Wednesday, July 6, 2011

ಬೆಂಗ್ಳೂರಲ್ಲಿ ಬಸ್ ಮಿಸ್ ಆದಾಗ

ನಾಲ್ಕು ಜೋಡಿ ಸಿಂಹಗಳು, ಎತ್ತರೆತ್ತರಕ್ಕೆ ಹಾರುತ್ತಿದ್ದ ತ್ರಿವರ್ಣ ಧ್ವಜ, ಕಣ್ಣೆತ್ತಿ ನೋಡುವಂತ, ನೋಡಿದೊಡನೆ ಮನಸಲ್ಲಚ್ಚಳಿಯುವಂತ ಕಟ್ಟಡ... ಬೆಂಗಳೂರಿನ ಶಿವಾಜಿನಗರದಲ್ಲಿ ಗಿಜಿಗಿಜಿ ಭಾನುವಾರವೂ ನ್ಂಗೆ ಬೇಕಾದೆಡೆ ಬಸ್ಸಿರಲಿಲ್ಲ. ಕಾದು ಕಾದು ಬೇಸತ್ತ ನಾನು ಮುಂದಿನ ನಿಲ್ದಾಣದವರೆಗೆ ನಡೆಯೋಕೆ ಶುರು ಮಾಡಿದಾಗ ಕಂಡ ಕೆಲವು ದೃಶ್ಯಗಳಿವು...ಮೇಲೆ "ಸರ್ಕಾರದ ಕೆಲಸ ದೇವರ ಕೆಲಸ" ಎಂಬ ಬೋರ್ಡು.. ಹಾಂ ಅದೇ ವಿಧಾನಸೌಧ. . ಎತ್ತಮ ರಾಜಕಾರಣಿಗಳ, ಜತ್ತಿಯಂತವರ, ಹೆಗಡೆಯಂತವರ ಸಜ್ಜನಿಕೆಗೆ ಸಾಕ್ಷಿಯಾಗಿದ್ದ ಭವನ, ಇತ್ತೀಚಿಗಿನ ರಾಜಕೀಯ ದೊಂಬರಾಟಗಳಿಗೆ ಸಾಕ್ಷಿಯಾದ ಭವನದೆಡೆಗೆ ನಿಂತಾಗ ಏನೋ ಅನಿರ್ವಚನೀಯ ಅನುಭವ. ದೂರದಿಂದಲೇ ಅದರ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾಗ ಅನಿಸಿದ್ದು ಒಂದೇ.. ulti le

ವಿಧಾನಸೌಧದ ದೂರದಿಂದಲೇ ಗಮನ ಸೆಳೆವಂತ ಉಬ್ಬು ಚಿತ್ರಗಳು ಗಮನ ಸೆಳೆಯುತ್ತದೆ. ಇನ್ನು ಒಳ್ಹೋಗಿ ನೋಡಿದರೆ ಹೇಗೋ? .. ವಿಧಾನಸೌಧದ ಪಕ್ಕದಲ್ಲೇ ವಿಕಾಸಸೌಧ.. ಅದರ ಎರಡು ಗೋಪುರಗಳು, ಅದರೆತ್ತರದ ಸ್ಥಂಬಗಳು ನಾವೇನು ಕಮ್ಮೀನಾ ಎಂದಗಿತ್ತು. ಅದರ ಎದುರಿಗೆ ೩೦ರೂ ಗೆ ಛಾಯಾಚಿತ್ರ ತೆಗೆದುಕೊಡೋ ಛಾಯಾಚಿತ್ರಗ್ರಾಹಕರ(ಪಪರಾಚಿಗಳ) ಸುತ್ತಾಟ. ಎದುರಿಗೆ "ನಮ್ಮ ಮೆಟ್ರೋ" ಕಾಮಗಾರಿ ನಡೀತಾ ಇತ್ತು. ಹಾಗಾಗಿ ಆ ಪಪರಾಚಿ ಇದ್ದಂಲ್ಲಿಂದ ಸರಿಯಾಗಿ ಕಾಣುತ್ತಿರಲಿಲ್ಲ. ಆದರೆ ಅವನ ಬಣ್ಣದ ಮಾತುಗಳಿಗೆ, ತೋರಿಸೋ ಚಿತ್ರಗಳಿಗೆ ಯಾರಾದರೂ ಮರುಳಾಗುವುದೇ..

ಹಾಗೇ ಎದುರಿಗೆ ಕಂಡದ್ದು ಹೈಕೋರ್ಟ. ಹೊರ ಆವರಣದಲ್ಲಿ ಮೇಯುತ್ತಿದ್ದ ನೂರಾರು ಪಾರಿವಾಣವಳು (ನಾ ಹೋಗಿದ್ದು ಭಾನುವಾರ) ಶಾಂತ ವಾತಾವರಣಕ್ಕೆ ಸಾಕ್ಷಿಯಾಗಿದ್ದವು. ಇಲ್ಲಿ ನ್ಯಾಯದೇವತೆ ನಿರಪರಾಧಿಗಳ ಬಂಧನವನ್ನು ಕಳಚಿ ನ್ಯಾಯವನ್ನು ಮುಗಿಲೆತ್ತರಕ್ಕೆ ಒಯ್ಯುತ್ತದೆ ಎಂಬುದರ ದ್ಯೋತಕದಂತಿದ್ದವು. ಅವಕ್ಕೆ ಕಾಳು ಹಾಕುತ್ತಿದ್ದ ಜನರನ್ನು ನೋಡಿದಾಗ ನ್ಯಾಯಕ್ಕೆ ಕಾಳು ಹಾಕ್ತಿದಾರಾ? ಅನ್ನಿಸ್ತು. .ಮರುಕ್ಷಣವೇ ಪ್ರತೀ ಜೀವಿಗೂ ದೇವರು ಒಂದಲ್ಲಾ ಒಂದು ರೀತಿ ಆಹಾರ ಒದಗಿಸುತ್ತಾನೆ ಎಂಬ,"ಹುಟ್ಟಿದ ದೇವರು ಹುಲ್ಲು ಮೇಯಿಸುತ್ತಾನೆ" ಎಂಬಿತ್ಯಾದಿ ಮಾತುಗಳು ನೆನಪಾದವು.

ಹಾಗೇ ಮುಂದೆ ಸಾಗುತ್ತಿದ್ದಾಗ ಕಂಡಿದ್ದು ಕಬ್ಬನ್ ಪಾರ್ಕ್.. ಅಲ್ಲಿ ಹಸಿರಿನ ಮಧ್ಯೆ ಛಾಯಾಚಿತ್ರ ತೆಗೆಸಿಕೊಳ್ಳುವ ಹಲವರಿದ್ದರು.. ಪ್ರೇಮಿಗಳು, ಕಲಾವಿದರು, ಮುದುಕರು, ಮಕ್ಕಳು.. ಹೀಗೆ ಹಲವು ವೈವಿಧ್ಯದ ಜನರಿದ್ದರು..ಹಸಿರು ಹಾಸಿನ, ಕಲ್ಲು, ಸಿಮೆಂಟ್ ರಚನೆಗಳ ಮಧ್ಯೆ ನಾನಾ ಭಂಗಿಯಲ್ಲಿ ಕೂತು ಛಾಯಾಚಿತ್ರ ತೆಗೆಸಿಕೊಳ್ಳುವವರು ತುಂಬಾ ಜನ. ಬೇಕಾದ ಸುಂದರ ತಾಣಕ್ಕಾಗಿ ಪಪರಾಚಿಗಳನ್ನು ಬಾಡಿಗೆಗೆ ಪಡೆದು ಪಾರ್ಕ್ ತುಂಬಾ ತಿರುಗುತ್ತಿದ್ದವರೂ ತುಂಬಾ ಜನ. ೮ ತರದ ಹಣ್ಣುಗಳಿಂದ ತಯಾರಾದ fruit salad ದು ಸಕತ್ ರುಚಿ.

ಇದೆಲ್ಲಕ್ಕಿಂತ ಮುಂಚೆ , ಸ್ವಲ್ಪ ಹಿಂದೆ ಸಿಕ್ಕಿದ್ದು ಕನ್ನಡ ಪ್ರಭ/Indian Express ಪತ್ರಿಕಾಲಯ. ೭-೮ ಮಹಡಿಗಳಿಗಿಂತಲೂ ಎತ್ತರದ ಅದನ್ನು ನೋಡಿ ಅಬ್ಬಾ ಅನಿಸಿತ್ತು. ಬೆಳಗ್ಗೆ ಎದ್ದು ಪತ್ರಿಕೆ ಓದಷ್ಟೇ ಗೊತ್ತಿದ್ದ ನನಗೆ ಪತ್ರಿಕಾ ಕಚೇರಿ ಅಷ್ಟು ದೊಡ್ಡದಿರುತ್ತಾ ಅಂತ ಆಶ್ಚರ್ಯವಾಯಿತು. ಆಲ್ಲೇ ಸಿಕ್ಕಿದ ವಿಶ್ವೇಶ್ವರಯ್ಯ ಸಣ್ಣ ಗೋಪುರ, ದೊಡ್ಡ ಗೋಪುರಗಳು, ಅದರಲ್ಲಿದ್ದ ಹಲವಾರು ಇಲಾಖೆಗಳು.. ಮುಗಿಲೆತ್ತರದ ಕಟ್ಟಡ, ಕತ್ತೆತ್ತಿ ನೋಡಿ ಕುತ್ತಿಗೆ ನೋವು ತರಿಸಿದವು.. ಹಡ್ಸನ ವೃತ್ತ, ರಿಚ್ಮಂಡ್ ವೃತ್ತ, ಹೈದರಾಲಿ ಖಾನ ರಸ್ತೆ, ವಾಟಾಳ್ ನಾಗರಾಜ್ ರಸ್ತೆ.. ಹೀಗೆ ಪ್ರತಿಯೊಂದು ಹೆಸರುಗಳೂ, ಸ್ಥಳಗಳೂ ಒಂದೊಂದು ರೀತಿಯ ಸಂಸ್ಕೃತಿಗಳ ಅನಾವರಣದಂತೆ ಅನಿಸುತ್ತಿದ್ದವು

ಹೋಗೋಕೆ, ಬರೋಕೆ ಬೇರೆಯದೇ ಆದ ಏಕಮುಖ ರಸ್ತೆಗಳು, ಎದುರಿಗೆ ಕಾಣುತ್ತಿದ್ದರೂ ಆ ಜಾಗಕ್ಕೆ ಹೋಗದೇ ಸುತ್ತಾಕಿ ಬರೋ ಬಸ್ಸುಗಳು, ನಿಲ್ಲಿಸಿದ ಬಸ್ಸನ್ನು ಇಲ್ಲಿಗೋಗತ್ತೆ ಅಂತ ಕೇಳೋದ್ರೊಳಗೇ ಓಡಿಸೋ ಚಾಲಕರ ಗಡಿಬಿಡಿ.. ಹೀಗೆ ಹಲವಾರು ವಿಷಯ ಮೊದಲ ಬಾರಿ ಬಂದವರಿಗೆ ವಿಚಿತ್ರ ಅನಿಸಬಹುದು. ಎರಡನೇ ದಿನ ನಡೆದು, ಹೊಟ್ಟೆ ಚುರುಗುಟ್ಟಿದ, ಬಾಯಾರಿದ ಅನುಭವ. . ಎಲ್ಲಾ ಈ ಸಲ ನನಗೆ ಸಿಕ್ಕಿದ ಹೊಸ ಅನುಭವ:-) :-) ಪ್ರತೀ ಬಾರಿ ಬಂದಾಗ್ಲೂ ಒಂದಲ್ಲಾ ಒಂಥರಾ ಎಲ್ಲಾ ನವ ನವೀನ.. ಮತ್ತೆ ಬರಬೇಕು, ಮತ್ತೆ ಹೀಗೆ miss ಆಗಿ expect ಮಾಡದೇ ಸುತ್ತಬೇಕು, ಹೊಸದು ನೋಡಬೇಕು ಎಂಬ ಬಯಕೆ ಇದನ್ನು ಬರೆದು ಮುಗಿಸುವ ಹೊತ್ತಿಗೆ ನನ್ನ ಮನದಲ್ಲಿ ಮಿಡಿತಾ ಇತ್ತು. . ಎಲ್ಲೋ .. ಅಲ್ಲಿ.

2 comments: