"ಹರ್ ಏಕ್ ಪ್ರೆಂಡ್ ಜರೂರಿ ಹೋತಾ ಹೈ" ಅಂತ ಏರ್ಟೆಲ್ ಕಂಪ್ನಿ ಹಾಡು ಹಾಡ್ತಾ ಉದಾಸನಾಗಿ ಕೂತಿದ್ದ ಗುಂಡ. ಏನಾಯ್ತೋ ಗುಂಡ ಯಾರು ಕೈಕೊಟ್ರೋ ಅಂತ ಅಲ್ಲಿಗೆ ಬಂದ ಟಾಂಗ ತಿಪ್ಪ ಅಲಿಯಾಸ್ ತಿಪ್ಪೇಶಿ. ಎಲ್ಲಾ ಹಾಳಾಗಿ ಹೋಯ್ತು Do Not Disturb Directory(DND) ಅಂತ ಬಂದು ಹಾಳಾಗಿ ಹೋಯ್ತು ನನ್ನ ಕಥೆ ಅಂತ ಗೋಳಾಡಿದ. ಹೇ. ಮೊಬೈಲು ಕಂಪೆನಿ ಅವ್ರು, ಟೆಲಿ ಮಾಕ್ರೆಟಿಂಗ್ ಅವ್ರು ಕರೆ ಮಾಡಿ ತಲೆ ತಿನ್ನೋದನ್ನ ತಪ್ಸೋಕೆ ಅಂತಲ್ವಾ ಅದ್ನ ಮಾಡಿದ್ದು ಮಿ.ರೌಂಡ್ ಅಂತ ಬಂದ್ಲು ಇಳಾ ದೇವಿ ಅಲಿಯಾಸ್ ಇಳಾ. ಹೌದು ಮಾರ್ರೆ ನೀವು ಐದು ಲಕ್ಷ ಗೆದ್ದಿದ್ದೀರಿ.. ತಗೋಳೋಕೆ ಇದಕ್ಕೆ ಕರೆ ಮಾಡಿ.. ಗೋಲ್ಡ್ ಲೋನ್ ಬೇಕಾ ಅಂತೆಲ್ಲ ಸಂದೇಶ ಕಳ್ಸೂದ ಮಾರ್ರೇ.. ಮೊನ್ನೆ ನಮ್ಮಜ್ಜಯ್ಯನ ಮೊಬೈಲಿಗೆ ನಿಮ್ಮ ಜೀವನ ಸಂಗಾತಿಯನ್ನು ಹುಡುಕಬೇಕಾ ಅಂತ ಸಂದೇಶ ಕಳ್ಸಿದ್ರು ಮಾರ್ರೆ.. ಇದು ಬಂದಿದ್ದು ಒಳ್ಳೇದಾಯ್ತು.. ಅಂತದ್ರಲ್ಲಿ ಅದಕ್ಕೆ ಶಾಪ ಹಾಕೂದ ಗುಂಡೂ ಅಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಹೌದು ಕಣ್ರೋ.. ಹೂಂ ಹೌದು. .ನಾನೂ ಅದಕ್ಕೆ ನನ್ನ ಹೆಸ್ರು ಸೇರ್ಸಬೇಕೂಂತ ಇದೀನಿ ಅಂದ್ಳು ಉಮಾ.. ಆ ಕೆಲ್ಸ ಮಾತ್ರ ಮಾಡ್ಬೇಡ ಮಹಾತಾಯಿ .. ಆಮೇಲೆ ನಾನು ನಿಮ್ಗೆಲ್ಲಾ way2sms ಇಂದ ಸಂದೇಶ ಕಳ್ಸೋಕು ಆಗಲ್ಲ.. ಈಗಿನ ತರ ಅಂದ ಗುಂಡ.. ಓ ಇಲ್ಲೇ ಎಲ್ಲೋ ಗುಂಡನ ದುಃಖಕ್ಕೆ ಮೂಲ ಇದೆ ಅಂತ ಅವ್ರೆಲ್ರಿಗೂ ಡೌಟು ಶುರು ಆಯ್ತು..
ಮೆದುಳಿಗೆ ಹುಳ ಬಿಟ್ಟುಸ್ಕೊಂಡು ಸುಮ್ನೆ ಕೂರಕ್ಕೆ ಆಗತ್ತಾ?. ಕೇಳೇ ಬಿಟ್ರು.. ಅಲ್ಲಾ way2sms ಇಂದ ಭಾರತದ ಯಾವ ಮೊಬೈಲಿಗಾದ್ರೂ ಸಂದೇಶ ಕಳ್ಸಬೋದು ಅಂತಿದ್ದೆ..ನಮ್ಗೆಲ್ಲಾ ದಿನಾ ಸಂದೇಶ ಕಳ್ಸುತಿದ್ಯಲ ನೀನು.. ಕೊನೆಗೆ via way2sms ಅಂತ ಯಾಕೆ ಹಾಕ್ಕೊತಿದ್ದೆ.. ಆ ತಾಣದ ಭಕ್ತಾನ ನೀನು ಅಂದ್ಳು ಉಮಾ.. ಎಲ್ಲಾ ನಗಾಡಿದ್ರು.. ಯಾಕೆಂತ ಅವ್ಳಿಗೆ ಮೊದ್ಲು ಗೊತ್ತಾಗ್ಲಿಲ್ಲ. ಅಲ್ಲ ಕಣೇ ಆ ತಾಣದಿಂದ ಯಾರಿಗೆ ಬೇಕಾದ್ರೂ ಸಂದೇಶ ಕಳ್ಸಬೋದು.. ಬಂದ ಸಂದೇಶ ಕಳ್ಸಿದೋರ ಸಂಖ್ಯೆಯಿಂದನೇ ಬಂದಂಗೆ ಇರುತ್ತೆ. .ಕೊನೆಗೆ ನೀ ಹೇಳಿದಂಗೆ via ಇರುತ್ತಷ್ಟೆ. ಅದರಿಂದ ೨೦ ಜನರಿಗೆ ಒಟ್ಗೆ ಸಂದೇಶ ಕಳ್ಸಬೋದು.. ಗುಂಡ ದಿನಾ ಅದ್ರಿಂದನೇ ಕಳ್ಸುತಿದ್ದ ಅಲ್ವೇನೋ ಗುಂಡಾ ಅಂದ ತಿಪ್ಪ. ಮಾತಾಡಿ ಒಳ್ಳೇ ಬಕ್ರಾ ಆದ್ನಲಾ ಅಂತ ಉಮಾಗೆ ಬೇಜಾರಾಯ್ತು..ಕಳ್ಸುಬೋದು ಅಲ್ಲ ಕಣ್ಲಾ ಕಳ್ಸುಬೋದಿತ್ತು ಅಂದ ಗುಂಡ..ಎಲ್ರೂ ಒಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಶುರು ಆದಂಗೆ ಗುಂಡನ್ನೇ ನೋಡಕ್ಕಿಡಿದ್ರು..
ಮುಂದುವರಿಸಿದ ಗುಂಡ..ಈಗ DND ನಲ್ಲೀ ದಾಖಲಾಗಿರೋರಿಗೆ ಅದ್ರಿಂದ ಗ್ರೂಪ್ ಸಂದೇಶ ಇರ್ಲಿ ಖಾಲಿ ಸಂದೇಶಾನೂ ಕಳ್ಸೋಕಾಗಲ್ಲ. ರಾತ್ರೆ ಒಂಭತ್ತರಿಂದ ಬೆಳಗ್ಗೆ ೯ರ ವರ್ಗೆ ಗ್ರೂಪ್ ಸಂದೇಶ ಕಳ್ಸೋಕಾಗಲ್ಲ.. ಒಳ್ಳೇ ಗೋಳಾಯ್ತು ಇವ್ರುದ್ದು ಅಂದ.. ಓ ಅದಾ ಸಮಸ್ಯೆ.. ಅದನ್ನೇ ಯಾಕೆ ನಂಬ್ಕೋತೀಯ? 160by2.com, indyarocks ಹಿಂಗೆ ಸುಮಾರು ಇದ್ಯಲ್ಲಾ.. ಅಂದ ತಿಪ್ಪೇಶಿ.. ಎಲ್ರದ್ದೂ ಇದೇ ಕಥೆ ಅಂಬ್ರು ಮಾರ್ರೇ.. ಅಮ್ದ ಮಂಜ.. ಅಷ್ಟಕ್ಕೂ ಅಷ್ಟೆಲ್ಲಾ ತಲೆ ಕೆಡಿಸ್ಕೋ ಬೇಕಾ.. ನಿಮ್ಮತ್ರ ಎಲ್ಲಾ ಮೊಬೈಲಿರೋದು ಯಾಕೆ? ಅದ್ರಲ್ಲಿರೋ ಉಚಿತ ಸಂದೇಶ ಯಾಕೆ? ಸಿಂಪಲ್ ಆಗಿ ಇರೋದಕ್ಕೆ ತುಂಬಾ ತಲೆ ಕೆಡಿಸ್ಕೋತೀರಿ ಬಿಡ್ರಿ ಅಂದ್ಳು ಇಳಾ.. ಇವಂದು ತರ್ಕಾರಿ ಅಲ್ಲಲ್ಲಾ ಸರ್ಕಾರಿ ಮೊಬೈಲಮ್ಮ... ಮುನ್ನೂರು ಸಂದೇಶ ಉಚಿತ ಗೊತ್ತಾ ಅಂದ ತಿಪ್ಪೇಶಿ.. ಏ ಅದೆಂಗೆ ಸಾಧ್ಯ? ಆ TRAI ಅದೇ Telephone Regulatory Authority of India ಅವ್ರು ದಿನಕ್ಕೆ ೧೦೦ ಸಂದೇಶ ಮಾತ್ರ ಅಂತ ನಿಯಮ ತಂದಿಲ್ವಾ ಮೊನ್ನೆ ೨೭ರಿಂದ.. ಕಾಗೆ ಹಾರಿಸ್ಬೇಡ ತಿಪ್ಪು ಅಂದ್ಲು ಉಮಾ..ಕರೆಕ್ಟು ಉಮಾ.. ನಂಗೆ ತಿಂಗ್ಳಿಗೆ ಮುನ್ನೂರು ಸಂದೇಶ ಉಚಿತ ಅಷ್ಟೆ.ಅಂತದ್ರಲ್ಲಿ ನಿಮಗೆಲ್ಲಾ ದಿನಾ ಸಂದೇಶ ಹೇಗೆ ಕಳಿಸ್ಲಿ?.ಏನಿಲ್ಲಾ ಅಂದ್ರೂ ೫೦ ಜನ ಇದಾರೆ ನಂಗೆ ಫ್ರೆಂಡ್ಸ್..ಇದ್ದಿದ್ದೊಂದು ಆಧಾರ ಈ way2sms ಊ ಹೋಯ್ತು ಅಂತ ನಾ ತಲೆಬಿಸಿ ಮಾಡ್ಕಂಡಿದ್ರೆ ಈ ತಿಪ್ಪ ಕಾಲೆಳಿತಿದಾನೆ ಅಂತ ಮುಖ ಸಪ್ಪೆ ಮಾಡ್ಕಂಡ ಗುಂಡ..
ಸಂದೇಶ ಕಳಿಸ್ಲಿಲ್ಲ ಅಂದ್ರೆ ಪ್ರಪಂಚ ಏನು ಮುಳುಗೋಗಲ್ಲ ತಕ ಅಂದ ತಿಪ್ಪ.ಏ ತಿಪ್ಪ ಸುಮ್ನಿರ್ರಿ ಸಾಕು.. ಗೆಳೆಯರ್ನ ಕಳ್ಕಳೋ ದುಃಖ ಏನೂಂತ ನಿಮ್ಗೇನ್ರೀ ಗೊತ್ತು.. ನನ್ನ ೪ನೇ ಕ್ಲಾಸ್ಮೇಟು ನಂದಿನಿ ಅಂತಿದ್ಲು.. ೫ನೇ ಕ್ಲಾಸಿಗೆ ನಾನು ಬೇರೆ ಸ್ಕೂಲು. ಅವಳುದೂ ಬೇರೆ ಸ್ಕೂಲಾಯ್ತು.. ಅವತ್ತಿಂದ ಇವತ್ತಿನವರ್ಗೂ ಅವ್ಳು ಸಿಕ್ಕಿಲ್ಲ ಗೊತ್ತಾ..ಎಷ್ಟೋ ಸಲ ಅಂದ್ಕೋತೊರ್ನೀನಿ.. ಅವಾಗ್ಲೇ ಮೊಬೈಲಿದ್ದಿದ್ರೆ.. ಸಂದೇಶ ಕಳ್ಸಿಕೋತ ಇನ್ನೂ ಸ್ನೇಹ ಉಳಿಸ್ಕೋಬೋದಿತ್ತು ಅಂತ.. ಹೌದು ಕಣೆ ಉಮಾ.. ನಾ ಎಂಟ್ನೆ ಕ್ಲಾಸಲ್ಲಿದ್ದಾಗ ಉಡುಪೀಲಿ ಒಂದು ಕ್ಯಾಂಪಿಗೆ ಹೋಗಿದ್ದೆ.. ಅಲ್ಲಿ ಇದ್ದಷ್ಟು ದಿನಾ ಪ್ರಶಾಂತಿ ಹೇಳೋಳು ಒಳ್ಳೇ ಗೆಳತೀ ಆಗಿದ್ಲು.. ಹೋಗೋ ದಿನ ಅವ್ಳ ಮನೆ ಅಡ್ರೆಸ್ ಕೊಟ್ಟು ಕಾಗದ ಬರೀತಿರು ಅಕಾ ಅಂದಿದ್ಲು.. ಆಮೇಲೆ ನಾ ಬರೀತಿದ್ದೆ. ತಿಂಗ್ಳಾದ ಮೇಲೆ ಅವ್ಳ ಉತ್ರ ಬರೂದು.. ಕೆಲೋ ಸಲ ಅವ್ಳೇ ಬರ್ಯೂದು.. ಅದು ಯಾರ್ಯಾರ ಕೈಗೆ ಸಿಕ್ಕೂದೋ.. ಆನೆ ಮೂತಿಯವಂಗೆ ಗೊತ್ತು.. ಈಗಿನ ಕಾಲ್ದಲ್ಲಿ ಹಂಗೆ ತಿಂಗ್ಳೆಲ್ಲಾ ಕಾಯೂಕಾತ್ತ.. ಹಂಗಾಗಿ ಈಗ ಎಂತುದು ಇಲ್ಲೆ.. ಆಗ್ಲೇ ಮೊಬೈಲಿದ್ದಿದ್ರೆ ಚೆಂದಿತ್ತು ಕಾಣಿ ಅಂದ್ಳು ಉಮಾ..
ಹೌದು ಮಾರ್ರೆ ನಾ ಪಿಯುಸಿ ರಜ್ದಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಅಂತ ಸೇರ್ಕಂಡಿದ್ದೆ.ಅಲ್ಲಿ ಮಂಜು ಅಂತ ಬರ್ತಿದ್ದ. ಅವ್ನು, ನಾನು ಭಯಂಕರ ಮಾತಾಡ್ತಿದ್ವಿ.. ಬಟ್ಲರೋ.. ಕುಟ್ಲರೋ.. ಎಂತದೋ ಒಂದು.. ಆದ್ರೆ ನಂಸರ್ರು ಹೆಚ್ಚೆಚ್ಚು ಮಾತಾಡ್ರಿ ಅಂತ ನಮ್ಗೆ ಇನ್ನೂ ಪ್ರೋತ್ಸಾಹ ಕೊಟ್ತಿದ್ರು.. ಹಿಂಗೆ ಕೋರ್ಸ್ ಮುಗ್ಯೋ ಹೊತ್ಗೆ ಭರ್ಜರಿ ದೋಸ್ತಾಗಿದ್ವಿ ಮಾರ್ರೆ.. ದೋಸ್ತಾನ-೨ ಅನ್ನು ಅಂತ ಟಾಂಟ್ ಕೊಟ್ಟ ತಿಪ್ಪ.. ಎಲ್ಲ ಒಮ್ಮೆ ನಕ್ರು..ಮಂಜನ ಮುಖ ಹುಳ್ಳಗಾಯ್ತು.. ಕೊನೆಗೆ .. ಹಂಗೆಲ್ಲ ಇಲ್ಲ ಮಾರ್ರೆ.. ಕೊನೆಗೆ ಅವ್ನು ಅವ್ನ ಮೊಬೈಲು ನಂಬರ್ಕೊಟ್ಟ.. ನಾನು ನಮ್ಮನೇ ಲ್ಯಾಂಡ್ಲೈನು ನಂಬರ್ ಕೊಟ್ಟೆ.. ಎಲ್ರೂ ಬಿದ್ದು ಬಿದ್ದು ನಗಕಿಡಿದ್ರು ಈಗ.. ಅವಾಗ ನನ್ನತ್ರ ಮೊಬೈಲಿರ್ಲಿಲ್ಲ ಮಾರ್ರೆ.. ಇದ್ದಿದ್ದು ಹೇಳಿದ್ರೆ ಹಿಂಗೆ ನಗೂದ ನೀವು? ಅಂದ ಮಂಜ..
ಹೌದು ಕಣ್ರೀ.. ನಾನು ಹೊನ್ನೇಮರಡು,ಜೋಗ,ಮುಪ್ಪಾನೆ,ದಬ್ಬೆ ಫಾಲ್ಸ್, ಕಾನೂರು ಕೋಟೆ, ಹಿಂಗೆಲ್ಲಾ ಜೋಗದತ್ರ ತಿರ್ಗಕ್ಕೆ ಶಿವಮೊಗ್ಗದ ಯೂಥ ಹಾಸ್ಟೆಲಿಂದ ಹೋಗಿದ್ದೆ.. ಅವಾಗೊಬ್ಬ ಪರಿಚಯ ಆಗಿದ್ದ..ಫುಲ್ ಮಜಾ ಮಾಡಿದ್ವಿ ಅವಾಗ ಅಂದ ಗುಂಡ.. ಯಾವಾಗ ಹೋಗಿದ್ಯೋ ಪಾಪಿ ನಮ್ಮನ್ನ ಬಿಟ್ಟು ಅಂತ ಎಲ್ರೂ ಒಂದೊಂದು ಬಿಟ್ರು.... ಆಮೇಲೆ ಕೊನೆಗೇನಾಯ್ತು ಹೇಳು ಅಂದ್ರು ಸ್ವಲ್ಪ ಸಮಾಧಾನ ಮಾಡ್ಕೊಂಡು..ಅದು ಮೊದಲ್ನೆ ಸೆಮ್ಮಿನ ಕಥೆ ಕಣ್ರೋ.. ಅವ ನಂಬರ್ ಕೊಟ್ಟಿದ್ದ.. ಎರ್ಡು ಮೂರು ದಿನಕ್ಕೊಂದೊಂದು forward ಸಂದೇಶ ಹಾಕ್ತಿದ್ದ..ಆದ್ರೆ ನನ್ನತ್ರ ಸಂದೇಶನೇ ಇರ್ತಿರ್ಲಿಲ್ವಲಾ.. ಎಲ್ಲೋ ತಿಂಗ್ಳಿಗೆ ಒಂದೊಂದು ಹಾಕ್ತಿದ್ದೆ.. ಈಗ ಅವ್ನು ಸಂದೇಶನೇ ಕಳ್ಸಲ್ಲ ಕಣ್ರೋ.. ನನ್ನ ಮರ್ತಿರ್ಬೇಕು ಅನ್ಸತ್ತೆ ಅಂತ ಮತ್ತೆ ಬೇಜಾರು ಮಾಡ್ಕಂಡ ಗುಂಡ.
ಕರೆ ಮಾಡ್ಬೋದಿತ್ತಲ್ಲ ಅಂದ್ಳು ಇಳಾ.. ಆ ನಂಬರಿಗೆ ಮಾಡಿದ್ರೆ ಬೇರೆ ಯಾರೋ ಎತ್ಕೋತಾರೆ.... ಬಹುಶ ನಂಬರ್ ಬದಲಾಯಿಸಿರ್ಬೇಕು.. ಅದ್ಕೇ ಹೇಳೋದು ಅಪರೂಪಕ್ಕಾದ್ರೂ ಸಂದೇಶ ಕಳ್ಸುತಿರಬೇಕು ಅಂತ.. ಕಂಜೂಸಿ, ನಿನ್ನ ತರ್ಕಾರಿ ಮೊಬೈಲು ಸಿಮ್ಮು ತೆಗ್ದು ಬೇರೆ ಹಾಕ್ಕ ಮೊದ್ಲು ಅಂದ ತಿಪ್ಪ..ಏ ಹಂಗೆಲ್ಲಾ ಎಸ್ಯಕ್ಕಾಗಲ್ಲ.. ನಮ್ಮನೇಗೆ ಮಾಡಕ್ಕೆ ಅದೇ ಬೇಕು.. ಸಿಮ್ ತೆಗ್ಯದು ಹಾಕದು ಗೋಳೇ ಬ್ಯಾಡ ಅಂತ ನಾನು way2sms ನಿಂದ ಕಳ್ಸೋಕೆ ಶುರು ಮಾಡಿದ್ದು ಅಂದ ಗುಂಡ... ಓ ಸರಿ ಸರಿ ಅಂತ ಏರ್ಟೆಲ್ ಹಾಡು ಹಾಡೋಕೆ ಶುರು ಮಾಡಿದ್ಲು ಉಮಾ.. ನೋಡಿ ಈ ಹಾಳು ನೆಟ್ವಕ್ರೋರು ಹಬ್ಬದ ದಿನ , ಅದ್ರ ಹಿಂದಿನ ದಿನ ಎಲ್ಲ ಸಂದೇಶ ಕಳ್ಸೋಕೆ ಬಿಡೋಲ್ಲ.. ಅದಕ್ಕೂ ದುಡ್ಡು ಹೆರೀತಾರೆ.. ಆದ್ರೆ ಅದ್ರಲ್ಲಿ ಆ ಗೋಳು ಇರ್ಲಿಲ್ಲ.. ಈಗ ಹೆಚ್ಚಿನವ್ರೆಲ್ಲಾ DND ಗೆ ಸೇರ್ಕಂಡು ಬಿಟ್ಟಿರೋದ್ರಿಂದ ಅವ್ರಿಗೆಲ್ಲಾ ಸಂದೇಶ ಕಳ್ಸೋಕೆ ಆಗಲ್ಲ ಕಣೋ.. ಎಲ್ಲಿ ಈಗಿರೋ ಗೆಳೆಯರನ್ನೂ ಕಳ್ಕೋತೀನೋ ಅಂತ ಬೇಜಾರಾಕ್ತಿದೆ ಕಣ್ರೋ ಅಂತ ಮತ್ತೆ ಹಳೇ ಮೂಡಿಗೇ ಬಂದ.. dual sim ಫೋನ್ ತಗೋ ಅಂದ್ಳು ಇಳಾ.. ಮತ್ತೊಂದು ಹೊಸ ಫೋನಿಟ್ಕ ಹೊಸ ಸಿಮ್ಮಿಗೆ ಅಂದ ಮಂಜ.. ಈಗಿರ ಫೋನಿಗೆ ಹೊಟ್ಟೆ ತುಂಬ್ಸೋಕೆ ಆಗಲ್ಲ.. ಅಂತದ್ರಲ್ಲಿ ಎರಡೆರಡು.. ಅದಕ್ಕೆ ಚಾರ್ಜು.. ದುಡ್ಡು.. ಇದೆಲ್ಲಾ ನನ್ಕೈಯಲ್ಲಿ ಆಗಲ್ಲಪ್ಪಾ ಅಂದ ಗುಂಡ.. ಹೂಂ.. ಕಾಲೇಜಿಗೂ ಬರ್ಬಾರ್ದು.. ಹಾಜರೀನೂ ಸಿಗ್ಬೇಕು ಅಂದಗಾಯ್ತು ನಿನ್ನ ಕಥೆ.. ಆ ಪರಮಾತ್ಮನೇ ನಿಂಗೆ ದಾರಿ ತೋರಿಸ್ಬೇಕು.. ನಡೀರೋ ಹೋಗೋಣ ಅಂತ ಎದ್ದ ತಿಪ್ಪ... ಏ ತಡೀರಿ ಮಾರ್ರೆ.. ಗುಂಡ ಹೇಳೂದ್ರಲ್ಲೂ ಪಾಯಿಂಟು ಉಂಟು.. ಏನಾದ್ರೂ ಹೊಸದು ಯೋಚ್ನೆ ಮಾಡ್ವ ತಡೀರಿ ಅಂದ ಮಂಜ.. ಎಲ್ರ ಕಣ್ಣೂ ತಲೆ ಮೇಲೆ ಹಾರಿಹೋದ ಗುಂಪು ಗಿಣಿಗಳ ಮೇಲೆ ಬಿತ್ತು.. ಹಂಗೆ ನೆನಪದೋಣಿ ಹಿಂದೆ ಜೀಕುತ್ತಾ ಜೀಕುತ್ತಾ ಎಲ್ರಿಗೂ ತಮ್ಮ ಕಳೆದಕೊಂಡಿಗಳ ನೆನಪು ಕಾಡಹತ್ತಿತು..