ತಿರುಗುರೆಕ್ಕೆಯ ಕೆಳಗೆ ಕುಳಿತು ಬೆವೆತಿಹ ಜೀವ
ತಾಯ ಸೆರಗಿನ ಗಾಳಿ ನೆನೆಯುತಿತ್ತು
ದುಡಿತಕೊಡೆದಿಹ ಕೈಯ ಬಾಯಿ ತಲುಪದ ತುತ್ತು
ಕಂದ ಹಸಿದಿಹನೇನೊ ಎನುತಲಿತ್ತು..
ತೋ..ನಾನಾ. ತಾ..ನಾನ..ನಾನ..
ಧಗ್ಗನೆ ಎದ್ದು ಕುಳಿತ ಅವ. ಎಷ್ಟು ಸಲ ಕನಸಲ್ಲಿ ಬಂದಿತ್ತೋ ಆ ರಾಗ. ಪ್ರತೀ ಬಾರಿ ಕೇಳಿದಾಗಲೂ ಏನೋ ಒಂದು ಸಂಕಟ. ಕೆಟ್ಟ ಕನಸು ಬಿತ್ತಾ ಮಗು ಎಂಬ ಹೆತ್ತಾಕೆಯ ದನಿ ಕೇಳಿದಂತಾಯ್ತೊಮ್ಮೆ ಅಲ್ಲೇ ಎಲ್ಲೋ .ಹಿಂದೆಲ್ಲಾ ಯಕ್ಷಗಾನದ ಮಹಿಷಾಸುರನೋ, ಭೂತಕೋಲದ ದಯ್ಯವೋ ಕನಸಲ್ಲಿ ಬಂದು ಹಿಂಗೆ ಹೆದರಿ ಎದ್ದಾಗಲೆಲ್ಲಾ ತನ್ನ ತೊಡೆಯ ಮೇಲೇ ತಲೆಯಿಟ್ಟುಕೊಂಡು ತಟ್ಟಿ ಮಲಗಿಸುತ್ತಿದ್ದ ಅಬ್ಬೆ ನೆನಪಾದಳು. ಸುತ್ತ ಕಣ್ಣು ಹಾಯಿಸಿದರೆ ಯಾರೂ ಇಲ್ಲ. ಕಣ್ಣ ಪರದೆಯಾಚೆಯ ತಾಯ ನೆನಪುಗಳು ಕಣ್ಣೀರಾಗಿ ಎದುರು ಬಂದು ಎಷ್ಟೋ ಹೊತ್ತಿನ ತನಕ ಹರಿಯುತ್ತಿದ್ದವು. ಮತ್ತೆ ಜೊತೆಯಾದ ನಿದ್ದೆಯಿಂದ ಕಣ್ಣೀರಿನ ಹರಿವು ನಿಂತಿತಾ ಅಥವಾ ಕಣ್ಣೀರಕೋಡಿಯ ಕಂಡು ತಾನೇ ಕಣ್ಣೀರಾದ ನಿದ್ರೆಯೇ ಅವನನ್ನು ಆಕ್ರಮಿಸಿತಾ ಎಂಬ ಸಂಗತಿಯನ್ನು ಕಾಲದ ರೋಧನಕ್ಕೆ ಸಾಕ್ಷಿಯಾದ ತಲೆದಿಂಬೇ ಹೇಳಬೇಕಿತ್ತು.
ಕಾಡ ಮಧ್ಯದಲ್ಲೊಂದಿಷ್ಟು ಮನೆಗಳು. ಇತ್ತೀಚೆಗೆ ಆ ಕಾಡಿಗೆ ಚಾರಣಕ್ಕೆ ಅಂತ ಬರೋರು ಶುರು ಮಾಡೋ ತನಕ ಗೌರಮ್ಮ, ಗೌರಕ್ಕ ಅಥವಾ ಗೋಲಿ ಹುಡುಗರ ಪಾಲಿನ ಗೌರಜ್ಜಿಗೆ ಪೇಟೆಯಲ್ಲಿಹ ಮಗ ತನ್ನ ನೆನೆದು ತನ್ನ ನೋಡಲು ಒಮ್ಮೆಯಾದರೂ ಬರುತ್ತಾನೇನೋ ಎಂಬ ಆಸೆಯೇ ಸೂರ್ಯೋದಯ, ಬರದಿದ್ದರೆ ಫೋನಾದ್ರೂ ಮಾಡಬಹುದಾ ಈ ವಾರದಲ್ಲಿ ಎಂಬ ನಿರೀಕ್ಷೆಯೇ ಸೂರ್ಯಾಸ್ತ. ಅಂಟಾದ ಸೀರೆ ಸೆರಗಲ್ಲಿದ್ದ ಸಿಹಿಯನ್ನು ತೆಗೆದು ಹೊರಗೆ ಆಡುತ್ತಿದ್ದ ಹುಡುಗರಿಗೆ ಹಂಚುವಾಗ ಗೌರಮ್ಮನಿಗೆ ತನ್ನ ಮಗನ ನೆನಪು ಮತ್ತೆ ಹಸಿಯಾಗುತ್ತೆ. ಮದುವೆ ಮನೆಗೆ ಹೋಗಲಿ, ಉಪನಯನಕ್ಕೆ ಹೋಗಲಿ ತನ್ನ ಬಾಳೆಗೆ ಹಾಕಿದ ಸ್ವೀಟನ್ನೂ ತನ್ನ ಮಗನಿಗಾಯ್ತು ಅಂತ ಕಟ್ಟಿ ಮನೆಗೆ ತರುತ್ತಿದ್ದ ಗೌರಮ್ಮನಿಗೆ ಈಗೀಗ ಮನೆಗೆ ಬಂದ ಮೇಲೇ ತನ್ನ ಮಗ ತನ್ನ ಬಳಿಯಲ್ಲಿಲ್ಲ ಅನ್ನೋದು ನೆನಪಾಗುತ್ತೆ. ಕಣ್ಣಾಲಿಗಳು ನೀರಿಂದ ತುಂಬಿಹೋಗುತ್ತೆ ಎಷ್ಟೇ ಬೇಡ ಅಂದುಕೊಂಡ್ರೂ.
ಕಣ್ಣು ಹಾಯಿಸಿದತ್ತೆಲ್ಲಾ ಬೇರೆ ಬಣ್ಣವೇ ಇಲ್ಲವೇನೋ ಎಂಬಂತೆ ಆವರಿಸಿರೋ ಮರಳು. ಆ ಮರಳಗಾಡಿನಲ್ಲಿ ಇದ್ದಕ್ಕಿದ್ದಂತೆ ಒಂದಿಷ್ಟು ಆಕೃತಿಗಳು. ತನ್ನೆದುರು ಕಂಡಂತಾಗಿ ಮತ್ತೆ ಮಾಯವಾದದ್ದು ನಿಜವಾಗಿಯೂ ಆಕೃತಿಗಳಾ ಅಥವಾ ಮರೀಚಿಕೆಯಾ ? ತನ್ನ ಕಣ್ಣುಗಳೂ ತನಗೆ ಮೋಸ ಮಾಡೋಕೆ ಶುರು ಮಾಡ್ತಾ ಅಂತ ಬೇಸರವಾಯ್ತವನಿಗೆ. ಮರೀಚಿಕೆಯಾ ಅಥವಾ ನಿಜವಾಗಿಯೂ ಅಲ್ಲೇನಾದ್ರೂ ಬರ್ತಾ ಇದೆಯಾ ? ಬಂದರೂ ಇಷ್ಟು ದೂರದಲ್ಲಿರೋ ತಾನು ಅವರ ಕಣ್ಣಿಗೆ ಬಿದ್ದೇನಾ ಎಂಬ ಸಂಶಯದಿಂದ ಅವರು ದೂರವಾಗೋ ಮೊದಲು ನಾನೇ ಅತ್ತ ಸಾಗಿಬಿಟ್ಟೇನೆಂಬ ಹುಮ್ಮಸ್ಸಿನಲ್ಲಿ ಅತ್ತ ಹೆಜ್ಜೆ ಹಾಕಿದ, ಕೂಗಲೆತ್ನಿಸಿದ. ನಾಲ್ಕೇ ಹೆಜ್ಜೆ. ದೇಹ ಕುಸಿದು ಹೋಯ್ತು,ಸ್ವರ ಹೊರ ಹೊರಡಲಿಲ್ಲ. ಊಟವಿಲ್ಲದ ಎರಡು ದಿನದ ಸುಸ್ತಿಗೆ. ಹೀಗೇ ಕಂಡು ಕಂಗೆಟ್ಟ ಅದೆಷ್ಟೋ ಮರೀಚಿಕೆಗಳ ಕಾಟಕೆ. ಕಣ್ಣೆದುರೇ ಮುಂದೆ ಸಾಗುತ್ತಾ ಮರೆಯಾಗುತ್ತಿದ್ದ ಒಂಟೆಗಳ ಸಾಲುಗಳನ್ನು ನೋಡೂ ಏನೂ ಮಾಡಲಾಗದ ನೋವು ಅವನ ಕಣ್ಣುಗಳಲ್ಲಿ ಧಾರೆಯಾಗಿ ಇಳಿಯುತ್ತಿತ್ತು.
ಅದೆಂತದೋ ಎನ್.ಜಿ.ಓ ಅಂತ ಕೆಲಸ ಮಾಡುತ್ತಿದ್ದ ಹುಡುಗ ಕಾಡ ಮಧ್ಯದಲ್ಲಿದ್ದ ತನ್ನೂರಿಗೆ ಬಂದು ಅಲ್ಲಿನ ಮನೆಮಾತೇ ಆಗಿ ಕೊನೆಗೊಂದು ದಿವಸ ತನ್ನನ್ನೇ ಮದುವೆಯಾಗುತ್ತಾನೆಂದು ಆಕೆ ಕನಸಿನಲ್ಲೂ ಎಣಿಸಿರಲಿಲ್ಲ. ಮದುವೆಯಾದ ಮೊದಲೆರೆಡು ವರ್ಷಗಳು ಸ್ವರ್ಗವೇ ಧರೆಗಿಳಿದ ಭಾವವಲ್ಲಿ. ಆಗಾಗ ಕೆಲಸಕ್ಕೆಂದು ಗಂಡ ಹೊರಹೋಗುತ್ತಿದ್ದರೂ ತನ್ನ ಎಳೆಗೂಸಿನ ನಗುವ ಹಿಂದೆ ಬೇರೆಲ್ಲಾ ನಿಶ್ಯಬ್ದಗಳೂ ಗೌಣವೆನಿಸಿಬಿಡುತ್ತಿದ್ದವು. ಆದ್ರೆ ಯಾರ ಕಣ್ಣು ಬಿತ್ತೋ ಇವರ ಮೇಲೆ. ರಾಜಸ್ಥಾನಕ್ಕೆ ತನ್ನ ಸಹಚರರೊಂದಿಗೆ ಕೆಲಸಕ್ಕೆಂದು ತೆರಳಿದ ಗಂಡ ಮರಳಲೇ ಇಲ್ಲ. ಯಾರ ಜೊತೆ ಹೋಗ್ತಾ ಇದ್ದೀಯ ? ಎಲ್ಲಿರ್ತೀಯ, ನಿನ್ನನ್ನು ಸಂಪರ್ಕಿಸೋಕೆ ಫೋನ್ ನಂಬರೇನಾದ್ರೂ ಕೊಡು ಅಂತ ಕೇಳಿದ್ರೆ ಅವನಿಗೇನಾಯ್ತು ಅಂತ ತಿಳೀಬಹುದಿತ್ತೇನೋ. ಆದ್ರೆ ಕೇಳಿರಲಿಲ್ಲವಲ್ಲಾ ಆಕೆ . ಹಿಂದೆ ಕೇಳಿದ್ದರೆ ತಾನೆ ಈಗ ಕೇಳೋಕೆ ! ಇಂದು ಬರಬಹುದು, ನಾಳೆ ಬರಬಹುದೆಂಬ ನಿರೀಕ್ಷೆಯಲ್ಲೇ ದಿನಗಳುರುಳಿದ್ವು. ತಂದೆಯೆಂಬೋ ಕಾಣದ ದೈವ ಎಂದೋ ಬರುವನೆಂಬ ನಿರೀಕ್ಷೆಯಲ್ಲೇ ಮಗು ಬೆಳೆದು ದೊಡ್ಡದಾಯ್ತು. ವಿದ್ಯೆ ಪಡೆದ ಮಗುವಿಗೀಗ ಹಳ್ಳಿಯ ಓದು ಸಾಲದಾಗಿದೆ. ಹೊಟ್ಟೆಪಾಡಿಗಾಗಿ ಪೇಟೆಯ ಹಾದಿ ಹಿಡಿಯಲೇಬೇಕಾಗಿದೆ.
ಅಂತೂ ಬೆಳಗಾಯಿತು ಏಳಪ್ಪಾ ದೊರೆ ಎನ್ನುವಂತೆ ಕಿಟಕಿಯ ಪಕ್ಕದಲ್ಲಿದ್ದ ಪಾರಿವಾಳಗಳು ಪಟ ಪಟ ರೆಕ್ಕೆ ಬಡಿಯುತ್ತಿದ್ದವು. ಯಾಕೋ ಕಣ್ಣುಬಿಡುಲಾಗುತ್ತಿಲ್ಲ ಎಂದುಕೊಂಡರೂ ತನಗಾಗಿ ಕಾಯುತ್ತಿದ್ದವರು ನೆನಪಾಗಿ ಎದ್ದನವ. ಇವತ್ತು ಹುಷಾರಿಲ್ಲ ಎಂದು ಬಿಡಲಾ ಅಂದುಕೊಂಡ್ರೂ ನಿಜವಾಗಿಯೂ ಹುಷಾರಿಲ್ಲದೇ ತನ್ನ ಹಾದಿ ಕಾಯ್ತಾ ಇರೋ ಅದೆಷ್ಟೋ ರೋಗಿಗಳ ನೆನಪಾಗಿ ಬಚ್ಚಲಿನತ್ತ ಹೆಜ್ಜೆಯಿಟ್ಟ. ಕಷ್ಟಪಟ್ಟು ತೆರೆಸಿದ ಕಣ್ಣುಗಳಲ್ಲಿ ಉಪ್ಪು ಇದೆಯಾ, ಮಸಾಲೆಯಿದ್ಯಾ , ಚಿತ್ರಾನ್ನ ಇದ್ಯಾ ಅಂತೆಲ್ಲಾ ಜಾಹೀರಾತು ನೀಡಿ ಜನರನ್ನ ಮಂಗ ಮಾಡೋ ಪೇಸ್ಟುಗಳಿಗಿಷ್ಟು ಬೈದುಕೊಳ್ಳುತ್ತಾ ಕನ್ನಡಿಯೆದುರು ನಿಂತ. ಹೆರೆಯಹೊರಟ ಗಡ್ಡವನ್ನೇ ಮತ್ತೊಮ್ಮೆ ನೋಡಿದವನಿಗೆ ತನ್ನೂರ ಸೋಮನಗುಡ್ಡ ನೆನಪಾಯ್ತು. ಕೆದರಿದ ಕೂದಲಲ್ಲಿ ಶಾಲೆಗೆ ಹೋಗೋ ಹೊತ್ತಿಗೂ ತನ್ನೊಡನೆ ಆಟವಾಡೋಕೆ ಬರ್ತಿದ್ದ ಹಸುವಿನ ಕರು ನೆನಪಾಯ್ತು. ನಿದ್ದೆಯಿಲ್ಲದೆ ಕೆಂಪಾದ ಕಂಗಳಲ್ಲಿ ತನ್ನೂರ ಕೌಳಿ ಮಟ್ಟಿ, ಗೇರು ಹಣ್ಣುಗಳು ನೆನಪಾದ್ವು. ಛೇ, ಎಷ್ಟು ವರ್ಷಗಳಾಗಿ ಬಿಟ್ವಲ್ಲಾ ಊರುಕಡೆ ಹೋಗಿ ? ಏನು ದರಿದ್ರ ಮಳೆಯಪ್ಪಾ ಇದು ಅಂತ ಬಯ್ಯೋ ಮಳೆಯೇ ಎಷ್ಟು ಖುಷಿಕೊಡುತ್ತಿತ್ತಲ್ವಾ ಆಗ ಅನಿಸೋಕೆ ಶುರುವಾಯ್ತು. ಹಳ್ಳಿಯ, ತಾಯಿಯ ನೆನಪುಗಳು ಇವತ್ತೇ ಯಾಕಿಷ್ಟು ಹೆಚ್ಚಾಗಿ ಕಾಡ್ತಾ ಇದೆ ಅನ್ನೋ ಅವನ ಪ್ರಶ್ನೆಗೆ ಮುಂಬರುವ ಕಾಲವೇ ಉತ್ತರಿಸಬೇಕಿತ್ತು.
ತೋ...ನಾನ...ತಾ..ನಾನಾ..ನಾನ..ನೀ ಯಾರೋ, ನಾ ಯಾರೋ ಕಾಲ.. ತನ್ನ ಕೋಣೆಗೆ ಹೋಗ್ತಿದ್ದವನಿಗೆ ಈ ದನಿ ಅಲ್ಲೇ ಎಲ್ಲೋ ಕೇಳಿದಂತಾಗಿ ಒಮ್ಮೆ ಬೆಚ್ಚಿ ಬಿದ್ದ. ಸಂಶಯವೇ ಇಲ್ಲ. ಅದೇ ರಾಗ ಇದು. ತನ್ನ ಕನಸಿನಲ್ಲಿ ಬಂದು ಕಾಡುತ್ತಿದ್ದ ತಾನು ಎಂದೂ ಕೇಳದ ರಾಗಕ್ಕೆ ಸಾಹಿತ್ಯ ಬೇರೆ. ಅದನ್ನ ಯಾರೋ ಗುನುಗುತ್ತಿದ್ದಾರೆ , ಯಾರದು ಅದು ನೋಡಲೇಬೇಕೆನ್ನೋ ಕುತೂಹಲದಲ್ಲಿ ದನಿ ಬಂದ ಕೋಣೆಯತ್ತ ತಿರುಗಿದ. ನೋಡಿದ್ರೆ ರಾಜಸ್ಥಾನಿಗಳಂತೆ ಪೇಟ ಸುತ್ತಿದ್ದ ಇಬ್ಬರು. ಒಬ್ಬ ಮೈತುಂಬಾ ಬ್ಯಾಂಡೇಜ್ ಸುತ್ತಿಕೊಂಡು ಮಲಗಿದ್ರೆ ಮತ್ತೊಬ್ಬ ಒಂದು ರಾಗವ ಗುನುಗುತ್ತಿದ್ದ.ಆತನನ್ನು ನೋಡಿದ್ದೇನಾ ಎಲ್ಲಾದ್ರೂ ? ಗೊತ್ತಿಲ್ಲ. ಗುರುತಿರುವ ಮುಖದಂತೇ ಕಂಡರೂ ಎಲ್ಲೂ ನೋಡಿದ ನೆನಪಾಗುತ್ತಿಲ್ಲ. ಆದರೆ ಆ ರಾಗ ಮಾತ್ರ ನೆನಪಾಗುತ್ತೆ ಆಗಾಗ, ನೆನಪಾಗಿ ತಾಯ ನೆನಪ ತರಿಸುತ್ತೆ.. ಯಾಕೆ ? ಗೊತ್ತಿಲ್ಲ.ಯಾರಪ್ಪಾ ನೀನು ? ಈ ರಾಗ ಎಲ್ಲಿಂದ ಕಲಿತೆ ಎಂದ್ರೆ ಅವ ಇವನನ್ನೇ ದುರುಗುಟ್ಟಿ ನೋಡಿದನೊಮ್ಮೆ. ನನಗೆ ಜ್ಞಾಪಕ ಇರೋ ಸಮಯದಿಂದ ಜೊತೆಗೇ ಇರುವವ ಈತ. ಈ ಊರನ್ನು ತೋರಿಸ್ತೀನಿ , ಅದೇನೋ ಹೇಳ್ಬೇಕು ರಾಜಸ್ಥಾನದಿಂದ ಕರೆತಂದವನಿಗೆ ಇಲ್ಲೇ ಅಪಘಾತ ಆಗ್ಬೇಕೇ ? ಅವ ಬೇಗ ಹುಷಾರಾಗ್ಲಿ ಅಂತ ಅವನಿಷ್ಟದ ರಾಗ ಹಾಡ್ತಿದೀನಿ ಅಂದನವ. ಎಲ್ಲಿಯ ರಾಜಸ್ಥಾನದ ಬಾಲ್ಯದ ದೋಸ್ತಿ ಮತ್ತು ಎಲ್ಲಿಯ ಕನ್ನಡ ರಾಗ ಎಂದನಿವ ಆಶ್ಚರ್ಯದಿಂದ. ನಾ ರಾಜಸ್ಥಾನದ ಮರುಭೂಮಿಯಲ್ಲಿ ಪ್ರಜ್ಞೆಯಿಲ್ಲದೇ ಬಿದ್ದಿದ್ದೆನಂತೆ. ಎಷ್ಟು ಕಾಲವೋ ಹಾಗೇ ಬಿದ್ದಿದ್ದ ನನ್ನ ಜೀವವುಳಿಸಿದ ಪುಣ್ಯಾತ್ಮನೀತ. ಎಚ್ಚರವಾದಾಗ ಯಾವುದೋ ಊರಿನ ಹೆಸರು, ಮುಂಚೆ ಹೇಳಿದ ರಾಗ ಬಿಟ್ರೆ ಬೇರೇನೂ ಹೇಳುತ್ತಿರಲಿಲ್ಲವಂತೆ ಕೆಲ ದಿನಗಳ ನಂತರ. ಆಮೇಲೆ ನಿಧಾನವಾಗಿ ಸುಧಾರಿಸಿಕೊಂಡೆ ಅಂತ ಹೇಳ್ತಿದ್ದ ಅವ. ಅವನನ್ನು ಕಂಡಿದ್ದೇ ನನ್ನ ನೆನಪಿನಾಳದಲ್ಲಿರೋದು. ಅದಕ್ಕಿಂತ ಮುಂಚೆಯ ನಾನ್ಯಾರು, ಎಲ್ಲಿಂದ ಬಂದೆ ಅನ್ನೋದೊಂದೂ ಗೊತ್ತಿಲ್ಲ. ಅದ್ರ ಬಗ್ಗೆ ಹೆಚ್ಚಿನದ್ದೇನಾದ್ರೂ ಹೇಳಬಹುದಾದ ವ್ಯಕ್ತಿ ಇವನೊಬ್ಬನೇ . ಈ ಊರಿಂದ ಆ ಊರಿಗೆ ಹೇಗೆ ಹೋಗೋದು ಅಂತ್ಲೂ ಗೊತ್ತಿಲ್ಲ ನನಗೆ. ಇವನನ್ನು ಉಳಿಸಿಕೊಟ್ರೆ ಮಾತ್ರ ನಾನಲ್ಲಿಗೆ ಹೋಗೋಕೆ ಸಾಧ್ಯ ಡಾಕ್ಟರ್ ಅಂತ ಅಂಗಲಾಚಿದವನ ಕಣ್ಣಂಚಲ್ಲಿ ಅವನಿಗರಿಯದಂತೆ ದುಃಖ ಹೆಪ್ಪುಗಟ್ಟಿತ್ತು.
ತಾನೊಬ್ಬ ವೈದ್ಯನಷ್ಟೇ ದೇವರಲ್ಲವೆಂದು ತಿಳಿಹೇಳಿದ್ರೂ ತನ್ನಿಂದ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ ಸ್ನೇಹಿತನ ಕಂಡವನ ಪಾಲಿಗಿವ ದೇವರೇ ಆಗಿದ್ದ. ಇವನಿಗೆ ಅವನ ಕಂಡರೆ ಯಾರೋ ಸಂಬಂಧಿಯನ್ನು ಕಂಡ ಭಾವ, ಅವನಿಗೂ ಏನಪ್ಪಾ ಹೇಗಿದೀಯ ಎನ್ನುವ ಇವನ ಕಂಡರೆ ಏನೋ ಆತ್ಮೀಯತೆ. ಅವನಿಗೆ ಇವ ರಾಮ, ಇವನಿಗೆ ಅವ ರಾಮ.. ಎಂಬ ವಾಣಿ ನೆನಪಾಯಿತೊಮ್ಮೆ ಇವನಿಗೆ. ಇವರಿಬ್ಬರನ್ನು ಹತ್ತಿರ ಸೆಳೆದಿದ್ದ ರಾಗದ ನೆನಪಾದೊಡನೆಯೇ ಕಾಡಲ್ಲಿದ್ದ ತಾಯ ನೆನಪೂ ಆಯಿತಿವನಿಗೆ. ಅದೆಷ್ಟು ಹಾಡುಗಳನ್ನು ಹಾಡುತ್ತಿದ್ದಳವಳು ತನ್ನ ಬಾಲ್ಯದಲ್ಲಿ. ಈ ಹಾಡ ಬಗ್ಗೆ ಅವಳಿಗೆ ಏನಾದ್ರೂ ಗೊತ್ತಿರಬಹುದಾ ಎಂಬ ಆಲೋಚನೆ ಹೊಳೆಯಿತೊಮ್ಮೆ. ಇತ್ತೀಚೆಗೆ ಸಿಕ್ಕ ಇವನ ಬಾಯಲ್ಲಿ ಅಷ್ಟಿಷ್ಟು ಸಾಹಿತ್ಯ ಕೇಳಿದ್ದರೂ ತನ್ನ ಕನಸಲ್ಲಿ ಅದಕ್ಕಿಂತ ಮುಂಚಿನಿಂದಲೂ ಕಾಡುತ್ತಿದ್ದ ಅದೇ ರಾಗಕ್ಕೂ ಏನಾದ್ರೂ ಸಂಬಂಧವಿರಬಹುದಾ ಎಂಬ ಪ್ರಶ್ನೆಯನ್ನು ತನ್ನ ತಾಯೇ ಉತ್ತರಿಸಬಹುದೆಂಬ ವಿಶ್ವಾಸ ಮೂಡತೊಡಗಿತು. ಅದಕ್ಕೆ ಉತ್ತರಿಸಲಿ ಇಲ್ಲ ಉತ್ತರಿಸದೇ ಇರಲಿ, ತಾ ಸುಖವಾಗಿದ್ದು ತನ್ನ ತಾಯ ಮರೆತಂತೇ ಇರುವ ತನ್ನ ಚುಚ್ಚಿ ಕೊಲ್ಲುತ್ತಿರುವ ಆತ್ಮಸಾಕ್ಷಿಯ ಸಮಾಧಾನಕ್ಕಾದರೂ ತಾನು ಊರಿಗೆ ಹೋಗಿ ಆಕೆಯನ್ನು ನೋಡಬೇಕೆಂಬ ಕಾತುರ ಕಾಡತೊಡಗಿತವನಿಗೆ. ಎದುರಿಗೆ ಬಂದ ಪ್ರತೀ ವೃದ್ಧೆಯಲ್ಲೂ ತನ್ನ ತಾಯಿಯ ಸಂಕಟಗಳೇ ಕಂಡು ಹೊರಟೇಬಿಟ್ಟ ಊರಿನತ್ತ.
ಜೀವನದ ತಲ್ಲಣಗಳೇ ಹಾಗೆ. ಹಳ್ಳಿಯಲ್ಲಿದ್ದವನಿಗೆ ಪಟ್ಟಣದ ಥಳುಕು ಬಳುಕಿಲ್ಲ. ಅದನ್ನರಸಿ ಹೊರಟವನ ಬೆನ್ನಿಗೆ ತನ್ನ ತಂದೆ ತಾಯಿಗಳಿಲ್ಲ. ಬೆಳಕನರಸಿ ಹೊರಟ ಚಿಟ್ಟೆಗಳಿಂದ ಹಳ್ಳಿಗಳೆಲ್ಲಾ ವೃದ್ದಾಶ್ರಮಗಳಾಗಿಬಿಟ್ಟಿದೆಯಲ್ಲ ಗೌರಮ್ಮ ಅಂತಿದ್ದ ಚಾರಣಿಗನ ಬಳಿ ನೀನು ರಾಜಸ್ಥಾನಕ್ಕೇನಾದ್ರೂ ಹೋಗಿದ್ದೆಯೇನಪ್ಪಾ ಎಂದು ಕೇಳುವ ಮನಸ್ಸಾದರೂ ಸುಮ್ಮನಾದಳು. ಹೌದಂದರೆ ಏನನ್ನು ಕೇಳಿಯಾಳು ? ತನ್ನ ಗಂಡನನ್ನು ನೋಡಿದ್ದೀರಾ ಎಂದೇ ? ಆತ ಹೋಗಿ ಎಷ್ಟು ವರ್ಷವಾಯ್ತು ? ಎಲ್ಲಿದ್ದಾನೋ ? ಹೇಗಿದ್ದಾನೋ ? ಅಷ್ಟಕ್ಕೂ ರಾಜಸ್ಥಾನವನ್ನೋದೇನು ನಮ್ಮ ಸೋಮನ ಬೆಟ್ಟವೇ ? ಹುಡುಕಿದ ತಕ್ಷಣ ಸಿಗೋಕೆ ? ನಮ್ಮ ರಾಜ್ಯದಲ್ಲೇ ಇರೋ ಮಗನೇ ನನ್ನ ಕಾಣೋಕೆ ಬರದೇ ವರ್ಷವಾಗಿದೆ. ಇನ್ನು ಎಂದೋ ಹೋದ ಗಂಡ ಬರುತ್ತಾನೆಯೇ ? ಇಲ್ಲಿ ಬರೋ ಯುವಕರಿಗೆ ಮಾಡಿಕೊಡೋ ರೊಟ್ಟಿಯನ್ನ ತನ್ನ ಮಗನಿಗೇ ತಟ್ಟಿ ಕೊಡುತ್ತಾ ಇದ್ದೀನಿ ಅಂದ್ಕೋಬೇಕು. ಮುಂಚಿನಂತೆ ದುಡಿಯೋಕೆ ಆಗದೇ ಇರೋ ಈ ದಿನಗಳಲ್ಲಿ ಅವರು ಕೊಡೋ ಅಷ್ಟೋ ಇಷ್ಟೋ ದುಡ್ಡಲ್ಲೇ ಬದುಕಬೇಕು ಅಂದ್ಕೋತಲೇ ಒಂದಿಷ್ಟು ಗೋಲಿಯಾಡುವವರು ಗೌರಜ್ಜಿ ಅಂತ ಇತ್ತಲೇ ಓಡಿಬಂದರು. ಇವತ್ತು ಎಲ್ಲೂ ಹೋಗಿಲ್ಲ ಮಕ್ಳಾ , ಸಿಹಿ ಇಲ್ಲ ಅಂದ್ರೂ ಆ ಮಕ್ಕಳು ಅಲ್ಲಿ ಬಂದು ಒಂದುಷ್ಟು ಆಟವಾಡಿ, ಕೂಗಾಡಿ ಮತ್ತೆಲ್ಲೋ ಹೋದ್ರು. ಆ ಮಕ್ಕಳ ನೊಡುತ್ತಾ ಗೌರಮ್ಮನಿಗೆ ತಾನು ತನ್ನ ಮಗನನ್ನು ಮಲಗಿಸುವಾಗ ಹಾಡುತ್ತಿದ್ದ ಜೋಗುಳ ನೆನಪಾಯ್ತು
ತೋ..ನಾನಾ. ತಾ..ನಾನ..ನಾನ..
ನಾ ಯಾರೋ, ನೀ ಯಾರೋ ಕಾಲ
ಒಂದ್ ಮಾಡಿ ತಳ್ತೀಯಲ್ಲೋ ದೂರ
ಅರಿಯೆ ನಾ ಮೋಸ, ತಿರುಗಿಲ್ಲ ದೇಶ
ಕೂಸಿನ ನಗು ಕಾಪಿಡುವುದೆ ಕೆಲಸ
ಬೇಡುವೆನು ಕಾಪಾಡೋ ಈಶ..
ಇಂದಿನ ಪ್ರಸಂಗವು ನೆನಪಾಗಿ ಅವಳಿಗೇ ಅರಿವಿಲ್ಲದಂತೊಂದಿಷ್ಟು ಸಾಲುಗಳು ಅವಳ ಬಾಯಿಂದ ಹೊರಹೊಮ್ಮಿದ್ದವು.
ಬಂದೆ ಬರುವನು ತಿರುಗಿ ತೊರೆದೆನ್ನ ಪತಿರಾಯ
ತಡೆಯಾದ ಗೋಡೆಗಳ ಏಣಿ ಹುಡುಕಿ
ಕಾಂಚಾಣದಾಚೆಗೂ ಕಾಡಲೆನ್ನಯ ಪ್ರೀತಿ
ಬರುವ ಸಾಧ್ಯತೆಯುಂಟು ಮಗನು ಮರಳಿ
ಬೇಸರಿಸದಿರು ಮನವೆ ಈಶನಿಹ ನಿನಗೆಂದೆ
ಮರುಭೂಮಿಯಲು ಇರುವ ನೀರಿನಂತೆ
ಬಾಳಪಂಜರದಲ್ಲಿ ಕೊನೆಯಿಲ್ಲದಂತಲೆದು
ಸಾಯೊ ಜೀವಕೆ ಸಿಗುವ ಕೀಲಿಯಂತೆ..
ತೋ ನಾನಾ.. ತಾ.. ನಾನ.. ನಾನ..
ಆಗಷ್ಟೇ ಅಲ್ಲಿಗೆ ಬಂದ ಡಾಕ್ಟರು ಮತ್ತು ಅವನ ಜೊತೆಗೆ ಬಂದ ರಾಜಸ್ಥಾನದ ಅತಿಥಿಗಳು ಇದಕ್ಕೆ ಮೂಕ ಕೇಳುಗರಾಗಿದ್ರು. ಆ ಹಾಡು ಕೇಳುತ್ತಾ ಕೇಳುತ್ತಾ ಅದರ ಹಿಂದಿನ ಅರ್ಥ ಮತ್ತು ತಮ್ಮ ನಡುವಿನ ಸಂಬಂಧಗಳ ಯೋಚಿಸುವಷ್ಟರಲ್ಲೇ ಇವರು ಬಂದ ಅರಿವಾದ ಗೌರಮ್ಮ ಅಚ್ಚರಿಯಿಂದ ತನ್ನ ಹಾಡು ನಿಲ್ಲಿಸಿದ್ದಳು. ಆ ಹೊತ್ತಿನ ಸಂತೋಷ ಅಲ್ಲಿನ ಕಣ್ಣುಗಳಲ್ಲಿನ ಅಶ್ರುಧಾರೆಯಾಗಿ ಹರಿದಿತ್ತು.
ಸೂಚನೆ: ಈ ಕಥೆ ವಿಜಯನೆಕ್ಟಿನ ಜನವರಿ ೨೩ ರ ಸಂಚಿಕೆ, ಪುಟ ೩೦ರಲ್ಲಿ ಪ್ರಕಟವಾಗಿದೆ