Welcome to Prashantavanam
Tuesday, March 25, 2014
ಬೆಂಗಳೂರ್ಯಾಕೆ ಬಿಸಿ ಬಿಸಿ ?
ಉಷ್ಣಾಂಶ ಮೂವತ್ತೈದು ದಾಟಿ ಬೆಂದಕಾಳೂರಿನ ಜನರೆಲ್ಲಾ ಸೆಖೆ ಸೆಖೆಯೆಂದು ಬೊಬ್ಬೆ ಹಾಕುವಂತಾಗಿದೆ. ಮಾರ್ಚ್ ಮೂರನೇ ವಾರದಲ್ಲೇ ತಾಳಲಾರನೀ ಸೆಖೆ ಯಾವಾಗ ಬರುತ್ತೋ ಮಳೆಗಾಲ ಎನ್ನುವಂತಾಗಿದೆ. ಬೆಂಗಳೂರಂದ್ರೆ ಉದ್ಯಾನನಗರಿ ಇಲ್ಲಿ ಯಾವತ್ತೂ ಮೂವತ್ತು ದಾಟಿದ್ದೇ ಇಲ್ಲ ತಾಪ. ಈಗ ಕಾಲ ಕೆಟ್ಟೋಯ್ತಪ ಅಂತ ಹಿರಿಯರೆಲ್ಲಾ ಶಾಪ ಹಾಕುವಂತಾಗಿದೆ. ಬೇಸಿಗೆಯೆಂದ್ರೆ ಸೆಖೆ ಸಹಜವಪ್ಪಾ. ಆದ್ರೆ ಈ ಸಲ ಸ್ವಲ್ಪ ಜಾಸ್ತಿನೇ ಸೆಖೆ ಅನಿಸ್ತಿದೆ ಅಲ್ವಾ ಅನ್ನೋ ಅಭಿಪ್ರಾಯದ ಜೊತೆ ಬೆಂಗಳೂರಿನ ಸೆಖೆ ಹೀಗೆ ಇದ್ದಕ್ಕಿದ್ದಂಗೆ ಏರಿದ್ದೆಂಗೆ ಅನ್ನೋ ಪ್ರಶ್ನೆಯೂ ಕೆಲವರಲ್ಲಿ. ಈ ಪ್ರಶ್ನೆಗಳಿಗೊಂದು ಉತ್ತರ ಹುಡುಕೋ ಪ್ರಯತ್ನವೇ ಈ ಲೇಖನ.
ಬೆಂಗಳೂರಿನ ಸೆಖೆ ಜಾಸ್ತಿಯಾಗಿದ್ದಕ್ಕೆ ಹಲವು ಕಾರಣ ಕೊಡ್ತಾರೆ. ಅದರಲ್ಲಿ ಮೊದಲನೆಯದು ಹೀಟ್ ಐಲ್ಯಾಂಡ್ ಎಫೆಕ್ಟ್ ಅಥವಾ ಉಷ್ಣ ದ್ವೀಪ ಪ್ರಭಾವ.
ಉಷ್ಣದ್ವೀಪ ಪ್ರಭಾವ:
ನಗರವೊಂದರ ತಾಪ ಅದರ ಸುತ್ತಮುತ್ತಲಿರೋ ಹಳ್ಳಿಗಳಿಗಿಂತ ಜಾಸ್ತಿಯಿರೋದನ್ನ ಉಷ್ಣದ್ವೀಪ ಪ್ರಭಾವ ಅನ್ನುತ್ತಾರೆ. ಈ ಪದವನ್ನು ೧೮೧೦ರಲ್ಲಿ ಮೊದಲು ಬಳಸಿದ್ದು ಲೂಕ್ ಹಾವರ್ಡ್ ಎಂಬ ಹವಾಮಾನ ತಜ್ಞ. ಹೌದು. ನಗರದಲ್ಲೇ ಉಷ್ಣಾಂಶ ಜಾಸ್ತಿಯಾಕಿರ್ಬೇಕು ಅಂದ್ರೆ ಅದಕ್ಕೆ ಮತ್ತೊಂದಿಷ್ಟು ಕಾರಣಗಳಿವೆ. ಮೊದಲನೆಯದು ಇಲ್ಲಿನ ಕಾಂಕ್ರೀಟೀಕರಣ. ಆ ಬಿಲ್ಡಿಂಗು, ಈ ಬಿಲ್ಡಿಂಗು, ರಸ್ತೆ, ಪುಟಪಾತು ಮತ್ತೆ ಬಿಲ್ಡಿಂಗು ಅಂತ ನಗರದ ಇಂಚಿಚೂ ಬಿಡದೇ ಮಣ್ಣೇ ಕಾಣದಂತೆ ಕಾಂಕ್ರೀಟಿನಿಂದ ಮುಚ್ಚಲಾಗ್ತಾ ಇದೆ. ನಗರೀಕರಣದ ಹೆಸರಲ್ಲಿ ಇರೋಬರೋ ಮರಗಳನ್ನೆಲ್ಲಾ ಕಡಿದು ಬೆಂಗ್ಳೂರನ್ನೇ ಒಂಥರಾ ಕಾಂಕ್ರೀಟ್ ಕಾಡಾಗಿಸ್ತಾ ಇದ್ದೀವಿ. ಇದರಿಂದಾಗ್ತಿರೋ ಅನಾಹುತಗಳು ಒಂದೆರಡಲ್ಲ. ಸಣ್ಣ ತರಂಗಾಂತರದ (short wave) ಶಾಖವನ್ನು ಬೆಳಗಿಂದ ಸಂಜೆಯವರೆಗೆ ಹೀರಿಕೊಳ್ಳೋ ಈ ಕಾಂಕ್ರೀಟ್ ಮೇಲ್ಮೈ, ಕಟ್ಟಡಗಳು ರಾತ್ರೆ ಹೊತ್ತು ನಿಧಾನವಾಗಿ ಈ ಶಾಖವನ್ನು ದೊಡ್ಡ ತರಂಗಾಂತರದ( long wave) ಶಾಖ ಶಕ್ತಿಯಾಗಿ ಹೊರಬಿಡುತ್ತವೆ. ಹಾಗಾಗಿ ರಾತ್ರಿ ತಣ್ಣಗಾಗಲು ಸಿಕ್ಕಾಪಟ್ಟೆ ಹೊತ್ತು ಬೇಕಾಗುತ್ತೆ. ಮತ್ತೆ ಈ ಎತ್ತೆತ್ತರದ ಕಟ್ಟಡಗಳಿವೆಯೆಲ್ಲಾ ಅವುಗಳಿಂದ ಸೂರ್ಯನ ಕಿರಣಗಳು ಹಲವಾರು ಹಂತದಲ್ಲಿ ಪ್ರತಿಫಲನಗೊಳ್ಳಲು ಸಹಾಯವಾಗತ್ತೆ. ಈ ರೀತಿಯ ನಿರಂತರ ಪ್ರತಿಫಲನದಿಂದ ಶಾಖ ಬೇಗ ಜಾಸ್ತಿಯಾಗತ್ತೆ . ದೊಡ್ಡ ಕಟ್ಟಡಗಳ ಶಾಖ ಹೊರಬರೋಕೆ ಬೇಕಾದ ದೊಡ್ಡ ಸಮಯದಿಂದ ಸೂರ್ಯ ಮುಳುಗಿ ಸುಮಾರು ಹೊತ್ತಿನ ಮೇಲೂ ವಾತಾವರಣದ ಸೆಖೆ ಹಾಗೇ ಇರತ್ತೆ. ಇದನ್ನೇ ಅರ್ಬನ್ ಕಾನ್ಯಾನ್ ಎಫೆಕ್ಟ್ (urban canyon effect) ಎಂದೂ ಹೇಳುತ್ತಾರೆ. ಇನ್ನು ಈ ದೊಡ್ಡ ದೊಡ್ಡ ಕಟ್ಟಡಗಳು ಗಾಳಿಯ ಸಹಜ ಸಂಚಾರಕ್ಕೆ ಅಡ್ಡವಾಗಿ ನಗರದ ಉಷ್ಣ ಉಳಿದ ಪ್ರದೇಶದ ತಂಗಾಳಿಯೊಂದಿಗೆ ಮಿಶ್ರವಾಗಿ ನಗರವೂ ತಣ್ಣಗಾಗೋದನ್ನ ನಿಧಾನಿಸುತ್ತೆ. ಕಟ್ಟಡಗಳೇ ಬಿಸಿಯಾಗಿಸ್ತಿರೋದು ಒಂದು ಕತೆ. ಜೊತೆಗೆ ಈ ಕಟ್ಟಡಗಳೊಳಗಿರೋ ಜನರನ್ನು ತಣ್ಣಗಿರೋಸೋಕೆ ಬೇಕಾದ ಏಸಿಗಳದ್ದು ಇನ್ನೊಂದು ಕತೆ ! ಈ ಏಸಿಗಳಲ್ಲಿರೋ ಕ್ಲೋರೋಪ್ಲೋರೋ ಕಾರ್ಬನ್(ಸಿ.ಎಫ್.ಸಿ) ಮತ್ತು ಹೈಡ್ರೋಫ್ಲೋರೋಕಾರ್ಬನ್ಗಳೆಂಬ ಅನಿಲಗಳು ನಮ್ಮ ಭೂಮಿಯನ್ನ ಸೂರ್ಯನ ನೇರಳಾತೀತ ಕಿರಣಗಳಿಂದ ತಡಿತಾ ಇರೋ ಓಜೋನ್ ಪದರಕ್ಕೆ ತೂತು ಕೊರೆಯೋದಲ್ದೇ ಉಷ್ಣಾಂಶ ಹೆಚ್ಚೋದಕ್ಕೂ ಕಾರಣವಾಗತ್ತೆ.
ಕಮ್ಮಿಯಾಗುತ್ತಿರೋ ಹಸಿರ ಹೊದಿಕೆ:
ಇನ್ನು ಈ ಕಾಂಕ್ರೀಟೀಕರಣದಿಂದ ನಾಶವಾದ ಪರಿಸರದ ಬಗ್ಗೆ. ಮರಗಳಿದ್ದರೆ ಅವುಗಳಿಂದ ಆವಿಯಾಗೋ ನೀರು ಒಂದು ತಣ್ಣನೆಯ ವಾತಾವರಣವನ್ನು ನಿರ್ಮಿಸುತ್ತೆ. ಜೊತೆಗೆ ಅವುಗಳ ದ್ಯುತಿಸಂಶ್ಲೇಷಣೆ(photo synthesis) ಸಮಯದಲ್ಲಿ ಹೀರಿಕೊಳ್ಳೋ ಇಂಗಾಲದ ಡೈ ಆಕ್ಸೈಡ್ ವಾತಾವರಣದಲ್ಲಿನ ಇಂಗಾಲದ ಅಂಶವನ್ನು ಕಡಿಮೆ ಮಾಡುತ್ತದೆ. ಈ ಇಂಗಾಲವೂ ಹಸಿರು ಮನೆ ಪರಿಣಾಮ ಉಂಟುಮಾಡಿ ಭೂತಾಪ ಹೆಚ್ಚುಮಾಡೋ ಅನಿಲ. ಅಂದರೆ ಭೂಮಿಗೆ ಬಿದ್ದ ಸೂರ್ಯನ ಕಿರಣಗಳು ಪ್ರತಿಫಲಿತವಾಗಿ ವಾಪಾಸ್ ಹೋಗೋದನ್ನು ಈ ಇಂಗಾಲದಿಂದಾದ ತಡೆಗೋಡೆ ತಡೆಯುತ್ತೆ. ಹಾಗಾಗಿ ಆ ಶಾಖ ಭೂಮಿಯಲ್ಲೇ ಉಳಿದು ಭೂಮಿಯನ್ನು ಇನ್ನೂ ಬಿಸಿಯಾಗುತ್ತೆ. ಈ ಹಸಿರುಮನೆ ಪರಿಣಾಮದಿಂದಾಗೇ ಭೂತಾಪ ಜಗದೆಲ್ಲೆಡೆ ಹೆಚ್ಚಾಗ್ತಿದೆ, ಹಿಮನದಿಗಳು ಕರಗ್ತಿವೆ, ಹವಾಮಾನ ವೈಪರೀತ್ಯಗಳಾಗ್ತಿವೆ ಅನ್ನೋದು ಬೇರೆ ಮಾತು.
ಹೆಚ್ಚಾಗ್ತಿರೋ ಇಂಗಾಲ:
ಮನೇಲಿ ಮೂರು ಜನ ಇದ್ರೆ ಎರಡು ಕಾರು, ಒಂದೋ ಎರಡೋ ಬೈಕಿರೋದು ಕಾಮನ್ನು ಅನ್ನೋ ಜಮಾನಕ್ಕೆ ಜನ ಬಂದ್ಬಿಟ್ಟಿದಾರೆ.ಮತ್ತೆ ಅಕ್ಕಪಕ್ಕದ ಮನೇಲಿದ್ದು , ಒಂದೇ ಆಫೀಸಿಗೆ ಹೋಗೋದಾದ್ರೂ ತಮ್ಮ ಪ್ರತ್ಯೇಕ ಕಾರುಗಳಲ್ಲಿ ಹೋದ್ರೇನೆ ಖುಷಿ ಈ ಬೆಂಗಳೂರಿಗರಿಗೆ ! ಒಂದು ದಿನ ಅವರ ಕಾರಲ್ಲಿ ಇವರು, ಇವರ ಕಾರಲ್ಲಿ ಅವರು ಒಟ್ಟಿಗೆ ಹೋಗೋ ಕಾರ್ ಪೂಲಿಂಗ್ ಮಾಡ್ಬೋದಲ್ವಾ ಅನ್ನೋದು ಎಲ್ಲರಿಗೂ ಗೊತ್ತಿದ್ದಿದ್ದೇ. ಆದ್ರೂ ಮಾಡೊಲ್ಲ. ಟ್ರಾಫಿಕ್ ಜಾಂ ಬಗ್ಗೆ ಎಲ್ಲರನ್ನು ದೂಷಿಸುತ್ತಾ ಹೊಗೆಯೆಬ್ಬಿಸಿ ಆ ಹೊಗೆ ಕುಡಿತಾ ಕೂರೋದ್ರಲ್ಲೇ ತೃಪ್ತಿ ಕೆಲೋ ಜನಕ್ಕೆ. ಈ ರೀತಿ ಹೆಚ್ತಾ ಇರೋ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚಾಗ್ತಿರೋದಲ್ದೇ ಈ ಮಾಲಿನ್ಯದಿಂದ ಹೆಚ್ಚಾಗ್ತಿರೋ ಇಂಗಾಲದಿಂದ ಭೂತಾಪವೂ ಹೆಚ್ತಾ ಇದೆ.
ಇನ್ನು ಹೆಚ್ಚುತ್ತಿರೋ ತಾಪದ ಬಗ್ಗೆ ಒಂದೆರಡು ಅಂಕೆ ಸಂಖ್ಯೆ.ಬೆಂಗಳೂರಲ್ಲಿ ಇಲ್ಲಿವರೆಗೆ ದಾಖಲಾಗಿರೋ ಅತೀ ಹೆಚ್ಚಿನ ತಾಪಮಾನ ೩೮.೩ ಡಿಗ್ರಿಯಂತೆ. ಅದು ದಾಖಲಾಗಿದ್ದು ಈ ವರ್ಷ ಅಥವಾ ಹಿಂದಿನ ವರ್ಷದಲ್ಲಲ್ಲ.ಅದು ೧೯೩೧ರಲ್ಲಂತೆ ! ಹಿಂದಿನ ವರ್ಷ ಏಪ್ರಿಲ್ ೧೩
ರಂದು ೩೭.೧ ಡಿಗ್ರಿ ಮುಟ್ಟಿದ್ದ ತಾಪ ಈಗಾಗಲೇ ೩೬ ಮುಟ್ಟಿ ಹಿಂದೆನೆಲ್ಲಾ ದಾಖಲೆಗಳನ್ನು ಮುರಿಯುವತ್ತ ದಾಪುಗಾಲಿಡುತ್ತಿದೆ ! ಇನ್ನಾದ್ರೂ ನಾವು ಎಚ್ಚೆತ್ತು ಅಳಿದುಳಿರೋ ಹಸಿರ ಹೊದಿಕೆಯನ್ನುಳಿಸಿಕೊಂಡು, ಪ್ರಕೃತಿಸ್ನೇಹಿಯಾದ ಜೀವನ ಶೈಲಿಯನ್ನ ಅಳವಡಿಸಿಕೊಳ್ಳದಿದ್ರೆ ಇದೇ ಬಿಸಿಲಬೆಂಕಿಯಲ್ಲಿ ಸುಟ್ಟು ಕರಕಲಾಗೋದು, ಬೆಂದು ಸಾಯೋದು ಶತಸಿದ್ದ.ಮುಂದೊಂದು ದಿನ ಉತ್ತರಭಾರತದಲ್ಲಿ ಈಗಾಗಲೇ ಆಗುತ್ತಿರುವಂತೆ ಇವತ್ತು ಸೆಖೆಗೆ ಇಷ್ಟು ಜನ ಸತ್ತರು ಅನ್ನೋ ಸುದ್ದಿಯನ್ನು ಬೆಂಗಳೂರಲ್ಲೂ ಕೇಳುವ ದುರಂತ ಬರಬಹುದೇನೋ :-(
Subscribe to:
Post Comments (Atom)
ಒಳ್ಳೆಯ ವಿಶ್ಲೇಷಕ ಬರಹ.
ReplyDeleteಬೆಂಗಳುರಿನಲ್ಲಿ ಇನ್ನಾದರೂ ತೆರೆದ ವಾಯು ತಾಣಗಳನ್ನು ಕಾಯ್ದುಕೊಳ್ಳಬೇಕಿದೆ.
ಧನ್ಯವಾದಗಳು ಬದ್ರಿ ಭಾಯ್... ನೀವಂದದ್ದು ೧೦೦% ನಿಜ
Deleteಒಳ್ಳೆಯ ವಿಶ್ಲೇಷಣೆ ಪ್ರಶಸ್ತಿ ... ಆದರೆ ಯಾರೊಬ್ಬರೂ ಪರಿಹಾರ ಹೇಳ ನಿಟ್ಟಿನಲ್ಲಿ ಏನೂ ಮಾಡಲೇ ತಯಾರಿಲ್ಲೆ ಹೇಳದು ಖೇದಕರ ಸಂಗತಿ...!
ReplyDeleteನನ್ನ ಬ್ಲಾಗಿಗೆ ಮೊದಲ ಭೇಟಿ ಅನುಸ್ತು ನಿಂದು.. ಖುಷಿ ಆತು ನಿಮ್ಮ ಮೆಚ್ಚುಗೆಯಿಂದ.. ಹೌದು. ಎಲ್ಲಾ ಹೇಳೋರೆ. ಮಾಡೋರಿಲ್ಲೆ :-(
ReplyDelete