Thursday, December 22, 2011

ಕಲಾಂ-ತಾಯಿಗೆ ನಮನ

(ಭಾಮಿನಿ ಷಟ್ಪದಿಯಲ್ಲಿ ಬರೆಯಲೊಂದು ಪ್ರಯತ್ನ)

ಜನನಿ ನಮಿಸುವೆ ಗುಣಿಯ ಬೆಳೆಸಿದೆ
ಮನವ ಒಲಿಸುತ ಶಾಂತಿ ಬಿತ್ತಿದೆ
ಮನುಜ ಜನ್ಮದಿ ತಾಯ ಜನ್ಮವೆ ಹಿರಿದು ಎನ್ನುತಲಿ |
ಪಣತ ಖಾಲಿಯೆ ಆದರಳುಕದೆ
ಮನದ ಕುಡಿಯನು ಹಸಿರೆ ಇರಿಸಲು
ಇನಿತು ಮರುಗದೆ ಎಷ್ಟೊ ಕಷ್ಟವ ಬಿಡದ ನಗುಹಿಂದೆ||

ಮಗನು ಬೆಳೆದನು ಓದಿ ಎತ್ತರ
ಗಗನ ಚಿಮ್ಮೋ ಕ್ಷಿಪಣಿ ಎಂಬುವ
ನೆಗೆತ ವಿಷಯದಿ ನುರಿತ ಅವರಿಗೆ  ನೀಡಿ ಗೌರವವ|
ನಗುವ ಮೊಗದಲಿ ಶರಣು ಎಂದರು
ಜಗದ ಕಿವಿಗಳ ಸೆಳೆದ ಶಕ್ತಿಯ
ಅಗಲ ಹೊಗಳಲು ಪದವು ಸಾಲದೆ ಶಿರವ ನಮಿಸೆಂದೆ||
(ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರ ಮನೆಯಲ್ಲಿ ಬಡತನ. ಅವರ ತಾಯಿ ಆಸೀಯಮ್ಮ ಮಾಡಿದ ರೊಟ್ಟಿಯನ್ನು ಕಲಾಂಗೆ ಮತ್ತಿತರ ಮಕ್ಕಳಿಗೆ ಹಾಕುತ್ತಿದ್ದರಂತೆ. ಕಲಾಂ ತಿನ್ನುತ್ತಾ ಇದ್ದರಂತೆ. ಹೀಗೆ ಕಲಾಂ ಮೈಮರೆತು ತಿನ್ನುತ್ತಿದ್ದಾಗ ಒಂದು ದಿನ ಅವರ ಅಣ್ಣ ಎಳೆಯ ಕಲಾಂ ಅವರನ್ನು ಎಚ್ಚರಿಸಿದರಂತೆ. "ಏ ಕಲಾಂ, ತಾಯಿ ತನ್ನ ರೊಟ್ಟಿಯನ್ನೂ ನಿನಗೇ ಹಾಕುತ್ತಿದ್ದಾಳೆ ಎಂಬುದು ಗೊತ್ತಿದೆಯಾ? " ಎಂದು. ಕಲಾಂರಿಗೆ ಆಗ ಜ್ಞಾನೋದಯವಾದಂತಾಯಿತಂತೆ ಮತ್ತು ತಾಯಿಯ ಮೇಲೆ ಮೊದಲೇ ಇದ್ದ ಪ್ರೀತಿ ಉಕ್ಕಿ ಹರಿಯಿತು. ಆಮೇಲೆ ಅವರು ತಮ್ಮ ಅಪರಿಮಿತ ಪರಿಶ್ರಮದಿಂದ ದೇಶದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹರೆನಿಸಿದರೆಂಬುದು ಇತಿಹಾಸ.. ಅವರೆಲ್ಲರಿಗೂ ಮತ್ತೊಂದು ಸಲಾಂ. .
ಮೇಲಿನ ಪ್ರಸಂಗವನ್ನು ಕಲಾಂರ ಆತ್ಮಕತೆ "ಅಗ್ನಿಯ ರೆಕ್ಕೆಗಳು" ನಲ್ಲಿ ಅವರೇ ಉಲ್ಲೇಖಿಸಿದ್ದಾರೆ ಎಂದು ಓದಿದ ನೆನಪು)

6 comments:

  1. ಸ್ತವನೀಯಮಲ್ತೆ ಪದ್ಯಂ|
    ಕವಿಯೋ ಛಂದಪ್ರಶಸ್ತವಾದುದನಾಯ್ದುಂ|
    ಕವನಿಸೆ ರಸಿಕರ್ ಮೆಚ್ಚಿಂ
    ಕವಿಯಂ ಪೊಗಳಲ್ಕೆ ಮಚ್ಚರ ಪಡುವರೇನೌ||
    ಭಾಮಿನಿ ಪದ್ಯಂ ಮೇಣಿದು
    ಯಾಮಿನಿ ಕಳೆವವರೆಗುಂ ಮನದೊಳಿರ್ಪುದಲಾ
    ನಾಮಪ್ರಶಸ್ತಿಯಿಂದಂ
    ಭೂಮಿಯ ಕವಿಕುಲದಿ ರಾಜಿಸಿರಿನೀವೆಂಬೆಂ||
    ಶುಭಾಶಯಗಳು:-)

    ReplyDelete
  2. ತುಂಬಾ ತುಂಬಾ ಧನ್ಯವಾದಗಳು :-) ಮತ್ತೆ ಬರೆಯಲು ಬಂದಾಗ ಸಿಗುತ್ತೇನೆ. ನಿಮ್ಮ ಕಾವ್ಯಲೋಕದ ಪಯಣ, ಇಂಜಿನಿಯರಿಂಗ್ ಬದುಕು ಎರಡೂ ಶುಭವಾಗಿರಲಿ ಎಂದು ಹಾರೈಕೆ

    ReplyDelete
  3. ಆದ್ಭುತವಾದ ಪ್ರಯತ್ನ ಪ್ರಶಸ್ತಿ..:))) ನನಗೆ ಬಹುವಾಗಿ ಹಿಡಿಸಿದ ಅಂಶ ಭಾಮಿನೀ ಷಟ್ಪದಿಯನ್ನು ನವ್ಯ ಕಾವ್ಯಕ್ಕಿಳಿಸಿದ್ದು.. ಇದು ಹಿಂದಿನ ಕಾವ್ಯ ಶೈಲಿಯನ್ನು ಇಂದಿನ ಕಾವ್ಯ ವಸ್ತುಗಳೊಂದಿಗಿನ ಅನುಸಂಧಾನ.. ದೇಶಕ್ಕೆ ಅಪ್ರತಿಮ ಪ್ರತಿಭಾಶಾಲಿಯನ್ನು ನೀಡಿದ ಆ ಮಹಾನ್ ತಾಯಿಗೆ ನನ್ನ ನಮನಗಳು.. ನಿಮ್ಮ ಈ ಕವಿತೆ ಮನಸ್ಸಿಗೆ ತುಂಬಾ ಹಿಡಿಸಿತು..

    ReplyDelete
    Replies
    1. ಅಂದಿನ ಮೆಚ್ಚುಗೆಗೆ ಇಂದು ಮತ್ತೊಮ್ಮೆ ವಂದನೆಗಳು ಪ್ರಸಾದ್ :-)
      ಇವತ್ಯಾಕೋ ಮತ್ತಿದೇ ಕವನ ಸೆಳೆಯಿತು ಭಟ್ಟರ ಕಾಮೆಂಟುಗಳಿಂದ :-)

      Delete
  4. ಷಟ್ಪದಿಯಲ್ಲಿ ಬರೆಯುವ ನಿಮ್ಮ ಪ್ರಯತ್ನ ಅಭಿನಂದನೀಯ. ಶುಭವಾಗಲಿ

    ReplyDelete
    Replies
    1. ಧನ್ಯವಾದಗಳು ನಂಜುಡ ಭಟ್ಟರೇ.. ಒಂದೂವರೆ ವರ್ಷದಷ್ಟು ಹಳೆಯ ಕವನವನ್ನು ನೀವು ಹುಡುಕಿ ತೆಗೆದದ್ದಾದರೂ ಹೇಗೆ ?
      ಇದಾದ ಮೇಲೆ ಷಟ್ಪದಿಯಲ್ಲಿ ಹೆಚ್ಚು ಬರೆಯಲೇ ಇಲ್ಲ. ನಿಮ್ಮ ಮಾತು ಕೇಳಿ ಮತ್ತೊಮ್ಮೆ ಬರೆಯಬೇಕೆನಿಸುತ್ತಿದೆ..

      Delete