ಯಾರು೦ಟು ಯಾರಿಲ್ಲ
ನೋವಿನಲೂ ಜೊತೆಯಿಲ್ಲ
ನಲಿವ೦ತೂ ಮೊದಲಿಲ್ಲ
ಸೀಳಿಹುದು ತನುವೆಲ್ಲಾ |೧|
ನನ್ನ ನೆರಳಲೇ ಬೆಳೆದವರಿವರು
ಕೈಕಾಲ ಕಡಿದರು
ತ೦ಪುಗಾಳಿಯ ಕುಡಿಯುತ ಬುಡಕೇ
ಕೊಡಲಿ ಇಟ್ಟರು |೨|
ಕಿರಿದ೦ತೆ ಈಗಿರುವ ರಸ್ತೆ
ಬೇಕೇನೋ ಮೈ ದಾನದ೦ತೆ
ಒ೦ದು ಕಡಿದು ನೆಡುವೆನೆರಡೆ೦ದೆ
ಜನರ ಮೆಚ್ಚಿಸೆ
ಅಮವಾಸೆಯ ಚ೦ದಿರನ೦ತೆ ಇದು
ಬರಿ ಹುಸಿ ಭರವಸೆ|೩|
ನ೦ಗ್ಯಾರು ಮಿತ್ರ
ಯಾರು ಶತ್ರುವಣ್ಣಾ ?
ಪ್ರಗತಿಯ ವೇಗದ ವ್ಯಥೆಯಣ್ಣ
ಕರುಣಾ ಜನಕ ಕಥೆಯಣ್ಣ|೪|
ಹಣ್ಣ ನೀಡುವೆ ನನ್ನ ಜೀವವುಳಿಸೋ
ಎ೦ದು ನನ್ನ ಕೋರಿಕೆಯಲ್ಲ
ನಾನಿಲ್ಲದೆ ನೀನಿಲ್ಲ
ಮಳೆ ಬೆಳೆಯಿಲ್ಲದೆ ಬದುಕಿಲ್ಲ|೫|
ಕೋಗಿಲೆಗೆ ಮಾಮರವಿಲ್ಲ
ಪ್ರಾಣಿಗಳಿಗೆ ಆಸರೆಯಿಲ್ಲ
ನಿ೦ಗ್ಯಾಕಿದೆಲ್ಲಾ ತಿಳಿಯೊಲ್ಲ
ನನ್ನೂ ಬದುಕ ಬಿಡೊ ನಲ್ಲ |೬|
No comments:
Post a Comment