ಹಳೇಬೀಡಿನ ಕೇದಾರೇಶ್ವರನ ನೋಡಿದ ನಂತರ ಹಿಂದಿನ ಬಾರಿ ಪೂರ್ತಿ ಫೋಟೋ ತೆಗೆಯಲಾಗದಿದ್ದ ಹೊಯ್ಸಳೇಶ್ವರನ ಸನ್ನಿಧಿಗೆ ತಲುಪಿದೆ. ಮುಳುಗುತ್ತಿರೋ ರವಿಯತ್ರ ಇವತ್ತಾದ್ರೂ ನಾನು ಫೋಟೋ ತೆಗ್ಯೋಕೆ ಬಿಡಪ್ಪ ಅಂತ ಪ್ರಾರ್ಥಿಸುತ್ತಾ, ಆರರವರೆಗೆ ತೆಗೆದಿರತ್ತೆ ಅಂದ ಚಪ್ಪಲಿ ಸ್ಟಾಂಡಿನವರಿಗೆ ವಂದಿಸುತ್ತಾ ದೇಗುಲದತ್ತ ದೌಡಾಯಿಸಿದೆ.
ಇಲ್ಲಿನ ಫೋಟೋಗಳನ್ನು ನೋಡಿ ತಲೆಕೆಡಬಹುದು.ಆದ್ರೆ ಸುಮ್ಮನೇ ಗಮನಿಸುತ್ತಾ ಹೋಗಿ. ಶಿರಸ್ತ್ರಾಣ, ಆಗಿನ ಕಾಲದಲ್ಲೇ ಇದ್ದ ಬೈನಾಕ್ಯುಲರ್, ಶಿರಸ್ತ್ರಾಣ, ಮಿಸೈಲ್ , ಬರ್ಮುಡಾ ಚಡ್ಡಿ ಧರಿಸಿದಂತಹ ಶಿಲ್ಪಗಳನ್ನು ನೋಡಿ ದಂಗಾಗದಿದ್ದರೆ ಹೇಳಿ !! ಪಾರ್ಶ್ವ ಶಿಲ್ಪಗಳಲ್ಲದೇ , ಇಲ್ಲಿನ ಮಾಸ್ಟರ್ ಪೀಸ್ಗಳು ಅಂತ ಕರೆಸಿಕೊಳ್ಳುವ ವೇಣುಗೋಪಾಲ, ಗಜಾಸುರ ಸಂಹಾರಗಳಲ್ಲದೇ , ಕೈಲಾಸವನ್ನೆತ್ತುತ್ತಿರುವ ದಶಾನನ, ಸ್ಮಶಾನ ಭೈರವಿ, ಹಿರಣ್ಯಕಶಿಪುವಿನ ಸಂಹಾರದ ಸಮಯದಲ್ಲಿ ಅಡ್ಡಬಂದ ಅಸುರನ ಮುಖದ ಚರ್ಮವನ್ನು ಸುಲಿದ ಉಗ್ರನರಸಿಂಹನ ಶಿಲ್ಪದಲ್ಲಿ ಕಣ್ಣುಗುಡ್ಡೆಗಳು ಕಿತ್ತುಬಂದ ಚರ್ಮದಲ್ಲಿ ನೇತಾಡುತ್ತಿರುವುದು, ಪಾರಿಜಾತಕ್ಕಾಗಿ ಶ್ರೀಕೃಷ್ಣ-ದೇವೇಂದ್ರ ಕಾಳಗ.. ಹೀಗೆ ಹತ್ತು ಹಲವು ಶಿಲ್ಪಗಳನ್ನು ಕಾಣಬಹುದಿಲ್ಲೆ. ಹೆಚ್ಚು ಮಾತೇಕೆ. ಸುಮ್ಮನೇ ಒಂದು ಪ್ರದಕ್ಷಿಣೆ ಹಾಕಿ ಬರೋಣ ಇಲ್ಲಿ. ನಂಗೆ ದಕ್ಕಿದ ದೃಷ್ಯಾವಳಿಗಳ ತಮಗೆ ದಾಟಿಸೋ ಒಂದು ಪ್ರಯತ್ನದಲ್ಲಿ
 |
ಅದ್ಭುತ ಶಿಲ್ಪಕಲೆ ದಾಳಿಗೆ ತುತ್ತಾದ ಪರಿ :-( ಸೈನಿಕರ ತಲೆಯೇ ಇಲ್ಲ. ಸೈನಿಕರಷ್ಟೇ ಅಲ್ಲದೇ ಆನೆಗಳ ತಲೆಯನ್ನೂ ತೆಗೆದಿದ್ದಾರೆ ಕೆಲ ಕಡೆ |
 |
ದೇಗುಲದೆದುರಿಗೆ ನಾನು |
 |
ಕೆತ್ತನೆಯನ್ನು ಹೇಗೆ ಮಾಡ್ತಾ ಇದ್ರು ಅಂತ ಮೂರು ಹಂತಗಳಲ್ಲಿ ತೋರಿಸುವ ಮಕರದ ಶಿಲ್ಪ ಕೆಳಗಿನಿಂದ ಎರಡನೇ ಸಾಲಿನಲ್ಲಿ |
 |
ಸಾಲು ಸಾಲು ಕೆತ್ತನೆಗಳ ಕಾಣಿ. ದಾಳಿಗೆ ಒಳಗಾಗಿ ತಲೆಯನ್ನು ಕಳೆದುಕೊಂಡಿರೋ ಸೈನಿಕರ ಸಾಲುಗಳ ಕಂಡಾಗ ಮೈಯೆಲ್ಲಾ ಉರಿದುಹೋಗುತ್ತೆ :-( |
 |
ಹಳೆಬೀಡು ದಾಳಿಗೆ ತುತ್ತಾದ ಪರಿ :-( |
 |
ಶಿಲಾಬಾಲಿಕೆಯರು, ಸಿಂಹಗಳು..ಮಹಾಭಾರತ. ಕಿಟಕಿಯನ್ನೂ ಕಡೆಗಣಿಸದೇ ಸಿಂಗರಿಸಿದ ಪರಿ ನೋಡಲು ಖುಷಿಯಾಗುತ್ತೆ ಇಲ್ಲಿ |
 |
ವಿಶ್ವದ ಏಳನೇ ಅತೀ ಎತ್ತರದ ನಂದಿಯಂತೆ ಇದು. ಹೊಯ್ಸಳೇಶ್ವರನ ಎದುರಿನಲ್ಲಿದೆ. ಅತ್ಯಂತ ಹೆಚ್ಚು ಆಭರಣಗಳ ಚಿತ್ತಾರವಿರೋ ನಂದಿಯಂತೆ ಇದು. ಎಂಟನೇ ಎತ್ತರದ್ದು ಶಾಂತಲೇಶ್ವರನ ಸಮ್ಮುಖದಲ್ಲಿದೆ. ಮೊದಲ ಏಳು ಅಂದಾಗ ಮೈಸೂರಿನ ಚಾಮುಂಡಿ ಬೆಟ್ಟ, ಲೇಪಾಕ್ಶಿಯ ನಂದಿ ಹೆಸರು ಬರುತ್ತೆ. ಉಳಿದವುಗಳ ನೋಡಿಲ್ಲ ಇನ್ನೂ. ಮುಂದೆಂದಾದರೂ ನೋಡೋ ಭಾಗ್ಯ ಸಿಕ್ಕಾಗ ಅದರ ಬಗ್ಗೆ ಹಾಕೋ ಪ್ರಯತ್ನ ಮಾಡುವೆ :-) |
 |
ನಂದಿಯ ಮೇಲ್ಛಾವಣಿಯಲ್ಲಿರುವ ಶಿಲ್ಪಕಲೆ. ಅಷ್ಟದಿಕ್ಪಾಲಕರನ್ನು ಅವರ ವಾಹನಸಮೇತ ಕಾಣಬಹುದಿಲ್ಲಿ |
 |
ನಂದಿಯ ಆಭರಣಗಳು |
 |
ಎರಡನೆಯ ನಂದಿಮಂಟಪದ ನೋಟ |
 |
ನಂದಿಮಂಟಪದ ಸಮ್ಮುಖದಲ್ಲಿರುವ ಶಾಂತಲೇಶ್ವರ |
 |
ಶಾಂತಲೇಶ್ವರನ ಹೆಬ್ಬಾಗಿಲಿನಲ್ಲಿರುವ ಮಖರಗಳೊಂದಿಗಿನ ಪಾರ್ವತಿ.. ದ್ವಾರಲಕ್ಷ್ಮಿ ಆದರೆ ಆನೆಗಳಿರುತ್ತವೆ ಇಕ್ಕೆಲಗಳಲ್ಲಿ ಅಂತ ಗಮನಿಸಬಹುದು ಇಲ್ಲಿ |
 |
ಹಿಂದಿನ ಶಿಲ್ಪವನ್ನೇ ಸ್ವಲ್ಪ ಸೂಕ್ಷ್ಮವಾಗಿ ಗಮನಿಸುತ್ತಾ |
 |
ಶಿಲೆಯಲ್ಲವಿದು ಕಲೆಯ ಬಲೆಯು |
 |
ಸೈನಿಕರ ಆಯುಧ ಮತ್ತು ಶಿರಸ್ತ್ರಾಣಗಳನ್ನು ಗಮನಿಸಿ ! |
 |
ಸಿಂಹಗಳನ್ನೂ ಬಿಡದೇ ತುಂಡರಿಸಿದ ದುರುಳರು :-( |
 |
ಸಾಲು ಸಾಲು ಶಿಲ್ಪ.. ಜೀರ್ಣೋದ್ದಾರದ ಸಮಯದಲ್ಲಿ ಅಲ್ಲಲ್ಲಿ ಕೆಲವೊಂದು ಮಿಸ್ಸಾದ ದ್ಯೋತಕ ! |
 |
ದೇಗುಲದ ಬುಡದಲ್ಲಿ ಅಡ್ಡಡ್ಡ ಮಲಗಿ ಊರ್ಧ್ವಮುಖವಾಗೊಂದು ಫೋಟೋ ತೆಗೆದ್ರೆ ಅದು ಹೀಗೆ ಕಾಣುತ್ತೆ :-) |
 |
ದೇವಾನುದೇವತೆಗಳು |
 |
ಶ್ರೀಮನ್ನಾರಾಯಣನ ಹಲವು ರೂಪಗಳು. ಅವನ ಕಾಲಕೆಳಗೆ ಹಲವು ಮಾಯವಾಗಿರುವುದನ್ನು ಕಾಣುಬಹುದು :-( ಈಗಲೇ ಇಷ್ಟು ಚೆನ್ನಾಗಿರೋ ದೇಗುಲ ಇನ್ನು ದಾಳಿಗೊಳಗಾಗದೇ ಇದ್ದಿದ್ದರೆ ಎಷ್ಟು ಚೆಂದ ಕಾಣಬಹುದಿತ್ತು ಅಂತ ಕಲ್ಪಿಸಿಕೊಂಡರೆ ಒಂಥರಾ ಬೇಸರ |
 |
ಶಿಲ್ಪಗಳ ಸಾಲಿಗೆ ಕಲಶವಿಟ್ಟಂತಿರೋ ಕಿಟಕಿಗಳ ವಿನ್ಯಾಸವನ್ನು ನೋಡಿ. ಒಂದು ಚೌಕಟ್ಟಿದ್ದಂತೆ ಇನ್ನೊಂದಿಲ್ಲ |
 |
ಪಾರ್ಶ್ವ ಮೂರ್ತಿಗಳ ವೈಭವ ಶುರುವಾಯಿತು ನೋಡಿ ಇಲ್ಲಿಂದ.. |
 |
ಮಖರ, ಅದರ ಪಕ್ಕದಲ್ಲಿರುವ ಮಾನವ, ಸರದ ಅಲಂಕಾರಗಳಲ್ಲಿರುವ ಸೂಕ್ಷ್ಮ ಕೆತ್ತನೆಯನ್ನು ಗಮನಿಸಿ |
 |
ಅದೇ ತರಹದ ಮತ್ತೊಂದು ಶಿಲ್ಪ |
 |
ಭಾಗವತ.. ಇದರ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಹಿಂದಿನ ಹಲವು ಶಿಲ್ಪಗಳನ್ನು ನೋಡಿಕೊಂಡು ಬರಬೇಕು :-( ಪ್ರತಿಯೊಂದು ಸಾಲಿನ ಬಗ್ಗೆ ಬರೆದರೆ ಅದೇ ಒಂದು ಲೇಖನಮಾಲೆಯಾಗೋ ಸಾಧ್ಯತೆಯಿರುವುದರಿಂದ ಇದನ್ನಿಲ್ಲಿಗೇ ಕೈಬಿಡುತ್ತಿದ್ದೇನೆ :-( |
 |
ನಾಲ್ಕೋ ಐದೋ ಸಾಲು ಎಲ್ಲೆಡೆ ಇರುತ್ತೆ. ಆದರಿಲ್ಲಿ ಹನ್ನೊಂದು ಸಾಲು ಶಿಲ್ಪಗಳು !! ಹನ್ನೊಂದನೆಯ ಸಾಲಿನಲ್ಲಿರುವ ಮಿಥುನಶಿಲ್ಪಗಳು ಅದನ್ನೇ ಹುಡುಕುವವರೆಗೆ ಖಂಡಿತಾ ಕಣ್ಣಿಗೆ ಬೀಳೋಲ್ಲ !! ಬೇಲೂರು, ಹಳೇಬೀಡಲ್ಲೇನಿದೆ. ಬರೀ ಮಿಥುನ ಶಿಲ್ಪಗಳು ಅಂತ ತೆಗಳುತ್ತಿದ್ದ ಮಿತ್ರರೇನಾದ್ರೂ ಈಗ ಸಿಕ್ಕಿದ್ರೆ ಬರ್ರಿ, ಬೇಲೂರು ಹಳೇಬೀಡಿಗೆ ಮತ್ತೊಮ್ಮೆ ಹೋಗ್ಬರೋಣ, ಅಲ್ಲಿ ನೀವು ನೋಡದ ಎಷ್ಟೆಷ್ಟೆಲ್ಲಾ ಇದೆ ಅನ್ನಬೇಕು ಅನಿಸುತ್ತಿತ್ತು ! ಎಷ್ಟಕ್ಕೂ ದೃಷ್ಟಿಯಂತೆ ಸೃಷ್ಠಿಯಲ್ಲವೇ ? ಅಷ್ಟಕ್ಕೂ ಹನ್ನೊಂದನೆಯ ಸಾಲಿನಲ್ಲಿದ್ದುದು ನನಗೆ ಅಲ್ಲಿ ಸುತ್ತುವಾಗ ಗಮನಿಸಿದ್ದಲ್ಲ.. ಈ ಲೇಖನ ಬ್ಲಾಗಲ್ಲಿ ಬರೆಯುವಾಗ ಗಮನಿಸಿದ್ದು ! |
 |
ಹೊಯ್ಸಳನ ಕಥೆ ಮೇಲಿನ ಸಾಲಲ್ಲಿ. ಇಲ್ಲಿರೋ ಸಿಂಹಗಳ ಗೋಪುರಗಳಲ್ಲಿ ಒಂದಿದ್ದಂತೆ ಇನ್ನೊಂದಿಲ್ಲ ಅನ್ನುತ್ತಾರೆ.ಸತ್ಯಾಸತ್ಯಗಳ ಬಗ್ಗೆ ಸಂಶಯವಿರುವವರು ಹಳೇಬೀಡಿಗೆ ಹೋಗಿ ಪರಿಶೀಲಿಸಬಹುದು :-) |
 |
ವಿಶ್ವದ ಎಂಟನೇ ಎತ್ತರದ ನಂದಿ. ಶಾಂತಲೇಶ್ವರನ ಸಮ್ಮುಖದಲ್ಲಿ |
 |
ನಂದಿಯೆದುರಿಗೆ ನಾನು |
 |
ನಂದಿಯ ಮೇಲ್ಛಾವಣಿ |
 |
ಮತ್ತೊಂದು ಮೇಲ್ಛಾವಣಿಯ ನೋಟ |
 |
ಮೇಲ್ಛಾವಣಿಯಲ್ಲಿರುವ ಒಂಭತ್ತು ಮೂಲೆಗಳಲ್ಲಿ ಮತ್ತೊಂದು ಮೂಲೆ |
 |
ಮಗದೊಂದು ಮೂಲೆ. ಎಲ್ಲಾ ಒಂದೇ ತರ ಇದೆ ಅಂದಿರಾ ? ಚಿತ್ರವನ್ನು ಹಿಗ್ಗಿಸಿ ನೋಡಿ. ವ್ಯತ್ಯಾಸಗಳು ಗೋಚರಿಸುತ್ತವೆ :-) |
 |
ಮೊದಲು ಕಂಡ ನಂದಿಯ ಮಂಟಪ |
 |
ನಂದಿ ಮಂಟಪದ ಮಗ್ಗುಲಲ್ಲಿರುವ ವಿಷ್ಣು |
 |
ನಂದಿಮಂಟಪದ ಕಲ್ಲತೊಲೆಗಳ ವಿನ್ಯಾಸ |
 |
ನಂದಿಯ ಅಲಂಕಾರಗಳು |
 |
ಶಾಂತಲೇಶ್ವರ ಪ್ರವೇಶದ್ವಾರದಲ್ಲಿರುವ ನಂದೀಶ್ವರ, ಭೃಂಗೀಶ್ವರರು |
 |
ನಂದೀಶ್ವರ, ಭೃಂಗೀಶ್ವರರ ಹತ್ತಿರದ ನೋಟ. ಇಲ್ಲಿರುವ ಆಭರಣಗಳನ್ನು ಗಮನಿಸಿ. ದಾಳಿಯಲ್ಲಿ ತುಂಡರಿಸಲ್ಪಟ್ಟ ಕೈಗಳ ಬದಲು ಬೇರೆ ಕೈಗಳ ಜೋಡಿಸೋ ಪ್ರಯತ್ನ ನಡೆಯಿತಂತೆ ನಂತರದಲ್ಲಿ. ಆದ್ರೆ ಆಗಿನ ಶಿಲ್ಪಕಲೆಗೆ ಹೊಂದುವಂತಹ ರೂಪ ಮತ್ತೆ ಕೊಡಲಾಗದೇ ಅದನ್ನು ಹಾಗೇ ಬಿಟ್ಟರಂತೆ. ಕೈಗಳನ್ನು ಜೋಡಿಸಲು ತೆರೆದ ಹೊಂಡವನ್ನು ಹಾಗೇ ಬಿಟ್ಟಿರುವುದ ಕಾಣಬಹುದು |
 |
ಮತ್ತೊಂದು ಪ್ರವೇಶದ್ವಾರ |
 |
ಇಲ್ಲಿರುವ ದ್ವಾರಪಾಲರು ಮುಂಚೆಯಿದ್ದಂತೆ ಕಂಡರೂ ಅವರ ಬಲಗೈಯಲ್ಲಿರುವ ಆಯುಧಗಳ ಗಮನಿಸಿ. ಮೊದಲ-ಮೂರನೆಯ , ಎರಡನೆಯ-ನಾಲ್ಕನೆಯ ಶಿಲ್ಪಗಳಲ್ಲಿ ಸಾಮ್ಯತೆಯಿದ್ದರೂ ಆಯುಧಗಳು ಬದಲಾಗಿದೆ :-) |
 |
ಇಲ್ಲಿನ ದೇವಿಯನ್ನೂ, ಅಕ್ಕಪಕ್ಕದ ಮಖರಗಳ ಮೇಲೆ ಆಸೀನರಾಗಿರುವ ದೇವತೆಗಳನ್ನೂ ಗಮನಿಸಿ ! |
 |
ದೇಗುಲದ ಮತ್ತೊಂದು ದಿಕ್ಕಿನಲ್ಲಿರುವ ಗಣಪತಿ. ರಾಜಪರಿವಾರ ದೇಗುಲಕ್ಕೆ ಬರುವ ಮುನ್ನ ಈ ಆದಿವಂದ್ಯನಿಗೆ ಪೂಜಿಸಿಯೇ ಒಳಗೆ ಬರುತ್ತಿದ್ದರಂತೆ |
 |
ಒಂದು ಪ್ರದಕ್ಷಿಣೆ ಹಾಕಿ ಬಂದ್ರೆ ದೇಗುಲದ ಮುಂಭಾಗ ಕಾಣೋದು ಹೀಗೆ :-) |
 |
ನಂದಿ ಮಂಟಪದ ಪಾರ್ಶ್ವ ನೋಟ |
 |
ನವಿಲಿನ ಮೇಲೆ ಕೂತಿರುವ ಷಣ್ಮುಖ. ಆತನ ಪಕ್ಕದಲ್ಲಿ ಗಣಪತಿ. ದೇಗುಲದ ಶಿಲ್ಪಕಲೆಯ ಮತ್ತೊಂದು ಆಯಾಮ ತೆರೆದುಕೊಳ್ಳುವುದೇ ಇಲ್ಲಿಂದ |
 |
ತನ್ನ ವಾಹನ ಇಲಿಯ ಮೇಲೆ ನಿಂತು ನರ್ತಿಸುತ್ತಿರುವ ಗಣಪ, ಆತನ ಭಾರಕ್ಕೆ ಇಲಿ ಒಂದು ಕಡೆ ಮುಖ ತಿರುಗಿಸಿಕೊಂಡಿದೆ. ಭೂಮಿ ಬಗ್ಗಿಹೋಗಿದೆ ! |
 |
ಶಿವಪಾರ್ವತಿ. ಪಾರ್ವತಿಯ ವಾಹನ ಮುಂಗುಸಿಯನ್ನು ಕಾಣಬಹುದು ಕೆಳಗೆ.
ಶಿವನ ಬಳಿ ಹಾವು, ಪಾರ್ವತಿಯ ಬಳಿ ಮುಂಗುಸಿ !
ಕಾರ್ತೀಕೇಯನ ಬಳಿ ಹಾವಿನ ದ್ವೇಷಿ ನವಿಲು, ಗಣಪನ ಹೊಟ್ಟೆಯಲ್ಲಿ ಹಾವು !. ಎಷ್ಟೆಲ್ಲಾ ವೈರುದ್ಯಗಳಿದ್ದರೂ ಶಿವ-ಪಾರ್ವತಿ, ಗಣೇಶ-ಸುಬ್ರಮಣ್ಯ ಅಂದರೆ ನಮ್ಮನ್ನೆಲ್ಲಾ ಕಾಪಾಡೋ ದೇವರು ಎಂಬ ನಂಬಿಕೆ. ವಿವಿಧತೆಯಲ್ಲಿ ಏಕತೆ ಅಂತ ಈಗ ನಮ್ಮ ದೇಶವನ್ನು ಅರ್ಥೈಸುತ್ತಿರುವ ನಮ್ಮ ಕಲ್ಪನೆಯನ್ನು ನಮ್ಮ ಪೂರ್ವಿಕರು ಈ ದಿಟ್ಟಿನಲ್ಲಿ ಕಂಡಿರಬಹುದೇ ? |
 |
ಶ್ರೀಮನ್ಮಹಾವಿಷ್ಣು |
 |
ಮತ್ಯ್ಸಯಂತ್ರವನ್ನು ಬೇಧಿಸುತ್ತಿರುವ ಅರ್ಜುನ |
 |
ಮುಂಡಮಾಲೆಯನ್ನು ಧರಿಸಿರುವ ಸ್ಮಶಾನ ಭೈರವಿ.ಆಕೆಯ ಕೈಯಲ್ಲಿರುವ ರುಂಡದಿಂದ ಸೋರುತ್ತಿರುವ ರಕ್ತಕ್ಕೆ ಬಾಯಿ ಹಾಕಿರುವ ನಾಯಿ . ಪಕ್ಕದಲ್ಲಿ ನರ್ತಿಸುತ್ತಿರುವ ಪಿಶಾಚಿ !. ಪಕ್ಕದಲ್ಲೇ ನಿಂತಿರುವ ವೇಣುಗೋಪಾಲನ ಗಮನಿಸಿ ! ಪ್ರತೀ ಕಷ್ಟದ ಹಿಂದೆ ಸುಖವಿದೆ ಅಂತಲೋ ಒಳ್ಳೆಯ ದಾರಿಯಲ್ಲಿ ನಡೆಯದಿದ್ದರೆ ನಿನಗೆ ಕೊನೆಗೆ ಎದುರಾಗುವುದು ಸ್ಮಶಾನ ಭೈರವಿ ಅಂತ ಎಚ್ಚರಿಸಲೋ ಈ ತರಹ ಇವುಗಳನ್ನು ಪಕ್ಕ ಪಕ್ಕ ಕೆತ್ತಿರಬಹುದೇ ಅಂತ ! ಇಲ್ಲಿ ಅಂತಲೇ ಅಲ್ಲ. ಸ್ಮಶಾನ ಭೈರವಿ, ಉಗ್ರ ನರಸಿಂಹ ಇಂತಹ ಉಗ್ರ ಮೂರ್ತಿಗಳ ಕೆತ್ತನೆಯ ಎಡಬಲದಲ್ಲಿ ಸೌಮ್ಯ ಮೂರ್ತಿಗಳ ಕೆತ್ತನೆಯಿರುವುದನ್ನು ಕಾಣಬಹುದು ! |
 |
ಷಡ್ಭುಜ ಸರಸ್ವತಿ |
 |
ಬೇಲೂರಲ್ಲಿ ಕಂಡ ದರ್ಪಣ ಸುಂದರಿ ಮತ್ತೊಮ್ಮೆ ಇಲ್ಲಿ. ಅಲ್ಲಿ ಕುಂಕುಮ ತೊಟ್ಟುಕೊಳ್ಳೋ ತಯಾರಿಯಲ್ಲಿದ್ದಳು. ಇಲ್ಲಿ ಕುಂಕುಮ ತೊಡಲು ಕೈ ಹಣೆಯವರೆಗೆ ಬಂದಿರುವುದು. ಅಲ್ಲಿ ದೇಗುಲ ಕಟ್ಟಲು ಪ್ರಾರಂಭಿಸಿ ನಾಲ್ಕು ವರ್ಷದ ನಂತರ ಅಂದ್ರೆ ೧೧೨೧ ರಲ್ಲಿ ಇಲ್ಲಿ ದೇಗುಲ ನಿರ್ಮಾಣ ಪ್ರಾರಂಭವಾಗಿದೆ.ಅದಕ್ಕೂ ಇದಕ್ಕೂ ಏನಾದ್ರೂ ಸಂಬಂಧವಿರಬಹುದಾ ಅಂತ ! |
 |
ಭೂದೇವಿಯ ರಕ್ಷಿಸುತ್ತಿರುವ ವರಾಹ |
 |
ಚಾಮುಂಡೇಶ್ವರಿ |
 |
ಯುದ್ದಸನ್ನಾಹಳಾಗಿರೋ ಪಾರ್ವತಿ |
 |
ರುಂಡ ದಂಡ, ರುಂಡ ಮಾಲೆ, ಪಾಶಗಳನ್ನು ಹಿಡಿದಿರುವ ಸ್ಮಶಾನ ಭೈರವಿ |
 |
ನರಸಿಂಹನ ಉಗ್ರಾವತಾರ. ಹಿರಣ್ಯಕಶಿಪುವಿನ ಸಂಹಾರದ ಸಮಯದಲ್ಲಿ ಅಡ್ಡಬಂದ ರಕ್ಕಸನ ಮುಖ ಹಿಡಿದು ಎತ್ತಿದ ರಭಸಕ್ಕೆ ಆತನ ಮುಖದ ಚರ್ಮ ಕಿತ್ತುಬಂದಿದೆ. ಆ ಕಿತ್ತುಬಂದ ಚರ್ಮದಲ್ಲಿ ಆತನ ಕಣ್ಣುಗುಡ್ಡೆಗಳು ನೇತಾಡುತ್ತಿವೆ !! ನರಸಿಂಹನ ಇಂತಹ ಉಗ್ರಶಿಲ್ಪವ ಎಲ್ಲೂ ಕಂಡಿರಲಿಲ್ಲ ನಾನು ! |
 |
ಮಹಿಷಾಸುರ ಮರ್ಧಿನಿ. |
 |
ಪಾರ್ವತಿಯ ನೃತ್ಯ. ದ್ವಾರದಲ್ಲಿ ಕಂಡಂತಹ ಪಾರ್ವತಿಯ ಪೂರ್ಣರೂಪ |
 |
ತ್ರಿಲೋಕಾಧಿಪತ್ಯವನ್ನು ಸೂಚಿಸುವಂತೆ ತಲೆಯ ಮೇಲೆ ಮೂರು ಪತಾಕೆಗಳು ! |
 |
ಉಗ್ರನರಸಿಂಹನ ಮತ್ತೊಂದು ಭಂಗಿ.. ಕಾಲಲ್ಲಿ ಈಗಿನ ಮಠಾಧಿಪತಿಗಳು ಧರಿಸುವಂತಹ ಪಾದುಕೆಯ ಮಾದರಿಯ ರಚನೆ ! |
 |
ಸೃಷ್ಠಿಕರ್ತ ಬ್ರಹ್ಮ |
 |
ಗಜಾಸುರ ಸಂಹಾರ. ಆನೆಯ ಸೀಳಿ ನರ್ತಿಸುತ್ತಿರುವ ಶಿವ. ಆನೆಯ ಕಾಲುಗಳು ಮೇಲಕ್ಕೂ, ಆನೆಯ ಚರ್ಮ ಸೀಳಿದ ಅವನ ಒಂದು ಕೈಬೆರಳುಗುರು ಹೊರಬಂದಿರುವುದನ್ನೂ ಕಾಣಬಹುದು ! |
 |
ಮಳೆ ಸುರಿಸಿ ಕೊಚ್ಚಿ ಹಾಕಲು ನೋಡಿದ ಇಂದ್ರನ ಸೊಕ್ಕಡಗಿಸಲು ಗೋವರ್ಧನ ಗಿರಿಯನ್ನೇ ಕಿರುಬೆರಳಲ್ಲಿ ಎತ್ತಿದ ಕೃಷ್ಣ. |
 |
ವೇಣುಗೋಪಾಲ. ಇದು ಇಲ್ಲಿನ ಮಾಸ್ಟರ್ ಪೀಸ್ಗಳಲಿ ಒಂದು ಅನ್ನೋದು ಗೈಡುಗಳ ಅಂಬೋಣ |
 |
ಪಾರ್ವತಿ ನರ್ತನ. ಆಕೆಯ ಕೈಗಳೆಷ್ಟೋ. ಕೆಳಗಿದ್ದ ತುಂಡರಿಸಲ್ಪಟ್ಟ ರಕ್ಕಸನ್ಯಾರೋ.. ಮೂರ್ತಿಗಳ ಹಾಳುಮಾಡಿದ ಪಾಪಿಗಳೇ ಹೇಳಬೇಕು :-( |
 |
ನಂದಿವಾಹನ ಶಿವ.. ಈತನ ಇನ್ನೊಂದು ಸುಂದರ ಶಿಲ್ಪ ಮುಂದೆ ಕಾಣುತ್ತದೆ ನೋಡಿ |
 |
ಮಹಿಷಮರ್ಧಿನಿ |
 |
ದೇವಿಯ ಎರಡು ಉಗ್ರರೂಪಗಳು. ತೀರಾ ಅಪರೂಪವೆಂಬಂತೆ ಜೊತೆಯಲ್ಲಿ |
 |
ನಾಟ್ಯರಾಣಿ ಶಾಂತಲೆ. ತನ್ನ ನೃತ್ಯಕ್ಕೆ ಯಾರೂ ಸರಿಸಾಟಿಯಿಲ್ಲವೆಂಬಂತೆ ಆಕೆಯ ಮುಖದಲ್ಲಿ ಗರ್ವ ತುಂಬಿರುವುದನ್ನು ಗಮನಿಸಬಹುದು ಎನ್ನುತ್ತಾರೆ |
 |
ಪಾರಿಜಾತಕ್ಕಾಗಿ ದೇವೆಂದ್ರ ಮತ್ತು ಶ್ರೀಕೃಷ್ಣನ ಕಾಳಗ.ಗರುಡನ ಮೇಲಿರೋ ಶ್ರೀಕೃಷ್ಣನ ಕೈಯಲ್ಲಿರೋ ಪಾರಿಜಾತ ವೃಕ್ಷವನ್ನೂ ಇಂದ್ರನ ಪಕ್ಕದಲ್ಲಿರೋ ಯಕ್ಷಿಣಿ ಶಿಲ್ಪದ ಅಪೂರ್ವ ಕೆತ್ತನೆಯನ್ನೂ ಕಾಣಬಹುದು |
 |
ಸ್ಮಶಾನ ಭೈರವಿಯ ಮತ್ತೊಂದು ರೂಪ. ಆಕೆಯ ಪಕ್ಕದಲ್ಲಿ ನರ್ತಿಸುತ್ತಿರುವ ಪಿಶಾಚಿಗಳ ಉಗ್ರರೂಪ ! |
 |
ಕಮಲದ ಮೇಲೆ ನರ್ತಿಸುತ್ತಿರುವ ಗಣಪ |
 |
ಬಲಿಯ ದಾನ. ಪಕ್ಕದಲ್ಲೇ ತ್ರಿವಿಕ್ರಮನಾದ ವಾಮನ ಮೂರ್ಲೋಕಗಳ ಅಳೆಯುತ್ತಿರುವುದನ್ನು ಕಾಣಬಹುದು. |
 |
ಮೂರ್ಲೋಕ ಅಳೆಯುತ್ತಿರುವ ತ್ರಿವಿಕ್ರಮನ ಕಾಲನ್ನು ತೊಳೆಯುತ್ತಿರುವ ಬ್ರಹ್ಮನನ್ನು
ಕಾಣಬಹುದು. ಕಾಲು ತೊಳೆದ ಗಂಗೆಯ ನೀರಲ್ಲಿ ಮೀನು ಮತ್ತಿತ್ತರ ಜಲಚರಗಳು ಭೂಮಿಗೆ
ಹರಿದುಬರುತ್ತಿರುವುದನ್ನೂ ಕಾಣಬಹುದು ! |
 |
ಕರ್ಣಾರ್ಜುನ ಕಾಳಗ. ಬಾಣಗಳು ಎರಡಾಗಿ, ಹತ್ತಾಗಿ ಕೊನೆಗೆ ಆಕಾಶವನ್ನೇ ಮುತ್ತಿದಂತೆ ಹರಿದುಬರುತ್ತಿರುವುದನ್ನು ಕಾಣಬಹುದು |
 |
ಏಳು ತಾಳೆಮರಗಳ ಆಚೆಯಿಂದ ಬಾಣ ಬಿಟ್ಟು ವಾಲಿಯನ್ನು ಸಂಹರಿಸುತ್ತಿರುವ ಶ್ರೀರಾಮ . ಎದುರು ಬಂದವರ ಅರ್ಧ ಶಕ್ತಿ ತನಗೆ ಸಿಗುವ ವರವನ್ನು ವಾಲಿ ಪಡೆದಿದ್ದರಿಂದ ಅವನ ಎದುರು ಹೋಗದೇ ಮರಗಳ ಹಿಂದಿಂದ ಆತನನ್ನು ಶ್ರೀರಾಮ ಸಂಹರಿಸಬೇಕಾಯಿತಂತೆ |
 |
ವೀಣೆಯ ಒಂದು ತುದಿ ಹಾವಿನಂತಿರುವುದರಿಂದ ಈಕೆಯ ಕೈಯಲ್ಲಿರುವ ವೀಣೆಗೆ ನಾಗವೀಣೆ ಅಂತ ಹೆಸರು !ಕೈಗಳ ಬದಲು ಕೋಲಿನ ಮೂಲಕ ನುಡಿಸುತ್ತಿರುವ ಇದರಲ್ಲಿ ಈಗಿನ ಪಿಟೀಲಿನ ತತ್ವ ಕಾಣೋಲ್ಲವೇ ? ! ಪಕ್ಕದಲ್ಲಿರುವ ಆಗಿನ ಕಾಲದ ಸನ್ಯಾಸಿ ಅಥವಾ ನ್ಯಾಯಾಧಿಕಾರಿ. ಇವನನ್ನು ನೋಡಿದರೆ ಬ್ರಿಟಿಷ್ ಜಡ್ಜುಗಳ ಚಿತ್ರ ನೆನಪಾಗೋಲ್ಲವೇ. ಆದ್ರೆ ಇವನ್ನೆಲ್ಲಾ ಕೆತ್ತಿದ್ದು ಬ್ರಿಟಿಷರು ಭಾರತಕ್ಕೆ ಕಾಲಿಡುವ ಎಷ್ಟೋ ಶತಮಾನಗಳ ಮೊದಲು.. ನಮ್ಮಲ್ಲಿ ಇರೋದೆಲ್ಲಾ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಅಂತ ಬೊಬ್ಬೆ ಹಾಕೋ ಬುದ್ದಿಜೀವಿಗಳು ಇಂತದ್ದನ್ನೆಲ್ಲಾ ಗಮನಿಸೊಲ್ಲವೇ ಅಥವಾ ಗಮನಿಸೂ ಸುಮ್ಮನಿರೋ ಜಾಣಕುರುಡೋ ಅಂತ ಗೊತ್ತಾಗೊಲ್ಲ ! |
 |
ರುಂಡದಂಡ ಹಿಡಿದಿರೋ ಭೈರವಿಯ ಮತ್ತೊಂದು ರೂಪ. ಆಕೆಯ ಕಾಲುಗಳಲ್ಲೂ ಈಗಿನ ಪಾದುಕೆಗಳ ಮಾದರಿಯ ರಚನೆ ಗಮನಿಸಬಹುದು ! |
 |
ವಿಗ್ರಹಗಳ ಜೊತೆಗೆ ಮೇಲೆ ನೇತಾಡುತ್ತಿರೋ ಕಲ್ಲ ಸರಪಳಿಗಳನ್ನು, ಕೊಂಡಿಗಳನ್ನು ಗಮನಿಸಿ ! |
 |
ಕಣ್ಣು ಹಾಯಿಸಿದತ್ತೆಲ್ಲಾ ಈ ಪರಿ ಶಿಲ್ಪಕಲೆ ಇದ್ದರೆ ಯಾವುದನ್ನು ನೋಡೊದು ? ಯಾವುದನ್ನು ಬಿಡೋದು ? ! |
 |
ಕೈಲಾಸವನ್ನೇ ಎತ್ತುತ್ತೇನೆಂದು ಹೊರಟ ರಾವಣ. ಈತನ ಅಹಂಕಾರವನ್ನು ಮುರಿಯಬೇಕೆಂದು ತನ್ನ ಕಾಲಲ್ಲೇ ಕೈಲಾಸವನ್ನೊತ್ತಿದ ಶಿವನನ್ನು ರಾವಣನ ತಲೆ ಕೈಲಾಸದೊಂದಿಗೆ ಒಂದೆಡೆ ಬಾಗಿರುವುದನ್ನು ಕಾಣಬಹುದು ! |
 |
ತನ್ನ ಮೇಲೆ ದೇವನ ಬದಲು ಪಾರ್ವತಿಯೂ ಕೂತಿದ್ದಾಳೆಂದು ಸಿಟ್ಟಿನಿಂದ ಮುಖ ತಿರುಗಿಸಿರುವ ನಂದಿ. ಶಿವನ ಕೈ ಪಾರ್ವತಿಯನ್ನು ಬಳಸಿರುವಂತಿದೆಯಾದರೂ ಅದರ ಕೊನೆ ನಂದಿಯ ಕೊಂಬನ್ನು ನೇವರಿಸಿ ಅತನನ್ನು ಸಂತೈಸುತ್ತಿದೆ !! ಅಬ್ಬಾ ಎಂತಾ ಕಲ್ಪನೆಯೋ ಶಿವನೇ.. ವಾಹ್ |
 |
ಶಿವನ ಪಕ್ಕದಲ್ಲಿ ನಾಗವಲ್ಲಿಯೋ, ವಿಷಕನ್ಯೆಯೋ ! ? |
 |
ಮಹಾಭಾರತ |
 |
ದ್ವಾರಪಾಲರ ಶಿಲ್ಪ ಮತ್ತೊಂದು ಭಂಗಿಯಲ್ಲಿ |
 |
ದೇಗುಲದ ಒಳಗಿನ ಮೇಲ್ಛಾವಣಿ |
 |
ಹೊಯ್ಸಳೇಶ್ವರ |
 |
ದ್ವಾರಪಾಲಕರ ಅಲಂಕಾರಗಳ ಗಮನಿಸಿ. ಸಂಜೆಯಾಗುತ್ತಾ ಬಂದಿದ್ರಿಂದ, ಟ್ಯೂಬುಲೈಟುಗಳ ಪ್ರಭೆಯಿಂದ ಇಲ್ಲಿನ ದೃಶ್ಯಗಳು ಕಣ್ಣುತುಂಬಿಕೊಳ್ಳಲಾದರೂ ಫೋಟೋಗಳಾಗಿ ಸಮಪ್ರಕವಾಗಿ ದಾಟಿಸಲಾಗಿಲ್ಲ :-( |
 |
ಶಾಂತಲೇಶ್ವರ ದೇಗುಲದ ಮೇಲ್ಭಾಗ.ಇದರ ಕೆಳಗಿರೋ ದ್ವಾರಪಾಲಕರನ್ನು ಸೂಕ್ಷ್ಮವಾಗಿ ಗಮನಿಸಿ. ಅವರ ಕಿರೀಟಗಳಲ್ಲಿರುವ ತಲೆಬುರುಡೆಗಳನ್ನು ಪೂರ್ಣ ಟೊಳ್ಳಾಗಿ ಕೆತ್ತಿರುವ ಶಿಲ್ಪಿಯ ಕೈಚಳಕಕ್ಕೆ ಸೈ ಅಂತ ಅನ್ನಲು ಸೌಂದರ್ಯ ರಸವಿಲ್ಲದ ಎಂಥಹವನಾದ್ರೂ ಮುಂದಾಗುತ್ತಾನೆ. |
..
 |
ಚಕ್ರವ್ಯೂಹದ ಒಳಹೊಕ್ಕಿರೋ ಅಭಿಮನ್ಯು |
 |
ಆಗಿನ ಕಾಲದ ಕ್ಷಿಪಣಿ ಅಥವಾ ಮಿಸೈಲ್ಗಳು ! |
 |
ಆಗಿನ ಕಾಲದಲ್ಲೇ ಇದ್ದ ದುರ್ಬೀನು ! ಅಥವಾ ಬೈನಾಕ್ಯುಲರ್ |
..ಮುಂದಿನ ಭಾಗದಲ್ಲಿ: "ಮೊಸಳೆ" ಎಂಬ ಊರಿನ ಹೊಯ್ಸಳ ದೇವಸ್ಥಾನಗಳು