ಹಿಂದಿನ ಭಾಗ: ನೂರ್ನಳ್ಳೀಲಿ ಅವ-೩
ಇಲ್ಲಿಯವರೆಗೆ: ಮಲೆನಾಡಿನ ಒಂದು ಹಳ್ಳಿ ನೂರ್ನಳ್ಳಿ. ಹಳ್ಳಿಯ ಜನ ಉಳಿದ ಹಳ್ಳಿಗಳಂತೆ ದಿನಾ ಸಂಜೆಯಾಯ್ತಂದ್ರೆ ಜೂಜಾಡೋದೋ ಕುಡಿಯೋದೋ ಮಾಡದೇ ಹತ್ತು ಹಲವು ನವೀನ ವಿಷಯಗಳಲ್ಲಿ ತೊಡಗಿಕೊಳ್ತಿದ್ರಿಂದ ಆ ಊರಿಗೆ ಆ ಹೆಸ್ರೋ ಅಥವಾ ಪಕ್ಕದೂರಿನ ಶಾಲೆಯಲ್ಲಿ ನೂರಕ್ಕೆ ನೂರು ಅಂಕ ತೆಗೆದ ಮೊದಲ ಹುಡ್ಗ ಈ ಊರಿನೋನೇ ಅಂತ ನೂರ್ನಳ್ಳಿ ಅಂತ ಹೆಸ್ರು ಬಂತಾ ಅತ್ವಾ ಎಲ್ಲಾ ಹಳ್ಳಿಗಳಂತೆ ಇದಕ್ಕೂ ಒಂದು ಹೆಸರಾ ಅಂತ ಆ ಊರಿನ ಹಿರಿತಲೆಗಳಿಗೂ ನೆನಪಿಲ್ಲ. ಆ ಊರಿಗೆ ಇತ್ತೀಚೆಗೆ ಬಂದ ಹೊಸಬನೊಬ್ಬ ಯಾರು ? ಎಲ್ಲಿಂದ ಬಂದ ಅಂತ ಎಲ್ಲರಿಗೂ ಕುತೂಹಲ. ಅವ ಬಂದ ಸಂಜೆಯಿಂದ ದಿನಾ ಒಬ್ಬೊಬ್ಬರು ಕಾಣೆಯಾಗುತ್ತಿದ್ದಾರೆ. ಮೊದಲ ದಿನ ಅಂಗಡಿ ಜಾಫರ್ ಭಾಯಾದ್ರೆ ಎರಡನೇ ದಿನ ದೇವಸ್ಥಾನದ ಭಟ್ರು. ಮೂರನೇ ದಿನ ಯಾರಿಗೆ ಗ್ರಾಚಾರ ಕಾದಿದ್ಯಪ್ಪ ಅನ್ನೋ ಚಿಂತೆಯಲ್ಲಿ ಎಲ್ಲರೂ. ಅವ ಬೆಂಗಳೂರಲ್ಲಿ ಬಾಂಬ್ ಹಾಕಿ ತಲೆಮರೆಸಿಕೊಂಡಿರೋ ಭಯೋತ್ಪಾದಕನಾ ಅನ್ನೋ ಅನುಮಾನ ಹಲವರಿಗೆ..
ನೂರ್ನಳ್ಳಿಗೆ ಬಂದ ಹೊಸಬ ಯಾರೆನ್ನೋ ಕುತೂಹಲ ಕ್ಷಣಕ್ಷಣಕ್ಕೂ ಜಾಸ್ತಿಯಾಗುತ್ತನೇ ಇತ್ತು. ಮೂರನೇ ದಿನ ಕೊನೆಯ ಬಸ್ಸಿಗೆ ಬಂದೋರಿಗೆ ರಸ್ತೆ ಬದಿಯ ಜಾಫರ್ ಸಾಬ್ರ ಅಂಗಡಿ ಒಳಗಿಂದ ಸಣ್ಣ ಬೆಳಕೂ, ಏನನ್ನೋ ತಡಕುತ್ತಿರೋ ಶಬ್ದವೂ ಕೇಳಿತ್ತಂತೆ. ಜಾಫರ್ ಬಾಯ್ ಮತ್ತೆ ಬಂದ್ರಾ ಅಂತ ಮಾತಾಡಿಸೋಕೆ ಹೋದ್ರೆ ಯಾವ ಪ್ರಶ್ನೆಗಳಿಗೂ ಉತ್ತರವಿಲ್ಲ. ಎಲ್ಲೋ ಏನೋ ತಪ್ಪಾಗಿದೆ ಅಂತ ಅರಿತ ಅವರು ಊರಿಗೆ ಬಂದು ವಿಷಯ ತಿಳಿಸಿದ್ದಾರೆ. ಊರವರೆಲ್ಲಾ ಗುಂಪಾಗಿ ಜಾಫರ್ ಸಾಹೇಬ್ರ ಅಂಗಡಿ ಹತ್ರ ಹೋದ್ರು. ಆದ್ರೇನು. ಅಂಗಡಿ ಬೀಗ ಒಡೆದಿದೆ. ಬಾಗಿಲು ಹಾರೊಡಿದಿದೆ. ಒಳಗಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ . ಯಾರೋ ಕಳ್ಳರು ನುಗ್ಗಿದ್ದಾರೆ ಅಂದ್ಕೊಂಡ್ರೆ ಅಂಗಡಿಯಿಂದ ಏನೂ ಕಳುವಾದಂತೆ ಕಾಣುತ್ತಿಲ್ಲ. ಗಲ್ಲಾಪೆಟ್ಟಿಗೆಗೆ ಹಾಕಿದ ಬೀಗ ಹಂಗೇ ಇದೆ. ಮತ್ತೆ ಅಂಗಡಿಗೆ ಬಂದೋರು ಯಾಕೆ ಬಂದ್ರು ? ಎಲ್ಲಿಂದ ಬಂದ್ರು ಅವ್ರ ಉದ್ದೇಶ ಏನಾಗಿರಬಹುದು ಅನ್ನೋ ನೂರು ಪ್ರಶ್ನೆಗಳು ಕಾಡತೊಡಗಿದವು. ಕಳ್ಳತನಕ್ಕೆ ಅಂತ್ಲೇ ಬಂದೋರು ಊರವರ್ನ ನೋಡಿ ಓಡಿ ಹೋದ್ರಾ ಅನ್ನೋ ಅನುಮಾನಗಳೂ ಕಾಡತೊಡಗಿದ್ವು. ಯಾವ ಅನುಮಾನಗಳಿಗೂ ಸ್ಪಷ್ಟ ಉತ್ತರಗಳು ಸಿಗದೇ ಹೋದಾಗ ಇದ್ದೇ ಇದೆಯಲ್ಲ.ಅದೇ ಉತ್ತರ ರೆಡಿಯಾಗಿತ್ತು. ಇದು ನೂರ್ನಳ್ಳಿಗೆ ಬಂದ ಆ ಅವನ ಕೆಲಸವೇ ಇರ್ಬೇಕು! ನಿನ್ನೆ ದೇವಸ್ಥಾನದ ಬಾಗಿಲು ತೆಗೆದಂಗೇ ಅರ್ಚಕರು ಮಾಯವಾಗಿದ್ರು. ಇಲ್ಲಿ ಜಾಫರ್ ಸಾಬ್ ಮುಂಚೇನೆ ಮಾಯವಾದ್ರೂ ಇವತ್ತು ಅವರ ಅಂಗಡಿ ಒಡೆದಿದೆ. ಇವೆರಡಕ್ಕೂ ಏನಾದ್ರೂ ಲಿಂಕಿದ್ಯಾ ? ,,ಗೊತ್ತಿಲ್ಲ. ಏನೋ ಇದೆ. ಆದ್ರೆ ಏನೂಂತ ಗೊತ್ತಾಗ್ತಿಲ್ಲ ಅನ್ನೋ ಯೋಚನೆ ಹಲವರು ಮನಸ್ಸಲ್ಲಿ ಸುಳೀತಿತ್ತು.
ಮಳೆಗಾಲವಲ್ಲದಿದ್ದರೂ ಆ ರಾತ್ರಿ ಮಳೆಯ ಜಿಟಿ ಜಿಟಿ ಶುರುವಾಗಿತ್ತು. ಆರಾಮಾಗಿ ಮನೆಯಲ್ಲಿ ಮಲಗಿರಬಹುದಾಗಿದ್ದ ಜೀವವೊಂದು ತನ್ನ ಬಾಲ್ಯದ ನೆನಪಗಳುಳ್ಳ ಹಳ್ಳಿಗೆ ಬಂದು ಪರಿತಪಿಸುತ್ತಿತ್ತು. ಛೇ ಮೊದಲ ದಿನವೇ ನಾನು ನಾನ್ಯಾರೆಂದು ಹೇಳಿಬಿಡಬೇಕಿತ್ತು. ಜಾಫರ್ ಭಾಯ್ ಅಂಗಡೀಲಿ, ಇಲ್ಲ ಭಟ್ಟರ ಮನೇಲಿ, ಕೊನೆಗೆ ಮೇಷ್ಟರ ಬಳಿಯಾದ್ರೂ ನನ್ನ ಬಗ್ಗೆ ಹೇಳ್ಬಿಡಬೇಕಿತ್ತು. ಕೊನೆ ಪಕ್ಷ ಆಗ ಈ ಮಳೆಯಲ್ಲಿ ಆಸರೆಯಿಲ್ಲದೆ ನೆನೆಯೋ ಪರಿಸ್ಥಿತಿಯಾದರೂ ತಪ್ಪುತ್ತಿತ್ತೇನೋ ಅಂತನಿಸಿತು. ಊಹೂಂ. ಈಗಂದೇನು ಪ್ರಯೋಜನವಿಲ್ಲ. ಊರ ಹೊರಗಿನ ಅಂಬಿಕಜ್ಜಿಯ ಮನೆಗಾದ್ರೂ ಮುಂಚೇನೆ ಹೋಗ್ಬಿಡಬೇಕಿತ್ತು ಹಿಂದಿನ ದಿನದಂತೆ. ಆದ್ರೆ ಇವತ್ತು ಆ ಗಣಿಗಾರಿಕೆಯತ್ತ ಹೋಗಿ ಮಳೇಲಿ ನರಳುವಂತಾಯ್ತು. ಈ ಮಳೆ ನಿಲ್ಲೋ ಹಂಗಿಲ್ಲ. ಊರ ಹೊರಗಿನ ಅಂಬಿಕಜ್ಜಿ ಮನೆಗೆ ಹೋಗೋ ಹಂಗೂ ಇಲ್ಲ. ಛೇ. ನಿಲ್ಲಬಾರದೇ ಮಳೆ ಅಂತ ತಾ ನಿಂತ ಮರವನ್ನೇ ನೋಡುತ್ತಿದ್ದಾನೆ. ಆ ಮಳೆಹನಿಗಳಿಂದ ಮರದ ಧೂಳೆಲ್ಲಾ ತೂಳೆದು ಈತನ ಆಗಮನಕ್ಕೆಂದೇ ತಳಿರು ತೋರಣವಿಟ್ಟಂತಾ ಭಾವ. ತಲೆಮೇಲೆ ಮರದ ದಟ್ಟೆಲೆಗಳೇ ಸೂರು. ಗಂಟೆಗಳಿಂದ ಒಂದೇ ಸಮನೆ ಸುರಿಯುತ್ತಿರೋ ಮಳೆಯಲ್ಲಿ ಆತ ರಾತ್ರಿಯ ಊಟದ ನೆನಪನ್ನೇ ಮರೆತುಬಿಟ್ಟಿದ್ದಾನೆ. ಮಳೆ ಭೋರೆಂದು ಶುರುವಾದಾಗ ಅಂಬಿಕಜ್ಜಿಯ ಮನೆಯ ದಾರಿಯಲ್ಲಿದ್ದವ ಸಿಕ್ಕಿದ ಮರದ ಕೆಳಗೆ ನುಸುಳಿದ್ದ. ಆ ಮರದಲ್ಲೇ ಬಾಲ್ಯದಲ್ಲಿ ಆಡಿದ್ದ ಮರಕೋತಿಯಾಟ , ಪಕ್ಕದ ಮರದಲ್ಲಿ ಹುಡುಕುತ್ತಿದ್ದ ಗುಡ್ಡೆಗೇರು, ಅದರ ಪಕ್ಕದ ಕೌಳಿ , ಚೌಳಿ ಮಟ್ಟಿಗಳು ನೆನಪಾದವು. ಅಂದು ಆಟದಲ್ಲಿ ನಾಯಕನಂತೆ ಮುಂಚೂಣಿಯಲ್ಲಿದ್ದವ ಇಂದು ಅದೇ ಊರಲ್ಲಿ ಭಯೋತ್ಪಾದಕನೆಂಬ ಅನುಮಾನ ಹುಟ್ಟಿಸಿದ ಪರಿ ಕಂಡು ಮರದೆಲೆಗಳ ಮರೆಯಿಂದ ಹಣುಕೋ ಚಂದ್ರ ನಗುತ್ತಿದ್ದ.
ಹೌದು. ಎಲ್ಲಾ ಶುರುವಾದ್ದೇ ಈ ಗಣಿಯಿಂದ. ಊರ ಪಕ್ಕದ ನೂರ್ಮನೆ ಗುಡ್ಡದಲ್ಲಿ ಕಬ್ಬಿಣದಂಶವಿದೆಯಂತ ಅದ್ಯಾವುದೋ ಸಂಶೋಧನೆ ತಿಳಿಸಿದ್ದೇ ತಡ. ಗುಡ್ಡವನ್ನು ಸೀಳಲು ಅದೆಷ್ಟೊ ಯಂತ್ರಗಳು ಬಂದು ನಿಂತಿದ್ದವು. ಆದ್ರೆ ಆ ಗುಡ್ಡದಲ್ಲೇ ಇರೋ ಮಾರಮ್ಮನ ಕಲ್ಲೇ ಅವರಿಗೆ ಗುಡ್ಡ ಒಡೆಯೋದಕ್ಕೆ ತಡೆಯಾಗಿತ್ತು. ವರ್ಷಕ್ಕೊಮ್ಮೆ ಜಾತ್ರೆ ನಡೆಯೋ ಆ ಮಾರಮ್ಮನೆಂದ್ರೆ ನೂರ್ನಳ್ಳಿಯವರಿಗೆ ಊರ ದೇವತೆಯಂತೆ. ಆ ದೇವ್ರು ಅಲ್ಲಿರೋ ತನಕವೂ ಗುಡ್ಡ ಬಗೆಯುವಂತಿಲ್ಲ. ಏನ್ಮಾಡೋದು ಅಂತ ಸಿಕ್ಕಾಪಟ್ಟೆ ಯೋಚಿಸಿದವ್ರಿಗೆ ನೆನಪಾಗಿದ್ದು ಊರ ಪೂಜಾರಿಗಳು. ಹೆಂಗಾರು ಮಾಡಿ ಆ ಮಾರಮ್ಮನನ್ನ ಗುಡ್ಡದಿಂದ ಬೇರೆಲ್ಲಾದ್ರೂ ಪ್ರತಿಷ್ಟಾಪಿಸಿವಂತೆ ಮಾಡಿಬಿಟ್ರೆ ಅನ್ನೋ ಪ್ರಳಯಾಂತಕ ಐಡಿಯಾ ಹೊಳೆದಿದ್ದೇ ತಡ ಊರ ಪೂಜಾರಿಗಳೊಂದಿಗೆ ರಹಸ್ಯ ಮಾತುಕತೆಗಳು ನಡೆದಿದ್ವು. ಅಂತೂ ಇಂತೂ ಆ ದೋಷ, ಈ ದೋಷಗಳ ಹೆಸರಲ್ಲಿ ಗುಡ್ಡದ ನೆತ್ತಿಯಲ್ಲಿದ್ದ ಮಾರಿಕಲ್ಲನ್ನ ಕಿತ್ತು ಅದಕ್ಕೆಂದೇ ಗುಡ್ಡದ ಬುಡದಲ್ಲೊಂದು ಗುಡಿ ಕಟ್ಟಲಾಯ್ತು. ಆ ದೇಗುಲಕ್ಕೆ ಸಿಕ್ಕಾಪಟ್ಟೆ ದಾನ ಕೊಟ್ಟರೆಂದು ಗಣಿಯವರ ಹೆಸರನ್ನು ದೇಗುಲದ ಎದುರಿಗಿನ ಕರಿಗಲ್ಲಲ್ಲಿ ಕೆತ್ತೂ ಆಯ್ತು !. ಇನ್ನೇನು ಗಣಿಗಾರಿಕೆ ಶುರುವಾಗಿಯೇ ಬಿಡುತ್ತದೆಯೆಂಬ ಭೀತಿಯಲ್ಲಿದ್ದಾಗ ಗಣಿಗಾರಿಕೆಗೆ ಒಂದು ಪರಿಸರ ಪ್ರೇಮಿ ಸಂಸ್ಥೆಯಿಂದ ಸ್ಟೇ ಬಂತು. ಕೋರ್ಟಲ್ಲಿ ಅಕ್ರಮವಾಗಿ ಜನರ ಜಮೀನು ವಶಪಡಿಸಿಕೊಳ್ಳಲಾಗಿದೆ ಅಂತ ಕೇಸಿತ್ತು. ಆದ್ರೆ ನೂರ್ನಳ್ಳಿ ಜನರೇ ನಾವು ಆ ಭೂಮಿಯನ್ನು ಮಾರಿದ್ದೇವೆ. ಗಣಿಗಾರಿಕೆಗೆ ನಮ್ಮ ಯಾವ ತಕರಾರೂ ಇಲ್ಲವೆಂದು ತಿರುಗಿಬಿದ್ದರು. ಆಗ ರಾಜ್ಯಾದ್ಯಂತ ಇದೇ ಪ್ರಸಂಗ ಸುದ್ದಿಯಾದಾಗ ಆ ಊರಿನವನೇ ಆದ ಇವನಿಗೆ ಯಾಕೋ ಏನೋ ಸರಿಯಾಗಿಲ್ಲವೆಂಬ ಅನುಮಾನದ ವಾಸನೆ ಹೊಡೆದಿತ್ತು. ಇದರ ಹಿಂದೇನಿದೆಯೆಂದು ತಿಳಿಯಲೆಂದೇ ಅವ ಅವತ್ತು ಊರಿಗೆ ಹೊರಟಿದ್ದ.
ಊರಿಗೆ ಬಂದು ಹೋಗುವವರ ಚಲನವಲನಗಳ ಮೇಲೆ , ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ರಸ್ತೆ ಪಕ್ಕದ ಅಂಗಡಿಯ ಜಾಫರ್ ಸಾಬ್ ಒಂದು ಕಣ್ಣು ಇಟ್ಟೇ ಇಟ್ಟಿದ್ರು. ಅವತ್ತು ಊರಿಗೆ ಬಂದು ತನ್ನ ಪರಿಚಯ ಮಾಡಿಕೊಂಡು ಈ ಗಣಿಗಾರಿಕೆಯ ವಸ್ತುಸ್ಥಿತಿ ಬಗ್ಗೆ ಮಾತಾಡುತ್ತಿದ್ದಾಗ ಅವರಿಂದಲೇ ಪೂಜಾರಿಗಳ ವಿಷಯ ತಿಳಿದಿದ್ದು ಇವನಿಗೆ. ತಮ್ಮ ಅರ್ಧ ರಾತ್ರಿ ಸಂಚಾರಗಳ, ತಡರಾತ್ರಿಯ ಶಬ್ದಗಳ ಬಗ್ಗೆ ಜಾಫರ್ ಸಾಬ್ ಗಮನಿಸ್ತಿದಾರೆ ಅಂತ ಗಣಿಯವರಿಗೆ ಅನುಮಾನ ಬಂದಿರೋ ಸಾಧ್ಯತೆಯೂ ಇತ್ತು. ಆದ್ರೆ ಈ ಗಮನಿಸುವಿಕೆಯ ಬಗ್ಗೆ ಯಾವ ಸಾಕ್ಷ್ಯಗಳೂ ದಕ್ಕದೇ ಜಾಫರರ ಜೀವ ಇಲ್ಲಿಯವರೆಗೆ ಉಳಿದಿತ್ತು. ಆದ್ರೆ ಈ ಅನುಮಾನವೇ ನಾಳೆ ಜಾಫರರ ಜೀವ ತೆಗೆಯೋ ಸಾಧ್ಯತೆ ದಿನಾ ದಿನಾ ಹೆಚ್ಚಾಗುತ್ತಲೇ ಇತ್ತು. ಈ ಗಣಿಗಾರಿಕೆಯ ಬಗ್ಗೆ ಇವತ್ತಲ್ಲ ನಾಳೆ ಮತ್ತೆ ಕೇಸು ಬಿದ್ದರೆ ಬೇಕಾಗುವಂತಹ ಮಧ್ಯರಾತ್ರಿಯಲ್ಲಿ, ಅಲ್ಲಿ ಇಲ್ಲಿ ಕದ್ದು ತೆಗೆದ ಫೋಟೋಗಳಿದ್ದವು ಜಾಫರ್ ಬಳಿಯಲ್ಲಿ. . ಹಾಗಾಗೇ ಜಾಫರರ ಪ್ರಾಣವುಳಿಸೋ ಸಲುವಾಗಿ ಒಂಟಿಯಾಗಿ ನೂರ್ನಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ಅವರನ್ನು ದೂರದ ಅವರ ಮಗನ ಮನೆಗೆ ಕಳಿಸಿಕೊಟ್ಟಿದ್ದ ಇವ. ಆದ್ರೆ ಇವ ಬಯಸಿದ್ದೇ ಬೇರೆ. ಆಗಿದ್ದೇ ಬೇರೆ. ಯಾರೋ ಇವನೇ ಅವರಿಗೆ ಏನೋ ಮಡಿರಬೇಕೆಂದೋ. ಬೆಂಗಳೂರಲ್ಲಿ ಬಾಂಬ್ ಸಿಡಿಸಿ ಪರಾರಿಯಾದವ ಇವನೇ ಎಂದೂ ಸುದ್ದಿ ಹಬ್ಬಿಸಿಬಿಟ್ಟಿದ್ದರು.
ಮಾರನೇ ದಿನ ಭೇಟಿಯಾಗಿದ್ದು ಊರ ಪೂಜಾರಿಗಳನ್ನ. ಸತ್ಯ ಸಂಗಂತಿ ಮೂರನೆಯ ವ್ಯಕ್ತಿಗೂ ಗೊತ್ತಾಗಿರೋದನ್ನ ತಿಳಿದೇ ಅವರು ಬೆವೆತು ಬಿಟ್ಟಿದ್ರು. ಗಣಿಯವರೊಂದಿಗೆ ಶಾಮೀಲಾಗಿ ಊರ ನಂಬಿಕೆಗಳಿಗೆ ಮೋಸ ಮಾಡಿದ್ದಕ್ಕೆ, ಊರ ಸಂಪತ್ತು ಕೊಳ್ಳೆ ಹೊಡೆಯೋ ಪ್ರಯತ್ನದಲ್ಲಿರುವವರಿಗೆ ಸಹಾಯ ಮಾಡೋ ಹಾಗಿರೋದಕ್ಕೆ ಪಶ್ಚಾತ್ತಾಪ ಪಡುತ್ತಿದ್ದರು ಅವರು. ಇವನ ಪರವಾಗಿ , ಗಣಿಯ ವಿರುದ್ದ ಸಾಕ್ಷಿಯಾಗಲೂ ಒಪ್ಪಿದ್ದರು. ಆದ್ರೆ ಊರಲ್ಲೇ ಇದ್ರೆ ಅವರ ಜೀವಕ್ಕೂ ಅಪಾಯ ಇತ್ತು. ಹಾಗಾಗೇ ಅವರನ್ನ ಪೇಟೆಯ ತಮ್ಮ ಮಗಳ ಮನೆಗೆ ಕಳುಹಿಸಿದ್ದ. ಮಾರನೇ ದಿನ ಏನಕ್ಕೂ ಗುಡಿಯ ಬಳಿ ಬಂದ ಗಣಿಯವರಿಗೆ ಭಟ್ಟರನ್ನು ಕಾಣದೇ ಏನೋ ಸಂಶಯ ಬಂದಿತ್ತು. ಏನೆಂದು ಸ್ಪಷ್ಟಗೊಳ್ಳದಿದ್ದರೂ ಊರವರ ಕಣ್ಣಲ್ಲಿ ಭಟ್ಟರನ್ನು ತುಚ್ಚೀಕರಿಸಿ ಆಮೇಲೆ ಅದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳೋ ಬಯಕೆಯಲ್ಲಿ ದೇಗುಲದ ಬೀಗ ಒಡೆದು ಭಟ್ಟರ ಮೇಲೆ ಕಳ್ಳತನದ ಆರೋಪ ಬರುವಂತೆ ಮಾಡಿದ್ದರು. ಆದರೆ ಅವರು ಅಂದುಕೊಂಡದ್ದೇ ಬೇರೆ. ಊರಿಗೆ ಬಂದಿರೋ ಅನಾಮಿಕನೇ ದೇಗುಲದ ಬೀಗ ಒಡೆದಿದ್ದಾನೆ. ಅದಕ್ಕೆ ಅಡ್ಡ ಬಂದ ಭಟ್ಟರನ್ನು ಮಾಯ ಮಾಡಿದ್ದಾನೆ ಎಂಬ ಆರೋಪ ಜನರ ಬಾಯಲ್ಲಿ ಆಡುತ್ತಿತ್ತು. ಅವತ್ತು ಸಂಜೆ ಬೇರೆ ಯಾರೋ ಗಣಿಯ ಹತ್ತಿರ ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಕೆಲಸಗಾರನನ್ನು ಹೆದರಿಸಿದ್ದಾರಂತೆ. ಆದ್ರೆ ಅವನು ಊರಿಗೆ ಬಂದ ಅನಾಮಿಕನೇನಾ ? ಗೊತ್ತಿಲ್ಲ. ಹಾಗೇನಾದ್ರೂ ಆಗಿ ಗಣಿ ಊರಿಂದ ಕಾಲ್ಕಿತ್ತು ಈ ಅನಾಮಿಕ ಊರ ದೃಷ್ಟಿಯಲ್ಲಿ ಹೀರೋ ಆಗೋದ್ನ ತಪ್ಪಿಸೋ ಅನಿವಾರ್ಯತೆ ಇತ್ತು. ಅದಕ್ಕೆ ಜಾಫರ್ ಸಾಹೇಬ್ರ ಅಂಗಡಿಯ ಬೀಗವನ್ನೂ ಒಡೆದು ಆ ಆರೋಪವನ್ನೂ ಅನಾಮಿಕನ ತಲೆಗೆ ಕಟ್ಟೋ ಪ್ರಯತ್ನ ನಡೆದಿತ್ತು. ಆದ್ರೆ ಮಾನವನೊಂದು ಬಗೆದ್ರೆ ಕಾಲವಿನ್ನೊಂದು ಬಗೆಯುತ್ತಂತೆ.. ವಿಧಿಯ ಆಸೆ ಬೇರೆಯೇ ಇತ್ತು..
(ಮುಂದುವರೆಯಲಿದೆ)
ನೂರ್ನಳ್ಳಿಲಿ ಅವ -೪ ಭಾಗ ಚೆನ್ನಾಗಿದೆ.
ReplyDeleteThank You Badri Sir
ReplyDelete