ದೊಡ್ಡ ಜನ ತಾವೆಂದು
ನೂರೊಂದು ಉಪದೇಶ
ಕೈಲಾಗದ ನಿನ್ನ ದೈನೇಸಿ ಸ್ಥಿತಿ ಹಾಸ್ಯ
ನೀನೆ ನಿನಗಸಹ್ಯವಾಗುವಷ್ಟಪಹಾಸ್ಯ
ತಮಗೆ ಸರಿಕಾಣದ್ದೆಲ್ಲ ಗೊಡ್ಡು,ವೇಷ
ಹೂಂ ಎನ್ನು ಕಾಳಿಗೆ ಬಾಗಿದೆ ಬೆನ್ನು
ಎಗರಾಡದಿರು ಬಡವ, ತರವಲ್ಲ ಆವೇಶ |1|
ದೊಡ್ಡ ವಿದ್ಯೆಯು, ಸಿರಿಯು
ತಮ್ಮದೆಂಬ ಅಭಿಮಾನ
ಅದರ ಜೊತೆ ಹೀಗಳಿಕೆ ಉಳಿದವರಿಗೆಲ್ಲ
ಶಿಷ್ಯತ್ವ ಮಾಡೆಂದು, ತಲೆಯೊಳಗೆ ಟೊಳ್ಳೆಂದು
ಬದುಕ ಗುರಿ ಅರಿಯೆಂದು, ಅದೇ ಮೂದಲಿಕೆ
ಪದೇ ಪದೇ ಚುಚ್ಚಿದರೂ ಬಂಡೇಳಲಿಲ್ಲ ನೀ
ಮೈಮೇಲೆ ಬಿದ್ದಿಹುದು ಪಡೆದ ಸಾಲದ ಬಂಡೆ
ಎಗರಾಡದಿರು ಬಡವ,ತರವಲ್ಲ ಆವೇಶ |2|
ನಿನ್ನ ವರ್ಷದ ಕೂಲಿ ಅವಗೆ ತಿಂಗಳಿಗಂತೆ
ನಿನ್ನ ಹೊಸ ಬಟ್ಟೆಯಂತಿಹುದು ಕಾಲೊರಸು
ನಿಮ್ಮ ತೋಟದ ನೀರು ಆ ಚೋಟು ಕಾರಿಗೆ
ಯಾವ ಸಮವೋ ನೀನು ದುಡ್ಡಿಲ್ದೆ ದುನಿಯದಲಿ
ಕಾದಿಹರು ನಿನಗಾಗಿ ಮನೆಯಲ್ಲಿ ಮಕ್ಕಳು
ಹಿಟ್ಟು ಹಾಕದು ಅವಕೆ ನಿನ್ನಯ ಆಕ್ರೋಶ
ಎಂದೋ ಪ್ರತಿಭೆಗೆ ಕಾಲ ಆ ಕಾಲ ಕರೆವೊಳಗೆ
ನೀನಾಗಿ ನೀನಿರು , ಬರುವುದು ಹೊಸ ನಿಮಿಷ
-ಪ್ರಶಸ್ತಿ.ಪಿ
No comments:
Post a Comment