Our Group walking towards the base of Manjarabad Fort |
ಟ್ರಿಪ್ಪಿನ ಶುರುವಾತು ಹೆಂಗೆ ಅಂದ್ರೆ...
ಹೇ. ಸಕಲೇಶಪುರ ಟ್ರಿಪ್ ಹೋಪ ಪ್ಲಾನಿದ್ದು. ಯಾರಾದ್ರು ಬರಕೆ ಇಷ್ಟ ಇರೋರು ಇದ್ರಾ ಅಂತ ಪ್ರಕಾಶಣ್ಣ ಮೆಸೇಜ್ ಹಾಕ್ದಾಗ ಮೊದ್ಲು ಜೈ ಅಂದ್ರೂ ನಾನಿರೋ ಕುಂದ್ಲಳ್ಳಿ ಮೂಲೆ ಇಂದ ಗಿರಿನಗರದಿಂದ ಹೊರಡ್ತಿರೋ ಅವ್ರ ಜೊತೆ ಟ್ರಿಪ್ಪಿಗೆ ಸೇರ್ಕಳೋದು ಹೆಂಗೆ ಅಂತ ಯೋಚನೆ ಬಂದಿರ್ಲಿಲ್ಲ. ರೋಹಿತಣ್ಣ ಫೋನ್ ಮಾಡಿ ಬೆಳಬೆಳಗ್ಗೆ ಗೊರಗುಂಟೆ ಪಾಳ್ಯಕ್ಕೆ ಬರಕಾಗ್ತನ ಅಂದಾಗ್ಲಂತೂ ಕುಂದ್ಲಳ್ಳಿ-ಮಾರತ್ತಳ್ಳಿ-ಹೆಬ್ಬಾಳ-ಗೊರಗುಂಟೆ ಪಾಳ್ಯ ಅಂತ ೩೩ ಕಿ.ಮೀ ಬಸ್ ಚೇಂಚ್ ಮಾಡಿ ಬರೋದ್ರೊಳಗೆ ನಿಮ್ಮ ಬೆಳಗ್ಗಿನ ಟ್ರಿಪ್ಪಿನ ಅರ್ಧ ದೂರ ಹೋಗಾಗಿರ್ತು. ಅದು ಹೆಂಗಿದ್ರೂ ಆಗದಲ್ಲ, ಹೋಗದಲ್ಲ. ನೀವು ಹೋಗ್ಬನ್ನಿ ಅಂದಾತು. ಹ್ಯಾಪಿ ಜರ್ನಿ ಹೇಳನ ಅಂತ ಮತ್ತೆ ಪ್ರಕಾಶಣ್ಣಂಗೆ ಫೋನ್ ಮಾಡಿದ್ರೆ, ನೀ ಬೆಳಗ್ಗೆ ಆರ್ಗಂಟೆಗೆ ಮಾರತ್ತಳ್ಳೀಲಿ ರೆಡಿ ಇರಪ. ಅಲ್ಲಿಂದ ನಿನ್ನ ಕರ್ಕೊಂಡೇ ಹೋಗನ ಅಂದ್ಬಿಡದಾ ? ಸರಿ ಅಂತ ಸಕಲೇಶಪುರದ್ದೊಂದು ಟ್ರಿಪ್ ರೆಡಿ ಆತು.
ಸಕಲೇಶಪುರ ಅಂದ್ರೆ ಬೆಂಗ್ಳೂರಿಂದ ಹಾಸನ ಮೂಲಕ ಹೋಗೊದು. ಬೆಂಗ್ಳೂರ ನಡುವಿಂದ ೨೨೬ ಕಿ.ಮೀ, ಮಾರತ್ತಳ್ಳಿಯಿಂದ ೨೪೧ ಕಿ.ಮೀ ಅಂತ ಹೇಳೋದೇನು ಬೇಡ ಅನ್ನೋ ಭರವಸೆಯಲ್ಲಿ ನಮ್ಮ ಟ್ರಿಪ್ಪ ನೆನಪುಗಳಿಗೆ ಡೈರೆಕ್ಟ್ ಎಂಟ್ರಿ. ಅಲಾರಂ ಎಬ್ಸತ್ತೋ ಇಲ್ಲೋ ಅನ್ನೋ ಸಂದೇಹದಲ್ಲೇ ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡದಿದ್ದ ನಾನು ಬೆಳಗ್ಗೆ ಐದೂಕಾಲಿಗೆ ರೆಡಿಯಾಗಿದ್ದೆ ! ಬೆಳಬೆಳಗ್ಗೆ ಒಂದೂ ಬಸ್ಸು ಕಾಣದೇ ಮಾರತ್ತಳ್ಳಿಗೆ ನಡ್ಕೊಂಡೇ ಹೊರಡೋಣ ಅಂದ್ಕೊಂಡೋನಿಗೆ ಐದೂ ಐವತ್ತಕ್ಕೊಂದು ಸಾದಾರಣ ಬಸ್ಸೇ ಸಿಕ್ಕಿದ್ದು ಯುಗಾದಿ ಚಂದ್ರ ಕಂಡಷ್ಟೇ ಖುಷಿ ಕೊಟ್ಟಿತ್ತು. ಇನ್ನೂ ಎದ್ದೇಳುತ್ತಿದ್ದ ಮಾರತ್ತಳ್ಳಿ ಬ್ರಿಡ್ಜಿನ ಮೇಲೆ ಕಾಯ್ತಿದ್ದ ನಂಗೆ ಪ್ರಕಾಶಣ್ಣ,ಸಹನಕ್ಕ ಮತ್ತು ಸ್ವಾತಿ ಹಾಯೆನ್ನೋ ಹೊತ್ತಿಗೆ ಆರೂಕಾಲು. ಯಾವಾಗ್ಲೂ ಗಿಜಿಗಿಜಿ ಗುಟ್ಟೋ ಮಾರತ್ತಳ್ಳಿ-ಹೆಬ್ಬಾಳದ ರೋಡುಗಳು ಖಾಲಿಯಿರೋದನ್ನ ಸದಾ ಜೀನ್ಸ್ ಪ್ಯಾಂಟ್ ಹಾಕ್ಕೊಳ್ಳೋ ಹುಡ್ಗಿ ಸೀರೆ ಉಟ್ಗೊಂಡ್ ಬಂದ್ರೆ ಆಗೋ ಆಶ್ಚರ್ಯದಂಗೇ ಆಶ್ಚರ್ಯದಿಂದ ನೋಡ್ತಾ ಹೆಬ್ಬಾಳ ವರ್ತುಲ ರಸ್ತೆ ತನಕ ಬರೋ ಹೊತ್ತಿಗೆ ಆರೂ ಐವತ್ತು. ಅಲ್ಲಿಂದ ಗೊರಗುಂಟೆ ಪಾಳ್ಯಕ್ಕೆ ನಾ ಹೋಗಿದ್ರೆ ತಾನೇ ಮುಂದಿನ ರಸ್ತೆ ಹೇಳೋಕೆ ! ಜೈ ಗೂಗಲೇಶ್ವರ ಅಂದ್ಕೊಂಡು, ಅಲ್ಲಿಲ್ಲಿ ಕಂಡ ತುಮಕೂರಿಗೆ ದಾರಿಯೆನ್ನೋ ಬೋರ್ಡುಗಳನ್ನ ಗಮನಿಸ್ಕೊಂಡು ಗೊರಗುಂಟೆ ಪಾಳ್ಯ ಸೇರೋ ಹೊತ್ತಿಗೆ ಏಳೂ ಹತ್ತು. ಅಲ್ಲಿಂದ ವಿನಾಯಕ,ಅವನ ತಂಗಿ,ರೋಹಿತಣ್ಣ,ರಾಕೇಶರ ಮತ್ತೊಂದು ಕಾರಿನ ಜೊತೆಗೊಂದಿಷ್ಟು ಫೋಟೋ ಶೂಟ್ ಮಾಡಿ ಹಾಸನದತ್ತ ಹೊರಟ್ವಿ.
ಪಾರಿಜಾತದ ಪಾಯಸ ಪ್ರಸಂಗ:
Breakfast at Parijatha Hotel |
ಹಂಗೇ ಒಂದು ಘಂಟೆ ಹೋಗೋ ಹೊತ್ತಿಗೆ ಎಲ್ಲರ ಹೊಟ್ಟೆ ಚುರುಗುಟ್ಟೋಕೆ ಹಿಡಿದು ಎಲ್ಲಾದ್ರೂ ಹೋಟೇಲ್ ಸಿಕ್ಬೋದಾ ಅಂತ ನೋಡ್ತಿದ್ದ ಹೊತ್ತಿಗೆ ಕಂಡಿದ್ದು ಶ್ರೀಮಾನ್ ಅಂಗಡಿ ಗಂಗುಡ್ಡಯ್ಯ ಕಾಂಪ್ಲೆಕ್ಸಿನಲ್ಲಿರೋ ಹೋಟೆಲ್ ಪಾರಿಜಾತ. ಬೆಳ ಬೆಳಗ್ಗೆಯ ಬಿಸಿಯಿಡ್ಲಿಯ ಜೊತೆ ಖಾರ ಚಟ್ನಿ,ಸಪ್ಪೆ ಸಾಂಬಾರ್ ತಿಂತಾ, ಮನೇಲಿ ದಿನಾ ದೋಸೇನೇ ತಿನ್ನೋರು ಹೊರಗಡೇನೂ ಅದೇ ಆರ್ಡರ್ ಮಾಡ್ಬೇಕಾ ಅಂತ, ರುಚಿಯಿಲ್ಲದ ಉಪ್ಪಿಟ್ಟು ಅನ್ನೋದು ಎಲ್ಲಾ ಕಡೆಯೂ ಹಿಂಗೇನಾ ಅಥವಾ ಇಲ್ಲಿ ಮಾತ್ರ ಹಿಂಗಾ ಅಂತ ಚರ್ಚೆ ಮಾಡ್ಕೋತಾ ತಿಂಡಿಯ ಶಾಸ್ತ್ರ ಮುಗಿಸಿದವರೆಲ್ಲಾ ಕಾಫಿ ಆರ್ಡರ್ ಮಾಡಿದ್ರೆ ನಾನ್ಯಾಕೋ ಬೇಡವೆಂದೆ. ಸಿಹಿ ಹೆಚ್ಚು ಕುಡ್ಯೋ ಸಹನತ್ಗೆಗೇ ಪಾಯಸವೆನಿಸಿದ ಆ ಪೇಯವನ್ನ ನಾ ಬೇಡವೆಂದಿದ್ದು ಒಳ್ಳೇದೇ ಆಯ್ತಂತ ಆಮೇಲನಿಸಿದ್ದು ಬೇರೆ ಮಾತು :-)
ಕೊಥಾಸ್ ಕಾಫಿ:
Cothas Coffe @A2B , Baladari, Channarayapattana |
ಸಕಲೇಶಪುರದತ್ತ ನಾವು:
Climbing up towards Manjarabad Fort |
ಅಲ್ಲಿಂದ ಹಾಸನ ದಾಟಿ ಸಕಲೇಶಪುರ ತಲುಪೋ ಹೊತ್ತಿಗೆ ಮಧ್ಯಾಹ್ನ ಹನ್ನೆರಡಾಗ್ತಾ ಬಂದಿತ್ತು. ಹಾಸನ ಸಿಟಿಯೊಳಗೆ ಹೋಗದೇ ಬೈಪಾಸ್ ತಗೊಂಡಿದ್ದು ಒಂದಿಷ್ಟು ಸಮಯ ಉಳಿಸಿತ್ತು. ಆದ್ರೆ ಹಾಸನ ದಾಟಿ ಸ್ವಲ್ಪ ದೂರ ಬರ್ತಿದ್ದ ಹಾಗೆಯೇ ಮಾಯವಾದ ಚತುಷ್ಪಥ ರಸ್ತೆ ನಮ್ಮ ವೇಗವನ್ನು ಕಮ್ಮಿ ಮಾಡಿತ್ತು.ಬೆಂಗಳೂರಿಂದ ಹಾಸನದವರೆಗಿನ ೧೮೫ ಚಿಲ್ರೆ ಕಿ.ಮೀಯನ್ನ ಸುಮಾರು ಮೂರು ಘಂಟೆಯಲ್ಲಿ ಕ್ರಮಿಸಿದ್ದ ನಾವು ಅಲ್ಲಿಂದ ಸಕಲೇಶಪುರಕ್ಕೆ ೪೦ ಕಿ.ಮೀ ಹೋಗೋಕೆ ಸುಮಾರು ಒಂದು ಘಂಟೆ ತಗೊಂಡಿದ್ವಿ ! ಸಕಲೇಶಪುರದಿಂದ ಸುಮಾರು ಐದು ಕಿ.ಮೀ ದೂರವಿರೋ ಮಂಜಾರಾಬಾದ್ ಕೋಟೆಯ ಬುಡ ತಲುಪಿ ಅಲ್ಲಿದ್ದ ಸಣ್ಣ ರಸ್ತೆಯಲ್ಲಿದ್ದ ಉದ್ದುದ್ದ ಕಾರ ಕ್ಯೂಗಳ ಕೊನೆಗೆ ಕಾರುಗಳನ್ನ ನಿಲ್ಲಿಸಿ ಕೋಟೆ ಹತ್ತೋಕೆ ಹೊರಡೋ ಹೊತ್ತಿಗೆ ಹನ್ನೆರಡೂ ಹದಿನೈದಾಗಿತ್ತು.
At the Entrance of Manjarabad Fort |
ಮಂಜರಾಬಾದಲ್ಲಿ ಮಂಜ ಹಾಡು:
ಮಳೆಯಿಂದ ಕೊಂಚ ಕೆಸರಾಗಿದ್ದ ಶುರುವಿನ ಇನ್ನೂರು ಮೀಟರ್ ಹಾದಿ ಕ್ರಮಿಸಿ ನಂತರದ ಸಿಮೆಂಟ್ ಮೆಟ್ಟಿಲುಗಳನ್ನೇರಿ ಮಂಜಾರಾಬಾದ್ ಕೋಟೆ ತಲುಪಿದ್ವಿ. ೧೭೯೨ರಲ್ಲಿ ಮೈಸೂರಿನ ರಾಜ ಟಿಪ್ಪು ಸುಲ್ತಾನನಿಂದ ಕಟ್ಟಲ್ಪಟ್ಟ ಈ ಕೋಟೆ ನಕ್ಷತ್ರದ ಆಕಾರದಲ್ಲಿದೆ. ಪರಮಾತ್ಮ ಚಿತ್ರದಲ್ಲಿ ಹೆಲಿಕ್ಯಾಪ್ಟರಲ್ಲಿ ತೆಗೆದ ದೃಶ್ಯ ಬಂದ ಮೇಲಂತೂ ಸಖತ್ ಪ್ರಸಿದ್ದವಾದ ಈ ಕೋಟೆಯಲ್ಲೀಗ ಜನಗಳ ಜಾತ್ರೆ. ಇಲ್ಲಿರೋ ಭೂಗತ ಕೋಣೆ, ಪ್ಲಸ್ ಆಕಾರದ ಕೊಳ, ಕಮಾನುಗಳೆಲ್ಲಾ ಫೋಟೋ ಶೂಟಿನ ಜಾಗಗಳೇ. ಬೇಸಿಗೆಯಲ್ಲಿ ಕಂದು, ಕಪ್ಪಾಗಿ ಕಂಡಿದ್ದ ಮಂಜಾರಾಬಾದೀಗ ಹಸಿರ ಹೊದಿಕೆ ಹೊದ್ದು ನಳನಳಿಸುತ್ತಿದೆ. ಇಲ್ಲಿನ ಬುರುಜುಗಳು,ಕೋಟೆಯ ಗೋಡೆಗಳ ಮೇಲೆ ಹತ್ತಿ ಫೋಟೋ ತೆಗೆಸಿಕೊಳ್ಳೋದು ಅದರಾಚೆಯ ಪ್ರಪಾತವನ್ನು ನೋಡಿದ್ರೆ ಕೊಂಚ ರಿಸ್ಕೇ ಅಂದ್ಕೊಂಡ್ರೂ ಅಗಲವಿರೋ ಗೋಡೆಗಳು ಮತ್ತು ಅದರಾಚೆಯ ಕೊಂಚ ಜಾಗವನ್ನು ನೋಡಿದ್ರೆ ಪರವಾಗಿಲ್ಲ ಅನಿಸುತ್ತೆ. ಆದ್ರೆ ಜಾಸ್ತಿ ಮಳೆಯಾಗ್ತಿರೋ ಸಮಯದಲ್ಲಿ ಸ್ವಲ್ಪ ಹುಷಾರಾಗಿರ್ಬೇಕಷ್ಟೆ. ನಾವು ಬಂದ ದಿನವೂ ಸೆಲ್ಪಿಗಳ,ಗ್ರೂಪಿಗಳ ಕಲರವ. ಮಳೆ ಹೆಚ್ಚಾಗಿ, ಮೋಡ-ಮಂಜು ಹೆಚ್ಚಾಗಿದ್ದರಿಂದ ಹಿಂದಿನ ಸಲ ಸಿಕ್ಕಷ್ಟೂ ಚಿಟ್ಟೆಗಳಿರದಿದ್ರೂ ಬರುವಾಗ ಒಂದು ಕಂಡಿತ್ತಷ್ಟೆ. ಅಲ್ಲಿನ ದೃಶ್ಯ ವೈಭವವನ್ನ ಪದಗಳಲ್ಲಿ ಸೆರೆಹಿಡಿಯೋ ಬದ್ಲು ಅದರ ಚಿತ್ರಗಳನ್ನು ಹಾಕೋದೇ ಮೇಲೆಂದುಕೊಳ್ಳುತ್ತಾ ಒಂದಿಷ್ಟು ಚಿತ್ರಗಳು
Star Shaped Manjarabad Fort |
Some photographic memories |
A "+" shaped pond at the center of the Fort |
A Rustic butterfly |
on The way to Bisile ghat |
Road on the way to Bisile view point |
ಬ್ಯಾಕರವಳ್ಳಿಯಲ್ಲಿ ಬಸವೇಶ್ವರ ಹೋಟೇಲ್ ಅಂತ ಸಣ್ಣದೊಂದು ಹೋಟೇಲಿದೆ. ಹಿಂದಿನ ಬಾರಿಯ ಪ್ರವಾಸದಲ್ಲಿ ಅಲ್ಲಿ ನಿಲ್ಲಿಸಿ ಒಳ್ಳೆಯ ಊಟ ಸವಿದಿದ್ದ ನಾವು ಅಲ್ಲಿಂದ ಹದಿನೈದು ಕಿ.ಮೀ ದೂರದ ಮಲ್ಲೇನಹಳ್ಳಿಯ ಫಾಲ್ಸಿಗೆ ಹೋಗಿದ್ವಿ. ಆದ್ರೆ ಫಾಲ್ಸಿಗೆ ಹೋಗೋ ಪ್ಲಾನಿರಲಿಲ್ಲ. ಹೋದ್ರೂ ಬಿಸಿಲೆಯ ನಂತರವೆಂಬ ಪ್ಲಾನಿತ್ತು. ಹಾಗಾಗಿ ಈ ಸಲ ಅಲ್ಲಿ ನಿಲ್ಲಿಸದೇ ಹಾಗೇ ಮುಂದೆ ಸಾಗಿದ್ವಿ.ಬರ್ತಾ ತಂದಿದ್ದ ಬಿಸ್ಕೇಟು, ಸೌತೇಕಾಯಿ,ಬಾಳೇಹಣ್ಣುಗಳು ಅಷ್ಟೇನೂ ಹಸಿವಿಲ್ಲದಂತೆ ಮಾಡಿದ್ದು, ಮಂಜು ಕವೀತಾ ಇರೋ ಹಾದಿಯಲ್ಲಿ ಬೇಗ ಬಿಸಿಲೆ ತಲುಪಬೇಕು ಅನ್ನೋ ಕಾರಣಗಳು ನಮ್ಮನ್ನು ಬೇಗ ಮುಂದೆ ಸಾಗಿಸಿತ್ತು. ಇಲ್ಲಿನ ಅಷ್ಟೇನೂ ಚೆನ್ನಾಗಿಲ್ಲದ ರೋಡಲ್ಲಿ ೩೬ ಕಿ.ಮೀ ಹೋಗೋಕೆ ಒಂದೂವರೆ ಘಂಟೆ ಮೇಲೇ ಬೇಕಾಗುತ್ತೆ ಅನ್ನೋ ನನ್ನ ಹಿಂದಿನ ಅನುಭವದ ಮಾತು ಅಲ್ಲೆಲ್ಲೂ ನಿಲ್ಲಿಸದೇ ಹಾಗೇ ಮುಂದೆ ಸಾಗುವಂತೆ ಮಾಡಿತ್ತು. ಆದ್ರೂ ಹಾದಿಯುದ್ದಕ್ಕೂ ಕಂಡ ಪ್ರಕೃತಿಯ ಸೊಬಗು ನಮ್ಮ ಕ್ಯಾಮೆರಾ,ಮೊಬೈಲುಗಳನ್ನ ಹೊರತೆಗೆಯದೇ ಇರೋಕೆ ಬಿಡಲೇ ಇಲ್ಲ. ಮಧ್ಯ ಸಿಕ್ಕ ಹೆತ್ತೂರು ಸಣ್ಣ ತಾಲ್ಕೂಕು ಕೇಂದ್ರದಂತಿದೆ. ಅಲ್ಲೊಂದಿಷ್ಟು ಸಣ್ಣ ಸಣ್ಣ ಹೋಟೇಲು, ಅಂಗಡಿಗಳು, ವೈದ್ಯ ಕೇಂದ್ರಗಳೂ ಇದ್ದು ಹೊಟ್ಟೆ ಪೂಜೆ ಮಾಡಬಹುದು. ಕೇರಳದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಟ್ಟಷ್ಟು ಇಲ್ಲಿ ಕೊಡದಿದ್ದರೂ ಸುಬ್ರಹ್ಮಣ್ಯಕ್ಕೆ ೩೪,೩೩ ಅಂತ ಸಿಗೋ ಬೋರ್ಡುಗಳ ಹಾದಿ ಹಿಡಿದು ಮುಂದೆ ಸಾಗಬಹುದು. ಸುಬ್ರಹ್ಮಣ್ಯಕ್ಕೆ ೨೯ ಅಂತಿರೋ ಬೋರ್ಡಿಂದ ೨೮ ಅಂತಿರೋ ಬೋರ್ಡಿಗೆ ಬರೋಕೆ ಹದಿನೈದು ನಿಮಿಷಕ್ಕಿಂತ ಜಾಸ್ತಿ ಸಮಯ ಹಿಡೀತು ಅಂತಂದ್ರೆ ಇಲ್ಲಿನ ರಸ್ತೆ ಎಷ್ಟು ಅಧ್ವಾನವಾಗಿರಬೇಕು ಲೆಕ್ಕ ಹಾಕಿ. ಆದ್ರೆ ಇದ್ರಲ್ಲಿ ಸರ್ಕಾರದ್ದೇನು ತಪ್ಪಿಲ್ಲ ಬಿಡಿ. ಬಿಸಿಲೆ ಘಾಟಿನ ರಸ್ತೆಯ ಸಿಮೆಂಟ್ ರೋಡಿನ ಕೆಲಸ ಪ್ರಗತಿಯಲ್ಲಿರುವ ಕಾರಣ ಬದಲಿ ರಸ್ತೆಯನ್ನು ಬಳಸಿ ಅಂತ ಹೆತ್ತೂರಿನಲ್ಲೇ ಬೋರ್ಡ್ ಹಾಕಿದ್ದಾರೆ. ಮಧ್ಯವೂ ಒಂದೆರಡು ಕತ್ರಿ(ಜಂಕ್ಷನ್ನು)ಗಳಲ್ಲಿ ಇದೇ ಬೋರ್ಡಿದೆ ! ಇದರಲ್ಲಿ ಸುಬ್ರಹ್ಮಣ್ಯ ಇಪತ್ತೊಂಭತ್ತು ಅಂತಾದ ಬೋರ್ಡು ಸಿಕ್ಕಿದ ಮೇಲೆ ಸ್ವಲ್ಪ ಹುಷಾರಾಗಿ ಬರ್ಬೇಕು. ಯಾಕಂದ್ರೆ ನಂತರ ಸಿಗೋ ಎರಡು ರಸ್ತೆಗಳಲ್ಲಿ ಎಡಭಾಗಕ್ಕೆ ಬಿಸಿಲೇ ಘಾಟಿದೆ ಅಂತ ಹಾಕಿರೋ ಬೋರ್ಡು ಮರಗಳ ಮರೆಯಲ್ಲಿ ಕಾಣೆಯಾಗೋ ಎಲ್ಲಾ ಸಾಧ್ಯತೆಗಳೂ ಇದ್ದು ಬಿಸಿಲೇ ಹತ್ತತ್ತರದವರೆಗೂ ಬಂದು ಅದನ್ನ ಮಿಸ್ ಮಾಡಿಕೊಳ್ಳೋ ಎಲ್ಲಾ ಸಾಧ್ಯತೆಗಳೂ ಇವೆ !ಅಲ್ಲಿಂದ ಬಿಸಿಲೆ ಘಾಟಿಗೆ ಮೂರೂವರೆ ಕಿ.ಮೀ. ಅದೇ ಹಾದಿಯಲ್ಲಿ ಮುಂದೆ ಸಾಗಿದರೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಿಗುತ್ತದೆ.
Checkpost on the way to Bisile |
ಅಲ್ಲಿಂದ ಬಿಸಿಲೆಗೆ ಮುಕ್ಕಾಲು ಕಿ.ಮೀ ಅಷ್ಟೇ. ಈ ಚೆಕ್ ಪೋಸ್ಟಿನಲ್ಲಿ ಸಂಜೆ ಐದೂವರೆಯ ನಂತರ ಮುಂಚೆ ಬಿಡುವುದಿಲ್ಲ. ಬಿಟ್ಟರೂ ಮುಂದೆ ಏನೂ ಕಾಣೋದಿಲ್ಲ ಬಿಡಿ !. ಮಳೆಗಾಲದ ದಿನಗಳಲ್ಲಿ ನಾಲ್ಕರ ಮೇಲೇ ಏನೂ ಕಾಣದಷ್ಟು ಮಂಜು ಇಲ್ಲಿ.
Left Turn to Bisile ghat, A point which can be missed |
This is how the board looks when you go near ! |
ಮಧ್ಯ ಮಧ್ಯ ಎರಡು ಮೂರು ಕಡೆಗಳಲ್ಲಿ ಜನರ ಬಳಿ ಕೇಳಿ ಬಿಸಿಲೆಯ ದಾರಿ ತಪ್ಪಿಲ್ಲ ಅಂತ ಖಚಿತಪಡಿಸಿಕೊಂಡು ನಾವು ಬಿಸಿಲೇ ತಲುಪೋ ಹೊತ್ತಿಗೆ ನಾಲ್ಕೂ ಇಪ್ಪತ್ತೈದು. ಅಂದರೆ ಸುಮಾರು ೩೬ ಕಿ.ಮೀ ಹಾದಿ ಕ್ರಮಿಸೋಕೆ ಎರಡು ಘಂಟೆ ತಗೊಂಡಿದ್ವಿ. ಜೋಗದಲ್ಲಿ ಮಳೆಗಾಲದ ದಿನಗಳಲ್ಲಿ ಜಲಪಾತವನ್ನೆಲ್ಲಾ ಆವರಿಸಿಕೊಳ್ಳೋ ಮಂಜನ್ನು ನೋಡಿದ ಭಾವವೇ ಇಲ್ಲಿ. ಆದ್ರೆ ಅಲ್ಲಿ ಮಂಜಿನ ತೆರೆ ಅವಾಗಾವಾಗ ಸರಿಯುವಂತೆ ಇಲ್ಲೂ ಸರಿಯುತ್ತಾ ಅಂತ ಕಾದ್ವಿ ಸ್ವಲ್ಪ ಹೊತ್ತು. ಆದ್ರೆ ಸರೀಲಿಲ್ಲ. ಆಗಾಗ ಜಿಮುರುತ್ತಿದ್ದ ಮಳೆಯ ಮಧ್ಯ ಕ್ಯಾಮರಾವನ್ನು ಜೋಪಾನವಾಗಿಟ್ಕೊಂಡು ಅಲ್ಲಲ್ಲಿ ಒಂದಿಷ್ಟು ಫೋಟೋ ತೆಗೆಯೋ ಹೊತ್ತಿಗೇ ಸಡನ್ನಾಗಿ ಒಮ್ಮೆ ಗಾಳಿ ಬೀಸಿ ಮಂಜ ಪೊರೆ ಸರಿದು ಬೆಟ್ಟದಾಚೆ ಇದ್ದ ಜಲಪಾತ, ತೊರೆಯ ದರ್ಶನವಾಯ್ತು. ಆದ್ರೆ ಕ್ಯಾಮರಾ ಸಿದ್ದಪಡಿಸಿಕೊಂಡು ಅದ್ರದ್ದೊಂದು ಫೋಟೋ ತೆಗಿಬೇಕು ಅಂದ್ಕೊಳ್ಳುವಷ್ಟರಲ್ಲಿ ಮತ್ತೆ ಮಂಜ ತೆರೆ. ಮತ್ತೊಂದಿಷ್ಟು ಫೋಟೋ ತೆಗೆದು ಅಲ್ಲಿನ ಮಂಜು ಮುಸುಕಿದ ಹಸಿರ ಸೊಬಗ ಸವಿದು ಯಸಳೂರಿನ ವೀವ್ ಪಾಯಿಂಟ್ ಗೇಟಿನ ಬಳಿ ಬರೋ ಹೊತ್ತಿಗೆ ಘಂಟೆ ಐದಾಗಿತ್ತು.
Reached Bisile View point |
Bisile View point |
Group pic @ Bisile View point |
One of the streams on the way to Bisile view point |
ಇದೇ ದಾರಿಯಲ್ಲಿ ವಾಪಾಸ್ ಬರೋ ಹೊತ್ತಿಗೆ ಮಂಕನಹಳ್ಳಿ ಅಥವಾ ಲಕ್ಷ್ಮೀಪುರ ಅನ್ನೋ ಬೋರ್ಡ್ ಸಿಗುತ್ತೆ. ಇಲ್ಲಿಂದ ಆನೆಗುಂಡಿ ಫಾಲ್ಸಿಗೆ ಹೋಗಬಹುದು. ಅದರ ಪಕ್ಕದಲ್ಲಿ ಸೂಕ್ಷ್ಮವಾಗಿ ಗಮನಿಸದಿದ್ದರೆ ಮಿಸ್ ಆಗಿ ಹೋಗಬಹುದಂತಹ ಸ್ಮಾರಕದಂತಹ ರಚನೆಯಿದೆ. ಸ್ವಾತಂತ್ರ್ಯ ಹೋರಾಟಗಾರರ ನೆನಪಿಗೆ ಒಂದು ಕಲ್ಲು ನೆಟ್ಟು, ಅದರ ಸಂರಕ್ಷಣೆಗೆ ಅಂತ ಸಿಮೆಂಟ್ ಹಾಕಿ, ಕಬ್ಬಿಣದ ಸರಪಳಿಯ ರಕ್ಷಣೆಯಿಟ್ಟ ಹಾಗೆ ಕಾಣುತ್ತೆ ಅದು ಮೇಲ್ನೋಟಕ್ಕದು. ಆದ್ರೆ ಹತ್ರ ಹೋಗಿ ನೋಡಿದ ಮೇಲೇ ಅದು ಒಂದು ರಿಡ್ಜ್ ಅಂತ ಗೊತ್ತಾಗುತ್ತೆ. ಅದರ ಎಡಭಾಗದಲ್ಲೊಂದು ಕೆರೆಯೂ ಮೇಲ್ಬಾಗದಲ್ಲೊಂದು ವೀಕ್ಷಣಾ ತಾಣವಿರುವ ಬೆಟ್ಟವೂ ಇದೆ. ಆ ರಿಡ್ಜಿನ ವಿಶೇಷವೆಂದರೆ ಅದರ ಎಡಭಾಗದಲ್ಲಿ ಬೀಳುವ ಮಳೆ ನೀರು, ಹರಿಯುವ ನದಿಗಳು ಅರಬ್ಬೀ ಸಮುದ್ರ ಸೇರಿದರೆ ಬಲಭಾಗದ್ದು ಬಂಗಾಳ ಕೊಲ್ಲಿಯನ್ನು ಸೇರುತ್ತಂತೆ. ಕರ್ನಾಟಕದ ಕೆಲವು ನದಿಗಳು ಇತ್ತಲೂ ಕೆಲವು ಅತ್ತಲೂ ಹರಿಯೋ ಬಗ್ಗೆ ಓದಿದ್ರೂ ಈ ರೀತಿಯ ವಿಭಜಕವೊಂದನ್ನು ನೋಡಿದ್ದು ಇದೇ ಮೊದಲು. ಇಲ್ಲಿಗೆ ಬರೋ ಬಹುಪಾಲು ಜನ ಮಿಸ್ ಮಾಡಿಕೊಳ್ಳೋ ಇದನ್ನು ಮಿಸ್ ಮಾಡ್ಕೋಬೇಡಿ ಅನ್ನೋ ಉದ್ದೇಶಕ್ಕೆ ಅದರದ್ದೊಂದು ಚಿತ್ರ.ಅಂದ ಹಾಗೆ ಬಿಸಿಲೆ ಘಾಟಿಂದ ಇಲ್ಲಿಗೆ ಬರೋಕೆ ಸುಮಾರು ೩೦-೩೫ ನಿಮಿಷ ಬೇಕು.
A Lake near the Ridge which indicates about Arabian sea, Bay of Bengal Waterflow |
ದಾರಿಬಿಡದ ಡ್ರೈವರ್ರುಗಳೂ ಮತ್ತು ಮೂಟೆ ಕಟ್ಟಿದ ಆಂಗ್ಲರು:
ಬಿಸಿಲೆ ಘಾಟಿಂದ ಮುಂದೆ ಬರ್ತಿದ್ದಂಗೇ ರಸ್ತೆಯ ರೂಪ ಚೂರ್ಚೂರೇ ಉತ್ತಮಗೊಳ್ಳಲು ಪ್ರಾರಂಭವಾಗುತ್ತೆ. ಇನ್ನೇನು ಬೇಗ ಬೇಗ ಹೊರಡೋಣ ಅಂದ್ರೆ ಮುಂದಿರೋ ಗಾಡಿಯವ್ರು ಸೈಡ್ ಬಿಡಬಾರದೇ ? ಮಧ್ಯರಸ್ತೆಯಲ್ಲಿ ಇಡೀ ರಸ್ತೆಯೇ ನಮ್ಮದೆನ್ನುವಂತೆ ನಿಧಾನವಾಗಿ ಓಡಿಸ್ತಾ ಇದ್ರೆ ನಮಗೆ ಮುಂದೆ ಹೋಗೋಕೂ ಆಗಲ್ಲ. ಹಿಂದೆ ನಿಧಾನವಾಗಿ ಫಾಲೋ ಮಾಡೋಕೂ ಆಗದ ಸಂಕಟ. ಅದ್ರ ಜೊತೆಗೆ ಹಿಂದಿಂದ ಬಂದು ಹಾರ್ನ್ ಮಾಡೋ ಗಾಡಿಯವರದ್ದು ಬೇರೆ ! ನಮ್ಮ ಹಿಂದೊಬ್ಬ ಮಂಗಳೂರಿನ ಗಾಡಿಯವ(ತಮಾಷೆಗೆ ಅವನಿಗೆ ಮುಸ್ತಪ್ಫಾ ಅಂತ ಹೆಸರಿಟ್ಟಿದ್ವಿ) ಪದೇ ಪದೇ ಹಾರ್ನ್ ಮಾಡಿ ಕಿರಿಕಿರಿ ಕೊಡ್ತಿದ್ದ. ಕೊನೆಗೆ ಒಂದು ದಾರಿಯಲ್ಲಿ ಸೈಡ್ ಹಾಕಿಕೊಂಡು ಮುಂದೂ ಹೋದ. ಅವ ಮುಂದೆ ಹೋದ ಮೇಲೆ ಇನ್ನೂ ಒಳ್ಳೆ ರಸ್ತೆ ಬಂದು ಅವನನ್ನು ಸೈಡ್ ಹಾಕಬೇಕೆಂಬ ಭಾವ ಬಂದೋಯ್ತು ರೋಭ(ರೋಹಿತಣ್ಣ)ಂಗೆ. ಆದ್ರೆ ಏನ್ಮಾಡೋದು. ಅವನೂ ಸ್ಪೀಡಾಗೇ ಇದ್ದ. ಸೈಡೂ ಕೊಡ್ತಿಲ್ಲ. ಪಕ್ಕಕ್ಕೆ ತಗೊಳ್ಳೋಣ ಅಂದ್ರೆ ಅಲ್ಲಿನ ಇಕ್ಕಟ್ಟಾದ ರಸ್ತೆಗಳಲ್ಲಿ ಸೈಡ್ ತಗೋಳೋಕೆ ಹೋಗಿ ಮುಂದಿಂದ ಏನಾದ್ರೂ ಬಂದ್ರೆ ದೇವ್ರೇ ಗತಿ. ಅಂತೂ ಒಂದ್ಕಡೆ ಸೈಡ್ ಹಾಕಿ ಮುಂದೆ ಬಂದರೂ ಹಿಂದಿದ್ದ ಅವ ಹಾರ್ನ್ ಮಾಡೋದು ಬಿಡಲಿಲ್ಲ. ಸಕಲೇಶಪುರದಲ್ಲಿ ಮುಂದೆ ಒಂದು ಅಡಿ ಮುಂದೋಗೂಕೂ ಜಾಗವಿಲ್ಲದಷ್ಟು ಗಾಡಿಗಳು ನಿಂತು ಜಾಮಾಗಿದ್ರೂ ಹಿಂದಿಂದ ಹಾರ್ನ್ ಮಾಡ್ತಿದ್ದ ಮುಸ್ತಪ್ಫ ನಾವು ಮುಂದೆ ಸಾಗ್ತಿದ್ದಂಗೇ ಕೆಳಗಿನ ಮಂಗಳೂರು ಹಾದಿಯಲ್ಲಿ ಇಳಿದು ಹೋದ. ಅವ ಹೋದ ಎಷ್ಟು ಹೊತ್ತಿನ ನಂತರವೂ ಮುಸ್ತಫ್ಫನಿಗೆ ಮಂಗಳೂರಲ್ಲಿ ಇವತ್ತೇ ಹಡಗು ಹಿಡಿಯಬೇಕಿತ್ತೇನೋ ಅದಕ್ಕೇ ಆತರ ಅರ್ಜೆಂಟ್ ಮಾಡ್ತಿದ್ದ ಅಂತ ತಮಾಷೆ ಮಾಡ್ಕೋತಿದ್ವಿ.
ಮರಳಿ ಗೂಡಿಗೆ:
ಐದೂವರೆಗೆ ವಿಭಜಕದಿಂದ ಮುಂದೆ ಸಾಗಿದ ನಾವು ಹೆತ್ತೂರ ನಂತರದ ಹತ್ತೂರುಗಳ ದಾಟಿ, ಸಕಲೇಶಪುರ ಬರೋ ಹೊತ್ತಿಗೆ ಆರೂವರೆ. ಸಕಲೇಶಪುರದ ಪೇಟೆ ಸಿಗುವ ಹೊತ್ತಿಗೆ ಎಡಭಾಗದಲ್ಲೊಂದು ದುರ್ಗಾ ಇಂಟರ್ ನ್ಯಾಷನಲ್ ಎಂಬೊಂದು ಐಷಾರಾಮಿ ಹೋಟೆಲ್ ಕಾಣಿಸ್ತು. ಪ್ರಕಾಶಣ್ಣ ಮತ್ತು ರೋಹಿತಣ್ಣ ಅದರೆದುರಿನ ಪೆಟ್ರೋಲ್ ಬಂಕಲ್ಲಿ ಪೆಟ್ರೋಲ್ ತುಂಬಿಸೋಕೆ ಹೋದ್ರೆ ಕಾರಿಳಿದ ನಾವು ಹೋಟೇಲಿನತ್ತ ಹೆಜ್ಜೆ ಹಾಕಿದ್ವಿ. ಅಲ್ಲಿನ ಮಧುವನ ಎಂಬ ಪ್ಯೂರ್ ವೆಜ್ ಮತ್ತು ಮದಿರಾ ಎಂಬ ಪಕ್ಕದಲ್ಲಿರೋ ಬಾರ್ ಎಂಡ್ ರೆಸ್ಟೋರೆಂಟುಗಳನ್ನು ಹೊಕ್ಕರೂ ಇಲ್ಲಿನ ಹೈ-ಫೈಗಿಂತ ಮುಂದೆಲ್ಲಾದ್ರೂ ತಿಂದರೆ ವಾಸಿಯೇನೋ ಎನಿಸಿ ಹೊರಬಂದ್ವಿ.ಮುಸ್ತಫ್ಫ ಸಿಗ್ಲಿಲ್ಲ ಅಂದ್ರೆ ನಾವು ಬರೋದು ಇನ್ನೂ ಲೇಟಾಗ್ತಿತ್ತು ಅಂತ ರೋಹಿತಣ್ಣ ಹೇಳ್ತಾ ಇದ್ರೆ ನಮಗೆಲ್ಲಾ ನಗೂ ನಗೂ. ಮತ್ತೊಂದು ಕಾರಿನವರಿಗೆ ಇದೆಂತಾ ಅಂತ ಅರ್ಥ ಆಗದೇ ಮುಸ್ತಫ್ಫ ಪ್ರಕರಣವನ್ನ ಮತ್ತೊಮ್ಮೆ ಹೇಳ್ಬೇಕಾಯ್ತು.
ಹಾಗೇ ಸ್ವಲ್ಪ ದೂರ ಮುಂದೆ ಬರ್ತಿದ್ದಂಗೆ ಸಿಕ್ಕಿದ್ದೇ ಮೈತ್ರಿ ಎಂಬ ಮತ್ತೊಂದು ಫ್ಯೂರ್ ವೆಜ್ ರೆಸ್ಟೋರೆಂಟ್. ಅವತ್ತಿನ ಸ್ಪೆಷಲ್ ಅಕ್ಕಿರೊಟ್ಟಿ-ಖಾರ ಚಟ್ನಿಯ ಜೊತೆಗೆ, ಟೊಮ್ಯಾಟೋ ಸೂಪ್, ನೀರ್ ದೋಸ್, ರವಾ ದೋಸೆ,ಭಜ್ಜಿಗಳ ಭರ್ಜರಿ ಬ್ಯಾಟಿಂಗ್ ಆಯ್ತು. ಅದ್ರಲ್ಲೂ ನಮ್ಮ ಜೊತೆ ನಗ್ ನಗ್ತಾ ಮಾತಾಡ್ತಾ ಸರ್ವ್ ಮಾಡ್ತಿದ್ದ ಸರ್ವರ್ ಹನುಮಂತ ಅವ್ರನ್ನ ಮರೆಯೋಕೂ ಸಾಧ್ಯವಿಲ್ಲ :-) ಇಲ್ಲಿಯವರೆಗೆ ಮೊದಲನೇ ಭಾರಿ ಅನಿಸುತ್ತೆ. ಹೋಟೇಲಲ್ಲಿ ಸರ್ವರ್ ಒಬ್ಬರ ಹೆಸರನ್ನು ಕೇಳಿದ್ದು ಮತ್ತು ಅದ್ನ ನೆನಪಿಟ್ಕೊಂಡು ಬ್ಲಾಗಲ್ ಬರೀತಿರೋದು ! ಗಂಟೆ ಏಳೂ ಐದಾಗಿದ್ರೂ ಊಟದ ರೇಂಜಿಗೆ ತಿಂಡಿ ತಿಂದ ನಾವು ಮತ್ತೆ ಹಸಿವಾದ್ರೆ ಮಧ್ಯ ಎಲ್ಲಾದ್ರೂ ನಿಲ್ಲಿಸುವ ಇಲ್ಲಾಂದ್ರೆ ಬೇಗ ಮನೆ ಸೇರುವ ಅಂದ್ಕೊಂಡು ಬೆಂಗ್ಳೂರು ಹಾದಿ ಹಿಡಿದ್ವಿ.
ಮಧ್ಯಾಹ್ನದ ಊಟವಿಲ್ಲದೇ ಡ್ರೈವ್ ಮಾಡ್ತಿದ್ದ ರೋಹಿತಣ್ಣಂಗೆ ಫುಲ್ ಸುಸ್ತಾಗಿ ಹೋಗಿತ್ತು. ಸಕಲೇಶಪುರದಲ್ಲಿ ನಿಲ್ಲಿಸಿದ ಪ್ರಕಾಶಣ್ಣಂಗಂತೂ ಗಾಡಿ ಮುಂದೆ ಹೋಗ್ತಿದ್ಯೋ ಹಿಂದೆ ಹೋಗ್ತಿದ್ಯೋ ಅಂತ ಡೌಟ್ ಬರ್ತಾ ಇತ್ತು ! ಅಂತಾ ಸಮಯದಲ್ಲಿ ಸಿಕ್ಕ ಮೈತ್ರಿಯ ರೊಟ್ಟಿ ಮತ್ತು ದೋಸೆಗಳು ಹೆಂಗಿದೂ ನಮಗೆ ಅದ್ಭುತ ಅನಿಸ್ತಿದ್ವಾ ಅನ್ನೋ ಸಂಶಯವಿದ್ರೂ ಮೈತ್ರಿಗೆ ೪.೨/೫ ರೇಟಿಂಗ್ ಕೊಡೋಕಡ್ಡಿಯಿಲ್ಲ. ಹಸಿದು, ಅಲ್ಲಲ್ಲಿ ಮಳೆಯಲ್ಲಿ ನೆನೆದು , ಸಂಜೆ ಮನೆ ಮುಟ್ಟಬಹುದು ಅನ್ನೋ ನಿರೀಕ್ಷೆಯಲ್ಲಿ ಸ್ವೆಟರ್ರೂ ತರದೇ ಬಂದು ಬಿಸಿಲೆಯ ಗಾಳಿಗೆ ಗಡಗುಟ್ಟುತ್ತಿದ್ದ ಜೀವಗಳಿಗೆ ಜೀವ ಬಂತು ಇಲ್ಲಿನ ಆಹಾರದಿಂದ.
ಹಾಸನದತ್ರ ಹೋಗ್ತಿದ್ದಂಗೆ ತಂಪು ಕಮ್ಮಿಯಾಯ್ತು, ಚತುಷ್ಪಥ ರಸ್ತೆಯೂ ಬಂದಿದ್ದು ಜೀವಕ್ಕೆ ಇನ್ನೂ ಆರಾಮವೆನಿಸ್ತು. ಆದ್ರೆ ಹಿಂದಿನ ದಿನ ರಾತ್ರಿ ಸರಿಯಾಗಿ ನಿದ್ರೆಯಿಲ್ಲದ ನನ್ನ ಕಣ್ಣುಗಳು ತೂಕಡಿಸೋಕೆ ಶುರುವಾಗಿದ್ದು ಊಟ ಅಲ್ಲಲ್ಲ, ತಿಂಡಿ ಮತ್ತು ನಂತರದ ಪಾನಿನ ನಂತರ ಗೆಲುವಾಗಿತ್ತು . ಅಂದ ಹಾಗೆ ಸಕಲೇಶಪುರದ ಪಾನು ಮತ್ತು ಬೆಳಗ್ಗಿನ ಚನ್ನರಾಯಪಟ್ಟಣದ ಅಡಿಗಾಸ್ ಬಳಿಯ ಪಾನು ವಿನಾಯಕನಿಗೆ ಸಖತ್ ಇಷ್ಟವಾಗಿತ್ತು. ಗ್ರಾಹಕರಿಲ್ಲದೇ ನೊಣ ಹೊಡಿತಾ ಇದ್ರೂ ಗಡಿಬಿಡಿ ಮಾಡಿ ಪಾನ್ ಕಟ್ಟಿಕೊಡೋ, ಹರಿಪತ್ತಾ ಹಾಕಿ ಅಂದ್ರೆ ಗುರು ಗುಟ್ಟೋ ಬೆಂಗಳೂರಿನ ಪಾನ್ವಾಲಾಗಳಿಗಿಂತ ಇಲ್ಲಿನ ಸಾವಧಾನ ಚಿತ್ತದ ಜನ ಅವನಿಗೆ ಇಷ್ಟವಾಗಿದ್ದರೆ ಅದ್ರಲ್ಲಿ ಆಶ್ಚರ್ಯವಿಲ್ಲ ಬಿಡಿ.
ಊಟದ ನಂತರ ಬೆಂಗಳೂರಿಗೆ ಬರೋವರೆಗೂ ಚರ್ಚೆಯಾದ ವಿಷಯಗಳಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದೂ ಒಂದೂ. ಮಧ್ಯರಾತ್ರಿಯಲ್ಲಿ ಸ್ವಾಂತ್ರ್ಯ ಬಂದ ಪರಿಯನ್ನು ಚರ್ಚೆ ಮಾಡ್ತಾ ಇದ್ವಿ ನಾವು. ೧೯೪೭ರ ಈ ದಿನ ಬ್ರಿಟಿಷರಿಗೆ ಹದಿನೈದನೇ ತಾರೀಖು ಸ್ವಾತಂತ್ರ್ಯ ಕೊಡಬೇಕಂತ ಇದ್ದಿದ್ದು, ಪಾಕಿಗಳು ಹದಿನಾಲ್ಕರ ೧೧:೫೭ಕ್ಕೇ ಬಾವುಟ ಹಾರಿಸಿಕೊಂಡಿದ್ದು, ಭಾರತದವರು ೧೨:೦೨ ಕ್ಕೆ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವ ಆಚರಿಸಿದ ವಿಷಯಗಳೆಲ್ಲಾ ಚರ್ಚೆಯಾಗ್ತಿದ್ವು. ಇಷ್ಟು ಹೊತ್ತಿಗೆ ಬ್ರಿಟಿಷರು ಲಗೇಜು ಪ್ಯಾಕ್ ಮಾಡ್ತಿರಬಹುದು. ಇಷ್ಟು ಹೊತ್ತಿಗೆ ಬ್ರಿಟನ್ನಿಗೆ ಹೊಗೋ ಹಡಗು ಹತ್ತಿರಬಹುದು. ನಾಳೆ ನಡೆಯೋ ಧ್ವಜಾರೋಹಣವನ್ನ, ನೆಹರೂ ಭಾರತದ ಪ್ರಧಾನಿಯಾಗೋ ಪ್ರಮಾಣವಚನವನ್ನ ನೊಡಿಕೊಂಡೋ ಹೋಗೋಣ ಅಂತ ಒಂದಿಷ್ಟು ಜನ ಉಳಿದಿರಬಹುದು ಅನ್ನೋ ಆಲೋಚನಾ ಲಹರಿಗಳು ನಮ್ಮ ಹಾದಿಯಲ್ಲಿ ಆಹಾರವಾಗಿದ್ದವು.ಇನ್ನೊಂದಿಷ್ಟು ದೂರ ಸಾಗೋ ಹೊತ್ತಿಗೆ ಘಂಟೆ ಎಂಟಾಗಿತ್ತು. ಹಡಗ ಪ್ರಯಾಣ ಅಂದ್ರೆ ದಿನಗಟ್ಲೇ, ತಿಂಗಳುಗಟ್ಲೆ ಸಾಗೋದ್ರಿಂದ ಭಾರತ ಬಿಡೋ ಉಮೇದಲ್ಲಿರೋ ಬ್ರಿಟಿಷರು ಈಗಾಗ್ಲೇ ಹಡಗು ಹತ್ತಿರಬಹುದೇನೋ ಎಂಬ ಆಲೋಚನಾ ಲಹರಿಗಳು ಸಾಗುತ್ತಿದ್ವು
ಮೈತ್ರಿಯಲ್ಲಿನ ಊಟದ ನನ್ನ ಪಕ್ಕ ಕೂತಿದ್ದ ವಿನಾಯಕನೂ ಗೆಲುವಾಗಿದ್ದ. ಎದುರಿಗಿದ್ದ ರಾಕೇಶ ಗೆಲುವಾಗಿದ್ರೂ ಒಂಭತ್ತರ ಹೊತ್ತಿಗೆ ರೋಹಿತಣ್ಣನಿಗೊಂದು ಚಾಕ್ಕೆ ನಿಲ್ಲಿಸಿದ್ರೆ ಹೆಂಗೆಂಬ ಯೋಚನೆ ಸೆಳೀತು. ಇನ್ನೂ ೧೫೦ ಚಿಲ್ರೆ ಕಿ.ಮೀ ಹೋಗ್ಬೇಕು.ಒಂದು ಚಾ ಇದ್ರೆ ಸ್ವಲ್ಪ ನಿದ್ದೆ ಎಳೆಯೋಲ್ಲ ಅಂತ ಅವನ ಆಲೋಚನೆ. ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟೇ ನಿಲ್ಲಿಸಿದ್ರಾಯ್ತು ಅಂತ ಪ್ರಕಾಶಣ್ಣ. ಹಾಗೇ ಇನ್ನೊಂದು ಸ್ವಲ್ಪ ಮುಂದೆ ಬಂದ ನಾವು ಮುಂದೆ ಸಿಕ್ಕ ಟೋಲ್ ದಾಟಿ ಪಕ್ಕದಲ್ಲಿದ್ದ ಮಲ್ನಾಡ್ ಹೋಟೆಲ್ ಬಳಿ ನಿಲ್ಲಿಸಿದ್ರೂ ಪ್ರಕಾಶಣ್ಣ ಅವರು ಮುಂದೆ ಹೋಗಿದ್ರು. ಅವರು ನಂತರ ಸಿಕ್ಕ ಮಯೂರದ ಹತ್ತಿರ ನಿಲ್ಲಿಸೋ ಹೊತ್ತಿಗೆ ಘಂಟೆ ಸುಮಾರು ಹತ್ತಾಗಿತ್ತು. ಏಳೂವರೆಗೆ ತಿಂದ ರೊಟ್ಟಿ, ದೋಸೆಗಳು ಕರಗಿರಲಿಲ್ಲ. ಆದ್ರೆ ಮೊಸರು, ಮಜ್ಜಿಗೆಯಿಲ್ಲದ ಊಟ ಪೂರ್ಣಗೊಳ್ಳೋದು ಹೇಗೆ ? ಅಂದ ಹಾಗೆ ಏಕಾದಶಿಯಾದ ಅವತ್ತು ನಾವು ಬೆಳಗ್ಗಿನಿಂದ ಊಟ ಮಾಡದೇ ಅದನ್ನು ಆಚರಿಸುವಂತಾಗಿದ್ದು ಕಾಕತಾಳೀಯವಾದ್ರೂ ನಿಜವೇ ! ಅಲ್ಲಿ ಲಸ್ಸಿಯಿರಲಿಲ್ಲ. ಆದ್ರೆ ಮಜ್ಜಿಗೆಯಿತ್ತು. ನಂಗದೇ ಸಾಕಾಯ್ತು. ಉಳಿದವರಿಗೆ ಸಕ್ಕರೆ ಮತ್ತು ಉಪ್ಪು ಬೆರೆತ ಸೋಡಾ. ದ್ರವಾಹಾರಾದ ನಂತರ ಅಲ್ಲಿಂದ ಮುಂದೆ ಹೊರಟೆವು.ನನ್ನ ನೆನಪಿರುವ ಮಟ್ಟಿಗೆ ಹೇಳೋದಾದ್ರೆ ಇದು ಊಟವಿಲ್ಲದೇ ಕಳೆದ ನನ್ನ ಮೊದಲ ಏಕಾದಶಿ !
ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ:
ಅಲ್ಲಿಂದ ಟೋಲ್ಗಳ ದಾಟಿ , ನೆಲಮಂಗಲ ದಾಟಿ ಗೊರಗುಂಟೆ ಪಾಳ್ಯ ಬರೋ ಹೊತ್ತಿಗೆ ಹನ್ನೆರಡಕ್ಕೆ ಎಂಟು ನಿಮಿಷವಿತ್ತಷ್ಟೆ. ಅಲ್ಲಿ ೧೯೪೭ರ ಇದೇ ಸಮಯದಲ್ಲಿ ಮೂಟೆಗಟ್ಟಿರಬಹುದಾದ ಬ್ರಿಟಿಷರ ಬಗ್ಗೆ, ಕೆಲವೇ ನಿಮಿಷಗಳಲ್ಲಿ ಶುರುವಾಗೋ ಸ್ವಾತಂತ್ರ್ಯೋತ್ಸವದ ಸಂಭ್ರಮದ ಬಗ್ಗೆ, ಅದೇ ದಿನ ನಡೆಯುತ್ತಿರೋ ಫ್ರೀಡಂ ಪಾರ್ಕಿನಿಂದ ವಿಧಾನಸೌಧದವರೆಗೆ ನಡೆಯೋ ೩ಕ್.ಮೀ ಓಟದ ಬಗ್ಗೆ ಮಾತುಕತೆ ನಡೆಯುತ್ತಿತ್ತು.ಹೆಂಗಿದೂ ಮಾರತ್ತಳ್ಳಿಯವರೆಗೆ ಬಸ್ ಸಿಗೋಲ್ಲವಂತ ಖಚಿತವಾಗಿದ್ದ ನಾನು ರೋಹಿತಣ್ಣನ ರೂಮಲ್ಲೋ ಪ್ರಕಾಶಣ್ಣನ ಮನೇಲೋ ಉಳಿಯೋದಂತ ನಿರ್ಧಾರವಾಗಿತ್ತು.ಆದ್ರೆ ವಿನಾಯಕ ಮತ್ತವನ ತಂಗೀನ ರಾಜಾಜಿನಗರದಲ್ಲಿನ ಅವರ ಮನೆಗೆ ಬೀಳ್ಕೊಡಬೇಕಿತ್ತು. ಬೆಳಬೆಳಗ್ಗೆ ಆಫೀಸಿಗೆ ಹೊರಡಬೇಕಿದ್ದ ಪ್ರಕಾಶಣ್ಣನ ಮುಂದೆ ಕಳಿಸಿ ನಾವು ರಾಜಾಜಿನಗರ ಕಡೆ ಹೊರಟ್ವಿ. ಇನ್ನೇನು ಹನ್ನೆರಡಕ್ಕೆ ಮೂರು ನಿಮಿಷವಿರುವಷ್ಟರಲ್ಲಿ ಆಗಸ್ಟ್ ಹದಿನೈದಕ್ಕೇ ಹುಟ್ಟಿದ ಇಂಜಿನಿಯರಿಂಗ್ ಗೆಳೆಯ ರಕ್ಷಿತ್ ಮತ್ತು ಮಿಡ್ಲ್ ಸ್ಕೂಲ್ ಕ್ಲಾಸ್ ಮೇಟ್ ರೇಷ್ಮಾನ ಬರ್ತಡೇಗಳ ನೆನಪಾಗಿ ಅವರಿಗೆ ವಿಷ್ ಮಾಡಾಯ್ತು. ಇನ್ನೇನು ಹನ್ನೆರಡು ಹೊಡೆಯುವಷ್ಟರಲ್ಲಿ ರಾಜಾಜಿನಗರ ತಲುಪಿದ್ವಿ. ಅಲ್ಲಿ ನೋಡಿದ್ರೆ ಒಂದಿಷ್ಟು ಜನಗಳ ಗುಂಪು, ಮಧ್ಯದಲ್ಲೊಂದು ರಾಷ್ಟ್ರಧ್ವಜ. ಹೊರಟ ಬ್ರಿಟಿಷರಿಗೆ ಬಾಯ್ ಮಾಡಿ ಉಳಿದವರು ಸ್ವತಂತ್ರ ಭಾರತದ ಧ್ವಜಾರೋಹಣ ನೊಡೋಕೆ ಬರ್ತಿದ್ರೇನೋ ಇಷ್ಟೊತ್ತಿಗೆ ಅಂದ್ಕೊಳ್ತಿದ್ದ ನಮಗೆ ಅಂತದ್ದೊಂದು ಸಂದರ್ಭ ಎದುರಾಗ್ಬೇಕೇ ? ಏನೋ ನಡೀತಿದೆ ಇಲ್ಲಿ, ನೋಡೋಣ ಅಂತ ರೋಹಿತಣ್ಣ ಕಾರು ನಿಲ್ಲಿಸಿದ. ನೋಡಿದ್ರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಹೊತ್ತಿಗೇ ಧ್ವಜಾರೋಹಣ ಮಾಡೋಕೆ ಅಲ್ಲೊಂದು ಉತ್ಸಾಹಿ ಗುಂಪು ರೆಡಿಯಾಗಿತ್ತು. ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿಗಳು ರಾಷ್ಟ್ರಧ್ವಜ ಹಾರಿಸೋ ಮೊದಲು ನಾವು ರಾಷ್ಟ್ರಧ್ವಜ ಹಾರಿಸೋ ಹಾಗಿಲ್ಲ ಎಂಬ ನಂಬಿಕೆ ಇದ್ರೂ ಡಿಸೆಂಬರ್ ಮೂವತ್ತೊಂದರ ಮಧ್ಯರಾತ್ರಿ ಹೊಸವರ್ಷ ಮಾಡೋದಾದ್ರೆ ಆಗಸ್ಟ್ ಹದಿನಾಲ್ಕರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭವನ್ನು ಏಕೆ ಆಚರಿಸಬಾರದು ಎಂಬ ಈ ಯುವಕರ ಆಲೋಚನೆಯೂ ಯಾಕಾಗಬಾರದು ಎನಿಸುವಂತೆ ಮಾಡಿದ್ದು ಸುಳ್ಳಲ್ಲ. ಅಲ್ಲಿ ಜನಗಣಮನ ಹಾಡುವ ಮೈಪುಳಕವನ್ನು ಅನುಭವಿಸಿ ವಿನಾಯಕನ ಮನೆಗೆ ತೆರಳಿ ಅವರಿಬ್ಬರನ್ನೂ ಡ್ರಾಪ್ ಮಾಡಿ ಗಿರಿನಗರದತ್ತ ಹೊರಳಿದೆವು
Midnight Independence day celebration at Rajaji Nagar, Phase 1 |
ಅಂತೂ ಅವರ ಮನೆ ತಲುಪೋ ಹೊತ್ತಿಗೆ ೧೨:೨೦. ಮಾರನೇ ದಿನ ಬೆಳಗೆದ್ದು ಅಲ್ಲೇ ತಿಂಡಿ ತಿಂದು ಸಿಲ್ಕ್ ಬೋರ್ಡ್ ಬಸ್ ಹತ್ತಿದ್ರೂ ಹಿಂದಿನ ದಿನದ ನಿದ್ದೆ ಕಣ್ಣೆಳೆಯುತ್ತಿತ್ತು. ಇಂದು ಸಂಜೆಯಾಗಿ ರಾತ್ರಿಯಾದ್ರೂ ಹಿಂದಿನ ದಿನದ ನೆನಪು ಕಣ್ಣಿಗೆ ಕಟ್ಟಿದಂತೆ ಇನ್ನೂ ಕಾಡುತ್ತಲೇ ಇದೆ. ನನ್ನಿಂದಾಗದು ಅಂದ್ಕೊಂಡ ಟ್ರಿಪ್ಪೊಂದು ಸಾಧ್ಯವಾಗಿತ್ತು. ನಿರೀಕ್ಷೆಯೇ ಇಲ್ಲದಿದ್ದವರ, ವರ್ಷಗಳಿಂದ ಭೇಟಿ ಕೊಡದಿದ್ದವರ ಮನೆಗೆ ಭೇಟಿ ಕೊಟ್ಟಿದ್ದು, ಮಧ್ಯರಾತ್ರಿಯಲ್ಲೊಂದು ಧ್ವಜಾರೋಹಣಕ್ಕೆ ಸಾಕ್ಷಿಯಾಗಿದ್ದು,ಖಾಲಿಯಿದ್ದ ಬ್ಲಾಗಿಗೊಂದು ಪ್ರವಾಸ ಕಥನವೊಂದನ್ನು ತುಂಬಿದ್ದು ಎಲ್ಲಾ ಸಾಧ್ಯವಾದ ಈ ಎಪ್ಪತ್ತನೇ ಸ್ವಾತಂತ್ರ್ಯ ದಿನ ನನಗೆಂತೂ ಸ್ಮರಣೀಯ. ಅದೇ ಮಧುರ ನೆನಪುಗಳಲ್ಲೊಂದು ವಿರಾಮ..
No comments:
Post a Comment