Wednesday, April 25, 2012

ಆಲೂ ಪುರಾಣ

ಮಸಾಲೆ ದೋಸೆ !! .. ಆ.. ಆಗ್ಲೇ ಬಾಯಲ್ಲಿ ನೀರಾ ? ನಿಮ್ಮಂಗೆ ನಂಗೂ.. ನಾನು ಸಣ್ಣೋನಿದ್ದಾಗ ಮನೇಲಿ ಮಸಾಲೆ ದೋಸೆ ಮಾಡ್ತಾರೆ ಅಮ್ಮ ಅಂದ್ರೆ ಭಾರಿ ಖುಷಿ ಪಡ್ತಿದ್ದೆ. ಅದ್ರಲ್ಲೂ ಅದ್ರಲ್ಲಿ ಆಲೂಗಡ್ಡೆ ಪಲ್ಯ ಇರುತ್ತೆ ಅನ್ನೋದಕ್ಕೆ. ಹೊರಗಡೆ ಹೋಟ್ಲಿಗೇನಾದ್ರೂ ಕರ್ಕೊಂಡೋದ್ರೂನೂ ದೋಸೆ ಹೇಳಿದ್ರೆ ಮಸಾಲೆ ದೋಸೇನೆ ಹೇಳ್ತಿದ್ದ ನೆನ್ಪು. ಸಾಗರದ ಸುಖಸಾಗರ, ಪೈಸ್ ಪರಿವಾರ, ಪವಿತ್ರ ಹೋಟ್ಲು.. ಹಿಂಗೆ ಮಸಾಲೆ ದೋಸೆ ಅಂದ್ರೆ ಮೂಗು, ಬಾಯಿಗೆ ಭಾರಿನೇ ನೆನ್ಪಾಗುತ್ತೆ. ಒಮ್ಮೆ ಪೂನಾಕ್ಕೆ ಹೋದಾಗ ಅಲ್ಲಿ ಹೋಟೆಲ್ ಒಂದ್ರಲ್ಲಿ ವೆಜ್ ಯಾವ್ದು ಅಂತ ಗೊತ್ತಾಗ್ದೆ ಮಸಾಲೆ ದೋಸೆ ತಗೊಂಡಿದ್ದು, ಅದ್ರ ಖಾರ ಹೆಚ್ಚಾಗಿ ಹೊಟ್ಟೆ ಎಲ್ಲಾ ಉರಿ ಎದ್ದಿದ್ದೂ ನೆನ್ಪಾಗತ್ತೆ. ದೆಲ್ಲಿಗೆ ಹೋದಾಗ ಅಲ್ಲಿ ಕರ್ನಾಟಕ ಡಾಬಾದಲ್ಲಿ ಹುಳಿ ಹುಳಿ ಇಡ್ಲಿ, ದೋಸೆ ತಿಂದು ಏನಂದ್ರು ನಮ್ಮ ಕರ್ನಾಟಕದ ನೆನ್ಪು ಭಾರಿ ಕಾಡಿದ್ದೂ ಉಂಟು.   ಇವತ್ಯಾಕೆ ಇದ್ದಕ್ಕಿಂದಂಗೆ ಆಲೂಗಡ್ಡೆ ನೆನ್ಪಾಯ್ತು ಅಂತೀರಾ ? ಫುಲ್ಲು ಮಳೆ. ಬೆಚ್ಚಗೆ ಏನಾದ್ರೂ ಇದ್ದಿದ್ರೆ ಚೆನ್ನಾಗಿರೋದು ಅಂತ  ಬಾಯಿ ಅಂದ್ಕೊಳ್ಳೋ ಹೊತ್ಗೆ ನೆನ್ಪಾಗಿದ್ದು ಇದು.. ಹಂಗೇ ಸ್ವಲ್ಪ ಹಸಿಬಿಸಿ ನೆನ್ಪುಗಳ್ನ ಹಂಚ್ಕೊಳ್ಳೋಣ ಅನಿಸ್ತು. ಬರೀತಿದೀನಿ .. ಓದಿ

ಸೊಲಾನಮ್ ತುಬೆರೋಸಮ್(Solanum Tuberosum) ಅನ್ನೋ ಸಸ್ಯಶಾಸ್ತ್ರೀಯ ಹೆಸರಿನ ಆಲೂಗಡ್ಡೆ ಮೊದಲು ಸ್ಪೇನಿಂದ ಯುರೋಪಿಗೆ ೧೬ನೇ ಶತಮಾನದ ಸುಮಾರಿಗೆ , ತದನಂತರ ಹಾಗೇ ಭಾರತಕ್ಕೆ ಬಂದಿರಬಹುದು ಎಂಬ ಅಂದಾಜು ಕೆಲವು ವಿದ್ವಾಂಸರದು. ಪ್ರಪಂಚದಲ್ಲಿ ಮನುಷ್ಯ ಅಂದಾಜು ೩೩ ಕೇಜಿ ಆಲೂಗಡ್ಡೆ ತಿಂತಾನಂತೆ ವರ್ಷಕ್ಕೆ .. ಇದು ನಾನು ಹೇಳಿದ್ದಲ್ಲ ಕಣ್ರ‍ಿ. ಇಲ್ಲೇ ಓದಿದ್ದು. ಅಬ್ಬಾ ಅಂದ್ರಾ ? ನಂಗೂ ಮುಂಚೆ ಹಾಗೇ ಅನಿಸ್ತಿತ್ತು. ಆದ್ರೆ ಯಾವಾಗ ಬೆಂದಕಾಳೂರಿನ ಪೀಜಿಗೆ ಬಂದ್ನೋ ಆಗ ಬರೀ ೩೩ ಆ ಅನ್ಸೋಕೆ ಶುರು ಆಯ್ತು .. ಯಾಕೆ ಅಂದ್ರಾ. .ಓದಿ ನೋಡಿ

ನಮ್ಮ ಪೀಜಿ ಅಡಿಗೆಭಟ್ಟಂಗೆ ಆಲೂಗಡ್ಡೆ ಮನೆದೇವ್ರ ಅಂತ ಸುಮಾರು ಸಲ ಅಂದ್ಕೊಂಡಿದೀನಿ. ಉದಾಹರಣೆಗೆ ಇವತ್ತು ಮಾಡಿದ್ದ ತಿಂಡಿ ಆಲೂ ಪೋಹ. ಅಂದ್ರೆ ಆಲೂಗಡ್ಡೆ ಅವಲಕ್ಕಿ!!! ಅವಲಕ್ಕಿ ಮಾಡಿ ಅದಕ್ಕೆ ಒಗ್ಗರಣೆಗೆ ಕೊತ್ತಂಬರಿ, ಮೆಣಸಿನಕಾಯಿ ಹಾಕೋ ಬದ್ಲು ಆಲೂಗಡ್ಡೆ ಹಾಕಿದ್ರೆ ಆಲೂ ಪೋಹ ರೆಡಿ! ನಿನ್ನೆ ಆಲೂ ಪರೋಟ. ಪೂರಿ ಮಾಡಿದ್ರೆ ಆಲೂ ಸಬ್ಜಿ, ಉಪ್ಪಿಟ್ಟಿಗೂ ಆಲೂ ಇಲ್ದಿದ್ದ್ರೆ ರುಚಿ ಇಲ್ಲ ಅಂತಾನೆ ಅವ್ನು !! ರಾತ್ರೆಗೆ ಆಲೂ ಸಬ್ಜಿ ಅಥವಾ ಗೋಬಿ ಸಬ್ಜಿ ಅಥವಾ ಚನಾ.. ಬಾಯಲ್ಲಿ ನೀರೂರಕ್ಕೆ ಶುರು ಆಯ್ತಾ ? ಯಾವುದೂ ಆಲೂ ಇಲ್ಲದೇ ಇಲ್ಲ. ಇನ್ನು ಮಧ್ಯಾಹ್ನ ಊಟಕ್ಕೆ ಅಂತ ಪಕ್ಕದ ಹೋಟ್ಲಿಗೆ ಹೋದ್ರೆ ಅಲ್ಲೂ ಆಲೂ ಪಲ್ಯ.. ಅಥವಾ ಪೂರಿಗೆ ಆಲೂ ಸಾಗು !!!

ಈ ರೀತಿ ಆಲೂ ತಿನ್ನೋದು ಒಳ್ಳೇದಲ್ಲ ಕಣೋ ಅಂತಾರೆ ಅಮ್ಮ. ಆದ್ರೆ ಏನು ಮಾಡೋಣ ? ನಮ್ಮ ಪೀಜಿ ಕುಕ್ಕು.. ಅದೇ ಮುಂಚೆ ಹೇಳಿದ್ನಲ್ಲಾ ಅವ್ನೆ.. ಒಡಿಸ್ಸಾದವನು. ಆಲೂಗಡ್ಡೆ ಒಂದೇ ತರಕಾರಿ ಅಂತ ಅಂದ್ಕೊಂಡಿದಾನೋ ಏನೋ ಗೊತ್ತಿಲ್ಲ. ಅಪರೂಪಕ್ಕೆ ನುಗ್ಗೇಕಾಯಿ, ಬದನೇಕಾಯಿ ಕಾಣಿಸಿದ್ರೂ ಆಲೂಗಡ್ಡೆ ಕಾಯಮ್ಮು ಎಲ್ಲದ್ರಲ್ಲೂ. ಏನಪಾ ಹಿಂಗೆ ಅಂದ್ರೆ.. ನಮ್ಮನೇಲಿ ದಿನಕ್ಕೆ ೨ ಕೆ.ಜಿ ಆಲೂ ನಾನೊಬ್ನೆ ತಿಂತೀನಿ. ಆಲೂ ತಿಂದ್ರೆ ಬಾಡಿ ಬರುತ್ತೆ ಗೊತ್ತಾ ಅಂತ ಸಲ್ಮಾನ್ ಖಾನ್ ಪೋಸ್ ತೋರಿಸ್ತಾನೆ. ಆ ಖಾನ್ ಸಾಹೇಬ್ರು ಏನು ತಿಂದ್ರೋ ಗೊತ್ತಿಲ್ಲ. ಆದ್ರೆ ದಿನಾ ಈ ರೀತಿ ತಿಂತಿಂದು ಬಾಡಿ ಬರದಿದ್ರೂ  ... ಬರುತ್ತೆ. . ಅದ್ರ ಬಗ್ಗೆ ಹೇಳದಿದ್ರೇನೆ ವಾಸಿ !

 ಅಮ್ಮ ಅಂದ ಕೂಡ್ಲೇ ನೆನ್ಪಾಯ್ತು. ಅಮ್ಮ ಆಲೂಗಡ್ಡೆ ಹುಳಿ(ಸಾಂಬಾರ್) ಚೆನ್ನಾಗಿ ಮಾಡ್ತಾರೆ. ನಮ್ಮತ್ತೆ ಆಲೂಗಡ್ಡೆ ಹಾಕಿ ಮಾಡೋ ಮೊಸರು ಬಜ್ಜಿ ರುಚಿ ಸೂಪರೋ ಸೂಪರು. ಆಲೂಗಡ್ಡೆ ಜೊತೆಗೆ ನನ್ನ ಅಪ್ಪನ ಫ್ಲಾಷ್ ಬ್ಯಾಕ್ ನೆನ್ಪೂ ಇದೆ. ನಾನು ಸಣ್ಣಕ್ಕಿದ್ದಾಗ ಹಿಂಗೆ ಚಳಿ ಇದ್ದ ರಾತ್ರೇಲಿ ಅಪ್ಪ ಇದು ನೋಡು ಸಮೋಸ ಅಂತ ಕೊಡ್ಸಿದ್ರು. ಆಗ ಸಾಗರಕ್ಕೆ ಬಂದ ಮೊದಲ ಸಮೋಸ ಸರ್ದಾರ್ಜಿ ಅವರೇ ಆಗಿದ್ರೇನೋ ಅಂದ್ಕೊಂಡಿದ್ದೆ !! ಈಗ ಬಿಡಿ ಹಾದಿ ಬೀದೀಲಿ ಮಸಾಲ ಪುರಿ ಸಿಗೋ ಸುಮಾರು ಕಡೇಲೆಲ್ಲಾ ಸಮೋಸ ಸಿಗುತ್ತೆ.. ಹೈದರಾಬಾದಲ್ಲೆಂತೂ ಅದು ಭಯಂಕರ ಕಾಮನ್ ಅನ್ಸಿತ್ತು.ಅಲ್ಲಿ ಚಾರ್ ಮಿನಾರ್ ಹತ್ರ ಸೌತೆಕಾಯಿ ಮಾರಿದಂಗೆ ಹತ್ರುಪಾಯಿಗೆ ೪ ಸಮೋಸ ಮಾರ್ತಾ ಇರ್ತಾರೆ. ಆಲೂ ಬಗ್ಗೆ ಬರದು ಆಲೂ ಬೋಂಡದ ಬಗ್ಗೆ ಬರಿದೇ ಇದ್ರೆ ಹೇಗೆ. ಮೆಣಸಿನಕಾಯಿ ಬೋಂಡ ಖಾರ..ಅಂತ ಇಷ್ಟಪಡದೇ ಇದ್ದೋರಿಗೂ, ಇಷ್ಟಪಟ್ಟೋರಿಗೂ ಆಲೂ ಬೋಂಡಾ ಅಂದ್ರೆ ಇಷ್ಟಾನೆ. ಈಗಲೂ ಸುಮಾರು ಕಡೆ ಮದುವೆ ಇತ್ಯಾದಿ ಕಾರ್ಯದ ಮನೆಗಳಲ್ಲಿ ಆಲೂ ಬೋಂಡಾ ಮಾಡ್ತಾರೆ..  ಹೀಗೆ ಆಲೂಗಡ್ಡೆ ಬಗ್ಗೆ ಬರೆದಷ್ಟೂ ಇದೆ ಕಣ್ರಿ.  ಅವೆಲ್ಲಾ ಆಲೂ ತಿಂದ ಸುಮಾರು ಹೊತ್ತಿನ ಬಳಿಕ ನೆನಪಾಗೋ ಗಾಳಿಯಂತೆ ಯಾವಾಗ್ಯಾವಾಗ್ಲೋ ನೆನಪಾಗ್ತಾ ಇರುತ್ತೆ !!

ನಮ್ಕಡೆ ಎಲ್ಲಾ ವಾಯು ಅಂತ ಸುಮಾರು ಜನ ಆಲೂಗಡ್ಡೆ ತಿನ್ನೋದೆ ಇಲ್ಲ. ತಿಂದ್ರೂ ಅದಕ್ಕೆ ಜೀರಿಗೇನೂ ಅಥವಾ ಬೇರೆ ಏನಾದ್ರೂ ಪರಿಹಾರ ಯೋಚ್ನೆ ಮಾಡೇ ಇರ್ತಾರೆ. ಆದ್ರೆ ಸದ್ಯಕ್ಕಂತೂ ಆಲೂಗಡ್ಡೆ ಮರ್ತು ಊಟನೇ ಇಲ್ಲ ಅನ್ನೋ ಹಾಗಿದೆ. ಅತಿಯಾದ್ರೆ ಅಮೃತನೂ ವಿಷ ಅಂತಾರಲ್ವಾ ? ಹಾಗಾಗಿ ಆಲೂಗಡ್ಡೆ ಬಿಟ್ಟು ಬೇರೆ ಹೋಳು ಹಾಕ್ಕೊಳೋದು, ಕುಕ್ಕಿಗೆ ಪುಸಲಾಯಿಸಿ ಬೇರೆ ಸಬ್ಜಿ ಮಾಡ್ಸೋದು ಹೀಗೆ ತರಾವರಿ ಉಪಾಯ ಮಾಡ್ಬೇಕಾಗಿದೆ !  ಮನೆಗೆ ಹೋದ್ರೂ ಆಲೂಗಡ್ಡೆ ಬಿಟ್ಟು ಬೇರೆ ಏನಾರು ಮಾಡ್ಕೊ, ತಂಬಳಿ ಮಾಡು, ಚಟ್ನಿ ಮಾಡು, ಸಾರು ಮಾಡು. ಹುಳಿ ಮಾಡಿದ್ರೂ ಆಲೂಗಡ್ಡೆ ಮಾತ್ರ ಹಾಕ್ಬೇಡ ಹೇಳೇ ಹೇಳೋದು ಅಮ್ಮಂಗೆ !!

Tuesday, April 24, 2012

ಬೇಸಿಗೆ-ನೀರು


ನೀರಿಲ್ಲ ಇಂದು ಬಾವಿಯಲ್ಲಿ
ಇದೆ ಕಾಯೋ ನೂರು ನಲ್ಲಿ
ಬತ್ತಿಹುದು ಅನ್ನದಾತನ ಕಂಗಳಲ್ಲಿ
ಇದೆ ಪಕ್ಕ ಪಾರ್ಕಿನಲ್ಲಿ

ಬಸ್ಸಲ್ಲಿ ಬೇಯುತಿಹೆ, ನೀರು ಖಾಲಿ
ದೂರ ಅಂಗಡಿ, ಕೋಲ ಥೈಲಿ ಖಾಲಿ
ಕಬ್ಬು, ಎಳನೀರವಗೆ ಹಣದ ಪೈರು
ಅದ ಬೆಳೆದು,ಕಡಿವವಗೆ ಇಲ್ಲ ನೀರು

ಮೊಡವೆ ಸಾಲದೆ ಮೈಗೆ ಬೆವರಸಾಲೆ
ಹಲತರದ ದುರ್ಗಂಧ , ಸನಿಹ ತಾಳೆ !
ನೀರಿಲ್ಲದೇ ಅಳುವ ನನ್ನ ಹಕ್ಕಿ
ಕಲ್ಲು, ಕಬ್ಬಿಣದಲ್ಲೂ ಅದನು ಹುಡುಕಿ

ಕುಡಿದಷ್ಟು ಸಾಲದಿದು
ಬೆಂಕಿ ತರಹ
ಅಳಿಸಿತೇನೋ ಬರಹ
ಒರೆಸಿ ಬೆವರ

Saturday, April 21, 2012

ನಂದಿ ಬೆಟ್ಟ ಟ್ರಿಪ್-೨

Amruta Sarovara

ಅಮೃತ ಸರೋವರ:
ನಂದಿ ಬೆಟ್ಟಕ್ಕೆ ಬರೋ ಪ್ರವಾಸಿಗರನ್ನ ಸ್ವಾಗತಿಸೋದು ಟಿಪ್ಪು ಬೇಸಿಗೆ ತಂಗುದಾಣ ಅತವಾ ಬೇಸಿಗೆ ಅರಮನೆ. ಬರುವಾಗ ಅದಕ್ಕೆ ಬಂದರಾಯಿತು ಎಂದು ಮುಂದೆ ಸಾಗಿದಾಗ ನಮ್ಮನ್ನು ಸ್ವಾಗತಿಸಲು ಸಿದ್ದವಾಗಿದ್ದು ಮಾನಸ ಸರೋವರ. ಇಲ್ಲಿ ವರ್ಷವಿಡೀ ನೀರು ಇರುತ್ತಂತೆ. ಅದರ ಹಿಂಬದಿ ಸಮಾಧಿಗಳಿವೆ. ಅವುಗಳ ಪಕ್ಕದಿಂದ  ಟಿಪ್ಪು ಅರಮನೆಗೆ ಇಳಿದು ಹೋಗಬಹುದು.


Garden near Amruta Sarovara


ಅತವಾ ಬಲ ಬದಿಯಿಂದ ಹೋಗುವ ದಾರಿಯಲ್ಲಿ ಸಾಗಿ ನಂದಿ ಬೆಟ್ಟದ ತುದಿಯತ್ತ ಹತ್ತಲಾರಂಭಿಸಬಹುದು. ಅಮೃತ ಸರೋವರದ ಬಳಿ ಕುಳಿತು, ಅದರ ಪಕ್ಕದಲ್ಲಿರುವ ಉದ್ಯಾನದ ಬಳಿ ಕುಳಿತು(ಉದ್ಯಾನದ ಒಳಗೆ, ಸರೋವರದ ಒಳಗೆ ಇಳಿಯುವುದು ನಿಷಿದ್ದ) ಅಲ್ಲಿ ಬೀಸುವ ತಂಗಾಳಿಯನ್ನು ಆನಂದಿಸಬಹುದು.




Antar Gange
                ಅಂತರಗಂಗೆ
ಅಮೃತ ಸರೋವರದ ನಂತರ ಹಾಗೆಯೇ ಮುಂದೆ ಮರಗಳ ನೆರಳಲ್ಲಿರುವ ಹಾದಿಯಲ್ಲಿ ಸಾಗಿದರೆ ಮೇಲಕ್ಕೆ ಹತ್ತುವ ಮೆಟ್ಟಿಲುಗಳು ಸಿಗುತ್ತವೆ. ಅದರಲ್ಲಿ ಹತ್ತುತ್ತಾ ಸಾಗಿದರೆ ಮೊದಲು ಸಿಗುವುದು ಅಂತರಗಂಗೆ. ಅಲ್ಲಿ ಬಂಡೆಗಳ ಕೆಳಗಿನಿಂದ ಉದ್ಭವಿಸಿರುವ ಅಂತರಗಂಗೆಯನ್ನು ಕಾಣಬಹುದು. ಅದರೊಳಕ್ಕೆ ಇಳಿಯಲು ಮೆಟ್ಟಿಲುಗಳಿವೆ. ಆದರೆ ಬೇಲಿ ಏನೂ ಇಲ್ಲದ ಕಾರಣ ಅದರ ಸ್ವಚ್ಛತೆ ಅಷ್ಟು ಚೆನ್ನಾಗಿಲ್ಲ.





ಹಾಗೇ ಹತ್ತುತ್ತಾ ಹತ್ತುತ್ತಾ ಕವಲುಗಳು ಸಿಗುತ್ತವೆ. ಅವುಗಳಲ್ಲೆನ್ನಾದರೂ ಸಾಗಿದರೆ ಕಾಡಿನ ಮಧ್ಯೆ ಎಲ್ಲಿ ಕಾಣೆಯಾಗುತ್ತೀರ ಎಂದು ಹೇಳುವುದು ಕಷ್ಟ. ಹಾಗಾಗಿ ಮೆಟ್ಟಿಲುಗಳು ಇರುವ ಕಡೆ ಸಾಗುವುದೇ ಉತ್ತಮ. ಮಧ್ಯೆ ಎಲ್ಲಾದರೂ ಸಂಜೆ ಆದರೆ ಕಳೆದು ಹೋಗದಿರಲೆಂದು ಅಲ್ಲಲ್ಲಿ ಸೋಲಾರ್ ಮಾಸ್ಕ್ ದೀಪಗಳನ್ನೂ ಹಾಕಿದ್ದಾರೆ. ಹಾಗಾಗಿ ಎಲ್ಲಿಯವರೆಗೆ ಆ ದೀಪಗಳು ಸಿಗುತವೋ ಅಲ್ಲಿಯವರೆಗೆ ನೀವು ಸರಿಯಾದ ದಿಸೆಯಲ್ಲೇ ಇದ್ದೀರೆಂದು ಅರ್ಥ:-)


 







                ದೇವಸ್ಥಾನಗಳ ಆರಂಭ
ಬೆಟ್ಟ ಹತ್ತುತ್ತಾ, ಮಾತಾಡುತ್ತಾ ತಂಪಾಗಿ ದಾರಿಯಲ್ಲಿ ಸಾಗಿದ ನಮಗೆ ಬೆಟ್ಟದ ತುದಿ ಬಂದಿದ್ದೇ ತಿಳಿಯಲಿಲ್ಲ. ಅಲ್ಲಿಗೆ ಮೆಟ್ಟಿಲಲ್ಲಿ ಹತ್ತೋ ಬದಲು ವಾಹನಗಳ ದಾರಿಯಲ್ಲೂ ಬರಬಹುದು. ಒಳ್ಳೇ ಟಾರ್ ರೋಡೇ ಮಾಡಿದ್ದಾರೆ. ಅದರಲ್ಲಿ ಈ ಮಜ ಇಲ್ಲ ಬಿಡಿ. ಮೇಲಕ್ಕೆ ಹತ್ತುತ್ತಿದ್ದಂತೆ ಅಲ್ಲಿ ಬಿದಿರಿನ ಅಟ್ಟಣಿಗೆಗಳನ್ನು ಮಾಡಿದ್ದಾರೆ. ಅದರ ಮೇಲೆ ಹತ್ತಿ ಸುತ್ತಣ ಪ್ರಕೃತಿಯನ್ನು ಆನಂದಿಸಬಹುದು.
Yoga Nandeeshwara Temple

ದೇವಾಲಯಗಳಲ್ಲಿ ಮೊದಲು ಸಿಗುವುದು ವೀರಾಂಜನೆಯ ದೇವಸ್ಥಾನ. ಆಂಜನೇಯನಿಗೆ ಕೈ ಮುಗಿದು ಅಲ್ಲೇ ಸ್ವಲ್ಪ ಹೊತ್ತು ಕೂತೆವು. ಹೊರಗೆ ಕಲ್ಲು ಕಾದ ಕಾವಲಿಯಂತೆ ಇದ್ದರೂ ದೇವಸ್ಥಾನದ ಒಳಗೆ ಮುಂಜಾವಿನ ಮಂಜಂತೆ ತಂಪಾಗಿತ್ತು. ಹಾಗೇ ಬಲಗಡೆ ಇದ್ದ ಗಣಪನಿಗೂ ಕೈ ಮುಗಿದು ಆರತಿ, ತೀರ್ಥ ಸ್ವೀಕರಿಸಿ ಮತ್ತೆ ಮೇಲೆ ಹತ್ತಿದೆವು.


One of the Statues ..
ಯೋಗ ನಂದೀಶ್ವರ ದೇವಸ್ಥಾನ

ಅಲ್ಲಿಂದ ಹಾಗೆಯೇ ಮುಂದೆ ಸಾಗಿದಾಗ ಸಿಕ್ಕಿದ್ದು ಇಲ್ಲಿನ ಪ್ರಧಾನ ಆಕರ್ಷಣೆ ಯೋಗ ನಂದೀಶ್ವರ ದೇವಸ್ಥಾನ. ದೇವಸ್ಥಾನ ಚೆನ್ನಾಗಿದೆ. ಹಳಗನ್ನಡದ ಲಿಪಿಗಳು, ರಾಜರ ಕಾಲದ (ಚೋಳ ? ) ವಿಗ್ರಹಗಳು ಇಲ್ಲಿವೆ. ಒಳಗಡೆ ಫೋಟೋ ತೆಗೆಯುವ ಹಾಗಿಲ್ಲದ ಕಾರಣ ಅಲ್ಲಿನ ಚಿತ್ರಣ ಹಾಕಲಾಗಿಲ್ಲ. ದೇವರ ಮುಂದೆ ಹಾಗೇ ಕೈ ಮುಗಿದು ನಿಂತುಕೊಂಡರೆ ಅಲ್ಲಿವರೆಗೆ ಹತ್ತಿ ಬಂದ ಸುಸ್ತೆಲ್ಲಾ ಕ್ಷಣದಲ್ಲೇ ಮಾಯ. ಅಲ್ಲೇ ಒಮ್ಮೆ ಪ್ರದಕ್ಷಿಣೆ ಹಾಕಿ ದೇವಾಲಯದ ಆವರಣದಲ್ಲೇ ಇದ್ದ ಪುಟ್ಟ ಪುಷ್ಕರಿಣಿಯನ್ನೂ ನೋಡಿದೆವು.  ನಂತರ ಕಾಲೆಲ್ಲಾ ಸುಡುತ್ತಿದ್ದರಿಂದ ಹೆಚ್ಚು ಹೊತ್ತು ಹೊರಗೆ ನಿಲ್ಲದೇ ಮತ್ತೆ ನೆರಳಿಗೆ ಬಂದೆವು.


Nandi Betta Top
             ಟಿಪ್ಪು ಡ್ರಾಪ್
ಹಾಗೇ ಮುಂದೆ ಸಾಗಿದಾಗ ಸಿಕ್ಕಿದ್ದು ಟಿಪ್ಪು ಡ್ರಾಪ್.. ಇದು ಇಲ್ಲಿನ ಅತೀ ಎತ್ತರದ ಪ್ರದೇಶ. ಇಲ್ಲಿ ಗಾಳಿ ಬೀಸುವುದು, ಇಲ್ಲಿಂದ ಕೆಳಗಿನ ವಿಹಂಗಮ ದೃಶ್ಯ ಆನಂದಿಸುವುದೇ ಒಂದು ಚಂದ. ಇಲ್ಲೊಂದು ಸ್ವಲ್ಪ ಚಿತ್ರಗಳನ್ನು ತೆಗೆದ ನಂತರ ಅಲ್ಲೇ ಮತ್ತೆ ಸುತ್ತಲಾರಂಭಿಸಿದೆವು. ಟಿಪ್ಪು ಡ್ರಾಪಿನಿಂದ ಕೆಳಗೆ ಶತ್ರುಗಳನ್ನ ಅವನು ಬೀಳಿಸುತ್ತಿದ್ದರಿಂದ ಅದಕ್ಕೆ ಆ ಹೆಸರೆಂದು ಅನೇಕರು ಹೇಳುತ್ತಾರೆ.  ಅಲ್ಲಿಂದ ನಾವು ಟಿಪ್ಪು ಡ್ರಾಪಿನ ಬದಿಯೇ ಇರುವ ತಡೆಗೋಡೆಯ ಬಳಿ ಬಲಕ್ಕೆ ಇಳಿಯುತ್ತಾ ಸಾಗಿದೆವು.
Tippu Drop



ಅರ್ಕಾವತಿ ನದಿ ಉಗಮ ಸ್ಥಾನ

A View from the Top 
ಹಾಗೇ ಸಾಗಿದಾಗ ಸಿಕ್ಕಿದ್ದು ಅರ್ಕಾವತಿ ನದಿ ಉಗಮ ಸ್ಥಾನ ಎಂಬ ಬೋರ್ಡು. ಅಲ್ಲಿ ಒಣಗಿ ಹೋಗಿತ್ತು. ಅಲ್ಲಿಯೇ ನಾವು ಹತ್ತಿ ಬಂದ ದಾರಿ ಸಾಗಿತು . ಮತ್ತೆ ಅಲ್ಲಿಯೇ ಇಳಿಯುವ ಬದಲು ಪುನ: ಬಲಕ್ಕೆ ತಿರುಗಿದೆವು. ಆಗ ನಮಗೆ ಸಿಕ್ಕಿದ್ದು ಪ್ರವಾಸೋದ್ಯಮ ಇಲಾಖೆಯ ಉದ್ಯಾನವನ. ಅದರೊಳಕ್ಕೂ ಪ್ರವೇಶ ನಿಷಿದ್ದ. ದೂರದಿಂದಲೇ ಆನಂದಿಸಬಹುದು. ಅಲ್ಲಿಂದ ಮತ್ತೆ ಮೇಲಕ್ಕೆ ಹತ್ತಿದಾಗ ಯೋಗ ನಂದೀಶ್ವರಕ್ಕೆ ಹತ್ತಿದ ಮೆಟ್ಟಿಲುಗಳು ಕಂಡವು. ಅಂದಾಗ ಬೆಟ್ಟದ ಕಾಲು ಪ್ರದಕ್ಷಿಣೆ ಮುಗಿಸಿದಂತಾಯಿತು .

ಅಲ್ಲಿಂದ ಅತ್ತ ಹೋಗದೆ ಪಕ್ಕದಲ್ಲಿದ್ದ ಬಳಸುದಾರಿಯಲ್ಲಿ ಹೋಟೇಲ್ ಮಯೂರದತ್ತ ಸಾಗಿದೆವು. ಅಲ್ಲೇ ಒಂದು ಮಕ್ಕಳ ಪಾರ್ಕ್ ಇದೆ.ಅಲ್ಲಿ ಆಡುತ್ತಿರೋ ಮಕ್ಕಳು, ಮುದುಕರು ಎಲ್ಲಾ ಕಾಣುತ್ತಾರೆ. ಅಲ್ಲೂ ಕುಳಿತು ವಿಶ್ರಮಿಸಬಹುದು .  ಅದರ ಎದುರಿನ ಅಂಗಡಿಯಲ್ಲಿ ಐಸ್ ಕ್ಯಾಂಡಿಯ ಮೂಲಕ ಸ್ವಲ್ಪ ದಾಹ ತೀರಿಸಿಕೊಂಡು ಮತ್ತೆ ಮುಂದೆ ಸಾಗಬಯಸಿದೆವು. ಅಲ್ಲಿಂದ ನಂದಿಯನ್ನು ನೋಡಬೇಕೆಂದು ಗೊತ್ತಿತ್ತು . ಆದರೆ ಎಲ್ಲಿ? ಹೀಗೇ ರಸ್ತೆಯಲ್ಲಿ ಮುಂದೆ ಸಾಗಿ ಅಂದರು ಅಲ್ಲಿ...


Nelli Kayi Basavanna Mantapa

ನಂದಿಬೆಟ್ಟದ ನೆಲ್ಲಿಕಾಯಿ ಬಸವಣ್ಣ, ಬ್ರಹ್ಮಾಶ್ರಮ

ಹಾಗೇ ಸಾಗಿದಾಗ ನೆಲ್ಲಿಕಾಯಿ ಬಸವಣ್ಣನಿಗೆ ಹೋಗೋ ದಾರಿ ಎಂದು ಬೋರ್ಡು ಕಂಡಿತು . ಅಲ್ಲೇ ಇಳಿದಾಗ ಮೊದಲು ಸಿಕ್ಕಿದ್ದು ಮುನೇಶ್ವರ ಸ್ವಾಮಿಯ ದೇವಸ್ಥಾನ. ಅಲ್ಲೇ ಕೈಮುಗಿದು ಮುಂದೆ ಸಾಗಿದಾಗ ದೂರದಲ್ಲಿ ಮಂಟಪವೊಂದು ಕಂಡಿತು. ನೋಡಿದರೆ ಅದರೊಳಗೊಂದು ದೊಡ್ಡ ನಂದಿ. ಅದರ ಎದುರಿಗೆ ನೆಲ್ಲಿಮರ. ಅದಕ್ಕೆ ಕಟ್ಟಿದ ಬಳೆ, ಪ್ಲಾಸ್ಟಿಕ್ ಕೊಟ್ಟೆ..
ಹೀಗೆ ನೂರಾರು ಹರಕೆಗಳು.. ಆ ಮರದ ಎದುರಿಗೆ ನಂದಿಯಿದ್ದರಿಂದಲೇ ಅದಕ್ಕೆ ಆ ಹೆಸರಂತೆ.

Brahmashrama

 ಅಲ್ಲೇ ಪಕ್ಕದಲ್ಲಿ ಬ್ರಹ್ಮಾಶ್ರಮ ಅಂತ ಇದೆ. ಅಂದರೆ ಬಂಡೆಯ ಮಧ್ಯದ ಗವಿಯಂತೆ. ಈಗ ಸಿಮೆಂಟಿನ ನೆಲವನ್ನೂ ಮಾಡಿದ್ದಾರೆ. ಈಗ ಪಾಳು ಬಿದ್ದಿರುವ ಅಲ್ಲಿ ಮುಂಚೆ ಗಾಂಧೀಜಿಯವರು ೪೫ ದಿನಗಳ ಕಾಲ ತಂಗಿದ್ದರು ಎಂದೂ ಪ್ರತೀತೆಯಿದೆ. ಸತ್ಯಾಸತ್ಯತೆ ಏನೇ ಇದ್ದರೂ ಧ್ಯಾನ ಮಾಡಲು , ಪ್ರೇಮಿಗಳ ಏಕಾಂತಕ್ಕೆ ಅದು ಪ್ರಶಸ್ತ ಜಾಗ

 




Palar River Origin
ಪಾಲಾರ್ ಮೂಲ, ಕುದುರೆ ಮೆಟ್ಟಿಲು
ಹಾಗೇ ಮುಂದೆ ಸಾಗಿದಾಗ ಪಾಲಾರ್ ನದಿ ಮೂಲ ಅಂತ ಸಿಗುತ್ತದೆ. ಅಲ್ಲೂ ಈಗ ಬತ್ತಿ ಹೋದರೂ ನದಿಯೊಂದು ಇದ್ದ ಕುರುಹು ಕಾಣುತ್ತದೆ. ಹಾಗೇ ಮುಂದೆ ಸಾಗಿದಾಗ ನಮಗೆ ಕುದುರೆ ಮೆಟ್ಟಿಲು ಅಂತ ಸಿಗುತ್ತದೆ. ಆ ಮೂಲಕ ಕೋಟೆಯಿಂದ ಕೆಳೆಗಿಳಿಯಬಹುದು. ಅಲ್ಲಿ ಪೂರ್ತಿ ಕೆಳಗಿನವರೆಗೆ ಮೆಟ್ಟಿಲುಗಳು ಇರದಿದ್ದರೂ ಅಲ್ಲಿಂದ ಕುದುರೆಗಳನ್ನು ಅಲ್ಲಿಗೆ ತಂದೋ ಇಳಿಸಿಯೋ ಮಾಡುತ್ತಿದ್ದಿರಬಹುದೆಂದು ಊಹಿಸಬಹುದು.

Kudure Mettilu









ಹಾಗೇ ಮುಂದೆ ಸಾಗಿದಾಗ ನಮಗೆ ಮತ್ತೆ ಟಿಪ್ಪು ಡ್ರಾಪಿನಿಂದ ನಾವು ಶುರು ಮಾಡಿದ ತಡೆಗೋಡೆಗಳೇ ಕಂಡವು. ಅಂದರೆ ನಾವು ಒಂದು ಪ್ರದಕ್ಷಿಣೆ ಮುಗಿಸಿದೆವು ಎಂದಾಯಿತು. ಅಲ್ಲಿಂದ ಹಾಗೇ ಮತ್ತೆ ಮೇಲೆ ಹತ್ತಿ ತೋಟಗಾರಿಕೆ ಇಲಾಖೆಯ ವಸತಿಗೃಹದ ಹತ್ತಿರ ಬಂದೆವು.





Guest House


ಹಲತರದ ಹೂಗಳಿಂದ ಕಂಗೊಳಿಸುತ್ತಿರುವ ಅದೂ ತಂಪಾಗಿ ಆನಂದದಾಯಕವಾಗಿದೆ.ಅಲ್ಲಿಂದ ನಾವು ಮತ್ತೆ ಮುಂಚೆ ಹೇಳಿದ ಬಿದಿರು ಅಟ್ಟಣಿಗೆಗಳತ್ತ ಬಂದು ಬೆಟ್ಟ ಇಳಿಯಲಾರಂಭಿಸಿದೆವು. ಮತ್ತದೇ ಮೆಟ್ಟಿಲು, ಲ್ಯಾಂಪುಗಳು ಕಾಣಲಾರಂಭಿಸಿದವು.






Tippu Rest House
ಅಲ್ಲಿಂದ ಇಳಿದು ಟಿಪ್ಪುವಿನ ಬೇಸಿಗೆಯ ತಂಗುದಾಣದತ್ತ ಸಾಗಿದೆವು. ಅದು ಅಷ್ಟೆನೂ ಚೆನ್ನಾಗಿಲ್ಲದ ಕಾರಣ , ಅಲ್ಲಿಂದ ಬೇಗ ವಾಪಾಸಾದೆವು. ಇಳಿದಾಗ ೫:೧೮ ಆಗಿತ್ತು . ೫:೩೦ ಕ್ಕೆ ನಮಗೆ ಬೆಂಗಳೂರಿಗೆ ಬರೋ ಬಸ್ಸು ಕಾಯುತ್ತಿತ್ತು. ಅಲ್ಲೇ ಸೂರ್ಯಾಸ್ತ ನೋಡಬಹುದೆಂದು ಗೆಳೆಯ ಆದಿಯ ಆಸೆಯಾಗಿತ್ತು . ಆದರೆ ನಮಗೆ ಸಂಜೆ ೭ ರ ಬಸ್ಸಿನವರೆಗೂ ಕಾಯಬೇಕಿತ್ತು.ಅಲ್ಲಿಂದ ಚಿಕ್ಕಬಳ್ಳಾಪುರ ,ಅಲ್ಲಿಂದ ಮೆಜೆಸ್ಟಿಕ್, ತದ ನಂತರ ನಾವಿರೋ ಜಾಗಕ್ಕೆ ಬರೋ ಹೊತ್ತಿಗೆ ಮಧ್ಯರಾತ್ರಿ ಆಗಿರೋದು. ಜೊತೆಗೆ ಆ ಮೂಲೆಯಲ್ಲಿ ರಾತ್ರೆ ಕಳೆಯುವುದು ....





ತೀರಾ ತೊಂದರೆ ತೆಗೆದುಕೊಳ್ಳುವ ಮನಸ್ಥಿತಿ ಇಲ್ಲದ ಕಾರಣ ಒಲ್ಲದ ಮನಸ್ಸಿನಿಂದಲೇ ಬಸ್ಸು ಹತ್ತಿದೆವು. ದಾರಿಯಲ್ಲಿ ನಮ್ಮ ಅದೃಷ್ಟಕ್ಕೋ , ಅಣಕಿಸಲೋ ಎಂಬಂತೆ ಮುಳುಗೋ ಸೂರ್ಯ ಮೋಡ, ಬೆಟ್ಟಗಳ ನಡುವೆ ಕಣ್ಣಾಮುಚ್ಚಾಲೆ ಆಡುತ್ತಾ, ಬಣ್ಣಗಳ ಹೋಳಿ ಬೀರುತ್ತಾ ನಗುತ್ತಿದ್ದ ..

ನಂದಿ ಬೆಟ್ಟ ಟ್ರಿಪ್ -೧



ಪೂರ್ವ ಕತೆ:
@the Top of Nandi Betta
ಬೆಂಗಳೂರಿಗೆ ಬಂದು ಪೀಜಿ ಹಿಡ್ದಾಗಿನಿಂದ ವಾರಾಂತ್ಯದಲ್ಲಿ ಎಲ್ಲೂ ಸುತ್ಲಿಲ್ಲ ಅಂದ್ರೆ ಏನೋ ಮಿಸ್ಸಿಂಗು, ಬೋರಿಂಗು ಅನ್ಸೋಕೆ ಶುರು ಆಗತ್ತೆ. ಮಾಡಕ್ಕೆ ಬೇರೆ ಕೆಲ್ಸ ಇಲ್ಲದೇ ಸುತ್ತೋದು ಅಂತೇನೂ ಅಲ್ಲ..ಆದ್ರೆ ಯಾಕೋ ಗೊತ್ತಿಲ್ಲ "ದೇಶ ಸುತ್ತು, ಕೋಶ ಓದು ಅಂತಾರಲ್ಲ". ಅದರಲ್ಲಿ ೨ನೇದೇ ಸ್ವಲ್ಪ ಇಷ್ಟ ಆಗ್ತಿತ್ತು ನಂಗೆ. ಹಿಂಗಿರೋವಾಗ ಬೆಂಗಳೂರಲ್ಲೇ ಇದ್ದು ನಂದಿ ಬೆಟ್ಟಕ್ಕೆ ಹೋಗಿಲ್ಲ ಅಂದ್ರೆ ಹೆಂಗೆ ಅಂತ ಅನ್ಸಿಬಿಡ್ತು ಒಂದು ವಾರ. 


ಕೆಲ ತಿಂಗಳ ಹಿಂದೆ ಹರೀಶಣ್ಣ ಮತ್ತು ತಂಡದವ್ರು ಹೋಗಿದ್ದ ಫೋಟೋ ನೋಡಿ ನಾನೂ ಹೋಗ್ಬೇಕಿತ್ತು, ಛೆ , ಅಂತ ಆಸೆ ಆಗಿದ್ದೂ ಸುಳ್ಳಲ್ಲ.       ಸರಿ ಅಂತ ಮುಂದಿನ ಶನಿವಾರಕ್ಕೆ ಅಲ್ಲಿಗೇ ಹೋಗದು ಅಂತ ಫಿಕ್ಸ್ ಮಾಡಿ ಸ್ವಲ್ಪ ಚೇಂಜ್ ಇರ್ಲಿ ಅಂತ FB ಲೊಂದು Event ಮಾಡಿಕರಿದ್ವಿ..೨-೩ ದಿನ ಆದ್ರೂ ಪ್ರತಿಕ್ರಿಯೆ ನೋಡಿ ಕೂಸು ಹುಟ್ಸಕ್ಕೆ ಮುಂಚೇನೆ ಕುಲಾವಿ ಹೊಲ್ಸಿದ್ವಾ ಅಂತನೇ ಅನಿಸ್ತಿತ್ತು. ಕೊನೆಗೆ ಗುರುವಾರ, ಮತ್ತೆ ತಕಾ ಅಂತ ಬೆಂದಕಾಳೂರ ಸೆಕೇಲಿ ಬೆಂದು ಶನಿವಾರ ಮಧ್ಯಾಹ್ನದವರ್ಗೆ ಪಾಚ್ಕೊಳೋಕೆ(ಮಲ್ಗೋಕೆ!!) ಸ್ಕೆಚ್ ಹಾಕಿದ್ದ ಗೆಳೆಯರಿಗೆಲ್ಲಾ ಮೆಸೇಜಾಯ ನಮಃ ಅಂದಾಯ್ತು. ಕೆಲೋರು ಬರ್ತೋನಿ ಅಂದ್ರು. ಕೆಲೋರು ಪ್ರತೀ ಸಲದಂಗೇ ಕೈಯತ್ತಿದ್ರು. ಕೆಲೋರು ಸರಿ ಮಚಾ, ಶುಕ್ರವಾರ ರಾತ್ರೆ ಹೇಳ್ತೀನಿ ಅಂದ್ರು. ಇಲ್ಲಾ ಮಗಾ ಊರಿಗೆ ಹೋಗ್ಬೇಕು, ಸೋರಿ ಕಣೋ ಅಲ್ಲಿಗೆ ಹೋಗ್ಬೇಕು, ಮುಂಚೇನೆ ಪ್ಲಾನ್ ಆಗ್ಬಿಟ್ಟಿದೆ ಅವನನ್ನ ಮೀಟ್ ಮಾಡ್ಬೇಕು ಅನ್ನೋ ತರಾವರಿ ಉತ್ರಗಳೂ ಬಂದ್ವು. ಒಂದು ವರ್ಷ ಮುಂಚೆ ಪ್ಲಾನ್ ಮಾಡಿದ್ರೂ ಇದೇ ಕತೆ ಬಿಡೋ .. ಕರ್ಮ ಅಂತ ಒಂದ್ಸಲ ಬೇಜಾರ್ ಮಾಡ್ಕಂಡ ಫ್ರೆಂಡು..ಎಲ್ಲಾದ್ರೂ ಬಿಟ್ ಹೋದ್ರೆ ನನ್ಯಾಕೆ ಕರ್ದಿಲ್ಲ ಅಂತ ಹಿಗ್ಗಾಮುಗ್ಗಾ ಜಾಡಿಸೋ ಇವ್ರುಗಳ್ನ ಎಲ್ಲಿಗಾದ್ರೂ ಬರ್ತೀರ  ಕರದ್ರೆ ಇದೇ ಗೋಳು ಕಣ್ಲಾ ಅಂದ ಗೆಳೆಯ. ಕೊನೆಗೆ ಆ ಮೆಸೇಜು ಎಲ್ಲೆಲ್ಲೋ ತಿರ್ಗಿ ತಿರ್ಗಿ, ಯಾರ್ಯಾರೋ ಎಲ್ಲ ಕೇಳಂಗೆ ಆಗಿ ನಿರೀಕ್ಷೆನೇ ಮಾಡ್ದೇ ಇದ್ದ ಹಳೇ ಗೆಳೆಯರೆಲ್ಲಾ ಸಿಕ್ಕು ಒಟ್ಟು ೮ ಜನ ಬೆಟ್ಟ ಹತ್ತೋ ಭೂಪರು ರೆಡಿ ಆದ್ವಿ ಅನ್ನಿ ಕೊನೆಗೆ :-)

ನಂದಿ ಬೆಟ್ಟ ಬೆಳಗಿಂದು , ಸ್ಕಂದ ಗಿರಿ ರಾತ್ರೀದು ಅಂದಿದ್ದ ಗೆಳೆಯ ವಿಶು. ಬೆಳ ಬೆಳಗ್ಗೆ ೪:೩೦ ಗೆ ಅಲ್ಲಿಗೆ ಹೋಗಿದ್ವಿ. ಏನು ಚಂದಾ ಇತ್ತು ಅನ್ನಿ. ಮಂಜು ಬೀಳೋದು ನೋಡೋದೇ ಸ್ವರ್ಗ ಅನ್ನೋ ತರ ಅಲ್ಲಿಗೆ ಹೋದ ಬ್ಲಾಗ್ ಗೆಳೆಯ ಒಬ್ಬ ಬರ್ಕೊಂಡಿದ್ದ. ಆದ್ರೆ ಅಷ್ಟು ಮುಂಚೆ, ಅದೂ ವಾರಾಂತ್ಯದ ಶನಿವಾರ ಗೆಳೆಯರನ್ನ ಹೊರಡ್ಸೋ ಸೀನೇ ಇರ್ಲಿಲ್ಲ. ಸರಿ ಅಂತ ೭:೩೦ ಗೆ ಹೊರಡೋದು ಅಂತ ಅಂದ್ವಿ. ಎರ್ಲನ್ನೂ ಸೇರಿಸ್ಕಂಡು ಅಲ್ಲಿಗೆ ಹೋಗಿದ್ದನ್ನ ಬರದ್ರೆ ಅದೇ ಒಂದು ಲೇಖನ ಆಗ್ಬೋದು. ಈಗಾಗ್ಲೇ ಈ ಲೇಖನ ಓದಕ್ಕೆ ಯಾಕೆ ಶುರು ಮಾಡಿದ್ನೋ ಅಂತ ಬೋರು ಹೊಡೆದು ಪೇಜು ಬಿಡೋಕೆ ಪ್ಲಾನ್ ಮಾಡ್ತಿರಬಹುದಾದ ನಿಮಗೆಲ್ಲಾ ಇನ್ನೂ ಕೊರೆಯದೇ ನಂದಿ ಬೆಟ್ಟದ ನಿಜವಾದ ಅನುಭವಕ್ಕೆ ಬರ್ತೀನಿ.

ನಂದಿ ಬೆಟ್ಟ:
ಹೋಗೋಕೆ-ತಿನ್ನೋಕೆ:
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ನಂದಿ ಬೆಟ್ಟಕ್ಕೆ ೬:೩೦, ೭:೩೦, ೮:೩೦ ಹೀಗೆ ಪ್ಲಾಟ್ ಫಾರಂ ೧೧ ರಿಂದ ಘಂಟೆಘಂಟೆಗೂ ಒಂದೊಂದು ಬಸ್ಸಿದೆ. ಅದನ ಬಿಟ್ರೆ ಪ್ರತೀ ಅರ್ಧರ್ಧ ಘಂಟೆಗೆ ಚಿಕ್ಕಬಳ್ಳಾಪುರಕ್ಕೆ ಬಸ್ಸಿದೆ. ಅಲ್ಲಿಂದ ನಂದಿ ಬೆಟ್ಟಕ್ಕೆ ಖಾಸಗಿ ಅಥವಾ ಸರ್ಕಾರಿ ಬಸ್ಸುಗಳು ಇದೆ. ಆದ್ರೆ ಖಾಸಗಿ ಬಸ್ಸುಗಳು ನಂದಿ ಬೆಟ್ಟದ ತುದೀ ತನಕ ಹೋಗಲ್ಲ. ನಂದೀ ಬೆಟ್ಟದ ಕ್ರಾಸ್ ಅಂತ ೮ ಕಿ.ಮೀ ಮುಂಚೇನೆ ನಿಲ್ಸಿ ಬಿಟ್ತಾನೆ. ಅಲ್ಲಿಂದ ತಲಾ ೨೦ ಕೊಟ್ರೆ ಆಟೋಲಿ ಹೋಗ್ಬೋದು. ಹಾಗಾಗಿ ಒಳ್ಳೇ ಐಡಿಯಾ ಅಂದ್ರೆ ಚಿಕ್ಕಬಳ್ಳಾಪುರದಲ್ಲಿ ಸ್ವಲ್ಪ ಕಾದ್ರೂನೂ ಸರಿ, ನಂದಿ ಬೆಟ್ಟದವರೆಗೆ ಬರೋ ಸರ್ಕಾರಿ ಬಸ್ಸಲ್ಲೇ ಬರೋದು. ಮತ್ತೆ ನಂದಿ ಬೆಟ್ಟದ ಮೇಲೆ ಮಯೂರ ಅಂತ ಒಂದೇ ಒಂದು ಹೋಟೆಲ್ ಇದೆ ಅಷ್ಟೇ. ಅಲ್ಲಿ, ಸುತ್ತಮುತ್ತ ಇರೋ ೨-೩ ಚಿರ್ಲೆ ಅಂಗ್ಡಿಗಳಲ್ಲಿ ಐಸ್ ಕ್ಯಾಂಡಿಯಿಂದ ಹಿಡ್ದು ಎಳನೀರವರೆಗೆ ಎಲ್ಲದ್ರುದ್ದೂ ೨-೩ ಪಟ್ಟು ಹೆಚ್ಗೆ ರೇಟು. ಹಂಗಾಗಿ ಮುಂಚೇನೆ ಏನಾದ್ರೂ ಕಟ್ಟಿಸ್ಕೊಂಡು ಬಂದ್ರೆ ಅಥವಾ ಕೆಳಗೇನೆ ಏನಾದ್ರು ತಿಂದ್ಕೊಂಡೋ, ಕಟ್ಟಿಸ್ಕೊಂಡು ಹೋದ್ರೆ ಒಳ್ಳೇದು. ನಂದಿಬೆಟ್ಟ ಈಗ ತೋಟಗಾರಿಕೆ ಇಲಾಖೆ ಅವರ ಕೈಕೆಳಗೆ ಇದೆ. ಹಾಗಾಗಿ ಅದರ ಬಗ್ಗೆ ಮಾಹಿತಿಗಿ ಇಲ್ಲೂ ನೋಡಬಹುದು..

ಮತ್ತೆ ಸ್ವಲ್ಪ ಕ್ಯಾಸೆಟ್ನ ರಿವೈಂಡ್ ಮಾಡೋಣ... ಕುಯ್ ಕುಯ್ ಕುಯ್ ಕುಯ್ ಕುಯ್..
   
          ನಂದಿ ಬೆಟ್ಟ ಕ್ರಾಸಿಂದ:
 ಚಿಕ್ಕ ಬಳ್ಳಾಪುರದಿಂದ ಖಾಸಗಿ ಬಸ್ಸಿಗೆ ಬಂದ್ವಿ ನಾವು. ನಂದಿ ಬೆಟ್ಟ ಇಳೀರಿ ಅಂದ. ಇಳಿದ್ವಿ . ಎದ್ರಿಗೆ ನೋಡಿದ್ರೆ ನಂದಿ ಬೆಟ್ಟ ೮ ಕಿ.ಮೀ ಅಂತ ಬೋರ್ಡು. ಎಲಾ ಇವ್ನ. . ನಮ್ದೂಕಿ ಬರ್ಕಾ ಮಾಡ್ಬುಟ್ನಲ್ಲ, ಎಲಾ ಇಸ್ಕಿ ಅಂತ ನೋಡ್ತಿರೋ ಹೊತ್ಗೆ ಬಸ್ಸು ದೊಡ್ಬಳ್ಳಾಪುರಕ್ಕೆ ಹೊಂಟೋಯ್ತು. ಆಮೇಲೆ ಸರ್ಕಾರಿ ಸವಾಸ ಮಾಡ್ದೇ ಇದ್ದಿದ್ದಕ್ಕೆ ಬಯ್ಕಳ್ತಾ ಅಲ್ಲೇ ಕಾದ್ವಿ. ಎಲ್ರನ್ನೂ ಕರ್ಕಂಡು ಅಲ್ಲಿಗೆ ಹೋಗೋ ಹೊತ್ತಿಗೆ ೧೨:೨೦ ಆಗಿತ್ತು ಅಂತ ಬೇರೆ ಹೇಳ್ಬೇಕಿಲ್ಲ. ಅಲ್ಲೇ ಊಟ ಮಾಡೋ ಹೊತ್ತಿಗೆ ಅಂದ್ರೆ ೧ ಘಂಟೆಗೆ ಬಸ್ಸು ಬಂತು. ಅದ್ರೆಲ್ಲಿ ಹತ್ತಿದ್ದೇ ನೆನ್ಪು. ಬಸ್ಸು ಘಾಟಿಗಳಲ್ಲಿ ತಿರುವು ತಗೊಳ್ಳುವಾಗ ಪಕ್ಕಾ ಮೈಸೂರು ಚಾಮುಂಡಿ ಬೆಟ್ಟದ್ದೇ ನೆನ್ಪು. ಮಧ್ಯಾಹ್ನ ಆಗಿದ್ರೂ  ಬೆಟ್ಟ ಹತ್ತೋಕೆ ಶುರು ಮಾಡಿದ್ರಿಂದನೋ , ಅತವಾ ಬಸ್ಸಲ್ಲಿ ಇದ್ದಿದ್ದಕ್ಕೋ ಏನೋ ಸ್ವಲ್ಪನೂ ಸೆಕೆ ಆಗ್ಲಿಲ್ಲ. ಏನು ಬಂಡೆಗಳು, ಏನು ಗಾಳಿ. ಅಬ್ಬಾ ಬೆಂಗಳೂರಿಂದ ಎಲ್ಲೋ ಹೊರ್ಗಡೇನೆ ಬಂದಂಗೆ ಆಗ್ಬುಡ್ತು. ಯಾವಾಗ ನಂದಿ ಬೆಟ್ಟದ ಬುಡಕ್ಕೆ ಬಸ್ ಬಂದು ನಿಲುಸ್ತೋ ಗೊತ್ತೇ ಆಗ್ಲಿಲ್ಲ. ಅಲ್ಲಿ ತಲಾ ಐದೈದು ರೂ ಟಿಕೇಟ್ ತಗೊಂಡು ಒಳಗೆ ನಡೆದ್ವಿ. .. 


ಮುಂದೇನಾಯ್ತು ಅಂತೀರಾ?
ಒಂದೇ ಸಲ ಎಲ್ಲಾ ಹೇಳಿದ್ರೆ ವಾಂತಿ ಆಗುತ್ತೆ. ಹಾಗಾಗಿ ಮುಂದಿನ ಕತೇನ  ಮುಂದಿನ ಭಾಗದಲ್ಲಿ ಇಟ್ಕೊಂಡಿದೀನಿ :-)

Tuesday, April 17, 2012

ಕಳೆದಿಹ ನನ್ನ ಹುಡುಕೆ ಸಖಿ


ಬೀರು , ವಿಸ್ಕಿಗಳ ನಡುವೆ ಕರಗದೆ
ಹಲವು ಹೊಗೆಯಲಿ ಉಸಿರುಗಟ್ಟದೇ
ಹೇಯ ತಾಣದಲಿ ಮನಸ ತೆತ್ತದೇ
ಉಳಿಯುವುದೊಂದೇ ಬದುಕೆ ಸಖಿ ?
(ಈ.ಕೀ ಭಟ್ಟರ ಕ್ಷಮೆ ಕೇಳುತ್ತಾ .. )

ಪ್ರೀತಿಯಿಲ್ಲದ, ಮನದ ಮೋಜಿಗೆ
ಸರಿಯೇ ಈ ತರ ಸ್ವೇಚ್ಛೆ, ರೇಜಿಗೆ
ಒಳ್ಳೆಯವನೆ ಮನೆಗೆ, ಮನಕೆ ?
ನನ್ನ ದೃಷ್ಟಿಯನೆ ಸಹಿಸೆ ಸಖಿ

ಏನೋ ಮಗನೆ, ಹೇಗಿದ್ದೀಯ
ಎಂದು ತಾಯ ಕರೆ
ಏನು ಉತ್ತರ ?
ಕಳೆದೆ ಜೂಜಲಿ, ಹಣದ ಹೊಳೆಯಲಿ
ಮೋಹಿನಿ ನಗುವಲಿ, ಹೊಗೆಯ ಉಸಿರಲಿ
ಎಂದೇ ?
ನನ್ನ ದ್ವನಿಯೂ ಕೇಳದಷ್ಟು
ಪಾತಾಳದಲ್ಲಿ ಕೈಕಾಲು ಕಟ್ಟಿ
ಬೆಂದು ಬಿದ್ದಿರುವೆ
ಕಳೆದಿಹ ನನ್ನ ಹುಡುಕೆ ಸಖಿ..
ಮತ್ತೆ ಹಳೆಯ ’ನಾನು’ ತಾರೆ ಸಖಿ

Monday, April 16, 2012

ನೀರೆ ಇಲ್ಲದೆ

ಭಾವವಿಲ್ಲದೆ ಬರೆಯಲಿ ಹೇಗೆ
ಸಾರವಿಲ್ಲದ ಸಾಲುಗಳ
ನೀರೆ ಇಲ್ಲದೆ ಉಳಿಸಲಿ ಎಂತು
ಬಾಳ ಬಳಲಿದ ಪೈರುಗಳ

ಬತ್ತಿದೆ ಕೆರೆ, ನಗು ಅಲೆಯಿಲ್ಲ
ಮೋಸದ ಮೋಡದ ಸುಳಿವಿಲ್ಲ
ಮುನಿಸ ತಾಪ, ತಳ ಬಿರುಕಿದೆಯಲ್ಲ
ಕಳೆಯಲ್ಲೂ ತ್ವಚೆ ಹಸಿರಿಲ್ಲ

ನೀನಾರೋ , ನಾನಾರೋ ಕಳೆದಿರುವ ಕಾಲದಿ
ಇಂದ್ಯಾಕೆ ನೆನಪಾಗಿ ಕಾಡಿಹುದೋ ಬೇಗುದಿ
ಸುಳಿಯೇ ಒಮ್ಮೆ
ನೀ ಹನಿಮಳೆಯಾಗಿ
ಬರ ಕಾಡಿದೆ, ಬದುಕಿಸೆ ಚೆನ್ನೆ
ಬೇಡುತಿಹೆ ಒಣ ನೆಲ ನಿನ್ನೆ

Friday, April 13, 2012

ಬೆಂಗಳೂರು ಅರಮನೆ


ಬೆಂಗಳೂರಲ್ಲಿ ಲಾಲ್ ಬಾಗ್ , ವಿಧಾನ ಸೌಧ, ಕಬ್ಬನ್ ಪಾರ್ಕ್ ಗೊತ್ತು. ಇದೆಲ್ಲಿಂದ ಬಂತಪ ಅರಮನೆ ಅಂದ್ಕಂಡ್ರಾ ? ಮೈಸೂರು ಅರಮನೆ ಬಗ್ಗೆ ಬರೆಯೋಕೆ ಪೀಟಿಕೆ ಹಾಕ್ತಿದೀನಿ ಅಂದ್ಕಂಡ್ರಾ ? ಇಲ್ಲ ಸ್ವಾಮಿ . ನಾ ಹೇಳೋಕೆ ಹೊರಟಿರೋದು ಅರಮನೆ ರೋಡಲ್ಲಿರೋ ಮಹಾರಾಜರ ಬೇಸಿಗೆ ಅರಮನೆ ಬಗ್ಗೆನೇ . ಟಿಪ್ಪು ಅರಮನೆ ಅಂತ ಮಾರ್ಕೆಟ್ ಹತ್ರ ಇದ್ಯಲ ಅಂದ್ರ್ರ ? ಅದ್ರ ಬಗ್ಗೆನೂ.. ಹರಿಕತೇನೆ ನಿಮಗೆ ನಿದ್ದೆ ತರಿಸೋ ಮೊದ್ಲು ಅರಮನೆಗೆ ವಾಪಾಸ್ ಬರೋಣ.

ಹಿಂದಿನ ವಾರ ನಾವು ಗೆಳೆಯರು ಬೆಂಗಳೂರು ಅರಮನೆಗೆ ಹೋಗಿದ್ವಿ .ಮೂರು ಬಣ್ಣದ ರಕ್ಷಕರ ಭದ್ರತೆ ಕಾಣ್ತಿತ್ತು ಹೊರಗಿಂದ . ಗೂಗಲ್ ದೈವ ದಯಪಾಲಿಸಿದ್ದ ಚಿತ್ರಗಳನ್ನ್ನು ನ್ನೋಡಿಯೇ   ಕೆರಳಿದ್ದ ನಮ್ಮ ಕುತೂಹಲ ಪೋಲಿಸ್ ಮಾವಂದಿರ ದರ್ಶನದಿಂದ  ಇನ್ನು ಹೆಚ್ಚಾಯ್ತು. ಹೊರಗಿನಿಂದಲೂ ಚಿತ್ರ ತೆಗೆಯಕ್ಕೆ ಬಿಡಲಿಲ್ಲ ಅಲ್ಲಿ ಸಿಬ್ಬಂದಿ. ಅದರೂ ಮೊಬೈಲ್ ಕ್ಯಾಮರ ಸಮಾಧಾನಿಸುತ್ತ ಒಳ ಸಾಗಿದ ನಮಗೆ ಮತ್ತೊಂದು ಬೇಸರ ಕಾದಿತ್ತು. ಪ್ರವೇಶ ಶುಲ್ಕ ೨೦೦ ರೂ. ಮೈಸೂರು ಅರಮನೆಯಲ್ಲೂ ನೂರರ ಮೇಲಿಲ್ಲ . ತಾಜಮಹಲ್ , ಕೆಂಪುಕೋಟೆ  ಹೀಗೆ ಭಾರತದಲ್ಲೇ ಭಾರತೀಯರಿಗೆ ಎಲ್ಲೂ ಇರದಷ್ಟು ಶುಲ್ಕ ಇಲ್ಲಿ !! ಆದರೆ ಬರೋದು ಬಂದಾಗಿದೆ .ನೋಡ್ಕೊಂಡೆ ಹೋಗೋದು ಅಂತ ತೀರ್ಮಾನ ಮಾಡಿದ್ವಿ. ಗೆಳೆಯರ ಹತ್ರ ಇದ್ದ ಬದ್ದ ದುಡ್ಡೆಲ್ಲ ಗುಡ್ಡೆ ಹಾಕಿ ಅಂತೂ ಒಳಗೆ ಸೇರಿದ್ವಿ. ಅಲ್ಲಿರೋ ಎಲ್ಲದರ ಮಾಹಿತಿ ಇದ್ದ ಆಡಿಯೋ ಗೈಡ ಉಚಿತ ಅನ್ನೋದಷ್ಟೇ ಅವಾಗಿದ್ದ ಸಮಾಧಾನ.





ಮೊದಲ್ನೇ ಜಾಗ ಅಂದ್ರೆ ಮತ್ತೆ ಹೊರಬಾಗಿಲಿಗೆ ಬಂದ್ವಿ. ಈ ಅರಮನೆಯನ್ನು  ೧೮೭೩ರಲ್ಲಿ ಕಟ್ಟಲಾಯಿತಂತೆ. ಅದನ್ನು ಕಟ್ಟಿದ ಪರಿ, ಆಗಿನ ರಾಜ ವೊಡೆಯರರ ಮೈಸೂರು ಸಂಸ್ಥಾನದ ಪರಿ, ನೀರಾವರಿಯಿಂದ , ಅಭಿವೃದ್ದಿ ಯೋಜನೆಗಳೆಡೆಗೆ ಸಂಸ್ಥಾನ ಗಮನ ಹರಿಸಿದ ರೀತಿಯನ್ನು ಕೇಳುತ್ತ ಅಭಿಮಾನ ಕನಕಣದಲ್ಲೂ ಉಕ್ಕಿದ ಅನುಭವ. "ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು " .. ಹಾಡಿನ ಹಿಮ್ಮೇಳ ಕೇಳಿದಂತಾಯ್ತು   ಒಮ್ಮೆ .

ಹಾಗೇ ಒಳಸಾಗುತ್ತಿದ್ದಂತೆ ಮೇಲೇರಲು ಮೆಟ್ಟಿಲುಗಳು ನಿಮ್ಮನ್ನು ಸ್ವಾಗತಿಸುತ್ತದೆ. ಅದಕ್ಕಿಂತ ಮುಂಚೆ ಒಂದು ಭವ್ಯ ಸಭಾ ಭವನ. ಮನೋರಂಜನ ಕಾರ್ಯಕ್ರಮಗಳೆಲ್ಲ ಇಲ್ಲಿಯೇ ನಡೆಯುತ್ತಿತ್ತಂತೆ. ಇಲ್ಲಿ ಸುಂದರ ಮರದ ಕಂಬಗಳು , ವಿನ್ಯಾಸ ಕಣ್ಮನ ತುಂಬಿದವು . ಹೊರಬರುತ್ತಿದ್ದಂತೆಯೇ ಆಗಿನ ಕಾಲದ ಲಿಪ್ತನ್ನು ನೋಡಿ ಮತ್ತೊಮ್ಮೆ ಆಗಿನ ತಂತ್ರಜ್ಞಾನದ ಬಗ್ಗೆ ಹೆಮ್ಮೆಯಾಯಿತು . ವಾಪಾಸ್ ಬಂದು ಮೆಟ್ಟಿಲು ಏರುವಲ್ಲಿ  ರಾಜ ಅಮ್ಮಣ್ಣಿಯವರ ಭಾವಚಿತ್ರ ಇದೆ. ಅ ಚಿತ್ರದ ನಗು ಮೊನಾಲಿಸ ನಗುವನ್ನು ಹೋಲುತ್ತದೆ ಅನ್ನುತ್ತಾರಂತೆ ವಿದ್ವಾಂಸರು. ಅಲ್ಲೇ ಹತ್ತುತ್ತಾ ಆಗಿನ ರಾಜರ ಲಾಂಚನ ಗಂಡಭೇರುಂಡ ವನ್ನೂ , ಆನೆ ತಲೆ-ಸಿಂಹದ ದೇಹ ಹೊಂದಿದ್ದ ಪ್ರಾಣಿ, ಅದರ ಮೇಲೆ ಸಿಂಹದ ದೇಹ-ಕೋಣದ ದೇಹ ಹೊಂದಿದ್ದ ಪ್ರಾಣಿಯ   ಚಿತ್ರವನ್ನೂ ನೋಡಿದೆವು. ಅದು ಅಪಾರ ಶಕ್ತಿಯ , ಸದಾ ವಿಜಯದ ದ್ಯೋತಕವಂತೆ . ಅಲ್ಲೇ ಮೇಲುಗಡೆ ರಾಜಾ ಒಡೆಯರರ ತಂದೆ ಭೇಟೆಯಾಡಿದ ಆನೆಯ ತಲೆ ಇದೆ. ಮೆಟ್ಟಿಲುಗಳ ಅಕ್ಕ ಪಕ್ಕ ರಾಜರ ಫೋಟೋಗಳು , ಅವರು ದ್ವಿತೀಯ ಮಹಾಯುದ್ದದ ಸಮಯದಲ್ಲಿ ಬ್ರಿಟಿಷರಿಗೆ ಸಹಕರಿಸಿದ್ದಕ್ಕೆ ಬ್ರಿಟಿಷರು ಅವರಿಗೆ ನೀಡಿದ ಸಮ್ಮಾನದ ಚಿತ್ರಗಳು , ಆ ಸಂಬಂಧಿ ಶ್ರಾವ್ಯವನ್ನು ಆನಂದಿಸುತ್ತಾ ಮುಂದೆ ಸಾಗಿದೆವು. ಇಲ್ಲಿ ನಾವು ಗೋಥಿಕ, ತೋದರ್ ಶೈಲಿಗಳ ಸಂಮಿಳನವನ್ನು ಕಾಣಬಹುದು ಎಂದು ಅರಿತೆವು.

ಅಲ್ಲಿಂದ ಮುಂದೆ ಕಂಡಿದ್ದು ದರ್ಬಾರ್ ಹಾಲ್. ಇದನ್ನು  ವಿಕ್ಟೋರಿಯನ್ -ಎದ್ವರ್ಡಿಯನ್ ಶೈಲಿಯಲ್ಲೂ ಇದರ ಕಿಟಕಿಗಳನ್ನು ಗೋಥಿಕ್ ಶೈಲಿಯಲ್ಲೂ ಕಟ್ಟಲಾಗಿದೆ. ಅದರ ನಡುಮಧ್ಯೆ ಒಂದು ಬೃಹತ್ತಾದ ಕನ್ನಡಿಯಿದೆ ಈಗ . ಮುಂಚೆ ಆ ಜಾಗದಲ್ಲಿ ರಾಜರು ಕುಳಿತು ದರ್ಬಾರ್ ನಡೆಸುತ್ತಿದ್ದರಂತೆ . ಅದರ ಎದುರಿನ ಅಟ್ಟದಲ್ಲಿ ಅಂದಿನ ರಾಣಿಯರು ಪರದೆಯ ಹಿಂದೆ ನಿಂತು ಸಭೆಯನ್ನು ವೀಕ್ಷಿಸುತ್ತಿದ್ದರಂತೆ . ಅಲ್ಲಿನ ರಾಜರ ಶಸ್ತ್ರಾಸ್ತ್ರ ಕವಚಗಳ ವಿನ್ಯಾಸ, ಸುಂದರ ಗಾಜಿನ ತೂಗುದೀಪಗಳು, ಕುಸುರಿ ಕಲೆಗಳನ್ನು            
ನೋಡುವುದೇ  ಚೆಂದ . ಇಲ್ಲಿ ತಾಯಿ ಚಾಮುಂಡಿಗೆ ನಮಿಸುವುದನ್ನು ಮರೆಯದಿರಿ . ಅಂದ ಹಾಗೆ ಇದನ್ನು ನಿರ್ಮಿಸಿದ್ದು ಕಲಕತ್ತೆಯ ಲೆಸರಸನ್ ಎಂಬ ಕಂಪೆನಿಯಂತೆ.  ಅದರ ನಂತರ ಅಲ್ಲೇ ಇದ್ದ ಕಲ ಪ್ರದರ್ಶನವನ್ನು, ದಸರೆಯ ಕಾಲದ ಫೋಟೋಗಳನ್ನೂ ನೋಡಿದೆವು.ಅಲ್ಲಿಂದ ಮುಂದೆ ಸಾಗಲು ಒಂದು ಓಣಿಯಷ್ಟೇ..

ಅದನ್ನು ದಾಟಿ ಈಚೆ ಬರುತ್ತಿದ್ದಂತೆ ಮತ್ತೊಂದು ಅಚ್ಚರಿ. ರಾಜವಂಶದ ಚಿತ್ರ,   ಯುವರಾಜನ  ಬಾಲ್ಯದ ಚಿತ್ರಗಳು ನಮ್ಮನ್ನು ದಶಕಗಳ ಕಲ ಹಿಂದೊಯ್ದವು . ಅವರ ನುಡಿಗಳಲ್ಲೇ ಅವರ ನೆನಪುಗಳನ್ನು ಕೇಳುವ ಸವಿ ಇನ್ನೂ ಅದ್ಭುತ .   ನಂತರ ರಾಜರ ಹುಲಿ, ಆನೆ ಭೇಟೆಯ ಚಿತ್ರಗಳು , ವಿವರಗಳೊಂದಿಗೆ ಶೋಭಿಸುತ್ತಿದ್ದವು . ಆ ಸಮಯದಲ್ಲಿ ಮುಖತ ವರದಿ ಮಾಡಿದ ವರದಿಗಾರ್ತಿಯ ದನಿಯೂ ಅಲ್ಲಿ ಲಭ್ಯ.  ನಂತರ ನಾವು  Rape of the Daughters of Leucippus(Rubens Baroque) , Banquet of Cleopatra (Gerald Lairesse)-1743.. ಹೀಗೆ ಐದು ೧೬, ೧೭ನೆ ಶತಮಾನದ  ಜಗತ್ರಸಿದ್ದ ವಿದೇಶಿ  ಕಲಾವಿದರ ವರ್ಣ ಚಿತ್ರಗಳನ್ನೂ, ರಾಜ ರವಿವರ್ಮರ ಸೀತೆ ಮೊದಲಾದ ಚಿತ್ರಗಳನ್ನೂ ನೋಡಿದೆವು.  ಅದಾದ ನಂತರ ಕೆಳಗಿಳಿಯೋ ಮೆಟ್ಟಿಲುಗಳು ಎದುರಾದವು . ಇಲ್ಲಿರುವ ಹೂಗಳ ರಚನೆಯಲ್ಲಿ ಒಂದು ಇನ್ನೊಂದರಂತೆ ಇಲ್ಲದಿರುವುದು ಒಂದು ಆಶ್ಚರ್ಯವೇ . 

ಕೆಳಗಿಲಿಯುತಿದ್ದಂತೆ ದಿವಾನರ ಚಿತ್ರ , ಯುವರಾಣಿಯ ಬಾಲ್ಯದ ಚಿತ್ರಗಳು , ಅವರ ಬಾಲ್ಯದ ನೆನಪುಗಳ ಸವಿಯಲ್ಲಿ ಮುಳುಗೇಳುವುದನ್ನು ಕೇಳುವುದೊಂದು ಅನಿರ್ವಚನೀಯ ಅನುಭವ. ಅದಾದ ನಂತರ ರಾಣಿಯರ ಕಥಾ ಕಾಲಕ್ಷೇಪದ ಜಾಗ , ಕಾರಂಜಿಗಳನ್ನೂ , ಅಶ್ವಾರೋಹಿಯ ತೂಕ ಅಳೆವ ಯಂತ್ರ  ಮತ್ತಿತರ ಸೋಜಿಗಗಳನ್ನು , ಸೀರೆ ಮನೆಯನ್ನೂ ನೋಡಿದೆವು . ರಾಜರ ಉಟದ ಕ್ರಮ , ತಟ್ಟೆ, ಮಹಿಕೆಯರ ಉಡುಗೆ ತೊಡುಗೆಗಳ ಕ್ರಮಗಳನ್ನೂ ನೋಡಿ , ಕೇಳಿ ಆನಂದಿಸಿದೆವು. ಕೊನೆಯ ಮೆಟ್ಟಿಲುಗಳನ್ನು ಇಳಿವ ಮುಂಚೆ ಸಿಗುವ ಇರುವ ಚಿತ್ರಗಳು ರಸಿಕರ ಕಣ್ಸೆಳೆಯದೆ ಇರಲಾರವು . ಕಿವಿಗೆ ಹಾಕಿದ್ದ ಶ್ರಾವ್ಯ ಸಾಧನವನ್ನ್ನು ಮರಳಿಸುವಾಗ ಏನೋ ಬೇಸರ ..  ಅಮೂಲ್ಯ ಇತಿಹಾಸವನ್ನು ಹೇಳುತ್ತ ಹೇಳುತ್ತ ಗುರುವೇ ಆಗಿ ಮನ ಮುಟ್ಟಿದ್ದ ಆತ್ಮಿಯ ಗೆಳೆಯನಿಗೆ ವಿದಾಯ ಹೇಳಲೇ ಬೇಕಾದಂತಹ ಸಂಕಟ.

ಹೇಳೋ ಉತ್ಸಾಹದಲ್ಲಿ ನಿಮಗೆ ಅಲ್ಲಲ್ಲಿ ಬೋರು ಹೊಡಿಸಿದೆನೆ ? ಆಗಿದ್ದರೆ ಕ್ಷಮಿಸಿರಿ ಎಂಬ ಕೋರಿಕೆಯೊಂದಿಗೆ ಕೊನೆ ಮಾತುಗಳು. ನಾನು ಹೇಳಿದ್ದಕ್ಕಿಂತ ಹೇಳಲಾರದವು ಇನ್ನೂ ಹಲವಿವೆ ಅಲ್ಲಿ. ಈ ಅರಮನೆ ಬಂಕಿಂಗ್ಹ್ಯಾಮ್ ಅರಮನೆಯ ನಕಲು ಎಂಬ ಅಭಿಪ್ರಾಯವನ್ನ್ನು ವಿರೋಧಿಸುವ, ಇದರ ಸ್ವಂತಿಕೆಯನ್ನು ಸಮರ್ಥಿಸುವ ಅಂಶಗಳ ವಿವರಣೆ, ಆಗಿನ ಕಾಲದ ಪತ್ರಿಕೆಗಳ ಝಲಕ್.. ಹೀಗೆ ಹತ್ತು ಹಲವು ಸ್ವಾರಸ್ಯಕರ ಅಂಶಗಳು ಕಾಣಸಿಗುತ್ತದೆ. ಇದನ್ನ್ನೆಲ್ಲ ಓದಿದ ಮೇಲೆ ನಿಮ್ಮ ಆಸಕ್ತಿ ಇನ್ನೂ ಹೆಚ್ಚಾಯ್ತ ? ಸರಿ , ಹಾಗಾದರೆ ಯಾವುದೇ ಪೂರ್ವಾಗ್ರಹಗಳಿಲ್ಲದೆ  ಆರಾಮವಾಗಿ ಹೋಗಿ ಬನ್ನಿ . ಅರಮನೆ ವೀಕ್ಷಣೆ ಜೊತೆಗೆ ಕುದುರೆ ಸಾರೋಟಿನ ಆನಂದವನ್ನೂ ಪಡೆಯಬಹುದು . ಆದರೆ ಫೋಟೋಗ್ರಪಿಯ ಹುಚ್ಚಿದ್ದಲ್ಲಿ ನೀವು ಮತ್ತೊಂದು ಇನ್ನೂರು ತೆರಬೇಕಾದೀತು . 
ಸರಿ ಗೆಳೆಯರೇ , ನಾನಿನ್ನು  ಹೋಗಿ ಬರಲೇ ?  ಶುಭ ದಿನ .    

Thursday, April 12, 2012

ತಿರುಗೆ ಒಮ್ಮೆ ಪ್ರಿಯೆ

ಭಾವ ತೇರಲಿ ಕಳೆದ ಕಾಲ ನಾ
ಸವಿಯ, ನಿನ್ನ ಮಿಲನ
ಎದುರು ಕಾಯುತ ಕೊರಗೋ ಕ್ಷಣಗಳೇ
ಸಾವಿನಾಲಿಂಗನ|1|

ಅಲುಗೋ ಹೂವಲ್ಲಿ ಕಂಡೆ ಪ್ರಿಯೆ
ನೀ ತಿರುಗಿ ನಕ್ಕ ನೆನಪ
ಸವಿಯೊ ಬಯಕೆಯೇ , ಬೆಣ್ಣೆಯೇಕೆ
ತರಲೇ ಚಂದ್ರ, ತುಣುಕ ? |2|

ಎಲ್ಲ ಕಷ್ಟ , ಬಿಸಿ ನಾನು ಮರೆಸುವೆ
ಐಸ ಕ್ಯಾಂಡಿಯಂತೆ
ಕರಗಿ ಹೋಗುವೆ , ನೆನಪ ಸಿಹಿಯುಳಿಸಿ
ಹೊತ್ತು ಜೊತೆಗೆ ಚಿಂತೆ|3|

ನಿನ್ನ ಮಾತೆಲ್ಲ ಗಾನ ಕೋಗಿಲೆ
ಮಾಮರವು? ನಾನೆ ಬರುವೆ
ಒಂದು ನಗುವಿಗೇ ಎಲ್ಲ ಜೀವನ (?)
ಸ್ವರ್ಗ ಎನಿಸಿಬಿಡುವೆ|4|

(ಒಂದು ಟ್ಯೂನ್ಗೆ ರೊಮ್ಯಾಂಟಿಕ್ ಬರ್ಯೋ ಅಂತ ಕೇಳ್ತಿದ್ದ ಗೆಳೆಯ ಶಿಶಿರ . ಆದ್ರೆ ಈ ಸಲನೂ ಅದು ಅದೇ .. )
ತನುವಂತೆ ಮನವು, ಕಳೆ ಕಳೆದು ಒಣಗಿ
ಬೇಸತ್ತು ನೀರ ಕಾದು
ಎಂದು ಬರುವೆಯೋ ಎಂದು ಬೀಳುವುದೊ
ಬಾಳ ಬಿಸಿಗೆ ಸೆಟೆದು

Sunday, April 8, 2012

ಪೀಜಿ ..

ಯಾರಿಗೇಳೋಣ ಪೀಜಿ ಪ್ರಾಬ್ಲಮ್ಮು
ಹಲತರದ ಓನರ ಕೊರತಕ್ಕಿಲ್ಲ ಮುಲಾಮು
ಗೂಡಂಗಿರೋ ರೂಮಲ್ಲೇನೆ ಎಲ್ಲಾ ಸರಂಜಾಮು
ಊಟದ್ದೆಂತೂ ಕೇಳ್ಲೇ ಬೇಡಿ, ದೊಡ್ಠ ಸಲಾಮು |೧|
ಜೇಬಿಕ್ಕತ್ರಿ , ದೊಡ್ಠ ಬೀರು, ಬಿಸಿಯೇ ಅರಿಯದ ಶವರು
ಯಾರೇ ಬರಲಿ, ಮಾತೇ ಟೋಪಿ ಹೊಸತರ ಬಕ್ರ ತಯಾರು
ಕಾಸು ಕಾಸಂತ ಸದಾ ಪೂಸಿ, ಅದು ಕೊಡೋವರ್ಗೇನೆ ವಾಸಿ
ಕೊಟ್ರೆ ಕೆಟ್ಟೆ ಮಾಯ ಸವಾರಿ |೨|