Monday, March 16, 2015

ಬೆಂಗಳೂರ ಅತೀ ಪುರಾತನ ದೇಗುಲ -2: ಬೇಗೂರ ಪಂಚಲಿಂಗೇಶ್ವರ ದೇಗುಲ

ದೊಮ್ಮಲೂರ ಚೊಕ್ಕನಾಥಸ್ವಾಮಿ ದೇಗುಲ ಎಂಬ ಚೋಳರ ದೇಗುಲ ನೋಡಿದಾಗಿಂದ ಬೆಂಗಳೂರಲ್ಲಿ ಇಂತಾ ನೋಡದೇ ಹೋದ ಚೋಳರ ದೇಗುಲಗಳು ಎಷ್ಟಿರಬಹುದಪ್ಪಾ ಅಂತ ಕುತೂಹಲಕ್ಕೊಮ್ಮೆ ಗೂಗಲಾಡಿಸಿದ್ದೆ. ಅತೀ ಆಶ್ಚರ್ಯವೆನ್ನುವಂತೆ ಹೆಸರೇ ಕೇಳದ ಅನೇಕಾನೇಕ ದೇಗುಲಗಳ ವಿವರಗಳು ತೆರೆದುಕೊಂಡಿದ್ದವು ಆಗ. ಪಟ್ಟಣದ ಜಗಮಗದ ನಡುವೆ ತಣ್ಣಗೆ ಮೂಲೆಯಲ್ಲೆಲ್ಲೋ ಕೂತು ತಮ್ಮ ಇರುಹನ್ನೇ ತೋರ್ಪಡಿಸದಂತೆ ತಣ್ಣಗೆ ಉಸಿರಾಡುತ್ತಿರುವ ಅಂತಹ ಎರಡು ದೇಗುಲಗಳ ದರ್ಶಿಸುವ ಭಾಗ್ಯ ದೊರಕಿತ್ತು ಈ ವಾರ. ಶಾಸನ ಅನ್ನೋದು ದೇಗುಲದ ಹೊರಭಾಗದಲ್ಲಿ ಇರೋ ಗೋಡೆಯ ಡಿಸೈನ್ ತರ, ಹೊರಭಾಗದಲ್ಲಿನ ಪತ್ರೆ ಗಿಡಗಳ ಬಳಿಯ ಉಳಿದೆಲ್ಲಾ ಕಲ್ಲುಗಳ ರೀತಿ ತುಂಡಾದ ಮತ್ತೊಂದು ಕಲ್ಲಿನಂತೆ ಕಾಣಲ್ಪಡುವ ಸ್ಥಿತಿಯಲ್ಲಿದ್ದ ಇವುಗಳ ಕಂಡು ಸಖತ್ ಬೇಸರವಾಯ್ತು. ಒಂದೆಡೆ ಚೋಳರ ಕಾಲದ ಕೆತ್ತನೆಗಳು ಫ್ಯಾಷನ್ ಇಲ್ಲದವಂತೆ ಕಾಣಲ್ಪಟ್ಟು ಪೈಂಟ್ ಹೊದಿಕೆಯಡಿ ಉಸಿರುಗಟ್ಟುತ್ತಿದ್ದರೆ ಮತ್ತೊಂದೆಡೆ ಲೈಟು, ಉತ್ಸವಗಳ ಝಗಮಗದಲ್ಲಿ ಮೂಲ ಸೌಂದರ್ಯವೇ ಮರೆತು ಹೋಗುವಂತಿತ್ತು. ಇಂತಾ ಎಷ್ಟೋ ದೇಗುಲಗಳು ತಮ್ಮ ಸ್ವರೂಪವನ್ನೇ ಕಳೆದುಕೊಂಡು ಕಾಲಗರ್ಭದಲ್ಲಿ ಮರೆಯಾಗೋ ಮುನ್ನ ಆಸಕ್ತಿಯುಳ್ಳ ಕೆಲ ಸ್ನೇಹಿತರಿಗಾದರೂ ಅವನ್ನು ಪರಿಚಯಿಸೋ ಪ್ರಯತ್ನವೇ ಈ ಲೇಖನ

ಬೇಗೂರಿನ ಪಂಚಲಿಂಗೇಶ್ವರ ದೇಗುಲ:
Begur Panchalingeshwara temple

ಬೇಗೂರಿನಲ್ಲಿನ ನಾಗೇಶ್ವರ ಅಥವಾ ನಾಗನಾಥೇಶ್ವರ ದೇಗುಲವು ಪಂಚಲಿಂಗೇಶ್ವರ ದೇಗುಲವೆಂದೂ ಹೆಸರು ಪಡೆದಿದೆ. ಶ್ರೀ ಕಾಳೀಕಮಟೇಶ್ವರ, ಶ್ರೀ ನಗರೇಶ್ವರ, ಶ್ರೀ ಪಾರ್ವತೀ ನಾಗೇಶ್ವರ, ಶ್ರೀ  ಚೋಳೇಶ್ವರ, ಶ್ರೀ ಕರ್ಣೇಶ್ವರನೆಂಬ ಐದು ಪ್ರಧಾನ ದೇಗುಲಗಳು ಇಲ್ಲಿರುವುದರಿಂದ ಇದಕ್ಕೆ ಪಂಚಲಿಂಗೇಶ್ವರನೆಂದೂ ಹೆಸರು. ಚೋಳರ ಕಾಲದ ದೇಗುಲಗಳ ಅರಸುತ್ತಿದ್ದ ನನಗೆ ಗಂಗರ ಕಾಲದ ದೇಗುಲವಿದು ಅಂತ ತಿಳಿದು ಇನ್ನೂ ಆಶ್ಚರ್ಯವಾಯ್ತು. ಇಲ್ಲಿನ ನಾಗೇಶ್ವರ ಅಥವಾ ನಾಗನಟೇಶ್ವರ ದೇಗುಲವೆಂಬುದು ಪಶ್ಚಿಮದ ಗಂಗರಸ  ನೀತಿಮಾರ್ಗ ೧(843-870) ಮತ್ತು ಅವನ ಮೊಮ್ಮಗ ಹಿರಿಗಂಗ ನೀತಿಮಾರ್ಗ೨(೯೦೭-೯೨೧)ನ ಕಾಲದಲ್ಲಿ ಕಟ್ಟಿಸಲ್ಪಟ್ಟಿದ್ದು ಅನ್ನುತ್ತವೆ ಮೂಲಗಳು. ಗಂಗರ ಕಾಲದಲ್ಲಿ ಚೋಳೇಶ್ವರ ಅನ್ನೋ ದೇಗುಲ ಹೇಗೆ ಬಂತಪ್ಪಾ ಅಂದ್ರಾ ? ಅದೊಂದು ಆಸಕ್ತಿಕರ ವಿಷಯ.ಕ್ರಿ.ಶ ೩೫೦ ರಿಂದ ೧೦೦೦ರದ ವರೆಗೆ ಆಳಿದ ಗಂಗರ ಆಳ್ವಿಕೆ ಕೊನೆಗೊಳ್ಳುವಲ್ಲಿ ಕ್ರಿ.ಶ ೯೪೯ರ ತೆಕ್ಕೋಲಂ ಕಾಳಗ, ಸಾವಿರದ ಸುಮಾರಿಗೆ ಮಾನ್ಯಕೇಟದ ಯುದ್ದದಲ್ಲಿ ಗಂಗರು ಸಾಮಂತರಾಗಿದ್ದ ರಾಷ್ಟ್ರಕೂಟರು ಕಲ್ಯಾಣದ ಚಾಲುಕ್ಯರಿಗೆ ಸೋತುದು ಪ್ರಮುಖ ಪಾತ್ರವಹಿಸುತ್ತದೆ. ತೆಕ್ಕೋಲಂ ಕಾಳಗದಲ್ಲಿ ಪಶ್ಚಿಮದ ಗಂಗ, ವೈದುಂಬರ, ಬಾಣರ ಸಂಯುಕ್ತ ಸೇನೆಯ ಚೋಳರಸ ರಾಜಾದಿತ್ಯನನ್ನು ಸೋಲಿಸಿದರ ಪ್ರತೀಕಾರವೆಂಬಂತೆ ಕ್ರಿ.ಶ ಸಾವಿರದ ಸುಮಾರಿಗೆ ಗಂಗರ ಮೇಲೆ ಯುದ್ದ ಸಾರಿದ ಚೋಳರಸ ರಾಜ ರಾಜ ಚೋಳನು ಅವರನ್ನು ಸೋಲಿಸಿ ಪಶ್ಚಿಮ ಗಂಗರ ಸುದೀರ್ಘ ಆಡಳಿತವನ್ನು ಕೊನೆಗಾಣಿಸುತ್ತಾನೆ ಎಂಬುದನ್ನು ಹಿಂದಿನ ಭಾಗದಲ್ಲಿ ನೋಡಿದ್ದೆವು.. ಗಂಗರನ್ನು ಸೋಲಿಸಿದಾಗ ಬೆಂಗಳೂರು ಚೋಳರ ಕೈವಶವಾಗುತ್ತದೆ. ನಂತರದಲ್ಲಿ ಮೂಲ ದೇಗುಲಗಳ ಜೊತೆಗೆ ಶ್ರೀ ಚೋಳೇಶ್ವರ ಮತ್ತಿತರ ದೇಗುಲಗಳ ನಿರ್ಮಾಣವಾಯಿತು ಎನ್ನುತ್ತದೆ ಇತಿಹಾಸ.


ಬೇಗೂರಿಗೆ ಹೋಗೋದು ಹೇಗೆ ?
ಬೊಮ್ಮನಹಳ್ಳಿಯಿಂದ ಬೇಗೂರು ಕಡೆ ಹೋಗೋ ಸುಮಾರಷ್ಟು ಬಸ್ಸುಗಳು ಸಿಗುತ್ವೆ. ಬನಶಂಕರಿಯಿಂದ ಹೋಗ್ಬೋಕೂಂದ್ರೆ ೬೦೦ ಸೀರಿಸ್ ನ ಬಸ್ಸುಗಳು ಸಿಗುತ್ವೆ

Sri Nagareshwara temple, Begur
ಕಟ್ಟದ ಸಂಕೀರ್ಣ ಮತ್ತು ಹೊರಾಂಗಣ ವಿನ್ಯಾಸ:
ದೇಗುಲಕ್ಕೆ ಈಗಿರುವ ಗೇಟಿನ ಮೂಲಕ ಪ್ರವೇಶಿಸಿದರೆ ಮೊದಲು ಸಿಗುವುದು ಶ್ರೀ ನಗರೇಶ್ವರ ದೇವಸ್ಥಾನ. ಅದರ ಬಲಭಾಗದಲ್ಲಿ ಕಾಳೀ ಕಮಟೇಶ್ವರ ದೇಗುಲ. ಕಾಳೀ ಕಮಟೇಶ್ವರನ ಪಕ್ಕದಲ್ಲಿ ಪಾರ್ವತೀ ಸಮೇತ ನಾಗೇಶ್ವರ ಮತ್ತು ಶ್ರೀ ಚೋಳೇಶ್ವರ ದೇಗುಲಗಳಿವೆ. ಅದರ ಪಕ್ಕದಲ್ಲಿ ಸ್ವಲ್ಪ ದೂರದಲ್ಲೆಂಬಂತೆ ಇರುವುದು ಶ್ರೀ ಕರ್ಣೇಶ್ವರ ದೇಗುಲ. ಎಡಮೂಲೆಯಲ್ಲಿರುವ ನಗರೇಶ್ವರ ಮತ್ತು ಬಲಮೂಲೆಯಲ್ಲಿರುವ ಶ್ರೀ ಕರ್ಣೇಶ್ವರ ದೇಗುಲಗಳಿಗೆ ಯಾವುದೇ ಗೋಪುರಗಳಿಲ್ಲ. ಉಳಿದ ದೇಗುಲಗಳಿಗೆ ಗೋಪುರಗಳಿವೆ. ಸಣ್ಣದಾದ ಶ್ರೀ ಕಾಳೀ ಕಮಟೇಶ್ವರವು ಸಣ್ಣದಾದ ಗೋಪುರವನ್ನು ಹೊಂದಿದ್ದರೆ ಶ್ರೀ ನಾಗೇಶ್ವರ ದೇಗುಲವು ವಿಶಾಲವಾದ ವೃತ್ತಾಕಾರದ ಗೋಪುರವನ್ನು ಹೊಂದಿದೆ.
Gopura of Kali kamateshwara

Round shaped dome of Nageshwara temple



ಇದರಲ್ಲಿರುವ ಎಂಟು ನಂದಿಗಳು ಪರಸ್ಪರ ನೋಡುವಂತಿರುವ ಎರಡೆರಡು ನಂದಿಗಳ ಜೋಡಿಗಳಲ್ಲಿವೆ. ಪಕ್ಕದಲ್ಲಿರುವ ಚೋಳೇಶ್ವರ ದೇಗುಲದ ಗೋಪುರವು ಚೌಕಾಕಾರದಲ್ಲಿದ್ದು ನಾಲ್ಕೇ ನಂದಿಗಳನ್ನು ಹೊಂದಿದೆ. ಈ ನಂದಿಗಳು ನಾಲ್ಕು ದಿಕ್ಕಿಗೆ ಮುಖ ಮಾಡದೇ ಎರಡು ದಿಕ್ಕಿಗೆ ಮುಖ ಮಾಡಿದ ಎರಡು ನಂದಿಗಳ ಎರಡು ಜೋಡಿಯಂತಿವೆ. ನಾಗೇಶ್ವರ ಮತ್ತು ಚೋಳೇಶ್ವರ ದೇಗುಲಗಳ ಮಧ್ಯೆ ಶಿವಭಕ್ತ ಚಂಡಿಕೇಶ್ವರನ ಪುಟ್ಟ ಗುಡಿಯಿದೆ. ಚಂಡಿಕೇಶ್ವರನಿಗೆ ಚಪ್ಪಾಳೆಯ ಮೂಲಕ ನಮಸ್ಕಾರ ಎಂಬ ಭಕ್ತರ ನಂಬಿಕೆಯಿರುವುದರಿಂದ ಇಲ್ಲಿಗೆ ಬರೋ ಭಕ್ತರು ಈ ಗುಡಿಯ ದ್ವಾರದ ಮೂರು ಮೂಲೆಗಳಿಗೆ ಬಡಿದು ನಮಸ್ಕರಿಸುತ್ತಾರೆ ! ಮೂಲ ಕಟ್ಟಡಗಳಲ್ಲದೇ ದೇಗುಲದ ಎರಡೂ ದಿಕ್ಕಿನಲ್ಲಿ ದೊಡ್ಡ ದೊಡ್ಡ ಪ್ರವೇಶದ್ವಾರಗಳನ್ನು ಕಟ್ಟುವ ಕೆಲಸವೂ ನಡೆಯುತ್ತಿದೆ.



Chandikeshwara between Nageshwara and Choleshwara joint temples

One Veeragallu beside Sri Nagareshwara temple

Closer view of the dome of Nageshwara temple

View of Begur temple complex. You can see the Praveshadwaras being onstructed in East, Northen directions

ವಿಶೇಷತೆ:
ಶ್ರೀ ನಗರೇಶ್ವರನ ಎದುರಿಗೆ ಇರುವ ನಂದಿಯ ತಲೆ ಮೇಲಿರುವ ಮಂಟಪದಲ್ಲಿ ನವಗ್ರಹಗಳ ಕೆತ್ತನೆಗಳಿವೆ. ಹೊಯ್ಸಳರ ದೇಗುಲಗಳಲ್ಲಿನ ಪ್ರವೇಶದ್ವಾರದಲ್ಲಿ, ನಂದಿ ಮಂಟಪದ ಮೇಲ್ಛಾವಣಿಯಲ್ಲಿ ಸಾಮಾನ್ಯವಾಗಿ ಕಾಣಸಿಗುವ ನವಗ್ರಹಗಳ ಕೆತ್ತನೆಗಳಿಗೆ ಗಂಗರ ಶಿಲ್ಪಕಲೆ ಸ್ಪೂರ್ತಿ ನೀಡಿರಬಹುದಾ ಎಂದೊಂದು ಅನುಮಾನ ಇಲ್ಲಿನ ಕೆತ್ತನೆಗಳ ಕಾಣುವಾಗ. ಅಲ್ಲಿಂದ ಒಳಸಾಗಿ ನಗರೇಶ್ವರ ಮತ್ತು ಪಕ್ಕದಲ್ಲಿನ ಪರಿವಾರ ದೇವತೆಗಳ ನಮಸ್ಕರಿಸಿ ವಾಪಾಸ್ ಬಂದರೆ ಕಾಳಿ ಕಮಟೇಶ್ವರ. ಅಪ್ರದಕ್ಷಿಣೆಯಾಗುತ್ತೆ ಎಂದರೆ ಕಾಳೀಕಮಟೇಶ್ವರ ದೇಗುಲಕ್ಕೇ ಮೊದಲು ಭೇಟಿ ಕೊಟ್ಟು ಅಲ್ಲಿಂದ ಮುಂದೆ ಸಾಗಬಹುದು. ಹೊಯ್ಸಳರ ದೇಗುಲಗಳಲ್ಲಿ ಸಾಮಾನ್ಯವಾಗಿರುವ ಮಹಿಷಮರ್ಧಿನಿ ಶಿಲ್ಪ ಇಲ್ಲಿನ ನಗರೇಶ್ವರ ದೇಗುಲದಲ್ಲಿ ಇದ್ದರೂ ಇವರಲ್ಲದೇ, ನಂತರ ಬಂದ ಚಾಲುಕ್ಯರೂ ಕೂಡ ಕಾಳಿಗೆ ಒಂದು ದೇಗುಲದವನ್ನು ಕಟ್ಟಿಸಿದ ನಿದರ್ಶನಗಳು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ ಎನ್ನಬಹುದು(ವಜ್ರದ ವ್ಯಾಪಾರಿ ಕಟ್ಟಿಸಿದ ದೊಡ್ಡಗದ್ದವಳ್ಳಿ ಲಕ್ಷ್ಮೀ ದೇವಸ್ಥಾನವನ್ನು ಹೊರತುಪಡಿಸಿ) ಹಾಗಾಗಿ ಈ ದೇಗುಲವನ್ನು ನಂತರದ ಕಾಲದಲ್ಲಿ ಕಟ್ಟಿಸಿರಬಹುದು ಎಂಬ ಊಹೆ. ಅದೇ ರೀತಿ ನಂದಿಮಂಟಪದ ಎದುರಿಗಿರುವ ಸೂರ್ಯನಾರಾಯಣನ ಕಿರುಗುಡಿಯನ್ನೂ ತದನಂತರ ಕಟ್ಟಿಸಿರಬಹುದೆನಿಸುತ್ತದೆ.

One Utsava statue outside Kali kamateshwara temple

Nandi infront of Nagareshwara temple
Navagraha at the top of Nandi Mantapa

Sri Surya Narayana swamy infront of Nandi of Nagareshwara temple

One of the Veeragallu. See how one can destroy something with paint :-(

One more Veeragallu

ನಂತರ ಸಿಗುವ ಶ್ರೀ ಪಾರ್ವತೀ ಸಮೇತ ನಾಗೇಶ್ವರ ದೇಗುಲದ ಮೂಲ ದೇಗುಲದಲ್ಲಿ ನಾಗೇಶ್ವರನ ಲಿಂಗವಿದೆ. ಹೊರಗಡೆ ಪಾರ್ವತಿಯ ದರ್ಶನವನ್ನು ಪಡೆಯಬಹುದು. ಗರ್ಭಗೃಹದ ಹೊರಗೆ ಅಂತರಾಳ ಎಂದು ಕರೆಯಲ್ಪಡುವ ಕೋಣೆಯಲ್ಲಿ ಅಷ್ಟಮಾತೃಕೆಯರು, ಗಣಪರಿ, ಮಹಿಷಮರ್ಧಿನಿ ಮುಂತಾದ ಶಿಲ್ಪಗಳನ್ನು ಕಾಣಬಹುದು.ಇಲ್ಲಿರುವ ನಾಲ್ಕು ಕಂಬಗಳಲ್ಲಿ ನರ್ತಿಸುತ್ತಿರುವ ಬಾಲೆಯರು, ಹೂ ಬಳ್ಳಿಗಳು ಮುಂತಾದ ಕೆತ್ತನೆಗಳನ್ನು ಕಾಣಬಹುದು, ಅದರಿಂದ ಹೊರಬಂದರೆ ನವರಂಗ. ಅಂತರಾಳವೆನ್ನುವುದು ದೈವಿಕ ಮತ್ತು ನವರಂಗವೆನ್ನುವುದು ಸಾಮಾಜಿಕ/ಲೌಕಿಕ ಭಾವಗಳನ್ನು ಬಿಂಬಿಸುವ ಕೆತ್ತನೆಗಳನ್ನು ಹೊಂದಿರುತ್ತದೆ ಎನ್ನುತ್ತಾರೆ ಹಲವರು. ಅದಕ್ಕೆ ತಕ್ಕಂತೆ ನವರಂಗದ ಕಂಬಗಳಲ್ಲಿ ವಿವಿಧ ವಾದ್ಯಗಳನ್ನು ನುಡಿಸುತ್ತಿರುವವರ ಚಿತ್ರಗಳನ್ನು ಕಾಣಬಹುದು. ನವರಂಗ ಅಂತರಾಳಕ್ಕಿಂತ ದೊಡ್ಡದಾಗಿದ್ದು ಇಲ್ಲಿ ನರ್ತನ,ಗಾಯನ ಸೇವೆಗಳು ನಡೆಯುತ್ತಿರಬಹುದಾದ ಕುರುಹನ್ನು ಕೊಡುತ್ತದೆ. ನವರಂಗವನ್ನೂ ದಾಟಿದರೆ ಸಿಗುವ ಅಗ್ರ ಮಂಟಪದಲ್ಲಿ ಸದ್ಯಕ್ಕೊಂದು ನಂದಾ ದೀಪದ ತರದ ದೀಪವನ್ನು ಬೆಳಗಿಸಲಾಗಿದೆ.
Naganatheshwara temple

ನಂತರ ಸಿಗುವ ಶ್ರೀ ಪಾರ್ವತೀ ಸಮೇತ ನಾಗೇಶ್ವರ ದೇಗುಲದ ಮೂಲ ದೇಗುಲದಲ್ಲಿ ನಾಗೇಶ್ವರನ ಲಿಂಗವಿದೆ. ಹೊರಗಡೆ ಪಾರ್ವತಿಯ ದರ್ಶನವನ್ನು ಪಡೆಯಬಹುದು. ಗರ್ಭಗೃಹದ ಹೊರಗೆ ಅಂತರಾಳ ಎಂದು ಕರೆಯಲ್ಪಡುವ ಕೋಣೆಯಲ್ಲಿ ಅಷ್ಟಮಾತೃಕೆಯರು, ಗಣಪರಿ, ಮಹಿಷಮರ್ಧಿನಿ ಮುಂತಾದ ಶಿಲ್ಪಗಳನ್ನು ಕಾಣಬಹುದು.ಇಲ್ಲಿರುವ ನಾಲ್ಕು ಕಂಬಗಳಲ್ಲಿ ನರ್ತಿಸುತ್ತಿರುವ ಬಾಲೆಯರು, ಹೂ ಬಳ್ಳಿಗಳು ಮುಂತಾದ ಕೆತ್ತನೆಗಳನ್ನು ಕಾಣಬಹುದು, ಅದರಿಂದ ಹೊರಬಂದರೆ ನವರಂಗ. ಅಂತರಾಳವೆನ್ನುವುದು ದೈವಿಕ ಮತ್ತು ನವರಂಗವೆನ್ನುವುದು ಸಾಮಾಜಿಕ/ಲೌಕಿಕ ಭಾವಗಳನ್ನು ಬಿಂಬಿಸುವ ಕೆತ್ತನೆಗಳನ್ನು ಹೊಂದಿರುತ್ತದೆ ಎನ್ನುತ್ತಾರೆ ಹಲವರು. ಅದಕ್ಕೆ ತಕ್ಕಂತೆ ನವರಂಗದ ಕಂಬಗಳಲ್ಲಿ ವಿವಿಧ ವಾದ್ಯಗಳನ್ನು ನುಡಿಸುತ್ತಿರುವವರ ಚಿತ್ರಗಳನ್ನು ಕಾಣಬಹುದು. ನವರಂಗ ಅಂತರಾಳಕ್ಕಿಂತ ದೊಡ್ಡದಾಗಿದ್ದು ಇಲ್ಲಿ ನರ್ತನ,ಗಾಯನ ಸೇವೆಗಳು ನಡೆಯುತ್ತಿರಬಹುದಾದ ಕುರುಹನ್ನು ಕೊಡುತ್ತದೆ. ನವರಂಗವನ್ನೂ ದಾಟಿದರೆ ಸಿಗುವ ಅಗ್ರ ಮಂಟಪದಲ್ಲಿ ಸದ್ಯಕ್ಕೊಂದು ನಂದಾ ದೀಪದ ತರದ ದೀಪವನ್ನು ಬೆಳಗಿಸಲಾಗಿದೆ

Sri Karneshwara temple

ನಾಗೇಶ್ವರನ ಪಕ್ಕದಲ್ಲಿ ಚೋಳೇಶ್ವರ ದೇಗುಲವಿದೆ. ಇದರ ಶಿಲ್ಪಕಲೆ ನಾಗೇಶ್ವರನಿಗಿಂತ ಭಿನ್ನವಾಗಿರುವುದಲ್ಲದೇ ಶಿಲ್ಪಕಲಾ ವೈಭವದಲ್ಲೂ ಮೊದಲಿನದಕ್ಕಿಂತ ಸಪ್ಪೆಯೆನಿಸುತ್ತದೆ. ಹಾಗೇ ಹೊರಬರುವಾಗ ಇತ್ತೀಚೆಗೆ ಸ್ಥಾಪಿಸಿರಬಹುದಾ ಎನ್ನುವಂತಹ ದೇವಾನುದೇವತೆಗಳ ವಿಗ್ರಹಗಳು ಸಿಕ್ಕುತ್ತವೆ. ಇದರ ಪಕ್ಕದಲ್ಲಿ ಸಣ್ಣ ಗುಡಿಯಲ್ಲಿರುವುದೇ ಶ್ರೀ ಕರ್ಣೇಶ್ವರ. ಅರ್ಜುನ ಶಿವನನ್ನು ಮೆಚ್ಚಿಸಿ ಪಾಶು ಪತಾಸ್ತ್ರ್ಹವನ್ನು ಪಡೆದ ಕತೆ ಗೊತ್ತಿದ್ದರೂ ಶ್ರೀ ಕರ್ಣೇಶ್ವರನೆಂಬ ಹೆಸರು ಬಂದ ಬಗೆ ಕುತೂಹಲಕಾರಿಯೇ.ಸದ್ಯಕ್ಕೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲವಾದರೂ ಮತ್ತೊಮ್ಮೆ ಇನ್ನೂ ಹೆಚ್ಚು ತಿಳಿಯೋ ಪ್ರಯತ್ನ ಮಾಡಬೇಕು.


Outer view of temple

ದೇಗುಲಗಳ ಎದುರಿನ ನಂದಿಮಂಟಪದ ಮೇಲ್ಗಣ ನಾಲ್ಕು ಮೂಲೆಗಳಲ್ಲಿ ನಂದಿಗಳಿದ್ದರೆ ಕೆಳಗಿನ ನಾಲ್ಕು ಮೂಲೆಗಳಲ್ಲಿ ನಂದಿ, ತ್ರಿಶೂಲ, ಢಮರುಗ, ಬಳ್ಳಿಯ ಚಿತ್ರಗಳಿವೆ. ಪಕ್ಕದಲ್ಲಿನ ಧ್ವಜಸ್ಥಂಭದಲ್ಲಿ ಗಣಪತಿ ಮತ್ತು ಹೂಗಳ ಕೆತ್ತನೆಗಳನ್ನು ಕಾಣಬಹುದು.

ಶಾಸನಗಳು:
ಬೆಂಗಳೂರು ಎಂಬ ಉಲ್ಲೇಖ ಮೊದಲು ಕಂಡುಬಂದ ಶಾಸನ ಇಲ್ಲೇ ದೊರಕಿದ್ದು ಎಂಬ ಮಾಹಿತಿ ಕೇಳಿದ್ದ ನಾನು ಎಲ್ಲಿದೆ ಶಾಸನ ಎಂಬ ಕುತೂಹಲದಿಂದ ಪ್ರಶ್ನಿಸಿದಾಗ ಅಲ್ಲಿದ್ದವರು ಎದುರಿಗಿದ್ದ ಬಿಲ್ವಪತ್ರೆಯ ಮರದ ಕಡೆಗೆ ಕೈತೋರಿಸಿದರು. ಅಲ್ಲಿ ತೆರಳಿ ಶಾಸನಗಳ ದುರವಸ್ಥೆ ನೋಡಿದಾದ ಕರುಳ ಹಿಂಡಿದ ಭಾವ. ಅಲ್ಪ ಸ್ವಲ್ಪ ಓದಲು ಸಾಧ್ಯವಿದ್ದ ಶಾಸನವೊಂದು ಯಾವ ರಕ್ಷಣೆಯೂ ಇಲ್ಲದೆ ಬಿಸಿಲು ಮಳೆಗೆ ಕರಗುತ್ತಾ ಕಾಲದಲ್ಲಿ ಜೀರ್ಣವಾಗುತ್ತಲಿತ್ತು.
Inscriptions of 10th century AD or before is lieng unprotected
Ways of how can you spoil a sclupture
Ways of how not to keep scluptures !



Quite distubing status of Scluptures !

Dhwaja stamba
ಮಾಹಿತಿ ಮೂಲಗಳು:
೧.http://en.wikipedia.org/wiki/Nageshvara_Temple,_Begur
.http://en.wikipedia.org/wiki/Western_Ganga_dynasty

6 comments:

  1. Replies
    1. ಧನ್ಯವಾದಗಳು ರಾಮಪ್ರಸಾದ್ ಅವ್ರೆ :-)

      Delete
  2. ಬೇಗೂರಿನ ಪಂಚಲಿಂಗೇಶ್ವರ ದೇಗುಲದ ಬಗ್ಗೆ ತಿಳಿಸಿ ಉಪಕರಿಸಿದಿರಿ.

    ReplyDelete
    Replies
    1. ಧನ್ಯವಾದಗಳು ಬದ್ರಿ ಭಾಯ್ :-)

      Delete
  3. ಮೆಚ್ಚುವ ಲೇಖನ. ಉತ್ತಮ ವಿವರಗಳು, ಛಾಯಾಚಿತ್ರಗಳು. ಗೌರಿ ಸತ್ಯ

    ReplyDelete
    Replies
    1. ಧನ್ಯವಾದಗಳು ಗೌರಿ ಸತ್ಯ ಅವರೇ. ಪ್ರಶಾಂತವನಕ್ಕೆ ಸ್ವಾಗತ

      Delete