ಅಪ್ಪಂದಿರ ದಿನದಂದು ಎಲ್ಲಾ ಅಪ್ಪಂದಿರಿಗೂ ಒಂದು ನಮನ.. .. ಅಪ್ಪ-ಅಮ್ಮ ಎಲ್ಲಾ ಆದ ಅಪ್ಪಂದಿರಿಗೂ, ಅಮ್ಮ-ಅಪ್ಪ ಎಲ್ಲಾ ಆದ ಅಮ್ಮಂದಿರಿಗೂ ಒಂದು ನಮನ..ಯಾಕೋ ಕಾಣೆ. ಅಪ್ಪ ಅಂದ್ರೆ ಅದೇನೋ ಪ್ರೀತಿ. ಕೇಳಿದಾಗ ಹಣ ಕೊಡ್ತಾರೆ ಅಂತಲಾ, ಬೈಯ್ಯೋ ಅಮ್ಮನಿಂದ ಬಚಾವ್ ಮಾಡ್ತಾರೆ ಅಂತಲಾ, ಔಷಧಿ ಕಹಿಯಾದ್ರೂ ಆರೋಗ್ಯಕ್ಕೆ ಸಿಹಿಯಾಗಿರೋ ತರ ಪ್ರತೀ ಬೈಯ್ಗುಳದ ಹಿಂದೆ ಇರುವ ಸದುದ್ದೇಶಗಳ ಕಾರಣದಿಂದ್ಲಾ ? .. ಗೊತ್ತಿಲ್ಲ.. ಯಾಕೋ ಇಷ್ಟ ಆಗ್ಬುಡ್ತಾರೆ. ಎಲ್ಲಾ ಇಷ್ಟಗಳಿಗೂ ಕಾರಣ ಇರಲೇಬೇಕೆಂದೇನಿಲ್ಲವಲ್ಲ..
ಇವತ್ತು ಸಾಹಿತ್ಯ ರಸಧಾರಾದ ಆಶುಕವಿತೆಯಲ್ಲಿ ನನಗೆ ಬಂದ ವಿಷಯ ಅಪ್ಪನ ಪ್ರೀತಿ. ಆ ಕ್ಷಣಕ್ಕೆ ತೋಚಿದ ಸಾಲುಗಳಿಷ್ಟೇ.
ಹೇಗೆ ಹೇಳಲಿ ಅಪ್ಪ
ನಿನ್ನ ಪ್ರೀತಿಯ ರೀತಿ
ಬೆನ್ನ ಮೇಲೆನ್ನ ನೀ
ಹೊತ್ತು ತಿರುಗಿದ ವೀಥಿ
ಸ್ವತಃ ಮುಳುಗಿದ್ದರೂ
ಕಷ್ಟಸಾಗರದಲ್ಲಿ
ತೊಟ್ಟೂ ನೆನೆಯದಂತೆ ನನ್ನೆತ್ತಿದ ಪರಿ
ತೃಣ ಕಷ್ಟವನ್ನೂ ನೀಡದಾ ಪರಿ....
ಛೇ.. ಅಷ್ಟರಲ್ಲೇ ಮೂರು ನಿಮಿಷದ ಟೈಮಾಯ್ತು :-( ಬರ್ಯಕ್ಕಾಗಿದ್ದು ಇಷ್ಟೇನಾ ಅಪ್ಪನ ಬಗ್ಗೆ ಅಂತ ಅನಿಸಿ ಬಹಳ ಬೇಜಾರಾಯ್ತು.. ಕವನವಾಗಿರಲಿಲ್ಲವದು. ಪ್ರಯತ್ನ ಪ್ರಾಮಾಣಿಕವಾಗಿದ್ರೂ ಪರೀಕ್ಷೆಯಲ್ಲಿ ಫೇಲಾದ ಹುಡುಗನಂತೆ.. ಆ ಸ್ಪರ್ಧೆಯ ಮತ್ತೊಂದು ನಿಯಮಾವಳಿಯಂತೆ. ಮೂರು ನಿಮಿಷದಲ್ಲಿ ನಾವು ಬರೆದ ಕವನಗಳನ್ನ ವಾಚಿಸಬಹುದು.. ಆಗ ಹೊಳೆದದ್ದು ಅಪ್ಪನ ಬಗ್ಗೆಯೇ ಬರೆದ ಕವನ
ಅಕ್ಷರವಾಗಿಹ ಭಾವಗಳಲ್ಲಿ
ನೋವುಗಳೆಲ್ಲಾ ನಕ್ಕಿಹುದು
ತನ್ನನೆ ನುಂಗಿದ ನಿನ್ನೆಯ ನಡುವೆ
ನಾಳೆ ಆಸೆ ತಲೆ ಎತ್ತಿಹುದು |೧
ಬೊಗಸೆಗೆ ಸಿಗದ ನೆನಪಿನ ಬಿಂದು
ಸಾಗರವಾಗಿ ಉಕ್ಕಿಹುದು
ತನ್ನನೆ ತೇದ ತಂದೆಯ ನೆನಪು
ಕಂಗಳಂಗಳದಿ ಬಿಕ್ಕಿಹುದು |೨
ಮರೆತಿಹ ನಿನ್ನೆಯ ಮರೆಯದ ಕನಸು
ಚುಚ್ಚಿ ಕೊಲ್ಲುವುದು ಅನವರತ
ಕಾದಿಹೆ ನೀನು ಕಷ್ಟದ ವರ್ಷವ
ತಾಳ್ಮೆಯ ಶರಧಿಯ ಬತ್ತಿಸುತ |೩
ಕಾಲದ ಬಿಸಿಲಿಗೆ ಸುಟ್ಟಿಹ ಗಾಯ
ನಿನ್ನ ಅಗಲುವಿಕೆ ಮರೆಯುವುದೆ ?
ಮಾತ ಹಿಂದಿನ ಅವಿತಿಹ ಚಾಟಿ
ಏಟ ಕಾರಣವ ಅರಿತಿರದೆ
ಮರಳೋ ನೆನಪಲೇ, ಅದು ಯಾಕೋ ಯಾತನೆ
ವೇದನೆಯಲ್ಲದ ಭಾವನೆಯು
ಇದು ಮಾಮರ ಮರೆಯದ ಮಾಮಿಡಿಯು
ಮರೆಯಲಾರದಿದ ಮರೆಸುವ ಮುನ್ನ
ಮೆರೆಯೋ ಸಾಧನೆ ಯಾಚನೆಯು
ಅಪ್ಪನ ನೆನೆದಾಗ ಇದೂ ಯಾಕೋ ಒಂದು ತೂಕ ಕಮ್ಮಿಯೇ ಅನಿಸಿತು. ಏನೋ ಮಿಸ್ಸಿಂಗು ಅನಿಸೋ ಭಾವ.. ಅದೇನೆಂದು ತಿಳಿಯುತ್ತಿಲ್ಲ. ಅಪ್ಪಂದಿರ ದಿನದಂದು ಏನು ಬರೀಲಿ?
ಎರಡೂ ಕೈಗಳಲ್ಲಿ ಬರೆಯಬಲ್ಲ, ಒಟ್ಟೊಟ್ಟಿಗೇ ಅನೇಕ ಕೆಲಸ ಮಾಡಬಲ್ಲ ಪ್ರಾವೀಣ್ಯತೆಯ ಬಗ್ಗೆ ಬರೆಯಲೇ.. ಯಾವುದೂ ಅಸಾಧ್ಯವಲ್ಲವೆಂದು ಮುನ್ನುಗ್ಗುತ್ತಿದ್ದ ಬೆರಗ ಪರಿಯ ಬಗ್ಗೆ ಬರಿಯಲೇ ? ಅಪ್ಪ ಬಯ್ತಾ ಅಂತಿದ್ದ ಮಗ ಬೇರೆ ಊರಿಗೆ ಹೋದಾಗ "hai sunny" ಅಂತೊಂದು ಪತ್ರ ಬರೆದು ಕಣ್ಣೀರಿಡಿಸಿದ, ತಿಳಿದೋ ತಿಳಿಯದೆಯೋ ಕಣ್ಣು ತೆರೆಸಿದ ಬಗ್ಗೆ ಬರೆಯಲಾ ? ಗಣಿತ , ಇಂಗ್ಲೀಷುಗಳೆಂದರೆ ಕಬ್ಬಿಣದ ಕಡಲೆಯೆಂದಂಜುತ್ತಿದ್ದ ಮಗನಿಗೆ ಧೈರ್ಯ ತುಂಬಿ ವಿದೇಶೀಯರೊಂದಿಗೂ ನಿರರ್ಗಳವಾಗಿ ಮಾತುನಾಡುವಂತೆ ಮಾಡಿದ ಮ್ಯಾಜಿಕ್ ಬಗ್ಗೆ ಬರೆಯಲಾ ? ಯಾವುದರ ಬಗ್ಗೆ ಬರಿಯಲೆಂದೇ ಅರಿಯುತ್ತಿಲ್ಲ :-( ತನ್ನ ಜೀವನ ಅಂದ್ರೆ ಮಗನೇ ಎನ್ನೋ ತಾಯಿಯ ಪಾತ್ರದ ಬಗ್ಗೆ ಮಾತುನಾಡುವಂತೆಯೇ ಇಲ್ಲ. ತಾನೇ ಅಪ್ಪ-ಅಮ್ಮ ಎರಡೂ ಆಗಿ ಬೆಳೆಸಿದ ಪರಿಯ ಮರೆತರೆ ನನಗಿಂತ ಪಾಪಿ ಯಾರೂ ಇಲ್ಲ. ಅದನ್ನು ಒತ್ತಟ್ಟಿಗಿಡೋಣ. ಆದರೂ ಅಪ್ಪನ ನೆನಪು ಸದಾ ಕಾಡುತ್ತದೆ ಯಾಕೋ.. ಎಲ್ಲಾ ಕಾಡುವಿಕೆಗಳಿಗೂ ಕಾರಣಗಳಿರಬೇಕೆಂದಿಲ್ಲವಲ್ಲಾ ?
ದೇಶಸೇವೆಯ ನೌಕರಿಯಿಂದ ರಿಟೈರ್ಮೆಂಟು ತಗೊಂಡ್ರೂ ಅಪ್ಪನಿಗೆ ಮೈಗಂಟಿದ ಆದರ್ಶಗಳು ಬಿಡಲೊಲ್ಲವು. ಪೇಟೆಯಿಂದ ದೂರಿನ ಕಾಡಲ್ಲೊಂದು ಮನೆಯ ಮಾಡಿ ಪ್ರಶಾಂತವಾಗಿರಬೇಕೆಂದು ಕನಸಮನೆ ಕಟ್ಟಿದವನಿಗೆ ಕಷ್ಟಗಳ್ಯಾಕೋ ಜನರಿಗಿಂತ ಹೆಚ್ಚಿನ ದೋಸ್ತಿಯಾದವು. ಊರವರೇ ಗೌರವ ಕೊಡೋ ಹೆಗ್ಡೇರೆಂಬ ಬಿರುದು ವಿಧಿಗೂ ಹೊಟ್ಟೆಯುರಿ ತರಿಸಿತೇ ? ಗೊತ್ತಿಲ್ಲ. ಆಗಾಧ ಬುದ್ದಿ, ಕನಸುಗಳನ್ನು ಮಗನಾಗಿ ನೋಡೋ ಭಾಗ್ಯವ , ತನ್ನ ಸಾಮರ್ಥ್ಯಗಳಲ್ಲಿ ಹತ್ತರಷ್ಟಾದ್ರೂ ಮಗನಿಗೆ ಧಾರೆಯೆರೆವ ಯೋಗ ಕಳೆದದ್ದೇಕೆ ? ಗೊತ್ತಿಲ್ಲ. ಮುಡಿಯಲ್ಲಿ ಕೆಂಡ ಹೊತ್ತು ಅದು ತನ್ನನ್ನೇ ಸುಡುತ್ತಿದ್ರೂ ತೋರಗೊಡದೇ ದುಡಿಯೋದೇ ಚೆನ್ನಾಗಿರೋಕೆ ಮಗ. ನೀ ಚೆನ್ನಾಗಿರು ಅಂತ ಮಗ, ಮಡದಿಗೆ ಏನೂ ಕಮ್ಮಿ ಮಾಡದ ಪರಿಗೆ ಏನನ್ನುವುದು ? ಗೊತ್ತಿಲ್ಲ. ನಂಬಿದಾ ಆದರ್ಶಗಳೇ ಜೀವ ಹಿಂಡಿದವೇ ? ಪ್ರಾಣ ಸ್ನೇಹಿತರೆಂಬುವವರ ದ್ರೋಹಗಳು ಉಸಿರುಗಟ್ಟಿಸಿದವೇ ? ಕನಸ ಮನೆಯೊಂದುಳಿಸಿ ಇಡೀ ಪ್ಲಾಟ ಅಗ್ನಿ, ಜಿಂಕೆಗಳಾಗಿ ನಾಲ್ಕು ಬಾರಿ ಸುಟ್ಟ ಪ್ರಕೃತಿಯ ಅಟ್ಟಹಾಸಕ್ಕೆ ಮನ ನೊಂದಿತೇ ? ಗೊತ್ತಿಲ್ಲ. ದುಃಖವಿಲ್ಲದ ಜೀವವಿಲ್ಲ ಎನ್ನುತ್ತಾರೆ.ಆದರೆ ಕೈ ಹಾಕಿದ್ದೆಲ್ಲಾ ಸೋಲಾಗಿ, ಸಾಲದ ಪರ್ವತವಾಗಿಸೋ ದುಃಖವೇ ಜೀವವಾದರೆ ?
<script async src="https://pagead2.googlesyndication.com/pagead/js/adsbygoogle.js"></script> <ins class="adsbygoogle" style="display:block" data-ad-format="fluid" data-ad-layout-key="-gq-2e-1k-1g+qa" data-ad-client="ca-pub-5071889101438500" data-ad-slot="7647446493"></ins> <script> (adsbygoogle = window.adsbygoogle || []).push({}); </script>
ಎಲ್ಲಾ ಹುಡುಗರಿಗೂ ಅವರಪ್ಪನೇ ಸೂಪರ್ ಹೀರೋ. ಅವರು ಮಾಡಿದ್ದೆಲ್ಲಾ ಚೆನ್ನಾಗೇ ಕಾಣುತ್ತೆ..ಆ ಪೂರ್ವಾಗ್ರಹದಿಂದ ಹೊರಬಂದು ನೋಡಿದರೂ ಅಪ್ಪ ಇಷ್ಟವಾಗುತ್ತಾನೆ. ಅಂದು ಶಿಕ್ಷಿಸುವ ಶಿಕ್ಷಕನಾಗಿದ್ದವ ಇಂದು ಗೆಳೆಯನಾಗುತ್ತಿದ್ದನೋ ಎನಿಸುವಂತೆ ಮಾಡುತ್ತಾನೆ. ಏನಿದು , ಅಪ್ಪನನ್ನು ಏಕವಚನದಲ್ಲಿ ಸಂಬೋಧಿಸುವಷ್ಟು ಸಿಟ್ಟೇ ಎಂದು ಯೋಚಿಸಬೇಡಿ. ನಮ್ಮ ಕಡೆ ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ಹಾಗಾಗಿ ರಕ್ತಸಂಬಂಧ ಇರೋರನ್ನ, ಅತೀ ಪ್ರೀತಿಪಾತ್ರರನ್ನು ಏಕವಚನದಲ್ಲೇ ಕರೀಬೇಕು ಎಂದು ರೂಡಿಯಿದೆ. ಅಪ್ಪನಿಗಿಂತಾ ಅಚ್ಚುಮೆಚ್ಚು ಬೇಕೇ ? ಅಂದ ಹಾಗೆ,ಈಗಲೂ ಊರಿಗೆ ಹೋದರೆ ಹೆಗ್ಡೇರ ಮಗ ಅಂತಾರೆ ಹೊರತು ಮಗನ ಹೆಸ್ರು ಆ ಊರವ್ರಿಗೆ ಗೊತ್ತಿಲ್ಲ :-) ಅಪ್ಪನಿಂದ ಇಂಗ್ಲೀಷ್ ಪಾಠ ಕೇಳಿದ ಎಷ್ಟೋ ಜನರು ಎಲ್ಲೆಲ್ಲೋ ಮರೆಯಾಗಿದ್ದಾರೆ. ಆದರೆ ಊರಿನ ಪೇಟೆಯಲ್ಲಿ ಸಿಕ್ಕಾಗ ಈಗಲೂ ಆತ್ಮೀಯರಾಗಿ ಮಾತಾಡಿಸುತ್ತಾರೆ. ಹಳೆಯ ದಿನಗಳ ನೆನೆಯುತ್ತಾರೆ. "ಪರಿವರ್ತಿನೀ ಸಂಸಾರೆ, ಮೃತಃ ಕೋವಾ ನ ಜಾಯತೇ. ಸ ಜಾತೋ ಯೇನ ಜಾತೇನ ಯಾತಿ ದೇಶಃ ಸಮುನ್ನತಿಂ" ಎಂಬ ಸುಭಾಷಿತವಿದೆ. ಬದಲಾಗುತ್ತಿರುವ ಈ ಸಂಸಾರದಲ್ಲಿ ಯಾರೂ ಸಾಯೋದಿಲ್ಲ. ಯಾರ ಜನ್ಮದಿಂದ ದೇಶೋದ್ದಾರವಾಗುತ್ತೋ ಆತನ ಜನ್ಮ ಸಾರ್ಥಕ ಎಂಬುದದರ ಅರ್ಥ. ಯಾವುದೇ ಸ್ಪರ್ಧೆಯಾದರೂ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದ್ದ ಅಪ್ಪ, ಸೋಲುಗಳಿಗೆಂದಿಗೂ ಎದೆಗುಂದದಂತೆ ಬೆನ್ನ ಹಿಂದಿರುತ್ತಿದ್ದ ಅಪ್ಪ, ಎಕ್ಸಾಮು ಎಕ್ಸಾಮೆಂದು ಯಾಕೆ ತಲೆ ಕೆಡ್ಸಿಕೋತೀಯೋ. ನೀ ಹೇಗಾದರೂ ಇರೋ. ಆರಾಮಾಗಿರು. ಇದೇ ಊರಲ್ಲಿ ಯಾವುದಾದ್ರೂ ಒಂದು ಕೆಲಸ ಸಿಕ್ಕೇ ಸಿಗುತ್ತೆ ಅನ್ನೋ ಅಪರಿಮಿತ ಜೀವನೋತ್ಸಾಹದ ಅಪ್ಪ.. ಅಂದ ಮಾತ್ರಕ್ಕೆ ಓದನ್ನು ಎಂದೂ ನಿರಾಕರಿಸದ ಅಪ್ಪ.. ಅಕ್ಷರ ಸರಿಯಿಲ್ಲವೆಂದು ಬಯ್ಯಿಸಿಕೊಳ್ಳುತ್ತಿದ್ದ ನಿನ್ನ ಮಗನೀಗ ಬೆಳೆದು ನಿನ್ನ ಬಗ್ಗೆಯೇ ಸಾಲುಗಳ ಪೋಣಿಸುವ ಪ್ರಯತ್ನದಲ್ಲಿದ್ದಾನೆ.. ಹೇಳೋ ಅನಂತ ಸಾಧ್ಯತೆಗಳ ಮಧ್ಯೆ ಯಾವದನ್ನಾರಿಸುವುದೆಂಬ ಗೊಂದಲದಲ್ಲಿ ಮುಳುಗಿಹೋಗಿದ್ದಾನೆ.
ReplyDeleteಸೂಪರ್ ಲೇಖನ ಪ್ರಶಸ್ತಿ.. ಸರಳ ಸುಂದರವಾಗಿದೆ.. ಏನು ಬರೆಯಲಿ ಎಂಬ ತೊಳಲಾಟದಲ್ಲೇ ಅನೇಕ ಸುಮಧುರ ವಿಚಾರಗಳನ್ನು ಹೇಳುತ್ತಾ ಸಾಗಿರುವ ನಿಮ್ಮ ಲೇಖನ ಪ್ರಶಂಸನೀಯವಾಗಿದೆ. ಸೂಪರ್
Deleteಏನ್ ಶ್ರೀಕಾಂತಣ್ಣ ಇದು .. ಸೂಪರ್ ಫಾಸ್ಟ್ ಪ್ರತಿಕ್ರಿಯೆ.. ನಿಮ್ಮೀತರದ ಪ್ರೋತ್ಸಾಹ ಕಂಡು ಕಂಗಳು ತುಂಬಿ ಬರುತ್ತಿವೆ ;-( ;-( ..ಯಾಕೋ ಅಪ್ಪಂದಿರ ದಿನ ಅಳಿಸುತ್ತಿದೆ..
ನಾ ಮೌನಿ ಪ್ರಶಸ್ತಿ ಜಿ :(
ReplyDeleteಏನೂ ಹೇಳೋಕೆ ತೋಚುತ್ತಿಲ್ಲ ಅಂತ ಹೇಳಿಯೇ ನಮ್ಮನ್ನೂ ಅಳಿಸಿದ್ರಿ ನೀವು .
ಭಾವ ತೀವ್ರತೆಯಲ್ಲಿ ಮಿಂದೆದ್ದ ಭಾವ ನಂದು .
ಹೇಳೋಕೆ ತೋಚ್ತಾ ಇಲ್ಲದೇ ಇರೋದು ನಂಗೆ
ಇಷ್ಟವಾಯ್ತು ಅನ್ನೋದು ಕಷ್ಟವಾಗಿ ,ಈ ಅಪ್ಪನ ಬಗೆಗೊಂದು ಹೆಮ್ಮೆ ನಂಗೂ ಮೂಡಿದೆ ಅನ್ನೋದೊಂದ ಬಿಟ್ಟು ನಾನೇನೂ ಹೇಳಲಾರೆ .
ಅಪ್ಪ ಯಾವತ್ತೂ ಇರ್ಲಿ ಹೀಗೆಯೆ ನಿಮ್ಮ ನೆನಪಲ್ಲಿ ,ಮನದಲ್ಲಿ .
Deleteಕೆಲ ನೆನಪುಗಳು ಹಿಂಗೇ ಭಾಗ್ಯ.. ಏನು ಹೇಳೋಕೂ ತೋಚದಷ್ಟು ಅಸಹಾಯಕರನ್ನಾಗಿ ಮಾಡಿ ಬಿಡುತ್ತದೆ.. :-(
ಮಾತಿಲ್ಲದ ಮೌನವೇ ಎಲ್ಲಾ ಉತ್ತರಗಳಾಗಿಬಿಡುತ್ತದೆ ಆಗ.. ಮೆಚ್ಚುಗೆಗೆ ಧನ್ಯವಾದಗಳು.. ಹಾ.. ಅಂತಹ ಅಪ್ಪ ಸಿಕ್ಕಿದಕ್ಕೆ ಹೆಮ್ಮೆ ಪಡುತ್ತೇನೆ ನಾನು..
ಬೊಗಸೆಗೆ ಸಿಗದ ನೆನಪಿನ ಬಿಂದು
ReplyDeleteಸಾಗರವಾಗಿ ಉಕ್ಕಿಹುದು
ತನ್ನನೆ ತೇದ ತಂದೆಯ ನೆನಪು
ಕಂಗಳಂಗಳದಿ ಬಿಕ್ಕಿಹುದು |೨
ವಾವ್ ತಂದೆಯ ಬಗ್ಗೆ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ ಗೆಳೆಯ. ಅಪ್ಪ ಎಷ್ಟು ಮುಖ್ಯವೋ ನನಗೆ ಚೆನ್ನಾಗಿ ಗೊತ್ತು. ನಾನು 3 ವರ್ಷ ಮಗುವಾಗಿದ್ದಾಗಲೇ ಅಪ್ಪ ತೀರಿಕೊಂಡರು.
Deleteಏನಂತ ಹೇಳಲಿ ಸಾರ್.. ನಿಮ್ಮ ನೆನಪುಗಳ ಕೇಳಿದ್ರೆ ದುಃಖವಾಗ್ತದೆ :-(.. ನಿಮ್ಮ ಕಮೆಂಟು, ಪ್ರೋತ್ಸಾಹಗಳ ನೋಡಿದ್ರೆ ಖುಷಿಯಾಗ್ತದೆ..:-) ಎಂದೆಂದಿನ ಸಹಕಾರಕ್ಕೆ ಧನ್ಯವಾದಗಳು ಸರ್ :-)
ನಿನ್ನೆಯ "ಅಪ್ಪಂದಿರ ದಿನ" ದಂದು ಬರೆದ ಈ ಲೇಖನ "ಕೆಂಡಸಂಪಿಗೆ"ಯಲ್ಲಿ ಪ್ರಕಟವಾಗಿದೆ :-)
ReplyDeletehttp://kendasampige.com/article.php?id=6344
ನಿನ್ನ ಅಪ್ಪ ಎಲ್ಲರಿಗೂ ಮಾದರಿ ಕಣೋ ... ಮನದುಂಬಿ ಬಂತು ಲೇಖನ ಓದಿ....
ReplyDeleteಪದವಿರದೆ ನಾ ಮೌನಿಯಾದೆ ...
ಏಕವಚನ ಪ್ರೀತಿ ಹೆಚ್ಚು ಮಾಡ್ತು ... ಅದೇ ಸರಿ ...
ನೀನು ಬರೆದ ಲೇಖನಗಳಲ್ಲಿ ಇದು the the bestttt :)
Thanks a lot Adi :-) :-)
Deleteನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಕಂಡು ನಾನೂ ಮೂಕ ..:-)
Super Prashasti... Hinde odididnille iga odadi tumba ishta aatu
ReplyDeleteಧನ್ಯವಾದಗಳು ಸಂದ್ಯಕ್ಕ..
Delete