Friday, August 12, 2011

ವಿಮಾನಯಾನ: ವಿಷಯಾನ

ಶೀರ್ಷಿಕೆ ನೋಡಿ ನಾನು ಪೋಲಿಸರು ಹತ್ತಿಸುತ್ತಾರೆ ಅನ್ನೋ ವಿಮಾನದ ಬಗ್ಗೆ ಮಾತಾಡ್ತಾ ಇದ್ದೀನಾ ಅಂತ ಕೆಲವ್ರಿಗೆ ಸಂದೇಹ ಬಂದ್ರೂ ಬಂದಿರ್ಬೋದು. ಇಲ್ಲಾ ಸ್ವಾಮಿ. ನಾ ಹೇಳ್ತಿರೋದು ಜನ್ರು ಬೇಗ ಹೋಗ್ಬೇಕೋ, ದೂರ ಹಾರ್ಬೇಕು ಅಂತ ಬಳಸೋ ವಿಮಾನದ ಬಗ್ಗೇನೆ. ಅದು ಅಪಘಾತವಾಗಿ ಸುಮಾರು ಜನ ಸಾಯ್ತಾರೆ.ಆದ್ರೆ ಅದ್ರಲ್ಲಿನ ಪ್ರತೀ ಪ್ರಯಾಣವೂ ಹೇಗೆ ವಿಷಯಾನ ಆಗತ್ತೆ ಅಂತ ಕುತೂಹಲ ಕಾಡೋಕೆ ಶುರು ಆಯ್ತಾ? ಹಾಗಾದ್ರೆ ಮುಂದೆ ಓದಿ.
ಕಾಸ್ಮಿಕ್ ಕಿರಣಗಳು ಅಂತ ನೀವು ಕೇಳಿರಬಹುದು.ಅಂತರಿಕ್ಷದಲ್ಲಿ ಸಂಚರಿಸ್ತಾ ಇರೋ ಶಕ್ತಿಭರಿತವಾ ಹೀಲಿಯಂ ಅಯಾನುಗಳು, ಪ್ರೋಟಾನುಗಳು ಇತ್ಯಾದಿಗಳಿಗೆ ಹಾಗೆನ್ನುತ್ತಾರೆ. ಅವು ನಮ್ಮ ಭೂಮಿಯ ಕಡೇನೂ ಬರ್ತಿರುತ್ತೆ. ಆದ್ರೆ ನಮ್ಮ ಹೀರೋ ಸೂರ್ಯನ ಮತ್ತು ಭೂಮಾತೆಯ ಆಯಸ್ಕಾಂತೀಯ ಕ್ಷೇತ್ರಗಳು ಅವನ್ನು ಭೂಮಿಯಿಂದ ದೂರ ತಳ್ಳೋಕೆ ಪ್ರಯತ್ನ ಮಾಡ್ತಾ ಇರುತ್ತೆ. ಹೆಚ್ಚು ದೂರ ಕ್ರಮಿಸಿದಂತೆ, ಭೂಮಿಯ ವಾತಾವರಣದಿಂದಲೂ ಆ ಕಿರಣಗಳ ತೀವ್ರತೆ ಸ್ವಲ್ಪ ಕಮ್ಮಿ ಆಗುತ್ತೆ.ಹಂಗಂತಾ ನಾವ್ಯಾಗ್ಲೂ ಸುರಕ್ಷಿತರಲ್ಲ ಸ್ವಾಮಿ.ಸೂರ್ಯನೇ ಕೆಲವೊಮ್ಮೆ ಸೌರಜ್ವಾಲೆಗಳ ಮೂಲಕ ಕಾಸ್ಮಿಕ್ ಕಿರಣಗಳಿಗೆ ಪುಷ್ಟಿ ನೀಡೋದುಂಟು. ಸೂರ್ಯನಿಗೂ ಸೂರ್ಯಚಕ್ರ ಅಂತ ಇರುತ್ತೆ. ಪ್ರತೀ ಹನ್ನೊಂದು ವರ್ಷಕ್ಕೆ ಪುನರಾವರ್ತನೆ ಆಗತ್ತೆ. ತೀಕ್ಷ್ಣ ಅವಧಿ ಅಂದರೆ ಸೂರ್ಯನಲ್ಲಿ ನಡೆಯೋ ಚಟುವಟಿಕೆಗಳೆಲ್ಲಾ ಚೆನ್ನಾಗಿ ನಡೆದು ಅದರಿಂದ ಪ್ರಬಲ ಆಯಸ್ಕಾಂತೀಯ ಕ್ಷೇತ್ರ ನಿರ್ಮಾಣ ಆಗೋ ಸಮಯ. ದುರ್ಬಲ ಅಂದ್ರೆ ಇದಕ್ಕೆ ವ್ಯತಿರಿಕ್ತ. ಈ ರೀತಿ ದುರ್ಬಲವಾದಾಗ ತೀಕ್ಣವಾಗಿದ್ದಾಗ ತಡೆಯೋದಕ್ಕಿಂತ ೪೦ ಪ್ರತಿಶತ ಕಮ್ಮಿ ತಡೆಯುತ್ತೆ. ಇಷ್ಟೆಲ್ಲಾ ಪೀಠಿಕೆ ಆದ ಶೀರ್ಷಿಕೆಯ ವಿಷಯಕ್ಕೆ ಬರೋಣ.

ಮುಂಚೇನೆ ಓದಿದ್ರಿ ವಾತಾವರಣದಲ್ಲಿ ಹೆಚ್ಚೆಚ್ಚು ಮೇಲೆ ಹೋದಂತೆಲ್ಲಾ ಕಾಸ್ಮಿಕ್ ಕಿರಣಗಳ ತೀವ್ರತೆ ಜಾಸ್ತಿ ಆಗತ್ತೆ ಅಂತ.ನಮ್ಮ ಪ್ರಯಾಣಿಕರ ವಿಮಾನಗಳು ಸಾಮಾನ್ಯವಾಗಿ ೧೦೦ ಕಿ.ಮೋ ರಷ್ಟು ಎತ್ತರಕ್ಕೆ ಹಾರುತ್ತೆ ಅಂತಾರೆ ತಜ್ಞರು.ಅಂದ್ರೆ ಈ ವಿಕಿರಣಗಳ ಪ್ರಭಾವವೂ ನೆಲದಲ್ಲಿದ್ದಕ್ಕಿಂತ ೧೦೦ ಪಟ್ಟು ಹೆಚ್ಚು ಅಂತಾರೆ ಅವರು.ಈ ರೀತಿ ವಿಕಿರಣಗಳಿಗೆ ಒಗ್ಗಿಕೊಳ್ಳೋದ್ರಿಂದ ಕ್ಯಾನ್ಸರ್ ನಂತಹ ಕಾಯಿಲೆ ಬರ್ಬೋದು. ಮಕ್ಕಳ , ಗರ್ಭದಲ್ಲಿರೋ ಕಂದಮ್ಮಗಳ ದೇಹ ಹೆಚ್ಚು ಸೂಕ್ಷ್ಮವಾಗಿರುತ್ತೆ . ಹಾಗಾಗಿ ಅವಕ್ಕೆ ಇನ್ನೂ ಅಪಾಯ ಅಂತಾರೆ ಅವ್ರು.ಈಗ ಪ್ರಭಾವ ಕಾಣದಿದ್ರೂ ಇನ್ನು ಕೆಲವರ್ಷದಲ್ಲಿ ಕಾಣುತ್ತೆ ಅಂತಾರೆ ಅವ್ರು.
ಹಾಗಂದ ಮಾತ್ರಕ್ಕೆ ಒಂದೋ,ಎರಡೋ ಬಾರಿ ಪ್ರಯಾಣ ಮಾಡಿದ್ರೆ,ಅಪರೂಪಕ್ಕೆ ಮಾಡೋರಿಗೂ ಕ್ಯಾನ್ಸರ್ ಬರೊತ್ತೆ ಅಂತ ಅರ್ಥಾನ ಅಂದ್ರೆ ಉತ್ರ ಖಂಡಿತ ಇಲ್ಲ.ನೀವು ೧೦೦ ಸಾರಿ(ಅಂದಾಜು ಸಾವಿರ ಘಂಟೆ) ದೂರದ ವಿಮಾನ ಪ್ರಯಾಣ ಮಾಡಿದ್ರೆ ಒಂದು ವರ್ಷದಲ್ಲಿ ನೀವು ನೆಲದಲ್ಲಿ ಪಡೆಯೋ ವಿಕಿರಷ್ಟದಷ್ಟು ಪಡೀತಿರಿ. ಈ ವಿಕಿರಣದಿಂದ ಕ್ಯಾನ್ಸರ್ ಸಾಧ್ಯತೆ ೧% ಜಾಸ್ತಿ ಆಗ್ಬೇಕಿದ್ರೂ ನೀವು ವರ್ಷಕ್ಕೆ ೧೦೦೦ ಘಂಟೆಗಳಂತೆ ೩೦ ವರ್ಷ ಪ್ರಯಾಣ ಮಾಡ್ಬೇಕಂತೆ!! ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಇದೆ ಅಂತ ಮರೀಬೇಡಿ. ಇಂಥ ಚಿಲ್ರೆ ವಿಕಿರಣಗಳಿಂದ ಹೆಚ್ಚು ಅನಾಹುತ ಆಗದಂಗೆ ಅದೂ ತಡಿಯತ್ತೆ. ಆದ್ರೂ ಗರ್ಭಿಣಿಯರು ನಿಮ್ಮ ಗರ್ಭದಾರಣೆ ಸಮಯದಲ್ಲಿ ೨೦೦ ಘಂಟೆಗಿಂತ ಹೆಚ್ಚು ಪ್ರಯಾಣ ಮಾಡ್ಬೇಡ್ರಮ್ಮ.. ಇದ್ನ ನಾನು ಹೇಳ್ತಿರೋದಲ್ಲ. ಕೆನಡಾದ ಡಾ ಲೀವಿಸ್ ತಂಡ ಹೇಳ್ತಿರೋದು.. ಸರಿ ಏನೋ ಅಂದ್ಕಂಡಿದ್ದೆ, ಏನೂ ಆಗ್ಲಿಲ್ಲ ಅಂದ್ರಾ? ನೀವು ಏನೇ ಅನ್ನಿ ನಿಮ್ಮನ್ನ ಖುಷಿಪಡ್ಸೋದು ಉದ್ದೇಶನೇ ಹೊರ್ತು ಅಳ್ಸೋದಲ್ಲ...

ಎಂ ಕೆಂಚಾ, ಕೊದ್ರಿದ್ದು ಸಾಕು ನಿಲ್ಲಿಸ್ಲಾ... ವೀಕ್ಷಕರೇ ನಿಮ್ಗಿದು ಹೇಗನಿಸ್ತು ಅಂತ ಬರೆದು ಕಳ್ಸಿ. ಮತ್ತೊಮ್ಮೆ ನಿಮಗೆಲ್ಲಾ ಹಬ್ಬದ ಹಾರ್ದಿಕ ಶುಭಾಷಯ ಕೋರುತ್ತಾ ಪಾಪಣ್ಣ ಆನ್ಲೈನ್ ಟೀವಿ

ಸ್ಪೂರ್ತಿ: Health Canada Website : hc-sc.gc.ca
B.J. Lewis et al, Cosmic radiation Exposure on Canadian-Based Commercial Airline Routes, Radiation Protection Dosimetry
ಚಿತ್ರಗಳು: ಗೂಗಲ್

No comments:

Post a Comment