ಗೆಳೆಯ ಶ್ರೀವತ್ಸ ಕಂಚೀಮನೆಯವರ ಮೇಲಿನ ಚಿತ್ರ ನೋಡಿ ನನಗೆ ತಕ್ಷಣಕ್ಕೆ ದಕ್ಕಿದ ಸಾಲುಗಳು..
ಈ ಬಗ್ಗೆ ಮತ್ತೆ ಬರೀಲಿಕ್ಕೆ ಆಗಿರ್ಲಿಲ್ಲ..
ಇವತ್ತು ಇನ್ನೊಂಚೂರು ಸಾಲುಗಳು :-)
ಸುರಿವ ಸೂರಿನ ಮನೆಯು
ಹರಿವ ಸೀರೆಯ ನಾನು
ತುಂಬದಿಹ ಜೋಳಿಗೆಯ ಬಾಳಿನಲ್ಲಿ
ಹೊತ್ತು, ತುತ್ತಿಕಿದೀ ಕೈಗಳನೆ ಮರೆತಿರುವ
ತುಂಬುಹೊಟ್ಟೆಯ ಅಣಕು ಗೋಳಿನಲ್ಲಿ
ಬತ್ತುತಿಹ ಕಂಗಳಲಿ, ಸುಕ್ಕಾದ ಕಾಯದಲಿ
ಯಾವ ಹಾದಿಯ ಕಾವ ಭಕ್ತೆ ನಾನು ?!
ವಿಶ್ವಾಸಿಗಳೆ ನಾಮ, ಬರುವನೇ ಆ ರಾಮ
ಬಾಳೆಂಬ ಒಣಕಾಡ ಹಾದಿಯಲ್ಲಿ (26/4/2012)
ಕಾದು ಸೋತೆನು ನಾನು ಮುಸ್ಸಂಜೆ ಹಾದಿಯಲಿ
ದಕ್ಕದಿಹ ಸೊಕ್ಕ ಮನೆ ಹೊಕ್ಕ ಸುತಗೆ
ಯಾರಿಲ್ಲ ಅಂಗಡಿಗೆ, ಒಣಗಿದೀ ಮನದಂತೆ
ಬರಿ ಧೂಳೆ ತಿನ್ನುತಿದೆ ಗಲ್ಲಾ ಪೆಟ್ಟಿಗೆ
ಆದರೂ ಕಾದಿರುವೆ , ಗ್ರಾಹಕರ ಹಾದಿಯಲಿ
ಜೀವಿಸಲು ಬೇಕಲ್ಲಾ ರೊಕ್ಕ, ಹೊದಿಕೆ
ಸತ್ತರೂ ಕೇಳದಿಹ ಸಂಬಂಧಿಗಳ ನಡುವೆ
ಚಳಿ, ಮಳೆಯ ಕಾಯಲಿದೊಂದೆ ಸೂರು
ನಿರ್ಗತಿಕಳಾಗಿರುವೆ, ಆದರೂ ಬಿಡಲೊಲ್ಲೆ
ಜೀವಿಸುವ ಆತ್ಮಬಲ ಇನ್ನು ಚೂರು
ಕವಿತೆಗೆ ಶೀರ್ಷಿಕೆ ಕೊಡಲು ಇನ್ನೂ ಭಾವಗಳು ಪಕ್ವವಾಗದ ಅನುಭವ ಏಕೋ.. ಚಿತ್ರಕ್ಕೆ ಇನ್ನೂ ಹೆಚ್ಚು ನ್ಯಾಯ ದೊರಕಿಸೋ ಪ್ರಯತ್ನದಲ್ಲಿ.. ಪ್ರಯತ್ನ ಸಫಲವಾದಾಗ ಶೀರ್ಷಿಕೆಯೂ ದೊರಕೀತೆಂಬ ವಿಶ್ವಾಸ..
ಮಾತಿಲ್ಲ ನನ್ನಲ್ಲಿ...
ReplyDelete:::
ಯಾರೂ ಇಲ್ಲದ ಅವಳ ಹಾದೀಲಿ ಅವಳ ಜತೆಗಿರೋದು ಅವಳ ಮನದಾಳದ ಬದುಕ ಪ್ರೀತಿಯ ಸೊಕ್ಕು ಮತ್ತು ಪಕ್ಕದಲ್ಲೊಂದು ಬೆಕ್ಕು...
ನಿಮ್ಮದೇ ಚಿತ್ರ ಇದು :-)
Deleteಹಾಗಾಗಿ ಬೇರೆ ಮಾತುಗಳಿಲ್ಲ ನನ್ನ ಬಳಿ..
ವಾಹ್ !!
ReplyDeleteಅವಳ ಬದುಕ ಪ್ರೀತಿಗೊಂದು ಭಾವ ಕೊಟ್ಟೆ ನೀ ಅನ್ನೋ ಪ್ರಾಮಾಣಿಕ ಭಾವ ನಂದು ..
ನಾ ದಕ್ಕಿಸಲಾಗದ ಜೀವವನ್ನ ನೀ ಕೊಟ್ಟೆ ಅನ್ನೋ ಖುಷಿ ನಂಗೆ ಸಿಕ್ತು ಇವತ್ತು ...
ನಿನ್ನೆ ಇಂದ ಇದ್ದ ಚಿಕ್ಕ ಬೇಸರವೊಂದು ನಿನ್ನಿಂದಾಗಿ ಕಾಣೆ ಆಯ್ತು ಇವತ್ತು :)
ಮುಂದುವರೆಯಲಿ ...
ಮುಂದುವರೆಸೋ ಪ್ರಯತ್ನದಲ್ಲಿದ್ದೆ ಭಾಗ್ಯ.. ಇವತ್ತು ಮತ್ತೆ ಕೆಲ ಸಾಲುಗಳು ಸಿಕ್ಕಿದ್ದೇ ದೊಡ್ಡ ಗೆಲುವು..
Deleteಅವತ್ತು ನಿನಗೆ ಗದ್ಯ ದಕ್ಕಿದ್ದರೆ ನಂತರ ನನಗೆ ದಕ್ಕಿದ್ದು ಪದ್ಯ.. ಇನ್ನೊಮ್ಮೆ ಇದೇ ಚಿತ್ರ ನೋಡಿದರೆ ನಿನಗೂ ಏನಾದರೂ ದಕ್ಕಬಹುದೇನೋ.. ಮೆಚ್ಚುಗೆಗೆ ಮತ್ತೊಮ್ಮೆ ಧ.ವಾ :-)
ನಿಜ ಕಣೋ ಗೆಳೆಯಾ ...
Deleteಮೋಡಗಟ್ಟಿದ ಆಗಸಕ್ಕೆ
ಮಳೆಯ ನಿರೀಕ್ಷೆಯ ಭರವಸೆ ...
ತುಕ್ಕುಗಟ್ಟಿದ ಬಾಳಿಗೆ ........?
ನಾನೇನು ನಿರೀಕ್ಷಿಸೀಯೇನು ?
ಬಾಳ ಪಥದಲಿ....
ಬರಿಯ ಕವಲುಗಳೇ ಇರೋ ಹಾದಿಯಲಿ .....
ಬದುಕಲ್ಲಿ ನಿರೀಕ್ಷೆಯಿಲ್ಲ...
ಒಂಟಿ ಬದುಕಲ್ಲಿ ಒಬ್ಬಂಟಿಯ ಭಾವವೇ ಎಲ್ಲಾ
ಚೆಂದಿದ್ದು ಭಾಗ್ಯ :-) ಮತ್ತೊಂದ್ಸಲ ಬ್ಲಾಗಿಗೆ ಬಂದಿದ್ದಕ್ಕೆ ದವಾ :-)
Delete"ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ ಎನ್ನುವ" ಹಾಡಂತೆ ಕಣ್ಣುಗಳು ಎರಡಿದ್ದರು ನೋಡುವ ಯೋಚಿಸುವ ಮನದೊಳಗೆ ನೂರಾರು ಗವಾಕ್ಷಿಗಳು. ಒಂದರಲ್ಲಿ ಹೋದ ಹಕ್ಕಿ ಇನ್ನೊಂದು ಕಡೆ ಹಾರೋಲ್ಲ. ಆನೆಯನ್ನು ನೋಡಿ ವರ್ಣಿಸುವಂತೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿಕಾಣಿಸುವ , ಅನುಭವ ಕೊಡುತ್ತಿರುವ ಈ ಚಿತ್ರದ ಕತೃವಿಗೆ ಅಭಿನಂದನೆಗಳು. ಸುಂದರ ಕವನ ಪ್ರಶಸ್ತಿ. ನಿಮ್ಮ ಹೆಸರೇ ಈ ಕವನಕ್ಕೆ ಒಂದು ಗರಿ.
ReplyDeleteಹೌದು ಶ್ರೀಕಾಂತ್ ಜೀ :-)
Deleteನೀವು ಈ ಕವಿತೆಯನ್ನು ಮೆಚ್ಚಿದ್ದರೆ ಅದ್ರ ಕ್ರೆಡಿಡ್ ಮೊದ್ಲು ಬರೆದ ಭಾಗ್ಯಮ್ಮನಿಗೆ, ಚಿತ್ರ ತೆಗ್ದ ಶ್ರೀವತ್ಸಣ್ಣನಿಗೆ ಹೋಗಬೇಕು.. ಒಂದೇ ಚಿತ್ರಕ್ಕೆ ಹೀಗೆ ಭಿನ್ನ ಭಿನ್ನ ಲಹರಿಗಳು ಹುಟ್ಟೋದು ಒಂತರಾ ಚೆನ್ನ ಅಲ್ಲವೇ ?
ಭಾಗ್ಯಮ್ಮನ ಪರವಾಗೂ ಧನ್ಯವಾದಗಳು ಜೀ :-) :-)
ಮನಸ್ಸಿಗೆ ಕಲಕಿ ಹಾಕುವುದು ಬದುಕಿನಲ್ಲಿ 'ಸತ್ತರೂ ಕೇಳದಿಹ ಸಂಬಂಧಿಗಳು' ಎನ್ನುವಾಗ. ನಿಮ್ಮ ಕವನಕ್ಕೆ ಮತ್ತು ಅವರ ಚಿತ್ರಕ್ಕೆ ಫುಲ್ ಮಾರ್ಕ್ಸ್.
ReplyDeleteಬರೆದದ್ದಕ್ಕಿಂತ ದೊಡ್ಡ ಪ್ರತಿಕ್ರಿಯೆ ಮತ್ತು ಮೆಚ್ಚುಗೆ ನಿಮ್ಮದು ಬದ್ರಿ ಭಾಯ್ :-)
Delete
ReplyDeleteಕಾದು ಸೋತೆನು ನಾನು
ಚೌಕಿಯಾ ಹಾದಿಯಲಿ
ದಕ್ಕೀತೆ ಹನಿ ಪ್ರೀತಿ ಭಿಕ್ಷೆಯಂತೆ ?
ಸಿಡಿದು ದೂರಾದವರು
ಹಿಡಿದು ತಮಗೊಂದಾದಿ
ಬರುವ ಹಾದಿಯ ಕಾವ ಹಕ್ಕಿಯಂತೆ
ಎಲ್ಲ ನನ್ನವರೆಂದೆ ನಲಿವಿನಾ ದಿನಗಳಲಿ
ಮೆರೆದಿದ್ದು ಉರಿವಂತೆ ನೆರೆಕೆರೆಯ ಜನರು
ಸೋಲಲ್ಲಿ ಅವರಿಲ್ಲ, ಧನವಿಲ್ಲ, ನನಗೆಂದು
ಕಣ್ಣೀರು ಕಾಣಿಸದ ಜಾಣತನ, ಮರೆವು
ಬೇಸತ್ತ ಮುದಿಕತ್ತೆಯಂತಿಹುದು ಬಾಳಿಂದು
ಮರೆತಿಹರು ಹೊತ್ತಿದ್ದ ಸಂಸಾರ ಭಾರ
ಕೈಲಾಗದಿಂದೆಂದು ಹೊರದಬ್ಬಿ ಬೀದಿಗೆ
ತುತ್ತೂಟಕೂ ನಾಸ್ತಿ, ಬಾಳೆಲ್ಲ ತಿಮಿರ
ಕಾದಿಹೆನು ಚೌಕಿಯಲಿ ಭಿಕ್ಷೆಗೆಂದು
ಕರುಳಬಳ್ಳಿಯ ಪೊರೆದ ಶಿಕ್ಷೆಗೆಂದು !
ಮೆರೆವಾಗ ತೊರೆದಿದ್ದ , ಬೆದರಿದ್ದ ಗೆಳೆಯರಲೆ
ಒಬ್ಬನಾದರೂ ಸಿಗುವ ಇಚ್ಚೆಯಿಂದ
ಕೋಪ, ಏಟೇ ಮೇಲು
ಸಹಿಸೆನೀ ತಾತ್ಸಾರ
ಮುಗಿಸಿಬಿಡಿ, ಕೃಶದೇಹಿ ಎನ್ನಲೆಂದು
ಶಾಪವಾದರು ಬೇಡೆ ಪ್ರೀತಿಯಿಂದ
-ಮುದಿ ಮನದ ಮಾತುಗಳು..