು ಅಂತ
ನಾವು ಹೆಸರಿಟ್ಟುಕೊಂಡಿದ್ದಕ್ಕೂ ಗ್ರಾಮಾಂತರ ಆಟಗಳ ವಿನಾಶಕ್ಕೂ ಯಾವ
ಸಂಬಂಧವೋ ದೇವರಾಣೆ ಗೊತ್ತಿಲ್ಲ .
ಕ್ರಿಕೆಟ್ಟಿಗೆ
ಜನರಿಲ್ಲದ ದಿನ ಕ್ಯಾಚ್ ಕ್ಯಾಚ್
ಆಟ.. ಚೆಂಡನ್ನು ಎತ್ತರಕ್ಕೆ ಎಸಿದು ಹಿಡಿಯೋದು. ಯಾರು
ಎತ್ತರ ಎಸೀತಾರೆ ಅಂತ. ಮತ್ತೊಬ್ಬ
ಹಿಡಿಯದಂತೆ ಹೆಂಗೆ ಎತ್ತರ ಎಸಿಯೋದು..
ಹೀಗೆ ಅದೇ ಒಂದು ಖುಷಿ.
ಸ್ವಲ್ಪ ಹೆಚ್ಚು ಜನ ಸೇರಿದ್ರೆ
ಲಗೋರಿ. ಗರಟೆ ಚಿಪ್ಪು, ಸಗಣಿ
ಬೆರಣಿ, ಕಲ್ಲುಗಳು ಹೀಗೆ ಸಿಕ್ಕಿದ್ದನ್ನ ಪೇರಿಸಿ
ಲಗೋರಿ ಆಟ್ತಿದ್ವಿ. ಇದ್ರಲ್ಲೂ ಎರಡು ಮೂರು ಜನರ
ಟೀಮು. ಮಧ್ಯದಲ್ಲಿ ಒಂದು ಕಲ್ಲಗಳ ಪೇರಿಸಿದ
ಗೋಪುರ. ಅದರ ಎರಡೂ ಬದಿಗೆ
ಎರಡು ಟೀಮಿನ ಜನ. ಒಂದು
ಟೀಮಿನವರಿಗೆ ಕಲ್ಲ ಗೋಪುರಕ್ಕೆ ಗುರಿಯಿಟ್ಟು
ಹೊಡೆದು ಅದನ್ನು ಉರುಳಿಸಿ ಮತ್ತೆ
ಅದನ್ನು ಜೋಡಿಸೋದು ಗುರಿ.ಅದನ್ನ ತಡೆಯೋದು
ಮತ್ತೊಂದು ಟೀಮಿನೋರ ಗುರಿ. ಕಲ್ಲ
ಗೋಪುರಕ್ಕೆ ಗುರಿಯಿಟ್ಟು ಹೊಡೆಯೋಕೆ ಒಂದು ಟೀಮಿನ ಒಬ್ಬನಿಗೆ
ಮೂರು ಚಾನ್ಸು. ಮೂರು ಸಲವೂ
ಆ ಕಲ್ಲು ಗೋಪುರಕ್ಕೆ
ತಾಗಿ ಅದನ್ನು ಉರುಳಿಸಲಿಲ್ಲ ಅಂದ್ರೆ
ಆತ ಔಟು. ಟೀಮಿನ ಎಲ್ಲರೂ
ಔಟಾದರೆ ಟೀಮು ಔಟು. ಔಟ್
ಮಾಡೋಕೆ ಇನ್ನೂ ಹಲವು ನಿಯಮಗಳಿದ್ವು.
ಗೋಪುರಕ್ಕೆ ಅಂತ ಹೊಡೆಯುತ್ತಿದ್ದ ಬಾಲು
ಪಿಚ್ಚಾಗಿ (ನೆಲಕ್ಕೆ ಬಿದ್ದು ಪುಟಿದು)
ಮತ್ತೊಂದು ಕಡೆ ಹೋಗುತ್ತಿತ್ತಲ್ಲ. ಆ
ಬಾಲು ಮತ್ತೊಂದು ಸಲ ನೆಲಕ್ಕೆ ತಾಗೋದ್ರೊಳಗೆ
ಹಿಡಿದ್ರೆ ಬಾಲು ಎಸೆದವ ಔಟು.
ಬಾಲು ಗೋಪುರಕ್ಕೆ ತಾಗಿ ಬಂದಿದ್ರೂ ಎಸೆದವ
ಔಟೆ ! ಹಾಗಾಗಿ ತೀರಾ ಜೋರಾಗಿಯೋ
ನೆಲದ ಸಮಕ್ಕೋ ಗೋಪುರಕ್ಕೆ ಎಸೆಯೋ
ಹಲತರದ ಚಾಣಾಕ್ಷತನ ತೋರಿಸ್ತಿದ್ರು. ಒಂದೊಮ್ಮೆ ಗೋಪುರ ಬಿತ್ತು ಅಂದ್ಕೊಳ್ಳಿ
ಆಗ ಆಟದ ಅಸಲಿ ಗಮ್ಮತ್ತು.
ಎಸೆದ ಗುಂಪಿನೋರೆಲ್ಲಾ ದೂರ ಓಡ್ತಿದ್ರು. ಕಾಯೋ
ಗುಂಪಿನೋರು ಎಸೆಯೋ ಗುಂಪಿನೋರನ್ನ ಗುರಿಯಾಗಿಟ್ಟು
ಚೆಂಡಲ್ಲಿ ಹೊಡಿತಿದ್ರು. ಆ ಚೆಂಡು ಎಸೆಯೋ
ಗುಂಪಿನೋರಿಗೆ ಬಿದ್ರೆ ಅವ್ರು ಔಟ್.
ಹೀಗೆ ಎಸೆದ ಚೆಂಡನ್ನ ತಪ್ಪಿಸಿಕೊಳ್ಳೋದೆ
ಒಂದು ಮಜ. ಎಸೆದ ಚೆಂಡು
ಗುರಿ ತಪ್ಪಿ ಎಲ್ಲೋ ಹೋಗಿರ್ತಿತ್ತು.
ಅದನ್ನ ಆರಿಸಿ ತರೋದ್ರೊಳಗೆ ಮತ್ತೆ
ಚೆದುರಿದ್ದ ಕಲ್ಲನ್ನು ಗೋಪುರ ಮಾಡಬೇಕು. ಗೋಪುರ
ಮತ್ತೆ ರೆಡಿ ಆಯ್ತು ಅಂದ್ರೆ
ಮೊದಲ ಗುಂಪಿನೋರಿಗೆ ಒಂದು ಪಾಯಿಂಟ್. ಅಷ್ಟರೊಳಗೆ
ಬಾಲಿಂದ ಹೊಡೆದು ಅವರನ್ನ ಔಟ್
ಮಾಡೋದು ಕಾಯೋ ಗುಂಪಿನ ಕೆಲಸ..
ಕೆಲೋ ಸಲ ಅರ್ಧ ಕಟ್ಟೋದ್ರೊಳಗೆ
ಬಾಲು ಸಿಕ್ಕಿ ಹೊಡೆತ ತಪ್ಪಿಸಿಕೊಳ್ಳೋಕೆ
ಲಗೋರಿ ಗೋಪುರ ಬಿಟ್ಟು ಓಡೋದು
ಬಾಲಿನ ಹೊಡೆತ ತಪ್ಪಿಸಿಕೊಂಡ ನಂತರ
ನಮ್ಮ ಗುಂಪಿನ ಮತ್ತೊಬ್ಬರು ಲಗೋರಿ
ಕಟ್ಟೋದು.. ಹೀಗೆ ಅದೇ ಒಂದು
ಮಜ. ಬಾಲು ತೀರ ದೂರ
ಹೋಗೋದು ತಪ್ಪಿಸೋಕೇ ಎಸೆಯೋ ಗುಂಪಿನ ಪ್ರತಿಯೊಬ್ಬರ
ಹಿಂದೆ ಕಾಯೋ ಗುಂಪಿನ ಒಬ್ಬರನ್ನ
ನಿಲ್ಲಿಸೋದು ಅಥವಾ ಅಲ್ಲಲ್ಲಿ ನಿಲ್ಲಿಸೋದು
ಹೀಗೆ ಕಾಯೋ ಗುಂಪಿನೋರೂ ಗೆಲ್ಲೋಕೆ
ಹಲವು ತಂತ್ರಗಾರಿಕೆ ಅನುಸರಿಸ್ತಾ ಇದ್ರು.. ಒಂದು ತಂಡದ
ಎಲ್ಲಾ ಔಟಾದ ಮೇಲೆ ಮತ್ತೊಂದು
ತಂಡ ಎಸೆಯೋ ತಂಡವಾಗಿ ಮೊದಲಿದ್ದ
ತಂಡ ಕಾಯೋ ತಂಡವಾಗಿ ಬದಲಾವಣೆ.
ಮೊದಲಿನ ತಂಡದ ಪಾಯಿಂಟುಗಳನ್ನ ಮೀರಿಸಿದ್ರೆ
ಇವ್ರು ಗೆದ್ದಂತೆ. ಇಲ್ಲದಿದ್ದರೆ ಅವ್ರು ಗೆದ್ದಂತೆ.. ಒಟ್ನಲ್ಲಿ
ಈ ಹೊಡೆತ, ತಪ್ಪಿಸಿಕೋ,
ಓಡು, ಕಟ್ಟು.. ಇವೇ ಒಂದು
ಮಜ.
ಮಲೆನಾಡು
ಅಂದ್ರೆ ಮಳೆನಾಡು. ಕೆಲವೊಮ್ಮೆ ಭಯಾನಕ ಮಳೆ ಹೊಯ್ದು
ಕ್ರಿಕೆಟ್ಟು, ಕ್ಯಾಚು, ಲಗೋರಿ ಯಾವ್ದೂ
ಸಾಧ್ಯವಾಗ್ತಿರಲಿಲ್ಲ. ಆಗ ಸೆಟ್ಟು ಅಂತ
ಆಡ್ತಿದ್ವಿ. ಇಸ್ಪೀಟು ಗರಿಗಳ ಸೆಟ್ಟು
ಗೊತ್ತಿರಬಹುದು ಕೆಲವರಿಗೆ.ಆದ್ರೆ ನಾವಾಡ್ತಿದ್ದ ಸೆಟ್ಟು
ಸ್ವಲ್ಪ ಬೇರೆ ತರ . ರಾಜ
, ರಾಣಿ, ಕಳ್ಳ, ಪೋಲಿಸ್ ಅಂತ
ನಾಲ್ಕು ಹೆಸರು ನಾಲ್ಕು ಸಲ
ಪೇಪರ್ ಚೀಟಿಗಳಲ್ಲಿ ಬರೆದು ಅದನ್ನು ಕಲೆಸಿ
ಎಸೆಯೋದು. ಪ್ರತಿಯೊಬ್ಬರೂ ನಾಲ್ಕು ಚೀಟಿ ಎತ್ತಿಕೊಳ್ಳೋದು.
ನಾಲ್ಕು ರಾಜ, ನಾಲ್ಕು ರಾಣಿ
ಹೀಗೆ ನಾಲ್ಕು ಒಂದೇ ತರದ್ದು
ಸಿಕ್ಕಿದರೆ ಸೆಟ್ಟು ಅಂತ. ಸಿಗೋವರೆಗೆ
ಇಸ್ಪೀಟಿನ ತರ ಒಂದು ಚೀಟಿ
ಎಸೆದು ಮತ್ತೊಂದು ಆರಿಸಿಕೊಳ್ಳೋ ಪ್ರದಕ್ಷಿಣಾ/ಅಪ್ರದಕ್ಷಿಣಾ ಮುಂದುವರಿಕೆಯ ಕ್ರಮ ನಡೆಯುತ್ತಿತ್ತು. ಇದಕ್ಕೆ
ಬೇಕಾದಷ್ಟು ನಾಲ್ಕು ಜನ ಇಲ್ದೇ
ಇಬ್ರೇ ಇದ್ರೆ ಬೆಂಕಿಪೆಟ್ಟಿಗೆಯ ಸೆಟ್ಟೂ
ಆಡುತ್ತಿದ್ವಿ. ಇದೊಂತರ ಮಜ. ಬೆಂಕಿಪೆಟ್ಟಿಗೆಯ
ಮುಂದಿನ ಕವರನ್ನು ಹರಿದಿಟ್ಟುಕೊಳ್ಳೋದು. ಐನೂರ
ಒಂದು, ಸನ್.. ಹೀಗೆ ಹಲವು
ತರದ ಬೆಂಕಿ ಪೊಟ್ಟಣಗಳು ಬರ್ತಿದ್ದವು.
ಕೆಲವು ಕಂಪೆನಿಗಳೊದ್ದು ಹಲವು ಚಿತ್ರಗಳಿರ್ತಿದ್ವು. ಒಬ್ಬ
ಒಂದು ಹಾಕೋದು.ಅದ್ರ ಮೇಲೆ
ಮತ್ತೊಬ್ಬ ಮತ್ತೊಂದು ಹಾಕೋದು. ನೋಡಿ ಹಾಕುವಂತಿಲ್ಲ
ಮತ್ತೆ. ತಮ್ಮ ಕೈಲಿದ್ದದರಲ್ಲಿ ಮೇಲೆ
ಬಂದಿದ್ದು ಹಾಕಬೇಕು ಅಷ್ಟೆ. ಮೊದಲು
ಹಾಕಿದ್ದೇ ಎರಡನೆಯವ ಹಾಕಿದ್ರೆ ಎರಡನೆಯ
ಗೆದ್ದಂಗೆ. ಅಂದರೆ ಐನೂರ ಒಂದರ
ಮೇಲೆ ಅದೇ ಚಿತ್ರದ ಐನೂರ
ಒಂದು ಹಾಕಿದ್ರೆ ಎರಡನೆಯವ ಗೆದ್ದಂಗೆ. ಎರಡನೆಯವನ
ಚಿತ್ರದ ಮೇಲೆ ಅದೇ ಹಾಕಿದ್ರೆ
ಮೊದಲನೆಯ ಗೆದ್ದಂಗೆ. ಅಲ್ಲಿಯವರೆಗೆ ಇಬ್ಬರೂ ಹಾಕಿದ ಬೆಂಕಿಪೆಟ್ಟಿಗೆಯ
ಕವರುಗಳು ಗೆದ್ದವನಿಗೆ. ಈ
ಆಟದ್ದೇ ಸ್ವಲ್ಪ ಬೇರೆ ರೂಪವನ್ನು
ಪಟ್ಟಣಗಳಲ್ಲಿ w.w.F ತಾರೆಗಳ ಚಿತ್ರಗಳೊಂದಿಗೂ, ಕ್ರಿಕೆಟ್ಟಿಗರ
ಸ್ಕೋರುಗಳಿರುತ್ತಿದ್ದ ಕಾರ್ಡುಗಳೊಂದಿಗೂ ಆಡುತ್ತಿದ್ದರು.
ಬಬಲ್ಗಮ್ ಜೊತೆ ಅವೆಲ್ಲಾ ಫ್ರೀ
ಬರುತ್ತಿದ್ದರೂ ಹಳ್ಳಿಗಳಲ್ಲಿದ್ದ ನಮಗೆ ಅಷ್ಟೆಲ್ಲಾ ಬಬಲ್ಗಮ್
ಯಾರು ಕೊಡಿಸಬೇಕು ? ಒಟ್ನಲ್ಲಿ ಇದ್ರಲ್ಲೇ ಆಡುತ್ತಾ ಖುಷಿಯಾಗಿದ್ವಿ.
ನಮ್ಮ ಆಟಗಳ ಬಗ್ಗೆ ಹೇಳ್ತಾ
ಹೇಳ್ತಾ ಗೋಲಿ, ಬುಗುರಿಗಳ ಬಗ್ಗೆ
ಹೇಳ್ದೇ ಇದ್ರೆ ಹೇಗೆ ? ಮೊದಲ
ಬುಗುರಿ ತಗೊಂಡು ಅದ್ನ ಮನೆ
ಒಳಗೆಲ್ಲಾ ಬಿಡ್ಬೇಡ ನೆಲ ಹಾಳಾಗುತ್ತೆ
ಅಂತ ಬೈಸ್ಕೊಂಡಿದ್ರಿಂದ ಹಿಡಿದು ಬುಗುರಿ ತಿರುಗಿಸೋ
ಮಜ, ಅದ್ನ ತಿರುಗಿಸ್ತಾ ತಿರುಗಿಸ್ತಾ
ಹಾಗೇ ಹಗ್ಗದಲ್ಲಿ ಮೇಲೆತ್ತಿ ಕೈಮೇಲೆ ಬಿಟ್ಕೊಂಡು ತಿರುಗಿಸೋಕೆ
ಮಾಡ್ತಿದ್ದ ಪ್ರಯತ್ನಗಳು, ಬುಗುರಿಯ ಮೊಳೆ ಚೂಪ
ಮಾಡೋದು, ತಿರುತ್ತಿದ್ದ ಬುಗುರಿಗೆ ಮತ್ತೊಂದರಿಂದ ಗುನ್ನ ಹುಡೆಯೋದು.. ಹೀಗೆ
ಅದ್ರದ್ದೇ ಲೋಕ. ಓದ್ಕೊಳೋಕೆ ಗೆಳೆಯನ
ಮನೆಗೆ ಹೋಗ್ತೀನಿ ಅಂತ ಹೇಳಿ ಹೋದ
ಹುಡುಗ ರಸ್ತೆ ಬದಿಯಲ್ಲಿ ಗೋಲಿ
ಆಡೋದ್ನ ನೋಡಿದ ಅವರಪ್ಪ ಮನೆಗೆ
ಬಂದಾಗ ಚೆನ್ನಾಗಿ ಉಗಿದಿದ್ದೂ ಮರೆಯಗಾಗದ ನೆನಪು.. ಹಿಹಿ.. ಹೀಗೆ
ಹಲತರ ನೆನಪುಗಳು ಬಾಲ್ಯ ಅಂದ್ರೆ. ಅಂದಂಗೆ
ಗ್ರಾಮಾಂತರ ಕ್ರೀಡೆಗಳು ಸತ್ತೋಗ್ತಾ ಇವೆ ಅನ್ನೋರಿಗೆ ಉತ್ತರ
ಅಂತಲ್ಲ. ಆದ್ರೂ ಯಾಕೂ ನಮ್ಮೂರ
ಹತ್ರ ಪ್ರತೀವರ್ಷ ಕ್ರಿಕೆಟ್ ಟೂರ್ನಿಮೆಂಟಿನಂತೆಯೇ ನಡೆಯೋ ಚಿನ್ನಿ-ದಾಂಡು
ಟೂರ್ನಿಗಳು ನೆನಪಾಗುತ್ತೆ..(ಈ ಬಾರಿ ಹೋದಾಗ
ತೆಗೆದಿದ್ದ ಚಿತ್ರಕ್ಕೆ ಹುಡುಕುತ್ತಿದ್ದೇನೆ :-) ) ಬುಗುರಿ, ಗೋಲಿ ಆಡೋ
ಹುಡುಗ್ರು ಕಮ್ಮಿ ಆಗ್ತಾ ಇದ್ದಾರೆ
ಅವು ಸಾಯ್ತಾ ಇದೆ ಅನ್ನೋ
ಮಾತಿಗೆ ಏನು ಹೇಳ್ಬೇಕು ಅಂತ
ಗೊತ್ತಾಗ್ತಾ ಇಲ್ಲ. ಅಪ್ಪ ಇಡೀ
ದಿನ ಕ್ರಿಕೆಟ್ ನೋಡ್ತಾ ಕೂತು, ತನ್ನ
ಮಗ ಗೋಲಿ, ಬುಗುರಿ, ಚಿನ್ನಿ
ದಾಂಡು ಆಡೋದು ತನ್ನ ಸ್ಟೇಟಸ್ಸಿಗೆ
ಕಡಿಮೆ ಅಂತ ಭಾವಿಸಿರುವಾಗ ಅದೇ
ದಿನ ಸಂಜೆ ಬ್ಲಾಗಲ್ಲೋ, ಫೇಸ್ಬುಕ್ಕಲ್ಲೋ
, ಪತ್ರಿಕೆಯಲ್ಲೋ ಗ್ರಾಮಾಂತರ ಕ್ರೀಡೆಗಳು ಸಾಯ್ತಾ ಇದೆ ಅಂತ
ಹೇಳಿಕೆ ಕೊಡೋದು ವಿಪರ್ಯಾಸ ಅನಿಸುತ್ತೆ..
"ಫೆರಾರಿ ಕೀ ಸವಾರಿ"ಯಲ್ಲೂ
ಇದೇ ತರದ್ದಲ್ಲದ್ದಿದ್ದರೂ ಕ್ರೀಡೆ, ಜೀವನಗಳ ನಡುವಿನ
ಸಂಬಂಧ, ವ್ಯಂಗ್ಯಗಳ ಲೇಪ ಇದ್ದಿದ್ರಿಂದ, ಅದರಲ್ಲೂ
ಒಬ್ಬ ಹುಡುಗನ ಬಾಲ್ಯದ ಕನಸುಗಳು
ಇದ್ದಿಂದ್ರಿದಲೋ ಏನೋ ಮತ್ತೆ ನನ್ನ
ನೆನಪುಗಳು ಹಸಿರಾದವು. ಆ ಫಿಲ್ಮಿನ ಬಗ್ಗೆ
ಬರೆಯಬೇಕೆಂಬ ಭಾವಕ್ಕಿಂತಲೂ ಕಟ್ಟೆಯೊಡೆದ ನೀರಿನಂತೆ ಹರಿದ ಬಾಲ್ಯದ ನೆನಪುಗಳೇ
ಹೆಚ್ಚಾದ್ದರಿಂದ ಲೇಖನವನ್ನೇ ಬಾಲ್ಯಕ್ಕೆ ಸಮರ್ಪಿಸಿದ್ದೇನೆ. ಅಂದ ಹಾಗೆ ಆ
ಫಿಲ್ಮಿನಲ್ಲಿ ಕ್ರಿಕೆಟ್ಟಿಗೂ ಫೆರಾರಿಗೂ ಏನು ಸಂಬಂಧ, ಫೆರಾರಿಗೂ
ಬಾಲ್ಯಕ್ಕೂ ಏನು ಸಂಬಂಧ ಎಂಬೆಲ್ಲ
ಸಂದೇಹಗಳೇನಾದ್ರೂ ಎದ್ದಿದ್ರೆ ಸದ್ಯಕ್ಕೆ ಕ್ಷಮಿಸಿ.. ಬಗ್ಗೆ ಏನೂ ಹೇಳದೆ
ಸದ್ಯಕ್ಕೆ ಪರಾರಿ.. ಇನ್ನೊಮ್ಮೆ ಭೇಟಿಯಾದಾಗ
ನೋಡೋಣವಂತೆ..
No comments:
Post a Comment