Me with my Mom |
ಅಪರೂಪಕ್ಕೊಮ್ಮೆಯಾದರೂ ಬರೆಯೋ ಅಮ್ಮನ ಬರಹಗಳನ್ನೋದುವಾಗೆಲ್ಲಾ ಅಮ್ಮನ ಬರವಣಿಗೆ ನನ್ನಂತೇ ಇದೆಯಲ್ಲವಾ ಅನಿಸುತ್ತಿತ್ತು. ಸ್ವಲ್ಪ ಬುದ್ದಿ ತಿಳಿದ ಮೇಲೆ ಹೊಳೆದಿದ್ದಷ್ಟೇ.. ನನ್ನ ಬರಹ ಆಕೆಯಂತಿದೆಯಂತ ! ನನ್ನ ಬರಹಗಳ ಮೊದಲ ಓದುಗಳಮ್ಮ. ನಾ ಹುಚ್ಚುಚ್ಚಾಗಿ ಏನೇ ಬರೆದರೂ ಓದುವ ಅಮ್ಮನಿದ್ದೇ ಇದ್ದಾಳೆಂಬ ಬರವಸೆಯೇ ನನ್ನ ಎಷ್ಟೋ ಹೊಸ ವಿಷಯಗಳ ಕುರಿತಾದ ಬರಹಗಳಿಗೆ ಸ್ಪೂರ್ತಿ. ಹೊಲಸು ರಾಜಕೀಯವೋ, ವ್ಯಕ್ತಿನಿಂದನೆಯೋ, ಅಪಹಾಸ್ಯವೋ ನನ್ನ ಬರಹಗಳಲ್ಲಿ ನುಸುಳಿ ಬರಹದ ಸೃಜನಶೀಲತೆ ಸಾಯದಂತೆ ಕಾಯೋ ಎಚ್ಚರಿಕೆಯ ಭಾವವೂ ಅಮ್ಮನೇ ಆಗಿರಬಹುದೇನೋ. ಇಂತಹ ವಿಷಯಗಳ ಬಗ್ಗೆ ಬರೆಯಬೇಡ ಎಂದು ಎಂದೂ ಹೇಳದಿದ್ದರೂ ಬಹುಷಃ ಆಕೆ ನನ್ನ ಬೆಳೆಸಿದ ರೀತಿ ನಾ ಇಂದು ಬರೆಯುವಂತೆ, ಬದುಕುವಂತಿರಲು ಕಾರಣವಿರಬಹುದೇನೋ.
ಶಿಕ್ಷಕಿಯಾಗಿ, ಮಹಿಳಾ ಸಂಘಗಳ ಕಾರ್ಯಕರ್ತೆಯಾಗಿ,ಮನೆ, ತೋಟ, ವ್ಯವಹಾರಗಳೆಂಬ ನೂರೆಂಟು ತಲೆಬಿಸಿಗಳ ನಡುವೆಯೂ ಆಕೆ ಹಸನ್ಮುಖಿ. ನಾಟಕ, ಹಾಡು ಅಂತ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿ ಸದಾ ಸ್ಪೂರ್ತಿಯ ಚಿಲುಮೆಯಾಗುವಾಕೆ. ಅರಳು ಹುರಿದಂತೆ ಮಾತಾಡುವಾಕೆ, ಶಾಂತ ಸಾಗರದ ಮೌನವೂ ಆಕೆ. ಬರೆಯಹೋದರೆ ಬ್ಲಾಗ ಹಿಂದಿನ ಪ್ರತೀ ಬರಹದ ಹಿಂದೊಂದು ಕತೆ ಹೇಳಬಲ್ಲಾಕೆ, ಬರೆಯದೇ ಹೋದ ನೂರೆಂಟು ನೆನಪುಗಳ ಸಾಕ್ಷಿಯಾದಾಕೆ. ಆ ನೆಂಟರ ಈ ನೆಂಟರ ನೆಂಟರು ಹೀಗೆ ನೆಂಟರು ಅಂತ ಅದೆಷ್ಟೋ ನೆಂಟಸ್ತಿಕೆಗಳ ಅಗಾಧ ನೆನಪಿನೊಂದಿಗೆ ಸದಾ ಅಚ್ಚರಿಯಾಗುವಾಕೆ. ಹೊಸ ಬೈಕೋಡಿದ ಅರ್ಧಕ್ಕಿಂತಲೂ ಹೆಚ್ಚಿನ ದೂರದಲ್ಲಿ ಜೊತೆಯಾದಾಕೆ ! ಒಂದು ದಿನಕ್ಕೋ, ಬರಹಕ್ಕೋ ಮಿತಿಯಾಗದ ಅದೆಷ್ಟೋ ಭಾವಗಳ , ಖುಷಿಗಳ ಅಕ್ಷಯಪಾತ್ರೆ ನನ್ನಮ್ಮ. ಆಕೆ ಹೀಗೇ, ಸದಾ ನಗುನಗುತ್ತಿರಲೆಂಬ ಆಸೆಯೊಂದಿಗೆ...
ತಾಯಿ ಅನ್ನುವ ಶಕ್ತಿಯನ್ನು ಪದಗಳಲ್ಲಿ ಕಟ್ಟಿ ಕೊಡುತ್ತಾ ಹೋದಹಾಗೆ ಅದೊಂದು ತಳವಿರದ ಭುವಿಯಂತಾಗುತ್ತದೆ.. ಹೇಳಿದಷ್ಟು.. ಮೊಗೆದಷ್ಟು ಅದ್ಭುತ ವಿಚಾರ ಹೂಮ್ಮುವ ಗಣಿ ಆಕೆ..
ReplyDeleteಸುಂದರ ಚುಟುಕಾದ ಬರಹ.. ಜನುಮದಾತೆಗೆ ನಮ್ಮ ಕುಟುಂಬದ ಕಡೆಯಿಂದ ಶುಭಾಶಯಗಳು..
(೨೦೧೪ರ ಸಾಗರದಲ್ಲಿ ಸಂಜೆಯಲ್ಲಿ ನೀವಿಬ್ಬರು ಸಿಕ್ಕಿದ್ದು ಮಾತಾಡಿದ್ದು.. ಅಮ್ಮನನ್ನು ನೋಡಿದ್ದು ಆಗಲೇ. )
Thanks a lot Sreekanth anna 😀 thanks amman kade inda
ReplyDeleteHappy to see your posts.
ReplyDelete