Welcome to Prashantavanam
Sunday, December 15, 2013
ಹೊಗೆ ಸುರುಳಿಗಳ ನಡುವೆ
ಒತ್ತೊತ್ತರಿಸಿ ಬರುತ್ತಿದ್ದ ಕೆಮ್ಮು. ಕೆಮ್ಮಿದಾಗೆಲ್ಲಾ ಒತ್ತರಿಸಿ ಬರೋ ಕಫ. ಕೆಮ್ಮಿ ಕೆಮ್ಮಿ ತತ್ತರಿಸಿ ಹೋಗಿರೋ ಗಂಟಲಿಂದ ಪ್ರತೀ ಉಗುಳಿಗೂ ರಕ್ತಲೇಪ. ಸುಮ್ಮನೇ ಒಮ್ಮೆ ತನ್ನ ಕೋಣೆಯತ್ತ ದೃಷ್ಠಿ ಬೀರಿದ. ಚದುರಿ ಬಿದ್ದಿರೋ ಬುಕ್ಕುಗಳು, ಮಡಚದೇ ಒಗೆದಿರೋ ಬಟ್ಟೆ, ತುಂಬಿ ಹೋಗಿರೋ ಧೂಳು, ದೇವರೆಂದು ಇಟ್ಟುಕೊಂಡಿದ್ದ ಪಟದ ಮೇಲೇ ಕಟ್ಟಿದ್ದ ಜೇಡರ ಬಲೆ, ಎಮ್. ಆರ್. ಎಪ್ಫಿನ ತೆಂಡೂಲ್ಕರಿನ ಅರ್ಧ ಕಿತ್ತು ದಿನಾ ಅಂಟಿಸಬೇಕು ಇಲ್ಲಾ ಕಿತ್ತೊಗೆಯಬೇಕು ಅಂತಿರೋ ಪೋಸ್ಟರು.. ಹೀಗೆ ಅಧ್ವಾನವಾಗಿರೋ ವಸ್ತುಗಳೆಲ್ಲಾ ಭವ್ಯ ಭೂತವನ್ನು, ಗೊತ್ತುಗುರಿಯಿಲ್ಲದೇ ಸಾಗುತ್ತಿರುವ ವಾಸ್ತವವನ್ನು ಬಿಂಬಿಸುವಂತಿದ್ದವು. ಬೆಳಿಗ್ಗೆ ಎದ್ದೊಡನೆಯೇ ರೆಡಿಯಾಗಿ ಆಫೀಸಿಗೆ ದೌಡಾಯಿಸಿದರೆ ಬರುತ್ತಿದ್ದುದು ರಾತ್ರಿಯೇ. ಬಂದ ಮೇಲೂ ಮತ್ತೇನೋ ಕೆಲಸವೆಂದು ಕಂಪ್ಯೂಟರ್ ತೆಗೆದರೆ ರಾತ್ರಿ ಕಣ್ಣು ಮುಷ್ಕರ ಹೂಡೋ ತನಕ ಆ ಡಬ್ಬಿ ಬಂದಾಗುತ್ತಿರಲಿಲ್ಲ. ಅಷ್ಟೇ ಆಗಿದ್ದರೆ ಈ ಗತಿ ಬರುತ್ತಿರಲಿಲ್ಲವೇನೋ. ಟೆನ್ಷನ್ನಿಗೆಂದು ಶುರುವಿಟ್ಟುಕೊಂಡ ಹೊಗೆಯ ಸಂಗವೇ ಇಂದು ಬಿಡಲಾರದ ಅಂಟಾಗಿ ಜೀವ ತಿನ್ನುತ್ತಿದೆ. ಎಂದಿನಂತೆ ಟಾರಸಿಯ ಮೇಲೆ ಹತ್ತಿ ಸುರುಳಿ ಸುರುಳಿ ಹೊಗೆ ಬಿಡಲು ಪ್ರಾರಂಭಿಸಿದವನಿಗೆ ಭೂತದ ನೆನಪುಗಳು ಮರುಕಳಿಸತೊಡಗಿದವು.
ಕಾಲೇಜು ದಿನಗಳವು. ಕಾಲೇಜು ಜೀವನ ಬಂಗಾರದ ಜೀವನ ಮಗಾ. ಇಲ್ಲಿ ಎಂಜಾಯ್ ಮಾಡ್ದೇ ಯಾವಾಗ ಮಾಡ್ತೀಯ ಅಂತಿದ್ದ ಸ್ನೇಹಿತರು, ನಮ್ಮ ಬ್ರಾಂಚಿನಲ್ಲಿದ್ದು ಈ ತರ ಹವ್ಯಾಸಗಳಿಲ್ದೇ ಇದ್ದರೇ ಬ್ರಾಂಚಿಗೇ ಅವಮಾನ ಅಂತಿದ್ದೋರು, ಒಮ್ಮೆ ದಮ್ಮು ಹೊಡ್ದು ನೋಡೋ ಏನೂ ಆಗಲ್ಲ ಅಂತಿದ್ದೋರು ಎಲ್ಲಾ ಇದ್ದರೂ ನಿರ್ಲಿಪ್ತನಾಗಿ ಉಳಿದಿದ್ದ ಈತ. ಸಿಗರೇಟಿಗೆ ದಾಸನಾಗಿದ್ದ ಅಣ್ಣ ಅದಕ್ಕೆ ದುಡ್ಡು ಹೊಂದಿಸಲಾಗದೇ ಅದನ್ನು ಬಿಡಲೂ ಆಗದೇ ಒದ್ದಾಡುತ್ತಿದ್ದದನು ಕಣ್ಣಾರೆ ಕಂಡಿದ್ದ ಇವ ತನ್ನ ಜೀವಮಾನದಲ್ಲಿ ಅದಕ್ಕೆ ಕೈ ಹಚ್ಚಬಾರದೆಂಬ ನಿರ್ಣಯ ಮಾಡಿದ್ದ. ಸಿಗರೇಟು ಬಿಡಬೇಕೆಂದು ಇವನಣ್ಣ ಮಾಡಿದ್ದ ಪ್ರಯತ್ನಗಳು ಒಂದಲ್ಲಾ ಎರಡಲ್ಲ. ಎಲೆಕ್ಟ್ರಾನಿಕ್ ಸಿಗರೇಟು, ಸಿಗರೇಟ್ ಬಿಡಿಸುವಂತಹ ಚೂಯಿಂಗ್ ಗಮ್ಮು, ಮಾತ್ರೆ ಹೀಗೆ ಹಲವೆಲ್ಲಾ ಪ್ರಯತ್ನ ಪಟ್ಟೂ ಅದರಿಂದ ಸಾಧ್ಯವಾಗದೇ ಕೈ ಬಿಟ್ಟಿದ್ದ. ಆ ಚೂಯಿಂಗ್ ಗಮ್ಮು ಹೇಗಿರುತ್ತೆ ಅಂತ ಒಮ್ಮೆ ಬಾಯಿಗೆ ಹಾಕಿಕೊಂಡವನಿಗೆ ಗಂಟಲೆಲ್ಲಾ ತುರಿಕೆ ಶುರುವಾಗಿ ಅಸಾಧ್ಯ ವೇದನೆ ಶುರುವಾಗಿ ಇದಕ್ಕಿಂತ ಸಿಗರೇಟಿನಿಂದ ಆರೋಗ್ಯದ ಮೇಲಾಗೋ ದುಷ್ಪರಿಣಾಮಗಳೇ ಮೇಲೇನೋ ಅನಿಸುತ್ತಿತ್ತು. ಈ ವೇದನೆಗಳ ಹೊರತಾಗಿಯೂ ಸಿಗರೇಟು ಬಿಡಲು ನಡೆಸುತ್ತಿದ್ದ ಅಣ್ಣನ ಪ್ರಾಮಾಣಿಕ ಪ್ರಯತ್ನದ ಮೇಲೆ ಹೆಮ್ಮೆಯೂ ಮೂಡುತ್ತಿತ್ತು. ಬಸ್ಸಿನಲ್ಲಿ ಕಂಡ "ಒಂದು ತಿಂಗಳಲ್ಲಿ ಸಿಗರೇಟು ಬಿಡಿಸಿ" ಎಂಬ ಜಾಹಿರಾತಿನಿಂದ , ಹಾದಿಯ ಹಕೀಮರ ಜೌಷಧಿಯವರೆಗೆ, ನೆಟ್ಟಿನಲ್ಲಿ "ಸಿಗರೇಟು ಬಿಡೋದು ಹೇಗೆ" ಎಂಬ ಮಾಹಿತಿಗಳಿಂದ ಬಿಟ್ಟವರ ಬ್ಲಾಗುಗಳವರೆಗೆ ಎಲ್ಲಾ ತಡಕಿದರೂ ಪರಿಣಾಮ ಮಾತ್ರ ನಗಣ್ಯವಾಗಿತ್ತು. ಚಿತ್ರಗಳ ಆರಂಭದಲ್ಲಿ ತೋರಿಸೋ ಒಬ್ಬ ಯುವಕನ ಚಿತ್ರ ನೋಡಿ ತನ್ನಣ್ಣನಿಗೆ ಇಂತಹ ಗತಿ ಬರಬಹುದಾ ಒಂದು ದಿನ ಎಂದು ಎಷ್ಟೋ ದಿನ ಹೆದರಿ ರಾತ್ರಿಯೆಲ್ಲಾ ನಿದ್ರೆಗೆಟ್ಟಿದ್ದನಿವನು.ವಿಧಿಯ ಹಾಸ್ಯ ನೋಡಿ. ಅಂದು ಸ್ನೇಹಿತರ ಅಷ್ಟೆಲ್ಲಾ ಆಮಿಷಗಳ ನಡುವೆಯೂ ಕೆಡದಿದ್ದ ಈತನ ಧೃಡಚಿತ್ತ ಕೆಲಸಕ್ಕೆ ಸೇರಿ ಕೆಲವೇ ದಿನಗಳಲ್ಲಿ ಕದಡಿಹೋಗಿತ್ತು !.
ಆಫೀಸಿಗೆ ಕಾಲಿಟ್ಟ ಮೊದಲ ದಿನಗಳವು. ಮೊದಲ ದಿನ ಆಫೀಸಿನ ಬಗ್ಗೆ ಪರಿಚಯಿಸುತ್ತಿದ್ದ ಸಹೋದ್ಯೋಗಿ ಆಫೀಸಲ್ಲಿ ಲೈಬ್ರರಿ ಇಲ್ಲಿದೆ,ಕ್ಯಾಂಟೀನ್ ಆ ಮೂಲೆಯಲ್ಲಿ, ಸ್ಮೋಕಿಂಗ್ ಜೋನ್ ಟೆರೇಸಿನ ಮೇಲೆ.. ಎಂದ ಓಹ್, ಸ್ಮೋಕಿಂಗ್ ಜೋನ್ ಅಂತ ಬೇರೆ ಇರತ್ತಾ ? ಅಂತ ಆಶ್ಚರ್ಯಗೊಂಡಿದ್ದ ಆತ ಕೆಲ ದಿನಗಳ ನಂತರ ಯಾವುದೋ ಕೆಲಸದ ಮೇಲೆ ಕೊನೆಯ ಪ್ಲೋರಿನಲ್ಲಿದ್ದವ ಅಲ್ಲಿ ಮೊಬೈಲ್ ನೆಟ್ವರ್ಕು ಸಿಗದಿದ್ದ ಕಾರಣ ನೆಟ್ವರ್ಕು ಅರಸಿ ಟೆರೇಸಿಗೆ ಬಂದಿದ್ದ. ನೋಡಿದರೆ ಯುವಕರಷ್ಟೇ ಅಲ್ಲ ಯುವತಿಯರೂ, ಅಂಕಲ್ ಆಂಟಿಯರು ಸಾರಿ ಬಾಸ್ಗಳು ! ಪೈಪೋಟಿಯ ಮೇಲೋ ಎಂಬಂತೆ ಹೊಗೆ ಬಿಡುವುದರಲ್ಲಿ ಮಗ್ನರಾಗಿದ್ದರು. ಒಬ್ಬೊಬ್ಬರ ಮೊಗದ ಮೇಲೂ ಪ್ರಪಂಚದ ಎಲ್ಲಾ ಚಿಂತೆಗಳು ಇವರ ಮೈಮೇಲೆ ಬಿದ್ದಂತಾ ಲುಕ್ಕು ! ಅಣ್ಣನ ಒದ್ದಾಟ ನೆನಪಾಗಿ ಆ ಧೂಮ್ರವ್ಯೂಹದ ಮಧ್ಯೆ ನಿಲ್ಲಲಾಗದೇ ಕೆಳಗೆ ಬಂದುಬಿಟ್ಟಿದ್ದ ಈತ. ಸಿಗರೇಟೆಂದರೆ ಬರೀ ಹುಡುಗರು, ಪೋಲಿಗಳೆಂಬ ಈತನ ಭ್ರಮೆ ತನ್ನ ಆಫೀಸಿನ ಸುಂದರಿಯರು ಅಂದುಕೊಂಡಿದ್ದವರ ಕೈಯಲ್ಲೆಲ್ಲಾ ಕಂಡ ಸಿಗರೇಟುಗಳಿಂದ ಸುಟ್ಟು ಬೂದಿಯಾಗಿತ್ತು. ತಾವು ಹುಡುಗರಿಗಿಂತ ಯಾವ ರೀತಿಯಲ್ಲೂ ಕಮ್ಮಿಯಿಲ್ಲವೆಂಬ ಭಾವದಿಂದ ಅವರು ಹೀಗೆ ಮಾಡುತ್ತಿರಬೇಕೆಂದು ಒಮ್ಮೆ ಅನಿಸಿದರೆ ಈ ನಿಕೋಟಿನ್ನಿನ ಅಂಟೇ ಹೀಗೆ. ಒಮ್ಮೆ ಅಂಟಿಕೊಂಡರೆ ಮತ್ತೆ ಬಿಡಿಸಲಾಗದೆಂದು ಮತ್ತೊಮ್ಮೆ ಅನಿಸುತ್ತಿತ್ತು.
ಸಖತ್ ವರ್ಕ್ ಮಾಡ್ತಾನೆ ಹುಡುಗ ಅಂತ ಎಲ್ಲರ ಮೆಚ್ಚುಗೆ ಗಳಿಸಿದ ಮೊದಲೆರೆಡು ತಿಂಗಳುಗಳಲ್ಲಿ. ದಿನ ಕಳೆಯುತ್ತಿದ್ದಂತೆ ಮಹತ್ವದ ಜವಾಬ್ದಾರಿಗಳು ಹೆಗಲ ಮೇಲೆ ಬೀಳತೊಡಗಿದವು. ಸಂಜೆ ಐದಕ್ಕೆ ಮನೆಗೆ ಬರುತ್ತಿದ್ದವನು ಏಳು, ಎಂಟು ಒಂಬತ್ತಾಗುತ್ತಾಗುತ್ತಿತ್ತು. ಶನಿವಾರ, ಭಾನುವಾರಗಳು ಆಫೀಸಿಗೆ ಹೋಗಬೇಕಾಯಿತು. ಬೆಳಗ್ಗೆ ಮಾಡುತ್ತಿದ್ದ ಯೋಗ, ಧ್ಯಾನ, ಓಟ, ಸಂಜೆಯ ಬ್ಯಾಡ್ಮಿಂಟನ್ನುಗಳೆಲ್ಲಾ ಟೈಂ ವೇಸ್ಟು. ಆ ಸಮಯವನ್ನು ಆಫೀಸಿಗೆ ಉಪಯೋಗಿಸಿದರೆ ತನ್ನ ವೃತ್ತಿ ಜೀವನದಲ್ಲಿ ಎಷ್ಟು ಮುಂದೆಬರಬಹುದು ಅಂತ ಯೋಚಿಸತೊಡಗಿದ. ಸ್ನೇಹಿತರಿಗೆ ಮೆಸೇಜಿಸುವುದು, ಫೇಸ್ಬುಕ್ಕು, ವಾಟ್ಸಾಪುಗಳೆಲ್ಲಾ ಕಾಲಹರಣಗಳಂತೆ ಕಾಣತೊಡಗಿದವು. ಸ್ನೇಹಿತರು ಹೋಗಲಿ ಮನೆಯವರು ಕಾಲ್ ಮಾಡಿದರೂ ಮಾತನಾಡದಷ್ಟು ಬಿಸಿಯಾಗಿಬಿಟ್ಟ ಹುಡುಗ. ಈ ಒಂಟಿ ಬಾಳು ನಾಲ್ಕೈದು ತಿಂಗಳು ಚೆನ್ನಾಗೇ ನಡೆಯಿತು. ಇದ್ದ ಬದ್ದ ಪ್ರಶಸ್ತಿಗಳೆಲ್ಲಾ ಈತನನ್ನರಸಿ ಬರತೊಡಗಿದವು. ಆದರೆ ಅದರೊಂದಿಗೆ ತಾನು ಸದಾ ಮುಂದೇ ಇರಬೇಕೆಂಬ ಗೀಳು ಈತನನ್ನಾವರಿಸಿಕೊಂಡಿತು. ಸಣ್ಣ ಸೋಲನ್ನು, ಮಾತನ್ನೂ ಸಹಿಸಲಾಗುತ್ತಿರಲಿಲ್ಲ. ಈಗಾಗಲೇ ಎಲ್ಲರಿಂದ ದೂರಾಗಿ ಒಂಟಿಯಾಗಿದ್ದರಿಂದ ಈತನ ಸಿಟ್ಟು, ನೋವುಗಳನ್ನು ತೋಡಿಕೊಳ್ಳಲೂ ಯಾರೂ ಸಿಗದೇ ಅದು ಈತನನ್ನೇ ಸುಡತೊಡಗಿತು. ಆಗ ಕಂಡ ಸಾಥಿಯೇ ಸಿಗರೇಟು. ಸಿಗರೇಟು ಹೊಗೆಯನ್ನು ಉಫ್ ಎಂದು ಬಿಡುತ್ತಿದ್ದರೆ ಮನದ ಸಿಟ್ಟು, ನೋವುಗಳನ್ನೆಲ್ಲಾ ತೋಡಿ ತೋಡಿ ಹೊರಕ್ಕೆಸೆದಂತಾಗಿ ಕ್ಷಣಿಕ ಸಮಾಧಾನವಾದರೂ ಸಿಗುತ್ತಿತ್ತು. ಮುಂಚೆ ತನಗೆ ಸಿಗುತ್ತಿದ್ದ ಯೋಗ, ಪ್ರಾಣಾಯಾಮಗಳಲ್ಲಿನ ಸಮಾಧಾನಕ್ಕೆ ಹೋಲಿಸಿದರೆ ಇದು ಏನೂ ಅಲ್ಲವೆಂದು ಕೆಲವೊಮ್ಮೆ ಅನಿಸಿದರೂ ಕೊನೆಗೆ ಇದರಲ್ಲೇ ತೃಪ್ತನಾಗಿಬಿಡುತ್ತಿದ್ದ. ದಿನ ಕಳೆದಂತೆ ಚಿಂತೆಗಳು ಹೆಚ್ಚಾಯ್ತು. ಅದರಂತೆ ಸಿಗರೇಟುಗಳ ಸಂಖ್ಯೆಯೂ. ಆಫೀಸಿನ ಚೈನ್ ಸ್ಮೋಕರ್ಗಳಲ್ಲಿ, ಸ್ಮೋಕಿಂಗ್ ಜೋನಿನ ಕಾಯಂ ಸದಸ್ಯರಲ್ಲಿ ಒಬ್ಬನಾಗಿಬಿಟ್ಟ.
ಹೀಗಿರುವಾಗ ಒಮ್ಮೆ ಇದ್ದಕ್ಕಿದ್ದಂತೆ ಸೀತ, ಕೆಮ್ಮು ಕಾಡತೊಡಗಿತು ಇವನಿಗೆ. ಒಂದು ದಿನ ಆಫೀಸಿಗೇ ಹೋಗಲಾಗದಂತೆ ಮಲಗಿ ಬಿಟ್ಟ. ಹುಷಾರಿಲ್ಲ ಎಂದು ಶಾಲಾದಿನಗಳಿಂದ ಹಿಡಿದು ಯಾವತ್ತೂ ರಜೆ ಹಾಕದವನಿಗೆ ತನ್ನ ಮೇಲೇ ಬೇಸರವಾಗತೊಡಗಿತ್ತು. ದಿನಾ ಆರಕ್ಕೆ ಏಳುತ್ತಿದ್ದವನು ಇಂದು ಹತ್ತಕ್ಕೆ ಎದ್ದಿದ್ದ. ತನ್ನ ಎಲ್ಲ ಮಿಸ್ ಮಾಡ್ಕೊತ್ತಿರಬಹುದು ಎಂದು , ಒಂದು ಹದಿನೈದಾದರೂ ಕಾಲುಗಳ ನಿರೀಕ್ಷೆಯಲ್ಲಿದ್ದವನಿಗೆ ನಿರಾಸೆ. ಆಫೀಸಿನಿಂದ ಒಂದೂ ಕಾಲಿಲ್ಲ. ತನ್ನಿಂದ ಕೆಲಸ ಆಗಬೇಕೆಂದಾಗೆಲ್ಲಾ ಮಧ್ಯರಾತ್ರಿಗೂ ಫೋನ್ ಮಾಡುತ್ತಿದ್ದವರು ಇಂದು ಹುಷಾರಿಲ್ಲದೇ ಮಲಗಿದರೂ ವಿಚಾರಿಸಲು ಫೋನ್ ಮಾಡಿಲ್ಲವಲ್ಲ ಎಂಬ ಬೇಸರ ಕಾಡುತ್ತಿತ್ತು. ಬಂದಿದ್ದು ಮೂರು ಕಾಲು. ಮೂರೂ ಅಮ್ಮನದು. ಇತ್ತೀಚೆಗೆ ಅವಳು ಫೋನ್ ಮಾಡಿದಾಗೆಲ್ಲಾ ತಾನು ಉತ್ತರಿಸುತ್ತಿದ್ದ ರೀತಿ , ಉಡಾಫೆ ನೆನೆದು ಬೇಸರವಾಯ್ತು. ಅವಳಿಗೆ ತಾನಲ್ಲದೆ ಇನ್ನು ಯಾರಿದ್ದಾರೆ.. ತಾನು ಹೀಗೆ ವರ್ತಿಸಬಾರದಿತ್ತು ಎಂದು ನೆನೆದು ಕಣ್ಣಂಚಲ್ಲಿ ನೀರು ಜಿನುಗತೊಡಗಿತು. ಹಾಗೇ ಫೋನ್ ಮಾಡಿದ ಅಮ್ಮನಿಗೆ ಮಲಗಿದ್ದಲ್ಲಿಂದಲೇ.. ಬುಸಿಯಿದ್ದಿಯೇನೋ ಅಲ್ವೇನೋ, ಆಫೀಸಲ್ಲಿದ್ದೀಯ ಅಂದ್ಲು ಅಮ್ಮ. ಇಲ್ಲಮ್ಮಾ ಹೇಳು ಅಂದ ಈತ. ಹುಟ್ಟಿದ ಹಬ್ಬದ ಶುಭಾಶಯಗಳು ಕಣೋ ಮಗನೇ. ಆ ದೇವರು ನನ್ನ ಆರೋಗ್ಯ, ಐಶ್ವರ್ಯವನ್ನೂ ನಿನಗೇ ಕೊಡಲಿ ಅಂದರು ಅಮ್ಮ. ತನ್ನ ಹುಟ್ಟಿದ ದಿನವನ್ನು ಉಳಿದವರು ಹೋಗಲಿ ತಾನೇ ಮರೆತ ಸಂದರ್ಭದಲ್ಲಿ ತನ್ನ ಹೆತ್ತಾಕೆ ನೆನಪಿಟ್ಟು ಫೋನ್ ಮಾಡಿದ ಪರಿ ಕಂಡು ಮತ್ತೆ ಕಣ್ಣಲ್ಲಿ ನೀರು ಜಿನುಗತೊಡಗಿತು. ಸಾರಿ ಕಣೋ, ನಿನ್ನ ಡಿಸ್ಟರ್ಬ್ ಮಾಡಿದ್ದಕ್ಕೆ , ಇಡಲಾ ಅಂದ್ಲು ಅಮ್ಮ. . ತಕ್ಷಣಕ್ಕೆ ಏನೋ ಕಂಡವರಂತೆ, ಏ ಏನೋ, ಏನಾಯ್ತೋ. ಯಾಕೋ ಅಳ್ತಿದೀಯ ಅಂದ್ರು. ಈ ಕಡೆಯಿಂದ ಏನೂ ಉತ್ತರವಿಲ್ಲ. ತನ್ನ ಅಮ್ಮನ ಹುಟ್ಟಿದಬ್ಬಕ್ಕೆ, ದೀಪಾವಳಿಗೆ, ಚೌತಿಗೆ ಮನೆಗೆ ಹೋಗಿ ಅವಳ ಜೊತೆಗಿರೋದು ಹೋಗಲಿ,ಒಂದು ಸೀರೆ ಕೊಡೆಸೋದು ಹೋಗಲಿ, ಒಂದು ವಿಷ್ ಕೂಡ ಮಾಡಲು ಸಮಯವಿಲ್ಲದಷ್ಟು ಸ್ವಾರ್ಥಿಯಾಗಿಬಿಟ್ಟೆನಲ್ಲಾ ತಾನು ಎಂದು ತನ್ನನ್ನೇ ಕರುಬುತ್ತಿದ್ದ ಈತ. ಕೆಮ್ಮು ಒತ್ತರಿಸಿ ಬರತೊಡಗಿತು. ಹೇ, ಏನಾಯ್ತೋ ? ಯಾಕೆ ಅಳ್ತಿದೀಯ. ಮೊನ್ನೆಯಿಂದ ಕೆಮ್ತಿದೀಯ. ಏನಾಯ್ತೋ ? ಆರೋಗ್ಯ ಸರಿ ಇದೆ ತಾನೇ ? ಆಫೀಸಿಗೆ ಹೋಗಿದೀಯ ಇಲ್ಲ ಮನೇಲೇ ಇದೀಯ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಶುರು ಮಾಡಿದರು ಅಮ್ಮ.
ಸಿಗರೇಟಿಗೆ ದಾಸನಾದ ಮೇಲೆ ಮನೆಗೆ ಹೋಗಿರಲಿಲ್ಲ. ಸಮಯವಿಲ್ಲದಿರೋದು ಒಂದು ಕಾರಣವಾದರೆ, ಅಣ್ಣ ಒದ್ದಾಟಪಟ್ಟಿದ್ದನ್ನು ನೋಡಿ ನೋಡಿ ಸಿಗರೇಟಿಗರನ್ನೆಲ್ಲಾ ದ್ವೇಷಿಸುತ್ತಿದ್ದ, ಕೊನೆಯ ಪಕ್ಷ ತನ್ನ ಸಣ್ಣ ಮಗನಾದರೂ ಅದರ ದಾಸನಾಗಿಲ್ಲವಲ್ಲ ಎಂದು ಹೆಮ್ಮೆ ಪಡುತ್ತಿದ್ದ ಅಮ್ಮನ ಎದುರಿಸಲು ನೈತಿಕ ಧೈರ್ಯ ಸಾಕಾಗುತ್ತಿರಲಿಲ್ಲ. ಅಂತದ್ರಲ್ಲಿ ತಾನೇ ಈಗ ಅದರ ದಾಸನಾಗಿ ಒದ್ದಾಡುತ್ತಿದ್ದೇನೆ ಎಂದು ಹೇಗೆ ಹೇಳಲಿ ಎಂಬ ಸಂದಿಗ್ದ ಆತನನ್ನು ಕಾಡತೊಡಗಿತು. ಇಲ್ಲಮ್ಮ. ಇಲ್ಲಿ ಹವಾ ಬದಲಾವಣೆಯಿಂದ ನನಗೆ ಸೀತ ಶುರುವಾಗಿದೆ ಅಷ್ಟೆ. ಇವತ್ತು ಅದಕ್ಕೇ ರಜ ಹಾಕಿದ್ದೀನಿ. ಸೀತದಿಂದ ನನ್ನ ಧ್ವನಿ ಎಲ್ಲಾ ಕೂತು ಹೋಗಿ ನಿನಗೆ ಅತ್ತಂತೆ ಕೇಳ್ತಾ ಇದೆ ಅಷ್ಟೆ ಅಂದಿದ್ದ. ಅಮ್ಮನಿಗೆ ಅದು ಪೂರ್ಣ ನಿಜವಲ್ಲ ಎಂದು ಗೊತ್ತಾದರೂ ಮಗ ನನ್ನಿಂದ ಏನೋ ಮುಚ್ಚಿಡುತ್ತಿದ್ದಾನೆ ಎಂದರೆ ಸದ್ಯ ಹೇಳಲಾರದ ಸಂದಿಗ್ದದಲ್ಲಿದ್ದಾನೆ. ಸಮಯ ಬಂದಾಗ ಹೇಳೇ ಹೇಳುತ್ತಾನೆ , ತಪ್ಪು ದಾರಿಯಲ್ಲೆಂತೂ ಹೋಗಲಾರ ಆತ ಎಂದು ಧೈರ್ಯ ತಂದುಕೊಂಡರು. ಸರಿ ಮಗ. ನಿನ್ನ ಆರೋಗ್ಯದ ಕಡೆ ಕಾಳಜಿ ತಗೊ. ಒಳ್ಳೆದಾಗ್ಲಿ ನಿಂಗೆ. ಸಂಜೆ ಫೋನ್ ಮಾಡ್ತೀನಿ ಅಂತ ಫೋನಿಟ್ಟರು. ಒರೆಸುತ್ತಿದ್ದ ಕಣ್ಣೀರಿನ ಜೊತೆ ಪ್ರಪಂಚದಲ್ಲಿ ನಾನು ಒಂಟಿಯಲ್ಲ. ಅಮ್ಮನಿಗಾದರೂ ನಾನು ಹುಷಾರಾಗಬೇಕು. ಈ ಕೆಟ್ಟ ಸಿಗರೇಟಿಂದ ನಾನು ಅಕಾಲಿಕವಾಗಿ ಸಾಯೋದು ತಪ್ಪಬೇಕು ಎನ್ನೋ ಧೃಢ ನಿಶ್ಚಯ ಈತನಲ್ಲಿ ಮೂಡತೊಡಗಿತು.
ಗಂಟಲು ಕಿತ್ತು ಬರುವಂತೆ ಕೆಮ್ಮುತ್ತಿದ್ದರೂ ಇನ್ನು ಇಲ್ಲಿ ಮಲಗಿ ಉಪಯೋಗವಿಲ್ಲ, ಎದ್ದು ಆಫೀಸಿಗಾದರೂ ಹೊರಡೋಣವೆಂದು ರೆಡಿಯಾದ. ಹನ್ನೊಂದರ ಹೊತ್ತಿಗೆ ಆಫೀಸಿಗೆ ತಲುಪಿದ್ದ. ಇವನ ಮುಖ ನೋಡಿಯೇ ಈತನಿಗೆ ಹುಷಾರಿಲ್ಲವೆಂದು ಗೊತ್ತಾದ ಯಾರೂ ಈತನನ್ನು ಯಾಕೆ ಲೇಟೆಂದು ವಿಚಾರಿಸಲಿಲ್ಲ. ವಿಚಾರಿಸೋದು ಹೋಗಲಿ, ತನ್ನ ಹುಟ್ಟಿದಬ್ಬಕ್ಕೆ ವಿಷ್ ಮಾಡಬಹುದೆಂದು ನಿರೀಕ್ಷಿಸಿದ್ದ ಆ ನಿರಾಸೆ ಬತ್ತಿಹೋದರೂ ಈತನಿಗೆ ಬೇಸರವಾಗಲಿಲ್ಲ. ಎಲ್ಲರಿಗಾಗಿ ತಾನು. ತನಗಾಗಿ ಎಲ್ಲರೂ ಅಲ್ಲ.ಗಟ್ಟಿಯಿದ್ದರೆ ಮಾತ್ರ ಇಲ್ಲಿ ಬದುಕೋಕೆ ಸಾಧ್ಯ. ದಿನಾ ಸಾಯೋರ್ನ ಇಲ್ಲಿ ಯಾರೂ ವಿಚಾರಿಸೋಲ್ಲ ಅನ್ನೋ ಪ್ರಾಕ್ಟಿಕಲ್ ಸ್ವಭಾವ ಅವನದಾಗುತ್ತಾ ಬಂದಿತು ಬೆಳಗಿನ ಘಟನೆಗಳಿಂದ. ಏಳೆಂಟು ಸಲ ಸಿಗರೇಟು ಹೊಡೆಯೂ ಮನಸ್ಸಾದರೂ ಹೇಗೂ ಕಷ್ಟಪಟ್ಟು ತಡಕೊಂಡ. ಸಿಗರೇಟಿನ ನೆನಪಾದಾಗಲೆಲ್ಲಾ ನೀರು ಕುಡಿಯೋದೋ, ಯಾರಿಗಾದ್ರೂ ಪಿಂಗ್ ಮಾಡಿ ಮಾತಾನಾಡೋದೋ, ತಿಂಗಳುಗಳಿಂದ ತೆಗೆಯದ ಫೇಸ್ಬುಕ್ಕು ವಾಟ್ಸಾಪು ತೆಗೆದು ಯಾರಿಗಾದ್ರೂ ಮೆಸೇಜ್ ಮಾಡೋದೋ ಮಾಡತೊಡಗಿದ.ಸ್ಮೋಕಿಂಗ್ ಜೋನಿನ ಗೆಳೆಯರು ಕರೆದಾಗಲೂ ಕಷ್ಟಪಟ್ಟು ಏನೋನೋ ನೆವ ಹೇಳಿ ತಪ್ಪಿಸಿಕೊಂಡ. ಒಂದೇ ಒಂದು ಎಂದಂದ ಸಿಗರೇಟು ಮತ್ತೆ ಚೈನಿಗೆಳೆಯುತ್ತೆ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಅಂತೂ ಸಂಜೆಯವರೆಗೆ ಕಷ್ಟಪಟ್ಟು ಆಫೀಸಲ್ಲಿ ಕಳೆದ ಅವನಿಗೆ ಸಿಗರೇಟಿಲ್ಲದ ದಿನ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ. ಎದೆಯಲ್ಲಿ ಉರಿಯುತ್ತಿದ್ದಂತೆ. ಬೇಕು ಬೇಕು ಅನಿಸಿದಂತೆ. ಅದನ್ನ ತಡೆಯೋದ್ರಲ್ಲಿ ಸಾಕು ಬೇಕಾಗಿ ಹೋಗುತ್ತಿತ್ತು. ಹೀಗೇ ಒಂದು ವಾರ ಕಳೆಯಿತು. ಅಷ್ಟರಲ್ಲಿ ಕಾಡುತ್ತಿದ್ದ ಸಿಗರೇಟನ್ನು ಬಿಡೋಕೆ ಆತ ಮಾಡಿದ ಪ್ರಯತ್ನಗಳು ಅಷ್ಟಿಷ್ಟಲ್ಲ.ದಿನಾ ಒಂದು ಹಾಳೆಯ ಮಧ್ಯ ಗೆರೆಯೆಳೆದು ಸಿಗರೇಟನ್ನು ಬಿಡಲು ಕಾರಣಗಳು, ಬಿಡಲಾಗದ ಕಾರಣಗಳನ್ನು ಬರೆಯಲಾರಂಬಿಸಿದ. ಮೊದಲ ದಿನ ಬಿಡಲಾಗದ ಕಾರಣಗಳೇ ಜಾಸ್ತಿಯಿದ್ದವು. ಅವುಗಳಲ್ಲಕ್ಕೆ ಸಿಗರೇಟೊಂದೇ ಪರಿಹಾರವಲ್ಲವೆಂದು ಅವುಗಳ ಮೂಲವನ್ನು ಹುಡುಕುಡುಕಿ ದಿನೇ ದಿನೇ ಬಿಡಲಾಗದ ಕಾರಣಗಳು ಕಡಿಮೆಯಾಗಲಾರಂಬಿಸಿದವು.ಮನೆಯಲ್ಲಿದ್ದ ಜಾಗಿಂಗ್ ಶೂಗಳು, ಧೂಳು ಹೊಡೆದ ಯೋಗ ಮ್ಯಾಟುಗಳೆಲ್ಲಾ ಹೊರಬಂದಿದ್ದವು.ಮರೆತೇ ಹೋಗುವಂತಿದ್ದ ಪ್ರಾಣಾಯಾಮದ ಅನುಲೋಮ, ವಿಲೋಮ, ಸೂರ್ಯ , ಚಂದ್ರ ಪ್ರಾಣಾಯಾಮಗಳು, ಮುದ್ರೆಗಳು, ಯೋಗದ ಕುಕ್ಕುಟಾಸನ, ಪದ್ಮಾಸನ , ಬಕಾಸನ, ವೃಕ್ಷಾಸನಗಳೂ ನೆನಪಾಗಿದ್ದವು. ಸೂರ್ಯೋದಯ, ಸೂರ್ಯಾಸ್ತಗಳ ಸೌಂದರ್ಯವನ್ನು, ರಾತ್ರಿಯ ನಕ್ಷತ್ರಗಳ ಕಾಂತಿಯನ್ನು ಮತ್ತೆ ಅನುಭವಿಸಲು ಶುರುಮಾಡಿದ್ದ. . ಈತನ ಮನದಲ್ಲಿ ಮರೆಯಾಗಿದ್ದ ನಗು ಮತ್ತೆ ಮಾಡತೊಡಗಿ ಹಣೆಯಲ್ಲಿ ಮೂಡುತ್ತಿದ್ದ ಗೆರೆಗಳು, ರಾತ್ರೆ ಬರದೇ ಕಾಡುತ್ತಿದ್ದ ನಿದ್ರೆ, ಕಣ್ಣ ಕೆಳಗೆ ಮೂಡುತ್ತಿದ್ದ ಕಪ್ಪು ಚಂದ್ರ ನಿಧಾನವಾಗಿ ಗುಣವಾಗತೊಡಗಿದವು. ಎಲ್ಲಾ ಸಮಸ್ಯೆಗಳಿಗೂ ಸಿಗರೇಟೊಂದೇ ಪರಿಹಾರವಲ್ಲ. ಎಲ್ಲಕ್ಕೂ ಅವವೇ ಉತ್ತರಗಳಿರುತ್ತೆ. ಹುಡುಕಬೇಕಷ್ಟೆ. ನಮ್ಮ ಪ್ರಯತ್ನವನ್ನು ಉತ್ತರದ ಹುಡುಕಾಟದಲ್ಲಿ ಹಾಕೋಣ.ಚಿಂತೆಯಲ್ಲಿ ನಮ್ಮನ್ನೇ ಸುಟ್ಟುಕೊಳ್ಳೋದ್ರ ಮೇಲಲ್ಲ ಅನ್ನೋ ಭಾವ ಗಟ್ಟಿಯಾಯಿತು. ಹುಟ್ಟಿದ ದಿನದಂದು ಮೂಡಿದ ಭಾವ ಸಾವಿನತ್ತ ಸಾಗೋವಂತಿದ್ದ ಈತನನ್ನು ತಡೆದಿತ್ತು. ಏನಾದ್ರಾಗಲಿ ಸಿಗರೇಟು ಬಿಟ್ಟೇ ಸಿದ್ದ ಎನ್ನುವ ಇವನ ನಿರ್ಣಯ ಇವನ ಕೈಹಿಡಿದಿತ್ತು.
Subscribe to:
Post Comments (Atom)
ಇಷ್ಟವಾಯಿತು ಬರಹ...
ReplyDeleteಬಹಳ ಒಳ್ಳೆಯ ಕಥೆ ಪ್ರಶಸ್ತಿ.
ReplyDeleteಸಿಗರೇಟು ಸೇದುವ ಪ್ರತಿಯೊಬ್ಬನೂ ಓದಿ ಅರ್ಥ ಮಾಡಿಕೊಳ್ಳ ಬೇಕಾದ ವಿಚಾರ ಇದೆ ಕಥೆಯೊಳಗೆ. :)
ಚಂದದ ಕಥೆ ಪ್ರಶಸ್ತಿ ಜೀ..................
ReplyDeleteಕಥೆ ಓದುತ್ತಾ ಓದುತ್ತಾ, ಸಿಗರೇಟು ಸೇದುತ್ತಿದ್ದವನನ್ನು - ಅರ್ಧಕ್ಕೆ ಹೊಸಕಿ ಹಾಕುವಂತೆ ಮಾಡಿಬಿಟ್ಟೆಯಲ್ಲ ಮಾರಾಯ!
ReplyDeleteನನಗೂ ಅದೇ ಅನಿಸುತ್ತೆ ಆಫೀಸಿನಲ್ಲಿ ಗಳಿಗೆಗೊಂದು ಫೋನಾಯಿಸೋ ಆಫೀಸಿನವರೂ ಸಹೋದ್ಯೋಗಿಗಳೂ ನಾನು ಅಪಘಾತವಾಗಿ ಮನೆಯಲ್ಲಿ ನರಳುತ್ತಾ ಬಿದ್ದಿದ್ದಾಗ ಎಲ್ಲಿ ಹೋದರೂ ಅಂತ?
ಎಲ್ಲಿಗೆ ತಾಕಬೇಕೋ ಅಲ್ಲೇ ತಾಕಿದಿರಿ, ಈವತ್ತು ನಾನು ಕಡಿಮೆ ಸೇದುತ್ತೇನೆ.
Nice story
ReplyDeleteಒಳ್ಳೆಯ ಬರಹ ಪ್ರಶಸ್ತಿಯವರೆ. ಮನಸು ಬುದ್ದಿಯ ಕೈಲಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಚಂದವಾಗಿ ಹೇಳಿದ್ದೀರಿ. ಇಷ್ಟವಾಯಿತು.
ReplyDeleteಮೆಚ್ಚಿದ ಎಲ್ಲರಿಗೂ ಧನ್ಯವಾದಗಳು. ಈ ಕಥೆ ಡಿಸೆಂಬರ್ ೧೩ರ "ವಿಜಯನೆಕ್ಟ್"ನಲ್ಲಿ ಪ್ರಕಟವಾಗಿದೆ
ReplyDelete