ಗೋಲ್ಡನ್ ಟೆಂಪಲ್ಲಿಂದ ಹೊರಟವರು ಸೀದಾ ಕೋಟೆಗೆ ಹೋಗೋದೆಂದು ತೀರ್ಮಾನಿಸಿ ವೆಲ್ಲೂರಿನ ಹಳೆ ಬಸ್ಟಾಂಡ್ ಬಳಿ ಇಳ್ಕೊಳ್ಳುವ ಹೊತ್ತಿಗೆ ೨:೪೦ ಆಗಿತ್ತು. ಅಲ್ಲೇ ಎದುರು ಕಾಣುತ್ತಿದ್ದ ವೆಲ್ಲೂರ ಕೋಟೆ ಹೊಕ್ಕಾಯ್ತು.ಈ ಕೋಟೆ ಸದ್ಯದಲ್ಲಿರೋದು ತಮಿಳುನಾಡಲ್ಲಾದರೂ ಇದನ್ನು ಕಟ್ಟಿದ್ದು ವಿಜಯನಗರದ ಸಾಮಂತರಸನಾದ ಸಿನ್ನ ಬೊಮ್ಮಿ ನಾಯಕನ ಕಾಲದಲ್ಲಿ ಎನ್ನಲಾಗುತ್ತದೆ. ಇದರ ರಚನೆ ೧೬ನೇ ಶತಮಾನದ ಉತ್ತರಾರ್ಧರಲ್ಲಿ ಅಂದರೆ ವಿಜಯನಗರವನ್ನು ಆಳುತ್ತಿದ್ದ ತುಳುವ ವಂಶದ ಕೊನೆಯ ರಾಜ ಸದಾಶಿವರಾಜ(1542–1570) ಮತ್ತು ಅರವೀಡು ವಂಶದ ಮೂರನೆಯ ರಾಜ ಮೊದಲನೆಯ ಶ್ರೀರಂಗಮಹಾರಾಜ(1572–1586)ರ ಕಾಲದಲ್ಲಿ ಆಯಿತೆಂದು ಇಲ್ಲಿನ ಇತಿಹಾಸ ಹೇಳುತ್ತದೆ. ನಂತರ ಆರ್ಕಾಟಿನ ಅರಸನಾದ ಚಂದಾಸಾಹೇಬನ ನೆಂಟನಾದ ಮುರ್ತಾಜ ಅಲಿ ಈ ಕೋಟೆಯನ್ನು ವಶಪಡಿಸಿಕೊಂಡನು ಎನ್ನಲಾಗಿದೆ. ಈ ಕೋಟೆಯ ಒಳಗೆ ಭಾರತೀಯ ಪುರಾತತ್ವ ಇಲಾಖೆಯ ಮ್ಯೂಸಿಯಂ, ಜಲಕಂಠೇಶ್ವರ ದೇವಸ್ಥಾನ, ಚಂದಾಸಾಹೇಬನ ಕಾಲದಲ್ಲಿ ಅಥವಾ ತದನಂತರದಲ್ಲಿ ನಿರ್ಮಿಸಲಾದ ಮಸೀದಿ, ಮಿಲಿಟರಿ ಭರ್ತಿಯ ಕೇಂದ್ರ ಮತ್ತು ಪೋಲೀಸ್ ಕೇಂದ್ರಗಳಿವೆ. ಮಿಲಿಟರಿಯ ಕಟ್ಟಡಗಳು ಪಾಳುಬಿದ್ದು ಯಾವುದೋ ಪಾಳುಕೋಟೆಗೆ ಹೋದ ಭಾವವಿತ್ತರೂ ಜಲಕಂಠೇಶ್ವರ ದೇವಾಲಯದಲ್ಲಿನ ಕುಸುರಿ ಶಿಲ್ಪಗಳನ್ನು ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಸೀದಾ ಮ್ಯೂಸಿಯಂ ಹೊಕ್ಕ ನಾವು ನಂತರ ಜಲಕಂಠೇಶ್ವರ ದೇಗುಲಕ್ಕೂ ತದನಂತರ ಕೋಟೆಯ ಗೋಡೆಗಳ ಮೇಲಿನ ವಿಹಾರಕ್ಕೂ ಹೊರಟೆವು. ಆ ಪಯಣದಲ್ಲಿ ನಮಗೆ ಕಂಡ ದೃಶ್ಯಗಳನ್ನು ಪದಗಳಲ್ಲಿ ಕಟ್ಟಿಡುವ ಪ್ರಯತ್ನವೇ ಇಂದಿನದು.
Jyeshta Statue at the Vellore Musuem |
ವೆಲ್ಲೂರಿನ ಮ್ಯೂಸಿಯಂ:
ಭಾರತೀಯ ಪುರಾತತ್ವ ಇಲಾಖೆಯ ಮ್ಯೂಸಿಯಂ ಅಂದರೆ ಅಲ್ಲಿ ಏನಿಲ್ಲವೆಂದರೂ ೫೦೦, ಸಾವಿರ ವರ್ಷಗಳಷ್ಟು ಹಳೆಯ ವಸ್ತುಗಳನ್ನಿಟ್ಟಿರುತ್ತಾರೆಂದೋ ಅಥವಾ ಆ ಸ್ಥಳದ ಸುತ್ತಮುತ್ತಲ ಸ್ಥಳಗಳಲ್ಲಿ ಉತ್ಖನನದ ಸಮಯದಲ್ಲಿ ದೊರೆತ ವಸ್ತುಗಳನ್ನಿಟ್ಟಿರುತ್ತಾರೆಂದು ಭಾವಿಸುತ್ತೀವಿ. ಆದರೆ ಡೈನೋಸಾರೊಂದು ಸ್ವಾಗತಿಸುವ ರಚನೆಯಿರುವ ಇಲ್ಲಿನ ಮ್ಯೂಸಿಯಂ ಕೊಂಚ ವಿಚಿತ್ರವಾಗಿದೆ. ವಯಸ್ಕರಿಗೆ ೫ ರೂ ಮತ್ತು ಕ್ಯಾಮೆರಾಕ್ಕೆ ೨೦ ರೂ ಚಾರ್ಜಿರುವ ಈ ಮ್ಯೂಸಿಯಂನಲ್ಲಿ ಫೋಟೋಗ್ರಫಿಗೆ ಯಾವ ನಿಷೇಧವೂ ಇಲ್ಲ. ಮುಂಚಿನ ಫೀಸ್ ಕಟ್ಟಿರಬೇಕಷ್ಟೆ. ಸುತ್ತಮುತ್ತಲ ಸ್ಥಳಗಳಲ್ಲಷ್ಟೇ ಅಲ್ಲದೇ ವೆಲ್ಲೂರಿನ ಸಾಧುಪ್ಪೇರಿ ಎಂಬಲ್ಲಿ ಉತ್ಖನನದ ಸಮಯದಲ್ಲಿ ದೊರೆತ "ಜ್ಯೇಷ್ಠ" ಎಂಬ ವಿಗ್ರಹ, ಹಲವಾರು ವೀರಗಲ್ಲುಗಳನ್ನು ಈ ಮ್ಯೂಸಿಯಂ ನ ಹೊರಭಾಗದಲ್ಲಿ ಇಡಲಾಗಿದೆ. ಹೊರಭಾಗದಲ್ಲಿ ಆ ಕಾಲದ ಮದ್ದುಗುಂಡುಗಳನ್ನು, ತುಪಾಕಿಗಳನ್ನೂ ಇಡಲಾಗಿದೆ. ಇಲ್ಲಿನ ಒಳಗಿನ ಹಲವಾರು ವಿಭಾಗಗಳಲ್ಲಿ ಚಿಟ್ಟೆಗಳ ಜೀವನ ಕ್ರಮ, ಹೈನಾ, ತರತರದ ಹಾವುಗಳು, ಹಕ್ಕಿಗಳು, ತೋಳಗಳ ಅಸ್ಥಿಪಂಜರಗಳಿವೆ. ಮತ್ತೊಂದು ವಿಭಾಗದಲ್ಲಿ ಉತ್ತರ ಭಾರತದ ಮತ್ತು ದಕ್ಷಿಣಭಾರತದ ಹಲವು ರಾಜವಂಶಗಳ ನಾಣ್ಯಗಳ ಚಿತ್ರಗಳಿವೆ. ಮಗದೊಂದರಲ್ಲಿ ವೆಲ್ಲೂರಿನ ಸುತ್ತಮುತ್ತಲ ಪ್ರದೇಶಗಳ ಸಂಸ್ಕೃತಿಯನ್ನು ಬಿಂಬಿಸುವಂತೆ ಲಂಬಾಣಿಗರ ಬಟ್ಟೆ, ಯಕ್ಷಗಾನದ ವೇಷಗಳು, ತಮಿಳುನಾಡಿನ ಬಟ್ಟೆಗಳು ಮುಂತಾದವಿದೆ. ಶ್ರೀಲಂಕಾದಲ್ಲಿರುವ ಕ್ಯಾಂಡಿಯ ಕೊನೆಯ ರಾಜ ವಿಕ್ರಮರಾಜ ಸಿಂಹ(1780 – ಜನವರಿ 30, 1832) ಮತ್ತು ರಾಣಿ ಸಾವಿತ್ರಿದೇವಿಯರ ಚಿತ್ರವೂ ಮತ್ತು ಅವರ ಕಾಲದಲ್ಲಿನ ದಂತದ ಚೆಸ್ ಬೋರ್ಡೂ ಇಲ್ಲಿದೆ.
Vikrama Raja simha ,last king of Kandy and Savitri Devri, Last queen of Kandy |
ಯಾರೀ ವಿಕ್ರಮರಾಜ ಸಿಂಹ, ಯಾರೀ ಸಾವಿತ್ರೀ ದೇವಿ ?
ಶ್ರೀಲಂಕಾವನ್ನು ಆಳಿದ ಸಿಂಹಳೀಯ ರಾಜಮನೆತನದ , ಕ್ಯಾಂಡಿವಂಶದ ನಾಲ್ಕು ಅರಸರಲ್ಲಿ ಕೊನೆಯವರು ರಾಜ ವಿಕ್ರಮರಾಜ ಸಿನ್ಹ. ಮಧುರೈನ ರಾಜಮನೆತನದಲ್ಲಿ ಹುಟ್ಟಿದ ವಿಕ್ರಮರಾಜ ಅವರ ಮೊದಲ ಹೆಸರು ಯುವರಾಜ ಕನ್ನಸಾಮಿ. ತನ್ನ ಚಿಕ್ಕಪ್ಪ ಶ್ರೀ ರಾಜಾಧಿ ರಾಜ ಸಿನ್ಹ ಅವರ ನಂತರ ತಮ್ಮ ೧೮ನೇ ವಯಸ್ಸಿನಲ್ಲಿ ಇವರು ಪಟ್ಟಕ್ಕೆ ಬಂದರು. ಆದರೆ ಇವರು ರಾಜಾಧಿ ರಾಜ ಸಿನ್ಹರ ಮಗನಲ್ಲದ ಕಾರಣ ಇವರ ಅಧಿಕಾರ ಸ್ವೀಕಾರ ಅನೇಕರ ಅಸಮಧಾನಕ್ಕೂ ಇವರನ್ನು ಪದಚ್ಯುತಗೊಳಿಸುವ ಪಿತೂರಿಗಳಿಗೂ ನಾಂದಿ ಹಾಡಿತು. ೧೮೧೫ರಲ್ಲಿ ಕ್ಯಾಂಡಿಯನ್ ಕನ್ವೆಂಷನ್ ಮೂಲಕ ೨೩೦೦ ವರ್ಷಗಳ ಸಿಂಹಳೀಯ ರಾಜಮನೆತನದ ಆಳ್ವಿಕೆ ಕೊನೆಗೊಂಡು ಶ್ರೀಲಂಕಾ ಬ್ರಿಟಿಷರ ಅಧೀನವಾಯಿತು ಅನ್ನುತ್ತೆ ಇತಿಹಾಸ. ಆದರೆ ಆಗಿದ್ದೇನಂದರೆ ಮುಂಚಿನಿಂದಲೂ ಶ್ರೀಲಂಕಾ ಮೇಲೆ ಕಣ್ಣಿಟ್ಟಿದ್ದ ಬ್ರಿಟಿಷರು ವಿಕ್ರಮರಾಜ ಸಿನ್ಹರನ್ನು ಪದಚ್ಯುತಗೊಳಿಸಲು ರಾಜವಂಶದಲ್ಲಿ ನಡಿಯುತ್ತಿರುವ ಪಿತೂರಿಗಳನ್ನು ಗಮನಿಸುತ್ತಲೇ ಇದ್ದರು. ಒಪ್ಪಂದದ ನೆವದಲ್ಲಿ ಇವರನ್ನು ರಾಜಕೈದಿಯಾಗಿ ಸೆರೆಹಿಡಿದು ವೆಲ್ಲೂರಿನ ಕೋಟೆಯ ಸೆರೆಮನೆಗೆ ಒಯ್ದರು. ಅಲ್ಲಿ ಅವರು ತಮ್ಮ ಇಬ್ಬ ಪತ್ನಿಯರೊಂದಿಗೆ ಸಿಗುತ್ತಿದ್ದ ಅತ್ಯಲ್ಪ ರಾಜಧನದೊಂದಿಗೆ ಬದುಕಬೇಕಿತ್ತು. ಇವರು ತಮ್ಮ ೫೨ನೇ ವಯಸ್ಸಿನಲ್ಲಿ ಅಂದರೆ ೧೮೩೨ರಲ್ಲಿ ವೆಲ್ಲೂರು ಕೋಟೆಯಲ್ಲಿ ಮೃತರಾದರು.
ಶ್ರೀಲಂಕಾದಲ್ಲಿ ಬೌದ್ದರಿಗೂ, ತಮಿಳರಿಗೂ ನಡೆದ ಘರ್ಷಣೆಗಳ ಬಗ್ಗೆಯೂ ತಿಳಿದೇ ಇದೆ. ಈ ರಾಜಮನೆತನದಲ್ಲೂ ತಮಿಳು ಬೌದ್ಧರಿದ್ದರೆನ್ನುತ್ತೆ ಇತಿಹಾಸ. ವಿಕ್ರಮರಾಜರ ಪತ್ನಿಯರ ಹೆಸರನ್ನೇ ನೋಡಿ. ವೆಂಕಟರಂಗ ರಾಜಮ್ಮಾಳ್ ವೆಂಕಟಮ್ಮ ಮತ್ತು ಮೂಡೂಕುಣಮ್ಮ ವೆಂಕಟಜಮ್ಮಾಳ್.
ಇವರ ಮಕ್ಕಳೆಂದರೆ ರಾಜಾಧಿ ರಾಜಸಿನ್ಹ(ನಿಧನ ೧೮೪೩), ಲೆಟ್ಚುಮಿ ದೇವಿ(ನಿಧನ ೧೮೫೬),ರಾಜ ನಚಿಯಾರ್ ದೇವಿ(ನಿಧನ ೧೮೬೦) .ಇವರಲ್ಲಿ ರಾಜಾಧಿ ರಾಜಸಿನ್ಹನ ಮಡದಿಯೇ ಸಾವಿತ್ರಿ ದೇವಿ
ಹಾಗೇ ಮುಂದುವರಿದರೆ ಬೌದ್ಧ ಬಿಕ್ಷುಗಳ, ದೇವತೆಗಳ, ವಿಗ್ರಹಗಳು, ಸಂಗೀತ ವಾದ್ಯಗಳು ಸಿಗುತ್ತವೆ. ಹಾಗೇ ಮುಂದುವರೆದಂತೆ ಶತಮಾನಗಳ ಹಳೆಯ ಖಡ್ಗಗಳು , ಆಯುಧಗಳು ಸಿಗುತ್ತದೆ. ಇದನ್ನೆಲ್ಲಾ ನೋಡಿ ಹೊರಬರುತ್ತಿದ್ದಂತೆ ಗಣಗಳು, ಮಡಕೆಗಳು, ದುರ್ಗೆ ಮುಂತಾದ ವಿಗ್ರಹಗಳನ್ನು ಕಾಣಬಹುದು
ಜಲಕಂಠೇಶ್ವರ ದೇವಸ್ಥಾನ:
ಮ್ಯೂಸಿಯಂನಿಂದ ಹೊರಬಂದ ನಾವು ಹಾಗೇ ಸ್ವಲ್ಪ ಮುಂದೆ ನಡೆದು ಜಲಕಂಠೇಶ್ವರ ದೇವಸ್ಥಾನದತ್ತ ಸಾಗಿದೆವು. ಇಲ್ಲಿನ ಯುದ್ಢನಿರತ ಯೋಧರ, ಕುದುರೆಸವಾರರ ಕೆತ್ತನೆಗಳು ಮನೋಹರವಾಗಿವೆ.
ದೇಗುಲದ ಆವರಣದಲ್ಲಿ ವೆಲ್ಲಂಪುರಿ ವಿನಾಯಗರ್, ಸೆಲ್ವ ವಿನಾಯಗರ್, ವೆಂಕಟೇಶ್ವರ ಪೆರುಮಾಳ್, ವಲ್ಲಿ ದೇವಸೇನ, ಅಖಿಲಾಂಡೇಶ್ವರಿ ಮುಂತಾದ ಶಿಲ್ಪಗಳನ್ನು ನೋಡಬಹುದು
ವೆಲ್ಲೂರು ಕೋಟೆ
View if Jalakanteshwara temple from the Vellore Fort |
Water Surrounding the Vellore Fort |
ವೆಲ್ಲೂರು ಕೋಟೆಯಿಂದ ಹೊರಬಂದ ನಾವು ವೆಲ್ಲೂರಿನ ಹಳೇಬಸ್ಟಾಂಡಿಗೆ ಬಂದು ಅಲ್ಲಿಂದ ಪಾಂಡಿಚೇರಿ ಅಥವಾ ಎಳಗಿರಿಗೆ ಹೋಗಬಹುದು ಅಂದುಕೊಂಡಿದ್ವಿ. ಆದ್ರೆ ಎಳಗಿರಿಗೆ ನೇರ ಬಸ್ಸಿರಲಿಲ್ಲ. ಪಾಂಡಿಚೇರಿಗೆ ಇನ್ನೂ ೨೦೦ ಕಿ.ಮೀ. ಮೊದಲೇ ಸೆಖೆಯಿಂದ ಹೈರಾಣಾಗಿದ್ದ ನಾವು ವಾಪಾಸ್ ಬರೋದೇ ಮೇಲೆಂದು ಅಲ್ಲಿಂದ ಕಾಟ್ಪಾಡಿಯ ಕಡೆಗೆ ಹೊರಟ್ವಿ. ಅಲ್ಲಿಂದ ಕಾಟ್ಪಾಡಿ ತಲುಪೋ ಹೊತ್ತಿಗೆ ೫:೫೦.ಅಲ್ಲಿಂದ ಲಾಲ್ಬಾಗ್ ಎಕ್ಸ್ ಪ್ರೆಸ್ಸಿಗೆ(೧೬೩೩೨) ಗೆ ಟಿಕೇಟ್ ಪಡೆದ ನಾವು ಬೆಂಗಳೂರಿಗೆ ಹೊರಡಲಣಿಯಾದೆವು. ೫:೪೦ ಕ್ಕೆ ಹೊರಡೋ ಆ ಸೂಪರ್ ಫಾಸ್ಟ್ ರೈಲು ಅವತ್ತೇ ಲೇಟಾಗಿದ್ದು ನಮ್ಮ ಪುಣ್ಯವೇನೋ. ಅಲ್ಲಿಂದ ಕೆ.ಆರ್ ಪುರಂಗೆ ೯:೧೦ಕ್ಕೆ ಬಂದು ಮುಟ್ಟಿದ ನಾವು ಮಾರತ್ತಳ್ಳಿಗೆ ಬರೋ ಹೊತ್ತಿಗೆ ೯:೩೫ ಆಗಿತ್ತು. ಬೆಳಗ್ಗೆಯ ತಿಂಡಿ ಮಧ್ಯಾಹ್ನದ ಊಟವನ್ನು ಒಟ್ಟಿಗೇ ಮಾಡಿದ್ದ ನಮಗೆ ರಾತ್ರೆಯ ಭರ್ಜರಿ ಪೀಜಿಯೂಟ ಕಾಯ್ತಿತ್ತು
No comments:
Post a Comment