Friday, June 17, 2011

ನಮಗೆ ದುಡ್ಡಿನ ಬೆಲೆ ಗೊತ್ತಿದ್ಯಾ

ಇಸ್ತ್ರಿಯಂಗಡಿಗೆ ಹೋಗಿದ್ದೆ.. ಅಲ್ಲಿ ಅವ ಹೇಳ್ತಾ ಇದ್ದ. ೧ ಚೀಲ ಇದ್ದಿಲಿಗೆ ೧೫೦೦ ರೂಪಯಿ. ಒಂದು ವರ್ಷನೂ ಬರಲ್ಲ ಈ ಇಸ್ತ್ರಿ ಪೆಟ್ಟಿಗೆ, ಅದ್ಕೆ ೪೦೦೦ ರೂಪಾಯಿ. ಬಟ್ಟೆಗೆ ೩ ರೂ ಕೇಳಿದ್ರೆ ನೀವು ಹಿಂದೆ ಮುಂದೆ ನೋಡ್ತೀರ. ಜೀವನ ಕಷ್ಟಾಪ್ಪ. ಅವನು ಹೇಳೋದು ಕೇಳ್ದಾಗ ಅನುಸ್ತು.. " ನಮಗೆ ದುಡ್ಡಿನ ಬೆಲೆ ಗೊತ್ತಿದ್ಯಾ" ಅಂತ.|1|

ಅಪ್ಪನೋ ಅಮ್ಮನೋ ಬೇಕಾದಾಗ ದುಡ್ಡು ಕೊಟ್ಟಿರ್ತಾರೆ. ಬ್ಯಾಂಕ್ ಸಾಲ ಮಾಡಿ ಓದೋ ಹಲ ಗೆಳೆಯರಿಗೂ A.T.M ಇಂದ ದುಡ್ಡು ಬೇಕಂದಾಗ ಸಿಗುತ್ತೆ ಅನ್ನೋ ಭರವಸೆ ಇರುತ್ತೆ. ಅದ್ರ ಹಿಂದೆ ನಮ್ಮ ತಂದೆ/ತಾಯಿ ಶ್ರಮ ಎಷ್ಟಿರುತ್ತೆ ಅಂತ ಎಂದಾದ್ರು ಯೋಚ್ನೆ ಮಾಡಿರ್ತೀವಾ? ಪ್ರತೀ ಪೈಸೆ ಹಿಂದೆನೂ ಎಷ್ಟು ಶ್ರಮ ಅಡಗಿರುತ್ತೆ ಅಂತ ಯೋಚ್ನೆ ಮಾಡ್ತೀವಾ?
ಖರ್ಚು ಮಾಡೋದು ತಪ್ಪು ಅಂತ ನಾ ಹೇಳ್ತಿಲ್ಲ. ಆದ್ರೆ ನಾವು ಖರ್ಚು ಮಾಡ್ತಿರೋ ಪ್ರತೀ ರೂಪಾಯಿ ಬೆಲೆ ನಮಗೆ ಗೊತ್ತಾ ಅನ್ನೋ ಸಂದೇಹ ಸುಮಾರು ಸಲ ಕಾಡುತ್ತೆ. ದುಡ್ಡು ಕೊಟ್ಟು ತಂಗಡಿರ್ತೀವಿ. ಸ್ವಲ್ಪ ಉಪ್ಪೋ , ಖಾರಾನೋ ಜಾಸ್ತಿ ಆಯ್ತು ಅಂದ್ರೆ ಹಾಗೆ ದಂಡ ಮಾಡ್ತೀವಿ.. ಮನೇನಲ್ಲೂ ಎಷ್ಟೋ ಸಲ ತಿಂಡಿ ತಿನ್ನದೇ ಜಗಳ ಮಾಡ್ಕೊಂಡು ಹೊರಟು ಬಂದಿರ್ತೀವಿ.. ದುಡ್ಡಿರುತ್ತಲ್ಲಾ.. ಕೊಟ್ರೆ ಬೇರೆದು, ಒಳ್ಳೇದು ಸಿಗುತ್ತೆ ಅನ್ನೋ ಭಾವನೆ ಅಲ್ವಾ?. . ಆದ್ರೆ ನಮಗೆ ಬೇಜಾರು ಮಾಡ್ಬಾರ್ದು ಅಂತ ಸುಮ್ಮನಿರೋ ಅಪ್ಪ-ಅಮ್ಮ, ದುಡ್ಡು ಕೊಟ್ಟಿದೀವಿ ಅಂತ ಸುಮ್ಮನಿರೋ ಹೋಟಲಿನವರು.. ಹೀಗೆ ಏನು ಕಾಣ್ತಿದೆಯೋ ಆದರ ಹಿಂದಿನ ವಾಸ್ತವ ಅರಿಯೋಕೆ ಪ್ರಯತ್ನನೇ ಮಾಡಲ್ಲ ಅಲ್ವಾ? ನೀರು ತರ ಖರ್ಚು ಮಾಡ್ತಿರೋ ದುಡ್ಡಿನ ಬೆಲೆ ಬಗ್ಗೆ ಒಂದಿನನಾದ್ರೂ ತಲೆ ಕೆಡ್ಸ್ಕಂಡಿರ್ತೀವಾ? |2|

ಬಸ್ ಅಲ್ಲಿ ಹೋಗ್ತಿರ್ಬೇಕಾದ್ರೆ ಅಜ್ಜಿ ಒಬ್ರು ಸಿಕ್ಕಿದ್ರು. ಅವ್ರತ್ರ ತಮ್ಮೂರಿಗೆ ಹೋಗಲು ಬೇಕಾದಷ್ಟು ಹಣ ಇರಲಿಲ್ಲ.. ಬಸ್ ದರ ಏರಿದ್ದರಿಂದ ದುಡ್ಡು ಕಮ್ಮಿ ಬಿದ್ದಿತ್ತು. ಸಹಾಯಕ್ಕೂ ಯಾರೂ ಇಲ್ಲ. ಬೇಡದ ವಿಷ್ಯಗಳಿಗೆ ದುಡ್ಡು ಖರ್ಚು ಮಾಡ್ಬೇಕಾದ್ರೆ ಸುಮಾರು ಸಲ ಕಂಡಕ್ಟರ್ ಹತ್ರ ಅಜ್ಜಿ ಅಂಗಲಾಚುತ್ತಿದ್ದ ಆ ದೃಶ್ಯ ನೆನಪಾಗಿ ಒಂದು ರೀತಿ ಪಾಪಪ್ರಜ್ನೆ ಕಾಡುತ್ತದೆ.ಇಂಥ ದೃಶ್ಯ ನೀವು ನೋಡಿರಬಹುದು. ಅವರ ಬಡತನಕ್ಕೆ ಖಂಡಿತಾ ನಾವು ಕಾರಣರಲ್ಲದೇ ಇರಬಹುದು. ಆದ್ರೆ ಪ್ರತೀ ರೂಪಾಯಿನೂ ಮತ್ತೆ ಮತ್ತೆ ಎಣಿಸಿ ಎಲ್ಲಾದ್ರೂ ಜಾಸ್ತಿ ದುಡ್ಡಿನ ಲೆಕ್ಕ ಸಿಗತ್ತೇನೋ ಅಂತ ಎಣಿಸ್ತಿದ್ದಿನ್ನ ನೆನೆಸಿಕೊಂಡ್ರೆ, ನೋಟುಗಳನ್ನೇ ಉಡಾಯಿಸೋ , ಒಂದು ನೀಲಿ ನೋಟು ಕಮ್ಮಿ ಕೋಟ್ರು ಅಂತ ಮಾನೇಲಿ ಜಗಳ ಕಾಯೋ ನಮ್ಮನ್ನು ನೆನಸಿಕೊಂಡ್ರೆ.. ಒಂಥರಾ ಅನ್ಸುತ್ತೆ. ಅಗರ್ಭ ಶ್ರೀಮಂತರೇ ಇರಬಹುದು, ಕಡು ಬಡವರೇ ಇರಬಹುದು. ಯಾರೋ ನಮ್ಮನ್ನ ನೋಡ್ತಾ ಇರಬಹುದು, ನೋಡದೇ ಇರಬಹುದು. ಆದರೆ ನಮ್ಮ ಮನಸ್ಸಾಕ್ಷಿ ನಮ್ಮನ್ನ ನೋಡ್ತಾ ಇರತ್ತಲ್ವಾ? ಅದು ಪ್ರತೀ ಸಲ ಕೇಳ್ತಾ ಇರತ್ತೆ. "ನಿಂಗೆ ದುಡ್ಡಿನ ಬೆಲೆ ಗೊತ್ತಾ" ಅಂತ .. ನಂಗಂತೂ ಇಲ್ಲಿವರೆಗೂ ಉತ್ರ ಹೇಳಕ್ಕೆ ಆಗ್ಲಿಲ್ಲ. ನಿಮಗೆ ?|3|

Tuesday, June 14, 2011

ನಮ್ಮಯ ಹೆಮ್ಮೆಯ HOD

ನಮ್ಮಯ ಹೆಮ್ಮೆಯ HOD
ಎರಡು ಬ್ರಾಂಚುಗಳ ಜೀವನಾಡಿ
ಜ್ನಾನದಾಗರ, ಗತ್ತಿಲ್ಲ ಬಿಡಿ
ಕೆಟ್ಟಗುಣಗಳ ಕಿತ್ತು ಸುಡಿ

ಕಷ್ಟದಲಿ ಕೈಬಿಡಬೇಡಿ
ಹೊಸತನಕೆ ಜೈ ಎಂದುಬಿಡಿ
ಬುಕ್ಕು, ಸೆಲ್ಲು, ಪೆನ್ನು ನಿಮ್ಮ ಕೈಯೊಳಗೆ
ಗುಣಗಾನ ನಮ್ಮ ಬಾಯೊಳಗೆ

ನನ್ನಮ್ಮನ ಕವನಗಳು

ನನ್ನಮ್ಮನ ಕವನಗಳು

೧)ಒಲಿದರೆ ನಾರಿ, ಮುನಿದರೆ ಮಾರಿ
ಅವಳಲ್ಲ ಹೆಮ್ಮಾರಿ, ಅವಳೇ ಸುಕುಮಾರಿ
ಅವಳೊಂದು ನೋಟ, ನೋಡುಗರಿಗದೇನೋ ಮಾಟ
ಅವಳೊಂದು ಕಿರುನಗೆ, ಮನದಲ್ಲಿ ಹಲ ಬಗೆ

೨)ಬಾಳ ದಾರಿಯಲ್ಲಿ ಕಷ್ಟ ತೇಲಿ ಹೋಯ್ತು
ಸುಖ ಮೇಲೆದ್ದು ಬಂತು
ನೋವು ನಲಿವುಗಳಿರದ ಬದುಕೇನು ಚಂದ
ರಾತ್ರಿಯಾಯ್ತು ಮಲಗು ಮುದ್ದು ಕಂದ
ಮುದ್ದು ಕಂದ

೩)ಪರೀಕ್ಷೆ ಬಂದ್ರೆ ಪೇರೆಂಟ್ಸ್ ಕಾಟ
ಇಲ್ಲವೇ ಇಲ್ಲ ನಿದ್ರೆ ಊಟ
ಎಲ್ಲರ ಕಣ್ಣಲಿ ಒಂದೇ ನೋಟ
ರಿವಿಶನ್ ಕೊಡಿ ಎಂಬ ಹಟ

೪)ಬಾರಾ ಬಾರಾ ಜಾತ್ರೆಗೆ ಹೋಗೋಣ
ಬಾರ ಜಾತ್ರೆಗೆ ಹೋಗೋಣ,
ಚುರುಮುರಿ ತಿನ್ನೋಣ,
ಗಾಳಿ ಕುದುರೆ ಏರೋಣ

ಬಿಸಿ ಬಿಸಿ ಜಿಲೇಬಿ,ಬಾಯೆಲ್ಲ ಹಸಿ ಹಸಿ
ಬಿಸಿ ಬಿಸಿ ಬೋಂಡ, ಬಾಯೆಲ್ಲ ಹೊಂಡ
ಚಪ್ಲಿ ಅಂಗಡಿಗೆ ಹೋಗೋಣ,
ಚಪ್ಪರಿಸಿ ನೋಡೋಣ, ಬಾರಾ ಬಾರಾ
ಮುಂದಿನ ಸಲದ ಜಾತ್ರೆಗೆ ಬಾ

ಮನದ ದ್ವಂದ್ವ ಮಾತಾದಾಗ..

ಮೆಚ್ಚಿಸಲು ಮೋಡ ಮಳೆ ಸುರಿಸೊಲ್ಲ
ಗಾಳಿಯ ತಂಪೂ ತನಗಲ್ಲ
ಒಳ್ಳೆತನಕೆ ಬೆಲೆಯಿಲ್ಲೆಂದೆನುವ
ನೀನೀ ನಿಜವನರಿಯಾ?
ಎಷ್ಟು ಮೂಡಿದರು ಅಷ್ಟೇ ಅನುವ
ನಿನ್ನ ನುಡಿಯ ಬಿಡೆಯಾ?

ಪ್ರೀತಿಯಿತ್ತರೂ ಮರೆತ ಗೆಳೆಯ
ಸ್ನೇಹವಿತ್ತರೂ ಜರಿದ ಗೆಳತಿ
ಇತರರ ಜೊತೆಗೆ ನೀ ನಮ್ಮ
ಮರೆವೆನೆಂದು ದೂರ ಇಟ್ಟರು
ನನಗೂ ಒಂದು ಮನಸಿದೆಯೆಂಬ
ಭಾವವಿಕಾರದ ಸೆಲೆಯದೆಂಬುದನ್ನೂ ಮರೆತರು

ನಾನೆಲ್ಲರ ನಗಿಸೋ ಜೋಕರನಾ?
ಸ್ನೇಹಕೆ ಬೇಡೋ ಭಿಕ್ಷುಕನಾ?
ಗೆಳೆಯರ ಬೆಸೆವ ಬ್ರೋಕರನಾ?
ಖುಷಿಗವರ ನನ್ನೆ ನಾ ಮರೆತೆ
ಮೈ ಉಳುಕಿದುರಿಹುದು ಮೂವು
ನೆನಪ ಗಾಯಕೆಲ್ಲಿ ಮುಲಾಮು?

ತನ್ನ ಕರುವಿಗಲ್ಲವೆಂದರಿತೂ ಹಸು
ಹಾಲೀಯುವುದ ಬಿಡುವುದೇ?
ಸಾವು ನೋವಿಲ್ಲದ ಮನೆಯಿಲ್ಲ
ಘಾಸಿಕೊಳ್ಳದ ಮನಸಿಲ್ಲ
ಹರಿದ ಚಪ್ಪಲಿಗೆ ಅಳುವೆ ನೀ
ಕಾಲಿರದವರ ಕಾಣೆಯಾ?
ಎಲ್ಲರಿಂದ ಸೈ ಎನಿಸಬಯಸದೇ
ನಿನಗಾಗಿ ಬಾಳೆಯಾ?

ರಾಜಕಾರಣ( ಶsh - ಪ್ರsh ಜುಗಲ್ ಬಂದಿ)

ರಾಜಕಾರಣ( ಶsh - ಪ್ರsh ಜುಗಲ್ ಬಂದಿ)
shash || prash

ನಮ್ಮ ರಾಜಕಾರಣಿಗಳು || ಕೊಳೆತು ನಾರೋ ರಾಜಕಾರಣ
ಹಸಿದ ಕಾಡುಪ್ರಾಣಿಗಳು || ಪರನಿಂದೆಯಲೇ ಕಾಲಹರಣ
ತಿನ್ನುತ್ತಾ ಲಂಚವ || ಹಣ ಹೊಡೆಯೋರಿಗೆ ಪಂಚಪ್ರಾಣ
ಕುಡಿವರು ಜನರ ರಕ್ತವ || ಇದಕೆಲ್ಲಾ ಯಾರು ಕಾರಣ?

ನೀಡುವರು ಪ್ರಗತಿಯ ಭರವಸೆ || ಕೊಳಕರು ಅವರಾ
ಈಡೇರುವುದಿಲ್ಲ ಯಾವ ಆಸೆ || ಅಥವಾ ಕಳಿಸೋ ಜನರಾ?
ಕೋಟಿ ಕೋಟಿಗಳ ದೋಚುವರು || ಮಾಡೋ ಘನಕಾರ್ಯಕೆ ಅವರಿಗೆ
ದೇಶದ ಪರಿಸ್ಥಿತಿ ಹಾಳು ಮಾಡುವರು || ನೂರಾರು ಪ್ರವರ

ಅಂದಿನ ರಾಜಕಾರಣಿಗಳ ದೇಶಭಕ್ತಿ || ಶಂಕರಾಚಾರ್ಯ ಬೇಕಿಂದು ನಮಗೆ
ಆಗಿತ್ತು ಜನರಿಗೆ ಪ್ರೇರಣಶಕ್ತಿ || ಆದ್ರೆ ಹುಟ್ಬೇಕು ಪಕ್ಕದ್ಮನೇಲಿ
ಇ೦ದಿನ ರಾಜಕಾರಣಿಗಳ ಹಣದಹುಚ್ಚು || ತಿಳಿದ ಜನಗಳೇ ಓಟು ನೀಡದಿರೆ
ಇದಾಗಿದೆ ಅವರಿಗೆ ಅಚ್ಚುಮೆಚ್ಚು || ಉಳಿದವರ ಆಯ್ಕೆ ಮತ್ತೇನು?

||ನಶೆಯ ಮತ್ತಿನಲಿ, ಬಾಡ ಬುತ್ತಿಯಲಿ
||ಹಣದ ಗತ್ತಿನಲಿ, ಭಯದ ಭೀತಿಯಲಿ
||ಬಡತನದ ಬಿಸಿಲಿನಲಿ ನರಳುವವು
||ಆ ಸತ್ಯ ಕುಸುಮಗಳೆಲ್ಲಿ ಅರಳುವವು?
******ಶsh*******|| ******ಪ್ರsh*******

ನಮ್ಮ ಶಿವಮೊಗ್ಗ ( ಶsh - ಪ್ರsh ಜುಗಲ್ ಬಂದಿ)

ನಮ್ಮ ಶಿವಮೊಗ್ಗ ( ಶsh - ಪ್ರsh ಜುಗಲ್ ಬಂದಿ)
shash prash

ಮಲೆನಾಡ ನಗರಿ ಶಿವಮೊಗ್ಗ || ನೋಡ ಬನ್ನಿ ನಂ ಶಿವಮೊಗ್ಗ
ತುಂಬಿಹುದು ಸು೦ದರ ನಿಸರ್ಗ|| ಚಾರಣ, ಇತಿಹಾಸಕೆ ಸ್ವರ್ಗ
ಇಲ್ಲಿಹುದು ತು೦ಗೆಯ ಸಿರಿ||
ಹೊಳಪನು ಬೀರುವ ಝರಿ || ಇತಿಹಾಸದ ಕೆಳದಿ ,ಕಲಸೆಗಳು
||ಇಲ್ಲೇ ಇಹುದು ಇಕ್ಕೇರಿ
ಜಗದ್ವಿಖ್ಯಾತ ಜಲಪಾತ ಜೋಗ|| ನೋಡಬನ್ನಿರಿ ಜೋಗ ಜಲಪಾತ
ಮೂಡಿಸುವುದು ಜನರಲ್ಲಿ ಸೋಜಿಗ || ಹೊನ್ನೆಮರಡು, ಮುಪ್ಪಾನೆ
ಶರವತಿಯ ವಿದ್ಯುತ್ ಸ್ಥಾವರ||
ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ|| ಮಂಡಗದ್ದೆಯ ಪಕ್ಷಿಧಾಮವು
ತ್ಯಾವರೆಕೊಪ್ಪದ ಹುಲಿಸಿಂಹ||
ಇಲ್ಲಿಯ ಮಂಡಗದ್ದೆ ಧಾಮ || ಸಕ್ರೆಬೈಲಿನ ಆನೆ ಕ್ಯಾ೦ಪನು
ಇದಾಗಿದೆ ಹಕ್ಕಿಗಳಿಗೆ ಸುಖಧಾಮ || ಮಲೆನಾಡ ಸಿರಿಯ ನೋಟವನು
ತಾವರೆಕೊಪ್ಪದ ಸಿಂಹಧಾಮ||
ವಿವಿಧ ಪ್ರಾಣಿಗಳ ಸಮಾಗಮ || ಕಾನೂರ ಕೋಟೆ, ಕೊಡಚಾದ್ರಿ
||ಜೈನ ತಾಣ ಹುಂಚ, ಕು೦ದಾದ್ರಿ
ಸು೦ದರ ಆಗು೦ಬೆಯ ನೋಟ || ನಗರದ ಕೋಟೆ, ಕವಲೇ ದುರ್ಗ
ನೋಡುಗರ ಮನದಲ್ಲಿ ರಸದೂಟ || ಕುಪ್ಪಳ್ಳಿಯ ಸುಂದರ ನಿಸರ್ಗ
ಸೂರ್ಯೋದಯ ಸೂರ್ಯಾಸ್ತಗಳ ಸೊಬಗು||
ನೀಗುವುದು ಮನಸಿನ ಕೊರಗು || ಮಾರಿಚನ ಕೊಂದ ಮ್ರುಗವಧೆ
||ಮತ್ಸ್ಯಧಾಮ ಚಿಬ್ಬಲಗೆರೆ
|| ಸಿಗಂದೂರು,ತುಮರಿ, ಮುಳುಗಡೆ
|| ಬರೆದು ಮುಗಿಯದೀ ಹಲವು ತಾಣಗಳ
||ನೋಡಬನ್ನಿರೆಂಬ, ನಮ್ಮೊಡನೆ ನಲಿಯಿರೆಂಬ
||ಆತ್ಮೀಯ ಆಹ್ವಾನ ನಿಮ್ಮತ್ತ

******ಶsh******* || ******ಪ್ರsh*******

ಯಾರು೦ಟು ಯಾರಿಲ್ಲ

ಯಾರು೦ಟು ಯಾರಿಲ್ಲ
ನೋವಿನಲೂ ಜೊತೆಯಿಲ್ಲ
ನಲಿವ೦ತೂ ಮೊದಲಿಲ್ಲ
ಸೀಳಿಹುದು ತನುವೆಲ್ಲಾ |೧|

ನನ್ನ ನೆರಳಲೇ ಬೆಳೆದವರಿವರು
ಕೈಕಾಲ ಕಡಿದರು
ತ೦ಪುಗಾಳಿಯ ಕುಡಿಯುತ ಬುಡಕೇ
ಕೊಡಲಿ ಇಟ್ಟರು |೨|

ಕಿರಿದ೦ತೆ ಈಗಿರುವ ರಸ್ತೆ
ಬೇಕೇನೋ ಮೈ ದಾನದ೦ತೆ
ಒ೦ದು ಕಡಿದು ನೆಡುವೆನೆರಡೆ೦ದೆ
ಜನರ ಮೆಚ್ಚಿಸೆ
ಅಮವಾಸೆಯ ಚ೦ದಿರನ೦ತೆ ಇದು
ಬರಿ ಹುಸಿ ಭರವಸೆ|೩|

ನ೦ಗ್ಯಾರು ಮಿತ್ರ
ಯಾರು ಶತ್ರುವಣ್ಣಾ ?
ಪ್ರಗತಿಯ ವೇಗದ ವ್ಯಥೆಯಣ್ಣ
ಕರುಣಾ ಜನಕ ಕಥೆಯಣ್ಣ|೪|

ಹಣ್ಣ ನೀಡುವೆ ನನ್ನ ಜೀವವುಳಿಸೋ
ಎ೦ದು ನನ್ನ ಕೋರಿಕೆಯಲ್ಲ
ನಾನಿಲ್ಲದೆ ನೀನಿಲ್ಲ
ಮಳೆ ಬೆಳೆಯಿಲ್ಲದೆ ಬದುಕಿಲ್ಲ|೫|

ಕೋಗಿಲೆಗೆ ಮಾಮರವಿಲ್ಲ
ಪ್ರಾಣಿಗಳಿಗೆ ಆಸರೆಯಿಲ್ಲ
ನಿ೦ಗ್ಯಾಕಿದೆಲ್ಲಾ ತಿಳಿಯೊಲ್ಲ
ನನ್ನೂ ಬದುಕ ಬಿಡೊ ನಲ್ಲ |೬|

ತಾಯೇ ಕಳೆಯೀ ಮಾಯೆ

ತಾಯೇ ಕಳೆಯೀ ಮಾಯೆ
ನನ್ನಲ್ಲಿ ನೀ ಕ೦ಡೆ ನಿನ್ನ ಛಾಯೆ
ಕರುಣಾನಿಧಿಯೆ, ವಾತ್ಸಲ್ಯದ ಗಣಿಯೆ
ನೋವನು೦ಡರೂ ಆನ೦ದವ ಅನುಗ್ರಹಿಸಿದ
ಆಯಿ, ಓ ನನ್ನ ತಾಯಿ

ಅ೦ಬೆಗಾಲಿಕ್ಕುತ ನಾ ಎಡವಿರಲು
ಕಲಿಯುವ ಬಿಡುರೆನುತರೆಲ್ಲ ಸುಮ್ಮನಿರಲು
ಎಲ್ಲಿ೦ದಲೋ ಓಡೋಡಿ ನೀ ಬ೦ದೆ
ಗಾಯ, ನೋವ ಮರೆಸಿ ಗೆಲುವ ತ೦ದೆ
ಜೀವನವೇ ಸೋಲಲ್ಲ, ಶ್ರಮದಲ್ಲೇ
ಸುಖವೆಲ್ಲ, ಸನ್ಮಾರ್ಗದಿ ನೀ ನಡೆ ಮೆಲ್ಲ
ಎ೦ದುಸಿರಿದ ನನ್ನಾ ತಾಯೆ

ನೀ ಹಸಿದಿದ್ದರು ನ೦ಗಿಕ್ಕಿದೆ ತಾಯೆ
ನಾ ಮರೆತರೂ ನೀ ಮರೆಯದೆ
ಏನು೦ಡೆನೊ , ಹೇಗಿರುವೆನೊ, ನೀನಿಲ್ಲದೆ
ಸೊರಗಿರುವೆನೊ, ಎಲ್ಲಿಗೆ ನಾ ಹೋಗಿರುವೆನೊ
ಎ೦ದೇ ಆಲೋಚಿಸುವ ತಾಯೆ
ನನ್ನಲಿ ನಿನ್ನೇ ಇಟ್ಟಿಹ ಮಾಯೆ

ನಿನ್ನ ಪ್ರೀತಿ, ತ್ಯಾಗಗಳ ನಾ ಹೇಗೆ ಬಣ್ಣಿಸಲಿ?
ಗ೦ಧದ೦ತೆ ನಿನ್ನ ತೇಯ್ದ ಕಷ್ಟಗಳ ಮರೆಯಲಿ?
ಮಮತೆಯ ಆ ರೀತಿಯ ವಾಕ್ಯದಲಿ ವರ್ಣಿಸಲಿ?
ನಿನ್ನಾಸೆಯ೦ತೆ ಗುರಿ ಸೇರಲು ಪೂರ್ಣ ಪ್ರಯತ್ನಿಸುವೆ
ಉನ್ನತಿಯಷ್ಟೇ ಇರಲಿ, ನನ್ನೆತ್ತಲು ನಿನ್ನುಸಿರೇ ಸಾಕು ತಾಯೆ
ಮತ್ತೊಮ್ಮೆ ನಿನ್ನ ನಮಿಸುವೆ ತಾಯೆ, ಕರುಣಾ ಮಾಯೆ

ಮೈಲಾರೇಶ್ವರ ನಮೋ ನಮೋ

ಹೊರದ್ವಾರದಲಿ ಷಣ್ಮುಖ
ಮತ್ತೊಂದೆಡೆಯಲಿ ಗಜಮುಖ
ಎದುರು ಕುಳಿತಿಹ ನಂದಿಯಣ್ಣ
ನೋಡಲೆರಡು ಸಾಲದು ಕಣ್ಣು
ನಿನ್ನ ಮುಕ್ಕಣ್ಣ

ಧಾರವಾಡದ ಮೈಲಾರಗುಡ್ಡ
ದಿಂದಿಲ್ಲಿಗೆ ಬಂದಿಹೆಯಂತೆ
ವರ್ಷಕ್ಕೊಮ್ಮೆ ನಿನ್ನ ತೇರಂತೆ
ಮೈಲಾರೇಶ್ವರನೆ

ಮೈಲಾರಿಗಳಿಗೆ ನೀ ಆಶ್ರಯವಂತೆ
ಮೈಮೇಲೆ ತೇರ ದಿನ ಬರ್ತೀಯಂತೆ
ಜಗದ ಭವಿಷ್ಯವ ನುಡಿತೀಯಂತೆ
ಹಲ್ಲಲೇ ಕಬ್ಬಿಣ ಕಡಿತೀಯಂತೆ
ಎದುರಿಟ್ಟ ಮೂರು ಕಲ್ಲೆತ್ತೀಯಂತೆ
ಪಾರ್ವತಿ ಪತಿಯೆ ನಮೋ ನಮೊ

ಮೈಲಾರಿಗಳ ವಾದ್ಯ ಮಧ್ಯಾನದಾರ್ತಿ
ನವರಾತ್ರಿ ಬನ್ನಿಗೆ ತಪ್ಪದೇ ಬರುತಿ
ನಂಬಿ ನಡೆದವರ ಕಷ್ಟವ ಕಳೆಯುತಿ
ನಮ್ಮೇಲೂ ಇರಲಿ ನಿನ್ನಯ ಪ್ರೀತಿ
ಪರಮೇಶ್ವರನೇ ನಮೋ ನಮೊ

ಕಾಯಮ್ಮ ಕನ್ಯಕಾ ಪರಮೇಶ್ವರಿ

ಕಾಯಮ್ಮ ಜಗದೀಶ್ವರಿ
ಕನ್ಯಕಾ ಪರಮೇಶ್ವರಿ
ಹರಿಸಮ್ಮ ಪ್ರೀತಿಯ ಜರಿ
ಹರಸಮ್ಮ ಜ್ನಾನದ ಸಿರಿ

ಎಡಬದಿಯಲಿ ನವಗ್ರಹ
ಸರ್ವ ಕಷ್ಟಗಳ ಪರಿಗ್ರಹ
ಬಲಬದಿಯಲಿ ಸೀತಾರಾಮ
ಕಷ್ಟಗಳ ಕಳೆವ ಆ ಹನುಮ

ನಿನ್ನ ಹಿಂದಿಹನು ನಗರೇಶ
ಜತೆಗೆ ನಿಂತಿಹನು ಜನಾರ್ಧನ
ಶ್ರೀಲಕ್ಷ್ಮಿಯಿಹಳು, ಗಣಪತಿಯಿಹನು
ಇಹದಿ ಸುಖಗಳ ಕರುಣಿಸುವವರು
ನಮ್ಮನು ಕಾಯಮ್ಮ
ಕನ್ಯಾಕುಮಾರಮ್ಮ

ನೋಡ ನೋಡೆ ಕೊನೆ ಸೆಮ್ ಬ೦ದಿತಲ್ಲಾ

ಸೆಮ್ ಮುಗಿಯುತಾ ಏನೋ ಒ೦ಥರಾ ಎಲ್ಲಾ
ಮನದಾಳದಲೆಲ್ಲಾ, ನೆನಪಿನ ಬೇವು ಬೆಲ್ಲ.

ಸ೦ಕ್ರಾ೦ತಿ ತ೦ದ ಪ್ಲೇಸೆಳ್ಳು ಬೆಲ್ಲ
ಗೆಳೆಯರಿಗಾಗದೇ ನೋವಿನ ತಲ್ಲಣ
ಎದುರು ನೊಡುತಾ ಗೆಲುವಿನ ಚಿತ್ರಣ
ನೋಡ ನೋಡೆ ಕೊನೆ ಸೆಮ್ ಬ೦ದಿತಲ್ಲಾ

ಯಾವ ಮಾಯವೋ ದಿನ ಕಳೆದೋಯ್ತು
ಪಿ.ಯು ಕಳೆದು ಮೂರ್ ವರ್ಷವೇ ಆಯ್ತು
ಸ್ನೇಹಿತರಾಗದ ಸಹಪಾಠಿಗಳಿಹರಲ್ಲಾ
ನೋಡ ನೋಡೆ ಕೊನೆ ಸೆಮ್ ಬ೦ದಿತಲ್ಲಾ

ಎಲ್ಲೋ ಓದಿ ಎಲ್ಲೋ ಬೆಳೆದ
ಇಲ್ಲಿ ಸೇರಿದ ಗೆಳೆಯರು ನಾವು
ಕ್ಲಾಸು, ಟೂರು, ಬರ್ತಡೆ ಗಳಾಗಲಿ,
ಇ೦ಟನ್ರಲ್, ಲ್ಯಾಬ್, ಎಕ್ಸಾ೦ ಆಗಲಿ,
ಒಟ್ಟಾಗಿ ಕಳೆದ ಆ ಸ೦ತಸವಿಹುದಲ್ಲಾ
ಆ ಮಧುರ ಕ್ಷಣಗಳು ಮುಗಿಯುತಿವೆಯಲ್ಲಾ..

ಯಾವ ದೇವರಿಗೆ ಪ್ರಿಯವೋ ಪಿ.ಪಿ.ಟಿ
ಸ್ನೇಹಿತರ ಆ ಸೆಮಿನಾರುಗಳೋ
ಬೋರು ಪಿರುಡುಗಳ ಮಾಸ್ ಬ೦ಕುಗಳು
ನೋಡ ನೋಡೆ ಕೊನೆ ಸೆಮ್ಮೇ ಬ೦ತಲ್ಲಾ..

- ಪ್ರಶಸ್ತಿ .ಪಿ.
ಮಾಹಿತಿ ತ೦ತ್ರಜ್ನಾನ ವಿಭಾಗ,
ಅ೦ತಿಮ ವರ್ಷ ಇ೦ಜಿನಿಯರಿ೦ಗ್,
ಜೆ.ಎನ್.ಎನ್.ಸಿ.ಇ ಶಿವಮೊಗ್ಗ

ಹೊತ್ತು ಸಾಗುತಿರೆ

ಹೊತ್ತು ಸಾಗುತಿರೆ ಸತ್ತ ದೇಹ
ಅದು ನಕ್ಕ೦ತಾಯಿತು,ನಮ್ಮ ನೋಡಿ

ಇಂದು ನಾನು ಮಗದೊಮ್ಮ ನೀನು
ಅವ ಕರೆವ ಮುನ್ನ ಗುರಿ ಸಿಗುವುದೇನು?
ಯಶವೆ೦ದರೇನು? ಸಾಧನೆಗಳೇನು?
ನಿನ್ನತನವೆ ಕಳೆದ ನೀ ವಿಜಯಿಯೇನು?

ಕಳೆದ ಭೂತ, ಬರದ ಭವಿಷ್ಯದ
ಯೋಚನೆಯಲೇ ದಿನ ಕಳೆವೆ ನೀನು
ಕಷ್ಟಗಳ್ಯಾರಿಗಿಲ್ಲ? ಬೇವೊಡನೆ ಬೆಲ್ಲ
ಅವಗುಣವ ಮರೆತು, ಜನರೊಡನೆ ಬೆರೆತು
ನಿನ್ನಿ೦ದ ನಕ್ಕರೆ ನಾಲ್ವರು
ಸಂಕಷ್ಟದಲೂ ನಿನ್ನ ಪೊರೆವರು

ಹ್ಯಾಂಡ್ಸ್ ಫ್ರೀ ಮೊಬೈಲು

ಹಟ ಮಾಡಿ ತಗಂಡ ಫ್ರೆಂಡು ಹ್ಯಾಂಡ್ಸ್ ಫ್ರೀ ಮೊಬೈಲು
ಬ್ಯಾಡ ಅಂದ್ರು ಕೇಳ್ದೆ ತೆತ್ತು ದುಬಾರಿ ಬಿಲ್ಲು
ಫೋನ ಬಂದಾಗ್ಲೂ ಮಾಡ್ಲಕ್ಕಡ ಕೆಲ್ಸ ೨ ಕೈಲು
ರಸ್ತೇಲೂ ಹಂಗೆ ಮಾತಾಡ್ತಾ ಹೋಗದೇ ಅವ್ನದೀಗ ಸ್ಟೈಲು
ಕಂಡವ್ರೆಲ್ಲಾ ಕೇಳ್ತಾ.. ಅವಂಗೆಂತಾ ಐಲಾ?

ಹಾಲ ಹಿಂದಿನ ಕವನ

ಏರಿತು ಹಾಲಿನ ರೇಟು
ಮಧ್ಯಮದ ಮೇಲೊ೦ದೇಟು
ತು೦ಬೀತೆ ರೈತನ ತಾಟು
ಅಳಿಸೀತೆ ಚಿ೦ತೆಯ ಮಿನಿಟು?|೧|

ರಾಸುಗಳು ತಿನ್ನುವ ಹುಲ್ಲ
ಅವುಗಳ ಕಾಯುವ ಗೊಲ್ಲ
ರೆಲ್ಲರನು ಕಾಡಿಹುದಲ್ಲ
ಬಡತನವೆ ನು೦ಗಿಹುದು ಎಲ್ಲ|೨|

ಹಾಲ ಹಿ೦ಡಿದರೆ ರಕ್ತ ಒಸರುವುದು
ರಾಸಿಗೆ ಸಿಗದೆ ಹಿಡಿಮೇವು
ಕಾಲಾಡಲಿಲ್ಲ ಗೋಮಾಳ ಅವಕೆ
ಕೇಳುವರು ಯಾರವರ ನೋವು?|೩|

ಬೆವರ ಬಸಿವ ಹಗಲಿರುಳು ಶ್ರಮದಲೂ
ಕೈತುಂಬಾ ಕಾಸು ಬರಿ ಕನಸೇ
ನಗರದತ್ತಲೀಗ ಅವರೊಲಸೆ
ಇದ ನೋಡೂ ಮರುಗೆಯಾ ಮನಸೇ?|೪|

ಓ ಗಣಪತಿಯೆ ಪಾರ್ವತಿಸುತನೆ

ಓ ಗಣಪತಿಯೆ ಪಾರ್ವತಿಸುತನೆ
ಶಿವತನಯ ನನ್ನುಳಿಸೋ
ಮಾಡೋ ಕಾರ್ಯದಲಿ ವಿಘ್ನವಿರದಂತೆ
ಎಲ್ಲ ಯಶವೆಂದು ಹರಸೋ|1|

ಕೋಟಿಸೂರ್ಯರಂತೆ ನೀನು
ಕಷ್ಟದಿಬ್ಬನಿಯ ಕಳೆಯೋ ಭಾನು
ಮನದಿ ಧ್ಯಾನಿಪೆ ಹೇ ಹೇರ೦ಬ
ಕಾಯುಮಾಸುತನೇ|2|

ಅಣುರೇಣುವಿನಲು ಇಹೆ ಗಣನಾಥ
ಗರಿಕೆಯಿ೦ದಲೇ ಖುಷಿಪಡುವಾತ
ನೋಡಿ ನಕ್ಕವಗೆ ಶಾಪವಿತ್ತಾತ
ಪೊರೆಯೊ ಏಕದಂತ|3|

ಅಲ್ಪವೆನಿಸುವ ಇಲಿಯೆ ವಾಹನ
ಬುಸುಗುಟ್ಟೋ ವಿಷದ್ಹಾವು ಹೊಟ್ಟೆಗೆ
ಶ್ರೀಕೃಷ್ಣನಿಗೂ ಕಷ್ಟವೊಡ್ಡಿದ
ಮಹಾಕಾಯ ನೀ ಕಾಯೋ|4|

ದೊಂಬರಾಟದ ಜನಗಳು ನಾವು

ದೊಂಬರಾಟದ ಜನಗಳು ನಾವು
ತರ ತರ ಸರ್ಕಸ್ ಮಾಡುವೆವು
ಹಗ್ಗದ ಮೇಲೆ ನಡೆದು ಕುಣಿಯುತಾ
ನೀಡೋ ನೋಟನೆದುರು ನೋಡುವೆವು

ಹತ್ತು ದಾಟದ ಹುಡುಗಿಯರಾದರೆ
ಹಗ್ಗದ ಮೇಲಿನ ಕುಣಿದಾಟ
ತಂಬಿಗೆಯ ಹೊತ್ತು, ರಿಮ್ಮಲಿ ನಿಂತು
ಒಂದು ತುದಿಯಿಂದಿನ್ನೊಂದಕೆ ದಾಟಾಟ

ಅರಿಯದಾದೆಯಾ ನಮ್ಮಯ ಮನಸ
ಅರ್ಹರು ನೋಡದೆ ನಮ್ಮಯ ಕೆಲಸ
ಕಾಣಲಾದೀತೆ ಉಜ್ವಲ ಕನಸ?
ಹೊತ್ತ ತುತ್ತಿಗೀ ನಮ್ಮಯ ಪ್ರಯಾಸ

ದೊಡ್ಡವರಾಗಲು ಡ್ರಮ್ಮ ಹಿಡಿಯುವೆವು
ವಾವೆಂಬುವಂತ ನಾದ ನುಡಿಸುವೆವು
ಕೀಳು ಕೆಲಸವೆಂದಾಡುವಿರೇತಕೆ?
ನಮಗೂ ಮನೆ, ಶಾಲೆಯೆಂಬ ಆಸೆಯಿದೆ
ಶುಭ್ರ ಜೀವನದಿರಾದೆಯಿದೆ

ಕಿತ್ತು ತಿನ್ನುವರಿಂದುಳಿಸೆ ಮರ್ಯಾದೆ
ಅಳುವ ಕೂಸುಗಳಿಗಿಕ್ಕಲಾಯಾಸ
ಕೆಲಸ, ಮನೆಯೆಂದು ನಿಮ್ಮದೊಂದಾಟ
ಹೊಟ್ಟೆಗಾಗೆ ನಮ್ಮೀ ದೊಂಬ್ರಾಟ

ಚಿ೦ತೆ

ಅಲ್ಲೂ ಚಿ೦ತೆ ಇಲ್ಲೂ ಚಿ೦ತೆ
ಎಲ್ಲಿ ನೋಡಿದರು ಚಿ೦ತೆಯ ಸ೦ತೆ

15 ದೆ೦ದರೆ internaಲ್ಲು
ಬ೦ದಾಗೇರುವ ಮೊಬೈಲು ಬಿಲ್ಲು
ಜೆರಾಕ್ಸಿಗೋಡು , ಬುಕ್ಕನು ಹುಡುಕು
ಫ್ರೆ೦ಡನು ಕೇಳು , ಲೆಕ್ಚರ ಬೇಡು
ಯಾವ್ಯಾವ ಪ್ರಶ್ನೆಯನ್ದಲೆದಾಡು||೧||

ಬರೆದಾದ ಮೇಲೆ ಮಾರ್ಕ್ನನು ನೋಡು
ಎಣಿಸಿದ್ದೊ೦ದು , ಬ೦ದಿದ್ದೊ೦ದು
ಯಾರೋ ಆಗುವರು ಕೇ೦ದ್ರ ಬಿ೦ದು
ಮು೦ದಿನ ಪೇಪರ ಗತಿಯೇನೆ೦ದು
ಯೋಚಿಸಿ ಬೇಸುವ ಮನಸಿನ ಚಿ೦ತೆ||೨||

ಕ್ಲಾಸು ಮುಗಿದರೂ ಲ್ಯಾಬಿನ ಚಿ೦ತೆ
ಮಾಡಿ ಮುಗಿಯದ ಪ್ರೊಗ್ರಾಮುಗಳು
ಕ್ಲಾಸ ಮಧ್ಯದ ಸೆಮಿನಾರುಗಳು
ಕಾಸ ಕಳೆಯುವ ಪ್ರಿ೦ಟೌಟುಗಳು
ಸೋರೇ ಹೌಗ್ವ ದುಡ್ಡಿನ ಕ೦ತೆ||೩||

ಎಕ್ಸಾಮೆ೦ದರೆ ಓದದ ಚಿ೦ತೆ
ಇ೦ಪಾರ್ಟೆ೦ಟೆ೦ಬ ಅ೦ತೆ ಕ೦ತೆ
ಬರೆದಾದ ಮೇಲೆ ಮಾರ್ಕ್ಸಿನ ಚಿ೦ತೆ
ಜಾಸ್ತಿ ತೆಗೆದವಗೆ rankನ ಚಿ೦ತೆ
ಕಮ್ಮಿ ಬ೦ದವಗೆ R.Vಯ ಚಿ೦ತೆ
ಎ೦ದು ಮುಗಿವುದೋ ಚಿ೦ತೆಯ ಸ೦ತೆ||೪||

ಕಷ್ಟ ಸುಖದಲೂ ಜೊತೆಗೆ ಬೆರೆಯುತಾ
ಪರರ ನೋವಿನಲಿ ತಮ್ಮ ಮರೆಯುತಾ
ಗೆಳೆಯರ ಗೆಲುವೇ ತಮ್ಮದೆನ್ನುತಾ
ಜೊತೆ ಜೊತೆ ನಲಿಯುವ ನೀವಿರಲು
ಕಷ್ಟದ ಚಿ೦ತೆ ನನಗಿಲ್ಲ
ಅನುಕ್ಷಣವೂ ಸ೦ತಸ ಹುದುಕುತಾ
ನಾವು ಸ್ನೆಹಿತರು ಜೊತೆಗಿರಲು||೫||

ಚಿಂದಿ ಆಯುವ ಹುಡುಗರು ನಾವು

ಚಿಂದಿ ಆಯುವ ಹುಡುಗರು ನಾವು
ಊರು, ಬೀದಿಯ ಸುತ್ತುವೆವು
ನೀವು ಬೇಡವೆಂದಿಸೆದ ಕಸವ
ರಸವನಾಗಿಸೆ ಹೆಕ್ಕುವೆವು|೧|

ಹರಕು ಬಟ್ಟೆಯೆ ನಮ್ಮಯ ವೇಷ
ನೋಣದ ಮೇಲೆಯೂ ಇಲ್ಲ ದ್ವೇಷ
ಕಾಣುವುದೇ ಬರಿ ನಮ್ಮಯ ಕೊಳಕು?
ಹೊಟ್ಟೆಗಾಗಿಯೆ ನಮ್ಮೀ ಬದುಕು|೨|

ಅಪ್ಪನು ಇಲ್ಲ, ಅಮ್ಮನು ಇಲ್ಲ
ಇದ್ದವರಲೆಮಾರಿಗಳು, ಕುಡುಕರು
ನನ್ನ ತಮ್ಮ ತಂಗಿಯರನು ಬೆಳೆಸೆ
ನನ್ನ ಕನಸ ನಾ ಕೊಂದಿಹೆನು|೩|

ನಿಮ್ಮ ಬದುಕು ನಿಮಗ್ಹೇಗೋ ಹಾಗೆ
ನಮ್ಮ ಕಸುಬು ನಮಗೆ
ಮೋಸ ಮಾಡದ, ಪರರ ಹಿಂಸಿಸದ
ಕೊಡುಗೆ ಸ್ವಚ್ಛತೆಯಡೆಗೆ|೪|

ನಮಗೂ ನಿಮ್ಮಂತೆ ಶಾಲೆಯು ಬೇಕು
ಕಸ ತುಂಬಿ ತಿರುಗೋ ಚೀಲವು ಸಾಕು
ಮಳೆಯಲಿ ನೆನೆಯದ ನಿದ್ದೆಯ ನೆನಪು
ಎಂದು ಮೂಡುವುದೋ ಬಾಳಲಾ ಬೆಳಕು?|೫|

ಭದ್ರಾವತಿಯೆಂಬುಕ್ಕಿನ ನಗರಿ

ಭದ್ರಾವತಿಯೆಂಬುಕ್ಕಿನ ನಗರಿ
ನೋಡಲಾಗದಿದ ಕಾಲಲಿ ತಿರುಗಿ

ಜಿಲ್ಲೆಯ ಒಂದೇ ಆಕಾಶವಾಣಿ
ವೇದಿಕೆ ನೀಡಿದ ನಿನಗೆ ನಾ ಋಣಿ
ವಿಶ್ವೇಶ್ವರಯ್ಯ ಕನಸ ಸ್ಟೀಲಿನ ಪ್ಲಾಂಟು
ಮಹಾಮೇಧಾವಿಗೊಂದು ಸೆಲ್ಯೂಟು

ನೋಡಲಿಹುದು ನರಸಿಂಹ ದೇಗುಲ
ಕಾಗದ ನಗರದ ಉದ್ದಗಲ
ನಾ ಬಂದಿಹುದಿಲ್ಲಿ ಕೆಲವೆ ಸಲ
ಮುಖ್ಯವೆ ಬಿಟ್ಟರೆ ಹೇಳಲೀಸಲ
ಮನ್ನಿಸಿ ತಿದ್ದಿರೆನ್ನೀ ತೊದಲ

ಎದ್ದು ಬಾ INDIA

ಬಾ INDIA ಎದ್ದು ಬಾ
ಬೌಂಡರಿ, ಸಿಕ್ಸರ್ ಚಚ್ಚು ಬಾ
ನಿದ್ದೆ ನಿನಗಲ್ಲ ಎದ್ದು ಬಾ
ವರ್ಲ್ಡ್ ಕಪ್ಪನು ಗೆದ್ದು ಬಾ|1|

ಸಾಗದು ತಂಡ ನಿನ್ನ ವಿನ ದೋಣಿ
ಲಕ್ಕನು ಹೆಕ್ಕದೆ ಮರಳಿ ಬಾ
ನಿನ್ನೆಂದಿನ ಆಟವ ಆಡು ಬಾ
ಆಟವೆಲ್ಲಿ ಮರೆತೆಯೋ ಯುವರಾಜ
ನಿನ್ನಾಟದಲ್ಲಿ ಈಗಿಲ್ಲ ಮಜ
ಕಮಾಲ್ ತೋರು ನಿನ್ನ ಸಹಜ|2|

ಇಹ ಕ್ರಿಕೆಟ್ ದೈವ ತೆಂಡೂಲ್ಕರ್
ನಿನ್ನಾಟವ ತೋರೋ ವೀರೂ
ನಂಬಿಕೆಯ ತಾರೆ ಬಾ ಕೊಹ್ಲಿ
ಕೈಕೊಡಬೇಡವೋ ರೈನಾ
ನಿನ್ನೂ ನಂಬುವೆವು ಯೂಸುಫ್..|3|

ಸ್ಪಿನ್ ಗಾರುಡಿಗರೆ, ಎದ್ದು ಬನ್ನಿ
ಮರೆತ ಜಾದುವ ಮರಳಿ ತನ್ನಿ
ವಾಯುವೇಗ ಮರೆತ ವೇಗಿಗಳೇ
ಎದುರಾಳಿಗಳಿಗೆ ನಡುಕವ ತನ್ನಿ|4|

ಕ್ಷೇತ್ರದಿ ಚಿರತೆಯ ಚುರುಕು ತನ್ನಿ
ಹೇಳುವುದೇನಿದೆ ನಿಮಗೆ ?
ಎಲ್ಲರೂ ಹುಲಿಗುಳೇ, ಸೇರಿ ಆಡಿದರೆ
ಸಮರಿಲ್ಲ ನಿಮಗ್ಯಾರು ಕಲಿಗಳೇ.|5|

ಅಮ್ಮನಿಗೊಂದು ಪ್ರಣಾಮ

ಗರ್ಭದಲೇ ನೀ ನಗುತಾ ಸಹಿಸಿದೆ
ನನ್ನ ಒದೆತಗಳ ಪೆಟ್ಟ
ಹೇಗೆ ಮರೆಯಲಿ ನನ್ನ ತಿದ್ದಲು
ನಿನ್ನ ಸಾತ್ವಿಕ ಸಿಟ್ಟ|1|

ಮೊದಲ ತೊದಲನೂ ಇಷ್ಟಪಟ್ಟೆ
ಕೆಟ್ಟ ಮಾತಿಗೆ ಪೆಟ್ಟು ಕೊಟ್ಟೆ
ಬೀಳದಿರಲಿ ದ್ರುಷ್ಟಿಯೆಂದು ಬೊಟ್ಟನಿಟ್ಟೆ
ನವಮಾಸಗಳು ನನ್ನ ಹೊತ್ತೆ
ನೀ ರಕ್ತ ಹಂಚಿ ಆಕಾರವಿತ್ತೆ|2|

ಆಹಾರವಿತ್ತೆ, ನಿನ್ನ ನಿದ್ರೆ ಬಿಟ್ಟೆ
ನನ್ನಿಷ್ಟಕಾಗೆಷ್ಟು ಕಷ್ಟ ಪಟ್ಟೆ
ನಿನ್ನಿಷ್ಟದಂತೆ ನಾನೇನು ಕೊಟ್ಟೆ?
ಬರೀ ದುಖ: ಅಳುಗಳೇ?
ಯಶ,ಸಂತೋಷದ ಬಳೆಗಳೇ ?|3|

ನನ್ನ ನೋವುಗಳು ನಿನ್ನದೆಂದೆ
ನೀ ಮುಳ್ಳಲಿದ್ದರದು ಹೂವು ಎಂದೆ
ನೀ ಪಟ್ಟ ಕಷ್ಟ ನಾ ಅರಿಯೆನೆಂದೆ?
ಒಡೆದ ಕಾಲ್ಗಳು, ಸೂರ್ಯ ಸುಟ್ಟ
ಮುಖ ಕಾಣದಿರಲೆಂದು ದೂರ ನಿಂದೆ|4|

ಮರೆಯಲ್ಹೇಗೆ ನೀನಿರುವ ನೆಲ
ಹಿತನುಡಿಗಳ ಅನುಭವದ ಫಲ
ಕಷ್ಟಗಳನೆ ಹೆದರಿಸುವ ಛಲ
ನಿನಗೆ ನಮನ ಮತ್ತೊಂದು ಸಲ|5|

adhoc ಕವನಗಳು

ಜೀವನವೆಂಬುದು ಒಂದು adhoc
ಎಲ್ಲ temporary ದಿನಾ ಹೊಸ worry
ಇರುವುದು ಬಿಟ್ಟು ಇಲ್ಲದ ಬಯಸಿರೆ
ಚಿಂತೆಯಲಿ ಲೈಫೇ ಮಟಾಷ್|1|

ಬೆಳಬೆಳಗ್ಗಿನ ಕ್ಲಾಸುಗಳು
ಕ್ಲಾಸಿಲ್ಲವೆಂಬ ಮೆಸೇಜ್ ಗಳು
ಕಾಸಿಲ್ಲದಿದ್ರು ಪಾರ್ಟಿಗಳು
ಪಾಟಕ್ಕೆ parallel ಜೋಕ್ ಗಳು|2|

ಕ್ಲಾಸ ಮಧ್ಯ ಮೆಸೇಜಿಂಗ್
ಬೋರು ಕಳೆಯಲು ಚಾಟಿಂಗ್
ಮಜಾ ಮಾಡಲು ಪ್ಲಾನಿಂಗ್
ಹೊರಗಡೆ ಇರೋದ ಸರ್ಚಿಂಗ್|3|

ಪಾಟವಾ ,ಪ್ರಶ್ನೆಯಾ ತಿಳಿಯದು
ಐಡಿಯಾ ಓಡುವ ಬಗೆಯದು
ಮನಸಲಿದ್ದರೂ ಬರೆಯಲಾಗದು
ಬೆಳಕ ತರೋ ಸೂರ್ಯ ಸರ್ ಗೆ ಸಲಾಮ್ |4|

ನಮ್ಮಯ ಹೋಳಿ ಹಾವಳಿ

ಮೇಲುಕೀಳೆಂದು ಮುದುಡಿ ಕೂರದೆ
ಹಿರಿಕಿರಿಯರೆಂಬ ಭೇಧವಿಲ್ಲದೆ
ಯಾರಿಲ್ಲವೆಂದ ಗೆಳೆಯರ ಬಿಡದೆ
ಮನೆಗೇ ಸಾಗಿ ಬಳಿಯಲು ಮರೆಯದೆ
ಸಾಗಿತು ನಮ್ಮಯ ಹೋಳಿ
ಬಣ್ಣದೋಕುಳಿಯ ಧಾಳಿ|1|

ವೇಷದ ನಾಮವ ಬರಿಯೋ ವರುಣ
ಬಣ್ಣ ಬಳಿಯೋ ಪ್ರವೀಣ
heavy hand ನಮ್ಮೀ HB
ನೀನೇನ್ ಕಮ್ಮಿ ನಿಕೇತ|2|

ಅಪರೂಪವಲ್ಲ ನಿರೂಪ
ಬಣ್ಣಕೆ ಜೈಯೆಂದಜಯ
ಮನ ರಂಜಿಸದ ರಂಜನ್
ನಿಂಗೂ ಗುರಿಯಿಟ್ವಿ ಅರ್ಜುನ್|3|

ಉಜ್ವಲ ಬಣ್ಣ ಪ್ರಜ್ವಲ್
ನೀ ಬಂದ್ಮೇಲೆ ಜನ ಡಬಲ್
ಮನೇಲೆ ಕೂತ್ರೂ ಮರೆಯೆವು ಮಯೂರ
ಅಯ್ಯೋ ಪಾಪ ದಿಲೀಪ|4|

ಹರ್ಷನ ಹುಡುಕಿ ಹರ್ಷದೋಕುಳಿ
ರಕ್ಷಿತ್ ಜೊತೆಗೆ ತಮ್ಮಗೂ ಬಳಿ
ಕೊನೆಯ ಸ್ಪಾಟು ಪ್ರಶಾಂತ
ನಮ್ ಹೋಳಿಯಾಟವಿಲ್ಲಿ ಶಾಂತ|5|

ಏನು ಬರೆಯಲಿ ನಾ?

ತನ್ಮಯನಾಗಿ ಮೈಮರೆತು
ನನ್ನ ಪ್ರೀತಿಸೋ ಮನ ಮರೆತು
ಅಪಹಾಸ್ಯದ ಕ್ರೌರ್ಯದ ಜೊತೆ ಬೆರೆತು
ಕಣ್ಣಿಗೆ ಕಾಣದ ಮನಸರಿತು|1|

ಬೆಲೆಯಿಲ್ಲದೆಡೆ ಏಕೆ ಬದುಕಲಿ?
ಯಾರ ನೆನೆಪಿನಲಿ ಹೊತ್ತ ಕಳೆಯಲಿ
ಸಂತಸವಿಲ್ಲದೆ ಏನು ಕೂಡಲಿ?
ಮತ್ತೆ ಬೀಳುತಿದೆ ಭಾವಕೆ ಕೊಡಲಿ
ನನ್ನೊಳಗಿಲ್ಲದ ನಾ ಹೇಗೆ ಕೊಡಲಿ?|2|

ನನ್ನ ಪ್ರಶ್ನೆಗುತ್ತರವೇನು?
ಅದು ನನ್ನನು ಕಾಡುವ ತರವೇನು?
ಗಿರ ಗಿರಗುಟ್ಟೋ ಬಗೆಯೇನು?
ನೀನೇ ಹೇಳೋ ಪಾಪು|3|

ಯಾರು ತನ್ನನ್ನು ನೆನೆಯಲ್ಲವೆಂದು
ಕನ್ನಂಬಾಡಿ ಅಳುವುದೇ?
ತನ್ನೇ ಒದೆಯುವ , ಒಡೆಯಲು ನುಗ್ಗುವ
ನೀರ ತಡೆವುದ ಬಿಡುವುದೇ?|4|

ಯಾರು ಗುಣಗಾನ ಮಾಡದಿದ್ದರೂ
ರವಿ ಹುಟ್ಟುವುದ ಬಿಡುವನೇ?
ತನಗಿಂತ ಹೆಚ್ಚು ಭಾರ ಹೊತ್ತ
ಇರುವೆಯೇ ಅಳುವುದೇ?
ತಾ ಹೊರುವುದ ಬಿಡುವುದೇ?
ಇವರ ಮುಂದೆ ನೀನೋನೋ ಪಿ.ಪಿ
ಬಿಡಬೇಡ ನಿನ್ನ ಪೀಪಿ|5|

ಗುರುವಿನ ಗುಂಗಿನಲಿ

ಗುರುವೇ ಎಲ್ಲಿರುವೆ ನೀನು?
ಸಂಕಷ್ಟದಲಿ, ಇಕ್ಕಟ್ಟಿನಲಿ
ಉಸಿರುಗಟ್ಟಿಸೋ ಗುಂಪಿನಲಿ
ಕಾಲೆಳೆತದ, ತುಳಿತದ ಹೊತ್ತಿನಲಿ
ನಿನ್ನೇ ನೆನೆಯುವೆ ನಾನು

ನಿನ್ನೇ ಮರೆತ ಪಾಪಿಯ ನಾ?
ಏರಿದ ಏಣಿಯ ಒದ್ದವನಾ?
ಹೆಸರೆಂಬ ಕೆಸರಿನಲಿ ಬಿದ್ದವನಾ?
ಹಸಿದವರ ನೋಡಿಯೂ ನಕ್ಕವನಾ?
ಜ್ನಾನವ ಹಂಚದೆ ಹೂತವನಾ ?

ನಮಗಾಗಿ ನೀನೆಲ್ಲ ಮರೆತೆ
ಹಗಲಿರುಳು ಚಿಂತೆ ನಮ್ಕುರಿತೇ
ನಿನ್ನ ಶಿಷ್ಯರ್ಯಾರೆಂಬುದು ಚರಿತೆ
ಕೊನೆಗೇನೂ ಕೋರದೆ ಹೊರ‍ಟೆ

ಇಂದು ನೀನಿಲ್ಲ ನಮ್ಮೊಡನೆ
ಕಷ್ಟ ಕಳೆದೊಡನೆ
ನೀನಿಷ್ಟವಾದೊಡನೆ
ಕೆಸರಿಂದೆತ್ತಿದ, ಹೆಸರನ್ನಿತ್ತಿಹ
ಓ ಸದ್ಗುರುವೇ,
ನಿನ್ನ ದಿನಾ ನೆನೆವೆ

ಭಾರತ ಪಾಕ್ ಕ್ರಿಕೆಟ್

ಭಾರತ ಪಾಕ್ ಕ್ರಿಕೆಟ್
ಸೇಲಾಗಿದೆ ಲಕ್ಷಕೆ ಟಿಕೆಟ್
ಬೌಲರ್ ಗಳ ಲಕ್ಷ್ಯ ವಿಕೆಟ್
ಗೆಲುವು ಯಾರಿಗೋ ಸೀಕ್ರೆಟ್|1|

ನಮ್ಮಿಂಡಿಯಾದ ವೇಗದ ದಾಳಿಗೆ
ಥರಥರಗುಟ್ಟಲಿ ವಿಕೆಟ್
ಮಿಂಚಿನ ವೇಗದ ಕ್ಷೇತ್ರರಕ್ಷಕರೇ
ಆಗದಿರಿ ತೂತ್ ಬಕೆಟ್|2|

ಪಾಕ್ ವೇಗಿಗಳ ಯಾವ ಅಸ್ತ್ರಕೂ
ಮುಳುಗದು ತಂಡದ ನಾವೆ
ಸಾಮರ್ಥ್ಯಕ್ಕೆ ತಕ್ಕಂತಾಡಿದರೆ
ಇಲ್ಲೂ ಗೆಲುವುದು ನಾವೇ|3|

ಮಂತ್ರಿಯು ಬರುವರು, ಸಂನ್ಯಾಸಿಗಳಿರುವರು
ಏರೆಲ್ಲೆಡೆ ಮ್ಯಾಚಿನ ಜ್ವರವು
ಒತ್ತಡವ ತಾಳಿ, ತಂ ಪ್ರತಿಭೆ ತೋರಿ
ಕೊನೆವರೆಗು ಉಳಿದವಗೆ ಗೆಲುವು|4|

ರಸ್ತೆ ಮಧ್ಯದ ದೀಪಗಳು

ರಸ್ತೆ ಮಧ್ಯದ ದೀಪಗಳು
ಕಪ್ಪ ಮದ್ಯದ ಕೆಂಪುಗಳು
ಇರುಳಲ್ಲರಳೋ ಮಿಣುಕುಗಳು
ತಡೆಗಳ ತೋರೋ ಗುರುತುಗಳು
ಏನರುಹುತಿವೆ ಅವುಗಳು?|1|

ರಸ್ತೆಯ ಮೇಲಿಲ್ಲ ನಿಂ ಗಮನ
ಸಾಗುವಾಗಲೇ ಮೊಬೈಲು
ಹೈಸ್ಟೈಲು ತೋರುವ ಐಲು
ಹಿಂದೆ ಕೂತವರಿಗೆ ದಿಗಿಲು
ಅದ್ಕೇ ವಾರ್ನಿ೦ಗಾ ಇವುಗಳು?|2|

ಎಲ್ಲಿಗೋ ಹೋಗೋ ಅವಸರ ನಿಮಗೆ
ಓವರ್ ಟೇಕ್ ಮಾಡುವಿರಿ
ಹಿಂದೆ , ಮುಂದೆ ಎಂದೂ ನೋಡದೆ
ಒಂದೇ ಸಮನೆ ನುಗ್ಗುವಿರಿ ,
ಮುಂದೆ ಕಾದಿರುವ ಗಾಯಗಳ
ಕಲರಿಂಡಿಕೇಶನಾ ಇವುಗಳು?|3|

ದಾರಿ ಸೈಡಿನ ಹುಡುಗಿ(ಗನ)ಯ ನೋಡುತ
ನಿಮ್ಮೆದುರಿಗಿರುವುದ ಮರೆಯದಿರಿ
ನಿಧಾನ ಸಾಗಿರಿ, ನಿಧನವಾಗದಿರಿ
ಎಂಬ ಸಂದೇಶದ ನಿಧಿಗಳು
ಕಡಿವಾಣ ವೇಗಕೀ ದೀಪಗಳು
ಅಪಾರ ಸಂದೇಶದ ಗಣಿಗಳು|4|

ನಿನದೇ ನೆನಪು

ನೆನಪ ನೆಪದಲ್ಲಿ
ನನ್ನ ಮನಸಲ್ಲಿ
ಕಣ್ಣ ಕನಸಲ್ಲಿ
ಬಿಸಿಯ ಉಸಿರಲ್ಲೂ
ನೀನೇನಾ ?|1|

ನೆಪವು ಹಟವಾಗಿ
ಬಿಡದ ತಪವಾಗಿ
ಮನದ ಹಟಯೋಗಿ
ಸುಖವ ಮರೆಯಲು
ಬೀಸಿದ ಮಾಯೆ ನೀನೇನಾ?

ಏನನ್ನುವಿರಿ ಗೆಳೆಯರೇ

ಪ್ರೀತಿಯೆಂದರೆ ಇಷ್ಟೇನಾ?
ತೋಚಿದ ಗೀಚುವುದಷ್ಟೇನಾ?
ಪ್ರಣಯವಿಲ್ಲದ ಪ್ರೀತಿಯಿಲ್ಲವೇ
ನಾಕೆಜ್ಜೆ ಸಾಗಿದರೆ ಕತೆಕಟ್ಟೋ
ಹಳದಿ ಕಣ್ಣುಗಳು ನಮ್ದೇನಾ?|1|

ತಾಯಿ ಮಗುವಿನ ಪ್ರೀತಿಯಿಲ್ಲವೇ
ಗುರುಶಿಷ್ಯರ ಅನುಭೂತಿಯಿಲ್ಲವೇ
ಅಕ್ಕ ತಮ್ಮರ ಅಕ್ಕರೆಯಿಲ್ಲವೇ
ಸ್ನೇಹಿತರು ನಕ್ಕರೂ ಅದ್ಕೊಂದರ್ಥ
ಅವರಿಗು ನೀತಿಯ ಭೀತಿಯಿಲ್ಲವೇ|2|

ಬೇಕೇ ನಮಗಿಂದು ದೇವದಾಸರು
ಎಲ್ಲ ತಪ್ಪೆನ್ನೊ ತತ್ವಜ್ನಾನಿಗಳು
ನಗುಮೊಗದ ಬದಲು ಚಿಂತಾಕ್ರಾಂತರು
ಹೀಯಾಳಿಸುತಲೆ ಖುಷಿಪಡುವವರು|3|

ಇಹ ನಾಲ್ಕು ದಿನದ ಸವಿ ಬೆಳೆಸೋಣ
ನೋವನಳಿಸಿ ನಗು ಬೆಳೆಸೋಣ
ನಿನ್ನ ಗೆಳೆಯರಲು ನಿನ್ನೇ ಕಂಡರೆ
ನಗು ಹಿಂದೆ ಹಾಸ್ಯ ಕಾಣುವುದು
ನಂಬುದ್ಧಿ ನಂ ಕೈಯಲ್ಲಿದ್ದರೆ
ಮಧುರ ಸ್ನೇಹವೇ ಅರಳುವುದು
ಏನನ್ನುವಿರಿ ಗೆಳೆಯರೇ
ಓ, ನನ್ನ ಪ್ರಿಯ ಮಿತ್ರರೇ..

ಕಾಲೇಜ್ ಮೇಲೆ ಕವನ

ನವಿಲೆ ಕೆರೆಯ ಬದಿಯಲ್ಲಿ
ಪರ್ಫೆಕ್ಟ ಅಲಾಯ್ಸ್ ಪಕ್ಕದಲಿ
ರಾಗಿ ಗುಡ್ಡದ ತಪ್ಪಲಲಿ
ಕಣ್ಣು ಹಾಯಿಸಲು ಕಾಣುವುದು
ಜೆ.ಎನ್.ಎನ್ ಎಂಬ ಬಲು ಸೊಬಗು|1|

ಎಲ್ಲೆಂಲ್ಲಿದಲೋ ಬಂದಿಹ ನಾವು
ಇಲ್ಲಿ ಕಲೆತು ನಲಿಯುವೆವು
ವಿಚಿತ್ರ ಭಾಷೆಯ, ಶೈಲಿಯ ಮಧ್ಯದಿ
ನಮ್ಮತನವ ನೆನೆಯುವೆವು|2|

ಮರೆಗುಳಿ ಪ್ರೊಫೆಸರ್, ಸ್ಟೈಲಿಗೇ ಸವಾಲ್
ಮನೆರುಚಿ ಮರೆಸೋ ಕ್ಯಾಂಟೀನು
ಹೈ ರೇಟಿನ ಅದಕೆ ಸವಾಲೆಸೆಯುವ
ರಘು, ಮಾಮುವಿನ ಗುಟ್ಟೇನು?|3|

ಕರ್ನಾಟಕದ ಹೈಕ್ಲಾಸ್ ಗ್ರೌಂಡು
ಹೈ ರಯಾಕಿಂಗಿನ ಗೆಳೆಯರ ದಂಡು
ಈಸಿಯೋ, ಟೀಸಿಯೊ ಸುಲಭವೊ ಕಷ್ಟವೋ
ಐ.ಎಸೊ, ಸಿ.ಎಸೊ ಯಾವ್ದೋ ೧ ಕ್ಲಾಸು
ಎಲೆಕ್ಟ್ರಿಕಲ್ ಶಾಕು, ಮೆಕಾನಿಕಲ್ ಮಾರ್ಕು
ಸಿವಿಲ್ ಸರ್ವೆಯೋ, ಎಷ್ಟು ಮಹಿಮೆಯೋ
ಹೇಳಲಾಗದಿದ , ಬರೆಯಲಾಗದಿದ..|4|

ಹೊತ್ತು ಹೊತ್ತಿಗೂ ನಮ್ಮ ಹೊರುವ
ಹತ್ತಕ್ಕಿಂತಲೂ ಹೆಚ್ಚು ಬಸ್ಸು
ಹಾಸ್ಟೆಲೆಂಬ ಗೆಳೆಯರ ಸ್ವರ್ಗ
ರ್ ಯಾಗಿಂಗ್ ಸೈತಾನ ಹೆದರುವ ದರ್ಗ|5|

ಮನಸೂರೆಗೊಳ್ಳೊ ಮಳೆನೀರ ಸಂಗ್ರಹ
ಚೆಲ್ಲೋ ಬದಲು ನೀರ ಶುದ್ಧಿಸಿ ಸಂಗ್ರಹ
ಪಕ್ಕದಲ್ಲೇ ಇಹ ಎಮ್.ಬಿ.ಎ
ಮ್ಯಾನೇಜ್ ಕಲಿಯೋ ಸೂಪರ್ ವೇ|6|

ಎಂದು ಮುಗಿಯುವುದೋ ನಮ್ಮ ಲೈಬ್ರರಿ
ಏಳು ಕೋಟಿ ಕೊಟ್ಟೂ ಮುಗಿಯದ ವರಿ
ಹಾಸ್ಟೆಲಿಗರಿಗೆ ೩ ಹೊತ್ತಿಗು ಮೆಸ್
ಲೇಟಾಗೆದ್ದರೆ ಆ ತಿಂಡಿಯೂ ಮಿಸ್|7|

ಇರುವುದು ಜ್ನಾನಕೆಂದು ಬ್ರೌಸಿಂಗು
ಸುಮಾರು ಜನರಿಗದೇ ಮೈಲ್ ಚೆಕಿಂಗು
ಬಿ.ಬಿ.ಮ್ , ಡಿಪ್ಲೊಮದವರೂ
ಇಲ್ಲಿ ಓದುವರು, ನಮ್ಮಯ ಗೆಳೆಯರು|8|

ನಾವಾಟಕೂ ಸೈ, ಓಟಕೂ ಸೈ
ಮೋಜಿಗೂ ಜೈ,ಓದಿನಲೆತ್ತಿದ ಕೈ,
ಜೀವನದಿ ನಾ ಮರೆಯೆ ತಾಣವಿದ
ಜೆ.ಎನ್.ಎನ್ ಎಂಬ ಕಾಲೇಜಿದ

ಗಿರೀಶ್ ಸರ್ ಗೊಂದು ನಮನ

ನಂ ಗಣಿತದ ಸರ್ ಗಿರೀಶ್
ಪಾಠ ಕೇಳಿದವರ ಡೌಟ್ ಫಿನಿಷ್
ಮೊದಲ ಸೆಮ್ ಗಣಿತ ಕ್ಲಿಷ್ಟವೆನಿಸದೆ
ಮನಕಿಷ್ಟವಾದ ಗುರು ಗಿರೀಶ್|1|

ನಿಮ್ಮಿಂದ ಕಲಿತ vectors, jacobian
Fourier series, PDE
ಕಡಿಮೆ ಸಮಯದಲಿ ಹೆಚ್ಚು ಕಲಿಸಿದ
ಎರಡು ಸೆಮ್ಮುಗಳ ಮಧುರಾನುಭವ
ನಿಮ್ ನೆನಪಮರ ಸರ್ ಗಿರೀಶ್|2|

ನಮ್ಮೊಂದಿಗಿಂದು ನೀವಿಲ್ಲ
ಚಾಕಿ ತರುವೆನೆಂದವಳಿ ಪುತ್ರಿಯರಿ-
-ಗೇಳಿ ಹೊರಟ ತಂದೆ ಬರಲಿಲ್ಲ
ಜೆ.ಎನ್.ಎನ್ ಜೊತೆ ಸಹ್ಯಾದ್ರೀಲೂ
ಗಣಿತ ಜ್ನಾನವಿತ್ತ ಗುರುವಿಂದಿಲ್ಲ|3|

38 ರ ವಯಸಿನಲೇ
ಇಹಲೋಕ ತ್ಯಜಿಸಿದ ಗುರುವೇ
ನಿಮ್ ದೇಹ ಜೊತೆಗಿಂದು ಇಲ್ಲದಿದ್ದರೂ
ನೀ ನಮ್ಮ ಮನಸಿನಲೇ ಇರುವೆ.
ನೀವಗಲಿದಪಾರ ನೋವ ಭರಿಸೊ ಶಕ್ತಿ
ನಿಂ ಮನೆಗೆ ಸಿಗಲೆಂದು ಬೇಡುವೆವು..
ಅನಂತ ವಂದನೆ ನಿಮಗೆ ಸಲ್ಲಿಸುತಾ
ನಿಮ್ಮಾತ್ಮಕೆ ಶಾಂತಿಯ ಕೋರುವೆವು.|4|

ರವಿಯ ಸುತ್ತೊಂದು ಗಿರಕಿ

ಚಂದ್ರನಿಂದ ನೀ ಚಾವಿ ಪಡೆಯುತಲೆ
ಬೆಳಕ ತೋರೊ ಶಿಫ್ಟು ಬದಲಾಗಿದೆ
ಅದ ಜನರೆಂದರು ಅರುಣೋದಯ
ನವ ಚೈತನ್ಯದ ಶುಭೋದಯ|1|

ರಿಟೈರೇಜವರ ಎಕ್ಸರ್ಸೈಜು
ಹದಿಹರೆಯದವರ ಹಾಸಿಗೆ ಪೋಸು
ಗಳ ಮಧ್ಯೆ ಮಹಿಳೆ ನಿನ್ನ ನಮಿಸಲು
ನೀ ನಾಚಿ ಕೆಂಪಾಗಿ ಬೇಗನುದಯಿಸಲು
ಅದ ಜನರೆಂದರು ಸೂರ್ಯೋದಯ|2|

ಹೊತ್ತೇರಿದಂತೆ ನೀ ಬಿಳಿಯಾಗುವೆ
ಮಧುರ ಕುಸುಮಗಳ ಮೊಗ್ಗರಳಿಸುವೆ
ಬಹು ನೀರೆತ್ತದ ಮಳೆಚಕ್ರಕೆ ತರುವೆ
ನೀನೆತ್ತಿ ಮೇಲ್ಬರುವ ಮಧ್ಯಾಹ್ನ ಭಯ
ಅದು ಕೆಂಡದಂತೆ ನೆಲ ಸುಡುವ ಸಮಯ|3|

ಸಂಧ್ಯೆ ಬಂದೊಡನೆ ಮುಳುಗುವೆ ಸೂರ್ಯ
ಮುಗಿಸಿ ನಿನ್ನಯ ಅಂದಿನ ಕಾರ್ಯ
ಯಾರೇನೆಂದರು, ಎಷ್ಟು ಶಪಿಸಿದರು
ಬೇಡೆ ಎಂದು ಸಾಂತ್ವನದ ಮುಲಾಮ
ದಿನ ಹೊಸ ಪ್ರಭೆ ತೋರೋ ನಿಂಗೆ ಪ್ರಣಾಮ
ನಿಂಗ್ಯಾರು ಸಮ ಜಗದ ಅಲ್ರಾಮ |4|

ಪುಟ್ಟ ಮಗುವ ನಗು

ಕಿಟಕಿ ಮರೆಯಿಂದ
ಪುಟ್ಟಮಗುವೊಂದು
ಇಣುಕಿ ನೋಡಿ ನಕ್ಕಾಗ
ನನ್ನೆತ್ತಿಕೊಳುವೆಯಾ, ಪಪ್ಪಿಕೊಡುವೆಯಾ
ಎಂದುಲಿದಂತಾದಾಗ|1|

ಹಗೆ ಮೋಸವರಿಯದ ಮುಗ್ಧ ನಗೆಯದು
ತೊದಲ ನುಡಿಯುವ ಶುದ್ಧ ತುಟಿಯದು
ಕಣ್ಮುಚ್ಚಾಲೆಯೆಂಬಂತೆ ಇಣುಕಿತು
ನಂ ಬಸ್ಸ ಕಿಟಕೀಂದ ಮನಕಿಳಿಯಿತು|2|

ಒಂದು ಮಾತನಾಡದೇ ಮನಗೆದ್ದೆಯಾ
ಬಾಲ್ಯದ ನೆನಪನು ಬಿಚ್ಚಿ ಇಟ್ಟೆಯಾ
ನಿನ್ನ ನಗೆಯಲಿ ಆಡಿಸುವಾತನ
ಆಶೀರ್ವಾದವ ಕಂಡೆ ಆ ಕ್ಷಣ
ನಗುವಲೆ ಗೆಲುವೆಂಬಂತ ಆ ಕ್ಷಣ|3|

ಬಸ್ಸೆರಡು ನಿಂತಷ್ಟೆ ಕಾಲ ನಗು
ತೋರಿ ಹರ್ಷಿಸಿದೆ ನೀನು ಮಗು
ಯಾರೆಂದರಿಯದಿರೇನಂತೆ
ನಿನಗರ್ಪಿಸಿದೆ ಕವನ ಕೃತಜ್ನತೆಯಂತೆ|4|

ಮಳೆಗೊಂದು ಮನವಿ

ಕಾರ್ಮುಗಿಲುಗಳ ತಾಯೆ
ಮನತಣಿಸಲು ಮಳೆವೀಯೆ
ನಿನ್ನ ಕರೆಯೆ ದೀಪಕವರಿಯೆ
ಸ್ತುತಿಸಲೊಳ್ಳೆ ರೂಪಕವರಿಯೆ
ಮನ ಮುದುಡೋ ಮೊದಲು
ಮಣ್ಣಿನ ಮಕ್ಕಳ ಕಾಯೆ|1|

ಬಿತ್ತಿದ ಬೀಜಗಳೊಣತುತಲಿಹವು
ನೀರಾಕರಗಳು ಬತ್ತುತಲಿಹವು
ಹಸಿರರಸುತಲಿಹ ಹಸಿದ ರಾಸುಗಳು
ಧಗೆ ತಾಳದೆ ಎಲ್ಲೆಡೆ ಬಿಸಿಯುಸಿರು
ಸಾಲಕೆ ಸಿಕ್ಕಿಹ ಹೊದ್ದವ ಹಸಿರು|2|

ಕಣ್ತೆರೆದು ನೋಡಮ್ಮ ತಾಯೆ
ಮಳೆಹನಿಸಿ ತಣಿಸೆಮ್ಮ ಮಾಯೆ
ಉರಿಬಿಸಿಲ ತಡೆಯುವ ಛಾಯೆ
ಹಸಿ ಹೊನ್ನನರಳಿಸೋ ಕಲೆಯೇ
ನಮ್ ನರಳಿಸುವುದು ನಿಂಕಳೆಯೇ?|3|

ಇಳಿದು ಬಾ, ತಾಯೇ ಸುರಿದು ಬಾ
ಮಲೆನಾಡ ಮುಡಿಗೆಂದು, ಸೀಮೆ ಬಯಲೆಂದು
ಕಡಲ ತಡಿಗೆ ದಯ ತೋರಿ ಬಾ
ಹಸಿರುಕ್ಕಿಸೆ ಲಗುಬಗನೆ ಬಾ
ಧಗಧಗಿಸೋ ತಾಪ ತಣಿಸು ಬಾ
ಗಹಗಹಿಸೋ ಅಲಕ್ಷ್ಮಿ ಅಟ್ಟು ಬಾ
ಬಾಯ್ಬಿಡೊ ಮುಂಚೆ ಭೂಮಿಯುಳಿಸು ಬಾ

(ಮನೆ)ಮನದಿ ಗೂಡು ಕಟ್ಟಿದೆ ಪಾರಿವಾಳ

(ಮನೆ)ಮನದಿ ಗೂಡು ಕಟ್ಟಿದೆ ಪಾರಿವಾಳ
ಏನೋ ಅರಿಯದ ತಳಮಳ
ಯಾರ ಬರುವಿಕೆಗೆ ಕಾದಿಹೆಯೊ ನೀ
ಇನ್ಯಾರ ನೆಪದಲೀ ಕಂಬನಿ?

ಶಾಂತಿ, ಪ್ರೀತಿ ದ್ಯೋತಕ ನೀನಂತೆ
ನಿನ್ನಿಷ್ಟದ, ಬಲು ಶಿಸ್ತಿನ
ನಂ ತಂದೆ ನೆನಪು ತಂದೆ
ಒಡೆಯನೊಂದಿಗೇ ನೀ ಮರೆಯಾದೆಯ
ಮಧುರ ಕ್ಷಣ ಸಾಕ್ಷಿ ಪಾರಿವಾಳ

ಪಟ ಪಟ ರೆಕ್ಕೆಯ ನಿನ್ನ ಶಬ್ದದಿ
ನೆನಪಾಯ್ತಜ್ಜಿಯ ವಟವಟ,
ಸಮಯದೊಂದಿಗಿನ ಅಪ್ಪನ ಓಟ
ಮುಗಿಲೆತ್ತರದ ನಿನ್ನ ಹಾರಾಟ,ಉನ್ನತ
ಆದರ್ಶ ಪಾಲನೆಗೆ ಅವರ ಹೋರಾಟ
ಮರಿಗಳ ಸಲಹೋ ಬೆಚ್ಚನೆ ಗೂಡು
ನೆನಪಿಸಿತು ಅಮ್ಮನ ಅಕ್ಕರೆ ಮಡಿಲು

ಹಳೆನೆನಪು ತಾರೋ ಬಿಳಿ ಪಾರಿವಾಳ
ಮರಳಿ ಬಂದೆಯಾ ಗೂಡು ಕಟ್ಟಲು
ಒಡೆಯನ ಆಶೀರ್ವಾದ ನೀಡಲು
ಕಳೆದ ಶಾಂತಿ ಮತ್ತೆ ಮರಳಿಸಲು

ರಾಗಿ ಗುಡ್ಡದ ಮೇಲೇರಿ

ಶಿವಮೊಗ್ಗೆಯ ನವಿಲೆ ಅ0ದರೆ ಅನೇಕರಿಗೆ ತಕ್ಷಣಕ್ಕೆ ಹೊಳೆಯದೇ ಇದ್ದರೂ,ಜವಹರ ಲಾಲ್ ನೆಹರೂ ಇ0ಜಿನಿಯರಿ0ಗ್ ಕಾಲೇಜಿನ ಸಮೀಪ ಅ0ದರೆ ಪಟ್ಟನೆ ಹೊಳೆಯಬಹುದು.ಇಲ್ಲೇ ಇರುವುದು ರಾಗಿ ಗುಡ್ಡ.ರಾಗಿ ಗುಡ್ಡಕ್ಕೆ ಅನೇಕ ಕಡೆಯಿ0ದ ಏರಬಹುದು.ಮೊದಲನೆಯ ಮತ್ತು ಸುಲಭದ ಮಾರ್ಗ ರಸ್ತಯ ಮುಖಾ0ತರ ಪಯಣ.ನವಿಲೆ ಕೆರೆ ದಾಟುತ್ತಿದ್ದ0ತೆಯೇ ಕೆರೆಯ ಏರಿಯ ಮೇಲೇ ಇದೆಯೇನೋ ಎ0ದನಿಸುವ ಶ್ರೀಗಣಪತಿ ದೇವರ ದರ್ಶನ ಪಡೆದು ಹಾಗೆಯೇ ಬ್ರಹ್ಮ,ವಿಷ್ಣು,ಮಹೇಶ್ವರ ದೇವಸ್ತಾನಕ್ಕೆ ದಾರಿ ಎ0ಬ ದಾರಿ ಎ0ಬ ಮಾರ್ಗದಶರ್ಿ ಫಲಕದ0ತೆ ಸಾಗಿದರೆ ರಾಗಿ ಗುಡ್ದ ದೇವಸ್ತಾನ ಸ0ಕೀರ್ಣಕ್ಕೆ ಬರುವ ಭಕ್ತರನ್ನು,ಪ್ರವಾಸಿಗಳನ್ನು ಹೊತ್ತೊಯ್ಯಲು ಕಾತರವಾಗಿ ಕಾಯುತ್ತಿವೆಯೇನೋ ಎ0ದನಿಸುವ ಮೆಟ್ಟಿಲುಗಳ ಬುಡದವರೆಗೂ ಸಾಗಬಹುದು.ನೂರ ಎ0ಟು ಮೆಟ್ಟಿಲುಗಳ ಮಧ್ಯೆ ವಿಭಾಜಕ ಹಾಕಿ ಒ0ದು ಬದಿಯಿ0ದ ಏರಲು,ಮತ್ತೊ0ದು ಬದಿಯಿ0ದ ಇಳಿಯಲು ಭಕ್ತಾದಿಗಳಿಗೆ ಸಹಕಾರಿಯಾಗುವ0ತೆ ಮಾಡಲಾಗಿದೆ.ಇಕ್ಕೆಲಗಳಲ್ಲಿರುವ ಹಲಸು ಮು0ತಾದ ಮರಗಳು ಸೂರ್ಯನ ಬಿಸಿಲಿನ ಝಳ ತಗ್ಗಿಸುತ್ತವೆ.ಮೇಲೇರುವಾಗಲೆ ಬಲಕ್ಕೆ ಕೊಟಡಿಗಳು,ಸಣ್ಣ ಪಾಳು ಬಿದ್ದ ಕಲ್ಯಾಣಮ0ದಿರವೊ0ದು ಕಾಣುತ್ತದೆ.ಸ್ಥಳೀಯರ ಬಾಯಲ್ಲಿ "ಧರ್ಮದ ಕಲ್ಯಾಣಮ0ದಿರ" ಎ0ದಾಗಿರುವ ಇದರ ದ್ವಾರದಲ್ಲಿ "ರಮಾಬಾಯಿ ಅ0.....ಕಲ್ಯಾಣ ಮ0ದಿರ" ಎ0ದೇನೋ ತು0ಬ ಮಸಕಾದ ಬರಹವನ್ನು ಗುರುತಿಸಬಹುದು.(ಈ ಬಗ್ಗೆ ಆಸಕ್ತಿ ಇರುವ ಸ0ಶೋಧನಾ0ಕಾಕ್ಷಿಗಳು ಅದೇನೆ0ದು ತಿಳಿಯಲು ಪ್ರಯತ್ನಿಸಬಹುದು.)

ನಡೆದೋ,ಮೆಟ್ಟಿಲುಗಳನ್ನೇರಿಯೋ ದಣಿದಿರಬಹುದಾದ ನಿಮ್ಮನ್ನು ಸ್ವಾಗತ ಕಮಾನಿನ ಮೇಲಿರುವ ಎರಡು ಆನೆಗಳು ಸಣ್ಣ ಗಾಳಿಯ0ತ್ರಗಳೊ0ದಿಗೆ ಸ್ವಾಗತಿಸುತ್ತವೆ.ಪಕ್ಕದಲ್ಲೇ ಕುಡಿಯುವ ನೀರಿನ ತೊಟ್ಟಿಯೂ ಇದೆ.ಶಿವಮೊಗ್ಗೆಯಿ0ದ ಲಾರಿಯಲ್ಲಿ ಬರುವ ನೀರಾದ್ದರಿ0ದ ಮಿತವಾಗಿ ಬಳಸಿ ಎ0ಬ ಹಿತವಾಕ್ಯಗಳು ಅಲ್ಲಿ ರಾರಾಜಿಸುತ್ತವೆ.ಹೀಗೆ ಹತ್ತಿ ಬ0ದವರಿಗೆ ಎದುರಿಗೆ ಸಿಗುವುದೇ ಗಣಪತಿ ದೇವಸ್ಥಾನ.ಎಡ ಕೊನೆಗೆ ಇರುವುದು ಬ್ರಹ್ಮ,ವಿಷ್ಣು,ಮಹೇಶ್ವರ ದೇವಸ್ಥಾನ.

ಈ ದಾರಿ ಇಷ್ಟಪಡದ ಚಾರಣಪ್ರಿಯರಿಗೆ ಖುಷಿಕೊಡುವ ದಾರಿಯೂ ಇದೆ.ಗಿರಿಮಾಜಿ ರಾಜಗೋಪಾಲ್ ಇ0ಸ್ಟಿಟೂಟ್ ಆಫ ಮಾನೇಜ್ಮೆ0ಟ್,ಕ0ಪ್ಯೂಟರ್ ಅಪ್ಲಿಕೇಷನ್ಸ್ ಎದುರಿನ ದಾರಿಯಲ್ಲಿ ರಾಗಿ ಗುಡ್ಡದ ಬುಡದವರೆಗೂ ತಲುಪಬಹುದು.ಅಲ್ಲಿ ಸಿಗುವ ಗದ್ದೆಗಳನ್ನು ದಾಟಿ ಗುಡ್ದವೇರಲು ಪ್ರಾರ0ಭಿಸಬಹುದು.ಅಷ್ಟೇನೂ ಅಪಾಯಕಾರಿಯೂ ಅಲ್ಲದ ಈ ದಾರಿ ಉತ್ಸಾಹಿಗಳಿಗೆ ಹೇಳಿ ಮಾಡಿಸಿದ0ತಿದೆ.ಬ0ಡೆ,ಕಲ್ಲುಗಳ ಮೇಲೆ ಕುಳಿತು ಸುತ್ತಲಿನ ಪ್ರಕೃತಿಯ,ದೂರ ದೂರದ ವಿಹ0ಗಮ ನೋಟ ಸವಿಯಬಹುದು.ಈ ಮಾರ್ಗದಲ್ಲಿ ಮೊದಲಿಗೆ ಸಿಗುವುದು ಬ್ರಹ್ಮ,ವಿಷ್ಣು,ಮಹೇಶ್ವರ ದೇವಸ್ಥಾನ.ದೇವಸ್ಥಾನದ ಮೇಲೆ ಎರಡು ದಿಕ್ಕಿನಲ್ಲಿ ಗರುಡ,ಮಾರುತಿಯನ್ನು ಕಾಣಬಹುದು.ತ್ರಿಮೂತರ್ಿಗಳು ಒಟ್ಟಿಗಿರುವ ಇಲ್ಲಿನ ಕಪ್ಪುಕಲ್ಲಿನ ಮೂರ್ತಿಯೆದುರು ಕುಳಿತರೆ ಏರಿಬ0ದ ದಣಿವೇ ಮರೆತ0ತಾಗುತ್ತದೆ.ಗುಡಿಯ ಹೊರ ಪ್ರಾಕಾರದಲ್ಲಿ ಪ್ರದಕ್ಷಿಣೆ ಹಾಕುತ್ತ ಸುತ್ತಲಿನ ಪರಿಸರವನ್ನು ಕಣ್ತು0ಬಿಕೊಳ್ಳಬಹುದು.ಇದರ ಎದುರು ಎತ್ತರದ ಸ್ತ0ಭದ ಮೇಲೆ ಧರ್ಮದ ಘ0ಟೆಯೊ0ದಿದೆ.ದೇವರನ್ನು ಹೊತ್ತೊಯ್ಯುವ ಪಲ್ಲಕ್ಕಿಯನ್ನೂ ಅಲ್ಲೇ ಕಾಣಬಹುದು.ನ0ತರ ಹಾಗೇ ಮು0ದೆ ಸಾಗಿದರೆ ಭಕ್ತಾದಿಗಳಿಗೆ ಬಿಸಿಲು,ಮಳೆಗಳಲ್ಲಿ ತ0ಗಲು ನಿಮರ್ಿಸಿದ ತ0ಗುದಾಣ ಸಿಗುತ್ತದೆ.ಅದನ್ನು ದಾಟಿ ನಡೆದರೆ ಸಿಗುವುದೇ ಗಣಪತಿ ದೇವಸ್ಥಾನ.ನ0ತರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ.ಇವುಗಳ ಎದುರಿಗಿನ ಕಲ್ಲುಗಳ, ಸ್ಥಳ ಮಹಿಮೆಯನ್ನು ಹಿರಿಯರೇ ತಿಳಿಸಬೇಕಷ್ಟೆ.ಗಣಪತಿ ದೇವಸ್ಥಾನ,ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಗಳ ಮಧ್ಯೆಯೂ ಮ0ಟಪವಿದೆ.ಅದನ್ನೂ ದಾಟಿದಾಗ ಆ0ಜನೇಯ ಸ್ವಾಮಿ ದೇವಸ್ಥಾನ.ಪಕ್ಕದಲ್ಲಿ ವಿಠೋಬ ರುಕ್ಕುಮಾಯಿ ದೇವಸ್ಥಾನ.ಅದರ ಎದುರಿಗೆ ಮೂರು ಗುಡಿಗಳ ಒ0ದು ಗುಡಿ.ಎಡಗಡೆ ಸರಸ್ವತಿ,ಲಕ್ಷ್ಮಿ,ಪಾರ್ವತಿ.ಬಲಗಡೆ ಭೂದೇವಿ.(ಮಧ್ಯದ ದೇವಿ ಯಾವುದೆ0ದು ಇದನ್ನು ಬರೆಯುವ ಹೊತ್ತಿಗೆ ನನಗೆ ತಿಳಿದಿಲ್ಲ.).ಕ್ಷೇತ್ರಪಾಲ/ಉತ್ಸವಮೂರ್ತಿಯ ಗುಡಿ ಬಲಕ್ಕೆ ಸಿಗುತ್ತದೆ.ಕೊನೆಗೆ ಸಿಗುವುದೇ ಶನಿದೇವಸ್ಥಾನ.ಅದರ ಎದುರಿಗೆ ಧ್ವಜಸ್ಥ0ಭ.
ಅದರ ಎದುರಿಗಿನ ವತರ್ುಲಾಕಾರದ,ಅ0ದಾಜು 20ಅಡಿ ಎತ್ತರದ,ಸುಮಾರು ಅಷ್ಟೇ ಅಗಲದ ಮೇಲ್ಛಾವಣಿಯಿಲ್ಲದ,ಒ0ದು ದಿಕ್ಕಿನಿ0ದಷ್ಟೇ ಪ್ರವೇಶ ದ್ವಾರ ಹೊ0ದಿರುವ ರಚನೆಯೊ0ದು ಗಮನ ಸೆಳೆಯುತ್ತದೆ.(ಅದರ ಬಗ್ಗೆಯೂ ಹೆಚ್ಚಿಗೆ ತಿಳಿಯಲು ನಮಗ0ದು ಸಾಧ್ಯವಾಗಿರಲಿಲ್ಲ).

ದೇಗುಲಗಳ ವಾಸ್ತುಶಾಸ್ತ್ರಕ್ಕನುಗುಣವಾಗಿ ವಿಭಿನ್ನ ದಿಕ್ಕಿಗೆ ಮುಖ ಮಾಡಿದ ದೇಗುಲಗಳು,ಮೂತರ್ಿಗಳು,
ದೇಗುಲದ ಮೇಲಿನ ದೇವರು ಮತ್ತು ಒಳಗಿನ ದೇವರೊ0ದಿಗಿನ ಸ0ಬ0ಧ(ಉದಾ:ಶನಿದೇವಾಲಯದ ಮೇಲೆ ಎರಡು ದಿಕ್ಕುಗಳಲ್ಲಿರುವ ಎಡಮುರಿ ಗಣಪತಿ).......ಇವೆಲ್ಲವನ್ನು ಆಯಾ ಕ್ಷೇತ್ರ ಪರಿಣಿತರು,ಹಿರಿಯರು ವಿವರಿಸಬಲ್ಲರಷ್ಟೆ.


ಇಲ್ಲಿರುವ ನುಗ್ಗೆಯನ್ನು ಹೋಲುವ ನುಗ್ಗೆಯಲ್ಲದ,ಮಿಡಿ ಸೀತಾಫಲವನ್ನು ಹೋಲುವ ಕಾಯಿಗಳು ಸಸ್ಯಶಾಸ್ತ್ರಜ್ಞರ ಆಸಕ್ತಿಯನ್ನೂ ಕೆರಳಿಸಬಹುದೇನೋ!!!.....ಇನ್ನೂ ಅನೇಕ ಪದಗಳಲ್ಲಿ ಸೆರೆ ಹಿಡಿಯಲಾಗದ ದೃಶ್ಯಗಳು,ಭಾವಗಳು.ಹಾಗಾಗಿ ನೀವು ಯಾವ ಪ್ರಕಾರದವರಾಗಿದ್ದರೂ ಖ0ಡಿತ ಹಿಡಿಸುವ ಸ್ಥಳ.ಈ ಮಾತುಗಳು ನಿಮಗೆ ಆಸಕ್ತಿ ಕೆರಳಿಸಿರಬಹುದು.
ಉತ್ಪ್ರೇಕ್ಷೆ ಎ0ದೂ ಅನಿಸಿರಬಹುದು.ಆದರೆ ಆ ಅವಿಸ್ಮರಣೀಯ ಅನುಭವ ಪಡೆಯಲು ಒಮ್ಮೆ ಭೇಟಿ ನೀಡಿ ಪ್ರಯತ್ನಿಸಿ.

ಈ ಲೇಖನ ನಿಮಗೆ ಹೇಗನ್ನಿಸಿತು?
ಇದರಲ್ಲಿ ಪ್ರಸ್ತಾಪವಾದ ಅ0ಶಗಳ ಬಗ್ಗೆ ನಿಮ್ಮಲ್ಲಿರಬಹುದಾದ ಅಮೂಲ್ಯ ಮಾಹಿತಿಯನ್ನು ಹ0ಚಿಕೊಳ್ಳಬಯಸುತ್ತೀರಾ?
ಹಾಗಾದರೆ ಬರೆಯಿರಿ.

ಪೊರೆದ ಗೆಳೆಯರಿಗೆ ಪದದಾರತಿ

ಮುಂಜಾನೆಯ ಮಂಜಿನಲಿ ನೆನಪಾದೆ
ಕಷ್ಟದಿ ಕೈ ಹಿಡಿದ ಓ ಗೆಳೆಯ
ಬಂದವು ಸವಾಲು ಹಲಬಾರಿ
ಅದನೆತ್ತಿಸಿ ನೀನು ಗಿರಿಧಾರಿ
ತೋರಿಸಿದೆ ಯಶಸ್ಸಿಗೆ ರಹದಾರಿ|1|

ಎಷ್ಟೇ ದೂರ ನೀನಿದ್ರು
ನಾನಿಹೆನೆಂಬಾ ಭರವಸೆಯು
ಹೊಸ ಸಾಹಸಗೈಯಲು ಸಹಮತಿಯು.
ಮರೆಯಿಸದಿರಲಿ ನಿನ್ನ ಸುಖದಾ ರತಿ
ಪೊರೆದ ನಿನಗೆ ಪದದಾರತಿ