Welcome to Prashantavanam
Friday, April 13, 2012
ಬೆಂಗಳೂರು ಅರಮನೆ
ಬೆಂಗಳೂರಲ್ಲಿ ಲಾಲ್ ಬಾಗ್ , ವಿಧಾನ ಸೌಧ, ಕಬ್ಬನ್ ಪಾರ್ಕ್ ಗೊತ್ತು. ಇದೆಲ್ಲಿಂದ ಬಂತಪ ಅರಮನೆ ಅಂದ್ಕಂಡ್ರಾ ? ಮೈಸೂರು ಅರಮನೆ ಬಗ್ಗೆ ಬರೆಯೋಕೆ ಪೀಟಿಕೆ ಹಾಕ್ತಿದೀನಿ ಅಂದ್ಕಂಡ್ರಾ ? ಇಲ್ಲ ಸ್ವಾಮಿ . ನಾ ಹೇಳೋಕೆ ಹೊರಟಿರೋದು ಅರಮನೆ ರೋಡಲ್ಲಿರೋ ಮಹಾರಾಜರ ಬೇಸಿಗೆ ಅರಮನೆ ಬಗ್ಗೆನೇ . ಟಿಪ್ಪು ಅರಮನೆ ಅಂತ ಮಾರ್ಕೆಟ್ ಹತ್ರ ಇದ್ಯಲ ಅಂದ್ರ್ರ ? ಅದ್ರ ಬಗ್ಗೆನೂ.. ಹರಿಕತೇನೆ ನಿಮಗೆ ನಿದ್ದೆ ತರಿಸೋ ಮೊದ್ಲು ಅರಮನೆಗೆ ವಾಪಾಸ್ ಬರೋಣ.
ಹಿಂದಿನ ವಾರ ನಾವು ಗೆಳೆಯರು ಬೆಂಗಳೂರು ಅರಮನೆಗೆ ಹೋಗಿದ್ವಿ .ಮೂರು ಬಣ್ಣದ ರಕ್ಷಕರ ಭದ್ರತೆ ಕಾಣ್ತಿತ್ತು ಹೊರಗಿಂದ . ಗೂಗಲ್ ದೈವ ದಯಪಾಲಿಸಿದ್ದ ಚಿತ್ರಗಳನ್ನ್ನು ನ್ನೋಡಿಯೇ ಕೆರಳಿದ್ದ ನಮ್ಮ ಕುತೂಹಲ ಪೋಲಿಸ್ ಮಾವಂದಿರ ದರ್ಶನದಿಂದ ಇನ್ನು ಹೆಚ್ಚಾಯ್ತು. ಹೊರಗಿನಿಂದಲೂ ಚಿತ್ರ ತೆಗೆಯಕ್ಕೆ ಬಿಡಲಿಲ್ಲ ಅಲ್ಲಿ ಸಿಬ್ಬಂದಿ. ಅದರೂ ಮೊಬೈಲ್ ಕ್ಯಾಮರ ಸಮಾಧಾನಿಸುತ್ತ ಒಳ ಸಾಗಿದ ನಮಗೆ ಮತ್ತೊಂದು ಬೇಸರ ಕಾದಿತ್ತು. ಪ್ರವೇಶ ಶುಲ್ಕ ೨೦೦ ರೂ. ಮೈಸೂರು ಅರಮನೆಯಲ್ಲೂ ನೂರರ ಮೇಲಿಲ್ಲ . ತಾಜಮಹಲ್ , ಕೆಂಪುಕೋಟೆ ಹೀಗೆ ಭಾರತದಲ್ಲೇ ಭಾರತೀಯರಿಗೆ ಎಲ್ಲೂ ಇರದಷ್ಟು ಶುಲ್ಕ ಇಲ್ಲಿ !! ಆದರೆ ಬರೋದು ಬಂದಾಗಿದೆ .ನೋಡ್ಕೊಂಡೆ ಹೋಗೋದು ಅಂತ ತೀರ್ಮಾನ ಮಾಡಿದ್ವಿ. ಗೆಳೆಯರ ಹತ್ರ ಇದ್ದ ಬದ್ದ ದುಡ್ಡೆಲ್ಲ ಗುಡ್ಡೆ ಹಾಕಿ ಅಂತೂ ಒಳಗೆ ಸೇರಿದ್ವಿ. ಅಲ್ಲಿರೋ ಎಲ್ಲದರ ಮಾಹಿತಿ ಇದ್ದ ಆಡಿಯೋ ಗೈಡ ಉಚಿತ ಅನ್ನೋದಷ್ಟೇ ಅವಾಗಿದ್ದ ಸಮಾಧಾನ.
ಮೊದಲ್ನೇ ಜಾಗ ಅಂದ್ರೆ ಮತ್ತೆ ಹೊರಬಾಗಿಲಿಗೆ ಬಂದ್ವಿ. ಈ ಅರಮನೆಯನ್ನು ೧೮೭೩ರಲ್ಲಿ ಕಟ್ಟಲಾಯಿತಂತೆ. ಅದನ್ನು ಕಟ್ಟಿದ ಪರಿ, ಆಗಿನ ರಾಜ ವೊಡೆಯರರ ಮೈಸೂರು ಸಂಸ್ಥಾನದ ಪರಿ, ನೀರಾವರಿಯಿಂದ , ಅಭಿವೃದ್ದಿ ಯೋಜನೆಗಳೆಡೆಗೆ ಸಂಸ್ಥಾನ ಗಮನ ಹರಿಸಿದ ರೀತಿಯನ್ನು ಕೇಳುತ್ತ ಅಭಿಮಾನ ಕನಕಣದಲ್ಲೂ ಉಕ್ಕಿದ ಅನುಭವ. "ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು " .. ಹಾಡಿನ ಹಿಮ್ಮೇಳ ಕೇಳಿದಂತಾಯ್ತು ಒಮ್ಮೆ .
ಹಾಗೇ ಒಳಸಾಗುತ್ತಿದ್ದಂತೆ ಮೇಲೇರಲು ಮೆಟ್ಟಿಲುಗಳು ನಿಮ್ಮನ್ನು ಸ್ವಾಗತಿಸುತ್ತದೆ. ಅದಕ್ಕಿಂತ ಮುಂಚೆ ಒಂದು ಭವ್ಯ ಸಭಾ ಭವನ. ಮನೋರಂಜನ ಕಾರ್ಯಕ್ರಮಗಳೆಲ್ಲ ಇಲ್ಲಿಯೇ ನಡೆಯುತ್ತಿತ್ತಂತೆ. ಇಲ್ಲಿ ಸುಂದರ ಮರದ ಕಂಬಗಳು , ವಿನ್ಯಾಸ ಕಣ್ಮನ ತುಂಬಿದವು . ಹೊರಬರುತ್ತಿದ್ದಂತೆಯೇ ಆಗಿನ ಕಾಲದ ಲಿಪ್ತನ್ನು ನೋಡಿ ಮತ್ತೊಮ್ಮೆ ಆಗಿನ ತಂತ್ರಜ್ಞಾನದ ಬಗ್ಗೆ ಹೆಮ್ಮೆಯಾಯಿತು . ವಾಪಾಸ್ ಬಂದು ಮೆಟ್ಟಿಲು ಏರುವಲ್ಲಿ ರಾಜ ಅಮ್ಮಣ್ಣಿಯವರ ಭಾವಚಿತ್ರ ಇದೆ. ಅ ಚಿತ್ರದ ನಗು ಮೊನಾಲಿಸ ನಗುವನ್ನು ಹೋಲುತ್ತದೆ ಅನ್ನುತ್ತಾರಂತೆ ವಿದ್ವಾಂಸರು. ಅಲ್ಲೇ ಹತ್ತುತ್ತಾ ಆಗಿನ ರಾಜರ ಲಾಂಚನ ಗಂಡಭೇರುಂಡ ವನ್ನೂ , ಆನೆ ತಲೆ-ಸಿಂಹದ ದೇಹ ಹೊಂದಿದ್ದ ಪ್ರಾಣಿ, ಅದರ ಮೇಲೆ ಸಿಂಹದ ದೇಹ-ಕೋಣದ ದೇಹ ಹೊಂದಿದ್ದ ಪ್ರಾಣಿಯ ಚಿತ್ರವನ್ನೂ ನೋಡಿದೆವು. ಅದು ಅಪಾರ ಶಕ್ತಿಯ , ಸದಾ ವಿಜಯದ ದ್ಯೋತಕವಂತೆ . ಅಲ್ಲೇ ಮೇಲುಗಡೆ ರಾಜಾ ಒಡೆಯರರ ತಂದೆ ಭೇಟೆಯಾಡಿದ ಆನೆಯ ತಲೆ ಇದೆ. ಮೆಟ್ಟಿಲುಗಳ ಅಕ್ಕ ಪಕ್ಕ ರಾಜರ ಫೋಟೋಗಳು , ಅವರು ದ್ವಿತೀಯ ಮಹಾಯುದ್ದದ ಸಮಯದಲ್ಲಿ ಬ್ರಿಟಿಷರಿಗೆ ಸಹಕರಿಸಿದ್ದಕ್ಕೆ ಬ್ರಿಟಿಷರು ಅವರಿಗೆ ನೀಡಿದ ಸಮ್ಮಾನದ ಚಿತ್ರಗಳು , ಆ ಸಂಬಂಧಿ ಶ್ರಾವ್ಯವನ್ನು ಆನಂದಿಸುತ್ತಾ ಮುಂದೆ ಸಾಗಿದೆವು. ಇಲ್ಲಿ ನಾವು ಗೋಥಿಕ, ತೋದರ್ ಶೈಲಿಗಳ ಸಂಮಿಳನವನ್ನು ಕಾಣಬಹುದು ಎಂದು ಅರಿತೆವು.
ಅಲ್ಲಿಂದ ಮುಂದೆ ಕಂಡಿದ್ದು ದರ್ಬಾರ್ ಹಾಲ್. ಇದನ್ನು ವಿಕ್ಟೋರಿಯನ್ -ಎದ್ವರ್ಡಿಯನ್ ಶೈಲಿಯಲ್ಲೂ ಇದರ ಕಿಟಕಿಗಳನ್ನು ಗೋಥಿಕ್ ಶೈಲಿಯಲ್ಲೂ ಕಟ್ಟಲಾಗಿದೆ. ಅದರ ನಡುಮಧ್ಯೆ ಒಂದು ಬೃಹತ್ತಾದ ಕನ್ನಡಿಯಿದೆ ಈಗ . ಮುಂಚೆ ಆ ಜಾಗದಲ್ಲಿ ರಾಜರು ಕುಳಿತು ದರ್ಬಾರ್ ನಡೆಸುತ್ತಿದ್ದರಂತೆ . ಅದರ ಎದುರಿನ ಅಟ್ಟದಲ್ಲಿ ಅಂದಿನ ರಾಣಿಯರು ಪರದೆಯ ಹಿಂದೆ ನಿಂತು ಸಭೆಯನ್ನು ವೀಕ್ಷಿಸುತ್ತಿದ್ದರಂತೆ . ಅಲ್ಲಿನ ರಾಜರ ಶಸ್ತ್ರಾಸ್ತ್ರ ಕವಚಗಳ ವಿನ್ಯಾಸ, ಸುಂದರ ಗಾಜಿನ ತೂಗುದೀಪಗಳು, ಕುಸುರಿ ಕಲೆಗಳನ್ನು
ನೋಡುವುದೇ ಚೆಂದ . ಇಲ್ಲಿ ತಾಯಿ ಚಾಮುಂಡಿಗೆ ನಮಿಸುವುದನ್ನು ಮರೆಯದಿರಿ . ಅಂದ ಹಾಗೆ ಇದನ್ನು ನಿರ್ಮಿಸಿದ್ದು ಕಲಕತ್ತೆಯ ಲೆಸರಸನ್ ಎಂಬ ಕಂಪೆನಿಯಂತೆ. ಅದರ ನಂತರ ಅಲ್ಲೇ ಇದ್ದ ಕಲ ಪ್ರದರ್ಶನವನ್ನು, ದಸರೆಯ ಕಾಲದ ಫೋಟೋಗಳನ್ನೂ ನೋಡಿದೆವು.ಅಲ್ಲಿಂದ ಮುಂದೆ ಸಾಗಲು ಒಂದು ಓಣಿಯಷ್ಟೇ..
ಅದನ್ನು ದಾಟಿ ಈಚೆ ಬರುತ್ತಿದ್ದಂತೆ ಮತ್ತೊಂದು ಅಚ್ಚರಿ. ರಾಜವಂಶದ ಚಿತ್ರ, ಯುವರಾಜನ ಬಾಲ್ಯದ ಚಿತ್ರಗಳು ನಮ್ಮನ್ನು ದಶಕಗಳ ಕಲ ಹಿಂದೊಯ್ದವು . ಅವರ ನುಡಿಗಳಲ್ಲೇ ಅವರ ನೆನಪುಗಳನ್ನು ಕೇಳುವ ಸವಿ ಇನ್ನೂ ಅದ್ಭುತ . ನಂತರ ರಾಜರ ಹುಲಿ, ಆನೆ ಭೇಟೆಯ ಚಿತ್ರಗಳು , ವಿವರಗಳೊಂದಿಗೆ ಶೋಭಿಸುತ್ತಿದ್ದವು . ಆ ಸಮಯದಲ್ಲಿ ಮುಖತ ವರದಿ ಮಾಡಿದ ವರದಿಗಾರ್ತಿಯ ದನಿಯೂ ಅಲ್ಲಿ ಲಭ್ಯ. ನಂತರ ನಾವು Rape of the Daughters of Leucippus(Rubens Baroque) , Banquet of Cleopatra (Gerald Lairesse)-1743.. ಹೀಗೆ ಐದು ೧೬, ೧೭ನೆ ಶತಮಾನದ ಜಗತ್ರಸಿದ್ದ ವಿದೇಶಿ ಕಲಾವಿದರ ವರ್ಣ ಚಿತ್ರಗಳನ್ನೂ, ರಾಜ ರವಿವರ್ಮರ ಸೀತೆ ಮೊದಲಾದ ಚಿತ್ರಗಳನ್ನೂ ನೋಡಿದೆವು. ಅದಾದ ನಂತರ ಕೆಳಗಿಳಿಯೋ ಮೆಟ್ಟಿಲುಗಳು ಎದುರಾದವು . ಇಲ್ಲಿರುವ ಹೂಗಳ ರಚನೆಯಲ್ಲಿ ಒಂದು ಇನ್ನೊಂದರಂತೆ ಇಲ್ಲದಿರುವುದು ಒಂದು ಆಶ್ಚರ್ಯವೇ .
ಕೆಳಗಿಲಿಯುತಿದ್ದಂತೆ ದಿವಾನರ ಚಿತ್ರ , ಯುವರಾಣಿಯ ಬಾಲ್ಯದ ಚಿತ್ರಗಳು , ಅವರ ಬಾಲ್ಯದ ನೆನಪುಗಳ ಸವಿಯಲ್ಲಿ ಮುಳುಗೇಳುವುದನ್ನು ಕೇಳುವುದೊಂದು ಅನಿರ್ವಚನೀಯ ಅನುಭವ. ಅದಾದ ನಂತರ ರಾಣಿಯರ ಕಥಾ ಕಾಲಕ್ಷೇಪದ ಜಾಗ , ಕಾರಂಜಿಗಳನ್ನೂ , ಅಶ್ವಾರೋಹಿಯ ತೂಕ ಅಳೆವ ಯಂತ್ರ ಮತ್ತಿತರ ಸೋಜಿಗಗಳನ್ನು , ಸೀರೆ ಮನೆಯನ್ನೂ ನೋಡಿದೆವು . ರಾಜರ ಉಟದ ಕ್ರಮ , ತಟ್ಟೆ, ಮಹಿಕೆಯರ ಉಡುಗೆ ತೊಡುಗೆಗಳ ಕ್ರಮಗಳನ್ನೂ ನೋಡಿ , ಕೇಳಿ ಆನಂದಿಸಿದೆವು. ಕೊನೆಯ ಮೆಟ್ಟಿಲುಗಳನ್ನು ಇಳಿವ ಮುಂಚೆ ಸಿಗುವ ಇರುವ ಚಿತ್ರಗಳು ರಸಿಕರ ಕಣ್ಸೆಳೆಯದೆ ಇರಲಾರವು . ಕಿವಿಗೆ ಹಾಕಿದ್ದ ಶ್ರಾವ್ಯ ಸಾಧನವನ್ನ್ನು ಮರಳಿಸುವಾಗ ಏನೋ ಬೇಸರ .. ಅಮೂಲ್ಯ ಇತಿಹಾಸವನ್ನು ಹೇಳುತ್ತ ಹೇಳುತ್ತ ಗುರುವೇ ಆಗಿ ಮನ ಮುಟ್ಟಿದ್ದ ಆತ್ಮಿಯ ಗೆಳೆಯನಿಗೆ ವಿದಾಯ ಹೇಳಲೇ ಬೇಕಾದಂತಹ ಸಂಕಟ.
ಹೇಳೋ ಉತ್ಸಾಹದಲ್ಲಿ ನಿಮಗೆ ಅಲ್ಲಲ್ಲಿ ಬೋರು ಹೊಡಿಸಿದೆನೆ ? ಆಗಿದ್ದರೆ ಕ್ಷಮಿಸಿರಿ ಎಂಬ ಕೋರಿಕೆಯೊಂದಿಗೆ ಕೊನೆ ಮಾತುಗಳು. ನಾನು ಹೇಳಿದ್ದಕ್ಕಿಂತ ಹೇಳಲಾರದವು ಇನ್ನೂ ಹಲವಿವೆ ಅಲ್ಲಿ. ಈ ಅರಮನೆ ಬಂಕಿಂಗ್ಹ್ಯಾಮ್ ಅರಮನೆಯ ನಕಲು ಎಂಬ ಅಭಿಪ್ರಾಯವನ್ನ್ನು ವಿರೋಧಿಸುವ, ಇದರ ಸ್ವಂತಿಕೆಯನ್ನು ಸಮರ್ಥಿಸುವ ಅಂಶಗಳ ವಿವರಣೆ, ಆಗಿನ ಕಾಲದ ಪತ್ರಿಕೆಗಳ ಝಲಕ್.. ಹೀಗೆ ಹತ್ತು ಹಲವು ಸ್ವಾರಸ್ಯಕರ ಅಂಶಗಳು ಕಾಣಸಿಗುತ್ತದೆ. ಇದನ್ನ್ನೆಲ್ಲ ಓದಿದ ಮೇಲೆ ನಿಮ್ಮ ಆಸಕ್ತಿ ಇನ್ನೂ ಹೆಚ್ಚಾಯ್ತ ? ಸರಿ , ಹಾಗಾದರೆ ಯಾವುದೇ ಪೂರ್ವಾಗ್ರಹಗಳಿಲ್ಲದೆ ಆರಾಮವಾಗಿ ಹೋಗಿ ಬನ್ನಿ . ಅರಮನೆ ವೀಕ್ಷಣೆ ಜೊತೆಗೆ ಕುದುರೆ ಸಾರೋಟಿನ ಆನಂದವನ್ನೂ ಪಡೆಯಬಹುದು . ಆದರೆ ಫೋಟೋಗ್ರಪಿಯ ಹುಚ್ಚಿದ್ದಲ್ಲಿ ನೀವು ಮತ್ತೊಂದು ಇನ್ನೂರು ತೆರಬೇಕಾದೀತು .
ಸರಿ ಗೆಳೆಯರೇ , ನಾನಿನ್ನು ಹೋಗಿ ಬರಲೇ ? ಶುಭ ದಿನ .
Subscribe to:
Post Comments (Atom)
ಚೆನ್ನಾಗಿ ಬರದ್ದೆ ಪ್ರಶಸ್ತಿ :)
ReplyDeleteಧನ್ಯವಾದಗಳು :-)
Deleteidanna nODbEku anta bahaLa dinadinda aase ide. thanks nimage. aadroo 200 rupayi jaasti aaytu maraya !
ReplyDeleteಧನ್ಯವಾದಗಳು :-) ಎಂತ ಮಾಡನ ಮಾರಾಯ. ಹೋಗಕ್ಕು ಅಂದ್ರೆ ಹೋಗಕ್ಕಪ :ಫ್
Deleteಒಳ್ಳೆ ಮಾಹಿತಿ..ಬರೆದಿದ್ದೂ ಚೆನ್ನಾಗಾಯ್ದು.
ReplyDeleteDhanyavAdagaLu manamuktA avare :-)
Delete