ಸಚಿನಣ್ಣನ ಪೆನುಕೊಂಡ ಲೇಖನ ಓದಿದ್ಮೇಲಿಂದ ಪೆನುಕೊಂಡ ನೋಡಬೇಕು ಅನಿಸ್ತಾ ಇತ್ತು. ಹಾಗೆ ಅವರತ್ರ ಪೆನುಕೊಂಡದ ಬಗ್ಗೆ ಮಾತಾಡ್ತಿದ್ದಾಗ ಅವರೊಮ್ಮೆ ಗಂಧಿಕೋಟಕ್ಕೆ ಹೋಗಿ ಬಾ ಅಂದಿದ್ರು. ಅದೇ ಗುಂಗಲ್ಲಿದ್ದಾಗ ಬೆಂಗಳೂರು ಅಸೆಂಡರ್ಸ್ ಗುಂಪಿನವ್ರು ನಡೆಸ್ತಿದ್ದ ಗಂಧಿಕೋಟ,ಬೇಲಂ, ಅಹೋಬಲಂ ಟ್ರಿಪ್ಪಿನ ಬಗ್ಗೆ ನೋಡಿದೆ.ಆ ಟ್ರಿಪ್ಪಿಗೆ ಹೋಗೋಕಾಗದೇ ಇದ್ರು ಅಲ್ಲಿ ಮೂರು ದಿನ ನೋಡುವಂತದ್ದು ಏನಿದೆ ಅನ್ನೋ ಕುತೂಹಲ ಶುರುವಾಯ್ತು. ಅದೇ ತರ ಪ್ರಭವಣ್ಣ(ಪ್ರಭವ ಗರುಡಧ್ವಜಂ)ನ ಹತ್ರ ಮಾತಾಡ್ತಿದ್ದಾಗ ಅವ್ರು ಅವ್ರು ಅಹೋಬಲಂನಲ್ಲೇ ನಾವು ಒಂದಿನ ಕಳೆದಿದ್ವಿ ಅಂದಾಗ ಕುತೂಹಲ ಇನ್ನೂ ಜಾಸ್ತಿಯಾಗಿತ್ತು. ಆದ್ರೆ ಅಹೋಬಲಂ ಎಷ್ಟು ಅದ್ಭುತವಾಗಿದೆ , ಅದನ್ನ ನೋಡೋಕೆ ಎರಡು ದಿನ ಬೇಕಾಗುತ್ತೆ ಅಂತ ಅವ್ರು ಹೇಳಿದ್ದಿದ್ರೆ ನಮ್ಮ ಪ್ಲಾನೇ ಬೇರೆಯಾಗ್ತಿತ್ತೋ ಏನೋ. ಒಂಭತ್ತು ದೇವಸ್ಥಾನ ತಾನೆ. ಎಲ್ಲಾ ಒಂದು ಮಧ್ಯಾಹ್ನದೊಳಗೆ ನೊಡ್ಬೋದು ಅನ್ನೋ ಉತ್ಸಾಹದಲ್ಲಿ ಶುಕ್ರವಾರ ರಾತ್ರೆ ಹೊರಟು ಭಾನುವಾರ ಮಧ್ಯಾಹ್ನ ಅಲ್ಲಿಂದ ಹೊರಡೋ ಪ್ಲಾನಾಯ್ತು. ಎಲ್ಲಾದ್ರೂ ಲೇಟಾದ್ರೂನು ಸೋಮವಾರ ಬೆಳಗ್ಗೆಯವರೆಗೆ ಬೆಂಗಳೂರಿಗೆ ಹೊರಡೋ ಪ್ಲಾನಿಗೆ ನಾನು, ಮಾಧವ, ಸಂತೋಷ್, ಸುಬ್ಬು, ಕೌಶಿಕ ಮತ್ತು ಗಣೇಶರ ಗ್ರೂಪು ರೆಡಿಯಾಯ್ತು.
ತತ್ಕಾಲಲ್ಲಿ ಸಿಕ್ಕಿದ್ನ ಮಿಸ್ ಮಾಡಿದ ಲೆಕ್ಕಾಚಾರ
One of the watch towers at Gandhikota |
ರೈಲು ಹೋಗೋ ಮಾರ್ಗ ನೋಡಿದ ನಾವು ಮೆಜೆಸ್ಟಿಕ್ಕಿಗೆ ಹೋಗಿ ಅಲ್ಲಿಂದ ಬೇರೆ ರೈಲಲ್ಲೋ, ಬಸ್ಸಲ್ಲೋ ಹೋಗೋದಂತ್ಲೂ ಎಲ್ಲಾದ್ರೂ ರೈಲನ್ನ ಹಿಡಿಯೋದಂತ್ಲೂ ತೀರ್ಮಾನ ಮಾಡಿದ್ವಿ. ಅದ್ನೇ ಅವ್ರಿಗೂ ಹೇಳಿ ಮೆಜೆಸ್ಟಿಕ್ಕಿಗೆ ಬಸ್ ಹುಡುಕ್ತಿದ್ದ ನಮಗೆ ದೇವ್ರೇ ಸಹಾಯಕ್ಕೆ ಬಂದ ಹಾಗೆ ಮತ್ತೊಂದು ರೈಲು ಸಿಕ್ತು. ಇನ್ನು ಐದೇ ನಿಮಿಷದಲ್ಲಿ ಇದೇ ನಿಲ್ದಾಣಕ್ಕೆ ಬರ್ತಿರೋ ಮೈಸೂರು ಎಕ್ಸಪ್ರೆಸ್ ರೈಲು ಮೆಜೆಸ್ಟಿಕ್ಕಿಗೆ ಹೋಗುತ್ತೇಂತ ಗೊತ್ತಾಯ್ತು. ಬಸ್ಸಿಗಿಂತ ಅದೇ ಬೇಗ ಹೋಗುತ್ತೇಂತ ಅದ್ನ ಹತ್ತಿದ ನಾವು ಹನ್ನೊಂದು ನಲವತ್ತರ ಹೊತ್ತಿಗೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣ ತಲುಪಿದ್ವಿ. ಆ ರೈಲಲ್ಲಿ ಟಿ.ಟಿ ಏನಾದ್ರೂ ಬಂದ್ರೆ ಏನು ಹೇಳೋದು ಅನ್ನೋ ಭಯಕ್ಕೆ ಮಾಧವನ ಉತ್ರ ಮಜಾ ಇತ್ತು. ನಿಮ್ಮ ರೈಲ್ವೇ ಇಲಾಖೆಗೆ ಈಗಾಗ್ಲೇ ಸಾವಿರದಿನ್ನೂರು ದಾನ ಮಾಡಿದೀವಿ(ತತ್ಕಾಲಿನ ಮೂರು ಟಿಕೇಟ್ ಮಿಸ್ ಮಾಡ್ಕೊಂಡಿದ್ದು). ಈಗ ಬೇರೆ ರೈಲಿಗಾದ್ರೂ ಹೋಗ್ತಿವಿ. ಬಿಟ್ಬಿಡಪ್ಪ ಅಂತ. ಆದ್ರೆ ಜನರಲ್ ಬೋಗಿಯಲ್ಲಿದ್ದ ನಮ್ಮನ್ನ ಕೇಳೋಕೆ ಯಾವ ಟಿ.ಟಿಯೂ ಬಂದಿರಲಿಲ್ಲ. ಅಂತೂ ಮೆಜೆಸ್ಟಿಕ್ ತಲುಪಿ ಅಲ್ಲಿನ ವಿಚಾರಣೆ ಕೌಂಟರಲ್ಲಿ ಕೇಳಿದ್ರೆ ಮುಂದಿನ ರೈಲು ಏಳೂವರೆಗೆ ಅನ್ನಬೇಕಾ ? ಸರಿ. ಇನ್ನು ಬಸ್ಸೇ ಗತಿಯಂತ ಮೆಜೆಸ್ಟಿಕ್ಕಿನ ಆಂಧ್ರ ಬಸ್ಸುಗಳ ನಿಲ್ದಾಣಕ್ಕೆ ಬಂದ್ವಿ.
ಬಸ್ಸುಗಳೇ ಬೇಗ ಗುರು:
ಅಲ್ಲಿದ್ದ ಅನಂತಪುರ ಬಸ್ಸವ್ರತ್ರ ಕೇಳಿದ್ರೆ ನಾವು ನಾಲ್ಕೂವರೆಗೆ ಅನಂತಪುರ ತಲುಪುತ್ತೀವಿ ಅಂತಂದ್ರು. ಹತ್ತೂಮುಕ್ಕಾಲಿಗೆ ಹೊರಟ ರೈಲು ೫ಕ್ಕೆ ಅನಂತಪುರ ತಲುಪುತ್ತಿತ್ತು ! ಹಾಗಾಗಿ ಅನಂತಪುರದಲ್ಲಿ ಅವ್ರನ್ನ ಹಿಡಿಯೋದು ಅಂತಂದ್ಕಂಡು ತಲಾ ೨೨೦ ಕೊಟ್ಟು ಆ ಬಸ್ಸಿಗೆ ಹತ್ತಿದ್ವಿ. ಹನ್ನೆರಡೂ ಇಪ್ಪತ್ತಕ್ಕೆ ಹೊರಟ ನಮ್ಮ ಬಸ್ಸವ ಅನಂತಪುರ ತಲುಪೋ ಹೊತ್ತಿಗೆ ೪:೧೦. ಅಲ್ಲಿಂದ ತಡಪತ್ರಿಗೆ ಹೋಗೋ ಬಸ್ಸುಗಳು ಆಗಲೇ ಶುರುವಾಗಿದ್ವು. ಅಲ್ಲಿನ ವಿಚಾರಣೆಯಲ್ಲಿ ಕೇಳಿದ್ರೆ ಗುತ್ತಿಗೆ ಹೋದ್ರೂ ಅಲ್ಲಿಂದ ಗಂಧಿಕೋಟಕ್ಕೆ ಹೋಗೋಕೆ ತಡಪತ್ರಿಗೇ ಬರ್ಬೇಕು. ಹಾಗಾಗಿ ನಿಮ್ಮ ಗೆಳೆಯರನ್ನ ಇಲ್ಲೇ ಇಳ್ಕೊಳ್ಳೋಕೆ ಹೇಳಿ ಅಂದ್ರು. ಗುತ್ತಿಗೆ ಹೋಗೋ ಹೊತ್ತಿಗೆ ಐದೂವರೆ ಐದೂಮುಕ್ಕಾಲಾಗ್ತಿತ್ತು. ಅಲ್ಲಿಂದ ಅವ್ರು ತಡಪತ್ರಿಗೆ ಸುತ್ತಾಕ್ಕೊಂಡು ಬರೋ ಬದ್ಲು ಇಲ್ಲಿಂದ ಹೋಗೋದೇ ಉತ್ತಮ ಅಂದ್ಕೊಂಡು ರೈಲಲ್ಲಿದ್ದವ್ರಿಗೆ ಫೋನ್ ಮಾಡಿ ಅನಂತಪುರದಲ್ಲೇ ಇಳ್ಕೊಳ್ಳೋಕೆ ಹೇಳಿದ್ವಿ. ಅವ್ರು ಬರೋ ತನಕ ಅನಂತಪುರದ ಬಸ್ಟಾಂಡಲ್ಲಿದ್ದ ಶೌಚಗೃಹದಲ್ಲೇ ನಿತ್ಯಕರ್ಮಗಳನ್ನ ಮುಗಿಸಿ ರೈಲಲ್ಲಿ ಬರೋರ ಹಾದಿ ಕಾಯ್ತಾ ಕೂತಿದ್ವಿ. ಇಲ್ಲಿನ ಶೌಚಗೃಹಗಳಿಗೆ ಸ್ನಾನಗೃಹಗಳಂತ ಹೆಸ್ರಿಟ್ಟಿದ್ದಾರೆ. ಒಂದ್ರಲ್ಲೇ ಸ್ನಾನ, ಶೌಚಗಳನ್ನ ಮುಗಿಸೋದು ಕಷ್ಟದ ಕೆಲಸವಾದ್ರೂ ಅಲ್ಲಿನ ಜನ ಅದಕ್ಕೆ ಒಗ್ಗಿಕೊಂಡಿದಾರೆ ! ಬೆಂಗಳೂರಿನ ಯಾತ್ರಿ ನಿವಾಸಗಳ ರೇಂಜಿಗೆ ಇಲ್ಲದಿದ್ರೂ , ಕೆಲಸ ಸಾಧ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಹೊಲಸಾಗೂ ಇಲ್ಲ. ಬೆಳಗ್ಗಿನ ಅರ್ಜೆಂಟಿಗೆ ಸಾಕಾಗುವಂತಿದೆಯಷ್ಟೆ ! ರೈಲಲ್ಲಿಳಿದ ಅವ್ರು ಅಂತೂ ಇಂತೂ ಬರೋ ಹೊತ್ತಿಗೆ ೫:೧೫. ೫:೩೫ ರ ತಡಪತ್ರಿಯ ಬಸ್ಸು ಹತ್ತಿದೆವು. ಮುಂದಿನ ಸಲ ಗಂಧಿಕೋಟಕ್ಕೆ ಹೋಗೋರಿಗೆ ಹೇಳೋ ಮಾತಂದ್ರೆ ರೈಲಿನ ಬದ್ಲು ಬಸ್ಸಲ್ಲಿ ಹೋಗಿ. ರೈಲಲ್ಲಿ ಹೋದ್ರೂ ಅನಂತಪುರದಲ್ಲಿ ಇಳ್ಕೊಳ್ಳಿ.(ರೈಲು ೨೭೫, ಬಸ್ಸು ೨೨೦). ಅನಂತಪುರದಿಂದ ತಡಪತ್ರಿಗೆ ಮೂರು ಮುಕ್ಕಾಲು ನಾಲ್ಕರ ಹೊತ್ತಿಗೆ ಬಸ್ಸುಗಳು ಶುರುವಾಗುತ್ತೆ. ಪ್ರತೀ ಹದಿನೈದು ನಿಮಿಷಕ್ಕೊಂದರಂತೆ ಅಲ್ಲಿಯ ಬಸ್ಸುಗಳಿವೆ.
ತಡಪತ್ರಿಯ ಭುವನೇಶ್ವರಿ:
ತಡಪತ್ರಿಗೆ ಅನಂತಪುರದಿಂದ ೬೦ ಕಿ.ಮೀಗಳ ದೂರವಾದ್ರೂ ತಲುಪೋಕೆ ಒಂದೂವರೆ ಘಂಟೆ ತಗೊಳ್ಳೋ ಬಸ್ಸುಗಳು ನಮ್ಮನ್ನ ೭:೧೦ಕ್ಕೆ ತಡಪತ್ರಿಗೆ ತಲುಪಿಸಿದ್ವು. ಅಲ್ಲಿಂದ ಗಂಧಿಕೋಟಕ್ಕೆ ಹೋಗೋಕೆ ೬೮ ಕಿ.ಮೀ ದೂರವಿರೋ ಜಮ್ಮಲಮಡುಗು ತಲುಪಬೇಕು.ಅಲ್ಲಿಗೆ ಮೊದಲ ಬಸ್ಸಿರೋದೆ ೭:೩೦ ಕ್ಕೆ ಅಂದ್ರು. ಸರಿ ಅಂತ ಬಸ್ಟಾಂಡಲ್ಲೇ ಇದ್ದ ಭುವನೇಶ್ವರಿ ರೆಸ್ಟೋರೆಂಟಿಗೆ ಹೋದ್ವಿ. ಅಲ್ಲಿ ಒಂದು ಚಾಕ್ಕೆ ಐದು ರೂ, ಪ್ಲೇಟಿಡ್ಲಿಗೆ ೨೦ ರೂ ಕೊಟ್ಟು ತಿಂದು ೭:೩೦ ರ ಬಸ್ಸು ಹತ್ತಿದ್ವಿ. ತಡಪತ್ರಿಯಲ್ಲಿ ಪುರಾತನ ಕಾಲದ ದೇವಾಲಯವೊಂದಿದೆಯಂತೆ. ನಮಗೆ ನೋಡಲಾಗದಿದ್ದರೂ ಅಲ್ಲಿಗೆ ಬರುವವರು ಸಮಯವಿದ್ರೆ ನೋಡಬಹುದು. ಇಲ್ಲಿನ ಇನ್ನೊಂದು ವಿಶೇಷವೆಂದ್ರೆ ಸಿಮೆಂಟ್ ಫ್ಯಾಕ್ಟರಿಗಳು ಮತ್ತು ಕಡಪ ಕಲ್ಲಿನ ಕ್ವಾರಿಗಳು. ಇಲ್ಲಿಂದ ಜಮ್ಮಲಮಡುಗುಗೆ ಹೋಗ್ತಾ ಯಾವ ಮನೆ ನೋಡಿದ್ರೂ ಅದನ್ನ ಕಡಪ ಕಲ್ಲಿಂದ್ಲೇ ಕಟ್ಟಿದ್ದನ್ನ ಕಾಣಬಹುದು . ನಮ್ಮಲ್ಲಿ ಸುಟ್ಟಿಟ್ಟಿಗೆ, ಜಂಬಿಟ್ಟಗೆ ಬಳಸಿದಂತೆ ಕಡಪ ಕಲ್ಲುಗಳನ್ನೇ ಬಳಸಿ ಕಟ್ಟಿದ ಮನೆಗಳನ್ನ ನೋಡೋರಿಗೆ ಮೊದಲ ಬಾರಿ ವಿಚಿತ್ರವೆನಿಸಿದ್ರೆ ಆಶ್ಚರ್ಯವಿಲ್ಲ. ಮನೆ ಗೋಡೆ, ಅಂಗಳ,ಕೂತ್ಕೊಳ್ಳೋ ಕಟ್ಟೆ, ದೇವಸ್ಥಾನದ ಗೋಡೆ ಹೋಗ್ಲಿ, ಕಲ್ಲು ಕ್ವಾರಿಗಳ ಪ್ರವೇಶದ ಬೇಲಿಗಳಿಗೂ ಕಡಪ ಕಲ್ಲುಗಳನ್ನು ನೀಟಾಗಿ ಪೇರಿಸಿದ ಗೋಡೆ ಹಾಕಿದ್ದಾರೆ !೨೦೧೦ರಲ್ಲಿ ಇಲ್ಲಿಗೆ ಬಂದ ಮಾಧವ ಹೇಳ್ತಿದ್ದ. ಸಿಮೆಂಟ್ ಫ್ಯಾಕ್ಟರಿಗಳು ಧಾರಾಳವಾಗಿದ್ದ ಇಲ್ಲಿ ಮುಂಚೆ ಮರಳನ್ನು ಲಾರೀಲಿ ಹೊತ್ಕೊಂಡು ಹೋದಂಗೆ ಸಿಮೆಂಟ್ ಹೊತ್ಕೊಂಡು ಹೋಗ್ತಿದ್ರಂತೆ. ಈಗ ಪರಿಸ್ತಿತಿ ಬದಲಾಗಿರಬಹುದಾದ್ರೂ ಇಲ್ಲಿನ ಬಹುತೇಕ ರಸ್ತೆಗಳು ಸಿಮೆಂಟ್ ರಸ್ತೆಗಳು !
ಜಮ್ಮಲಮಡುಗುವಿನಿಂದ ಗಂಧಿಕೋಟಕ್ಕೆ:
ಒಂಭತ್ತಕ್ಕೆ ಗಂಧಿಕೋಟಕ್ಕೆ ಬರ್ಬೇಕಾಗಿದ್ದ ಬಸ್ಸು ತಡವಾಗಿ ೯:೪೫ ಕ್ಕೆ ಬಂತು ! ಅಷ್ಟರಲ್ಲಿ ರೈಲಲ್ಲಿ ಬಂದರ್ವಿಗೆ ನೈಸರ್ಗಿಕ ಕರೆಗೆ ಅರ್ಜೆಂಟಾಗಿತ್ತು. ಸರಿಯಂತ ಜಮ್ಮಲಮಡುಗುವಿನ ಬಸ್ಟಾಂಡಿನ ಪಕ್ಕದಲ್ಲೇ ಇರೋ ಶೌಚಗೃಹದ ವಿಸಿಟ್ಟೂ ಆಯ್ತು. ಅಲ್ಲಿನ ಬಸ್ಟಾಂಡಲ್ಲಿ ಗಂಧಿಕೋಟಕ್ಕೆ ಎಷ್ಟೊತ್ತಿಗಪ್ಪಾ ಬಸ್ಸು ಅಂದ್ರೆ ಮೊದಲ ಬಸ್ಸಿದ್ದಿದ್ದು ೯:೩೦ ಕ್ಕೆ. ಅದು ಹೋಗಾಯ್ತು. ಮುಂದಿನ ಬಸ್ಸಿರೋದು ೨:೩೦ ಗೆ ಅನ್ನಬೇಕಾ ? ! ಅಲ್ಲಿಂದ ಗಂಧಿಕೋಟಕ್ಕೆ ೧೪ ಕಿ.ಮೀಗಳ ದಾರಿ. ಶೇರ್ ಆಟೋಗಳನ್ನ ತಗೊಂಡು ಹೋಗಿ ಅಂತ ಬ್ಲಾಗುಗಳಲ್ಲಿ ಬರೆದಿತ್ತು. ಬಸ್ಟಾಂಡಲ್ಲಿದ್ದ ಮಾಹಿತಿ ಕೊಡೋರೋ ಅದೇ ಹೇಳಿದ್ರಿಂದ ಅಲ್ಲಿಂದ ಬಲಭಾಗದಲ್ಲಿ ಮುಂದೆ ಹೋಗಿ. ಅಲ್ಲಿದ್ದ ಸರ್ಕಲ್ಲಿನ ಆಟೋಗಳಲ್ಲಿ ಒಂದು ಆಟೋವನ್ನ ೧೫೦ ರೂಗೆ ಡೀಲ್ ಮಾಡಿದ್ವಿ. ಆ ಕಡೆ ಹೋಗ್ತಿದ್ದ ಆಟೋಗಳೇ ಸಿಕ್ಕಿದ್ರೆ ತಲಾ ಹದಿನೈದು ರೂ ಅಷ್ಟೆ. ಆದ್ರೆ ಆಟೋದಲ್ಲಿ ಜನ ತುಂಬೋದನ್ನ ಕಾಯ್ತಾ ಕೂರೋಕೆ ಟೈಮಿರದ ನಾವು ೧೭೦ ಕೇಳ್ತಿದ್ದವನನ್ನು ೧೫೦ಕ್ಕೆ ಒಪ್ಪಿಸಿ ಹೊರಟ್ವಿ. ೧೦ಕ್ಕೆ ಜಮ್ಮಲಮಡುಗುವಿನಿಂದ ಹೊರಟಿದ್ದ ನಾವು ಆ ಆಟೋದಲ್ಲಿ ತೂರಾಡ್ಕೊಂಡು ಗಂಧಿಕೋಟ ತಲುಪೋ ಹೊತ್ತಿಗೆ ೧೦:೨೫ ಆಗಿತ್ತು. ಇಲ್ಲಿ ಪ್ರವೇಶದ್ವಾರ ಅಂತೇನು ಇಲ್ಲ. ಹಾಗಾಗಿ ಬೆಳಗ್ಗೆ ಬೇಗ ಬಂದ್ರೆ ತೆಗದಿರಲ್ಲ,ಸಂಜೆ ಲೇಟಾದ್ರೆ ಬಾಗಿಲು ಹಾಕುತ್ತೆ ಅನ್ನೋ ತಲೆನೋವುಗಳೆಲ್ಲ ಇಲ್ಲ. ಹಾಗಾಗಿ ಸ್ವಂತ ವಾಹನದಲ್ಲಿ ಬರೋರಿದ್ರೆ ಇಲ್ಲಿಗೆ ಬೇಗನೇ ಬಂದು ನೋಡಿಕೊಂಡು ಮುಂದಿನ ಜಾಗ ನೋಡ್ಬೋದು. ಇಲ್ಲ, ಬೇಲಂ ಬಿಲ ಮುಂತಾದ ಜಾಗ ನೋಡ್ಕೊಂಡು ಮಧ್ಯಾಹ್ನದ ಹೊತ್ತಿಗೆ ಬಂದು ಸಂಜೆಯವರೆಗೂ ಇಲ್ಲಿ ನೋಡ್ಬೋದು. ಸಂಜೆಯೇನು, ರಾತ್ರಿಯಾದ್ರೂ ಇಲ್ಲಿ ಕೇಳೋರಿಲ್ಲ ! ಇದೊಂದು ಕೋಟೆಯೊಳಗಿನ ಊರು. ಊರಿಗಿಂತ ಸ್ವಲ್ಪ ಮುಂಚೆ ಆಂಧ್ರ ಪ್ರವಾಸೋದ್ಯಮ ಇಲಾಖೆಯ ಹರಿತಾ ಹೋಟೇಲ್ ಮತ್ತು ಲಾಡ್ಜುಗಳಿವೆ. ಅಂತರ್ಜಾಲದಲ್ಲಿ ಬುಕ್ ಮಾಡಬೇಕಾದ ಈ ಹೋಟೆಲ್ ಎಷ್ಟು ಹೆರೆತ ಅಂತ ಗೊತ್ತಿಲ್ಲ :-)
ಗಂಧಿಕೋಟದ ಇತಿಹಾಸ:
Entrance of Gandhikota |
೧೩೫೦ರಲ್ಲಿ ಇದನ್ನು ಆಳುತ್ತಿದ್ದ ಮಿಕ್ಕಿಲೇನಿ ರಾಮನಾಯ್ಡು ಎನ್ನುವ ರಾಜನಿಗೆ ಗಂಡು ಮಕ್ಕಳಿರಲಿಲ್ಲ. ಹಾಗಾಗಿ ಅವನ ಮಗಳನ್ನು ಕಮ್ಮ ಕುಲದ ಇನ್ನೊಂದು ರಾಜವಂಶದ ಪೆಮ್ಮಸಾನಿ ಕುಮಾರ ತಿಮ್ಮನಾಯ್ಡುಗೆ ವಿವಾಹ ಮಾಡಿಕೊಡುವ ಮೂಲಕ ಈ ಕೋಟೆ ಪೆಮ್ಮಸಾನಿ ರಾಜರ ಅಧೀನಕ್ಕೆ ಬಂತು.ಕೋಟೆ ಇನ್ನಷ್ಟು ಸದೃಢಗೊಂಡಿದ್ದು ಕುಮಾರ ತಿಮ್ಮನಾಯ್ಡುವಿನ ಕಾಲದಲ್ಲೇ.ಕಾಕತೀಯ ರಾಜರಿಗೆ ವಿದೇಯರಾಗಿದ್ದ ಪೆಮ್ಮಸಾನಿ ನಾಯಕರ ವಶಕ್ಕೆ ಬರುವ ಈ ಕೋಟೆ ಸುಮಾರು ೩೦೦ ವರ್ಷಗಳ ಕಾಲ ಅವರ ಆಡಳಿತಕ್ಕೆ ಒಳಪಡುತ್ತದೆ ಎನ್ನುತ್ತೆ ಇತಿಹಾಸ. ೧೩೭೦ರಲ್ಲಿ ಕಮ್ಮ ರಾಜವಂಶದ ಮತ್ತೊಂದು ರಾಜಮನೆತನ ಮುಸುನೂರಿ ರಾಜವಂಶಸ್ತರು ಬಹುಮನಿ ಸುಲ್ತಾನರಿಗೆ ಸೋತಾಗ ಪೆಮ್ಮಸಾನಿ ನಾಯಕರು ಬಹುಮನಿಯ ವಿರೋಧಿಗಳಾಗಿದ್ದ ವಿಜಯನಗರದ ಸಾಮಂತರಾಗುತ್ತಾರೆ. ಈ ಕೋಟೆಯಿದ್ದ ಜಾಗ ಮತ್ತು ಇದರ ರಕ್ಷಣಾ ವ್ಯವಸ್ಥೆ ಇದು ಅನೇಕ ರಾಜರನ್ನು ತನ್ನತ್ತ ಆಕರ್ಷಿಸುತ್ತಿತ್ತು ಎನ್ನಲಾಗುತ್ತದೆ. ಕಮ್ಮ ರಾಜವಂಶಸ್ಥರ ಮೂಲಕ ಕಾಕತೀಯ,ವಿಜಯನಗರ ಕಾಲದ ದೇಗುಲಗಳು(ವಿಜಯನಗರದ ಹರಿಹರರಾಜ ನಿರ್ಮಿಸಿದ ದೇಗುಲ) ಮತ್ತು ನಂತರದ ಕುತುಬ್ ಶಾಹಿಗಳ ಕಾಲದಲ್ಲಿ ನಿರ್ಮಾಣವಾದ ಮಸೀದಿ, ಮದರಸಗಳನ್ನು ಇಲ್ಲಿ ಕಾಣಬಹುದು. ೧೬೫೨ರಲ್ಲಿ ಗಂಧಿಕೋಟಕ್ಕೆ ಭೇಟಿಯಿತ್ತ ಜೀನ್ ಬ್ಯಾಪ್ಟೈಸ್ ಟ್ರಾವೆನೀರ್ ಇದನ್ನು ಎರಡನೆಯ ಹಂಪಿಯೆಂದು ಕರೆಯುತ್ತಾನೆ ಎಂಬ ಉಲ್ಲೇಖಗಳಿವೆ. ಟ್ರಾವೇನೀರ್ ಗಂಧಿಕೋಟಕ್ಕೆ ಬಂದುದರ ಹಿಂದೆ ಮತ್ತೊಂದು ಕತೆಯಿದೆ.
೧೬೫೨ರಲ್ಲಿ ಗೋಲ್ಕೊಂಡದ ಸುಲ್ತಾನರು ಗಂಧಿಕೋಟವನ್ನು ಗೆದ್ದುಕೊಂಡು ಪೆಮ್ಮಸಾನಿ ನಾಯಕರಿಂದ ಇದನ್ನು ತಮ್ಮ ವಶಕ್ಕೆ ಪಡೆದುಕೊಂಡಿರುತ್ತಾರೆ. ಆ ಸಮಯದಲ್ಲಿ ಗೋಲ್ಕೊಂಡಕ್ಕೆ ಬರುವ ಫ್ರೆಂಚ್ ವಜ್ರದ ವ್ಯಾಪಾರಿ ಟ್ರಾವೆನೀರ್ ಗೋಲ್ಕೊಂಡ ಸುಲ್ತಾನನ ಮಂತ್ರಿ ಮೀರ್ ಜುಮ್ಲಾನನ್ನು ಭೇಟಿಯಾಗುತ್ತಾನೆ. ಈ ಗೋಲ್ಕೊಂಡ ಸುಲ್ತಾನರ ಕಾಲದಲ್ಲೇ ಇಲ್ಲಿರುವ ದೇವಸ್ಥಾನಗಳಿಗೆ ಹಾನಿ ಮತ್ತು ಹೊಸ ಮಸೀದಿ, ಮದರಸಾಗಳ ರಚನೆಯಾಗಿರುವ ಅಂದಾಜಿದೆ. ಅವನ ಬಳಿ ಕೆಲವು ದಿನಗಳ ಹಿಂದೆಯಷ್ಟೇ ಗೆದ್ದುಕೊಂಡ ಗಂಧಿಕೋಟದ ಬಗ್ಗೆ ತಿಳಿದ ಆತ ಗಂಧಿಕೋಟಕ್ಕೆ ಬರುತ್ತಾನೆ. ಇದೇ ಟ್ರಾವೆನೀರ್ ಗೋಲ್ಕೊಂಡದ ಕೊಲ್ಲೂರ್ ಗಣಿಯಿಂದ ೧೧೨ ಕ್ಯಾರೇಟ್ ನೀಲಿ ವಜ್ರವೊಂದನ್ನು ಖರೀದಿಸಿ ಅದನ್ನು ಫ್ರೆಂಚ್ ರಾಜ ೧೪ನೇ ಕಿಂಗ್ ಲೂಯಿಸ್ಗೆ ಮಾರುತ್ತಾನೆ. ಆ ವಜ್ರವನ್ನು Le Bleu de France ಫ್ರಾನ್ಸಿನ ನೀಲಿ ಮತ್ತು Hope Diamond ಎಂಬ ಹೆಸರುಗಳಿಂದ ಫ್ರಾನ್ಸಿನ ರಾಜಮುಕುಟವನ್ನು ಅಲಂಕರಿಸುತ್ತದೆ. ಎಲ್ಲಿಯ ಗೋಲ್ಕೊಂಡ, ಎಲ್ಲಿಯ ಫ್ರಾನ್ಸು, ಎಲ್ಲಿಯ ಗಂಧಿಕೋಟ ! ಎಲ್ಲಿಂದೆಲ್ಲಿಯ ಸಂಬಂಧವಯ್ಯಾ ! :-)
ಗಂಧಿಕೋಟದಲ್ಲಿ ಏನೇನಿದೆ ?
ಇನ್ನು ಇತಿಹಾಸದಿಂದ ವಾಸ್ತವಕ್ಕೆ ಬಂದು ಗಂಧಿಕೋಟದಲ್ಲಿ ಮುಖ್ಯವಾಗಿ ನೋಡಬೇಕಾದ ಜಾಗಗಳೇನಿದ್ಯಪ್ಪ ಅಂದ್ರೆ ಕೆಳಗಿನವನ್ನು ಪಟ್ಟಿ ಮಾಡಬಹುದು.
೧. ಕೋಟೆಯ ಪ್ರವೇಶದ್ವಾರ
೨. ಚಾರ್ ಮಿನಾರ್
೩. ಜೈಲು
೪.ಮಾಧವರಾಯ ದೇವಸ್ಥಾನ,ಬಾವಿಗಳು
೫.Great canon
೬.ಉಗ್ರಾಣ ೧
೭. ಕೋಟೆಯ ಗೋಡೆಗಳು
೮. ಜುಮ್ಮಾ ಮಸೀದಿ
೯. ಕೆರೆ
೧೦. ಉಗ್ರಾಣ ೨
೧೧. ರಂಗನಾಥ ಸ್ವಾಮಿ ದೇವಸ್ಥಾನ
೧೨. ಮುರಿದು ಬಿದ್ದ ಮದರಸ, ಮಸೀದಿಗಳು
೧೩. ಪೆನ್ನಾರ್ ನದಿ/River Gorges
ಕೋಟೆಯ ಮುಖ್ಯ ಪ್ರವೇಶದ್ವಾರದಿಂದ ಒಳಹೊಕ್ಕ ನಾವು ಮೇಲಿನಂತೆ ಒಂದೊಂದೇ ಜಾಗಗಳನ್ನು ನೋಡುತ್ತಾ ಬಂದೆವು. ಅದರಲ್ಲಿ ಮಾಧವರಾಯ ದೇಗುಲದ ಶಿಲ್ಪಕಲೆ ಮನಸೆಳೆಯುವಂತಿದೆ. ಪ್ರತಿಯೊಂದ್ರಲ್ಲೂ ಏನೇನಿದೆ ಎಂಬುದನ್ನು ಚಿತ್ರಗಳೊಂದಿಗೆ ನೋಡೋಣ
ಪ್ರವೇಶದ್ವಾರ, ಚಾರ್ ಮಿನಾರ್, ಜೈಲು
Entrance of Gandhikota Fort |
ನಲವತ್ತು ಅಡಿಗಳಷ್ಟು ಎತ್ತರದ ಪ್ರವೇಶದ್ವಾರ ಇಲ್ಲಿನ ವಿಶೇಷ. ಸಾಮಾನ್ಯವಾಗಿ ಕೋಟೆಗಳಂದ್ರೆ ಗುಡ್ಡದ ಮೇಲಿರೋದ್ರಿಂದ ಪ್ರವೇಶದ್ವಾರದೊಳಗೆ ನಡ್ಕೊಂಡು ಹೋಗಬೇಕಿರುತ್ತೆ. ಆದ್ರೆ ಇದ್ರೊಳಗೆ ಊರಿದ್ದು , ಪ್ರವೇಶದ್ವಾರವನ್ನು ಹಾಸಿ ಊರಿಗೆ ಹೋಗೋ ರಸ್ತೆಯಿರೋದ್ರಿಂದ ಇದ್ರೊಳಗೆ ಗಾಡಿಯಲ್ಲಿ ಹೋಗಬಹುದು !
ಅದನ್ನು ದಾಟಿ ಒಳಗೆ ಹೋಗ್ತಿದ್ದ ಹಾಗೆ ಶಾಲೆಯೊಂದು ಸಿಗುತ್ತೆ. ಅದ್ರ ಪಕ್ಕದಲ್ಲಿರೋದೇ ಚಾರ್ ಮಿನಾರ್. ಅದನ್ನು ದಾಟಿ ಮುಂದೆ ಹೋಗ್ತಿದ್ದ ಹಾಗೆ ಸಿಗೋದು ಜೈಲು. ಈ ಜೈಲಲ್ಲಿ ಕೆಳಗಿಳಿಯೋ ಮೆಟ್ಟಿಲುಗಳು, ಆ ಕಾಲದಲ್ಲಿ ರಾತ್ರೆ ಪಂಜುಗಳನ್ನಿಡುತ್ತಿದ್ದ ಜಾಗಗಳು, ವಿಶಾಲ ಕಮಾನುಗಳನ್ನು ನೋಡಬಹುದು. ಇದರ ಹಿಂದಿನಿಂದ ಕೋಟೆಯ ದೃಶ್ಯಗಳೂ ಕಾಣುತ್ತದೆ. ಅಲ್ಲಿಂದ ಮುಂದೆ ಬಂದರೆ ಮಾಧವರಾಯ ಸ್ವಾಮಿ ದೇವಸ್ಥಾನಕ್ಕೆ ದಾರಿಯೆಂಬ ಬೋರ್ಡ್ ಎಡಕ್ಕೆ ಸಿಗುತ್ತೆ. ಅದರಲ್ಲಿ ಸಾಗಿದರೆ ಸಿಗೋದೇ ಮಾಧವರಾಯ ಸ್ವಾಮಿ ದೇಗುಲ.
CharMinar of Gandhikota |
Gandhikota Jail |
Madhavaraya swami temple |
ಇಲ್ಲಿ ಸುಬ್ಬು ಹೇಳ್ತಿದ್ದಂಗೆ ವಿಜಯನಗರ ಶೈಲಿಯ ಶಿಲ್ಪಗಳಿವೆ. ಇಲ್ಲಿನ ಎರಡು ಪ್ರವೇಶದ್ವಾರಗಳಲ್ಲಿ ಮೊದಲನೇ ಪ್ರವೇಶದ್ವಾರದಲ್ಲಿ ತಲೆಯೆತ್ತಿ ನೋಡೋದನ್ನ ಮರೆಯದಿರಿ. ಯಾಕಂದ್ರೆ ಅಲ್ಲಿ ಮೀನು, ಮೊಸಳೆ ಮುಂತಾದ ಕೆತ್ತನೆಗಳಿವೆ. ಪ್ರವೇಶದ್ವಾರದಲ್ಲಿ ಶಿಲಾಬಾಲಿಕೆಯರು, ಪೌರಾಣಿಕ ಶಿಲ್ಪಗಳು ಸ್ವಾಗತ ಕೋರೋದು ಸಾಮಾನ್ಯ. ಆದ್ರೆ ಇಲ್ಲಿನ ತೊಲೆಯೂ ಕಲಾಪೂರ್ಣವಾಗಿದೆ. ಇಲ್ಲಿನ ವೀರಯೋಧರ ಶಿಲ್ಪಗಳ ಜೊತೆ ಮೀನು, ರಾಮಾಯಣದ ಉಬ್ಬುಶಿಲ್ಪ, ಆನೆ ಎತ್ತುಗಳ ಜೋಡಿ ಶಿಲ್ಪ ಮುಂತಾದ ವಿಶೇಷ ಶಿಲ್ಪಗಳಿವೆ. ಅವುಗಳ ಬಗ್ಗೆ ಹೇಳೋದಕ್ಕಿಂದ ಅವುಗಳ ಚಿತ್ರ ಹಾಕೋದೇ ಮೇಲೆನಿಸುತ್ತೆ.
Madhavaraya temple |
Carvings at the Ceilings of the temple |
ಅದನ್ನು ನೋಡಿ ಮುಂಚೆ ಬಂದ ದಾರಿಗೇ ಬಂದರೆ ಗ್ರೇಟ್ ಕೆನಾನ್ ಗೆ ದಾರಿ ಎಂಬ ಫಲಕ ಕಾಣುತ್ತೆ. ಅದನ್ನು ಅನುಸರಿಸಿ ಹೊರಟ್ರೆ ಒಂದೆರಡು ದೊಡ್ಡ ದೊಡ್ಡ ಬಾವಿಗಳು ಸಿಗುತ್ತೆ.
One of the Wells in the Gandhikota |
Entrance to Reach the base of the Fort |
View of Pennar river from First Granary |
walking on the walls of Gandhikota Fort |
View of the First Granary and steps to ascend to its top |
One more storage, probably for the arms |
way to reach to the top of First Granary |
Remains of the Mosque |
Remains of the Madarasa |
ಹಳೇ ಹನುಮನ ಗುಡಿ
ಅದನ್ನು ದಾಟಿ ಮಾಧವರಾಯ ದೇಗುಲದ ಹಿಂಭಾಗಕ್ಕೆ ಬಂದು ಸಾಗಿದೆವು. ಅಲ್ಲಿಂದ ಹೊರಹೊರಟ ನಾವು ಗ್ರಾಂಡ್ ಕೆನಾನ್ ಎಂಬ ಬೋರ್ಡಿದ್ದಲ್ಲಿಗೆ ತಲುಪೋ ಮೂಲಕ ಮಾಧವರಾಯ ದೇಗುಲದ ಒಂದು ಪ್ರದಕ್ಷಿಣೆ ಆಗಿತ್ತು ! ಅಲ್ಲಿಂದ ಎಡಕ್ಕೆ ನಾವು ಮುಂಚೆ ಬಂದ ಹಾದಿಯಲ್ಲೇ ಸಾಗುತ್ತಿದ್ದ ನಾವು ಸಿಕ್ಕ ಹನುಮನ ಗುಡಿಯನ್ನೂ ದರ್ಶಿಸಿ ಮುಂದೆ ಸಾಗಿದೆವು.
Remains of the Old Hanuman temple |
Jamia Maszid, Gandhikota |
ವಾಪಾಸ್ ಮಾಧವರಾಯ ದೇಗುಲಕ್ಕೆ ದಾರಿಯೆಂಬ ಬೋರ್ಡಿದ್ದಲ್ಲಿಗೆ ಬಂದು ಅಲ್ಲಿಂದ ಎಡಕ್ಕೆ ಸಾಗಿದ ನಮಗೆ ಮೊದಲು ಕಂಡಿದ್ದು ಜಾಮಿಯಾ ಮಸೀದಿ. ಜಾಮಿಯಾ ಮಸೀದಿಯ ಎದುರಲ್ಲೇ ಒಂದು ದೊಡ್ಡ ಕೊಳವಿದೆ. ಜಾಮಿಯಾ ಮಸೀದಿಗೆ ಮತ್ತು ಸುತ್ತಲ ತೋಟಗಳಿಗೆ ಅದರ ನೀರನ್ನೇ ಬಳಸಲಾಗುತ್ತಂತೆ. ಅದಕ್ಕೇ ರಾಯಲ ಚೆರುವು ಎಂಬ ಹೆಸರು. ಅದರ ಪಕ್ಕದಲ್ಲೇ ವಿಶಾಲವಾದ ಉಗ್ರಾಣವಿದೆ. ಅದೆಷ್ಟು ವಿಶಾಲವಾಗಿದೆ ಅನ್ನೋದರ ಅನುಭವವಾಗೋಕೆ ಅದರ ಒಳಹೊಕ್ಕಲೇ ಬೇಕು.
Front view of the Granary |
View inside the Granary |
Rayala Cheruvu of Gandhikota |
ಪೆನ್ನಾರ್ ನದಿಯ ವೀಕ್ಷಣಾ ತಾಣ:
ಅದನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ಎಡಭಾಗದಲ್ಲಿ ರಂಗನಾಥ ಸ್ವಾಮಿ ದೇಗುಲ ಕಾಣುತ್ತೆ. ಸೀದಾ ಹೋದರೆ ಪೆನ್ನಾರ್ ನದಿಯ ವೀಕ್ಷಣಾ ತಾಣ. ಇಲ್ಲಿ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರೆಲ್ಲಾ ಇಲ್ಲೇ ಮುತ್ತಿಕೊಂಡಿರುತ್ತಾರೆಯೇ ಹೊರತು ಮುಂಚೆ ಹೇಳಿದ ಸ್ಥಳಗಳ್ಯಾವುದರಲ್ಲೂ ಇರುವುದಿಲ್ಲ ! ಗಂಧಿಕೋಟ ಅಂದ್ರೆ ಪೆನ್ನಾರ್ ವೀಕ್ಷಣಾ ತಾಣವೊಂದೇ ಅನ್ನುವ ತರ ಹೆಚ್ಚಿನ ಬ್ಲಾಗುಗಳಲ್ಲಿ ಬರದಿರೋದೂ ಇದಕ್ಕೆ ಕಾರಣವಿರಬಹುದೇನೋ ! ಅಲ್ಲಿಗೆ ತೆರಳೋ ಜಾಗಗಳನ್ನೂ ಸುಣ್ಣದ ಗೆರೆಗಳಿಂದ ಚೆನ್ನಾಗಿ ಗುರ್ತಿಸಲಾಗಿದೆ. ಆದರೆ ಮುರಿದು ಬಿದ್ದ ಮಸೀದಿ, ಮದರಸಾಗಳಿಗೆ ತೆರಳೋಕೆ ಎಮ್ಮೆಗಳು, ಜನರು ಸಾಗೋ ಕಾಲುಹಾದಿಯಲ್ಲಿ ಹಾದಿ ಹುಡುಕಿ ಸಾಗಬೇಕು !
View of the Pennar River Gorges |
Our Team at the River Gorges. I am the photographer of course :-) |
ಮಾಧವರಾಯ ಸ್ವಾಮಿ ದೇಗುಲದ ಶಿಲ್ಪಕಲಾ ವೈಭವಕ್ಕೆ ಹೋಲಿಸಿದರೆ ಇಲ್ಲಿನ ಶಿಲ್ಪಕಲೆ ಕೊಂಚ ಸಪ್ಪೆಯೆನಿಸಿದರೂ ಒಮ್ಮೆ ನೋಡಲಡ್ಡಿಯಿಲ್ಲ. ಬೇಸರದ ಸಂಗತಿಯೆಂದರೆ ಎರಡೂ ದೇಗುಲಗಳ ಗರ್ಭಗೃಹಗಳು ಗೋಲ್ಕಂಡ ಸುಲ್ತಾನರ ಆಕ್ರಮಣದ ಕಾಲದಲ್ಲಿ ಭಗ್ನಗೊಂಡಿದ್ದು ದೇಗುಲಗಳನ್ನು ಜೀರ್ಣೋದ್ದಾರ ಮಾಡಿದ್ದರೂ ಅಲ್ಲಿನ ಗರ್ಭಗೃಹದಲ್ಲಿ ವಿಗ್ರಹಗಳ ಪುನರ್ ಪ್ರತಿಷ್ಟಾಪನೆಯಾಗಿಲ್ಲ. ಹಾಗಾಗಿ ಗರ್ಭಗೃಹದವರೆಗೂ ಹಸುಗಳ ಸಗಣಿ, ಬಿದ್ದ ಕಲ್ಲುಗಳು ನಮ್ಮನ್ನು ಸ್ವಾಗತಿಸುತ್ತಾ ಮನಸ್ಸು ಹಿಂಡುವಂತೆ ಮಾಡುತ್ತೆ :-(
Bad Maintainance of Ranganathaswamy temple :-( |
way back from Gandhikota |
ಇದನ್ನೆಲ್ಲಾ ನೋಡಿ ಹೊರಬರೋ ಹೊತ್ತಿಗೆ ಘಂಟೆ ಒಂದೂಮುಕ್ಕಾಲಾಗ್ತಾ ಬಂದಿತ್ತು. ಬಸ್ಸಿದ್ದಿದ್ದು ೨:೩೦ ಗೆ. ಅಂದ್ರೆ ಆ ಬಸ್ಸು ಇಲ್ಲಿಗೆ ಬರೋ ಹೊತ್ತಿಗೆ ೩ ಆಗ್ಬೋದು. ಅದ್ರಲ್ಲಿ ಹತ್ತಿ ಜಮ್ಮಲಮಡುಗುವಿಗೆ ತಲುಪೋಹೊತ್ತಿಗೆ ೩:೩೦ ಆದ್ರೆ ಹೆಂಗಪ್ಪಾ ಬಿಲಕ್ಕೆ ಹೋಗೋದು ಇವತ್ತು. ಅದು ಬೇರೆ ೫ಕ್ಕೆ ಬಂದಾಗುತ್ತೆ ಅಂತ ಬ್ಲಾಗುಗಳಲ್ಲಿ ಬರೆದಿದ್ಯಲ್ಲ ಅಂತ ತಲೆಕೆಡಿಸಿಕೊಳ್ತಾ ಇದ್ವಿ. ಏನಾದ್ರಾಗಲಿ. ನಾವು ಆಟೋ ಇಳಿದ ಜಾಗಕ್ಕೆ ಹೋಗೋದು. ಅಲ್ಲಿಂದ ಬೇರ್ಯಾವುದಾದ್ರೂ ವಾಹನಗಳು ಸಿಗಬಹುದು ಅಂತ ಲೆಕ್ಕ ಹಾಕ್ತಾ ಬರ್ತಿರುವಾಗ ಜಮ್ಮಲಮಡುಗುವಿಗೆ ಈ ಊರಿನ ತರಕಾರಿ ಕೊಂಡೊಯ್ಯುತ್ತಿದ್ದ ಲಗೇಜ್ ಕ್ಯಾರಿಯರ್ರೊಂದು ಕಂಡಿತು. ಅವನತ್ರ ಜಮ್ಮಲಮಡುಗುವಿಗೆ ಹೋಗ್ತಾನಾ ಅಂತ ಕೇಳಿ ಅವನೂ ನಮ್ಮನ್ನು ಅಲ್ಲಿಗೆ ಕೊಂಡೊಯ್ಯೋಕೆ ಒಪ್ಪಿದ್ರಿಂದ ಅದೇ ಲಗೇಜ್ ಕ್ಯಾರಿಯರ್ರಲ್ಲಿ ಹತ್ತಿದ್ವಿ. ಮುಂದೆ ನಾನು, ಸುಬ್ಬು. ಹಿಂದಿನ ಕ್ಯಾರಿಯರ್ರಲ್ಲಿ ಉಳಿದ ನಾಲ್ವರು. ೨ಕ್ಕೆ ಅಲ್ಲಿಂದ ಹೊರಟಿದ್ದ ನಾವು ೨:೩೦ಕ್ಕೆ ಜಮ್ಮಲಮಡುಗು ತಲುಪಿದ್ವಿ. ತಲಾ ಹದಿನೈದರ ಚಾರ್ಜಿನಂತೆ, ಇನ್ನೂಹತ್ತು ಸೇರಿಸಿ ಅವನಿಗೆ ೧೦೦ ರೂ ಕೊಟ್ವಿ. ಖಾಲಿ ಬರುತ್ತಿದ್ದ ಅವನಿಗೆ ಲಾಭವಾಯ್ತು ಅನ್ನೋದಕ್ಕಿಂದ ನಮ್ಮ ಒಂದು ಘಂಟೆ ಸಮಯ ಉಳೀತು. ಅಲ್ಲಿಂದ ಮುಂದಿನ ತಾಣ ಬೇಲಂ ಗುಹೆಗೆ ಹೊರಡಬೇಕಿತ್ತು.
ಮುಂದಿನ ಭಾಗದಲ್ಲಿ: ಬೇಲಂ ಗುಹೆಯತ್ತ
ಸುಬ್ಬು: ಚಿತ್ರ ಲೇಖನ ಚೆನ್ನಾಗಿ ಮೂಡಿದೆ. ರೈಲಿನ ಫಜೀತಿ ಅನುಭವಿಸಿ ಆದರೂ ಹೊಸ ಪರ್ಯಾಯ ಹುಡುಕಿ ಪ್ರವಾಸ ಮುಗಿಸಿದ ತಂಡಕ್ಕೆ ಅಭಿನಂದನೆಗಳು.
ReplyDeleteDhanyavadagalu :-)
DeleteNice blog, very informative. Keep good work of sharing these kind on knowledge. Thanks
ReplyDeleteThanks a lot :-)
Delete