Thursday, December 1, 2011

ಸ್ನೇಹ ಸೇತು ತುಂಡಾದಾಗ

ಮನಸುಗಳ ದಡ ನಡುವೆ
ಅಹಮಿಕೆಯ ಹೊಳೆ ತುಂಬಿ
ಇರುವೊಂದು ಸೇತುವೂ ತುಂಡಾಗಿದೆ
ಸ್ನೇಹಸೇತುವ ಮತ್ತೆ ಮೊದಲಿನಂತೆಯೆ ಇಡಲು
ವಿಶ್ವಾಸ ತಳಪಾಯ ತೊಳೆದೋಗಿದೆ||

ಕಾಣುವೆನು ದಿನ ನಾನು
ಮೋರೆ ತಿರುಗಿಸಿ ನೀನು
ಅಂತ್ಯವಿಲ್ಲವೇ ಗೆಳೆಯ ಈ ಗೋಳಿಗೆ?
ನಿನ್ನ ಜಾಗಕೆ ನೀನೆ ಈ ಬಾಳಿಗೆ||

ಆತ್ಮಸಾಕ್ಷಿಯ ಮರೆತು ಕ್ಷಮೆಯ ಕೇಳಿದೆನಲ್ಲೋ
ಇನ್ನೇನು ಬೇಕಿತ್ತೋ ಪರಮಾತ್ಮನೇ
ಒಡಹುಟ್ಟಿದವನಂತೆ ನನ್ನ ಸಮಯವನಿತ್ತೆ
ಆದರೂ ಮರೆತಿಹೆಯ ಜಂಭದವನೇ||

ಕಾಲೆಳೆದರೆಷ್ಟು ನೀ ತಣ್ಣಗಿದ್ದೆನು ನಾನು
ಅಂದಂದ ಮಾತೊಂದು ಹೆಚ್ಚಾಯಿತೆ
ಸೇತುವನೆ ತುಂಡರಿಸಿ ಹಾಕಾಯಿತೆ?
ಎಲ್ಲಾದರೂ ಇರು ನೀ, ಸುಖವಾಗಿರೆಲೊ ಗೆಳೆಯ
ಕಾಯುತಿಹೆ ನಾನು ಮತ್ತಿದೇ ದಡದಲ್ಲಿ
ಮನೆಗೆ ಮರಳದೇ ಮೂಕಗೋಳಿನಲ್ಲಿ||

ನದಿಯಲಿಹ ನೀರೆಲ್ಲಾ ಕಣ್ಣಿಂದೆ ಹರಿದಂತೆ
ಪ್ರತಿ ಹೆಜ್ಜೆ ಶಬ್ದವೂ ನಿನ್ನದಂತೆ
ಕಾಯುತಿಹೆನಲ್ಲೋ ನಾ ಕಾಲ ಮರೆತು
ಬದಲಾಗಿ ಬರುವನು ಪೊರೆಗಳನು ಕಳಚೊಬ್ಬ
ಮರಳುವನು ಇಂದು ಹಳೆ ಗೆಳೆಯನಾಗಿ
ಎಂಬ ನಿರೀಕ್ಷೆಯಲೆ ಶೋಕವಾಗಿ
ಇಂದಿಲ್ಲ ಎನದೇಹ ಅಸ್ಥಿಗಳೆ ಹುಡುಕುತಿವೆ
ಹೊಳೆದಾಟೋ ಪ್ರತಿ ಆತ್ಮ ಗೆಳೆಯ ನೀನಾ?
ಸತ್ತ ಮೇಲೂ ದ್ವೇಷ ಹಿಡಿವೆನೆ ನಾ ?||

2 comments:

  1. ಧನ್ಯವಾದಗಳು ದಿಲೀಪ್:-) ಬ್ಲಾಗ್ ಭೇಟಿಗಾಗಿ ವಂದನೆಗಳು :-)

    ReplyDelete