Sunday, June 23, 2013

ಇಕ್ಕೇರಿ

ಈ ಹಿಂದೆ ಪಂಜುವಿನಲ್ಲಿ ಇಕ್ಕೇರಿ ಬಗ್ಗೆ ಬರ್ದಿದ್ದೆ. ಅದಾದ ಮೇಲೆ ಊರಿಗೆ ಹೋದಾಗ ಮತ್ಯಾಕೋ ಇಕ್ಕೇರಿಗೆ ಹೋಗೋ ಮನಸ್ಸಾಯ್ತು. ಹೋದಾಗ ಬರಿದೇ ಹೋಗಿದ್ದ ಅನೇಕ ಮಾಹಿತಿಗಳೂ ಸಿಕ್ವು. ಅದನ್ಯಾಕೆ ಹಂಚಿಕೊಳ್ಳಬಾರ್ದು ಅನಿಸ್ದಾಗ ಮೂಡಿದ್ದೇ ಈ ಲೇಖನ. ಲೇಪಾಕ್ಷಿಯ ಬಗ್ಗೆ ಬರೆದ್ಮೇಲೆ ಯಾಕೋ ಪ್ರವಾಸಕಥನ ಬರೆಯೋ ಮನಸ್ಸೇ ಇರ್ಲಿಲ್ಲ :-( ಆದ್ರೂ ಇಕ್ಕೇರಿಯ ಬಗೆಗಿನ ಚಿತ್ರಗಳೇ ಇದನ್ನು ಬರೆಸಿದವು ಅಂದ್ರೆ ತಪ್ಪಾಗಲಿಕ್ಕಿಲ್ಲವೇನೋ :-) ಮುಂಚಿನ ಲೇಖನವನ್ನೇ ಸ್ವಲ್ಪ ಉತ್ತಮಪಡಿಸೋ ಪ್ರಯತ್ನ ಅಂತ್ಲೂ ಹೇಳ್ಬಹುದೇನೋ ಇದನ್ನ..


ಸಾಗರಕ್ಕೆ ಬಂದೋರಾಗಿದ್ರೆ "ಕೆಳದಿ-ಇಕ್ಕೇರಿ: ಅನ್ನೋ  ಹೆಸರು ಕೇಳಿರ್ಬೇಕಲ್ವಾ . ಕೇಳಿದ್ರೂ  , ಕೇಳ್ದೇ ಇದ್ರೂ ಪ್ರತೀ ಬಾರಿ ಅಲ್ಲಿಗೆ ಹೋದಾಗ್ಲೂ ಒಂತರಾ ಹೊಸ ಅನುಭವ. ಹಾಗಾಗಿ ಒಂದ್ಸಲ ಅಲ್ಲಿಗೇ ಹೋಗ್ಬರೋಣ.  ಸಾಗರಕ್ಕೆ ಸಾಗರ ಅಂತ ಹೆಸರು ಬಂದಿದ್ದೇ ಕೆಳದಿ ಮತ್ತು ಇಕ್ಕೇರಿ ಇಂದ ಅಂತೆ.  ಇಕ್ಕೇರಿ ೧೫೬೦ ರಿಂದ ೧೬೪೦ ರ ವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತಂತೆ. ಆ ಕಾಲದಲ್ಲಿ ಕೆಳದಿ-ಇಕ್ಕೇರಿಗಳ ಮಧ್ಯೆ ಒಂದು ಪಟ್ಟಣವನ್ನು ಕಟ್ಟಬೇಕೆಂಬ ರಾಜಾಜ್ನೆಯಂತೆ ಸಾಗರವನ್ನು ಕಟ್ಟಲಾಯಿತಂತೆ. ಹಾಗಾಗಿ ಇವೆರಡರ ಮಧ್ಯದಲ್ಲಿರುವ ಸಾಗರದಿಂದ ಕೆಳದಿ ಇಕ್ಕೇರಿಗಳಿಗೆ ಏಳು ಕಿ.ಮೀ ದೂರ.

ಸಾಗರದಿಂದ ಇಕ್ಕೇರಿಗೆ ಸಾಗ್ತಾ ಮೊದಲು ಸಿಗೋದೊಂದು ಕೆರೆ, ಬಲಗಡೆ ಅಡಕೆ ತೋಟಗಳು. ಕೆರೆ ಏರಿ ದಾಟ್ತಿದ್ದ ಹಾಗೇ ಸಿಗೋದು ಇಕ್ಕೇರಿ ಅಘೋರೇಶ್ವರ ದೇಗುಲದ ಪ್ರಾಂಗಣ. ಮೆಟ್ಟಿಲುಗಳನ್ನೇರಿ, ಗೇಟು ದಾಟೋವರೆಗೂ ಒಳಗಡೆ ಏನಿದೆ ಅನ್ನೋದು ಕಾಣದಷ್ಟು ಎತ್ತರದಲ್ಲೇ ಇದೆ ಪ್ರಾಂಗಣ. ಅಲ್ಲಿ ನಮ್ಮನ್ನ ಸ್ವಾಗತಿಸೋದೊಂದು ದೊಡ್ಡ ಮಂಟಪ. ಅದರಲ್ಲಿ ಎರಡಾಳೆತ್ತರದ ನಂದಿ ಕುಳಿತಿದ್ದಾನೆ. ಇದು ನಮ್ಮದೇ ಊರಾದ ಕಾರಣ ಸಣ್ಣವನಿದ್ದಾಗಿನಿಂದಲೂ ಆಗಾಗ ಹೋಗುತ್ತಿದ್ದೆ. ಆಗೆಲ್ಲಾ ಈ ನಂದಿಯ ಕಾಲ ಕೆಳಗೆ ನುಸುಳೋದೊಂದು ಆಟ ನಮಗೆ.ಇಲ್ಲಿ ಬರೋ ಮಕ್ಕಳಿಗೆಲ್ಲಾ ಈಗಲೂ ಒಂದು ಖುಷಿ ಅದು.

ಹಾಗೆಯೇ ನಂದಿಗೊಂದು ಕೈ ಮುಗಿದು ಮುಂದೆ ಬರುತ್ತಿದ್ದಂತೆ ಅಘೋರೇಶ್ವರನ ದೇಗುಲ ಸಿಗುತ್ತದೆ. ಉತ್ತರ-ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಈ ದೇಗುಲದ ಶೈಲಿ ಸ್ವಲ್ಪ ವಿಶಿಷ್ಟವಾಗಿದೆ. ವಿಜಯನಗರದ ಅರಸರಿಂದ ಹಿಡಿದು, ಹೊಯ್ಸಳ-ಚಾಲುಕ್ಯ, ನಂತರ ಬಂದ ಡೆಕ್ಕನ್ ಸುಲ್ತಾನರ ಶಿಲ್ಪಕಲೆಯ ಮಿಶ್ರಣ ಇಲ್ಲಿದೆಯಂತೆ.ಉದಾಹರಣೆಗೆ ಮೊದಲು ಸಿಗುವ ನಂದಿ ಮಂಟಪ. ಆರು ಬಾಗಿಲುಗಳಿರುವ ಈ ಮಂಟಪದ ವಿನ್ಯಾಸ ಮುಸ್ಲಿಂ ಶೈಲಿಯಲ್ಲಿದೆ. ಇದ ಕೋನಾಕೃತಿಯ ಬಾಗಿಲುಗಳು, ಕಮಲಗಳಂತಹ ಮೇಲ್ಚಾವಣಿ, ಗುಂಬಜ್ದಂತಹ ರಚನೆಗಳಿಗೆ ಕಮಲಿನೀ ಮಹಲ್ ಅನ್ನುತ್ತಾರಂತೆ :-)
 

ಅಕ್ಕ ಪಕ್ಕ ಪರಿವಾರ ದೇವತೆಗಳ ಗುಡಿಯಿರುವ ಈ ದೇಗುಲ ಗರ್ಭಗೃಹ, ಅರ್ಧಮಂಟಪ, ಮುಖಮುಂಟಪಗಳನ್ನು ಹೊಂದಿದೆ.ಗರ್ಭಗೃಹದಲ್ಲಿ ಪಾಣಿಪೀಠದ ಮೇಲಿರುವ ೩೨ ಕೈಗಳ ಅಘೋರೇಶ್ವರ ಇಲ್ಲಿನ ಮುಖ್ಯ ಆಕರ್ಷಣೆ.ದೇಗುಲಗಳ ಮೇಲೆ ನಡೆದ ದಾಳಿಗಳಲ್ಲಿ ಅಘೋರೇಶ್ವರನನ್ನು ತುಂಡರಿಸಿದರೂ ಅವನ ಕಾಲಿನ ಭಾಗವನ್ನು ದೇಗುಲದ ಹೊರಗಡೆಯೂ ೩೨ ಕೋನಗಳ ಪಾಣಿಪೀಠವನ್ನು ಗರ್ಭಗೃಹದಲ್ಲೂ ಕಾಣಬಹುದು:-(

 ನಂತರ  ಅರ್ಧಮಂಟಪದಲ್ಲಿ ಬಿಳಿ ಕಲ್ಲಿನಿಂದ (ಅಮೃತ ಕಲ್ಲಿನಿಂದ) ಕೆತ್ತಿದ ಸಣ್ಣ ನಂದಿಯಿದೆ. ಅರ್ಧಮಂಟಪದ ದ್ವಾರದಲ್ಲಿ ಎರಡೂ ಬದಿಯಲ್ಲಿ ಅಘೋರೇಶ್ವರನ ಪರಿವಾರದ ಕೆತ್ತನೆಗಳಿವೆ. ಎಡಭಾಗದಲ್ಲಿ ಮಹಿಷಮರ್ಧಿನಿ, ಭೈರವನ ಕೆತ್ತನೆಗಳಿದ್ದರೆ ಬಲಭಾಗದಲ್ಲಿ ಗಣಪತಿ, ಷಣ್ಮುಖನ ಕೆತ್ತನೆಗಳಿವೆ. ಎದುರಿನ ಮುಖಮಂಟಪ ಕೆತ್ತನೆಯಿರುವ ಕಂಬಗಳ ಆಧಾರದ ಮೆಲೆ ನಿಂತಿದೆ. ದೇಗುಲವು ದ್ರಾವಿಡ ಶೈಲಿಯ ಕಳಸವನ್ನು ಹೊಂದಿದೆ.

ದೇವರಿಗೆ  ಕೈ ಮುಗಿದು ಹಾಗೇ ತಲೆಯೆತ್ತಿ ನೋಡಿದರೆ ಮೇಲ್ಚಾವಣಿಯಲ್ಲಿರುವ ಸುಂದರ ಕೆತ್ತನೆಗಳನ್ನು, ಕಂಬದಲ್ಲಿರುವ ಕೆತ್ತನೆಗಳನ್ನು ನೋಡಬಹುದು. ಅಘೋರೇಶ್ವರನ ಎದುರಿಗೆ ಕೆಳದಿಯನ್ನಾಳಿದ ಮೂರು ಅರಸರನ್ನು  ಕೆತ್ತಲಾಗಿದೆ. ಕೆಳಗೆ ಹೆಸರು ಬರೆದಿದ್ದರೂ ಇಕ್ಕೇರಿಗೆ ಹೋಗುವ ಮುನ್ನ ಈ ಮಾಹಿತಿ ಗೊತ್ತಿರದಿದ್ದರೆ ಅಥವಾ ಅಲ್ಲಿ ಯಾರಾದರೂ ಹೇಳದಿದ್ದರೆ, ನೀವು ಆ ರಾಜರನ್ನು ನೋಡಲು ಸಾಧ್ಯವೇ ಇಲ್ಲ !




 ಎಲ್ಲೆಡೆ ಎದುರಾಗೋ ಧ್ವಜ ಸ್ಥಂಬದ ಬದಲು ನಂದಿ ಮಂಟಪ, ಎಲ್ಲೆಡೆ ಇರೋ ನವರಂಗ ಇಲ್ಲಿ ಇಲ್ಲದೇ ಇರುವುದು ಇಲ್ಲಿನ ಮತ್ತೊಂದು ವಿಶೇಷತೆ ಅನಿಸುತ್ತದೆ.ನಾಗಮಂಡಲದ ಕೆತ್ತನೆಗಳು, ಚಂದ್ರನನ್ನು ನುಂಗುತ್ತಿರುವ ರಾಹು, ಇಪ್ಪತ್ತು ಕಿಟಕಿಗಳು, ಕುದುರೆ ಸವಾರ ಸೈನಿಕ, ಆನೆ, ಸಿಂಹ, ಮೊಸಳೆ, ಕುದುರೆಗಳ ಸಮ್ಮಿಶ್ರಣವಾದ ಪ್ರಾಣಿ, ಒಂದೇ ಚಿತ್ರದಲ್ಲಿರುವ ಆನೆ-ಮಂಗ-ನಾಯಿಗಳನ್ನೊಳಗೊಂಡ ಪ್ರಾಣಿ.. ಹೀಗೆ ತಲೆಯೆತ್ತಿ ನೋಡಿದತ್ತೆಲ್ಲಾ ಒಂದೊಂದು ವೈಶಿಷ್ಟ್ಯಗಳು ಕಾಣಸಿಗುತ್ತವೆ.





ಅಲ್ಲಿರೋ ಕೆತ್ತನೆಗಳನ್ನು ನೋಡಿ ದೇವಸ್ಥಾನದ ಎಡಭಾಗದಲ್ಲಿರೋ ಪ್ರವೇಶ ದ್ವಾರದಿಂದ ಹೊರಬಂದರೆ ಪಾರ್ವತಿ ದೇವಸ್ಥಾನ ಸಿಗುತ್ತದೆ.

 ಇಲ್ಲಿನ ಪಾರ್ವತಿ ದೇವಿಗೆ ಅಖಿಲಾಂಡೇಶ್ವರಿ ಎಂಬ ಹೆಸರು. ಸಣ್ಣಗಿರೋ ಆ ದೇಗುಲದ ಎದುರೂ ಕೆತ್ತನೆಗಳಿವೆ. ಅಲ್ಲೂ ಕೈ ಮುಗಿದು ಹಾಗೇ ಅಘೋರೇಶ್ವರನ ದೇಗುಲದ ಪ್ರದಕ್ಷಿಣೆ ಹಾಕಿದರೆ ಸುಮಾರಷ್ಟು ದೇವ ದೇವತೆಗಳು ಸಿಗುತ್ತಾರೆ. ಫೋಟೋ ಪ್ರಿಯರಿಗೆ ಸಾಕಷ್ಟು ಪೋಸುಗಳೂ ಗ್ಯಾರಂಟಿ. ಹಿಂದಿನ ಬಾರಿ ಹೋದಾಗ ದೇಗುಲದ ಹೊರಗಿನ ಕೆಲ ಪಾರ್ಶ್ವ ಕಾಲನ ಹೊಡೆತಕ್ಕೆ ಸಿಕ್ಕು ಪಾಚಿಗಟ್ಟಿ, ಕಪ್ಪಾಗಿ ಹೋಗಿದ್ದು ನೋಡಿ ಬೇಸರಿಸಿದ್ದೆ. ಈಗ ಮುಜರಾಯಿ ಇಲಾಖೆಯಿಂದ ದೇವಸ್ಥಾನವನ್ನು ಚಂದಗೊಳಿಸಲಾಗಿದೆ ಎಂಬ ಸುದ್ದಿ ಕೇಳಿದ್ದೇನೆ. ಹಾಗಾಗಿ ನೀವು ಬರುವ ವೇಳೆಗೆ ಇನ್ನೊಂದಿಷ್ಟು ಚಂದದ ದೃಶ್ಯಗಳು ನಿಮಗೂ ಸಿಕ್ಕಬಹುದು :-)


 



ಪ್ರಳಯದ ಭವಿಷ್ಯ :

ಇಲ್ಲಿನ ದೇವಸ್ಥಾನದಲ್ಲಿ ಒಂದು ಗೆರೆಯಿಂದ ಬೇರ್ಪಟ್ಟಿರುವ ಎರಡು ಹಲ್ಲಿಗಳನ್ನೂ, ಅವುಗಳ ಪಕ್ಕದಲ್ಲಿ ಒಂದು ಚೇಳನ್ನೂ ಕೆತ್ತಲಾಗಿದೆ. ಇದೇ ದೇಗುಲದಲ್ಲೊಂದು ಕಲ್ಲು ಕೋಳಿಯೂ ಇದೆ. ಆ ಕಲ್ಲು ಕೋಳಿ ಕೂಗಿ, ಆ ಚೇಳು ಒಂದು ಹಲ್ಲಿಯನ್ನು ಕಡಿದು ಆ ಹಲ್ಲಿಗಳು ಗೆರೆಯನ್ನು ದಾಟಿ ಮುಂದೆ ಬಂದು ಒಂದಕ್ಕೊಂದು ಮುಟ್ಟಿದಾಗ ಪ್ರಳಯವಾಗುತ್ತದೆ ಎಂಬ ಐತಿಹ್ಯವಿದೆ.ಆ ಪ್ರಳಯದ ಸಮಯದಲ್ಲಿ ಕಲ್ಲು ಬಸವ ಮೂರು ಸುತ್ತು ತಿರುಗುತ್ತಾನಂತೆ.

ಇದೇ ರೀತಿ ಮುಂಚೆ ಹೇಳಿದ ಚಿತ್ರದಲ್ಲಿನ ರಾಹು ಚಂದ್ರನನ್ನು ನುಂಗಿದಾಗ ಪ್ರಳಯವಾಗುತ್ತದೆ ಅಂತಲೂ ಹೇಳುತ್ತಾರೆ.

ದೇಗುಲದ ಹೊರಬಂದು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆಯೇ ಬಲಭಾಗದಲ್ಲಿ ಎತ್ತರದ್ದೇನೋ ಕಂಡಂತೆ ಆಗುತ್ತದೆ. ಹುಲ್ಲು ಬೆಳೆದಿರುವ ಇದನ್ನು ಸ್ವಲ್ಪ ಗಮನಿಸಿ ನೋಡಿದರೆ ಇದು ಸಭಾವೇದಿಕೆ ಆಗಿರಬಹುದಾದ ಅಥವಾ ಜಾತ್ರೆ ಸಮಯದಲ್ಲಿ ಉತ್ಸವಮೂರ್ತಿಯನ್ನು ಇಟ್ಟು ಪೂಜಿಸುವ ಸ್ಥಳದಂತೆ ಕಾಡುತ್ತದೆ. ಹಾಗೇ ಎಡಕ್ಕೆ ಬಂದರೆ ಒಂದು ಗಣಪತಿ ದೇವಸ್ಥಾನ. ಅಲ್ಲೂ ಕೈ ಮುಗಿದು ಮತ್ತೆ  ಮನೆಯತ್ತ ಮುಖ ಮಾಡಿದಾಗ ಇನ್ನೊಮ್ಮೆ ಇಕ್ಕೇರಿಗೆ ಬಂದು ಬಿಡೋಣವಾ ಅನ್ನೋ ಭಾವ.

ಮುಂದೆ..
ಇಕ್ಕೇರಿಯನ್ನು ದಾಟಿ ಹಾಗೇ ಮುಂದೆ ಹೋದರೆ ಹಳೆ ಇಕ್ಕೇರಿ ಕೋಟೆ ಸಿಗುತ್ತದೆ. ಅದು ಈಗ ಪೂರ್ತಿ ಹುಲ್ಲಲ್ಲಿ ಮುಚ್ಚಿ ಹೋಗಿದೆಯಂತೆ. ಹಾಗಾಗಿ ಅಲ್ಲಿಗೂ ಹೋಗಬೇಕೆಂಬ ಆಸೆ ಮುಂದೆ ಹಾಕುತ್ತಲೇ ಬಂದಿದ್ದೇನೆ. ಇನ್ನೊಮ್ಮೆ ಸಾಗರಕ್ಕೆ ತೀರಾ ಸಮೀಪದ ಹಳೆ ಇಕ್ಕೇರಿ ಮತ್ತು ಹೊಸನಗರ ಕೋಟೆಗಳಿಗೆ ಹೋಗಬೇಕೆಂಬ ಆಸೆಯಿದೆ.. ನೋಡಬೇಕು ಕಾಲ ಚಕ್ರ ಕಾಲಿಗೆ ಚಕ್ರ ಕಟ್ಟಿ ಯಾವಾಗ ಕರೆಸುತ್ತದೋ ಎಂದು :-)

ಹೋಗುವ ಬಗೆ:
ಸಾಗರದಿಂದ-ಇಕ್ಕೇರಿ- ೭ ಕಿ.ಮೀ
ಹೊಸನಗರ, ಸಿಗಂದೂರು ಹೋಗೋ ಬಸ್ಸಿನಲ್ಲಿ ಇಕ್ಕೇರಿ ಕ್ರಾಸಿನಲ್ಲಿ ಇಳಿದು ಸುಮಾರು ೨ ಕಿ.ಮೀ ನಡೆದರೆ ಇಕ್ಕೇರಿ. ಇಲ್ಲ ಸಾಗರದಿಂದಲೇ ಆಟೋದಲ್ಲಿ , ಸ್ವಂತ ವಾಹನದಲ್ಲಿ ಹೋಗಬಹುದು. ಇಕ್ಕೇರಿಯ ಮೇಲೆ ಹೋಗುವ ಬಸ್ಸುಗಳು ಅಪರೂಪ.
ಶಿವಮೊಗ್ಗದಿಂದ - ಸಾಗರ - ೭೩ ಕಿ.ಮೀ
ಬೆಂಗಳೂರಿನಿಂದ ಸಾಗರ- ೩೫೦ ಕಿ.ಮೀ

11 comments:

  1. ನಾನು ನೋಡದಿರುವ ಕರ್ನಾಟಕ ನಿಮ್ಮ ಕಣ್ಣಿನ ಮೂಲಕ...
    ಚಿತ್ರಗಳು ಮತ್ತು ಇಕ್ಕೇರಿಯನ್ನು ದಾಖಲಿಸಿದ ರೀತಿ ನೆಚ್ಚಿಗೆಯಾಯಿತು.

    ReplyDelete
    Replies
    1. ತುಂಬಾ ಧನ್ಯವಾದಗಳು ಬದ್ರಿ ಭಾಯ್.. ಎಲ್ಲಾದರೂ ಹೊದಾಗ ಅಲ್ಲಿ ಕೇಳಿದ ಇತಿಹಾಸವನ್ನು ದಾಖಲಿಸಬೇಕೆಂಬ ಬಯಕೆ ಮೂಡುತ್ತದೆ.. ಅಂತಹ ಬಯಕೆಗೆ ಪದ ರೂಪ ಸಿಕ್ಕಿದ್ದೇ ಈ ಲೇಖನ.. ನಿಮ್ಮಗಳ ಪ್ರೋತ್ಸಾಹ ನೋಡಿ ಖುಷಿಯಾಗುತ್ತಿದೆ :-)

      Delete
  2. ಒಂದು ಸಲ ಹೋಗಬೇಕಿದೆ...

    ಫೋಟೋ ಹಾಗೂ ವಿವರಣೆ ಎರಡೂ ಚನ್ನಾಗಿದೆ...

    ReplyDelete
    Replies
    1. ಖಂಡಿತಾ ಹೋಗ್ಬನ್ನಿ ರಾಘವ್ :-)
      ಮೆಚ್ಚುಗೆಗೆ ಧನ್ಯವಾದಗಳು

      Delete
  3. ಮಸ್ತ್ ಡೀಟೈಲ್ಸ್ . ಹಳೇ ಇಕ್ಕೇರಿ ಬಗ್ಗೆ ಗೊತ್ತಿರಲಿಲ್ಲ. ಅಲ್ಲೂ ಒಂದ್ಸಲ ಹೋಗ್ಬೇಕು.

    ReplyDelete
  4. ಬಹಳ ದಿನದಿನ ಇರುವ ಇಕ್ಕೇರಿಗೆ ಹೋಗುವ ಬಯಕೆ ಇನ್ನೂ ಈಡೇರಿಲ್ಲ ಪ್ರಶಸ್ತಿ .. ಕಳೆದ ಬಾರಿ ಓದಾಗ ಅಲ್ಲೇ ಹತ್ತಿರದಿಂದ ಹೋದರು ಇಕ್ಕೆರಿಗೆ ಹೋಗಲಾಗಲಿಲ್ಲ .. ಸಮಯದ ಅಭಾವ ಮತ್ತು ಜೊತೆಗಿದ್ದವರಿಗೆ ಇತಿಹಾಸ ಮತ್ತು ಶಿಲ್ಪಿ ಕಳೆಯ ಬಗ್ಗೆ ಇರುವ ಅನಾಸಕ್ತಿ .. ಈ ಲೇಖನ ಓದಿದ ಮೇಲೆ ಖಂಡಿತ ಸಧ್ಯದಲ್ಲೇ ಅಲ್ಲಿಗೆ ಹೋಗುವ ಪ್ಲಾನ್ ಸಿದ್ಧ ಮಾಡುತ್ತೇನೆ .. ಒಳ್ಳೆಯ ಲೇಖನ .. ಲೇಪಾಕ್ಷಿ ಬಗ್ಗೆ ಬರೆದ ಹಾಗೆ ಇಕ್ಕೆರಿಯ ಬಗ್ಗೆ ಕೂಡ ಚೆನ್ನಾಗಿ ಬರೆದಿದ್ದೀರ

    ReplyDelete
    Replies
    1. ಕೆಲವೊಂದ್ಸಲ ಹೀಗೇ ಆಗೋಗತ್ತಲ್ವಾ ಗಿರೀಶ್.. ಹೋಗ್ಬೇಕು ಅಂತ ಇರತ್ತೆ. ಆದ್ರೆ ಜೊತೆಗಿದ್ದವರ ನಿರಾಸಕ್ತಿ ಆ ಭಾಗ್ಯ ಕಸ್ಕೊಂಡು ಬಿಡುತ್ತೆ :-)
      ತೊಂದರೆ ಏನಿಲ್ಲ.. ಇನ್ನೊಮ್ಮೆ ಬಂದಾಗ ಧಾರಾಳ ಬರಬಹುದು ಇಕ್ಕೇರಿಗೆ :-)
      ನಿಮ್ಮ ಮೆಚ್ಚುಗೆಗೆ ಮತ್ತೊಮ್ಮೆ ವಂದನೆ :-)

      Delete
  5. ಅಮೃತ ಘಳಿಗೆ ಚಿತ್ರದ ಹಾಡನ್ನು ನೋಡಿದಾಗೆಲ್ಲ ಈ ದೇವಾಲಯವನ್ನು ನೋಡುವ ಆಸೆ ಮೂಡಿಬರುತಿತ್ತು. ಸತತ ನಾಲ್ಕು ವರ್ಷಗಳಲ್ಲಿ ಮೂರು ಬಾರಿ ಈ ದೇವಾಲಯವನ್ನು ನೋಡಿ ಆನಂದಪಟ್ಟಿದ್ದೆ. ಆ ನೆನಪುಗಳು ಮತ್ತೆ ತಾಜಾ ಆಯಿತು ನಿಮ್ಮ ಈ ಸುಂದರ ಚಿತ್ರವಾರ್ತೆಯನ್ನು ನೋಡಿ. ಸುಂದರ ಬರಹ ಅಭಿನಂದನೆಗಳು.. ಇದಕ್ಕೆ ಕೊಡುವ ಬಹುಮಾನ ನಿಮ್ಮ ಹೆಸರು :-)

    ReplyDelete
  6. ಚಂದದ ಬರಹ ...ಇಕ್ಕೇರಿಯ ಬಗ್ಗೆ ನೀವು ಬರೆದ ಮೊದಲ ಭಾವವನ್ನೂ ಓದಿದ್ದೆ ನಾ ...
    ಅದೆಷ್ಟೋ ಸಲ ಇಕ್ಕೇರಿಯನ್ನ ನೋಡಾಗಿದೆ ..ಆದರೂ ನಂಗ್ಯಾವ ಮಾಹಿತಿಯೂ ತಿಳಿದಿರಲ್ಲ (ಕೇಳಿರಲಿಲ್ಲ ನಾನೂ ಬಿಡಿ )
    ಮತ್ತೆ ಇಕ್ಕೇರಿಯನ್ನ ಹೊಸತಾಗಿ ನೋಡಿದಂತನಿಸಿತು ಇವತ್ತಿಲ್ಲಿ ....

    ಫೋಟೋ ಜೊತೆಗಿನ ಇತಿಹಾಸ ಇಷ್ಟವಾಯ್ತು .

    ReplyDelete
  7. Lasr year we visited Nagara fort, Ikkeri and Keladi from Teerthahalli........and was planning to write about it. you have written very nicely. ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ರಥೋತ್ಸವಕ್ಕೆ ಕೇವಲ 2000 ರೂ ಕೊಡುತ್ತಾರಂತ ಪೂಜಾರಪ್ಪನವರು ಪೇಚಾಡ್ತಾ ಇದ್ದರು 'ನಿಮ್ಮಂತಹ ದಾನಿಗಳು ದುಡ್ಡು ನೀಡಿದ್ರೆ ಗ್ರಾಂಡ್ ಆಗಿ ರಥೋತ್ಸವ ಮಾಡಬಹುದು ಅಂತ ಸೇರಿಸಿದರು. ಮಾತ್ರವಲ್ಲ ನಾವು ಹುಂಡಿಗೆ ದುಡ್ಡು ಹಾಕುವಾಗ 'ನನಗೆ ತಿಂಗಳಿಗೆ 200 ರೂ ಮಾತ್ರ ಸರಕಾರದಿಂದ ಸಿಗುವುದು, ಹುಂಡಿಗೆ ಹಾಕುವ ಬದಲು ನನ್ನ ತೀರ್ಥದ ತಟ್ಟೆಯಲ್ಲಿ ಹಾಕಿ' ಅಂತ ಸೇರಿಸಿದ್ರು...
    :-)
    malathi S

    ReplyDelete
    Replies
    1. ಪ್ರಶಾಂತವನಕ್ಕೆ ಸ್ವಾಗತ ಮಾಲತಿಯವರೇ :-)
      ಬರೆಯಬೇಕೆಂದಿದ್ದ ನಿಮ್ಮ ಬಯಕೆಯನ್ನ ಬದಿಗಿಡಬೇಡಿ. ನೀವೂ ಬರೆಯಿರಿ.. ನಾವು ಬಂದು ಓದುತ್ತೇವೆ :-)

      Delete