ಬೆಳಿಗ್ಗೆ ೭:೩೦ ಕ್ಕೆ ಬೆಂಗಳೂರು -ಮೈಸೂರು ಟ್ರೈನು ಹತ್ತಿದ ನಾವು ಮಂಡ್ಯ ತಲುಪೋ ಹೊತ್ತಿಗೆ ೯:೩೦. ಅಲ್ಲಿಂದ ಮೇಲುಕೋಟೆಗೆ ಹತ್ತಕ್ಕೆ ಬಸ್ಸು. ಅದರಲ್ಲಿ ಮೇಲುಕೋಟೆ ತಲುಪೋ ಹೊತ್ತಿಗೆ ೧೧:೧೫. ಮೇಲುಕೋಟೆ ಹತ್ತಿರ ಬರ್ತಿದ್ದ ಹಾಗೆ ಕಿಟಕಿಯಲ್ಲಿ ಕಾಣುತ್ತಿದ್ದ ಮೇಲುಕೋಟೆ ನಾರಾಯಣಪರ್ವತದ ದೃಶ್ಯ ಮತ್ತು ಮೇಲುಕೋಟೆ ಬಗ್ಗೆ ಬಸ್ಸಿನ ಹಿರಿಯರೊಬ್ಬರು ಹೇಳುತ್ತಿದ್ದ ವಿವರಣೆಗಳು ಕುತೂಹಲ ಮೂಡಿಸೋಕೆ ಶುರು ಮಾಡಿದವು. ಮೇಲುಕೋಟೆ ದೇವಸ್ಥಾನಗಳು ೧ ಘಂಟೆಗೆ ಬಾಗಿಲು ಅಂತಲೂ, ಅಲ್ಲಿನ ಪುಳಿಯೋಗರೆ ಸೂಪರೂ ಅಂತಲೂ ಸ್ವಲ್ಪ ಓದ್ಕೊಂಡಿದ್ದ ನಾವು ಬಸ್ಸಿಳಿದು ಸ್ವಲ್ಪ ಮುಂದಕ್ಕೆ ಬರ್ತಿದ್ದ ಹಾಗೆಯೇ ಬೆಟ್ಟಕ್ಕೆ ದಾರಿ ಎಂಬೋ ಬೋರ್ಡು.
ಅದೇ ದಾರಿಯಲ್ಲಿ ಎಡಕ್ಕೆ ಹೊರಳಿದಾಗ ದೂರದಲ್ಲಿ ನಾರಾಯಣ ಪರ್ವತದ ಮೇಲಿರುವ ಯೋಗನರಸಿಂಹ ದೇಗುಲ ಸ್ವಾಗತ ಕೋರುತ್ತಿದ್ದಂತೆ ಕಂಡಿತು. ಹಾಗೇ ಮುಂದೆ ಬಂದಾಗ ಬಲಕ್ಕೆ ಕಲ್ಯಾಣಿ ಮತ್ತು ಸೀದಾ ಮೇಲೆ ಹೋದರೆ ಯೋಗ ನರಸಿಂಹ ದೇಗುಲ. ಮುಡಿ ಕೊಡುವವರು ಮೊದಲು ಕಲ್ಯಾಣಿಯಲ್ಲಿ ಸ್ನಾನ ಮಾಡಿ, ಮುಡಿ ಕೊಟ್ಟು ಮೇಲುಕೋಟೆಯ ದರ್ಶನ ಶುರು ಮಾಡುತ್ತಾರಂತೆ. ನಮಗೆ ಮುಡಿ ಕೊಡುವ ಇರಾದೆಯೇನೂ ಇಲ್ಲದ್ದರಿಂದ ಬೆಟ್ಟದತ್ತ ಹೆಜ್ಜೆ ಹಾಕಿದೆವು.
ಬೆಟ್ಟ ಹತ್ತೋ ಮೊದಲೇ ಏಕಶಿಲಾ ಗಣಪತಿ ಮತ್ತು ಸ್ವಾಮಿ ಪಾದ ಅಂತೇನೋ ಬೋರ್ಡು ಕಂಡಂತಾಗಿ ಎಡಗಡೆ ಹೆಜ್ಜೆ ಹಾಕಿದೆವು. ಅಲ್ಲಿ ಕಂಡದ್ದು ಯೋಗನರಸಿಂಹ ಸ್ವಾಮಿಯ ಪಾದದ ಸಣ್ಣ ಗುಡಿ ಮತ್ತು ಒಂದೇ ಕಲ್ಲಲ್ಲಿ ಕೆತ್ತಿರೋ ಸುಂದರ ಗಣಪ. ಗಣಪನ ಪಕ್ಕದಲ್ಲೇ ಒಂದು ಪುಟ್ಟ ಕಲ್ಯಾಣಿ.
ಅಲ್ಲೇ ಪಕ್ಕದಲ್ಲಿ ಎತ್ತಲೋ ಸಾಗೋ ಮೆಟ್ಟಿಲು ದಾರಿ. ಗಣಪನಿಗೆ ನಮಸ್ಕರಿಸುತ್ತಿರುವಾಗಲೇ ಆ ದಾರಿಯಲ್ಲೇ ಬಂದ ಇಬ್ಬರು ಹೆಂಗಸರು ಕಂಡರು . ಆ ದಾರಿ ಎಲ್ಲಿಗೆ ಸಾಗುತ್ತೆ ಅಂತ ವಿಚಾರಿಸೋ ಮೊದಲೇ ಅವರು ಮೊದಲು ಚಲುವ ನಾರಾಯಣ ದೇವಸ್ಥಾನಕ್ಕೆ ಹೋಗಿ, ಅಲ್ಲಿ ಹನ್ನೆರಡೂವರೆಗೆ ಬಾಗಿಲು. ಆಮೇಲೆ ಇಲ್ಲಿ ಬಂದು ಬೆಟ್ಟ ಹತ್ತಿ, ಇಲ್ಲಿ ೨ ಘಂಟೆವರೆಗೂ ಇರುತ್ತೆ ಅಂತ ದಾರಿ ತೋರಿಸುವುದೇ ! ಕಲ್ಯಾಣಿಯ ಹಿಂದೆ ಹೋಗಿ ಅಂತಲೂ ತೋರಿಸಿದ್ರು. ಸರಿ ಅಂತ ಅಲೆಮಾರಿಗಳ ಪಯಣ ಕಲ್ಯಾಣಿಯತ್ತ ಸಾಗಿತು
Eka shila ganapati |
ಕಲ್ಯಾಣಿಯೆಂದರೆ ಬರೀ ಕೆರೆಯಲ್ಲ. ಅಲ್ಲಿರೋ ಮಂಟಪಗಳಲ್ಲಿನ ಪ್ರತೀ ಕಂಬವೂ ಇದು ದೇಗುಲವಾ, ಕಲ್ಯಾಣಿಯ ಮೇಲಿನ ಕಟ್ಟೆಯಾ ಅಂತ ಅನುಮಾನ ಮೂಡಿಸುವಷ್ಟು ಸುಂದರವಾಗಿದೆ.
ಚಪ್ಪಲಿಯಲ್ಲೇ ಬಂದಿದ್ದ ನಾವು ಕಲ್ಯಾಣಿಯನ್ನು ಬಳಸಿ ಆಚೆ ಸಾಗಲು ಮನಸ್ಸಾಗದೇ ರಸ್ತೆಯಲ್ಲಿ ಹೋಗೋ ಮನಸ್ಸು ಮಾಡಿದೆವು. ಮೇಲುಕೋಟೆಯಲ್ಲಿ ನಮ್ಮ ಅಲೆದಾಟ ಮತ್ತೆ ಶುರುವಾಗಿದ್ದೇ ಇಲ್ಲಿ :-)
ಮೇಲುಕೋಟೆಯಲ್ಲಿ ಕಾಲಿಡುತ್ತಿದ್ದಂತೆಯೇ ಕಣ್ಸೆಳೆದಿದ್ದು ಅಲ್ಲಿ ಎಲ್ಲೆಡೆ ಕಾಣುವ ಜೇಡಿ(ಕಡುಕೆಂಪು)- ಬಿಳಿಯ ನಾಮಗಳು. ಮಾರು ಮಾರಿಗೊಂದರಂತೆ ದೇವಸ್ಥಾನವೋ, ಮನೆಯೋ ಗೊತ್ತಾಗದಂತೆ ನಾಮಗಳು ! ಇವುಗಳ ನೋಡುತ್ತಾ ಗೊತ್ತು ಗುರಿ ಇಲ್ಲದಂತೆ ಹೆಜ್ಜೆ ಹಾಕುತಿದ್ದ ನಮಗೆ ಹೂ ಮಾರೋ ಹೆಂಗಸರಿಂದ ಮೊದಲ ನಾಮ !
Melukote Kalyani |
ಚಪ್ಪಲಿ ಹಾಕ್ಕೊಂಡು ಬೆಟ್ಟ ಹತ್ತೋ ಹಾಗಿಲ್ಲ, ಇಲ್ಲೇ ಬಿಡಿ ಅಂದ್ರು . ಹೂಂ ಅಂದ್ವಿ. ಬ್ಯಾಗೂ ಇಲ್ಲೇ ಇಡಿ ಅಂದ್ರೂ ಯಾಕೋ ಮನ್ಸು ಒಪ್ಲಿಲ್ಲ.ಚಪ್ಪಲಿ ಬಿಟ್ಟ ತಪ್ಪಿಗೆ ೩೦ ರೂಗೆ ಮೊಳ ತುಳಸಿ ಹಾರ, ಪೂಜೆ ಸಾಮಾನು ಕೊಂಡ್ಕೊಂಡು ಮೇಲುಕೋಟೆ ಮೇಲುಕೋಟೆ ಚೆಲುವನಾರಾಯಣನ ಗುಡಿಯತ್ತ ಸಾಗಿದೆವು.
ಮೊದಲು ಸಿಕ್ಕಿದ್ದು ಸತ್ಯನಾರಾಯಣ ಸ್ವಾಮಿ ದೇವಸ್ಥಾನ. ಬಿರು ಬೇಸಿಗೆಯಾದ ಕಾರಣ ಅಲ್ಲಿ ಬಂದವರಿಗೆಲ್ಲಾ ವೃದ್ಧ ದಂಪತಿಯ ತಣ್ಣೀರು ಸೇವೆ ನಡೆಯುತ್ತಾ ಇತ್ತು. ದೇವರಿಗೆ ನಮಸ್ಕರಿಸೋದ್ರ ಜೊತೆಗೆ ಅವರಿಗೂ ಒಳ್ಳೇದಾಗ್ಲಿ ಅಂತ ಬೇಡಿ ಮುಂದೆ ಸಾಗಿದೆವು.
Oora madyada mattondu kere |
ಕಲ್ಯಾಣಿಯ ಮತ್ತೊಂದು ಬದಿಗೆ ಸಾಗುತ್ತಿದ್ದಂತೆಯೇ ಮತ್ತೆ ಕಂಡಿದ್ದು ಕಲ್ಯಾಣಿ ಕಂಬಗಳ ಸೌಂದರ್ಯ. ಜೊತೆಗೆ ಮೇಲುಕೋಟೆ ಸ್ಪೆಷಲ್ ಪುಳಿಯೋಗರೆ ಸವಿಯುತ್ತಿದ್ದ ಭಕ್ತಾದಿಗಳು. ಹಾಗೆಯೇ ಮುಂದೆ ಬಂದಂತೆ ಕಂಡಿದ್ದು ಶ್ರೀನಿವಾಸ ದೇವಸ್ಥಾನ. ಇಲ್ಲಿಂದ ಮುಂದೆ ಮತ್ತೆ ದೇಗುಲಗಳ ಸಾಲು. ರಸ್ತೆಬದಿ, ಕಮಾನು ಎಲ್ಲೆಲ್ಲೂ ಶಿಲ್ಪಕಲೆ. ದೇಗುಲಗಳ ನಗರಿಯಲ್ಲೆಲ್ಲೋ ಹಾದಿ ತಪ್ಪಿ ಅಲೆಯುತ್ತಿರುವಂತಹ ಅನುಭವ. ಇದನ್ನೆಲ್ಲಾ ಪದಗಳಲ್ಲಿ ಹೇಳೋ ಬದಲು ಚಿತ್ರಗಳಲ್ಲೆ ಹಾಕೋ ಪ್ರಯತ್ನ ಮಾಡುತ್ತೇನೆ.
One of the dwajastamba one the way |
ಹಾಗೇ ಮಂದೆ ಬರುತ್ತಿದ್ದಾಗ ಘೋರ ಬಿಸಿಲು. ಕಾದ ಟಾರು ರಸ್ತೆಯ ಮೇಲೆ ಬರಿಗಾಲಲ್ಲಿ ನಡಿಗೆ. ಪಕ್ಕದಲ್ಲೇ ಚಪ್ಪಲಿ ಹಾಕ್ಕೊಂಡು ಹೋಗ್ತಿದ್ದೋರನ್ನ ನೋಡಿ, ಚುರುಗುಡುತ್ತಿದ್ದ ಕಾಲುಗಳು ಇನ್ನೂ ಸುಟ್ಟಂತೆ !ಏನು ಮಾಡೋಣ, ಮೋಸ ಹೋಗಿ ಆಗಿದೆ. ದೇವ ನಾಮ ಸ್ಮರಣೆ ಮಾಡುತ್ತಾ ದಾಪುಗಾಲು ಹಾಕುತ್ತಿದ್ದಂತೆ ಮೇಲುಕೋಟೆ ಚೆಲುವನಾರಾಯಣ ದೇಗುಲ ಸಿಕ್ಕಿತು.
ಅಲ್ಲಿ ಕಂಸಾಳೆ ತಾತಯ್ಯ, ಕಹಳೆ, ಶಂಖ, ಜಾಗಟೆ ದಾಸಯ್ಯನಂತಹ ಅನೇಕ ನಶಿಸಿ ಹೋಗುತ್ತಿರುವ ಕಲೆಗಳು ಸಿಕ್ಕವು!
ಅಲ್ಲಿನ ಶಿಲ್ಪಕಲೆ ನಿಜಕ್ಕೂ ಅಮೋಘ. ಚೆಲುವನಾರಾಯಣನ ಮೂಲ ವಿಗ್ರಹ, ಚೆಲುವರಾಯನ ವಿಗ್ರಹ, ಸುದರ್ಶನ ಆಳ್ವಾರ್,ಲಕ್ಷ್ಮಿ ಗುಡಿ.. ಹೀಗೆ ಅಲ್ಲೊಂದು ದೇಗುಲಗಳ ಸಮೂಹವೇ ಇದೆ ! ಅಲ್ಲಿ ಛಾಯಾಗ್ರಹಣ ನಿಷಿದ್ದವಾದ್ದರಿಂದ ಯಾವ ಚಿತ್ರವನ್ನೂ ತೆಗೆಯಲಾಗಿಲ್ಲ. ಕಂಬಗಳಲ್ಲಿ ಕೆತ್ತನೆ ಎಲ್ಲೆಡೆ ಕಾಣುತ್ತೇವೆ. ಆದರೆ ಕಂಬಗಳಲ್ಲಿ ಎರಡು ಸ್ಥರದ ಕೆತ್ತನೆ ನೋಡಿದ್ದು ಇಲ್ಲೇ ಮೊದಲು.
Melukote Cheluvanarayana temple |
ಅಲ್ಲಿಂದ ವಾಪಾಸು ಬಂದು ಸುಡುತ್ತಿರೋ ಕಾಲುಗಳಲ್ಲೇ ಮತ್ತೆ ಬೆಟ್ಟ ಹತ್ತಿ ಯೋಗನಾರಾಯಣನ ದರ್ಶನ ಪಡೆದೆವು.
ಬೆಟ್ಟದ ಮೇಲಿಂದ ಕೆಳಗಿನ ಪ್ರಕೃತಿಯ ಸೌಂದರ್ಯವನ್ನು ಆನಂದಿಸಬಹುದು. ಬೆಟ್ಟ ಹತ್ತುವಾಗೆಲ್ಲಾ ಅನೇಕ ಮುರುಕು ಗುಡಿಗಳು, ಒಂದಾನೊಂದು ಕಾಲದಲ್ಲಿ ಇನ್ನೂ ಹೆಚ್ಚಿದ್ದಿರಬಹುದಾದ ಸೌಂದರ್ಯದ ಲಕ್ಷಣದಂತೆ ಕಾಣುತ್ತಿದ್ದವು.
ದೇವರ ದರ್ಶನವಾದ ಮೊದಲು ನೆನಪಾಗಿದ್ದು ಹಸಿಯುತ್ತಿದ್ದ ಹೊಟ್ಟೆ ಮತ್ತೆ ಉರಿಯುತ್ತಿದ್ದ ಕಾಲು. ಊಟಕ್ಕೆ ಮತ್ತೆ ಕಲ್ಯಾಣಿ ಬೀದಿಯ ಕಡೆಗೇ ಹೋಗಬೇಕು. ಹಾಗಾಗಿ ಚಪ್ಪಲಿ ಪಡೆದು ಹೋದ ದಾರಿಯಲ್ಲೇ ಮತ್ತೆ ಹೆಜ್ಜೆ ಹಾಕಿದೆವು. ಅಲ್ಲೇ ಕಂಡ ಪುಳಿಯೋಗರೆ ಸವಿಗೆ ಮಾರುಹೋದೆವು.
ಅಲ್ಲೇ ಮೇಲುಕೋಟೆಯಲ್ಲಿ ನೋಡಲುಳಿದ ಸ್ಥಳಗಳ ಬಗ್ಗೆ ಮಾಹಿತಿ ಪಡೆದೆವು. ಊಟವಾದ ನಂತರ ಸಾಗಿದ್ದು ಅಕ್ಕತಂಗಿಯ ಕೊಳದತ್ತ. ಚೆಲುವನಾರಾಯಣ ದೇಗುಲದ ಬಲಭಾಗದಲ್ಲಿ ಸ್ವಲ್ಪ ಮುಂದೆ ಸಾಗಿದರೆ ಸಿಗುವ ಈ ಕೊಳಗಳಿಗೆ ಸಾವಿರ ವರ್ಷಗಳ ಇತಿಹಾಸವಿದೆಯಂತೆ.
Akka tangi kola |
ಅಲ್ಲಿಂದ ಹಾಗೆಯೇ ಪಕ್ಕದಲ್ಲಿ ಕಾಣುತ್ತಿದ್ದ ರಾಯಗೋಪುರಕ್ಕೆ ಬಂದೆವು. ಇಲ್ಲಿ ಹಲವಾರು ಚಿತ್ರಗಳ ಶೂಟಿಂಗ್ ನಡೆಯುತ್ತದೆ. ನಾವು ಹೋದಾಗ ಯಾವ ಚಿತ್ರಗಳ ಶೂಟಿಂಗೂ ನಡೆಯದ ಕಾರಣ ನಮ್ಮದೇ ಫೋಟೋ ಶೂಟ್.
ಅಲ್ಲಿಂದ ಹಾಗೆಯೇ ೨ ಕಿ.ಮೀ ಮುಂದಿರುವ ಧನುಷ್ಕೋಟಿ ಎಂಬಲ್ಲಿಗೆ ಹೊರಟೆವು. ಸುಡುವ ಉರಿ ಬಿಸಿಲಿಗೆ ಮಧ್ಯೆ ಸಿಕ್ಕೊಂದು ದೈವೀ ವನದ ನೆರಳೇ ಗತಿ.
ರಾಮ ಬಾಣ ಬಿಟ್ಟ ಬಾಣದಿಂದ ಧನುಷ್ಕೋಟಿಗೆ ಈ ಹೆಸರಂತೆ. ಅಲ್ಲಿ ಮಾತು ಬರದ ಮೂಕ ತಾಯೊಬ್ಬಳ ಪೂಜೆ.
ಅಲ್ಲಿನ ದರ್ಶನ ಪಡೆದ ನಂತರ ಹಾಗೆಯೇ ಬರುತ್ತಾ ಮೇರು ಕವಿ ಪು.ತಿ.ನ ರ ಸಾಂಸ್ಕೃತಿಕ ಮನೆಯನ್ನು ಹೊಕ್ಕೆವು. ದೇವಗಿರಿ ಅಥವಾ ಮೇಲುಕೋಟೆಯವರಾದ ಪುರೋಹಿತ ತಿರು ನರಸಿಂಹಾಚಾರ್ ಅವರ ಮನೆಯನ್ನು ಹೊಕ್ಕಾಗ ಸ್ವಲ್ಪ ಹೊತ್ತು ಯಾವುದೋ ಕಾಲದಲ್ಲಿ ಕಳೆದು ಹೋದಂತ ಅನುಭವ..
ಮೇಲುಕೋಟೆಗೆ ಬಂದವರೆಲ್ಲರೂ ಧನುಷ್ಕೋಟಿ ಮತ್ತು ಪು.ತಿ.ನ ಸಾಂಸ್ಕೃತಿಕ ಮನೆಯನ್ನು ಬಿಡುತ್ತಾರೆ. ಇದರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲದೇ ಇರುವುದೂ ಒಂದು ಕಾರಣವಾಗಿರಬಹುದು. ಮುಂದಿನ ಬಾರಿ ಮೇಲುಕೋಟೆಗೆ ಬಂದಾಗ ನೀವು ಇಲ್ಲಿಗೆ ಬರಬಹುದು(ಅದು ತೆಗೆದಿರೋ ಸಮಯ ಬೆಳಿಗ್ಗೆ ೧೦-೨,ಮಧ್ಯಾಹ್ನ ೩-೫) ಪುತಿನ ಮನೆಯಿಂದ ಹೊರಬಂದು ಹಾಗೇ ಮುಂದೆ ಸಾಗಿದಾಗ ಮತ್ತದೇ ಕಲ್ಯಾಣಿಯ ಬುಡಕ್ಕೆ ತಲುಪಿದೆವು. ಮೇಲುಕೋಟೆಯ ಪ್ರದಕ್ಷಿಣೆಯ ಖುಷಿಯಲ್ಲಿರುವಾಗಲೇ ಸಮಯ ನಾಲ್ಕೂವರೆ ದಾಟುತ್ತಾ ಬಂದಿತ್ತು.
ಹಾಗೆಯೇ ಸಿಕ್ಕ ಬಸ್ಸಲ್ಲಿ ಮತ್ತೆ ಮಂಡ್ಯಕ್ಕೆ ತಲುಪುವವರೆಗೂ ಮೇಲುಕೋಟೆ ಸುತ್ತಾಟದ ಸುಸ್ತಲ್ಲಿ ಭರಪೂರ ನಿದ್ರೆ:-) ಸುಂದರ ದೃಶ್ಯಗಳ, ಲೋಟಗಟ್ಟಲೇ ಕುಡಿದ ಮಸಾಲೆ ಮಜ್ಜಿಗೆಯ ಮೆಲುಕು :-)
ಮೇಲುಕೋಟೆಯ ಸಮಗ್ರ ಚಿತ್ರಣವನ್ನು ಕೊಡುವ ಮತ್ತು ಪ್ರವಾಸಕ್ಕೆ ಮಂಸ್ಸುಗಳನ್ನು ಸ್ಜ್ಜುಗೊಳಿಸಿ ಪ್ರೇರೇಪಿಸುವ ಈ ಬರಹ ಖುಷಿ ಕೊಟ್ಟಿತು. ಒಳ್ಳೆಯ ಚಿತ್ರಗಳ ಸಾಥ್ ಚೆನ್ನಾಗಿದೆ.
ReplyDeleteನಿಮ್ಮೀ ಮೆಚ್ಚುಗೆಗೆ ಮತ್ತು ಬರಹಗಳಿಗಿನ ಪ್ರೋತ್ಸಾಹಕ್ಕೆ ವಂದನೆಗಳು ಬದ್ರಿ ಸರ್ :-)
Deleteಮೇಲು ಕೋಟೆ ಪ್ರವಾಸಿಗರಿಗೆ ಹಬ್ಬವಾದರೆ.. ಆಸ್ತಿಕರಿಗೆ ಸುಗ್ಗಿ. ಪ್ರತಿಯೊಂದು ಕಲ್ಲುಗಳು ಕಥೆಯನ್ನು ಹೇಳುತ್ತವೆ. ಬೆಟ್ಟ, ಕಲ್ಯಾಣಿ, ಕೊಳಗಳು, ರಾಯಗೋಪುರ, ಧನುಷ್ಕೋಟಿ ಪ್ರತಿಯೊಂದು ಕಥೆಯಾಗಿಬಿಡು ತ್ತವೆ. ಸುಂದರ ಚಿತ್ರಗಳು, ಒಪ್ಪುವ ವಿವರಣೆಗಳು ಶ್ರೀಮಂತಗೊಳಿಸಿವೆ. ಅಣ್ಣಾವ್ರ ಜೇನಿನ ಹೊಳೆಯೋ ಹಾಡು ನೋಡಿದಂದಿನಿಂದ ಈ ಸ್ಥಳವನ್ನು ನೋಡುವ ಆಸೆ ಇತ್ತು.. ಅದು ಎರಡು ವರ್ಷದ ಹಿಂದೆ ನೋಡಿ ಸವಿದಿದ್ದೆ. ಇನ್ನೊಮ್ಮೆ ನೋಡುವ ಭಾಗ್ಯ ನಿಮ್ಮ ಲೇಖನದಿಂದ ದೊರೆಯಿತು. ಚಂದದ ಲೇಖನ ಗೆಳೆಯ
ReplyDeleteಹಾಂ, ಹೌದು ಶ್ರೀಕಾಂತ್ ಜೀ :-) ನನ್ನ ಲೇಖನದಿಂದ ನಿಮಗೆ ಅಲ್ಲಿಗೇ ಹೋದಂತಾಯಿತೆನ್ನುವುದು ಸ್ವಲ್ಪ ಜಾಸ್ತಿಯೇ ಹೊಗಳಿದಿರಿ ಅನ್ನಿಸುತ್ತದೆ :-) :-) ಮತ್ತೊಮ್ಮೆ ನಿಮ್ಮ ಮೆಚ್ಚುಗೆ , ಪ್ರೋತ್ಸಾಹಗಳಿಗೆ ವಂದನೆಗಳು :-)
Deleteಲೇಖನ ಓದಿದ ಮೇಲೆ ಒಮ್ಮೆ ಮೇಲುಕೋಟೆಗೆ ಹೋಗಲೇ ಬೇಕೆನ್ನುವ ಮನಸ್ಸಾಗಿದೆ..
ReplyDeleteಚಂದದ ಲೇಖನಕ್ಕೆ ಧನ್ಯವಾದಗಳು..
ಹಾ...ಎಲ್ಲಾ ಫೋಟೋಸ್ ಕೂಡ ಸೂಪರ್.. ಕಲ್ಯಾಣಿಯ ಫೋಟೋ ಅಂತೂ ಮಸ್ತ್..
ಓ. ಹಂಗಾರೆ ಹೋಗ್ಬನ್ನಿ ಸುಷ್ಮಾ :-)
Deleteಬ್ಲಾಗ್ ಗೆ ಬಂದು ಲೈಕಿಸಿ ಕಮೆಂಟಿಸಿದ್ದಕ್ಕೆ ಧನ್ಯವಾದಗಳು :-)
ಒಮ್ಮೆ ಮೇಲುಕೋಟೆಗೇ ಹೋಗಿ ಬಂದಂಗಾಯ್ತು :)
ReplyDeleteನಿಜಕ್ಕೂ ಚೆನ್ನಗಿದೆ ಚಿತ್ರದೊಂದಿಗಿನ ವಿವರಣೆ ....
ಅಂದ ಹಾಗೇ ಮನಸ್ಸಿಗನಿಸಿದ ತಕ್ಷಣ ಎಷ್ಟೇ ಟೈಮ್ ಆಗಿದ್ರೂ ಎದ್ದು ಹೊರಡೋ ನಿಮ್ಮ ಹುಡುಗರನ್ನ ನೋಡಿದ್ರೆ ಹೊಟ್ಟೆಕಿಚ್ಚಾಗುತ್ತೆ ನಂಗೆ :)
ಮಾಹಿತಿ ಕೊಡೋ ಸ್ಥಳ ಪರಿಚಯ ಮುಂದುವರೆಯಲಿ ...
ನಮಸ್ತೆ
ಲೇಖನ ಓದಿ ಅಲ್ಲಿಗೆ ಹೋಗಬೇಕಂತ ಅನಿಸಿದರೆ ಅದೇ ನನ್ನ ಬರದದಕ್ಕೆ ಖುಷಿ. ಹೋಗ್ಬನ್ನಿ ಹಂಗಾರೆ ಮೇಲುಕೋಟೆಗೆ :-)
Deleteಇನ್ನು ನಮ್ಮ ಗ್ಯಾಂಗಿನ ಬಗ್ಗೆ. ಕಣ್ಣು ಹಾಕ್ಬೇಡ್ರಿ ! :P ನಾವೆಲ್ಲೂ ಹೋಗ್ದೇ ಒಂದೂವರೆ ತಿಂಗಳಾಗಿತ್ತು :-)..
ಹಾಂ. ಅಂತ ಗೆಳೆಯರು ಸಿಕ್ಕಿದ್ದು ನನ್ನ ಪುಣ್ಯ ಅಂತಲೇ ಹೇಳಬಹುದು ಒಂತರಾ :-)
ತುಂಬಾ ಚೆನ್ನಾಗಿದೆ ಪ್ರವಾಸ ಕಥನ. ಹೀಗೆ ಎಲ್ಲಿಗಾದರೂ ಹೊರಟು ಬಿಡುತ್ತಿದ್ದ ನಮ್ಮ ಗುಂಪಿನ ನೆನಪನ್ನು ತಂದುಕೊಟ್ಟಿತು ಬರಹ. ಕೆಲಸಕ್ಕೆ ಸೇರಿದ ಮೇಲೆ ದೂರವಾಗಿರುವ ಗೆಳೆಯರನ್ನೂ, ಒಂದೂವರೆ ವರ್ಷದಿಂದ ಎಲ್ಲಿಗೋ ಹೋಗದಿರುವ ನನ್ನ ಸೋಮಾರಿತನವನ್ನೂ ಚೆನ್ನಾಗಿ ನೆನಪು ಮಾಡಿಕೊಟ್ಟಿತು. ಸುಂದರ ಬರಹ, ಬರೆಯುತ್ತಿರಿ :)
ReplyDeleteಇಲ್ಲಿಗೂ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಹೆಗ್ಡೇರೆ :-)
Deleteನಿಮ್ಮ ಮೆಚ್ಚುಗೆ ನೋಡಿ ಖುಷಿ ಆತು :-) ಬರ್ತಿರಿ, ಬರೀತಿರ್ತಿ :-)
ನಾನು ’ಮೇಲುಕೋಟೆ’ ನೋಡಿಲ್ಲ ಇನ್ನೂ. ನಿಮ್ಮ ಈ ಬರಹದಿಂದ ಒಳ್ಳೇ ಮಾಹಿತಿಗಳು ದೊರೆತವು. ಥ್ಯಾಂಕ್ಯೂ... :)
ReplyDeleteಧನ್ಯವಾದಗಳು ಹೆಗ್ಡೇರೆ :-) ಹೋಗ್ಬನ್ನಿ ಒಂದ್ಸಲ :-)
Delete