ಪೀಠಿಕೆ:
ಇತಿಹಾಸದ ಬುನಾದಿಯ ಮೇಲೆ ವಾಸ್ತವದ ಸೌಧವೇಳೋದು ಸಾಮಾನ್ಯ. ಆದ್ರೆ ಇತಿಹಾಸದ ಸಮಾಧಿಯ ಮೇಲೆ ವಾಸ್ತವದ ಕಟ್ಟಡಗಳೆಬ್ಬಿಸಹೊರಟರೆ ? ಉತ್ತರ ಗೊತ್ತಿಲ್ಲದ ಮೇಲಿನ ಪ್ರಶ್ನೆ ಕಾಡಹತ್ತಿದ್ದು ಮಡಿವಾಳದ ಸೋಮೇಶ್ವರ ದೇಗುಲಕ್ಕೆ ಭೇಟಿ ಕೊಟ್ಟಾಗ. ಬೆಂಗಳೂರ ಚೋಳ ದೇಗುಲಗಳ ಹುಡುಕಾಟದಲ್ಲಿದ್ದ ನಾನು ದೊಮ್ಮಲೂರಿನ ಚೊಕ್ಕನಾಥಸ್ವಾಮಿ ದೇಗುಲ, ಬೇಗೂರಿನ ಪಂಚಲಿಂಗೇಶ್ವರಗಳ ದರ್ಶನದ ನಂತರ ನಾನು ಹೊಕ್ಕಿದ್ದು ಮಡಿವಾಳದ ಸೋಮೇಶ್ವರನ ಸನ್ನಿಧಿಗೆ
|
Madivaala Someshwara temple |
ಹೋಗೋದು ಹೇಗೆ ? :
ಮಡಿವಾಳ ಬಸ್ಟಾಪಿನಲ್ಲಿಳಿದು ಹಳೇ ಮಡಿವಾಳಕ್ಕೆ ಹೋಗೋದು ಹೇಗೆ ಅಂದ್ರೆ ಯಾರಾದ್ರು ದಾರಿ ತೋರಿಸ್ತಾರೆ. ಇಲ್ಲವೆಂದ್ರೆ ಹನುಮಾನ್ ದೇವಸ್ತಾನ ಎಲ್ಲಿ ಅಂದ್ರೆ ಅದು ಇನ್ನೂ ಸುಲಭ. ಹನುಮಾನ್ ದೇವಸ್ಥಾನ ಎಲ್ಲಪ್ಪ ಅಂದ್ರಾ ? ಮಡಿವಾಳದ ಟೋಟಲ್ ಮಾಲಿನ ಹತ್ತಿರದಲ್ಲೇ ಅದರ ಎದುರ ರಸ್ತೆಯಲ್ಲಿ ಅಂದ್ರೆ ಇನ್ನೂ ಸುಲಭ.ಹನುಮಂತನ ದರ್ಶನ ಪಡೆದು ಅದರ ಪಕ್ಕದಲ್ಲಿ ಹೋಗೋ ದಾರಿಯಲ್ಲಿ ಸಿಗೋ ಮೊದಲ ಕತ್ತರಿ(ಕವಲುದಾರಿ)ಯಲ್ಲಿ ಎಡಕ್ಕೆ ಸಾಗಿ ಆ ರಸ್ತೆಯ ಕೊನೆಯ ತನಕ ಸಾಗಿ ಮತ್ತೆ ಎಡ ಬಲಗಳ ಕವಲಲ್ಲಿ ಎಡಕ್ಕೆ ತಿರುಗಿ ಮುಂದೆ ಸಾಗುವುದು. ಅದೇ ದಾರಿಯಲ್ಲಿ ಮುಂದೆ ಸಾಗಿ ಹಳೇ ಮಡಿವಾಳದ ಸಾಲು ಸಾಲು ಅಂಗಡಿಗಳು, ಸೇತುವೆಯನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಸಿಗುವುದೇ ಸೋಮೇಶ್ವರ ದೇಗುಲ. ಮಡಿವಾಳದಿಂದ ನಡೆದು ಹೋದರೆ ಸುಮಾರು ಹದಿನೈದು ನಿಮಿಷದ ಸಮಯ. ಆಟೋ/ವಾಹನಗಳನ್ನವಲಂಬಿಸೋ ಅನಿವಾರ್ಯತೆಯಿಲ್ಲ. ಇದ್ದರೆ ಇನ್ನೂ ಬೇಗ ತಲುಪಬಹುದಷ್ಟೆ
|
Madivaala hanuman temple |
ಇತಿಹಾಸ:
ಇಲ್ಲಿನ ಸೋಮೇಶ್ವರ ದೇಗುಲವನ್ನು ೧೨೬೭ರಲ್ಲಿ ಚೋಳರಸ
ಮೂರನೇ ವೀರ ಬಲ್ಲಾಳನ(1291-1343 AD) ಕಾಲದಲ್ಲಿ ಕಟ್ಟಲಾಯಿತೆಂದು ಇಲ್ಲಿರುವ ತಮಿಳು ಶಾಸನಗಳು ತಿಳಿಸುತ್ತವೆ
|
Altered portion of the Someshwara temple |
ವಿಶೇಷತೆ:
ಹೊರಗೆ ಸಿಮೆಂಟು, ಲೈಟುಗಳ ಅಲಂಕಾರದಿಂದ ತನ್ನ ಮೂಲ ಸೌಂದರ್ಯವನ್ನು ಕಳೆದುಕೊಂಡಿರುವ ಈ ದೇಗುಲದ ಒಳಭಾಗದಲ್ಲೂ ನೆಲಕ್ಕೆ ಟೈಲ್ಸು ಮತ್ತು ಛಾವಣಿಗಳಲ್ಲಿ ಲೈಟುಗಳನ್ನು, ಹೊರವಲಯದಲ್ಲಿ ಪ್ರಥಮ ಗಣಪತಿ, ದಕ್ಷಿಣಾಮೂರ್ತಿ ಇತ್ಯಾದಿ ಹತ್ತು ಹಲವು ದೇವರನ್ನೊಳಗೊಂಡು ಇದು ಚೋಳರ ಕಾಲದ್ದಾ ಅಥವಾ ಇತ್ತೀಚೆಗೆ ಕಟ್ಟಿದ ಯಾವುದೋ ದೇಗುಲವಾ ಎನ್ನೋ ಅನುಮಾನ ಮೂಡಿಸುವಂತಿದೆ. ಆದರೆ ಮುಜರಾಯಿ ಇಲಾಖೆಗೆ ಸೇರಿದ ಇದರ ಹೊರಗೋಡೆಯಲ್ಲಿರುವ ತಮಿಳು ಶಾಸನ ಇದು ಚೋಳರ ಕಾಲದ್ದೇ ಅನ್ನುವುದಕ್ಕೆ ಪುರಾವೆಯೊದಗಿಸುತ್ತದೆ.
|
Tamil Inscription of the Someshwara temple |
|
|
ಒಳಾಂಗಣ:
ದೇಗುಲದ ಒಳಗೆ ಕೆಲವರು ಉದ್ಭವ ಲಿಂಗ ಎಂದು ನಂಬುವ ಸೋಮೇಶ್ವರ ಮತ್ತು ಅವನ ಎದುರಿಗೆ ನಂದೀಶ್ವರನಿದ್ದಾನೆ. ತದನಂತರದಲ್ಲಿ ಸ್ಥಾಪಿಸಿರಬಹುದಾದ ನಾಗಸುಬ್ರಹ್ಮಣ್ಯ ವಿಗ್ರಹವೂ ಇದೆ. ಇದಲ್ಲದೇ ಅಲ್ಲಿನ ಕಂಬಗಳಲ್ಲಿ ನಂದಿ, ಲಿಂಗ, ಸಿಂಹ, ನರಸಿಂಹ, ಹಸು, ಆನೆ, ಗಣಪತಿ,ನರ್ತಕ-ನರ್ತಕಿ,ಹೆಡೆಯೆತ್ತಿದ ಹಾವಿನೊಂದಿಗೆ ಮಾತನಾಡುತ್ತಿರುವ ಮಂಗ, ಛಾಮರ ಬೀಸೋರು,ಬೇಡರ ಕಣ್ಣಪ್ಪ,ಕಮಂಡಲದ ಮೇಲೆ ತನ್ನೆಲ್ಲಾ ದೇಹಭಾರವನ್ನು ನೀಡಿ ಧ್ಯಾನಿಸುತ್ತಿರುವ ಮುನಿ ಮುಂತಾದ ಕೆತ್ತನೆಗಳನ್ನು ಕಾಣಬಹುದು. ತಮಿಳು ಬಲ್ಲ ಗೆಳೆಯರು ಜೊತೆಗಿದ್ದರೆ ಕೆಳಗೆ ಕೊಟ್ಟಿರೋ ಶಾಸನಗಳಲ್ಲೇನಿದೆ ಎಂದು ಓದಲು ಅನುಕೂಲ.
|
Tamil Inscription @Someshwara temple, Madivala, Pic 2 |
ಮುಗಿಸೋ ಮುನ್ನ:
ದೇಗುಲದ ಒಳಗೆ ಫೋಟೋಗ್ರಫಿ ನಿಷಿದ್ದ ಎನ್ನುವುದು ಸರಿ. ಆದರೆ ಈ ಶಾಸನಗಳ ಅಧ್ಯಯನ
ಮಾಡಲೆಂದು ಫೋಟೋ ತೆಗೆಯಲು ಹೋದ್ರೂ ಅಲ್ಲಿನ ಅರ್ಚಕರಿಂದ ಬೈಸಿಕೊಳ್ಳಬೇಕಾದ ಪ್ರಸಂಗ
ಬಂತು !ಇದ್ರ ಫೋಟೋ ತೆಗಿಬೋದಾ ಅಂತ ಅಲ್ಲೇ ಕೂತಿದ್ದ ಆಡಳಿತ ಮಂಡಳಿಯವರನ್ನ ಕೇಳಿ ಅವರು ಹೂಂ ಅಂದ ಮೇಲೆ ತೆಗೆಯೋ ಪ್ರಯತ್ನದಲ್ಲಿದ್ದಕ್ಕೆ ಬೆಲೆ ಇಲ್ಲ ! ಏನೋ ಅಧ್ಯಯನ ಮಾಡ್ತಾ ಇದ್ದಾರೆ ಅನ್ಸತ್ತೆ. ಹೊರಗೋಡೆಯ ಮೇಲಿರೋ ಶಾಸನದ ಫೋಟೋ ತೆಕ್ಕಂಡ್ರೆ ತಪ್ಪೇನು ಅಂತ ಅಲ್ಲಿದ್ದ ಕೆಲ ಭಕ್ತರು ಆಕ್ಷೇಪಿಸಿದ ಮೇಲೆ ಆಡಳಿತ ಮಂಡಳಿಯವರು ಇದ್ರ ಫೋಟೋ ಯಾಕೆ ತೆಗಿತಾ ಇದ್ದೀರಿ ? ಏನು ಮಾಡ್ತೀರಿ ಇದ್ರಿಂದ ಎಂಬ ಇನ್ನೂ ಹಲವು ಪ್ರಶ್ನೆಗಳೊಂದಿಗೆ ಬಂದ್ರು. ನಾನು ಬೆಂಗಳೂರ ಚೋಳ ದೇಗುಲಗಳನ್ನು ಒಂದೊಂದಾಗಿ ಸಂದರ್ಶಿಸುತ್ತಾ ಇದ್ದೀನಿ. ಸದ್ಯಕ್ಕೆ ಇವುಗಳ ಫೋಟೋ ತೆಗೆದು ನಂತರದಲ್ಲಿ ತಮಿಳು ಬಲ್ಲ ಗೆಳೆಯರ ಸಹಾಯದಿಂದ ಇದರಲ್ಲಿರೋ ಇತಿಹಾಸವನ್ನರಿಯೋ ಪ್ರಯತ್ನದಲ್ಲಿದ್ದೇನೆ ಎಂಬ ಉತ್ತರದಿಂದಲೂ ಯಾಕೋ ಅವರಿಗೆ ನಂಬಿಕೆ ಹುಟ್ಟಿದಂತೆ ಕಾಣಲಿಲ್ಲ. ಸರಿ, ನೀವು ಅಧ್ಯಯನ ಮಾಡ್ತಿದೀರೋ ಅದ್ರ ಕಾಪಿಯೊಂದ ನಮಗೂ ಒಂದು ಕಳಿಸಿಕೊಡಿ ಅಂತನ್ನೋ ಬೇಡಿಕೆಗೆ ಹೂಂಗುಟ್ಟಿ ಹೊರಬರೋದ್ರಲ್ಲಿ ಸಾಕಾಯ್ತು. ಈ ಬ್ಲಾಗು, ಅದರ ವಿಳಾಸ ಎಲ್ಲಾ ಕೊಟ್ಟು ಓದಿ ಅಂತ ಹೇಳಬಹುದಿತ್ತೇನೋ. ಆದ್ರೆ ಇಲ್ಲೇನಿದೆ ಅಂತ ನಮಗೂ ಗೊತ್ತಿಲ್ಲ, ನೀವೇನಾದ್ರೂ ಓದಿದ್ರೆ ನಮಗೂ ಒಂದು ಕಾಪಿ ಕೊಡಿ ಅನ್ನೋ ಅವರ ಮಾತಿಗೆ ಹೇಗೆ ಪ್ರತಿಕ್ರಯಿಸಬೇಕೋ ಎಂದು ಗೊತ್ತಾಗದೇ ನಮ್ಮ ಇತಿಹಾಸದ ಬಗ್ಗೆ ನಮ್ಮ ಜನರಿಗೇ ಇರೋ ಭಾವದ ಬಗೆಗಿನ ಬೇಸರದಿಂದ ಹಾಗೇ ಹೊರಬಂದಿದ್ದೆ.
ಜೀರ್ಣೋದ್ದಾರ ಅನ್ನೋ ಹೆಸರಿನಲ್ಲಿ ದೇಗುಲದ ಮೂಲಸ್ವರೂಪವನ್ನೇ ಬದಲಿಸಿ ಇನ್ನೇನೋ ಮಾಡಿದರೆ ಅದು ತಪ್ಪಲ್ಲ ! ಆದ್ರೆ ಪೈಂಟುಗಳ ಲೇಪದಡಿ, ಸಿಮೆಂಟೀಕರಣದಡಿ ಹೇಗೋ ತಮ್ಮ ಚೂರು ಪಾರು ಅಸ್ತಿತ್ವ ಉಳಿಸಿಕೊಂಡಿರೋ ಇತಿಹಾಸವನ್ನರಿಯ ಪ್ರಯತ್ನಿಸಿದರೆ ಅದು ತಪ್ಪು ! ಅಷ್ಟಕ್ಕೂ ಇತಿಹಾಸ ಪ್ರೇಮ ಅನ್ನುವುದು ಅದರಲ್ಲಿ ಡಿಗ್ರಿ ಪಡೆದ ಜನರ ಪೇಟೆಂಟು ಪಡೆದ ಆಸ್ತಿಯೇ ? ಅದರ ಬಗ್ಗೆ ಕೊಂಚ ಆಸಕ್ತಿ ಹೊಂದಿದ ಜನಸಾಮಾನ್ಯನೊಬ್ಬ ಆ ನಿಟ್ಟಿನಲ್ಲಿ ಪ್ರಯತ್ನಿಸಲೂ ಬಾರದೇ ? ಶ್ರವಣಬೆಳಗೊಳದಲ್ಲಿನ ಬೆಟ್ಟದಲ್ಲಿರೋ ಪ್ರತೀ ಶಾಸನಕ್ಕೂ ಗಾಜಿನ ಹೊದಿಕೆ ಹೊಚ್ಚಿ ಅದು ಹಾಳಾಗದಂತೆ ಕಾಪಿಡುವುದು ಹೋಗಲಿ ಇಲ್ಲಿನ ಶಾಸನದಲ್ಲಿ ಏನಿದೆ ಎಂದಾಗಲಿ, ದೇವಸ್ಥಾನದ ಇತಿಹಾಸದ ಬಗ್ಗೆಯಾಗಲಿ ಒಂದು ಮಾಹಿತಿ ಫಲಕವನ್ನೂ ದೇಗುಲದ ಪ್ರಾಂಗಣದಲ್ಲಿ ಕಾಣಲಾಗಲಿಲ್ಲ. ಕೆಳದಿ,ಇಕ್ಕೇರಿಗಳಂತ ಊರುಗಳಲ್ಲಿ, ಹಾಸನದ ಹಳ್ಳಿ ಹಳ್ಳಿಗಳಲ್ಲಿ ಭಗ್ನಗೊಂಡ ಮೂರ್ತಿಗಳ ಆದ್ರೆ ಇನ್ನೂ ತಮ್ಮ ಮೂಲಸ್ವರೂಪದಲ್ಲೇ ಉಳಿದ ದೇಗುಲಗಳ ಬಗ್ಗೆ ಹಳ್ಳಿಗರಿಗೆ ಇತಿಹಾಸದ ಗಂಧಗಾಳಿಯೂ ಇಲ್ಲ ಎಂದು ಜರಿಯೋ ಜನ ಈ ತರಹ ಇತಿಹಾಸವನ್ನು ಸಿಮೆಂಟಿನ ಸಮಾಧಿಗಳಿಗೆ ತಳ್ಳುತ್ತಿರುವ ಬಗ್ಗೆ ಏನನ್ನುತ್ತಾರೆ ? ಸದ್ಯಕ್ಕೆಂತೂ ತಿಳಿಯುತ್ತಿಲ್ಲ. ಈ ಕೆಳಗಿನ ತಮಿಳು ಬರಹಗಳಲ್ಲಿ ಕೆಲವನ್ನಾದರೂ ಭಾಷಾಂತರಿಸಲು ತಮ್ಮಿಂದ ಅಥವಾ ತಮಿಳು ಬಲ್ಲ ತಮ್ಮ ಸ್ನೇಹಿತರಿಂದ ಸಾಧ್ಯವಾಗೋದಾದ್ರೆ ಮುಂದೆ ಬರೋ ಓದುಗರಿಗೆ ಸಹಾಯವಾದೀತೆಂಬ ನಿರೀಕ್ಷೆಯಲ್ಲಿ.
|
Tamil Inscription @Someshwara temple, Madivala, pic 3 |
|
Tamil Inscription @Someshwara temple, Madivala-pic 4 |
|
Dhwajastambha outside Someshwara temple |
|
ಜಗಮಗಿಸುತ್ತಿರುವ ಸೋಮೇಶ್ವರ ದೇಗುಲ. ಇದರ ಹಿಂದೆ ಒಂಭೈನೂರು ವರ್ಷಗಳ ಇತಿಹಾಸ ತಣ್ಣಗೆ ಮಲಗಿದೆಯೆಂದ್ರೆ ಮೊದಲ ಬಾರಿ ಬಂದವನಿಗೆ ನಿಜಕ್ಕೂ ಸಂದೇಹ ಬರೋದ್ರಲ್ಲಿ ಸಂದೇಹವಿಲ್ಲ! |
ಈ ದೇಗುಲದ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಬೇಕಂದ್ರೆ ಈ
ಕೊಂಡಿಯನ್ನು ನೋಡಬಹುದು
Nangoo gottirlilla, ee degulagala bagge. upayukta lEkhanagalu. matteradu lEkhanagaLoo maahitipoorNa. :)
ReplyDeletehogi barbeku omme anstaa ide. :)
Thanks again, for this useful blog.
ಧನ್ಯವಾದಗಳು ಸುಬ್ಬು :-)
Deleteಇದರ ಮುಂದೆ ಸುಮಾರು ೫೦ ಸಲ ಓಡಾಡಿದ್ದೀನಿ. ಆದ್ರೆ ಇದು ಐತಿಹಾಸಿಕ ದೇಗುಲ ಅಂತ ಗೊತ್ತಿರಲಿಲ್ಲ. ಹಾಗಾಗಿ ಒಳಗೆ ಹೋಗಿಲ್ಲ. ಸದ್ಯದಲ್ಲೇ ಭೇಟಿ ಕೊಡ್ತೀನಿ. ನಿಂಗೆ ಐವತ್ತು ಥ್ಯಾಂಕ್ಸ್ ! ;)
ReplyDeleteಧನ್ಯವಾದಗಳು ವಿಕಾಸಣ್ಣ :-)
Deleteಮಾನ್ಯರೆ, ನಿಮ್ಮ ಅಧ್ಯಯನ , ಉತ್ಸಾಹಕ್ಕೆ ಅಭಿನಂದನೆಗಳು . ನೀವು ಬೆಂಗಳೂರಿನ ಕೆಲವು ದೇವಾಲಯಗಳಲ್ಲಿನ ಶಾಸನಗಳ ಬಗ್ಗೆ ಬರೆದಿದ್ದಿರಿ . ಆ ಶಾಸನಗಳೆಲ್ಲಾ ಎಪಿಗ್ರಾಫಿಯ ಕರ್ನಾಟಿಕ ಎಂಬ ಸಂಪುಟಗಳಲ್ಲಿ ಪ್ರಕಟವಾಗಿವೆ, ನೋಡಿ . ಅದಕ್ಕೂ ಮೊದಲು ಬೆಂಗಳೂರು ಜಿಲ್ಲೆಯ ಗ್ಯಾಸಿಟಿಯರನ್ನು ಓದಿಕೊಳ್ಳಿ. ನಿಮ್ಮ ಗ್ರಹಿಕೆ ಮತ್ತು ನಿರೂಪಣೆಯಲ್ಲಿ ಸಾಕಷ್ಟು ದೋಷಗಳು ನುಸುಳಿವೆ. ಸರಿಪಡಿಸಿಕೊಳ್ಳಿ .
ReplyDeleteಮಾನ್ಯರೇ,
Deleteನನ್ನ ಬ್ಲಾಗಿಗೆ ಬಂದಿದ್ದಕ್ಕೆ ಮತ್ತು ನಿಮ್ಮ ಮೆಚ್ಚುಗೆಗೆ ವಂದನೆಗಳು. ನೀವು ಹೇಳಿದ ಎರಡೂ ಕೃತಿಗಳನ್ನು ಓದಲು ಪ್ರಯತ್ನಿಸುತ್ತೇನೆ.
ಈ ಲೇಖನದ ವಿಷಯಕ್ಕೆ ಬರುವುದಾದರೆ ಎಲ್ಲಿ ತಪ್ಪಾಗಿದೆ ಎಂದು ಸೂಕ್ಷ್ಮವಾಗಿ ತಿಳಿಸಿದರೆ ಅದನ್ನು ಈ ಕೂಡಲೇ ತಿದ್ದಿಕೊಳ್ಳುವುದಕ್ಕೆ ಅನುಕೂಲವಾದೀತು. ನಾನು ಓದಿದ, ಕೇಳಿದ ಮಾಹಿತಿಯನ್ನು ಸದ್ಯಕ್ಕೆ ದಾಖಲಿಸಿದ್ದೇನಷ್ಟೆ. ಮುಂದಿನ ಓದಿನಲ್ಲಿ ಈ ಮಾಹಿತಿ ತಪ್ಪೆಂದು ತಿಳಿದರೆ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇನೆ
ವಂದನೆಗಳೊಂದಿಗೆ
ಪ್ರಶಸ್ತಿ