ಚುಕು ಬುಕು ಚುಕು ಬುಕು.. ಚುಕು ಬುಕು.. ಕೂ .. ರೈಲಿನ ಶಬ್ದ ಕೇಳಿದಾಗಲೆಲ್ಲಾ ಸಣ್ಣವರಿದ್ದಾಗ ಆಡುತ್ತಿದ್ದ ರೈಲಾಟ ನೆನಪಿಗೆ ಬರುತ್ತದೆ.ಸಣ್ಣವನಿದ್ದಾಗ ನಮ್ಮೂರು ಸಾಗರಕ್ಕೆ ಬರುತ್ತಿದ್ದ ರೈಲನ್ನು ದೂರದಿಂದ ನೋಡುವುದರಲ್ಲೇ ಖುಷಿ ಪಡುತ್ತಿದ್ದ ನನಗೆ ಮುಂದೊಮ್ಮೆ ಅದೇ ರೈಲಿನಲ್ಲಿ ದಿನಗಟ್ಟಲೇ ಪಯಣಿಸುವ ಭಾಗ್ಯ ಸಿಗುತ್ತೆ ಅಂತ ಕನಸಲ್ಲೂ ಅನಿಸಿರಲಿಲ್ಲ.ಕೆಲವರ್ಷಗಳ ಹಿಂದೆ ಪೂನಾಕ್ಕೆ, ಇತ್ತೀಚೆಗೆ ಬೆಂದಕಾಳೂರಿಗೆ ರೈಲಲ್ಲಿ ಹೋಗೋ ಸುಯೋಗ ಲಭಿಸಿತ್ತು. ಆದರೂ ದಿನ ದಿನವೂ ಬದಲಾಗಿದೆ, ದಿನ ಬರುತಿದೆ ಕಾಲ.. ಎಂಬ ಕವಿವಾಣಿಯಂತೆ ಪ್ರತಿದಿನವೂ,ಪ್ರತಿ ಪ್ರಯಾಣವೂ ಹೊಸತು ಅಂತಲೇ ನಂಗೆ ಅನ್ನಿಸುತ್ತೆ. ಇತ್ತೀಚಿಗಿನ ಮೀರತ್ ಪ್ರಯಾಣದ ಕೆಲ ನೆನಪುಗಳು ನೆನಪ ಬುತ್ತಿಯಿಂದ ಬಿಚ್ಚಿದಾಗ...
ಮೊದಲಾ ದಿನ ಅಲ್ಲಲ್ಲ ಮೊದಲ ರಾತ್ರಿ!!..
ಭಾರತ ಸ್ವಾತಂತ್ರಸಂಗ್ರಾಮದ ಸಿಪಾಯಿದಂಗೆಯ ಉಗಮಸ್ಥಾನ ಮೀರತ್ ಬಗ್ಗೆ ನೀವೆಲ್ಲ ಓದಿರಬಹುದು. ನಂ ಕರ್ನಾಟಕದ ಹೆಮ್ಮೆಯ ನಗರಿ ಬೆಂಗಳೂರಿನಿಂದ ನಮ್ಮ ದೇಶದ ರಾಜಧಾನಿ ನವದೆಹಲಿಗೆ ಸುಮಾರು ೨೩೦೦ ಕಿ.ಮೀ ಗಳಿಗಿಂತಲೂ ಹೆಚ್ಚು ದೂರ. ಸಂಪರ್ಕ ಕ್ರಾಂತಿ ರೈಲಲ್ಲಾದರೆ ೩೩, ರಾಜಧಾನಿಯಲ್ಲಾದರೆ ೩೫ ಘಂಟೆಗಳ ಪ್ರಯಾಣ. ಅಲ್ಲಿಂದ ೭೫ ಕಿಮೀ ದೂರದ ನಗರಿ ಮೀರತ್. ನನ್ನಿಲ್ಲಿವರೆಗಿನ ಜೀವನದಲ್ಲಿ ಎಂದೂ ಅಷ್ಟು ದೂರದ ಪ್ರಯಾಣ ಮಾಡಿರಲಿಲ್ಲ. ಆದರೆ ನಾನು ಅಲ್ಲಿಗೆ ಈ ಬಾರಿ ಬರಲೇಬೇಕು ಅಂತ ಅತ್ತೆ- ಮಾವನ ಅತೀವ ಒತ್ತಾಯ. ಸರಿ, ಆದದ್ದಾಯಿತು ಎಂದು ನಿರ್ಧಾರ ಮಾಡಾಯಿತು. ಬೆಂಗಳೂರಿನ ಯಶವಂತಪುರದಲ್ಲಿ ರೈಲು ಹತ್ತಿದ್ದೂ ಆಯಿತು. ಜೊತಿಗಿದ್ದಿದ್ದು ನನ್ನತ್ತೆಯ ತಮ್ಮ, ನನ್ನ ವಯಸ್ಸಿವನೇ ಆದ ಆನಂದಣ್ಣ.ರೈಲಲ್ಲಿ ಸಾಮಾನೆಲ್ಲಾ ಬಿಟ್ಟು ಎಲ್ಲಿಗೂ ಹೋಗ್ಬೇಡಿ, ಯಾರು ಏನು ಕೊಟ್ಟರೂ ತಿನ್ನಬೇಡಿ, ರೈಲಲ್ಲಿ ಸರಗಳ್ಳರು, ಸಾಮಾನು ಕಳ್ಳರು, ಜೇಬುಗಳ್ಳರು ಹೀಗೆ ಅಸಂಖ್ಯಾತ ತರದ ಕಳ್ಳರಿರುತ್ತಾರೆ ಎಂಬ ಎಚ್ಚರಿಕೆಗಳೂ ನಮ್ಮ ಜೊತೆಗೇ ಬರುತ್ತಿದ್ದವು ಅನ್ನಿ. ಎದುರಿಗೆ ಕಾಣೋ ಪ್ರತೀ ಮನುಷ್ಯನೂ ಕಳ್ಳನಾ, ಯಾವಾಗ ನಮ್ಮನ್ನು ದೋಚುತ್ತಾನೋ ಎಂಬ ಭೀತಿ ನಮಗೆ ಕಾಡುವ ಮೊದಲೇ ನಮ್ಮ ರೈಲಿನ ಹೊರಡೋ ಸಮಯ ಆಯಿತು. ಕಾಣದ ದೇವರ ಕಾಯೋ ಭರವಸೆ ಮೇಲೆ ಮಕ್ಕಳನ್ನು ಕಳಿಸಿದ್ದ ಹಲವಾರು ಹೆತ್ತವರ ಹಾರೈಕೆಯನ್ನು, ತಿರುಗೋ ಬಯಕೆಯ ಯುವಕ-ಯುವತಿಯರನ್ನು, ತಮ್ಮೂರಿಗೆ ಮರಳುತ್ತಿದ್ದ ಹಲವರನ್ನು, ಇನ್ನೂ ಅರಿಯದ ಹತ್ತು ಹಲವನ್ನು ಹೊತ್ತು ನಮ್ಮ ರೈಲು ರಾತ್ರೆ ೧೦:೨೦ ಕ್ಕೆ ನಿಲ್ದಾಣಕ್ಕೆ ಸೀಟಿಯ ಟಾಟಾ ಹೇಳಿತು.
ನಾವು ಮುಂಚೆಯೇ ಸ್ಲೀಪರ್ ಕ್ಲಾಸಲ್ಲಿ ಬುಕ್ ಮಾಡಿಸಿದ್ದೆವು.ಅದರಲ್ಲಿ ಎದುರು ಬದುರು ೬ ಸೀಟು ಮತ್ತೆ ಕಿಟಕಿ ಬದಿ ೨ ಸೀಟು. ಮೇಲ್ಗಡೆ ಬರ್ತ್ ಸಿಕ್ಕವರಿಗೆ ಅದು ನಿಜ ಅರ್ಥದಲ್ಲಿ ಸ್ಲೀಪರ್. ಮಧ್ಯ ಅಥವಾ ಕೆಳಗಡೆಯ ಬರ್ತ್ ಸಿಕ್ಕವರು ಮಲಗೋಕೆ ರಾತ್ರೆವರೆಗೆ ಕಾಯಬೇಕು. ಅಲ್ಲೀವರಗೂ ಎಲ್ಲ ಕೆಳಗಡೆ ಬರ್ತಲ್ಲೇ ಕೂತಿರುತ್ತಾರಲ್ಲಾ.. ಅದಕ್ಕೆ. ಅಂದು ನಾವಿದ್ದ ರೈಲಲ್ಲಿ ಆ ೮ರಲ್ಲಿ ಬರೀ ನಾಲ್ಕರಲ್ಲಿ ಮಾತ್ರ ಬುಕ್ ಮಾಡಿಸಿದವರು ಬಂದಿದ್ದರು. ನಾವು ಮತ್ತು ಒಂದು ದಂಪತಿ.ನಿಧಾನಕ್ಕೆ ರೈಲು ಹೊರಡತೊಡಗಿದಂತೆ ಅವರ ಪರಿಚಯ ಆಯಿತು. ಅವರು ದೆಲ್ಲಿಯವರಂತೆ. ಅವರ ಮಗನಿಗೆ ಬೆಂಗಳೂರಿನ DRDO ನಲ್ಲಿ ಕೆಲಸ ಸಿಕ್ಕಿತ್ತಂತೆ. ಅವನನ್ನು ನೋಡಲು ಬಂದಿದ್ದ ಅವರು ಸ್ವಗ್ರಾಮಕ್ಕೆ ಮರಳುತ್ತಿದ್ದರು. ನೋಡಿದರೆ ನಾವು ಕೇಳಿದ ಯಾವುದೇ ಕಳ್ಳರ ಹೋಲಿಕೆ ಕಾಣುತ್ತಿರಲಿಲ್ಲ. ಆದರೆ ಹೇಗೆ ಹೇಳುವುದು.ಯಾವ ಹುತ್ತದಲ್ಲಿ ಯಾವ ಹಾವಿದೆಯೋ?.. ಆದರೂ ಅವರ ಮಾತುಗಳನ್ನು ನಂಬಬಹುದು ಅಂತ ನಮ್ಮಿಬ್ಬರಿಗೂ ಅನ್ನಿಸಿದ್ದರಿಂದ ಅವರೊಂದಿಗೆ ಮಾತನಾಡಲಾರಂಭಿಸಿದೆವು. ಹೀಗೆ ಎಲ್ಲಿಂದ , ಎಲ್ಲಿಗೆ ಎಲ್ಲ ಆದ ಮೇಲೆ ಸ್ವಲ್ಪ ವಿಶ್ವಾಸ ಬೆಳೆಯಲಾರಂಭಿಸಿತು. ೨ ದಿನದ ಮಟ್ಟಿಗಾದರೂ ಇವರೇ ನಮ್ಮ ಬಂಧು ಬಳಗ. ಹಾಗಾಗಿ ಇವರೊಂದಿಗೆ ಸ್ವಲ್ಪವಾದರೂ ಮಾತನಾಡೋದ್ರಲ್ಲಿ ತಪ್ಪಿಲ್ಲ ಅಂತ ಅನ್ನಿಸ್ತು. ಹಾಗಾಗಿ ನಾವೂ ಅವರ ಹರಟೆಯಲ್ಲಿ ಸೇರಿಕೊಂಡೆವು. ಖಾಲಿ ಇದ್ದ ಸೀಟಿನಲ್ಲಿ ಹಿಂದಿನ ದಿನದ ರೈಲು ತಪ್ಪಿಸಿಕೊಂಡು ಈ ರೈಲಿಗೆ ಬಂದಿದ್ದ ರಿಸವ್ರೇಷನ್ ಕನ್ಫರ್ಮ್ ಆಗದಿದ್ದ ಇಬ್ಬರು ನೋಯ್ಡಾದ ಹುಡುಗರು ಕುಳಿತಿದ್ದರು. ಸೀಟಂತೂ ಸಿಕ್ಕಿಲ್ಲ, ಹೇಗಿದ್ದರೂ ಈ ಸೀಟು ಖಾಲಿ ಇದ್ಯಲ್ಲಾ, ಇಲೇ ಮಲಗೋಣ. ರಾತ್ರಿ ಟಿ.ಟಿ ಹರ್ತ ಈ ಸೀಟನ್ನು ತಮಗೆ ಮಾಡಿಸಿಕೊಳ್ಳೋಣ ಅಥವಾ ಅವನು ಬರೋವರೆಗಾದ್ರೂ ಮಲಗೋಣ ಅನ್ನೋ ಉದ್ದೇಶ ಅವರದ್ದು.
ದೂರದೂರಿಗೆ ಹೋಗೋ ರೈಲುಗಳಲ್ಲಿ ಅದರದ್ದೇ ಆದ ಅಡುಗೆ ಭೋಗಿ(PANTRY) ಇರುತ್ತದೆ ಅಂತ ಕೇಳಿದ್ದೆ. ಆದರೆ ಅದನ್ನು ನೋಡೋ ಯೋಗ ಈ ಸಲ ಸಿಕ್ಕಿತ್ತು. ( pantry ಹೊರಮುಖದ ಚಿತ್ರ (photo-1) ನೋಡಿ). ನಾನು ರೈಲತ್ತೋ ಮೊದಲೇ ಊಟ ಮಾಡಿದ್ದರಿಂದ ಅಂದು ರಾತ್ರಿ pantry ಇಂದ ಏನೂ ತಿನ್ನಲಿಲ್ಲ. ಬೆಂಗಳೂರಿನ ತಂಪು ಹವೆ, ದಿಲ್ಲಿಯ ಬೇಯೋ ಸೆಖೆಯ ಬಗ್ಗೆ, ಅವರ DRDO ಮಗನ ಕೆಲಸದ ಬಗ್ಗೆ ಹರಟಿದ ನಮಗೆ ನಮ್ಮ ಬೆಂದಕಾಳೂರ ಬಗ್ಗೆ ದೆಲ್ಲಿಗರಲ್ಲಿನ ಒಳ್ಳೆಯ ಅಭಿಪ್ರಾಯ ತಿಳಿದು ಸಂತೋಷವಾಯಿತು. ನೋಯ್ಡಾವಾಸಿಗಳೂ ಇದನ್ನು ಮೆಚ್ಚಿದರು. ಆದರೆ ಇಲ್ಲಿನ ಟ್ರಾಪಿಕ್ ಜಾಂ, ಮಾಲಿನ್ಯಗಳು ಅತೀ ಅನ್ನೋ ಅವರ ಮಾತಿಗೆ ನಾವು ತಲೆದೂಗಲೇಬೇಕಾಯಿತು..ರಾತ್ರೆ ಹನ್ನೊಂದರವರೆಗೆ ಹರಟಿದ ನಾವು ಕೊನೆಗೆ ನಮ್ಮ ಬರ್ತ್ ಹತ್ತಿ ಮಲಗಿದೆವು. ನಿಧಾನವಾಗಿ ರೈಲಿನ ಕುಲುಕಾಟದಲ್ಲಿ ನಿದ್ರಾದೇವಿ ನಮ್ಮನ್ನಾವರಿಸಲಾರಂಭಿಸಿದಳು. (ಮುಂದುವರೆಯುವುದು)
No comments:
Post a Comment