(ಭಾಮಿನಿ ಷಟ್ಪದಿಯಲ್ಲಿ ಬರೆಯಲೊಂದು ಪ್ರಯತ್ನ)..
ಹರಿಯ ಪಾದವ ತೊಳೆವ ಗಂಗೆಯ
ಧರೆಗೆ ಇಳಿಸಲು ನೃಪನು ಬೇಡಲು
ಭರವ ತಾಳಲು ಹರನ ಕೇಳಲು ಹೇಳಿದಾ ಬ್ರಹ್ಮಾ|
ಹರನ ಭಜಿಸಲು ಅವನ ಪೂಜಿಸಿ
ಶಿರಕೆ ಧುಮುಕಲು ಗಂಗೆ ಜಂಬದಿ
ಹೊರಗೆ ಬಾರದೆ ಅಲ್ಲೆ ಸಿಲುಕಲು ಮತ್ತೆ ಬೇಡಿದನೋ|೧|
ಇಳೆಗೆ ಇಳಿಸಲು ಹರಸಿ ಪರಶಿವ
ಹಲವು ಧಾರೆಗಳಾಗಿ ಒಡೆದಳು
ತೊಳೆವ ಬದಲಿಗೆ ಜಹ್ನು ಆಶ್ರಮ ಕೊಚ್ಚಿ ಒಯ್ದಿಹಳೋ|
ಎಲೇ ಸೊಕ್ಕೇ ಎಂದು ಅವಳನು
ಬಲಿಯ ಪಡೆದನು ಮುನಿಯು ಮುನಿಯುತ
ಹಲವು ಋಷಿಗಳು ನೃಪನು ಬೇಡಲು ಹರಿಸಿ ಕಿವಿಯಿಂದಾ|೨|
ಸ್ನಾನ ಮಾತ್ರದಿ ಪಾಪ ಕಳೆವಳು
ಮೌನದಿಂದಲೆ ಇಳೆಗೆ ಇಳಿದಳೊ
ಮಾನವನ ಈ ಶ್ರಮದ ಗೆಲುವಿಗೆ ಮತ್ತೆ ಮೆಚ್ಚುತಲೀ|
ಪ್ರಾಣತೊರೆದಿಹ ಪಿತರ ಭಸ್ಮವ
ಲೀನವಾಗಿಸಿ ಮೋಕ್ಷವಿತ್ತಳು
ತನ್ನ ಧ್ಯೇಯವ ಬಿಡದೆ ನಡೆದಿಹ ಧನ್ಯ ತಾ ನರನೋ|೩|
(ಮೊದಲ ಸಲ ಬರೆದಾಗ ಆದಿ ಪ್ರಾಸ ತಪ್ಪಿದ್ದಾಗ ತಿದ್ದಿದ ಕಿರಣಣ್ಣ, ಹರೀಶಣ್ಣರ ತಿದ್ದುಪಡಿಗಳನ್ನು ಕೆಳಗೆ ಹಾಕಿದ್ದೇನೆ.. ಇನ್ನೂ ಓದುವ/ಬರೆವ ಪ್ರಯತ್ನದಲ್ಲಿ )
ಚಿತ್ರಕೃಪೆ: Divinebrahmanda.com
ಕಿರಣಣ್ಣ:
ReplyDeleteಹರಿಯ ಪದತಲ ತೊಳೆವ ಗಂಗೆಯ
ಭರದಿ ತರಿಸಲು ಭಕ್ತ ಬೇಡಲು
ಬರಿದೆ ರಭಸದಿ ಎಲ್ಲ ತೊಳೆವೆನು ಎಂದು ಬೀಗಿದಳೋ
ತರುಣಿ ಧುಮುಕಲು ಶಿವನು ಹರಡಿದ
ಪರಮ ಜಟೆಯಲಿ ಅವಳ ಕಟ್ಟಿದ
ಮರಳಿ ಪರಶಿವನನ್ನೆ ಬೇಡಲು ಹರಸಿ ಇಳಿಸಿದನೋ
ಹರೀಶಣ್ಣ:
ಹರಿಯ ಪದತಲ ತೊಳೆವ ಗಂಗೆಯ
ಧರೆಗೆ ಇಳಿಸಲು ಭಕ್ತ ಬೇಡಲು
ತಾ ರಭಸದಿಂ ಎಲ್ಲ ತೊಳೆವೆನು ಎಂದು ಬೀಗಿದಳೋ |
ಶಿರದ ಜಟೆಯನು ಅವಳು ಧುಮುಕಲು
ಹರನು ಹರಡಿದ ಅವಳ ಕಟ್ಟಿದ
ಹರಸಿ ಈಶನು ಭಕ್ತ ಬೇಡಲು ಭುವಿಗೆ ಇಳಿಸಿದನೋ ||
ಭರದಿ ಭಾಮಿನಿಷಟ್ಪದಿಯ ನೀವ್
ReplyDeleteಬರೆದು ವಾಙ್ಮಯಲೋಕಕೆಂದುಂ
ಬರಲು ಸಂತಸ ಪೊಂದುವುದು ಕವಿನಿಕರ ನಿರುತದಲಿ|
ತೊರೆಯದಿರಿ ಪದ್ಯಗಳ ಮೋಹವ
ನೊರೆಯುತಿರಿಮನಭಾವಗಳನಂ
ಕರೆದು ಭಾಮಿನಿ ಕಯ್ಯಪಿಡಿವಳು ಮುದದಿ ಚಣದಲ್ಲಿ||
ವಾವ್ !!! :-)
ReplyDeleteಚೆನ್ನಾಗಿದೆ :-) ಧನ್ಯವಾದಗಳು ಗಣೇಶ್ :-)
ಹಲವು ಮುಖಗಳ ಇಲ್ಲೆ ಕಂಡೆನು
ReplyDeleteಕಲಹ ಇಲ್ಲದೆ ವಿಷಯವರಿಯುತ
ಒಲವ ತೋರುತ ಸಮಯವಿತ್ತಿಹ ಗೆಳೆಯ ಜೊತೆ ಸಿಗಲು|
ಗೆಲುವ ಮೊಗದಲಿ ತಪ್ಪ ತಿದ್ದುತ
ಬಲವ ತುಂಬುತ ಬರೆವ ಆಸೆಗೆ
ನಲಿಯುತಲೆ ಹೊಸ ಬೆಳಕ ತೋರುವ ಗುರುವೆ ಜೊತೆ ಸಿಗಲು||