ನಿಮಗೆ ಪಾಗಲ್ ಫಕೀರ ಇವರಿಂದ ಹೊಸ ಮಿತ್ರತ್ವದ ಕೋರಿಕೆ ಬಂದಿದೆ ಅಂತ ಒಂದು ಸಂದೇಶ ಗುಂಡ fb ತೆರೆದಾಗ ಕಾಣಿಸ್ತಿತ್ತು. ಇದ್ಯಾರಪ್ಪಾ ಅಂತ ತಕ್ಷಣಕ್ಕೆ ಹೊಳಿಲೇ ಇಲ್ಲ ಗುಂಡನ ತಲೇಗೆ. ಹೈಸ್ಕೂಲ್ ಗೆಳೆಯ ಟಾಂಗ್ ತಿಪ್ಪನೂ ಆನ್ಲೈನು ಇದ್ದ. ಅವ್ನಿಗೆ ಕೇಳ್ದ. ಯಾರೋ ಇದು ಪಾಗಲ್ ಫಕೀರ ಅಂದ್ರೆ, friend request ಕಳ್ಸವ್ರಲ್ಲಾ ಅಂತ. ಬೋ ದೊಡ್ಡ ಸಾಯಿತಿ ಅಲ ನೀನು ಯಾರೋ ಫ್ಯಾನಿರ್ಬೇಕು ಬಿಡ್ಲಾ ಅಂತ ಕಾಲೆಳ್ದ ತಿಪ್ಪ. ಏ ಸುಮ್ಕಿರು ಗುರು. ಸಾಯಿತಿ ಅಲ್ಲ ಸಾಹಿತಿ ಅದು, ಆದ್ರೆ ನಾನು ಅದಲ್ಲ. ಏನೋ ಚಿಲ್ರೆ ಪಲ್ರೆ ಬರಿತೀನಿ ಅಂತ ಹೊಟ್ಟೆಯುರಿ ನಿಂಗೆ .. ಗೊತ್ತಿಲ್ದಿದ್ರೆ ಸುಮ್ನೆ ನಿನ್ನ city villle ಆಡು, ನನ್ನ ಕಾಲೆಳಿಬೇಡ ಅಂದ ಗುಂಡ. ಅಷ್ಟೊತ್ತಿಗೆ ಒಂದು ಸಂದೇಶ ಬಂತು .. ಏ ಗುಂಗುರು ಗುಂಡ, ನಾನಮ್ಮಿ ಪುಟ್ನಳ್ಳಿ ಪಕೀರಣ್ಣ. ಇಸ್ಕೂಲಲ್ಲಿ ನಿನ್ನ ಸೀನೆರು.. ಏಟಪಾ ಕಳ್ಸದು ನಿಂಗೆ ಕೋರ್ಕೆ ನಾ? ಪುಲ್ ಬಿಸಿ ಬಿಡಪಾ ನೀನು. ದೊಡ್ ಮನಸಾ ಆದೆ ಅಂತ ಒಂದೇ ಉಸರಲ್ಲಿ ಬಯ್ಯಕ್ಕೆ ಹಿಡಿದ. ಗುಂಡಂಗೆ ತಡ್ಯಕ್ಕಾಗ್ದೆ ಸಾಯ್ಲತ್ಲಗೆ ಅಂತ accept friend ಅಂತ ಕೊಟ್ಟು ಸ್ಯಾನೆ ತಲೆಬಿಸಿಯಾಗಿ ತಾನೇ offline ಹೋದ. ಆಮೇಲೆ ಗುಂಡಂಗೆ ನೆನ್ಪಾತು. ಕಾಮಣ್ಣನಬ್ಬಕ್ಕೆ ತಂಗೆ ಡಬ್ಬ ಕೊಟ್ಟು ತಾನು ಗಾಡಿ ಅಡ್ಡಾಕಿ ಬೈಸ್ಕತ್ತಿದ್ದ ಜಾರು ಚಡ್ಡಿ ಫಕೀರಣ್ಣ, ಕೌಳಿ ಮಟ್ಟಿ ಒಳಗೆ ಎಲ್ಲಿ ಮುಳ್ಳು ಕಮ್ಮಿ ಐತೆ ಅಂತ ತಕ್ಷಣ ನುಗ್ಗಿ ನಮ್ಗೂ ತಂದ್ಕೊಡ್ತಿದ್ದ ಫಕೀರಣ್ಣ, ನಾನು ಕಿಲಾಸು ಬಾಗ್ಲು ತೆಗಿಯಕ್ಕೋಗಿ ಚಿತ್ರಾನ್ನದ ಡಬ್ಬಿ ಬೀಳಿಸ್ಕಂಡಾಗ ತನ್ನ ಡಬ್ಬಿ ಕೊಟ್ಟ ಫಕೀರಣ್ಣ.. ಹಿಂಗೆ ನೂರು ನೆನ್ಪು ಸುಳೀತು. ಸ್ಯಾನೆ ಬೇಜಾರಾತು.. ಅಂಥವಂಗೆ ಬ್ಯಾಸರ ಮಾಡಿದ್ನಲ ಅಂತ. ಮತ್ತೆ online ಬಂದ ಗುಂಡ sorry ಕೇಳ್ಬೇಕು ಮೊದ್ಲು ಅಂತ..
ಆನ್ಲೈನು ಇರೋರ ಪಟ್ಟೀಲಿ ನೋಡಿದ್ರೆ ಶಾರೂಖ್ ಖಾನ್ ಶರ್ಟ್ ತೆಕ್ಕಂಡು "ಡರ್ ದೇ ಡಿಸ್ಕೋ" ಹಾಡಿಗೆ ಕೊಟ್ಟಿದ್ದ ಪೋಸ್ ಚಿರ್ತದೋರು ಯಾರೋ ಇದ್ರು. ನೋಡಿದ್ರೆ ಅದು ಫಕೀರಣ್ಣ. ಅವಾಗ ಗೊತ್ತಾಗ್ಲಿಲ್ಲ ಫಕೀರಣ್ಣ.. ಮನ್ಸಿಗೆ ಹಚ್ಕಬ್ಯಾಡ. ಎಂಥ ಇದು ಪೋಟ.. ಇಶ್ಶೀ ಅಂದ ಗುಂಡ.ಬ್ಯಾಸ್ಗೆ ಸೆಖೆ ಅಂತ ಹಾಕ್ಕಂಡಿವ್ನಮ್ಮಿ ಅಂದ. ಆದ್ರೆ ಈಗ ಮಳೆ ಹೊಯ್ತಾ ಐತಲಾ ಅಂದ ಗುಂಡ.ಓ ಹೋದಲಾ. ಮಳೇಲಿ ನೆಂದು ಫೇಮಸ್ ಆಗ್ಯಾವ್ನಲಾ ನಂ ಗಣೇಸ ಅವ್ನ ನೆನ್ಪಿಗೆ ಉಳ್ಸಕಂಡಿವ್ನಿ ಅಂದ. ಎಲ್ಲಿ ಶಾರೂಖು ಎಲ್ಲಿ ಗಣೇಶ ಅಂತ ಗುಂಡಂಗೆ ಚೂರೂ ಅರ್ಥ ಆಗ್ಲಿಲ್ಲ.ಅಷ್ಟರಲ್ಲೆ ಕೆಳಗೆ notification ಬಂತು. .ಪಾಗಲ್ ಫಕೀರ್ ಅವ್ರು ತಿಪ್ಪೇಶ, ಇಳಾ ಮತ್ತಿತರ ೬೦ ಜನರೊಂದಿಗೆ ಗೆಳೆಯರಾಗಿದ್ದಾರೆ ಅಂತ. ಗುಂಡಂಗೆ ಒಂದ್ಸಲ ತಲೆ ಗಿರ್ರಂತು.. ಏನು ಫಕೀರಣ್ಣ ಈ ಪಾಟಿ ಫಾಸ್ಟು ನೀನು ಅಂದ. ಅದಕ್ಕೆ ಗುಂಡ ಅನ್ನದು ನಿಂಗೆ fb ಗೆ ಬಂದು ತಿಂಗಳಾನುಗಟ್ಲೆ ಆಗೈತೆ ನೀನು ಆದ್ರೂ ೫೦೦ ಚಿಲ್ರೆ ಗೆಳೆಯರಷ್ಟೆ ನಿಂಗೆ. ನಂದು ನೋಡು ಒಂದು ತಿಂಗಳಲ್ಲೇ ೫೦೦ ಅಂದ. ಅವನ ಪ್ರೊಫೈಲಿಗೆ ಹೋಗಿ ನೋಡಿದ್ರೆ ಹೌದು ಅದು. ಏನಣೋ RJ ರಾಧಿಕಾ , ಬೆಳ್ಗೆರೆ ಸಾಹೆಬ್ರು, ಸಿಂಹ ಸಾರು .. ಹಿಂಗೆ ದೊಡ್ಡ ಕುಳಗಳೆಲ್ಲಾ ನಿನ್ನ ಗೆಳೆಯರ ಪಟ್ಟಿಲವ್ರೆ. ಎಲ್ಲರೂ ನಿಂಗೆ ಗೊತ್ತೈತಾ? ಭಾರಿ ದೊಡ್ ಮನಸಾ ಆದೆ ಬಿಡು ನೀನು ಅಂದ ಗುಂಡ. ಕೆಲೋರೆಲ್ಲ ಯಾರು ಅನ್ನೋದು ಆ ಸಿವನಾಣೆಗೂ ನಂಗೆ ಗೊತ್ತಿಲ್ಲ. ನಿನ್ನಂಗೆ ಪ್ರತಿಯೊಬ್ರಿಗೂ "ನೀವ್ಯಾರು? ಮೊದ್ಲು ನನ್ನ ಕಂಡಿದ್ರಾ? .. " ಅಂತೆಲ್ಲಾ ಪ್ರಶ್ನೆ ಕೇಳಕಿಲ್ಲ ನಾನು. ನಾನೆ ಕೆಲೋರಿಗೆ request ಕಳುಸ್ತೀನಿ. ೧೫-೨೦ mutual friends ಹೆಂಗಿದ್ರೂ ಇತ್ತಾರೆ. ಕನಿಷ್ಟ ೩-೪ .. ಆಗ ಅವ್ರೇ ಒಪ್ಕೋತಾರೆ. ಸ್ನೇಹ ಬೆಳ್ಸೋದೆ fb ಕೆಲ್ಸ ಗುಂಡು, ಇದೆಲ್ಲಾ ನಿಂಗೆ ತಿಳ್ಯಾಕಿಲ್ಲ ಅಂದ ಫಕೀರಣ್ಣ. ಹಂಗಾರೆ ಪರಸ್ಪರ ಪರಿಚಯ, ಅವ್ರು ಬಗ್ಗೆ , ಅವರ ಬರ್ದಿದ್ದೋ-ಹೇಳಿದ್ರ ಬಗ್ಗೆ ಓದಿರದು ಹಿಂಗೆ ಎಂಥದೂ ಇಲ್ದೇ ಅದೆಂಗೆ ಗೆಳೇರಾತಾರೆ ಅಂತ ಗುಂಡಂಗೆ ಕೊನಿಕೂ ಅರ್ಥ ಆಗ್ಲಿಲ್ಲ.ಅಟೋತಿಗೆ ಊಟಕೆ ಆತು. ಎದ್ದ ಗುಂಡ.
ಮಾರ್ನೇ ದಿನ ಮತ್ತೆ ನೋಡ್ತಾನೆ city ville,farm ville ಹಿಂಗೆ ಹಲವಾರು ಆಟದ, App ಗಳ ಕೋರಿಕೆ ಬಂದಿತ್ತು. ಎಲ್ಲಾ ಫಕೀರಣ್ಣಂದೇ ಕರಾಮತ್ತು. ಫಕೀರಣ್ಣ farm ಅಲ್ಲಿ ಪಾಪರಾಗವ್ನೆ. ದುಡ್ಡು ಕೊಡಿ ಅಂತ ಒಂದು, ಅವ್ನು ಅಷ್ಟು ಗೆದ್ದ ಅಂತ ಮತ್ತೊಂದು.. ಹಿಂಗೆ.. ಗುಂಡಂಗೆ ಬ್ಯಾಂಕವ್ರು ಸಾಲ ತಕಳಿ ಅಂತ ಮೊದ್ಲು ಪೂಸಿ ಹೊಡಿತಾರೆ ಆಮೇಲೆ ರೋಡಿಗಳ್ನ ಕರ್ಕೋಂಬತ್ತಾರೆ ಅಂತ ತಿಪ್ಪ ಹೇಳಿದ್ದು ಜ್ಞಪ್ತಿಗೆ ಬಂತು.. ಬ್ಯಾಡಪ್ಪ ಇದೆಲ್ಲಾ ಸಹವಾಸ ಅಂತ ಅದ್ನೆಲ್ಲಾ ತೆಗ್ದು ಹಾಕಿದ. ಸ್ವಲ್ಪ ಹೊತ್ತು ಬಿಟ್ಟು mycalender ಅಂತ ಮತ್ತೆ ಬಂತು. ಈಗಿರೋ ವ್ಯವಸ್ಥೆ ಚೆನಾಗೈತಲಾ? ಅದೇ ದಿನ ಅವತ್ತಿನ ಹುಟ್ಟಿದಬ್ಬ ತೋರಿಸ್ತೈತಲಾ ಅನುಸ್ತು ಗುಂಡಂಗೆ. ಆದ್ರೂ ಇರ್ಲಿ ಅಂತ ಒಳಗೆ ಹೋದ. ನೋಡಿದ್ರೆ ಅದು ನಿಮ್ಮ ಖಾಸಗಿ ಮಾಹಿತಿ ಎಲ್ಲಾ ನಾವು ಉಪಯೋಗಿಸಕ್ಕೆ ನೀವು ಒಪ್ಕತೀರಾ ಅಂತು.. ಈ fb ನವ್ರು ನಾ ಹೇಳ್ದೇ ಇದ್ರು ನಂ ಮಾಹಿತಿ ಮಾರ್ದವ್ರು ಮುಂಚೆ ಒಂದಪಾ. ಈಗ ನಾನೇ ಮಾರಿ ಅಂತ ಬೀದಿಲಿ ಹೋಗ ಮಾರಿನ ಒಳಾಕೆ ಕರ್ಯದಾ ಅಂತ ಸಿಟ್ಟೆಲ್ಲಾ ಬಂತು ಗುಂಡಂಗೆ. ಅದನ್ನೂ ತೆಗ್ದ. ಮತ್ತೊಂದು ನಿಮಿಸಕ್ಕೆ ಸಂದೇಶ ಬಂತು ಫಕೀರಣ್ಣಂದು ನಾನು ನೀನು video chat ಮಾಡುವ ಅಂತ. ಹೇ ಫಕೀರಣ್ಣ, ನಂದು ಸ್ಲೋ ನೆಟ್ಟಲೇ. video chat ಮಾಡಕ್ಕೆ ೧ mbps ಸ್ಪೀಡ್ ಬೇಕು ಅಂದ ಗುಂಡ. ಹೋ, ಅದು ನಾ ಕಳಿಸಿದ್ದಲ್ಲ, ತಾನಾಗೆ ಬಂತು ಹ್ಯಾಗೆ ಹೇಳಿ ಗೊತ್ತಿಲ್ಲ ಅಂದ ಫಕೀರಣ್ಣ. ಗುಂಡಂಗೆ ಹಿಂದೆ ಒಂದಿನ ನಾನು chat phone ಬಳಸ್ತಾ ಇದ್ದೆ ಅಂತ ಮಂಗಳೂರು ಮಂಜನ ಸಂದೇಶ ಬಂದಿದ್ದು ನೆನ್ಪಾತು. ನಮಗೆ ಗೊತ್ತಿಲ್ದೇ ಏನೇನು ಮಾಡ್ತಿರ್ತಾರಪಾ ಈ ಜನ ಅಂತ ಹಿಡಿ ಶಾಪ ಹಾಕ್ದ ಗುಂಡ
ಗುಂಡ ಮಾರ್ನೇ ದಿನ ಅವ್ನ ಮಿಂಚಂಚೆ ತೆರೆದು ನೋಡ್ತಾನೆ. ೧೫೦ ಹೊಸ ಸಂದೇಶಗಳು ಅಂತ. ಒಂದ್ಸಲ ಶಾಕ್ ಆಯ್ತು. ಅದೆಲ್ಲಾ "ಗುಂಡಳ್ಳಿ ಸ್ಕೂಲ್ ಗೂಂಡಾಗಳು" ಅನ್ನೋ ಗ್ರೂಪಿಂದು. ಕೊನೆಗೆ ಮೂಲೆಲೊಂದು ಸಂದೇಶ ಇತ್ತು. ಫಕೀರಣ್ಣ ನಿಮ್ನ ಇಂಥಾ ಗ್ರೂಪ್ಗೆ ಹಾಕವ್ನೆ ಅಂತ. fb ಗೆ ಬಂದು ಆ ಗ್ರೂಪ್ಗೆ ಹೋದ ಗುಂಡಣ್ಣ. ಅದ್ರಲ್ಲಿ ಅವ್ನ ಇಸ್ಕೂಲು ಚಡ್ಡಿ ದೋಸ್ತರೆಲ್ಲಾ ಇದ್ರು. ಸಂದೇಶ ನೋಡಿದ್ರೆ ರಂಜಾನ್ಗೆ ಶುಭಾಶಯ ಅಂತ ಹಾಕಿದ್ದ ಫಕೀರಣ್ಣ. ಅದನ್ನೇ ಎಲ್ರೂ ಕಾಪಿ ಮಾಡಿ ಅಂಟ್ಸಿದ್ರು.. ಜೊತೆಗೆ ಕೆಲೋರು ನಿಮ್ಗೂ ಅಂತ ಕಮೆಂಟು ಬರ್ದಿದ್ರು.. ಹೀಗೆ ಒಂದೇ ಹಬ್ಬದ ೧೫ ಪೋಸ್ಟ. ಇರೋ ೩೦ ಜನ ಮೆಂಬರ್ಗಳಿಗೆ ಆ ಹಬ್ಬ ಈ ಹಬ್ಬ, ಊಟ ಆಯ್ತಾ,ಏನು ಮಾಡ್ತಾ ಇದೀರ ಎಲ್ಲಾ?, ಆಫಿಸಿಗೆ ಹೋಗ್ತಾ ಇದೀನಿ, ಈಗ ಬಂದು ಮುಟ್ಟಿದೆ.. .ಇಂಥದ್ದೇ ಬೇಜಾನು ಬೇಜಾರಾಗೋಷ್ಟು ಟೈಂಪಾಸು ಮಾತು ಕತೆಯಾಗಿ ೧೫೦ ಸಂದೇಶ ಬಂದಿತ್ತು ಗುಂಡಂಗೆ. ಮೊದ್ಲು ಆ ಗ್ರೂಪ್ ಸೆಟ್ಟಿಂಗ್ ಗೆ ಹೋಗಿ mail alert ತೆಗ್ದು ಸಮಾಧಾನ ಮಾಡ್ಕಂಡ. ಸ್ವಲ್ಪ ಹೊತ್ತಿಗೆ ಗುಂಡಳ್ಳಿ ಗಣಪತಿ ಹಬ್ಬ ಅಂತ event invitation ಬಂತು ಗುಂಡಣ್ಣಂಗೆ. ಸರಿ , ಬರ್ತೀನಿ ಅಂತ ಕುಕ್ಕಿದ ಅದ್ನ. ಅದ್ರ ಬೆನ್ನಲ್ಲೇ ಗುಂಡಳ್ಳಿ ಗಣಪತಿ ಹಬ್ಬ ಅಂತ ಮತ್ತೆ ಬರೋದೆ. ನೋಡಿದ್ರೆ ಒಂದೇ event ಗೆ ನಾಕು ಸಲ ಕರ್ದಿದ್ದ ಗುಂಡಣ್ಣನ್ನ. ಏನ್ಲಾ ಫಕೀರಣ್ಣ, ಒಂದಕ್ಕೆ ನಾಕು ಸಲ ಕರ್ಯದಾ ನೀನು? ಒಂದಪಾ ಕರ್ದ್ರೆ ಬರಾಕಿಲ್ಲನು ನಾನು ಅಂದ ಗುಂಡ. ಇಲ್ಲಪಾ? message ಕೆಲ ಸರಿ delivery ಆಗಕಿಲ್ಲ ನೋಡು, ಹಂಗೆ ಆದ್ರೆ ಅಂತ ಮತ್ತೆ ಕರದ್ನಪಾ.. ಹಿ ಹಿ ಅಂದ ಫಕೀರಣ್ಣ. ಈ ಫಕೀರಣ್ಣನ ಹೆಸ್ರು ಕರೆಕ್ಟಾಗೆ ಐತೆ ಪಾಗಲ್ ಅಂತ. . ಇನ್ನೂ ಸ್ವಲ್ಪ ಹೊತ್ತು ಹೋದ್ರೆ ನಾನೂ ಅದೇ ಆಗದು ಅಂತ ಗಾಡಿಬಿಟ್ಟ ಗುಂಡ..
ಈಕ್ಷಕರೆ ಇಲ್ಲಿಗೆ fb ಪುರಾಣ ಮುಗೀತು.. ನಿಮ್ಗೂ ಇಂಥ ಪಾಗಲ್ಗಳು ಸಿಗ್ಬೋದು, ಅಥ್ವಾ ನೀವೆ ಇಂಥೋರು ಆಗಿರ್ಬೋದು..
ಏ ಕಟ್ ಕಟ್.. fb ಹೊಸಬನ ಅದ್ವಾನದ ಬಗ್ಗೆ ಹೇಳ ಅಂದ್ರೆ ನೀನೆ ಅದ್ವಾನ ಮಾಡ್ತೀಯಲ್ಲೋ.. ಕೇಳುಗರೆ, ನಿಮಗೆ ನಮ್ಮ ಪ್ರಸಂಗ ಹೇಗನಿಸ್ತು ಅನ್ನೋದನ್ನ ಬರ್ದು ಕಳಿಸಿ. ನಿಮಗೆಲ್ಲಾ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.. ಇಂತಿ ಪಾಪಣ್ಣ ಆನ್ಲೈನ್ ವಾಣಿ..
( ಈಗ ಚಿಕ್ಕದೊಂದು ವಿರಾಮ).. ಜಂಡೂ ಬಾಮ್.. ಎಲ್ಲಾ ತರದ ತಲೆನೋವಿಗೂ ರಾಮಬಾಣ ... !!! :-)
Nija nija..facebook andre thale novu agbittide ivaaga..zandu balm beke beku...
ReplyDelete:-) :-) 2 Varsha hale comment ge iga mattondu like Girish.. Idna pustakadalli haako prayatnadalli :-):-)
ReplyDelete