ಹಾಸನದ ಕೇಂದ್ರಭಾಗದಲ್ಲೇ ಇದೆ ಹಾಸನಾಂಬಾ ದೇವಸ್ಥಾನ. ಭೂಲೋಕ ಸಂಚಾರಕ್ಕೆಂದು ಬಂದ ದೇವಿಯರು ಇಲ್ಲಿನ ಸೌಂದರ್ಯಕ್ಕೆ ಮನಸೋತು ಇಲ್ಲೇ ನೆಲೆಸಿದರೆಂಬ ಐತಿಹ್ಯವಿರೋ ಈ ಹಾಸನಾಂಬಾ ದೇವಸ್ಥಾನ ತೆಗೆಯೋದು ವರ್ಷಕ್ಕೊಮ್ಮೆ ಮಾತ್ರ.
ಆ ಸಂದರ್ಭದಲ್ಲಿ ದೇವಸ್ಥಾನವನ್ನು ನೋಡೋಕೆ ಸಿಕ್ಕಾಪಟ್ಟೆ ಜನ ಬಂದಿರ್ತಾರೆ. ಬೆಳಗ್ಗೆ ಆರಕ್ಕೆ ದರ್ಶನಕ್ಕೆ ತೆರೆಯೋ ಈ ದೇವಸ್ಥಾನ ಮತ್ತೆ ಮುಚ್ಚೋದು ರಾತ್ರೆ ೨ಕ್ಕೆ. ಮುಂಜಾನೆ ಮೂರಕ್ಕಾಗಲೇ ಮಾರನೇ ದಿನದ ದರ್ಶನಕ್ಕಾಗಿ ಜನ ನೆಲೆಸಿರುತ್ತಾರೆ ಅಂದರೆ ದೇವಸ್ಥಾನದ ಪ್ರಸಿದ್ದಿ ಹೇಗಿರಬಹುದು ಲೆಕ್ಕ ಹಾಕಿ
ದೇವಸ್ಥಾನ ಮತ್ತದರ ಕ್ಯೂಗಳು:
ದೇವಸ್ಥಾನಕ್ಕೆ ಮುಂಚೆ ಧರ್ಮದರ್ಶನವೆಂಬ ಕ್ಯೂ ಮಾತ್ರ ಇತ್ತಂತೆ. ಆಮೇಲೆ ವಿ.ಐ.ಪಿಗಳು , ಅವರು ಇವರು ಅಂತ ಬಂದು ಜನರಿಗೆ ತೊಂದರೆ ಆಗೋಕೆ ಶುರುವಾದ್ಮೇಲೆ ವಿಶೇಷ ದರ್ಶನದ ಕ್ಯೂ ಮಾಡಿದ್ದಾರಂತೆ. ಮುಂಚೆ ನೂರೈವತ್ತು ರೂಗಳ ಪ್ರವೇಶ ದರವಿದ್ದ ವಿಶೇಷ ಕ್ಯೂಗೆ ಪ್ರತಿ ವರ್ಷವೂ ಬೆಲೆಯೇರಿಕೆಯಾಗಿ ಈ ವರ್ಷ ೩೦೦ ರೂ ದರ ನಿಗದಿಯಾಗಿದೆ. ವಿಶೇಷ ಕ್ಯೂ ಅಂದರೆ ನೇರ ದೇವರ ದರ್ಶನವೆಂದಲ್ಲ. ಅದರಲ್ಲಿ ಹೊರಗಡೆ ೬ ಸಾಲುಗಳಿವೆ. ಅದನ್ನು ದಾಟಿ ದೇಗುಲದ ಪ್ರಾಂಗಣಕ್ಕೆ ಪ್ರವೇಶ ಪಡೆದರೆ ಅಲ್ಲಿ ಮತ್ತೆ ೮ ಸಾಲುಗಳು.
ಕ್ಯೂನಲ್ಲಿ ಎಷ್ಟು ಹೊತ್ತು ಕಾಯಬೇಕು?
ಕ್ಯೂನಲ್ಲಿ ಎಷ್ಟೊತ್ತು ಕಾಯಬೇಕು ಅನ್ನೋ ಪ್ರಶ್ನೆಗುತ್ತರ ನೀವು ಯಾವತ್ತು, ಎಷ್ಟೊತ್ತಿಗೆ ಹೋಗ್ತಾ ಇದ್ದೀರಿ ಅನ್ನೋದರ ಮೇಲೆ ನಿರ್ಧಾರವಾಗುತ್ತೆ. ಶನಿವಾರ ಮುಂಜಾನೆ ೭:೧೦ಕ್ಕೆ ವಿಶೇಷ ದರ್ಶನದ ಕ್ಯೂನಲ್ಲಿ ನಿಂತಿದ್ದ ನಾವು ೮:೪೦ಕ್ಕೆ ಬಂದಿದ್ದೆವು. ಅದರ ಮುಂದಿನ ಒಳಗಿನ ಕ್ಯೂ ಮುಗಿಸಿ ದೇಗುಲದ ಪ್ರಾಂಗಣಕ್ಕೆ ಬರೋ ಹೊತ್ತಿಗೆ ೯:೩೦. ಅಲ್ಲಿಂದ ದೇವರ ದರ್ಶನ ಪಡೆಯೋಕೆ ಹೆಚ್ಚೊತ್ತು ಬೇಡ. ಎಂಟೇ ನಿಮಿಷದಲ್ಲಿ ಒಳಗಿನ ದೇವರುಗಳ ದರ್ಶನ ಪಡೆದು ಹೊರಗೆ ಬಂದಿದ್ದೆವು. ಅಂದಾಗೆ ಯಾವಾಗ್ಲೂ ಹೀಗಿರಲ್ಲ. ಬೆಳಗ್ಗೆ ೮:೩೦ ಕ್ಕೆ ಹೋದೋರು ಮದ್ಯಾಹ್ನ ೫ಕ್ಕೆ ಬಂದಿದ್ದು, ಬೆಳಗ್ಗೆ ೯ಕ್ಕೆ ಹೋದೋರು ರಾತ್ರೆ ೮ಕ್ಕೆ ಬಂದಿದ್ದೂ ಇದೆ ! ನಾವು ದರ್ಶನ ಮುಗಿಸಿ ವಾಪಾಸ್ಸು ಬರುವಾಗ ವಿಶೇಷ ದರ್ಶನದ ಕ್ಯೂ ಅಲ್ಲಿನ ಆರು ಸಾಲುಗಳ ಪೆಂಡಾಲು, ಚಪ್ಪಲಿ ಇಡೋ ಜಾಗಗಳ ದಾಟಿ ಅದರ ಪಕ್ಕದೆರೆಡು ಬೀದಿಗಳನ್ನು ದಾಟಿತ್ತೆಂದರೆ ಹೊತ್ತಾದ ಮೇಲೆ ಅದು ಹೇಗೆ ಬೆಳೆಯುತ್ತಾ ಹೋಗುತ್ತೆ ಅಂತ ಲೆಕ್ಕ ಹಾಕಿ. ಇನ್ನು ಧರ್ಮದರ್ಶನದ ಕ್ಯೂಗಳು ಎಷ್ಟುದ್ದ ಇರತ್ತೆ ಅಂತ ಹೇಳ್ದೇ ಇದ್ರೆ ಒಳ್ಳೇದೇನೋ! ಅಂದಹಾಗೆ ಧರ್ಮದರ್ಶನದ ಕ್ಯೂನಲ್ಲೋ ವಿಶೇಷ ಕ್ಯೂನಲ್ಲೋ ರಾತ್ರಿ ಬಂದಿದ್ರಿ ಅಂತಿಟ್ಕೊಳಿ. ಹನ್ನೆರಡರ ಒಳಗೆ ದೇಗುಲದ ಪ್ರಾಗಂಣಕ್ಕೆ ಬಂದಿದ್ರೆ ಅಂತಹವರಿಗೆ ರಾತ್ರಿ ೨ರವರೆಗಿನ ದರ್ಶನಕ್ಕೆ ಅವಕಾಶ. ನಂತರ ಬಂದೋರು ಬೆಳಗ್ಗೆ ಆರರವರೆಗೆ ಮತ್ತೆ ಕಾಯಬೇಕಾಗುತ್ತೆ.
ದೇಗುಲದ ವೈಶಿಷ್ಟ್ಯತೆ ಮತ್ತು ಸುತ್ತಲಿರೋ ದಂತಕತೆಗಳು:
ಈ ವರ್ಷ ಅಕ್ಟೋಬರ್ ೨೦ಕ್ಕೆ ತೆಗೆದಿದ್ದ ಈ ದೇಗುಲ ೩೧ಕ್ಕೆ ಮುಚ್ಚುತ್ತೆ. ಹಿಂದಿನ ವರ್ಷ ಮುಚ್ಚೋ ಸಮಯದಲ್ಲಿ ದೇಗುಲದಲ್ಲಿ ಅಕ್ಕಿ,ದೀಪ, ಮಲ್ಲಿಗೆ ಹೂಗಳನ್ನು ಇಟ್ಟು ಬಾಗಿಲು ಹಾಕಿರುತ್ತಾರಂತೆ. ಮುಂದಿನ ವರ್ಷ ಬಾಗಿಲು ತೆಗೆಯುವಾಗ ಆ ಅಕ್ಕಿ ಅನ್ನವಾಗಿರುತ್ತೆ, ದೀಪ ನಂದದಂತೆ ಹಾಗೇ ಇರುತ್ತೆ ಮತ್ತೆ ಮಲ್ಲಿಗೆ ಹೂ ಬಾಡದಂತಿರುತ್ತೆ ಅನ್ನೋ ನಂಬಿಕೆಯಿದೆ. ಈ ದೇಗುಲದ ಬಾಗಿಲು ಹಾಕಿದ ದಿನ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆಯಂತೆ. ಆ ಸಮಯದಲ್ಲಿ ದೇವರ ಮೇಲೆ ಬೀರಿ ಕೆಳಗೆ ಬಿದ್ದ ಕಾಳುಮೆಣಸನ್ನು ಆರಿಸಿಟ್ಟುಕೊಂಡರೆ ಒಳ್ಳೆಯದಾಗುತ್ತೆ ಎನ್ನೋ ನಂಬಿಕೆಯಿದೆ. ಈ ದೇಗುಲ ತೆಗೆದ ಸಂದರ್ಭದಲ್ಲಿನ ಪ್ರತೀ ಶುಕ್ರವಾರವೂ ರಾತ್ರಿ ವಿಶೇಷ ಪೂಜೆ ನಡೆಯುತ್ತೆ.ಅದಕ್ಕೆ "ಮಗಾರ ಪೂಜೆ" ಅಂತ ಹೆಸರು. ಈ ಪೂಜೆಯಲ್ಲಿ ಪಾಲ್ಗೊಳ್ಳೋ ೭ ಜನ ಮುತ್ತೈದೆಯರು ಬೆಳಗಿನಿಂದ ಏನನ್ನೂ ತಿನ್ನುವಂತಿಲ್ಲ,ಕುಡಿಯುವಂತಿಲ್ಲ. ಅವರಿಗೆ ರಾತ್ರೆ ಇಲ್ಲಿಯೇ ಉಪ್ಪು-ಖಾರವಿಲ್ಲದ ಊಟ. ಆ ಪೂಜೆ ಶುಕ್ರವಾರ ರಾತ್ರೆ ೧೧ಕ್ಕೆ ನಡೆಯೋದ್ರಿಂದ ಆ ಸಂದರ್ಭದಲ್ಲಿ ರಷ್ಷು ಜಾಸ್ತಿಯಾಗುತ್ತೆ. ಇಲ್ಲಿನ ದೇವಿಗೆ ಹರಕೆಯಾಗಿ ಸೀರೆ, ಬಳೆ, ಸೋಬಲಕ್ಕಿ(ಸೀರೆಯಲ್ಲಿ ಅಕ್ಕಿ, ಕಾಯಿ,ಬಳೆ ಎಲ್ಲಾ ಹಾಕಿ ಕೊಡೋದು)ಗಳನ್ನು ಅರ್ಪಿಸುತ್ತಾರೆ.
ದೇಗುಲಕ್ಕೆ ಬೇರೆ ಸಮಯದಲ್ಲಿ ಹೋಗೋಕಾಗುಲ್ವಾ ? ಹೋದರೆ ನೋಡೋಕೇನಿದೆಯಲ್ಲಿ
ಹಾಸನಾಂಬಾ ದೇಗುಲಕ್ಕೆ ವರ್ಷದಲ್ಲಿ ಆ ದೇವಿ ತೆಗೆದಿರೋ ಸಮಯ ಬಿಟ್ಟು ಬೇರೆ ಸಮಯದಲ್ಲೂ ಹೋಗಬಹುದು. ಅಲ್ಲಿನ ದೇಗುಲದ ಗರ್ಭಗೃಹ ತೆರೆಯೋದು ವರ್ಷದ ಹತ್ತು-ಹನ್ನೆರಡು ದಿನಗಳು ಮಾತ್ರವಾದರೂ ಅಲ್ಲಿರುವ ದೇವಿಯ ಪಾದುಕೆಯನ್ನು ಪ್ರತೀ ಸೋಮವಾರ ಸಂದರ್ಶಿಸಬಹುದು. ಅದರ ಪಕ್ಕದಲ್ಲೇ ಇರೋ ದರ್ಬಾರ್ ಗಣಪತಿ ಗುಡಿ ಪ್ರತಿದಿನವೂ ತೆಗೆದಿರುತ್ತೆ. ಹಾಗೆಯೇ ಪಕ್ಕದಲ್ಲಿರೋ ಸಿದ್ದೇಶ್ವರ ಸ್ವಾಮಿ, ಗಣಪತಿ ಮತ್ತು ಉತ್ಸವ ಮೂರ್ತಿಗಳನ್ನೂ ಪ್ರತಿ ದಿನ ಸಂದರ್ಶಿಸಬಹುದು. ಆದರೆ ಸೋಮವಾರ ಮಾತ್ರ ಇಲ್ಲಿಗೆ ಹೆಚ್ಚಿನ ಜನ ಬರುತ್ತಾರೆ.ದೇವಿಯ ಪಾದ ಅವತ್ತು ಮಾತ್ರ ದರ್ಶನಕ್ಕೆ ಸಿಗೋ ಕಾರಣದಿಂದಿರಬಹುದೇನೋ ಅದು.
ಬರ್ಯೋಕೆ ಹೋದ್ರೆ ಇದ್ರ ಬಗ್ಗೆ ಇನ್ನೂ ಸಾಕಷ್ಟು ವಿಷ್ಯಗಳಿರುತ್ತೆ. ಆದ್ರೆ ಸದ್ಯಕ್ಕಿಷ್ಟು ಸಾಕೆನ್ನುತ್ತಾ , ಇನ್ನೂ ಹೋಗ್ಬರ್ದೇ ಇರೋರಿಗೆ ಅಲ್ಲಿಗೆ ಹೋಗ್ಬರೋಕೆ ನಾಳೆನೇ ಕೊನೇ ದಿನ ಅನ್ನುತ್ತಾ, ಅಲ್ಲಿನ ಪಯಣಕ್ಕೆ , ಮಾಹಿತಿಗೆ ಗೈಡಾಗಿದ್ದ ಕಾವ್ಯ Kavyashree Bharadwaj , ದಿವ್ಯ Divya Shree ರಿಗೆ ಧನ್ಯವಾದಗಳನ್ನರ್ಪಿಸುತ್ತಾ ಸದ್ಯಕ್ಕೆ ವಿರಮಿಸುತ್ತೇನೆ
No comments:
Post a Comment