Amruta Sarovara |
ಅಮೃತ ಸರೋವರ:
ನಂದಿ ಬೆಟ್ಟಕ್ಕೆ ಬರೋ ಪ್ರವಾಸಿಗರನ್ನ ಸ್ವಾಗತಿಸೋದು ಟಿಪ್ಪು ಬೇಸಿಗೆ ತಂಗುದಾಣ ಅತವಾ ಬೇಸಿಗೆ ಅರಮನೆ. ಬರುವಾಗ ಅದಕ್ಕೆ ಬಂದರಾಯಿತು ಎಂದು ಮುಂದೆ ಸಾಗಿದಾಗ ನಮ್ಮನ್ನು ಸ್ವಾಗತಿಸಲು ಸಿದ್ದವಾಗಿದ್ದು ಮಾನಸ ಸರೋವರ. ಇಲ್ಲಿ ವರ್ಷವಿಡೀ ನೀರು ಇರುತ್ತಂತೆ. ಅದರ ಹಿಂಬದಿ ಸಮಾಧಿಗಳಿವೆ. ಅವುಗಳ ಪಕ್ಕದಿಂದ ಟಿಪ್ಪು ಅರಮನೆಗೆ ಇಳಿದು ಹೋಗಬಹುದು.
Garden near Amruta Sarovara |
ಅತವಾ ಬಲ ಬದಿಯಿಂದ ಹೋಗುವ ದಾರಿಯಲ್ಲಿ ಸಾಗಿ ನಂದಿ ಬೆಟ್ಟದ ತುದಿಯತ್ತ ಹತ್ತಲಾರಂಭಿಸಬಹುದು. ಅಮೃತ ಸರೋವರದ ಬಳಿ ಕುಳಿತು, ಅದರ ಪಕ್ಕದಲ್ಲಿರುವ ಉದ್ಯಾನದ ಬಳಿ ಕುಳಿತು(ಉದ್ಯಾನದ ಒಳಗೆ, ಸರೋವರದ ಒಳಗೆ ಇಳಿಯುವುದು ನಿಷಿದ್ದ) ಅಲ್ಲಿ ಬೀಸುವ ತಂಗಾಳಿಯನ್ನು ಆನಂದಿಸಬಹುದು.
Antar Gange |
ಅಮೃತ ಸರೋವರದ ನಂತರ ಹಾಗೆಯೇ ಮುಂದೆ ಮರಗಳ ನೆರಳಲ್ಲಿರುವ ಹಾದಿಯಲ್ಲಿ ಸಾಗಿದರೆ ಮೇಲಕ್ಕೆ ಹತ್ತುವ ಮೆಟ್ಟಿಲುಗಳು ಸಿಗುತ್ತವೆ. ಅದರಲ್ಲಿ ಹತ್ತುತ್ತಾ ಸಾಗಿದರೆ ಮೊದಲು ಸಿಗುವುದು ಅಂತರಗಂಗೆ. ಅಲ್ಲಿ ಬಂಡೆಗಳ ಕೆಳಗಿನಿಂದ ಉದ್ಭವಿಸಿರುವ ಅಂತರಗಂಗೆಯನ್ನು ಕಾಣಬಹುದು. ಅದರೊಳಕ್ಕೆ ಇಳಿಯಲು ಮೆಟ್ಟಿಲುಗಳಿವೆ. ಆದರೆ ಬೇಲಿ ಏನೂ ಇಲ್ಲದ ಕಾರಣ ಅದರ ಸ್ವಚ್ಛತೆ ಅಷ್ಟು ಚೆನ್ನಾಗಿಲ್ಲ.
ಹಾಗೇ ಹತ್ತುತ್ತಾ ಹತ್ತುತ್ತಾ ಕವಲುಗಳು ಸಿಗುತ್ತವೆ. ಅವುಗಳಲ್ಲೆನ್ನಾದರೂ ಸಾಗಿದರೆ ಕಾಡಿನ ಮಧ್ಯೆ ಎಲ್ಲಿ ಕಾಣೆಯಾಗುತ್ತೀರ ಎಂದು ಹೇಳುವುದು ಕಷ್ಟ. ಹಾಗಾಗಿ ಮೆಟ್ಟಿಲುಗಳು ಇರುವ ಕಡೆ ಸಾಗುವುದೇ ಉತ್ತಮ. ಮಧ್ಯೆ ಎಲ್ಲಾದರೂ ಸಂಜೆ ಆದರೆ ಕಳೆದು ಹೋಗದಿರಲೆಂದು ಅಲ್ಲಲ್ಲಿ ಸೋಲಾರ್ ಮಾಸ್ಕ್ ದೀಪಗಳನ್ನೂ ಹಾಕಿದ್ದಾರೆ. ಹಾಗಾಗಿ ಎಲ್ಲಿಯವರೆಗೆ ಆ ದೀಪಗಳು ಸಿಗುತವೋ ಅಲ್ಲಿಯವರೆಗೆ ನೀವು ಸರಿಯಾದ ದಿಸೆಯಲ್ಲೇ ಇದ್ದೀರೆಂದು ಅರ್ಥ:-)
ದೇವಸ್ಥಾನಗಳ ಆರಂಭ
ಬೆಟ್ಟ ಹತ್ತುತ್ತಾ, ಮಾತಾಡುತ್ತಾ ತಂಪಾಗಿ ದಾರಿಯಲ್ಲಿ ಸಾಗಿದ ನಮಗೆ ಬೆಟ್ಟದ ತುದಿ ಬಂದಿದ್ದೇ ತಿಳಿಯಲಿಲ್ಲ. ಅಲ್ಲಿಗೆ ಮೆಟ್ಟಿಲಲ್ಲಿ ಹತ್ತೋ ಬದಲು ವಾಹನಗಳ ದಾರಿಯಲ್ಲೂ ಬರಬಹುದು. ಒಳ್ಳೇ ಟಾರ್ ರೋಡೇ ಮಾಡಿದ್ದಾರೆ. ಅದರಲ್ಲಿ ಈ ಮಜ ಇಲ್ಲ ಬಿಡಿ. ಮೇಲಕ್ಕೆ ಹತ್ತುತ್ತಿದ್ದಂತೆ ಅಲ್ಲಿ ಬಿದಿರಿನ ಅಟ್ಟಣಿಗೆಗಳನ್ನು ಮಾಡಿದ್ದಾರೆ. ಅದರ ಮೇಲೆ ಹತ್ತಿ ಸುತ್ತಣ ಪ್ರಕೃತಿಯನ್ನು ಆನಂದಿಸಬಹುದು.
Yoga Nandeeshwara Temple |
ದೇವಾಲಯಗಳಲ್ಲಿ ಮೊದಲು ಸಿಗುವುದು ವೀರಾಂಜನೆಯ ದೇವಸ್ಥಾನ. ಆಂಜನೇಯನಿಗೆ ಕೈ ಮುಗಿದು ಅಲ್ಲೇ ಸ್ವಲ್ಪ ಹೊತ್ತು ಕೂತೆವು. ಹೊರಗೆ ಕಲ್ಲು ಕಾದ ಕಾವಲಿಯಂತೆ ಇದ್ದರೂ ದೇವಸ್ಥಾನದ ಒಳಗೆ ಮುಂಜಾವಿನ ಮಂಜಂತೆ ತಂಪಾಗಿತ್ತು. ಹಾಗೇ ಬಲಗಡೆ ಇದ್ದ ಗಣಪನಿಗೂ ಕೈ ಮುಗಿದು ಆರತಿ, ತೀರ್ಥ ಸ್ವೀಕರಿಸಿ ಮತ್ತೆ ಮೇಲೆ ಹತ್ತಿದೆವು.
One of the Statues .. |
ಅಲ್ಲಿಂದ ಹಾಗೆಯೇ ಮುಂದೆ ಸಾಗಿದಾಗ ಸಿಕ್ಕಿದ್ದು ಇಲ್ಲಿನ ಪ್ರಧಾನ ಆಕರ್ಷಣೆ ಯೋಗ ನಂದೀಶ್ವರ ದೇವಸ್ಥಾನ. ದೇವಸ್ಥಾನ ಚೆನ್ನಾಗಿದೆ. ಹಳಗನ್ನಡದ ಲಿಪಿಗಳು, ರಾಜರ ಕಾಲದ (ಚೋಳ ? ) ವಿಗ್ರಹಗಳು ಇಲ್ಲಿವೆ. ಒಳಗಡೆ ಫೋಟೋ ತೆಗೆಯುವ ಹಾಗಿಲ್ಲದ ಕಾರಣ ಅಲ್ಲಿನ ಚಿತ್ರಣ ಹಾಕಲಾಗಿಲ್ಲ. ದೇವರ ಮುಂದೆ ಹಾಗೇ ಕೈ ಮುಗಿದು ನಿಂತುಕೊಂಡರೆ ಅಲ್ಲಿವರೆಗೆ ಹತ್ತಿ ಬಂದ ಸುಸ್ತೆಲ್ಲಾ ಕ್ಷಣದಲ್ಲೇ ಮಾಯ. ಅಲ್ಲೇ ಒಮ್ಮೆ ಪ್ರದಕ್ಷಿಣೆ ಹಾಕಿ ದೇವಾಲಯದ ಆವರಣದಲ್ಲೇ ಇದ್ದ ಪುಟ್ಟ ಪುಷ್ಕರಿಣಿಯನ್ನೂ ನೋಡಿದೆವು. ನಂತರ ಕಾಲೆಲ್ಲಾ ಸುಡುತ್ತಿದ್ದರಿಂದ ಹೆಚ್ಚು ಹೊತ್ತು ಹೊರಗೆ ನಿಲ್ಲದೇ ಮತ್ತೆ ನೆರಳಿಗೆ ಬಂದೆವು.
Nandi Betta Top |
ಹಾಗೇ ಮುಂದೆ ಸಾಗಿದಾಗ ಸಿಕ್ಕಿದ್ದು ಟಿಪ್ಪು ಡ್ರಾಪ್.. ಇದು ಇಲ್ಲಿನ ಅತೀ ಎತ್ತರದ ಪ್ರದೇಶ. ಇಲ್ಲಿ ಗಾಳಿ ಬೀಸುವುದು, ಇಲ್ಲಿಂದ ಕೆಳಗಿನ ವಿಹಂಗಮ ದೃಶ್ಯ ಆನಂದಿಸುವುದೇ ಒಂದು ಚಂದ. ಇಲ್ಲೊಂದು ಸ್ವಲ್ಪ ಚಿತ್ರಗಳನ್ನು ತೆಗೆದ ನಂತರ ಅಲ್ಲೇ ಮತ್ತೆ ಸುತ್ತಲಾರಂಭಿಸಿದೆವು. ಟಿಪ್ಪು ಡ್ರಾಪಿನಿಂದ ಕೆಳಗೆ ಶತ್ರುಗಳನ್ನ ಅವನು ಬೀಳಿಸುತ್ತಿದ್ದರಿಂದ ಅದಕ್ಕೆ ಆ ಹೆಸರೆಂದು ಅನೇಕರು ಹೇಳುತ್ತಾರೆ. ಅಲ್ಲಿಂದ ನಾವು ಟಿಪ್ಪು ಡ್ರಾಪಿನ ಬದಿಯೇ ಇರುವ ತಡೆಗೋಡೆಯ ಬಳಿ ಬಲಕ್ಕೆ ಇಳಿಯುತ್ತಾ ಸಾಗಿದೆವು.
Tippu Drop |
ಅರ್ಕಾವತಿ ನದಿ ಉಗಮ ಸ್ಥಾನ
A View from the Top |
ಅಲ್ಲಿಂದ ಅತ್ತ ಹೋಗದೆ ಪಕ್ಕದಲ್ಲಿದ್ದ ಬಳಸುದಾರಿಯಲ್ಲಿ ಹೋಟೇಲ್ ಮಯೂರದತ್ತ ಸಾಗಿದೆವು. ಅಲ್ಲೇ ಒಂದು ಮಕ್ಕಳ ಪಾರ್ಕ್ ಇದೆ.ಅಲ್ಲಿ ಆಡುತ್ತಿರೋ ಮಕ್ಕಳು, ಮುದುಕರು ಎಲ್ಲಾ ಕಾಣುತ್ತಾರೆ. ಅಲ್ಲೂ ಕುಳಿತು ವಿಶ್ರಮಿಸಬಹುದು . ಅದರ ಎದುರಿನ ಅಂಗಡಿಯಲ್ಲಿ ಐಸ್ ಕ್ಯಾಂಡಿಯ ಮೂಲಕ ಸ್ವಲ್ಪ ದಾಹ ತೀರಿಸಿಕೊಂಡು ಮತ್ತೆ ಮುಂದೆ ಸಾಗಬಯಸಿದೆವು. ಅಲ್ಲಿಂದ ನಂದಿಯನ್ನು ನೋಡಬೇಕೆಂದು ಗೊತ್ತಿತ್ತು . ಆದರೆ ಎಲ್ಲಿ? ಹೀಗೇ ರಸ್ತೆಯಲ್ಲಿ ಮುಂದೆ ಸಾಗಿ ಅಂದರು ಅಲ್ಲಿ...
Nelli Kayi Basavanna Mantapa |
ನಂದಿಬೆಟ್ಟದ ನೆಲ್ಲಿಕಾಯಿ ಬಸವಣ್ಣ, ಬ್ರಹ್ಮಾಶ್ರಮ
ಹಾಗೇ ಸಾಗಿದಾಗ ನೆಲ್ಲಿಕಾಯಿ ಬಸವಣ್ಣನಿಗೆ ಹೋಗೋ ದಾರಿ ಎಂದು ಬೋರ್ಡು ಕಂಡಿತು . ಅಲ್ಲೇ ಇಳಿದಾಗ ಮೊದಲು ಸಿಕ್ಕಿದ್ದು ಮುನೇಶ್ವರ ಸ್ವಾಮಿಯ ದೇವಸ್ಥಾನ. ಅಲ್ಲೇ ಕೈಮುಗಿದು ಮುಂದೆ ಸಾಗಿದಾಗ ದೂರದಲ್ಲಿ ಮಂಟಪವೊಂದು ಕಂಡಿತು. ನೋಡಿದರೆ ಅದರೊಳಗೊಂದು ದೊಡ್ಡ ನಂದಿ. ಅದರ ಎದುರಿಗೆ ನೆಲ್ಲಿಮರ. ಅದಕ್ಕೆ ಕಟ್ಟಿದ ಬಳೆ, ಪ್ಲಾಸ್ಟಿಕ್ ಕೊಟ್ಟೆ..
ಹೀಗೆ ನೂರಾರು ಹರಕೆಗಳು.. ಆ ಮರದ ಎದುರಿಗೆ ನಂದಿಯಿದ್ದರಿಂದಲೇ ಅದಕ್ಕೆ ಆ ಹೆಸರಂತೆ.
Brahmashrama |
ಅಲ್ಲೇ ಪಕ್ಕದಲ್ಲಿ ಬ್ರಹ್ಮಾಶ್ರಮ ಅಂತ ಇದೆ. ಅಂದರೆ ಬಂಡೆಯ ಮಧ್ಯದ ಗವಿಯಂತೆ. ಈಗ ಸಿಮೆಂಟಿನ ನೆಲವನ್ನೂ ಮಾಡಿದ್ದಾರೆ. ಈಗ ಪಾಳು ಬಿದ್ದಿರುವ ಅಲ್ಲಿ ಮುಂಚೆ ಗಾಂಧೀಜಿಯವರು ೪೫ ದಿನಗಳ ಕಾಲ ತಂಗಿದ್ದರು ಎಂದೂ ಪ್ರತೀತೆಯಿದೆ. ಸತ್ಯಾಸತ್ಯತೆ ಏನೇ ಇದ್ದರೂ ಧ್ಯಾನ ಮಾಡಲು , ಪ್ರೇಮಿಗಳ ಏಕಾಂತಕ್ಕೆ ಅದು ಪ್ರಶಸ್ತ ಜಾಗ
Palar River Origin |
ಹಾಗೇ ಮುಂದೆ ಸಾಗಿದಾಗ ಪಾಲಾರ್ ನದಿ ಮೂಲ ಅಂತ ಸಿಗುತ್ತದೆ. ಅಲ್ಲೂ ಈಗ ಬತ್ತಿ ಹೋದರೂ ನದಿಯೊಂದು ಇದ್ದ ಕುರುಹು ಕಾಣುತ್ತದೆ. ಹಾಗೇ ಮುಂದೆ ಸಾಗಿದಾಗ ನಮಗೆ ಕುದುರೆ ಮೆಟ್ಟಿಲು ಅಂತ ಸಿಗುತ್ತದೆ. ಆ ಮೂಲಕ ಕೋಟೆಯಿಂದ ಕೆಳೆಗಿಳಿಯಬಹುದು. ಅಲ್ಲಿ ಪೂರ್ತಿ ಕೆಳಗಿನವರೆಗೆ ಮೆಟ್ಟಿಲುಗಳು ಇರದಿದ್ದರೂ ಅಲ್ಲಿಂದ ಕುದುರೆಗಳನ್ನು ಅಲ್ಲಿಗೆ ತಂದೋ ಇಳಿಸಿಯೋ ಮಾಡುತ್ತಿದ್ದಿರಬಹುದೆಂದು ಊಹಿಸಬಹುದು.
Kudure Mettilu |
ಹಾಗೇ ಮುಂದೆ ಸಾಗಿದಾಗ ನಮಗೆ ಮತ್ತೆ ಟಿಪ್ಪು ಡ್ರಾಪಿನಿಂದ ನಾವು ಶುರು ಮಾಡಿದ ತಡೆಗೋಡೆಗಳೇ ಕಂಡವು. ಅಂದರೆ ನಾವು ಒಂದು ಪ್ರದಕ್ಷಿಣೆ ಮುಗಿಸಿದೆವು ಎಂದಾಯಿತು. ಅಲ್ಲಿಂದ ಹಾಗೇ ಮತ್ತೆ ಮೇಲೆ ಹತ್ತಿ ತೋಟಗಾರಿಕೆ ಇಲಾಖೆಯ ವಸತಿಗೃಹದ ಹತ್ತಿರ ಬಂದೆವು.
Guest House |
ಹಲತರದ ಹೂಗಳಿಂದ ಕಂಗೊಳಿಸುತ್ತಿರುವ ಅದೂ ತಂಪಾಗಿ ಆನಂದದಾಯಕವಾಗಿದೆ.ಅಲ್ಲಿಂದ ನಾವು ಮತ್ತೆ ಮುಂಚೆ ಹೇಳಿದ ಬಿದಿರು ಅಟ್ಟಣಿಗೆಗಳತ್ತ ಬಂದು ಬೆಟ್ಟ ಇಳಿಯಲಾರಂಭಿಸಿದೆವು. ಮತ್ತದೇ ಮೆಟ್ಟಿಲು, ಲ್ಯಾಂಪುಗಳು ಕಾಣಲಾರಂಭಿಸಿದವು.
Tippu Rest House |
ತೀರಾ ತೊಂದರೆ ತೆಗೆದುಕೊಳ್ಳುವ ಮನಸ್ಥಿತಿ ಇಲ್ಲದ ಕಾರಣ ಒಲ್ಲದ ಮನಸ್ಸಿನಿಂದಲೇ ಬಸ್ಸು ಹತ್ತಿದೆವು. ದಾರಿಯಲ್ಲಿ ನಮ್ಮ ಅದೃಷ್ಟಕ್ಕೋ , ಅಣಕಿಸಲೋ ಎಂಬಂತೆ ಮುಳುಗೋ ಸೂರ್ಯ ಮೋಡ, ಬೆಟ್ಟಗಳ ನಡುವೆ ಕಣ್ಣಾಮುಚ್ಚಾಲೆ ಆಡುತ್ತಾ, ಬಣ್ಣಗಳ ಹೋಳಿ ಬೀರುತ್ತಾ ನಗುತ್ತಿದ್ದ ..
ಒಂದು ಅಹ್ಲಾದಕರ ಪ್ರವಾಸ ಬರಹ.... ಕೆಲವಷ್ಟು ಇತಿಹಾಸದ ಮಾಹಿತಿ ನೀಡಿದ್ದೀರಿ. ತುಂಬಾ ಉಪಯೋಗಕ್ಕೆ ಬರುವುದು. ಬರಹದಲ್ಲಿ ಮೊನಚು ಇಷ್ಟವಾಯಿತು.
ReplyDeleteತುಂಬಾ ಧನ್ಯವಾದಗಳು ಮೂರ್ನಾಡರೇ :-) ಇತಿಹಾಸದ ಕೆಲವು ತುಣುಕುಗಳನ್ನಷ್ಟೇ ಸಂಗ್ರಹಿಸಲು ಆಗಿದ್ದು ಆ ದಿನ . ಇನ್ನೂ ಸ್ವಲ್ಪ ಕೆದಕಿದ್ದರೆ, ಜಾಲಾಡಿದ್ದರೆ ಇನ್ನೂ ಸ್ವಲ್ಪ ಸಿಗುತ್ತಿತ್ತೇನೋ .. ಆದರೆ ಆ ದಿನ ಅಷ್ಟೇ ಸಿಕ್ಕಿದ್ದು. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು :-)
Deleteಒಳ್ಳೆಯ ವಿವರ ಸಮೇತವಾದ ಬರಹ . ಚೆನ್ನಾಗಿದೆ ಪ್ರಶಸ್ತಿ :) ಫೋಟೋಗಳೂ ಹೆಚ್ಚಿನ ಮೆರುಗು ನೀಡಿದೆ.
ReplyDeleteಮೆಚ್ಚುಗೆಗೆ ಧನ್ಯವಾದಗಳು :-)
Deletenice photos & info..
ReplyDeleteThank You Manamukta avare :-)
Delete