ರೈಲು ಕತ್ತಲೆಯ ಸುರಂಗದಲ್ಲಿ ಇದ್ದಕ್ಕಿದ್ದಂಗೆ ನಿಂತೇ ಬಿಟ್ಟಾಗ ಎಲ್ಲರ ಕೂಗು, ಕೇಕೆಗಳು ಎಲ್ಲೆ ಮೀರಿತು.. ಈ ಯುವಕರ ಕೂಗಿನಲ್ಲಿ ಯಾವುದೇ ಕೇಳಿದ ಕಿಲಕಿಲ ಕೇಳಿದಂತೆನಿಸಿ ಧಗ್ಗನೆ ಎದ್ದು ನಿಂತ ಆತ. ಹೌದು ಅದೇ ನಗು. ಸಂದೇಹವೇ ಇಲ್ಲ. ವರ್ಷಗಟ್ಟಲೇ ಹಿಂದೆ ಕಾಡಿದ ಅದೇ ಮಂದಹಾಸ ಇಂದು ಮರಳಿ ಕೇಳಿದಂತೆ. ಲಗಾಮು ಕಿತ್ತ ಕುದುರೆಗಳಂತೆ, ಶಾಲೆ ಬಿಟ್ಟ ಮಕ್ಕಳಂತೆ ಮನದ ಭಾವ, ನೆನಪುಗಳು ಓಡತೊಡಗಿದವು, ಕಾಲಗರ್ಭದಲ್ಲಿ ಹಿಂದೆ ಹಿಂದೆ. ಇಲ್ಲಿಯವರೆಗೂ ಬೇಡವಾಗಿದ್ದ ರೈಲಿನ ಲೈಟುಗಳು, ಶಾಂತಿ ನೀಡುವಂತಿದ್ದ ಕತ್ತಲೆ, ಖಾಲಿಯಾದ ಮೊಬೈಲ್ ಬ್ಯಾಟರಿ ಈಗ ಅಸಹನೀಯವೆನಿಸತೊಡಗಿದವು. ಒಂದು ಬೆಂಕಿಪೊಟ್ಟಣವಾದರೂ ಸಿಕ್ಕಿದ್ದರೆ ಆ ಬೆಂಕಿಕಡ್ಡಿಗಳ ಬೆಳಕಿನಲ್ಲಿ ಆಕೆಯನ್ನು ಹುಡುಕಿಯೇನು ಎಂದೆನಿಸತೊಡಗಿತವನಿಗೆ. ದೇಹದ ಪರಿವೆಯಿಲ್ಲದಂತೆ ದೇಶ ಸುತ್ತುತ್ತಿದ್ದವನಿಗೆ ನಿನ್ನೆ ಮಳೆಯಲ್ಲಿ ಇಡೀ ದಿನ ತೊಯ್ದದ್ದೂ ನೆನಪಿರಲಿಲ್ಲ. ಅದೇ ಅರೆ ಒಣಗಿದ ಪ್ಯಾಂಟಿನ ಜೇಬಿಗೆ ಕೈ ಹಾಕಿದ. ಎಂದೂ ಇರುತ್ತಿದ್ದ ಬೆಂಕಿಪೆಟ್ಟಿಗೆಗೆ. ಜೀವವನ್ನೇ ಸುಟ್ಟ ಸಿಗರೇಟುಗಳಿಗೆ ನಿತ್ಯ ಸಾಥಿಯಾಗುತ್ತಿದ್ದ ಬೆಂಕಿಪೆಟ್ಟಿಗೆ ಇಂದೇ ಕೈಕೊಡಬೇಕೇ. ಆಸೆಯೆಂಬ ಮಾಯೆ ಕೇಳಬೇಕಲ್ಲ. ಕತ್ತಲೆಯಲ್ಲೂ ಕಷ್ಟಪಟ್ಟು, ಅಭ್ಯಾಸಬಲದಿಂದ ಒಂದು ಕಡ್ಡಿ ಗೀರಿದ.. ಒದ್ದೆ ಪೆಟ್ಟಿಗೆಯಲ್ಲಿ ಬೆಂಕಿಯೆಲ್ಲಿ ಮೂಡಬೇಕು? ಈತನ ಅಸಹಾಯಕತೆಗೆ ಸಾಕ್ಷಿಯಾಗುವಂತೆ ಕಡ್ಡಿಯೇ ಮುರಿದು ಹೋಯಿತು. ಬೇಸರವೇ ಜೀವನವಾಗಿಸಿಕೊಂಡವನಿಗೂ ಇಂದು ವಿಧಿಯ ಮೇಲೆ ತೀರಲಾರದ ಕೋಪ.ಎಲ್ಲೆಲ್ಲೂ ಸಿಗದವಳು ಇಂದು ಮತ್ತೆ ಸಿಕ್ಕಿದಂತೆ ಮಾಡಿಯೂ ಇನ್ನೂ ಸಿಗದಿರುವ ಘಳಿಗೆಗಳ ಬಗ್ಗೆ ಕೋಪ, ನಿರಾಸೆ. ಕೆಲ ಕ್ಷಣಗಳ ಮಾತಷ್ಟೇ. ರೈಲು ಸುರಂಗ ದಾಟಿದರೆ ಮೂಡೋ ದಿನದ ಬೆಳಕಲ್ಲಿ ಆಕೆಯನ್ನು ಮತ್ತೆ ಹುಡುಕಬಹುದಲ್ಲಾ ಅನ್ನೋ ಭರವಸೆಯಲ್ಲಿ ಆತ ಮತ್ತೆ ಕುಳಿತ. ಇಷ್ಟು ಕಾಲ ಕಾದವನಿಗೆ ಇನ್ನು ಕೆಲ ಕಾಲ ಕಾಯುವುದು ಹೆಚ್ಚೇ ಎಂದು ಎಷ್ಟೇ ಪ್ರಯತ್ನಪಟ್ಟರೂ ಮನಸ್ಸು ಮಾತುಕೇಳದೇ ಹಿಂದಿಂದೆ ಓಡುತ್ತಿತ್ತು.. ಮನಸ್ಸೇಕೋ ವಾಸ್ತವಕ್ಕೆ ಬಂದಿತೆಂದು ಅನಿಸಿದಾಗ ರೈಲಿನಲ್ಲಿ ಎಲ್ಲಿಂದ ಆ ದನಿ ಕೇಳಿ ಬರುತ್ತಿದೆ ಎಂದು ಕತ್ತು ಹೊರಳಿಸಿದ. ಅಷ್ಟರಲ್ಲಿ ರೈಲು ಮತ್ತೆ ಮುಂದೆ ಹೊರಟಿತು ಸುರಂಗದಿಂದ. ಜನರ ಕೂಗುಗಳು ಮತ್ತೆ ಮುಗಿಲು ಮುಟ್ಟಿತು. ಈ ಕೂಗುಗಳಲ್ಲಿ ಮೋಹನ ಮುರಳಿಯಂತೆ ಸೆಳೆದ ಆ ನಗು ಕರಗಿಹೋಯಿತು.
ರೈಲು ಸುರಂಗದಿಂದ ಹೊರಬಂತು ಕೊನೆಗೂ.. ಕತ್ತಲೆಯ ಕೂಪದಿಂದ ತನ್ನ ಬಾಳು ಕೊನೆಗೂ ಹೊರಬಂತೇನೋ ಎನಿಸಿತವನಿಗೆ. ದಿಗ್ಗನೆ ಎದ್ದ ಆತ ಬೋಗಿಯ ಎಡಬದಿಗೆ ಹೊರಟ. ಎಲ್ಲಾದರೂ ಸೀಟಿನಲ್ಲಿ ಮರೆಯಲಾರದಂತಹ ಆ ಮುಖ ಕಾಣಬಹುದೇ ಎಂದು. ನಿರಾಸೆ. ಬೋಗಿಯ ತುದಿಯವರೆಗೂ ಹೋದವ ಮತ್ತೆ ಮರಳಿ ಮತ್ತೊಂದು ದಿಕ್ಕಿನತ್ತ ಸಾಗಿದ. ಅತ್ತಲೂ ನಿರಾಸೆ. ಕೆಲವೊಬ್ಬರು ಇವನನ್ನೇ ನೋಡಿದರು. ರೈಲಿನಲ್ಲಿ ಬೆಳಗಿಂದ ಒಂದೇ ಸೀಟಿನಲ್ಲಿ ಕೂತವ ಈಗ ಬಾಲ ಸುಟ್ಟ ಬೆಕ್ಕಿನಂತೆ ಅತ್ತಿತ್ತ ಓಡಾಡೋದನ್ನ ನೊಡಿ ಆಶ್ಚರ್ಯ ಆಗಿರ್ಬೇಕು ಅವರಿಗೆ . ಈ ತಳಮಳ ಕಂಡು ಒಮ್ಮೆ ಅವನಿಗೇ ನಗು ಬಂತು. ಇದು ತಾನೇನಾ ಅಂತ. ವರ್ಷಗಳ ಜಡತ್ವವನ್ನ ಒಂದು ನಗು ಅಳಿಸುವುದೆಂದರೆ.. ಎರಡು ಭೋಗಿಗಳನ್ನು ದಾಟಿದರೂ ಆಕೆ ಕಾಣಲಿಲ್ಲ. ಯಾರದೋ ನಗು ಆಕೆಯದಂತೆ ಕೇಳಿತೋ ಅಥವಾ ಆಕೆಯೇ ತನ್ನ ಕಾಡಬೇಕೆಂದು ಎಲ್ಲಾದರೂ ಮರೆಯಾದಳೋ ತಿಳಿಯದಾಯಿತು.. ನಿರಾಸೆಯ ಮೋಡಗಳು ಆಸೆಯ ಸೂರ್ಯನನ್ನು ಮುತ್ತಿದಂತೆ, ಭರವಸೆಯ ಕಿರಣಗಳು ಕಾಲದ ಮೇಘಗಳ ಹಿಂದೆ ಕಾಣೆಯಾದಂತೆ. ನಾಲ್ಕೈದು ಭೋಗಿಗಳಾಚೆ ದಾಟಿದರೂ ಆಕೆ ಸಿಗದಿದ್ದಾಗ ಮನಸ್ಸಿಗೆ ಮತ್ತದೇ ನಿರಾಸೆ ಕವಿಯಿತು. ಕಮಲದಂತೆ ಅರಳಿದ ಮುಖ ಕಾಲ ಸೂರ್ಯನ ಪ್ರಕೋಪಕ್ಕೆ ಸಿಕ್ಕಂತೆ ಬಾಡಿಹೋಯಿತು..
ಎರಡು ವರ್ಷಗಳ ಹಿಂದಿರಬೇಕು. ಇದೇ ರೀತಿ ಒಂದು ರೈಲಿನ ಪಯಣ. ದೇಶ ಸುತ್ತೋ ಹುಚ್ಚಿನ ಯುವಕರು. ರೈಲೊಂದರಲ್ಲಿ ಮೋಜು ಮಸ್ತಿಯ ಪಯಣ. ಹೀಗೆ ಹಾಡು ಹರಟೆಗಳಲ್ಲಿದ್ದಾಗ ಒಂದು ಸುಂದರ ಹೆಣ್ಣು ದನಿ ಕೇಳಿದಂತಾಯಿತು. ಎಲ್ಲಾ ಅತ್ತ ತಿರುಗಿದರೆ ಒಬ್ಬ ಹಲಸಿನ ಹಣ್ಣು ಮಾರೋ ಹುಡುಗಿ. ಹುಡುಗಿ ಅನ್ನೋದಕ್ಕಿಂತ ಯುವತಿ ಅಂತಲೇ ಅನ್ನಬಹುದಿತ್ತೇನೋ. ಲಂಗದಾವಣಿ ಬದಲು ಜೀನ್ಸ್ ಪ್ಯಾಂಟೇನಾದ್ರೂ ಹಾಕಿದ್ರೆ ಇವ್ರ ಗ್ಯಾಂಗಿನಲ್ಲೇ ಒಬ್ಬಳಂತೆ ಕಾಣುತ್ತಿದ್ದಳೇಣೋ. ಆದರೆ ಹಳ್ಳಿ ಹುಡುಗಿ. ಕಿತ್ತು ತಿನ್ನೋ ಬಡತನ ತೇಪೆ ಹಾಕಿದ ಬಟ್ಟೆಯಲ್ಲಿ ಕಾಣುತ್ತಿತ್ತು. ಬಡವರೆಂದಾಕ್ಷಣ ಭಿಕ್ಷುಕರೆಂದುಕೊಂಡಿದ್ದ ಪೇಟೆ ಹುಡುಗರಿಗೆ ಅವಳನ್ನು ನೋಡಿ ಯಾಕೋ ಮಾತೇ ನಿಂತುಹೋಗಿತ್ತು. ಹರಿದ ಬಟ್ಟೆಯಲ್ಲೇ ಲಕ್ಷಣವಾಗಿದ್ದ ಆಕೆಯನ್ನು ಕಂಡು ಪೇಟೆ ಮಂಗಗಳಿಗೆ ಯಾಕೋ ತಡೆಯದಾಯಿತು. ಏನ್ ಹೆಣ್ಣೇ ಎಷ್ಟು ಹಲಸಿನಹೆಣ್ಣಿಗೆ ಅಂತ ಆಕೆಯ ಬಳಿ ಹೋದ ಒಬ್ಬ. ಸಾಬ್ , ಅಲ್ಲೇ ನಿಲ್ಲಿ. ನಾವು ಹಣ್ಣು ಮಾತ್ರ ಮಾರೋದು. ದುಡ್ಡಿಲ್ದೇ ಇರ್ಬೋದು ನಮ್ಮತ್ರ ಆದ್ರೆ ಸ್ವಾಭಿಮಾನ ಅನ್ನೋದು ಇದ್ದೇ ಇದೆ ಅಂದ್ಲು ಆಕೆ. ಹೋದವನ ಮುಖ ಪಿಚ್ಚಾಯಿತು. ಎಲ್ಲರ ಗಮನ ಆಕೆಯ ಕಡೆ ತಿರುಗಿತು. ಅಲ್ಲಿದ್ದ ಹುಡುಗರಲ್ಲಿ ಯಾರೊಬ್ಬರು ಮಾತನಾಡಿದ್ರೂ ರೈಲಲ್ಲಿದ್ದ ಎಲ್ಲರಿಂದಲೂ ಒಂದೊಂದು ಧರ್ಮದೇಟುಗಳು ಗ್ಯಾರಂಟಿ ಅನ್ನೋ ತರ ರೈಲಿನ ಜನರೆಲ್ಲಾ ಈ ಹುಡುಗರ ಗ್ಯಾಂಗನ್ನು ದುರುಗುಟ್ಟತೊಡಗಿದರು.
ಪರಿಸ್ಥಿತಿ ಯಾಕೋ ಮಿತಿ ಮೀರ್ತಿರೋದನ್ನ ನೋಡಿದ ಈತ ಎದ್ದು ಬಂದು.. ಏ ಸಾರಿ ಕೇಳೋ ಮೇಡಂಗೆ. ಸಾರಿ ಮೇಡಂ. ಅವನು ಮಲೆಯಾಳಿ. ಆತನಿಗೆ ಕನ್ನಡ ಸರಿಯಾಗಿ ಬರಲ್ಲ. ದಯವಿಟ್ಟು ಕ್ಷಮಿಸಿ ಬಿಡಿ. ನಿಮ್ಮ ಇಡೀ ಹಲಸಿನಹಣ್ಣಿನ ಡಬ್ಬ ನಾವೇ ತಗೋತೀವಿ ಬೇಕಾದ್ರೆ. ಕ್ಷಮಿಸಿ ಬಿಡಿ ಮೇಡಂ ಅಂದ.. ಏನಯ್ಯಾ, ದುಡ್ಡಿದೆ ಅಂತ ಧಿಮಾಕಾ ನಿಮಗೆ ? ಆ ಹೆಣ್ಣು ಮಗೂನ ಅವಮಾನ ಮಾಡೋನು ಒಬ್ಬ. ಸಾಲದು ಅಂತ ಎಲ್ಲಾ ಹಲಸಿನ ಹಣ್ಣು ತಗೋತೀವಿ ಅಂತ ಧಿಮಾಕು ಮಾಡೋನು ಒಬ್ಬ. ಹೇಗಿದೆ ಮೈಗೆ ಅಂದ್ರು ಒಬ್ಬ ವಯಸ್ಕರು.. ಹಾಗಲ್ಲ ಸಾರ್ ಅದು. ಸಾರಿ ಕೇಳ್ತಿದ್ದೇನಲ್ಲ ನಾನು .. ಅಬೆ, ಸಾರಿ ಪೂಚೋ ಕರ್ಕೆ ಬೋಲಾ ತಾನ ತುಜೆ, ಸಾರಿ ಪೂಚೋ ಬೇ ಅಂತ ಮೊದಲಿನವನ ತಲೆಗೊಂದು ಮೊಟಕಿದ ಇವನು. ಅವನು ಸಾರಿ ಮೇಡಂ, ಸಾರಿ ಸಾರಿ ಅಂದ.. ಅವನ ಸಾರಿಯಿಂದ ಆಕೆಗೆ ಸಮಾಧಾನವಾಯ್ತೋ ಅಥವಾ ಈ ಸಾರಿ ಪ್ರಹಸನದಿಂದ ತನ್ನ ಇಡೀ ದಿನದ ಬಿಸಿನೆಸ್ ಹಾಳಾಗುವುದೆಂಬ ಭಯವೋ ಆ ಹುಡುಗಿಯಲ್ಲಿದ್ದ ವ್ಯವಹಾರಸ್ಥೆಯನ್ನ ವಾಸ್ತವಕ್ಕೆ ತಂದಿತು.. ರೀ ಅವ್ನು ಸಾರಿ ಕೇಳಿದ್ನಲ್ಲ. ನಾನು ಒಪ್ಕೊಂಡ್ನಲ್ಲ. ಈ ಚಾಪ್ಟರ್ ಕ್ಲೋಸ್ ಇಲ್ಲಿಗೆ. ನಿಮ್ಮೆಲ್ಲರ ಸಪೋರ್ಟಿಗೆ ಥ್ಯಾಂಕ್ಸ್, ನಡಿರಿ ನಡಿರಿ ಅಂದ್ಲು . ಅಲ್ಲಿದ್ದ ಜನಕ್ಕೆ ಒಮ್ಮೆ ಏನು ಹೇಳ್ಬೇಕು ಅಂತನೇ ಗೊತ್ತಾಗ್ಲಿಲ್ಲ. ಅವ್ರು ಅಲ್ಲೇ ಇರೋದನ್ನ ನೋಡಿ ಏನ್ರೀ.. ಎಲ್ಲಾ ನಾಟ್ಕ ನೋಡೋಕೆ ಬಂದಿದೀರಾ ? ನಡೀರಿ ಸಾಕು ಅಂದಾಗ ಎಲ್ಲಾ ಅಬ್ಬಾರೆ ಅಂದ್ಕೊಂಡು ತಮ್ಮ ತಮ್ಮ ಜಾಗಕ್ಕೆ ಹೋಗಿ ಕೂತ್ರು..
ಆ ಹುಡುಗಿ ಹಲಸಿನಹಣ್ಣು ಮಾರುತ್ತಾ ಮುಂದಿನ ಬೋಗಿಗೆ ಹೋದ್ರೂ ಆಕೆಯ ಮಾತುಗಳು ಮಾತ್ರ ಈತನ ಕಿವಿಯಲ್ಲಿ ಇನ್ನೂ ಗುಯ್ಗುಟ್ಟುತ್ತಿದ್ದವು. ಆಕೆಯ ಸ್ವಾಭಿಮಾನ, ಸಮಯ ಪ್ರಜ್ನೆ ಬಹಳ ಇಷ್ಟವಾಗೋಯ್ತು. ಆಕೆಯ ಕೊನೆಯ ಮಾತುಗಳು ಒಂದೆರಡು ನಿಮಿಷ ತಡ ಆಗಿದ್ರೆ ಇವ್ನ ಗ್ಯಾಂಗಿನವ್ರಿಗೆಲ್ಲಾ ಸರಿಯಾಗಿ ಧರ್ಮದೇಟುಗಳು ಬಿದ್ದಿರೋದು. ರೈಲಿನಿಂದಾನೇ ಹೊರದಬ್ಬಿರ್ತಿದ್ರೇನೋ.
ಅದೇ ನೆನಪುಗಳಲ್ಲಿ ಕೂತಿದ್ದಾಗ ಇವರು ಇಳಿಯೋ ಜಾಗ ಬಂದೇ ಹೋಯ್ತು. ಗೆಳೆಯರೆಲ್ಲಾ ತಮ್ಮ ನಗುವಿನಲ್ಲಿ ರೈಲಿನ ಘಟನೆಯನ್ನು ಮರೆತೇಹೋಗಿದ್ದರೂ ಈತನ ನೆನಪಿನಲ್ಲಿ ಅದು ಅಳಿಸಲಾರದಂತೆ ಅಚ್ಚಾಗಿಹೋಗಿತ್ತು. ಟ್ರಿಪ್ಪಿಂದ ವಾಪಾಸು ಬಂದರೂ ಆಕೆಯ ಮಾತುಗಳು, ಮುಖ ಕಿವಿಯಲ್ಲಿ ಈಗ ತಾನೇ ಕಂಡು ಕೇಳಿದಂತೆ ಅನುರಣಿಸುತ್ತಿದ್ದವು.
ಈ ಘಟನೆಯ ನಂತರ ಬಡವರು, ಅವರ ಮಕ್ಕಳಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಅನ್ನೋ ಭಾವಗಳು ತೀವ್ರವಾಗಿ ಒಂದು ಎನ್ ಜೀವೋ ಸೇರಿಕೊಂಡ ಆ ಹುಡುಗ.ಹಿಂಗೇ ಒಂದು ತಿಂಗಳು ಕಳೆಯಿತು. ಸಕಲೇಶಪುರದತ್ರ ಯಾವುದೋ ಒಂದು ಹಳ್ಳಿಯ ಶಾಲೆಗೆ ಧನಸಹಾಯ ಮಾಡೋ ಪ್ಲಾನು ಹಾಕಿದ್ರು ಇವನ ಎನ್ಜೀವೋ ಅವರು. ಪೇಟೆಯ ಜೀವನದಿಂದ ಬೋರು ಹೊಡೆದಿದ್ದ ಆತ ಎನ್ಜೀವೋದವರ ಜೊತೆ ತಾನೂ ಬರ್ತೀನಿ ಅಂತ ಕೂತ. ಹೊಸ ಹುಡುಗನ ಉತ್ಸಾಹ ಕಂಡು ಖುಷಿಯಾಗಿ ಅವನನ್ನೂ ಕರೆದುಕೊಂಡು ಹೋದರು ಅವರು ಸಕಲೇಶಪುರದತ್ತರದ ಹಳ್ಳಿಗೆ. ಸಕಲೇಶಪುರ ಅಂದ್ರೆ ಕೇಳಬೇಕಾ ? ಮೊದಲೇ ಸಖತ್ತಾದ ಜಾಗ. ಅಲ್ಲಿನ ಹಸಿರ ಸಿರಿಯಲ್ಲಿ ಆತ ಕಳೆದೇ ಹೋದ. ಪ್ರತೀ ಮರ, ಹಕ್ಕಿಯನ್ನೂ ಎಂಜಾಯ್ ಮಾಡ್ಬೇಕು ಅಂತ ತನ್ನ ಕ್ಯಾಮೆರಾದಲ್ಲಿ ಸೆರೆಹಿಡೀತಾ ಇದ್ದ ಈತನನ್ನು ಮುಂದೆ ಮುಂದೆ ನಡೆಸೋದೇ ಒಂದು ಸಾಹಸವಾಗಿ ಆ ಎನ್ಜೀವೋದ ಹಿರಿಯರೆಲ್ಲಾ ಇವ್ನ ಬಗ್ಗೆ ಗೊಣಗತೊಡಗಿದರು
ಯಾವ ಮೂಲಭೂತ ಸೌಕರ್ಯಗಳೂ ಇಲ್ಲದ ಹಳ್ಳಿ. ವಾಹನ ಅಂದ್ರೆ ದ್ವಿಚಕ್ರವಾಹನ ಇಲ್ಲಾ ಜೀಪನ್ನು ಕಷ್ಟಪಟ್ಟು ಓಡಿಸಬಹುದಷ್ಟೇ ಆ ಹಳ್ಳಿಯ ಕೊರಕಲು ರೋಡಲ್ಲಿ. ಮಳೆಗಾಲ ಶುರುವಾಯ್ತಂದ್ರೆ ಅದು ಕನಸಿನ ಮಾತೇ ಸರಿ. ಆ ಮಕ್ಕಳಿಗೆ ಕೊಡಬೇಕೆಂದಿದ್ದ ಪೆನ್ನು, ಪುಸ್ತಕಗಳ ಚೀಲಗಳನ್ನು ತಮ್ಮ ಗಾಡಿಯಿಂದ ಒಂದು ಎತ್ತಿನ ಗಾಡಿಗೆ ವರ್ಗಾಯಿಸಿ ಹಳ್ಳಿಗೆ ಸಾಗಿದ್ದರು ಇವರೆಲ್ಲಾ. ಅಂದು ರಾತ್ರೆ ಅಲ್ಲೇ ಬೆಳದಿಂಗಳ ಊಟವನ್ನು ಸವಿದು ಮಲಗಿದವರಿಗೆ ಮಾರನೇ ದಿನ ಸೂರ್ಯ ಮುಖಕ್ಕೆ ಹೊಡೆದಾಗಲೇ ಎಚ್ಚರವಾಗಿದ್ದು. ಹತ್ತುಘಂಟೆ ಅಂದರೆ ಇವರ ವಿತರಣಾ ಸಮಾರಂಭ. ಅದರ ತಯಾರಿಯಲ್ಲಿ ಇವರು ಹೇಗೆ ನಿತ್ಯಕರ್ಮಗಳನ್ನು ಮುಗಿಸಿ ತಯಾರಾದರೋ, ಆ ಸಮಯ ಹೇಗೆ ಬಂದಿತೋ ತಿಳಿಯಲೇ ಇಲ್ಲ.
ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಅದರಲ್ಲಿ ಹಳ್ಳಿ ಮಕ್ಕಳ ನೃತ್ಯದಲ್ಲಿ ಇವನನ್ನೂ ಎಳೆದು ಸೇರಿಸಿಕೊಂಡರು. ಇವನು ಬರೋಲ್ಲ ಅಂದರೂ ಅವರು ಬಿಡಲಿಲ್ಲ. ಇವನ ವಕ್ರ ಪಕ್ರ ನೃತ್ಯಕ್ಕೆ ಅಲ್ಲಿನ ಹಳ್ಳಿಯವರೆಲ್ಲಾ ಬಿದ್ದು ಬಿದ್ದು ನಗತೊಡಗಿದರು. ಆ ನಗುವಿನ ಅಲೆಯಲ್ಲಿ ಒಂದು ಅಚ್ಚರಿ. ರೈಲಿನಲ್ಲಿ ಹಲಸಿನ ಹಣ್ಣು ಮಾರುತ್ತಿದ್ದ ಹುಡುಗಿಯೂ ಇದ್ದಾಳೆ !! ಇವನ ಮುಖ ಮತ್ಯಾಕೋ ಅರಳಿ ಹೋಯಿತು ಇದ್ದಕ್ಕಿದ್ದಂತೆ. ಅವಳು ನಗಲೆಂದೇ ಇನ್ನಷ್ಟು ಮಂಗ ಮಂಗನಾಗಿ ನೃತ್ಯ ಮಾಡುತ್ತಿದ್ದ. ಆಕೆಯೂ ನಗುತ್ತಿದ್ದಳು. ಈ ಮಂಗಾಟದಲ್ಲೇ ನೃತ್ಯ ಕಾರ್ಯಕ್ರಮ ಮುಗಿಯಿತು. ಮುಗಿದ ಮೇಲೆ ಆಕೆ ನಿತ್ತ ಕಡೆ ನೋಡುತ್ತಾನೆ. ಆಕೆ ಅಲ್ಲಿಲ್ಲ.. ಛೇ. ಎಲ್ಲಿ ಹೋದಳು ಅವಳು ? ಅಲ್ಲೊಂದು ಹುಡುಗಿ ನಿಂತಿದ್ದಳು ಅವಳನ್ನು ನೋಡಿದಿರಾ ಎಂದು ಕೇಳೋಣ ಅಂದರೆ ಯಾವ ಹುಡುಗಿ ಅನ್ನುತ್ತಾರೆ ಎಲ್ಲ. ಅವಳ ಮುಖ ಕಂಡ ಖುಷಿಯಲ್ಲಿ ಆಕೆಯ ಬಟ್ಟೆಯ ಬಣ್ಣವನ್ನೂ ನೋಡಿರಲಿಲ್ಲ. ಹೆಸರಂತೂ ಮೊದಲೇ ಗೊತ್ತಿಲ್ಲ. ಥೋ , ಎಂತಾ ಕತೆಯಾಯಿತು ಇದು ಎಂದು ಪೇಚಿಡುವಷ್ಟರಲ್ಲೇ ಎಲ್ಲೋ ರೈಲಿನ ಕೂ ಎಂಬ ಸದ್ದಾಗತೊಡಗಿತು.. ಅರೆರೆ ಇಲ್ಲೇ ಒಂದು ರೈಲಿನ ರೂಟು.. ಅಂದರೆ ಇಲ್ಲೇ ಒಂದು ರೈಲ್ವೇ ನಿಲ್ದಾಣವೂ ಇರಬಹುದು. ರೈಲಲ್ಲಿ ಹಲಸಿನ ಹಣ್ಣು ಮಾರೋ ಹುಡುಗಿ ಅಂದ್ರೆ ಗೊತ್ತಾಗಬಹುದಾ ಅಂದುಕೊಳ್ಳುತ್ತಿರುವಾಗ ದಾರಿಯಲ್ಲಿ ಕಂಡ ದೊಡ್ಡ ದೊಡ್ಡ ಹಲಸಿನ ಮರಗಳೂ, ಅದರ ಕೆಳಗಡೆ ಅಲ್ಲಲ್ಲಿ ಹಲಸಿನ ಹಣ್ಣು ರಾಶಿ ಹಾಕಿ ಮಾರುತ್ತಿದ್ದ ಹುಡುಗರ ದೃಶ್ಯಗಳೂ ನೆನಪಾದವು. ಛೇ, ಇವರಲ್ಲಿ ಯಾರಾದ್ರೂ ಆಗಿರಬಹುದು. ಅವಳನ್ನು ಹೇಗೆ ಕಂಡುಹಿಡೀಲಿ ಅಂದ್ಕೋತಿರುವಾಗಲೇ ರೈಲಿನ ಕೂ ಎಂಬ ಸದ್ದು ಜೋರಾಗಿ ಈತನ ಮನದ ಮಾತುಗಳನ್ನೆಲ್ಲಾ ತನ್ನಲ್ಲೇ ಕರಗಿಸಿಕೊಳ್ಳುವಷ್ಟು ಜೋರಾಯಿತು.. ಎಲ್ಲೆಲ್ಲೂ ರೈಲಿನ ಚುಕುಬುಕು , ಕೂ ಎಂಬ ಸದ್ದುಗಳೇ ತುಂಬಿಹೋಯಿತು.
ಚಿತ್ರಕೃಪೆ: ಅಂತರ್ಜಾಲ.
ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ http://www.panjumagazine.com/?p=3225
ತುಂಬಾ ಗಾಂಭೀರ್ಯ ತುಂಬಿದ ಕಥೆ ಬರು ಬರುತ್ತಾ ಕುತೂಹಲ ತೋರುತ್ತಾ ಸಾಗಿದ ಪರಿ ಸೊಗಸಾಗಿದೆ. ಕಥಾನಾಯಕನ ಆ ಹೊತ್ತಿನ ಪಡಪಾಟಲು.. ಯೋಚನೆಗಳು.. ಆ ಹುಡುಗಿಯ ಜಾಣತನ.. ಎಲ್ಲವೂ ಸೊಗಸಾಗಿದೆ. ಅಂತ್ಯ ಬೇಸರವಾದರೂ ಇನ್ನೊಂದು ಭಾಗದ ಮುನ್ನುಡಿಗೆ ಸಹಾಯವಾಗಬಲ್ಲದು
ReplyDeleteಸೂಪರ್ ಪ್ರಶಸ್ತಿ..
ಧನ್ಯವಾದಗಳು ಶ್ರೀಕಾಂತ್ ಜೀ :-) ಇನ್ನೊಂದು ಭಾಗ ಬರಿ ಅಂತ ಪರೋಕ್ಷವಾಗಿ ಹೇಳ್ತಾ ಇದ್ದೀರಾ ಹೇಗೆ ? ;-)
Deleteಪ್ರಶಸ್ತಿ ,
ReplyDeleteತುಂಬಾ ಇಷ್ಟ ಆದ ಕಥೆ ಇದು. ಅಂತ್ಯ ಬ್ರಿಲಿಯಂಟ್ ಎನಿಸಿತು. ಹಲಸಿನ ಹಣ್ಣಿನ ಹುಡುಗಿಯಾ ಮುಖವನ್ನು ನಗುವ ಚಿಕ್ಕಮಕ್ಕಳ ನಡುವೆ ಕಾಣುವ ಕಥಾನಾಯಕನ ಮನಸ್ಸು ಇಷ್ಟ ಆಗದೆ ಇರಲು ಸಾಧ್ಯವೇ ಇಲ್ಲ. ತುಂಬಾ ಎಂದರೆ ತುಂಬಾ ಖುಷಿ ಆಯಿತು , ಅಗೇನ್ !
ಸೂಪರ್ ಸುಬ್ಬು :-)
Deleteನಿನ್ನ ಮೆಚ್ಚಿಗೆ ಮಾತುಗಳ್ನ ಓದಿ ಸಿಕ್ಕಾಪಟ್ಟೆ ಖುಷಿ ಆಗ್ತಾ ಇದ್ದು ನಂಗೂವ.. ಮತ್ತೆ ಮತ್ತೆ ಬರ್ಯಕ್ಕೆ ಇಂತ ಪ್ರತಿಕ್ರಿಯೆಗಳೇ ಸ್ಪೂರ್ತಿ ಮಾರಾಯ :-)
ಬಹಳ ಚೆನ್ನಾಗಿದೆ ಪ್ರಶಸ್ತಿ.. ಈಚೆಗೆ ಧೂದ್ ಸಾಗರ್ ಕಡೆ ಹೋಗಿ ಬಂದ ಹಾಗಿತ್ತಲ್ಲಾ.. ಅದರ ಅನುಭವದ ಹಿನ್ನಲೆಯಲ್ಲಿ ಬರೆದದ್ದಾ..?? ಇಷ್ಟ ಆಯ್ತು.. :)
ReplyDeleteಧನ್ಯವಾದಗಳು ಸತೀಶ್.. ದೂಧ್ ಸಾಗರ್ಗೆ ಹೋದದ್ದೇನೋ ಹೌದು. ಆದರೆ ಇಲ್ಲಿನ ಅನುಭವ ಮಾತ್ರ ನನ್ನದಲ್ಲ. ಎಲ್ಲಾ ಕಾಲ್ಪನಿಕ :-) ನೀವು ಹೀಗೆ ಕೇಳಬಹುದು ಎಂದೇ ಸಕಲೇಶಪುರ ಅಂತ ಹಾಕಿದ್ದೇನೆ ನೋಡಿ.. ನೀವು ಹಿಂಗೆ ಕೇಳ್ತೀರ ಅಂತ ಗೊತ್ತಿದ್ರೆ ಮುಂದಿನ ಸಲ ಹೊಸೂರು ಅಂತ ಹಾಕಿ ಕಥೆ ಬರೀತೀನಿ ಹುಷಾರ್ :-) :-)
Deleteಚೆನ್ನಾಗಿ ಬರದ್ದೆ :) ಇಷ್ಟ ಆತು
ReplyDeleteಧನ್ಯವಾದ ಹರೀಶಣ್ಣ :-) ವ್ಯಾಕರಣದೋಷ ತಿದ್ದಿದ್ದಕ್ಕೂ ಧವಾ :-)
Deleteಮೊದಲ ಸಾಲನ್ನ ಓದಿದಾಗ ಬಹುಶಃ ದೂದ್ ಸಾಗರ್ ಬಗ್ಗೆ ಹೇಳ್ತಿದೀರೇನೋ ಅಂದ್ಕೊಂಡು ಸರ ಸರ ನೆಕ್ಸ್ಟ್ ಲೈನ್ ಗೆ ಬಂದೆ (ದೂದ್ ಸಾಗರ್ ಗೆ ಹೋಗಿ ನೀವೆಲ್ಲಾ ಮಸ್ತಿ ಮಾಡಿದ್ದನ್ನ ನೋಡಿ ತುಸು ಜಾಸ್ತಿ ಅನ್ನೋ ಅಷ್ಟು ಉರ್ದಿತ್ತು ;) )
ReplyDeleteಆದರೆ ರೈಲಿನಲ್ಲಿ ಹೆಣೆದ ಕಥೆ ಇದೆಂದು ಆಮೇಲೆ ತಿಳಿಯಿತು ....
ಎಲ್ಲಾ ರೈಲಿನ ಕಥೆ ಹಾಡುಗಳು ಹಿಟ್ ಆಗೋ ತರಹ ಬಹುಶಃ ನಿಮ್ಮೀ ಕಥೆಯೂ ಹಿಟ್ ಆಯ್ತೇನೋ ...
ಅಂದ ಹಾಗೆ ನಿಮ್ಮ ಕಥಾ ನಾಯಕನಿಗಾಗಿ ...
ಏನಾಗಲಿ ಮುಂದೆ ಸಾಗು ನೀ ....
ಅಗೈನ್ ,ಇಷ್ಟ ಆಯ್ತು ...
ದೂದ್ ಸಾಗರ್ ಬಗ್ಗೆ ಹೋಗ್ಬಂದಿದ್ದು ಕೇಳಿ ಎಂತಕ್ಕೆ ಉರ್ಕತ್ಯೇ ಹುಡ್ಗೀ, ನೀನು ಹೋಗ್ಬಾ :ಫ್
ReplyDeleteಕಥೆ ಹೆಣೆದಿದ್ದು ರೈಲಲ್ಲೂ ಅಲ್ಲ, ದೂದ್ ಸಾಗರ್ದಲ್ಲೂ ಅಲ್ಲ. ಪೀಜೀಲಿ ಮಾರಾಯ್ತಿ :-)
ಯಾಕೋ ಸ್ವಲ್ಪ ಭಿನ್ನವಾಗಿ ಬರ್ಯಕ್ಕು ಅಂತ ಪ್ರಯತ್ನಿಸ್ತಾ ಇದ್ದಿದ್ದಿ. ಅದ್ರ ಪ್ರತಿಫಲನೇ ಈ ಕತೆ . ಸೂಪರ್ ಹಿಟ್ಟು ಅಂತ ನೀ ಹೇಳ್ತಾ ಇದ್ದೆ. ಆದ್ರೆ ಇದ್ರಲ್ಲಿ ಸಿಕ್ಕಾಪಟ್ಟೆ ತಪ್ಪುಗಳಿದ್ದು ಅಂತ ಸುಮಾರು ಜನ ಹೇಳಿದ.. ಆದ್ರೂ ಬರ್ಯ ಹೊತ್ತಿಗಂತೂ ನಂಗೆ ಖುಷಿ ಕೊಟ್ಟ ಕತೆ . ಮೆಚ್ಚುಗೆಗೆ ಮತ್ತೊಮ್ಮೆ ಧ.ವಾ
ಅಂದ ಹಾಗೆ.. ಏನೇ ಆಗಲಿ ಮುಂದೆ ಸಾಗು ನೀ.. ಅಕ್ಷರಶಃ ನಿಜ.
ನಿಜವಾಗ್ಲು ಮುಂದಿನ ಭಾಗಕ್ಕೆ ಎಡೆ ಮಾಡಿಕೊಟ್ಟಂಗಿದ್ದು. ಹೆಜ್ಜೆ ಹೆಜ್ಜೆಗು ಕುತೂಹಲ ತರಿಸ್ತಾ ಹೋಗ್ತು ಈ ಲೇಖನ :)
ReplyDeleteಕಥೆ ಒದ್ತಾ ಹೋದಂಗು ಕಣ್ಣಿಗೆ ಚಿತ್ರಣ ಬಂದ್ರೆ ಲೇಖಕಂಗೆ ಸಾರ್ಥಕವಡ. ಇಲ್ಲಿ ಅದು ಸಿಕ್ತು