ಓದೆಂದರೆ ಸಿಲೆಬಸ್ಸು, ಬರಹವೆಂದರೆ "ಪಂಜು" ಎಂಬಂತಾಗಿ ಬಹಳ ದಿನಗಳಾಗಿತ್ತು. ಇಷ್ಟಪಟ್ಟ ಕೆಲಸ, ಮುಂದೆಂದಾದರೂ ಬೇಕಾದೀತೆಂದು ಸಾಗುತ್ತಿದ್ದ ಓದ ಮಧ್ಯದಲ್ಲಿ ಕಳೆದುಹೋದವನ ಭಾವಗಳಿಗೆ ಹೊಸ ಸ್ಪರ್ಷ ಸಿಕ್ಕು ಇಂದಿಗೆ ಒಂದು ವಾರ. ಇಂದಿಗೆ ಒಂದು ವಾರದ ಹಿಂದೆ 3k ಬಳಗದ "ಹೊಂಗೆಮರದಡಿ ನಮ್ಮ ನಿಮ್ಮ ಕತೆಗಳು" ಕಥಾ ಸಂಕಲನದ ಬಿಡುಗಡೆ ಸಮಾರಂಭ. ಹಿಂದಿನ ದಿನವೇ ಹುಟ್ಟುಹಬ್ಬದ ಸಲುವಾಗಿ ಸ್ನೇಹಿತರ ಶುಭಾಶಯಗಳಲ್ಲಿ ಮಿಂದಿದ್ದ ನನಗೆ ಅಂದು ಅವೆಲ್ಲಾ ಗೆಳೆಯರ ಮುಖತಃ ಕಂಡು ಇನ್ನೂ ಖುಷಿಯಾಗಿತ್ತು. ಅಂದಿನ ಸಂಭ್ರಮದ ಬಗೆಗಿನ ಚಿತ್ರಗಳ ನೀವೆಲ್ಲಾ ನೋಡೇ ಇರುತ್ತೀರಿ. ಹಾಗಾಗಿ ಅದರ ನೆನಪನ್ನು ಪುನರಾವರ್ತಿಸಲಿಚ್ಛಿಸದಿದ್ದರೂ ಆ ಪುಸ್ತಕವನ್ನೋದಿದ ಅನುಭವವನ್ನು ನಿಮ್ಮೆದುರು ಹಂಚಿಕೊಳ್ಳದೇ ಇರಲಾಗುತ್ತಿಲ್ಲ. ವಿಮರ್ಶೆಯೆಂದಲ್ಲವಿದು.ಠೀಕೆ ಟಿಪ್ಪಣಿಗಳೆಂದು ಖಂಡಿತಾ ಅಲ್ಲ. ಬೆಳಗ್ಗಿನ ಟ್ರಾಫಿಕ್ ಜ್ಯಾಮಲ್ಲಿ, ಶನಿವಾರದ ಸವಿಬಿಸಿಲಲ್ಲಿ ಜೊತೆಗೇ ಇದ್ದು, ಮುಗಿಯುವವರೆಗೂ ನೆಮ್ಮದಿಗೊಡದ ಕತೆಗಳ ಬಗ್ಗೆ ಹೇಳಲೇಬೇಕೆನಿಸಿದ ಮಾತುಗಳಷ್ಟೇ ಇವು.
ಕತೆಯೆನ್ನೋದು, ಅದರ ಆರಂಭ ಅಂತ್ಯಗಳೆನ್ನೋದು ಹೇಗಿರಬೇಕು? ಅದರ ಮೂಲಕ ತಾ ಹೇಳಹೊರಟ ತತ್ವವೇನಿರಬೇಕು? ಅಂತದ್ದೊಂದು ತತ್ವವಿರಲೇಬೇಕಾ ಎಂಬುದನ್ನು ನಿರ್ಧರಿಸೋ ಸಂಪೂರ್ಣ ಸ್ವಾತಂತ್ರ್ಯ ಕಥೆಗಾರನದ್ದೇ ಆಗಿದ್ದರೂ ಸಂಕಲನದಲ್ಲಿನ ಕಥೆಗಳನ್ನೋದುತ್ತಾ ಅದರ ಮೊದಲಾರ್ಧದಲ್ಲಿ ಬರೋ "ಉಪ್ಪಿನ ಸತ್ಯಾಗ್ರಹ", "ತಿರುವು", "ಕಲ್ಲು ಬೆಂಚು"ವಿನಂತ ದಾರುಣಾಂತ್ಯದ ಕಥೆಗಳಿಂದ ಮೊದಲಾರ್ಧದಲ್ಲಿ ದುಃಖಾಂತ್ಯಕ್ಕೂ ದ್ವಿತೀಯಾರ್ಧದಲ್ಲಿ ಸುಖಾಂತ್ಯದ ಕಥೆಗಳಿಗೂ ಪ್ರಾಶಸ್ತ್ಯ ಸಿಕ್ಕಂತನಿಸಿತ್ತು. ದುಃಖಾಂತ್ಯದ ಕತೆಗಳಿಗೂ ಕೊನೆಗೊಂದು ಜೀವನಪ್ರೀತಿಯ ಟಚ್ ಕೊಟ್ಟು ಜೀವನಪ್ರೀತಿಯ ಮೌಲ್ಯ ಸಾರಿದ ಪ್ರಯತ್ನಗಳು ಸಖತ್ ಇಷ್ಟವಾದವು. ಕಷ್ಟವೆಂಬೋದನ್ನು, ವೈಧವ್ಯವೆಂಬೋದನ್ನ ವಾಚ್ಯವಾಗಿ ಹೇಳದೆಯೂ ಕಪ್ಪು ಹಣೆಬೊಟ್ಟು ಮುಂತಾದವುಗಳ ಮೂಲಕ ಸೂಚ್ಯವಾಗಿ ಹೇಳುತ್ತಾ ದುಃಖದಲ್ಲೂ ಹಳೆಯ ಭಾವಗಳ ನವಿರುತನವನ್ನು ಕಟ್ಟಿಕೊಟ್ಟ "ಮುಳ್ಳು"ವಿನಂತಹ ಪ್ರಯತ್ನಗಳು ಇಷ್ಟವಾದವು. ಪುಟ್ಮಾದ, ಮಾದೇವಿಯಂತಹ ಪಾತ್ರಗಳು ಇಂದಿಗೂ ನಮ್ಮಲ್ಲಿರೋ ಸಾಮಾಜಿಕ ಅನಿಷ್ಟಗಳ, ನಮ್ಮಲ್ಲಿನ ದುರಾಸೆಗಳ ವಿಪರ್ಯಾಸದಂತೆ ಭಾಸವಾಗಿದ್ದು ಸುಳ್ಳಲ್ಲ.
ಕೆಲವು ಕಥೆಗಳಲ್ಲಿನ ಪಾತ್ರಗಳು, ಡೈಲಾಗುಗಳು ಪುಸ್ತಕವನ್ನೋದಿ ಮುಗಿಸಿ ಬದಿಗಿಟ್ರೂ ಇನ್ನೂ ನನ್ನ ಕಾಡುತ್ತಲೇ ಇದೆ. ಅದರಲ್ಲೊಂದು "ಸಾಕು ಸ್ಟೈಲು ಮಾಡಿದ್ದು" ಅನ್ನೋ "ನೆನಪುಗಳ ಮಾತೇ ಮಧುರ" ಕತೆಯಲ್ಲಿ ಬರೋ ಡೈಲಾಗು. ಇನ್ನೊಂದು ಪಾತ್ರ "ಪ್ರೀತಿ ಮಾಯೆ ಹುಷಾರು" ಕತೆಯಲ್ಲಿನ ಧೃವರಾಜ್.ಅದರಲ್ಲಿ ಬರೋ ಕಥಾನಾಯಕನಿಗಿಂತ್ಲೂ ಸಿಮ್ ಕಾರ್ಡ್ ಮಾರೋ ಧೃವರಾಜ್ ಪಾತ್ರ ಇನ್ನೂ ಕಣ್ಣಿಗೆ ಕಟ್ಟಿದಂತೆ ಕಾಡ್ತಾ ಇದೆ. ಜನ ಮನಗಳ ಮಧ್ಯೆ ದ್ವೇಷದ ದಳ್ಳುರಿ ಹತ್ತಿಸಿ ಅದರಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳೋ ರಾಜಕೀಯದ ಬಗ್ಗೆ ಬರೆದಿರೋ "ಭ್ರಮೆಗಳ ಬೆನ್ನೇರಿ" ನನ್ನ ಕಣ್ಣೆದುರೇ ಘಟಿಸಿದ ಕಥಾನಕದಂತೆ, ಅಪ್ಪು-ವಿನಿಗಳ ಭೂತ ವರ್ತಮಾನಗಳಲ್ಲಿ ಜರುಗೋ "ಮತೀಯ"ಕ್ಕೆ ಪ್ರತ್ಯಕ್ಷ ಸಾಕ್ಶಿಯಾದಂತೆ ಭಾಸವಾಗಿದ್ದೂ ಸತ್ಯವೇ."ಅಪ್ಪ ಹಾಕಿದ ಹೊಂಗೆ ಮರ"ದಲ್ಲಿನ ಪುಲ್ಲಜ್ಜ, ಅಯ್ಯನೋರು,ವಿಶ್ವನಾಥ ಇಂದಿಗೂ ಹಳ್ಳಿಗಳಲ್ಲಿ ಮನೆಮಾತಾಗಿರೋ ಹಲವು ಪಾತ್ರಗಳ ನೆನಪಿಸುತ್ತಾರೆ.ಪೇಪರ್ ಪುರುಷೋತ್ತಮನ ಮೂಲಕ ಶುರುವಾಗೋ ಕಥಾನಕ "ಆಯಸ್ಸು ಕರಗೋ ಸಮಯ" ಮುಗಿಯೋ ಹೊತ್ತಿಗೆ ಕಣ್ಣೀರಾಗಿಸಿದರೆ ಸಣ್ಣ ಕಥೆಗಳಾದ "ಶಿವು", "ದೇವರ ಹೂ"ನಲ್ಲಿ ಎದುರಾಗೋ ಅನಿರೀಕ್ಷಿತ ಕ್ಲೈಮಾಕ್ಸುಗಳು ಬೆರಗು ಮೂಡಿಸುತ್ತವೆ."ಆಟಕ್ಕುಂಟು ಲೆಕ್ಕಕ್ಕಿಲ್ಲ", "ಗಾಳ", ಗಳ ಮೂಲಕ ನಿರ್ಲಕ್ಷ್ಯಕ್ಕೊಳಗಾದ ವ್ಯಕ್ತಿಯೊಳಗೆ ಮೂಡಬಹುದಾದ ದುಃಖ ದುಮ್ಮಾನಗಳು ಸ್ವಗತವಾಗಿವೆ,ಕಥೆಗಳಾಗಿವೆ.
"ಅರಳಿದ ಹೃದಯಗೀತೆ"ಯಲ್ಲಿ ಬರೋ ಶ್ರೀಕೃಷ್ಣ-ಹನುಮಂತ, ಕುಂದಾಪುರದ ಕಡೆಯ ಹಳ್ಳಿಯ ಚಿತ್ರಣ ಕಟ್ಟಿಕೊಡೋ "ಆಸೆ ನಿರಾಸೆ"ಯಲ್ಲಿನ ಸೋಮ-ನಾಗಿಯಂತಹ ಹಲವು ಜೋಡಿಗಳು ಮುದಗೊಳಿಸುತ್ತೆ. "ಐಸ್ ಕ್ರೀಂ", "ಭಾವ", "ದಿಕ್ಕು" ವಿನ ಮೂಲಕ ಬಡತನದ ಬಾಲ್ಯದ ಹಲವು ಕರಾಳಮುಖಗಳು ಎದುರಾದ್ರೆ , ಕುಸುಮಕ್ಕ, ರಮೇಶನಂತಹ ಪಾತ್ರಗಳ ಮೂಲಕ ಒಂಟಿತನದ, ಅನಾಥರ ನೋವು ಮುಖಾಮುಖಿಯಾಗುತ್ತಾ ಸಾಗುತ್ತೆ.ಮೊದಲ ಗುಕ್ಕಿಗೆ ಒಳಕ್ಕಿಳಿಯದೇ ಎರಡನೆಯ ಸಲ ಓದುವಂತೆ ಮಾಡಿದ ಕತೆ "ಮೊದಲ ಸಲ" !. ಎಲ್ಲಾ ಆವಿಷ್ಕಾರಗಳು ಎರಡು ಸಲ ಘಟಿಸುತ್ತೆ. ಮೊದಲು ನಿರ್ಮಿಸುವವನ ಮನದಲ್ಲಿ, ಮತ್ತೊಮ್ಮೆ ವಾಸ್ತವವಾಗಿ ಎನ್ನುವುದೊಂದು ಮಾತಿದೆ. ಅದೇ ತರಹ ಕೆಲವು ಘಟನೆಗಳೂ ! ಅದು ಹೇಗೆ ಅನ್ನೋ ಕುತೂಹಲವನ್ನು ಕೇಂದ್ರೀಕರಿಸಿರೋ "ಸ್ವರ್ಗದಲ್ಲಿ ನಡೆದ ಮದುವೆ" ಫ್ಲಾಷ್ ಬ್ಯಾಕಿರೋ ಸಿನಿಮಾದಂತೆ ಆಸಕ್ತಿ ಮೂಡಿಸುತ್ತಾ ಓದಿಸಿಕೊಂಡು ಹೋಗುತ್ತೆ.
ಮೊದಲೇ ಅಂದಂತೆ ಇದು ಪುಸ್ತಕದ ಎಲ್ಲಾ ಕಥೆಗಳ ವಿಮರ್ಶೆಯಲ್ಲ, ಸಾರವೆಂತೂ ಅಲ್ಲವೇ ಅಲ್ಲ. ಪುಸ್ತಕರೂಪದಲ್ಲಿ ಸೆರೆಯಾದ ಎಲ್ಲಾ ಗೆಳೆಯರ, ಹಿರಿಯರ ಪ್ರಯತ್ನಗಳನ್ನೋದಿ ಹೊರಹೊಮ್ಮಿದ ಮೆಚ್ಚುಗೆಯ ನುಡಿಗಳಷ್ಟೇ. ೨೧೪ ಪುಟಗಳನ್ನೋದಿದ ನನ್ನ ಕಣ್ಣುಗಳಲ್ಲಿ ಸದ್ಯಕ್ಕೆ ಮೂಡಿದ ಪುಸ್ತಕದ ಝಲಕ್ಕಷ್ಟೇ ಇದು. ಹೊಂಗೆಮರದ ಬಿಂಬ ನನ್ನ ಕೈಯೊಳಗಣ ಬೊಗಸೆ ನೀರಲ್ಲಿ ಕಂಡದ್ದಷ್ಟೇ ಅಲ್ಲ.ಆ ಮರದ ಸ್ವರೂಪವರಿಯೋಕೆ ಮರದ ಬುಡಕ್ಕೇ ತೆರಳಬೇಕು,ಈ ಸಂಕಲನದ ಸವಿಯುಣ್ಣೋಕೆ ಅದನ್ನೇ ಓದಬೇಕು. ಪುಸ್ತಕದಲ್ಲಿ ಪ್ರಕಟವಾದ, ಆಗದ ಎಲ್ಲಾ ಗೆಳೆಯರಿಗೂ ಅವರ ಪ್ರಯತ್ನಕ್ಕೆ ಅಭಿನಂದಿಸುತ್ತಾ , ವೇದಿಕೆಯಾದ 3k ಗೆ ವಂದಿಸುತ್ತಾ ಸದ್ಯಕ್ಕೊಂದು ವಿರಾಮ.
ಒಳ್ಳೆಯ ಬೆಳವಣಿಗೆ.
ReplyDeleteYes it is. Thanks for the blog visit :-)
Deletesuper :) dhanyavadagalu _/\_ :)
ReplyDeleteಧನ್ಯವಾದಗಳು. ಬ್ಲಾಗ್ ಭೇಟಿಗೆ ವಂದನೆಗಳು
Deleteಸೊಗಸಾದ ನಿರೂಪಣೆ :)
ReplyDeleteಧನ್ಯವಾದಗಳು :-)
Deleteಇಷ್ಟ ಆಯ್ತು . ಸುಂದರವಾಗಿ ಕಥೆಗಳ ಬಗ್ಗೆ ಹೇಳಿದ್ದಿರಿ :)
ReplyDeleteಧನ್ಯವಾದಗಳು ಸ್ವರ್ಣ ಅವರೇ :-)
ReplyDeleteನಿರೂಪಣೆ ಇಷ್ಟವಾಯಿತು.
ReplyDeleteಧನ್ಯವಾದಗಳು ವಿನೋದ್ ಅವರೇ. ಬ್ಲಾಗ್ ಭೇಟಿಗೆ ವಂದನೆಗಳು
Deleteಪ್ರಶಸ್ತಿ