ಪೂರ್ವ ಕತೆ:
@the Top of Nandi Betta |
ಬೆಂಗಳೂರಿಗೆ ಬಂದು ಪೀಜಿ
ಹಿಡ್ದಾಗಿನಿಂದ ವಾರಾಂತ್ಯದಲ್ಲಿ ಎಲ್ಲೂ ಸುತ್ಲಿಲ್ಲ ಅಂದ್ರೆ ಏನೋ ಮಿಸ್ಸಿಂಗು, ಬೋರಿಂಗು ಅನ್ಸೋಕೆ
ಶುರು ಆಗತ್ತೆ. ಮಾಡಕ್ಕೆ ಬೇರೆ ಕೆಲ್ಸ ಇಲ್ಲದೇ ಸುತ್ತೋದು ಅಂತೇನೂ ಅಲ್ಲ..ಆದ್ರೆ ಯಾಕೋ ಗೊತ್ತಿಲ್ಲ
"ದೇಶ ಸುತ್ತು, ಕೋಶ ಓದು ಅಂತಾರಲ್ಲ". ಅದರಲ್ಲಿ ೨ನೇದೇ ಸ್ವಲ್ಪ
ಇಷ್ಟ ಆಗ್ತಿತ್ತು ನಂಗೆ. ಹಿಂಗಿರೋವಾಗ ಬೆಂಗಳೂರಲ್ಲೇ ಇದ್ದು ನಂದಿ ಬೆಟ್ಟಕ್ಕೆ ಹೋಗಿಲ್ಲ ಅಂದ್ರೆ
ಹೆಂಗೆ ಅಂತ ಅನ್ಸಿಬಿಡ್ತು ಒಂದು ವಾರ.
ಕೆಲ ತಿಂಗಳ ಹಿಂದೆ ಹರೀಶಣ್ಣ ಮತ್ತು ತಂಡದವ್ರು ಹೋಗಿದ್ದ ಫೋಟೋ
ನೋಡಿ ನಾನೂ ಹೋಗ್ಬೇಕಿತ್ತು, ಛೆ , ಅಂತ ಆಸೆ ಆಗಿದ್ದೂ
ಸುಳ್ಳಲ್ಲ. ಸರಿ ಅಂತ ಮುಂದಿನ ಶನಿವಾರಕ್ಕೆ
ಅಲ್ಲಿಗೇ ಹೋಗದು ಅಂತ ಫಿಕ್ಸ್ ಮಾಡಿ ಸ್ವಲ್ಪ ಚೇಂಜ್ ಇರ್ಲಿ ಅಂತ FB ಲೊಂದು
Event ಮಾಡಿಕರಿದ್ವಿ..೨-೩ ದಿನ ಆದ್ರೂ ಪ್ರತಿಕ್ರಿಯೆ ನೋಡಿ ಕೂಸು ಹುಟ್ಸಕ್ಕೆ ಮುಂಚೇನೆ
ಕುಲಾವಿ ಹೊಲ್ಸಿದ್ವಾ ಅಂತನೇ ಅನಿಸ್ತಿತ್ತು. ಕೊನೆಗೆ ಗುರುವಾರ, ಮತ್ತೆ
ತಕಾ ಅಂತ ಬೆಂದಕಾಳೂರ ಸೆಕೇಲಿ ಬೆಂದು ಶನಿವಾರ ಮಧ್ಯಾಹ್ನದವರ್ಗೆ ಪಾಚ್ಕೊಳೋಕೆ(ಮಲ್ಗೋಕೆ!!) ಸ್ಕೆಚ್
ಹಾಕಿದ್ದ ಗೆಳೆಯರಿಗೆಲ್ಲಾ ಮೆಸೇಜಾಯ ನಮಃ ಅಂದಾಯ್ತು. ಕೆಲೋರು ಬರ್ತೋನಿ ಅಂದ್ರು. ಕೆಲೋರು ಪ್ರತೀ
ಸಲದಂಗೇ ಕೈಯತ್ತಿದ್ರು. ಕೆಲೋರು ಸರಿ ಮಚಾ, ಶುಕ್ರವಾರ ರಾತ್ರೆ ಹೇಳ್ತೀನಿ
ಅಂದ್ರು. ಇಲ್ಲಾ ಮಗಾ ಊರಿಗೆ ಹೋಗ್ಬೇಕು, ಸೋರಿ ಕಣೋ ಅಲ್ಲಿಗೆ ಹೋಗ್ಬೇಕು,
ಮುಂಚೇನೆ ಪ್ಲಾನ್ ಆಗ್ಬಿಟ್ಟಿದೆ ಅವನನ್ನ ಮೀಟ್ ಮಾಡ್ಬೇಕು ಅನ್ನೋ ತರಾವರಿ ಉತ್ರಗಳೂ
ಬಂದ್ವು. ಒಂದು ವರ್ಷ ಮುಂಚೆ ಪ್ಲಾನ್ ಮಾಡಿದ್ರೂ ಇದೇ ಕತೆ ಬಿಡೋ .. ಕರ್ಮ ಅಂತ ಒಂದ್ಸಲ ಬೇಜಾರ್ ಮಾಡ್ಕಂಡ
ಫ್ರೆಂಡು..ಎಲ್ಲಾದ್ರೂ ಬಿಟ್ ಹೋದ್ರೆ ನನ್ಯಾಕೆ ಕರ್ದಿಲ್ಲ ಅಂತ ಹಿಗ್ಗಾಮುಗ್ಗಾ ಜಾಡಿಸೋ ಇವ್ರುಗಳ್ನ
ಎಲ್ಲಿಗಾದ್ರೂ ಬರ್ತೀರ ಕರದ್ರೆ ಇದೇ ಗೋಳು ಕಣ್ಲಾ
ಅಂದ ಗೆಳೆಯ. ಕೊನೆಗೆ ಆ ಮೆಸೇಜು ಎಲ್ಲೆಲ್ಲೋ ತಿರ್ಗಿ ತಿರ್ಗಿ, ಯಾರ್ಯಾರೋ
ಎಲ್ಲ ಕೇಳಂಗೆ ಆಗಿ ನಿರೀಕ್ಷೆನೇ ಮಾಡ್ದೇ ಇದ್ದ ಹಳೇ ಗೆಳೆಯರೆಲ್ಲಾ ಸಿಕ್ಕು ಒಟ್ಟು ೮ ಜನ ಬೆಟ್ಟ ಹತ್ತೋ
ಭೂಪರು ರೆಡಿ ಆದ್ವಿ ಅನ್ನಿ ಕೊನೆಗೆ :-)
ನಂದಿ ಬೆಟ್ಟ ಬೆಳಗಿಂದು , ಸ್ಕಂದ ಗಿರಿ
ರಾತ್ರೀದು ಅಂದಿದ್ದ ಗೆಳೆಯ ವಿಶು. ಬೆಳ ಬೆಳಗ್ಗೆ ೪:೩೦ ಗೆ ಅಲ್ಲಿಗೆ ಹೋಗಿದ್ವಿ. ಏನು ಚಂದಾ ಇತ್ತು
ಅನ್ನಿ. ಮಂಜು ಬೀಳೋದು ನೋಡೋದೇ ಸ್ವರ್ಗ ಅನ್ನೋ ತರ ಅಲ್ಲಿಗೆ ಹೋದ ಬ್ಲಾಗ್ ಗೆಳೆಯ ಒಬ್ಬ ಬರ್ಕೊಂಡಿದ್ದ.
ಆದ್ರೆ ಅಷ್ಟು ಮುಂಚೆ, ಅದೂ ವಾರಾಂತ್ಯದ ಶನಿವಾರ ಗೆಳೆಯರನ್ನ ಹೊರಡ್ಸೋ ಸೀನೇ
ಇರ್ಲಿಲ್ಲ. ಸರಿ ಅಂತ ೭:೩೦ ಗೆ ಹೊರಡೋದು ಅಂತ ಅಂದ್ವಿ. ಎರ್ಲನ್ನೂ ಸೇರಿಸ್ಕಂಡು ಅಲ್ಲಿಗೆ ಹೋಗಿದ್ದನ್ನ
ಬರದ್ರೆ ಅದೇ ಒಂದು ಲೇಖನ ಆಗ್ಬೋದು. ಈಗಾಗ್ಲೇ ಈ ಲೇಖನ ಓದಕ್ಕೆ ಯಾಕೆ ಶುರು ಮಾಡಿದ್ನೋ ಅಂತ ಬೋರು
ಹೊಡೆದು ಪೇಜು ಬಿಡೋಕೆ ಪ್ಲಾನ್ ಮಾಡ್ತಿರಬಹುದಾದ ನಿಮಗೆಲ್ಲಾ ಇನ್ನೂ ಕೊರೆಯದೇ ನಂದಿ ಬೆಟ್ಟದ ನಿಜವಾದ
ಅನುಭವಕ್ಕೆ ಬರ್ತೀನಿ.
ನಂದಿ ಬೆಟ್ಟ:
ಹೋಗೋಕೆ-ತಿನ್ನೋಕೆ:
ಬೆಂಗಳೂರು ಕೆಂಪೇಗೌಡ
ಬಸ್ ನಿಲ್ದಾಣದಿಂದ ನಂದಿ ಬೆಟ್ಟಕ್ಕೆ ೬:೩೦, ೭:೩೦, ೮:೩೦ ಹೀಗೆ
ಪ್ಲಾಟ್ ಫಾರಂ ೧೧ ರಿಂದ ಘಂಟೆಘಂಟೆಗೂ ಒಂದೊಂದು ಬಸ್ಸಿದೆ. ಅದನ ಬಿಟ್ರೆ ಪ್ರತೀ ಅರ್ಧರ್ಧ ಘಂಟೆಗೆ
ಚಿಕ್ಕಬಳ್ಳಾಪುರಕ್ಕೆ ಬಸ್ಸಿದೆ. ಅಲ್ಲಿಂದ ನಂದಿ ಬೆಟ್ಟಕ್ಕೆ ಖಾಸಗಿ ಅಥವಾ ಸರ್ಕಾರಿ ಬಸ್ಸುಗಳು ಇದೆ.
ಆದ್ರೆ ಖಾಸಗಿ ಬಸ್ಸುಗಳು ನಂದಿ ಬೆಟ್ಟದ ತುದೀ ತನಕ ಹೋಗಲ್ಲ. ನಂದೀ ಬೆಟ್ಟದ ಕ್ರಾಸ್ ಅಂತ ೮ ಕಿ.ಮೀ
ಮುಂಚೇನೆ ನಿಲ್ಸಿ ಬಿಟ್ತಾನೆ. ಅಲ್ಲಿಂದ ತಲಾ ೨೦ ಕೊಟ್ರೆ ಆಟೋಲಿ ಹೋಗ್ಬೋದು. ಹಾಗಾಗಿ ಒಳ್ಳೇ ಐಡಿಯಾ
ಅಂದ್ರೆ ಚಿಕ್ಕಬಳ್ಳಾಪುರದಲ್ಲಿ ಸ್ವಲ್ಪ ಕಾದ್ರೂನೂ ಸರಿ, ನಂದಿ ಬೆಟ್ಟದವರೆಗೆ
ಬರೋ ಸರ್ಕಾರಿ ಬಸ್ಸಲ್ಲೇ ಬರೋದು. ಮತ್ತೆ ನಂದಿ ಬೆಟ್ಟದ ಮೇಲೆ ಮಯೂರ ಅಂತ ಒಂದೇ ಒಂದು ಹೋಟೆಲ್ ಇದೆ
ಅಷ್ಟೇ. ಅಲ್ಲಿ, ಸುತ್ತಮುತ್ತ ಇರೋ ೨-೩ ಚಿರ್ಲೆ ಅಂಗ್ಡಿಗಳಲ್ಲಿ ಐಸ್ ಕ್ಯಾಂಡಿಯಿಂದ
ಹಿಡ್ದು ಎಳನೀರವರೆಗೆ ಎಲ್ಲದ್ರುದ್ದೂ ೨-೩ ಪಟ್ಟು ಹೆಚ್ಗೆ ರೇಟು. ಹಂಗಾಗಿ ಮುಂಚೇನೆ ಏನಾದ್ರೂ ಕಟ್ಟಿಸ್ಕೊಂಡು
ಬಂದ್ರೆ ಅಥವಾ ಕೆಳಗೇನೆ ಏನಾದ್ರು ತಿಂದ್ಕೊಂಡೋ, ಕಟ್ಟಿಸ್ಕೊಂಡು ಹೋದ್ರೆ
ಒಳ್ಳೇದು. ನಂದಿಬೆಟ್ಟ ಈಗ ತೋಟಗಾರಿಕೆ ಇಲಾಖೆ ಅವರ ಕೈಕೆಳಗೆ ಇದೆ. ಹಾಗಾಗಿ ಅದರ ಬಗ್ಗೆ ಮಾಹಿತಿಗಿ
ಇಲ್ಲೂ ನೋಡಬಹುದು..
ಮತ್ತೆ ಸ್ವಲ್ಪ ಕ್ಯಾಸೆಟ್ನ
ರಿವೈಂಡ್ ಮಾಡೋಣ... ಕುಯ್ ಕುಯ್ ಕುಯ್ ಕುಯ್ ಕುಯ್..
ನಂದಿ ಬೆಟ್ಟ ಕ್ರಾಸಿಂದ:
ಚಿಕ್ಕ ಬಳ್ಳಾಪುರದಿಂದ
ಖಾಸಗಿ ಬಸ್ಸಿಗೆ ಬಂದ್ವಿ ನಾವು. ನಂದಿ ಬೆಟ್ಟ ಇಳೀರಿ ಅಂದ. ಇಳಿದ್ವಿ . ಎದ್ರಿಗೆ ನೋಡಿದ್ರೆ ನಂದಿ
ಬೆಟ್ಟ ೮ ಕಿ.ಮೀ ಅಂತ ಬೋರ್ಡು. ಎಲಾ ಇವ್ನ. . ನಮ್ದೂಕಿ ಬರ್ಕಾ ಮಾಡ್ಬುಟ್ನಲ್ಲ, ಎಲಾ ಇಸ್ಕಿ
ಅಂತ ನೋಡ್ತಿರೋ ಹೊತ್ಗೆ ಬಸ್ಸು ದೊಡ್ಬಳ್ಳಾಪುರಕ್ಕೆ ಹೊಂಟೋಯ್ತು. ಆಮೇಲೆ ಸರ್ಕಾರಿ ಸವಾಸ ಮಾಡ್ದೇ
ಇದ್ದಿದ್ದಕ್ಕೆ ಬಯ್ಕಳ್ತಾ ಅಲ್ಲೇ ಕಾದ್ವಿ. ಎಲ್ರನ್ನೂ ಕರ್ಕಂಡು ಅಲ್ಲಿಗೆ ಹೋಗೋ ಹೊತ್ತಿಗೆ ೧೨:೨೦
ಆಗಿತ್ತು ಅಂತ ಬೇರೆ ಹೇಳ್ಬೇಕಿಲ್ಲ. ಅಲ್ಲೇ ಊಟ ಮಾಡೋ ಹೊತ್ತಿಗೆ ಅಂದ್ರೆ ೧ ಘಂಟೆಗೆ ಬಸ್ಸು ಬಂತು.
ಅದ್ರೆಲ್ಲಿ ಹತ್ತಿದ್ದೇ ನೆನ್ಪು. ಬಸ್ಸು ಘಾಟಿಗಳಲ್ಲಿ ತಿರುವು ತಗೊಳ್ಳುವಾಗ ಪಕ್ಕಾ ಮೈಸೂರು ಚಾಮುಂಡಿ
ಬೆಟ್ಟದ್ದೇ ನೆನ್ಪು. ಮಧ್ಯಾಹ್ನ ಆಗಿದ್ರೂ ಬೆಟ್ಟ
ಹತ್ತೋಕೆ ಶುರು ಮಾಡಿದ್ರಿಂದನೋ , ಅತವಾ ಬಸ್ಸಲ್ಲಿ ಇದ್ದಿದ್ದಕ್ಕೋ ಏನೋ
ಸ್ವಲ್ಪನೂ ಸೆಕೆ ಆಗ್ಲಿಲ್ಲ. ಏನು ಬಂಡೆಗಳು, ಏನು ಗಾಳಿ. ಅಬ್ಬಾ ಬೆಂಗಳೂರಿಂದ
ಎಲ್ಲೋ ಹೊರ್ಗಡೇನೆ ಬಂದಂಗೆ ಆಗ್ಬುಡ್ತು. ಯಾವಾಗ ನಂದಿ ಬೆಟ್ಟದ ಬುಡಕ್ಕೆ ಬಸ್ ಬಂದು ನಿಲುಸ್ತೋ ಗೊತ್ತೇ
ಆಗ್ಲಿಲ್ಲ. ಅಲ್ಲಿ ತಲಾ ಐದೈದು ರೂ ಟಿಕೇಟ್ ತಗೊಂಡು ಒಳಗೆ ನಡೆದ್ವಿ. ..
ಮುಂದೇನಾಯ್ತು ಅಂತೀರಾ?
ಒಂದೇ ಸಲ ಎಲ್ಲಾ ಹೇಳಿದ್ರೆ
ವಾಂತಿ ಆಗುತ್ತೆ. ಹಾಗಾಗಿ ಮುಂದಿನ ಕತೇನ ಮುಂದಿನ
ಭಾಗದಲ್ಲಿ ಇಟ್ಕೊಂಡಿದೀನಿ :-)
ಬರಲಿ ಬರಲಿ ಮುಂದಿನ ಪಯಣಕಥನಕೆ ಕಾಯುತ್ತೇನೆ. ನಂದಿ ಬೆಟ್ಟವನು ಮಗದೊಮ್ಮೆ ತೋರಿಸುವ ನಿಮ್ಮ ಪ್ರಯತ್ನಕೆ ನನ್ನ ಮೆಚ್ಚುಗೆ. ನಿರೂಪಣೆ ಹಿತವಾಗಿದೆ.
ReplyDeleteತುಂಬಾ ಧನ್ಯವಾದಗಳು ಚೌಟರೇ. ಇದರ ಎರಡನೇ ಭಾಗವನ್ನೂ ಮುಂದಿಟ್ಟಿದ್ದೇನೆ. ಅದನ್ನೂ ಬಿಡುವಾದಾಗ ಓದಿ ಎಂದು ವಿನಂತಿ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು :-)
Delete