Friday, December 17, 2021

ಕಂಪ್ಯೂಟರ್ ಸಾಕ್ಷರತಾ ದಿನ

ಇತ್ತೀಚೆಗೆ ನನ್ನ ಗೆಳೆಯರೊಬ್ಬರಿಂದ "Is it you in the Video?" ಅಂತ ಫೇಸ್ಬುಕ್ ಮೆಸೆಂಜರಿನಲ್ಲಿ ಮೆಸೇಜ್ ಬಂದಿತ್ತು. ನಾನ್ಯಾವ ವೀಡೀಯೋನೂ ಹಾಕಿಲ್ಲ ಅನ್ನೋದು ನನಗೆ ಗೊತ್ತಿದ್ದರಿಂದ ಆ ಮೆಸೇಜನ್ನು ತೆರೆಯಲಿಲ್ಲ. ಎರಡ್ಮೂರು ದಿನದ ನಂತರ ಅವರು ಫೋನ್ ಮಾಡಿ ನನ್ನ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದೆ, ಅದರಿಂದ ಯಾವ ಮೆಸೇಜ್ ಬಂದರೂ ಉತ್ತರಿಸಬೇಡಿ ಅಂತಂದ್ರು. ಅವರಿಗೂ ಇದೇ ತರದ ಮೆಸೇಜ್ ಬಂದು ಅದನ್ನ ಓಪನ್ ಮಾಡಿದ್ರಂತೆ. ಅದಾಗಿ ಕೆಲವೇ ದಿನಗಳಲ್ಲಿ ಮತ್ತೆ ಎರಡ್ಮೂರು ಗೆಳೆಯರಿಂದ ಇದೇ ತರದ ಮೆಸೇಜ್! ಕೆಲದಿನಗಳಲ್ಲೇ ಅವರೂ ತಮ್ಮ ಅಕೌಂಟ್ ಹ್ಯಾಕಾಗಿದೆ ಅಂತ ಫೇಸ್ಬುಕ್ಕಲ್ಲೇ ಹಾಕಿದ್ರು. ಇದ್ಯಾಕೆ ಹೀಗಾಗತ್ತೆ ಅಂತೀರಾ ? ನಾವು ಅಂತರ್ಜಾಲದಲ್ಲಿರೋ ಎಲ್ಲದನ್ನೂ ಕಣ್ಣು ಮುಚ್ಚಿಕೊಂಡು ನಂಬೋದು ಅಥವಾ ಕಂಪ್ಯೂಟರ್/ಡಿಜಿಟಲ್ ಅನಕ್ಷರಸ್ಥರಾಗಿರೋದು ! ಏನಿದು ಕಂಪ್ಯೂಟರ್/ಡಿಜಿಟಲ್ ಅನಕ್ಷರತೆ ಅಂತೀರಾ ? ಅಂದ ಹಾಗೆ ಕಂಪ್ಯೂಟರ್ ಅನಕ್ಷರತೆಗೂ ಡಿಜಿಟಲ್ ಅನಕ್ಷರತೆಗೂ ಸುಮಾರು ವ್ಯತ್ಯಾಸಗಳಿವೆ. ಈ ಕಂಪ್ಯೂಟರ್ ಅನಕ್ಷರತೆ ಅಂದರೆ ಏನೆಂಬುದನ್ನು ನೋಡೋಣ

 ಇಂದು  ಕಂಪ್ಯೂಟರ್ ಅಥವಾ ಗಣಕಯಂತ್ರ ಅನ್ನೋದು ನಮ್ಮೆಲ್ಲರ ದೈನಂದಿನ ಬದುಕಿನ, ಕೆಲಸದ ಭಾಗವೇ ಆಗೋಗಿದೆ. ರೈಲ್ವೇ ಸ್ಟೇಷನ್ನಿನ ಬುಕಿಂಗ್ ಕೌಂಟರಿನಿಂದ , ವರ್ಕ್ ಫ್ರಂ ಹೋಂ ಎಂದು ಮನೆಯಲ್ಲೇ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳ ವರೆಗೆ, ಪತ್ರಿಕೆಗಳ ಡಿಟಿಪಿ ಡಿಸೈನಿಂಗ್ ಕೆಲಸಗಳಿಂದ ಮದುವೆ ಪತ್ರಿಕೆಗಳ ಡಿಸೈನಿಂಗ್ವರೆಗೆ, ಸಮೀಪದ ಸಣ್ಣ ಮಾಲಿನ ಬಿಲ್ಲಿಂಗ್ ಕೌಂಟರಿನಿಂದ, ಕ್ಷಣದಲ್ಲೇ ಕೋಟಿಗಟ್ಟಲೇ ಕೈ ಬದಲಾಗೋ ಶೇರು ಮಾರುಕಟ್ಟೆಯ ವ್ಯವಹಾರಗಳವರೆಗೆ  ಕಂಪ್ಯೂಟರ್ಗಳ ಅಗತ್ಯತೆಯಿದೆ. ಇದೆಲ್ಲಾ ದೂರದ ವಿಷಯ ಅಂದ್ರಾ ?  ನಮ್ಮ ಮನೆಗೆ ಬಂದು ಕರೆಂಟ್ ಮೀಟರಿನ ಅಂಕಿಗಳನ್ನು ನೋಡಿ ಕೊಡೋ ಬಿಲ್ಲಿನ ಹಿಂದೂ ಕಂಪ್ಯೂಟರ್ ಇದೆ .    ಹಾಗಾಗಿ ಈ ಕಂಪ್ಯೂಟರುಗಳ ಬಗ್ಗೆ ನಾವು ಎಷ್ಟು ತಿಳಿದರೂ ಅಷ್ಟು ಒಳ್ಳೆಯದು. 

ಏನಿದು ಕಂಪ್ಯೂಟರ್ ಸಾಕ್ಷರತೆ ? 
ಕಂಪ್ಯೂಟರನ್ನು ಮತ್ತು ಸಂಬಂಧಿತ ತಂತ್ರಜ್ಞಾನಗಳ ಬಳಕೆಯಲ್ಲಿ ಪರಿಣತಿ ಹೊಂದುವುದನ್ನೇ ಕಂಪ್ಯೂಟರ್ ಸಾಕ್ಷರತೆ ಎನ್ನುತ್ತಾರೆ. ಇದು ಕಂಪ್ಯೂಟರನ್ನು ಸರಿಯಾಗಿ ಆನ್ , ಆಫ್ ಮಾಡೋದು ಹೇಗೆ ಎಂಬ ಮೂಲಭೂತ ಮಟ್ಟದ ತಿಳುವಳಿಕೆಯಾಗಿರಬಹುದು. ಕಂಪ್ಯೂಟರಿನಲ್ಲಿರುವ ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ನುಡಿ, ಬರಹ ಮುಂತಾದ ತಂತ್ರಾಂಶಗಳ ಬಳಕೆಯ ನಂತರ ಮಟ್ಟವಿರಬಹುದು. ಕಂಪ್ಯೂಟರ್ ನಮಗೆ ಬೇಕಾದ ಕೆಲಸ ಮಾಡುವಂತೆ  ಕೋಡ್ ಮಾಡೋದು, ಕಂಪ್ಯೂಟರ್ ಹಾಳಾದಾಗ ಅದನ್ನು ರಿಪೇರಿ ಮಾಡುವುದು ಮುಂತಾದ ಉನ್ನತ ಮಟ್ಟದ ಕೌಶಲ್ಯವೂ ಇರಬಹುದು. ಇವೆಲ್ಲವೂ ಕಂಪ್ಯೂಟರ್ ಸಾಕ್ಷರತೆಯೇ. ಕಂಪ್ಯೂಟರಿಗೆ ಸಂಬಂಧಿಸಿದ ಯಾವುದೋ ಸಮಸ್ಯೆಯಿದೆ ಎಂಬ ಮಾತುಕತೆ ನಡೆಯುತ್ತಿದ್ದಾಗ ನಿಮಗೆ ಅದನ್ನು ಸರಿ ಮಾಡಲು ಬರದಿದ್ದರೂ ಅದೇನು ಎಂದು ಅರ್ಥ ಮಾಡಿಕೊಳ್ಳಲಾದರೂ ಕಂಪ್ಯೂಟರ್ ಸಾಕ್ಷರತೆ ಅಗತ್ಯ.  ಉದಾಹರಣೆಗೆ ನೀವು ಸರ್ಕಾರಿ ಕಛೇರಿಗೋ ಬ್ಯಾಂಕಿಗೋ ಹೋದಾಗ ಅಲ್ಲಿ ಸರ್ವರ್ ಡೌನಾಗಿದೆ ಅಂದ್ರೆ ಏನಾಗಿದೆ ಅಂತ ನಿಮಗೆ ಅರ್ಥವಾಗಬೇಕು. ಇಲ್ಲಾಂದ್ರೆ ಈ ದರಿದ್ರ ಬ್ಯಾಂಕು, ಸರ್ಕಾರದವ್ರು ನಮ್ಮನ್ನ ಇಡೀ ದಿನ ಅಲೆಸೂ, ಕೆಲಸ ಮಾಡಿಕೊಡಲಿಲ್ಲ ಅಂತ ಶಾಪ ಹಾಕುತ್ತಾ ಕೂರಬೇಕಾಗುತ್ತೆ. 

ಕಂಪ್ಯೂಟರ್ ಸಾಕ್ಷರತೆಗೊಂದು ದಿನ:
ಡಿಸೆಂಬರ್ ೨ನೇ ತಾರೀಖಿನಂದು ಕಂಪ್ಯೂಟರ್ ಸಾಕ್ಷರತಾ ದಿನ  ಎಂಬ ದಿನ ಹೆಚ್ಚಿನ ಸಂಭ್ರಮವಿಲ್ಲದೇ, ಸುದ್ದಿಯಿಲ್ಲದೇ ಆಚರಿಸಲ್ಪಟ್ಟಿತ್ತು !  

ಕಂಪ್ಯೂಟರ್ ಸಾಕ್ಷರತೆಗೂ ಒಂದು ದಿನ ಎಂದು ಬಂದಿದ್ದು ಹೇಗೆ ? 
Computer Literacy(ಕಂಪ್ಯೂಟರ್ ಸಾಕ್ಷರತೆ) ಎಂಬ ಪದವನ್ನು ಆಡ್ರ್ಯೂ ಮೊಲ್ನಾರ್ ಎಂಬ ಅಮೇರಿಕಾದ ಗಣಕಶಾಸ್ತ್ರಜ್ಞ 1978ರಲ್ಲಿ ಹುಟ್ಟುಹಾಕಿದರು. ಅವರು ಅಮೇರಿಕಾದ ರಾಷ್ಟ್ರೀಯ ವಿಜ್ಞಾನ ಪರಿಷತ್ತಿನ ನಿರ್ದೇಶಕರಾಗಿದ್ದರು. ತದನಂತರದ ಹಲವು ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳಲ್ಲಿ ಮತ್ತು ಪಠ್ಯಗಳಲ್ಲಿ ಈ ಪದ ಬಳಕೆಯಾಗುತ್ತಾ ಹೋಯಿತು. ಭಾರತದಲ್ಲಿ ೧೯೫೫ರಲ್ಲೇ  ಕೊಲ್ಕತ್ತಾದ ರಾಷ್ಟ್ರೀಯ ಅಂಕಿಅಂಶ ಸಂಸ್ಥೆಯಲ್ಲಿ ಮೊದಲ ಕಂಪ್ಯೂಟರ್ ಬಂದಿದ್ದರೂ ಅದು ಜನಸಾಮಾನ್ಯರ ಅಥವಾ ಸಣ್ಣ ಸಣ್ಣ ಕಂಪೆನಿಗಳ ಮಟ್ಟಿಗೆ ಬಳಕೆಯಲ್ಲಿರಲಿಲ್ಲ. ೨೦೦೦ರ ಸುಮಾರಿಗೂ ಜನ ಸಾಮಾನ್ಯರಲ್ಲಿ ಕಂಪ್ಯೂಟರ್ ಬಳಕೆಯ ಬಗ್ಗೆಯಿದ್ದ ಮಾಹಿತಿ ಮತ್ತು ಜ್ಞಾನ ಕಮ್ಮಿಯೇ. ಹಾಗಾಗಿ ೨೦೦೧ರಲ್ಲಿ ಕಂಪ್ಯೂಟರ್ ಶಿಕ್ಷಣ ಕೊಡುವ NIIT ಸಂಸ್ಥೆ ಕಂಪ್ಯೂಟರ್ ಸಾಕ್ಷರತಾ ದಿನವನ್ನು ಪ್ರತೀವರ್ಷ ಡಿಸೆಂಬರ್ ೨ರಂದು ಆಚರಿಸಲು ಪ್ರಾರಂಭಿಸಿತು.  


ಈಗಲೂ ನಮಗೆ ಕಂಪ್ಯೂಟರ್ ಸಾಕ್ಷರತೆಯ ಅವಶ್ಯಕತೆ ಇದೆಯೇ ? 
ಅನೇಕ ವರದಿಗಳ ಪ್ರಕಾರ ಭಾರತದಲ್ಲಿನ ಕಂಪ್ಯೂಟರ್ ಸಾಕ್ಷರತೆಯ ಪ್ರಮಾಣ ಶೇ ೩೮ಕ್ಕಿಂತ ಕೆಳಗಿದೆ. ಲಕ್ಷದ್ವೀಪ, ಚಂಡೀಗಡ, ಗೋವಾ ರಾಜ್ಯಗಳಲ್ಲಿ ಮಾತ್ರ ಈ ಮಟ್ಟ ಸಮಾಧಾನಕರವಾಗಿದೆ.  ಶೇಕಡಾ ನೂರರಷ್ಟು ಸಾಕ್ಷರತೆಯಿರುವ ಕೇರಳ ರಾಜ್ಯವನ್ನೂ ಸೇರಿಸಿ ಭಾರತದ ಬೇರೆಲ್ಲಾ ರಾಜ್ಯಗಳೂ ಈ ವಿಷಯದಲ್ಲಿ ಸಾಕಷ್ಟು ಹಿಂದುಳಿದಿವೆ ಎಂದು ವರದಿಗಳು ತಿಳಿಸುತ್ತವೆ. 

ನಾವು ಕಂಪ್ಯೂಟರ್ ಸಾಕ್ಷರರಾಗೋದು ಹೇಗೆ ? 
ಕಂಪ್ಯೂಟರ್ ಸಾಕ್ಷರರಾಗಲು ಯಾವುದೋ ಕಂಪ್ಯೂಟರ್ ಸೆಂಟರಿಗೆ ಹೋಗಿ ದುಡ್ಡು ಕೊಟ್ಟು ಕೋರ್ಸಿಗೆ ಸೇರಬೇಕೆಂದಿಲ್ಲ. ಇಂತಿಷ್ಟು ವಯಸ್ಸಾದ ಮೇಲೆ ಇದನ್ನು ಕಲಿಯೋದು ಅಸಾಧ್ಯವೆಂದೂ ಇಲ್ಲ. ಎಲ್ಲರ ಬಳಿ ಮೊಬೈಲ್ ಇದ್ದೇ ಇದೆ. ಮೊಬೈಲಿನಲ್ಲಿ ಯೂಟ್ಯೂಬು, ಫೇಸ್ಬುಕ್ಕುಗಳನ್ನು ಬಳಸೋದೂ ಗೊತ್ತಿದೆ. ಇವುಗಳಲ್ಲಿ ಕಂಪ್ಯೂಟರಿನ ಬಗ್ಗೆ, ಇದರಲ್ಲಿನ ತಂತ್ರಾಂಶಗಳ ಬಗ್ಗೆ ಸರಳಾತಿ ಸರಳವಾಗಿ ತಿಳಿಸೋ ಹಲವು ಚಾನಲ್ಲುಗಳಿವೆ. 

ಮೊಬೈಲಿಲ್ಲದಿದ್ದರೆ ಹೇಗೆ ಕಲಿಯೋದು ? 
ಈಗಿನ ಶಾಲಾ ಕಾಲೇಜುಗಳ ಪಠ್ಯದಲ್ಲಿ ಕಂಪ್ಯೂಟರ್ನ ಬಗ್ಗೆ ಸರಳವಾಗಿ ಕಲಿಸಲಾಗುತ್ತಿದೆ. ನಿಮ್ಮ ಮಕ್ಕಳು ಅಥವಾ ನೆರೆಹೊರೆಯ ಮಕ್ಕಳು ಈ ಬಗ್ಗೆ ಓದುತ್ತಿದ್ದರೆ ಅವರ ಪುಸ್ತಕ ತೆಗೆದುಕೊಂಡು ಓದಿ ನೋಡಿ. ಈ ಪುಸ್ತಕಗಳಲ್ಲಿ ಅತ್ಯಂತ ಸರಳವಾಗಿ , ಮಕ್ಕಳಿಗೂ ಅರ್ಥವಾಗುವಂತೆ ಕಂಪ್ಯೂಟರಿನ ಬಗ್ಗೆ, ಅದರಲ್ಲಿನ ತಂತ್ರಾಂಶಗಳ ಬಗ್ಗೆ ಕೊಟ್ಟಿರುತ್ತಾರೆ. ಅದು ಅರ್ಥವಾಗದಿದ್ದರೆ ಅವರಿಗೇ ಕೇಳಿ. ಅವರೇ ಅದನ್ನು ಪಠ್ಯದಲ್ಲಿರೋದಕ್ಕಿಂತ ಸರಳವಾಗಿ ಹೇಳಿಕೊಟ್ಟಾರು. ಯಾಕೆಂದರೆ ತಂತ್ರಜ್ಞಾನ ಅನ್ನೋದು ವಯಸ್ಕರಿಗಿಂತ ಮಕ್ಕಳನ್ನ ಬೇಗ ಆಕರ್ಷಿಸುತ್ತೆ.  ಮಕ್ಕಳ ಬಳಿ ಕಲಿಯೋದ್ರಲ್ಲಿ  ತಪ್ಪೇನಿದೆ ? ಹಾಗಾಗಿ ಈ ನಿಟ್ಟಿನಲ್ಲಿ ಮುನ್ನಡಿಯಿಡೋಣ ಮತ್ತು ನಾವೆಲ್ಲರೂ ಕಂಪ್ಯೂಟರ್ ಸಾಕ್ಷರರಾಗೋಣ.

Sunday, August 1, 2021

ಅಂಟಿನುಂಡೆ

ಅಂಟಿನುಂಡೆ ; Antinunde

ಬಾಣಂತಿಯ ಆರೈಕೆ ಅಂದರೆ ನೆನಪಾಗೋದು ಅಂಟಿನುಂಡೆ. ಸೊಂಟ ಗಟ್ಟಿಯಾಗ್ಬೇಕು ಅಂದ್ರೆ ಅಂಟಿನುಂಡೆ ತಿನ್ಬೇಕು ಅಂತ ನಮ್ಮ ಕಡೆ ಮಾತೇ ಇದೆ.  ಸೊಂಟಕ್ಕೆ ಬಲ ಬರುತ್ತೆ ಅಂತ ಕೊಡೋ ಈ ಉಂಡೆಯನ್ನು ಬೇರೆಯವರೂ ತಿನ್ನಬಹುದು. ಈ ಅಂಟಿನುಂಡೆಯನ್ನು ಬೇರೆ ಬೇರೆ ಕಡೆ ಬೇರೆ ಬೇರೆ ಸಾಮಗ್ರಿಗಳಿಂದ ಮಾಡುತ್ತಾರೆ. ಎಲ್ಲೆಡೆಯೂ ಅಂಟು, ಬೆಲ್ಲ, ಕರ್ಜೂರ/ಉತ್ತುತ್ತೆ, ಬಾದಾಮಿ ಮುಂತಾದ ಪದಾರ್ಥಗಳು ಸಾಮಾನ್ಯವಾದರೂ ಧಾರವಾಡದ ಕಡೆ ಅಳವಿ ಬೀಜ, ಕೇರು ಬೀಜ ಮುಂತಾದವನ್ನು  ಬಳಸುತ್ತಾರೆ. ಮಲೆನಾಡಿನ ಕಡೆ ವಾಯುವಡಂಗ, ಬಾಲಮೆಣಸು , ತಳಾಸ್ ಪತ್ರೆ ಮುಂತಾದವನ್ನು ಬಳಸಿದರೆ ಮಂಗಳೂರ ಕಡೆ ಬೆಳ್ತಗೆ ಅಕ್ಕಿ, ತಾಳೆ ಬೆಲ್ಲ, ಅರಿಶಿಣ ಮುಂತಾದ ವಸ್ತುಗಳನ್ನು ಬಳಸುತ್ತಾರೆ. ಬೇರೆ ಬೇರೆ ವಿಧಾನಗಳ ಬಗ್ಗೆ ಕೇಳಿ, ಓದಿದ ಮೇಲೆ ನಮ್ಮನೇಲೆ ಮಲೆನಾಡ ರೀತಿಯಲ್ಲಿ ಮತ್ತು ಮಲೆನಾಡು, ಧಾರವಾಡಗಳ ಅಂಶಗಳನ್ನು ಸೇರಿಸಿ ಅಂಟಿನುಂಡೆ ಮಾಡಿದ್ವಿ. ಎರಡು ಸಲವೂ ಚೆನ್ನಾಗಿತ್ತು ಮತ್ತು ಹೆಂಗೆ ಮಾಡಿದಿರಿ ಅಂಟಿನುಂಡೆ ? ಉಂಡೆ ಕಲ್ಲಾಗಲಿಲ್ಲವಾ ಅಂತ ಕೇಳುತ್ತಿದ್ದ ಗೆಳೆಯರ ಅನುಕೂಲಕ್ಕಾಗಿ ಅಂಟಿನುಂಡೆ ವಿಧಾನವನ್ನು ಕೆಳಗೆ ಕೊಡುತ್ತಿದ್ದೇನೆ. ಇಲ್ಲಿ ಕೊಟ್ಟಿರೋ ವಿಧಾನದಲ್ಲಿ, ಹೇಳಿದಷ್ಟು ಪದಾರ್ಥಗಳನ್ನು ಬಳಸಿ ಮಾಡಿದರೆ ಸುಮಾರು ನಲವತ್ತು ಉಂಡೆಗಳನ್ನು ಮಾಡಬಹುದು. 



ಬೇಕಾಗೋ ಸಾಮಗ್ರಿಗಳು: 

ಬೆಲ್ಲ: ೨೦೦ ಗ್ರಾಂ ಅಥವಾ ಒಂದು ಕಪ್ ಅಥವಾ ಮೂರು ಉಂಡೆ

ಕರ್ಜೂರ: ನೂರು ಗ್ರಾಂ ಅಥವಾ ಒಂದು ಕಪ್

ಕೆಲವು ಕಡೆ ಕೆಮ್ಮು ಬರುತ್ತೆ ಅಂತ ಬಾಣಂತಿಯರಿಗೆ ಕೊಬ್ಬರಿ, ಕಾಯಿ ಕೊಡೋಲ್ಲ. ಹಾಗಾಗಿ ನಾವು ಕೊಬ್ಬರಿ ಹಾಕಿಲ್ಲ. ಕೊಬ್ಬರಿ ಬಳಸೋದಾದರೆ

ತುರಿದ ಕೊಬ್ಬರಿ: ನೂರು ಗ್ರಾಂ ಅಥವಾ ಒಂದು ಕಪ್.


ಕರ್ಜೂರ ಮತ್ತು ಕೊಬ್ಬರಿ ಸೇರಿದರೆ ಎಷ್ಟಾಗುತ್ತೋ ಅಷ್ಟು ಅಳತೆಯ ಉಂಡೆ ಬೆಲ್ಲ ಬೇಕು. 

ಕೊಬ್ಬರಿ ಹಾಕದಿದ್ದರೆ ಕರ್ಜೂರದ ಎರಡರಷ್ಟು ಉಂಡೆ ಬೆಲ್ಲ ಬೇಕು. ಕೆಲವರು ಕೆಳಗೆ ಹಾಕಿದ ಅಷ್ಟೂ ಡ್ರೈ ಫ್ರೂಟ್ಸ್ ಸೇರಿದರೆ ಎಷ್ಟಾಗುತ್ತೋ ಅಷ್ಟು ಬೆಲ್ಲ ಹಾಕುತ್ತಾರೆ. ಆದರೆ ಅದರಿಂದ ಉಂಡೆ ಸಿಕ್ಕಾಪಟ್ಟೆ ಸಿಹಿಯಾಗುತ್ತೆ ಮತ್ತು ಕಲ್ಲಾಗುತ್ತೆ. ಮೇಲಿನ ಅಳತೆಯಲ್ಲಿ ಮಾಡಿದರೆ ಬಾಯಿ ಕಟ್ಟುವಷ್ಟು ಸಿಹಿಯೂ ಆಗೋಲ್ಲ, ಕಲ್ಲೂ ಆಗೋಲ್ಲ. ಅರ್ಧ ಕೇಜಿ ಉಂಡೆ ಬೆಲ್ಲ ತಗೊಂಡರೆ ಸುಮಾರು ಆರರಿಂದ ಏಳು ಉಂಡೆ ಬರುತ್ತೆ. ಅದರಲ್ಲಿ ನಲವತ್ತು ಉಂಡೆಯ ಅಳತೆಗೆ ಮೂರು ಉಂಡೆ ಬೆಲ್ಲ ಸಾಕಾಗುತ್ತೆ. 


ಬಾದಾಮಿ: ೧/೨ ಕಪ್

ಪಿಸ್ತಾ: ೧/೨ ಕಪ್

ಒಣ ದ್ರಾಕ್ಶಿ: ೧/೨ ಕಪ್

ಕೆಲವು ಕಡೆ ಗೋಡಂಬಿಯನ್ನೂ ೧/೨ ಕಪ್ ಹಾಕುತ್ತಾರೆ. ಆದರೆ ಗೋಡಂಬಿಯಲ್ಲಿ ಸ್ವಲ್ಪ ಕೊಬ್ಬಿನಂಶ ಇರುವುದರಿಂದ ನಮ್ಮಲ್ಲಿ ಹಾಕಿಲ್ಲ. 

ವಾಲ್ನಟ್: ೧/೨ ಕಪ್

ಅಳಿವೆ ಬೀಜ: ೧/೨ ಕಪ್ --> (ಕೆಳಗಿನ ಚಿತ್ರ ನೋಡಿ)

ಅಳವಿ ಬೀಜ ; Alavi Beeja

ಮೇಲಿನ ಡ್ರೈ ಫ್ರೂಟ್ಸುಗಳನ್ನೆಲ್ಲಾ ನೂರು ಗ್ರಾಂ ತಂದಿಟ್ಟುಕೊಂಡರೆ ಎರಡು ಸಲಕ್ಕೆ ಸರಿಯಾಗುತ್ತೆ. ಸ್ವಲ್ಪ ಸಣ್ಣ ಗಾತ್ರದ ಉಂಡೆ ಮಾಡೋದಾದರೆ ಅಥವಾ ಗೋಡಂಬಿ ಹಾಕಿದರೆ ಅರ್ಧ ಕಪ್ಗಿಂತ ಸ್ವಲ್ಪ ಕಡಿಮೆ ಹಾಕಬಹುದು ಮತ್ತು ಎರಡು ಸಲ ಮಾಡಿ ಸ್ವಸ್ವಲ್ಪ ಉಳಿಯಬಹುದು. 


ಗಸಗಸೆ: ೧/೪ ಕಪ್.


ಅಂಟು: ನಾಲ್ಕು ಟೇಬಲ್ ಸ್ಪೂನ್

ಅಜ್ವೈನ್ ಅಥವಾ ಓಮಿನಕಾಳು: ೧/೪ ಟೇಬಲ್ ಸ್ಪೂನ್


ಏಲಕ್ಕಿ: ೪

ಲವಂಗ: ೪

ಮೋಡಿಕಡ್ಡಿ,ಬಾಲಮೆಣಸು,ತಳಾಸ್ ಪತ್ರೆ,ವಾಯುವಡಂಗ,ಹಿಪ್ಲಿ, ಹಿಪ್ಲಿ ಮುಡಿ -ಪುಡಿ ಮಾಡಿದಾಗ ಎಲ್ಲಾ ಸೇರಿ ಒಂದು ಟೇಬಲ್ ಸ್ಪೂನ್ ಆಗುವಷ್ಟು.

(ಈ ಎಲ್ಲಾ ಸಾಮಗ್ರಿಗಳನ್ನು ಏಲಕ್ಕಿಯಿಂದ ಶುರುವಾಗಿ ಮೇಲೆ ಹೇಳಿದ ಕ್ರಮದಲ್ಲೇ ಪ್ರದಕ್ಷಿಣಾಕಾರವಾಗಿ ಕೆಳಗಿನ ಚಿತ್ರದಲ್ಲಿ ಇಡಲಾಗಿದೆ. ಮಧ್ಯದಲ್ಲಿರೋದು ಗಸಗಸೆ ಮತ್ತೆ ಜಾಯಿಕಾಯಿ)

ಅಂಟಿನುಂಡೆಗೆ ಬೇಕಾದ ಜೌಷಧೀಯ ವಸ್ತುಗಳು; Medicinal items needed for Antina Unde

ಜಾಯಿಕಾಯಿ: ಒಂದು ಜಾಯಿಕಾಯಿಯ ಕಾಲು ಹೋಳು

ತುಪ್ಪ: ಸುಮಾರು ೨೦೦ ಗ್ರಾಂ ಅಥವಾ ಹತ್ತು ಟೇಬಲ್ ಸ್ಪೂನ್

ದಪ್ಪ ತಳದ ಬೇಗ ತಳ ಹತ್ತದಂತಹ ಬಾಣಲಿ-೧

ದೊಡ್ಡ ಪಾತ್ರೆ -೧

ಹುರಿಯೋ ಕೈ-೧   

ಟೇಬಲ್ ಸ್ಪೂನ್: ಎರಡು. 

ಸಣ್ಣ ನೀರಿನ ಬೌಲ್ - ೧


ಅಂಟಿನುಂಡೆಗೆ ಬೇಕಾದ ವಸ್ತುಗಳು; Items needed for Antinunde


ಮಾಡೋಕೆ ಬೇಕಾಗೋ ಸಮಯ: ಸುಮಾರು ಮೂರೂವರೆ ಘಂಟೆ

ಡ್ರೈ ಫ್ರೂಟ್ಸ್ಗಳನ್ನ ಸಣ್ಣದಾಗಿ ಚಾಕುವಿನಲ್ಲಿ ಅಥವಾ ಅಡಿಕೆ ಕತ್ತರಿಯಲ್ಲಿ ತುಂಡು ಮಾಡಬೇಕು. ಇದೇ ಸ್ವಲ್ಪ ಕಷ್ಟದ ಮತ್ತು ಸಮಯ ಬೇಕಾಗೋ ಕೆಲಸ. ಹೇಗಿದ್ರೂ ಉಂಡೆ ಮಾಡೋದಲ್ವಾ  ಮಿಕ್ಸಿಯಲ್ಲಿ ಹಾಕಿದ್ರೆ ಆಗದಾ ಅಂತ ನೀವು ಕೇಳಬಹುದು. ಆದರೆ ಮಿಕ್ಸಿಯಲ್ಲಿ ಹಾಕಿದ್ರೆ ಕೆಲವೊಂದು ಕಾಲ್ಕಾಲು ಚೂರಾಗಿ ಕೆಲಸ ಸುಲಭವಾಗುತ್ತೆ. ಆದರೆ ಕೆಲವೊಂದು ಫುಲ್ ಪುಡಿಯಾಗಿ ಹುರಿಯೋ ಹೊತ್ತಿಗೆ ಹತ್ತೋಕೆ ಶುರುವಾಗುತ್ತೆ. ಹಾಗಾಗಿ ಸ್ವಲ್ಪ ಸಮಯ ತಗೊಂಡು ಚಾಕು ಅಥವಾ ಅಡಿಕೆ ಕತ್ತರಿಯಲ್ಲಿ ತುಂಡು ಮಾಡೋದೇ ಉತ್ತಮ ಅಂತ ನಮ್ಮನಿಸಿಕೆ. ಇದನ್ನು ತುಂಡು ಮಾಡೋಕೆ ಇಬ್ಬರು ಅಥವಾ ಮೂವರು ಸೇರಿಕೊಂಡರೆ ಸುಮಾರು ಮುಕ್ಕಾಲರಿಂದ ಒಂದು ಘಂಟೆಯಲ್ಲಿ ಮುಗಿಸಬಹುದು. ಅದಾದ ಮೇಲೆ ಸಾಮಾನುಗಳನ್ನು ಹುರಿಯೋದು, ಉಂಡೆ ಕಟ್ಟೋದು ಅಂತ ಸುಮಾರು ಎರಡೂವರೆ ಘಂಟೆ ಬೇಕು.


ಮಾಡೋ ವಿಧಾನ: 

Frying Badam for Antinunde
ದಪ್ಪ ತಳದ ಪಾತ್ರೆಯಲ್ಲಿ ಒಂದು ಸ್ಪೂನ್ ತುಪ್ಪ ಹಾಕಿ ತುಂಡು ಮಾಡಿದ ಬಾದಾಮಿಯನ್ನು ಕೆಲ ನಿಮಿಷಗಳವರೆಗೆ ಸಣ್ಣ-ಮಧ್ಯಮ ಉರಿಯಲ್ಲಿ ಹುರಿಯಿರಿ. ಬಾದಾಮಿಯನ್ನು ತುಂಡು ಮಾಡಿದಾಗ ಮಧ್ಯದ ಬಿಳಿ ಭಾಗ ಕಾಣುತ್ತಿರುತ್ತೆ. ಅದು ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಬೇಕು. ಹುರಿದ ಬಾದಾಮಿಯನ್ನು ಪಕ್ಕದಲ್ಲಿದ್ದ ಸಣ್ಣ ಪಾತ್ರೆಗೆ ಹಾಕಿ. ಮತ್ತೆ ಒಂದು ಚಮಚ ತುಪ್ಪವನ್ನು ದಪ್ಪ ತಳದ ಪಾತ್ರೆಗೆ ಹಾಕಿ ತುಂಡು ಮಾಡಿದ ಪಿಸ್ತಾವನ್ನೂ ಹೀಗೇ  ಅದರ ಹಸಿರು ಬಣ್ಣ ಸ್ವಲ್ಪ ಬದಲಾಗೋವರೆಗೆ ಹುರಿಯಿರಿ. ಇದನ್ನೂ ಪಕ್ಕದಲ್ಲಿದ್ದ ದೊಡ್ಡ ಪಾತ್ರೆಗೆ ಹಾಕಿ. ನಂತರ ಮತ್ತೆ ಒಂದು ಚಮಚ ತುಪ್ಪ ಹಾಕಿ ತುಂಡು ಮಾಡಿದ ವಾಲ್ನಟ್ಟನ್ನು ಹುರಿಯಿರಿ. ವಾಲ್ನಟ್ಟು ಹುರಿಯುವಾಗ ಇನ್ನೊಂದಿಷ್ಟು ಸಣ್ಣ ಚೂರುಗಳಾಗುತ್ತೆ. ಹೀಗಾದರೆ ತೊಂದರೆಯೇನಿಲ್ಲ. ಹುರಿದಾದ ನಂತರ ಅದನ್ನೂ ಪಕ್ಕದಲ್ಲಿದ್ದ ದೊಡ್ಡ ಪಾತ್ರೆಗೆ ಹಾಕಿ. ಗೋಡಂಬಿ ಹಾಕೋದಿದ್ದರೆ ಅದನ್ನೂ ಇದೇ ರೀತಿ ಹುರಿಯಿರಿ. 



ಒಣ ದ್ರಾಕ್ಷಿಯ ಕತೆ:

ನಂತರ ಒಂದು ಚಮಚ ತುಪ್ಪ ಹಾಕಿ ದ್ರಾಕ್ಶಿಯನ್ನು ಹುರಿಯಿರಿ. ದ್ರಾಕ್ಷಿ ಕೆಲ ಸಮಯದ ನಂತರ ತುಪ್ಪ ಕುಡಿದು ದುಂಡಗೆ ಉಬ್ಬತೊಡಗೊತ್ತೆ. ಎಲ್ಲಾ ದ್ರಾಕ್ಷಿಗಳು ಹಾಗೇ ಉಬ್ಬುವಂತೆ ಚೆನ್ನಾಗಿ ತೊಳಸೋ ಕೈಯಲ್ಲಿ ತೊಳಸಿ ಸ್ವಲ್ಪ ಹಾಗೇ ಹುರಿಯಿರಿ. ದ್ರಾಕ್ಷಿ ಸ್ವಲ್ಪ ಕೆಂಬಣ್ಣಕ್ಕೆ ತಿರುಗಿದ ನಂತರ ಅದನ್ನು ಹುರಿದ ಡ್ರೈ ಫ್ರ್ರೂಟ್ಸ್ ಹಾಕಿದ್ದ  ಪಕ್ಕದ ದೊಡ್ಡ ಪಾತ್ರೆಗೆ ಹಾಕಿ. ಬಾಣಲಿಯಿಂದ ತೆಗೆದ ತಕ್ಷಣವೇ ದ್ರಾಕ್ಶಿಗಳು ಗಾಳಿ ತೆಗೆದ ಬಲೂನಿನಂತೆ ಮತ್ತೆ ಚಟ್ಟುತ್ತೆ. ಹೀಗಾಗೋದೂ ಸಾಮಾನ್ಯವೇ. ತಲೆಕೆಡಿಸಿಕೊಳ್ಳಬೇಡಿ


ಅಳಿವೆ ಬೀಜ:

ಧಾರವಾಡದ ಕಡೆ ಈ ಅಳಿವೆ ಬೀಜವನ್ನು ಅಂಟಿನುಂಡೆಗೆ ಹಾಕುತ್ತಾರೆ. ಮಲೆನಾಡಿನ ಕಡೆ ಸಿಗೋ ರೇಣುಕೆ ಬೀಜ ಎಂಬೋ ಕಪ್ಪು ಬೀಜವನ್ನು ನೀರಲ್ಲಿ ನೆನಸಿದಾಗ ಉಬ್ಬುವಂತೆಯೇ ಉಬ್ಬುತ್ತೆ ಇದು. ಕೆಂಪಗಿರೋ ಈ ಬೀಜ ಬೆನ್ನಿಗೆ ಬಲ ತರುತ್ತಂತೆ. ತಂಪೂ ಕೂಡ. ಅಂಟಿನುಂಡೆ ತಿಂದರೆ ಹೀಟಾಗುತ್ತೆ ಅನ್ನೋರು ಇದನ್ನು ಅಂಟಿನುಂಡೆಯ ತಯಾರಿಯಲ್ಲಿ ಬಳಸಿದರೆ ಅದು ಸಮಧಾತುವಾಗುತ್ತೆ.ಪಾಕ ಬರಿಸಿದ ಬೆಲ್ಲ, ಡ್ರೈ ಫ್ರೂಟ್ಸ್, ಹಿಪ್ಲಿ ಮುಂತಾದ ಸಾಮಗ್ರಿಗಳಿಂದಾಗೋ ಉಷ್ಣವನ್ನು ಇದು ತಡೆಯುತ್ತೆ. ಈ ಅಳವಿ ಬೀಜವನ್ನೂ ಒಂದು ಚಮಚ ತುಪ್ಪದಲ್ಲಿ ಹುರಿದು ಪಕ್ಕದ ಪಾತ್ರೆಗೆ ಹಾಕಿ. 


ಕರ್ಜೂರ: 

ಕರ್ಜೂರ ಸ್ವಲ್ಪ ಜಾಸ್ತಿ ಇರೋದರಿಂದ ಇದನ್ನು ಹುರಿಯೋಕೆ ಎರಡು ಟೇಬಲ್ ಸ್ಪೂನ್ ತುಪ್ಪ ಬೇಕು. ಇದು ಒಂತರ ಪುಡಿ ಪುಡಿಯ ರೀತಿ ಉದುರೋದರಿಂದ ಎಲ್ಲಾ ಡ್ರೈ ಫ್ರೂಟ್ಸುಗಳನ್ನು ಹುರಿದಾದ ಮೇಲೆ ಇದನ್ನು ಹುರಿದು ಪಕ್ಕದ ಪಾತ್ರೆಗೆ ಹಾಕಿ. 


ಅಂಟು: 

ಒಂದು ಚಮಚ ತುಪ್ಪ ಹಾಕಿ ಅದಕ್ಕೆ ಎರಡು ಸ್ಪೂನ್ ಅಂಟನ್ನು ಹಾಕಿ ಹುರಿಯಿರಿ. ಕಾಳು ಕಾಳಾಗಿರೋ ಕೆಂಪು/ಕಂದು ಬಣ್ಣದಲ್ಲಿರೋ ಈ ಅಂಟು ನಂತರ ಸಂಡಿಗೆಯಂತೆ ಬಿಳಿಯಾಗಿ ಅರಳುತ್ತೆ. ಅರಳಿದ ಈ ಅಂಟನ್ನು ತೆಗೆದು ಒಂದು ಮಿಕ್ಸಿ ಜಾರಿಗೆ ಹಾಕಿ ಮತ್ತೊಂದು ಸ್ಪೂನ್ ತುಪ್ಪ ಹಾಕಿ ಉಳಿದೆರಡು ಸ್ಪೂನ್ ಅಂಟನ್ನು ಹಾಕಿ ಅದನ್ನೂ ಹೀಗೇ ಹುರಿಯಿರಿ. ಎಲ್ಲಾ ಅಂಟನ್ನು ಒಟ್ಟಿಗೆ ಹಾಕಿದರೆ ಅಂಟು ಚೆನ್ನಾಗಿ ಅರಳೋದಿಲ್ಲ. 

Antu ಅಂಟು

ಹುರಿದ ಅಂಟು; Friend Gum


ಓಮಿನಕಾಳು:

ಉತ್ತರ ಭಾರತದ ಕಡೆ ಈ ಓಮಿನಕಾಳನ್ನು ಹೆಚ್ಚಿನ ಪ್ರಮಾಣದಲ್ಲಿ  ಅಂಟಿನುಂಡೆಗೆ ಬಳಸುತ್ತಾರೆ. ಅಲ್ಲಿ ಹುರಿದ ಗೋಧಿ ಹಿಟ್ಟು ಮತ್ತು ಚಿರೋಟಿ ರವೆಯನ್ನೂ ಬಳಸುತ್ತಾರೆ. ಬಾಣಂತಿಯ ಹೊಟ್ಟೆಯ ಶುದ್ಧೀಕರಣಕ್ಕೆ ಮತ್ತು ನಂತರದ ಋತುಚಕ್ರಗಳಲ್ಲಿ ಯಾವ ತೊಂದರೆಯೂ ಆಗದಿದರಲಿ ಎಂದು ಇದನ್ನು ಕೊಡುತ್ತಾರಂತೆ. ಆದರೆ ಇದನ್ನು ಹೆಚ್ಚು ತಿಂದರೆ ಮಲಬದ್ಧತೆಯಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿರೋದರಿಂದ ಇದನ್ನು ಕಾಲು ಟೇಬಲ್ ಸ್ಪೂನಿನಷ್ಟೇ ಬಳಸಲಾಗಿದೆ. 


ಉಳಿದ ಪದಾರ್ಧಗಳು: 

ತೆಗೆದುಕೊಂಡಿದ್ದ ಹಿಪ್ಲಿ , ಜಾಯಿಕಾಯಿಯ ಚೂರು, ಮೋದಿಕಡ್ಡಿ, ಹಿಪ್ಲಿ ಮುಡಿ, ವಾಯುವಡಂಗ, ತಳಾಸ್ ಪತ್ರೆಗಳನ್ನು ಒಂದು ಚಮಚ ತುಪ್ಪದಲ್ಲಿ ಹೀಗೇ ಕೆಲ ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಅದನ್ನು ತೆಗೆದು ಅರಳಿದ ಅಂಟು ಇಟ್ಟಿದ್ದ ಮಿಕ್ಸಿ ಜಾರಿಗೆ ಹಾಕಿ. ಜಾಯಿಕಾಯಿಯ ಬಳಕೆಯಿಂದ ತಾಯಿಗೆ ಮತ್ತು ತಾಯಿಯ ಹಾಲು ಕುಡಿಯೋ ಪಾಪುವಿಗೆ ಚೆನ್ನಾಗಿ ನಿದ್ದೆ ಬರುತ್ತೆ ಎಂದು ಅದನ್ನು ಇಲ್ಲಿ ಬಳಸಲಾಗಿದೆ. ಆದರೆ ಇದರ ಹೆಚ್ಚಿನ ಬಳಕೆಯಿಂದ ಅಮಲೇರುವುದರಿಂದ ಸ್ವಲ್ಪವೇ ಹಾಕಬೇಕು.


ಗಸಗಸೆ: 

ಕೊನೆಯಲ್ಲಿ ಗಸಗಸೆಯನ್ನು ತುಪ್ಪ ಹಾಕದೇ ಕೆಲ ನಿಮಿಷ ಹುರಿಯಿರಿ. ಇದರ ಹಸುಕಲು ಅಥವಾ ಹಸಿ ವಾಸನೆ ಹೋಗೋವರೆಗೆ ಹುರಿದರೆ ಸಾಕು. ಗಸಗಸೆಯನ್ನು ಪಕ್ಕದಲ್ಲಿದ್ದ ಪಾತ್ರೆಗೂ ಹಾಕಬಹುದು ಅಥವಾ ಮಿಕ್ಸಿ ಮಾಡಲು ತೆಗೆದಿಟ್ಟಿದ್ದ ಅಂಟು ಮತ್ತುಳಿದ ಪದಾರ್ಥಗಳ ಜಾರಿಗೂ ಹಾಕಬಹುದು. ಮಿಕ್ಸಿಯಲ್ಲಿ ಗಸಗಸೆ ಮತ್ತೆ ತುಂಡಾಗದಿದ್ದರೂ ಈ ಮಿಶ್ರಣದ ಜೊತೆಗೆ ಚೆನ್ನಾಗಿ ಬೆರೆಯುತ್ತೆ. 

 

ಮಿಕ್ಸಿ: 

ಮಿಕ್ಸಿಯಲ್ಲಿ ಹಾಕಿದ ಮಿಶ್ರಣ ಚೆನ್ನಾಗಿ ನುಣ್ಣಗಾಗುವಂತೆ ಮಿಕ್ಸಿ ಮಾಡಬೇಕು. ಹುರಿದ ಅಂಟನ್ನು ಕೈಯಲ್ಲಿ ನುರಿದರೇ ಪುಡಿಯಾಗುತ್ತೆ. ಉಳಿದ ಪದಾರ್ಥಗಳನ್ನೂ ಕುಟ್ಟಾಣಿಯಲ್ಲಿ ಜಜ್ಜಿ ಪುಡಿ ಮಾಡಬಹುದು. ಆದರೆ ಬೇಗ ನುಣುಪಾಗಿ ಪುಡಿ ಆಗಬೇಕೆಂದರೆ ಮಿಕ್ಸಿ ಮಾಡಬಹುದು. ಈ ಪುಡಿಯನ್ನು ಉಳಿದ ಹುರಿದ ಸಾಮಗ್ರಿಗಳನ್ನು ಹಾಕಿದ್ದ ದೊಡ್ಡ ಪಾತ್ರೆಗೆ ಹಾಕಿ. ಮಿಕ್ಸಿಯಲ್ಲಿ ಮಿಕ್ಕಿದ ಪುಡಿಯನ್ನು ಒಂದು ಚಮಚದಲ್ಲಿ ಬಿಡಿಸಿ ಹಾಕಬಹುದು. ಮಿಕ್ಸಿಯಲ್ಲಿ ಉಳಿದ ಪುಡಿಯನ್ನು ತೊಳಸಿ ಉಂಡೆಯ ಸಾಮಗ್ರಿಗೆ ಹಾಕುತ್ತೀನಿ ಎಂದು ನೀರು ಮಾತ್ರ ಹಾಕಲೇಬೇಡಿ.


ಬೆಲ್ಲದ ಪಾಕ: 

ಅಂಟಿನುಂಡೆ ತಯಾರಿಯ ಕೊನೆಯ ಮತ್ತು ಮುಖ್ಯ ಭಾಗ ಬೆಲ್ಲದ ಪಾಕದ ತಯಾರಿ. ಬೆಲ್ಲದ ಉಂಡೆಗಳನ್ನು ಸ್ವಲ್ಪ ಜಜ್ಜಿ ದಪ್ಪ ತಳದ ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ. ಒಂದೆರಡು ಚಮಚ ತುಪ್ಪವನ್ನೂ ಹಾಕಿ ಕಾಯಿಸಿ. ಬೆಲ್ಲದುಂಡೆ ಆ ಶಾಖಕ್ಕೆ ಕರಗೋಕೆ ಶುರುವಾಗುತ್ತೆ. ಜಜ್ಜದಿದ್ದರೆ ಕರಗೋಕೆ ಸ್ವಲ್ಪ ಸಮಯ ಹೆಚ್ಚು ಬೇಕಾಗುತ್ತೆ ಮತ್ತು ಆಗಾಗ ತೊಳಸುತ್ತಾ ಇರಬೇಕು. ಬೇಕಾಗುತ್ತೆ ಅಂತ ದೊಡ್ಡ ಉರಿಯಲ್ಲಿ ಇಡೋದಕ್ಕಿಂದ ಸಣ್ಣ /ಮಧ್ಯಮ ಉರಿಯಲ್ಲಿ ಪಾಕ ಮಾಡೋದೇ ಉತ್ತಮ ಎನ್ನೋದು ನಮ್ಮ ಅನಿಸಿಕೆ. ಕರಗಿದ ಬೆಲ್ಲವನ್ನು ಆಗಾಗ ತೊಳಸುತ್ತಿರಬೇಕು. ಇದು ಸ್ವಲ್ಪ ಹೊತ್ತಲ್ಲೇ ನೊರೆ ಬರೋಕೆ ಶುರುವಾಗುತ್ತೆ. ಪಾತ್ರೆಯಿಂದ ಹೊರಗೆ ಉಕ್ಕುತ್ತೆ ಅನಿಸಿದರೆ ಉರಿಯನ್ನು ಸ್ವಲ್ಪ ಸಣ್ಣ ಮಾಡಿ. ಸುಮಾರು ಅರ್ಧ ಘಂಟೆಗೆ ಬೆಲ್ಲದ ಪಾಕ ರೆಡಿಯಾಗುತ್ತೆ. ಪಾಕ ನೀರಾದ್ರೆ ಉಂಡೆಗಳು ಗಟ್ಟಿಯಾಗೋಲ್ಲ. ಏರುಪಾಕವಾದ್ರೆ( ಪಾಕ ಹೆಚ್ಚಾದ್ರೆ) ಉಂಡೆಗಳು ಕಲ್ಲಾಗುತ್ತೆ. ಹಾಗಾಗಿ ಪಾಕ ಸರಿಯಾಯ್ತಾ ಇಲ್ಲವೋ ಅಂತ ಆಗಾಗ ನೋಡುತ್ತಿರಬೇಕು. 


ಪಾಕ ಸರಿಯಾಯ್ತಾ  ಅಂತ ನೋಡೋದು ಹೇಗೆ? : 

ಸ್ಟೋವ್ ಪಕ್ಕದಲ್ಲೇ ಒಂದು ಸಣ್ಣ ಬೌಲಿನಲ್ಲಿ ನೀರನ್ನು ಇಟ್ಟುಕೊಳ್ಳಿ. ಪಾಕವನ್ನು ಸೌಟಿನಲ್ಲಿ ತೆಗೆದು ಒಂದು ಹನಿಯನ್ನು ಈ ನೀರಿಗೆ ಹಾಕಿ. ನೀರಲ್ಲಿ ಆ ಪಾಕ ಕರಗಿಹೋದರೆ ಅದು ಇನ್ನೂ ಆಗಿಲ್ಲ ಅಂತ. ನಿಧಾನವಾಗಿ ಅದು ನೀರಲ್ಲಿ ಕರಗೋದು ನಿಲ್ಲಿಸುತ್ತೆ. ಆಗ ಆ ನೀರಿನಲ್ಲಿನ ಹನಿಯನ್ನು ಕೈಯಲ್ಲಿ ತೆಗೆದುಕೊಂಡು ಎರಡೂ ಬೆರಳುಗಳಲ್ಲಿ ಹಿಡಿದು ಸ್ವಲ್ಪ ಎಳೆಯಿರಿ. ಅದು ಬೆರಳುಗಳ ನಡುವೆ ಎಳೆ ಎಳೆಯಾಗಿ ಬರ್ತಿದೆ ಅಂದರೆ ಪಾಕ ಸರಿಯಾಗಿದೆ ಎಂದರ್ಥ. ತಕ್ಷಣ ಸ್ಟೌ ಆಫ್ ಮಾಡಿ ಆ ಪಾಕವನ್ನು ಪಕ್ಕದಲ್ಲಿದ್ದ ಪಾತ್ರೆಗೆ ಸುರಿಯಿರಿ. ನೀವು ಅಡಿಗೆ ಪ್ರವೀಣರಾಗಿದ್ದರೆ ತೊಳಸೋ ಸೌಟಿನಲ್ಲಿ ಪಾಕವನ್ನು ತೊಳೆಸೋ ಪಾತ್ರೆಗೆ ಹಾಕುವಾಗಲೇ ಅದು ಎಳೆ ಎಳೆಯಾಗಿರೋದನ್ನು ನೋಡಿ ಪಾಕ ಆಗಿದೆಯಾ ಇಲ್ಲವಾ ಎಂದು ಗೊತ್ತಾಗುತ್ತೆ. ಹೊಸಬರಿಗೆ ಈ ನೀರಿನ ಬೌಲಿನ ವಿಧಾನ ಸಹಕಾರಿ. 

ಎಳೆ ಪಾಕ ಬಂದಿದೆಯಾ ಎಂದು ಪರೀಕ್ಷಿಸುವುದು


ಕೊಟ್ಟಕೊನೆಗೆ: 

ದೊಡ್ಡ ಪಾತ್ರೆಗೆ ಬೆಲ್ಲದ ಪಾಕವನ್ನು ಹಾಕಿದ ನಂತರ ಅದನ್ನು ಬೇಗ ಬೇಗ ತೊಳೆಸೋ ಹಿಡಿಯಲ್ಲಿ ಚೆನ್ನಾಗಿ  ತೊಳೆಸಬೇಕು. ಕಾದ ಪಾಕ ಬೇಗ ಗಟ್ಟಿಯಾಗೋದರಿಂದ ಸ್ವಲ್ಪ ತೊಳೆಸಿದರೆ ಸಾಕು. ಆ ಮಿಶ್ರಣ ಕೆಲ ಕ್ಷಣಗಳಲ್ಲೇ ಸ್ವಲ್ಪ ಗಟ್ಟಿಯಾಗತ್ತೆ. ತುಂಬಾ ತೊಳೆಸಿದರೆ ಉಂಡೆ ಉದುರುದುರಾಗಿ ಉಂಡೆ ಕಟ್ಟೋಕೆ ಬರೋಲ್ಲ. ಹಾಗಾಗಿ ಸ್ವಲ್ಪ ತೊಳೆಸಿದರೆ ಸಾಕು. ಮಿಶ್ರಣ ಬಿಸಿಯಾಗಿದ್ದಾಗಲೇ ಉಂಡೆ ಕಟ್ಟೋಕೆ ಪ್ರಾರಂಭಿಸಬೇಕು. ತಣಿದ ಮೇಲೆ ಉಂಡೆ ಕಟ್ಟೋದು ಕನಸಿನ ಮಾತು !

ಒಂದೆರಡು ಸ್ಪೂನ್ ತುಪ್ಪವನ್ನು ಹಾಕಿಕೊಂಡು ಅದನ್ನು ಮುಟ್ಟುತ್ತಾ ಉಂಡೆ ಕಟ್ಟಿದರೆ ಅಷ್ಟು ಕೈ ಸುಡೋಲ್ಲ. ಒಂದೆರಡು ಉಂಡೆ ಕಟ್ಟೋ ತನಕ ಕೈ ಸುಟ್ಟಂತನಿಸುತ್ತೆ. ನಂತರ ಏನೂ ಅನಿಸೋಲ್ಲ. ಎರಡು ಜನರಿದ್ದರೆ ಸ್ವಲ್ಪ ಬೇಗ ಉಂಡೆ ಕಟ್ಟಬಹುದು. ಮಧ್ಯ ಮಧ್ಯ ತೊಳೆಸೋ ಹುಡಿಯಿಂದ ಪಾತ್ರೆಯ ಕೆಳಗೆ ಹಿಡಿದಿರೋ ಮಿಶ್ರಣವನ್ನು ತೆಗೆಯುತ್ತಾ ಉಂಡೆ ಕಟ್ಟಬೇಕು. ಇದರಿಂದ ಪಾತ್ರೆಯ ಕೆಳಗೆ ಉಂಡೆ ಕಟ್ಟೋಕೇ ಬರದಂತೆ ಮಿಶ್ರಣ ಉಳಿಯೋದನ್ನು ತಪ್ಪಿಸಬಹುದು. ಮೊದಲ ಅಳಿವೆ ಬೀಜ, ಹಿಪ್ಲಿ ಮುಡಿ, ಜಾಯಿಕಾಯಿ ಹಾಕದೇ ಸ್ವಲ್ಪವೇ ಗಸಗಸೆ ಹಾಕಿ  ಮಾಡಿದಾಗ ನಲವತ್ತೆರಡು ಉಂಡೆಗಳಾಗಿತ್ತು. ಎರಡನೆಯ ಸಲ ಮಾಡಿದಾಗ  ಸ್ವಲ್ಪ ದೊಡ್ಡ ಗಾತ್ರದ ಉಂಡೆ ಕಟ್ಟಿದ್ದರಿಂದ ಇವಿಷ್ಟೂ ಹಾಕಿದರೂ ಮೂವತ್ತೇಳು ಉಂಡೆಗಳಾಯ್ತು. ಎರಡೂ ಸಲದ್ದೂ ರುಚಿಕರವಾಗಿದ್ದರೂ ಹಾಕಿದ ವಸ್ತುಗಳು ಕೊಂಚ ಬೇರೆಯಾಗಿದ್ದರಿಂದ ಕೊಂಚ ಬೇರೆಯ ಬಣ್ಣ ಪಡೆದವು ಅಷ್ಟೆ. ಉಂಡೆಯಾದ ಮೇಲೆ ದೇವರ ನೈವೀದ್ಯಕ್ಕಿಡೋರು ಇಟ್ಟು ಮುಂದಿನ ನೈವೀದ್ಯಕ್ಕೆ ರೆಡಿಯಾಗಬಹುದು 

Antinunde


ಅಡಿಗೆ ಮನೆ ಶುಚಿತ್ವ: 

ಅಂಟಿನುಂಡೆಯ ತಯಾರಿಯ ಹೊತ್ತಿಗೆ ಸ್ಟೌವಿನ ಮೇಲಷ್ಟೇ ಅಲ್ಲದೇ ಅದರ ಪಕ್ಕ, ಕೆಳಗೂ ಒಂದಿಷ್ಟು ಸಿಡಿದಿರುತ್ತೆ. ಹಾಕಾಗಿ ಅದನ್ನು ಸೋಪಾಯಿಲ್ ಅಥವಾ ಹ್ಯಾಂಡ್ ವಾಷ್ ಹಾಕಿ ಒರಸಿ ನಂತರ ನೀರಲ್ಲಿ ತೊಳೆಯಬಹುದು/ಒರೆಸಬಹುದು. ಸಾಮಗ್ರಿಗಳನ್ನು ತುಂಡರಿಸಿ ಇಟ್ಟುಕೊಂಡಿದ್ದ ಪಾತ್ರೆಗಳನ್ನು ತೊಳಿಯೋದು ಸುಲಭವಾದರೂ  ಅಂಡಿನುಂಡೆ ಮಾಡಿದ ಪಾತ್ರೆ ಮತ್ತು ಹುರಿದ ಪಾತ್ರೆಗಳು ಜಿಡ್ಡು ಜಿಡ್ಡಾಗಿ ತೊಳೆಯೋಕೆ ಸ್ವಲ್ಪ ಕಷ್ಟವಾಗಬಹುದು. ಇವನ್ನು ಸ್ವಲ್ಪ ಹೊತ್ತು ನೆನೆಸಿಟ್ಟು ಸುಧಾರಿಸಿಕೊಳ್ಳಿ. ಅಂಟಿನುಂಡೆ ಮಾಡೋಕೇ ಸುಮಾರು ಮೂರೂವರೆ ಘಂಟೆ ಆಗೋದರಿಂದ ಸ್ವಲ್ಪ ಸುಧಾರಿಸಿಕೊಂಡು, ಮಧ್ಯಾಹ್ನದ/ರಾತ್ರಿಯ ಊಟದ ಸಮಯವಾಗಿದ್ದರೆ ಅದನ್ನು ಮುಗಿಸಿ ಈ ಪಾತ್ರೆ ತೊಳೆಯೋಕೆ ಮುಂದಾಗಿ. 


ಮೇಲಿನ ವಿಧಾನದಲ್ಲಿ ಅಂಟಿನುಂಡೆ ತಯಾರಿಸೋಕೆ ನೀವು ಪ್ರಯತ್ನಿಸಿದ್ರೆ ಅಥವಾ ಈ ಲೇಖನ ನಿಮಗೆ ಉಪಯೋಗವಾದ್ರೆ ನಮಗೆ ಅದೇ ಖುಷಿ. ಮುಂದಿನ ಪ್ರಯತ್ನದೊಂದಿಗೆ ಮತ್ತೆ ಭೇಟಿಯಾಗೋಣ

Friday, July 16, 2021

Stock Basics-1 How to invest in stock, Mutual funds safely

Many of you might be new into investing and thinking of whether to invest in Indian Stock Markets or Not.  If you are looking for 100% safe investment , then neither the stock market nor the Mutual Funds are good options for you. Please make use to PPF accounts which give 7.1% interest and lock-in period of 15 years. You can also make use of Voluntary PF(VPF) contribution to the PF fund managed by your company which would yield you 8.5% interest. But you need to wait till your retirement  or some emergency situations to withdraw money from there. If you are not willing to wait that long and willing to take certain amount of calculated risks, then stocks and Mutual Funds are an option for you. 
Although i am not an expert in this, let me try to answer few queries which were being asked by many of my friends. 

  1. How many stocks to hold ?
  2. How many sectors , which ones? 
  3. What should be the distribution ? 
  4. How to minimize risk ? 
  5. Are Mutual funds good to invest in ? 
  6. Good time to book profit ? 
 1. Depends on your budget and willingness to wait. Eg: i took wipro for around 200 last year after the share discussions in the class. Now it is 575. Irony is i took only 1 share for testing my calculations 😉 

 2. Better to diversify into more sectors like heathcare, banking, it, tyres etc 


5. Yes, there are many types of mutual funds 
 A. Debt funds which are like funds which give loans to others n you invest on it. They give more or less similar rate if return each year 
B. Equity based funds which invest in stock market. There is a certain subset known as ELSS which give tax benefits under 80c as well along with dividend, share price appreciation benefits 
C. Treasury advantage funds which buy bonds from govt. these give less returns compared to above two. But are safest 

3. Distribution should be with equities, mutual funds for a new-bee. Can learn about other advanced options like IPO eventually. 

 4. Start slowly with small investments in fewer companies which are in NSE10 or BSE10. Compare various MF schemes in moneycontrol n other websites for the crisol score and start with SIP instead of one time investment 6. Good time to book profit: For MFs it is around 3 years . For shares , depends on the amount you have invested in each share . Eg for a share worth 1500 8% profit might b good profit to book. For penny shares < 20 Rs you might need to wait more. You need to consider the amount of brokerage charged at the buying, selling by the brokers like hdfc securities and the depository charges issued by bank like hdfcbank when u sell the shares

P.S : I am not a stock broker and this blogpost is for educative purposes only. Please perform further analysis from your end before purchasing any stock, MF schemes. 

Tuesday, May 4, 2021

ಸೊಳ್ಳೆ ಪುರಾಣ

ಬಾಲ್ಯದ ಕೆಲವು ದಿನಗಳಲ್ಲಿ ಸಂಜೆಯಾಯ್ತು ಅಂದ್ರೆ ಗುಯ್  ಅಂತ ಮನೆಗೊಂದಿಷ್ಟು ನೆಂಟರ ಎಂಟ್ರಿ. ಬಂದಿದ್ದು ನೆಂಟರಾದ್ರೂ ಕಜ್ಜಾಯ ಸಿಗ್ತಿದ್ದಿದ್ದು ನಮಗೆ ! ಕಿಟಕಿ ಹಾಕು ಅಂದ್ರು ಹಾಕಿಲ್ಲ, ಈಗ ನೋಡು ಸೊಳ್ಳೆ ಬಂತು ಅಂತ ಶುರುವಾಗೋ ಬೈಗುಳಗಳಿಗೆ ಆ ಸೊಳ್ಳೆಗಳನ್ನು ಹುಡುಕಿ ಕೊಲ್ಲೋವರೆಗೆ ಮಂಗಳವಿಲ್ಲ. ಸೊಳ್ಳೆಗಳು ಅಮ್ಮನ ಬೈಗುಳಕ್ಕೆ ಹೆದರಿ ನಮ್ಮ ಕೈಗೆ ಸಿಗ್ತಿದ್ವಾ ಅಥವಾ ನಾವೇ ಸೊಳ್ಳೆಗಳಿಗಿಂತ ಪ್ರಚಂಡ ಹಾರಾಟ ನಡಿಸ್ತಿದ್ವಾ ಗೊತ್ತಿಲ್ಲ. ಕೆಲ ನಿಮಿಷಗಳಲ್ಲೇ ಸೊಳ್ಳೆಗಳ ಗುಯ್ಗಾಟಕ್ಕೂ ಮನೆಯ ಬೈದಾಟಕ್ಕೂ ಕೊನೆ ಕಾಣುತ್ತಿತ್ತು. ನಮ್ಮ ಕೊಟ್ಟಿಗೆಗಳಲ್ಲಿ ನೊರಜು ಮತ್ತೆ ಸೊಳ್ಳೆ ಕಾಟ ಜಾಸ್ತಿ ಆಯ್ತು ಅಂದ್ರೆ ಸಂಜೆ ಹೊತ್ತಿಗೆ ಲೋಬಾನ ಅಥವಾ ಹೊಗೆ ಹಾಕ್ತಿದ್ರು. ಸೊಳ್ಳೆ ಕಾಯಿಲ್ ಹಾಕಿದ್ರೆ ಎತ್ತಿಗೆ ಕಾಲು ನೋವು ಅಂತ ಹೊಗೆಯಿಂದ್ಲೇ ಸೊಳ್ಳೆಗಳಿಗೆ ಹೊಗೆ ಹಾಕ್ತಿದ್ರು ! 


ಈಗ ಬಿಡಿ, ಕತೆನೇ ಉಲ್ಟಾ ಹೊಡೆದಿದೆ. ಈಗಿನ ಸೊಳ್ಳೆಗಳೇ ನಮ್ಮನೆಯಲ್ಲಿ ನಮಗಿಂತಾ ಜಾಸ್ತಿ ಇರ್ತವೆ ! ಒಂದು ತಗೊಂಡ್ರೆ ಒಂದು ಫ್ರೀ ಅನ್ನೋ ಜಾಹೀರಾತುಗಳಂತೆ ಒಂದು ಬಂದ ಕೂಡ್ಲೆ ಸುಮಾರಷ್ಟು ಎಂಟ್ರಿ ಕೊಡ್ತವೆ. ಮುಂಚೆಯೆಲ್ಲಾ ಕೈಯಲ್ಲೇ ಸಿಗ್ತಿದ್ದವು ಈಗ ಸೊಳ್ಳೆ ಬ್ಯಾಟ ಕಂಡರೆ  ಮನೆಯ ಎಲ್ಲಾ ಮೂಲೆ ತೋರುಸ್ತವೆ ! ಸೊಳ್ಳೆ ಬ್ಯಾಟ ಹಿಡಿದು ಓಡಿದಷ್ಟು ಶಟಲ್ ಬ್ಯಾಟ್ ಹಿಡಿದಾದ್ರೂ ಓಡಿದ್ರೆ ಚಾಂಪಿಯನ್ ಆಗ್ತಿದ್ನೇನೋ ಅನಿಸಿಬಿಡುತ್ತೆ . ಆಫೀಸಿನ ಕೆಲಸ ಮಾಡುವಾಗ ಲ್ಯಾಪ್ಟಾಪು ಪರದೆಯ ಮೇಲೇ ಬಂದು ಕೂರುತ್ವೆ.ಕಾಲಲ್ಲಿರುವಾಗ ಇಯರ್ ಫೋನ್ ಪಕ್ಕನೇ ಬಂದು ಕಚ್ಚುತ್ವೆ. ಕೆಳಗಿಟ್ಟ ಪಾದವನ್ನು ಹುಡುಕುತ್ವೆ. ಆಫೀಸು ಲ್ಯಾಪ್ಟಾಪು, ಇಯರ್ ಫೋನು ಮತ್ತು ಮೀಟಿಂಗ್. ಹೆಂಗಿದ್ರೂ ಹೊಡೆಯಂಗಿಲ್ಲ, ಅಟ್ಟಾಡಿಸಿಕೊಂಡು ಬರಂಗಿಲ್ಲ ಅಂತ ಗೊತ್ತಾಗೇ ಕಿರಿಕಿರಿ ಮಾಡುವಷ್ಟು ಚಾಲೂ ಇವು . ಕೆಲಸ ಮಾಡೋವಾಗ ಬಿಡಿ, ಟಾಯ್ಲೇಟಿಗೆ ಹೋದ್ರೂ ಬಿಡಲ್ಲ ಅಂತಾವೆ.  ಮನೆ ನಿಮ್ಮದು , ಪಾರ್ಟಿ ನಮ್ಮದು ಅಂತಾವಲ್ಲ ಇವು , ಎಷ್ಟು ಧೈರ್ಯ ಇರಬಹುದು ? ಮನೆಯ ಕಿಟಕಿಗಳಿಗೆಲ್ಲಾ ಮೆಷ್ ಹಾಕ್ಸಿ, ಸೊಳ್ಳೆ ಪರದೆಯಲ್ಲೇ ಮಲಗಿ ಅಲ್ಲೇ ಎದ್ದು, ಅಲ್ಲೇ ವರ್ಕ್ ಫ್ರಂ ಹೋಂ ಮಾಡಿಬಿಡಾನಾ ಅಂತ ಅಂದ್ಕೊಂಡ್ರು ಆ ಸೊಳ್ಳೆ ಪರದೆಯ ಹೊರಗಿನಿಂದನೇ ಕಚ್ಚೋಕೆಂತ ಹೊಂಚು ಹಾಕಿ ಕಾಯ್ತಾ ಕೂರೋ, ನಿದ್ದೆಗಣ್ಣಲ್ಲಿ ಸೊಳ್ಳೆ ಪರದೆ ಅಂಚಿಗೆ ಬರೋ ಕೈಯೋ ಕಾಲಿನ ಸ್ಪರ್ಷ ಸುಖಕ್ಕೆ ರಾತ್ರಿಯಿಡೀ ನಿದ್ದೆಗೆಡ್ತಾವಲ್ಲ ಇವು, ಇವುಗಳ ಚಾಲಾಕಿತನಕ್ಕೆ ಭೇಷ್ ಅನ್ಸಿಬಿಡುತ್ತೆ.   

ಈ ಕೊರೋನಾ ಅನ್ನುವಂತದ್ದು ಇದೆಯಲ್ಲಾ, ಅದು ಈ ಸೊಳ್ಳೆಗಳಿಂದನೇ ಹರಡೋದು, ಅದಕ್ಕೆ ಭಾರತದ ಎಲ್ಲರೂ ದಿನಕ್ಕೆ ಹತ್ತು ಸೊಳ್ಳೆಗಳನ್ನು ಹಿಡಿದು ಕೊಂದ್ರೆ ಒಂದು ತಿಂಗಳಲ್ಲಿ ಭಾರತದಿಂದ ಕೊರೋನಾ ನಿರ್ಮೂಲನೆಯಾಗುತ್ತೆ ಅಂತ ಯಾವ ಪುಣ್ಯಾತ್ಮನೂ ವಾಟ್ಸಾಪ್ ಸಂದೇಶ ಮಾಡಲಿಲ್ಲ. ಅದನ್ನು ಯಾರೂ ಹಂಚಲಿಲ್ಲವಾದ್ದರಿಂದ ಸೊಳ್ಳೆಗಳ ಸಂಖ್ಯೆ ಕೊರೋನಾ ಮುಂಚೆ ಹೇಗಿತ್ತೋ ಈಗಲೂ ಹಾಗೇ ಇದೆ ಅನಿಸುತ್ತೆ . ಸೊಳ್ಳೆಗಳ ಕೊಲ್ಲೋಕೆ ಅಂತಲೇ ತರತರದ ಪರಿಮಳದ ಲಿಕ್ವಿಡುಗಳು ಬಂದ್ರೂ ಅವು ಸೊಳ್ಳೆಗಳನ್ನು ನಿಜವಾಗ್ಲೂ ಕೊಲ್ಲುತ್ತೋ ಅಥವಾ ಸ್ವಲ್ಪ ಹೊತ್ತಿನ ಮಟ್ಟಿಗೆ ಪ್ರಜ್ಞೆ ತಪ್ಪಿಸುತ್ತಾ ಅನ್ನೋ ಸಂದೇಹ ನನ್ನಂತೆ ನಿಮಗೂ ಕಾಡ್ತಿರಬಹುದು. ಟೀವಿಯಲ್ಲಿ ಹಾರಾರಿ ಸೊಳ್ಳೆ ಹಿಡಿಯೋ ಕಾಯಿಲ್ಲುಗಳ ಜಾಹೀರಾತು ನೋಡಿ ಮರುಳಾದ ನಾನೂ ಒಂದು ಸೊಳ್ಳೆ ಲಿಕ್ವಿಡ್ ತಂದಿದ್ದೆ.  ಸೊಳ್ಳೆ ಕಾಯಿಲ್ ಹಾಕಿ , ಅದ್ರಲ್ಲಿ ನಾರ್ಮಲ್ ಮೋಡು, ಅಡ್ವಾನ್ಸು ಮೋಡು ಅಂತ ತಿರುಗ್ಸಿದ್ದು, ಲಿಕ್ವಿಡನ್ನ ವಾರಗಳಲ್ಲೇ ಖಾಲಿ ಮಾಡಿದ್ದೊಂದೇ ಬಂತು. ರಾತ್ರೆ ಕೆಳಗೆ ಬಿದ್ದ ಸೊಳ್ಳೆಗಳು ಬೆಳಗಾಗೋ ವರೆಗೆ ಕೆಳಗಿರ್ತಿರ್ಲಿಲ್ಲ. ಮಾರನೇ ದಿನ ಬಂದು ಕಚ್ಚೋದು ತಪ್ತಿರ್ಲಿಲ್ಲ !

ದೇಹಕ್ಕೆ ವ್ಯಾಯಾಮನೂ ಆಯ್ತು, ಸೊಳ್ಳೆ ಕಾಯಿಲ್, ಲಿಕ್ವಿಡುಗಳಲ್ಲಿನ ರಾಸಾಯನಿಕಗಳನ್ನು ಕುಡಿಯದಂತೆನೂ ಆಯ್ತು ಅಂತ ಸೊಳ್ಳೆ ಬ್ಯಾಟಿಗೆ ಮೊರೆ ಹೋಗಾಗಿದೆ. ಹಾಗಾಗಿ ದಿನ ಬೆಳಗಾದ ತಕ್ಷಣ ಯಾವ ಕರ್ಟನ್ನಿನ ಹಿಂದೆಷ್ಟಿದೆ, ದೇವರ ಮನೆಯ ಮೂಲೆಯಲ್ಲೆಷ್ಟಿದೆ, ಮಂಚದ ಕೆಳಗೆಷ್ಟಿದೆ ಅಂತ ಹುಡುಕುಡುಕಿ ಕೊಲ್ಲೋ ಕೆಲಸ ದಿನವೂ. ಸಿಕ್ಕಿದಲ್ಲಿ ರಕ್ತ ಹೀರೋ ಈ ಸೊಳ್ಳೆಗಳನ್ನು ಕೊಲ್ಲೋದು ಒಂದು ಖುಷಿ ಅಂತೇನಾದ್ರೂ ಅಪ್ಪಿ ತಪ್ಪಿಯೂ ಹೇಳಂಗಿಲ್ಲ. ಈ ಸೊಳ್ಳೆ ದಯಾ ಸಂಘದವರು ಬಂದು ಅದಕ್ಕೊಂದು ಕೇಸ್ ಜಡಿಯಬಹುದು. ಆಮೇಲೆ ಅದರ ವಿರುದ್ದ ಹೋರಾಡುತ್ತಾ ಎಲ್ಲೆಲ್ಲೋ ಸೊಳ್ಳೆ ಕಚ್ಚಿಸಿಕೊಳ್ಳುತ್ತಾ ಕೂರಬೇಕಾಗಬಹುದು ! 

ಈ ಮನುಷ್ಯರ ರಕ್ತ ಕುಡಿಕುಡಿದು ಈ ಸೊಳ್ಳೆಗಳು ಮನುಷ್ಯರಂತೆಯೇ ಚುರುಕಾಗಿ ಬಿಟ್ಟಿದಾವಾ ಅನ್ನೋ ಮಾತು ನನ್ನ ಅರ್ಧಾಂಗಿದು. ಅರ್ಧಾಂಗಿ ಅಂದ ಮೇಲೆ ಆ ಮಾತು ತಳ್ಳಿ ಹಾಕುಕ್ಕಾಗುತ್ಯೆ ? ನಾ ಸೊಳ್ಳೆ ಬ್ಯಾಟು ಹಿಡಿದು ಹೋದ್ರೆ ಅಜ್ಜಿ ಬ್ಯಾಗು, ಅತ್ತೆ ಕೋಟಲ್ಲೆಲ್ಲಾ ಅವಿತು ಕಣ್ಣಾ ಮುಚ್ಚಾಲೆಯಾಡೋ ಸೊಳ್ಳೆಗಳು ಮನದಾಕೆ ಬಂದಾಗ ಅದೇಗೆ ಆಚೆ ಬರುತ್ತೆ ಅನ್ನೋದೊಂದು ವಿಸ್ಮಯ. ಅವಳು ಸೊಳ್ಳೆ ಹೊಡಿತಿದಾಳೋ ಸರ ಪಟಾಕಿ ಹಚ್ತಿದಾಳೋ ಅನ್ನುವಷ್ಟು ಶಬ್ದ. ಸೊಳ್ಳೆಗಳಿಗೂ ಗೊತ್ತಾಗಿರ್ಬೇಕು, ಇವರೇ ಹೋಂ ಮಿನಿಸ್ಟರ್ ಅಂತ !   

ಇನ್ನೇನು ಮಳೆಗಾಲ ಬರ್ದಿದ್ರೂ ಮಳೆ ಬರೋಕೆ ಶುರುವಾಗಿದೆ. ನೀವು ಖಾಲಿ ಸೈಟಲ್ಲಿ ಬಿಸಾಕಿರೋ ತೆಂಗಿನ ಚಿಪ್ಪು, ಟೈರು, ಬಾಟಲ್ಲಿಗಳಲ್ಲಿ ನೀರು ನಿಂತು ಸೊಳ್ಳೆಗಳಿಗೆ ಮನೆ ಕಟ್ಟೋ ಮುಹೂರ್ತ ಸಿಕ್ಕಾಗಿದೆ. ನಮ್ಮನೆಗೆಂತೂ ಮೆಷ್ಷಿದೆ, ಗಾಳಿ ಈಕಡೆ ಬೀಸಲ್ಲ. ಸೊಳ್ಳೆ ಆ ಕಡೆ ಹೋಗಿ ಆಚೆ ಮನೆಯವ್ರಿಗೆ ಕಚ್ಲಿ ಅಂತ ಕೂರಂಗಿಲ್ಲ. ಮನೆ ಕಟ್ಟೋಕೆ ನೆರವಾದ ನಿಮ್ಮ ಉಪಕಾರ ಸ್ಮರಣೆ ಆ ಸೊಳ್ಳೆಗಳಿಗಿರೋಲ್ವಾ ? ಖಂಡಿತಾ ನಿಮ್ಮನೆಗೂ ಅವು ಬರ್ತವೆ. ಹೇಗಿದ್ರೂ ಇವು ಫೋನ್ಮಾಡಿ, ಬೆಲ್ಮಾಡಿ ಬರೋ ನೆಂಟ್ರಲ್ಲ. ಬಂದ್ಮೇಲೆ ನಿಮ್ಮ ರಕ್ತ ಹೀರದೆ ಸುಮ್ಮನೂ ಕೂರಲ್ಲ. ಹಾಗಾಗಿ ಮನೆ ಸುತ್ತ ಆದಷ್ಟು ಚೊಕ್ಕವಿಡಿ, ಚೊಕ್ಕವಿಡುವಷ್ಟು ನೆರೆಯವರನ್ನೂ ಪ್ರೋತ್ಸಾಹಿಸಿ ಅನ್ನುತ್ತಾ ಸದ್ಯಕ್ಕೊಂದು ವಿರಾಮ. ಇದನ್ನು ಬರೆಯೋಕೂ ಬಿಡದೇ ಒಂದೇ ಸಮ ಕಚ್ಚೋಕೆ ಬರ್ತಿರೋ ಸೊಳ್ಳೆಗಳನ್ನು ಸ್ವಲ್ಪ ವಿಚಾರಿಸ್ಕೊಂಡು ಬರ್ತೀನಿ