Wednesday, October 5, 2016

ಬೇಲಂ ಬಿಲ ಪ್ರವಾಸ

ಗಂಡಿಕೋಟ, ಬೇಲಂ, ಅಹೋಬಲ ಮೂರನ್ನೂ ನೋಡೋ ಪ್ಲಾನಿದ್ದೋರಿಗೆ:
Infront of Gandhikota Ticket Counter
 ಜಮ್ಮಲಮಡುಗುವಿನಿಂದ ಕೋಲಿಮಿಗುಂಡ್ಲಕ್ಕೆ ಹೋಗಿ ಬೇಲಂಗೆ ಹೋಗಬೇಕು. ತಡಪತ್ರಿಯಿಂದ ಜಮ್ಮಲಮಡುಗುವಿಗೆ ಬರೋ ಬಸ್ಸುಗಳೆಲ್ಲಾ ಕೋಲಿಮಿಗುಂಡ್ಲದಲ್ಲಿ ಹತ್ತು ನಿಮಿಷ ಬ್ರೇಕ್ ತಗೊಂಡೇ ಬರೋದು. ಬೆಳಗ್ಗೆ ತಡಪತ್ರಿಯಿಂದ ಬರುವಾಗ ಕೋಲಿಮಿಗುಂಡ್ಲದಲ್ಲಿ ಎಂಟೂವರೆ ಹೊತ್ತಿಗೆ ಬಸ್ಸು ನಿಲ್ಲಿಸಿದ್ದರೂ ಅಲ್ಲಿಂದ ಬೇಲಂಗೆ ಹೋಗದೇ ಜಮ್ಮಲಮಡುಗುವಿಗೆ ಬಂದಿದ್ದೆವು. ಕೋಲಿಮಿಗುಂಡ್ಲದಿಂದ ಐದು ಕಿ.ಮೀ ದೂರವಷ್ಟೇ ಇರುವ ಬೇಲಂನ ಗುಹೆಗಳು ಸಾರ್ವಜನಿಕರ ವೀಕ್ಷಣೆಗೆ ತೆರೆಯೋದು ಬೆಳಗ್ಗೆ ೧೦ಕ್ಕೆ. ಆದ್ದರಿಂದ ಅಲ್ಲಿ ಕೂತು ಹೊತ್ತು ಕಳೆಯೋ ಬದಲು ಗಂಡಿಕೋಟ ನೋಡಿಕೊಂಡು ವಾಪಾಸ್ಸು ಬರೋ ಪ್ಲಾನಾಗಿತ್ತು ನಮ್ಮದು. ಗಂಡಿಕೋಟದಿಂದ ಅಹೋಬಲಕ್ಕೆ ಹೋಗೋ ನೇರ ಬಸ್ಸುಗಳಿಲ್ಲದಿದ್ದರಿಂದ ನಂದ್ಯಾಲ ಮೇಲೆ ಹೋಗೋದಾದ್ರೆ ಕೋಲಿಮಿಗುಂಡ್ಲಕ್ಕೆ ಬರಲೇಬೇಕಿತ್ತು. ಹಾಗಾಗಿ ನಾವು ಕೋಲಿಮಿಗುಂಡ್ಲದಿಂದ ಜಮ್ಮಲಮಡುಗು, ಜಮ್ಮಲಮಡುಗುವಿನಿಂದ ಕೋಲಿಮಿಗುಂಡ್ಲ ಅಂತ ಪ್ರಯಾಣದಲ್ಲೇ ಸುಮಾರು ೨.೫ ಘಂಟೆ ಕಳೆದದ್ದಾಯ್ತು. ಸ್ವಂತ ವಾಹನದಲ್ಲಾದರೆ ಮೊದಲು ಬೇಲಂಗೆ ಹೋಗಿ, ನಂತರ ಗಂಡಿಕೋಟ ನೋಡ್ಕೊಂಡು ನಂತರ ರಾತ್ರೆ ಉಳಿಯೋಕೆ ಅಹೋಬಲಕ್ಕೆ ಹೋಗಬಹುದು. ಅಹೋಬಲದಲ್ಲಿ ರಾತ್ರೆ ಉಳಿಯೋಕೆ ಸುಮಾರಷ್ಟು ಅತಿಥಿ ಗೃಹಗಳಿವೆ. ಅಹೋಬಲಂನಲ್ಲಿ ನೋಡೋಕೆ ಸುಮಾರಷ್ಟಿರುವುದರಿಂದ ಮೇಲಿನ ಅಹೋಬಲಂನಲ್ಲಿನ ಪಾವನಿ ಮುಂತಾದ ದೇಗುಲಗಳು ಮಧ್ಯಾಹ್ನ ಮೂರಕ್ಕೇ ಬಾಗಿಲು ಹಾಕೋದರಿಂದ ಸ್ವಂತ ವಾಹನದಲ್ಲಿ ಹೋಗೋರಿಗೆ ಅಹೋಬಲಂನಲ್ಲಿ ರಾತ್ರಿ ಉಳಿಯೋದೇ ಹೆಚ್ಚು ಸೂಕ್ತ ಅನಿಸುತ್ತೆ. ನಂದ್ಯಾಲದಿಂದ ಅಹೋಬಲಕ್ಕೆ ಬರೋ ಸಮಯದಲ್ಲಿ ಇಲ್ಲಿನ ಕೆಲವು ದೇವಸ್ಥಾನಗಳನ್ನು ನೋಡಾಗಿರುತ್ತೆ. ಸ್ವಂತ ವಾಹನವಿಲ್ದಿದ್ರೆ ನಮ್ಮ ಪ್ಲಾನನ್ನು ಯಥಾವತ್ ಪಾಲಿಸಬಹುದು :-)

ಜಮ್ಮಲಮಡುಗುವಿನಲ್ಲೊಂದು ಮಿನಿ ರೇಸು.
Entrance into Gandhikota Caves
ಇನ್ನು ನಮ್ಮ ಪ್ರವಾಸದ ಸುದ್ದಿಗೆ ಬರೋದಾದ್ರೆ ಮಧ್ಯಾಹ್ನ ಎರಡೂನಲವತ್ತರ ಹೊತ್ತಿಗೆ ಜಮ್ಮಲಮಡುಗು ತಲುಪಿದ ನಾವು ಅಲ್ಲಿಂದ ಸುಮಾರು ೪೮ ಕಿ.ಮೀ ದೂರವಿರೋ ಬೇಲಂ ತಲುಪಬೇಕಿತ್ತು. ತಡಪತ್ರಿಗೆ ಹೋಗೋ ಯಾವ ಬಸ್ಸು ಹಿಡಿದ್ರೂ ಅದು ಕೋಲಿಮಿಗುಂಡ್ಲಕ್ಕೆ ಹೋಗುತ್ತೆ, ಅಲ್ಲಿಂದ ೫ ಕಿ.ಮೀ ದೂರವಿರೋ ಬೇಲಂಗೆ ಹೋಗೋಕೆ ಆಟೋನೋ, ಬಸ್ಸೋ ನೋಡ್ಕೊಂಡ್ರಾಯ್ತು ಅಂತದ್ಕಂಡು ಬಸ್ಟಾಂಡಿಗೆ ಬಂದ್ವಿ. ಗಂಡಿಕೋಟದಲ್ಲಿನ ಮಂಡಕ್ಕಿ,ಬೆಳಗ್ಗಿನ ಅಜ್ಜಿ ಕ್ಯಾಂಟೀನಿನ ತಿಂಡಿ, ಬಿಸ್ಕತ್ತುಗಳು ಯಾವಾಗಲೋ ಕರಗೋಗಿ ಹೊಟ್ಟೆ ಚುರುಗುಟ್ಟತೊಡಗಿತ್ತು. ಆದ್ರೆ ಇಲ್ಲಿ ಊಟ ಮಾಡ್ತಾ ಕೂತ್ಕೊಂಡ್ರೆ ಐದೂವರೆಗೆ ಬಾಗಿಲು ಹಾಕೋ ಬೇಲಂ ನೋಡೋಕಾಗ್ತಿರಲಿಲ್ಲ. ಹಂಗಾಗಿ ಇಲ್ಲಿ ಸಿಗೋ ಬಾಳೇಹಣ್ಣನ್ನು ತಗೊಂಡು ಸಿಕ್ಕ ತಡಪತ್ರಿ ಬಸ್ಸು ಹತ್ತೋದು. ಬೇಲಂಗೆ ಆದಷ್ಟು ಬೇಗ ತಲುಪೋದು ಅಂತ ಐಡಿಯಾ ಬಂತು. ಹೊಟ್ಟೇಪಾಡಿಗಿಂತ ಜಾಗ ನೋಡೋದು ಮುಖ್ಯವಾಗಿದ್ರಿಂದ ಯಾರಿಂದನೂ ಆಕ್ಷೇಪಣೆ ಬರಲಿಲ್ಲ ಅದಕ್ಕೆ :-) ಹಂಗೇ ಒಂದು ಡಜನ್ ಬಾಳೇಹಣ್ಣು ತಗೋಳೋಣ ಅಂತ ಹೋದ್ವಿ. ನಲವತ್ತಕ್ಕೆ ಒಂದು ಡಜನ್ ಪಚಬಾಳೆ ಅಲ್ಲಿ. ಐವತ್ತಕ್ಕೆ ಚಿಲ್ಲರೆಯಿಲ್ಲ ಅಂತ ಹದಿನೇಳು ಬಾಳೆ ಹಣ್ಣು ಕೊಟ್ಟ ಆ ಪುಣ್ಯಾತ್ಮ. ಒಂದು ಬಾಳೆಹಣ್ಣಿಗೆ ಐದು ರೂ ಅನ್ನೋ ಬೆಂಗಳೂರೆಲ್ಲಿ ನಲವತ್ತಕ್ಕೆ ಡಜನ್ ಮಾರೋ ಜಾಗವೆಲ್ಲಿ ಅನಿಸಿಬಿಡ್ತು.ಡಜನ್ನಿಗೆ ಇಪ್ಪತ್ತರ ವ್ಯತ್ಯಾಸ ! ಸರಿಯಪ್ಪ ಅಂತ ಬಾಳೇಹಣ್ಣು ತಗೊಂಡು ಎದ್ರಿಗಿದ್ದ ಬಸ್ಸು ನೊಡ್ತಾ ಇದ್ರೆ ಸುಮಾರಷ್ಟು ಜನರಿಂದ ತುಂಬಿದ್ದ ಒಂದು ಬಸ್ಸು ಹೋಗ್ತಾ ಇತ್ತು. ಅದ್ರ ಹಿಂದಿದ್ದ ಇನ್ನೊಂದು ಹೊರಡೋಕೆ ಅಣಿಯಾಗಿತ್ತು. ಅದ್ರ ಹಿಂದಿದ್ದ ಮತ್ತೊಂದು ಬಸ್ಸು ಖಾಲಿ ಖಾಲಿ. ಈಗ ಹೊರಡ್ತಿರೋ ಬಸ್ಸನ್ನು ಮಿಸ್ ಮಾಡ್ಕೊಂಡ್ರೆ ಮತ್ತೊಂದು ಎಷ್ಟೊತ್ತಿಗೆ ಅಂತ ಗೊತ್ತಿಲ್ಲ. ಮತ್ತೊಂದನ್ನು ಕಾಯ್ತಾ ಕಾಯ್ತಾ ಬಿಲ ಬಾಗಿಲು ಹಾಕಿದ್ರೆ ಅನ್ನೋ ಟೆನ್ಷನ್ನು ಬೇರೆ. ಮಾಧವ ಬೇರೆ ಬಿಲ ಮೂರು ಎಕರೆ ಇದೆ. ನೋಡೋಕೆ ಸುಮಾರು ಸಮಯ ಬೇಕು ಅಂತಿದ್ದ ! ಸರಿ, ನಾ ಓಡೋಗಿ ಬಸ್ಸು ನಿಲ್ಲಿಸ್ತೀನಿ, ನೀವು ಹಿಂದೇನೆ ಬಂದು ಹತ್ಕೊಳ್ರಪ್ಪ ಅಂದೆ. ಸರಿ ಅಂದ ಹುಡುಗ್ರನ್ನ ನಂಬಿ ನಾ ಮುಂದೆ ಓಡಿದೆ ಮಿಸ್ಸಾಗೋ ಬಸ್ಸ ಹಿಡಿಯೋಕೆ.

ಅಂತೂ ಇಂತೂ ಓಡಿ ಸುಮಾರು ನೂರೈವತ್ತು ಇನ್ನೂರು ಮೀಟರ್ ದೂರದಲ್ಲಿದ್ದ, ಹೋಗ್ತಿದ್ದ ಬಸ್ಸನ್ನು ಹತ್ತಿ ಹಿಡಿದಿದ್ದಾಯ್ತು. ನೋಡಿದ್ರೆ ಹಿಂದೆ ಯಾವ ಫ್ರೆಂಡ್ಸೂ ಇಲ್ಲ ! ಎಲ್ಲಾ ಹಿಂದೆಲ್ಲೋ ಇದ್ದಾರೆ ! ಭಯ್ಯಾ ಭಯ್ಯಾ ಒಕ್ಕ ನಿಮಿಷಂ, ಮಾ ಫ್ರೆಂಡ್ಸು ವಸ್ತಾರು ಅಂತ ಡ್ರೈವರಿಗೇ ಕೂಗಿ ಹೇಳಿದ್ದು ಕೇಳಿದ ಡ್ರೈವರು ನಿಲ್ಲಿಸಿದ ಗಾಡಿ. ಕೆಲ ಸೆಕೆಂಡು ಕಳೀತು. ದಾಸ್ ಬಂದು ಹತ್ಕೊಂಡ. ಗಾಡಿ ಹೊರಡೋಕೆ ಶುರುವಾಯ್ತು. ವೆಯ್ಟ್ ವೆಯ್ಟ್ ಅಂದ್ರೂ ಕೇಳಿಸಿಕೊಳ್ಳದೇ ಹೊರಟಿದ್ದ ಡ್ರೈವರಿಗೆ ಕೇಳಿಸುವಂತೆ ನನ್ನ ಪಕ್ಕದಲ್ಲಿದ್ದ ಜನ ಬಸ್ಸಿನ ತಗಡು ತಟ್ಟಿದ ಮೇಲೆ ಬಸ್ಸು ನಿಂತು. ಹಿಂದೆ ನೋಡಿದ್ರೆ ಉಳಿದವ್ರು ನಿಧಾನ ಬರ್ತಾ ಇರೋದು ಕಾಣ್ತು. ಹೇ, ಬರ್ರಪ್ಪ ಅಂತಂದಿದ್ದು ಕೇಳಿದ ಅವ್ರೂ ಓಡಿ ಬಂದು ಹತ್ಕೊಳ್ತಿದ್ದಂಗೆ ಬಸ್ಸು ಹೊರಟಿತು ಮುಂದೆ.  ನಾನೇನೋ ಓಡ್ಬಂದಿದ್ದೆ. ಆದ್ರೆ ಹಿಂದೇ ಬರ್ತಿದ್ದೋರಿಗೆ ಎದುರು ಬಂದಿದ್ದ ಬೈಕುಗಳ್ಯಾವುದೂ ಸೈಡು ಬಿಡದೇ ಅವ್ರಿಗೆ ಬೇಗ ಬರೋಕಾಗಿರ್ಲಿಲ್ಲ. ಮ್ಯಾರಥಾನ್ ಓಡಿ ಅಭ್ಯಾಸವಿದ್ದಿದ್ದು  ಇವತ್ತು ಹೋಗ್ತಿದ್ದ ಬಸ್ಸು ಹಿಡಿದು ಇಪ್ಪತ್ನಿಮಿಷ ಉಳ್ಸೋಕಾದ್ರೂ ಸಹಾಯವಾಯ್ತಲ್ಲ ಅಂತ ಖುಷಿಯಾಯ್ತು :-)

ಹಳ್ಳಿ ಹೈದರೊಟ್ಟಿಗೆ ಬಾರದ ಭಾಷೆಯಲ್ಲಿ ತಂತ್ರಜ್ಞಾನ ಸಂವಹನ !
ಕೋಲಿಮಿಗುಂಡ್ಲಕ್ಕೆ ಬರೋ ಬಸ್ಸಲ್ಲಿ ಸೀಟಿಲ್ಲದೇ ನೇತಾಡ್ಕೊಂಡು ಬರ್ತಿದ್ದ ನಮಗೆ ಮೂರೂಕಾಲರ ಹೊತ್ತಿಗೆ ಸೀಟು ಸಿಕ್ತು ಅಂತಾಯ್ತು. ಗಂಡಿಕೋಟದ ಬಗ್ಗೆ ಮಾತಾಡ್ತಿದ್ದ ನಮ್ಮ ದಾಸಿನ ಮೊಬೈಲು, ಅದ್ರಲ್ಲಿದ್ದ ವೀಡಿಯೋ ನೋಡಿದ ಪಕ್ಕದವನೊಬ್ಬ ಆ ವೀಡಿಯೋ ನಂಗೂ ಕಳಿಸ್ತೀಯಾ ಅಂತ ಕೇಳೋಕೆ ಪ್ರಯತ್ನ ಮಾಡ್ತಿದ್ದ. ಆದ್ರೆ ಅವ ಹೇಳೋದು ದಾಸಿಗೆ ಅರ್ಥ ಆಗ್ತಿಲ್ಲ. ಕಳ್ಸೋಕೆ ಬರೋಲ್ಲ ಅಂತ ಹೇಳೋಕೆ ದಾಸಿಗೂ ಬರ್ತಿಲ್ಲ ! ಮುಂದೆ ಗೊತ್ತಿದ್ದ ತೆಲುಗು ಬರ್ತಿದ್ದ ಮಾಧವ ನಿದ್ದೆ ಮೂಡಲ್ಲಿದ್ದ. ಹಿಂದೆ ಕೂತ ತೆಲುಗು ಕೊಂಚಂ ಕೊಂಚ ಅರ್ಥ ಆಗೋ, ಕುಟ್ಟಿ ಕುಟ್ಟಿ ಮಾತಾಡೋಕೂ ಪ್ರಯತ್ನಿಸ್ತಿದ್ದ ನಾನು ಮಧ್ಯ ಬಂದೆ. ಮೀ ಮೊಬೈಲ್ ಲು ಶೇರಿಟ್ ಉಂದಾ(ನಿಮ್ಮ ಮೊಬೈಲಲ್ಲಿ ಶೇರಿಟ್ ಇದ್ಯಾ) ಅಂದೆ. ಲೇದು ಅಂದ ಅವ. ಈ ಆರು ಮಂದಿ ಗ್ರೂಪಲು ಒಕ್ಕ ಅಬ್ಬಾಯಿಕಿ ತೆಲುಗು ವಸ್ತುಂದಿ(ಈ ಆರು ಜನರ ಗ್ರೂಪಲ್ಲಿ ಒಬ್ಬನಿಗೆ ತೆಲುಗು ಬರುತ್ತೆ ) ಅಂತ ಅವನ ಪಕ್ಕದಲ್ಲಿದ್ದವ ಖುಷಿಯಾಗಿ ಉದ್ಗರಿಸಿದ. ಮಾಕು ತೆಲುಗು ಕಂಪ್ಲಿಟ್ಗಾ ಆವಟಲೇದು. ಕೊಂಚಂ ಕೊಂಚ ವಸ್ತುಂದಿ. ಇಪ್ಪುಡೇ ಮ್ಯಾನೇಜ್ ಚೇಸ್ತಾನು(ನನಗೂ ತೆಲುಗು ಪೂರ್ತಿ ಬರೋಲ್ಲ. ಸ್ವಸ್ವಲ್ಪ ಬರುತ್ತೆ. ಅದ್ರಲ್ಲೇ ಹೆಂಗೂ ನಿಭಾಯಿಸ್ತೀನಿ) ಅಂತ ನಾನು ನಕ್ಕೆ. ಸರಿ, ಕಳ್ಸೋದೆಂಗೆ ಅಂತ ಯೋಚ್ನೆ ಮಾಡ್ತ ಮೀರು ಫೋನ್ ಎಕ್ಕಡ ಉಂದಿ, ಈ ವೀಡಿಯೋ ಎಪ್ಪುಡು ಪ್ಲೇ ಚೇಸ್ತಾರು ಅಂದೆ(ನಿಮ್ಮ ಫೋನ್ ಎಲ್ಲಿದೆ, ಈ ವೀಡಿಯೋ ತಗೊಂಡ್ರೂ ಅದ್ನ ಹೆಂಗೆ ಪ್ಲೇ ಮಾಡ್ತೀರಿ ಅಂದೆ). ಮಾ ಫೋನು ಸ್ಯಾಮ್ಸಂಗು . ಅಕ್ಕಡ ವೀಡಿಯೋ ಪ್ಲೇ ಆವ್ತುಂದಿ ಅಂದ ಅವ ಆ ಫೋನು ತಾರದ ನೆನಪಾಗಿ ಆ ಫೋನು ಇಕ್ಕಡ ಲೇದು, ಈ ಫೋನ್ ಕಿ ಸೆಂಡ್ ಚೇಸ್ತಾರಾ. ಇಕ್ಕಡಿಂಚಿ ಅಕ್ಕಡ ತರುವಾತ ಕಾಪಿ ಚೇಸ್ತಾನು ಅಂದ ಅವ(ಈ ಫೋನಿಗೆ ಕಳಿಸ್ತೀರ, ಇದ್ರಿಂದ ಅದಕ್ಕೆ ಕಾಪಿ ಮಾಡ್ಕೋತೀನಿ ಅಂದ ಅವ). ಅವ ಹೊರತೆಗೆದ ಲಾವಾ ಮೊಬೈಲೋ ನೋಕಿಯಾ ೨೬೦೦ ಗಿಂತ ಕೊಂಚ ಉತ್ತಮಮಟ್ಟದ ಮೊಬೈಲಷ್ಟೆ. ಅದ್ರಲ್ಲಿ ವಿ.ಜಿ.ಯ ಕ್ಯಾಮರಾ, ಹೆಚ್.ಡಿ ವೀಡಿಯೋ ಬಂದ್ರೆ ಓಪನ್ನೂ ಆಗದ ಪ್ಲೇಯರ್ರುಗಳಿದ್ದವು. ಮೀಕು ಫೋನ್ ಮೆಮರಿ ಕಾರ್ಡ್ ಇಸ್ತಾನು. ನೂವು ಮೆಮೋರಿ ಕಾರ್ಡ್ಲು ವೀಡಿಯೋ ಕಾಪಿ ಚೇಯಂಡಿ (ನಿಮಗೆ ಮೆಮರಿ ಕಾರ್ಡ್ ಕೊಡ್ತೀನಿ , ಆ ಮೆಮೋರಿ ಕಾರ್ಡಿಗೆ ನಿಮ್ಮ ಫೋನಿಂದ ವೀಡಿಯೋ ಹಾಕ್ಕೊಡಿ) ಅಂದ ಅವ. ಆದ್ರೆ ದಾಸಿನ ಫೋನಲ್ಲಿದ್ದುದು internal memory ಅಷ್ಟೆ. ಅದಕ್ಕೆ ಹೊರಗಿಂದ ಮೆಮರಿ ಕಾರ್ಡ್ ಹಾಕೋಕೂ ಬರ್ತಿರ್ಲಿಲ್ಲ. ಅದನ್ನ ಅವನಿಗೆ ಅರ್ಥ ಮಾಡ್ಸೋಕೆ ಇನ್ನೂ ಸ್ವಲ್ಪ ಪ್ರಯತ್ನ ಮಾಡ್ಬೇಕಾಯ್ತು. ಈ ಅಬ್ಬಾಯಿ ಮೊಬೈಲ್ ಲು ಎಕ್ಟರನಲ್ ಮೆಮರಿ ಕಾರ್ಡ್ ಆಪ್ಟನ್ ಲೇದು. ಫುಲ್ ಇಂಟರ್ನಲ್ ಮೆಮರಿ. ಸೋ, ಮೀರು ಮೆಮರಿ ಕಾರ್ಡ್ ಇಕ್ಕಡ ಇನಸರ್ಟ್ ಆವಟಲೇದು ಅಂದೆ. ಅರ್ಥವಾದ ಅವನ ಮುಖ ಬಾಡಿತು ಹಂಗಾದ್ರೆ ಈ ವೀಡಿಯೋ ಇಸ್ಕಳಕ್ಕೆ ಆಗೋದೇ ಇಲ್ವಾ ಅಂತ. ಪಟ್ಟನೆ ನನ್ನ ಹಳೆ ನೋಕಿಯಾ ನೆನಪಾದ ನಾ ಮೀರು ಮೊಬೈಲ್ ಲು ಬ್ಲೂಟೂಥ್ ವಸ್ತುಂದಾ ಅಂದೆ(ನಿಮ್ಮ ಮೊಬೈಲಲ್ಲಿ ಬ್ಲೂಟೂಥ್ ಇದ್ಯಾ). ಹೂಂ ಅಂದ ಅವ ಖುಷಿಯಿಂದ. ಕೊನೆಗೆ ಅವ್ನ ಮೊಬೈಲಲ್ಲಿ ಬ್ಲೂಟೂಥ್ ಆನ್ ಮಾಡಿಸಿ , ಅದ್ನ ದಾಸಿನ ಮೊಬೈಲಿನ ಜೊತೆ pair ಮಾಡಿ ದಾಸಿನ ಹತ್ರವಿರೋ ಒಟ್ಟು ೧೦೨ ಎಂಬಿಯ ನಾಲ್ಕು ವೀಡಿಯೋಗಳನ್ನ ಕಳ್ಸೋ ಹೊತ್ತಿಗೆ ಅವ್ರು ಇಳಿಯೋ ಸ್ಟಾಪ್ ಬಂದಿತ್ತು ! ಸಖತ್ ಖುಷಿಯಾಗಿದ್ದ ಅವ್ರಿಬ್ರೂ ನನ್ನ ಕೈಕುಲುಕಿ ಥ್ಯಾಂಕ್ಸ್ ಭಯ್ಯಾ ಅಂತ ಎರಡೆರೆಡು ಸಲ ಹೇಳೋದ್ರು. ಗೊತ್ತಿಲ್ಲದ ಊರಲ್ಲಿ ತಿಳಿದ ಚೂರ್ಚೂರೇ ಭಾಷೆಯಿಂದ ಆ ಭಾಷೆಯೊಂದೇ ಗೊತ್ತಿರೋ ಹಳ್ಳಿಗರೊಂದಿಗೆ ಅವ್ರಿಗೆ ಅರ್ಥವಾಗುವಂತೆ ಮಾತಾಡಿ, ಅವ್ರ ಉತ್ತರನೂ ಪಡೆದಿದ್ದು ಸಖತ್ ಖುಷಿ ಕೊಟ್ಟಿತ್ತು. ನಾವೇ ಟಿ.ಟಿ ಮಾಡ್ಕೊಂಡು ಬೇರೆ ಬೇರೆ ರಾಜ್ಯಕ್ಕೆ ಸುಮಾರು ಸಲ ಹೋಗಿದ್ರೂ ಅದ್ರಲ್ಲಿದ್ದ ಡ್ರೈವರಿಗೆ ಹೋಗುವಲ್ಲಿನ ಭಾಷೆ ಚೆನ್ನಾಗಿ ಬರ್ತಿದ್ರಿಂದ ನಮಗೆ ಹೋದ ಜಾಗಗಳಲ್ಲಿನ ಸ್ಥಳೀಯರೊಂದಿಗೆ ಬೆರೆಯೋ ಅವಕಾಶವೇ ಸಿಕ್ತಿರಲಿಲ್ಲ. ಹಂಗಾಗಿ ಹೊಸ ಊರುಗಳ ಸಾಮಾನ್ಯರೊಂದಿಗೆ ಅತೀ ಸಾಮಾನ್ಯರಾಗಿ ಓಡಾಡೋ ಅನುಭವ ಕೊಟ್ಟ ಈ ಟ್ರಿಪ್ಪು, ವೆಲ್ಲೂರು ಟ್ರಿಪ್ಪು ಒಂಥರಾ ಅವಿಸ್ಮರಣೀಯ. 

ಬೇಲಂ ಬಿಲದೊಳಕ್ಕೆ:
ನಿಧಾನಕ್ಕೆ ಕೋಲಿಮಿಗುಂಡ್ಲಕ್ಕೆ ಬಂದ ಬಸ್ಸವ ೪೨ ಕಿ.ಮೀ ದಾರಿಗೆ ಒಂದೂವರೆ ಘಂಟೆಗೂ ಹೆಚ್ಚೊತ್ತು ತಗೊಂಡಿದ್ದ ! ಅಲ್ಲಿಂದ ನಂದ್ಯಾಲಕ್ಕೆ ಹೋಗೋ ಬಸ್ಸುಗಳೆಲ್ಲಾ ಬೇಲಂ ಮೇಲೇ ಹೋಗುತ್ತೇಂತ ಕೇಳಿದ್ರೂ ಖಾಲಿಯಿದ್ದ ಸ್ಟಾಂಡಲ್ಲಿ ಅಂತಾ ಬಸ್ಸುಗಳಿಗೆ ಕಾಯ್ತಾ ಕೂರೋಕೆ ಮನಸ್ಸಿರಲಿಲ್ಲ. ಅಲ್ಲೇ ಪಕ್ಕದಲ್ಲಿದ್ದ ಜ್ಯೂಸಂಗಡಿಯಲ್ಲಿ ತಲಾ ಎರಡೆರೆಡು ಗ್ಲಾಸ್ ಬಾದಾಮ್, ಮಜ್ಜಿಗೆ ಹೀರೋ ಹೊತ್ತಿಗೆ ಕೊಂಚ ಜೀವ ಬಂದಿತ್ತು. ಅಷ್ಟಕ್ಕಾದ ಬಿಲ್ಲು ೭೦ ರೂ ಅಷ್ಟೆ ! ಅಲ್ಲಿಂದ  ಐದು ಕಿ.ಮೀ ದೂರವಿದ್ದ ಬೇಲಂಗೆ ತಲಾ ಹದಿನೈದರಂತೆ ಚಾರ್ಜು ಕೇಳಿದ ಆಟೋದವನತ್ರ ತೀರಾ ಚೌಕಾಸಿ ಮಾಡದೇ ಅದನ್ನೇ ಹತ್ತಿ ಹೊರಟ ನಾವು ಬೇಲಂ ತಲುಪೋ ಹೊತ್ತಿಗೆ ನಾಲ್ಕೂಹತ್ತಾಗ್ತಾ ಬಂದಿತ್ತು. ಬೆಳಗ್ಗಿಂದ ಬಿಡುವು ಕೊಟ್ಟಿದ್ದ ಮಳೆ ಆಟೋದಲ್ಲಿ ಹೋಗ್ತಿದ್ದ ನಮ್ಮ ಮೇಲೆ ತನ್ನ ಶಕ್ತಿ ಪ್ರದರ್ಶನ ಶುರು ಮಾಡಿತ್ತು. ಡ್ರೈವರ ಪಕ್ಕ ಕೂತ ಮಾಧವ ಮತ್ತೆ ನನ್ನ ಪ್ಯಾಂಟುಗಳು ಅರ್ಧಕ್ಕರ್ದ ಒದ್ದೆ ! ಬೇಲಂ ತಲುಪಿದೊಡನೆ ತೀರಾ ಒದ್ದೆಯಾಗದಿದ್ದ ನಾನು ತಲಾ ಐವತ್ತರ ಪ್ರವೇಶದ ಚೀಟಿ ತರೋಕೆ ಹೋದರೆ ಮಾಧವ ಬಟ್ಟೆ ಬದಲಾಯಿಸೋಕೆ ಜಾಗ ಹುಡುಕ್ತಿದ್ದ. ಆತ ವಾಪಾಸ್ ಬಂದು ನಾವೊಬ್ಬ ಗೈಡನ್ನು ಹುಡುಕಿ ಗುಹೆಯೊಳಗೆ ಇಳಿಯೋ ಹೊತ್ತಿಗೆ ೪:೨೫

ಬೇಲಂ ಬಿಲದ ಇತಿಹಾಸ:
೩೨೨೯ ಮೀಟರಿನಷ್ಟು ಉದ್ದವಿರುವ ಇದು ಭಾರತದಲ್ಲೇ ಎರಡನೆಯ ಅತೀ ಉದ್ದವಾದ ನೈಸರ್ಗಿಕ ಗುಹೆಯೆನ್ನಲಾಗುತ್ತದೆ. ಮೊದಲನೇ ಸ್ಥಾನ ಮೇಘಾಲಯದ ಕ್ರೆಮ್ ಲಿಯಾಟ್ ಪ್ರಾಹ್ ಪಡೆದಿದೆ ಎನ್ನುತ್ತಾರೆ ನಮ್ಮ ಗೈಡು ಚಂದ್ರಶೇಖರ ರೆಡ್ಡಿ. ೧೮೮೪ರಲ್ಲಿ ಈ ಗುಹೆಯನ್ನು  ಬ್ರಿಟಿಷ್ ಸರ್ವೆಯರ ರೊಬರ್ಟ್ ಬ್ರೂಸ್ ಫೂಟ್  ಕಂಡು ಹಿಡಿದರೂ ಅದನ್ನು ಹೆಚ್ಚು ಪ್ರಚಾರಕ್ಕೆ ತಂದಿದ್ದು ಡೇನಿಯಲ್ ಗೆಬಾಯರ್ ಮತ್ತವರ ತಂಡ( H Daniel Gebauer). ಅವರ ನೆನಪಲ್ಲೇ ಗುಹೆಯ ಪ್ರವೇಶದಲ್ಲಿ ಕೂರಲಿರೋ ಸ್ವಲ್ಪ ವಿಶಾಲವಾದ ಸ್ಥಳವನ್ನು ಗೆಬಾಯರ್ ಹಾಲ್ ಎಂದೇ ಹೆಸರಿಸಲಾಗಿದೆ. ಈ ಸ್ಥಳದ ಬಗ್ಗೆ ಸ್ಥಳೀಯರಿಗೆ ಮುಂಚೆಯೇ ಗೊತ್ತಿತ್ತು. ಇಲ್ಲಿ ಜೈನ ಮತ್ತು ಬೌದ್ಧ ಸನ್ಯಾಸಿಗಳು ತಪಸ್ಸು ಮಾಡುತ್ತಿದ್ದರು ಎಂಬ ಐತಿಹ್ಯಗಳಿದ್ದರೂ ಆ ಕಾಲದ ಯಾವುದೇ ಶಾಸನಗಳಾಗಲೀ, ಬರಹಗಳಾಗಲೀ ಈ ಗುಹೆಯ ಒಳಗಿಲ್ಲ. ಗೆಬಾಯರ್ ಅವರ ತಂಡದ ಜೊತೆ ಸಹಕರಿಸಿದ್ದ ಶ್ರೀ ಬಚ್ಚಂ ಚಲಪತಿ ರೆಡ್ಡಿ,ಶ್ರೀ ಪೋತಿರೆಡ್ಡಿ ರಾಮಸುಬ್ಬಾರೆಡ್ಡಿ ಅವರ ಗೌರವಸೂಚಕವಾಗಿ ಅವರ ಹೆಸರಿನ ಹಾಲುಗಳೂ ಗುಹೆಯ ಒಳಗಿವೆ. ಗುಹೆಯ ಪ್ರವೇಶದ್ವಾರದಲ್ಲೇ ಗುಹೆಯ Founder ಎಂದು ಚಲಪತಿರೆಡ್ಡಿ ಅವರ ಪ್ರತಿಮೆಯನ್ನೂ ಕಾಣಬಹುದು. ಇಲ್ಲಿ ೩.೫ ಕಿ.ಮೀ ಗುಹೆಯಿದ್ರೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರೋ ಪ್ರದೇಶ ಸುಮಾರು ೧.೫ ಕಿ.ಮೀ ಅಷ್ಟೆ. ಗುಹೆಯೊಳಗೆ ಅನೇಕ ಕಡೆ ಸರಳುಗಳನ್ನು ಹಾಕಿ ಕೆಲಸ ನಡೆಯುತ್ತಿರುವುದನ್ನು ಕಾಣಬಹುದು. ಸುಣ್ಣದ ಕಲ್ಲುಗಳಿಂದಾದ ಈ ಗುಹೆ ನಿರ್ಮಾಣವಾದ ಬಗ್ಗೆ ಹಲವಾರು ಕತೆಗಳಿದ್ದು ಅದೇ ಒಂದು ಲೇಖನದ ವಸ್ತುವಾದೀತು !
One of the views inside the Belam Caves
ಬೇಲಂ ಒಳಗೆ ನೋಡಲಿರುವ ಸ್ಥಳಗಳು:
೧. ಸಿಂಹ ದ್ವಾರ
೨. ಛಲಪತಿ ರೆಡ್ಡಿ ಹಾಲು
೩. ಮಂಟಪ
೪. ಕೋಟಿಲಿಂಗ/Thousand hoods
೫. ಮಾಯಾ ಮಂದಿರ
೬. ಪಾತಾಳ ಗಂಗೆ
೬. ಧ್ಯಾನ ಮಂದಿರ
೭. ರಾಮರೆಡ್ಡಿ ಹಾಲು
೮. ಆಲದ ಮರ / Banyan tree hall

ಸಿಂಹ ದ್ವಾರ:
ಬೇಲಂ ಎನ್ನುವ ಊರಿನಲ್ಲಿರುವ ಬಿಲ/ಗುಹೆ ಆದ್ದರಿಂದ ಇದಕ್ಕೆ ಬೇಲಂ ಬಿಲ ಎನ್ನುತ್ತಾರೆ. ಸ್ಥಳೀಯರ ಬಾಯಲ್ಲಿ ಇದು ಬರೀ "ಬಿಲ" ಅಷ್ಟೆ. ಬೇಲಂಗೆ ಹೋಗಬೇಕು ಅಂದ್ರೆ ಇಲ್ಲಿ ಯಾರಿಗೂ ಗೊತ್ತಾಗೊಲ್ಲ. "ಬಿಲ" ಅಥವಾ "ಬಿಲ ಕೇವ್ಸ್" ಅಂದ್ರೆ ತಕ್ಷಣ ದಾರಿ ತೋರಿಸ್ತಾರೆ ! ಗುಹೆಯಿಳಿದು ಗೆಬಾಯರ್ ಹಾಲಿನ ವಿಶಾಲ ವಾತಾವರಣ ದಾಟಿ ಮುಂದೆ ಸಾಗುತ್ತಿದ್ದಂತೆ ಗುಹೆ ಕಿರಿದಾಗುತ್ತಾ ಸಾಗುತ್ತೆ. ಅದ್ರಲ್ಲಿ ಮೊದಲು ಸಿಗೋದು ಸಿಂಹ ದ್ವಾರ ಅನ್ನೋ ಪ್ರವೇಶದ್ವಾರ. ಅದ್ರ ಎರಡು ಚಿತ್ರಗಳನ್ನು ಇಲ್ಲಿ ಕಾಣಬಹುದು. ಚಿತ್ರವನ್ನು ಜೂಮ್ ಮಾಡಿದ್ರೆ ಆ ಬೋರ್ಡೂ ಕಾಣುತ್ತೆ :-)


At the Simha Dwara
ಛಲಪತಿ ರೆಡ್ಡಿ ಹಾಲು:
ಸಿಂಹ ದ್ವಾರದಿಂದ ಮುಂದೆ ಬರುತ್ತಿದ್ದ ಹಾಗೆ ಮುಂಚೆ ಹೇಳಿದ ಛಲಪತಿ ರೆಡ್ಡಿ ಹಾಲು ಸಿಗುತ್ತದೆ. ಇಲ್ಲಿನ ಛಾವಣಿಯಲ್ಲಿ ಪ್ರಕೃತಿನಿರ್ಮಿತವಾದ ತೂತುಗಳನ್ನು ಕಾಣಬಹುದು. ಈ ಗುಹೆ ಸುಣ್ಣದ ಕಲ್ಲು ಮತ್ತು ಗಟ್ಟಿಕಲ್ಲುಗಳಿಂದಾದದ್ದು. ಭೂಮಿಯೊಳಗೆ ಹರಿದ ನೀರಿಗೆ ಸುಣ್ಣದ ಕಲ್ಲುಗಳು ಕರಗಿ ಈ ಗುಹೆಯಾಗಿದ್ದು, ಆವಿಯಾದ ನೀರು ಮೇಲೆ ಹೋದಂತೆ ಛಾಚಣಿಯಲ್ಲಿ ತೂತುಗಳಾಗಿವೆ ಎನ್ನಲಾಗುತ್ತದೆ. ಇಂತಹ ತೂತುಗಳನ್ನು ಗುಹೆಯ ಹಲವು ಭಾಗಗಳಲ್ಲಿ ಕಾಣಬಹುದು. ನೀರು ಹರಿದ ಜಾಗವನ್ನೇ ಕೊಂಚ ವಿಸ್ತರಿಸಿ ಈಗಿರುವ ಓಡಾಡುವ ಜಾಗ ನಿರ್ಮಿಸಲಾಗಿದೆ. ಛಲಪತಿ ರೆಡ್ಡಿ ಹಾಲಿನಲ್ಲಿ ಬರುವವರ ಆಕರ್ಷಣೆಗೆಂದು ಕೃತಕ ಕಾರಂಜಿಯನ್ನು ನಿರ್ಮಿಸಲಾಗಿದೆ. ಇಲ್ಲೇ ತಲೆಯೆತ್ತಿ ನೋಡಿದರೆ ಗುಹೆಯ ಮೇಲ್ಭಾಗದಿಂದ ಒಲಗೆ ಆಮ್ಲಜನಕದ ಪೂರೈಕೆ ಮಾಡಲು, ಇಲ್ಲಿನ ಇಂಗಾಲವನ್ನು ಹೊರತೆಗೆಯಲು ಅಳವಡಿಸಿರೋ ಪೈಪುಗಳನ್ನು ಕಾಣಬಹುದು. ಇಂತಹ ಪೈಪುಗಳು ಗುಹೆಯ ಹಲವು ಕಡೆಯಿರೋದ್ರಿಂದ ಗುಹೆಯೊಳಗೆ ಬೇರ್ಯಾವ ಗಾಳಿ ಬಾರದಿದ್ದರೂ ಉಸಿರುಗಟ್ಟಿ ಸಾಯುವ ಭಯವಿಲ್ಲ ! ಆದ್ರೆ ಒಳಗೆ ಹಾಕಿರೋ ಲೈಟುಗಳಿಂದ ಮತ್ತು ಇಂಗಾಲದಿಂದ ಒಳಹೋದಂಗೂ ಜಾಸ್ತಿಯಾಗೋ ಸೆಖೆಯಿಂದ ನಿರ್ವಾಹವಿಲ್ಲ :-( ವಿದ್ಯುತ್ ಚಾಲಿತ ಈ ಗಾಳಿ ಪೈಪುಗಳು ಕೈಕೊಟ್ರೆ ಏನು ಕತೆಯೆನ್ನೋದೂ ಸ್ಪಷ್ಟವಿಲ್ಲ ! ಇಲ್ಲಿರೋ ಧನಿವರ್ಧಕಗಳಲ್ಲಿ ಹಾಡು ಬರ್ತಾ ಇರುತ್ತೆ ಯಾವಾಗ್ಲೂ. ಬರ್ತಿರೋ ಗೈಡುಗಳ ಕೈಯಲ್ಲಿರೋ ಮೊಬೈಲುಗಳಲ್ಲಿ ಕೆಲವರ ಕೈಯಲ್ಲಿರೋ ವೈರ್ ಲೆಸ್ಸಲ್ಲಿ ಸಿಗ್ನಲ್ಲಿರುತ್ತೆ. ಹಂಗಾಗಿ ಏನಾದ್ರೂ ಆದ್ರೆ ತಕ್ಷಣಕ್ಕೆ ಎಚ್ಚರಿಸೋ ವ್ಯವಸ್ಥೆಯಿದೆ, ಶುರುವಾದ ಇಷ್ಟು ವರ್ಷಗಳಲ್ಲಿ ಏನೂ ಅವಗಡಗಳಾಗಿಲ್ಲ ಅನ್ನೋದೇ ಇದನ್ನು ಪ್ರವೇಶಿಸೋಕಿರೋ ಧೈರ್ಯ.
At the Chalapati Reddy Hall, Artificial Spring created there
Holes created by the water which evaporated after the formation of caves

Pipes to supply Oxygen and suck Carbon dioxide from the cave. Electricity wires are also drawn from these
One of the pathways inside the Belam caves

ಮಂಟಪ:
ಛಲಪತಿರೆಡ್ಡಿ ಹಾಲಿನ ನಂತರ ಸಿಗುವ ಸ್ಥಳ ಮಂಟಪ. ಅದಕ್ಕಾಗಿ ಗುಹೆಯ ಕೆಳಭಾಗಕ್ಕೆ ಸಾಗಬೇಕು. ಇಲ್ಲಿ ಸಾಗೋ ಹಾದಿಯಲ್ಲಿ ಅನೇಕ ಕಡೆಗಳಲ್ಲಿ ಕಬ್ಬಿಣದ ಸರಳುಗಳನ್ನು, ಮೆಟ್ಟಿಲುಗಳನ್ನೂ ಮಾಡಲಾಗಿದೆ. ಮಂಟಪಕ್ಕೆ ಸಾಗುವ ಹಾದಿಯಲ್ಲಿ ಅನೇಕ ಕಡೆಯಲ್ಲಿ ಇನ್ನೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗದ ಹಾದಿಗಳನ್ನು ಕಾಣಬಹುದು. ಅವುಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ಯೋಗ್ಯಗೊಳಿಸಲು ಬೇಕಾದ ಹಣಕಾಸಿನ ನೆರವು ಇಲ್ಲದ್ದರಿಂದ ಅವುಗಳನ್ನು ಹಾಗೇ ಬಿಡಲಾಗಿದೆ ಎನ್ನುತ್ತಾರೆ ಇಲ್ಲಿನ ಗೈಡುಗಳು
Paths in caves which are not yet open to the general public
ಕೋಟಿಲಿಂಗ:
ಮಂಟಪ ನೋಡಿಕೊಂಡು ಮುಂದೆ ಬಂದರೆ ಎರಡು ಹಾದಿಗಳು ಸಿಗುತ್ತೆ. ಎಡಕ್ಕೆ ಹೋದರೆ ಕೋಟಿಲಿಂಗ, ಮಾಯಾಮಂದಿರ ಸಿಗುತ್ತೆ. ಅಲ್ಲೇ ಆನೆಯ ಪಾದದಂತೆ ಕಾಣುವ ರಚನೆಗಳು, ಭೀಮನ ಗದೆಯಂತಹ ರಚನೆಗಳು ಸಿಗುತ್ತೆ. ಇವೆರಡರ ಬಗ್ಗೆ ಇಲ್ಲಿನ ಗೈಡುಗಳು ಹೇಳೇ ಹೇಳುತ್ತಾರೆ.
structures resembling the feet of an elephant @Belum caves
Kaushik, Madhava, Das observing the Bheemana Gade
 ನಂತರ ಸಿಗೋದೇ ಕೋಟಿಲಿಂಗ. ಇಲ್ಲಿನ ಛಾವಣಿಯಲ್ಲಿ ಶಿವಲಿಂಗಗಳನ್ನು ಉಲ್ಟಾ ನೇತು ಹಾಕಿದರೆ ಹೇಗೆ ಕಾಣುತ್ತೋ ಅಂತಹ ರಚನೆಗಳಿವೆ. ಬಾವಲಿಗಳು ಜೋತುಬಿದ್ದಂತಿರೋ ಇಂತಹ ಲಿಂಗಗಳ ರಚನೆಗಳಿವೆ ಅಂತ ತೆಲುಗಲ್ಲಿ ಕೋಟಿಲಿಂಗವೆಂದು ಹೆಸರಿಟ್ಟರೆ ಬ್ರಿಟಿಷರಿಗೆ ಅದು ಉತ್ಪ್ರೇಕ್ಷೆಯೆನಿಸಿ Thousand hoods ಎಂದರು ! ಕೋಟಿಲಿಂಗಕ್ಕೆ ಹೋಗಿ ಬರುವವರೆಲ್ಲಾ ನೀರಲ್ಲಿ ಮಿಂದೆದ್ದು ಬರುವಂತೆ ಯಾಕೆ ಬೆವರ್ತಾರಪ್ಪ ಅಂತ ಎದುರಿಗೆ ಸಿಕ್ಕವರನ್ನ ನೋಡಿ ಅಂದುಕೊಳ್ತಿದ್ದ ನಮಗೆ ಅದ್ರ ಉತ್ತರ ಇಲ್ಲಿಗೆ ಬಂದ ಮೇಲೆಯೇ ಸಿಕ್ಕಿದ್ದು :-) ಇಲ್ಲಿಯೇ ಛಾವಣಿಯಲ್ಲಿ ಆಲದ ಮರದ ಬಿಳಲುಗಳಂತೆ ಜೋತುಬಿದ್ದಿರೋ ರಚನೆಗಳಿರುವುದರಿಂದ ಆ ಜಾಗಕ್ಕೆ ಆಲದ ಮರದ ಹಾಲೆಂದೂ ಕರೆಯಲಾಗುತ್ತೆ.  ಇಲ್ಲಿನ ಜಾಗ ಭೂಮಿಯಿಂದ ಸುಮಾರು ೧೨೦ ಅಡಿಗಳಷ್ಟು ಕೆಳಗಿದೆ ಅನ್ನುತ್ತಾರೆ ಗೈಡುಗಳು !
At the Banyon Hall

Way to Enter MayaMandir, Kotilinga


Thousand Hoods/Kotilinga
ಮಾಯಾ ಮಂದಿರ:
ಅಲ್ಲಿಂದ ಮುಂದೆ ಬಂದರೆ ಸಿಗೋದು ಮಾಯಾ ಮಂದಿರ. ಇಲ್ಲಿನ ಬೆಳಕಿನ ವ್ಯವಸ್ಥೆಯ ಮಧ್ಯ ನಿಂತು ಫೋಟೋ ತೆಗೆಸಿಕೊಳ್ಳೋದೇ ಒಂದು ಖುಷಿ. ಕೇಸರಿ, ಕೆಂಪು, ಹಳದಿಯ ಮಿಶ್ರಣದಲ್ಲಿ ನಾವು ತೊಟ್ಟ ಬಟ್ಟೆಯ ಬಣ್ಣಗಳೆಲ್ಲಾ ಫೊಟೋದಲ್ಲಿ ಬದಲಾಗಿ ಕಾಣುತ್ತಿದ್ದರೂ ಆ ಫೋಟೋಗಳೇ ಒಂದು ಮಜಾ. ನನ್ನ ಹಸಿರಂಗಿ ಕೆಲ ಫೋಟೋಗಳಲ್ಲಿ ಕಪ್ಪಂಗಿಯಾಗಿದೆ !
At MayaMandir
 ಪಾತಾಳ ಗಂಗೆ:
ಇಲ್ಲಿಂದ ಮುಂದಿರೋ ಪಾತಾಳ ಗಂಗೆಯನ್ನು ನೋಡಲು ಇಲ್ಲಿರೋ ಕಬ್ಬಿಣದ ಮೆಟ್ಟಿಲುಗಳಲ್ಲಿ ಕೆಳಗಿಳಿಯಬೇಕು. ಇಲ್ಲಿ ಕೊಂಚ ಹುಷಾರಾಗಿ ಕೆಳಗಿಳಿಯಬೇಕಾದ್ದು ಅನಿವಾರ್ಯ. ಶಿವಲಿಂಗದ ಮೇಲೆ ನೀರು ಬೀಳುತ್ತಿರೋ ದೃಶ್ಯವನ್ನು ಕಾಣ್ತಿದ್ದ ಹಾಗೆ ಕೆಳಗಿಳಿದು ಬಂದ ಸುಸ್ತು ಮರೆಯಾಗುತ್ತೆ.  ಇಲ್ಲಿ ಸ್ವಲ್ಪ ಇಕ್ಕಟ್ಟಾಗಿರೋ ಜಾಗದಲ್ಲಿ ನುಸುಳಿ ಮುಂದೆ ಬರಬೇಕು. ಗೈಡುಗಳು ಹಿಂದೇ ಇದ್ದರೂ ಇಲ್ಲಿ ಮನಸ್ಸಿಗೆ ಬಂದ ಹಾಗೆ ಪುಂಡಾಟಿಕೆ ಮಾಡಬಹುದು ಅಂತೇನಿಲ್ಲ. ಯಾಕೆಂದ್ರೆ ಗುಹೆಯ ಹಲವು ಕಡೆ ಇದ್ದ ಹಾಗೆ ಇಲ್ಲೂ ಸಿಸಿಟಿವಿ ಕ್ಯಾಮೆರಾಗಳಿವೆ
Way down to reach Patalaganga
PatalaGanga
ಧ್ಯಾನಮಂದಿರ:
ಪಾತಾಳಗಂಗೆಯನ್ನು ನೋಡಿ ಮೇಲೆ ಹತ್ತಿ ಬಂದರೆ ಸಿಗೋದು ಧ್ಯಾನಮಂದಿರ. ಇಲ್ಲಿ ಕೊಂಚ ಹೊತ್ತು ಕೂತು ಧ್ಯಾನ ಮಾಡಬಹುದು. ಇಲ್ಲೇ ಮೇಲಿಂದ ಆಮ್ಲಜನಕ ತರೋ ಪೈಪೂ ಇರುವುದರಿಂದ ಅದರ ಕೆಳಗೆ ತಲೆಕೊಟ್ಟು ಸ್ವಲ್ಪ ಹೊತ್ತು ಸೆಖೆಯಿಂದ ಮುಕ್ತಿಯನ್ನೂ ಪಡೆಯಬಹುದು.

DhyanaMandira
ರಾಮರೆಡ್ಡಿ ಹಾಲು:
ಇದರಿಂದ ಮುಂದೆ ಬರುತ್ತಿದ್ದ ಹಾಗೆ ರಾಮರೆಡ್ಡಿ ಹಾಲು ಸಿಗುತ್ತೆ.ಇಲ್ಲಿ ವಿಶೇಷವೇನಿಲ್ಲ. ಇಕ್ಕಟ್ಟಾದ ಜಾಗದಿಂದ ಹೊರಬಂದು ಕೊಂಚ ವಿಶಾಲವಾದ ಜಾಗ ಸಿಗುತ್ತೆ ಅಷ್ಟೆ. ಇದರ ನಂತರ ಸಿಗೋ ಜಾಗವೇ ಮಂಟಪ. ಇಲ್ಲಿಂದ ಮುಂದೆ ಬಂದ ನಾವು ಛಲಪತಿರೆಡ್ಡಿ ಹಾಲನ್ನು ಹಾದು, ಸಿಂಹದ್ವಾರದ ಮೂಲಕ ಹೊರಬಂದೆವು.

ಗೆಬರ್ ಹಾಲು:
ಮುಂದೆ ಗೆಬರ್ ಹಾಲಿಗೆ ಬರುತ್ತಿದ್ದ ಹಾಗೇ ಗುಹೆಯ ಬಾಯಿ ತೆರೆಯುತ್ತೆ. ತೆರೆದ ಸುರಂಗದ ಬಾಯಲ್ಲಿ ಸ್ವಚ್ಛ ಆಮ್ಲಜನಕ ಸವಿಯೋ ಸವಿಯಿದ್ಯಲ್ಲ.. ಆಹಾ . ಅದೇ ಖುಷಿ. ಆಮ್ಲಜನಕ ಪಂಪ್ ಮಾಡೋ ಪೈಪುಗಳಿದ್ರೂ , ಉಸಿರುಗಟ್ಟದೇ ಇದ್ರೂ  ಒಂದು ಘಂಟೆ ಗುಹೆಯೊಳಗಿದ್ದು ಸೆಖೆಯಿಲ್ಲದ ಗುಹೆಯ ಹೊರಗಿನ ವಾತಾವರಣಕ್ಕೆ ಬಂದಾಗ ಬರೋ ಫೀಲೇ ಬೇರೆ ! ಈ ಸ್ವಚ್ಛ ಗಾಳಿ, ವಾತಾವರನ ಅದ್ಭುತ ಅನಿಸಿಬಿಡುತ್ತೆ. ಒಟ್ನಲ್ಲಿ ಗುಹೆಯ ಹೊರಬರುವ ಹೊತ್ತಿಗೆ ಐದೂಮುಕ್ಕಾಲಾಗಿತ್ತು. ಐದೂವರೆಗೆ ಗುಹೆ ಬಾಗಿಲು ಹಾಕೋದ್ರಿಂದ ನಮ್ಮದೇ ಕೊನೆಯ ಬ್ಯಾಚು ಅಂದ್ಕೊಂಡಿದ್ವಿ. ಯಾಕಂದ್ರೆ ನಮ್ಮ ಹಿಂದೇನೇ ಗೈಡು ಅಲ್ಲಿರೋ ಲೈಟುಗಳನ್ನು ಆಫ್ ಮಾಡ್ತಾ ಬರ್ತಿದ್ದ. ನಮ್ಮ ನಂತರ ಬಂದ ಗ್ರೂಪೊಂದಕ್ಕೆ ಅಲ್ಲಿ ಲೈಟು ಆಫಾಗಿದೆ ಅಂತ ಎರಡು ಮೂರು ಸ್ಥಳಗಳನ್ನು ನೋಡೋಕಾಗದೆ ವಾಪಾಸ್ಸು ಕಳಿಸಿದ್ದ ಮತ್ತೊಬ್ಬ ಗೈಡು !
Gebaur Hall

Wonderfull world waiting for us at the exit of Belum caves


ನಗುವ ಬುದ್ದನೆದುರು ನಂದ್ಯಾಲದ ಡೀಲು:
ಗುಹೆಯೊಳಗೆ ಹೋದಾಗ ಬಸಿದುಹೋದ ಬೆವರಿಗೋ ಬೆಳಗ್ಗಿಂದ ತಿರುಗಿದ ಸುಸ್ತಿಗೋ ಗೊತ್ತಿಲ್ಲ. ಬೇಲಂನ ಟಿಕೇಟ್ ಕೌಂಟರಿನ ಎದುರಿದ್ದ ನೀರು ಬೋರ್ ನೀರಾಗಿದ್ರೂ ಬಿಡದೇ ಕುಡಿದೆವು. ಅಲ್ಲೇ ಇದ್ದ ಸ್ವಚ್ಛ ಶೌಚ ಗೃಹಗಳೂ ಸಹಾಯಕ್ಕೆ ಬಂದವು :-) ಇಂತಿಪ್ಪ ಹಗುರಾದ ನಾವು ಅಲ್ಲಿನ ಉದ್ಯಾನವನದಲ್ಲಿ ಅಡ್ಡಾಡುತ್ತಾ ಸೂರ್ಯಾಸ್ತದ ಸೊಬಗನ್ನು ಸವಿಯುತ್ತಾ ಮುಂದಿದ್ದ ದೊಡ್ಡ ಬುದ್ದನ ಹತ್ತಿರ ಬಂದೆವು. ಅಷ್ಟರಲ್ಲೇ ಅಲ್ಲಿ ಬಂದಿದ್ದ ಮೂಲತಃ ಮಂಗಳೂರಿನವರಾದ ಸದ್ಯ ಆಂಧ್ರದಲ್ಲಿರುವ ಕನ್ನಡ ದಂಪತಿಗಳಿಂದ ನಂದ್ಯಾಲದಲ್ಲಿರುವ ಹೋಟೇಲೊಂದರ ಬಗ್ಗೆ, ಅದರ ನಂಬರ್ರೂ ಸಿಕ್ತು. ಅದನ್ನಿಸ್ಕೊಂಡು ಇಲ್ಲಿಂದ ಮತ್ತೆ ಕೋಲಿಮಿಗುಂಡ್ಲಕ್ಕೆ ಹೋಗೋದೇಗೆ, ಅಲ್ಲಿಂದ ನಂದ್ಯಾಲಕ್ಕೆ ಬಸ್ಸೆಷ್ಟೊತ್ತಿಗೆ ಅಂತ ತಲೆ ಕೆಡಿಸ್ಕೋತಿದ್ವಿ. ಬಿಲಂಗೆ ಪ್ರತೀ ಹದಿನೈದು ನಿಮಿಷಕ್ಕೆ ಬಸ್ಸಿದೆ ಅಂತ ಮಧ್ಯಾಹ್ನ ಕೇಳಿಸ್ಕೊಂಡಿದ್ದ ನಾವು ಇಲ್ಲಿಗೆ ಬಂದದ್ದು ಬಂದಾಗಿದೆ. ಬುದ್ದನ್ನ ಸಮೀಪದಿಂದ ನೋಡೋದೇ ಸರಿ ಅಂತ ಮುಂದೆ ಹೋದ್ವಿ.
Budha at the Belum Garden

 ನಾನು, ಸುಬ್ಬು ಬುದ್ದನ ಫೋಟೋ ತೆಗೆಯೋ ಹೊತ್ತಲ್ಲಿ ಉಳಿದವ್ರು ಹೊರಗಡೆ ನಂದ್ಯಾಲದ ಬಸ್ಸಿನ ಬಗ್ಗೆ ವಿಚಾರಿಸೋಕೆ ಹೋದ್ರು. ಶುರುವಾತಲ್ಲೇ ಫ್ಲಾಪಾಗೋ ಲಕ್ಷಣಗಳಿದ್ದ ಟ್ರಿಪ್ಪು ಇಲ್ಲಿಯವರೆಗೆ ಚೆನ್ನಾಗಿ ನಡೆದದ್ದಕ್ಕೆ , ಮುಂದೆಯೂ ನಗುನಗುತ್ಲೇ ನಡೀಲಿ ಅಂತ ಕೇಳ್ಕೋತಾ ಹೊರಗೆ ಹೆಜ್ಜೆ ಹಾಕಿದ್ವಿ. ಆರೂವರೆಗೆ ನಂದ್ಯಾಲದ ಬಸ್ಸು ಬಿಲಂ ಗುಹೆಯೆದುರೇ ಬರುತ್ತೆ ಅನ್ನೋ ಮಾಹಿತಿ ಕಲೆಹಾಕಿದ್ದ ಮಾಧವ ಮತ್ತು ಉಳಿದವ್ರು ನಮ್ಮ ಹಾದಿ ಕಾಯ್ತಿದ್ದರು. ಅಲ್ಲಿದ್ದ ಬೋರ್ಡಿಂದ ಇದು "ಬೇಲಂ" ಬಿಲ ಗುಹೆಯೇ ಸರಿ , ಬಿಲಂ ಅಲ್ಲ ಅಂತ ಖಚಿತಪಡಿಸಿಕೊಂಡ್ವಿ. ಬೆಂಗಳೂರಿನಿಂದ ಬಸ್ಸಲ್ಲಿ ಬರುವಾಗ ಸಿಕ್ಕು ತಾನು ಅನಂತಪುರದವ ಅಂತ ಹೇಳ್ಕೊಂಡು ಬೇಲಂ ಅನ್ನೋ ಸ್ಥಳವೇ ಇಲ್ಲ, ಬಿಲ ಅದು, ಗೂಗಲ್ಲಲ್ಲಿದ್ದು ತಪ್ಪಂತಿದ್ದವ ಬಿಟ್ಟದ್ದು ಎಷ್ಟು ರೈಲು ಅನ್ನೋದು ಮತ್ತೊಮ್ಮೆ ಸಾಬೀತೂ ಆಯ್ತು !


Welcome Board to BElum daves

ಬೇಲಂ ಬಿಲದ ಪ್ರವೇಶದ್ವಾರಕ್ಕೆ ಟಾಟಾ ಹೇಳುತ್ತಾ ಆರೂವರೆಗೆ ಬಂದ ಬಸ್ಸನ್ನು ಹತ್ತಿದ ನಾವು ತಲಾ ೭೯ ಕೊಟ್ಟು ರಾತ್ರೆ ೮:೫೦ಕ್ಕೆ ನಂದ್ಯಾಲ ಮುಟ್ಟಿದೆವು ಅನ್ನುವಲ್ಲಿಗೆ ಒಂದು ಅಧ್ಯಾಯಕ್ಕೆ ವಿರಾಮ.



ಮುಂದಿನ ಭಾಗದಲ್ಲಿ: ನಂದ್ಯಾಲದ ರಾತ್ರಿ ಮತ್ತು ಅಹೋಬಲದತ್ತ ಆರ್ವರ ಪಯಣ

Saturday, October 1, 2016

ಗಂಧಿಕೋಟ,ಬೇಲಂ,ಅಹೋಬಲಂ ಟ್ರಿಪ್ಪು

ಪೀಠಿಕೆ:
ಸಚಿನಣ್ಣನ ಪೆನುಕೊಂಡ ಲೇಖನ ಓದಿದ್ಮೇಲಿಂದ ಪೆನುಕೊಂಡ ನೋಡಬೇಕು ಅನಿಸ್ತಾ ಇತ್ತು. ಹಾಗೆ ಅವರತ್ರ ಪೆನುಕೊಂಡದ ಬಗ್ಗೆ ಮಾತಾಡ್ತಿದ್ದಾಗ ಅವರೊಮ್ಮೆ ಗಂಧಿಕೋಟಕ್ಕೆ ಹೋಗಿ ಬಾ ಅಂದಿದ್ರು. ಅದೇ ಗುಂಗಲ್ಲಿದ್ದಾಗ ಬೆಂಗಳೂರು ಅಸೆಂಡರ್ಸ್ ಗುಂಪಿನವ್ರು ನಡೆಸ್ತಿದ್ದ ಗಂಧಿಕೋಟ,ಬೇಲಂ, ಅಹೋಬಲಂ ಟ್ರಿಪ್ಪಿನ ಬಗ್ಗೆ ನೋಡಿದೆ.ಆ ಟ್ರಿಪ್ಪಿಗೆ ಹೋಗೋಕಾಗದೇ ಇದ್ರು ಅಲ್ಲಿ ಮೂರು ದಿನ ನೋಡುವಂತದ್ದು ಏನಿದೆ ಅನ್ನೋ ಕುತೂಹಲ ಶುರುವಾಯ್ತು. ಅದೇ ತರ ಪ್ರಭವಣ್ಣ(ಪ್ರಭವ ಗರುಡಧ್ವಜಂ)ನ ಹತ್ರ ಮಾತಾಡ್ತಿದ್ದಾಗ ಅವ್ರು ಅವ್ರು ಅಹೋಬಲಂನಲ್ಲೇ ನಾವು ಒಂದಿನ ಕಳೆದಿದ್ವಿ ಅಂದಾಗ ಕುತೂಹಲ ಇನ್ನೂ ಜಾಸ್ತಿಯಾಗಿತ್ತು. ಆದ್ರೆ ಅಹೋಬಲಂ ಎಷ್ಟು ಅದ್ಭುತವಾಗಿದೆ , ಅದನ್ನ ನೋಡೋಕೆ ಎರಡು ದಿನ ಬೇಕಾಗುತ್ತೆ ಅಂತ ಅವ್ರು ಹೇಳಿದ್ದಿದ್ರೆ ನಮ್ಮ ಪ್ಲಾನೇ ಬೇರೆಯಾಗ್ತಿತ್ತೋ ಏನೋ. ಒಂಭತ್ತು ದೇವಸ್ಥಾನ ತಾನೆ. ಎಲ್ಲಾ ಒಂದು ಮಧ್ಯಾಹ್ನದೊಳಗೆ ನೊಡ್ಬೋದು ಅನ್ನೋ ಉತ್ಸಾಹದಲ್ಲಿ ಶುಕ್ರವಾರ ರಾತ್ರೆ ಹೊರಟು ಭಾನುವಾರ ಮಧ್ಯಾಹ್ನ ಅಲ್ಲಿಂದ ಹೊರಡೋ ಪ್ಲಾನಾಯ್ತು. ಎಲ್ಲಾದ್ರೂ  ಲೇಟಾದ್ರೂನು ಸೋಮವಾರ ಬೆಳಗ್ಗೆಯವರೆಗೆ ಬೆಂಗಳೂರಿಗೆ ಹೊರಡೋ ಪ್ಲಾನಿಗೆ ನಾನು, ಮಾಧವ, ಸಂತೋಷ್, ಸುಬ್ಬು, ಕೌಶಿಕ ಮತ್ತು ಗಣೇಶರ ಗ್ರೂಪು ರೆಡಿಯಾಯ್ತು.

ತತ್ಕಾಲಲ್ಲಿ ಸಿಕ್ಕಿದ್ನ ಮಿಸ್ ಮಾಡಿದ ಲೆಕ್ಕಾಚಾರ

One of the watch towers at Gandhikota
ಮೊದಲು ಗಂಧಿಕೋಟಕ್ಕೆ ಹೋಗಿ ಅಲ್ಲಿಂದ ಬೇಲಂ ಬಿಲ(ಇದ್ನ ಸ್ಥಳೀಯರ ಬಿಲ ಅಂತಷ್ಟೇ ಕರೆಯೋದು) ನೋಡ್ಕೊಂಡು ಅಹೋಬಲಂಗೆ ಹೋಗೋ ಪ್ಲಾನ್ ಹಾಕಿದ್ವಿ. ಸರಿ, ಗಂಧಿಕೋಟಕ್ಕೆ ಹತ್ತಿರದ ಜಂಕ್ಷನ್ ಅಂದ್ರೆ ತಡಪತ್ರಿ. ಅಲ್ಲಿಂದ ಗಂಧಿಕೋಟಕ್ಕೆ ೩೦ ಕಿ.ಮೀ ಅಷ್ಟೆ. ಗುರುವಾರ ಅಲ್ಲಿಗೆ ರೈಲು ನೋಡಿದ್ರೆ ಒಂದೇ ಒಂದು ರೈಲೂ ರಾತ್ರಿಯ ಸಮಯಕ್ಕೆ ಇರಲಿಲ್ಲ. ಬೇರೆ ಇನ್ಯಾವುದು ಹತ್ತಿರ ಅಂತ ನೋಡಿದ್ರೆ ಗುತ್ತಿ ಜಂಕ್ಷನ್ ಕಾಣ್ತು. ಸರಿ ಅಂತ ನಾವು ಮೆಜೆಸ್ಟಿಕ್ಕಿಂದ ಹತ್ತೂಮುಕ್ಕಾಲಿಗೆ ಹೊರಡೋ ನಾಂದೇಡ್ ಎಕ್ಸಪ್ರೆಸ್ ರೈಲು ಬುಕ್ ಮಾಡಾಯ್ತು. ಬುಕ್ ಮಾಡೋ ಹೊತ್ತಿಗೇ ಗುರುವಾರವಾಗಿದ್ರಿಂದ ತತ್ಕಾಲೇ ಗತಿಯಾಯ್ತು.ರೈಲೇನೋ ಬುಕ್ಕಾಯ್ತು. ಆದ್ರೆ ಆ ರೈಲು ಕೆ.ಆರ್.ಪುರಂಗೆ ಬರತ್ತಾ ಅಂತ ಮಾಧವ ತಲೇಲಿ ಹುಳ ಬಿಟ್ಟ. ರೈಲ್ವೇ ತಾಣದಲ್ಲಿ ಹೊರಡೋ ತಾಣ KJM ಮತ್ತು ತಲುಪೋ ತಾಣ GY(Gooty Junction) ಅಂತ ಹುಡುಕಿದ್ರೆ ನಮ್ಮ ರೈಲು ನಾಂದೇಡ್ ಎಕ್ಸಪ್ರೆಸ್(16594) ತೋರಿಸ್ತಾ ಇತ್ತು ಅದ್ರಲ್ಲಿ. ಇನ್ನೂ ಮುಂದೆ ಹುಡುಕೋಕೆ ಹೋಗದೆ ನಾನು, ಮಾಧವ, ದಾಸ್ ಕೆ.ಆರ್.ಪುರಂಗೆ ಬಂದ್ರೆ ಕೌಶಿಕ,ಸುಬ್ಬು,ಗಣೇಶ ಮೆಜೆಸ್ಟಿಕ್ಕಿಗೆ ಬಂದ್ರು. ಹತ್ತೂಕಾಲಿಗೆ ಕೆ.ಆರ್.ಪುರಂಗೆ ಬಂದಿದ್ದ ನಾವು ಹತ್ತೂಮುಕ್ಕಾಲಿಗೆ ಮೆಜೆಸ್ಟಿಕ್ಕಿಂದ ಅವರಿಗೆ ಸಿಕ್ಕ ರೈಲು ಇಲ್ಲಿಗೆ ಈಗ ಬರತ್ತೆ, ಇನ್ನೊಂದು ಸ್ವಲ್ಪ ಹೊತ್ತಿಗೆ ಬರತ್ತೆ ಅಂತ ಕಾಯ್ತಾ ಇದ್ವಿ. ಹನ್ನೊಂದಾದ್ರೂ ರೈಲಿನ ಸುಳಿವಿಲ್ಲ ! ಅಷ್ಟರಲ್ಲಿ ಕೆಮ್ಮಿನ ಔಷಧಿ ತರಬೇಕು ಅಂತ ರೈಲ್ವೇ ಸ್ಟೇಷನ್ನಲ್ಲೆಲ್ಲಾ ಹುಡುಕ್ತಿದ್ದ ಮಾಧವ ಹೇ, ಇಡೀ ಸ್ಟೇಷನ್ನಲ್ಲಿ ನಾಂದೇಡ್ ಎಕ್ಸಪ್ರೆಸ್ಸಿನ ಸುದ್ದಿನೇ ಇಲ್ಲ. ನಾನು ಮೂರು ಸೈಟಲ್ಲಿ ಹುಡುಕಿದೆ ಕಣೋ. ಎಲ್ಲೂ ಅದ್ರ ಸುದ್ದಿಯಿಲ್ಲ ಅನ್ನಬೇಕಾ ! ಮತ್ತೆ ರೈಲ್ವೆ ತಾಣಕ್ಕೆ ಹೋಗಿ ಮೊದಲಿನ ತರ ಹುಡುಕಿದ್ರೆ ನಮ್ಮ ರೈಲು ತೋರಿಸ್ತಾ ಇತ್ತು ! ಆದ್ರೆ ನಾವು ನೋಡೋಕೆ ಮಿಸ್ ಮಾಡಿದ್ದೇನಂದ್ರೆ ಅದು ಹೊರಡೋ ತಾಣ SBC ಅಂತ ಇದ್ದಿದ್ರೂ ನಮ್ಮ ಹುಡುಕುವಿಕೆಯಲ್ಲಿ ತೋರ್ಸಿದ್ರಿಂದ ಅದು ನಮ್ಮ ತಾಣಕ್ಕೂ ಬರತ್ತೆ ಅಂತ ಅಂದ್ಕಂಡಿದ್ದು. ಕೊನೆಗೆ ಆ ರೈಲಿನ ಮೇಲೆ ಡಬಲ್ ಕ್ಲಿಕ್ ಮಾಡಿ ನೊಡಿದ್ರೆ ಅದು ಯಶವಂತಪುರ, ದೊಡ್ಡಬಳ್ಳಾಪುರದ ಮೇಲೆ ಹೋಗೋ ರೈಲಾಗಿತ್ತು !! ರೈಲಲ್ಲಿದ್ದವ್ರಿಗೆ ಫೋನ್ ಮಾಡಿದ್ರೆ ಅವ್ರು ರೈಲು ಈಗ ಯಶವಂತಪುರದಲ್ಲಿದೆ. ಅಲ್ಲಿಂದ ನಿಮ್ಮ ಸ್ಟೇಷನ್ನಿಗೆ ಬರತ್ತೆ ಅನ್ಬೇಕಾ ? ! ಆ ಮಾರ್ಗದಲ್ಲಿ ಹೋಗಿದ್ರೂ ಅವ್ರಿಗೆ ನಮ್ಮ ರೈಲು ಮಿಸ್ಸಾಗಿದೆ ಅಂತ ಗೊತ್ತಾಗಿರ್ಲಿಲ್ಲ. ಬುಕ್ ಮಾಡಿದ ನಾನೊಬ್ನೇ ಅಲ್ಲದೆ ಎಲ್ಲಾ ಆರು ಜನರೂ ಹೋಲ್ಸೇಲಾಗಿ ಕುರಿಗಳಾಗಿದ್ವಿ :-)

ರೈಲು ಹೋಗೋ ಮಾರ್ಗ ನೋಡಿದ ನಾವು ಮೆಜೆಸ್ಟಿಕ್ಕಿಗೆ ಹೋಗಿ ಅಲ್ಲಿಂದ ಬೇರೆ ರೈಲಲ್ಲೋ, ಬಸ್ಸಲ್ಲೋ ಹೋಗೋದಂತ್ಲೂ ಎಲ್ಲಾದ್ರೂ ರೈಲನ್ನ ಹಿಡಿಯೋದಂತ್ಲೂ ತೀರ್ಮಾನ ಮಾಡಿದ್ವಿ. ಅದ್ನೇ ಅವ್ರಿಗೂ ಹೇಳಿ ಮೆಜೆಸ್ಟಿಕ್ಕಿಗೆ ಬಸ್ ಹುಡುಕ್ತಿದ್ದ ನಮಗೆ ದೇವ್ರೇ ಸಹಾಯಕ್ಕೆ ಬಂದ ಹಾಗೆ ಮತ್ತೊಂದು ರೈಲು ಸಿಕ್ತು. ಇನ್ನು ಐದೇ ನಿಮಿಷದಲ್ಲಿ ಇದೇ ನಿಲ್ದಾಣಕ್ಕೆ  ಬರ್ತಿರೋ ಮೈಸೂರು ಎಕ್ಸಪ್ರೆಸ್ ರೈಲು ಮೆಜೆಸ್ಟಿಕ್ಕಿಗೆ ಹೋಗುತ್ತೇಂತ ಗೊತ್ತಾಯ್ತು. ಬಸ್ಸಿಗಿಂತ ಅದೇ ಬೇಗ ಹೋಗುತ್ತೇಂತ ಅದ್ನ ಹತ್ತಿದ ನಾವು ಹನ್ನೊಂದು ನಲವತ್ತರ ಹೊತ್ತಿಗೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣ ತಲುಪಿದ್ವಿ. ಆ ರೈಲಲ್ಲಿ ಟಿ.ಟಿ ಏನಾದ್ರೂ ಬಂದ್ರೆ ಏನು ಹೇಳೋದು ಅನ್ನೋ ಭಯಕ್ಕೆ ಮಾಧವನ ಉತ್ರ ಮಜಾ ಇತ್ತು. ನಿಮ್ಮ ರೈಲ್ವೇ ಇಲಾಖೆಗೆ ಈಗಾಗ್ಲೇ ಸಾವಿರದಿನ್ನೂರು ದಾನ ಮಾಡಿದೀವಿ(ತತ್ಕಾಲಿನ ಮೂರು ಟಿಕೇಟ್ ಮಿಸ್ ಮಾಡ್ಕೊಂಡಿದ್ದು). ಈಗ ಬೇರೆ ರೈಲಿಗಾದ್ರೂ ಹೋಗ್ತಿವಿ. ಬಿಟ್ಬಿಡಪ್ಪ ಅಂತ. ಆದ್ರೆ ಜನರಲ್ ಬೋಗಿಯಲ್ಲಿದ್ದ ನಮ್ಮನ್ನ ಕೇಳೋಕೆ ಯಾವ ಟಿ.ಟಿಯೂ ಬಂದಿರಲಿಲ್ಲ. ಅಂತೂ ಮೆಜೆಸ್ಟಿಕ್ ತಲುಪಿ ಅಲ್ಲಿನ ವಿಚಾರಣೆ ಕೌಂಟರಲ್ಲಿ ಕೇಳಿದ್ರೆ ಮುಂದಿನ ರೈಲು ಏಳೂವರೆಗೆ ಅನ್ನಬೇಕಾ ? ಸರಿ. ಇನ್ನು ಬಸ್ಸೇ ಗತಿಯಂತ ಮೆಜೆಸ್ಟಿಕ್ಕಿನ ಆಂಧ್ರ ಬಸ್ಸುಗಳ ನಿಲ್ದಾಣಕ್ಕೆ ಬಂದ್ವಿ.

ಬಸ್ಸುಗಳೇ ಬೇಗ ಗುರು:
ಅಲ್ಲಿದ್ದ ಅನಂತಪುರ ಬಸ್ಸವ್ರತ್ರ ಕೇಳಿದ್ರೆ ನಾವು ನಾಲ್ಕೂವರೆಗೆ ಅನಂತಪುರ ತಲುಪುತ್ತೀವಿ ಅಂತಂದ್ರು. ಹತ್ತೂಮುಕ್ಕಾಲಿಗೆ ಹೊರಟ ರೈಲು ೫ಕ್ಕೆ ಅನಂತಪುರ ತಲುಪುತ್ತಿತ್ತು ! ಹಾಗಾಗಿ ಅನಂತಪುರದಲ್ಲಿ ಅವ್ರನ್ನ ಹಿಡಿಯೋದು ಅಂತಂದ್ಕಂಡು ತಲಾ ೨೨೦ ಕೊಟ್ಟು ಆ ಬಸ್ಸಿಗೆ ಹತ್ತಿದ್ವಿ. ಹನ್ನೆರಡೂ ಇಪ್ಪತ್ತಕ್ಕೆ ಹೊರಟ ನಮ್ಮ ಬಸ್ಸವ ಅನಂತಪುರ ತಲುಪೋ ಹೊತ್ತಿಗೆ ೪:೧೦. ಅಲ್ಲಿಂದ ತಡಪತ್ರಿಗೆ ಹೋಗೋ ಬಸ್ಸುಗಳು ಆಗಲೇ ಶುರುವಾಗಿದ್ವು. ಅಲ್ಲಿನ ವಿಚಾರಣೆಯಲ್ಲಿ ಕೇಳಿದ್ರೆ ಗುತ್ತಿಗೆ ಹೋದ್ರೂ ಅಲ್ಲಿಂದ ಗಂಧಿಕೋಟಕ್ಕೆ ಹೋಗೋಕೆ ತಡಪತ್ರಿಗೇ ಬರ್ಬೇಕು. ಹಾಗಾಗಿ ನಿಮ್ಮ ಗೆಳೆಯರನ್ನ ಇಲ್ಲೇ ಇಳ್ಕೊಳ್ಳೋಕೆ ಹೇಳಿ ಅಂದ್ರು. ಗುತ್ತಿಗೆ ಹೋಗೋ ಹೊತ್ತಿಗೆ ಐದೂವರೆ ಐದೂಮುಕ್ಕಾಲಾಗ್ತಿತ್ತು. ಅಲ್ಲಿಂದ ಅವ್ರು ತಡಪತ್ರಿಗೆ ಸುತ್ತಾಕ್ಕೊಂಡು ಬರೋ ಬದ್ಲು ಇಲ್ಲಿಂದ ಹೋಗೋದೇ ಉತ್ತಮ ಅಂದ್ಕೊಂಡು ರೈಲಲ್ಲಿದ್ದವ್ರಿಗೆ ಫೋನ್ ಮಾಡಿ ಅನಂತಪುರದಲ್ಲೇ ಇಳ್ಕೊಳ್ಳೋಕೆ ಹೇಳಿದ್ವಿ. ಅವ್ರು ಬರೋ ತನಕ ಅನಂತಪುರದ ಬಸ್ಟಾಂಡಲ್ಲಿದ್ದ ಶೌಚಗೃಹದಲ್ಲೇ ನಿತ್ಯಕರ್ಮಗಳನ್ನ ಮುಗಿಸಿ ರೈಲಲ್ಲಿ ಬರೋರ ಹಾದಿ ಕಾಯ್ತಾ ಕೂತಿದ್ವಿ. ಇಲ್ಲಿನ ಶೌಚಗೃಹಗಳಿಗೆ ಸ್ನಾನಗೃಹಗಳಂತ ಹೆಸ್ರಿಟ್ಟಿದ್ದಾರೆ. ಒಂದ್ರಲ್ಲೇ ಸ್ನಾನ, ಶೌಚಗಳನ್ನ ಮುಗಿಸೋದು ಕಷ್ಟದ ಕೆಲಸವಾದ್ರೂ ಅಲ್ಲಿನ ಜನ ಅದಕ್ಕೆ ಒಗ್ಗಿಕೊಂಡಿದಾರೆ ! ಬೆಂಗಳೂರಿನ ಯಾತ್ರಿ ನಿವಾಸಗಳ ರೇಂಜಿಗೆ ಇಲ್ಲದಿದ್ರೂ , ಕೆಲಸ ಸಾಧ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಹೊಲಸಾಗೂ ಇಲ್ಲ. ಬೆಳಗ್ಗಿನ ಅರ್ಜೆಂಟಿಗೆ ಸಾಕಾಗುವಂತಿದೆಯಷ್ಟೆ ! ರೈಲಲ್ಲಿಳಿದ ಅವ್ರು ಅಂತೂ ಇಂತೂ ಬರೋ ಹೊತ್ತಿಗೆ ೫:೧೫. ೫:೩೫ ರ ತಡಪತ್ರಿಯ ಬಸ್ಸು ಹತ್ತಿದೆವು. ಮುಂದಿನ ಸಲ ಗಂಧಿಕೋಟಕ್ಕೆ ಹೋಗೋರಿಗೆ ಹೇಳೋ ಮಾತಂದ್ರೆ ರೈಲಿನ ಬದ್ಲು ಬಸ್ಸಲ್ಲಿ ಹೋಗಿ. ರೈಲಲ್ಲಿ ಹೋದ್ರೂ ಅನಂತಪುರದಲ್ಲಿ ಇಳ್ಕೊಳ್ಳಿ.(ರೈಲು ೨೭೫, ಬಸ್ಸು ೨೨೦). ಅನಂತಪುರದಿಂದ ತಡಪತ್ರಿಗೆ ಮೂರು ಮುಕ್ಕಾಲು ನಾಲ್ಕರ ಹೊತ್ತಿಗೆ ಬಸ್ಸುಗಳು ಶುರುವಾಗುತ್ತೆ. ಪ್ರತೀ ಹದಿನೈದು ನಿಮಿಷಕ್ಕೊಂದರಂತೆ ಅಲ್ಲಿಯ ಬಸ್ಸುಗಳಿವೆ.

ತಡಪತ್ರಿಯ ಭುವನೇಶ್ವರಿ:
ತಡಪತ್ರಿಗೆ ಅನಂತಪುರದಿಂದ ೬೦ ಕಿ.ಮೀಗಳ ದೂರವಾದ್ರೂ ತಲುಪೋಕೆ ಒಂದೂವರೆ ಘಂಟೆ ತಗೊಳ್ಳೋ ಬಸ್ಸುಗಳು ನಮ್ಮನ್ನ ೭:೧೦ಕ್ಕೆ ತಡಪತ್ರಿಗೆ ತಲುಪಿಸಿದ್ವು. ಅಲ್ಲಿಂದ ಗಂಧಿಕೋಟಕ್ಕೆ ಹೋಗೋಕೆ ೬೮ ಕಿ.ಮೀ ದೂರವಿರೋ ಜಮ್ಮಲಮಡುಗು ತಲುಪಬೇಕು.ಅಲ್ಲಿಗೆ ಮೊದಲ ಬಸ್ಸಿರೋದೆ ೭:೩೦ ಕ್ಕೆ ಅಂದ್ರು. ಸರಿ ಅಂತ ಬಸ್ಟಾಂಡಲ್ಲೇ ಇದ್ದ ಭುವನೇಶ್ವರಿ ರೆಸ್ಟೋರೆಂಟಿಗೆ ಹೋದ್ವಿ. ಅಲ್ಲಿ ಒಂದು ಚಾಕ್ಕೆ ಐದು ರೂ, ಪ್ಲೇಟಿಡ್ಲಿಗೆ ೨೦ ರೂ ಕೊಟ್ಟು ತಿಂದು ೭:೩೦ ರ ಬಸ್ಸು ಹತ್ತಿದ್ವಿ. ತಡಪತ್ರಿಯಲ್ಲಿ ಪುರಾತನ ಕಾಲದ ದೇವಾಲಯವೊಂದಿದೆಯಂತೆ. ನಮಗೆ ನೋಡಲಾಗದಿದ್ದರೂ ಅಲ್ಲಿಗೆ ಬರುವವರು ಸಮಯವಿದ್ರೆ ನೋಡಬಹುದು. ಇಲ್ಲಿನ ಇನ್ನೊಂದು ವಿಶೇಷವೆಂದ್ರೆ ಸಿಮೆಂಟ್ ಫ್ಯಾಕ್ಟರಿಗಳು ಮತ್ತು ಕಡಪ ಕಲ್ಲಿನ ಕ್ವಾರಿಗಳು. ಇಲ್ಲಿಂದ ಜಮ್ಮಲಮಡುಗುಗೆ ಹೋಗ್ತಾ ಯಾವ ಮನೆ ನೋಡಿದ್ರೂ ಅದನ್ನ ಕಡಪ ಕಲ್ಲಿಂದ್ಲೇ ಕಟ್ಟಿದ್ದನ್ನ ಕಾಣಬಹುದು . ನಮ್ಮಲ್ಲಿ ಸುಟ್ಟಿಟ್ಟಿಗೆ, ಜಂಬಿಟ್ಟಗೆ ಬಳಸಿದಂತೆ ಕಡಪ ಕಲ್ಲುಗಳನ್ನೇ ಬಳಸಿ ಕಟ್ಟಿದ ಮನೆಗಳನ್ನ ನೋಡೋರಿಗೆ ಮೊದಲ ಬಾರಿ ವಿಚಿತ್ರವೆನಿಸಿದ್ರೆ ಆಶ್ಚರ್ಯವಿಲ್ಲ. ಮನೆ ಗೋಡೆ, ಅಂಗಳ,ಕೂತ್ಕೊಳ್ಳೋ ಕಟ್ಟೆ, ದೇವಸ್ಥಾನದ ಗೋಡೆ ಹೋಗ್ಲಿ, ಕಲ್ಲು ಕ್ವಾರಿಗಳ ಪ್ರವೇಶದ ಬೇಲಿಗಳಿಗೂ ಕಡಪ ಕಲ್ಲುಗಳನ್ನು ನೀಟಾಗಿ ಪೇರಿಸಿದ ಗೋಡೆ ಹಾಕಿದ್ದಾರೆ !೨೦೧೦ರಲ್ಲಿ ಇಲ್ಲಿಗೆ ಬಂದ ಮಾಧವ ಹೇಳ್ತಿದ್ದ. ಸಿಮೆಂಟ್ ಫ್ಯಾಕ್ಟರಿಗಳು ಧಾರಾಳವಾಗಿದ್ದ ಇಲ್ಲಿ ಮುಂಚೆ ಮರಳನ್ನು ಲಾರೀಲಿ ಹೊತ್ಕೊಂಡು ಹೋದಂಗೆ ಸಿಮೆಂಟ್ ಹೊತ್ಕೊಂಡು ಹೋಗ್ತಿದ್ರಂತೆ. ಈಗ ಪರಿಸ್ತಿತಿ ಬದಲಾಗಿರಬಹುದಾದ್ರೂ ಇಲ್ಲಿನ ಬಹುತೇಕ ರಸ್ತೆಗಳು ಸಿಮೆಂಟ್ ರಸ್ತೆಗಳು ! 

ಜಮ್ಮಲಮಡುಗುವಿನಿಂದ ಗಂಧಿಕೋಟಕ್ಕೆ:

ಒಂಭತ್ತಕ್ಕೆ ಗಂಧಿಕೋಟಕ್ಕೆ ಬರ್ಬೇಕಾಗಿದ್ದ ಬಸ್ಸು ತಡವಾಗಿ ೯:೪೫ ಕ್ಕೆ ಬಂತು ! ಅಷ್ಟರಲ್ಲಿ ರೈಲಲ್ಲಿ ಬಂದರ್ವಿಗೆ ನೈಸರ್ಗಿಕ ಕರೆಗೆ ಅರ್ಜೆಂಟಾಗಿತ್ತು. ಸರಿಯಂತ ಜಮ್ಮಲಮಡುಗುವಿನ ಬಸ್ಟಾಂಡಿನ ಪಕ್ಕದಲ್ಲೇ ಇರೋ ಶೌಚಗೃಹದ ವಿಸಿಟ್ಟೂ ಆಯ್ತು. ಅಲ್ಲಿನ ಬಸ್ಟಾಂಡಲ್ಲಿ ಗಂಧಿಕೋಟಕ್ಕೆ ಎಷ್ಟೊತ್ತಿಗಪ್ಪಾ ಬಸ್ಸು ಅಂದ್ರೆ ಮೊದಲ ಬಸ್ಸಿದ್ದಿದ್ದು ೯:೩೦ ಕ್ಕೆ. ಅದು ಹೋಗಾಯ್ತು. ಮುಂದಿನ ಬಸ್ಸಿರೋದು ೨:೩೦ ಗೆ ಅನ್ನಬೇಕಾ ? ! ಅಲ್ಲಿಂದ ಗಂಧಿಕೋಟಕ್ಕೆ ೧೪ ಕಿ.ಮೀಗಳ ದಾರಿ. ಶೇರ್ ಆಟೋಗಳನ್ನ ತಗೊಂಡು ಹೋಗಿ ಅಂತ ಬ್ಲಾಗುಗಳಲ್ಲಿ ಬರೆದಿತ್ತು. ಬಸ್ಟಾಂಡಲ್ಲಿದ್ದ ಮಾಹಿತಿ ಕೊಡೋರೋ ಅದೇ ಹೇಳಿದ್ರಿಂದ ಅಲ್ಲಿಂದ ಬಲಭಾಗದಲ್ಲಿ ಮುಂದೆ ಹೋಗಿ. ಅಲ್ಲಿದ್ದ ಸರ್ಕಲ್ಲಿನ ಆಟೋಗಳಲ್ಲಿ ಒಂದು ಆಟೋವನ್ನ ೧೫೦ ರೂಗೆ ಡೀಲ್ ಮಾಡಿದ್ವಿ. ಆ ಕಡೆ ಹೋಗ್ತಿದ್ದ ಆಟೋಗಳೇ ಸಿಕ್ಕಿದ್ರೆ ತಲಾ ಹದಿನೈದು ರೂ ಅಷ್ಟೆ. ಆದ್ರೆ ಆಟೋದಲ್ಲಿ ಜನ ತುಂಬೋದನ್ನ ಕಾಯ್ತಾ ಕೂರೋಕೆ ಟೈಮಿರದ ನಾವು ೧೭೦ ಕೇಳ್ತಿದ್ದವನನ್ನು ೧೫೦ಕ್ಕೆ ಒಪ್ಪಿಸಿ ಹೊರಟ್ವಿ. ೧೦ಕ್ಕೆ ಜಮ್ಮಲಮಡುಗುವಿನಿಂದ ಹೊರಟಿದ್ದ ನಾವು ಆ ಆಟೋದಲ್ಲಿ ತೂರಾಡ್ಕೊಂಡು ಗಂಧಿಕೋಟ ತಲುಪೋ ಹೊತ್ತಿಗೆ ೧೦:೨೫ ಆಗಿತ್ತು. ಇಲ್ಲಿ ಪ್ರವೇಶದ್ವಾರ ಅಂತೇನು ಇಲ್ಲ. ಹಾಗಾಗಿ ಬೆಳಗ್ಗೆ ಬೇಗ ಬಂದ್ರೆ ತೆಗದಿರಲ್ಲ,ಸಂಜೆ ಲೇಟಾದ್ರೆ ಬಾಗಿಲು ಹಾಕುತ್ತೆ ಅನ್ನೋ ತಲೆನೋವುಗಳೆಲ್ಲ ಇಲ್ಲ. ಹಾಗಾಗಿ ಸ್ವಂತ ವಾಹನದಲ್ಲಿ ಬರೋರಿದ್ರೆ ಇಲ್ಲಿಗೆ ಬೇಗನೇ ಬಂದು ನೋಡಿಕೊಂಡು ಮುಂದಿನ ಜಾಗ ನೋಡ್ಬೋದು. ಇಲ್ಲ, ಬೇಲಂ ಬಿಲ ಮುಂತಾದ ಜಾಗ ನೋಡ್ಕೊಂಡು ಮಧ್ಯಾಹ್ನದ ಹೊತ್ತಿಗೆ ಬಂದು ಸಂಜೆಯವರೆಗೂ ಇಲ್ಲಿ ನೋಡ್ಬೋದು. ಸಂಜೆಯೇನು, ರಾತ್ರಿಯಾದ್ರೂ ಇಲ್ಲಿ ಕೇಳೋರಿಲ್ಲ ! ಇದೊಂದು ಕೋಟೆಯೊಳಗಿನ ಊರು. ಊರಿಗಿಂತ ಸ್ವಲ್ಪ ಮುಂಚೆ ಆಂಧ್ರ ಪ್ರವಾಸೋದ್ಯಮ ಇಲಾಖೆಯ ಹರಿತಾ ಹೋಟೇಲ್ ಮತ್ತು ಲಾಡ್ಜುಗಳಿವೆ. ಅಂತರ್ಜಾಲದಲ್ಲಿ ಬುಕ್ ಮಾಡಬೇಕಾದ ಈ ಹೋಟೆಲ್ ಎಷ್ಟು ಹೆರೆತ ಅಂತ ಗೊತ್ತಿಲ್ಲ :-)

ಗಂಧಿಕೋಟದ ಇತಿಹಾಸ:
Entrance of Gandhikota
ಗಂಧಿಕೋಟವನ್ನು ೧೩ನೇ ಶತಮಾನದಲ್ಲಿ ಕಟ್ಟಲಾಯಿತು ಅನ್ನುತ್ತೆ ಇಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಬೋರ್ಡು. ಆದ್ರೆ ಇದನ್ನು ೧೧೨೩ರಲ್ಲಿ ಸಮೀಪದ ಬೊಮ್ಮನಪಲ್ಲೆ ಗ್ರಾಮದ ಕಪ್ಪರಾಜ ಅನ್ನುವವನು ಕಟ್ಟಿದನು ಎಂದು ಡಬ್ಲ್ಯು ಫ್ರಾನ್ಸಿಸ್ ಅವರು  Gazetteer of South India, Vol. 2; Mittal Publications, New Delhi, 1988, p. 394 ರಲ್ಲಿ ಬರೆಯುತ್ತಾರೆ. ಈತ ಪಶ್ಚಿಮದ ಚಾಲುಕ್ಯ ರಾಜ ಅಹವಮಲ್ಲ ಸೋಮೇಶ್ವರನ ಅಧೀನನಾಗಿದ್ದ. ಎರಮ್ಮಲ ಪರ್ವತ ಶ್ರೇಣಿಯ ಬೆಟ್ಟಗಳ ನಡುವೆ ನೇಗಿಲಿನಿಂದ ಉತ್ತಂತಿರುವ ರಚನೆಯ ಈ ಭಾಗದಲ್ಲಿರುವ ಕಾರಣ ಈ ಕೋಟೆಗೆ ಗಂಧಿಕೋಟ ಎಂದು ಹೆಸರು. ಆ ರಚನೆ(George ಗೆ ತೆಲುಗಿನ ಹೆಸರು ಗಂಧಿ). ಅಲ್ಲೇ ಪೆನ್ನಾರ್ ನದಿ ಹರಿಯುತ್ತದೆ. ಗಂಧಿಕೋಟ ದಕ್ಷಿಣ ಭಾರತದಲ್ಲಿನ ಅತ್ಯಂತ ದುರ್ಬೇಧ್ಯ ಕೋಟೆಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ. ಅದಕ್ಕೇ ಇದನ್ನು Great Canyon of India ಅಂತಲೂ ಕರೆಯಲಾಗುತ್ತೆ.  ಕೋಟೆ ಕಟ್ಟಿದ ಕೆಲವರ್ಷಗಳ ನಂತರ ಅದು ಭಾರದ್ವಾಜ ಗೋತ್ರದ ಮಿಕ್ಕಿಲೇನಿ ರಾಜವಂಶದವರ ಆಳ್ವಿಕೆಗೆ ಒಳಪಟ್ಟಿತು.ಕಮ್ಮ ರಾಜವಂಶಕ್ಕೆ ಸೇರಿದ ಈ ರಾಜರು ಸೂರ್ಯ, ಚಂದ್ರ,ಹೈಹಯ ವಂಶಗಳಲ್ಲಿ ಬರುತ್ತಾರೆ. ಇವರ ಕ್ಷಾತ್ರದ ಬಗ್ಗೆ ಹಲವಾರು ದಂತಕತೆಗಳಿವೆ. ಇವರು ಒಂದೇ ಕತ್ತಿಯ ಏಟಿನಿಂದ ಕುದುರೆಯ ಮೇಲೆ ಕೂತಿರುವವನ ತಲೆ ಮತ್ತು ಕುದುರೆಯ ತಲೆಯನ್ನೂ ಕಡಿಯಬಲ್ಲಷ್ಟು ಶಕ್ತಿ ಶಾಲಿಗಳಾಗಿದ್ದರು ಎನ್ನುತ್ತೆ ಅಂತದ್ದೊಂದು ದಂತಕತೆ ! ತೆಲುಗು ಫಿಲ್ಮುಗಳಲ್ಲಿ ಕಾರು, ಜೀಪುಗಳು ಹಾರಾಡೋ ದೃಶ್ಯಗಳು  ನೆನಪಾಯ್ತಾ ? ನೆನಪಾದ್ರೆ ತಪ್ಪೇನಿಲ್ಲ ಬಿಡಿ :-) 

೧೩೫೦ರಲ್ಲಿ ಇದನ್ನು ಆಳುತ್ತಿದ್ದ ಮಿಕ್ಕಿಲೇನಿ ರಾಮನಾಯ್ಡು ಎನ್ನುವ ರಾಜನಿಗೆ ಗಂಡು ಮಕ್ಕಳಿರಲಿಲ್ಲ. ಹಾಗಾಗಿ ಅವನ ಮಗಳನ್ನು ಕಮ್ಮ ಕುಲದ ಇನ್ನೊಂದು ರಾಜವಂಶದ ಪೆಮ್ಮಸಾನಿ ಕುಮಾರ ತಿಮ್ಮನಾಯ್ಡುಗೆ ವಿವಾಹ ಮಾಡಿಕೊಡುವ ಮೂಲಕ ಈ ಕೋಟೆ ಪೆಮ್ಮಸಾನಿ ರಾಜರ ಅಧೀನಕ್ಕೆ ಬಂತು.ಕೋಟೆ ಇನ್ನಷ್ಟು ಸದೃಢಗೊಂಡಿದ್ದು ಕುಮಾರ ತಿಮ್ಮನಾಯ್ಡುವಿನ ಕಾಲದಲ್ಲೇ.ಕಾಕತೀಯ ರಾಜರಿಗೆ ವಿದೇಯರಾಗಿದ್ದ ಪೆಮ್ಮಸಾನಿ ನಾಯಕರ ವಶಕ್ಕೆ ಬರುವ ಈ ಕೋಟೆ ಸುಮಾರು ೩೦೦ ವರ್ಷಗಳ ಕಾಲ ಅವರ ಆಡಳಿತಕ್ಕೆ ಒಳಪಡುತ್ತದೆ ಎನ್ನುತ್ತೆ ಇತಿಹಾಸ. ೧೩೭೦ರಲ್ಲಿ ಕಮ್ಮ ರಾಜವಂಶದ ಮತ್ತೊಂದು ರಾಜಮನೆತನ ಮುಸುನೂರಿ ರಾಜವಂಶಸ್ತರು ಬಹುಮನಿ ಸುಲ್ತಾನರಿಗೆ ಸೋತಾಗ ಪೆಮ್ಮಸಾನಿ ನಾಯಕರು ಬಹುಮನಿಯ ವಿರೋಧಿಗಳಾಗಿದ್ದ ವಿಜಯನಗರದ ಸಾಮಂತರಾಗುತ್ತಾರೆ.  ಈ ಕೋಟೆಯಿದ್ದ ಜಾಗ ಮತ್ತು ಇದರ ರಕ್ಷಣಾ ವ್ಯವಸ್ಥೆ ಇದು ಅನೇಕ ರಾಜರನ್ನು ತನ್ನತ್ತ ಆಕರ್ಷಿಸುತ್ತಿತ್ತು ಎನ್ನಲಾಗುತ್ತದೆ. ಕಮ್ಮ ರಾಜವಂಶಸ್ಥರ ಮೂಲಕ ಕಾಕತೀಯ,ವಿಜಯನಗರ ಕಾಲದ ದೇಗುಲಗಳು(ವಿಜಯನಗರದ ಹರಿಹರರಾಜ ನಿರ್ಮಿಸಿದ ದೇಗುಲ) ಮತ್ತು ನಂತರದ ಕುತುಬ್ ಶಾಹಿಗಳ ಕಾಲದಲ್ಲಿ ನಿರ್ಮಾಣವಾದ ಮಸೀದಿ, ಮದರಸಗಳನ್ನು ಇಲ್ಲಿ  ಕಾಣಬಹುದು. ೧೬೫೨ರಲ್ಲಿ ಗಂಧಿಕೋಟಕ್ಕೆ ಭೇಟಿಯಿತ್ತ ಜೀನ್ ಬ್ಯಾಪ್ಟೈಸ್ ಟ್ರಾವೆನೀರ್ ಇದನ್ನು ಎರಡನೆಯ ಹಂಪಿಯೆಂದು ಕರೆಯುತ್ತಾನೆ ಎಂಬ ಉಲ್ಲೇಖಗಳಿವೆ.  ಟ್ರಾವೇನೀರ್ ಗಂಧಿಕೋಟಕ್ಕೆ ಬಂದುದರ ಹಿಂದೆ ಮತ್ತೊಂದು ಕತೆಯಿದೆ.

೧೬೫೨ರಲ್ಲಿ ಗೋಲ್ಕೊಂಡದ ಸುಲ್ತಾನರು ಗಂಧಿಕೋಟವನ್ನು ಗೆದ್ದುಕೊಂಡು ಪೆಮ್ಮಸಾನಿ ನಾಯಕರಿಂದ ಇದನ್ನು ತಮ್ಮ ವಶಕ್ಕೆ ಪಡೆದುಕೊಂಡಿರುತ್ತಾರೆ. ಆ ಸಮಯದಲ್ಲಿ ಗೋಲ್ಕೊಂಡಕ್ಕೆ ಬರುವ ಫ್ರೆಂಚ್ ವಜ್ರದ ವ್ಯಾಪಾರಿ ಟ್ರಾವೆನೀರ್ ಗೋಲ್ಕೊಂಡ ಸುಲ್ತಾನನ ಮಂತ್ರಿ ಮೀರ್ ಜುಮ್ಲಾನನ್ನು ಭೇಟಿಯಾಗುತ್ತಾನೆ. ಈ ಗೋಲ್ಕೊಂಡ ಸುಲ್ತಾನರ ಕಾಲದಲ್ಲೇ ಇಲ್ಲಿರುವ ದೇವಸ್ಥಾನಗಳಿಗೆ ಹಾನಿ ಮತ್ತು ಹೊಸ ಮಸೀದಿ, ಮದರಸಾಗಳ ರಚನೆಯಾಗಿರುವ ಅಂದಾಜಿದೆ. ಅವನ ಬಳಿ ಕೆಲವು ದಿನಗಳ ಹಿಂದೆಯಷ್ಟೇ ಗೆದ್ದುಕೊಂಡ ಗಂಧಿಕೋಟದ ಬಗ್ಗೆ ತಿಳಿದ ಆತ ಗಂಧಿಕೋಟಕ್ಕೆ ಬರುತ್ತಾನೆ. ಇದೇ ಟ್ರಾವೆನೀರ್ ಗೋಲ್ಕೊಂಡದ ಕೊಲ್ಲೂರ್ ಗಣಿಯಿಂದ ೧೧೨ ಕ್ಯಾರೇಟ್ ನೀಲಿ ವಜ್ರವೊಂದನ್ನು ಖರೀದಿಸಿ ಅದನ್ನು ಫ್ರೆಂಚ್ ರಾಜ ೧೪ನೇ ಕಿಂಗ್ ಲೂಯಿಸ್ಗೆ ಮಾರುತ್ತಾನೆ. ಆ ವಜ್ರವನ್ನು Le Bleu de France ಫ್ರಾನ್ಸಿನ ನೀಲಿ ಮತ್ತು Hope Diamond ಎಂಬ ಹೆಸರುಗಳಿಂದ ಫ್ರಾನ್ಸಿನ ರಾಜಮುಕುಟವನ್ನು ಅಲಂಕರಿಸುತ್ತದೆ. ಎಲ್ಲಿಯ ಗೋಲ್ಕೊಂಡ, ಎಲ್ಲಿಯ ಫ್ರಾನ್ಸು, ಎಲ್ಲಿಯ ಗಂಧಿಕೋಟ ! ಎಲ್ಲಿಂದೆಲ್ಲಿಯ ಸಂಬಂಧವಯ್ಯಾ ! :-)

ಗಂಧಿಕೋಟದಲ್ಲಿ ಏನೇನಿದೆ ?
ಇನ್ನು ಇತಿಹಾಸದಿಂದ ವಾಸ್ತವಕ್ಕೆ ಬಂದು ಗಂಧಿಕೋಟದಲ್ಲಿ ಮುಖ್ಯವಾಗಿ ನೋಡಬೇಕಾದ ಜಾಗಗಳೇನಿದ್ಯಪ್ಪ ಅಂದ್ರೆ ಕೆಳಗಿನವನ್ನು ಪಟ್ಟಿ ಮಾಡಬಹುದು.
೧. ಕೋಟೆಯ ಪ್ರವೇಶದ್ವಾರ
೨. ಚಾರ್ ಮಿನಾರ್
೩. ಜೈಲು
೪.ಮಾಧವರಾಯ ದೇವಸ್ಥಾನ,ಬಾವಿಗಳು
೫.Great canon
೬.ಉಗ್ರಾಣ ೧
೭. ಕೋಟೆಯ ಗೋಡೆಗಳು
೮. ಜುಮ್ಮಾ ಮಸೀದಿ
೯. ಕೆರೆ
೧೦. ಉಗ್ರಾಣ ೨
೧೧. ರಂಗನಾಥ ಸ್ವಾಮಿ ದೇವಸ್ಥಾನ
೧೨. ಮುರಿದು ಬಿದ್ದ ಮದರಸ, ಮಸೀದಿಗಳು
೧೩. ಪೆನ್ನಾರ್ ನದಿ/River Gorges

ಕೋಟೆಯ ಮುಖ್ಯ ಪ್ರವೇಶದ್ವಾರದಿಂದ ಒಳಹೊಕ್ಕ ನಾವು ಮೇಲಿನಂತೆ ಒಂದೊಂದೇ ಜಾಗಗಳನ್ನು ನೋಡುತ್ತಾ ಬಂದೆವು. ಅದರಲ್ಲಿ ಮಾಧವರಾಯ ದೇಗುಲದ ಶಿಲ್ಪಕಲೆ ಮನಸೆಳೆಯುವಂತಿದೆ. ಪ್ರತಿಯೊಂದ್ರಲ್ಲೂ ಏನೇನಿದೆ ಎಂಬುದನ್ನು ಚಿತ್ರಗಳೊಂದಿಗೆ ನೋಡೋಣ

ಪ್ರವೇಶದ್ವಾರ, ಚಾರ್ ಮಿನಾರ್, ಜೈಲು
Entrance of Gandhikota Fort

ನಲವತ್ತು ಅಡಿಗಳಷ್ಟು ಎತ್ತರದ ಪ್ರವೇಶದ್ವಾರ ಇಲ್ಲಿನ ವಿಶೇಷ. ಸಾಮಾನ್ಯವಾಗಿ ಕೋಟೆಗಳಂದ್ರೆ ಗುಡ್ಡದ ಮೇಲಿರೋದ್ರಿಂದ ಪ್ರವೇಶದ್ವಾರದೊಳಗೆ ನಡ್ಕೊಂಡು ಹೋಗಬೇಕಿರುತ್ತೆ. ಆದ್ರೆ ಇದ್ರೊಳಗೆ ಊರಿದ್ದು , ಪ್ರವೇಶದ್ವಾರವನ್ನು ಹಾಸಿ ಊರಿಗೆ ಹೋಗೋ ರಸ್ತೆಯಿರೋದ್ರಿಂದ ಇದ್ರೊಳಗೆ ಗಾಡಿಯಲ್ಲಿ ಹೋಗಬಹುದು !



ಅದನ್ನು ದಾಟಿ ಒಳಗೆ ಹೋಗ್ತಿದ್ದ ಹಾಗೆ ಶಾಲೆಯೊಂದು ಸಿಗುತ್ತೆ. ಅದ್ರ ಪಕ್ಕದಲ್ಲಿರೋದೇ ಚಾರ್ ಮಿನಾರ್. ಅದನ್ನು ದಾಟಿ ಮುಂದೆ ಹೋಗ್ತಿದ್ದ ಹಾಗೆ ಸಿಗೋದು ಜೈಲು. ಈ ಜೈಲಲ್ಲಿ ಕೆಳಗಿಳಿಯೋ ಮೆಟ್ಟಿಲುಗಳು, ಆ ಕಾಲದಲ್ಲಿ ರಾತ್ರೆ ಪಂಜುಗಳನ್ನಿಡುತ್ತಿದ್ದ ಜಾಗಗಳು, ವಿಶಾಲ ಕಮಾನುಗಳನ್ನು ನೋಡಬಹುದು. ಇದರ ಹಿಂದಿನಿಂದ ಕೋಟೆಯ ದೃಶ್ಯಗಳೂ ಕಾಣುತ್ತದೆ. ಅಲ್ಲಿಂದ ಮುಂದೆ ಬಂದರೆ ಮಾಧವರಾಯ ಸ್ವಾಮಿ ದೇವಸ್ಥಾನಕ್ಕೆ ದಾರಿಯೆಂಬ ಬೋರ್ಡ್ ಎಡಕ್ಕೆ ಸಿಗುತ್ತೆ. ಅದರಲ್ಲಿ ಸಾಗಿದರೆ ಸಿಗೋದೇ ಮಾಧವರಾಯ ಸ್ವಾಮಿ ದೇಗುಲ.
CharMinar of Gandhikota
Gandhikota Jail
ಮಾಧವರಾಯ ಸ್ವಾಮಿ ದೇಗುಲ:
Madhavaraya swami temple

ಇಲ್ಲಿ ಸುಬ್ಬು ಹೇಳ್ತಿದ್ದಂಗೆ ವಿಜಯನಗರ ಶೈಲಿಯ ಶಿಲ್ಪಗಳಿವೆ. ಇಲ್ಲಿನ ಎರಡು ಪ್ರವೇಶದ್ವಾರಗಳಲ್ಲಿ ಮೊದಲನೇ ಪ್ರವೇಶದ್ವಾರದಲ್ಲಿ ತಲೆಯೆತ್ತಿ ನೋಡೋದನ್ನ ಮರೆಯದಿರಿ. ಯಾಕಂದ್ರೆ ಅಲ್ಲಿ ಮೀನು, ಮೊಸಳೆ ಮುಂತಾದ ಕೆತ್ತನೆಗಳಿವೆ. ಪ್ರವೇಶದ್ವಾರದಲ್ಲಿ ಶಿಲಾಬಾಲಿಕೆಯರು, ಪೌರಾಣಿಕ ಶಿಲ್ಪಗಳು ಸ್ವಾಗತ ಕೋರೋದು ಸಾಮಾನ್ಯ. ಆದ್ರೆ ಇಲ್ಲಿನ ತೊಲೆಯೂ ಕಲಾಪೂರ್ಣವಾಗಿದೆ. ಇಲ್ಲಿನ ವೀರಯೋಧರ ಶಿಲ್ಪಗಳ ಜೊತೆ ಮೀನು, ರಾಮಾಯಣದ ಉಬ್ಬುಶಿಲ್ಪ, ಆನೆ ಎತ್ತುಗಳ ಜೋಡಿ ಶಿಲ್ಪ ಮುಂತಾದ ವಿಶೇಷ ಶಿಲ್ಪಗಳಿವೆ. ಅವುಗಳ ಬಗ್ಗೆ ಹೇಳೋದಕ್ಕಿಂದ ಅವುಗಳ ಚಿತ್ರ ಹಾಕೋದೇ ಮೇಲೆನಿಸುತ್ತೆ.
Madhavaraya temple

Carvings at the Ceilings of the temple





ಅದನ್ನು ನೋಡಿ ಮುಂಚೆ ಬಂದ ದಾರಿಗೇ ಬಂದರೆ ಗ್ರೇಟ್ ಕೆನಾನ್ ಗೆ ದಾರಿ ಎಂಬ ಫಲಕ ಕಾಣುತ್ತೆ. ಅದನ್ನು ಅನುಸರಿಸಿ ಹೊರಟ್ರೆ ಒಂದೆರಡು ದೊಡ್ಡ ದೊಡ್ಡ ಬಾವಿಗಳು ಸಿಗುತ್ತೆ.
One of the Wells in the Gandhikota
 ಅದನ್ನು ದಾಟಿ ಸಾಗೋ ಹಾದಿಯಲ್ಲಿ ಮುಂದೆ ಸಾಗಿದ್ರೆ ಗಂಧಿಕೋಟದ ಒಂದಿಷ್ಟು ಹೊಲಗಳು ಕಾಣುತ್ತೆ. ಅಲ್ಲಿಯ ಕೋಟೆಯ ಮೇಲೆ ಓಡಾಡುತ್ತಿದ್ದ ಕೆಲವರನ್ನು ನೋಡಿ ನಾವೂ ಅತ್ತ ಸಾಗಿದೆವು. ಅಲ್ಲಿನ ಕೋಟೆಯ ಮೇಲೆ ಹತ್ತಿ ನಡೆಯೋದೊಂದು ಮಜವಾದ ಅನುಭವ. ಒಂದೆಡೆ ನಡೆಯೋ ಹಾದಿ ಕುಸಿದು ಕೊಂಚ ಎಚ್ಚರಿಕೆಯಿಂದ ಆಚೆ ದಾಟಬೇಕು ಅನ್ನುವುದನ್ನು ಬಿಟ್ಟರೆ ಉಳಿದೆಡೆಯೆಲ್ಲ ಏಳೆಂಟು ಅಡಿ ಅಗಲದ ಹಾದಿಯಿದೆ. ಆ ಕೋಟೆಯಾಚೆ ಎರಮ್ಮಲ ಪರ್ವತ ಶ್ರೇಣಿ. ಪರ್ವತ ಶ್ರೇಣಿಯನ್ನು ಕೋಟೆಯನ್ನು ವಿಭಾಗಿಸುವಂತಹ ಕೊರಕಲು ಕೋಟೆ ದಾಟುತ್ತಿದ್ದಂತೆ. ಅದರ ನಡುವೆ ಪೆನ್ನಾರ್ ನದಿ ಹರಿಯುತ್ತೆ.  ಅಲ್ಲೇ ಒಂದೆಡೆ ಕೋಟೆಯ ಬುಡಕ್ಕೆ ಸಾಗೋಕಿರೋ ದ್ವಾರವೂ ಕಾಣುತ್ತೆ.
Entrance to Reach the base of the Fort

View of Pennar river from First Granary
walking on the walls of Gandhikota Fort
ಎಡಕ್ಕೆ ನೋಡಿದ್ರೆ ಹಸಿರಾಗಿ ನಿಂತ ಪೆನ್ನಾರ್. ಕೆಲ ಭಾಗದ ನಂತರ ಅದು ಸಣ್ಣ ಕೊಳ್ಳವಾಗಿ ಹರಿಯುತ್ತೆ. ಕೆಲ ಕಡೆ ಅದು ಪೂರ್ಣವಾಗಿ ಒಣಗಿ ಅದರ ಪಾತ್ರವನ್ನು ಕೃಷಿಗೆ ಬಳಸುತ್ತಿರುವುದನ್ನೂ ಇಲ್ಲಿಂದ ಕಾಣಬಹುದು. ಅಲ್ಲೇ ಪಕದಲ್ಲೊಂದು ಉಗ್ರಾಣವಿದೆ. ಅದಕ್ಕೀಗ ಮೇಲಿಂದ ಕಲ್ಲು,ಮಣ್ಣುಗಳನ್ನು ತುಂಬಿ ಬಳಸಲಾಗದಂತೆ ಮಾಡಿದ್ದರೂ ಅದಕ್ಕಿರುವ ಮೆಟ್ಟಿಲುಗಳಿಂದ ಮೇಲೆ ಹತ್ತಿ ಮೇಲಿನ ದೃಶ್ಯವನ್ನು ಸವಿಯಬಹುದು. ಆದರೆ ಅದಕ್ಕಿರುವ ಮೆಟ್ಟಿಲುಗಳು ಕಡಿದಾಗಿದ್ದು, ಆಯತಪ್ಪಿದರೆ ಹಿಡಿದುಕೊಳ್ಳಲು ಯಾವ ಆಸರೆಯೂ ಇಲ್ಲದ್ದರಿಂದ ಅದನ್ನು ಹತ್ತೋದು ಕೊಂಚ ಅಪಾಯವೇ ಸರಿ ಅದರ ಪಕ್ಕದಲ್ಲೇ ಶಸ್ತ್ರಾಸ್ತ್ರಗಳ ಕೋಠಿಯಂತಹ ರಚನೆಯೂ ಇದೆ.

View of the First Granary and steps to ascend to its top
One more storage, probably for the arms
way to reach to the top of First Granary

Remains of the Mosque

Remains of the Madarasa
ಅದನ್ನು ನೋಡಿದ ನಾವು ರಂಗನಾಥ ಸ್ವಾಮಿಯನ್ನು ಹುಡುಕಿ ಮತ್ತೆ ಮಾಧವರಾಯ ದೇಗುಲದತ್ತ ಹೊರಳಿದೆವು.ಆದ್ರೆ ಎಡಬದಿಯಲ್ಲೊಂದು ಮಸೀದಿ ಕಂಡು ಅದರ ಪಕ್ಕದಲ್ಲೇ ರಂಗನಾಥ ಸ್ವಾಮಿಯ ದೇಗುಲವಿರಬಹುದೇನೋ ಅಂತ ಅತ್ತ ಸಾಗಿದೆವು. ಆದ್ರೆ ಅಲ್ಲಿ ಪಾಳುಬಿದ್ದ ಮಸೀದಿ ಬಿಟ್ಟರೆ ಬೇರೇನೂ ಇರಲಿಲ್ಲ. ಬಂದ ದಾರಿಯಲ್ಲೇ ವಾಪಾಸ್ಸಾಗೋ ಬದಲು ಅಲ್ಲಿದ್ದ ಕೋಟೆಯ ಗೋಡೆಗಳ ದಾಟುತ್ತಾ ರಂಗನಾಥನ ದೇಗುಲದತ್ತ ಸಾಗಿದೆವು. ಹಾದಿಯಲ್ಲಿ ಇನ್ನೊಂದು ಪಾಳುಬಿದ್ದ ಮದರಸಾ ಸಿಕ್ಕಿತು.











ಹಳೇ ಹನುಮನ ಗುಡಿ
ಅದನ್ನು ದಾಟಿ ಮಾಧವರಾಯ ದೇಗುಲದ ಹಿಂಭಾಗಕ್ಕೆ ಬಂದು ಸಾಗಿದೆವು. ಅಲ್ಲಿಂದ ಹೊರಹೊರಟ ನಾವು ಗ್ರಾಂಡ್ ಕೆನಾನ್ ಎಂಬ ಬೋರ್ಡಿದ್ದಲ್ಲಿಗೆ ತಲುಪೋ ಮೂಲಕ ಮಾಧವರಾಯ ದೇಗುಲದ ಒಂದು ಪ್ರದಕ್ಷಿಣೆ ಆಗಿತ್ತು ! ಅಲ್ಲಿಂದ ಎಡಕ್ಕೆ ನಾವು ಮುಂಚೆ ಬಂದ ಹಾದಿಯಲ್ಲೇ ಸಾಗುತ್ತಿದ್ದ ನಾವು ಸಿಕ್ಕ ಹನುಮನ ಗುಡಿಯನ್ನೂ ದರ್ಶಿಸಿ ಮುಂದೆ ಸಾಗಿದೆವು. 
Remains of the Old Hanuman temple


Jamia Maszid, Gandhikota
ಜಾಮಿಯಾ ಮಸೀದಿ ,ಉಗ್ರಾಣ ಮತ್ತು ಪೆರುಕೊಳಂ
ವಾಪಾಸ್ ಮಾಧವರಾಯ ದೇಗುಲಕ್ಕೆ ದಾರಿಯೆಂಬ ಬೋರ್ಡಿದ್ದಲ್ಲಿಗೆ ಬಂದು ಅಲ್ಲಿಂದ ಎಡಕ್ಕೆ ಸಾಗಿದ ನಮಗೆ ಮೊದಲು ಕಂಡಿದ್ದು ಜಾಮಿಯಾ ಮಸೀದಿ. ಜಾಮಿಯಾ ಮಸೀದಿಯ ಎದುರಲ್ಲೇ ಒಂದು ದೊಡ್ಡ ಕೊಳವಿದೆ. ಜಾಮಿಯಾ ಮಸೀದಿಗೆ ಮತ್ತು ಸುತ್ತಲ ತೋಟಗಳಿಗೆ ಅದರ ನೀರನ್ನೇ ಬಳಸಲಾಗುತ್ತಂತೆ. ಅದಕ್ಕೇ ರಾಯಲ ಚೆರುವು ಎಂಬ ಹೆಸರು. ಅದರ ಪಕ್ಕದಲ್ಲೇ ವಿಶಾಲವಾದ ಉಗ್ರಾಣವಿದೆ. ಅದೆಷ್ಟು ವಿಶಾಲವಾಗಿದೆ ಅನ್ನೋದರ ಅನುಭವವಾಗೋಕೆ ಅದರ ಒಳಹೊಕ್ಕಲೇ ಬೇಕು.

Front view of the Granary

View inside the Granary
Rayala Cheruvu of Gandhikota

ಪೆನ್ನಾರ್ ನದಿಯ ವೀಕ್ಷಣಾ ತಾಣ:
ಅದನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ಎಡಭಾಗದಲ್ಲಿ ರಂಗನಾಥ ಸ್ವಾಮಿ ದೇಗುಲ ಕಾಣುತ್ತೆ. ಸೀದಾ ಹೋದರೆ ಪೆನ್ನಾರ್ ನದಿಯ ವೀಕ್ಷಣಾ ತಾಣ. ಇಲ್ಲಿ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರೆಲ್ಲಾ ಇಲ್ಲೇ ಮುತ್ತಿಕೊಂಡಿರುತ್ತಾರೆಯೇ ಹೊರತು ಮುಂಚೆ ಹೇಳಿದ ಸ್ಥಳಗಳ್ಯಾವುದರಲ್ಲೂ ಇರುವುದಿಲ್ಲ ! ಗಂಧಿಕೋಟ ಅಂದ್ರೆ ಪೆನ್ನಾರ್ ವೀಕ್ಷಣಾ ತಾಣವೊಂದೇ ಅನ್ನುವ ತರ ಹೆಚ್ಚಿನ ಬ್ಲಾಗುಗಳಲ್ಲಿ ಬರದಿರೋದೂ ಇದಕ್ಕೆ ಕಾರಣವಿರಬಹುದೇನೋ ! ಅಲ್ಲಿಗೆ ತೆರಳೋ ಜಾಗಗಳನ್ನೂ ಸುಣ್ಣದ ಗೆರೆಗಳಿಂದ ಚೆನ್ನಾಗಿ ಗುರ್ತಿಸಲಾಗಿದೆ. ಆದರೆ ಮುರಿದು ಬಿದ್ದ ಮಸೀದಿ, ಮದರಸಾಗಳಿಗೆ ತೆರಳೋಕೆ ಎಮ್ಮೆಗಳು, ಜನರು ಸಾಗೋ ಕಾಲುಹಾದಿಯಲ್ಲಿ ಹಾದಿ ಹುಡುಕಿ ಸಾಗಬೇಕು !
View of the Pennar River Gorges
Our Team at the River Gorges. I am the photographer of course :-)
ರಂಗನಾಥ ಸ್ವಾಮಿ ದೇಗುಲ: 
ಮಾಧವರಾಯ ಸ್ವಾಮಿ ದೇಗುಲದ ಶಿಲ್ಪಕಲಾ ವೈಭವಕ್ಕೆ ಹೋಲಿಸಿದರೆ ಇಲ್ಲಿನ ಶಿಲ್ಪಕಲೆ ಕೊಂಚ ಸಪ್ಪೆಯೆನಿಸಿದರೂ ಒಮ್ಮೆ ನೋಡಲಡ್ಡಿಯಿಲ್ಲ. ಬೇಸರದ ಸಂಗತಿಯೆಂದರೆ ಎರಡೂ ದೇಗುಲಗಳ ಗರ್ಭಗೃಹಗಳು ಗೋಲ್ಕಂಡ ಸುಲ್ತಾನರ ಆಕ್ರಮಣದ ಕಾಲದಲ್ಲಿ ಭಗ್ನಗೊಂಡಿದ್ದು ದೇಗುಲಗಳನ್ನು ಜೀರ್ಣೋದ್ದಾರ ಮಾಡಿದ್ದರೂ ಅಲ್ಲಿನ ಗರ್ಭಗೃಹದಲ್ಲಿ ವಿಗ್ರಹಗಳ ಪುನರ್ ಪ್ರತಿಷ್ಟಾಪನೆಯಾಗಿಲ್ಲ. ಹಾಗಾಗಿ ಗರ್ಭಗೃಹದವರೆಗೂ ಹಸುಗಳ ಸಗಣಿ, ಬಿದ್ದ ಕಲ್ಲುಗಳು ನಮ್ಮನ್ನು ಸ್ವಾಗತಿಸುತ್ತಾ ಮನಸ್ಸು ಹಿಂಡುವಂತೆ ಮಾಡುತ್ತೆ :-(

Bad Maintainance of Ranganathaswamy temple :-(


way back from Gandhikota
ಮರಳಿ ಜಮ್ಮಲಮಡುಗುವಿಗೆ:
ಇದನ್ನೆಲ್ಲಾ ನೋಡಿ ಹೊರಬರೋ ಹೊತ್ತಿಗೆ ಘಂಟೆ ಒಂದೂಮುಕ್ಕಾಲಾಗ್ತಾ ಬಂದಿತ್ತು. ಬಸ್ಸಿದ್ದಿದ್ದು ೨:೩೦ ಗೆ. ಅಂದ್ರೆ ಆ ಬಸ್ಸು ಇಲ್ಲಿಗೆ ಬರೋ ಹೊತ್ತಿಗೆ ೩ ಆಗ್ಬೋದು. ಅದ್ರಲ್ಲಿ ಹತ್ತಿ ಜಮ್ಮಲಮಡುಗುವಿಗೆ ತಲುಪೋಹೊತ್ತಿಗೆ ೩:೩೦ ಆದ್ರೆ ಹೆಂಗಪ್ಪಾ ಬಿಲಕ್ಕೆ ಹೋಗೋದು ಇವತ್ತು. ಅದು ಬೇರೆ ೫ಕ್ಕೆ ಬಂದಾಗುತ್ತೆ ಅಂತ ಬ್ಲಾಗುಗಳಲ್ಲಿ ಬರೆದಿದ್ಯಲ್ಲ ಅಂತ ತಲೆಕೆಡಿಸಿಕೊಳ್ತಾ ಇದ್ವಿ. ಏನಾದ್ರಾಗಲಿ. ನಾವು ಆಟೋ ಇಳಿದ ಜಾಗಕ್ಕೆ ಹೋಗೋದು. ಅಲ್ಲಿಂದ ಬೇರ್ಯಾವುದಾದ್ರೂ ವಾಹನಗಳು ಸಿಗಬಹುದು ಅಂತ ಲೆಕ್ಕ ಹಾಕ್ತಾ ಬರ್ತಿರುವಾಗ ಜಮ್ಮಲಮಡುಗುವಿಗೆ ಈ ಊರಿನ ತರಕಾರಿ ಕೊಂಡೊಯ್ಯುತ್ತಿದ್ದ ಲಗೇಜ್ ಕ್ಯಾರಿಯರ್ರೊಂದು ಕಂಡಿತು. ಅವನತ್ರ ಜಮ್ಮಲಮಡುಗುವಿಗೆ ಹೋಗ್ತಾನಾ ಅಂತ ಕೇಳಿ ಅವನೂ ನಮ್ಮನ್ನು ಅಲ್ಲಿಗೆ ಕೊಂಡೊಯ್ಯೋಕೆ ಒಪ್ಪಿದ್ರಿಂದ ಅದೇ ಲಗೇಜ್ ಕ್ಯಾರಿಯರ್ರಲ್ಲಿ ಹತ್ತಿದ್ವಿ. ಮುಂದೆ ನಾನು, ಸುಬ್ಬು. ಹಿಂದಿನ ಕ್ಯಾರಿಯರ್ರಲ್ಲಿ ಉಳಿದ ನಾಲ್ವರು. ೨ಕ್ಕೆ ಅಲ್ಲಿಂದ ಹೊರಟಿದ್ದ ನಾವು ೨:೩೦ಕ್ಕೆ ಜಮ್ಮಲಮಡುಗು ತಲುಪಿದ್ವಿ. ತಲಾ ಹದಿನೈದರ ಚಾರ್ಜಿನಂತೆ, ಇನ್ನೂಹತ್ತು ಸೇರಿಸಿ ಅವನಿಗೆ ೧೦೦ ರೂ ಕೊಟ್ವಿ. ಖಾಲಿ ಬರುತ್ತಿದ್ದ ಅವನಿಗೆ ಲಾಭವಾಯ್ತು ಅನ್ನೋದಕ್ಕಿಂದ ನಮ್ಮ ಒಂದು ಘಂಟೆ ಸಮಯ ಉಳೀತು. ಅಲ್ಲಿಂದ ಮುಂದಿನ ತಾಣ ಬೇಲಂ ಗುಹೆಗೆ ಹೊರಡಬೇಕಿತ್ತು. 

ಮುಂದಿನ ಭಾಗದಲ್ಲಿ: ಬೇಲಂ ಗುಹೆಯತ್ತ