Train timings for Katpadi from Bengaluru |
ತಿರುಪತಿ ಟ್ರೇನಲ್ಲಿ ಉಪವಾಸಯೋಗ:
ವೆಲ್ಲೂರಿಗೆ ಹೋಗೋಕೆ ನೇರ ಟ್ರೇನ್ಗಳಿಲ್ಲದಿದ್ದರೂ ಬೆಂಗಳೂರಿನಿಂದ ೨೧೦ ಕಿ.ಮೀ ದೂರವಿರೋ ಕಟ್ಪಾಡಿ ಎಂಬಲ್ಲಿಗೆ ಹೋಗಿ ಅಲ್ಲಿಂದ ವೆಲ್ಲೂರಿಗೆ ಹೋಗಬಹುದು. ಅಲ್ಲಿಗೆ ಹೋಗೋಗೆ ಬೆಳಗ್ಗೆ ಆರೂವರೆಗೆ ಅದನ್ನು ಬಿಟ್ಟರೆ ಎಂಟರಿಂದ ಪ್ರತೀ ಕಾಲು ಘಂಟೆಗೆ ಒಂದರಂತೆ ಸೂಪರ್ ಫಾಸ್ಟ್ ರೈಲುಗಳಿವೆ. ಪೀಜಿ ಹುಡುಗ್ರನ್ನೆಬ್ಬಿಸಿಕೊಂಡು ಹೊರಡೋ ಹೊತ್ತಿಗೆ ಏಳೂಹತ್ತಾಗಿತ್ತು. ಎಂದಿನ ಟ್ರಾಫಿಕ್ಕು ವಾರಾಂತ್ಯದಲ್ಲೂ ಇರ್ತಿದ್ದರಿಂದ ಎಂಟರದ್ದಲ್ಲದಿದ್ರೆ ಅದ್ರ ಆಮೇಲಿಂದಾದ್ರೂ ಸಿಗುತ್ತೆ ಅನ್ನೋ ಭಾವದಲ್ಲಿ ಹೊರಟಿದ್ವಿ. ಏಳೂ ಇಪ್ಪತ್ತೈದಕ್ಕೆ ಮಾರತ್ತಳ್ಳಿ ತಲುಪಿ ಅಲ್ಲಿಂದ ಕೆ.ಆರ್ ಪುರಂಗೆ ಬಸ್ ಹತ್ತಿದ ನಾವು ಹದಿನೈದು ನಿಮಿಷಕ್ಕೇ ಅಲ್ಲಿಗೆ ತಲುಪಿ ಬಿಡಬೇಕೇ ? ! ಅಲ್ಲೇ ಹತ್ತಿರದಲ್ಲಿದ ಕೃಷ್ಣ ಟಿಕೇಟ್ ತಗೋಡಿದ್ರಿಂದ ರೈಲಿಗೆ ಕಾದು ಬಂದ ಮೊದಲನೇ ತಿರುಪತಿ ಎಕ್ಸ್ ಪ್ರೆಸ್ಸಿಗೆ ಹತ್ತಿದ್ವಿ. ತಿಂಡಿ ಆಯ್ತಾ ಅಂದ ಕೃಷ್ಣ. ಇನ್ನೂ ಎಂಟು ಗಂಟೆಯಾಗ್ತಾ ಇದೆ ಅಲ್ವೇನೋ ? ಟ್ರೈನಲ್ಲಿ ತಿನ್ನೋಕೇನು ಕಡಿಮೆ ? ಇಡ್ಲಿ ವಡೆ, ದೋಸೆ ಎಲ್ಲಾ ಬರುತ್ತೆ ತಗೋ. ಏನಾದ್ರೂ ತಿಂದ್ರಾಯ್ತು ತಗೋ ಅಂದೆ ನಾನು. ಘಂಟೆ ಎಂಟು ಐದಾಗಿತ್ತು.
ಘಂಟೆ ಎಂಟೂವರೆಯಾಯ್ತು, ಒಂಭತ್ತಾಯ್ತು. ಸ್ಟಾಪೇ ಕೊಡದಂಗೆ ಓಡ್ತಿತ್ತು ಟ್ರೈನು. ಸಿಕ್ಕ ಸೀಟಲ್ಲಿ ಆರಾಮಾಗಿ ಮಲಗೋಣ ಅಂದ್ರೂ ತಿಂಡಿ ತಿಂದೇ ಮಲಗೋಣ ಅಂತನಿಸಿ ಕಣ್ಣು ಇಡ್ಲಿ ದೋಸೆಯವವನ್ನು ಹುಡುಕುತ್ತಿತ್ತು. ಒಂಭತ್ತೂವರೆಯಾಯ್ತು. ಇಡ್ಲಿ ಹೋಗ್ಲಿ ಒಂದು ಟೀ ಕಾಫಿಯವನ ಸುದ್ದಿಯೂ ಇಲ್ಲ ನಾವು ಕೂತ ಅಪಾರ್ಟುಮೆಂಟಲ್ಲಿ. ಹತ್ತಾಗ್ತಾ ಬಂದ್ರೂ ಯಾರ ಸುದ್ದಿಯೂ ಇಲ್ಲ. ಒಂದೆರಡು ಸ್ಟೇಷನ್ನಲ್ಲಿ ನಿಲ್ಲಿಸಿದ್ರೂ ಒಂದೆರಡು ನಿಮಿಷ ಅಷ್ಟೇ ನಿಲ್ಲಿಸ್ತಿದ್ದ ಟ್ರೇನಿಂದ ಇಳಿದು ಏನಾದ್ರೂ ತಗೊಂಡು ಬರೋ ಹೊತ್ತಿಗೆ ಟ್ರೇನೇ ಮಿಸ್ಸಾದ್ರೇ ಅನ್ನೋ ಭಯದಲ್ಲಿ ಇಳಿಯೋಕೇ ಮನಸ್ಸು ಬರ್ತಿರಲಿಲ್ಲ. ತಿರುಪತಿಗೆ ಹೋಗೋ ಟ್ರೈನಾದ್ರೂ ಅದ್ರಲ್ಲಿರೋರೆಲ್ಲಾ ಮಡಿಯಲ್ಲಿರ್ತಾರೆ ಅಂತಲೋ, ಉಪವಾಸ ಮಾಡ್ತಾರೆ ಅಂತಲೋ ರೈಲವ್ರೇನಾದ್ರೂ ಅಂದ್ಕೊಂಡು ಬಿಟ್ಟಿದಾರಾ ಅಂತನಿಸ್ತು.
Katpadi Junction |
ಕಾಟ್ಪಾಡಿಯ ಆಟೋ ಕಾಟವೂ, ಕಿಟಕಿಯಿಲ್ಲದ ಬಸ್ಸಿನೋಟವೂ:
Strange seating arrangements in windowless buses of TamilNadu |
Lowest bus fares. but all in tamil tickets of Vellore Buses |
ಒಬ್ಬನೇ ಆನಂದಣ್ಣನ ಜೊತೆಗೆ ದೆಲ್ಲಿ, ಮೀರತ್ತುಗಳಿಗೆ ಹೋಗಿದ್ರೂ, ಗೆಳೆಯರ ಜೊತೆ ಕೇರಳ ಸುತ್ತಿದ್ರೂ ಈ ತರದ ವಿಚಿತ್ರ ಭಾವ ಕಾಡ್ತಿರಲಿಲ್ಲ. ಪ್ರಾಯಶಃ ತಮಿಳರು ಅಂದ್ರೆ ನೀರಿಗಾಗಿ ಹೊಡೆದಾಡೋರು, ಒಂದು ಲುಂಗಿ ಸುತ್ಕೊಂಡು, ಅಮ್ಮಾ ಜಪ ಮಾಡ್ತಾ , ತಮಿಳು ರಾಷ್ಟ್ರಂ ಅನ್ಕೊಂಡು ಬೇರ್ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದೋರು ಅನ್ನೋ ನಮ್ಮ ಮೀಡಿಯಾಗಳಲ್ಲಿ ಕೇಳಿದ್ದ ಮಾತುಗಳೇ ನನ್ನಲ್ಲೊಂದು ಆಜ್ಞಾತಭಾವವನ್ನುದಯಿಸಿತ್ತು ಅನ್ನಿಸುತ್ತೆ. ಹಂಗೇ ಬಸ್ಟಾಂಡಂತ ಗೊತ್ತಿಲ್ಲದ ಬಸ್ಟಾಂಡಿಗೆ ಬರೋ ಹೊತ್ತಿಗೆ ಹಸಿರು ಬಸ್ಸೊಂದು ಬಂದು ಹೊರಡೋದ್ರಲ್ಲಿದ್ದು ನಮ್ಮನ್ನು ನೋಡಿ ನಿಲ್ಲಿಸ್ತು. ತಮಿಳುನಾಡಿನ ಬಸ್ಸುಗಳು ಹಸಿರು ಕಲರ್ ಯಾಕಿರುತ್ತೆ ಅಂತ ಕೇಳಿದ್ದಕ್ಕೆ ನಮ್ಮಾಫೀಸಿನ ತಮಿಳು ಬಾಲೆಯೊಬ್ಳು "ಅಮ್ಮಾ ಹಸಿರು ಸೀರೆಯನ್ನ ಹೆಚ್ಚಾಗಿ ಉಡ್ತಾರೆ. ಹಂಗಾಗಿ ಬಸ್ಸುಗಳಿಗೆ ಹಸಿರು ಕಲರ್" ಅಂತ ಉತ್ತರಿಸಿದ್ಲು ! ಅವ್ಳ ಉತ್ರದಷ್ಟೇ ಶಾಕಿಂಗ್ ಅಲ್ಲಿನ ಬಸ್ಸುಗಳು. ನಯಾಪೈಸೆ ಇಂಗ್ಲೀಷಿಲ್ಲದ ಪಕ್ಕಾ ಜಿಲೇಬಿ ಬೋರ್ಡುಗಳವು .ಹಂಗಿದ್ರೂ ನಾವು ಹೋಗ್ಬೇಕಾಗಿರೋ ಜಾಗದ ಬಗ್ಗೆ ಆ ಕಂಡಕ್ಟರತ್ರ ಕೇಳಿ ಬಸ್ಸು ಹತ್ತಿದ್ವಿ. ಅಲ್ಲಿನ ಇಂಗ್ಲೀಷ್ ಬಾರದ, ಬಂದರೂ ಮಾತನಾಡದ ತಮಿಳು ಕಂಡಕ್ಟರತ್ರ ಗೋಲ್ಡನ್ ಟೆಂಪಲ್ಲಿಗೆ ಹೋಗುತ್ತಾ ಇದು ಅಂತ ಹೆಂಗೆ ಕೇಳಿದ್ರಿ ಅಂದ್ರಾ ? ಗೋಲ್ಡನ್ ಟೆಂಪಲ್ ಅಂದ್ವಿ. ಹೂಂ, ಹೂಂ ಅಂದ ಅವ. ಹತ್ತಿ ಕೂತ್ವಿ !
ಗೋಲ್ಡನ್ ಟೆಂಪಲ್ಲಿಗೆ ಹೆಂಗೆ ಹೋಗೋದಪ್ಪ ಅಂತ ನಾವು ಕನ್ನಡದಲ್ಲೇ ಮಾತಾಡಿಕೊಳ್ತಿದ್ದನ್ನ ಕೇಳಿದ ಬಸ್ಸಲ್ಲಿದ್ದವನೊಬ್ಬ ವೆಲ್ಲೂರಿನ ಹೊಸ ಬಸ್ಟಾಂಡಲ್ಲಿ ಇಳ್ಕೊಳ್ಳಿ . ಅಲ್ಲಿಂದ ಬಸ್ಸುಗಳು ಸಿಗುತ್ತೆ ಅಂದ. ತಗಳ್ಳಪ್ಪ. ಇದು ನಮಗೆ ಅಲ್ಲಾದ ಮೊದಲ ಅಚ್ಚರಿ. ಅಲ್ಲಿನ ಬಸ್ಸುಗಳಲ್ಲಿನ ಹಳದಿ ಬೋರ್ಡು, ಬಿಳಿ ಬೋರ್ಡು, ನೀಲಿ ಬೋರ್ಡು ಅಂತ ಮೂರು ತರ ಇರುತ್ತೆ ಅಂತ ಕೃಷ್ಣ ಹೇಳ್ತಿದ್ದ. ಅಂದಂಗೆ ಈ ಹಸಿರು ಬಣ್ಣದ ನೀಲಿ ಟಿಕೇಟಿನ ಬಸ್ಸಲ್ಲಿ ವೆಲ್ಲೂರಿಗೆ ಹೋಗಲು ತಲಾ ೪ ರೂನ ಟಿಕೇಟ್ ! ೧೧:೪೫ಕ್ಕೆ ಹೊಸ ಬಸ್ಟಾಪಿಗೆ ನಮ್ಮನ್ನು ತಲುಪಿಸಿದ ಆ ಬಸ್ಸಿಗೆ ಕಿಟಕಿಗಳಿಲ್ದಿದ್ರೂ ಇಲ್ಲಿನ ಪ್ರಯಾಣದರ ಸಖತ್ ಚೀಪ್ ಗುರು ಅನಿಸಿದ್ದು ಸುಳ್ಳಲ್ಲ. ಅಂದಂಗೆ ಅಲ್ಲಿನ ವಿಚಿತ್ರ ಸೀಟಿಂಗುಗಳನ್ನ ನೋಡೇ ಆನಂದಿಸಬೇಕು !
At Vellore new Bus stop |
ಬಂಗಾರುಗುಡಿಯತ್ತ ಬೆಂಗ್ಳೂರ್ ಬಾಲರು:
ಮುಖ್ಯ ಬಸ್ಟಾಂಡ್ ದಾರಿಯನ್ನ ತೋರಿಸಿ ನಮಗೆ ಅಲ್ಲಿಂದ ಬಸ್ ಹತ್ಕೊಂಡು ಹೋಗಿ ಎಂದವನು ಯಶವಂತಪುರದವನಂತೆ. ಬಸ್ಟಾಂಡಿಗೆ ಬಂದ್ವಿ. ಆದ್ರೆ ಅಲ್ಲಿನ ಪ್ರವೇಶದ್ವಾರದಿಂದ ಹಿಡಿದು ಹೊರಗೆ ಬರ್ತಿದ್ದ ಬಸ್ಸುಗಳವರೆಗೆ ಎಲ್ಲೆಡೆ ಸಂಖ್ಯೆಯನ್ನೂ ಸೇರಿಸಿ ಎಲ್ಲಾ ತಮಿಳು ಮಯ. ಒಂದ್ಕಡೆ ಬಸ್ಸುಗಳು ಹೋಗ್ತಾ ಇದ್ರೆ ಇನ್ನೊಂದು ಕಡೆ ಚಪ್ಪಲಿ, ಮಕ್ಕಳಾಟಿಕೆ ಮಾರೋ ಅಂಗಡಿಗಳು ! ಎಲ್ಲಾದ್ರೂ ವಿಚಾರಣೆಗೆ ಇರಬಹುದು ಅಂದ್ಕೊಂಡು ಬರುತ್ತಿದ್ದ ಬಸ್ಸುಗಳ ಜಾಡು ಹಿಡಿದು ಒಳಗೆ ಹೊರಟ್ವಿ. ಒಳಗೆ ಹೋಗ್ತಿದ್ದಂಗೇ ಪ್ಲಾಟ್ ಫಾರಂ ೧, ಬಂಗಾರುಗುಡಿ ಅಂತ ಕನ್ನಡದಲ್ಲೂ ಅದರ ಮೇಲೆ ಗೋಲ್ಡನ್ ಟೆಂಪಲ್ ಅಂತ ಇಂಗ್ಲೀಷಿನಲ್ಲೂ ಬೋರ್ಡ್ ಕಂಡು ನಮ್ಮ ಖುಷಿಗೆ ಪಾರವೇ ಇಲ್ಲದಂಗಾಗಿತ್ತು. ತಮಿಳುನಾಡಿಗೆ ಬರ್ತಿರೋ ನಮ್ಮ ಸ್ವಾಗತಕ್ಕಂತ್ಲೇ ಈ ಬೋರ್ಡ್ ಹಾಕಿದ್ದಾರಾ ಅಂತಂದ್ಕೊಂಡು ಹತ್ತಿರ ಹೋಗಿ ನೋಡಿದ್ರೆ ಆ ಬೋರ್ಡಿದ್ದಿದ್ದು ತೆಲುಗಲ್ಲಿ ! ಅಲ್ಲಿ ಬೋರ್ಡಿತ್ತೇ ಹೊರತು ಯಾವ ಬಸ್ಸುಗಳೂ ಇರ್ಲಿಲ್ಲ. ಸುತ್ತಮುತ್ತ ಇದ್ದ ಕೆಲವು ಬಸ್ಸುಗಳ ಕಂಡಕ್ಟರನ್ನ ಇಂಗ್ಲೀಷಲ್ಲಿ ಕೇಳಿದ್ರೂ ಅವ್ರು ನಾವು ಚೆನ್ನೈಗೆ ಹೋಗ್ತಾ ಇದೀವಿ. ಬಂಗಾರುಗುಡಿ ಬಸ್ಸಿನ ಬಗ್ಗೆ ಗೊತ್ತಿಲ್ಲ ಅಂತ ತಮಿಳಲ್ಲೇ ಹೇಳಿದ್ದನ್ನ ಕಷ್ಟಪಟ್ಟು ಅರ್ಥಮಾಡಿಕೊಂಡ್ವಿ. ಜೊತೆಗೆ ಅಲ್ಪಸ್ವಲ್ಪ ತಮಿಳು ಬರ್ತಿದ್ದ ಕೃಷ್ಣ ಇದ್ದಿದ್ದು ಸ್ವಲ್ಪ ಹೆಲ್ಪಾಯ್ತು.
View of Vellore Bus stop |
ನಾವು ಬಾಲ ಸುಟ್ಟುಕೊಂಡ ಬೆಕ್ಕಿನ ತರ ಅತ್ತಿಂದಿತ್ತ ಓಡಾಡ್ತಿರೋದನ್ನ ನೋಡಿದ ಒಬ್ಬ ಮೊದಲ ಬೋರ್‍ಡಿದ್ದಲ್ಲಿಗೆ ಬಂದ.ಗೋಲ್ಡನ್ ಟೆಂಪಲ್ ಗೋಲ್ಡನ್ ಟೆಂಪಲ್ ಅಂದ. ನಮ್ಮ ವೇಷಭೂಷಣಗಳನ್ನ, ಬ್ಯಾಗನ್ನು ನೋಡಿ ಯಾರೋ ಟೂರಿಸ್ಟ್ ಅಂತ ಕಂಡುಹಿಡಿದಿದ್ದ ಅವ ಬ್ಲೂ ಬಸ್ ಬ್ಲೂ ಬಸ್ . ಲಾಸ್ಟ್ ಅಂತಂದ ತನ್ನ ತಮಿಳಲ್ಲಿ ಹರುಕುಮುರುಕು ಇಂಗ್ಲೀಷ್ ಬೆರೆಸುತ್ತಾ. ಹಸಿರು ಸರ್ಕಾರಿ ಬಸ್ಸುಗಳನ್ನು ದಾಟಿ ನಿಂತಿದ್ದ ಖಾಸಗಿ ಕಲರ್ ಕಲರ್ ಬಸ್ಸುಗಳತ್ತ ಹೆಜ್ಜೆ ಹಾಕಿದ್ವಿ. ಅಲ್ಲಿನ ಕೊನೆಯಲ್ಲೊಂದು ಗೋಲ್ಡನ್ ಟೆಂಪಲ್ ಅಂತ ಇಂಗ್ಲೀಷಲ್ಲಿ ಬೋರ್ಡ್ ಹಾಕಿದ್ದ ಬಸ್ ನಿಂತಿತ್ತು. ಅದೇ ಬಸ್ಸಿರಬಹುದು ಅಂತ ಅದರೊಳಗೆ ಆಗಲೇ ಕೂತಿದ್ದ ಜನರನ್ನು ನೋಡಿ ಅಂದ್ಕೊಳ್ತಾ ಹತ್ತೋಕೆ ಹೋದ್ರೆ ಅದು ಹಳದಿ ಬಸ್ಸು. ಅವ ಇದಕ್ಕೇ ಬ್ಲೂ ಅಂದನೇ ಅಂದ್ಕೊಳ್ಳೋವಷ್ಟರಲ್ಲಿ ಪಕ್ಕದಲ್ಲೊಂದು ಬ್ಲೂ ಬಸ್ ಬಂದು ನಿಂತು. ಅದರೊಳಗೆ ನಮಗೆ ಬ್ಲೂ ಬಸ್ ಅಂದವನೇ ಕಂಡಕ್ಟರ್.ಮುಂಚೆ ನಿಂತಿದ್ದ ಬಸ್ಸಿಗಿಂತ ಇದೇ ಮೊದಲು ಹೊರಡೋ ತರ ಇದ್ದಿದ್ರಿಂದ ಇದಕ್ಕೇ ಹತ್ತಿದ್ವಿ. ನಮ್ಕಡೆ ಹಿಂಗೆ ಒಂದು ಬಸ್ ನಿಂತಿರುವಾಗ ಬರೋ ಮತ್ತೊಂದು ಬಸ್ಸು ತಾನೇ ಬೇಗ ಹೊರಟ್ರೆ ದೊಡ್ಡ ಜಗಳಗಳೇ ಆಗಬಹುದೇನೋ. ಆದ್ರೆ ಇಲ್ಲಿ ಹಂಗೇನೂ ಆಗಲಿಲ್ಲ. ಇಲ್ಲಿಂದ ಬಂಗಾರುಗುಡಿಗೆ ೮.೫ ಕಿ.ಮೀ ದೂರ.ಸಮಯ ೧೧:೫೦.
ಈ ಬಸ್ಸಲ್ಲಿ ಜನರನ್ನು ದೊಡ್ಡಿಯ ತರ ತುಂಬೋಕೆ ಶುರು ಮಾಡಿದ್ರು. ಹೊತ್ತೇರುತ್ತಿದ್ದಂಗೆ ಸೆಖೆ ಇನ್ನೂ ಕಾಡೋಕೆ ಶುರು ಆಯ್ತು. ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು ತಡೆಯೋದ್ರಲ್ಲಿ ಸುಸ್ತಾದ ಕರ್ಚೀಫು ಒದ್ದೆಮುದ್ದೆಯಾಗಿತ್ತು. ಹಾಗೇ ಸ್ವಲ್ಪ ಮುಂದೆ ಬರ್ತಿದ್ದಂಗೆ ವೆಲ್ಲೂರು ಕೋಟೆಯ ದರ್ಶನವಾಗುತ್ತೆ ನಮ್ಮ ಬಲಬದಿಗೆ. ಬೆಳಗ್ಗೆ ಬಂದವರು ಮೊದಲು ವೆಲ್ಲೂರು ಕೋಟೆಯನ್ನ ನೋಡ್ಕೊಂಡು ಆಮೇಲೇ ಗೋಲ್ಡನ್ ಟೆಂಪಲಿನತ್ತ ತೆರಳಬಹುದು. ಕೋಟೆಗೆ ಪ್ರವೇಶದ್ವಾರಗಳೇನೂ ಇಲ್ಲದೇ ಇದ್ದು ಸಂಜೆ ಆರಕ್ಕೇ ಬಂದಾಗುತ್ತೆ ಅಂತೇನೂ ಇಲ್ಲದಿದ್ರೂ ಅಲ್ಲಿನ ಕೋಟೆಯ ಮೇಲ್ಗಡೆ, ಮ್ಯೂಸಿಯಂಗೆ ಹೋಗೋ ರಸ್ತೆಯಲ್ಲಿನ ಹೆಚ್ಚಿನ ಲೈಟುಗಳೇನೂ ಇಲ್ಲದ್ದರಿಂದ ಬೆಳಕಿದ್ದಂತೇ ಅಲ್ಲಿಗೆ ಹೋಗೋದು ಕ್ಷೇಮ. ಗೋಲ್ಡನ್ ಟೆಂಪಲ್ ರಾತ್ರೆ ಎಂಟೂವರೆ ಒಂಭತ್ತರವರೆಗೂ ತೆಗೆದಿರುತ್ತೆ. ಇನ್ನು ಇಲ್ಲಿನ ಬಸ್ಸುಗಳಲ್ಲಿದ್ದ ಮ್ಯೂಸಿಕ್ಕಿನ ಬಗ್ಗೆ ಹೇಳದಿದ್ರೆ ಹೆಂಗೆ ? ನಾವು ಏನನ್ನ ಅಪಸ್ವರ ಅಂತಂದುಕೊಳ್ತಿದ್ವೋ ಅದೇ ಮ್ಯೂಸಿಕ್ಕು ಅಲ್ಲಿ ! ಕುಯ್ ಕುಯ್ ಕುಯ್ ಅಂತ ಶುರುವಾಗೋ ಹಾಡ ಮಧ್ಯದಲ್ಲೊಂದು ಕಡೆ ಫುಲ್ ಬೀಟ್. ಆ ಕುಯ್ ಕುಯ್ ಅನ್ನೋದೇ ಚರಣ ಕೊನೆಗೆ ! ನಾಲ್ಕೈದು ಹಾಡುಗಳಾಗ್ತಿದ್ದ ಹಾಗೆ ಆ ಅಬ್ಬರವೇ ಒಂಥರಾ ಇಷ್ಟವಾಗೋಕೆ ಶುರುವಾಗಿತ್ತು ನಮಗೆ.
ಬಂಗಾರದ ಗುಡಿಯಲ್ಲಿ ನಾವು:
A view of the Entrance of Golden temple |
ಬಂಗಾರಗುಡಿಯನ್ನು ತಲುಪೋ ಹೊತ್ತಿಗೆ ಮಧ್ಯಾಹ್ನ ೧೨:೩೦. ತಿಂಡಿಯಿಲ್ಲದ ನಾನು ಮೊದಲು ಸ್ಥಳ ನೋಡೋಣ. ಆಮೇಲೆ ತಿಂಡಿ , ಊಟ ಎರಡೂ ಮಾಡಿದ್ರಾಯ್ತು ಅಂತ್ಕೊಂಡು ಬಂದಿದ್ದು ಒಳ್ಳೇದೇ ಆಯ್ತು ಅಂತ ಹೆಚ್ಚೇನೂ ರಶ್ಷಿಲ್ಲದ ಆ ಸ್ಥಳವನ್ನು ನೋಡಿದಾಗ ಅನಿಸ್ತು. ಇಲ್ಲೊಂದಿಷ್ಟು ಶಿಸ್ತಿದೆ, ವಿಚಿತ್ರ ಸುಲಿಗೆಗಳಿವೆ. ಮೊದಲನೆಯದಾಗಿ ಎಲ್ಲಾ ದೇವಸ್ಥಾನಗಳಲ್ಲಿ ಚಪ್ಪಲಿಯಿಡೋಕೆ ಸ್ಟಾಂಡಿರುತ್ತೆ, ಇಲ್ಲಾ ಒಂದು ಸಿಮೆಂಟ್ ಚೀಲ ಕೊಡ್ತಾರೆ. ಅದರೊಳಗೆ ನಮ್ಮ ಚಪ್ಪಲಿ ಹಾಕಿ ಕೊಡ್ತೀವಲ್ವಾ ?ಇಲ್ಲಿ ಹಂಗಲ್ಲ. ಅದಕ್ಕೇ ಅಂತ್ಲೇ ಮೂರು ರೂ ಕೊಟ್ಟು ದೊಡ್ಡ ಕವರ್ರೋ, ೨ ರೂ ಕೊಟ್ಟು ಸಣ್ಣ ಕವರ್ರೋ ತಗೋಬೇಕು. ನಾವು ನಾಲ್ಕು ಜನರಿದ್ದ ಕಾರಣ ಮೂರರ ದೊಡ್ಡ ಕವರ್ರೇ ತಗೊಂಡು ಚಪ್ಪಲಿ ಸ್ಟಾಂಡಲ್ಲಿ ಚಪ್ಪಲಿಗೆ ಮತ್ತೆ ದುಡ್ಡು ಕೊಟ್ಟು ಮುಂದೆ ನಡೆದ್ವಿ. ದೇವಸ್ಥಾನದೊಳಗೆ ಮೊಬೈಲು, ಬ್ಯಾಗು,ಕ್ಯಾಮೆರಾ ಏನೂ ತಗೊಂಡು ಹೋಗೋ ಹಾಗಿಲ್ಲ. ವ್ಯಾಲೆಟ್, ಪರ್ಸನ್ನು ಒಯ್ಯಬಹುದು ! ಬಂಗಾರದ ಶೀಟುಗಳಲ್ಲಿ ಮಾಡಿದ ದೇಗುಲವಲ್ಲವೇ. ಹಾಗಾಗಿ ಅದರ ಸುರಕ್ಷತೆಗಾಗಿ ಇದನ್ನು ಮಾಡಬೇಕಿದ್ದೆ. ಆದ್ರೆ ಇಲ್ಲಿ ಮತ್ತೊಂದು ವಿಚಿತ್ರ. ಬ್ಯಾಗಿಗೆ ಬೇರೆ ದುಡ್ಡು. ಬ್ಯಾಗನ್ನು ಕೊಟ್ಟ ನಂತರ ಮರೆತೋದ ಫೋನನ್ನು ಅದರೊಳಗೇ ಇಟ್ಟು ಕೊಡ್ತೀನಿ ತಡೀರಪ್ಪ ಅಂದ್ರೆ ಅದಕ್ಕೆ ಅವಕಾಶವಿಲ್ಲ. ಅದಕ್ಕೆ ಪ್ರತ್ಯೇಕ ೩ ರೂ ಚಾರ್ಚ್. ಸಾಮಾನ್ಯ ಪ್ರವೇಶ ಫ್ರೀ. ವಿಶೇಷ ಪ್ರವೇಶಕ್ಕೆ ೨೫೦ ರೂ. ಸಾಮಾನ್ಯ ಪ್ರವೇಶದವರನ್ನು ಚೆಕಿಂಗ್ ಮಾಡೋ ಜಾಗದಲ್ಲೊಂದು ಮೊಬೈಲ್ ಹುಂಡಿ. ಅಲ್ಲಿ ಮೊಬೈಲ್ ಇಡೋದಾದ್ರೆ ೫ ರೂ. ವಿಶೇಷ ಪ್ರವೇಶದವರು ನಮ್ಮೊಂದಿಗೆ ಸೇರಿಕೊಳ್ಳುವ ಜಾಗದಲ್ಲೆಲ್ಲಾ ಮತ್ತೆ ಚೆಕ್ಕಿಂಗ್. ಮುಂದೆ ಹೋದಂತೆಲ್ಲಾ ಮೊಬೈಲ್ ಹುಂಡಿಯ ಡಿಪಾಸಿಟ್ ಚಾರ್ಚೂ ಜಾಸ್ತಿ. ಹೆಚ್ಚೆಂದರೆ ೧೦ ರೂ ಅನ್ನೋದೇ ಸಮಾಧಾನಕರ.
ಮಹಿಳೆಯರು, ಮಹನೀಯರಿಗೆಂದೇ ಪ್ರತ್ಯೇಕ ಲೈನುಗಳಿರೋ ಇಲ್ಲಿ ಮಳೆ,ಬಿಸಿಲಿಂದ ರಕ್ಷಣೆ ನೀಡೋ ಶೀಟುಗಳ ವ್ಯವಸ್ಥೆಯಿದೆ. ಒಮ್ಮೆಗೇ ರಶ್ಶಾಗದಂತೆ ತಡೆಯೋಕೆ ಜನರನ್ನ ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ಕೂರಿಸುವ ಆರು ಕೊಠಡಿಗಳಿವೆ. ಸರದಿಯ ಮೇಲೆ ಈ ಕೊಠಡಿಗಳಿಗೆ ಜನರನ್ನು ಬಿಡಲಾಗುತ್ತೆ ಮತ್ತು ಹದಿನೈದರಿಂದ ಇಪ್ಪತ್ತು ನಿಮಿಷದ ನಂತರ ಹೊರಬಿಡಲಾಗುತ್ತೆ. ಮೊದಲ ಮೂರು ಕೊಠಡಿಗಳಲ್ಲೂ ಕೆಫೆ ಡೇಯ ಟೀ ಕಾಫಿ, ಅಮೂಲಿನ ಐಸ್ ಕ್ರೀಂ. ಪಾಪ್ ಕಾರ್ನ್ ಎಲ್ಲಾ ಸಿಗುತ್ತೆ. ಶೌಚಾಲಯಗಳ ವ್ಯವಸ್ಥೆಯೂ ಇದೆ. ನಂತರದ ಮೂರು ಕೋಣೆಗಳಲ್ಲಿ ಶೌಚಾಲಯಗಳಿದ್ದರೂ ಅಲ್ಲಿ ಯಾವ ಜನರೂ, ಅಂಗಡಿಗಳೂ ಇರಲಿಲ್ಲ. ಬಹುಷಃ ಹೆಚ್ಚಿನ ಜನ ಬಂದಾಗ ಅವುಗಳನ್ನೂ ಉಪಯೋಗಿಸುತ್ತಾರೆ ಅನಿಸುತ್ತೆ. ಅಲ್ಲಿಂದ ಒಳಹೋಗೋ ಹೊತ್ತಿಗೆ ೧:೧೫
Fully commercialized Golden Temple |
ಶ್ರೀಪುರದ ೧೦೦ ಎಕರೆ ವಿಸ್ತೀರ್ಣದಲ್ಲಿ, ಶ್ರೀ ಲಕ್ಷ್ಮಿ ನಾರಾಯಣಿ ದೇವಸ್ಥಾನವನ್ನು ಆಗಸ್ಟ್ ೨೪, ೨೦೦೭ರಲ್ಲಿ ಸ್ಥಾಪಿಸಲಾಗಿದೆ. ಇದನ್ನು ನಿರ್ಮಿಸಿದ್ದು ಶ್ರೀ ಸಕ್ತಿ ಅಮ್ಮ ಎಂದೇ ಪ್ರಸಿದ್ದವಾಗಿರುವ ಶ್ರೀ ನಾರಾಯಣಿ ಪೀಠದ ಮುಖ್ಯಸ್ಥರಿಂದ. ಇಲ್ಲಿನ ಆನೆಗಳು, ನವಿಲುಗಳು, ಕ್ಯಾಂಡಲಿಯರುಗಳು ಮತ್ತು ಅವುಗಳ ಪ್ರತಿಬಿಂಬವನ್ನು ಕೆಳಗಿನ ನೀರಲ್ಲಿ ನೋಡೋದು ಕಣ್ಣಿಗೊಂದು ಹಬ್ಬ. ದೇಗುಲದ ರಚನೆ ದೇಗುಲ ಶಿಲ್ಪಶಾಸ್ತ್ರಕ್ಕೆ ಸರಿಯಾಗಿದ್ದರೂ ಅದಕ್ಕೆ ಹೋಗಿಬರುವ ಹಾದಿಯಲ್ಲಿ ತಪ್ಪಿಸಿಕೊಳ್ಳಲೇ ಆಗದಂತೆ ಸಿಗುವ ಅಂಗಡಿಗಳು, ಶಾಪಿಂಗ್ ಸೆಂಟರುಗಳು ಕೆಲವರಿಗೆ ಇಷ್ಟವಾಗದೇ ಇರಬಹುದು. ಕಲ್ಲಿನ ದೇಗುಲಗಳ ನೋಡಿ ಅಭ್ಯಾಸವಾಗಿದ್ದವರಿಗೆ ಇಲ್ಲಿನ ಆಡಂಬರ ಹಿಡಿಸದಿರಬಹುದು. ಆದರೂ ಇಲ್ಲಿನ ಶಿಲ್ಪಕಲೆಯನ್ನು ಸವಿಯಲು ಒಮ್ಮೆ ಬಂದು ಹೋಗೋದ್ರಲ್ಲಿ ಯಾವ ತೊಂದರೆಯೂ ಇಲ್ಲ.
ಇಲ್ಲೇ ಮಧ್ಯಾಹ್ನ ೧೨:೩೦ರಿಂದ ೩ರವರೆಗೆ ನಡೆಯುವ ಅನ್ನ ಸಂತರ್ಪಣೆಯ ಕಡೆಗೆ ಹೆಜ್ಜೆ ಹಾಕೋ ಹೊತ್ತಿಗೆ ೨:೪೦. ಅಲ್ಲಿಂದ ಊಟ ಮಾಡಿ, ಅನ್ನ ಸಂತರ್ಪಣೆಗೆ ನಮ್ಮ ಕೈಲಾದ ಸಹಾಯ ಮಾಡಿ ನಮ್ಮ ಬ್ಯಾಗು, ಮೊಬೈಲು ಚಪ್ಪಲಿಗಳನ್ನ ಪಡೆದು ಹೊರಬರುವಷ್ಟರಲ್ಲಿ ೨;೧೫ ಆಗಿತ್ತು. ವೆಲ್ಲೂರಿನ ಕೋಟೆಗೆ ಹೋಗೋ ಬಸ್ಸುಗಳು ನಮಗಾಗಿ ಕಾಯ್ತಿದ್ದವು.
ಮುಂದಿನ ಭಾಗದಲ್ಲಿ: ವೆಲ್ಲೂರು ಕೋಟೆ
No comments:
Post a Comment