Infront of Gandhikota Ticket Counter |
ಜಮ್ಮಲಮಡುಗುವಿನಲ್ಲೊಂದು ಮಿನಿ ರೇಸು.
Entrance into Gandhikota Caves |
ಅಂತೂ ಇಂತೂ ಓಡಿ ಸುಮಾರು ನೂರೈವತ್ತು ಇನ್ನೂರು ಮೀಟರ್ ದೂರದಲ್ಲಿದ್ದ, ಹೋಗ್ತಿದ್ದ ಬಸ್ಸನ್ನು ಹತ್ತಿ ಹಿಡಿದಿದ್ದಾಯ್ತು. ನೋಡಿದ್ರೆ ಹಿಂದೆ ಯಾವ ಫ್ರೆಂಡ್ಸೂ ಇಲ್ಲ ! ಎಲ್ಲಾ ಹಿಂದೆಲ್ಲೋ ಇದ್ದಾರೆ ! ಭಯ್ಯಾ ಭಯ್ಯಾ ಒಕ್ಕ ನಿಮಿಷಂ, ಮಾ ಫ್ರೆಂಡ್ಸು ವಸ್ತಾರು ಅಂತ ಡ್ರೈವರಿಗೇ ಕೂಗಿ ಹೇಳಿದ್ದು ಕೇಳಿದ ಡ್ರೈವರು ನಿಲ್ಲಿಸಿದ ಗಾಡಿ. ಕೆಲ ಸೆಕೆಂಡು ಕಳೀತು. ದಾಸ್ ಬಂದು ಹತ್ಕೊಂಡ. ಗಾಡಿ ಹೊರಡೋಕೆ ಶುರುವಾಯ್ತು. ವೆಯ್ಟ್ ವೆಯ್ಟ್ ಅಂದ್ರೂ ಕೇಳಿಸಿಕೊಳ್ಳದೇ ಹೊರಟಿದ್ದ ಡ್ರೈವರಿಗೆ ಕೇಳಿಸುವಂತೆ ನನ್ನ ಪಕ್ಕದಲ್ಲಿದ್ದ ಜನ ಬಸ್ಸಿನ ತಗಡು ತಟ್ಟಿದ ಮೇಲೆ ಬಸ್ಸು ನಿಂತು. ಹಿಂದೆ ನೋಡಿದ್ರೆ ಉಳಿದವ್ರು ನಿಧಾನ ಬರ್ತಾ ಇರೋದು ಕಾಣ್ತು. ಹೇ, ಬರ್ರಪ್ಪ ಅಂತಂದಿದ್ದು ಕೇಳಿದ ಅವ್ರೂ ಓಡಿ ಬಂದು ಹತ್ಕೊಳ್ತಿದ್ದಂಗೆ ಬಸ್ಸು ಹೊರಟಿತು ಮುಂದೆ. ನಾನೇನೋ ಓಡ್ಬಂದಿದ್ದೆ. ಆದ್ರೆ ಹಿಂದೇ ಬರ್ತಿದ್ದೋರಿಗೆ ಎದುರು ಬಂದಿದ್ದ ಬೈಕುಗಳ್ಯಾವುದೂ ಸೈಡು ಬಿಡದೇ ಅವ್ರಿಗೆ ಬೇಗ ಬರೋಕಾಗಿರ್ಲಿಲ್ಲ. ಮ್ಯಾರಥಾನ್ ಓಡಿ ಅಭ್ಯಾಸವಿದ್ದಿದ್ದು ಇವತ್ತು ಹೋಗ್ತಿದ್ದ ಬಸ್ಸು ಹಿಡಿದು ಇಪ್ಪತ್ನಿಮಿಷ ಉಳ್ಸೋಕಾದ್ರೂ ಸಹಾಯವಾಯ್ತಲ್ಲ ಅಂತ ಖುಷಿಯಾಯ್ತು :-)
ಹಳ್ಳಿ ಹೈದರೊಟ್ಟಿಗೆ ಬಾರದ ಭಾಷೆಯಲ್ಲಿ ತಂತ್ರಜ್ಞಾನ ಸಂವಹನ !
ಕೋಲಿಮಿಗುಂಡ್ಲಕ್ಕೆ ಬರೋ ಬಸ್ಸಲ್ಲಿ ಸೀಟಿಲ್ಲದೇ ನೇತಾಡ್ಕೊಂಡು ಬರ್ತಿದ್ದ ನಮಗೆ ಮೂರೂಕಾಲರ ಹೊತ್ತಿಗೆ ಸೀಟು ಸಿಕ್ತು ಅಂತಾಯ್ತು. ಗಂಡಿಕೋಟದ ಬಗ್ಗೆ ಮಾತಾಡ್ತಿದ್ದ ನಮ್ಮ ದಾಸಿನ ಮೊಬೈಲು, ಅದ್ರಲ್ಲಿದ್ದ ವೀಡಿಯೋ ನೋಡಿದ ಪಕ್ಕದವನೊಬ್ಬ ಆ ವೀಡಿಯೋ ನಂಗೂ ಕಳಿಸ್ತೀಯಾ ಅಂತ ಕೇಳೋಕೆ ಪ್ರಯತ್ನ ಮಾಡ್ತಿದ್ದ. ಆದ್ರೆ ಅವ ಹೇಳೋದು ದಾಸಿಗೆ ಅರ್ಥ ಆಗ್ತಿಲ್ಲ. ಕಳ್ಸೋಕೆ ಬರೋಲ್ಲ ಅಂತ ಹೇಳೋಕೆ ದಾಸಿಗೂ ಬರ್ತಿಲ್ಲ ! ಮುಂದೆ ಗೊತ್ತಿದ್ದ ತೆಲುಗು ಬರ್ತಿದ್ದ ಮಾಧವ ನಿದ್ದೆ ಮೂಡಲ್ಲಿದ್ದ. ಹಿಂದೆ ಕೂತ ತೆಲುಗು ಕೊಂಚಂ ಕೊಂಚ ಅರ್ಥ ಆಗೋ, ಕುಟ್ಟಿ ಕುಟ್ಟಿ ಮಾತಾಡೋಕೂ ಪ್ರಯತ್ನಿಸ್ತಿದ್ದ ನಾನು ಮಧ್ಯ ಬಂದೆ. ಮೀ ಮೊಬೈಲ್ ಲು ಶೇರಿಟ್ ಉಂದಾ(ನಿಮ್ಮ ಮೊಬೈಲಲ್ಲಿ ಶೇರಿಟ್ ಇದ್ಯಾ) ಅಂದೆ. ಲೇದು ಅಂದ ಅವ. ಈ ಆರು ಮಂದಿ ಗ್ರೂಪಲು ಒಕ್ಕ ಅಬ್ಬಾಯಿಕಿ ತೆಲುಗು ವಸ್ತುಂದಿ(ಈ ಆರು ಜನರ ಗ್ರೂಪಲ್ಲಿ ಒಬ್ಬನಿಗೆ ತೆಲುಗು ಬರುತ್ತೆ ) ಅಂತ ಅವನ ಪಕ್ಕದಲ್ಲಿದ್ದವ ಖುಷಿಯಾಗಿ ಉದ್ಗರಿಸಿದ. ಮಾಕು ತೆಲುಗು ಕಂಪ್ಲಿಟ್ಗಾ ಆವಟಲೇದು. ಕೊಂಚಂ ಕೊಂಚ ವಸ್ತುಂದಿ. ಇಪ್ಪುಡೇ ಮ್ಯಾನೇಜ್ ಚೇಸ್ತಾನು(ನನಗೂ ತೆಲುಗು ಪೂರ್ತಿ ಬರೋಲ್ಲ. ಸ್ವಸ್ವಲ್ಪ ಬರುತ್ತೆ. ಅದ್ರಲ್ಲೇ ಹೆಂಗೂ ನಿಭಾಯಿಸ್ತೀನಿ) ಅಂತ ನಾನು ನಕ್ಕೆ. ಸರಿ, ಕಳ್ಸೋದೆಂಗೆ ಅಂತ ಯೋಚ್ನೆ ಮಾಡ್ತ ಮೀರು ಫೋನ್ ಎಕ್ಕಡ ಉಂದಿ, ಈ ವೀಡಿಯೋ ಎಪ್ಪುಡು ಪ್ಲೇ ಚೇಸ್ತಾರು ಅಂದೆ(ನಿಮ್ಮ ಫೋನ್ ಎಲ್ಲಿದೆ, ಈ ವೀಡಿಯೋ ತಗೊಂಡ್ರೂ ಅದ್ನ ಹೆಂಗೆ ಪ್ಲೇ ಮಾಡ್ತೀರಿ ಅಂದೆ). ಮಾ ಫೋನು ಸ್ಯಾಮ್ಸಂಗು . ಅಕ್ಕಡ ವೀಡಿಯೋ ಪ್ಲೇ ಆವ್ತುಂದಿ ಅಂದ ಅವ ಆ ಫೋನು ತಾರದ ನೆನಪಾಗಿ ಆ ಫೋನು ಇಕ್ಕಡ ಲೇದು, ಈ ಫೋನ್ ಕಿ ಸೆಂಡ್ ಚೇಸ್ತಾರಾ. ಇಕ್ಕಡಿಂಚಿ ಅಕ್ಕಡ ತರುವಾತ ಕಾಪಿ ಚೇಸ್ತಾನು ಅಂದ ಅವ(ಈ ಫೋನಿಗೆ ಕಳಿಸ್ತೀರ, ಇದ್ರಿಂದ ಅದಕ್ಕೆ ಕಾಪಿ ಮಾಡ್ಕೋತೀನಿ ಅಂದ ಅವ). ಅವ ಹೊರತೆಗೆದ ಲಾವಾ ಮೊಬೈಲೋ ನೋಕಿಯಾ ೨೬೦೦ ಗಿಂತ ಕೊಂಚ ಉತ್ತಮಮಟ್ಟದ ಮೊಬೈಲಷ್ಟೆ. ಅದ್ರಲ್ಲಿ ವಿ.ಜಿ.ಯ ಕ್ಯಾಮರಾ, ಹೆಚ್.ಡಿ ವೀಡಿಯೋ ಬಂದ್ರೆ ಓಪನ್ನೂ ಆಗದ ಪ್ಲೇಯರ್ರುಗಳಿದ್ದವು. ಮೀಕು ಫೋನ್ ಮೆಮರಿ ಕಾರ್ಡ್ ಇಸ್ತಾನು. ನೂವು ಮೆಮೋರಿ ಕಾರ್ಡ್ಲು ವೀಡಿಯೋ ಕಾಪಿ ಚೇಯಂಡಿ (ನಿಮಗೆ ಮೆಮರಿ ಕಾರ್ಡ್ ಕೊಡ್ತೀನಿ , ಆ ಮೆಮೋರಿ ಕಾರ್ಡಿಗೆ ನಿಮ್ಮ ಫೋನಿಂದ ವೀಡಿಯೋ ಹಾಕ್ಕೊಡಿ) ಅಂದ ಅವ. ಆದ್ರೆ ದಾಸಿನ ಫೋನಲ್ಲಿದ್ದುದು internal memory ಅಷ್ಟೆ. ಅದಕ್ಕೆ ಹೊರಗಿಂದ ಮೆಮರಿ ಕಾರ್ಡ್ ಹಾಕೋಕೂ ಬರ್ತಿರ್ಲಿಲ್ಲ. ಅದನ್ನ ಅವನಿಗೆ ಅರ್ಥ ಮಾಡ್ಸೋಕೆ ಇನ್ನೂ ಸ್ವಲ್ಪ ಪ್ರಯತ್ನ ಮಾಡ್ಬೇಕಾಯ್ತು. ಈ ಅಬ್ಬಾಯಿ ಮೊಬೈಲ್ ಲು ಎಕ್ಟರನಲ್ ಮೆಮರಿ ಕಾರ್ಡ್ ಆಪ್ಟನ್ ಲೇದು. ಫುಲ್ ಇಂಟರ್ನಲ್ ಮೆಮರಿ. ಸೋ, ಮೀರು ಮೆಮರಿ ಕಾರ್ಡ್ ಇಕ್ಕಡ ಇನಸರ್ಟ್ ಆವಟಲೇದು ಅಂದೆ. ಅರ್ಥವಾದ ಅವನ ಮುಖ ಬಾಡಿತು ಹಂಗಾದ್ರೆ ಈ ವೀಡಿಯೋ ಇಸ್ಕಳಕ್ಕೆ ಆಗೋದೇ ಇಲ್ವಾ ಅಂತ. ಪಟ್ಟನೆ ನನ್ನ ಹಳೆ ನೋಕಿಯಾ ನೆನಪಾದ ನಾ ಮೀರು ಮೊಬೈಲ್ ಲು ಬ್ಲೂಟೂಥ್ ವಸ್ತುಂದಾ ಅಂದೆ(ನಿಮ್ಮ ಮೊಬೈಲಲ್ಲಿ ಬ್ಲೂಟೂಥ್ ಇದ್ಯಾ). ಹೂಂ ಅಂದ ಅವ ಖುಷಿಯಿಂದ. ಕೊನೆಗೆ ಅವ್ನ ಮೊಬೈಲಲ್ಲಿ ಬ್ಲೂಟೂಥ್ ಆನ್ ಮಾಡಿಸಿ , ಅದ್ನ ದಾಸಿನ ಮೊಬೈಲಿನ ಜೊತೆ pair ಮಾಡಿ ದಾಸಿನ ಹತ್ರವಿರೋ ಒಟ್ಟು ೧೦೨ ಎಂಬಿಯ ನಾಲ್ಕು ವೀಡಿಯೋಗಳನ್ನ ಕಳ್ಸೋ ಹೊತ್ತಿಗೆ ಅವ್ರು ಇಳಿಯೋ ಸ್ಟಾಪ್ ಬಂದಿತ್ತು ! ಸಖತ್ ಖುಷಿಯಾಗಿದ್ದ ಅವ್ರಿಬ್ರೂ ನನ್ನ ಕೈಕುಲುಕಿ ಥ್ಯಾಂಕ್ಸ್ ಭಯ್ಯಾ ಅಂತ ಎರಡೆರೆಡು ಸಲ ಹೇಳೋದ್ರು. ಗೊತ್ತಿಲ್ಲದ ಊರಲ್ಲಿ ತಿಳಿದ ಚೂರ್ಚೂರೇ ಭಾಷೆಯಿಂದ ಆ ಭಾಷೆಯೊಂದೇ ಗೊತ್ತಿರೋ ಹಳ್ಳಿಗರೊಂದಿಗೆ ಅವ್ರಿಗೆ ಅರ್ಥವಾಗುವಂತೆ ಮಾತಾಡಿ, ಅವ್ರ ಉತ್ತರನೂ ಪಡೆದಿದ್ದು ಸಖತ್ ಖುಷಿ ಕೊಟ್ಟಿತ್ತು. ನಾವೇ ಟಿ.ಟಿ ಮಾಡ್ಕೊಂಡು ಬೇರೆ ಬೇರೆ ರಾಜ್ಯಕ್ಕೆ ಸುಮಾರು ಸಲ ಹೋಗಿದ್ರೂ ಅದ್ರಲ್ಲಿದ್ದ ಡ್ರೈವರಿಗೆ ಹೋಗುವಲ್ಲಿನ ಭಾಷೆ ಚೆನ್ನಾಗಿ ಬರ್ತಿದ್ರಿಂದ ನಮಗೆ ಹೋದ ಜಾಗಗಳಲ್ಲಿನ ಸ್ಥಳೀಯರೊಂದಿಗೆ ಬೆರೆಯೋ ಅವಕಾಶವೇ ಸಿಕ್ತಿರಲಿಲ್ಲ. ಹಂಗಾಗಿ ಹೊಸ ಊರುಗಳ ಸಾಮಾನ್ಯರೊಂದಿಗೆ ಅತೀ ಸಾಮಾನ್ಯರಾಗಿ ಓಡಾಡೋ ಅನುಭವ ಕೊಟ್ಟ ಈ ಟ್ರಿಪ್ಪು, ವೆಲ್ಲೂರು ಟ್ರಿಪ್ಪು ಒಂಥರಾ ಅವಿಸ್ಮರಣೀಯ.
ನಿಧಾನಕ್ಕೆ ಕೋಲಿಮಿಗುಂಡ್ಲಕ್ಕೆ ಬಂದ ಬಸ್ಸವ ೪೨ ಕಿ.ಮೀ ದಾರಿಗೆ ಒಂದೂವರೆ ಘಂಟೆಗೂ ಹೆಚ್ಚೊತ್ತು ತಗೊಂಡಿದ್ದ ! ಅಲ್ಲಿಂದ ನಂದ್ಯಾಲಕ್ಕೆ ಹೋಗೋ ಬಸ್ಸುಗಳೆಲ್ಲಾ ಬೇಲಂ ಮೇಲೇ ಹೋಗುತ್ತೇಂತ ಕೇಳಿದ್ರೂ ಖಾಲಿಯಿದ್ದ ಸ್ಟಾಂಡಲ್ಲಿ ಅಂತಾ ಬಸ್ಸುಗಳಿಗೆ ಕಾಯ್ತಾ ಕೂರೋಕೆ ಮನಸ್ಸಿರಲಿಲ್ಲ. ಅಲ್ಲೇ ಪಕ್ಕದಲ್ಲಿದ್ದ ಜ್ಯೂಸಂಗಡಿಯಲ್ಲಿ ತಲಾ ಎರಡೆರೆಡು ಗ್ಲಾಸ್ ಬಾದಾಮ್, ಮಜ್ಜಿಗೆ ಹೀರೋ ಹೊತ್ತಿಗೆ ಕೊಂಚ ಜೀವ ಬಂದಿತ್ತು. ಅಷ್ಟಕ್ಕಾದ ಬಿಲ್ಲು ೭೦ ರೂ ಅಷ್ಟೆ ! ಅಲ್ಲಿಂದ ಐದು ಕಿ.ಮೀ ದೂರವಿದ್ದ ಬೇಲಂಗೆ ತಲಾ ಹದಿನೈದರಂತೆ ಚಾರ್ಜು ಕೇಳಿದ ಆಟೋದವನತ್ರ ತೀರಾ ಚೌಕಾಸಿ ಮಾಡದೇ ಅದನ್ನೇ ಹತ್ತಿ ಹೊರಟ ನಾವು ಬೇಲಂ ತಲುಪೋ ಹೊತ್ತಿಗೆ ನಾಲ್ಕೂಹತ್ತಾಗ್ತಾ ಬಂದಿತ್ತು. ಬೆಳಗ್ಗಿಂದ ಬಿಡುವು ಕೊಟ್ಟಿದ್ದ ಮಳೆ ಆಟೋದಲ್ಲಿ ಹೋಗ್ತಿದ್ದ ನಮ್ಮ ಮೇಲೆ ತನ್ನ ಶಕ್ತಿ ಪ್ರದರ್ಶನ ಶುರು ಮಾಡಿತ್ತು. ಡ್ರೈವರ ಪಕ್ಕ ಕೂತ ಮಾಧವ ಮತ್ತೆ ನನ್ನ ಪ್ಯಾಂಟುಗಳು ಅರ್ಧಕ್ಕರ್ದ ಒದ್ದೆ ! ಬೇಲಂ ತಲುಪಿದೊಡನೆ ತೀರಾ ಒದ್ದೆಯಾಗದಿದ್ದ ನಾನು ತಲಾ ಐವತ್ತರ ಪ್ರವೇಶದ ಚೀಟಿ ತರೋಕೆ ಹೋದರೆ ಮಾಧವ ಬಟ್ಟೆ ಬದಲಾಯಿಸೋಕೆ ಜಾಗ ಹುಡುಕ್ತಿದ್ದ. ಆತ ವಾಪಾಸ್ ಬಂದು ನಾವೊಬ್ಬ ಗೈಡನ್ನು ಹುಡುಕಿ ಗುಹೆಯೊಳಗೆ ಇಳಿಯೋ ಹೊತ್ತಿಗೆ ೪:೨೫
ಬೇಲಂ ಬಿಲದ ಇತಿಹಾಸ:
೩೨೨೯ ಮೀಟರಿನಷ್ಟು ಉದ್ದವಿರುವ ಇದು ಭಾರತದಲ್ಲೇ ಎರಡನೆಯ ಅತೀ ಉದ್ದವಾದ ನೈಸರ್ಗಿಕ ಗುಹೆಯೆನ್ನಲಾಗುತ್ತದೆ. ಮೊದಲನೇ ಸ್ಥಾನ ಮೇಘಾಲಯದ ಕ್ರೆಮ್ ಲಿಯಾಟ್ ಪ್ರಾಹ್ ಪಡೆದಿದೆ ಎನ್ನುತ್ತಾರೆ ನಮ್ಮ ಗೈಡು ಚಂದ್ರಶೇಖರ ರೆಡ್ಡಿ. ೧೮೮೪ರಲ್ಲಿ ಈ ಗುಹೆಯನ್ನು ಬ್ರಿಟಿಷ್ ಸರ್ವೆಯರ ರೊಬರ್ಟ್ ಬ್ರೂಸ್ ಫೂಟ್ ಕಂಡು ಹಿಡಿದರೂ ಅದನ್ನು ಹೆಚ್ಚು ಪ್ರಚಾರಕ್ಕೆ ತಂದಿದ್ದು ಡೇನಿಯಲ್ ಗೆಬಾಯರ್ ಮತ್ತವರ ತಂಡ( H Daniel Gebauer). ಅವರ ನೆನಪಲ್ಲೇ ಗುಹೆಯ ಪ್ರವೇಶದಲ್ಲಿ ಕೂರಲಿರೋ ಸ್ವಲ್ಪ ವಿಶಾಲವಾದ ಸ್ಥಳವನ್ನು ಗೆಬಾಯರ್ ಹಾಲ್ ಎಂದೇ ಹೆಸರಿಸಲಾಗಿದೆ. ಈ ಸ್ಥಳದ ಬಗ್ಗೆ ಸ್ಥಳೀಯರಿಗೆ ಮುಂಚೆಯೇ ಗೊತ್ತಿತ್ತು. ಇಲ್ಲಿ ಜೈನ ಮತ್ತು ಬೌದ್ಧ ಸನ್ಯಾಸಿಗಳು ತಪಸ್ಸು ಮಾಡುತ್ತಿದ್ದರು ಎಂಬ ಐತಿಹ್ಯಗಳಿದ್ದರೂ ಆ ಕಾಲದ ಯಾವುದೇ ಶಾಸನಗಳಾಗಲೀ, ಬರಹಗಳಾಗಲೀ ಈ ಗುಹೆಯ ಒಳಗಿಲ್ಲ. ಗೆಬಾಯರ್ ಅವರ ತಂಡದ ಜೊತೆ ಸಹಕರಿಸಿದ್ದ ಶ್ರೀ ಬಚ್ಚಂ ಚಲಪತಿ ರೆಡ್ಡಿ,ಶ್ರೀ ಪೋತಿರೆಡ್ಡಿ ರಾಮಸುಬ್ಬಾರೆಡ್ಡಿ ಅವರ ಗೌರವಸೂಚಕವಾಗಿ ಅವರ ಹೆಸರಿನ ಹಾಲುಗಳೂ ಗುಹೆಯ ಒಳಗಿವೆ. ಗುಹೆಯ ಪ್ರವೇಶದ್ವಾರದಲ್ಲೇ ಗುಹೆಯ Founder ಎಂದು ಚಲಪತಿರೆಡ್ಡಿ ಅವರ ಪ್ರತಿಮೆಯನ್ನೂ ಕಾಣಬಹುದು. ಇಲ್ಲಿ ೩.೫ ಕಿ.ಮೀ ಗುಹೆಯಿದ್ರೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರೋ ಪ್ರದೇಶ ಸುಮಾರು ೧.೫ ಕಿ.ಮೀ ಅಷ್ಟೆ. ಗುಹೆಯೊಳಗೆ ಅನೇಕ ಕಡೆ ಸರಳುಗಳನ್ನು ಹಾಕಿ ಕೆಲಸ ನಡೆಯುತ್ತಿರುವುದನ್ನು ಕಾಣಬಹುದು. ಸುಣ್ಣದ ಕಲ್ಲುಗಳಿಂದಾದ ಈ ಗುಹೆ ನಿರ್ಮಾಣವಾದ ಬಗ್ಗೆ ಹಲವಾರು ಕತೆಗಳಿದ್ದು ಅದೇ ಒಂದು ಲೇಖನದ ವಸ್ತುವಾದೀತು !
One of the views inside the Belam Caves |
೧. ಸಿಂಹ ದ್ವಾರ
೨. ಛಲಪತಿ ರೆಡ್ಡಿ ಹಾಲು
೩. ಮಂಟಪ
೪. ಕೋಟಿಲಿಂಗ/Thousand hoods
೫. ಮಾಯಾ ಮಂದಿರ
೬. ಪಾತಾಳ ಗಂಗೆ
೬. ಧ್ಯಾನ ಮಂದಿರ
೭. ರಾಮರೆಡ್ಡಿ ಹಾಲು
೮. ಆಲದ ಮರ / Banyan tree hall
ಸಿಂಹ ದ್ವಾರ:
ಬೇಲಂ ಎನ್ನುವ ಊರಿನಲ್ಲಿರುವ ಬಿಲ/ಗುಹೆ ಆದ್ದರಿಂದ ಇದಕ್ಕೆ ಬೇಲಂ ಬಿಲ ಎನ್ನುತ್ತಾರೆ. ಸ್ಥಳೀಯರ ಬಾಯಲ್ಲಿ ಇದು ಬರೀ "ಬಿಲ" ಅಷ್ಟೆ. ಬೇಲಂಗೆ ಹೋಗಬೇಕು ಅಂದ್ರೆ ಇಲ್ಲಿ ಯಾರಿಗೂ ಗೊತ್ತಾಗೊಲ್ಲ. "ಬಿಲ" ಅಥವಾ "ಬಿಲ ಕೇವ್ಸ್" ಅಂದ್ರೆ ತಕ್ಷಣ ದಾರಿ ತೋರಿಸ್ತಾರೆ ! ಗುಹೆಯಿಳಿದು ಗೆಬಾಯರ್ ಹಾಲಿನ ವಿಶಾಲ ವಾತಾವರಣ ದಾಟಿ ಮುಂದೆ ಸಾಗುತ್ತಿದ್ದಂತೆ ಗುಹೆ ಕಿರಿದಾಗುತ್ತಾ ಸಾಗುತ್ತೆ. ಅದ್ರಲ್ಲಿ ಮೊದಲು ಸಿಗೋದು ಸಿಂಹ ದ್ವಾರ ಅನ್ನೋ ಪ್ರವೇಶದ್ವಾರ. ಅದ್ರ ಎರಡು ಚಿತ್ರಗಳನ್ನು ಇಲ್ಲಿ ಕಾಣಬಹುದು. ಚಿತ್ರವನ್ನು ಜೂಮ್ ಮಾಡಿದ್ರೆ ಆ ಬೋರ್ಡೂ ಕಾಣುತ್ತೆ :-)
At the Simha Dwara |
ಸಿಂಹ ದ್ವಾರದಿಂದ ಮುಂದೆ ಬರುತ್ತಿದ್ದ ಹಾಗೆ ಮುಂಚೆ ಹೇಳಿದ ಛಲಪತಿ ರೆಡ್ಡಿ ಹಾಲು ಸಿಗುತ್ತದೆ. ಇಲ್ಲಿನ ಛಾವಣಿಯಲ್ಲಿ ಪ್ರಕೃತಿನಿರ್ಮಿತವಾದ ತೂತುಗಳನ್ನು ಕಾಣಬಹುದು. ಈ ಗುಹೆ ಸುಣ್ಣದ ಕಲ್ಲು ಮತ್ತು ಗಟ್ಟಿಕಲ್ಲುಗಳಿಂದಾದದ್ದು. ಭೂಮಿಯೊಳಗೆ ಹರಿದ ನೀರಿಗೆ ಸುಣ್ಣದ ಕಲ್ಲುಗಳು ಕರಗಿ ಈ ಗುಹೆಯಾಗಿದ್ದು, ಆವಿಯಾದ ನೀರು ಮೇಲೆ ಹೋದಂತೆ ಛಾಚಣಿಯಲ್ಲಿ ತೂತುಗಳಾಗಿವೆ ಎನ್ನಲಾಗುತ್ತದೆ. ಇಂತಹ ತೂತುಗಳನ್ನು ಗುಹೆಯ ಹಲವು ಭಾಗಗಳಲ್ಲಿ ಕಾಣಬಹುದು. ನೀರು ಹರಿದ ಜಾಗವನ್ನೇ ಕೊಂಚ ವಿಸ್ತರಿಸಿ ಈಗಿರುವ ಓಡಾಡುವ ಜಾಗ ನಿರ್ಮಿಸಲಾಗಿದೆ. ಛಲಪತಿ ರೆಡ್ಡಿ ಹಾಲಿನಲ್ಲಿ ಬರುವವರ ಆಕರ್ಷಣೆಗೆಂದು ಕೃತಕ ಕಾರಂಜಿಯನ್ನು ನಿರ್ಮಿಸಲಾಗಿದೆ. ಇಲ್ಲೇ ತಲೆಯೆತ್ತಿ ನೋಡಿದರೆ ಗುಹೆಯ ಮೇಲ್ಭಾಗದಿಂದ ಒಲಗೆ ಆಮ್ಲಜನಕದ ಪೂರೈಕೆ ಮಾಡಲು, ಇಲ್ಲಿನ ಇಂಗಾಲವನ್ನು ಹೊರತೆಗೆಯಲು ಅಳವಡಿಸಿರೋ ಪೈಪುಗಳನ್ನು ಕಾಣಬಹುದು. ಇಂತಹ ಪೈಪುಗಳು ಗುಹೆಯ ಹಲವು ಕಡೆಯಿರೋದ್ರಿಂದ ಗುಹೆಯೊಳಗೆ ಬೇರ್ಯಾವ ಗಾಳಿ ಬಾರದಿದ್ದರೂ ಉಸಿರುಗಟ್ಟಿ ಸಾಯುವ ಭಯವಿಲ್ಲ ! ಆದ್ರೆ ಒಳಗೆ ಹಾಕಿರೋ ಲೈಟುಗಳಿಂದ ಮತ್ತು ಇಂಗಾಲದಿಂದ ಒಳಹೋದಂಗೂ ಜಾಸ್ತಿಯಾಗೋ ಸೆಖೆಯಿಂದ ನಿರ್ವಾಹವಿಲ್ಲ :-( ವಿದ್ಯುತ್ ಚಾಲಿತ ಈ ಗಾಳಿ ಪೈಪುಗಳು ಕೈಕೊಟ್ರೆ ಏನು ಕತೆಯೆನ್ನೋದೂ ಸ್ಪಷ್ಟವಿಲ್ಲ ! ಇಲ್ಲಿರೋ ಧನಿವರ್ಧಕಗಳಲ್ಲಿ ಹಾಡು ಬರ್ತಾ ಇರುತ್ತೆ ಯಾವಾಗ್ಲೂ. ಬರ್ತಿರೋ ಗೈಡುಗಳ ಕೈಯಲ್ಲಿರೋ ಮೊಬೈಲುಗಳಲ್ಲಿ ಕೆಲವರ ಕೈಯಲ್ಲಿರೋ ವೈರ್ ಲೆಸ್ಸಲ್ಲಿ ಸಿಗ್ನಲ್ಲಿರುತ್ತೆ. ಹಂಗಾಗಿ ಏನಾದ್ರೂ ಆದ್ರೆ ತಕ್ಷಣಕ್ಕೆ ಎಚ್ಚರಿಸೋ ವ್ಯವಸ್ಥೆಯಿದೆ, ಶುರುವಾದ ಇಷ್ಟು ವರ್ಷಗಳಲ್ಲಿ ಏನೂ ಅವಗಡಗಳಾಗಿಲ್ಲ ಅನ್ನೋದೇ ಇದನ್ನು ಪ್ರವೇಶಿಸೋಕಿರೋ ಧೈರ್ಯ.
At the Chalapati Reddy Hall, Artificial Spring created there |
Holes created by the water which evaporated after the formation of caves |
Pipes to supply Oxygen and suck Carbon dioxide from the cave. Electricity wires are also drawn from these |
One of the pathways inside the Belam caves |
ಮಂಟಪ:
ಛಲಪತಿರೆಡ್ಡಿ ಹಾಲಿನ ನಂತರ ಸಿಗುವ ಸ್ಥಳ ಮಂಟಪ. ಅದಕ್ಕಾಗಿ ಗುಹೆಯ ಕೆಳಭಾಗಕ್ಕೆ ಸಾಗಬೇಕು. ಇಲ್ಲಿ ಸಾಗೋ ಹಾದಿಯಲ್ಲಿ ಅನೇಕ ಕಡೆಗಳಲ್ಲಿ ಕಬ್ಬಿಣದ ಸರಳುಗಳನ್ನು, ಮೆಟ್ಟಿಲುಗಳನ್ನೂ ಮಾಡಲಾಗಿದೆ. ಮಂಟಪಕ್ಕೆ ಸಾಗುವ ಹಾದಿಯಲ್ಲಿ ಅನೇಕ ಕಡೆಯಲ್ಲಿ ಇನ್ನೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗದ ಹಾದಿಗಳನ್ನು ಕಾಣಬಹುದು. ಅವುಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ಯೋಗ್ಯಗೊಳಿಸಲು ಬೇಕಾದ ಹಣಕಾಸಿನ ನೆರವು ಇಲ್ಲದ್ದರಿಂದ ಅವುಗಳನ್ನು ಹಾಗೇ ಬಿಡಲಾಗಿದೆ ಎನ್ನುತ್ತಾರೆ ಇಲ್ಲಿನ ಗೈಡುಗಳು
Paths in caves which are not yet open to the general public |
ಮಂಟಪ ನೋಡಿಕೊಂಡು ಮುಂದೆ ಬಂದರೆ ಎರಡು ಹಾದಿಗಳು ಸಿಗುತ್ತೆ. ಎಡಕ್ಕೆ ಹೋದರೆ ಕೋಟಿಲಿಂಗ, ಮಾಯಾಮಂದಿರ ಸಿಗುತ್ತೆ. ಅಲ್ಲೇ ಆನೆಯ ಪಾದದಂತೆ ಕಾಣುವ ರಚನೆಗಳು, ಭೀಮನ ಗದೆಯಂತಹ ರಚನೆಗಳು ಸಿಗುತ್ತೆ. ಇವೆರಡರ ಬಗ್ಗೆ ಇಲ್ಲಿನ ಗೈಡುಗಳು ಹೇಳೇ ಹೇಳುತ್ತಾರೆ.
structures resembling the feet of an elephant @Belum caves |
Kaushik, Madhava, Das observing the Bheemana Gade |
At the Banyon Hall |
Way to Enter MayaMandir, Kotilinga |
Thousand Hoods/Kotilinga |
ಅಲ್ಲಿಂದ ಮುಂದೆ ಬಂದರೆ ಸಿಗೋದು ಮಾಯಾ ಮಂದಿರ. ಇಲ್ಲಿನ ಬೆಳಕಿನ ವ್ಯವಸ್ಥೆಯ ಮಧ್ಯ ನಿಂತು ಫೋಟೋ ತೆಗೆಸಿಕೊಳ್ಳೋದೇ ಒಂದು ಖುಷಿ. ಕೇಸರಿ, ಕೆಂಪು, ಹಳದಿಯ ಮಿಶ್ರಣದಲ್ಲಿ ನಾವು ತೊಟ್ಟ ಬಟ್ಟೆಯ ಬಣ್ಣಗಳೆಲ್ಲಾ ಫೊಟೋದಲ್ಲಿ ಬದಲಾಗಿ ಕಾಣುತ್ತಿದ್ದರೂ ಆ ಫೋಟೋಗಳೇ ಒಂದು ಮಜಾ. ನನ್ನ ಹಸಿರಂಗಿ ಕೆಲ ಫೋಟೋಗಳಲ್ಲಿ ಕಪ್ಪಂಗಿಯಾಗಿದೆ !
At MayaMandir |
ಇಲ್ಲಿಂದ ಮುಂದಿರೋ ಪಾತಾಳ ಗಂಗೆಯನ್ನು ನೋಡಲು ಇಲ್ಲಿರೋ ಕಬ್ಬಿಣದ ಮೆಟ್ಟಿಲುಗಳಲ್ಲಿ ಕೆಳಗಿಳಿಯಬೇಕು. ಇಲ್ಲಿ ಕೊಂಚ ಹುಷಾರಾಗಿ ಕೆಳಗಿಳಿಯಬೇಕಾದ್ದು ಅನಿವಾರ್ಯ. ಶಿವಲಿಂಗದ ಮೇಲೆ ನೀರು ಬೀಳುತ್ತಿರೋ ದೃಶ್ಯವನ್ನು ಕಾಣ್ತಿದ್ದ ಹಾಗೆ ಕೆಳಗಿಳಿದು ಬಂದ ಸುಸ್ತು ಮರೆಯಾಗುತ್ತೆ. ಇಲ್ಲಿ ಸ್ವಲ್ಪ ಇಕ್ಕಟ್ಟಾಗಿರೋ ಜಾಗದಲ್ಲಿ ನುಸುಳಿ ಮುಂದೆ ಬರಬೇಕು. ಗೈಡುಗಳು ಹಿಂದೇ ಇದ್ದರೂ ಇಲ್ಲಿ ಮನಸ್ಸಿಗೆ ಬಂದ ಹಾಗೆ ಪುಂಡಾಟಿಕೆ ಮಾಡಬಹುದು ಅಂತೇನಿಲ್ಲ. ಯಾಕೆಂದ್ರೆ ಗುಹೆಯ ಹಲವು ಕಡೆ ಇದ್ದ ಹಾಗೆ ಇಲ್ಲೂ ಸಿಸಿಟಿವಿ ಕ್ಯಾಮೆರಾಗಳಿವೆ
Way down to reach Patalaganga |
PatalaGanga |
ಪಾತಾಳಗಂಗೆಯನ್ನು ನೋಡಿ ಮೇಲೆ ಹತ್ತಿ ಬಂದರೆ ಸಿಗೋದು ಧ್ಯಾನಮಂದಿರ. ಇಲ್ಲಿ ಕೊಂಚ ಹೊತ್ತು ಕೂತು ಧ್ಯಾನ ಮಾಡಬಹುದು. ಇಲ್ಲೇ ಮೇಲಿಂದ ಆಮ್ಲಜನಕ ತರೋ ಪೈಪೂ ಇರುವುದರಿಂದ ಅದರ ಕೆಳಗೆ ತಲೆಕೊಟ್ಟು ಸ್ವಲ್ಪ ಹೊತ್ತು ಸೆಖೆಯಿಂದ ಮುಕ್ತಿಯನ್ನೂ ಪಡೆಯಬಹುದು.
DhyanaMandira |
ಇದರಿಂದ ಮುಂದೆ ಬರುತ್ತಿದ್ದ ಹಾಗೆ ರಾಮರೆಡ್ಡಿ ಹಾಲು ಸಿಗುತ್ತೆ.ಇಲ್ಲಿ ವಿಶೇಷವೇನಿಲ್ಲ. ಇಕ್ಕಟ್ಟಾದ ಜಾಗದಿಂದ ಹೊರಬಂದು ಕೊಂಚ ವಿಶಾಲವಾದ ಜಾಗ ಸಿಗುತ್ತೆ ಅಷ್ಟೆ. ಇದರ ನಂತರ ಸಿಗೋ ಜಾಗವೇ ಮಂಟಪ. ಇಲ್ಲಿಂದ ಮುಂದೆ ಬಂದ ನಾವು ಛಲಪತಿರೆಡ್ಡಿ ಹಾಲನ್ನು ಹಾದು, ಸಿಂಹದ್ವಾರದ ಮೂಲಕ ಹೊರಬಂದೆವು.
ಗೆಬರ್ ಹಾಲು:
ಮುಂದೆ ಗೆಬರ್ ಹಾಲಿಗೆ ಬರುತ್ತಿದ್ದ ಹಾಗೇ ಗುಹೆಯ ಬಾಯಿ ತೆರೆಯುತ್ತೆ. ತೆರೆದ ಸುರಂಗದ ಬಾಯಲ್ಲಿ ಸ್ವಚ್ಛ ಆಮ್ಲಜನಕ ಸವಿಯೋ ಸವಿಯಿದ್ಯಲ್ಲ.. ಆಹಾ . ಅದೇ ಖುಷಿ. ಆಮ್ಲಜನಕ ಪಂಪ್ ಮಾಡೋ ಪೈಪುಗಳಿದ್ರೂ , ಉಸಿರುಗಟ್ಟದೇ ಇದ್ರೂ ಒಂದು ಘಂಟೆ ಗುಹೆಯೊಳಗಿದ್ದು ಸೆಖೆಯಿಲ್ಲದ ಗುಹೆಯ ಹೊರಗಿನ ವಾತಾವರಣಕ್ಕೆ ಬಂದಾಗ ಬರೋ ಫೀಲೇ ಬೇರೆ ! ಈ ಸ್ವಚ್ಛ ಗಾಳಿ, ವಾತಾವರನ ಅದ್ಭುತ ಅನಿಸಿಬಿಡುತ್ತೆ. ಒಟ್ನಲ್ಲಿ ಗುಹೆಯ ಹೊರಬರುವ ಹೊತ್ತಿಗೆ ಐದೂಮುಕ್ಕಾಲಾಗಿತ್ತು. ಐದೂವರೆಗೆ ಗುಹೆ ಬಾಗಿಲು ಹಾಕೋದ್ರಿಂದ ನಮ್ಮದೇ ಕೊನೆಯ ಬ್ಯಾಚು ಅಂದ್ಕೊಂಡಿದ್ವಿ. ಯಾಕಂದ್ರೆ ನಮ್ಮ ಹಿಂದೇನೇ ಗೈಡು ಅಲ್ಲಿರೋ ಲೈಟುಗಳನ್ನು ಆಫ್ ಮಾಡ್ತಾ ಬರ್ತಿದ್ದ. ನಮ್ಮ ನಂತರ ಬಂದ ಗ್ರೂಪೊಂದಕ್ಕೆ ಅಲ್ಲಿ ಲೈಟು ಆಫಾಗಿದೆ ಅಂತ ಎರಡು ಮೂರು ಸ್ಥಳಗಳನ್ನು ನೋಡೋಕಾಗದೆ ವಾಪಾಸ್ಸು ಕಳಿಸಿದ್ದ ಮತ್ತೊಬ್ಬ ಗೈಡು !
Gebaur Hall |
Wonderfull world waiting for us at the exit of Belum caves |
ಗುಹೆಯೊಳಗೆ ಹೋದಾಗ ಬಸಿದುಹೋದ ಬೆವರಿಗೋ ಬೆಳಗ್ಗಿಂದ ತಿರುಗಿದ ಸುಸ್ತಿಗೋ ಗೊತ್ತಿಲ್ಲ. ಬೇಲಂನ ಟಿಕೇಟ್ ಕೌಂಟರಿನ ಎದುರಿದ್ದ ನೀರು ಬೋರ್ ನೀರಾಗಿದ್ರೂ ಬಿಡದೇ ಕುಡಿದೆವು. ಅಲ್ಲೇ ಇದ್ದ ಸ್ವಚ್ಛ ಶೌಚ ಗೃಹಗಳೂ ಸಹಾಯಕ್ಕೆ ಬಂದವು :-) ಇಂತಿಪ್ಪ ಹಗುರಾದ ನಾವು ಅಲ್ಲಿನ ಉದ್ಯಾನವನದಲ್ಲಿ ಅಡ್ಡಾಡುತ್ತಾ ಸೂರ್ಯಾಸ್ತದ ಸೊಬಗನ್ನು ಸವಿಯುತ್ತಾ ಮುಂದಿದ್ದ ದೊಡ್ಡ ಬುದ್ದನ ಹತ್ತಿರ ಬಂದೆವು. ಅಷ್ಟರಲ್ಲೇ ಅಲ್ಲಿ ಬಂದಿದ್ದ ಮೂಲತಃ ಮಂಗಳೂರಿನವರಾದ ಸದ್ಯ ಆಂಧ್ರದಲ್ಲಿರುವ ಕನ್ನಡ ದಂಪತಿಗಳಿಂದ ನಂದ್ಯಾಲದಲ್ಲಿರುವ ಹೋಟೇಲೊಂದರ ಬಗ್ಗೆ, ಅದರ ನಂಬರ್ರೂ ಸಿಕ್ತು. ಅದನ್ನಿಸ್ಕೊಂಡು ಇಲ್ಲಿಂದ ಮತ್ತೆ ಕೋಲಿಮಿಗುಂಡ್ಲಕ್ಕೆ ಹೋಗೋದೇಗೆ, ಅಲ್ಲಿಂದ ನಂದ್ಯಾಲಕ್ಕೆ ಬಸ್ಸೆಷ್ಟೊತ್ತಿಗೆ ಅಂತ ತಲೆ ಕೆಡಿಸ್ಕೋತಿದ್ವಿ. ಬಿಲಂಗೆ ಪ್ರತೀ ಹದಿನೈದು ನಿಮಿಷಕ್ಕೆ ಬಸ್ಸಿದೆ ಅಂತ ಮಧ್ಯಾಹ್ನ ಕೇಳಿಸ್ಕೊಂಡಿದ್ದ ನಾವು ಇಲ್ಲಿಗೆ ಬಂದದ್ದು ಬಂದಾಗಿದೆ. ಬುದ್ದನ್ನ ಸಮೀಪದಿಂದ ನೋಡೋದೇ ಸರಿ ಅಂತ ಮುಂದೆ ಹೋದ್ವಿ.
Budha at the Belum Garden |
ನಾನು, ಸುಬ್ಬು ಬುದ್ದನ ಫೋಟೋ ತೆಗೆಯೋ ಹೊತ್ತಲ್ಲಿ ಉಳಿದವ್ರು ಹೊರಗಡೆ ನಂದ್ಯಾಲದ ಬಸ್ಸಿನ ಬಗ್ಗೆ ವಿಚಾರಿಸೋಕೆ ಹೋದ್ರು. ಶುರುವಾತಲ್ಲೇ ಫ್ಲಾಪಾಗೋ ಲಕ್ಷಣಗಳಿದ್ದ ಟ್ರಿಪ್ಪು ಇಲ್ಲಿಯವರೆಗೆ ಚೆನ್ನಾಗಿ ನಡೆದದ್ದಕ್ಕೆ , ಮುಂದೆಯೂ ನಗುನಗುತ್ಲೇ ನಡೀಲಿ ಅಂತ ಕೇಳ್ಕೋತಾ ಹೊರಗೆ ಹೆಜ್ಜೆ ಹಾಕಿದ್ವಿ. ಆರೂವರೆಗೆ ನಂದ್ಯಾಲದ ಬಸ್ಸು ಬಿಲಂ ಗುಹೆಯೆದುರೇ ಬರುತ್ತೆ ಅನ್ನೋ ಮಾಹಿತಿ ಕಲೆಹಾಕಿದ್ದ ಮಾಧವ ಮತ್ತು ಉಳಿದವ್ರು ನಮ್ಮ ಹಾದಿ ಕಾಯ್ತಿದ್ದರು. ಅಲ್ಲಿದ್ದ ಬೋರ್ಡಿಂದ ಇದು "ಬೇಲಂ" ಬಿಲ ಗುಹೆಯೇ ಸರಿ , ಬಿಲಂ ಅಲ್ಲ ಅಂತ ಖಚಿತಪಡಿಸಿಕೊಂಡ್ವಿ. ಬೆಂಗಳೂರಿನಿಂದ ಬಸ್ಸಲ್ಲಿ ಬರುವಾಗ ಸಿಕ್ಕು ತಾನು ಅನಂತಪುರದವ ಅಂತ ಹೇಳ್ಕೊಂಡು ಬೇಲಂ ಅನ್ನೋ ಸ್ಥಳವೇ ಇಲ್ಲ, ಬಿಲ ಅದು, ಗೂಗಲ್ಲಲ್ಲಿದ್ದು ತಪ್ಪಂತಿದ್ದವ ಬಿಟ್ಟದ್ದು ಎಷ್ಟು ರೈಲು ಅನ್ನೋದು ಮತ್ತೊಮ್ಮೆ ಸಾಬೀತೂ ಆಯ್ತು !
Welcome Board to BElum daves |
ಬೇಲಂ ಬಿಲದ ಪ್ರವೇಶದ್ವಾರಕ್ಕೆ ಟಾಟಾ ಹೇಳುತ್ತಾ ಆರೂವರೆಗೆ ಬಂದ ಬಸ್ಸನ್ನು ಹತ್ತಿದ ನಾವು ತಲಾ ೭೯ ಕೊಟ್ಟು ರಾತ್ರೆ ೮:೫೦ಕ್ಕೆ ನಂದ್ಯಾಲ ಮುಟ್ಟಿದೆವು ಅನ್ನುವಲ್ಲಿಗೆ ಒಂದು ಅಧ್ಯಾಯಕ್ಕೆ ವಿರಾಮ.
ಮುಂದಿನ ಭಾಗದಲ್ಲಿ: ನಂದ್ಯಾಲದ ರಾತ್ರಿ ಮತ್ತು ಅಹೋಬಲದತ್ತ ಆರ್ವರ ಪಯಣ
No comments:
Post a Comment