Thursday, October 20, 2011

ಸೋಲು


ಸಾಮಾನ್ಯವಾಗಿ ಯಾರೂ ಸೋಲೋಕಿಷ್ಟಪಡಲ್ಲ. ಬೇಕಂತನೇ ಸೋಲೋರು ಇರಬಹುದು. ಆದ್ರೆ ಆ ಸೋಲಲ್ಲಿ,ಸೋಲೋ ಪ್ರಯತ್ನದಲ್ಲಿ ಆತ ಗೆದ್ದಿರ್ತಾನೆ ಅಲ್ವಾ? ಜೀವನ ಅಂದ್ಮೇಲೆ ಬೇವು ಬೆಲ್ಲ ಎಲ್ಲ ಇರತ್ತಪ್ಪ, ಅದನ್ನ ಸಮಾನವಾಗಿ ಸ್ವೀಕರಿಸಬೇಕು ಅನ್ನೋ ವೇದಾಂತದ ಮಾತುಗಳನ್ನ, ಸೋತವ ಸತ್ತ ಅನ್ನೋ ತರದ ನಕಾರಾತ್ಮಕ ಮಾತುಗಳನ್ನ ಸ್ವಲ್ಪ ಬದಿಗಿಟ್ಟು ನೋಡಿದ್ರೆ ನಾವಿಡೋ ಪ್ರತೀ ಹೆಜ್ಜೇಲೂ ಗೆಲುವಿನ ತುಡಿತ ಅಥವಾ ಸೋಲಿನ ಭಯ ಎದ್ದು ಕಾಣುತ್ತೆ.ಒಲಿಂಪಿಕ್ಕಲ್ಲಿ ಬಂಗಾರ ಗೆದ್ದವನದು ಮಾತ್ರ ಗೆಲುವು, ೨ನೇ , ೩ನೇ ಸ್ಥಾನ ಪಡೆದವರದ್ದು ಸೋಲು ಅಂತಲ್ಲ.ತಮ್ಮ ದೇಶದ ಉಳಿದ ಲಕ್ಷಾಂತರ ಜನರ ಮಧ್ಯದಿಂದ ಆ ಹಂತದ ವರೆಗೆ ಬಂದವರೆಲ್ಲಾ ಅಟ್ಟರ್ ಫ್ಲಾಪುಗಳು ಅಂತ ಅಲ್ಲ. ಒಂದು ಮ್ಯಾಚಿನಲ್ಲಿ ಸೋತ ಮಾತ್ರಕ್ಕೆ ಇಡೀ ತಂಡ ಅಯೋಗ್ಯ ಅಂತ ಅಲ್ಲ.ಕೊನೆ ಫಲಿತಾಂಶ ಏನೇ ಆದ್ರೂ ಅದರ ಹಿಂದೆ ಎರಡೂ ತಂಡಗಳ ಹಲವು ಅದ್ಭುತ ಕ್ಯಾಚುಗಳು,ಹೊಡೆತ, ರಕ್ಷಣೆಗಳು, ಮುಖ್ಯವಾಗಿ ಸ್ವಲ್ಪವಾದ್ರೂ ಒಳ್ಳೆಯ ಆಟ ಇರುತ್ತೆ. ಒಂದು ಗೋಲು ಬಿಟ್ಟ ಕಾರಣಕ್ಕೆ ಫೈನಲಲ್ಲಿ ತಂಡ ಮ್ಯಾಚು ಸೋಲ್ತು ಅಂದ್ರೆ ಅದು ಆ ರಕ್ಷಕನ ಜೀವನದ ಘೋರ ಸೋಲು ಅಂತ ಅಲ್ಲ..ಬಿಟ್ಟ ಗೋಲಿಗೆ ಸುರಿದ ಟೀಕಾಸ್ತ್ರದ ಸುರಿಮಳೆಯ ಹಿಂದೆ ಹೋಗಿ ಹುಡುಕಿದರೆ ಇಡೀ ಪಂದ್ಯದಲ್ಲಿ ಆತ ತಡೆದ ಗೋಲುಗಳ ಪರಿಶ್ರಮದ ಯಶಸ್ಸು ಸಮಾಧಿಯಾಗಾದ್ರೂ ಸಿಗುತ್ತೆ.

ಒಬ್ಬೊಬ್ಬರ ದೃಷ್ಟೀಲಿ ಒಂದೊಂದು ಸೋಲಾಗಿರಬಹುದು. ನಮ್ಮ ದೃಷ್ಟಿಗೆ ಸೋಲು ಅಂತ ಕಂಡದ್ದು ಆತ/ಆಕೆಯ ದೃಷ್ಟೀಲಿ ಸೋಲಾಗಿರ್ದೇ ಇರಬಹುದು.ಎಲ್ಲರ ಪಾಲಿಗೂ , ಎಲ್ಲ ಕಾಲಕ್ಕೂ ಹೌದೆನ್ನಬಹುದಾದಂತ ಸಾರ್ವಕಾಲಿಕ ಸತ್ಯ ಅಂತೇನೂ ಇಲ್ಲವಲ್ಲ.. ಹಾಗೆಯೇ ಸೋಲು ಕೂಡ. ಸದಾ ಸೋಲ್ತಿರ್ತಾನೆ, ಅದನ್ನೇ ಬಯಸ್ತಾನೆ, ಅದಕ್ಕೆ ಒಗ್ಗಿಹೋಗಿದಾನೆ ಅಂತ ಕಾಣಿಸ್ತಿರೋ ಜೀವವೂ ಒಂದಲ್ಲ ಒಂದು ರೀತಿ ಗೆಲುವಿಗೆ ಹಂಬಲಿಸ್ತಾ ಇರತ್ತೆ.ಅಪಾರ ಸಾಲ ಮಾಡಿ ತೀರಿಸಕ್ಕಾಗ್ದೇ ಯಾವುದೋ ದುರ್ವಸನಕ್ಕೆ ತುತ್ತಾಗಿ ದರಿದ್ರ ಜೀವನ ನಡೆಸ್ತಿರೋ ವ್ಯಕ್ತಿ ಲೋಕದ ಕಣ್ಣಿಗೆ ಸೋತಂತೆ ಕಾಣಬಹುದು. ಆದರೆ ಆತನ ಕಣ್ಣಲ್ಲಿ ಅವನೇ ಹೀರೋ. ಕುಡಿತದ ನಶೆಯಲ್ಲೋ, ಹೆಂಡತಿಗೆ ಹೊಡೆಯೋದ್ರಲ್ಲೊ, ಮಕ್ಕಳಿಗೆ ಜಪ್ಪೋದ್ರಲ್ಲೋ , ಇನ್ಯಾರ್ದೋ ದುರ್ಗುಣಗಳನ್ನ ಪಟ್ಟಿ ಮಾಡೋದ್ರಲ್ಲೋ ಅವನು ಜಯ ಕಾಣ್ತಾ ಇರ್ತಾನೆ.ಓದೋದ್ರಲ್ಲಿ ನಯಾಪೈಸಾ ಉಪಯೋಗ ಇಲ್ಲ ಅಂತ ಬಯಿಸಿಕೊಳ್ತಾ ಇರೋ ಹುಡ್ಗ ಯಾವುದೋ ಕಂಪ್ಯೂಟರ್ ಗೇಮಲ್ಲೋ, ಹೊರಾಂಗಣ ಆಟದಲ್ಲೋ ಭಾರಿ ಚತುರನಾಗಿರ್ತಾನೆ. ಸಂಗೀತ, ನಾಟಕ, ತಬಲ, ಟ್ರೆಕಿಂಗ್, ಚಿತ್ರಕಲೆ ಹೀಗೆ ಅವನ ಆಸಕ್ತಿ ಬೇರೆ ಏನೋ ಇರುತ್ತೆ. ಯಾರದ್ದೋ ಒತ್ತಾಯಕ್ಕೆ ಗಂಟುಬಿದ್ದು ಇಲ್ಲಿ ಬಂದು ಬಿದ್ದಿರೋ ಅವನಿಗೆ ಇದು ಉಸಿರುಗಟ್ಟಿಸ್ತಾ ಇರುತ್ತೆ. ಪರಿಕ್ಷೆಯಲ್ಲಿ ಫೇಲಾಗೋದೇ ಅಭ್ಯಾಸವಾಗಿದೆ ಅನ್ನೋ ಹುಡುಗನಿಗೆ ಆ ಪರೀಕ್ಷೆ ಪರೀಕ್ಷೆಯೇ ಅಲ್ಲ ಅನ್ನಿಸೋಕೆ ಶುರು ಆಗಿರ್ಬೋದು. ಒತ್ತಾಯಕ್ಕೆ ಅಲ್ಲಿ ಬಂದು ಸೇರಿದ ಅವ ಆ ಮೂಲಕ ಸೇಡು ತೀರಿಸಿಕೊಳ್ಳೋದ್ರಲ್ಲಿ ಜಯ ಕಾಣ್ತಿರಬಹುದು. ಯಾವುದೇ ಟೀಕೆ ಟಿಪ್ಪಣಿಗಳಿಗೆ. ಮುಲಾಜಿಗೆ ಒಳಗಾಗದಂತಹ ನಾನಿರೋದೆ ಹಿಂಗೆ, ನನಗೆ ಬೇಕಾದಂಗೆ. ನೀನು ಏನು ಬೇಕಾರು ಮಾಡಿಕೋ ಎನ್ನೋ ತರದ ದಿವ್ಯ ನಿರ್ಲಕ್ಷ್ಯ ಹೊಂದೋದ್ರಲ್ಲಿ ಮಾನಸಿಕ ಜಯ ಅರಸ್ತಿರಬಹುದು ಆತ.ಬದುಕಿನ ಮೇಲೆಯೇ ಹಲವಾರು ಕಾರಣಗಳಿಂದ ಜಿಗುಪ್ಸೆ ಬರ್ಬೋದು ಕೆಲವರಿಗೆ. ಜೀವನಾನ ಎದುರಿಸಕ್ಕಾಗ್ದೇ ಆತ್ಮಹತ್ಯೆಗೆ ಶರಣಾದ ಆತ ಮಹಾ ಹೇಡಿಯಂತೆ ಕಾಣಿಸಬಹುದು ಹಲವರಿಗೆ. ಆದರೆ ಬದುಕಿದ್ದಂತೂ ಏನೂ ಸಾಧಿಸಲಿಕ್ಕೆ ಆಗಲಿಲ್ಲ. ಎಷ್ಟೂಂತ ಸೋಲೋದು,ಎಷ್ಟೂಂತ ತಲೆ ತಗ್ಸೋದು ಈ ಸೋಲೂ ಸಾಕು, ಬದುಕೂ ಸಾಕು, ಸತ್ತು ಬಿಡೋಣ ಅನ್ನೋ ಅಪಾಯಕಾರಿ ಮನೋಭಾವ ಅವರಲ್ಲಿ ಬೆಳೆದಿರಲಿಕ್ಕೂ ಸಾಕು. ಅವರ ದೃಷ್ಟಿಯಲ್ಲಿ ಈ ಸೋಲ ಬಿಡಿಸಲಾಗದ ಚಕ್ರದಿಂದ ಬಿಡಿಸುವಂತಹ ಏಕೈಕ ಗೆಲುವು ಸಾವು. ಸಮಾಜದ ಮೇಲೆ ಜಿಗುಪ್ಸೆ ತಾಳಿರೋ ಒಬ್ಬ ಯಾರನ್ನೋ ದೋಚೋದ್ರಲ್ಲೋ , ಕೊಲ್ಲೋದ್ರಲ್ಲೊ, ಇನ್ಯಾರದೋ ಮಾಹಿತಿ, ದುಡ್ಡು ಕದಿಯೋದ್ರಲ್ಲೋ ಜಯ ಕಾಣ್ತಿರಬಹುದು. ತನಗೆ ಒಳ್ಳೆಯ ದಾರಿಯಲ್ಲಿ ಸಿಗದ ಗೆಲುವ ಅಲ್ಲಿ ಹುಡುಕ್ತಾ ಇರಬಹುದು. ಅವನೂ ಜೀವನದಲ್ಲಿ ಗೆದ್ದವನೇ. ಆದರೆ ಲೋಕಕಂಕ ಅಷ್ಟೆ


ಕ್ಲಾಸಿಗೆ ಫಸ್ಟು ಬರುತ್ತಿದ್ದ ಬಡ ವಿದ್ಯಾರ್ಥಿ ಸರ್ಕಾರದ ವಿದ್ಯಾರ್ಥಿವೇತನ ಪಡೆಯುತ್ತಲೇ ಓದಿ ಬೆಳೆದು ದೊಡ್ಡವನಾಗಿ ಅಮೇರಿಕಕ್ಕೆ ಹಾರುತ್ತಾನೆ. ಅಲ್ಲಿ ಹೋಗಿ ಅಲ್ಲೇ ಮದುವೆಯಾಗಿ ಸಂಸಾರವನ್ನೂ ಹೂಡುತ್ತಾನೆ.ಅದೇ ನಪಾಸಾಗಿ ಹಳ್ಳಿಯಲ್ಲೇ ಉಳಿದ ರಂಗ ಈಗ ಅಂಗಡಿ ಇಟ್ಕೊಂಡು ಹೆಂಡತಿ ಮಕ್ಕಳನ್ನು ಸಾಕ್ತಾ ಇದಾನೆ. ಮೊದಲು ಬರುತ್ತಿದ್ದ ಹುಡುಗನ ದೃಷ್ಟೀಲಿ ಹಳ್ಳಿರಂಗನ ತರದವರೆಲ್ಲಾ ಜೀವನದಲ್ಲಿ ಏನನ್ನೂ ಗೆಲ್ಲಲಾಗದವರು.ಎಕ್ಸಾಮಲ್ಲಿ ಕಾಫಿ ಹೊಡ್ದೂ ಡುಮುಕಿ ಹೊಡೀತಿದ್ದ ಅವ ತನ್ನ ಮಕ್ಕಳಿಗೆ ಏನಂತ ಹೇಳ್ಕೊಡ್ತಾನೆ. ತಾ ಹುಟ್ಟಿದ್ದಂತೂ ಹಳ್ಳೀಲಿ, ಮಕ್ಕಳನ್ನೂ ಅಲ್ಲೇ ಓದೋ ಹಾಗೆ ಮಾಡಿದಾನಲಾ ದುಡಿಯೋಕ್ಕಾಗದ ಸೋಮಾರಿ ಅಂತ. ಆದರೆ ಹಳ್ಳಿರಂಗನ ದೃಷ್ಟೀಲಿ ತನ್ನ ಕಾಲು ಮೇಲೆ ನಿಂತ ತಾನೇ ಹೀರೋ. ಸಾಯೋ ಕಾಲಕ್ಕೆ ಸ್ವಂತ ಅಮ್ಮನ ಜೊತೆಗಿರಕಾಗದ ಮೇಲೆ ಎಷ್ಟಿದ್ರೇನು? ಇಲ್ಲಿ ಬಡತನ ಅಂತೆ. ಅವಕಾಶ ಇಲ್ಲಂತೆ, ಯಾರ್ದೋ ಕಾಲ್ಕೆಳಗೆ ಕೆಲ್ಸ ಮಾಡೋದೇ ಸ್ವರ್ಗ ಅಂತ ಪರಿಸ್ಥಿತಿ ಎದುರಿಸಕ್ಕಾಗ್ದೇ ಇರೋನು ಹೇಡಿ ಅಂತ.ಯಾರು ಸರಿ, ಯಾರು ತಪ್ಪು ಅಂತಲ್ಲ ಇಲ್ಲಿ. ಯಾವುದು ಮೇಲು ಯಾವುದು ಕೀಳು ಅಂತಲ್ಲ. ಒಬ್ಬನ ಕಣ್ಣಿಗೆ ಕಾಣಿಸ್ತಿರೋ ಸೋಲು ಮತ್ತೊಬ್ಬನ ಪಾಲಿಗೆ ಸೋಲಲ್ದೇ ಇರಬಹುದು ಅಂತ. ಖಾಲಿ ಕೂತರೇ ಮನೆಯಲ್ಲಿ ಅಕ್ಕಿ ಕಾಳು ಬೇಯಲ್ಲ ಅಂತ ಗೊತ್ತಿರೋ ಹುಡುಗ ಸಿಕ್ಕಿದ ಯಾವುದೋ ಜವಾನನ ಕೆಲಸಕ್ಕೆ ಸೇರಿರಬಹುದು. ಯಾರೇ ಯಾರನ್ನಾದರೂ ೨೪ ಘಂಟೆ, ೩೬೫ ದಿನವೂ ವೀಕ್ಷಿಸುತ್ತಾ ಇರಲು ಸಾಧ್ಯವೇ? ಬೆಳಿಗ್ಗೆ ದುಡಿಯುವ ಆತ ರಾತ್ರೆ ತನ್ನ ಕನಸಾದ ಐ.ಎ.ಸ್ ಗೆ ಓದಿ ಅದನ್ನು ಪಾಸೂ ಮಾಡಬಹುದು.ಬಡತನಕ್ಕೆ ಸೋತಿತು ಅವನ ಪ್ರತಿಭೆ ಅಂತ ಮುಂಚೆ ಆಡಿ ನಕ್ಕವರ ಕಥೆ ಈಗ ? .

ಸೋಲೇ ಗೆಲುವಿನ ಸೋಪಾನ ಅಂತ ಅಂದ್ರೂನೂ , ಸೋಲು ಗೆಲುವಿಗಿಂತ ಹೆಚ್ಚಿಗೆ ಕಲಿಸುತ್ತೆ ಅಂದ್ರೂನು ಯಾರೂ ಈ ಮಾತನ್ನ ನಂಬ್ಕೊಂಡು ತೆಪ್ಪಗೆ ಕೂರೊಲ್ಲ ಸೋತಾದ ಮೇಲೆ. ಮತ್ತೆ ಮಾಡ್ತಾ ಇರೋ ಪ್ರಯತ್ನದ ಹಿಂದೆ ಸೋಲಬಾರದೆಂಬ ಛಲ ಇರ್ಬೋದು, ಈ ಸಲವೂ ಸೋತ್ರೆ ಏನಪ್ಪಾ ಗತಿ ಅಂತ ಭಯ ಇರ್ಬೋದು, ಸೋತ್ರೆ ಏನಾಗತ್ತೆ ಮಹಾ? ಮಾಡ್ಬೇಕು ಮಾಡ್ತೀನಿ ಅನ್ನೋ ವಿಚಿತ್ರ ನಿರ್ಲಕ್ಷನೂ ಇರ್ಬೋದು. ಹಾಗೇನಾದ್ರೂ ಇದ್ರೆ ಅವನನ್ನು ಸೋಲಿಸೋ ಸೋಲಿಗೇ ಸೋಲೂಂತ ಅರ್ಥ ಅಷ್ಟೆ. ಒಂದು ವಿಷಯದ ಸೋಲು ಇನ್ನೊಂದಕ್ಕೆ ಲಾಭದಾಯಕವಾಗಿ ಬದಲಾಗುತ್ತೆ. ಅದರ ದೃಷ್ಟೀಲಿ ಅದು ಗೆಲುವಾಗಿ ಕಾಣ್ತಿರುತ್ತೆ. ಕವನ ಬರ್ದು ಬರ್ದು ಅದರಲ್ಲಿ ನಿರೀಕ್ಷಿತ ಫಲ ಸಿಗದೇ ಕಥೆ ಬರ್ಯಕ್ಕೆ ಶುರು ಮಾಡಿದ ಹುಡುಗ ಮುಂದೆ ದೊಡ್ಡ ಬರಹಗಾರ ಆದರೆ ಅವನ ಕವನದಲ್ಲಿನ ಸೋಲು ಕಥೆಗಾಗಿನ ಗೆಲುವಲ್ಲವೇ. ತಾನಂದ್ಕಡಿದ್ದನ್ನ ಸಾಧಿಸಬೇಕು ಅಂತ msc ಲೀ ಬೇಕಂತಲೇ ಫೇಲಾಗೋ ಪರಮಾತ್ಮ ಹೀರೋನ ಪರೀಕ್ಷೆ ಫೇಲು, ಪಾಸಾ ಫೇಲಾ? ಸಿನಿಮಾ ಬೇರೆ, ಜೀವನ ಬೇರೆ, ಒಪ್ಕೊಳ್ಳೋಣ. ಅಂತ ಪರಮಾತ್ಮರು ಎಷ್ಟು ಜನರಿದ್ದಾರೆ ನಮ್ಮ ಮಧ್ಯೆ ಗೊತ್ತಾ? ಪಿಯುಸಿಯಲ್ಲಿ ಮೂರನೇ ಸ್ಥಾನ ಪಡೆದ ಮಗ ಓಡಿ ಹೋಗಿರ್ತಾನೆ ಮನೆ ಬಿಟ್ಟು. ಮನೆಯಲ್ಲಿ ಮುಂದೆ ಓದಿಸೋ ಶಕ್ತಿ ಇಲ್ಲ ಅಂತ. ಅವನೀಗ ಕರ್ನಲ್ಲು ಆರ್ಮೀಲಿ. ಜೊತೆಗೇ ಓದಿ ಓಡಿ ಹೋದ ಅಂತ ಹಿಂದೆ ಬಿಟ್ಟು ಆಡಿಕೊಳ್ತಿದ್ದೋರು ಯಾವುದೋ ಆಫೀಸುಗಳಲ್ಲಿ ಕ್ಲರ್ಕುಗಳು, ಕೆಲವು ಮ್ಯಾನೇಜರುಗಳು.. ಯಾರದು ಸೋಲು, ಯಾರದು ಗೆಲುವು? ಹೇಳೋಕ್ಕಾಗಲ್ಲ ಅಲ್ವಾ ? ಸೋಲು ಸೋಲಲ್ಲ ಸ್ವಾಮಿ , ಸೋಲಿಗೆ ಶರಣಾಗಿ ಸೋತೋಗೊವರೆಗೂ, ಸೋತರದು ಸೋಲಲ್ಲ ,ಇಂದು ಸೋಲಿಸದ ಸೋಲೇ ನಾಳೆ ಸೋಲಬಹುದು. ನಿಮ್ಮ ದೃಷ್ಟಿಯಲ್ಲಿ ಸೋತರೆ ಮಾತ್ರ ಅದು ಸೋಲು. ಅದೂ ಸೋಲಲ್ಲ , ಹಾಗೆಂದು ಸುಮ್ಮನೆ ಕೂತರದು ಸೋಲು. ಹಿಂತಿರುಗಿ ನೋಡಿ. ಆ ಒಂದು ಸೋಲ ಹಿಂದೆ ನಿಮ್ಮಿಂದ ಸ್ವಲ್ಪವಾದ್ರೂ ನಿರೀಕ್ಷಿಸುತ್ತಿರೋ ಎರಡು ಕಣ್ಣುಗಳಾದ್ರೂ ಕಾಣತ್ತೆ. ಇನ್ನೂ ಕಾಣಲಿಲ್ಲಾಂದ್ರೆ ಕನ್ನಡೀಲಿ ನೋಡಿ. ಗ್ಯಾರಂಟಿ ಕಾಣುತ್ತೆ

No comments:

Post a Comment