ಮಳೆಯೆಂದ್ರೆ ಘೋರ ಮಳೆ. ಮಾರಿಕೊಪ್ಪೆಗೆ ತನ್ನ ಮೋರೆ ತೋರಿಸಲೂ ಬೇಸರಿಸಿದ ರವಿ ಮನೆಯೊಳಗೆ ಬೆಚ್ಚಗೆ ಮಲಗಿದ್ದಾನಾ ಎಂಬ ಭ್ರಮೆ ಮೂಡಿಸುವಂತಹ ವಾತಾವರಣ. ಊರ ಮುಂದೊಂದು ಮಾರಿಗುಡಿಯಿಂದ ಹಳ್ಳಿಗೆ ಮಾರಿಕೊಪ್ಪ ಎಂಬ ಹೆಸರು ಬಂತೇ ಅಥವಾ ಮುಳುಗಡೆಯ ವೇಳೆ ಆ ಊರ ಜನರೆಲ್ಲಾ ತಮ್ಮ ಪಿರ್ತಾರ್ಜಿತ ಜಮೀನನ್ನು ಮಾರಿ ಇಲ್ಲಿಗೆ ಗುಳೆ ಬಂದಿದ್ದರಿಂದ ಇಂತಾ ಹೆಸರೇ ಎಂದು ಅಲ್ಲಿನ ಈಗಿನ ತಲೆಮಾರಿನವರಿಗೆ ತಿಳಿದಿಲ್ಲ. ಅದೇ ಮಾರಿಗುಡಿಯ ಮುಂದೆ ಒಂದೈದು ಅಡಿ ದೂರದಲ್ಲೊಬ್ಬ ಬೋರಲು ಬಿದ್ದಿದ್ದಾನೆ. ಮಾರಿಗುಡಿಯ ಎದುರಿಗೆ ಹುಗಿದಿದ್ದ ಕಲ್ಲು ಕಿತ್ತೆದ್ದು ಮಾರು ದೂರ ಹೋಗಿ ಬಿದ್ದಿದೆ. ಮತ್ತೊಂದು ಮೂಲೆಯಲ್ಲಿ ಬಿದ್ದಿರೋ ಕಪ್ಪು ಬೈಕು. ಆತ ಎಷ್ಟು ಹೊತ್ತಿಂದ ಬಿದ್ದಿದ್ದಾನೆ ಎಂಬುದು ಆತನಿಗೂ, ಆತನ ಜರ್ಕೀನು, ಪ್ಯಾಂಟುಗಳ ಒಳಗೆ ಮಲಗಿರೋ ದೇಹಕ್ಕೂ, ಆತನ ಇಂದಿನ ಸ್ಥಿತಿಗೆ ಕಾರಣವಾದ ನಿನ್ನೆಗೂ ತಿಳಿದಿರಲಿಕ್ಕಿಲ್ಲ. ಉತ್ತರ ಹೇಳಬಹುದಾದ ಮಳೆರಾಯ ಯಾವುದೋ ನಿರ್ಧಾರಕ್ಕೆ ಬಂದವನಂತೆ ಅಲ್ಲಿ ಸುರಿಯುತ್ತಿದ್ದಾನೆ. ಕುಡಿದವನನ್ನು ಎಬ್ಬಿಸಲು ಆತನ ಮೈಮೇಲೆ ಮನೆಯವರು ಸುರಿಯೋ ಕೊಡದ ನೀರಿನಂತೆ ಇಲ್ಲಿ ಕುಂಭದ್ರೋಣ ಮಳೆಯ ರೇಚನವಾಗುತ್ತಿದೆ.
ಹುಡುಗನಿಗೆ ದೇಶ ಸುತ್ತೋ ಹುಚ್ಚು. ಬೈಕ್ ಹತ್ತಿ ಹೊರಟನೆಂದರೆ ದೂರ, ಕಾಲಗಳ ಪರಿವೆಯಿಲ್ಲ. ಮನೆಯಲ್ಲೂ ಅನುಕೂಲವಿದ್ದರಿಂದ ದುಡ್ಡಿನ ಪರಿವೆ ಮೊದಲೇ ಇಲ್ಲ. ವಾರಾಂತ್ಯ ಬಂತೆಂದರೆ ಬೆಳಗ್ಗೆಯೇ ಎದ್ದು ಬೈಕಲ್ಲಿ ಎಲ್ಲೆಲ್ಲಿಗೋ ಹೊರಟುಬಿಡುತ್ತಿದ್ದ. ಬೆಚ್ಚನೆ ಹೊದ್ದು ಮಲಗಿರೋ ಸೂರ್ಯನ ಹೊದಿಕೆಯನ್ನು ಆತನ ತಾಯಿ ನಿಧಾನಕ್ಕೆ ಎತ್ತುತ್ತಾ ಸಾಗಿದಂತೆ ಅರುಣೋದಯದಿಂದ ಸೂರ್ಯೋದಯವಾಗೋ ಸಮಯ. ಕತ್ತಲ ಹೊದಿಕೆಯ ಮೂಲೆಯಿಂದ ಇಣುಕೋ ಸೂರ್ಯ ಸೋಮಾರಿಯಾಗಿ ಕಣ್ಣು ಬಿಡಲೋ ಬೇಡವೋ ಎಂದು ಮೈಮುರಿಯುತ್ತಾ ಏಳುತ್ತಿದ್ದರೆ ನಿಧಾನವಾಗಿ ಆತನ ಕಿರಣಗಳು ಹೊದಿಕೆಯನ್ನು ಈಚೆ ಸರಿಸುತ್ತಾ ಹೊರಬರುತ್ತವೆ. ಆತನಿಗೆ ಶುಭೋದಯ ಹೇಳೋಕೆ ಅಂತಲೇ ಹಾರಿಹೋಗುತ್ತಿರುವ ಹಕ್ಕಿಗಳು, ಆತನ ದರ್ಶನಕ್ಕೆ ಅಂತ ಕಾಯುತ್ತಿರೋ ಮರಗಿಡಗಿಳನ್ನು ನೋಡಿ ನಕ್ಕ ರಾತ್ರೆ ಬಿದ್ದ ಮಂಜ ಹನಿಗಳು ಭೂಮಿಯನ್ನೂ ಸೇರದೆ ಮರದ ಎಲೆಯ ತುದಿಯ ಮೇಲೆ ನಿಂತು ಹಣುಕುತ್ತಾ ಚೆಲುವನ ಮುಖದರ್ಶನವನ್ನು ಎದುರು ನೋಡುತ್ತಿವೆ.
ಸಹಸ್ರ ತಾರೆಗಳ ನಿಶೆಯ ಒಡೆಯ ಚಂದ್ರ ತನ್ನ ರಾತ್ರಿ ಪಾಳಿಯನ್ನು ಮುಗಿಸಿ ಮಲಗಲು ಹವಣಿಸುತ್ತಾ ಪಾಳಿ ಹಸ್ತಾಂತರಕ್ಕೆ ಸೂರ್ಯನ ಏಳುವಿಕೆಯನ್ನೇ ಕಾಯುತ್ತಿದ್ದಾನೆ. ಪ್ರತಿ ನಿದ್ದೆಯ ನಂತರ ಎದ್ದಾಗಲೂ ಅದೇನೋ ಖುಷಿ, ಉತ್ಸಾಹ. ತನ್ನ ಅದಮ್ಯ ಚೈತನ್ಯವನ್ನು ಜಗಕ್ಕೆಲ್ಲಾ ಹಂಚುವವನಂತೆ ಬಾಲಭಾಸ್ಕರ ಬೆಟ್ಟಗಳ ನಡುವಿಂದ ಎದ್ದು ಬರುವುದನ್ನು ನೋಡುವುದೇ ಒಂದು ಚೆಂದ. ಮೈಕೊರೆಯುವ ಚಳಿಯಿದ್ದರೂ ಆ ಸೂರ್ಯನ ದರ್ಶನವಾಗುತ್ತಿದ್ದಂತೆ, ಒಂದೆರಡು ಕಿರಣಗಳು ಮೈ ಸೋಕುತ್ತಿದ್ದಂತೇ ಅದೇನೋ ಖುಷಿ. ಚಳಿಯೆಲ್ಲಾ ದಿಗಿಲೆದ್ದು ಮಾರು ದೂರ ಓಡಿದ ರೀತಿ..
ಪೇಟೆಯ ಅದೇ ಕಲುಷಿತ ಗಾಳಿ, ಉರಿಬಿಸಿಲ ಸೂರ್ಯನನ್ನೇ ನೋಡಿ ಬೇಸತ್ತಿದ್ದ ಈತನಿಗೆ ಹೀಗೆ ಪರಿಸರದ ಮಡಿಲಲ್ಲಿ ಬಾಲ ಸೂರ್ಯನನ್ನು ನೋಡೋದಂದರೆ ಭಾರೀ ಖುಷಿ. ಸೂರ್ಯೋದಯವನ್ನು ನೋಡಲೆಂದೇ ಎಷ್ಟೋ ದೂರ ಬರುತ್ತಿದ್ದ ಈತ ಸೂರ್ಯೋದಯ ನೋಡು ನೋಡುತ್ತಾ ತನ್ನ ಬಾಲ್ಯದ ನೆನಪುಗಳಲ್ಲಿ, ಕಲ್ಪನಾ ಲೋಕದಲ್ಲಿ ಕಳೆದುಹೋಗುತ್ತಿದ್ದ.
*****
ನಾಳೆಯೇ ಸಾವು ಎಂದು ತಿಳಿದು ಇಂದಿನ ಜೀವನವನ್ನು ಎಂಜಾಯ್ ಮಾಡಬೇಕು ಅಂತ ಒಂದು ಹುಡುಗರ ಗ್ಯಾಂಗಿನ ಪಾಲಿಸಿ. ಗುಂಡು ಒಳಗೆ ಸೇರಿದರೆ ಅವರ ಅವಾಂತರಗಳಿಗೆ ಅಂತ್ಯವಿಲ್ಲ. ಬಿಸಿ ರಕ್ತದವರಿಗೆ ಯಾರದಾದರೂ ಮಾತು ತಿಳಿಯುತ್ತೇ ? ಗುಂಡೇರಿಸಿ ಎಲ್ಲೆಲ್ಲೋ ಯದ್ವಾ ತದ್ವಾ ಬೈಕೋಡಿಸಿ ಗುದ್ದಿಕೊಂಡಾಗಲೇ ಅವರ ಮತ್ತು ಇಳಿಯುತ್ತಿದ್ದುದು. ಮನೆಯಲ್ಲಿ ದುಡ್ಡಿಗೇನು ಕೊರತೆಯಿಲ್ಲ. ಮಕ್ಕಳು ತಮ್ಮ ತಲೆ ತಿನ್ನದಿದ್ದರೆ ಸಾಕೆಂದು ಕೇಳಿದಷ್ಟು ದುಡ್ಡು ಕೊಟ್ಟೇ ದೊಡ್ಡ ಮಾಡಿದ ತಂದೆ ತಾಯಿ.ಈಗಲೋ ಸ್ವತಃ ದುಡಿಯುತ್ತಿರೋ ಗರ್ವ ಬೇರೆ. ಮಧ್ಯರಾತ್ರಿ ಹೇಗೋ ಮನೆ ಸೇರೋವರೆಗೂ ಒಳಸೇರಿದ ಪರಮಾತ್ಮನಾಟ ಮುಂದುವರೆಯುತ್ತಿತ್ತು . ಈ ನಶಾಚರರಿಗೆ ನಿಶಾಚರರಾಗಿ ಬೈಕ್ ಓಡಿಸೋದಂದು ಶೋಕಿ. ಮಧ್ಯರಾತ್ರಿಗೆ ಎದ್ದು ಬೈಕ್ ತಗೊಂಡು ಹೊರಟುಬಿಡೋರು. ಆ ಮಧ್ಯರಾತ್ರಿಯ ಚಳಿಯಲ್ಲೂ ಜರ್ಕೀನ್ , ಕ್ಯಾಪು, ಗ್ಲೌಸ್ ತೊಟ್ಟು ಬೈಕೇರಿ ಎಲ್ಲಾದರೂ ಹೊರಟುಬಿಡೋರು. ಮುಖಕ್ಕೆ ಆ ಐಸಿನಂತಹ ತಣ್ಣನೆಯ ಗಾಳಿ ರಾಚುತ್ತಿದ್ದರೆ ಅದರಲ್ಲಿ ಗಾಡಿ ಓಡಿಸೋದೇ ಒಂದು ಥ್ರಿಲ್ಲು ಅವರಿಗೆ. ಕೈಯೆಲ್ಲಾ ಮರಗಟ್ಟಿತೆಂದೆನಿಸಿದಾಗ ಗಾಡಿ ಓಡಿಸುವ ಸರದಿ ಹಿಂದೆ ಕೂತಿದ್ದವನಿಗೆ ಬರುತ್ತಿತ್ತು.. ಅಲ್ಲಿಯವರೆಗೂ ಅವನು ಆರಾಮು. ಹೀಗೇ ಗಾಡಿ ಓಡಿಸಿ ಯಾವುದೇ ಬೆಟ್ಟಕ್ಕೆ ಸೂರ್ಯೋದಯದ ಸಮಯಕ್ಕೆ ಬಂದಿದ್ದರು ಅವರು. ಅವರು ಸೂರ್ಯನ ಮುಖ ನೋಡುತ್ತಿದ್ದುದ್ದೇ ಇಂತಹ ವಾರಾಂತ್ಯದ ಟ್ರಿಪ್ಪುಗಳಲ್ಲಿ. ಯಾಕೋ ಆ ಬೆಟ್ಟದ ಸೂರ್ಯ ಇಂದು ಇವರನ್ನೇ ನೋಡಿ ನಕ್ಕಂತೆ ಕಾಣುತ್ತಿತ್ತು.. ಸೂರ್ಯೋದಯವಾಗುತ್ತಿದ್ದಂತೆ ಇವರೆಲ್ಲರಿಗೂ ಅದೆಷ್ಟೋ ದಿನಗಳಿಂದ ಕಾದು ಕುಳಿತಂತಿದ್ದ ನಿದ್ರೆ ಆವರಿಸಿತು. ಅಲ್ಲೇ ಬಯಲಲ್ಲಿ ಕೂತುಕೂತಲ್ಲೇ ಎಲ್ಲಾ ನಿದ್ರೆ ಹೋದರು.
******
ಹುಡುಗನ ನೆನಪುಗಳು ಕಾಲ ಚಕ್ರದಲ್ಲಿ ಹಿಂದೆಂದೆ ಸುತ್ತಾತ್ತಾ ಸಾಗುತ್ತಿದ್ದಾಗ ಒಂದು ಟೈರಾಟದ ಚಿತ್ರ ಕಣ್ಮುಂದೆ ಬಂದು ಅಲ್ಲೇ ನಿಂತು ಹೋಯಿತು. ಒಂದು ಹಳ್ಳಿ. ಹಳ್ಳಿಯಲ್ಲಿ ಟೈರಾಟವಾಡುತ್ತಿರೋ ಹುಡುಗರು. ಸೈಕಲ್ ಟೈರನ್ನೇ ತಮ್ಮ ಬಸ್ಸು, ಕಾರು, ಬೈಕು ಮಾಡಿಕೊಂಡು ಉರುಳಿಸುತ್ತಾ ಇವರ ಆಟ. ಹೀಗೇ ಪೇಂ ಪೇಂ ಅಂತ ಶಬ್ದ ಮಾಡುತ್ತಾ ಆಟ ಆಡ್ತಾ ಇದ್ದಾಗ ದೂರದಿಂದ ಚೀಲ ಹೊತ್ತು ಯಾರೋ ಬರ್ತಾ ಇದ್ದಿದ್ದು ಕಾಣಿಸ್ತು. ನೋಡಿದರೆ ಯಾರೋ ಪೂಜಾರಿಗಳ ತರ ಪಕ್ಕದಲ್ಲಿ ಒಬ್ಬ ಹುಡುಗಿ. ಯಾರಿರಬಹುದು ಅನ್ನೋ ಕುತೂಹಲ ಎಲ್ಲರಿಗೂ. ದೊಡ್ಡವರನ್ನು ಮಾತನಾಡಿಸೋ ಧೈರ್ಯ ಯಾರಿಗೂ ಇಲ್ಲದಿದ್ದರೂ ಯಾರಿರಬಹುದು, ಯಾರ ಮನೆಗೆ ಬಂದಿರಬಹುದೆಂಬ ಕುತೂಹಲ ಎಲ್ಲರಿಗೂ. ಹುಡುಗರ ಓರೆನೋಟದಿಂದ ಆ ಪೂಜಾರಿ ಊರ ಸಾಹುಕಾರರ ಮನೆ ಕಡೆಗೆ ಹೋಗಿದ್ದು ಗೊತ್ತಾಯ್ತು. ಸಾಹುಕಾರರ ಮಗ ಆಟ ಮುಗಿಸಿ ಮನೆಗೆ ಬಂದು ನೋಡುತ್ತಾನೆ. ಮನೆಯಲ್ಲಿ ಹೊಸಬರ ಸುಳಿವಿಲ್ಲ. ನಿಧಾನಕ್ಕೆ ಅಮ್ಮನ ಹತ್ತಿರ ಕೇಳಿದ."ಯಾರೋ ಹೊಸಬ್ರು ನಮ್ಮನೆ ಕಡೆ ಬಂದ ಹಾಗಿತ್ತು. ಯಾರಮ್ಮ" ಅಂತ ಸಣ್ಣಕ್ಕೆ. ಮಗನ ಕುತೂಹಲಕ್ಕೆ ನಕ್ಕ ಅವನಮ್ಮ ಅವರು ಊರ ದೇವಸ್ಥಾನಕ್ಕೆ ಹೊಸದಾಗಿ ಬಂದಿರೋ ಪೂಜಾರಿಗಳು ಕಣಪ್ಪ ಆಂದ್ರು. ಆ ಹುಡುಗಿ ಅಂದ ಹಾಗೇ ಸಣ್ಣಕ್ಕೆ.ಓ ಅವಳ್ನೂ ನೋಡಿಬಿಟ್ಟೆಯಾ ? ಕಳ್ಳ, ಅವಳು ಅಂಬಿಕಾ ಅಂತ ಕಣೋ. ಪೂಜಾರಿಗಳ ಮಗಳು ಅಂದರು ಅಮ್ಮ. ಈ ಹೊಸ ಪೇಟೆ ಹುಡುಗಿ ಅಂಬಿಕಾಳನ್ನ ಮಾತನಾಡಿಸಬೇಕು. ತಮ್ಮೊಟ್ಟಿಗೆ ಆಟಕ್ಕೆ ಸೇರಿಸಿಕೊಳ್ಳಬೇಕು ಅನ್ನೋ ಆಸೆಯಲ್ಲೇ ರಾತ್ರಿಯಾಯಿತು. ರಾತ್ರಿ ಊಟ ಮಾಡಿ ಮಲಗಿದವನಿಗೆ ಈತ ಅಂಬಿಕಾಳನ್ನು ಟೈರಾಟಕ್ಕೆ ಕರೆದಂತೆ , ಅವಳು ಬರದೇ ಹುಡುಗಿಯರ ಜೊತೆಗೆ ಕುಂಟಾಪಿಲ್ಲೆ ಆಡೋಕೆ ಹೋದಂತೆ , ಆತ ಈತನ ಶಾಲೆಗೇ ಸೇರಿ ಈತನಿಗಿಂತ ಹೆಚ್ಚು ಅಂಕ ತೆಗೆದು ಈತನ ಗೆಳೆಯರೆಲ್ಲಾ ಈತನನ್ನು ಗೇಲಿ ಮಾಡಿದಂತೆ , . ಹೀಗೆ ತರ ತರದ ಕನಸುಗಳು ಬಿದ್ದು ಅಂಬಿಕಾಳ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಹುಟ್ಟಿತು ! ಅವಳನ್ನು ಮಾತನಾಡಿಸಬೇಕು ಎಂದುಕೊಂಡರೂ ಊರ ಮಾರಿಯ ಜಾತ್ರೆಯ ಸಮಯವಾದ್ದರಿಂದ ಸಮಯವೇ ಆಗಲಿಲ್ಲ. ಮೂರು ದಿನ ಆ ಪೂಜೆ ಈ ಪೂಜೆ ಅಂತ ಪೂಜಾರಿಗಳು ಸಿಕ್ಕಾಪಟ್ಟೆ ಕೆಲಸದಲ್ಲಿದ್ದರು. ಅವರಿಗೆ ಅದು ಇದು ಸಹಕರಿಸೋಕೆ ಅಂತ ಅವರ ಜೊತೆಗೇ ಪಾದರಸದಂತೆ ಓಡಾಡುತ್ತಿದ್ದ ಜರಿ ಲಂಗ ತೊಟ್ಟು ಲಕ್ಷಣವಾಗೂ ಕಾಣುತ್ತಿದ್ದ ಅಂಬಿಕಾ ಊರ ಹೆಂಗಸರಿಗೆ ಮನೆಮಗಳಂತೆ ಆಚ್ಚುಮೆಚ್ಚಿನವಳಾಗಿಬಿಟ್ಟಳು. ತನ್ನ ಅಮ್ಮನ ಕಣ್ಣಲ್ಲಿ ತನ್ನ ಬದಲು ಅಂಬಿಕಾಳ ಕಡೆಗಿದ್ದ ಮೆಚ್ಚುಗೆಯ ನೋಟ ಕಂಡು ಈತನಿಗೆಂತೂ ಸಹಿಸಲೇ ಆಗುತ್ತಿರಲಿಲ್ಲ.ಮೂರು ದಿನ ಕಳೆಯಲಿ ಎಂದೇ ಕಾಯುತ್ತಿದ್ದ.ಅಂತೂ ವಿಜ್ರಂಭಣೆಯ ಜಾತ್ರೆ ಮುಗಿಯಿತು. ಜಾತ್ರೆಯ ಮಾರನೇ ದಿನ ಎಂದಿನಂತೆ ದೇಗುಲದ ಬಳಿ ಟೈರು ಓಡಿಸುತ್ತಾ ಹೋದ. ಬೆಳಗ್ಗೆ ಪೂಜೆಗೆ ಅಂತ ಅವಳು ಬರಬಹುದು. ಅವಳನ್ನು ಮಾತನಾಡಿಸಬಹುದು ಎಂಬ ಒಂದಾಸೆ ಮನದಲ್ಲಿ. ಆದರೂ ಏನೋ ಭಯ ಮನಸಲ್ಲಿ ಇಂದು. ನೇರವಾಗಿ ದೇಗುಲಕ್ಕೆ ಹೋಗದೇ ಅಲ್ಲೇ ಮರೆಗೆ ಹೋಗಿ ಒಂದೆರಡು ನಿಮಿಷ ನೋಡಿದ. ಪೂಜಾರಿಗಳ ಮಂತ್ರ, ಘಂಟೆಗಳ ಸದ್ದಿಲ್ಲ. ದೇಗುಲದ ಹತ್ತಿರ ಬಂದು ನೋಡಿದರೆ ದೇಗುಲದ ಬಾಗಿಲು ಹಾರೊಡೆದಿದೆ! ಒಳಗೆ ಹೋಗಿ ನೋಡಿದ. ಗರ್ಭಗೃಹವನ್ನು ನೋಡಿದವನಿಗೊಮ್ಮೆ ಗಾಬರಿಯಾಯ್ತು.. ಅಲ್ಲಿರಬೇಕಾದ ಮೂರ್ತಿ ? !! ತಕ್ಷಣ ಬೆಚ್ಚಿಬಿದ್ದು ಮನೆಗೆ ಓಡಿದ.ಮಧ್ಯಾಹ್ನದ ವೇಳೆಗೆ ಊರ ತುಂಬೆಲ್ಲಾ ಗುಸುಗುಸು. ಪೂಜಾರಿಗಳು ವಿಗ್ರಹ ಕದ್ದು ಪರಾರಿಯಾದರೆಂದೂ, ಆತನ ಚುರುಕಾಗಿ ಓಡಾಡುತ್ತಿದ್ದ ಮಗಳ ಕಣ್ಣುಗಳು ತಮ್ಮ ಹೆಂಗಸರ ಒಡವೆಗಳ ಮೇಲೇ ಇದ್ದವೆಂದೂ, ಎಷ್ಟು ಒಡವೆಗಳು ಕಾಣೆಯಾಗಿವೆಯೋ ನಿಧಾನಕ್ಕೆ ತಿಳಿಯುತ್ತವೆ ಎಂದೂ.. ನೂರೆಂಟು ಗುಸುಗುಸು. ಅಂಬಿಕಾಳ ಕಂಡರೆ ಈತನಿಗೆ ಅಷ್ಟಕ್ಕಷ್ಟೇ ಆದರೂ ಯಾಕೋ ಆಕೆ ತಾಯಿಯ ವಿಗ್ರಹ ಕದಿಯುವಷ್ಟು ಕಳ್ಳಿಯಾಗಿರಲಾರಳು ಎಂದು ಈತನ ಒಳಮನಸ್ಸು ತುಡಿಯುತ್ತಿತ್ತು.ಅಪ್ಪನ ಬಳಿ ಹೇಳಿದರೆ ಅಪ್ಪ ಚೆನ್ನಾಗಿ ಬೈದ ಈತನಿಗೆ. ಮಾರನೇ ದಿನವೇ ಈತನನ್ನು ದೂರದ ಪೇಟೆಗೆ ಓದಲಿಕ್ಕೆ ಕಳಿಸೋ ಮಾತಾಡಿದ. ಅಮ್ಮ-ಮಗ ಎಷ್ಟು ಅತ್ತು ಕರೆದರೂ ಕರಗದ ಸಾಹುಕಾರನ ಹೃದಯ ನೆನಪಾಗಿ ಬೇಸರವಾಗಿ ಅಳುತ್ತಿದ್ದ ತನ್ನ ತಾಯಿಯನ್ನು ನೆನೆದು ಈತನಿಗೂ ಅಳುಬಂತು.. ಕಣ್ಣೀರು ಅಳುಗಳ ಮರೆಸೋ ಏಕೈಕ ಔಷಧಿಯಾದ ಕಾಲನಂತೆ, ಸಮಯಕ್ಕೆ ಸರಿಯಾಗಿ ಬಂದ ಸಂಜೆಯ ಕೊನೆಯ ಮಾರುತಿ ಬಸ್ಸಿಗೆ ಈತ ಪೇಟೆಯ ಕಡೆ ಮುಖ ಮಾಡಿದ.
ಎಲ್ಲೋ ಕಾಡುಕೋಳಿಯೊಂದು ಕೂಗಿದಂತಾಗಿ ಕಲ್ಪನಾ ಲಹರಿಯಲ್ಲಿ ಮುಳುಗಿದ್ದ ಈತನಿಗೆ ಎಚ್ಚರವಾಯಿತು. ನೋಡಿದರೆ ಬೆಳಗಾಗಿದೆ. ತಿಂಡಿಯಿಲ್ಲದೇ ಹೊಟ್ಟೆ ಹಸಿಯುತ್ತಿದೆ. ಎಷ್ಟು ಹೊತ್ತು ಮಲಗಿಬಿಟ್ಟೆನಲ್ಲಾ ಎಂದು ನಗುತ್ತಾ ತಾನು ತಂದ ನೀರಲ್ಲೇ ಮುಖ ತೊಳೆದು ತಿಂಡಿಗಾಗಿ ಅಲ್ಲೇ ಹತ್ತಿರದ ಹಳ್ಳಿಯ ಕ್ಯಾಂಟೀನನ್ನು ಹುಡುಕಿ ಬೈಕ್ ಹತ್ತಿದ. ಬೆಳ ಬೆಳಗ್ಗೆ ಎತ್ತುಗಳ ಜೊತೆ ಹೊಲಕ್ಕೆ ಹೊರಟ ರೈತರು, ಎಲ್ಲೋ ಹೊರಟಿದ್ದ ಟ್ಯಾಕ್ಟರ್ ಮಾಮ, ಸೀರೆಯ ಮೇಲೊಂದು ಶರಟು ತೊಟ್ಟು ಹೊಲಗೆಲಸಕ್ಕೆ ಹೊರಟ ಹೆಂಗಸರು , ಬ್ಯಾಗೇರಿಸಿ ಶಾಲೆಗೆ ಹೊರಟ ಹುಡುಗರು ಕಂಡರು. ಟಾಟಾ ಮಾಡಿದ ಹುಡುಗರಿಗೆ ಟಾಟಾ ಮಾಡಿ ನಗ್ತಿದ್ದಾಗ ಈತನಿಗೆ ಮತ್ತೆ ತನ್ನ ಬಾಲ್ಯದ ನೆನಪುಗಳು ಮರುಕಳಿಸಿತು.. ಪೇಟೆಗೆ ಹೋದ ಕೆಲದಿನಗಳಲ್ಲೇ ತನ್ನೂರಿಗೆ ಪೋಲಿಸಿನವರು ಬಂದು ಹೋದ ಕತೆಯೆಲ್ಲಾ ತಿಳಿಯಿತು. ಆ ದಿನ ಪೇಟೆಯಲ್ಲಿ ಕೇಳ್ತಿದ್ದ ಗುಸು ಗುಸು ನೆನಪಾಯಿತು. ಲೇ ಊರಿನ ಸಾಹುಕಾರನೇ ದೇವಿಯ ವಿಗ್ರಹ ಕದಿಸಿದ್ದಾನಂತೆ. ಆದನ್ನು ಪ್ರತಿಭಟಿಸಿದ ಪೂಜಾರಿಯನ್ನ ಅವನೇ ಏನೋ ಕಣ್ಮರೆ ಮಾಡಿಸಿದ್ದಾನಂತೆ. ದೇವಿ ನಿಮ್ಮನ್ನೆಲ್ಲಾ ಸುಮ್ನೆ ಬಿಡಲ್ಲಾ ಕಣ್ರೋ, ನಿನ್ನ, ನಿಮ್ಮ ಮಗನ್ನ ಹೇಗೆ ನೋಡ್ಕೋತಾಳೆ ನೋಡ್ತಿರು ಅಂತ ಶಾಪ ಹಾಕ್ತಿದ್ರಂತೆ ಪೂಜಾರಿಗಳು ಅಂತೆಲ್ಲಾ ಮಾತಾಡ್ತಿದ್ರು. ಆದ್ರೆ ಅವ್ರು ಯಾವ ಊರಿನ ಬಗ್ಗೆ ಮಾತಾಡ್ತಿದ್ರು ಅಂತ ಅವನಿಗೆ ತಿಳಿದಿರಲಿಲ್ಲ ಅಂದು. !! ತನ್ನ ಊರಿಗೆ ಬರ್ಬೇಡ ಅಂತ ಅಪ್ಪ ಯಾಕೆ ತಡೀತಾನೆ ಅಂತ ಇವತ್ಯಾಕೋ ಒಂದು ಕ್ಷಣ ಯೋಚಿಸಿ ಗಾಬರಿ ಆಯ್ತು. ಸತ್ಯಾಸತ್ಯತೆ ಏನೂಂತ ತಿಳೀಲೆಬೇಕು ಈಗ್ಲಾದ್ರೂ. ಪಾಪದ ಅಂಬಿಕಾ ಏನಾದ್ಲೋ ಏನೋ.. ಅವಳೆಲ್ಲಿದಾಳೆ ಅಂತ ಹುಡುಕಿ ಕೈಲಾದ ಸಹಾಯ ಮಾಡ್ಲೇ ಬೇಕು ನಾನು ಅಂತ ಪಾಪ ಪ್ರಜ್ನೆ ಕಾಡತೊಡಗಿ ತಿಂಡಿ ತಿಂದವನೇ ತನ್ನೂರ ಕಡೆ ಹೋಗೋಕೆ ನಿರ್ಧಾರ ಮಾಡಿದ . ಆದರೆ ಅದು ಇದ್ದಿದ್ದೇ ಬೇರೆ ದಿಕ್ಕಿನಲ್ಲಿ.ಛೇ .ತನ್ನೂರ ದಿಕ್ಕಿನಲ್ಲೇ ಸೂರ್ಯೋದಯ ನೋಡಲು ಹೋಗಬಾರದಿತ್ತೇ ಇಂದು ಎಂದೆನಿಸಿತವನಿಗೆ.. ಪೇಟೆಗೆ ಬಂದವನೇ ತನ್ನ ಊರ ದಿಕ್ಕಿಗೆ ಗಾಡಿ ತಿರುಗಿಸಿದ. ಬಾನಲ್ಲಿ ಕಾರ್ಮುಗಿಲುಗಳು ಕಟ್ಟುತ್ತಿರುವುದನ್ನೂ, ಪೇಟೆಯಿಂದ ಹೊರ ಬರುತ್ತಿದ್ದಂತೆಯೇ ಬೆಳಕು ಕಮ್ಮಿಯಾಗ್ತಾ ಇರೋದನ್ನು ಗಮನಿಸೋ ವ್ಯವಧಾನವೂ ಇರದಂತೆ ಪಯಣ ಸಾಗಿತು ಹತ್ತು ವರ್ಷಗಳಿಂದ ಒಮ್ಮೆಯೂ ಕಾಲಿಡದಿದ್ದ ತನ್ನ ಹೆತ್ತೂರಿಗೆ.
****
ಬೆಟ್ಟಕ್ಕೆ ಹೋಗಿದ್ದ ಗ್ಯಾಂಗಿಗೆ ಸೂರ್ಯ ನೆತ್ತಿಯ ಮೇಲೆ ಬಂದಾಗ ನಿದ್ರೆ ಹರಿಯಿತು. ಲೋ.. ಇಲ್ಲಿರೋ ಪರಿಸರ ನೋಡೋ. ಗ್ರೀನರಿ,ಕೂಲ್ ವೆದರ್ , ಎಲ್ಲಿ ನೋಡಿದ್ರೂ ಆ ಬಿಳಿ ಬಿಳಿ ಮೋಡಗಳು. ಸೂಪರ್ ಮಚ್ಚಾ. ನಾನು ಇಲ್ಲೇ ಮಲ್ಗಿ ಇದ್ದು ಬಿಡ್ತೀನಿ. ಜೀವಮಾನ ಪೂರ್ತಿ ಇಲ್ಲೇ ಇರಂಗಿದ್ರೂ ಇದ್ದು ಬಿಡ್ತೀನಿ. ಇದ್ರ ಮುಂದೆ ಯಾವ ಬೀರ್ ಬಾಟ್ಲೀನೂ ಇಲ್ರೋ ಅಂದ. ಎಲ್ಲಾ ಇವನ್ನೇ ತಿರುಗಿ ನೋಡಿದ್ರು. ಎಲ್ಲಾ ವೀಕೆಂಡಲ್ಲೂ ಹ್ಯಾಂಗೋವರ್ನಲ್ಲೇ ಇರ್ತಿದ್ದ ಈತನ ಬಾಯಿಂದ ಇಂತ ಮಾತೇ ಅಂತ ಒಂದ್ಸಲ ಆಶ್ಚರ್ಯ ಆಯ್ತು. ಲೋ ಸಿಸ್ಯ. ನಿನ್ನೆ ಸ್ವಲ್ಪ ಜಾಸ್ತೀನೆ ಏರ್ಸಿದೀಯ ಅನ್ಸತ್ತೆ ಅಂದ ಮತ್ತೊಬ್ಬ. ಇಲ್ಲ ಕಣೋ ಪ್ರಾಮಿಸ್. ನಾವು ರಾತ್ರೆ ಬೈಕ್ ಟ್ರಿಪ್ ಹೊರಟಾಗ ಯಾವತ್ತೂ ಕುಡಿಯಲ್ಲ,ಮರ್ತು ಬಿಟ್ಯಾ ಅಂದ ಅವ. ಲೋ ಹೌದು ಕಣೋ. ಕುಡಿಯೋದು ಇದ್ದಿದ್ದೆ. ಎಷ್ಟೋ ಸಲ ಕುಡಿದು ಎಲ್ಲೆಲ್ಲೋ ಆಕ್ಸಿಡೆಂಟಾಗಿದೆ.ಆದ್ರೆ ನಾವ್ಯಾರೂ ಸಾಯ್ದೇ ಇರೋದು ಪುಣ್ಯ. ಆದ್ರೆ ಮುಂದಿನ ಸಲ ಏನಾದ್ರೂ ಆದ್ರೆ ಏನ್ರೋ ಮಾಡೋದು. ಇಂತ ಜಾಗ ಇನ್ನೆಷ್ಟೋ ಇರ್ಬೋದು ನೋಡೋಕೆ. ಅದನ್ನೆಲ್ಲಾ ಬೈಕಲ್ಲಿ ಸುತ್ತಿ ಮಾಡೋ ಬದ್ಲು ಬಿದಿರು ಮೋಟಾರ್ ಹತ್ತೋ ಪರಿಸ್ಥಿತಿ ಬರ್ಬೋದು ಕಣೋ ಅಂದ ಮತ್ತೊಬ್ಬ.. ಸರಿ ಬಿಡ್ರೋ ನಿಮ್ಮ ಮಾತುಗಳ್ನೆಲ್ಲಾ ಒಪ್ತೀನಿ. ಆದ್ರೆ ಈಗ ಟ್ರಿಪ್ಪಿಗೆ ಅಂತ ತಂದಿರೋ ಬೀರ್ ಬಾಟ್ಲಿಗಳನ್ನೆಲ್ಲಾ ಏನ್ ಮಾಡೋಣ ಅಂತೀರಿ. ಇದೇ ಲಾಸ್ಟ್ ಬೀರ್ ಟ್ರಿಪ್ಪು ಅಂತ ಕುಡ್ದು ಬಿಡೋಣ.ಇನ್ಮೇಲೆ ಇದಕ್ಕೆ ಕೈ ಹಾಕ್ದೇ ಹೋದ್ರೆ ಆಯ್ತು. ಚೀರ್ಸ್ ಅಂದ.. ಬೀರ್ ಬುರುಡೆ ತೆಗೀತಿದ್ದಂಗೆ ಎಲ್ಲರ ಮನಸ್ಸುಗಳು ಮತ್ತೆ ಪರಮಾತ್ಮನ ದಾಸನಾದವು. ಹುಟ್ಟು ಗುಣ ಎಷ್ಟಂದ್ರೂ…
*****
ಸಂಜೆ ಕಳಿತಾ ಬಂತು ಅಂತ ಸಾಗಿದ ಕೊನೆಯ ಮಾರುತಿ ಬಸ್ಸು ಹೇಳ್ತಿತ್ತು. ಭೋರ್ಗರೆಯುತ್ತಿರೋ ಮಳೆಯಲ್ಲಿ ಒಂದು ಕಡೆಯಿಂದ ತನ್ನೂರತ್ರ ಸಾಗಿರೋ ಹುಡುಗ. ಮತ್ತೊಂದು ಕಡೆಯಿಂದ ಪೇಟೆಗೆ ವಾಪಸ್ಸಾಗ್ತಿರೋ ಗ್ಯಾಂಗು. ಸುಂದರ ಪ್ರಕೃತಿಯನ್ನು ನೋಡಿದವರು ಬೇಗ ವಾಪಾಸಾಗೋದು ಬಿಟ್ಟು ಮತ್ತೆ ಹಳೆ ಚಾಳಿಯಂತೆ ಕುಡಿಯುತ್ತಾ ಕೂತಿದ್ದು ಎಲ್ಲರಿಗೂ ನಾಚಿಕೆ ತರಿಸಿತ್ತು. ಅಪರಾಧಿ ಪ್ರಜ್ನೆಯಿಂದಲೋ ಅಥವಾ ಸುರಿಯುತ್ತಿರೋ ಮಳೆಯಲ್ಲಿ ಗಾಡಿ ಸ್ಕಿಡ್ಡಾಗೋ ಭಯದಿಂದಲೋ ಅವರ ಗಾಡಿಗಳಲ್ಲಿ ಹಿಂದಿನ ಯಮವೇಗವಿಲ್ಲ. ಆದರೂ ಜೋರಾಗೋ ಸಾಗುತ್ತಿದ್ದರು. ಕುಡಿದ ಕೈಗಳಲ್ಲಿ ಗಾಡಿಯ ಮೇಲೆ ನಿಯಂತ್ರಣವಿರದಿದ್ದರೂ ಪೇಟೆಯಲ್ಲಿ ಎಷ್ಟೋ ವರ್ಷಗಳಿಂದ ರ್ಯಾಷ್ ಆಗಿ ಓಡಿಸಿದ ಭರವಸೆ ಮೇಲೆ (?) ಗಾಡಿ ಓಡುತ್ತಿತ್ತು. ರಾತ್ರಿಯಾಗದಿದ್ದರೂ ಮೋಡಗಳ ಕತ್ತಲಾವರಿಸಿದ್ದರಿಂದ ಹಗಲಲ್ಲೇ ಹೆಡ್ ಲೈಟ್ ಹಾಕಿ ಗಾಡಿ ಓಡಿಸಿದ್ದರಿವರು. ಒಂದು ಮೊನಚಾದ ತಿರುವು. ಆ ತಿರುವಿನಲ್ಲಿ ಚಕ್ಕನೆ ಎದುರಿಗೆ ಯಾರೋ ಹೆಂಗಸು ಬಂದಂತೆ ಕಂಡಿತು ಒಬ್ಬನಿಗೆ. ಲೇ ಯಾರೋ ಹೆಂಗಸು ಕಣೋ ಅಂದ ಒಬ್ಬ. ಲೋ ಯಾವುದೋ ಗಾಡಿ ಕಣ್ರೋ ಅಂದ ಒಬ್ಬ. ಎಷ್ಟೇ ಬ್ರೇಕ್ ಹಾಕಿದ್ರೂ ಎರಡು ಗಾಡಿಗಳು ನಿಲ್ಲದೇ ಮುಂದೆ ಹೋದವು. ಮಳೆಗಾಲಕ್ಕೆ ಸ್ಕಿಡ್ ಆಗಿದ್ದು ಬೇರೆ. ಒಂದು ಗಾಡಿ ಸ್ಕಿಡ್ ಆಗಿ ರಸ್ತೆಯ ಪಕ್ಕದ ಮೋರಿಗೆ ಬಿದ್ದಿತ್ತು. ಇನ್ನೊಂದು ಮತ್ತೊಂದು ಮೂಲೆಯ ಮರಕ್ಕೆ ಗುದ್ದಿತ್ತು. ಅದರಲ್ಲಿದ್ದವರೆಲ್ಲಾ ಗಾಡಿ ಸ್ಲೋ ಆದಾಗ ಹಾರ್ಕಂಡಿದ್ದರು ಅಷ್ಟೇ. ಇನ್ನೊಬ್ಬನ ಗಾಡಿ ಯಾವುದಕ್ಕೋ ಲೈಟಾಗಿ ಕುಟ್ಟಿದ ಅನುಭವ. ಎಣ್ಣೆಯ ಮಬ್ಬಲ್ಲಿ, ಕತ್ತಲಲ್ಲಿ ಆತನಿಗೆ ಏನೆಂದು ಸರಿಯಾಗಿ ತಿಳಿಯಲಿಲ್ಲ. ಕಾಲಿಗೆ ಬೇರೆ ಬೈಕಿನ ಏನೋ ತಾಗಿದಂತಾಗಿ ಅಮ್ಮಾ ಎಂದು ಕೂಗಿಕೊಂಡ .ಆದರೂ ಹೇಗೋ ಗಾಡಿ ಮುಂದೆ ತಂದ. ಮೂರನೇ ಗಾಡಿ ಇವರ ಗಾಡಿಗಳ ಬಳಿ ಬರುತ್ತಿದ್ದಂತೆಯೇ ಆತ ನೋವು ತಡೆಯಲಾರದೇ ಚೀರಿ ಗಾಡಿಯೊಡನೆ ಬಿದ್ದುಬಿಟ್ಟ. ಆ ಗಾಡಿಯ ಹಿಂದೆ ಕೂತವ ಕಾಲುಕೊಡತಿದ್ದರೆ ಇಬ್ಬರೂ ಚೆನ್ನಾಗಿ ಬೀಳುತ್ತಿದ್ದರು. ಹಿಂದೆ ಕೂತವ ಪೆಟ್ಟಾದವನನ್ನ ಗಾಡಿಯ ಹಿಂದೆ ಹಾಕಿಕೊಂಡು ಗಾಡಿ ಓಡಿಸಲು ರೆಡಿಯಾದ. ಕುಡಿಯೋದು ಬೇಡ ಅಂದ್ರೆ ಕೇಳಿದ್ರಾ ? ನೋಡ್ರಿ ಈಗ ಯಾರಿಗೋ ಗುದ್ದಿದ್ದೀರಿ. ಇಲ್ನೋಡಿದ್ರೆ ಇವ್ನ ಕಾಲು ಮುರೀತೋ ಏನೋ ಗೊತ್ತಿಲ್ಲ. ಊರವ್ರೆಲ್ಲಾ ಸೇರೋ ಮೊದ್ಲು ಎಸ್ಕೇಪಾಗೋಣ ಏಳ್ರಿ ಅಂತ ಎಬ್ಸಿದ ಎಲ್ರನ್ನೂ ಸರಿಯಾಗಿದ್ದ ಅವ. ಈ ಗ್ಯಾಂಗಿನವರು ಇದ್ದ ಅವಸ್ಥೆಯಲ್ಲೇ ಗಾಡಿಗಳನ್ನು ಹೇಗೋ ಸ್ಟಾರ್ಟ್ ಮಾಡಿ ಅದನ್ನ ಹತ್ತಿ ಹೊರಟುಹೋದರು.. ಇವರನ್ನು ತಪ್ಪಿಸೋಕೆ ಅಂತ ಮೂಲೆಗೆ ಹೋಗಿ ಬಿದ್ದಿದ್ದ ಒಂದು ಜೀವ ಪ್ರಜ್ನೆಯಿಲ್ಲದೆ ಹಾಗೇ ಬಿದ್ದುಕೊಂಡಿತ್ತು..
ಮೈ ಜುಮ್ ಎನ್ನಿಸುವಂತಹ ನಿರೂಪಣೆ. ಮಲೆನಾಡಿನ ಮಳೆಗಾಲದ ಇಣುಕು ನೋಟವನ್ನು ಸಾಕ್ಷಾತ್ಕರಿಸುವ ಪರಿ ಎಲ್ಲವು ಸೊಗಸಾಗಿದೆ. ಸೂಪರ್
ReplyDeleteತುಂಬಾ ಧನ್ಯವಾದಗಳು ಶ್ರೀಕಾಂತಣ್ಣ :-)
DeletePrashasti, nimma blog ge nanna modala bheti... Malenada halli varNane odi nanu nanna balyakke kooda ondu bheti neeDide... Prabhuddha baraha
ReplyDeleteಹಾಯ್ ಅನಾಮಧೇಯ !
Deleteಪ್ರಶಾಂತವನಕ್ಕೆ ಸ್ವಾಗತ :-)
ನೀವ್ಯಾರು ಅಂತ ನಿಮ್ಮ ಹೆಸರಾಗಲಿ, ಬ್ಲಾಗ್ ವಿಳಾಸವಾಗಲೀ ನೀಡಿದ್ದಿದ್ದರೆ ಮತ್ತೆ ಭೇಟಿಯಾಗಲು ಸಹಾಯವಾಗುತ್ತಿತ್ತೇನೋ.
ಬ್ಲಾಗ್ ಭೇಟಿಗೆ ಧನ್ಯವಾದಗಳು. ಮತ್ತೊಮ್ಮೆ ಬನ್ನಿ. ಆಗಲಾದರೂ ಸಿಗೋಣ ..
ಕಥೆಯದ್ದು ಅದ್ಭುತ ಓಘ ಪ್ರಶಸ್ತಿ.. ಎರಡು ಮನಸ್ತಿತಿಗಳ ಮೂಲಕ ಹೋರಾಟ ಪ್ರಯಾಣಗಳನ್ನ ಒಂದು ಸನ್ನಿವೇಶದಲ್ಲಿ ಸಮೀಕರಿಸಿದ್ದು ಇಷ್ಟ ಆಯಿತು. ಅಂಬಿಕ ಮತ್ತೆ ಸಿಕ್ಕೇ ಬಿಡುವಳೇನೋ ಆ ಊರಲ್ಲಿ ಅಂತ ಹುಸಿ ಆಸೆ ಇಟ್ಟುಕೊಂಡವನಿಗೆ ಎದುರಾದದ್ದು ಭಾರೀ ತಿರುವು. ಆರಂಭದಲ್ಲೇ ಕಾಣಿಸಿದ್ದ ಅಂತ್ಯ ಅಂತ್ಯದಲ್ಲಿ ಮನನವಾಗುವಷ್ಟು ಬಿಗಿಯಾದ ನಿರೂಪಣೆ. ಇಷ್ಟ ಆಯ್ತು ಪ್ರಶಸ್ತಿ. :)
ReplyDeleteತುಂಬಾ ಧನ್ಯವಾದಗಳು ಸತೀಶ್.. ಬರೆದ ಮೊದಲೆರೆಡು ದಿನ ಯಾರೂ ಓದದ ಈ ಕತೆ ಇಂದು ಮೇಲೆದ್ದು ಬಂದಂತಿದೆ. ನಿಮ್ಮೆಲ್ಲರ ಮೆಚ್ಚುಗೆಗಳಿಂದ ಬರೆದ ಶ್ರಮ ಸಾರ್ಥಕವಾದ ಖುಷಿ :-)
Deleteಪ್ರಶಸ್ತಿ.. ವಾವ್ ಬರಿದಿರೋ ದಾಟಿ ಸಕ್ಕತ್ ಹಿಡಿಸ್ತು..!
ReplyDeleteಸೂಪರ್..! ನಡೆಯಲಿ.. ಮುಂದುವರೆಯಲಿ. ಚೆನ್ನಾಗಿ ಬೆಳಯಲಿ, ಬರಹ ಕೃಷಿ..!
ನಿಮ್ಮಭಿಮಾನಿಗಳ ಸಂಖ್ಯೆ ಹೆಚ್ಚಲಿ..! ಗುಣಮಟ್ಟ ಕೊರತೆಯಾಗದಿರಲಿ..!
ತುಂಬಾ ಧನ್ಯವಾದಗಳು ಸತ್ಯಚರಣರೇ.. ಸ್ವಲ್ಪ ದೊಡ್ಡ ಮಾತು ಅನಿಸಿತು.. ಅಭಿಮಾನಿಗಳು !!!
Deleteಕಾಮಿಡಿ ಸರ್.. ಏನೋ ಕೆಲ ಗೆಳೆಯರು ಓದಿ ಕಾಲೆಳೆಯುತ್ತಾರೆ ಅಷ್ಟೆ.. ಇನ್ನು ಬರಹದ ಗುಣಮಟ್ಟದ ಬಗ್ಗೆ: ಈಗಿನ ಗುಣಮಟ್ಟ ಹೇಗಿದೆಯೋ ಕಾಣೆ. ಇಷ್ಟವಾದಂತೆ ಬರೆಯುತ್ತಿದ್ದೇನೆ. ಅಷ್ಟಕ್ಕೂ ಅದಕ್ಕೆ ತಲೆಕೆಡಿಸಿಕೊಳ್ಳಬೇಕಾ ? ನನ್ನ ಮನ ಮೆಚ್ಚಿದ, ಕಾಡಿದ ಮಾತುಗಳು ಓದುಗನಿಗೆ ದಾಟಿದರೆ ಸಾಲದೇ ?
ಪ್ರಶಸ್ತಿ,
ReplyDeleteಖುಷಿ ಆಯ್ತು ಕಥೆ, ಮೊದಲ ಬಾರಿಗೆ ಓದಿದಾಗ ಗೊತ್ತಾಗಲಿಲ್ಲ. ಈ ಕಥೆಯ ಶೈಲಿ ಇಷ್ಟ ಆಯ್ತು. ನನಗ್ಯಾಕೋ ನಿಮ್ಮ ಕಥೆನೇ ಇಷ್ಟ ಆಗ್ತಾ ಇದೆ, ಲೇಖನಗಳಿಗಿಂತ . ಬರೀತಾ ಇರಪ್ಪ :)
ಧನ್ಯವಾದಗಳು ಸುಬ್ಬು.. variety is spice of life ಅಂತ ಹೇಳ್ತವಲ ಹಂಗೇಯ. ಅದೇ ಶೈಲಿಯ ಬರಹಗಳನ್ನ ಓದಿ ಓದಿ ಬೇಜಾರಾಗಿತ್ತು ಅನುಸ್ತು. ನಂಗೂ ಬೇಜಾರು ಬಂದು ಸ್ವಲ್ಪ ಬೇರೆ ತರ ಟ್ರೈ ಮಾಡಿದಿ.. ಬೋರು ಬಂದಿದ್ರೆ ಮುಂಚೇನೇ ಹೇಳದಲ್ದಾ ? ;-)
Deleteಹೇ, ನಿಜವಾಗ್ಲೂ ಮೊದಲ್ನ ಸಲ ಅರ್ಥ ಆಗ್ದೇ ಇರ ಅಷ್ಟು ಕಷ್ಟ ಇತ್ತ ಕಥೆ ? !!
ಪ್ರಶಸ್ತಿ ಜಿ ,
ReplyDeleteಸುಬ್ರಹ್ಮಣ್ಯ ಹೇಳಿದಂತೆ ನಂಗೂ ಮೊದಲ ಸಲಕ್ಕೆ ಕಥೆ ಅಷ್ಟಾಗಿ ಅರ್ಥ ಆಗಿರಲಿಲ್ಲ...ಮತ್ತೊಮ್ಮೆ ಓದಿದೆ ..
ನೀವು ಕಟ್ಟಿಕೊಟ್ಟ ರೀತಿ ತುಂಬಾ ಇಷ್ಟ ಆಯ್ತು ...
ಬರೆಯೋ ಎಲ್ಲಾ ಭಾವಗಳೂ ಓದುಗರಲ್ಲಿ ಅಚ್ಚಾಗೋ ತರ ಮಾಡ್ತೀರ... ವಾರಕ್ಕೆರಡು ಪೋಸ್ಟ್ ಅದ್ ಹೇಗೆ ಮಾಡ್ತೀರೋ ನಾ ಕಾಣೆ ...
ಬರೀತಾ ಇರಿ
ಮತ್ತೊಮ್ಮೆ ಧವಾ ಭಾಗ್ಯ.
Deleteನೀ ನನ್ನ ಜೀ ಅಂತ ಕರದ್ರೆ ನಾ ಮುಂದಿನ ಸಲ ನಿನ್ನ ಭಾಗ್ಯಮ್ಮ ಅಂತ ಕರೀತೆ ನೋಡು :-)
ವಾರಕ್ಕೆರೆಡು ಪೋಸ್ಟೆಲ್ಲಿಂದ!!.. ನನ್ನ ಬ್ಲಾಗು ನೋಡು. ತಿಂಗಳಿಗೆ ೩-೪. ಹೆಚ್ಚೆಂದರೆ ೫ ಇದ್ದು ಅಷ್ಟೆ..
ಇನ್ನು ಕತೆಯ ಬಗ್ಗೆ: ಮೊದಲ್ನೇ ಸಲ ಓದಿದಾಗ ನಿಜವಾಗ್ಲೂ ಅರ್ಥ ಆಗ್ಲ್ಯಾ ? :-(
ಹಾಗಲ್ಲ ಪ್ರಶಸ್ತಿ ...ಪ್ರಶಸ್ತಿಯ ನಾರ್ಮಲ್ ಸ್ಟೈಲ್ ಗಿಂತ ಭಿನ್ನವಾಗಿರೋ ಈ ೨ ಕಥೆಗಳನ್ನ ಕ್ಷಣಕ್ಕೆ ಹಿಡಿದಿಟ್ಟುಕೊಳ್ಳೋದು ಕಷ್ಟವಾಯ್ತು ಅಷ್ಟೇ :)
Deleteಕಥೆಯಲ್ಲೇನೂ ಗೊಂದಲವಿಲ್ಲ
( note :ಪ್ರಶಸ್ತಿ ಅಂತಷ್ಟೇ ಹೇಳ್ದೆ ಈಗ ....ವಾಪಸ್ ತಗೋಳಿ ಹೆಸರು ಕರೆಯೋ ಮಾತನ್ನ :P )