Saturday, January 4, 2014

ದೇವನಹಳ್ಳಿ ಕೋಟೆ ಟ್ರಿಪ್ಪು

ದೇವನಹಳ್ಳಿಯ ಕೋಟೆ ಅಥವಾ ಟಿಪ್ಪು ಕೋಟೆ ಬೆಂಗಳೂರಿನಿಂದ ೩೫ ಕಿ.ಮೀ ದೂರದಲ್ಲಿದೆ. ವೈಟ್ ಫೀಲ್ಡ್/ಕೆ.ಆರ್ ಪುರಂ ಕಡೆಯಿಂದ ಬರುವವರು ಸೀದಾ ದೇವನಳ್ಳಿಗೆ ಬಂದರೆ ಅಲ್ಲಿಂದ ಕೋಟೆಗೆ ಹೋಗಬಹುದು. ಮೆಜೆಸ್ಟಿಕ್ ಕಡೆಯಿಂದ ಬರುವವರು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಹಾಗೇ ಮುಂದೆ ಬಂದರೆ ಈ ಕೋಟೆಯನ್ನು ಕಾಣಬಹುದು. ಯಲಹಂಕ/ಹೆಬ್ಬಾಳದಿಂದ ಬಸ್ಸಿಗೂ ಬರಬಹುದು. ಬಸ್ ನಂಬರ್ 298M. ಕೋಟೆಯೆಂದರೆ ತೀರಾ ದೊಡ್ಡದಲ್ಲದಿದ್ದರೂ ಒಮ್ಮೆ ನೋಡಲಡ್ಡಿಲ್ಲ. ಇಲ್ಲಿ ಟಿಪ್ಪು ಕೋಟೆಯಲ್ಲದೇ, ಕೋಟೆ ನೀರಾಂಜನೇಯ, ವೇಣುಗೋಪಾಲ ಸ್ವಾಮಿ, ಸಿದ್ದೇಶ್ವರ ಸ್ವಾಮಿ, ಮಾರಮ್ಮ ದೇವಸ್ಥಾನಗಳಿವೆ. ಹಾಗೇ ಸ್ವಲ್ಪ ಮುಂದೆ ಬಂದರೆ ಟಿಪ್ಪು ಸ್ಮಾರಕ , ಅಲ್ಲಿಂದ ಹಾಗೇ ಸ್ವಲ್ಪ ಮುಂದಕ್ಕೆ ಐವತ್ತಡಿಯ ಕಛೇರಿ ಆಂಜನೇಯ ದೇವಸ್ಥಾನ ಸಿಗುತ್ತದೆ. ಹಾಗೇ ಮುಂದೆ ಬಂದರೆ ಬಲಗಡೆ ನಕೋಡ ಅವಂತಿ ಜೈನ ದೇವಾಲಯ ಮತ್ತು ಎಡಕ್ಕೆ ಬೆಟ್ಟದ ಮೇಲೆ ಸಿದ್ದಾಚಲ ಸ್ಥೂಲಭದ್ರ ಜೈನ ದೇವಾಲಯ ಸಿಗುತ್ತದೆ. ಸ್ಥೂಲಭದ್ರ ಜೈನ ದೇವಾಲಯಕ್ಕೆ ಹತ್ತೋ ಮೆಟ್ಟಿಲಗಳ ಬುಡದಲ್ಲಿಯೇ ಪ್ರಾಚೀನ ಆಂಜನೇಯ ದೇವಸ್ಥಾನವೂ ಸಿಗುತ್ತದೆ. ಹಾಗೇ ಸ್ವಲ್ಪ ಮುಂದೆ ನಂದಿ ಬೆಟ್ಟ ಕಾಣುತ್ತಿರುತ್ತದೆ. ನಂದಿ ಬೆಟ್ಟಕ್ಕೆ ಹೋಗೋ ದಾರಿಯಲ್ಲಿಯೇ ಮುದ್ದೇನಹಳ್ಳಿಯ ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಅವರ ಮನೆ, ಅಲ್ಲೇ ಸ್ವಲ್ಪ ಈ ಕಡೆ ಇರುವ ಭೋಗ ನರಸಿಂಹ ದೇವಸ್ಥಾನವನ್ನೂ ನೋಡಬಹುದು.

ವೇಣುಗೋಪಾಲ ಸ್ವಾಮಿ ದೇವಸ್ಥಾನ:
ದೇವಸ್ಥಾನವನ್ನು ಕಾಲಿಡುತ್ತಿದ್ದಂತೆಯೇ ಸ್ವಾಗತಿಸುವುದು ಲೋಹದ ಧ್ವಜಸ್ಥಂಬ. ಆ ದ್ವಜ ಸ್ಥಂಭವನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ಮೂಲದೇವರಾದ ಕೃಷ್ಣ ರುಕ್ಮಿಣಿಯಲ್ಲದೇ ಎಡದಲ್ಲಿ ಲಕ್ಷ್ಮಿದೇವಿ, ಬಲದಲ್ಲಿ ಬೆಣ್ಣೆ ಕೃಷ್ಣ, ಪಕ್ಕದಲ್ಲಿ ಒಂದು ಕೃಷ್ಣನ ಶಯನಗೃಹವಿದೆ. ಶಯನಗೃಹದ ಎಲ್ಲಾ ಮೂಲೆಯಲ್ಲೂ ಕನ್ನಡಿಗಳಿದ್ದು ಎಲ್ಲಾ ದಿಕ್ಕಿನಲ್ಲೂ ದೇವರ ವಿಗ್ರಹ ಕಾಣಬೇಕೆಂಬ ಐತಿಹ್ಯವಂತೆ.  ಹಾಗೆಯೇ ಉತ್ಸವ ಮೂರ್ತಿಯೂ ಇದೆ
Venugopalaswamy temple , Devanahalli

Venu GopalaSwamy Temple Entrance

Taataki Samhara prasanga
Vishwamitrana Yagna samrakshane
ಹಾಗೇ ಹೊರಗೆ ಬಂದಾಗ ದೇವಾಲಯದ ಸುತ್ತಲೂ ಪೌರಾಣಿಕ ಪ್ರಸಂಗಗಳ ಕೆತ್ತನೆಗಳಿವೆ. ತಾಟಕೀ ಸಂಹಾರ, ಯಜ್ನಕ್ಕೆ ಮೋಡಗಳ ಮೇಲಿಂದ ಮಾಂಸ ತಂದು ಸುರಿಯುವ ಮಾರೀಚ ಸುಬಾಹು ಮತ್ತು ಅವರನ್ನು ಕೊಲ್ಲುವ ರಾಮ ಲಕ್ಷ್ಮಣರ ವಿಶ್ವಾಮಿತ್ರನ ಯಜ್ಞರಕ್ಷಣೆಯಂತಹ ರಾಮಾಯಣ ಪ್ರಸಂಗಳಲ್ಲದೇ ಬಾಲ ಕೃಷ್ಣ, ಉಗ್ರ ನರಸಿಂಹ, ವಿಷ್ಣುವನ್ನು ಹೊತ್ತ ಗರುಡ,  ಬೆಣ್ಣೆ ಕಡೆಯುವ ಅಮ್ಮನ ಹತ್ತಿರ ಬೆಣ್ಣೆ ಕೇಳುತ್ತಿರುವ ಕೃಷ್ಣ, ಗೋವರ್ಧನ ಗಿರಿಧಾರಿ ಕೃಷ್ಣ , ಕಾಳಿಂಗ ಮರ್ಧನ, ಪೂತನೀ ಸಂಹಾರದಂತಹ ಭಾಗವತದ ಪ್ರಸಂಗಗಳ ಜೊತೆಗೆ ಬಲಿಯ ಪ್ರಸಂಗವೂ ಇದೆ. ಮೂರು ಹೆಜ್ಜೆ ದಾನ ಕೇಳಿದ ವಾಮನ ಎರಡು ಹೆಜ್ಜೆಗಳಲ್ಲಿ ಭೂಮಿ ಆಕಾಶಗಳನ್ನಳೆದು ಮೂರನೆಯದು ಎಲ್ಲಿಡಲಿ ಎಂದಾಗ ತನ್ನ ತಲೆ ತೋರಿಸಿದ ಬಲಿ ಮಹರಾಜ. ಆಗ ವಾಮನ ಅವನ ತಲೆಯ ಮೇಲೆ ಕಾಲೊಟ್ಟು ಅವನನ್ನು ತುಳಿಯುತ್ತಿರುವ ಪ್ರಸಂಗ ಚೆನ್ನಾಗಿ ಮೂಡಿಬಂದಿವೆ. ಇವಲ್ಲದೆ ಇನ್ನೂ ಅನೇಕ ಪ್ರಸಂಗಗಳ ಚಿತ್ರಣವಿದ್ದರೂ ಅವು ಮಸುಕಾಗಿ ಗುರುತಿಸುವುದು ಕಷ್ಟವಾಗಿವೆ :-(

ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನ:
Neeru Baaglilu Anjaneya Swami
ಕೋಟೆಗೆ ಹತ್ತೋ ಮೆಟ್ಟಿಲುಗಳು ಶುರುವಾಗುವುದೇ ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರದಿಂದ. ಕೋಟೆಗೆ ನೀರು ತೆಗೆದುಕೊಂಡು ಹೋಗುವವರು ಇದೇ ದೇವಸ್ಥಾನದ ಮೂಲಕ ನೀರು ತಗೊಂಡು ಹೋಗುತ್ತಿದ್ದರಿಂದ ಇದಕ್ಕೆ ಈ ಹೆಸರಂತೆ.

ಹಾಗೆಯೇ ಮೇಲೆ ಹತ್ತುತ್ತಿದ್ದಂತೆಯೇ ಪ್ರತಿಧ್ವನಿಯ ಬುರುಜೊಂದು ಸಿಗುತ್ತದೆ. ಇದರ ಮಧ್ಯೆದಿಂದ ಸ್ವಲ್ಪ ಮುಂದೆ ಬುರುಜಿಗೆ ಎದುರಾಗಿ  ನಿಂತು ಚಪ್ಪಾಳೆ ತಟ್ಟಿದರೆ ಅಥವಾ ಮಾತನಾಡಿದರೆ ಅದು ಬುರುಜಿಗೆ ಬೆನ್ನು ಹಾಕಿ ಮಧ್ಯದ ಹತ್ತಿರ ನಿಂತಿರುವವರಿಗೆ ಮೈಕಿನಲ್ಲಿನ ಮಾತಿನಂತೆ ಕೇಳಿಸುತ್ತದೆ.  ಕೋಟೆಯಲ್ಲಿ ಸುಮಾರು ಇಂತಹ ಬುರುಜುಗಳಿದ್ದರೂ ಎಲ್ಲೂ ಈ ತರಹದ ಪ್ರತಿಧ್ವನಿ ಆಮೇಲೆ ಕಾಣದಿದ್ದುದು ಆಶ್ವರ್ಯವೆನಿಸುತ್ತದೆ. 

ಟಿಪ್ಪು ಕೋಟೆ:







ಈ ಕೋಟೆಯ ಬಗ್ಗೆಯೂ ಒಂದು ವೈಶಿಷ್ಟ್ಯವಿದೆ. ಈ ಕೋಟೆಯನ್ನು ಕಟ್ಟಲು ಬಳಸಿದ್ದು ಇಟ್ಟಿಗೆಯ ಪುಡಿ ಮತ್ತು ಸುಣ್ಣದಿಂದ ಮಾಡಿದ ಸುರ್ಕಿ. ಕೋಟೆಯ ಉದ್ದಕ್ಕೂ ಇರುವ ಸಣ್ಣ ಸಣ್ಣ ಕಾಲುವೆಗಳು ನೀರು ಬೇಗ ಇಂಗುವಂತೆ ಮಾಡಿ ಮಳೆಯಿಂದ ಕೋಟೆಗೆ ರಕ್ಷಣೆ ಒದಗಿಸುತ್ತದೆಯಂತೆ . ಕೋಟೆಯಲ್ಲಿನ ದಪ್ಪವಾದ ಜಲ್ಲಿ ಹಾಗೂ ಕಲ್ಲಿನ ಕೆಲಸದ ಗೋಡೆಯನ್ನು ಫಿರಂಗಿಯ ಬೆಂಕಿಯನ್ನು ತಡೆಯಲೆಂದೇ ನಿರ್ಮಿಸಲಾಗಿದೆಯಂತೆ.  ಶತ್ರುದಾಳಿಯ ಸಮಯದಲ್ಲಿ ಶತ್ರುಗಳನ್ನು ಕೋಟೆಯಿಂದ ಹೊರಗಿಡುವ ಸಲುವಾಗಿ ಕಟ್ಟಿದ ಕಂದಕ ಮತ್ತು ಆ ಕಂದಕ ದಾಟಲು ಇರುವ ಒಂದೇ ಒಂದು ಸೇತುವೆಯನ್ನು ತೆಗೆದುಬಿಡಲಾಗುತ್ತಿತ್ತಂತೆ. ಕೋಟೆಯಲ್ಲಿ ಅಲ್ಲಲ್ಲಿ ಇರುವ ಬಂದೂಕಿನ ಕಿಟಕಿಗಳೂ ವಿಶಿಷ್ಟವಾಗಿವೆ. ಮೂರು ದಿಕ್ಕಿನಲ್ಲಿ ಎಲ್ಲಿ ಶತ್ರು ಸೈನ್ಯವಿದ್ದರೂ ಅತ್ತ ಗುಂಡು ಹಾರಿಸಲನುವಾಗುವಂತೆ ಒಂದೇ ಕಿಟಕಿಯಲ್ಲಿ ಮೂರು ದಿಕ್ಕುಗಳಿರುವುದು ವಿಚಿತ್ರವೂ ವಿಶಿಷ್ಟವೂ ಅನಿಸುತ್ತದೆ. ಆದರೆ ವಿಪರ್ಯಾಸವೆಂದರೆ ೧೭೯೧ರಲ್ಲಿ ಬ್ರಿಟಿಷರು ಬೆಂಗಳೂರಿನಲ್ಲಿ ಟಿಪ್ಪು ಕೋಟೆಯನ್ನು ವಶಪಡಿಸಿಕೊಂಡಾಗ ದೇವನಹಳ್ಳಿಯ ಸೈನಿಕರು ಹೆದರಿಯೇ ಕೋಟೆಯನ್ನು ಬಿಟ್ಟು ಓಡಿ ಹೋದರಂತೆ. ಒಂದು ವಾರದ ನಂತರ ಯಾವುದೇ ಯುದ್ದವಿಲ್ಲದೇ ಕೋಟೆ ಬ್ರಿಟಿಷರ ವಶವಾಯಿತಂತೆ.

ಟಿಪ್ಪು ಸ್ಮಾರಕ:
Tippu Statue

ದೇವನಹಳ್ಳಿಯ ಕೋಟೆಯ ಮತ್ತೊಂದು ಬದಿಯಿಂದ ಹೊರಗೆ ಬಂದರೆ ಸಿಗೋ ರಸ್ತೆಯಲ್ಲಿ ಎಡಕ್ಕೆ ಸುಮಾರು ೩೦೦ ಮೀಟರ್ ಸಾಗುವಷ್ಟರಲ್ಲಿ ಟಿಪ್ಪುವಿನ ಜನ್ಮ ಸ್ಥಳವೆನ್ನಲಾದ ಸ್ಮಾರಕ ಇದೆ.ಸ್ಮಾರಕವೆಂದರೆ ದೊಡ್ಡ ಕಟ್ಟಡವೇನಲ್ಲ. ಜಗುಲಿಯ ಮೇಲಿರುವ ನಾಲ್ಕು ಕಂಬಗಳ ಕಮಾನಿನ ಕಟ್ಟಡವೊಂದೇ ಈಗ ಉಳಿದಿರುವ ಅವಶೇಷ.









ಕಛೇರಿ ಆಂಜನೇಯ ದೇವಸ್ಥಾನ.
Kacheri Anjaneya Temple
ಸ್ಮಾರಕ ನೋಡಿ ಹಾಗೇ ಮುಂದೆ ಬರುತ್ತಿದ್ದಂತೆ ಒಂದು ಪಾರ್ಕ್ ಸಿಗುತ್ತದೆ. ಅದರಲ್ಲಿ ಸಿಗೋ ರಸ್ತೆಯಲ್ಲಿ ಎಡಕ್ಕೆ ಸ್ವಲ್ಪ ಚಲಿಸುವಷ್ಟರಲ್ಲಿ ಸುಮಾರು ಐವತ್ತಡಿಯೆತ್ತರದ ಆಂಜನೇಯನ ವಿಗ್ರಹ ಕಾಣುತ್ತದೆ. ಅದರ ಹೆಸರೇ ಕಛೇರಿ ಆಂಜನೇಯ ಸ್ವಾಮಿ ದೇವಸ್ಥಾನ.

Puratana Anjaneya temple, Devanahalli


ಜೈನ ದೇವಾಲಯಗಳು:
Stulabhadra Jain temple


Nakoda Avanti Jain Temple


ಹಾಗೆಯೇ ಮುಂದೆ ಬಂದರೆ ಎಡಗಡೆ ನಕೋಡ ಅವಂತಿ ದೇವಾಲಯ ಸಿಗುತ್ತದೆ. ನೂರಾ ಎಂಟು ಸಣ್ಣ ಸಣ್ಣ ಗುಡಿಗಳಿರುವ ನಕೋಡಾ ಅವಂತಿ ಜೈನದೇಗುಲದ ಪ್ರಧಾನ ದೇಗುಲ ಅವಂತಿ ದೇಗುಲದ ಕೆತ್ತನೆಗಳು ನೋಡುಗರ ಮನಸೆಳೆಯುತ್ತದೆ.
ಅದೇ ತರಹ ಬೆಟ್ಟದ ಮೇಲಿರುವ ಸಿದ್ದಾಚಲ ಸ್ಥೂಲಭದ್ರ ಧಾಮ ಕಣ್ಣು ಸೆಳೆಯುತ್ತದೆ. ಅದನ್ನು ಹತ್ತೋ ದಾರಿಯಲ್ಲಿ ಕಾಣುವ ಪ್ರಾಚೀನ ಆಂಜನೇಯ ದೇವಸ್ಥಾನ ಮತ್ತು ಸ್ಥೂಲಭದ್ರ ಧಾಮದ ಮೂರು ದೇಗುಲಗಳಲ್ಲಿರುವ ಕೆತ್ತನೆಯೂ ಚೆನ್ನಾಗಿವೆ.  ಇಲ್ಲಿಂದ ಬಲಬದಿಯಲ್ಲಿ ಕಾಣುವ ನಂದಿಬೆಟ್ಟದ ದೃಶ್ಯ, ಬಲಭಾಗದಲ್ಲಿ ಕಾಣೋ ದೇವನಳ್ಳಿ ಅಂತರಾಷ್ಟೀಯ ವಿಮಾನ ನಿಲ್ದಾಣದ ದೃಶ್ಯ, ದೇಗುಲವನ್ನು ಮುತ್ತಿಕ್ಕುತ್ತಿರುವ ನೀಲಿ ಮೋಡಗಳ ಚೆಲುವೂ ಪ್ರವಾಸಿಗರನ್ನು ದೇವನಹಳ್ಳಿಯತ್ತ ಕೈ ಬೀಸಿ ಕರೆಯುತ್ತವೆ.


1 comment:

  1. ದೇವನಹಳ್ಳಿಯ ಕೂಗಳತೆ ದೂರದ ನಂದಿ ಬೆಟ್ಟದ ತಪ್ಪಲಿನ ಶಾಲೆಯಲಿ ಓದಿದ ನನಗೆ ಇಲ್ಲಿಗೆ ಭೇಟಿ ಕೊಡಲು ಮೈಗಳ್ಳತನವಾಗಿರುವು ನಿಮ್ಮ ಈ ಲೇಖನ ಓದಿದ ಮೇಲೆ ಅತೀವ ದುಖಕ್ಕೆ ಕಾರಣವಾಯಿತು.
    ಒಳ್ಳೊಳ್ಳೆ ಚಿತ್ರಗಳೊಡನೆ ಮಾಹಿತಿ ಭರಪೂರದ ಲೇಖನವಿದು.

    ReplyDelete