ಮಳೆ ಮಳೆ ಮಳೆ.. ಬೆಂದಕಾಳೂರನ್ನೇ ತೊಳೆದ ಮಳೆ ಮಲೆನಾಡ ಬಿಟ್ಟೀತೆ ? ಮಲೆನಾಡಿಗೆ, ಮಳೆಕಾಡಿಗೆ ಮಳೆ ಹೊಸದಲ್ಲದಿದ್ದರೂ ಈ ಬಾರಿ ಸ್ವಲ್ಪ ಹೆಚ್ಚೇ ಮಳೆನಾ ಅನಿಸ್ತಿತ್ತು.. ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗ್ತಾ ಹೋಗಿದ್ರಿಂದ ಮಲೆನಾಡ ಮಳೆಯ ಗತವೈಭವ ಮತ್ತೆ ಮರಳ್ತಿದ್ಯಾ ಅನ್ನೋ ಆಸೇನೂ ಚಿಗುರ್ತಿತ್ತು. ನಮ್ಮೂರು ಸಾಗರದ ವರದಾನದಿ, ಮಜ್ಜಿಗೆಹೊಳೆ, ಹುಲ್ಲತ್ತಿ ಹೊಳೆಗಳೆಲ್ಲಾ ತುಂಬಿ ಹರಿದು .. ರಸ್ತೆಗಳಲ್ಲೆಲ್ಲಾ ಮೊಣಕಾಲುದ್ದದ ನೀರು. ಸಾಗರ ಉತ್ತರಾಖಂಡ್ ಆಯ್ತೇನೋ ಅಂತ ಗೆಳೆಯರೆಲ್ಲಾ ಕೇಳೋ ಪರಿ ಮಳೆ. ಮಳೆ ಅಂದ್ರೆ ಒಮ್ಮೆ ಬಂದು ಕಾಡಿ ಮಾಯವಾಗೋ ಪರೀಕ್ಷೆಯಂತಿರಲಿಲ್ಲ, ಬಂದರೂ ಬರದಂತಿರೋ ಪಿರಿಪಿರಿ ತುಂತುರಿನಂತಿರಲಿಲ್ಲ.. ಬಿಟ್ಟು ಬಿಟ್ಟು ಹೊಡೆಯೋ ವರ್ಷಧಾರೆ. ಶಾಲಾ ಕಾಲೇಜುಗಳಿಗೆಲ್ಲಾ ರಜಾ ಕೊಡಿಸಿದ ಹುಡುಗರ ಪ್ರೀತಿಯ ಮಳೆಮಾಮ. ಮಳೆ ಅಂದ್ಮೇಲೆ ಬರಿ ನೀರು, ಥಂಡಿಗಳಾದ್ರೆ ಸಾಕೆ ? ಸ್ವಲ್ಪ ಬೆಚ್ಚಗೂ ಬೇಕಲ್ವೇ ? ಅದಕ್ಕೆ ಅಂತಲೇ ರೆಡಿಯಾಗೋ ಮಳೆಗಾಲದ ಸ್ಪೆಷಲ್ ಒಲೆ, ಹೊಡೆಸಲು, ತಟ್ಟಿಗಳು.. ಆಂ, ಅವೇನು ಅಂದ್ರಾ ? ಅವೇ ನಮ್ಮ ಮಲೆನಾಡ ಮಳೆಗಾಲದ ವೈಶಿಷ್ಟ್ಯಗಳು ಕಣ್ರಿ.. ಏನೂಂತ ಕುತೂಹಲನಾ ? ಸರಿ, ಅದ್ನ ತಿಳ್ಯೋಕೆ ಹನಿ ಹನಿ ಮಳೇಲೇ ಒಂದು ರೌಂಡ್ ಹಾಕ್ಕೊಂಡು ಬರೋಣ ಬನ್ನಿ.. ಹಿಂಗೆ ಸುಮ್ನೆ, ನಮ್ಮ ಮಲೆನಾಡ ಮಡಿಲಲ್ಲಿ..
ಮಳೆಗಾಲ ಬಂತೂಂದ್ರೆ ಮಣ್ಣಿನ ಮಕ್ಕಳಿಗೆಲ್ಲಾ ಫುಲ್ ಖುಷಿ. ವರ್ಷವಿಡೀ ಕಾದಿದ್ದ ಭೂತಾಯಿಯ ದಾಹ ವರುಣನ ಲೀಲೆಯಿಂದ ತಣಿಯೋ ಸಮಯ. ವರುಣ ತನ್ನ ನಿರಂತರ ನರ್ತನದಿಂದ ಕೆಲದಿನಗಳಲ್ಲೇ ಭೂಮಾತೆಯ ಮುನಿಸನ್ನು ಅಳಿಸಲೆಂಬ ಆಸೆ ಅವರದ್ದು . ಭೂಮಾತೆ ಸಂತೃಪ್ತಳಾದಳೆಂದರೆ ಎಲ್ಲೆಲ್ಲೂ ದೃಶ್ಯಕಾವ್ಯ. ಕಣ್ಣು ಹಾಯಿಸಿದತ್ತೆಲ್ಲಾ ಹಸಿರು. ತಳ ಕಂಡ ಕೆರೆ, ಬಾವಿ, ಹೊಂಡಗಳೆಲ್ಲಾ ಮೈ ತುಂಬಿ ಎಲ್ಲೆಲ್ಲೂ ನೀರ ಒರತೆ. ಬಂಡೆಗಳಿಂದಲೂ ನೀರ ಝರಿಗಳು ಒಸರಿ ಮಾರಿಗೊಂದು ಮಿನಿ ಫಾಲ್ಸುಗಳ ಸೃಷ್ಠಿ. ಸೊಂಪಾದ ಮಳೆ ಹೊಡೆದ ಮಳೆಕಾಲದಲ್ಲಿ ಮಲೆನಾಡ ಫಾಲ್ಸುಗಳಿಗೆ ಹೋಗೋದಿರಲಿ ಬೆಟ್ಟಗುಡ್ಡಗಳಲ್ಲಿ, ಹಳ್ಳಿಯ ರಸ್ತೆಗಳಲ್ಲಿ ನಡೆಯುವುದೇ ಒಂದು ಆನಂದ :-) ಸಿಕ್ಕಾಪಟ್ಟೆ ಮಳೆ ಹೊಡೆದ್ರೆ ಎಲ್ಲಿ ಪಾಚಿಗಟ್ಟಿದೆಯೋ ಗೊತ್ತಿಲ್ಲ. ರಸ್ತೆ ಎಲ್ಲಿ ಜಾರುತ್ತೋ ಗೊತ್ತಿಲ್ಲ. ಬೇಸಿಗೆಯಲ್ಲಿ ಎಷ್ಟೇ ಸಲ ಹೋಗಿದ್ರೂ, ಓಡಿದ್ರೂ ಅದೇ ರಸ್ತೇಲಿ ಬೇಸಿಗೆಯಂತೆ ಬಿರುಬಿರನೆ ಹೆಜ್ಜೆ ಹಾಕೋಕೆ ಹೋದ್ರೆ ಪಲ್ಟಿ ಹೊಡಿತೀರ ಅಂತ ೧೦೦% ಗ್ಯಾರಂಟಿ ಕೊಡ್ಬೋದು :-) ವರುಣನ ಆರ್ಭಟಕ್ಕೆ ಪಕ್ಕ ಚರಂಡಿಗಳಿದ್ದರೂ ರಸ್ತೆಯನ್ನು ಆಕ್ರಮಿಸಿರೋ ನೀರ ಧಾರೆ. ಅಡ್ಡ ಮಳೆ, ಗಾಳಿಗೆ ಎಷ್ಟೇ ಮೇಲೆತ್ತಿಕೊಂಡರೂ ನೆನೆಯೋ ಪ್ಯಾಂಟು, ಪಂಚೆ, ಸೀರೆಗಳು. ನಿಧಾನಕ್ಕೆ ಹೆಜ್ಜೆ ಹಾಕೋದ್ರ ಜೊತೆ ಕಾಲಿಗೆ ಉಂಬುಳ/ಇಂಬಳ(ಪ್ರಾಣಿಗಳ/ಮನುಷ್ಯರ ಕಾಲಿಗೆ ಹತ್ತಿ ರಕ್ತ ಹೀರೋ ಮಲೆನಾಡಲ್ಲಿ ಕಂಡು ಬರೋ ಒಂದು ಜೀವಿ . leech) ಹತ್ತಿದೆಯಾ ಅಂತ ಆಗಾಗ ಪರೀಕ್ಷಿಸಿಕೊಳ್ಳೋ ಅನಿವಾರ್ಯತೆ. ಎಲ್ಲೋ ಹತ್ತಿದ ಉಂಬುಳಗಳನ್ನು ನೋಡಿರದಿದ್ದರೆ ನಾವು ಮನೆಯವರೆಗೆ ಬರೋದ್ರಲ್ಲಿ ಅವು ಹೊಟ್ಟೆ ಪೂರ್ತಿ ರಕ್ತ ಕುಡಿದು ಉಬ್ಬಿ ಬಿದ್ದೂ ಹೋಗಿರುತ್ತವೆ. ಕಾಲಲ್ಲಿ ರಕ್ತ ಸುರಿಯೋದನ್ನ ನೋಡಿ, ಉಂಬ್ಳ ಕಚ್ಚಿಸ್ಕಂಡ್ಯನಾ ಮಾಣಿ. ತಡಿ ಅಲ್ಲೇ ಇರು. ಅಂತ ಅಲ್ಲೇ ಇದ್ದ ಸುಣ್ಣದ ಡಬ್ಬೀಲಿ ಸುಣ್ಣ ತೆಗೆದು ಹಚ್ಚಿಸ್ಕೊಬೇಕು ಮನೆ ಅವರಿಂದ. ಈ ಉಂಬುಳಗಳು ಒಂಥರಾ ಮಳೆಗಾಲದ ಕಾಯಂ ಅತಿಥಿ. ಹಾಗಾಗಿ ಹಳ್ಳಿಬದಿ ಮನೆಗಳಲ್ಲಿ ಸುಣ್ಣ, ಹೊಗೆಸೊಪ್ಪಿನ ನೀರನ್ನು ಮನೆಯ ಹೊರಬಾಗಿಲ ಬಳಿಯೇ ಇಟ್ಟಿರ್ತಾರೆ. ಮನೆಗೆ ಬಂದೋರು ಮೊದ್ಲು ತಮ್ಮ ಕಾಲುಗಳೆಲ್ಲಾ ನೋಡ್ಕೊಂಡು ಅದ್ರಲ್ಲಿ ಉಂಬುಳಗಳೇನಾದ್ರೂ ಇದ್ರೆ ಸುಣ್ಣದ ನೀರಲ್ಲಿರೋ ಕೋಲನ್ನು ತೆಗೆದು ಆ ಉಂಬುಳಕ್ಕೆ ಮುಟ್ಟಿಸ್ತಾರೆ. ಈ ಹೊಗೆಸೊಪ್ಪು,ಸುಣ್ಣ ತಾಗಿದ ಕೂಡ್ಲೇ ಉಂಬುಳಗಳು ಬಿದ್ದು ಹೋಗುತ್ತೆ. ರಕ್ತ ಸುರಿಯೋದೂ ಕ್ರಮೇಣ ನಿಲ್ಲುತ್ತೆ.
ರಸ್ತೇಲೇ ಪಾಚಿಯ ಮೇಲೆ ಕಾಲಿಟ್ಟು ಬಿದ್ದೋರು ಇನ್ನು ಮನೆ ಹತ್ರ ಬೀಳ್ದೇ ಇರ್ತಾರಾ ? ಮಳೆಗೆ, ಅದ್ರಿಂದ ಕಟ್ಟೊ ಪಾಚಿಗೆ ರಸ್ತೆ ಆದ್ರೇನು, ಮನೆಯಂಗಳ ಆದ್ರೇನು. ಅದ್ಕೇ ಅಂತ್ಲೇ ಮಳೆ ಶುರು ಆದಾಗ ಮನೆ ಅಂಗಳದ ಲುಕ್ಕೇ ಬದಲಾಗುತ್ತೆ. ಜಾರದೇ ಇರ್ಲಿ ಅಂತ ಮನೆಯಂಗಳಕ್ಕೆಲ್ಲಾ ಅಡಿಕೆ ಸಿಪ್ಪೇನೋ, ತೆಂಗಿನ ಗರೀನೋ ಹಾಸ್ತಾರೆ. ಬರಿ ನೆಲಕ್ಕಿಂತ ಅಡಿಕೆ ಸಿಪ್ಪೆ ಮೇಲೆ ಗ್ರಿಪ್ ಜಾಸ್ತಿ. ಅಡಿಕೆ ಸಿಪ್ಪೆ ಹಾಸಿದ್ರೆ ಅಂಗಳದಲ್ಲಿ ಕಳೆ ಹುಟ್ಟೋಲ್ಲ ಅನ್ನೋದೂ ಮತ್ತೊಂದು ಲಾಭ. ಅಡಿಕೆ ಸಿಪ್ಪೆ, ತೆಂಗಿನ ಗರಿಗಳು ಇರ್ಲಿ ಇಲ್ದೇ ಇರ್ಲಿ, ಮನೆ ಗೇಟಿಂದ ಮನೆ ಬಾಗಿಲವರೆಗೆ ಒಂದು ಜಾರದ ದಾರಿ ಬೇಕಲ್ವಾ ? ಅದ್ಕೇ ಅಂತ್ಲೇ ರೆಡಿಯಾಗೋದು ಅಡಿಕೆ ಮರದ ದಬ್ಬೆಯ ದಾರಿ. ಎರಡೋ ಮೂರೋ ದಬ್ಬೆ ಸೀಳಿ ಪಕ್ಕ ಪಕ್ಕ ಹಾಸಿದ್ರೆ ಅದೇ ಒಂದು ದಾರಿ. ಎಂತ ಮಳೆ ಸುರುದ್ರೂ ಅದು ಸೇಫು. ಅಲ್ಲೂ ಪಾಚಿ ಕಟ್ಟುತ್ತೆ. ಆದ್ರೆ ಜಾರಿ ಬೀಳ್ಬೇಕು ಅಂದ್ರೆ ತೀರಾ ಅಜಾಗರುಕತೆ ಇರ್ಬೇಕು ಇಲ್ಲಾ ಅಂದ್ರೆ ಪೇಟೆ ಕಡೆಯಿಂದ ಬಂದವನಾಗಿರ್ಬೇಕು :-) ಇನ್ನು ಮೂರು ತಿಂಗಳು ಹೊಡ್ಯೋ ಮಳೆ ಸಿಟ್ಟಿಗೆ ಮನೆಯ ಗೋಡೆಗಳ ಗತಿ ಏನಾಗ್ಬೇಕು ? ಅದ್ಕೇ ಅಂತ್ಲೆ "ಇಸಿಲು ತಟ್ಟಿ" ಗಳು ರೆಡಿಯಾಗುತ್ತೆ. ಗೋಡೆಗಳಿಗೆ ಮಳೆ ನೇರವಾಗಿ ಬೇಳದಂತೆ ತೆಂಗಿನ ಗರಿಗಳಿಂದ ಮಾಡೋ ಮರೆಯೇ ಈ ಇಸಿಲು ತಟ್ಟಿ. ತೆಂಗಿನ ಗರಿಗಳನ್ನ ಗೋಡೆಗೆ ಒಂದರ ಪಕ್ಕ ಒಂದು ಒರಗಿಸಿ ಅವನ್ನೆಲ್ಲಾ ಒಂದು ಸಾಲಿನಂತೆ ಸೇರಿಸಿ ಕಟ್ಟಿದರೆ ಇಸಿಲು ತಟ್ಟಿ ರೆಡಿ. ಗೋಡೆಗಳ ಭದ್ರತೆಗೆ ಇದೇ ವಾಲ್ ಪುಟ್ಟಿ :-)
ಮಳೆಗಾಲದ ಸಮಯದಲ್ಲಿ ಊರಿಗೆ ಹೋದವ್ರಿಗೆ ವಾಪಾಸ್ ಬರೋಕೆ ಮನಸಾಗಲ್ಲ :-( ಪ್ರತಿ ದಿನವೂ ಪ್ರತಿ ಮಳೆಯಲ್ಲೂ ಬಾಲ್ಯದ ನೆನಪುಗಳ ಮೆರವಣಿಗೆ. ಮಳೆ ಅತಿಯಾಗಿ, ಸಾಗರದ ರಸ್ತೆಗಳಲ್ಲೆಲ್ಲಾ ಮೊಣಕಾಲುದ್ದದ ನೀರು ನಿಂತು ಎರಡು ದಿನ ಶಾಲೆಗೆ ರಜಾ ಕೊಟ್ಟಾಗೆಂತೂ ಕಾಲದಲ್ಲಿ ಹಿಂದೆ ಹೋಗೋ ಹಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತೋ ದೇವ್ರೆ ಅಂತ ಎಷ್ಟೊಂದು ಅಂದ್ಕೊಂಡಿದ್ದೆ. ಆ ಮಳೆಯ ಮಜಾ ಹೇಗಿತ್ತು ಅಂತ ಹೇಳಿದ್ರೂ ಬೆಂಗಳೂರಿಗರಿಗೆ ಅರ್ಥವಾಗೋದು ಕಷ್ಟವೇ. ಬೆಂಗಳೂರಲ್ಲಿ ಯಾವತ್ತೋ ಒಂದು ದಿನ ಮಳೆ ಬರುತ್ತೆ. ಎಲ್ಲಾ ಜಲಪ್ರಳಯವೆಬ್ಬಿಸಿ ಮತ್ತೆ ಸುಮ್ಮನಾಗುತ್ತೆ. ಆದ್ರೆ ಮಲೆನಾಡಲ್ಲಿ ಹಾಗಲ್ಲ. ಮೂರು ತಿಂಗಳೂ ಮಳೆಯ ಕಾಲವೇ. ಹಿಂದಿನ ವರ್ಷಗಳಲ್ಲಿ ಮಲೆನಾಡ ಮಳೆ ಕ್ಷೀಣಿಸುತ್ತಾ ಸಾಗಿತ್ತು. ಕಡಿದ ಕಾಡುಗಳ ಫಲವೋ, ಪ್ರಕೃತಿಯ ಮೇಲಿನ ದಬ್ಬಾಳಿಕೆಗಳಿಗೆ ಅವಳ ಪ್ರತಿರೋಧವೋ ತಿಳಿಯದು. ಆದರೆ ಈ ಬಾರಿ ಮತ್ಯಾಕೋ ಪ್ರಕೃತಿ ಸಂತೃಪ್ತಳಾದಂತಿದೆ.. ಮಲೆನಾಡಲ್ಲಿ ಮಳೆ ಬಿಟ್ಟೂಬಿಡದೇ ಸುರಿಯುತ್ತಿದೆ. ಈ ವರ್ಷವಷ್ಟೇ ಹೂಳೆತ್ತಿರೋ ಸಾಗರದ ಬಸವನಹೊಳೆ ಡ್ಯಾಂ ತುಂಬಿಸುವಂತೆ, ಗಣಪತಿ ಕೆರೆಯ ಹಳೆಯ ವೈಭವ ಮತ್ತೆ ಮರಳಿಸುವಂತೆ, ಶಿವಮೊಗ್ಗದ ತುಂಗಾ ಮಂಟಪ ಮುಳುಗಿಸುವಂತೆ ಮಳೆ ಹೊಡೆಯುತ್ತಿದೆ.
ಮಳೆಗಾಲದ ಮಳೆಯನ್ನ ಛತ್ರಿ ತಡೆಯೋದು ಸ್ವಲ್ಪ ಕಷ್ಟವೇ. ಮಳೆಗಾಲ ಅಂದ್ರೆ ಛತ್ರಿ ವ್ಯಾಪಾರ, ರಿಪೇರಿಯವರಿಗೆ ಸುಗ್ಗಿ. ಮಳೆಯ ರಭಸಕ್ಕೆ ಹಳೆಯ ಛತ್ರಿಯ ಕೊಕ್ಕೆಗಳೆಲ್ಲಾ ಮುರಿದು, ಛತ್ರಿಯ ಬಟ್ಟೆಯೇ ತೂತಾಗಿ ಛತ್ರಿಯ ಒಳಗೂ ನೀರು ಬರುವಂತಾದಾಗ ಹೊಸ ಛತ್ರಿಯ ಸಮಯ ಅಂತ ಲೆಕ್ಕ . ಬಸ್ಸಲ್ಲಿ, ಮದುವೆ ಮನೇಲಿ , ಪೇಟೇಲಿ.. ಹೀಗೆ ಛತ್ರಿ ಕಳೆದುಕೊಳ್ಳೋರಿಗೂ ಏನು ಕಮ್ಮಿಯಿಲ್ಲ. ಹಾಗಾಗಿ ವರ್ಷಕ್ಕೊಂದು ಛತ್ರಿ ತಗೊಳ್ಳೋದು ಇಲ್ಲಿನ ಸುಮಾರು ಜನರಿಗೆ ಹೊಸತೇನಲ್ಲ :-) ಇನ್ನು ರೈತರಿಗೆ , ಹುಡುಗರಿಗೆ, ವಾಹನ ಓಡಿಸೋರಿಗೆ ಈ ಛತ್ರಿ ಎಲ್ಲಿ ಬರ್ಬೇಕು. ಟೊಪ್ಪಿ ಹಾಕಿದರೂ ಮುಖಕ್ಕೆ ಹೊಡೆಯೋ ನೀರಿನ ಮಧ್ಯೆ ಗೆಳೆಯರ ಜೊತೆ ಮಾತಾಡ್ತಾ ಆರಾಮಾಗಿ ಸೈಕಲ್ ತುಳ್ಕೊಂಡು ಸಾಗೋ ಹುಡುಗ ಹುಡುಗಿಯರ ಗುಂಪು ನೋಡೋದೆ ಒಂಥರಾ ಚಂದ. ಯಾಕಾದ್ರೂ ಮಳೆ ಬರುತ್ತಪ್ಪಾ ಅಂತ ಬೇಜಾರೇನಿಲ್ಲ ಅವರ ಮುಖಗಳಲ್ಲಿ. ಮಳೆಯೇ ಒಂದು ಖುಷಿ. ಮಳೆ ಜಾಸ್ತಿ ಆದ್ರೆ ಶಾಲೆಗೆ, ಕಾಲೇಜಿಗೆ ರಜೆ ಸಿಗುತ್ತೆ ಅಂತ ಮತ್ತೊಂದು ಖುಷಿ. ಎಲ್ಲೋ ಮಳೆಯಲ್ಲಿ ಸಿಕ್ಕಾಕಿಕೊಂಡು ಒಬ್ರೋ ಇಬ್ರೋ ಟೀಚರು ಲೇಟಾಗಿ ಬರ್ಬೋದು , ಅಲ್ಲಿವರೆಗೆ ಶಾಲೇಲಿ ಮಜಾ ಅನ್ನೋ ಖುಷಿಯೂ ಇರ್ಬೋದು ! ಆನಂದಪುರದ ಕಡೆಯಿಂದ ಸಾಗರದ ಶಾಲೆ/ಕಾಲೇಜಿಗೆ ಬರೋರಿಗೆ ಮಳೆಗಾಲದಲ್ಲಿ ಅಲ್ಲಿನ ಕುಮುಧ್ವತಿ ನದಿ ಸೇತುವೆಯದೊಂದು ವರ/ಶಾಪ. ಆ ಸೇತುವೆಗಿಂತಲೂ ಮೇಲೆ ನೀರು ಹರಿದು ಬಸ್ಸುಗಳೇ ದಾಟದಿದ್ದಾಗ ಅವರಿಗೆಲ್ಲಾ ಶಾಲೆಗೆ ರಜಾ.. ಹುಡುಗರಿಗೆ ಮಳೆ ಹೆಚ್ಚಾದ್ರೆ ರಜಾ ಅಂತ ಖುಷಿ ಆದ್ರೆ ರೈತರಿಗೆಲ್ಲಾ ಗದ್ದೆ ಎಲ್ಲಿ ಕೊಚ್ಚಿ ಹೋಗುತ್ತೋ ಅಂತ ಭಯ. ಮಳೆ ವಾರಗಟ್ಲೇ ಆದ್ರೂ ನಿಲ್ಲದೇ ಹೊಡೆಯೋಕೆ ಶುರು ಮಾಡಿದ್ರೆ ಗದ್ದೆಲಿರೋ ನೀರೇ ಇಳಿಯೋಲ್ಲ. ಗದ್ದೆ ಪೂರ್ತಿ ಮುಳುಗಿ ಹೋದ್ರೆ ಭತ್ತ ಪೂರ್ತಿ ಕೊಳೆತುಹೋಗುತ್ತೆ ಅನ್ನೋ ಭಯ.. ಮಳೆ ಇರ್ಲಿ ಆದ್ರೆ, ಭತ್ತ ಕೊಳ್ಯೋ ಅಷ್ಟು ಬರ್ದೆ ಇರ್ಲಿ ಅಂತಾನೂ ಬೇಡ್ತಿರ್ತಾರೆ ಅವ್ರು.. ಇನ್ನು ಈ ರೈನ್ಕೋಟು , ಛತ್ರಿಗಳಿಗೂ ಅವರಿಗೂ ದೂರ ದೂರ. ದನ ಮೇಯಿಸೋರಿಂದ , ನೆಟ್ಟಿ ಮಾಡೊರವರೆಗೆ ಕಂಬಳಿ ಕೊಪ್ಪೆ ಫೇವರಿಟ್ಟು.. ಕಂಬಳಿ ಕೊಪ್ಪೆ ಏರಿಸಿ ಹೊರಟರೆಂದರೆ ಒಂದು ಹನಿ ನೀರು ಒಳಗೆ ಬರೋಲ್ಲ.. ಈಗೀಗ ಪ್ಲಾಸ್ಟಿಕ್ ಕೊಪ್ಪೆಗಳು ಬರ್ತಿದೆ ಆದ್ರೂ ಆ ಕಂಬಳಿಕೊಪ್ಪೆಗಳ ವೈಭವ ಇವಕ್ಕಿಲ್ಲ. ಪ್ಲಾಸ್ಟಿಕ್ ಹಗುರ ಆದ್ರಿಂದ ಹಾರಿ ಹಾರಿ ಹೋಗತ್ತೆ..ಅದಕ್ಕೇ ಅಂತ್ಲೇ ಹಗ್ಗ ಕಟ್ಟೋ ಪರಿಪಾಟ್ಲು. ಮಳೆಗಾಲದಲ್ಲಿ ಈ ಕೊಪ್ಪೆ ತೊಟ್ಟ ಹೆಂಗಸ್ರನ್ನ, ಹೊಲದಲ್ಲಿರೋ ರೈತ್ರನ್ನ ನೋಡೋದೇ ಒಂದು ಚಂದ.
ಮಳೆ ಆಯ್ತು. ಮಳೆಯ ಉಂಬ್ಳ ಆಯ್ತು. ಶಾಲೆಗೆ ರಜೆ ಆಯ್ತು. ಕಂಬ್ಳಿ ಕೊಪ್ಪೆ ಆಯ್ತು. ಮನೆಗೊಂದು ತಟ್ಟಿ , ಜಾರದಂತೆ ದಬ್ಬೆ ದಾರೀನೂ ಆಯ್ತು.. ಹೊರಗೆಲ್ಲಾ ನೋಡ್ತಾ ನೋಡ್ತಾ ಹಸಿವಾಯ್ತು ಅಂದ್ರಾ ?ಸರಿ, ಮನೆ ಒಳಗೆ ಹೋಗೋಣ ಬನ್ನಿ. ಪ್ರತೀ ಮಳೆಗಾಲದಂತೆಯೇ ಈ ಸಲವೂ ಮನೆ ಒಳಗೆ ನೆಲ ಒಸರುತ್ತಿದೆ. ನೀರು ಒಸರೋದು(ಜಿನುಗೋದು) ಗೊತ್ತು. ಇದೆಂತಾ ನೆಲ ಒಸರೋದು ಅಂದ್ರಾ ? ಮಳೆಗಾಲದಲ್ಲಿ ಸಿಮೆಂಟ್ ನೆಲಗಳಲ್ಲಿ ಈ ಒಸರೋದು ಸಾಮಾನ್ಯ. ಎಲ್ಲಾದ್ರೂ ಸ್ವಲ್ಪ ಬಾಗಿಲು ತೆಗೆದಿಟ್ರೆ ಸಾಕು. ನೆಲದ ಮೇಲೆಲ್ಲಾ ಮಂಜಿನ ಹನಿಗಳಂತೆ ತೇವ ತೇವ. ಸ್ವಲ್ಪ ತಗ್ಗಲ್ಲಿರೋ ಕೋಣೆಗಳಲ್ಲಿ ಈ ಒಸರೋದು ಅತಿಯಾಗಿ ಈಗಷ್ಟೇ ನೆಲದ ಮೇಲೆಲ್ಲಾ ಯಾರೋ ನೀರು ಚೆಲ್ಲಿದಾರೇನೋ ಅನ್ಸುತ್ತೆ. ಪೂರ್ತಿ ಒಣ ಬಟ್ತೇಲಿ ಒರೆಸಿದ್ರೂ ಸ್ವಲ್ಪ ಹೊತ್ತಲ್ಲಿ ಅದೇ ಗತಿ. ಸುತ್ತೆಲ್ಲಾ ಮಳೆ ಹೊಡಿತಿರುವಾಗ ಭೂಮಿಲಿರೋ ನೀರು ಹೀಗೆ ಮೇಲೆ ಬರುತ್ತೆ ಅಷ್ಟೆ. ಕಿಟಕಿ ತೆಗೆದಿಟ್ರಿ ಥಂಡಿ ಗಾಳಿ ಒಳನುಗ್ಗಿ ಇದು ಇನ್ನೂ ಜಾಸ್ತಿಯಾಗುತ್ತೆ ಅಂತ ಬಾಗ್ಲು ಹಾಕೇ ಇಡ್ತಾರೆ. ಹೆಂಗೇ ಇಟ್ರೂ ಮಳೆಗಾಲದಲ್ಲಿ ಇದು ಕಾಮನ್ನು. ಹೊರಗಡೆ ಇಂದ ಬಂದೋರಿಗೆ ಬಚ್ಚಲಲ್ಲಿ ಬಿಸಿ ಬಿಸಿ ನೀರು ಕಾಯ್ತಾ ಇರುತ್ತೆ.. ಬಿಸಿ ನೀರಲ್ಲಿ ಕೈ ಕಾಲು ತೊಳ್ಕೊಂಡ್ರೆ ಅಬ್ಬಾ.. ಹೊರಗಡೆ ಎಷ್ಟು ಮಳೇಲಿ ತೋದು ಬಂದಿದ್ರೂ ಅದೆಲ್ಲಾ ಮರ್ತೇ ಹೋಗುತ್ತೆ.. ಇನ್ನು ಬಚ್ಚಲ ಒಲೆಯ ಬಳಿ ಬಂದು ಕೂತು ಬಿಟ್ರೆ.. ಆಹಾ. ಅದೇ ಸುಖ. ಬೆಚ್ಚಚೆಚ್ಚಗೆ ಮೇಲೇಳೋಕೆ ಮನಸ್ಸಾಗೋಲ್ಲ. ಆ ಸುಖದ ಮುಂದೆ ಯಾವ ಸೋಪಾ, ಸುಪ್ಪತ್ತಿಗೆಗಳೂ ಇಲ್ಲ. ಮಲೆನಾಡಿನ ಇನ್ನೊಂದು ಸ್ಪೆಷಲ್ಲು ಹೊಡೆಸಲು. ಸಣ್ಣ ಚಪ್ಪರದ ತರ ಮಾಡಿ ಅದರ ಕೆಳಗೆ ಬೆಂಕಿ ಹಾಕಿ ಮೇಲೆ ಏನಾದ್ರೂ ಏಲಕ್ಕಿಯೋ, ಮಳೇಲಿ ಬಿದ್ದ ಮುಗ್ಗುಲು ಬಂದು ಹಾಳಾಗೋ ಅಡಿಕೆಯೆಯೋ, ಇನ್ನೇನೋ ಒಣಗೋಕೆ ಹಾಕಿರ್ತಾರೆ . ಮಳೇಲಿ ಒದ್ದೆಯಾದ ಕಂಬಳಿ, ಗೋಣಿಗಳ ಒಣಗಿಸೋದು ಇಲ್ಲೇ. ಇಡೀ ದಿನ ಕೆಂಡ ಇದ್ದೇ ಇರೋದ್ರಿಂದ ಅದು ಚಳಿ ಕಾಯ್ಸೋಕೆ ನಮ್ಮ ಫೇವರಿಟ್ ಪಾಯಿಂಟು.. ಬಿಸಿ ಬಿಸಿ ಚಹಾವೋ, ಕುರುಂ ಕುರುಂ ಹಲಸಿನ ಕಾಯಿ ಚಿಪ್ಸೋ ಇದ್ದು ಬಿಟ್ರೆ .. ಮುಗ್ದೇ ಹೋಯ್ತು.. ಸ್ವರ್ಗಕ್ಕೆ ಮೂರೇ ಗೇಣು... ಯಾರಾದ್ರೂ ನೆಂಟ್ರು ಬಂದ್ರೆ, ಅಪರೂಪಕ್ಕೆ ಮನೆಗೆ ಬಂದ ಅಳಿಯ, ಮಗ, ಮಾವ .. ಹೀಗೆ ಎಲ್ಲರಿಗೂ ಅದೇ ಹರಟೆ ಕಟ್ಟೆ. ಮಕ್ಕಳಿಗೆ ಕಡ್ಡಿ ಆಟದ ಜಾಗ. ಅಜ್ಜಿಯಂದ್ರಿದ್ರೆ ಮೊಮ್ಮಕ್ಕಳೊಟ್ಟಿಗೆ ಪಗಡೆಗೆ ಕೂರೋಕೆ ಅದು ಒಳ್ಳೆ ಪ್ಲೇಸು..
ಮಳೆಗಾಲದ ಸಮಯದಲ್ಲಿ ಬರೋ ವೈದಿಕ್ಕ(ಹಿರಿಯರ ಕಾರ್ಯ)ಗಳದ್ದೊಂದು ಸಂಭ್ರಮ. ಹೊರಗೆ ಉಧೋ ಎಂದು ಸುರಿಯುತ್ತಿರೋ ಮಳೆ. ಆ ಮಳೇಲಿ ಪೇಟೆ ಕಡೆಯಿಂದ ಬರೋ ನೆಂಟರು. ಮಳೆಗಾಲದ ಸಮಯದಲ್ಲೇ ಕೈಕೊಡೋ ಕರೆಂಟಿನಂತೆ ಈ ಬಸ್ಸುಗಳೂ ಕೈಕೊಡೋದೂ ಲೇಟಾಗೋದೂ ಇದ್ದಿದ್ದೇ. ಆ ನೆಂಟ್ರನ್ನ ಕರ್ಕೊಬರೋಕೆ ಅಂತಾನೆ ಬಸ್ಟಾಂಡಿನವರೆಗೆ ಹೋಗೋ ಹುಡುಗರ ಸಂಭ್ರಮ ಹಸಿರ ಸಿರಿಯ ಮಡಿಲಲ್ಲಿ ಒಂದೆರಡು ದಿನ ಇರುವ ಆ ನೆಂಟರ ಖುಷಿ ಎಲ್ಲಕ್ಕೂ ಸಾಥಿಯಾಗೋದು ಈ ಕಾರ್ಯಕ್ರಮಗಳು. ಮಳೆಗಾಲದಲ್ಲಿ ಚಿಗುರೋ ಕಳಲೆ(ಬಿದಿರು)ಪಲ್ಯ , ಕಹಿಯ ಕಂಚೀಕಾಯಿ ಉಪ್ಪಿನಕಾಯಿ ಇರ್ಲೇಬೇಕು ಇಲ್ಲಿ. ತೋಟಕ್ಕಿಳಿದು ಉಂಬುಳ ಕಚ್ಚಿದರೂ ಸಿಹಿಕಂಚಿ, ಪೇರಲೆ ಹುಡುಕುವುದೇನು, ಮಳೇಲಿ ನೆನಿಬೇಡ್ರೋ ಎಂದರೂ ಅಮ್ಮಂದಿರ ಕಣ್ಣು ತಪ್ಪಿಸಿ ಅಲ್ಲಲ್ಲಿ ಛತ್ರಿ ಹಿಡಿದು ಹೊರಡುವುದೇನು.. ಪಟ್ಟಣದಿಂದ ಅಜ್ಜಿ ಮನೆಗೆ ಬರೋ ಮೊಮ್ಮಕ್ಕಳದ್ದು ಸಂಭ್ರಮವೋ ಸಂಭ್ರಮ. ಅವರಿಗೆ ಹಳ್ಳಿ ಹುಡುಗರ ಸಾಥ್ ಸಿಕ್ಕರೆ ಇವರನ್ನ ಹಿಡಿಯೋರೇ ಇಲ್ಲ :-)
ಸಿಕ್ಕಾಪಟ್ಟೆ ಮಳೆ ಅಂತೆ ಕಣೋ ಸಾಗರದಲ್ಲಿ ಅಂದ್ರು ಕೆಲೋರು. ಆದ್ರೆ ಅಲ್ಲೇ ಹುಟ್ಟಿ ಬೆಳೆದ ನಮಗೆ ಇದು ಮಾಮಾಲು. ಒಂದು ವರ್ಷ ಕಮ್ಮಿ , ಮತ್ತೊಮ್ಮೆ ಜಾಸ್ತಿ ಇದ್ದಿದ್ದೇ ಅನ್ನೋದು ಹಿರಿಯರ ಅಂಬೋಣ. ಜಾಸ್ತಿ ಮಳೆ ಹೊಡಿತಾ ಇದೆ. ಅಡಿಕೆ ಎಲ್ಲಾ ಕೊಳೆ ಬಂದು ಹಾಳಾಗಿ ಹೋಗತ್ತೇನೋ ಅನ್ನೋ ಚಿಂತೆ ತೋಟದ ರಾಂಭಟ್ರಿಗೆ. ಬಿಡು ಇಲ್ದೆ ಮಳೆ ಹೊಡದ್ರೆ ಕೊಳೆ ಬರೂದಿಲ್ಲ. ಬಿಟ್ ಬಿಟ್ ಹೊಡದ್ರೆ ಮಾತ್ರ ಕೊಳೆ ಬರೂದು ತಗಳಿ ಭಟ್ರೆ ಅನ್ನೋ ಶೇರೆಗಾರ. ಮಳೆ ಸೂಪರ್ರಾಗಿದೆ ಮಗ. ಟ್ರೆಕ್ಕಿಂಗೆಗೆ ಸಖತ್ ಟೈಮು ಅಂತ ಕೊಡಚಾದ್ರಿ, ಉಂಚಳ್ಳಿ, ಯಾಣ, ಮಾಗೋಡು ಫಾಲ್ಸು, ಜೋಗಗಳ ಕಡೆ ಹೊರಟಿರೋ ಟೆಕ್ಕಿಗಳು.. ಹೀಗೆ ಹಲತರದ ಕಲರವ ಪೇಟೆಯಲ್ಲಿ. ಸುಮಾರು ದಿನದಿಂದ ಹೊಡಿತೀರೋ ಮಳೆ ನಿತ್ತಿದೆ. ಸದ್ಯಕ್ಕಂತೂ.. ಮುಚ್ಚಿಹೋಗಿರೋ ಇಂಗುಗುಂಡಿ,ಇಂಗುಕೊಳ, ಬದುಗಳ್ನ ಸರಿ ಮಾಡ್ಬೇಕು, ಅವಕ್ಕೆ ಕಟ್ಟಿಹೋಗಿರೋ ದಾರೀನ ಸವರಿ, ಸರಿ ಮಾಡ್ಬೇಕು. ಎಷ್ಟಕ್ಕೂ ಮಳೆಕೊಯ್ಲೇ ನಾಳಿನ ಭವಿಷ್ಯ ಅಲ್ಲವೇ ? ... ಮತ್ತೆ ಮಳೆ ಯಾವಾಗ ಶುರು ಆಗುತ್ತೋ ಗೊತ್ತಿಲ್ಲ. ಹಳುವು (ಮಳೆಯ ಬಿಡುವು ) ಕೊಟ್ಟಾಗ್ಲೇ ಹೊರಗಿನ ಕೆಲ್ಸ ಮುಗಿಸ್ಬೇಕು. ಹಂಗಾಗಿ ಭರ್ಜರಿ ಬಿಸಿ(!) ನಾನು.. ಇನ್ನೊಮ್ಮೆ ಸಿಗೋಣವಾ ? :-)
ಇಲ್ಲಿ ಮಳೇನೆ ಇಲ್ಲ ಪ್ರಶಸ್ತಿ.. ನಮ್ಮೂರಿನ ಮಳೆ ಬಹಳಾನೇ ನೆನಪಾಗಿ ಕಾಡತ್ತೆ.. ಮಲೆನಾಡು ಮಳೆನಾಡು ಕೂಡಾ.. ಮಳೆಯ ಎಷ್ಟೆಲ್ಲಾ ಸಿಹಿ ನೆನಪುಗಳು ಪ್ರತೀ ಬೆವರ ಹನಿಗೂ ಕಾಡತ್ತೆ.. ನಮ್ಮೂರಿನ ಮಳೆಯ ಬಣ್ಣನೆಯನ್ನ ಅದರ ಲೀಲೆಗಳನ್ನ ಸವಿಸ್ತಾರವಾಗಿ ಬಿಡಿಸಿಟ್ಟಿದ್ದೀರ ಮಳೆಯ ವಿಚಾರವನ್ನ ಓದೋಕೆ ಇಷ್ಟು ಖುಷಿ ಅಂದ್ರೆ ಇನ್ನು ಖುದ್ದು ನೋಡಿ ಅನುಭವಿಸೋಕೆ ಎಷ್ಟು ಖುಷಿ ಅನ್ನಿಸ್ಬೇಡ.. ನಿಜವಾಗಲು ಮಲೆನಾಡು ಸ್ವರ್ಗವೇ.. :)
ReplyDeleteಎಂದಿನಂತೆಯ ಪ್ರೋತ್ಸಾಹಕ್ಕೆ ಧನ್ಯವಾದಗಳು ಸತೀಶ್.. ಹಿಂದಿನ ವಾರ ಹೋಗಿ ಬಂದಿದ್ದೆ ಊರಿಗೆ :-)
Deleteಹೌದು ಕಣ್ರಿ.. ಅಲ್ಲಿಯ ಮಳೆ ಇಲ್ಲಿಲ್ಲ :-(
ಮಳೆಯನ್ನು ಎಷ್ಟು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ ದೋಸ್ತ್.
ReplyDeleteಚಿಗುರೋ ಕಳಲೆ(ಬಿದಿರು)ಪಲ್ಯ , ಕಹಿಯ ಕಂಚೀಕಾಯಿ ಉಪ್ಪಿನಕಾಯಿ ವಾರೇವ್ಹಾ...
http://badari-poems.blogspot.in/
ಯಾಕೋ ಕಣ್ಣು ಕಿಟಕಿಯ ಕಡೆ ಹೊರಳಿತು ಅರೆ ಮಳೆ ಇಲ್ಲ.. ಒಹ್ ನನಗೆ ಭ್ರಮೆ.. ಎನ್ನಿಸಿತು. ಲೇಖನದ ಹರಿವು ಮಲೆನಾಡಿನ ತಾಣದಲ್ಲಿ ಕೂತು ನೆನೆಯುತ್ತಾ ಇದ್ದೇನೆ ಎನ್ನುವ ಅನುಭವ ಕೊಟ್ಟಿತು. ಒಂದು ಮಳೆ ದಿನವನ್ನು ನಿಮ್ಮ ವರ್ಣಿಸಿರುವಂತೆ ಕಳೆಯಬೇಕು ಎನ್ನುವ ಬಯಕೆ ನನ್ನದು. ಸುಂದರ ಲೇಖನ ಇಷ್ಟವಾಯಿತು
ReplyDelete